Technology
ಭಾರತದ ಉದಯೋನ್ಮುಖ ಸೂಪರ್ ಕಂಪ್ಯೂಟಿಂಗ್ ಪರಿಸರ ವ್ಯವಸ್ಥೆ
Posted On:
04 OCT 2026 5:53PM
|
ಭಾರತದ ಸೂಪರ್ ಕಂಪ್ಯೂಟಿಂಗ್ ಪ್ರಯಾಣವು 1990ರ ದಶಕದ ಆರಂಭದಲ್ಲಿದ್ದ ಪರಮ್ 8000 ನಿಂದ ಪ್ರಾರಂಭವಾಗಿ, 2015 ರಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (ಎನ್‌ಎಸ್‌ಎಂ) ಅಡಿಯಲ್ಲಿ ಇಂದು ರಾಷ್ಟ್ರೀಯ ಪರಿಸರ ವ್ಯವಸ್ಥೆಯಾಗಿ ಬೆಳೆದಿದೆ. ಸೆಪ್ಟೆಂಬರ್ 2026ರ ವೇಳೆಗೆ 68 PF ಸಾಮರ್ಥ್ಯವನ್ನು ತಲುಪಿಸುವ 40 ಸೂಪರ್ ಕಂಪ್ಯೂಟರ್‌ಗಳೊಂದಿಗೆ, ಎನ್‌ಎಸ್‌ಎಂ ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ ಲಭ್ಯತೆಯನ್ನು ವಿಸ್ತರಿಸುತ್ತಿದೆ. ಈ ಮಿಷನ್ ದೇಶೀಯವಾಗಿ ಸರ್ವರ್‌ಗಳು, ಸಾಫ್ಟ್‌ವೇರ್, ಕೂಲಿಂಗ್ ಮತ್ತು ನೆಟ್‌ವರ್ಕಿಂಗ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ, ಜೊತೆಗೆ ಕಂಪ್ಯೂಟೇಶನಲ್ ಬಯಾಲಜಿ, ಹವಾಮಾನ ಮುನ್ಸೂಚನೆ ಮತ್ತು ಹವಾಮಾನ ಮಾದರಿ, ವಿಕೋಪ ನಿರ್ವಹಣೆ, ಬಿಗ್ ಡೇಟಾ ಅನಾಲಿಟಿಕ್ಸ್ ಹಾಗೂ ಆಸ್ಟ್ರೋಫಿಸಿಕ್ಸ್ (ಖಗೋಳ ಭೌತಶಾಸ್ತ್ರ) ಕ್ಷೇತ್ರಗಳ ಅನ್ವಯಿಕೆಗಳಿಗೆ ಬೆಂಬಲ ನೀಡುತ್ತಿದೆ.
|
ಭಾರತದ ಸೂಪರ್ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ನಿರ್ಮಿಸುವುದು
ಬೆಳೆ ಇಳುವರಿಯನ್ನು ಮುನ್ಸೂಚಿಸುವುದರಿಂದ ಮತ್ತು ರೋಗಗಳ ಹರಡುವಿಕೆಯನ್ನು ಪತ್ತೆಹಚ್ಚುವುದರಿಂದ ಹಿಡಿದು, ಔಷಧ ಸಂಶೋಧನೆಯನ್ನು ವೇಗಗೊಳಿಸುವವರೆಗೆ ಹಾಗೂ ನದಿ ಪ್ರವಾಹದಿಂದ ಬಾಧಿತವಾಗುವ ಪ್ರದೇಶಗಳನ್ನು ಮುನ್ಸೂಚಿಸುವವರೆಗೆ, ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುವ ಸಾಮಾಜಿಕ ಅನ್ವಯಿಕೆಗಳಿಗೆ ಬೆಂಬಲ ನೀಡುತ್ತದೆ. ಅವು ಬೃಹತ್ ಡೇಟಾಸೆಟ್‌ಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಹವಾಮಾನ, ಬಾಹ್ಯಾಕಾಶ, ಆರೋಗ್ಯ ರಕ್ಷಣೆ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳಾದ್ಯಂತ ಸಂಕೀರ್ಣ ಸಿಮ್ಯುಲೇಶನ್‌ಗಳನ್ನು ಬೆಂಬಲಿಸಲು ನೆರವಾಗುತ್ತವೆ. ಅಲ್ಲದೆ, ಅವು ವೇಗವಾದ ವಿಶ್ಲೇಷಣೆಯನ್ನು ಸಾಧ್ಯವಾಗಿಸುತ್ತವೆ ಮತ್ತು ಸಂಶೋಧಕರು ಹೆಚ್ಚು ಹೆಚ್ಚು ಸಂಕೀರ್ಣವಾದ ವೈಜ್ಞಾನಿಕ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತವೆ. ಇದು ವೈಜ್ಞಾನಿಕ ಆವಿಷ್ಕಾರ ಮತ್ತು ತಾಂತ್ರಿಕ ನಾವೀನ್ಯತೆಯನ್ನು ವೇಗಗೊಳಿಸಲು ಅತ್ಯಗತ್ಯವಾಗುತ್ತಿದೆ.
ಸೂಪರ್ ಕಂಪ್ಯೂಟರ್‌ಗಳು ಅತ್ಯಸಾಧಾರಣ ವೇಗದಲ್ಲಿ ಸಂಕೀರ್ಣ ಲೆಕ್ಕಾಚಾರಗಳನ್ನು ಪ್ರಕ್ರಿಯೆಗೊಳಿಸಲು ವಿನ್ಯಾಸಗೊಳಿಸಲಾದ ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ ವ್ಯವಸ್ಥೆಗಳಾಗಿವೆ. ಅವು ಒಂದೇ ಸಮಯದಲ್ಲಿ ಹಲವು ಲೆಕ್ಕಾಚಾರಗಳನ್ನು ನಿರ್ವಹಿಸಲು ಹೆಚ್ಚಿನ ಸಂಖ್ಯೆಯ ಪ್ರೊಸೆಸರ್‌ಗಳನ್ನು ಸಂಯೋಜಿಸುತ್ತವೆ. ಇದು ಸಂಶೋಧಕರಿಗೆ ಬೃಹತ್ ಡೇಟಾಸೆಟ್‌ಗಳನ್ನು ವಿಶ್ಲೇಷಿಸಲು ಮತ್ತು ಅತ್ಯಾಧುನಿಕ ಸಿಮ್ಯುಲೇಶನ್‌ಗಳನ್ನು ಪರಿಣಾಮಕಾರಿಯಾಗಿ ನಡೆಸಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಸೂಪರ್ ಕಂಪ್ಯೂಟರ್‌ಗಳು ಸುಧಾರಿತ ವೈಜ್ಞಾನಿಕ ಸಂಶೋಧನೆ ಮತ್ತು ಆಯಕಟ್ಟಿನ ಅನ್ವಯಿಕೆಗಳಿಗೆ ನಿರ್ಣಾಯಕ ಮೂಲಸೌಕರ್ಯವನ್ನು ಒದಗಿಸುತ್ತವೆ.
