Social Welfare

ಕ್ಷಯರೋಗ ಮುಕ್ತ ಭಾರತದ ಹೆಜ್ಜೆ

ಪ್ರಗತಿ, ನಾವೀನ್ಯತೆ ಮತ್ತು ಸಮುದಾಯದ ಸಹಭಾಗಿತ್ವ

Posted On: 13 OCT 2026 4:37PM

ಕ್ಷಯರೋಗದ ವಿರುದ್ಧದ ಭಾರತದ ಹೋರಾಟವು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ. 2015 ಮತ್ತು 2024ರ ನಡುವಿನ ಜಾಗತಿಕ ಇಳಿಕೆ ಪ್ರಮಾಣ ಶೇ. 12ರಷ್ಟಿದ್ದರೆ, ಭಾರತದಲ್ಲಿ ಹೊಸ ಕ್ಷಯರೋಗ ಪ್ರಕರಣಗಳ ವಾರ್ಷಿಕ ಸಂಖ್ಯೆಯು ಶೇ. 21ರಷ್ಟು ಇಳಿಕೆಯಾಗಿದೆ. ಜಾಗತಿಕ ಚಿಕಿತ್ಸಾ ವ್ಯಾಪ್ತಿಯು ಶೇ. 78ರಷ್ಟಿದ್ದರೆ, ಭಾರತದ ಚಿಕಿತ್ಸಾ ವ್ಯಾಪ್ತಿಯು ಶೇ. 92ರಷ್ಟಿದೆ. ತೀವ್ರಗೊಂಡಿರುವ 'ಟಿಬಿ ಮುಕ್ತ ಭಾರತ ಅಭಿಯಾನ'ದ ನೇತೃತ್ವದಲ್ಲಿ, ಒಟ್ಟು ತಪಾಸಣೆಗಳ ಸಂಖ್ಯೆಯು 28.1 ಕೋಟಿ ದಾಟಿದೆ. 20 ಲಕ್ಷಕ್ಕೂ ಅಧಿಕ ವ್ಯಕ್ತಿಗಳಿಗೆ ಟಿಬಿ ತಡೆಗಟ್ಟುವ ಚಿಕಿತ್ಸೆ ನೀಡಲಾಗಿದೆ, 5.7 ಲಕ್ಷಕ್ಕೂ ಹೆಚ್ಚು ಹೊಸ 'ನಿಕ್ಷಯ್ ಮಿತ್ರ'ರನ್ನು ಸೇರಿಸಲಾಗಿದೆ ಮತ್ತು 46,118 ಗ್ರಾಮ ಪಂಚಾಯತಿಗಳಿಗೆ ಟಿಬಿ-ಮುಕ್ತ ಪ್ರಮಾಣಪತ್ರವನ್ನು ನೀಡಲಾಗಿದೆ. ಕೈಯಲ್ಲಿ ಹಿಡಿಯಬಹುದಾದ ಯೂನಿಟ್‌ಗಳ ಮೂಲಕ ಎಕ್ಸ್‌ರೇ ತಪಾಸಣೆಯನ್ನು 34 ಪಟ್ಟು ಹೆಚ್ಚಿಸುವ ಮೂಲಕ, 'ಖುಷಿ' ಎನ್ನುವ ಎಐ ಚಾಟ್‌ಬಾಟ್ ಅನ್ನು ಒಳಗೊಂಡಿರುವ 'ಟಿಬಿ ಮುಕ್ತ ಭಾರತ ಆ್ಯಪ್' ಬಿಡುಗಡೆಯ ಮೂಲಕ ಮತ್ತು ಔಷಧ-ನಿರೋಧಕ ರೋಗಿಗಳಿಗಾಗಿ ಬಿ-ಪಾಲ್ಮ್ ಎಂಬ ಕಡಿಮೆ ಅವಧಿಯ ಹಾಗೂ ಸುರಕ್ಷಿತ ಚಿಕಿತ್ಸಾ ವಿಧಾನದ ಜೊತೆಗೆ ಅತ್ಯಾಧುನಿಕ AI ಆಧಾರಿತ ಟ್ರೇಯೇಜ್ ಉಪಕರಣಗಳನ್ನು ಪರಿಚಯಿಸುವ ಮೂಲಕ ರಾಷ್ಟ್ರೀಯ ಸ್ಪಂದನೆಯು ಗಣನೀಯವಾಗಿ ಚುರುಕುಗೊಂಡಿದೆ. ಈ ಪ್ರಗತಿಯನ್ನು ಮುಂದುವರಿಸಿಕೊಂಡು ಹೋಗಲು, 'ಜೋಷ್' ಅಭಿಯಾನವು ಯುವಜನರನ್ನು ಹಾಗೂ ಸಮುದಾಯಗಳನ್ನು ಒಗ್ಗೂಡಿಸಿ ಟಿಬಿ ಜಾಗೃತಿ, ಆರಂಭಿಕ ಪತ್ತೆಹಚ್ಚುವಿಕೆ, ಕಾಲಮಿತಿಯ ಚಿಕಿತ್ಸೆ ಮತ್ತು ಚಿಕಿತ್ಸೆಯ ನಿಯಮಗಳನ್ನು ಪಾಲಿಸುವುದನ್ನು ಉತ್ತೇಜಿಸುತ್ತದೆ, ಜೊತೆಗೆ ರೋಗದ ಬಗೆಗಿನ ಕಳಂಕವನ್ನು ದೂರ ಮಾಡುತ್ತದೆ. ಸಮುದಾಯದ ಸಹಭಾಗಿತ್ವ ಮತ್ತು ಸಾಮೂಹಿಕ ಕ್ರಮಗಳನ್ನು ಬಲಪಡಿಸುವ ಮೂಲಕ, ಈ ಅಭಿಯಾನವು ಕ್ಷಯರೋಗ ಮುಕ್ತ ಭಾರತವನ್ನು ಸಾಧಿಸುವ ನಿಟ್ಟಿನಲ್ಲಿ 'ಜನ ಆಂದೋಲನ'ದ ಸ್ವರೂಪವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಪರಿಚಯ

ವಿಶ್ವ ಆರೋಗ್ಯ ಸಂಸ್ಥೆಯ 2025ರ ಜಾಗತಿಕ ಕ್ಷಯರೋಗ ವರದಿಯ ಪ್ರಕಾರ, ಭಾರತವು ಕ್ಷಯರೋಗ ನಿರ್ಮೂಲನೆಯ ಹಾದಿಯಲ್ಲಿ ದೃಢವಾಗಿ ಮುನ್ನಡೆಯುತ್ತಿದೆ. 2015ರಿಂದ 2024ರ ಅವಧಿಯಲ್ಲಿ ಜಾಗತಿಕವಾಗಿ ಹೊಸ ಕ್ಷಯರೋಗ ಪ್ರಕರಣಗಳ ಇಳಿಕೆ ಪ್ರಮಾಣ ಶೇ. 12ರಷ್ಟಿದ್ದರೆ, ಭಾರತದಲ್ಲಿ ವಾರ್ಷಿಕವಾಗಿ ಹೊಸ ಪ್ರಕರಣಗಳ ಸಂಖ್ಯೆಯು ಶೇ. 21ರಷ್ಟು ಗಣನೀಯವಾಗಿ ತಗ್ಗಿದೆ. ಜಾಗತಿಕ ಚಿಕಿತ್ಸಾ ವ್ಯಾಪ್ತಿಯು ಶೇ. 78ರಷ್ಟಿದ್ದರೆ, ಭಾರತದಲ್ಲಿ ಚಿಕಿತ್ಸಾ ವ್ಯಾಪ್ತಿಯು ಶೇ. 92ರಷ್ಟು ಉನ್ನತ ಮಟ್ಟದಲ್ಲಿದೆ.

