Rural Prosperity
ಸ್ವಚ್ಛತೆಯ ಸಂವಹನ, ನಡವಳಿಕೆಯ ಪರಿವರ್ತನೆ
ಸ್ವಚ್ಛ ಭಾರತ್ ಮಿಷನ್ನ ಸಾಮಾಜಿಕ ಮತ್ತು ನಡವಳಿಕೆ ಬದಲಾವಣೆ ಸಂವಹನ ಪಯಣ
Posted On:
02 OCT 2026 2:12PM
|
ಸ್ವಚ್ಛ ಭಾರತ್ ಮಿಷನ್ (ಎಸ್ ಬಿ ಎಂ) ಕೇವಲ ಮೂಲಸೌಕರ್ಯ ನಿರ್ಮಾಣಕ್ಕೆ ಸೀಮಿತವಾಗದೆ, ನೈರ್ಮಲ್ಯವನ್ನು ನಿರಂತರ ಅಭ್ಯಾಸ ಹಾಗೂ ಸಾಮಾಜಿಕ ನಿಯಮವಾಗಿ ರೂಪಿಸಲು ನಡವಳಿಕೆಯ ಬದಲಾವಣೆಯನ್ನು ಕೇಂದ್ರಬಿಂದುವಾಗಿಸಿಕೊಂಡಿತು. ಸಾಮಾಜಿಕ ಮತ್ತು ನಡವಳಿಕೆ ಬದಲಾವಣೆ ಸಂವಹನವು (ಎಸ್‌ಬಿಸಿಸಿ) ಮಾಹಿತಿ ಪ್ರಸಾರವನ್ನು ಕೇವಲ ಪ್ರಚಾರವಾಗಿ ಉಳಿಸದೆ ಸಂವಾದ, ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಸಾಮೂಹಿಕ ಚಟುವಟಿಕೆಯಾಗಿ ಪರಿವರ್ತಿಸಿತು. ಮಹಾತ್ಮ ಗಾಂಧೀಜಿಯವರ ಸ್ವಚ್ಛತೆ ಮತ್ತು ಸ್ವಾವಲಂಬನೆಯ ಆದರ್ಶಗಳು ಎಸ್ ಬಿ ಎಂನ ಮಾರ್ಗದರ್ಶಿ ತತ್ವಗಳಾದವು. ಸ್ವಚ್ಛಾಗ್ರಹಿಗಳಂತಹ ತಳಮಟ್ಟದ ಕಾರ್ಯಕರ್ತರು ಮತ್ತು ಸಮುದಾಯ ಸಂಸ್ಥೆಗಳು ವ್ಯಕ್ತಿಗತ ನೈರ್ಮಲ್ಯ ಅಭ್ಯಾಸಗಳನ್ನು ಸಮುದಾಯದ ಸಾಮುದಾಯಿಕ ಸಂಸ್ಕೃತಿಯನ್ನಾಗಿ ಬದಲಾಯಿಸಲು ನೆರವಾದವು. ವಿವಿಧ ಸಂವಹನ ಮಾಧ್ಯಮಗಳ ಮೂಲಕ ಸ್ವಚ್ಛತೆಯ ಸಂದೇಶಗಳನ್ನು ಮನೆ-ಮನೆಗೆ, ಸಮುದಾಯಗಳಿಗೆ, ಸಾರ್ವಜನಿಕ ಸ್ಥಳಗಳಿಗೆ ಹಾಗೂ ಡಿಜಿಟಲ್ ವೇದಿಕೆಗಳಿಗೆ ತಲುಪಿಸಲಾಯಿತು. ಮಹಿಳೆಯರು ಮತ್ತು ಮಕ್ಕಳು ನೈರ್ಮಲ್ಯದ ಪ್ರಯೋಜನಗಳನ್ನು ಪಡೆಯುವುದರ ಜೊತೆಗೆ, ನಡವಳಿಕೆ ಬದಲಾವಣೆಯನ್ನು ವಿಸ್ತರಿಸುವಲ್ಲಿ ಮತ್ತು ಕಾಯ್ದುಕೊಳ್ಳುವಲ್ಲಿ ಸಕ್ರಿಯ ಹರಿಕಾರರಾದರು. ನಿರಂತರ ಜಾಗೃತಿ, ಗುರುತಿಸುವಿಕೆ, ಪ್ರೋತ್ಸಾಹ ಹಾಗೂ ಭಾಗವಹಿಸುವಿಕೆಯ ಮೇಲ್ವಿಚಾರಣೆಯು ಸ್ವಚ್ಛತೆಯನ್ನು ಒಂದು ಅಭಿಯಾನದಿಂದ ಸಮುದಾಯದ ಶಾಶ್ವತ ನಡವಳಿಕೆಯನ್ನಾಗಿ ಪರಿವರ್ತಿಸಲು ಸಹಾಯ ಮಾಡಿತು.
|
ಸ್ವಚ್ಛ ಭಾರತದ ನಡವಳಿಕಾ ತಳಹದಿಗಳು
ಸ್ವಚ್ಛ ಭಾರತ್ ಮಿಷನ್ (ಎಸ್ ಬಿಎಂ) ನೈರ್ಮಲ್ಯವನ್ನು ನಡವಳಿಕೆ, ಭಾಗವಹಿಸುವಿಕೆ ಮತ್ತು ಸಾಮೂಹಿಕ ಜವಾಬ್ದಾರಿಯ ವಿಷಯವನ್ನಾಗಿ ಸ್ವೀಕರಿಸಿದೆ. ಕೇವಲ ಮೂಲಸೌಕರ್ಯಗಳಿಂದಲೇ ನಿರಂತರ ನೈರ್ಮಲ್ಯದ ಗುರಿ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಈ ಮಿಷನ್ ಗುರುತಿಸಿತು. ಆದ್ದರಿಂದ, ಎಸ್ ಬಿಎಂ ತನ್ನ ಅನುಷ್ಠಾನ ವಿಧಾನದ ಕೇಂದ್ರಬಿಂದುವಾಗಿ ನಡವಳಿಕೆ ಬದಲಾವಣೆ ಸಂವಹನಕ್ಕೆ ಮೊದಲ ಆದ್ಯತೆ ನೀಡಿತು. ಎಸ್ ಬಿಎಂ-ಜಿ ಅಡಿಯಲ್ಲಿ, ಗಮನವು ಕೇವಲ ಶೌಚಾಲಯಗಳ ನಿರ್ಮಾಣಕ್ಕೆ ಸೀಮಿತವಾಗಿರಲಿಲ್ಲ. ಅದು ಸುರಕ್ಷಿತ ಮತ್ತು ಸುಸ್ಥಿರ ನೈರ್ಮಲ್ಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಸಮುದಾಯಗಳನ್ನು ಪ್ರೇರೇಪಿಸುತ್ತದೆ. ಅದೇ ರೀತಿ, ಎಸ್ ಬಿಎಂ-ಯು ಅಡಿಯಲ್ಲಿ, ಗಮನವು ಕೇವಲ ಕಸದ ಸಂಸ್ಕರಣೆಗೆ ಸೀಮಿತವಾಗಿಲ್ಲ. ಅದು ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸುವುದನ್ನು ಸಾರ್ವಜನಿಕ ಅಭ್ಯಾಸವನ್ನಾಗಿ ಮಾಡುವುದು ಮತ್ತು ಸಂಪೂರ್ಣ ನಗರ ನೈರ್ಮಲ್ಯ ಹಾಗೂ ಸಾರ್ವಜನಿಕ ಸ್ವಚ್ಛತೆಯನ್ನು ಸಾಧಿಸುವುದರ ಮೇಲಿದೆ. ಆದ್ದರಿಂದ, ಮಾಹಿತಿ, ಶಿಕ್ಷಣ ಮತ್ತು ಸಂವಹನ (ತಂತ್ರಗಳು, ನಡವಳಿಕೆಯ ನಿರಂತರ ಬಲವರ್ಧನೆ ಹಾಗೂ ಮೇಲ್ವಿಚಾರಣೆಯು ಎಸ್ ಬಿಎಂ ನ ಕಾರ್ಯತಂತ್ರದ ಪ್ರಮುಖ ಅಂಗಗಳಾಗಿವೆ. ಎಸ್ ಬಿಎಂ ಕೇವಲ ನೈರ್ಮಲ್ಯ ಮೂಲಸೌಕರ್ಯಗಳನ್ನು ನಿರ್ಮಿಸುವುದರಿಂದ ಹಿಡಿದು, ನೈರ್ಮಲ್ಯ ನಡವಳಿಕೆಯನ್ನು ಶಾಶ್ವತವಾಗಿ ಕಾಯ್ದುಕೊಳ್ಳುವ ದಿಕ್ಕಿನಲ್ಲಿ ಬೆಳೆದಿದೆ. ಈ ಬೆಳವಣಿಗೆಯು ಸಾಮಾಜಿಕ ಮತ್ತು ನಡವಳಿಕೆ ಬದಲಾವಣೆ ಸಂವಹನವನ್ನು (ಎಸ್‌ಬಿಸಿಸಿ) ಪ್ರಮುಖ ಕೇಂದ್ರಸ್ಥಾನದಲ್ಲಿರಿಸಿದೆ.
|
ಸ್ವಚ್ಛ ಭಾರತ್ ಮಿಷನ್ (ಎಸ್ ಬಿಎಂ)
2014 ರ ಅಕ್ಟೋಬರ್ 2 ರಂದು ಪ್ರಾರಂಭವಾದ ಎಸ್ ಬಿಎಂ, ಭಾರತ ಸರ್ಕಾರದ ಅತ್ಯಂತ ದೊಡ್ಡ ನೈರ್ಮಲ್ಯ ಆಂದೋಲನಗಳಲ್ಲಿ ಒಂದಾಗಿದೆ. ಈ ಮಿಷನ್ ಎರಡು ಮುಖ್ಯ ವಿಭಾಗಗಳ ಮೂಲಕ ಕಾರ್ಯನಿರ್ವಹಿಸುತ್ತದೆ: ಎಸ್ ಬಿಎಂ-ಗ್ರಾಮೀಣ್ ಮತ್ತು ಎಸ್ ಬಿಎಂ-ಅರ್ಬನ್. ಎಸ್ ಬಿಎಂ-ಜಿ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ, ಶೌಚಾಲಯಗಳ ಲಭ್ಯತೆ, ಅವುಗಳ ಬಳಕೆ ಮತ್ತು ತ್ಯಾಜ್ಯ ನಿರ್ವಹಣೆಯ ಮೇಲೆ ಗಮನ ಹರಿಸುತ್ತದೆ. ಎಸ್ ಬಿಎಂ-ಯು ನಗರ ಪ್ರದೇಶದ ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛ ಸಾರ್ವಜನಿಕ ಸ್ಥಳಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಎಸ್ ಬಿಎಂ ಸಾಧನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿ ಓದಿ.
|
ಮಾಹಿತಿಯಿಂದ ನಡವಳಿಕೆಯ ಬದಲಾವಣೆಯತ್ತ
ಸಾಮಾಜಿಕ ಮತ್ತು ನಡವಳಿಕೆ ಬದಲಾವಣೆ ಸಂವಹನವು (ಎಸ್‌ಬಿಸಿಸಿ) ಧನಾತ್ಮಕ ಸಾಮಾಜಿಕ ಬದಲಾವಣೆಯನ್ನು ಬೆಂಬಲಿಸಲು ಸಂವಹನವನ್ನು ಬಳಸಿಕೊಳ್ಳುತ್ತದೆ. ಇದು ಜ್ಞಾನ, ಮನೋಭಾವನೆಗಳು, ಸಾಮಾಜಿಕ ನಿಯಮಗಳು ಹಾಗೂ ಅಭ್ಯಾಸಗಳ ಮೇಲೆ ಪ್ರಭಾವ ಬೀರಲು ಹಲವು ವಿಧಾನಗಳನ್ನು ಸಂಯೋಜಿಸುತ್ತದೆ. ಇವುಗಳಲ್ಲಿ ವ್ಯಕ್ತಿಗತ ಸಂವಹನ, ಸಮುದಾಯ ಸಂಘಟನೆ ಮತ್ತು ಸಮೂಹ ಮಾಧ್ಯಮಗಳು ಸೇರಿವೆ. ಜೊತೆಗೆ ಸಾಮಾಜಿಕ ಮಾಧ್ಯಮ, ಮನರಂಜನೆ, ಸಾರ್ವಜನಿಕ ಬೆಂಬಲ (ಅಡ್ವೊಕೇಸಿ) ಮತ್ತು ಕೌಶಲ್ಯಪೂರ್ಣ ಸಹಭಾಗಿತ್ವಗಳೂ ಇದರಲ್ಲಿ ಅಡಕವಾಗಿವೆ.