ಭಾರತದ ಬೆಳೆಯುತ್ತಿರುವ ಡಿಜಿಟಲ್ ಪರಿಸರ ವ್ಯವಸ್ಥೆಯು ಸುಧಾರಿತ ಕಂಪ್ಯೂಟಿಂಗ್ ಮೂಲಸೌಕರ್ಯಕ್ಕಾಗಿ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಭಾರತವು ವಿಶ್ವದ ಸುಮಾರು 20% ಡೇಟಾವನ್ನು ಉತ್ಪಾದಿಸುತ್ತದೆ. ಕೃತಕ ಬುದ್ಧಿಮತ್ತೆ, ಹವಾಮಾನ ಮುನ್ಸೂಚನೆ ಮತ್ತು ಬಾಹ್ಯಾಕಾಶ ಸಂಶೋಧನೆಯಂತಹ ಅನ್ವಯಿಕೆಗಳಿಗೆ ಗಮನಾರ್ಹ ಕಂಪ್ಯೂಟಿಂಗ್ ಸಾಮರ್ಥ್ಯಗಳ ಅಗತ್ಯವಿದೆ. ಆದ್ದರಿಂದ ಸರ್ಕಾರವು ಸಂಶೋಧನಾ ಸಂಸ್ಥೆಗಳಾದ್ಯಂತ ಸೂಪರ್ ಕಂಪ್ಯೂಟಿಂಗ್ ಲಭ್ಯತೆಯನ್ನು ವಿಸ್ತರಿಸುತ್ತಿದೆ. ಈ ಪ್ರಯತ್ನವು ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಮತ್ತು ಭಾರತದ 'ಆತ್ಮನಿರ್ಭರ ಭಾರತ'ದ ದೂರದೃಷ್ಟಿಗೆ ಬೆಂಬಲ ನೀಡುತ್ತದೆ.

|
ಸೃಜನಶೀಲ ಮನಸ್ಸುಗಳು, ವಿಜ್ಞಾನದ ಪ್ರೇರಣೆ, ತಂತ್ರಜ್ಞಾನಗಳ ಸಬಲೀಕರಣ

ಇಂಡಿಯಾಸ್ ಎಮರ್ಜಿಂಗ್ ಸೈನ್ಸ್, ಟೆಕ್ನಾಲಜಿ ಆಂಡ್ ಇನ್ನೋವೇಶನ್ ಕಾನ್‌ಕ್ಲೇವ್‌ನ (ಇಎಸ್‌ಟಿಐಸಿ -2026) ಎರಡನೇ ಆವೃತ್ತಿಯು 2026 ರ ಅಕ್ಟೋಬರ್ 27 ರಿಂದ 29 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವು ನವದೆಹಲಿಯ ಭಾರತ್ ಮಂಟಪದಲ್ಲಿ “ಸೃಜನಶೀಲ ಮನಸ್ಸುಗಳು, ವಿಜ್ಞಾನದ ಪ್ರೇರಣೆ, ತಂತ್ರಜ್ಞಾನಗಳ ಸಬಲೀಕರಣ” ಎಂಬ ವಿಷಯದಡಿ ನಡೆಯಲಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ಆಯೋಜಿಸಿರುವ ಇಎಸ್‌ಟಿಐಸಿ-2026, ಉದಯೋನ್ಮುಖ ವಿಜ್ಞಾನ ಮತ್ತು ತಂತ್ರಜ್ಞಾನದ ಗಡಿಗಳನ್ನು ಮುನ್ನೆಲೆಗೆ ತರಲಿದೆ. ಇವುಗಳಲ್ಲಿ ಸೂಪರ್ ಕಂಪ್ಯೂಟಿಂಗ್ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳು ಸೇರಿವೆ. ಈ ಕಾನ್‌ಕ್ಲೇವ್ ಆಯಕಟ್ಟಿನ ಸಹಯೋಗಗಳನ್ನು ಪ್ರೇರೇಪಿಸುತ್ತದೆ ಮತ್ತು 'ವಿಕಸಿತ ಭಾರತ 2047' ರ ಭಾರತದ ದೂರದೃಷ್ಟಿಗೆ ಬೆಂಬಲ ನೀಡುತ್ತದೆ. 12 ವಿಷಯಾಧಾರಿತ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕಾರ್ಯಕ್ರಮದಲ್ಲಿ ಪ್ಲೀನರಿ ಸೇಶನ್‌ಗಳು (ಪೂರ್ಣ ಅಧಿವೇಶನಗಳು), ತಾಂತ್ರಿಕ ಚರ್ಚೆಗಳು ಮತ್ತು ಪ್ರದರ್ಶನಗಳು ಇರಲಿವೆ. ಸಭೆಯ ವೇಳಾಪಟ್ಟಿಯ ಬಗ್ಗೆ ಇನ್ನಷ್ಟು ಓದಿ ಇಎಸ್‌ಟಿಐಸಿ 2026
|
ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್‌ನ ಹಿಂದಿನ ತಂತ್ರ
ದೇಶದ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಬಲಪಡಿಸಲು ಭಾರತವು ಏಪ್ರಿಲ್ 2015 ರಲ್ಲಿ ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (ಎನ್‌ಎಸ್‌ಎಂ) ಅನ್ನು ಪ್ರಾರಂಭಿಸಿತು. ಈ ಮಿಷನ್ ಅನ್ನು ಸುಮಾರು ₹4,500 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಯಿತು. ಇದನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜಂಟಿಯಾಗಿ ಮುನ್ನಡೆಸುತ್ತಿವೆ.
ಸೂಪರ್ ಕಂಪ್ಯೂಟಿಂಗ್‌ನಲ್ಲಿ ಸ್ವಾವಲಂಬನೆಯನ್ನು ನಿರ್ಮಿಸುವುದು ಮತ್ತು ಭಾರತದ ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಬಲಪಡಿಸುವುದು ಈ ಮಿಷನ್‌ನ ಮುಖ್ಯ ಉದ್ದೇಶವಾಗಿದೆ. ಇದು ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಾದ್ಯಂತ ಸಂಶೋಧನೆ, ಅಭಿವೃದ್ಧಿ ಮತ್ತು ಸಮಸ್ಯೆ ಬಗೆಹರಿಸಲು ಸೂಪರ್ ಕಂಪ್ಯೂಟಿಂಗ್ ಬಳಕೆಯನ್ನು ಉತ್ತೇಜಿಸುತ್ತದೆ. ಇದು ಸಾಮಾಜಿಕ ಅನ್ವಯಿಕೆಗಳಿಗಾಗಿ ಪರಿಹಾರಗಳ ಅಭಿವೃದ್ಧಿಗೂ ಬೆಂಬಲ ನೀಡುತ್ತದೆ. ಈ ಮಿಷನ್ ಭಾರತದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಸೂಪರ್ ಕಂಪ್ಯೂಟಿಂಗ್ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಶ್ರಮಿಸುತ್ತದೆ.
ಪುಣೆಯ ಉನ್ನತ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಈ ಮಿಷನ್ ಅನ್ನು ಅನುಷ್ಠಾನಗೊಳಿಸುತ್ತಿವೆ. ದೇಶೀಯ ಸೂಪರ್ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಸೃಷ್ಟಿಸಲು ಎನ್‌ಎಸ್‌ಎಂ ಮೂರು ಸಮಕಾಲೀನ ಹಂತಗಳನ್ನು ಒಳಗೊಂಡ 'ಬಿಲ್ಡ್ ವಿಧಾನ'ವನ್ನು ಅನುಸರಿಸುತ್ತದೆ: ಜೋಡಣೆ, ಉತ್ಪಾದನೆ, ಮತ್ತು ವಿನ್ಯಾಸ ಹಾಗೂ ಉತ್ಪಾದನಾ ಬೆಂಬಲ. ಈ ವಿಧಾನವು ಕಂಪ್ಯೂಟಿಂಗ್ ಮೂಲಸೌಕರ್ಯದ ವಿಸ್ತರಣೆಯನ್ನು ದೇಶೀಯ ಸಾಮರ್ಥ್ಯಗಳ ಅಭಿವೃದ್ಧಿಯೊಂದಿಗೆ ಸಂಯೋಜಿಸುತ್ತದೆ.