ಇದು ಜಾಗತಿಕವಾಗಿ ಟಿಬಿ ಪ್ರಕರಣಗಳಲ್ಲಿ ಕಂಡುಬಂದಿರುವ ಅತ್ಯಂತ ಮಹತ್ವದ ಇಳಿಕೆಗಳಲ್ಲಿ ಒಂದಾಗಿದ್ದು, ಇತರ ಹೆಚ್ಚು ಹೊರೆ ಹೊಂದಿರುವ ರಾಷ್ಟ್ರಗಳಲ್ಲಿ ದಾಖಲಾಗಿರುವ ಇಳಿಕೆಯ ವೇಗಕ್ಕಿಂತ ಇದು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಟಿಬಿಯಿಂದ ಸಂಭವಿಸುವ ಸಾವುಗಳು ಶೇ. 28ರಷ್ಟು ಕಡಿಮೆಯಾಗಿವೆ. ಕ್ಷಯರೋಗವನ್ನು ಪತ್ತೆಹಚ್ಚುವ, ತಪಾಸಣೆ ಮಾಡುವ ಮತ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಭಾರತ ಸರ್ಕಾರದ ನಿರ್ದಿಷ್ಟ ಹಾಗೂ ಬಹುಮುಖಿ ವಿಧಾನವು ಈ ಪ್ರಗತಿಪರ ಧೋರಣೆಗೆ ಗಣನೀಯ ಕೊಡುಗೆ ನೀಡಿದೆ. ಸುಧಾರಿತ ತಂತ್ರಜ್ಞಾನ, ವಿಸ್ತರಿಸಲಾದ ಸ್ಥಳೀಯ ಆರೋಗ್ಯ ಸೇವೆಗಳು, ಸಮುದಾಯದ ಸಹಭಾಗಿತ್ವ ಮತ್ತು ಕೈಗೆಟುಕುವ ಚಿಕಿತ್ಸೆಯು ಈ ವ್ಯಾಪಕ ಹಾಗೂ ಮಾರಣಾಂತಿಕ ಕಾಯಿಲೆಯನ್ನು ನಿರ್ಮೂಲನೆ ಮಾಡುವ ಹಾದಿಯಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸಿದೆ.

ಟಿಬಿ ನಿರ್ಮೂಲನೆಯತ್ತ ಸಮುದಾಯಗಳನ್ನು ಒಗ್ಗೂಡಿಸಲು 'ಜೋಷ್' ಅಭಿಯಾನ

ಕ್ಷಯರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಗುತ್ತಿರುವ ಈ ವೇಗಕ್ಕೆ ಮತ್ತಷ್ಟು ಬಲ ತುಂಬಲು, 'ಜೋಷ್' (ಆರೋಗ್ಯಕ್ಕಾಗಿ ಜಂಟಿ ಪಡೆ) ತಂಡಗಳನ್ನು ಒಳಗೊಂಡ ರಾಷ್ಟ್ರವ್ಯಾಪಿ ಸಾಮಾಜಿಕ ಮಾಧ್ಯಮ ಅಭಿಯಾನವನ್ನು 2026ರ ಅಕ್ಟೋಬರ್ 13 ರಂದು ಪ್ರಾಯೋಗಿಕ ಆಧಾರದ ಮೇಲೆ 11 ರಾಜ್ಯಗಳು ಮತ್ತು 55 ಜಿಲ್ಲೆಗಳಲ್ಲಿ ಆಯೋಜಿಸಲಾಯಿತು. ಪ್ರತಿಯೊಂದು 'ಜೋಷ್' ತಂಡವು 'ಮೈ ಭಾರತ್' ಸ್ವಯಂಸೇವಕರು, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಕೆಡೆಟ್‌ಗಳು ಮತ್ತು ಸಕಾಲಿಕ ತಪಾಸಣೆ ಹಾಗೂ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ನಿಯೋಜಿಸಲ್ಪಟ್ಟ ಪ್ರಥಮ ದರ್ಜೆ ಅಧಿಕಾರಿಯನ್ನು ಒಳಗೊಂಡಿದೆ.

ಈ ಸಂಘಟನೆಯು ತಳಮಟ್ಟದಲ್ಲಿ ಸಮುದಾಯದ ಜಾಗೃತಿ ಮೂಡಿಸಲು ಯುವ ಜನತೆಯನ್ನು ಸಜ್ಜುಗೊಳಿಸುತ್ತದೆ. ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಆರೋಗ್ಯ ಸಂಸ್ಥೆಗಳು, 'ಮೈ ಭಾರತ್' ಸ್ವಯಂಸೇವಕರು ಮತ್ತು ಯುವ ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಟಿಬಿ ಜಾಗೃತಿ, ಆರಂಭಿಕ ಪತ್ತೆಹಚ್ಚುವಿಕೆ, ಚಿಕಿತ್ಸೆಯ ನಿಯಮಗಳ ಪಾಲನೆ ಮತ್ತು ಕಳಂಕಮುಕ್ತ ಸಮಾಜವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪೋಸ್ಟ್‌ಗಳು, ಫೋಟೋಗಳು, ವೀಡಿಯೊಗಳು ಹಾಗೂ ಯುವಕರ ನೇತೃತ್ವದ ಕಾರ್ಯಗಳನ್ನು ಬಿಂಬಿಸುವ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ಈ ಅಭಿಯಾನದಲ್ಲಿ ಕೈಜೋಡಿಸುವಂತೆ ಪ್ರೋತ್ಸಾಹಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಂಸತ್ ಸದಸ್ಯರು ಹಾಗೂ ವಿಧಾನಾಸಭೆಗಳ ಸದಸ್ಯರೊಂದಿಗೆ 'ಟಿಬಿ ಮುಕ್ತ ಅಭಿಯಾನ'ದ ಕುರಿತು ಕಾರ್ಯಾಗಾರಗಳನ್ನು ನಡೆಸಿದೆ. ಆದಾಗ್ಯೂ, ಈ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯಲು ಸಮುದಾಯಗಳನ್ನು ತೊಡಗಿಸಿಕೊಳ್ಳುವುದು ಅತ್ಯಂತ ನಿರ್ಣಾಯಕ ಎಂದು ಪರಿಗಣಿಸಲಾಗಿದೆ. ತಪಾಸಣೆ ಮತ್ತು ಶೀಘ್ರ ಪತ್ತೆಹಚ್ಚುವಿಕೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 'ಜೋಷ್' ಅಭಿಯಾನವು ಮುಂದಿನ ಮಹತ್ವದ ಹೆಜ್ಜೆಯಾಗಲು ಪ್ರಯತ್ನಿಸುತ್ತದೆ. ಸಕ್ರಿಯ ತಪಾಸಣೆಯನ್ನು ಹೆಚ್ಚಿಸಲು ಮತ್ತು ಯಾವುದೇ ಲಕ್ಷಣಗಳಿಲ್ಲದ ರೋಗಿಗಳನ್ನು ಪತ್ತೆಹಚ್ಚಲು ಸಮುದಾಯದ ಸಹಭಾಗಿತ್ವದೊಂದಿಗೆ ರೋಗನಿರ್ಣಯ ಮತ್ತು ಚಿಕಿತ್ಸೆಯ ಅಗತ್ಯತೆಯನ್ನು ಈ ಅಭಿಯಾನವು ಒತ್ತಿಹೇಳುತ್ತದೆ.

ವಿಶೇಷವಾಗಿ ದುರ್ಬಲ ಮತ್ತು ಅಂಚಿನಲ್ಲಿರುವ ಜನಸಂಖ್ಯೆಯ ನಡುವೆ ಈ ಸಮುದಾಯದ ಸಹಭಾಗಿತ್ವ ಮತ್ತು ಜಾಗೃತಿ ನಿರ್ಮಾಣವು, ಜನರ ಮನಸ್ಸಿನಲ್ಲಿರುವ ಭಯವನ್ನು ದೂರ ಮಾಡಲು ಹಾಗೂ ಚಿಕಿತ್ಸೆ ಮತ್ತು ತಪಾಸಣೆಯ ಬಗ್ಗೆ ಅರಿವು ಮೂಡಿಸಲು ಅತ್ಯಂತ ಮುಖ್ಯವಾಗಿದೆ. ಸಾಂಸ್ಥಿಕ ಬೆಂಬಲ ಮತ್ತು ಸಮುದಾಯವನ್ನು ಒಗ್ಗೂಡಿಸುವ ಮೂಲಕ 'ಟಿಬಿ ಮುಕ್ತ ಭಾರತ'ವನ್ನು ನೈಜ ರೂಪ ತಾಳುವಂತೆ ಮಾಡುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ.

ಕ್ಷಯರೋಗ ಮತ್ತು ಅದರ ಲಕ್ಷಣಗಳು

ಕ್ಷಯರೋಗ ಎಂದರೇನು?