ಎಸ್ ಬಿ ಎಂ ಅಡಿಯಲ್ಲಿ ಎಸ್‌ಬಿಸಿಸಿ ಕೇವಲ ಮಾಹಿತಿಯನ್ನು ಪ್ರಸಾರ ಮಾಡುವುದಕ್ಕೆ ಸೀಮಿತವಾಗಿಲ್ಲ. ಇದು ಜನರ ಮನೋಭಾವ, ಸಾಮಾಜಿಕ ನಿಯಮಗಳು ಮತ್ತು ದೈನಂದಿನ ಅಭ್ಯಾಸಗಳ ಮೇಲೆ ಪ್ರಭಾವ ಬೀರಲು ಶ್ರಮಿಸುತ್ತದೆ. ಎಸ್ ಬಿಎಂ ನ ಈ ವಿಧಾನವು ವ್ಯಕ್ತಿಗತ ಸಂವಹನ, ಸಮುದಾಯದ ಸಕ್ರಿಯ ಭಾಗವಹಿಸುವಿಕೆ, ಜಾಗೃತಿ ಮೂಡಿಸುವಿಕೆ ಮತ್ತು ಸಾಮೂಹಿಕ ಚಟುವಟಿಕೆಗಳನ್ನು ಒಂದಾಗಿಸುತ್ತದೆ. ಬಹಿರಂಗ ಶೌಚ ಮತ್ತು ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಾಮಾಜಿಕ ನಿಯಮಗಳನ್ನು ಬದಲಾಯಿಸುವುದು ಇದರ ದೀರ್ಘಕಾಲೀನ ಉದ್ದೇಶವಾಗಿದೆ. ಜನರ ನಡವಳಿಕೆಯು ಅವರ ಸುತ್ತಮುತ್ತಲಿನ ಸಾಮಾಜಿಕ ವಾತಾವರಣದಿಂದ ಪ್ರಭಾವಿತವಾಗಿರುತ್ತದೆ ಎಂಬುದನ್ನು ಇದು ಗುರುತಿಸುತ್ತದೆ. ಕುಟುಂಬಗಳು, ನೆರೆಹೊರೆಯವರು, ಸಮುದಾಯದ ಗುಂಪುಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವಾಸಾರ್ಹ ನಾಯಕರು ನಿರ್ದಿಷ್ಟ ಅಭ್ಯಾಸಗಳನ್ನು ಪ್ರೋತ್ಸಾಹಿಸಲು ಅಥವಾ ನಿರುತ್ಸಾಹಗೊಳಿಸಲು ಸಹಾಯ ಮಾಡುತ್ತಾರೆ. ಆದ್ದರಿಂದ, ಇಲ್ಲಿ ಸಂವಹನವು ಪರಸ್ಪರ ಸಂಬಂಧಗಳು ಮತ್ತು ಸಾಮುದಾಯಿಕ ಭಾಗವಹಿಸುವಿಕೆಯ ಮೂಲಕ ಕಾರ್ಯನಿರ್ವಹಿಸುತ್ತದೆ.
|
ಮಹಾತ್ಮ ಗಾಂಧಿ: ಎಸ್ ಬಿಎಂ ಅಡಿಯಲ್ಲಿ ಎಸ್‌ಬಿಸಿಸಿ ಗಾಗಿ ನೈತಿಕ ದಿಕ್ಸೂಚಿ
ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ಮಹಾತ್ಮ ಗಾಂಧೀಜಿಯವರು ನೀಡಿದ ಒತ್ತು, ಸ್ವಚ್ಛ ಭಾರತ್ ಮಿಷನ್‌ನ (ಎಸ್ ಬಿ ಎಂ) ಸಂವಹನ ಕಾರ್ಯತಂತ್ರಕ್ಕೆ ಬಲವಾದ ತಳಹದಿಯನ್ನು ಒದಗಿಸಿತು. 2019 ರಲ್ಲಿ ಗಾಂಧೀಜಿಯವರ 150ನೇ ಜಯಂತಿಯ ವೇಳೆಗೆ 'ಸ್ವಚ್ಛ ಭಾರತ'ವನ್ನು ಸಾಧಿಸುವ ಉದ್ದೇಶದಿಂದ ಈ ಮಿಷನ್ ಅನ್ನು 2014 ರ ಅಕ್ಟೋಬರ್ 2 ರಂದು ಪ್ರಾರಂಭಿಸಲಾಯಿತು. ಎಸ್ ಬಿಎಂ ನ ಲಾಂಛನವು ಮಹಾತ್ಮ ಗಾಂಧೀಜಿಯವರ ಕನ್ನಡಕವನ್ನು ಪ್ರತಿನಿಧಿಸುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಮೌಲ್ಯವನ್ನು ಸೃಷ್ಟಿಸಲು ಮತ್ತು ಸ್ವಚ್ಛತೆಯ ಕುರಿತಾದ ಭಾವನಾತ್ಮಕ ಬಂಧವನ್ನು ಪ್ರತಿನಿಧಿಸಲು ನೆರವಾಗಿದೆ. ಅಲ್ಲದೆ, ದೇಶದ ಜನಸಾಮಾನ್ಯರು ಈ ಅಭಿಯಾನದೊಂದಿಗೆ ಸುಲಭವಾಗಿ ಮತ್ತು ವೇಗವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಇದು ಸಹಾಯ ಮಾಡಿತು. ಪರಿಣಾಮವಾಗಿ, 2019 ರ ಅಕ್ಟೋಬರ್ 2 ರಂದು ಗ್ರಾಮೀಣ ಭಾರತವನ್ನು ಬಹಿರಂಗ ಶೌಚ ಮುಕ್ತ (ಒಡಿಎಫ್) ಎಂದು ಘೋಷಿಸಲಾಯಿತು.

ಚಿತ್ರ 1: ಸ್ವಚ್ಛ ಭಾರತ್ ಮಿಷನ್‌ನ ಲಾಂಛನ
ಮಹಾತ್ಮ ಗಾಂಧೀಜಿಯವರು ಚಂಪಾರಣ್ ಸತ್ಯಾಗ್ರಹ ಚಳವಳಿಯ ಸಂದರ್ಭದಲ್ಲಿಯೇ ತಮ್ಮ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದರು. ಪರಿಪೂರ್ಣ ನೈರ್ಮಲ್ಯ, ಧೂಳಿನಿಂದ ಮುಕ್ತವಾದ ಗ್ರಾಮದ ಗಲ್ಲಿಗಳು ಮತ್ತು ರಸ್ತೆಗಳನ್ನು ಹೊಂದಿರುವ ಗ್ರಾಮವೇ ಅವರ ಆದರ್ಶ ಗ್ರಾಮದ ಪರಿಕಲ್ಪನೆಯಾಗಿತ್ತು. ಗಾಂಧೀಜಿಯವರು ತಮ್ಮ "ಆಶ್ರಮ್ ಅಬ್ಸರ್ವೆನ್ಸಸ್ ಇನ್ ಆಕ್ಷನ್" ಪುಸ್ತಕದಲ್ಲಿ, ನೈರ್ಮಲ್ಯ ಸೇವೆಯು ಅತ್ಯಗತ್ಯ ಮತ್ತು ಪವಿತ್ರವಾದ ಸೇವೆಯಾಗಿದೆ ಎಂದು ಬರೆದಿದ್ದಾರೆ. ಅವರ ಸೇವಾವಿಲಾಸ (ಸೇವಾಗ್ರಾಮ) ಆಶ್ರಮವು ಈ ಕೆಲಸಕ್ಕಾಗಿ ಹೊರಗಿನ ಕಾರ್ಮಿಕರನ್ನು ನಿಯಮಿಸದೆ ಇರುವುದಕ್ಕೆ ಒತ್ತು ನೀಡಿತ್ತು. ಆಶ್ರಮದ ಸದಸ್ಯರೇ ಸರದಿಯ ಪ್ರಕಾರ ಆವರಣವನ್ನು ಸ್ವಚ್ಛಗೊಳಿಸಲು ಭಾಗವಹಿಸುತ್ತಿದ್ದರು. ಆಶ್ರಮವಾಸಿಗಳು ಕೈಗಳನ್ನು ತೊಳೆದುಕೊಂಡು ಸ್ವಚ್ಛವಾದ ಕರ್ಚಿಫ್/ನೇಪ್ಕಿನ್‌ನಿಂದ ಒರೆಸಿಕೊಳ್ಳುವುದು ಕಡ್ಡಾಯ ಎಂಬ ನಿಯಮವೂ ಅಲ್ಲ ರಚನೆ ಆಗಿತ್ತು. ಎಸ್ ಬಿಎಂ ನ ಸಂದೇಶ ರವಾನೆಯು ಸಾರ್ವಜನಿಕ ಮಾಲೀಕತ್ವವನ್ನು ಬೆಳೆಸಲು ಮತ್ತು ನಡವಳಿಕೆಯ ಬದಲಾವಣೆಯಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಈ ಪರಂಪರೆಯನ್ನು ಬಳಸಿಕೊಂಡಿತು.
ಈ ನಂಟು ನಡವಳಿಕೆ ಬದಲಾವಣೆ ಚಳವಳಿಯ ಭಾಷೆ ಮತ್ತು ಸಂಕೇತಗಳನ್ನು ರೂಪಿಸಿತು. 'ಸ್ವಚ್ಛಾಗ್ರಹಿ' ಎಂಬ ಪದವನ್ನು ಗಾಂಧೀಜಿಯವರ 'ಸತ್ಯಾಗ್ರಹ' ಪರಂಪರೆಯಿಂದ ಉದ್ದೇಶಪೂರ್ವಕವಾಗಿ ಪಡೆಯಲಾಗಿದ್ದು, ನಾಗರಿಕರು ಮತ್ತು ನೈರ್ಮಲ್ಯ ಸ್ವಯಂಸೇವಕರನ್ನು ಸಾಮುದಾಯಿಕ ಸ್ವಚ್ಛಾಗ್ರಹದ ಭಾಗವಹಿಸುವಿಕೆಯಲ್ಲಿ ಮರುಸೃಷ್ಟಿಸಿತು. ಆದ್ದರಿಂದ, ಎಸ್ ಬಿಎಂ ಮಹಾತ್ಮ ಗಾಂಧೀಜಿಯವರನ್ನು ಕೇವಲ ಸ್ಮರಣೀಯ ವ್ಯಕ್ತಿಯಾಗಿ ನೋಡದೆ, ಸ್ವಚ್ಛತೆಯನ್ನು ಸಾಮುದಾಯಿಕ ಚಟುವಟಿಕೆ, ನಾಗರಿಕತ್ವ ಮತ್ತು ನಿರಂತರ ನಡವಳಿಕೆಯ ಪರಿವರ್ತನೆಯೊಂದಿಗೆ ಜೋಡಿಸುವ 'ಸಂವಹನದ ಆಧಾರಸ್ತಂಭ'ವಾಗಿ ಗೌರವಿಸಿತು.