|
ಸೂಪರ್ ಕಂಪ್ಯೂಟರ್‌ಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳು
- ಸಾಮಾನ್ಯ ಕಂಪ್ಯೂಟರ್‌ಗಳಂತಲ್ಲದೆ, ಸೂಪರ್ ಕಂಪ್ಯೂಟರ್‌ಗಳನ್ನು ಬೃಹತ್ ಪ್ರಮಾಣದ ಡೇಟಾವನ್ನು ಅತ್ಯಂತ ಹೆಚ್ಚಿನ ವೇಗದಲ್ಲಿ ಪ್ರಕ್ರಿಯೆಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಅವು ಒಂದೇ ಸಮಯದಲ್ಲಿ ಒಟ್ಟಿಗೆ ಕೆಲಸ ಮಾಡುವ ಹತ್ತಾರು ಪ್ರೊಸೆಸರ್‌ಗಳು ಅಥವಾ ಕಂಪ್ಯೂಟಿಂಗ್ ನೋಡ್‌ಗಳನ್ನು ಬಳಸುತ್ತವೆ. ಇದು ಸಾಂಪ್ರದಾಯಿಕ ಕಂಪ್ಯೂಟರ್‌ಗಳಿಗಿಂತ ಅತ್ಯಂತ ವೇಗವಾಗಿ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಲು ಅವುಗಳಿಗೆ ಅನುವು ಮಾಡಿಕೊಡುತ್ತದೆ. ಈ ನೋಡ್‌ಗಳ ನಡುವಿನ ಅತ್ಯಂತ -ವೇಗದ ಸಂಪರ್ಕಗಳು ಬೃಹತ್ ಪ್ರಮಾಣದ ಲೆಕ್ಕಾಚಾರಗಳ ಸಮಯದಲ್ಲಿ ಪರಿಣಾಮಕಾರಿಯಾಗಿ ಡೇಟಾವನ್ನು ವಿನಿಮಯ ಮಾಡಿಕೊಳ್ಳಲು ನೆರವಾಗುತ್ತವೆ.
- ಸೂಪರ್ ಕಂಪ್ಯೂಟಿಂಗ್‌ನಲ್ಲಿ ಪ್ಯಾರಲಲ್ ಪ್ರೊಸೆಸಿಂಗ್ (ಸಮಾನಾಂತರ ಸಂಸ್ಕರಣೆ) ಅನ್ನು ಬಳಸಬಹುದಾಗಿರುವುದರಿಂದ ಸೂಪರ್ ಕಂಪ್ಯೂಟರ್‌ಗಳನ್ನು ಕೆಲವೊಮ್ಮೆ 'ಪ್ಯಾರಲಲ್ ಕಂಪ್ಯೂಟರ್‌ಗಳು' ಎಂದೂ ಕರೆಯಲಾಗುತ್ತದೆ. ಪ್ಯಾರಲಲ್ ಪ್ರೊಸೆಸಿಂಗ್ ಎಂದರೆ ನೀಡಲಾದ ಸಮಯದಲ್ಲಿ ಒಂದೇ ಲೆಕ್ಕಾಚಾರವನ್ನು ಬಿಡಿಸಲು ಬಹು ಸಿಪಿಯುಗಳು ಒಟ್ಟಾಗಿ ಕೆಲಸ ಮಾಡುವುದು.
- ಸೂಪರ್ ಕಂಪ್ಯೂಟರ್‌ನ ಸಾಮರ್ಥ್ಯವನ್ನು ಫ್ಲಾಪ್ಸ್ ಮೂಲಕ ಅಳೆಯಲಾಗುತ್ತದೆ. ಇದು ಒಂದು ಸೆಕೆಂಡಿನಲ್ಲಿ ಅದು ಎಷ್ಟು ಲೆಕ್ಕಾಚಾರಗಳನ್ನು ನಿರ್ವಹಿಸಬಲ್ಲದು ಎಂಬುದನ್ನು ತಿಳಿಸುತ್ತದೆ. ಒಂದು ಟೆರಾಫ್ಲಾಪ್ಸ್ ಎಂದರೆ ಪ್ರತಿ ಸೆಕೆಂಡಿಗೆ ಒಂದು ಟ್ರಿಲಿಯನ್ (ಒಂದು ಲಕ್ಷ ಕೋಟಿ) ಲೆಕ್ಕಾಚಾರಗಳು, ಹಾಗೂ ಒಂದು ಪೆಟಾಫ್ಲಾಪ್ಸ್ ಎಂದರೆ ಪ್ರತಿ ಸೆಕೆಂಡಿಗೆ ಒಂದು ಕ್ವಾಡ್ರಿಲಿಯನ್ (ಹತ್ತು ಲಕ್ಷ ಕೋಟಿ) ಲೆಕ್ಕಾಚಾರಗಳು.
- ವಿಶ್ವದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್ 2026 ರಲ್ಲಿ ಸುಮಾರು 2.19 ಎಕ್ಸಾಫ್ಲಾಪ್ಸ್ ವೇಗವನ್ನು ಸಾಧಿಸಿದೆ. ಇದು ಪ್ರತಿ ಸೆಕೆಂಡಿಗೆ ಸುಮಾರು 2.19 ಕ್ವಿಂಟಿಲಿಯನ್ (ಶತಕೋಟಿ ಕೋಟಿ) ಲೆಕ್ಕಾಚಾರಗಳನ್ನು ಮಾಡಬಲ್ಲದು.
|
ಅಭಿಯಾನದ ಪ್ರಸ್ತುತ ಸ್ಥಿತಿ
ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (ಎನ್‌ಎಸ್‌ಎಂ) ಅಡಿಯಲ್ಲಿ, ಭಾರತವು ಸೂಪರ್ ಕಂಪ್ಯೂಟಿಂಗ್‌ನಲ್ಲಿ ಸ್ವಾವಲಂಬನೆಯನ್ನು ಸಾಧಿಸುವತ್ತ ಗಮನಹರಿಸಿದ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಿದೆ. ಇದು ಸೂಪರ್ ಕಂಪ್ಯೂಟರ್ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ, ಸಿಸ್ಟಮ್ ಸಾಫ್ಟ್‌ವೇರ್ ಮತ್ತು ವಿಶೇಷ ಅನ್ವಯಿಕೆಗಳನ್ನು ಒಳಗೊಂಡಿದೆ. ಬೆಳೆಯುತ್ತಿರುವ ಈ ದೇಶೀಯ ಸಾಮರ್ಥ್ಯವು ಆಮದು ಮಾಡಿಕೊಳ್ಳುವ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇದು ಭಾರತದ ಆಂತರಿಕ ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ (HPC) ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಮಿಷನ್‌ನ ಮುಂದಿನ ಯೋಜನೆಗಳು
ಎನ್‌ಎಸ್‌ಎಂ ಭಾರತದಾದ್ಯಂತ ವಿವಿಧ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಒಟ್ಟು 123 ಪಿಎಫ್ ಗಿಂತ ಹೆಚ್ಚಿನ ಒಟ್ಟು ಸಾಮರ್ಥ್ಯದೊಂದಿಗೆ ಒಟ್ಟು 50 ಸೂಪರ್ ಕಂಪ್ಯೂಟರ್‌ಗಳನ್ನು ಸ್ಥಾಪಿಸಲು ಯೋಜಿಸಿದೆ. ಈ ವ್ಯವಸ್ಥೆಗಳು ತಮ್ಮ ಸಂಸ್ಕರಣಾ ಸಾಮರ್ಥ್ಯಗಳ ಆಧಾರದ ಮೇಲೆ ವೈವಿಧ್ಯಮಯ ಕಂಪ್ಯೂಟೇಶನಲ್ ಅಗತ್ಯಗಳನ್ನು ಪೂರೈಸುತ್ತವೆ.