ಕ್ಷಯರೋಗವು (ಟಿಬಿ) ಮೈಕೋಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್ ಎನ್ನುವ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಟಿಬಿ ರೋಗವು ಮೆದುಳು, ಮೂತ್ರಪಿಂಡಗಳು ಅಥವಾ ಬೆನ್ನುಹುರಿಯಂತಹ ದೇಹದ ಇತರ ಭಾಗಗಳಿಗೂ ಹಬ್ಬಬಹುದು.

ಈ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾದ ವ್ಯಕ್ತಿಯು ಅನ್ಯಾಸಗೊಳ್ಳಬಹುದು (ಕಾಯಿಲೆಗೆ ತುತ್ತಾಗಬಹುದು), ಆದರೆ ಕೆಲವರಲ್ಲಿ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ. ಸುಪ್ತ ಟಿಬಿ ಸೋಂಕುಗಳು ಅಥವಾ ನಿಷ್ಕ್ರಿಯ ಟಿಬಿ ಪ್ರಕರಣಗಳೂ ಇರುತ್ತವೆ. ನಿಷ್ಕ್ರಿಯ ಟಿಬಿ ಇರುವವರು ಸಕ್ರಿಯ ಸೋಂಕು ಇರುವವರಂತೆ ಇತರರಿಗೆ ರೋಗವನ್ನು ಹರಡುವುದಿಲ್ಲ – ಆದರೂ ಅವರು ಯಾವಾಗ ಬೇಕಾದರೂ ಸಕ್ರಿಯ ಟಿಬಿಗೆ ಒಳಗಾಗಿ ಅಸ್ವಸ್ಥರಾಗಬಹುದು. ಶಿಶುಗಳು, ಮಕ್ಕಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಸೋಂಕಿಗೆ ತುತ್ತಾದಾಗ ಬೇಗನೆ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಸರಿಯಾದ ಚಿಕಿತ್ಸೆ ಇಲ್ಲದಿದ್ದರೆ, ಸಕ್ರಿಯ ಟಿಬಿ ಮಾರಣಾಂತಿಕವಾಗಬಹುದು.

ಟಿಬಿ ಲಕ್ಷಣಗಳು

ಸಕ್ರಿಯ ಕ್ಷಯರೋಗದ ಲಕ್ಷಣಗಳು ಸಾಮಾನ್ಯವಾಗಿ ಬ್ಯಾಕ್ಟೀರಿಯಾದಿಂದ ಬಾಧಿತವಾದ ದೇಹದ ನಿರ್ದಿಷ್ಟ ಭಾಗಕ್ಕೆ ತಕ್ಕಂತೆ ಇರುತ್ತವೆ. ಆದಾಗ್ಯೂ, ಎಲ್ಲಾ ರೀತಿಯ ಟಿಬಿಗೂ ಅನ್ವಯವಾಗುವ ಕೆಲವು ಸಾಮಾನ್ಯ ಲಕ್ಷಣಗಳೂ ಇರುತ್ತವೆ.

ಸಕ್ರಿಯ ಅಥವಾ ರೋಗಲಕ್ಷಣಗಳಿರುವ ಕ್ಷಯರೋಗ (ಟಿಬಿ) ಪೀಡಿತರು ಈ ರೋಗದ ಬ್ಯಾಕ್ಟೀರಿಯಾವನ್ನು ಇತರರಿಗೆ ಹರಡಬಹುದು. ಅವರು ಕೆಮ್ಮುವಾಗ, ಸೀನುವಾಗ ಅಥವಾ ಮಾತನಾಡುವಾಗ, ಬ್ಯಾಕ್ಟೀರಿಯಾವನ್ನು ಹೊಂದಿರುವ ಸೂಕ್ಷ್ಮ ಹನಿಗಳು ಗಾಳಿಯಲ್ಲಿ ಬಿಡುಗಡೆಯಾಗುತ್ತವೆ ಮತ್ತು ಹತ್ತಿರದಲ್ಲಿರುವವರಿಂದ (ವಿಶೇಷವಾಗಿ ಗಾಳಿಯಾಡದ ಕಳಪೆ ಸ್ಥಳಗಳಲ್ಲಿ) ಉಸಿರಾಟದ ಮೂಲಕ ಒಳಗೆಳೆಸಲ್ಪಡುತ್ತವೆ.

ಕ್ಷಯರೋಗವು ಗಾಳಿಯ ಮೂಲಕ ಹಬ್ಬುತ್ತದೆಯಾದರೂ, ಈ ಕೆಳಗಿನವುಗಳ ಮೂಲಕ ಇದು ಹರಡುವುದಿಲ್ಲ:

  • ಹಸ್ತಲಾಪ ಮಾಡುವುದರಿಂದ
  • ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದರಿಂದ
  • ಆಹಾರ ಮತ್ತು ಪಾತ್ರೆಗಳನ್ನು ಹಂಚಿಕೊಳ್ಳುವುದರಿಂದ
  • ದೈನಂದಿನ ಸಾಮಾಜಿಕ ಪರಸ್ಪರ ಕ್ರಿಯೆಗಳಿಂದ

ಶ್ವಾಸಕೋಶದ ಟಿಬಿ ರೋಗಿಗಳು ಸೂಕ್ತವಾದ ಟಿಬಿ ಔಷಧಿಗಳನ್ನು ಕನಿಷ್ಠ ಎರಡು ವಾರಗಳ ಕಾಲ ಸೇವಿಸಿದ ನಂತರ ಸಾಮಾನ್ಯವಾಗಿ ಸೋಂಕು ಹರಡುವುದನ್ನು ನಿಲ್ಲಿಸುತ್ತಾರೆ. ಶ್ವಾಸಕೋಶವನ್ನು ಹೊರತುಪಡಿಸಿ ದೇಹದ ಇತರ ಭಾಗಗಳಲ್ಲಿ ಟಿಬಿ ಇರುವವರು ಸಾಮಾನ್ಯವಾಗಿ ಈ ಕಾಯಿಲೆಯನ್ನು ಇತರರಿಗೆ ಹರಡುವುದಿಲ್ಲ.

ಲಕ್ಷಣಗಳು ಕಂಡುಬಂದರೆ ನೀವು ಏನು ಮಾಡಬೇಕು?

ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ದೇಶಾದ್ಯಂತ ಎಲ್ಲಾ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಹಲವು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತದೆ. ನಿಮಗೆ ಅಥವಾ ನಿಮ್ಮ ಪರಿಚಯದ ಯಾರಿಗಾದರೂ ಟಿಬಿ ಲಕ್ಷಣಗಳು ಕಂಡುಬಂದರೆ:

  • ಮಾರ್ಗದರ್ಶನಕ್ಕಾಗಿ ಟೋಲ್-ಫ್ರೀ 'ನಿಕ್ಷಯ್ ಸಂಪರ್ಕ್' ಟಿಬಿ ಮತ್ತು ಹೆಪಟೈಟಸ್ ಸಹಾಯವಾಣಿ 1800-11-6666 ಗೆ ಕರೆ ಮಾಡಿ ಮತ್ತು ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ – ಸರ್ಕಾರಿ ಕಾರ್ಯಕ್ರಮಗಳಡಿ ಟಿಬಿ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.
  • ಲಕ್ಷಣಗಳು ಮತ್ತು ಹತ್ತಿರದ ಆರೋಗ್ಯ ಕೇಂದ್ರಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ 'ಟಿಬಿ ಆರೋಗ್ಯ ಸಾಥಿ' ಆ್ಯಪ್ ಅನ್ನು ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ ನಿಮಗೆ ಹತ್ತಿರದ ಟಿಬಿ ತಪಾಸಣೆ ಮತ್ತು ಚಿಕಿತ್ಸಾ ಕೇಂದ್ರಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಹಾಗೂ ಔಷಧಿಯ ಅಡ್ಡಪರಿಣಾಮಗಳು ಮತ್ತು ಟಿಬಿ ರೋಗಿಗಳಿಗೆ ಅಗತ್ಯವಿರುವ ಪೌಷ್ಟಿಕಾಂಶದ ಸಲಹೆಗಳ ಕುರಿತು ಮಾರ್ಗದರ್ಶನ ನೀಡುತ್ತದೆ.