|
ನಡವಳಿಕೆಯ ಬದಲಾವಣೆಯನ್ನು ಮನೆಬಾಗಿಲಿಗೆ ಕೊಂಡೊಯ್ಯುವುದು: ವ್ಯಕ್ತಿಗತ ಅಭ್ಯಾಸಗಳ ಪರಿವರ್ತನೆ
ಸ್ವಚ್ಛ ಭಾರತ್ ಮಿಷನ್ (ಎಸ್ ಬಿಎಂ) ನಡವಳಿಕೆ ಬದಲಾವಣೆ ಸಂವಹನದ (ಎಸ್‌ಬಿಸಿಸಿ) ತತ್ವಗಳನ್ನು ನೇರ ಹಾಗೂ ಸಮುದಾಯ ಮಟ್ಟದ ಸಕ್ರಿಯ ಭಾಗವಹಿಸುವಿಕೆಯನ್ನಾಗಿ ಪರಿವರ್ತಿಸಿತು. ನೈರ್ಮಲ್ಯ ಅಭ್ಯಾಸಗಳ ಮೇಲೆ ಪ್ರಭಾವ ಬೀರಲು 'ವ್ಯಕ್ತಿಗತ ಸಂವಹನ'ವು ಪ್ರಮುಖ ಮಾರ್ಗವಾಯಿತು. ಏಕಮುಖ ಸಂದೇಶ ರವಾನೆಗಿಂತ ಭಿನ್ನವಾಗಿ, ಐಪಿಸಿಯು ಸಂವಹನಕಾರರು ಮತ್ತು ಸಮುದಾಯದ ಸದಸ್ಯರ ನಡುವೆ ಪ್ರತ್ಯಕ್ಷ ಸಂವಾದಕ್ಕೆ ಅವಕಾಶ ಮಾಡಿಕೊಡುತ್ತದೆ. ಇದು ಸ್ಥಳೀಯ ಸಂದರ್ಭಗಳಿಗೆ ಅನುಗುಣವಾಗಿ ಜನರ ಕಳವಳಗಳು, ಅಭಿಪ್ರಾಯಗಳು ಮತ್ತು ಪ್ರಾಯೋಗಿಕ ಅಡೆತಡೆಗಳನ್ನು ಮುಕ್ತವಾಗಿ ಚರ್ಚಿಸಲು ಅನುಕೂಲ ಮಾಡಿಕೊಟ್ಟಿತು. ಐಪಿಸಿ ಯನ್ನು ಸುಗಮಗೊಳಿಸಲು ಸರ್ಕಾರವು ಮುಂಚೂಣಿ ಕಾರ್ಯಕರ್ತರು, ಸ್ವಚ್ಛಾಗ್ರಹಿಗಳು, ಸಮುದಾಯದ ನಾಯಕರು, ಸ್ವಸಹಾಯ ಸಂಘಗಳು ಮತ್ತು ಚಾಲ್ತಿಯಲ್ಲಿರುವ ಸಾಮಾಜಿಕ ಜಾಲಬಂಧಗಳನ್ನು ನೆಚ್ಚಿಕೊಂಡಿತು. ಮನೆ-ಮನೆ ಭೇಟಿ, ಮುಖಾಮುಖಿ ಆಪ್ತಸಮಾಲೋಚನೆ, ಸಣ್ಣ ಗುಂಪುಗಳ ಸಭೆಗಳು, ಸಮಾನಮನಸ್ಕರ ಸಂವಹನ ಹಾಗೂ ಮನೆಗಳು, ಆರೋಗ್ಯ ಕೇಂದ್ರಗಳು, ಸಮುದಾಯಿಕ ಸ್ಥಳಗಳು ಮತ್ತು ಧಾರ್ಮಿಕ ಸಭೆಗಳಲ್ಲಿ ನಡೆಸುವ ಚರ್ಚೆಗಳು ಈ ವಿಧಾನದಲ್ಲಿ ಸೇರಿದ್ದವು.
ಎಸ್ ಬಿಎಂ-G ಅಡಿಯಲ್ಲಿ ಸ್ವಚ್ಛಾಗ್ರಹಿಗಳು ತಳಮಟ್ಟದ ಸೈನಿಕರಾಗಿ ಮತ್ತು ಪ್ರೇರಕರಾಗಿ ಹೊರಹೊಮ್ಮಿದರು. ಅವರ ಪಾತ್ರವು ಕೇವಲ ಶೌಚಾಲಯ ನಿರ್ಮಾಣವನ್ನು ಉತ್ತೇಜಿಸುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಕುಟುಂಬಗಳು ಸುರಕ್ಷಿತ ನೈರ್ಮಲ್ಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಮತ್ತು ಅವುಗಳನ್ನು ನಿರಂತರವಾಗಿ ಕಾಯ್ದುಕೊಳ್ಳಲು ಅವರು ಸಹಾಯ ಮಾಡಿದರು. ಸ್ವಚ್ಛಾಗ್ರಹಿಗಳು ಸಮುದಾಯ ಜಾಗೃತಿ ಮತ್ತು ಪ್ರೇರಣೆ, ಮನೆ-ಮನೆ ಭೇಟಿ ಹಾಗೂ ನೈರ್ಮಲ್ಯದ ಕುರಿತು ಚರ್ಚೆಗಳನ್ನು ಸುಗಮಗೊಳಿಸಿದರು. ಅವರು ಸಮುದಾಯ ಸಂಘಟನೆಗೆ ಬೆಂಬಲ ನೀಡಿ, 'ನಿಗ್ರಾಣಿ ಸಮಿತಿ'ಗಳನ್ನು (ಮೇಲ್ವಿಚಾರಣಾ ಸಮಿತಿಗಳು) ಬಲಪಡಿಸಿದರು. ವ್ಯಕ್ತಿಗಳು ಮತ್ತು ಕುಟುಂಬಗಳಲ್ಲಿ ನೈರ್ಮಲ್ಯ ಅಭ್ಯಾಸಗಳನ್ನು ಮತ್ತಷ್ಟು ಬಲಪಡಿಸಲು, ಬಹಿರಂಗ ಶೌಚ ಮುಕ್ತ (ಒಡಿಎಫ್) ಘೋಷಣೆಯ ನಂತರವೂ ಅವರ ಸಕ್ರಿಯ ಕಾರ್ಯಕ್ಷಮತೆ ಮುಂದುವರಿಯಿತು.

ಚಿತ್ರ 2: ಬಿಹಾರದಲ್ಲಿ ಸ್ವಚ್ಛಾಗ್ರಹಿಗಳು ಮತ್ತು ಸ್ವಸಹಾಯ ಸಂಘದ ದೀದಿಯರ ಸಭೆ

ಚಿತ್ರ 3: ಸ್ವಚ್ಛತೆಯ ಸಂದೇಶವನ್ನು ಪಸರಿಸಲು ವ್ಯಕ್ತಿಗತ ಸಂವಹನವನ್ನು ಬಳಸುತ್ತಿರುವ ನಿಗ್ರಾಣಿ ಸಮಿತಿ
ನಿಗ್ರಾಣಿ ಸಮಿತಿಗಳ ಮೂಲಕ ಸಾಮುದಾಯಿಕ ಜಾಗೃತಿ ಮತ್ತು ವ್ಯಕ್ತಿಗತ ಸಂವಾದದಿಂದ ಸಾಮೂಹಿಕ ಚಟುವಟಿಕೆಯತ್ತ ವ್ಯಕ್ತಿಗತ ಸಂವಹನವು 'ನಿಗ್ರಾಣಿ ಸಮಿತಿಗಳ' ಮೂಲಕ ಸಾಮುದಾಯಿಕ ಜಾಗೃತಿಯಾಗಿಯೂ ವಿಸ್ತರಿಸಲ್ಪಟ್ಟಿತು. ಬಹಿರಂಗ ಶೌಚ ಮುಕ್ತ (ಒಡಿಎಫ್) ಸಾಧನೆ ಮತ್ತು ಅದರ ಸುಸ್ಥಿರತೆಯನ್ನು ಬೆಂಬಲಿಸಲು ಈ ಸಮಿತಿಗಳನ್ನು ಬಲಪಡಿಸಲಾಯಿತು. ಹಳ್ಳಿಗಳಲ್ಲಿ ನಿರಂತರವಾಗಿ ಬೆಳಿಗ್ಗೆ ಮತ್ತು ಸಂಜೆ ಮೇಲ್ವಿಚಾರಣೆ ನಡೆಸುವುದು ಇವರ ಪ್ರಮುಖ ಚಟುವಟಿಕೆಯಾಗಿತ್ತು. ನಿಗ್ರಾಣಿ ಸಮಿತಿಗಳು ವಿಶೇಷವಾಗಿ ಜನರು ಬಹಿರಂಗ ಶೌಚಕ್ಕೆ ಬಳಸುತ್ತಿದ್ದ ಸ್ಥಳಗಳ ಮೇಲೆ ಹೆಚ್ಚಿನ ಗಮನ ಹರಿಸಿದವು. ಸಮುದಾಯದಲ್ಲಿ ನಿರಂತರ ಉಪಸ್ಥಿತಿ ಮತ್ತು ಫಾಲೋ-ಅಪ್‌ಗಳ ಮೂಲಕ ಇವರು ನೈರ್ಮಲ್ಯದ ಸಂದೇಶಗಳನ್ನು ಬಲಪಡಿಸಿದರು. ನಿಯಮಿತ ನಿಗ್ರಾಣಿ ಅಭಿಯಾನಗಳು, ಗ್ರಾಮ ಸಭೆಗಳು ಮತ್ತು 'ರಾತ್ರಿ ಚೌಪಾಲ್'ಗಳು ಒಡಿಎಫ್ ನಡವಳಿಕೆಯನ್ನು ಕಾಯ್ದುಕೊಳ್ಳಲು ನೆರವಾದವು. ಸ್ವಚ್ಛಾಗ್ರಹಿಗಳು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತು ಮೇಲ್ವಿಚಾರಣೆ ನಡೆಸಲು ಅವರಿಗೆ ಟಾರ್ಚ್ ಮತ್ತು ವಿಸಿಲ್ ಒಳಗೊಂಡಿರುವ ಟೂಲ್ ಕಿಟ್ ಒದಗಿಸಲಾಗಿತ್ತು.
ಆದ್ದರಿಂದ, ಈ ವಿಧಾನವು ನೈರ್ಮಲ್ಯವನ್ನು ವ್ಯಕ್ತಿಗತ ಅಭ್ಯಾಸದಿಂದ ಸಾಮುದಾಯಿಕ ಸಂಸ್ಕೃತಿಯನ್ನಾಗಿ ಪರಿವರ್ತಿಸಿತು. ನಡವಳಿಕೆಯ ಬದಲಾವಣೆಯನ್ನು ಬಲಪಡಿಸುವಲ್ಲಿ ಮತ್ತು ಕಾಯ್ದುಕೊಳ್ಳುವಲ್ಲಿ ಸಮುದಾಯವೇ ಸಕ್ರಿಯ ಪಾಲುದಾರನಾಯಿತು.