|
ಪರಮ್ ಸರಣಿಯ ವಿಕಾಸ
ಸಿ-ಡ್ಯಾಕ್ ನಿಂದ ಅಭಿವೃದ್ಧಿಪಡಿಸಲ್ಪಟ್ಟು 1991 ರಲ್ಲಿ ಅನಾವರಣಗೊಂಡ ಪರಮ್ 8000, 1 ಗಿಗಾಫ್ಲಾಪ್ ವೇಗದೊಂದಿಗೆ ಸ್ವದೇಶಿ ಸೂಪರ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಭಾರತದ ರಂಗಪ್ರವೇಶವನ್ನು ಗುರುತಿಸಿತು. ಇದು ಪರಮ್ ಸರಣಿಗೆ ಗಟ್ಟಿ ತಡಿಪಾಯವನ್ನು ಹಾಕಿತು. ನಂತರ ಈ ಸರಣಿಯು ಪರಮ್ ಯುವ (54 ಟೆರಾಫ್ಲಾಪ್ಸ್) ನಂತಹ ಹೆಚ್ಚು ಶಕ್ತಿಶಾಲಿ ವ್ಯವಸ್ಥೆಗಳ ಮೂಲಕ ವಿಕಸನಗೊಂಡು, ಅತ್ಯಂತ ಜಟಿಲವಾದ ಕಂಪ್ಯೂಟಿಂಗ್ ಆಧಾರಿತ ಅನ್ವಯಿಕೆಗಳಿಗೆ ಬೆಂಬಲ ನೀಡಿತು. ಇದು ವಾತಾವರಣದ ಸ್ಥಿತಿಗತಿಗಳನ್ನು ಮುನ್ಸೂಚಿಸುವ ಹವಾಮಾನ ಮುನ್ಸೂಚನೆ ಮತ್ತು ದ್ರವಗಳ ಹರಿವನ್ನು ಅಧ್ಯಯನ ಮಾಡುವ 'ಕಂಪ್ಯೂಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್' ಮುಂತಾದ ಅನ್ವಯಿಕೆಗಳಿಗೆ ನೆರವಾಯಿತು. ಈ ಸರಣಿಯು ತದನಂತರ ದೇಶೀಯ ಸಂಶೋಧನೆ ಹಾಗೂ ಅಂತರರಾಷ್ಟ್ರೀಯ ನಿಯೋಜನೆಗಳೆರಡಕ್ಕೂ ಭಾರತದ ಸೂಪರ್ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ವಿಸ್ತರಿಸಿತು.
|
ಕಂಪ್ಯೂಟಿಂಗ್ ಸಾಮರ್ಥ್ಯದ ವಿಸ್ತರಣೆ
ಸೆಪ್ಟೆಂಬರ್ 2026ರ ವೇಳೆಗೆ, ಭಾರತವು 68 ಪಿಎಫ್ ನಷ್ಟು ಜಂಟಿ (ಒಟ್ಟು) ಸಾಮರ್ಥ್ಯ ಹೊಂದಿರುವ 40 ಸೂಪರ್ ಕಂಪ್ಯೂಟರ್‌ಗಳನ್ನು ನಿಯೋಜಿಸಿದೆ. ಇದು 1 ಪಿಎಫ್ ಗಿಂತ ಹೆಚ್ಚಿನ ಸಾಮರ್ಥ್ಯದ 13 ಹೈ-ಎಂಡ್ (ಉನ್ನತ ಶ್ರೇಣಿಯ) ವ್ಯವಸ್ಥೆಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, 12 ಮಧ್ಯಮ ಶ್ರೇಣಿಯ ವ್ಯವಸ್ಥೆಗಳು 500 ಟಿಎಫ್ ನಿಂದ 1 PF ನಡುವಿನ ಸಾಮರ್ಥ್ಯವನ್ನು ಹೊಂದಿವೆ. ಇನ್ನಿತರ 15 ವ್ಯವಸ್ಥೆಗಳು 500 ಟಿಎಫ್ ಗಿಂತ ಕಡಿಮೆ ಸಾಮರ್ಥ್ಯವನ್ನು ಹೊಂದಿವೆ. ಈ ಯಂತ್ರಗಳನ್ನು ಸ್ಥಳೀಯವಾಗಿಯೇ ನಿರ್ಮಿಸಲಾಗಿದ್ದು, ದೇಶಾದ್ಯಂತ ಕಮಿಷನ್ (ಕಾರ್ಯಾರಂಭ) ಮಾಡಲಾಗಿದೆ. ಈ ಮಿಷನ್ ಮೂಲಸೌಕರ್ಯ, ಅನ್ವಯಿಕೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಬೆಳೆಸುವುದನ್ನು ಮುಂದುವರಿಸಿದೆ.

|
ಸುಸ್ಥಿರ ಅಭಿವೃದ್ಧಿಗಾಗಿ ಸೂಪರ್ ಕಂಪ್ಯೂಟಿಂಗ್
ರಾಷ್ಟ್ರೀಯ ಅಭಿವೃದ್ಧಿಯ ವಿವಿಧ ಕ್ಷೇತ್ರಗಳಲ್ಲಿ ಸುಧಾರಿತ ಕಂಪ್ಯೂಟಿಂಗ್ ಅನ್ನು ಬಳಸುವ ಮೂಲಕ ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (ಎನ್‌ಎಸ್‌ಎಂ) ವಿಶ್ವಸಂಸ್ಥೆಯ 11 ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಕೊಡುಗೆ ನೀಡುತ್ತದೆ. ಇದರ ಅನ್ವಯಿಕೆಗಳು ಪ್ರವಾಹ ಮುನ್ಸೂಚನೆ, ಕಾಡ್ಗಿಚ್ಚು ನಿರ್ವಹಣೆ ಮತ್ತು ಹವಾಮಾನ ಮಾದರಿಗಳ ಮೂಲಕ ಹವಾಮಾನ ಮುನ್ನೆಚ್ಚರಿಕೆ ಕ್ರಮಗಳನ್ನು ಬೆಂಬಲಿಸುತ್ತವೆ; ಅದೇ ಸಮಯದಲ್ಲಿ ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ ತರಬೇತಿಯ ಮೂಲಕ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಬಲಪಡಿಸುತ್ತವೆ. ಈ ಮಿಷನ್ ನಾವೀನ್ಯತೆ, ದೇಶೀಯ ತಂತ್ರಜ್ಞಾನ, ಆರ್ಥಿಕ ಪ್ರಗತಿ ಹಾಗೂ ಶೈಕ್ಷಣಿಕ, ಕೈಗಾರಿಕಾ ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ಸಹಯೋಗವನ್ನೂ ಉತ್ತೇಜಿಸುತ್ತದೆ.

|
ಎನ್‌ಎಸ್‌ಎಂ ಅಡಿಯಲ್ಲಿ ಸೂಪರ್ ಕಂಪ್ಯೂಟಿಂಗ್‌ನ ರಾಷ್ಟ್ರೀಯ ಅನ್ವಯಿಕೆಗಳು
ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (ಎನ್‌ಎಸ್‌ಎಂ) ಅಡಿಯಲ್ಲಿ ನಿಯೋಜಿಸಲಾದ ಸೂಪರ್ ಕಂಪ್ಯೂಟರ್‌ಗಳು ಬೃಹತ್ ಪ್ರಮಾಣದ ಸಿಮ್ಯುಲೇಶನ್‌ಗಳು ಮತ್ತು ವೇಗವಾದ ಡೇಟಾ ಸಂಸ್ಕರಣೆಯನ್ನು ಬೆಂಬಲಿಸುತ್ತವೆ. ಇದು ವಿವಿಧ ಕ್ಷೇತ್ರಗಳಾದ್ಯಂತ ರಾಷ್ಟ್ರೀಯ ಅನ್ವಯಿಕೆಗಳಿಗೆ ನೆರವಾಗುತ್ತದೆ.