ಭಾರತದಲ್ಲಿ ಟಿಬಿ ನಿರ್ಮೂಲನೆಗಾಗಿ ಕಾರ್ಯತಂತ್ರದ ಯೋಜನೆ

ಸುಸ್ಥಿರ ಅಭಿವೃದ್ಧಿ ಗುರಿ 3ಕ್ಕೆ ಅನುಗುಣವಾಗಿ, ಎಲ್ಲರಿಗೂ ಆರೋಗ್ಯಕರ ಜೀವನವನ್ನು ಖಚಿತಪಡಿಸಲು ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಭಾರತ ಸರ್ಕಾರವು ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಬದ್ಧವಾಗಿದೆ. ಜೂನ್ 2020ರಲ್ಲಿ ಘೋಷಿಸಲಾದ 'ಭಾರತದಲ್ಲಿ ಟಿಬಿ ನಿರ್ಮೂಲನೆಗಾಗಿ ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ 2020-25' ನಾಲ್ಕು ಪ್ರಮುಖ ಸ್ತಂಭಗಳ ಮೂಲಕ ಕ್ಷಯರೋಗವನ್ನು ತೊಡೆದುಹಾಕುವ ಗುರಿಯನ್ನು ಹೊಂದಿದೆ: ನಿರ್ಮಿಸುವುದು, ತಡೆಗಟ್ಟುವುದು, ಪತ್ತೆಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು. ಈ ಯೋಜನೆಯು ಶೀಘ್ರ ರೋಗನಿರ್ಣಯ, ಸೋಂಕು ಹರಡುವುದನ್ನು ತಗ್ಗಿಸುವುದು, ಸೂಕ್ತ ಔಷಧಗಳು ಮತ್ತು ಚಿಕಿತ್ಸಾ ವಿಧಾನಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವುದು ಹಾಗೂ ರೋಗಿಗಳ ಬೆಂಬಲ ವ್ಯವಸ್ಥೆಗಳನ್ನು ರೂಪಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ

2020ರಲ್ಲಿ, ಭಾರತ ಸರ್ಕಾರವು ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವನ್ನು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಎಂದು ಮರುನಾಮಕರಣ ಮಾಡಿತು. ಇದು ಜಾಗತಿಕ ಗುರಿಯಾದ 2030ರ ಮೊದಲು ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಭಾರತದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಎನ್‍ಟಿಇಪಿ ಯೋಜನೆಯು ಎನ್‍ಎಸ್‍ಪಿ ಯ ನಾಲ್ಕು ಸ್ತಂಭಗಳಾದ - ಪತ್ತೆಹಚ್ಚುವುದು– ಚಿಕಿತ್ಸೆ ನೀಡುವುದು– ತಡೆಗಟ್ಟುವುದು – ನಿರ್ಮಿಸುವುದು - ತಳಹದಿಯ ಮೇಲೆ ರೂಪುಗೊಂಡಿದೆ. ಈ ಕಾರ್ಯಕ್ರಮದ ಪ್ರಮುಖ ಚಟುವಟಿಕೆಗಳು ಇಲ್ಲಿವೆ:

  • ಉತ್ತಮ ಗುಣಮಟ್ಟದ ಪರೀಕ್ಷೆಗಳ ಮೂಲಕ ಟಿಬಿ ರೋಗಿಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಮತ್ತು ದುರ್ಬಲ ಜನಸಂಖ್ಯೆಯಲ್ಲಿ ಕಾಣೆಯಾದ ಪ್ರಕರಣಗಳನ್ನು ಹುಡುಕಲು ಸಕ್ರಿಯ ಸಮುದಾಯ ಸಂಪರ್ಕವನ್ನು ನಡೆಸುವುದು.
  • ಔಷಧ-ನಿರೋಧಕ ಟಿಬಿ ಸೇರಿದಂತೆ, ಗುಣಮಟ್ಟದ ಭರವಸೆ ಇರುವ ಔಷಧಿಗಳು ಮತ್ತು ಚಿಕಿತ್ಸಾ ವಿಧಾನಗಳೊಂದಿಗೆ ತ್ವರಿತ ಚಿಕಿತ್ಸೆ ನೀಡುವುದು.
  • ಖಾಸಗಿ ವಲಯದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳನ್ನು ಈ ವ್ಯವಸ್ಥೆಯೊಂದಿಗೆ ಬೆಸೆಯುವುದು.
  • ನೇರ ನಗದು ವರ್ಗಾವಣೆ ಮತ್ತು 'ನಿಕ್ಷಯ್ ಮಿತ್ರ' ಉಪಕ್ರಮದ ಮೂಲಕ ರೋಗಿ-ಕೇಂದ್ರಿತ ಚಿಕಿತ್ಸಾ ಬೆಂಬಲ ಹಾಗೂ ಪೌಷ್ಟಿಕಾಂಶದ ನೆರವು ನೀಡುವುದು.
  • ಮನೆಯ ಸದಸ್ಯರು, ಮಕ್ಕಳು, ಎಚ್‌ಐವಿ ಪೀಡಿತರು ಹಾಗೂ ಅತಿ ಅಪಾಯಕಾರಿ/ದುರ್ಬಲ ಜನಸಂಖ್ಯೆಯ ನಡುವೆ ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಟಿಬಿ ತಡೆಗಟ್ಟುವ ಚಿಕಿತ್ಸೆ ನೀಡುವುದು.
  • ಗಾಳಿಯ ಮೂಲಕ ಹರಡುವ ಸೋಂಕನ್ನು ನಿಯಂತ್ರಿಸುವ ಕ್ರಮಗಳು.
  • ಸಾಮಾಜಿಕ ನಿರ್ಣಾಯಕ ಅಂಶಗಳನ್ನು ಪರಿಹರಿಸಲು ಬಹು-ವಲಯದ ಪ್ರತಿಕ್ರಿಯೆ.
  • ಸರ್ಕಾರವು ಎನ್‍ಟಿಇಪಿ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ

ಎನ್‌ಟಿಇಪಿಯ ಹೆಚ್ಚುವರಿ ಪ್ರಮುಖ ಅಂಶವಾಗಿ ಪ್ರಧಾನಮಂತ್ರಿ-ಟಿಬಿ ಮುಕ್ತ ಭಾರತ ಅಭಿಯಾನವನ್ನು (ಟಿಬಿ-ಮುಕ್ತ ಭಾರತ ಚಳಳಿ) ಸೆಪ್ಟೆಂಬರ್ 9, 2022 ರಂದು ಪ್ರಾರಂಭಿಸಲಾಯಿತು. ಸಮಾಜದ ಎಲ್ಲ ವರ್ಗದ ಜನರನ್ನು 'ಜನ ಆಂದೋಲನ'ದಲ್ಲಿ (ಜನರ ಚಳಳಿ) ಒಗ್ಗೂಡಿಸಲು ಮತ್ತು ಟಿಬಿ ನಿರ್ಮೂಲನೆಯತ್ತ ದೇಶದ ಪ್ರಗತಿಯನ್ನು ಚುರುಕುಗೊಳಿಸಲು ಈ ಉಪಕ್ರಮವನ್ನು ಆರಂಭಿಸಲಾಗಿದೆ. ಇದರ ಪ್ರಮುಖ ಉದ್ದೇಶಗಳು:

  • ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ಟಿಬಿ ರೋಗಿಗಳಿಗೆ ಹೆಚ್ಚುವರಿ ಬೆಂಬಲ ನೀಡುವುದು.
  • ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು.

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ಬಳಸಿಕೊಳ್ಳುವುದು.

ನಿಕ್ಷಯ್ ಪೋಷಣ್ ಯೋಜನೆ ಮತ್ತು ನಿಕ್ಷಯ್ ಮಿತ್ರ ಕಾರ್ಯಕ್ರಮ

ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ಅಡ್ಡಪರಿಣಾಮಗಳನ್ನು ಎದುರಿಸಲು ಟಿಬಿ ರೋಗಿಗಳು ಅಧಿಕ ಪ್ರೊಟೀನ್ ಇರುವ ಆಹಾರವನ್ನು ಸೇವಿಸುವುದು ಕಡ್ಡಾಯವಾಗಿದೆ. 2018ರಲ್ಲಿ ಪ್ರಾರಂಭಿಸಲಾದ 'ನಿಕ್ಷಯ್ ಪೋಷಣ್ ಯೋಜನೆ'ಯು ಅಧಿಸೂಚನೆಗೆ ಒಳಪಟ್ಟ ಪ್ರತಿಯೊಬ್ಬ ಕ್ಷಯರೋಗಿಗೆ ತಿಂಗಳಿಗೆ 1,000 ರೂ.ಗಳ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. 2018ರ ಏಪ್ರಿಲ್‌ನಲ್ಲಿ ಇದು ಆರಂಭವಾದಾಗಿನಿಂದ, 1.38 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಒಟ್ಟು 4,454.68 ಕೋಟಿ ರೂ.ಗಳನ್ನು ಪಾವತಿಸಲಾಗಿದೆ.