ವ್ಯಕ್ತಿಗತ ಸಂವಾದದಿಂದ ಸಾಮೂಹಿಕ ಚಟುವಟಿಕೆಯತ್ತ
ವ್ಯಕ್ತಿಗತ ಸಂವಹನವು ಮನೆ ಮತ್ತು ಸಮುದಾಯದ ಹಂತಗಳಲ್ಲಿ ಸಂವಾದಕ್ಕೆ ಅವಕಾಶಗಳನ್ನು ಸೃಷ್ಟಿಸಿತು. ಸಮುದಾಯ ಸಂಘಟನೆಯು ಜನರನ್ನು ಒಂದೆಡೆ ಸೇರಿಸಿ, ಸಾಮಾನ್ಯ ನೈರ್ಮಲ್ಯ ಕಳವಳಗಳನ್ನು ಚರ್ಚಿಸಲು ಮತ್ತು ಸಾಮುದಾಯಿಕ ಪರಿಹಾರಗಳನ್ನು ಕಂಡುಕೊಳ್ಳಲು ನೆರವಾಗುವ ಮೂಲಕ ಈ ಪ್ರಕ್ರಿಯೆಯನ್ನು ಇನ್ನಷ್ಟು ಮುಂದೆ ಕೊಂಡೊಯ್ದಿತು. ಎಸ್ ಬಿಎಂ ಅಡಿಯಲ್ಲಿ, ಸಾರ್ವಜನಿಕರು ತಮ್ಮ ದೈನಂದಿನ ನೈರ್ಮಲ್ಯ ಅಭ್ಯಾಸಗಳ ಮೇಲೆ ಪ್ರಭಾವ ಬೀರುವ ನಿರ್ಧಾರಗಳಲ್ಲಿ ಭಾಗವಹಿಸಲು ಇದು ವೇದಿಕೆಯನ್ನು ಒದಗಿಸಿತು. ಗ್ರಾಮಸಭೆಗಳು, ಚೌಪಾಲ್‌ಗಳು, ಸಮುದಾಯ ಸಭೆಗಳು ಮತ್ತು ಇತರ ಸ್ಥಳೀಯ ವೇದಿಕೆಗಳು ನೈರ್ಮಲ್ಯ ವಿಷಯಗಳ ಕುರಿತು ಸಂವಾದ ನಡೆಸಲು ಹಾಗೂ ಆದ್ಯತೆಗಳ ಕುರಿತು ಒಮ್ಮತ ಮೂಡಿಸಲು ಸಮುದಾಯಗಳಿಗೆ ನೆರವಾದವು.
ಸಮುದಾಯ ಸಂಘಟನೆಯು ವಿವಿಧ ಗುಂಪುಗಳನ್ನು ನೈರ್ಮಲ್ಯ ಸಂವಾದಕ್ಕೆ ಕರೆತಂದಿತು. ಸಮುದಾಯದ ನಾಯಕರು, ಪಂಚಾಯತ್ ರಾಜ್ ಸಂಸ್ಥೆಗಳು, ಸ್ವಯಂಸೇವಕರು, ಧಾರ್ಮಿಕ ನಾಯಕರು ಮತ್ತು ಮಹಿಳಾ ಸಂಘಗಳು ಸ್ಥಳೀಯ ಚರ್ಚೆಗಳು ಹಾಗೂ ಕಾರ್ಯಕ್ರಮಗಳನ್ನು ಸುಗಮಗೊಳಿಸಿದವು. ಈ ವಿಧಾನವು ವ್ಯಕ್ತಿಗತ ನಡವಳಿಕೆಯನ್ನು ಸಾಮುದಾಯಿಕ ಜವಾಬ್ದಾರಿಯೊಂದಿಗೆ ಜೋಡಿಸಿತು. ಸುರಕ್ಷಿತ ನೈರ್ಮಲ್ಯ ಅಭ್ಯಾಸಗಳನ್ನು ಅಳವಡಿಸಿಕೊಂಡ ಒಂದು ಕುಟುಂಬವು ವಿಶಾಲ ಸಾಮುದಾಯಿಕ ಶ್ರಮದ ಭಾಗವಾಯಿತು. ಸಮುದಾಯಿಕ ಚರ್ಚೆಗಳು ಸ್ಥಳೀಯ ಕಳವಳಗಳನ್ನು ಗುರುತಿಸಲು, ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಅಪೇಕ್ಷಿತ ಅಭ್ಯಾಸಗಳ ಕುರಿತು ಒಪ್ಪಂದವನ್ನು ನಿರ್ಮಿಸಲು ಅವಕಾಶಗಳನ್ನು ಸೃಷ್ಟಿಸಿದವು.
ಈ ವಿಧಾನವು ಚಲೋ ಚಂಪಾರಣ್, ಸ್ವಚ್ಛ ಶಕ್ತಿ, ಸ್ವಚ್ಛ ಸುಂದರ ಶೌಚಾಲಯ, ಸ್ವಚ್ಛತಾ ಹಿ ಸೇವಾ, ಸ್ವಚ್ಛ ಸುಂದರ ಸಮುದಾಯಿಕ ಶೌಚಾಲಯ, ಸ್ವಚ್ಛ ಭಾರತ್ ದಿವಸ್, ಸ್ವಚ್ಛತಾ ಮಹೋತ್ಸವ ಮತ್ತು ಸ್ವಚ್ಛತಾ ಪಖ್ವಾಡ ದಂತಹ ಪ್ರಮುಖ ಅಭಿಯಾನಗಳ ಮೂಲಕವೂ ಪ್ರತಿಫಲಿಸಿತು. ಈ ಅಭಿಯಾನಗಳು ನೈರ್ಮಲ್ಯ ಮತ್ತು ಸ್ವಚ್ಛತೆಯ ಸುತ್ತ ಸಾಮೂಹಿಕ ಭಾಗವಹಿಸುವಿಕೆಗೆ ಬಲವಾದ ವೇದಿಕೆಗಳನ್ನು ಒದಗಿಸಿದವು.

ಚಿತ್ರ 4: ಅಸ್ಸಾಂನಲ್ಲಿ ಸ್ಥಳೀಯ ಭಾಷೆಯಲ್ಲಿ ಸ್ವಚ್ಛತೆಯ ಸಂದೇಶಗಳನ್ನು ಹರಡುತ್ತಿರುವ ಗೋಡೆ ಸಿಂಗಾರ / ಗೋಡೆ ಬರಹ
ಮಧ್ಯಮ-ಮಾಧ್ಯಮ ಮತ್ತು ಹೊರಾಂಗಣ ಮಾಧ್ಯಮದ ಮೂಲಕ ಸಾಮುದಾಯಿಕ ಜಾಗೃತಿಯನ್ನು ಇನ್ನಷ್ಟು ಬಲಪಡಿಸುವುದು ಸಮುದಾಯ ಸಂಘಟನೆಯನ್ನು 'ಮಧ್ಯಮ-ಮಾಧ್ಯಮ' ಮತ್ತು ಹೊರಾಂಗಣ ಸಂವಹನ ಮಾಧ್ಯಮಗಳ ಮೂಲಕ ಇನ್ನಷ್ಟು ಬಲಪಡಿಸಲಾಯಿತು. ಈ ಮಾಧ್ಯಮಗಳು ನೈರ್ಮಲ್ಯ ಸಂದೇಶಗಳನ್ನು ಕೇವಲ ವ್ಯಕ್ತಿಗತ ಸಂವಾದಗಳಿಗಷ್ಟೇ ಸೀಮಿತಗೊಳಿಸದೆ, ಜನರು ನಿರಂತರವಾಗಿ ಸೇರುವ ಸಾರ್ವಜನಿಕ ಸ್ಥಳಗಳಿಗೂ ತಲುಪಿಸಿದವು. ಬೊಂಬೆಯಾಟ, ಜಾದು ಪ್ರದರ್ಶನ, ರಂಗನಾಟಕಗಳು ಮತ್ತು ಬೀದಿ ನಾಟಕಗಳು (ನುಕ್ಕಡ್ ನಾಟಕ್) ಸ್ಥಳೀಯ ಮತ್ತು ಸಾಂಪ್ರದಾಯಿಕ ಮಧ್ಯಮ-ಮಾಧ್ಯಮ ವಿನ್ಯಾಸಗಳಿಗೆ ಪ್ರಮುಖ ಉದಾಹರಣೆಗಳಾಗಿವೆ.
ಹೊರಾಂಗಣ ಮಾಧ್ಯಮವು ನೈರ್ಮಲ್ಯ ಸಂದೇಶಗಳನ್ನು ಪ್ರಸಾರ ಮಾಡಲು ಅನುಮತಿಸಲಾದ ಸಾರ್ವಜನಿಕ ಗೋಡೆಗಳ ಮೇಲಿನ ವರ್ಣಚಿತ್ರಗಳು ಹಾಗೂ ದೊಡ್ಡ ಬಿಲ್‌ಬೋರ್ಡ್‌ಗಳನ್ನು ಬಳಸಿಕೊಂಡಿತು. ವಿಶೇಷವಾಗಿ, ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸಲು ಮತ್ತು ನಗರದ ಸೌಂದರ್ಯೀಕರಣಕ್ಕೆ ಬೆಂಬಲ ನೀಡಲು ಗೋಡೆ ಚಿತ್ರಗಳು ಹಾಗೂ ಗ್ರಾಫಿಟಿ ಕಲೆಗಳನ್ನು ಸ್ವಚ್ಛತಾ ಸಂದೇಶಗಳ ಪ್ರಚಾರಕ್ಕೆ ಬಳಸಲಾಯಿತು. ಇಂತಹ ಮಾಧ್ಯಮಗಳ ಪ್ರಾಮುಖ್ಯತೆಯು ಕೇವಲ ಸಂದೇಶಗಳ ದೃಶ್ಯ ಲಭ್ಯತೆಯಲ್ಲಷ್ಟೇ ಇರದೆ, ಸ್ವಚ್ಛತೆಯನ್ನು ಜನರ ದೈನಂದಿನ ಸಾಮಾಜಿಕ ವಾತಾವರಣದ ಭಾಗವಾಗಿಸಿದ ರೀತಿಯಲ್ಲಿದೆ. ಸಮುದಾಯ ಕಾರ್ಯಕ್ರಮ, ಬೀದಿ ಪ್ರದರ್ಶನ ಅಥವಾ ಸಾರ್ವಜನಿಕ ಸಮಾರಂಭಗಳಲ್ಲಿ ಎದುರಾಗುವ ನೈರ್ಮಲ್ಯದ ಸಂದೇಶವು, ಕುಟುಂಬಗಳು ಮತ್ತು ಸ್ಥಳೀಯ ಗುಂಪುಗಳಲ್ಲಿ ನಡೆಯುವ ಸಂವಾದಗಳನ್ನು ಇನ್ನಷ್ಟು ಬಲಪಡಿಸುತ್ತದೆ.
ಎಸ್ ಬಿಎಂ-ಯು ಅಡಿಯಲ್ಲಿ ಡಿಜಿಟಲ್ ವೇದಿಕೆಗಳ ಬಳಕೆ
ಸ್ವಚ್ಛ ಭಾರತ್ ಮಿಷನ್-ನಗರ (ಎಸ್ ಬಿಎಂ-ಯು) ಅಡಿಯಲ್ಲಿ ನಾಗರಿಕರನ್ನು ತಲುಪುವ ಪರಿಣಾಮಕಾರಿತ್ವವನ್ನು ಗರಿಷ್ಠಗೊಳಿಸಲು ಡಿಜಿಟಲ್ ಉಪಕರಣಗಳನ್ನು ಬಳಸಿಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಉದಾಹರಣೆಗೆ, 3300 ಕ್ಕೂ ಹೆಚ್ಚು ನಗರಗಳಲ್ಲಿನ 67000 ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳ ಸ್ಥಳಗಳನ್ನು ಗೂಗಲ್ ಮ್ಯಾಪ್ಸ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದು ಎಲ್ಲಾ ವರ್ಗದ ನಾಗರಿಕರಿಗೆ ನೈರ್ಮಲ್ಯ ಸೌಲಭ್ಯಗಳನ್ನು ಸುಲಭವಾಗಿ ತಲುಪಲು ನೆರವಾಗಿದೆ. 'ಸ್ವಚ್ಛತಾ ಆ್ಯಪ್' ನಾಗರಿಕರು ಸ್ವಚ್ಛತೆಗೆ ಸಂಬಂಧಿಸಿದ ಯಾವುದೇ ಕುಂದುಕೊರತೆಗಳು ಅಥವಾ ದೂರುಗಳನ್ನು ದಾಖಲಿಸಲು ಏಕೈಕ ಡಿಜಿಟಲ್ ವೇದಿಕೆಯನ್ನು ಒದಗಿಸಿದೆ.