- ಜಿಎನೊಮಿಕ್ಸ್ ಮತ್ತು ಡ್ರಗ್ ಡಿಸ್ಕವರಿ ಪ್ಲಾಟ್‌ಫಾರ್ಮ್ : ಇದು ಔಷಧಿಗಳನ್ನು ಪತ್ತೆಹಚ್ಚಲು ಮತ್ತು ಪರೀಕ್ಷಿಸಲು ಸಹಾಯ ಮಾಡಲು ಬೃಹತ್ ಪ್ರಮಾಣದ ಅಣುಗಳ ಗುಂಪುಗಳನ್ನು ಅಧ್ಯಯನ ಮಾಡುತ್ತದೆ. ಕೋವಿಡ್-19 ಸಮಯದಲ್ಲಿ ಅಸ್ತಿತ್ವದಲ್ಲಿರುವ ಔಷಧಿಗಳನ್ನು ಪರಿಶೀಲಿಸಲು ಮತ್ತು ಹೃದಯದ ಅಪಾಯದಂತಹ ಅಡ್ಡಪರಿಣಾಮಗಳನ್ನು ಮುನ್ಸೂಚಿಸಲು ಇದನ್ನು ಬಳಸಲಾಗಿತ್ತು.
- ಅರ್ಬನ್ ಎನ್ವಿರಾನ್‌ಮೆಂಟ್ ಡಿಸಿಷನ್ ಸಪೋರ್ಟ್ ಸಿಸ್ಟಮ್ : ಇದು ಹವಾಮಾನ ಮತ್ತು ವಾಯು ಮಾಲಿನ್ಯವನ್ನು ಮೇಲ್ವಿಚಾರಣೆ ಮಾಡಲು ವಿವರವಾದ ಮಾದರಿಗಳನ್ನು ಬಳಸುತ್ತದೆ. ನಗರಗಳು ಮುನ್ನೆಚ್ಚರಿಕೆ ವಹಿಸಲು ಮತ್ತು ಹಾನಿಯನ್ನು ಕಡಿಮೆ ಮಾಡಲು ಅನುಕೂಲವಾಗುವಂತೆ ಇದು ಭಾರಿ ಮಳೆ ಮತ್ತು ಮಾಲಿನ್ಯವನ್ನು ಮುನ್ಸೂಚಿಸುತ್ತದೆ.
- ಸೀಸ್ಮಿಕ್ ಇಮೇಜಿಂಗ್ ಸೂಟ್: ಇದು ಭೂಗರ್ಭದ ರಚನೆಗಳ ನಕ್ಷೆಯನ್ನು ತಯಾರಿಸಲು ಸುಧಾರಿತ ಗಣನಾವಿಧಾನಗಳನ್ನು ಬಳಸುವ ಮೂಲಕ ತೈಲ ಮತ್ತು ನೈಸರ್ಗಿಕ ಅನಿಲ ಅನ್ವೇಷಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದರ ಕಾರ್ಯಕ್ಷಮತೆಯು ವಾಣಿಜ್ಯಿಕ ಸೀಸ್ಮಿಕ್ ಇಮೇಜಿಂಗ್ ಉಪಕರಣಗಳಿಗೆ ಸಮಾನವಾಗಿದೆ.
- ನದಿ ಪಾತ್ರಗಳ ಪ್ರವಾಹ ಮುನ್ಸೂಚನೆಗಾಗಿ ಆರಂಭಿಕ ಎಚ್ಚರಿಕೆ ವ್ಯವಸ್ಥೆ: ಇದು ಪ್ರವಾಹವನ್ನು 2 ದಿನಗಳ ಮುಂಚಿತವಾಗಿಯೇ ಮುನ್ಸೂಚಿಸಲು ಡೇಟಾ ವಿಶ್ಲೇಷಣೆ ಮತ್ತು ಮುನ್ಸೂಚನಾ ಮಾದರಿಗಳನ್ನು ಬಳಸಿಕೊಳ್ಳುತ್ತದೆ. ಸಮುದಾಯಗಳು ಮತ್ತು ಮೂಲಸೌಕರ್ಯಗಳನ್ನು ರಕ್ಷಿಸಲು ಇದನ್ನು ಮಹಾನದಿ ಪಾತ್ರಕ್ಕೆ ಬಳಸಲಾಗುತ್ತಿದೆ.
- ಕಾಡ್ಗಿಚ್ಚು ಹರಡುವಿಕೆಯ ಮಾದರಿ: ಇದು ಕಾಡ್ಗಿಚ್ಚು ಹೇಗೆ ಹರಡುತ್ತದೆ ಎಂಬುದನ್ನು ಮುನ್ಸೂಚಿಸಲು ಉಪಗ್ರಹ ದೂರಸಂವೇದಿ ಮತ್ತು ಕಂಪ್ಯೂಟೇಶನಲ್ ಮಾದರಿಗಳನ್ನು ಸಂಯೋಜಿಸುತ್ತದೆ. ಇದನ್ನು ಎಚ್‌ಪಿಸಿ ವ್ಯವಸ್ಥೆಯನ್ನು ಬಳಸಿ ಸಿಕ್ಕಿಂ ಹಿಮಾಲಯದಂತಹ ಪ್ರದೇಶಗಳಲ್ಲಿ ಪರೀಕ್ಷಿಸಲಾಗಿದೆ.
- ಮೆಟೀರಿಯಲ್ಸ್ ಸೈನ್ಸ್ ಮತ್ತು ಕಂಪ್ಯೂಟೇಶನಲ್ ಕೆಮಿಸ್ಟ್ರಿ ಅನ್ವಯಿಕೆಗಳು: ಇದು ಪರಮಾಣುಗಳು, ಅಣುಗಳು ಮತ್ತು ಮಿಶ್ರಲೋಹಗಳ ಸಿಮ್ಯುಲೇಶನ್‌ಗಳಿಗೆ ಅನುವು ಮಾಡಿಕೊಡುವ ವ್ಯವಸ್ಥೆಯನ್ನು ಒದಗಿಸುತ್ತದೆ. ಇವು ಅವುಗಳ ನಡವಳಿಕೆ ಮತ್ತು ಗುಣಲಕ್ಷಣಗಳ ಅಧ್ಯಯನಕ್ಕೆ ನೆರವಾಗುತ್ತವೆ.
ಈ ಅನ್ವಯಿಕೆಗಳು ಭಾರತದ ಬೆಳೆಯುತ್ತಿರುವ ಎಚ್‌ಪಿಸಿ ಮೂಲಸೌಕರ್ಯವು ಸಂಶೋಧನೆಯನ್ನು ಹೇಗೆ ಬಲಪಡಿಸುತ್ತಿದೆ, ಸಾಕ್ಷ್ಯಾಧಾರಿತ ನಿರ್ಧಾರ ಕೈಗೊಳ್ಳುವುದಕ್ಕೆ ಬೆಂಬಲ ನೀಡುತ್ತಿದೆ ಮತ್ತು ಆರೋಗ್ಯ, ಪರಿಸರ, ಇಂಧನ ಹಾಗೂ ಸುಧಾರಿತ ವಿಜ್ಞಾನ ಕ್ಷೇತ್ರಗಳಾದ್ಯಂತ ಸಂಕೀರ್ಣ ಸವಾಲುಗಳನ್ನು ಹೇಗೆ ಎದುರಿಸುತ್ತಿದೆ ಎಂಬುದನ್ನು ಪ್ರದರ್ಶಿಸುತ್ತವೆ.