ಟಿಬಿ ಚಿಕಿತ್ಸೆಯು ದೀರ್ಘಕಾಲದ್ದಾಗಿದ್ದು, ಕನಿಷ್ಠ 6 ತಿಂಗಳು ಅಥವಾ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಕಾಲ ಮುಂದುವರಿಯುತ್ತದೆ. 'ನಿಕ್ಷಯ್ ಮಿತ್ರ' ಎಂದರೆ ಈ ಚಿಕಿತ್ಸಾ ಅವಧಿಯಲ್ಲಿ ಟಿಬಿ ರೋಗಿಗಳಿಗೆ ಸಹಾಯ ಹಸ್ತ ಚಾಚುವ ಒಬ್ಬ "ಟಿಬಿ ಸ್ನೇಹಿತ" ಅಥವಾ ಬೆಂಬಲಿಗ. ಯಾವುದೇ ವ್ಯಕ್ತಿ, ಎನ್‌ಜಿಒ, ಕಾರ್ಪೊರೇಟ್ ಸಂಸ್ಥೆಗಳು, ಧಾರ್ಮಿಕ ಹಾಗೂ ಸಾಮುದಾಯಿಕ ಗುಂಪುಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಗಣ್ಯರು ಸ್ವಯಂಪ್ರೇರಿತರಾಗಿ 'ನಿಕ್ಷಯ್ ಮಿತ್ರ'ರಾಗಬಹುದು.

ರೋಗಿಗಳು ತಮ್ಮ ಜೇಬಿನಿಂದ ಹಣ ಖರ್ಚು ಮಾಡುವುದನ್ನು ತಗ್ಗಿಸಲು ಈ ಟಿಬಿ ಸ್ನೇಹಿತರು ನಿಯಮಿತವಾಗಿ ಆಹಾರದ ಕಿಟ್‌ಗಳನ್ನು ಒದಗಿಸುತ್ತಾರೆ. ಇದರೊಂದಿಗೆ, ರೋಗಿಗಳ ಯೋಗಕ್ಷೇಮವನ್ನು ನಿಯಮಿತವಾಗಿ ವಿಚಾರಿಸುವ ಮೂಲಕ ಮಾನಸಿಕ-ಸಾಮಾಜಿಕ ಬೆಂಬಲವನ್ನು ಹಾಗೂ ಗುಣಮುಖರಾದ ಬಳಿಕ ತಮ್ಮ ಬದುಕನ್ನು ಮರುಕಟ್ಟಿಕೊಳ್ಳಲು ವೃತ್ತಿಪರ ಬೆಂಬಲವನ್ನು ಸಹ ನೀಡಬಹುದು.

ನವೆಂಬರ್ 12, 2025 ರ ಹೊತ್ತಿಗೆ:

  • 6,77,541 ವ್ಯಕ್ತಿಗಳು ಮತ್ತು ಸಂಸ್ಥೆಗಳು 'ನಿಕ್ಷಯ್ ಮಿತ್ರ'ರಾಗಿ ನೋಂದಾಯಿಸಿಕೊಂಡು, ಟಿಬಿ ರೋಗಿಗಳಿಗೆ 45 ಲಕ್ಷಕ್ಕೂ ಹೆಚ್ಚು ಆಹಾರದ ಕಿಟ್‌ಗಳನ್ನು ವಿತರಿಸಿದ್ದಾರೆ.
  • 2 ಲಕ್ಷಕ್ಕೂ ಅಧಿಕ 'ಮೈ ಭಾರತ್' ಸ್ವಯಂಸೇವಕರು ನಿಕ್ಷಯ್ ಮಿತ್ರರಾಗಿ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ. 'ಮೈ ಭಾರತ್' ಎಂಬುದು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಒಂದು ಉಪಕ್ರಮವಾಗಿದ್ದು, ಇದು 15 ರಿಂದ 29 ವರ್ಷ ವಯಸ್ಸಿನ ಯುವಕರನ್ನು ವಿವಿಧ ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಪಾಲುದಾರಿಕೆಗಳೊಂದಿಗೆ ಸಂಪರ್ಕಿಸುವ ಮೂಲಕ ನೈಜ ಜಗತ್ತಿನ ಸವಾಲುಗಳು ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

100 ದಿನಗಳ ಟಿಬಿ ಮುಕ್ತ ಭಾರತ ಅಭಿಯಾನ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2024ರ ಡಿಸೆಂಬರ್ 7 ರಂದು 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 337 ಅಧಿಕ-ಮುಖ್ಯ ಗಮನದ ಜಿಲ್ಲೆಗಳಲ್ಲಿ ಭಾರತದ ಅತ್ಯಂತ ತೀವ್ರವಾದ ಟಿಬಿ ನಿರ್ಮೂಲನಾ ಅಭಿಯಾನಗಳಲ್ಲಿ ಒಂದಾದ '100 ದಿನಗಳ ಟಿಬಿ ಮುಕ್ತ ಭಾರತ ಅಭಿಯಾನ'ಕ್ಕೆ ಚಾಲನೆ ನೀಡಿತು. ಟಿಬಿಯನ್ನು ಮುಂಚಿತವಾಗಿ ಪತ್ತೆಹಚ್ಚಲು, ದುರ್ಬಲ ಜನಸಂಖ್ಯೆಯ ದುರ್ಬಲ್ಯ ಮ್ಯಾಪಿಂಗ್ ಮತ್ತು ವ್ಯವಸ್ಥಿತ ತಪಾಸಣೆಯನ್ನು ಕೈಗೊಳ್ಳಲಾಯಿತು. ಈ 'ಜನ ಆಂದೋಲನ'ವು 30,000ಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳು ಮತ್ತು 24 ಇಲಾಖೆಗಳ ಸಕ್ರಿಯ ಭಾಗವಹಿಸುವಿಕೆಗೆ ಹಾಗೂ 'ನಿಕ್ಷಯ್ ಮಿತ್ರ'ರ ಬೆಂಬಲಕ್ಕೆ ಕಾರಣವಾಯಿತು, ಇದು ಟಿಬಿ ನಿರ್ಮೂಲನೆಗೆ 'ಸಮಾಜದ ಎಲ್ಲಾ ವರ್ಗದ ಸಹಭಾಗಿತ್ವ' ಮತ್ತು 'ಸರ್ಕಾರದ ಎಲ್ಲಾ ಅಂಗಗಳ ಒಮ್ಮುಖ' ವಿಧಾನವನ್ನು ಪ್ರದರ್ಶಿಸಿತು. ಟಿಬಿ ಮುಕ್ತ ಭಾರತ ಅಭಿಯಾನದ ಈ ಕಾರ್ಯತಂತ್ರಗಳನ್ನು ಈಗ ದೇಶಾದ್ಯಂತ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿ ಮೇಲ್ದರ್ಜೆಗೇರಿಸಲಾಗಿದೆ.

2026ರ ಜೂನ್ ವೇಳೆಗೆ, ಈ ತೀವ್ರಗೊಂಡ ಅಭಿಯಾನವು ಪ್ರಮುಖ ಮೈಲಿಗಲ್ಲುಗಳನ್ನು ದಾಟಿದೆ: 28.1 ಕೋಟಿಗೂ ಅಧಿಕ ಜನರಿಗೆ ತಪಾಸಣೆ ನಡೆಸಲಾಗಿದೆ, 20 ಲಕ್ಷ ವ್ಯಕ್ತಿಗಳಿಗೆ ಟಿಬಿ ತಡೆಗಟ್ಟುವ ಚಿಕಿತ್ಸೆ ನೀಡಲಾಗಿದೆ ಮತ್ತು 5.7 ಲಕ್ಷ ಹೊಸ ನಿಕ್ಷಯ್ ಮಿತ್ರರನ್ನು ಸೇರಿಸಿಕೊಳ್ಳಲಾಗಿದೆ.