ಚಿತ್ರ 5: ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಬ್ಬರಿಗೂ ಲಭ್ಯವಿರುವ 'ಸ್ವಚ್ಛತಾ ಆ್ಯಪ್'
ಸಮೂಹ ಮಾಧ್ಯಮಗಳ ಮೂಲಕ ನೈರ್ಮಲ್ಯದ ಬಲವರ್ಧನೆ
ಸಮೂಹ ಮಾಧ್ಯಮಗಳು ಜಾಗೃತಿ ಮತ್ತು ನಡವಳಿಕೆ ಬದಲಾವಣೆಯನ್ನು ಇನ್ನಷ್ಟು ಬಲಪಡಿಸಲು ಮತ್ತೊಂದು ಪ್ರಮುಖ ಸ್ತರವಾಗಿ ಕೆಲಸ ಮಾಡಿದವು. ಇವುಗಳಲ್ಲಿ ದೂರದರ್ಶನ, ರೇಡಿಯೋ, ಮುದ್ರಣ ಮಾಧ್ಯಮ ಮತ್ತು ಆನ್‌ಲೈನ್ ಮಾಧ್ಯಮಗಳು ಸೇರಿದ್ದವು. ಸಮುದಾಯ ರೇಡಿಯೋಗಳು ಸ್ವಚ್ಛತೆಗೆ ಸಂಬಂಧಿಸಿದ ಚರ್ಚೆಗಳು, ಅನುಭವದ ನುಡಿಗಳು, ಕಥೆಗಳು ಮತ್ತು ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಬಿತ್ತರಿಸಿದವು.
ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು ಪ್ರಮುಖ ಸಂದೇಶಗಳನ್ನು ತಲುಪಿಸಲು ಹಾಗೂ ಡಿಜಿಟಲ್ ಜಾಲಬಂಧಗಳು ಮತ್ತು ಸಮುದಾಯಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಮೊಬೈಲ್ ದೂರವಾಣಿ ಸೇವೆಗಳು ಬಲ್ಕ್ ಎಸ್‌ಎಮ್‌ಎಸ್, ವಾಟ್ಸಾಪ್ ಮತ್ತು ಪಾಡ್‌ಕಾಸ್ಟ್‌ಗಳ ಮೂಲಕ ಸಾರ್ವಜನಿಕರಲ್ಲಿ ನೈರ್ಮಲ್ಯ ಜಾಗೃತಿ ಮೂಡಿಸಲು ಬೆಂಬಲ ನೀಡಿದವು.

ಚಿತ್ರ 6: ಎಸ್‌ಎಚ್‌ಎಸ್ 2026 (ಸ್ವಚ್ಛತಾ ಹಿ ಸೇವಾ 2026) ಅಭಿಯಾನಕ್ಕೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮದ ಪೋಸ್ಟ್
ಸ್ವಚ್ಛ ಟಾಕ್ಸ್: ಡಿಜಿಟಲ್ ತೊಡಗಿಸಿಕೊಳ್ಳುವಿಕೆ ಮತ್ತು ನಡವಳಿಕೆ ಬದಲಾವಣೆಯ ಪಯಣ
'ಸ್ವಚ್ಛ ಟಾಕ್ಸ್' ಸ್ವಚ್ಛ ಭಾರತ್ ಮಿಷನ್-ನಗರ ಅಡಿಯಲ್ಲಿ ಡಿಜಿಟಲ್ ಸಕ್ರಿಯ ಭಾಗವಹಿಸುವಿಕೆಗೆ ಉತ್ತಮ ಉದಾಹರಣೆಯಾಗಿದೆ. ಇದು ಸ್ವಚ್ಛತೆಗೆ ಸಂಬಂಧಿಸಿದ ತಳಮಟ್ಟದ ಅನುಭವಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ರೂಪಿಸಲಾದ ಪರಸ್ಪರ ಕಲಿಕೆಯ ವೆಬಿನಾರ್ ಸರಣಿಯಾಗಿದೆ. ಇಂತಹ ವೇದಿಕೆಗಳು ಸಂವಹನವನ್ನು ಕೇವಲ ಸಾಂಪ್ರದಾಯಿಕ ನೈರ್ಮಲ್ಯಕ್ಕೆ ಸೀಮಿತಗೊಳಿಸದೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಚಕ್ರೀಯ ಅರ್ಥವ್ಯವಸ್ಥೆಯ ಪ್ರೋತ್ಸಾಹದಂತಹ ಪ್ರಮುಖ ವಿಷಯಗಳಿಗೂ ವಿಸ್ತರಿಸುತ್ತವೆ.
ವ್ಯಕ್ತಿಗತ ಸಂವಹನದಿಂದ ಮುದಾಯ ಸಂಘಟನೆಯತ್ತ ಸಾಗುವುದು ನಡವಳಿಕೆ ಬದಲಾವಣೆಯ ಮೂಲ ಘಟಕದಲ್ಲಾದ ಪ್ರಮುಖ ಸ್ಥಿತ್ಯಂತರವನ್ನು ಪ್ರತಿನಿಧಿಸುತ್ತದೆ. ಎಸ್ ಬಿಎಂ ಅಡಿಯಲ್ಲಿನ ಎಸ್‌ಬಿಸಿಸಿ ಕಾರ್ಯತಂತ್ರಕ್ಕೆ ಈ ಪ್ರಗತಿಯು ಅತ್ಯಂತ ಮುಖ್ಯವಾದುದಾಗಿದೆ. ಒಂದು ಸಂದೇಶವು ಒಬ್ಬ ವ್ಯಕ್ತಿಯನ್ನು ತಲುಪಿದ ತಕ್ಷಣ ಸಂವಹನ ಮುಗಿಯುವುದಿಲ್ಲ. ಜನರು ಅದನ್ನು ಚರ್ಚಿಸಿದಾಗ, ತಮ್ಮ ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಅಳವಡಿಸಿಕೊಂಡಾಗ ಮತ್ತು ಸಾಮೂಹಿಕ ಚಟುವಟಿಕೆಯಲ್ಲಿ ಭಾಗವಹಿಸಿದಾಗ ಮಾತ್ರ ಸಂವಹನವು ಹೆಚ್ಚಿನ ಅರ್ಥವನ್ನು ಪಡೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯೇ ಸ್ವತಃ ಸಂವಹನದ ಒಂದು ಶಕ್ತಿಯುತ ರೂಪವಾಗುತ್ತದೆ.

ಎಸ್‌ಬಿಸಿಸಿ ಗಾಗಿ ಪ್ರಸಿದ್ಧ ವ್ಯಕ್ತಿಗಳ ಬೆಂಬಲ ಮತ್ತು ಜನಪ್ರಿಯ ಸಂಸ್ಕೃತಿ

ಸ್ವಚ್ಛ ಭಾರತ ಮಿಷನ್ ತನ್ನ ಎಸ್‌ಬಿಸಿಸಿ ಪ್ರಯತ್ನಗಳನ್ನು ಬಲಪಡಿಸಲು ಪ್ರಸಿದ್ಧ ವ್ಯಕ್ತಿಗಳ ಜನಪ್ರಿಯತೆಯನ್ನು ಬಳಸಿಕೊಂಡಿತು. 2016 ರಲ್ಲಿ, ಅಮಿತಾಭ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್ ಅವರು ಎಸ್ ಬಿಎಂ-ಜಿ ಗಾಗಿ ರಾಷ್ಟ್ರೀಯ ಶ್ರಾವ್ಯ-ದೃಶ್ಯ (ಆಡಿಯೋ-ವಿಷುಯಲ್) ಅಭಿಯಾನಗಳಲ್ಲಿ ಕಾಣಿಸಿಕೊಂಡರು. ಈ ಅಭಿಯಾನಗಳನ್ನು ಸಂವಹನವನ್ನು ಹೆಚ್ಚು ಜನಕೇಂದ್ರಿತವಾಗಿಸಲು ಮತ್ತು ನಡವಳಿಕೆ ಬದಲಾವಣೆ ಹಾಗೂ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿತ್ತು. ಇಬ್ಬರೂ ತಳಮಟ್ಟದ ಕಾರ್ಯಕರ್ತರು ಮತ್ತು ನೈರ್ಮಲ್ಯ ಸೇವಕರನ್ನು ಪ್ರೋತ್ಸಾಹಿಸಲು ಸ್ವಚ್ಛ ಭಾರತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅಮಿತಾಭ್ ಬಚ್ಚನ್ ಅವರು ತರುವಾಯ ೨೦೧೭ ರಲ್ಲಿ 'ದರ್ವಾಜಾ ಬಂದ್' ಅಭಿಯಾನದ ನೇತೃತ್ವ ವಹಿಸಿದರು. ಈ ಅಭಿಯಾನವು ಶೌಚಾಲಯಗಳನ್ನು ಹೊಂದಿದ್ದರೂ ಬಹಿರಂಗ ಶೌಚವನ್ನು ಮುಂದುವರಿಸುತ್ತಿದ್ದ ಜನರಲ್ಲಿ ಶೌಚಾಲಯ ಬಳಕೆಯನ್ನು ಉತ್ತೇಜಿಸಿತು. ಇದರಲ್ಲಿ ಅನುಷ್ಕಾ ಶರ್ಮಾ ಕೂಡ ಕಾಣಿಸಿಕೊಂಡಿದ್ದು, ಗ್ರಾಮಗಳಲ್ಲಿ ನೈರ್ಮಲ್ಯ ಸವಾಲುಗಳನ್ನು ಎದುರಿಸುವಲ್ಲಿ ಮಹಿಳೆಯರು ನಾಯಕತ್ವ ವಹಿಸಲು ಪ್ರೇರೇಪಿಸಿದರು. ಈ ಅಭಿಯಾನವು ಸ್ವಚ್ಛಾಗ್ರಹಿಗಳ ತಳಮಟ್ಟದ IEC ಮತ್ತು ವ್ಯಕ್ತಿಗತ ಸಂವಹನಕ್ಕೆ ಪೂರಕವಾಗಿ ಸಮೂಹ ಮಾಧ್ಯಮಗಳನ್ನು ಬಳಸಿಕೊಂಡಿತು.
ಚಲನಚಿತ್ರ ರಂಗವೂ ನೈರ್ಮಲ್ಯಕ್ಕೆ ಸಂಬಂಧಿಸಿದ ಸಾಮಾಜಿಕ ನಿಯಮಗಳನ್ನು ಸರಿಪಡಿಸುವ ವಾಹಕವಾಯಿತು. ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೇಕರ್ ಅಭಿನಯದ 'ಟಾಯ್ಲೆಟ್ - ಏಕ್ ಪ್ರೇಮ್ ಕಥಾ' ಚಿತ್ರವು ನೈರ್ಮಲ್ಯ ಮತ್ತು ಶೌಚಾಲಯ ಬಳಕೆಯನ್ನು ಮುಖ್ಯವಾಹಿನಿಯ ಜನಪ್ರಿಯ ಸಂಸ್ಕೃತಿಗೆ ತಂದಿತು. 2018 ರಲ್ಲಿ, ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೇಕರ್ ಟ್ವಿನ್-ಪಿಟ್ (ಅವಳಿ ಗುಂಡಿ) ಶೌಚಾಲಯ ತಂತ್ರಜ್ಞಾನವನ್ನು ಉತ್ತೇಜಿಸುವ ಎಸ್ ಬಿಎಂ-ಜಿ ಅಭಿಯಾನದಲ್ಲಿ ಕಾಣಿಸಿಕೊಂಡರು. ಈ ಚಿತ್ರವನ್ನು ರಾಜ್ಯ ಮತ್ತು ಜಿಲ್ಲಾ ಎಸ್ ಬಿಎಂ-ಜಿ ತಂಡಗಳು ಗ್ರಾಮಗಳಲ್ಲಿ ವಾಣಿಜ್ಯೇತರ ಪ್ರದರ್ಶನಗಳಿಗಾಗಿ ಲಭ್ಯಗೊಳಿಸಿದವು. ಈ ಅಭಿಯಾನವು ಶೌಚಾಲಯದ ಗುಂಡಿಗಳನ್ನು ಖಾಲಿ ಮಾಡುವ ಸುತ್ತಲಿನ ಸಾಮಾಜಿಕ ಕಳಂಕವನ್ನು ಹೋಗಲಾಡಿಸಲು ಮತ್ತು ನಿರಂತರ ಶೌಚಾಲಯ ಬಳಕೆಯನ್ನು ಪ್ರೋತ್ಸಾಹಿಸಲು ಪ್ರಸಿದ್ಧ ವ್ಯಕ್ತಿಗಳ ಪ್ರಭಾವವನ್ನು ಬಳಸಿಕೊಂಡಿತು. ವಿದ್ಯಾ ಬಾಲನ್ "ಜಹಾ ಸೋಚ್, ವಹಾ ಶೌಚಾಲಯ" ಎಂಬ ಘೋಷಣೆಯನ್ನು ಪ್ರಚಾರ ಮಾಡುವ ವೀಡಿಯೊದಲ್ಲಿ ಕಾಣಿಸಿಕೊಂಡರು. ಇದು ಶೌಚಾಲಯ ಬಳಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಒತ್ತು ನೀಡಿತು. ಇದು ಗ್ರಾಮೀಣ ಕುಟುಂಬಗಳಲ್ಲಿ ಮಹಿಳಾ ನೇತೃತ್ವದ ಶೌಚಾಲಯ ನಿರ್ಮಾಣ ಉಪಕ್ರಮಗಳನ್ನು ಪ್ರೋತ್ಸಾಹಿಸಿತು. ಹೀಗಾಗಿ, ಜನಪ್ರಿಯ ಮಾಧ್ಯಮಗಳು ಎಸ್‌ಬಿಸಿಸಿ ಯ ಹೆಚ್ಚುವರಿ ಸ್ತರವಾಗಿ ಕಾರ್ಯನಿರ್ವಹಿಸಿ, ನೈರ್ಮಲ್ಯ ಸಂದೇಶಗಳನ್ನು ಸರ್ಕಾರಿ ಅಭಿಯಾನಗಳಿಂದ ಕಿರುತೆರೆ, ಹಿರಿತೆರೆ ಮತ್ತು ಸಾರ್ವಜನಿಕ ಚರ್ಚೆಗಳಿಗೆ ಕೊಂಡೊಯ್ದವು.