ಸಾಧನೆಗಳು: ಎನ್‌ಎಸ್‌ಎಂ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ದೇಶೀಯ ಘಟಕಗಳು
ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (ಎನ್‌ಎಸ್‌ಎಂ) ಅಡಿಯಲ್ಲಿ, ಸೂಪರ್ ಕಂಪ್ಯೂಟಿಂಗ್‌ನಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ನಿರ್ದಿಷ್ಟ ಗುರಿಯೊಂದಿಗೆ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ಇತರ ವಿಷಯಗಳ ಜೊತೆಗೆ, ಕೆಳಗಿನಂತೆ ನಿರ್ಣಾಯಕ ಸೂಪರ್ ಕಂಪ್ಯೂಟಿಂಗ್ ಉಪ-ಘಟಕಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಒಳಗೊಂಡಿದೆ:
- ರುದ್ರ ಸರಣಿಯ ಸರ್ವರ್‌ಗಳು:
ಇದು ಒಂದು ಪ್ರಮುಖ ಸೂಪರ್ ಕಂಪ್ಯೂಟಿಂಗ್ ಘಟಕವಾಗಿದೆ. ಇದು ಸಂಕೀರ್ಣ ಲೆಕ್ಕಾಚಾರಗಳು, ಸಿಮ್ಯುಲೇಶನ್‌ಗಳು ಮತ್ತು ಕೃತಕ ಬುದ್ಧಿಮತ್ತೆ ಕಾರ್ಯಭಾರಗಳನ್ನು ನಡೆಸಲು ಅಗತ್ಯವಿರುವ ಸಂಸ್ಕರಣಾ ಶಕ್ತಿಯನ್ನು ಒದಗಿಸುತ್ತದೆ. ಇದನ್ನು ಸಿ-ಡ್ಯಾಕ್ ದೇಶೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದು, ಇದರ ಉತ್ಪಾದನೆಗಾಗಿ ತಂತ್ರಜ್ಞಾನವನ್ನು ಭಾರತೀಯ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಸರ್ವಿಸಸ್ ಪಾಲುದಾರರಿಗೆ ವರ್ಗಾಯಿಸಲಾಗಿದೆ.
|
ಪರಮ್ ರುದ್ರ ಸರಣಿ: ದೇಶೀಯ ಸೂಪರ್ ಕಂಪ್ಯೂಟಿಂಗ್ ಮುನ್ನಡೆ
ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್‌ನ (ಎನ್‌ಎಸ್‌ಎಂ) ಒಂದು ಪ್ರಮುಖ ಮೈಲಿಗಲ್ಲು ಎಂದರೆ 'ಪರಮ್ ರುದ್ರ' ಸೂಪರ್ ಕಂಪ್ಯೂಟರ್‌ಗಳ ಅಭಿವೃದ್ಧಿ. ಇವುಗಳನ್ನು ದೇಶೀಯವಾಗಿ ವಿನ್ಯಾಸಗೊಳಿಸಿ ಉತ್ಪಾದಿಸಲಾದ ರುದ್ರ ಸರ್ವರ್‌ಗಳು ಮತ್ತು ದೇಶೀಯ ಸಿಸ್ಟಮ್ ಸಾಫ್ಟ್‌ವೇರ್ ಸ್ಟ್ಯಾಕ್ ಬಳಸಿ ನಿರ್ಮಿಸಲಾಗಿದೆ. ಇವು ಖಗೋಳಶಾಸ್ತ್ರ, ಮೆಟೀರಿಯಲ್ ಸೈನ್ಸ್ (ಪದಾರ್ಥ ವಿಜ್ಞಾನ), ಪರಮಾಣು ಭೌತಶಾಸ್ತ್ರ ಮತ್ತು ಭೂ ವಿಜ್ಞಾನಗಳಲ್ಲಿನ ಸುಧಾರಿತ ಸಂಶೋಧನೆಯಂತಹ ವ್ಯಾಪಕ ಶ್ರೇಣಿಯ ಅನ್ವಯಿಕೆಗಳಿಗೆ ಬೆಂಬಲ ನೀಡುತ್ತವೆ. ಸೆಪ್ಟೆಂಬರ್ 2026ರ ವೇಳೆಗೆ, ಪರಮ್ ರುದ್ರ ಸೂಪರ್ ಕಂಪ್ಯೂಟರ್‌ಗಳಲ್ಲಿ 6,000 ರುದ್ರ ಸರ್ವರ್‌ಗಳನ್ನು ನಿಯೋಜಿಸಲಾಗಿದ್ದು, ಇನ್ನು 1,500 ಸರ್ವರ್‌ಗಳು ಉತ್ಪಾದನಾ ಹಂತದಲ್ಲಿವೆ.
|
- ಹೈ-ಸ್ಪೀಡ್ ಇಂಟರ್‌ಕನೆಕ್ಟ್ ನೆಟ್‌ವರ್ಕ್: ಕಂಪ್ಯೂಟರ್ ನೋಡ್‌ಗಳ ನಡುವೆ 100 ಜಿಬಿಪಿಎಸ್ ಮತ್ತು 200 ಜಿಬಿಪಿಎಸ್ ವೇಗದ ಸಾಮರ್ಥ್ಯ ಹೊಂದಿರುವ ಉನ್ನತ ವೇಗದ ಆಂತರಿಕ ಸಂಪರ್ಕ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಿ ಪರೀಕ್ಷಿಸಲಾಗಿದೆ. ಇದು ಕಂಪ್ಯೂಟಿಂಗ್ ನೋಡ್‌ಗಳ ನಡುವಿನ ಡೇಟಾ ವರ್ಗಾವಣೆ ಮತ್ತು ಸಂವಹನವನ್ನು ಸುಧಾರಿಸುತ್ತದೆ, ಹಾಗೂ ಭಾರತದ ಸೂಪರ್ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ.
- ದೇಶೀಯ ಕೂಲಿಂಗ್ ತಂತ್ರಜ್ಞಾನ: ಕೂಲಿಂಗ್ ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿ ಪ್ರದರ್ಶಿಸಲಾಗಿದ್ದು, ಪ್ರಸ್ತುತ ಇದು ನಿಯೋಜನೆಯ ಹಂತದಲ್ಲಿದೆ. ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ ವ್ಯವಸ್ಥೆಗಳ ಕಾರ್ಯಾಚರಣೆಯ ತಾಪಮಾನವನ್ನು ಕಾಯ್ದುಕೊಳ್ಳಲು ಮತ್ತು ಉತ್ತಮ ವಿದ್ಯುತ್ ಕಾರ್ಯಕ್ಷಮತೆಯನ್ನು ಹೊಂದಲು ಇದು ಪ್ರಮುಖವಾಗಿದೆ.
- ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಸಿಸ್ಟಮ್ ಸಾಫ್ಟ್‌ವೇರ್: ಸೂಪರ್ ಕಂಪ್ಯೂಟಿಂಗ್ ವ್ಯವಸ್ಥೆಗಳ ಸಮರ್ಥ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಬೆಂಬಲಿಸಲು ಸಂಪೂರ್ಣ ಎಚ್‌ಪಿಸಿ ಸಿಸ್ಟಮ್ ಸಾಫ್ಟ್‌ವೇರ್ ಸ್ಟ್ಯಾಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಸೂಪರ್ ಕಂಪ್ಯೂಟಿಂಗ್ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ.
- ಪರಮ್ ಶಾವಕ್: ಇದು 'ಸೂಪರ್ ಕಂಪ್ಯೂಟಿಂಗ್-ಇನ್-ಎ-ಬಾಕ್ಸ್' ಸಾಧನವಾಗಿದ್ದು, ಎಂಜಿನಿಯರಿಂಗ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಎಚ್‌ಪಿಸಿ ಮತ್ತು ಕೃತಕ ಬುದ್ಧಿಮತ್ತೆ ಕಂಪ್ಯೂಟಿಂಗ್ ಅಗತ್ಯಗಳನ್ನು ಪೂರೈಸಲು ಭಾರತದಲ್ಲಿಯೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮತ್ತು ಉತ್ಪಾದಿಸಲಾಗಿದೆ.
- ರಾಷ್ಟ್ರೀಯ ಅಗತ್ಯಗಳಿಗಾಗಿ ಎಚ್‌ಪಿಸಿ ಅನ್ವಯಿಕೆಗಳು: ಜಿಎನೊಮಿಕ್ಸ್ ಮತ್ತು ಡ್ರಗ್ ಡಿಸ್ಕವರಿಯಂತಹ ಕ್ಷೇತ್ರಗಳಾದ್ಯಂತ ಎಚ್‌ಪಿಸಿ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ನಿಯೋಜಿಸಲಾಗಿದೆ. ಈ ಅನ್ವಯಿಕೆಗಳು ಭಾರತೀಯ ಹವಾಮಾನ ಇಲಾಖೆ, ಕೇಂದ್ರ ಜಲ ಆಯೋಗ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಆಯುಷ್ ಸಚಿವಾಲಯ ಸೇರಿದಂತೆ ಹಲವು ಸಂಸ್ಥೆಗಳಿಗೆ ಬೆಂಬಲ ನೀಡುತ್ತವೆ.