ಮಾರ್ಚ್ 2026 ರಿಂದ ಪ್ರಾರಂಭವಾದ ಅಭಿಯಾನದ ಎರಡನೇ ಹಂತದ ಅವಧಿಯಲ್ಲಿ, 1.2 ಲಕ್ಷಕ್ಕೂ ಹೆಚ್ಚು ಅಧಿಕ-ಅಪಾಯಕಾರಿ ಹಳ್ಳ ಗಳು ಮತ್ತು ವಾರ್ಡ್‌ಗಳಲ್ಲಿ 1.7 ಲಕ್ಷಕ್ಕೂ ಅಧಿಕ 'ಆಯುಷ್ಮಾನ್ ಆರೋಗ್ಯ ಶಿಬಿರ'ಗಳನ್ನು ಆಯೋಜಿಸಲಾಯಿತು. ಇದಕ್ಕೆ 32 ಲಕ್ಷ ವಿದ್ಯಾರ್ಥಿಗಳು ಮತ್ತು 1.9 ಲಕ್ಷ 'ಮೈ ಭಾರತ್' ಸ್ವಯಂಸೇವಕರಿಂದ ಸಕ್ರಿಯ ಬೆಂಬಲ ದೊರೆಯಿತು. ಟಿಬಿ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಚಿಕಿತ್ಸೆಯ ಯಶಸ್ಸಿನ ಪ್ರಮಾಣವು ಶೇ. 90ಕ್ಕೆ ಏರಿದ್ದು, ಇದು ಶೇ. 88ರಷ್ಟಿರುವ ಜಾಗತಿಕ ಸರಾಸರಿಯನ್ನು ಮೀರಿದೆ.

ಹೊಸ ಉಪಕ್ರಮಗಳು

ಔಷಧ-ನಿರೋಧಕ ಟಿಬಿ ರೋಗಿಗಳಿಗಾಗಿ ಬೆಡಾಕ್ವಿಲಿನ್, ಪ್ರೆಟೊಮ್ಯಾನಿಡ್, ಲಿನೆಜೋಲಿಡ್ ಮತ್ತು ಮಾಕ್ಸಿಫ್ಲೋಕ್ಸಾಸಿನ್ ಒಳಗೊಂಡ ಹೊಸ, ಕಡಿಮೆ ಅವಧಿಯ, ಸುರಕ್ಷಿತ ಹಾಗೂ ಅತ್ಯಂತ ಪರಿಣಾಮಕಾರಿಯಾದ ಬಿಪಿಎಎಲ್‍ಎಂ ಚಿಕಿತ್ಸಾ ವಿಧಾನವನ್ನು ಕಾರ್ಯಕ್ರಮದಡಿ ಪರಿಚಯಿಸಲಾಗಿದೆ. ಇದು ಚಿಕಿತ್ಸೆಯ ಅವಧಿಯನ್ನು 6 ತಿಂಗಳಿಗೆ ತಗ್ಗಿಸಲಿದೆ. 15,000ಕ್ಕೂ ಹೆಚ್ಚು ಎಂಡಿಆರ್‍/ಆರ್‍ಆರ್‍-ಟಿಬಿ ರೋಗಿಗಳಿಗೆ ಈಗಾಗಲೇ ಈ ಚಿಕಿತ್ಸೆಯನ್ನು ನೀಡಲು ಪ್ರಾರಂಭಿಸಲಾಗಿದೆ.

ಟಿಬಿ ತಡೆಗಟ್ಟುವ ಚಿಕಿತ್ಸೆ: ರೋಗ ಗುಣಪಡಿಸುವುದಷ್ಟೇ ಅಲ್ಲದೆ ತಡೆಗಟ್ಟುವುದು ಕೂಡ ಅಷ್ಟೇ ಮುಖ್ಯ ಎಂಬುದನ್ನು ಮನಗಂಡು, ಟಿಬಿ ಸೋಂಕು ಸಕ್ರಿಯ ಕಾಯಿಲೆಯಾಗಿ ಬದಲಾಗುವುದನ್ನು ತಡೆಯಲು ಅರ್ಹ ಫಲಾನುಭವಿಗಳಿಗೆ ಟಿಬಿ ತಡೆಗಟ್ಟುವ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಗುರಿ-ಆಧಾರಿತ ಹಾಗೂ ನವೀನ ವಿಧಾನದ ಮೂಲಕ, ಈ ಕಾರ್ಯಕ್ರಮವು ಕಳೆದ ಕೆಲವು ವರ್ಷಗಳಿಂದ ಮನೆಯ ಸದಸ್ಯರನ್ನು ಮತ್ತು ಎಚ್‌ಐವಿ ಪೀಡಿತರನ್ನು ಟಿಪಿಟಿ ಒದಗಿಸುವ ಮೂಲಕ ಯಶಸ್ವಿಯಾಗಿ ರಕ್ಷಿಸಿದೆ. ಈ ಹಸ್ತಕ್ಷೇಪವನ್ನು ಸಕ್ರಿಯ ಹಾಗೂ ತೀವ್ರವಾದ ಪ್ರಕರಣ ಪತ್ತೆಹಚ್ಚುವ ಅಭಿಯಾನಗಳೊಂದಿಗೆ ಸಂಯೋಜಿಸಲಾಗಿದೆ ಮತ್ತು ಇತರ ದುರ್ಬಲ ಗುಂಪುಗಳಿಗೂ ವಿಸ್ತರಿಸಲಾಗಿದೆ.

ಆಯುಷ್ಮಾನ್ ಆರೋಗ್ಯ ಮಂದಿರಗಳು

ಆಯುಷ್ಮಾನ್ ಆರೋಗ್ಯ ಮಂದಿರಗಳು ಎಲ್ಲರಿಗೂ ಸಾರ್ವತ್ರಿಕ ಮತ್ತು ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುವ ಬೃಹತ್ 'ಆಯುಷ್ಮಾನ್ ಭಾರತ್' ಯೋಜನೆಯ ಅಡಿಯಲ್ಲಿ ಬರುವ ಸಮುದಾಯ ಆರೋಗ್ಯ ಕೇಂದ್ರಗಳಾಗಿವೆ. ಅಕ್ಟೋಬರ್ 13, 2026 ರ ಹೊತ್ತಿಗೆ ಭಾರತದಲ್ಲಿ ಒಟ್ಟು 1,87,250 ಆಯುಷ್ಮಾನ್ ಆರೋಗ್ಯ ಮಂದಿರಗಳಿವೆ – ಇವುಗಳಲ್ಲಿ ಉಪ-ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುಷ್ (ಆಯುರ್ವೇದ, ಯೋಗ ಮತ್ತು ನುಚುಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ಕೇಂದ್ರಗಳು ಮತ್ತು ನಗರ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಸೇರಿವೆ. ಟಿಬಿ ಲಕ್ಷಣಗಳನ್ನು ತೋರಿಸುವ ವ್ಯಕ್ತಿಗಳು ರೋಗನಿರ್ಣಯಕ್ಕಾಗಿ ಈ ಕೇಂದ್ರಗಳಿಗೆ ಭೇಟಿ ನೀಡಬಹುದು.