ಮಹಿಳೆಯರು ಮತ್ತು ಮಕ್ಕಳು: ಸ್ವಚ್ಛತೆಯ ರೂಪಿಸುವಿಕೆ ಮತ್ತು ಅನುಭವಿಸುವಿಕೆ
ನೈರ್ಮಲ್ಯವು ದೈನಂದಿನ ಅನುಭವಗಳನ್ನು ಪರಿವರ್ತಿಸುವುದರ ಜೊತೆಗೆ ಭಾಗವಹಿಸುವಿಕೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಮಹಿಳೆಯರಿಗೆ, 'ಸುರಕ್ಷಾ', 'ಸುವಿಧಾ' ಮತ್ತು 'ಸ್ವಾಭಿಮಾನ' - ಈ ಮೂರು ಪರಿಕಲ್ಪನೆಗಳು ಈ ಬದಲಾವಣೆಯ ಮುಖ್ಯ ಆಯಾಮಗಳನ್ನು ಬಿಂಬಿಸುತ್ತವೆ. ಭದ್ರತೆ, ಸೌಕರ್ಯ ಮತ್ತು ಆತ್ಮಗೌರವಗಳು ನೈರ್ಮಲ್ಯವನ್ನು ಮಹಿಳೆಯರ ದೈನಂದಿನ ಜೀವನದೊಂದಿಗೆ ಜೋಡಿಸುತ್ತವೆ. ಈ ಪ್ರಭಾವವು ಮಹಿಳೆಯರು ಹಂಚಿಕೊಂಡ ಅನುಭವಗಳಲ್ಲಿ ವ್ಯಕ್ತವಾಗಿದೆ. ಜಲಶಕ್ತಿ ಸಚಿವಾಲಯದ ಸಹಯೋಗದೊಂದಿಗೆ ನಡೆಸಿದ ಅಧ್ಯಯನವೊಂದರಲ್ಲಿ, ಶೌಚಕ್ಕೆ ಹೋದಾಗ ಶೇಕಡಾ ೯೩ ರಷ್ಟು ಮಹಿಳೆಯರಿಗೆ ಯಾರಾದರೂ ಹಾನಿ ಮಾಡಬಹುದು ಅಥವಾ ಪ್ರಾಣಿಗಳಿಂದ ತೊಂದರೆಯಾಗಬಹುದು ಎಂಬ ಭಯ ಉಳಿದಿಲ್ಲ ಎಂದು ತಿಳಿದುಬಂದಿದೆ. ಶೇಕಡಾ 91 ರಷ್ಟು ಮಹಿಳೆಯರು ಪ್ರತಿದಿನ ಒಂದು ಗಂಟೆಯವರೆಗೆ ಸಮಯ ಉಳಿತಾಯವಾಗುತ್ತಿದೆ ಮತ್ತು ಒಂದು ಕಿಲೋಮೀಟರ್‌ವರೆಗಿನ ಪ್ರಯಾಣ ತಪ್ಪಿದೆ ಎಂದು ತಿಳಿಸಿದ್ದಾರೆ. ಶೇಕಡಾ 63 ರಷ್ಟು ಮಹಿಳೆಯರು ನೈರ್ಮಲ್ಯ ಅಗತ್ಯಗಳನ್ನು ನಿರ್ವಹಿಸಲು ಆಹಾರ ಅಥವಾ ನೀರಿನ ಸೇವನೆಯನ್ನು ಸೀಮಿತಗೊಳಿಸುವುದನ್ನು ನಿಲ್ಲಿಸಿದ್ದಾರೆ ಎಂದು ವರದಿ ಮಾಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಬಿಹಾರದಲ್ಲಿ ಜನರು ಶೌಚಾಲಯಗಳನ್ನು ಮಹಿಳೆಯರ ಘನತೆಯೊಂದಿಗೆ ಜೋಡಿಸಿ 'ಇಜ್ಜತ್‌ಘರ್' (ಗೌರವದ ಮನೆ) ಎಂದು ಕರೆಯಲು ಪ್ರಾರಂಭಿಸಿದ್ದಾರೆ. ಹೀಗೆ ಶೌಚಾಲಯಗಳ ನಿರ್ಮಾಣವು ಪ್ರಮುಖ ಸಾಮಾಜಿಕ ಅಸಮಾನತೆಯನ್ನು ಸರಿಪಡಿಸಲು ನೆರವಾಗಿದೆ. ಇದು ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಕಾರಣವಾಗುತ್ತಿದೆ. ಸಮುದಾಯದ ಮುಂಚೂಣಿ ಕಾರ್ಯಕರ್ತರಾಗಿ ಮಹಿಳೆಯರು ನೈರ್ಮಲ್ಯಕ್ಕೆ ಕೊಡುಗೆ ನೀಡಿದ್ದಾರೆ. ನೈರ್ಮಲ್ಯ ಸಂವಹನ ನಡೆಸಲು ಮಹಿಳಾ ಸಂಘಗಳು ಮತ್ತು ಸ್ವಸಹಾಯ ಸಂಘಗಳು ) ಸಮುದಾಯ ಜಾಲಬಂಧಗಳ ಭಾಗವಾಗಿವೆ. ಇದು ನೈರ್ಮಲ್ಯ ಸಂವಹನವನ್ನು ಚಾಲ್ತಿಯಲ್ಲಿರುವ ಸಮುದಾಯ ಸಂಸ್ಥೆಗಳು ಮತ್ತು ಜಾಲಬಂಧಗಳೊಂದಿಗೆ ಜೋಡಿಸುತ್ತದೆ.

ಚಿತ್ರ 8: ಶಾಲೆಗಳಲ್ಲಿ ಮಕ್ಕಳಿಗೆ ಸ್ವಚ್ಛತೆಯ ಕುರಿತು ಶಿಕ್ಷಣ ನೀಡುತ್ತಿರುವುದು
ನೈರ್ಮಲ್ಯ ಸಂವಹನದಲ್ಲಿ ಮಕ್ಕಳ ಪಾತ್ರ ಮತ್ತು ಪ್ರಶಸ್ತಿ-ಪುರಸ್ಕಾರಗಳ ಮೂಲಕ ಸ್ವಚ್ಛತಾ ನಡವಳಿಕೆಯ ಬಲವರ್ಧನೆ
ಮಕ್ಕಳು ನೈರ್ಮಲ್ಯ ಸಂವಹನ ಮತ್ತು ದೈನಂದಿನ ನಡವಳಿಕೆಯ ನಡುವೆ ಮತ್ತೊಂದು ಪ್ರಮುಖ ಕೊಂಡಿಯಾಗಿದ್ದಾರೆ. ಶಾಲೆಗಳು ನೈರ್ಮಲ್ಯ ಅಭ್ಯಾಸಗಳನ್ನು ಚರ್ಚಿಸುವ, ಪ್ರದರ್ಶಿಸುವ ಮತ್ತು ಬಲಪಡಿಸುವ ಕೇಂದ್ರಗಳಾಗಬಹುದು. ಎಸ್ ಬಿಎಂ ವಿದ್ಯಾರ್ಥಿಗಳನ್ನು ಸಕ್ರಿಯ ಭಾಗವಹಿದಾರರು ಮತ್ತು 'ಬದಲಾವಣೆಯ ಹರಿಕಾರರು' ಎಂದು ಗುರುತಿಸುತ್ತದೆ. ಎಸ್ ಬಿಎಂ ಪಠ್ಯಕ್ರಮದಲ್ಲಿ ನೈರ್ಮಲ್ಯದ ವಿಷಯಗಳನ್ನು ಸಂಯೋಜಿಸುವುದು, ಜಾಗೃತಿ ಅಭಿಯಾನಗಳು, ಶ್ರಮದಾನ, ಸಂಚಾರಿ ವಾಹನಗಳ ಮೂಲಕ ಶಿಕ್ಷಣ ಹಾಗೂ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಶಾಲಾ ಪ್ರವಾಸಗಳನ್ನು ಒಳಗೊಂಡ ಶಾಲಾ-ಆಧಾರಿತ ವಿಧಾನಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಕಲಿಕೆಯನ್ನು ಭಾಗವಹಿಸುವಿಕೆ ಮತ್ತು ಮನರಂಜನೆಯೊಂದಿಗೆ ಸಂಯೋಜಿಸುವ ಮಾಧ್ಯಮಗಳ ಮೂಲಕ ನೈರ್ಮಲ್ಯ ಸಂವಹನವು ಮಕ್ಕಳನ್ನು ತಲುಪಿದೆ. ಇವುಗಳಲ್ಲಿ ಶೈಕ್ಷಣಿಕ ವೀಡಿಯೊಗಳು, ಫ್ಲಿಪ್‌ಚಾರ್ಟ್‌ಗಳು ಮತ್ತು ಸಣ್ಣ ಗುಂಪುಗಳ ತೊಡಗಿಸಿಕೊಳ್ಳುವಿಕೆಗೆ ಅಗತ್ಯವಾದ ಇತರ ಸಾಮಗ್ರಿಗಳು ಸೇರಿವೆ. ನೈರ್ಮಲ್ಯ ಸಂದೇಶಗಳನ್ನು ತಲುಪಿಸಲು ಬೊಂಬೆಯಾಟ, ಜಾದು ಪ್ರದರ್ಶನ, ರಂಗನಾಟಕಗಳು ಮತ್ತು ಬೀದಿ ನಾಟಕಗಳಂತಹ ಸ್ಥಳೀಯ ಮತ್ತು ಸಾಂಪ್ರದಾಯಿಕ ಮಾಧ್ಯಮ ರೂಪಗಳನ್ನು ಸಹ ಬಳಸಿಕೊಳ್ಳಲಾಗಿದೆ.