ಕೋರ್ ಕಂಪ್ಯೂಟಿಂಗ್ ಮೂಲಸೌಕರ್ಯದಿಂದ ಹಿಡಿದು ರಾಷ್ಟ್ರೀಯ ಅಗತ್ಯಗಳನ್ನು ಪೂರೈಸುವ ಅನ್ವಯಿಕೆಗಳವರೆಗೆ, ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (ಎನ್‌ಎಸ್‌ಎಂ) ದೇಶದ ಒಳಗಡೆಯೇ ಸುಧಾರಿತ ಕಂಪ್ಯೂಟಿಂಗ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಬಳಸುವ ಭಾರತದ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ.
ಭಾರತದಲ್ಲಿ ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್‌ಗಾಗಿ ಕೌಶಲ್ಯಪೂರ್ಣ ಕಾರ್ಯಪಡೆಯ ನಿರ್ಮಾಣ
ಸೂಪರ್ ಕಂಪ್ಯೂಟಿಂಗ್ ಮೂಲಸೌಕರ್ಯದ ಲಭ್ಯತೆ ವಿಸ್ತರಿಸುತ್ತಿದ್ದಂತೆ, ಈ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅಗತ್ಯವಿರುವ ಕೌಶಲ್ಯಗಳನ್ನು ಸಹ ಎನ್‌ಎಸ್‌ಎಂ ಬೆಳೆಸುತ್ತಿದೆ. ಸೆಪ್ಟೆಂಬರ್ 2026ರ ವೇಳೆಗೆ, ಎನ್‌ಎಸ್‌ಎಂ ಮೂಲಸೌಕರ್ಯವು 400ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ 2,900ಕ್ಕೂ ಹೆಚ್ಚು ಪಿಎಚ್‌ಡಿ ಸಂಶೋಧಕರು ಸೇರಿದಂತೆ 16,000ಕ್ಕೂ ಹೆಚ್ಚು ಸಂಶೋಧಕರಿಗೆ ಬೆಂಬಲ ನೀಡಿದೆ. ಈ ವ್ಯವಸ್ಥೆಗಳು 1.5 ಕೋಟಿಗೂ ಹೆಚ್ಚು ಕಂಪ್ಯೂಟ್ ಜಾಬ್‌ಗಳನ್ನು (ಸೂಪರ್ ಕಂಪ್ಯೂಟರ್‌ಗೆ ನೀಡಲಾಗುವ ಸಂಕೀರ್ಣ ಕೆಲಸ ಅಥವಾ ಸಿಮ್ಯುಲೇಶನ್) ಕಾರ್ಯಗತಗೊಳಿಸಿವೆ ಮತ್ತು 1,990ಕ್ಕೂ ಹೆಚ್ಚು ಸಂಶೋಧನಾ ಪ್ರಕಟಣೆಗಳಿಗೆ ಕೊಡುಗೆ ನೀಡಿವೆ.
ಕೌಶಲ್ಯಪೂರ್ಣ ಬಳಕೆದಾರರ ಸಂಖ್ಯೆಯನ್ನು ಇನ್ನಷ್ಟು ವಿಸ್ತರಿಸಲು, ಮಿಷನ್ ಹಲವಾರು ತರಬೇತಿ ಮತ್ತು ಕಲಿಕಾ ಉಪಕ್ರಮಗಳನ್ನು ಅಭಿವೃದ್ಧಿಪಡಿಸಿದೆ:
- ಎಚ್‌ಪಿಸಿ ಮತ್ತು ಡಿಪ್ ಲರ್ನಿಂಗ್ ಜಾಗೃತಿ ಕಾರ್ಯಕ್ರಮಗಳು:ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಅಧ್ಯಾಪಕರಿಗೆ ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ ಮತ್ತು ಡಿಪ್ ಲರ್ನಿಂಗ್ ಕುರಿತು ಪರಿಚಯಿಸಲು ಎನ್‌ಎಸ್‌ಎಂ ಸಂಸ್ಥೆಗಳೊಂದಿಗೆ ದೇಶಾದ್ಯಂತ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ.
- ಹ್ಯಾಕಥಾನ್‌ಗಳು ಮತ್ತು ಬೂಟ್‌ಕ್ಯಾಂಪ್‌ಗಳು: ಎಚ್‌ಪಿಸಿ ಮತ್ತು ಡಿಎಲ್ ಹ್ಯಾಕಥಾನ್‌ಗಳು ಹಾಗೂ ಬೂಟ್‌ಕ್ಯಾಂಪ್‌ಗಳು ಪ್ರಾಯೋಗಿಕ ಅನುಭವವನ್ನು ಒದಗಿಸುತ್ತವೆ ಮತ್ತು ಎಚ್‌ಪಿಸಿ, ಕೃತಕ ಬುದ್ಧಿಮತ್ತೆ ಹಾಗೂ ಜೆನೆರೇಟಿವ್ ಎಐ ಕ್ಷೇತ್ರಗಳಲ್ಲಿ ಸವಾಲುಗಳನ್ನು ಬಗೆಹರಿಸಲು ಪ್ರೋತ್ಸಾಹಿಸುತ್ತವೆ.
- ಅಧ್ಯಾಪಕರ ಅಭಿವೃದ್ಧಿ ಮತ್ತು ಗುಣಮಟ್ಟ ಸುಧಾರಣಾ ಕಾರ್ಯಕ್ರಮಗಳು:ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಯ ಸಹಯೋಗದೊಂದಿಗೆ ಕಂಪ್ಯೂಟರ್ ಸೈನ್ಸ್ ಅಲ್ಲದ ಇತರ ವಿಭಾಗಗಳ ಶಿಕ್ಷಕರು ಸೇರಿದಂತೆ ಅಧ್ಯಾಪಕರಿಗೆ ಎಚ್‌ಪಿಸಿ, ಎಐ, ಮೆಷಿನ್ ಲರ್ನಿಂಗ್ ಮತ್ತು ಡಿಪ್ ಲರ್ನಿಂಗ್‌ನಲ್ಲಿ ತರಬೇತಿ ನೀಡಲಾಗುತ್ತದೆ.
- ಎಡು-ಎಚ್‌ಪಿಸಿ ಕಾರ್ಯಾಗಾರ: ವಾರ್ಷಿಕ ಕಾರ್ಯಾಗಾರವು ಭಾರತದಾದ್ಯಂತದ ಸಂಸ್ಥೆಗಳ ಅಧ್ಯಾಪಕರಿಗೆ ಎಚ್‌ಪಿಸಿಯಲ್ಲಿ ಸಮಗ್ರ ತರಬೇತಿಯನ್ನು ನೀಡುತ್ತದೆ.