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಆಯುಷ್ಮಾನ್ ಆರೋಗ್ಯ ಮಂದಿರವೊಂದರಲ್ಲಿ ಆರೋಗ್ಯ ಕಾರ್ಯಕರ್ತರು ಮಹಿಳೆಯರಿಗೆ ಟಿಬಿ ಮತ್ತು ಇತರ ಕಾಯಿಲೆಗಳ ತಪಾಸಣೆ ನಡೆಸುತ್ತಿದ್ದಾರೆ (ಸೆಪ್ಟೆಂಬರ್ 20, 2025) – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ತಾಂತ್ರಿಕ ಮೂಲಸೌಕರ್ಯ

ಕ್ಷಯರೋಗವನ್ನು (ಟಿಬಿ) ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಮತ್ತು ಉತ್ತಮ ಆರೈಕೆ ಒದಗಿಸಲು, ಭಾರತದಲ್ಲಿ ವಿಶ್ವದಲ್ಲೇ ಬೃಹತ್‍ ಜಾಲವಿದೆ – ಇದರಡಿ 9,800ಕ್ಕೂ ಹೆಚ್ಚು ಕ್ಷಿಪ್ರ ಆಣ್ವಿಕ ಪರೀಕ್ಷಾ ಸೌಲಭ್ಯಗಳು ಮತ್ತು 107 ಕಲ್ಚರ್ ಹಾಗೂ ಔಷಧ ಸಂವೇದನಾಶೀಲತಾ ಪರೀಕ್ಷಾ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಇತರೆ ಪ್ರಮುಖ ತಾಂತ್ರಿಕ ಉಪಕರಣಗಳು ಇಲ್ಲಿವೆ:

  • ಕೈಯಲ್ಲೇ ಹಿಡಿಯಬಹುದಾದಎಐ-ಸಮರ್ಥಿತ ಎಕ್ಸ್‌ರೇ ಯೂನಿಟ್‌ಗಳು: ಸಮುದಾಯ ಮಟ್ಟದ ತಪಾಸಣೆಗಾಗಿ 500ಕ್ಕೂ ಹೆಚ್ಚು ಹ್ಯಾಂಡ್‌ಹೆಲ್ಡ್ ಚೆಸ್ಟ್ ಎಕ್ಸ್‌ರೇ ಯೂನಿಟ್‌ಗಳನ್ನು ಬಳಸಲಾಗುತ್ತಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 1,500 ಯೂನಿಟ್‌ಗಳನ್ನು ತಲುಪಿಸಲಾಗುತ್ತಿದೆ.
  • ನಿಕ್ಷಯ್ ಡಿಜಿಟಲ್ ವೇದಿಕೆ: ಪೌಷ್ಟಿಕಾಂಶದ ಬೆಂಬಲಕ್ಕಾಗಿ ನೇರ ನಗದು ವರ್ಗಾವಣೆಯನ್ನು ಈ ಡಿಜಿಟಲ್ ವೇದಿಕೆಯು ಸುಲಭಗೊಳಿಸುತ್ತದೆ.
  • ಎಕ್ಸ್‌ರೇ ತಪಾಸಣೆಯಲ್ಲಿ 34 ಪಟ್ಟು ಏರಿಕೆ: ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಹ್ಯಾಂಡ್‌ಹೆಲ್ಡ್ ಎಕ್ಸ್‌ರೇ ಯೂನಿಟ್‌ಗಳನ್ನು ನಿಯೋಜಿಸಿರುವುದರಿಂದ ಈ ಗಮನಾರ್ಹ ಪ್ರಗತಿ ಸಾಧ್ಯವಾಗಿದೆ.
  • ಟಿಬಿ ಮುಕ್ತ ಭಾರತ ಆ್ಯಪ್ ಮತ್ತು 'ಖುಷಿ' ಚಾಟ್‌ಬಾಟ್: ಪ್ರಗತಿಯನ್ನು ಟ್ರ್ಯಾಕ್ ಮಾಡಲು, ರೋಗಲಕ್ಷಣಗಳ ಕುರಿತು ನಾಗರಿಕರಿಗೆ ಮಾರ್ಗದರ್ಶನ ನೀಡಲು ಮತ್ತು ಹತ್ತಿರದ ರೋಗನಿರ್ಣಯ ಕೇಂದ್ರಗಳನ್ನು ಪತ್ತೆಹಚ್ಚಲು ಎಐ-ಚಾಲಿತ ಚಾಟ್‌ಬಾಟ್ ಅನ್ನು ಒಳಗೊಂಡ ಹೊಸ ಡಿಜಿಟಲ್ ವೇದಿಕೆಯಾಗಿದೆ.
  • ಸಾಮರ್ಥ್ಯ ವರ್ಧನೆ: ಟ್ರುಯೇಂಟ್‍ ಮತ್ತು ಸಿಬಿಎನ್‍ಎಎಟಿ ರೋಗನಿರ್ಣಯ ಯಂತ್ರಗಳ ವಿಸ್ತರಣೆಯ ಜೊತೆಗೆ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ರೇಡಿಯೋಗ್ರಾಫರ್ ಹುದ್ದೆಗಳನ್ನು ಸಚಿವಾಲಯವು ವಿಸ್ತರಿಸಿದೆ.

ಕಾಶ್ಮೀರದ ದುರ್ಗಮ ಪ್ರದೇಶಗಳಲ್ಲಿ ಟಿಬಿ ಪ್ರಕರಣಗಳ ಪತ್ತೆ

ಹಿಮಾಲಯದಲ್ಲಿ ಸಮುದ್ರ ಮಟ್ಟದಿಂದ 2,400 ಮೀಟರ್ ಎತ್ತರದಲ್ಲಿದ್ದು, ಚಳಿಗಾಲದಲ್ಲಿ ಸಂಪರ್ಕ ಕಡಿತಗೊಳ್ಳುವ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ನಿರ್ಜನ ಗುರೇಜ್ ಕಣಿವೆಯಲ್ಲಿ, ಎನ್‍ಟಿಇಪಿ ಕಾಶ್ಮೀರ ತಂಡವು ತೀವ್ರವಾದ ಟಿಬಿ ತಪಾಸಣಾ ಅಭಿಯಾನವನ್ನು ನಡೆಸಿತು. ಸುಧಾರಿತ ರೋಗನಿರ್ಣಯ ಯಂತ್ರಗಳು ಮತ್ತು ಪೋರ್ಟಬಲ್ ಎಕ್ಸ್‌ರೇ ಉಪಕರಣಗಳನ್ನು ಹೊಂದಿರುವ ಮೊಬೈಲ್ ಪರೀಕ್ಷಾ ವ್ಯಾನ್‌ಗಳನ್ನು ಬಳಸಿ, ಈ ತಂಡವು ಮೂರು ದಿನಗಳಲ್ಲಿ 1,250 ಜನರಿಗೆ ತಪಾಸಣೆ ನಡೆಸಿತು ಮತ್ತು ಮುಂದಿನ ಪರೀಕ್ಷೆಗಾಗಿ 250ಕ್ಕೂ ಹೆಚ್ಚು ಸಂಭಾವ್ಯ ಟಿಬಿ ಪ್ರಕರಣಗಳನ್ನು ಗುರುತಿಸಿತು. ಅವರು ಭಾರತೀಯ ಸೇನೆ, ಸ್ಥಳೀಯ ಆರೋಗ್ಯ ಕಾರ್ಯಕರ್ತರು, ಗ್ರಾಮ ಪ್ರತಿನಿಧಿಗಳು ಮತ್ತು ಧಾರ್ಮಿಕ ಮುಖಂಡರೊಂದಿಗೆ ಜಾಗೃತಿ ಸಭೆಗಳನ್ನೂ ನಡೆಸಿದರು. ಈ ಪ್ರಯತ್ನವು 2025ರ ವೇಳೆಗೆ "ಟಿಬಿ-ಮುಕ್ತ ಕಾಶ್ಮೀರ"ವನ್ನು ಸಾಧಿಸುವ ಜಮ್ಮು ಮತ್ತು ಕಾಶ್ಮೀರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಕೃತಕ ಬುದ್ಧಿಮತ್ತೆ ಆಧಾರಿತ ಉಪಕ್ರಮಗಳು

ಆರೋಗ್ಯ ಸೇsವೆಗಳ ವಿತರಣೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ರೋಗಿಗಳ ಆರೈಕೆಯ ವೇಗ ಮತ್ತು ಗುಣಮಟ್ಟವನ್ನು ಸುಧಾರಿಸಲು ಸರ್ಕಾರವು ಕ್ಷಯರೋಗದ (ಟಿಬಿ) ಪತ್ತೆ, ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಪ್ರಮುಖ ಉಪಕ್ರಮಗಳು ಇಲ್ಲಿವೆ:

ಆರೋಗ್ಯ ಗಮನ

ಎಐ ಪರಿಹಾರ / ಉಪಕ್ರಮ

ಪ್ರಕ್ರಿಯೆ ಮತ್ತು ತಂತ್ರಜ್ಞಾನ

ಚಿಕಿತ್ಸಾ ಅನುಭವ ಮತ್ತು ಕ್ಲಿನಿಕಲ್/ಕಾರ್ಯಾಚರಣೆಯ ಪ್ರಭಾವ

ಟಿಬಿ ತಪಾಸಣೆ


 

ಕಫ್ ಅಗೇನ್ಸ್ಟ್ ಟಿಬಿ - ಸಿಎಟಿಬಿ


 

ಅಕೌಸ್ಟಿಕ್ ಎಐ: ಸ್ಮಾರ್ಟ್‌ಫೋನ್ ಆ್ಯಪ್ ಮೂಲಕ ರೋಗಿಯ ಕೆಮ್ಮಿನ 3 ಸೆಕೆಂಡುಗಳ ರೆಕಾರ್ಡಿಂಗ್ ಅನ್ನು ಪಡೆದು, ಟಿಬಿ ಲಕ್ಷಣಗಳ ಆವರ್ತನ ಮಾದರಿಗಳನ್ನು ವಿಶ್ಲೇಷಿಸುತ್ತದೆ.