ಒಟ್ಟಾರೆಯಾಗಿ, ಮಹಿಳೆಯರು ಮತ್ತು ಮಕ್ಕಳು ನೈರ್ಮಲ್ಯ ನಡವಳಿಕೆಯ ಬದಲಾವಣೆಯ ದ್ವಿಮುಖ ಸ್ವರೂಪವನ್ನು ಬಿಂಬಿಸುತ್ತಾರೆ. ಅವರು ಸುಧಾರಿತ ಸ್ವಚ್ಛತೆಯ ಪ್ರಯೋಜನಗಳನ್ನು ಅನುಭವಿಸುವುದರ ಜೊತೆಗೆ, ಕುಟುಂಬಗಳು, ಶಾಲೆಗಳು ಮತ್ತು ಸಮುದಾಯಗಳಾದ್ಯಂತ ಅದರ ಪ್ರಸಾರಕ್ಕೆ ಕೊಡುಗೆ ನೀಡುತ್ತಾರೆ. ಮಹಿಳಾ ಸಂಘಗಳು ಸಮುದಾಯ ಜಾಲಬಂಧಗಳನ್ನು ಬಲಪಡಿಸಿದರೆ, ಮಕ್ಕಳು ಸ್ವಚ್ಛತಾ ಸಂದೇಶಗಳನ್ನು ಮನೆ-ಮನೆಗೆ ಮತ್ತು ದೈನಂದಿನ ಸಂವಾದಗಳಿಗೆ ಒಯ್ಯುತ್ತಾರೆ. ಆದ್ದರಿಂದ ಸ್ವಚ್ಛತೆಯು ಕೇವಲ ಮೂಲಸೌಕರ್ಯ ಅಥವಾ ವ್ಯಕ್ತಿಗತ ಅಭ್ಯಾಸದ ವಿಷಯವಾಗಿ ಉಳಿಯದೆ, ಪೀಳಿಗೆಯಿಂದ ಪೀಳಿಗೆಗೆ ಕಾಯ್ದುಕೊಂಡು ಹೋಗುವ ಸಾಮುದಾಯಿಕ ಸಂಸ್ಕೃತಿಯಾಗುತ್ತದೆ.
ಪ್ರಶಸ್ತಿಗಳು ಮತ್ತು ಪುರಸ್ಕಾರಗಳ ಮೂಲಕ ಅಪೇಕ್ಷಿತ ಸ್ವಚ್ಛತಾ ನಡವಳಿಕೆಯ ಬಲವರ್ಧನೆ
ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಆರಂಭಿಕ ಜಾಗೃತಿ ಮತ್ತು ಸಮುದಾಯ ಸಂಘಟನೆಯನ್ನೂ ಮೀರಿದ ನಿರಂತರ ಬಲವರ್ಧನೆಯ ಅಗತ್ಯವಿದೆ. ಎಸ್ ಬಿಎಂ ನ ವಿಧಾನವು ಪ್ರಮಾಣೀಕರಣ, ಪುರಸ್ಕಾರಗಳು, ಪ್ರೇರಣೆಗಳು ಮತ್ತು ಸಾಮುದಾಯಿಕ ಪ್ರೋತ್ಸಾಹಕಗಳನ್ನು ಸಂಯೋಜಿಸುತ್ತದೆ. ಈ ವ್ಯವಸ್ಥೆಗಳು ಸಾರ್ವಜನಿಕ ಭಾಗವಹಿಸುವಿಕೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲು ಮತ್ತು ಅಪೇಕ್ಷಿತ ನೈರ್ಮಲ್ಯ ಅಭ್ಯಾಸಗಳ ನಿರಂತರ ಅಳವಡಿಕೆಯನ್ನು ಪ್ರೋತ್ಸಾಹಿಸಲು ನೆರವಾಗುತ್ತವೆ.
ನಗರಗಳು ಮತ್ತು ಗ್ರಾಮಗಳಿಗೆ ನೀಡಲಾಗುವ ಪ್ರಮಾಣೀಕರಣ ಪ್ರೋಟೋಕಾಲ್‌ಗಳು ನೈರ್ಮಲ್ಯ ಮತ್ತು ಸ್ವಚ್ಛತೆಯ ಫಲಿತಾಂಶಗಳಿಗೆ ಅಳೆಯಬಹುದಾದ ಮಾನದಂಡಗಳನ್ನು ಒದಗಿಸುತ್ತವೆ. ಎಸ್ ಬಿಎಂ ಅಡಿಯಲ್ಲಿ, ಒಡಿಎಫ್, ಒಡಿಎಫ್+, ಒಡಿಎಫ್++, ವಾಟರ್+ ಮತ್ತು ಸ್ಟಾರ್ ರೇಟಿಂಗ್ ಪ್ರೋಟೋಕಾಲ್‌ಗಳು ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ಈ ಫಲಿತಾಂಶಗಳನ್ನು ಪ್ರಮಾಣೀಕರಿಸಲು ನೆರವಾದವು.

ಪ್ರಶಸ್ತಿಗಳು ಮತ್ತು ಪುರಸ್ಕಾರಗಳ ಮೂಲಕ ಸಾಮುದಾಯಿಕ ಭಾಗವಹಿಸುವಿಕೆಯ ಬಲವರ್ಧನೆ
ಸಾಮುದಾಯಿಕ ಹಂತದಲ್ಲಿ ಧನಾತ್ಮಕ ನಡವಳಿಕೆಗಳನ್ನು ಸಾರ್ವಜನಿಕವಾಗಿ ಗುರುತಿಸುವ ಮೂಲಕ ಪ್ರಶಸ್ತಿ ಮತ್ತು ಪುರಸ್ಕಾರಗಳು ಸಾರ್ವಜನಿಕ ಭಾಗವಹಿಸುವಿಕೆಯನ್ನು ಮತ್ತಷ್ಟು ಬಲಪಡಿಸುತ್ತವೆ. ಸ್ವಚ್ಛ ಭಾರತ್ ಮಿಷನ್ (ಎಸ್ ಬಿಎಂ) ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಕಾರ್ಯಕರ್ತರು, ಸಮುದಾಯದ ನಾಯಕರು ಮತ್ತು ತಳಮಟ್ಟದ ಸ್ವಚ್ಛತಾ ಚಾಂಪಿಯನ್‌ಗಳನ್ನು ಸಾರ್ವಜನಿಕ ಸನ್ಮಾನಗಳ ಮೂಲಕ ಹಾಗೂ ಸರ್ಕಾರದಿಂದ ನೀಡಲಾಗುವ ಶ್ಲಾಘನಾ ಪತ್ರಗಳ ಮೂಲಕ ಗೌರವಿಸುತ್ತದೆ.
ಈ ರೀತಿ ಗೌರವಿಸುವುದು ಇತರರೂ ಇದನ್ನು ಅನುಕರಿಸಲು ಮತ್ತು ಪ್ರೇರೇಪಿತರಾಗಲು ಮಾದರಿ ಉದಾಹರಣೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ, ಈ ವಿಧಾನವು ವ್ಯಕ್ತಿಯ ವೈಯಕ್ತಿಕ ಕೊಡುಗೆಯನ್ನು ಸಾಮುದಾಯಿಕ ಗುರುತು ಮತ್ತು ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ನೇರವಾಗಿ ಜೋಡಿಸುತ್ತದೆ.

ಚಿತ್ರ 9: "ಪಾಲಿಥೀನ್ ಕೊಡಿ, ಚಿನ್ನ ಗೆಲ್ಲಿ" ಅಭಿಯಾನದ ವಿಜೇತರು
ಸ್ಥಳೀಯ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯ ನಿರ್ದಿಷ್ಟ ಸವಾಲುಗಳನ್ನು ಎದುರಿಸಲು ಪ್ರೋತ್ಸಾಹಕಗಳನ್ನು ಸಹ ರೂಪಿಸಬಹುದು. 'ಸ್ವಚ್ಛತಾ ಕ್ರಾನಿಕಲ್ಸ್' ಜಮ್ಮು ಮತ್ತು ಕಾಶ್ಮೀರದ ಪಂಚಾಯತ್ ಹಲ್ಕಾ ಹಿಲ್ಲರ್‌ನ ಉದಾಹರಣೆಯನ್ನು ದಾಖಲಿಸಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲು ಸಮುದಾಯಗಳನ್ನು ಪ್ರೇರೇಪಿಸಲು ಈ ಉಪಕ್ರಮವು "ಪಾಲಿಥೀನ್ ಕೊಡಿ, ಚಿನ್ನ ಗೆಲ್ಲಿ" ಎಂಬ ಯೋಜನೆಯನ್ನು ಪರಿಚಯಿಸಿತು. ಸ್ಥಳೀಯ ಪ್ರದೇಶಗಳನ್ನು ಪಾಲಿಥೀನ್ ತ್ಯಾಜ್ಯದಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಿದ್ದ ಈ ಅಭಿಯಾನಕ್ಕೆ ಯುವಕರು ಮತ್ತು ಮಹಿಳೆಯರು ಬೆಂಬಲ ನೀಡಿದರು. ಸಂಗ್ರಹಿಸಿದ ನಿರ್ದಿಷ್ಟ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಪ್ರತಿಯಾಗಿ ಎರಡು ಚಿನ್ನದ ನಾಣ್ಯಗಳನ್ನು ನೀಡಲಾಯಿತು. ಈ ಉಪಕ್ರಮವು ಅರಿವು, ಸಾಮುದಾಯಿಕ ಭಾಗವಹಿಸುವಿಕೆ ಮತ್ತು ಕಾರ್ಯಪ್ರವೃತ್ತರಾಗಲು ಪ್ರೋತ್ಸಾಹಕವನ್ನು ಸಂಯೋಜಿಸಿತು. ಈ ಅಭಿಯಾನವು ಕುಟುಂಬಗಳಿಗೆ ಬಟ್ಟೆಯ ಚೀಲಗಳನ್ನು ವಿತರಿಸುವುದು ಮತ್ತು ಸಾಮುದಾಯಿಕ ಶ್ರಮದಾನ ಅಭಿಯಾನಗಳನ್ನು ಸಹ ಒಳಗೊಂಡಿತ್ತು.
ಹೀಗಾಗಿ, ಸ್ವಚ್ಛತೆಯ ಅಡಿಯಲ್ಲಿನ ಬಲವರ್ಧನೆಯು ಹಲವು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ: ಪ್ರೋಟೋಕಾಲ್‌ಗಳು ಮಾನದಂಡಗಳನ್ನು ಸ್ಥಾಪಿಸುತ್ತವೆ, ಪ್ರೇರಣೆಗಳು ಅಪೇಕ್ಷಿತ ಕಾರ್ಯಗಳನ್ನು ಉತ್ತೇಜಿಸುತ್ತವೆ, ಗುರುತಿಸುವಿಕೆಯು ನಿರಂತರ ಭಾಗವಹಿಸುವಿಕೆಯನ್ನು ಸಂಭ್ರಮಿಸುತ್ತದೆ ಮತ್ತು ಸಮುದಾಯ ಪ್ರೋತ್ಸಾಹಕಗಳು ಸ್ಥಳೀಯ ಮಾಲೀಕತ್ವವನ್ನು ಹೆಚ್ಚಿಸುತ್ತವೆ. ಈ ವ್ಯವಸ್ಥೆಗಳು ಸ್ವಚ್ಛತೆಯನ್ನು ಕೇವಲ ಅಭಿಯಾನ-ಚಾಲಿತ ಚಟುವಟಿಕೆಯಿಂದ ಸುಸ್ಥಿರ ನಡವಳಿಕಾ ಅಭ್ಯಾಸವನ್ನಾಗಿ ಪರಿವರ್ತಿಸಲು ನೆರವಾಗುತ್ತವೆ.
ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ನಡವಳಿಕೆಯ ಮೇಲ್ವಿಚಾರಣೆ
ಸ್ವಚ್ಛತೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲು ಪ್ರಗತಿಯನ್ನು ಮೌಲ್ಯಮಾಪನ ಮಾಡುವ ಮತ್ತು ಹೆಚ್ಚಿನ ಕ್ರಮಗಳ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸುವ ವ್ಯವಸ್ಥೆಗಳ ಅಗತ್ಯವಿದೆ. ಆದ್ದರಿಂದ, ಮೇಲ್ವಿಚಾರಣೆಯು ಕೇವಲ ಮೂಲಸೌಕರ್ಯಗಳನ್ನು ಅಳೆಯುವುದನ್ನು ಮೀರಿದೆ. ಇದು ನಾಗರಿಕರ ಭಾಗವಹಿಸುವಿಕೆ, ಸ್ಥಳೀಯ ಮೌಲ್ಯಮಾಪನ ಮತ್ತು ನಿರಂತರ ಸುಧಾರಣೆಗೆ ಅವಕಾಶಗಳನ್ನು ಸೃಷ್ಟಿಸುತ್ತದೆ.
'ಸ್ವಚ್ಛ ಸರ್ವೇಕ್ಷಣ್' ವಿಶ್ವದ ಅತಿದೊಡ್ಡ ನಗರ ನೈರ್ಮಲ್ಯ ಸಮೀಕ್ಷೆಯಾಗಿ ಹೊರಹೊಮ್ಮಿದೆ. ಇದು ನಗರಗಳು ಮತ್ತು ರಾಜ್ಯಗಳನ್ನು ನೈರ್ಮಲ್ಯ ಮತ್ತು ಸ್ವಚ್ಛತೆಯ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. ಈ ಸಮೀಕ್ಷೆಯು ಎಸ್ ಬಿಎಂ-U ಅಡಿಯಲ್ಲಿ ಒಂದು ಪ್ರಮುಖ ಆಡಳಿತಾತ್ಮಕ ಉಪಕರಣವಾಗಿಯೂ ಬೆಳೆದಿದೆ. ಸ್ವಚ್ಛ ಸರ್ವೇಕ್ಷಣ್ ನಗರಗಳು ಮತ್ತು ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸುವ ಮೂಲಕ ಪ್ರೇರಕಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಸ್ಥಳೀಯ ಆಡಳಿತಗಳು ತಮ್ಮ ನೈರ್ಮಲ್ಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರೋತ್ಸಾಹವನ್ನು ಸೃಷ್ಟಿಸುತ್ತದೆ. ಸಮೀಕ್ಷೆಯ ಮೂಲಕ ನಾಗರಿಕರ ಭಾಗವಹಿಸುವಿಕೆಯೂ ಗಣನೀಯವಾಗಿ ವಿಸ್ತರಿಸಿದೆ. ೨೦೧೬ ರ ಮೊದಲ ಹಂತದ ಸಮೀಕ್ಷೆಯಲ್ಲಿ ಸುಮಾರು ಒಂದು ಲಕ್ಷ ನಾಗರಿಕರು ಪ್ರತಿಕ್ರಿಯೆ ನೀಡಿದ್ದರು. ಇದು ೨೦೨೧ ರ ಆರನೇ ಹಂತದ ವೇಳೆಗೆ ಸುಮಾರು ಐದು ಕೋಟಿ ನಾಗರಿಕರಿಗೆ ಏರಿಕೆಯಾಯಿತು. ಆದ್ದರಿಂದ, ಈ ಸಮೀಕ್ಷೆಯು ಕೇವಲ ನೈರ್ಮಲ್ಯದ ಫಲಿತಾಂಶಗಳ ಮೌಲ್ಯಮಾಪನಕ್ಕಿಂತ ಮಿಗಿಲಾದುದನ್ನು ಒದಗಿಸುತ್ತದೆ. ಇದು ನಾಗರಿಕರು, ಸ್ಥಳೀಯ ಸರ್ಕಾರಗಳು ಮತ್ತು ನೈರ್ಮಲ್ಯ ವ್ಯವಸ್ಥೆಗಳ ನಡುವೆ ಒಂದು ರಚನಾತ್ಮಕ ಸಂಪರ್ಕ ಸೇತುವೆಯನ್ನು ಸೃಷ್ಟಿಸುತ್ತದೆ.
ಸಮುದಾಯದ ಹಂತದಲ್ಲಿಯೂ ಸಹ, ಮೇಲ್ವಿಚಾರಣೆಯು ನಡವಳಿಕೆ ಬದಲಾವಣೆಯ ಸುಸ್ಥಿರತೆಯನ್ನು ಬೆಂಬಲಿಸುತ್ತದೆ. ಎಸ್ ಬಿಎಂ-G ಮಾರ್ಗಸೂಚಿಗಳು ಒಡಿಎಫ್ ಘೋಷಣೆಯ ನಂತರವೂ ನಿಗ್ರಾಣಿ ಸಮಿತಿಗಳು, ಸಮುದಾಯದ ನಾಯಕರು ಮತ್ತು ಪಂಚಾಯತ್ ಪ್ರತಿನಿಧಿಗಳ ಮೂಲಕ ನಿರಂತರ ತೊಡಗಿಸಿಕೊಳ್ಳುವಿಕೆಗೆ ಅವಕಾಶ ನೀಡುತ್ತವೆ.
ಸ್ವಚ್ಛತೆಯ ನಿರಂತರ ಪಯಣ
ಸ್ವಚ್ಛ ಭಾರತ್ ಮಿಷನ್‌ನ (ಎಸ್‌ಬಿಎಂ) ಪಯಣವು ನೈರ್ಮಲ್ಯ ಅಭ್ಯಾಸಗಳು ಮತ್ತು ಸಂವಹನ ವಿಧಾನಗಳೆರಡರಲ್ಲೂ ಆದ ಪ್ರಗತಿಪರ ವಿಕಸನವನ್ನು ಬಿಂಬಿಸುತ್ತದೆ. ಆರಂಭಿಕ ಆದ್ಯತೆಯು ಅರಿವು ಮೂಡಿಸುವುದು ಮತ್ತು ಗೃಹ ಶೌಚಾಲಯಗಳಿಗೆ ಬೇಡಿಕೆಯನ್ನು ಸೃಷ್ಟಿಸುವುದಾಗಿತ್ತು, ನಂತರದ ಶ್ರಮವು ಅವುಗಳ ನಿರಂತರ ಬಳಕೆ ಮತ್ತು ಬಹಿರಂಗ ಶೌಚ ನಿರ್ಮೂಲನೆಯನ್ನು ಉತ್ತೇಜಿಸುವುದಾಗಿತ್ತು. ಈ ಸಾಧನೆಗಳು ಸ್ಥಿರಗೊಂಡಂತೆ, ಒಡಿಎಫ್ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ಬಲಪಡಿಸುವುದರತ್ತ ಗಮನ ವಿಸ್ತರಿಸಿತು. ಸಂವಹನವು ಈ ಆದ್ಯತೆಗಳ ಜೊತೆಗೆ ವಿಕಸನಗೊಂಡಿದ್ದು, ಅರಿವು ಮೂಡಿಸುವುದರಿಂದ ಹಿಡಿದು ಆಳವಾದ ತೊಡಗಿಸಿಕೊಳ್ಳುವಿಕೆ ಮತ್ತು ಸಾಮೂಹಿಕ ಭಾಗವಹಿಸುವಿಕೆಯತ್ತ ಸಾಗಿದೆ.
ಒಟ್ಟಾರೆಯಾಗಿ, ಈ ಅನುಭವಗಳು ಒಂದು ಸುಸಂಗತವಾದ ಪಯಣವನ್ನು ನಿರೂಪಿಸುತ್ತವೆ: ಮಾಹಿತಿಯಿಂದ ತೊಡಗಿಸಿಕೊಳ್ಳುವಿಕೆಯತ್ತ, ತೊಡಗಿಸಿಕೊಳ್ಳುವಿಕೆಯಿಂದ ಭಾಗವಹಿಸುವಿಕೆಯತ್ತ, ಮತ್ತು ಭಾಗವಹಿಸುವಿಕೆಯಿಂದ ಸುಸ್ಥಿರ ಸಾಮುದಾಯಿಕ ಮಾಲೀಕತ್ವದತ್ತ. ಪರಿಣಾಮವಾಗಿ ಎಸ್ ಬಿಎಂ ಅಡಿಯಲ್ಲಿ, ಸಂವಹನವು ನೈರ್ಮಲ್ಯ ಪರಿಸರ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ, ಇದು ಜನರನ್ನು ಮೂಲಸೌಕರ್ಯಗಳು, ಸಂಸ್ಥೆಗಳು ಮತ್ತು ಸಾಮೂಹಿಕ ಚಟುವಟಿಕೆಗಳೊಂದಿಗೆ ಜೋಡಿಸುತ್ತದೆ. ಇದರ ವಿಶಾಲ ಉದ್ದೇಶವು ಕೇವಲ ಸ್ವಚ್ಛತೆಯ ಸಂದೇಶವನ್ನು ಸಂವಹನ ಮಾಡುವುದಷ್ಟೇ ಅಲ್ಲ, ಬದಲಿಗೆ ಅದನ್ನು ದೈನಂದಿನ ಸಾಮುದಾಯಿಕ ಜೀವನದಲ್ಲಿ ಬೆರೆತ ಸುಸ್ಥಿರ ಅಭ್ಯಾಸವನ್ನಾಗಿ ಪೋಷಿಸುವುದಾಗಿದೆ.
References
Ministry of Jal Shakti
https://swachhbharatmission.ddws.gov.in/
https://www.youtube.com/watch?v=5PUCdLSN0dY
https://sbmurban.org/swachh-bharat-mission-progress
https://sbm.gov.in/sbmgdashboard/statesdashboard.aspx
https://swachhbharatmission.ddws.gov.in/communication-material
https://www.pib.gov.in/newsite/printrelease.aspx?lang=1®=3&relid=163260
https://www.pib.gov.in/PressReleasePage.aspx?PRID=1533609®=48&lang=2
https://www.pib.gov.in/PressReleasePage.aspx?PRID=1533609®=48&lang=2
https://static.pib.gov.in/WriteReadData/specificdocs/documents/2021/sep/doc202191721.pdf
https://www.pib.gov.in/PressNoteDetails.aspx?NoteId=160036&ModuleId=3®=3&lang=1
https://swachhbharatmission.ddws.gov.in/sites/default/files/Technical-Notes/IEC_Manual_English.pdf
https://swachhbharatmission.ddws.gov.in/sites/default/files/Guidelines/SBMG-IEC-Guidelines.pdf
https://swachhbharatmission.ddws.gov.in/sites/default/files/Guidelines/Swachhagrahi_Guidelines_2018.pdf
https://swachhbharatmission.ddws.gov.in/sites/default/files/communication-material/Voices_of_Change_Sarpanches_at_the_Forefront.pdf
https://swachhbharatmission.ddws.gov.in/sites/default/files/communication-material/Swachhata-Chronicles-Transformative-Tales-from-India.pdf
https://swachhbharatmission.ddws.gov.in/sites/default/files/Technical-Notes/Voices-from-the-States-29-April-2023.pdf
https://swachhbharatmission.ddws.gov.in/sites/default/files/Studies-and-surveys/Safety-security-and-dignity-of-women.pdf
Ministry of Housing and Urban Affairs
https://sbmurban.org/
https://sbmurban.org/swachh-talk
https://sbmurban.org/storage/app/media/pdf/Swachh-Survekshan-2025-26-Toolkit.pdf
https://www.pib.gov.in/PressReleaseIframePage.aspx?PRID=1909611®=48&lang=2
https://www.pib.gov.in/PressReleasePage.aspx?PRID=1846448®=48&lang=2
https://sbmurban.org/storage/app/media/pdf/National-Behaviour-Change-Communication-Framework.pdf
Prime Minister's Office
https://archive.pib.gov.in/newsite/erelcontent.aspx?relid=178574
PIB Special Services Features
https://www.pib.gov.in/newsite/printrelease.aspx?relid=171247®=48&lang=2
United Nations
https://www.sbcguidance.org/understand/social-and-behaviour-change-communication
PIB Backgrounders
https://www.pib.gov.in/PressNoteDetails.aspx?NoteId=160036&ModuleId=3®=3&lang=2
Click here for pdf file
*****
(Explainer ID: 160317)
आगंतुक पटल : 7
Provide suggestions / comments