- ಉನ್ನತ ಸಾಮರ್ಥ್ಯದ ವೈಜ್ಞಾನಿಕ ಕಂಪ್ಯೂಟಿಂಗ್ ಕೋರ್ಸ್ : ತಂತ್ರಜ್ಞಾನ ವರ್ಧಿತ ಕಲಿಕೆಯ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ 'ಸ್ವಯಂ' ಪ್ಲಾಟ್‌ಫಾರ್ಮ್‌ನಲ್ಲಿರುವ ರಚನಾತ್ಮಕ ಕೋರ್ಸ್, ಕಲಿಯುವವರಿಗೆ ಎಚ್‌ಪಿಸಿಯಲ್ಲಿ ಬಲವಾದ ತಡಿಪಾಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
- ಎಚ್‌ಪಿಸಿ ಶಿಕ್ಷಾ ಪೋರ್ಟಲ್: ಈ ಪೋರ್ಟಲ್ ಎಚ್‌ಪಿಸಿ ಸಂಪನ್ಮೂಲಗಳು, ಧ್ವನಿಮುದ್ರಿತ ಉಪನ್ಯಾಸಗಳು ಮತ್ತು ಕಲಿಕಾ ಸಾಮಗ್ರಿಗಳ ಲಭ್ಯತೆಯನ್ನು ಒದಗಿಸುತ್ತದೆ, ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಾಯೋಗಿಕ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
- ಎನ್‌ಎಸ್‌ಎಂ ಯೂಸರ್ಸ್ ಫೋರಂ: ಈ ವೇದಿಕೆಯು ಎನ್‌ಎಸ್‌ಎಂ ಕೇಂದ್ರಗಳಾದ್ಯಂತ ಇರುವ ಬಳಕೆದಾರರಿಗೆ ತಾಂತ್ರಿಕ ಸಮಸ್ಯೆಗಳನ್ನು ಚರ್ಚಿಸಲು, ಅನುಮಾನಗಳನ್ನು ಪರಿಹರಿಸಿಕೊಳ್ಳಲು ಮತ್ತು ಜ್ಞಾನ ಹಾಗೂ ಅತ್ಯುತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಒದಗಿಸಲಾದ ಜಾಗವಾಗಿದೆ.
|
ರಾಷ್ಟ್ರೀಯ ಜ್ಞಾನ ನೆಟ್‌ವರ್ಕ್
ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ ಅಡಿಯಲ್ಲಿ 'ರಾಷ್ಟ್ರೀಯ ಜ್ಞಾನ ನೆಟ್‌ವರ್ಕ್' ಭಾರತದ ಸೂಪರ್ ಕಂಪ್ಯೂಟಿಂಗ್ ಪರಿಸರ ವ್ಯವಸ್ಥೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ. ಇದು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಾದ್ಯಂತ ಇರುವ ಸೂಪರ್ ಕಂಪ್ಯೂಟಿಂಗ್ ಸೌಲಭ್ಯಗಳನ್ನು ಹೈ-ಸ್ಪೀಡ್ ರಾಷ್ಟ್ರೀಯ ನೆಟ್‌ವರ್ಕ್ ಮೂಲಕ ಸಂಪರ್ಕಿಸುತ್ತದೆ. ಇದು ಸಂಶೋಧಕರು ಮತ್ತು ಸಂಸ್ಥೆಗಳಿಗೆ ಸುಧಾರಿತ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಪಡೆದುಕೊಳ್ಳಲು ಹಾಗೂ ಭೌಗೋಳಿಕ ಗಡಿಗಳನ್ನು ಮೀರಿ ಪರಸ್ಪರ ಸಹಕರಿಸಲು ಅನುವು ಮಾಡಿಕೊಡುತ್ತದೆ. ಈ ನೆಟ್‌ವರ್ಕ್ ಕಂಪ್ಯೂಟೇಶನಲ್ ಸಂಪನ್ಮೂಲಗಳು, ಸಂಶೋಧನಾ ಸಾಮರ್ಥ್ಯಗಳು ಮತ್ತು ವೈಜ್ಞಾನಿಕ ಜ್ಞಾನದ ವಿನಿಮಯವನ್ನು ಬಲಪಡಿಸುತ್ತದೆ. ಈ ಸಂಪರ್ಕಿತ ಮೂಲಸೌಕರ್ಯದ ಮೂಲಕ, ಮಿಷನ್ ಭಾರತದಾದ್ಯಂತ ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ ಲಭ್ಯತೆಯನ್ನು ವಿಸ್ತರಿಸುತ್ತಿದೆ.
|
ಈ ಉಪಕ್ರಮಗಳು ಎಚ್‌ಪಿಸಿ ಕೌಶಲ್ಯಗಳನ್ನು ಕೇವಲ ವಿಶೇಷ ಕಂಪ್ಯೂಟಿಂಗ್ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸದೆ ಮತ್ತಷ್ಟು ವಿಸ್ತರಿಸುತ್ತಿವೆ; ಹಾಗೂ ಸುಧಾರಿತ ಕಂಪ್ಯೂಟಿಂಗ್ ಬಳಸಲು ಸಜ್ಜಾಗಿರುವ ವಿಶಾಲವಾದ ಕಾರ್ಯಪಡೆಯನ್ನು ನಿರ್ಮಿಸುತ್ತಿವೆ.
ಮುಂದಿನ ಹಾದಿ
ಕಂಪ್ಯೂಟಿಂಗ್ ಸಾಮರ್ಥ್ಯವನ್ನು ವಿಸ್ತರಿಸುವ, ದೇಶದ ಒಳಗಡೆಯೇ ಹೆಚ್ಚು ಸುಧಾರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಹಾಗೂ ಸಂಶೋಧಕರು, ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮಗಳಿಗೆ ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ ಲಭ್ಯತೆಯನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಭಾರತದ ಸೂಪರ್ ಕಂಪ್ಯೂಟಿಂಗ್ ಪರಿಸರ ವ್ಯವಸ್ಥೆಯು ಗಮನಾರ್ಹವಾಗಿ ಬೆಳೆಯಲು ಸಿದ್ಧವಾಗಿದೆ. ಹೆಚ್ಚು ವೇಗದ, ಇಂಧನ-ಸಮರ್ಥ (ವಿದ್ಯುತ್ ಉಳಿಸುವ) ಮತ್ತು ನಂಬಿಕಸ್ಥ ವ್ಯವಸ್ಥೆಗಳನ್ನು ನಿರ್ಮಿಸುವುದು, ಭಾರತೀಯ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಾಮರ್ಥ್ಯಗಳನ್ನು ಬಲಪಡಿಸುವುದು ಹಾಗೂ ಕೌಶಲ್ಯಪೂರ್ಣ ವೃತ್ತಿಪರರನ್ನು ರೂಪಿಸುವುದರ ಮೇಲೆ ಈ ಮಿಷನ್ ಮುಖ್ಯ ಗಮನಹರಿಸಲಿದೆ. ಕೃತಕ ಬುದ್ಧಿಮತ್ತೆ ಮತ್ತು ಎಚ್‌ಪಿಸಿ ನಡುವಿನ ಹೆಚ್ಚಿನ ಸಂಯೋಜನೆಯು ಹವಾಮಾನ ಮತ್ತು ವಾತಾವರಣ, ಆರೋಗ್ಯ ರಕ್ಷಣೆ, ಕೃಷಿ, ಇಂಧನ, ಔಷಧ ಸಂಶೋಧನೆ, ಎಂಜಿನಿಯರಿಂಗ್ ಮತ್ತು ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿನ ಪ್ರಮುಖ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಸರ್ಕಾರ, ಶೈಕ್ಷಣಿಕ ಕ್ಷೇತ್ರ, ಉದ್ಯಮ, ನವೋದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಒಟ್ಟುಗೂಡಿಸುವ ಮೂಲಕ ಭಾರತವು ಸುಧಾರಿತ ಕಂಪ್ಯೂಟಿಂಗ್ ಅನ್ನು ಪ್ರಾಯೋಗಿಕ ಪರಿಹಾರಗಳಾಗಿ ಪರಿವರ್ತಿಸಬಹುದು, ನಾವೀನ್ಯತೆ ಮತ್ತು ಆರ್ಥಿಕ ಪ್ರಗತಿಯನ್ನು ಪ್ರೇರೇಪಿಸಬಹುದು ಹಾಗೂ ಸುರಕ್ಷಿತ, ಸುಸ್ಥಿರ ಮತ್ತು ಸ್ವಾವಲಂಬಿ ಸೂಪರ್ ಕಂಪ್ಯೂಟಿಂಗ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಬಹುದು.
References
Department of Science and Technology
Ministry of Electronics & IT
Centre for Development of Advanced Computing
Click here to see pdf
******
(Explainer ID: 160333)
आगंतुक पटल : 21
Provide suggestions / comments