1.62 ಲಕ್ಷಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಲಾಗಿದೆ; ಸಾಂಪ್ರದಾಯಿಕ ವಿಧಾನಗಳಿಗಿಂತ ಶೇ. 12 ರಿಂದ 16 ರಷ್ಟು ಹೆಚ್ಚಿನ ವಿಸ್ತೃತ ಫಲಿತಾಂಶ ಲಭಿಸಿದೆ.

ಟಿಬಿ ನಿರ್ವಹಣೆ


 

ಪ್ರತಿಕೂಲ ಫಲಿತಾಂಶ ಮುನ್ಸೂಚನೆ


 

ಪ್ರಿಡಿಕ್ಟಿವ್ ಅನಾಲಿಟಿಕ್ಸ್: ಚಿಕಿತ್ಸೆಯಲ್ಲಿ ವಿಫಲಗೊಳ್ಳುವ ಹೆಚ್ಚಿನ ಅಪಾಯವಿರುವ ರೋಗಿಗಳನ್ನು  ಎಐ ಗುರುತಿಸುತ್ತದೆ; ಒಮ್ಮೆ ಗುರುತಿಸಿದ ನಂತರ ತಕ್ಕಂತೆ ಚಿಕಿತ್ಸೆ ಆರಂಭಿಸಲಾಗುತ್ತದೆ.

ದೇಶಾದ್ಯಂತ ಜಾರಿಗೆ ತಂದ ನಂತರ ಪ್ರತಿಕೂಲ ಫಲಿತಾಂಶಗಳಲ್ಲಿ ಶೇ. 27 ರಷ್ಟು ಇಳಿಕೆ ಕಂಡುಬಂದಿದೆ.

ಟಿಬಿ ಟ್ರೇಯೇಜ್ / ಪ್ರಾಥಮಿಕ ವಿಂಗಡಣೆ


 

ಡೀಪ್‌ಸಿಎಕ್ಸ್ಆರ್ – (ಎದೆಯ ಎಕ್ಸ್‍ ರೇ)


 

ರೇಡಿಯಾಲಜಿ ಎಐ: ಶಂಕಿತ ಟಿಬಿ ಪ್ರಕರಣಗಳಲ್ಲಿ ಗಡ್ಡೆಗಳು ಅಥವಾ ಕುಹರಗಳನ್ನು ಗುರುತಿಸಲು ಡಿಜಿಟಲ್ ಎಕ್ಸ್‌ರೇಗಳನ್ನು ಸ್ವಯಂಚಾಲಿತವಾಗಿ ಓದುವ ತಂತ್ರಜ್ಞಾನ.

8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ; ತಜ್ಞರ ಕೊರತೆಯನ್ನು ನೀಗಿಸಲು ಇದು ಸರ್ಕಾರಕ್ಕೆ ಸಂಪೂರ್ಣ ಉಚಿತವಾಗಿ ಲಭ್ಯವಿದೆ.

ಕ್ಷಯರೋಗ ನಿರ್ಮೂಲನೆಯತ್ತ ಭಾರತದ ಹೆಜ್ಜೆ

ಟಿಬಿ ಪ್ರಕರಣಗಳಲ್ಲಿ ಭಾರತದಲ್ಲಿ ನಿರಂತರವಾಗಿ ಕಂಡುಬರುತ್ತಿರುವ ಇಳಿಕೆಯು, ದೃಢಸಂಕಲ್ಪ, ಸಮುದಾಯದ ಸಹಭಾಗಿತ್ವ ಮತ್ತು ಬಲವಾದ ಸಾರ್ವಜನಿಕ ಆರೋಗ್ಯ ಕ್ರಮಗಳು ನಿಜಕ್ಕೂ ದೊಡ್ಡ ಬದಲಾವಣೆ ತರಬಲ್ಲವು ಎಂಬುದಕ್ಕೆ ಪ್ರಬಲ ನಿದರ್ಶನವಾಗಿದೆ. ಮುಂದುವರಿದ ಜಾಗರೂಕತೆ, ವಿಸ್ತರಿಸಲ್ಪಟ್ಟ ಆರೋಗ್ಯ ಸೇವೆಗಳು ಮತ್ತು ಸಾಮೂಹಿಕ ಜವಾಬ್ದಾರಿಯೊಂದಿಗೆ, 'ಟಿಬಿ ಮುಕ್ತ ಭಾರತ' ಎಂಬುದು ಕೇವಲ ಒಂದು ಗುರಿಯಷ್ಟೇ ಅಲ್ಲ, ಬದಲಿಗೆ ನೈಜವಾಗಿ ಸಾಧಿಸಬಹುದಾದ ಭವಿಷ್ಯದತ್ತ ದೇಶವು ವೇಗವಾಗಿ ಸಾಗುತ್ತಿದೆ.

ಟಿಬಿ ಕುರಿತು ಅರಿವು ಮೂಡಿಸಲು ಮತ್ತು ಕ್ಷಯರೋಗ ನಿರ್ಮೂಲನೆಯಲ್ಲಿ ಸಮುದಾಯಗಳನ್ನು ಒಗ್ಗೂಡಿಸಲು 'ಜೋಷ್' ಸಾಮಾಜಿಕ ಮಾಧ್ಯಮ ಅಭಿಯಾನವು ಶ್ರಮಿಸುತ್ತಿದೆ. ಎಲ್ಲಾ ಹಂತದ ಆರೋಗ್ಯ ಸಂಸ್ಥೆಗಳು, ಯುವಜನತೆ ಮತ್ತು ಸಮುದಾಯಗಳನ್ನು ಒಳಗೊಂಡ ಈ ಎಲ್ಲಾ ಉಪಕ್ರಮಗಳ ಮೂಲಕ, 'ವಿಕಸಿತ ಭಾರತ 2047' ಕನಸನ್ನು ನನಸಾಗಿಸಲು ಅಪಾಯಕಾರಿ ಹಾಗೂ ವ್ಯಾಪಕವಾಗಿರುವ ಈ ರೋಗವನ್ನು ತೊಡೆದುಹಾಕಲು ಭಾರತವು ಸಜ್ಜಾಗಿದೆ.

References

Ministry of Health and Family Welfare

https://www.pib.gov.in/PressReleasePage.aspx?PRID=2189415

https://www.pib.gov.in/PressReleasePage.aspx?PRID=2275402&reg=1&lang=1

https://www.pib.gov.in/PressReleasePage.aspx?PRID=2114549

https://www.pib.gov.in/PressReleasePage.aspx?PRID=1808582

https://www.pib.gov.in/PressReleasePage.aspx?PRID=2184456

https://www.pib.gov.in/PressReleasePage.aspx?PRID=2081662

https://mohfw.gov.in/?q=en/basicpage-

https://tbcindia.mohfw.gov.in/national-strategic-plan-to-end-tb-in-india-2020-25/

https://dghs.mohfw.gov.in/national-tuberculosis-elimination-programme.php

https://tbcindia.mohfw.gov.in/concept-note/

https://aam.mohfw.gov.in/

https://tbcindia.mohfw.gov.in/wp-content/uploads/2024/10/TB-Report_for-Web_08_10-2024-1.pdf

https://mohfw.gov.in/?q=/press-info/7783

https://www.mohfw.gov.in/?q=en/pressrelease-217

https://tbcindia.mohfw.gov.in/wp-content/uploads/2023/05/4193711960Social-action-plan-2013-Final-7th-Jan-14.pdf

https://tbcindia.mohfw.gov.in/wp-content/uploads/2023/05/4773363959TOG-Chapter-1-Introduction.pdf

PIB Backgrounder

        https://www.pib.gov.in/PressReleasePage.aspx?PRID=2244661&reg=3&lang=1

Click to see pdf

 

*****

 

 

(Explainer ID: 160473) आगंतुक पटल : 5
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Malayalam