• Sitemap
Infrastructure

ಹಸಿರು ಹೆದ್ದಾರಿಗಳು

ಸುಸ್ಥಿರ ರಸ್ತೆ ಮೂಲಸೌಕರ್ಯದತ್ತ ಭಾರತದ ಪಯಣ

Posted On: 28 SEP 2026 6:35PM

ಭಾರತದ ಹಸಿರು ಹೆದ್ದಾರಿಗಳ ಪರಿಕಲ್ಪನೆಯು ನೆಡುತೋಪು (ಸಸಿ ನೆಡುವುದು), ವಾಯುಗುಣ-ಸ್ಥಿತಿಸ್ಥಾಪಕ ವಿನ್ಯಾಸ ಮತ್ತು ಸಂಪನ್ಮೂಲ-ಸಮರ್ಥ ನಿರ್ಮಾಣದ ಮೂಲಕ ರಸ್ತೆ ಮೂಲಸೌಕರ್ಯವನ್ನು ಹೊಸ ರೂಪಕ್ಕೆ ತರುತ್ತಿದೆ. ಕಳೆದ ಐದು ವರ್ಷಗಳಲ್ಲಿ, ಸುಮಾರು 1.32 ಲಕ್ಷ ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳಲ್ಲಿ 3.61 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಮಿಯಾವಾಕಿ ಅರಣ್ಯಗಳಿಂದ ಹಿಡಿದು ಮರುಬಳಕೆಯ ನಿರ್ಮಾಣ ಸಾಮಗ್ರಿಗಳು ಮತ್ತು ದೇಶೀಯ ಬೈಯೋ-ಬಿಟುಮೆನ್ ತಂತ್ರಜ್ಞಾನದವರೆಗೆ, ಹಸಿರು ಅಭ್ಯಾಸಗಳು ಹೆದ್ದಾರಿ ಅಭಿವೃದ್ಧಿಗೆ ಹೊಸ ಆಕಾರ ನೀಡುತ್ತಿವೆ. 'ರಾಷ್ಟ್ರೀಯ ಹೆದ್ದಾರಿ ಹಸಿರು ಹೊದಿಕೆ ಸೂಚ್ಯಂಕ' ಮೂಲಕ ಉಪಗ್ರಹ ఆధారಿತ ಮೇಲ್ವಿಚಾರಣೆಯು ಹಸಿರು ಹೊದಿಕೆಯ ವೈಜ್ಞಾನಿಕ ಮೌಲ್ಯಮಾಪನವನ್ನು ಬಲಪಡಿಸುತ್ತಿದೆ. ಸಮುದಾಯ ಉಪಕ್ರಮಗಳು ಮತ್ತು ಪರಾಗರೇಣು ಪ್ರಸರಣ ಪಥಗಳು ಸಹ ವಿಶಾಲವಾದ ಪರಿಸರ ಆಯಾಮವನ್ನು ಸೇರಿಸುತ್ತಿವೆ.

ರಸ್ತೆಗಳ ನಿರ್ಮಾಣ, ಹಸಿರಿನ ವರ್ಧನೆ

ಭಾರತದ ಹೆದ್ದಾರಿಗಳು ಈಗ ಕೇವಲ ಸಂಪರ್ಕ ಸಾಧಿಸುವ ಮಾರ್ಗಗಳಾಗಿ ಉಳಿದಿಲ್ಲ. ಅವು ದೇಶದ ವ್ಯಾಪಕ ಮೂಲಸೌಕರ್ಯ ರೂಪಾಂತರದ ಪ್ರಮುಖ ಭಾಗವಾಗುತ್ತಿವೆ. ರಸ್ತೆ ಮೂಲಸೌಕರ್ಯವು ವಿಸ್ತರಿಸುತ್ತಿದ್ದಂತೆ, ಹೆಚ್ಚು ದಕ್ಷ, ಸ್ಥಿತಿಸ್ಥಾಪಕ ಮತ್ತು ಪರಿಸರ ಸ್ನೇಹಿಯಾಗಿರುವ ಹೆದ್ದಾರಿಗಳನ್ನು ನಿರ್ಮಿಸುವುದರ ಕಡೆಗೆ ಗಮನ ಹರಿಸಲಾಗುತ್ತಿದೆ.

ಕಳೆದ ದಶಕದಲ್ಲಿ, ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲವು ಸುಮಾರು 61% ರಷ್ಟು ಬೆಳೆದಿದ್ದು, 2014 ರಲ್ಲಿದ್ದ 91,287 ಕಿ.ಮೀ ನಿಂದ ಮಾರ್ಚ್ 2026 ರ ವೇಳೆಗೆ 1,46,572 ಕಿ.ಮೀ ಗೆ ಏರಿಕೆಯಾಗಿದೆ. ಈ ಕ್ಷಿಪ್ರ ಅಭಿವೃದ್ಧಿಯು ಸಂಪರ್ಕವನ್ನು ಬಲಪಡಿಸಿದೆ, ಮಾರುಕಟ್ಟೆಗಳಿಗೆ ಸುಲಭ ತಲುಪುವಿಕೆಯನ್ನು ಸುಧಾರಿಸಿದೆ ಮತ್ತು ಜನರು ಹಾಗೂ ಸರಕುಗಳ ವೇಗದ ಸಂಚಾರಕ್ಕೆ ಬೆಂಬಲ ನೀಡಿದೆ. ರಸ್ತೆ ಮೂಲಸೌಕರ್ಯ ಬೆಳೆದಂತೆ, ಪರಿಸರ ಜವಾಬ್ದಾರಿಯುತ ಮಾರ್ಗಗಳನ್ನು ನಿರ್ಮಿಸುವುದು ನಮ್ಮ ಆದ್ಯತೆಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸಸಿಗಳನ್ನು ನೆಡುವುದು, ಮರುಬಳಕೆ ಮಾಡಿದ ಹಾಗೂ ತ್ಯಾಜ್ಯ ವಸ್ತುಗಳನ್ನು ಬಳಸುವುದು, ಇಂಧನ-ಸಮರ್ಥ ನಿರ್ಮಾಣ ಪದ್ಧತಿಗಳು ಮತ್ತು ಉಪಗ್ರಹ ಆಧಾರಿತ ಹಸಿರು ಹೊದಿಕೆಯ ಮೇಲ್ವಿಚಾರಣೆಯು ಹೆಚ್ಚು ಸುಸ್ಥಿರ ಹೆದ್ದಾರಿ ಜಾಲದ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿವೆ.

ಹಸಿರು ಹೆದ್ದಾರಿ ನೀತಿ, 2015: ನೀತಿಯ ವಿಕಸನ

ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲದ ಹಸಿರೀಕರಣವನ್ನು 'ಹಸಿರು ಹೆದ್ದಾರಿಗಳ (ನೆಡುತೋಪು, ಮರುನೆಡುವಿಕೆ, ಸುಂದರೀಕರಣ ಮತ್ತು ನಿರ್ವಹಣೆ) ನೀತಿ, 2015' ರ ಪ್ರಕಾರ ಕೈಗೊಳ್ಳಲಾಗುತ್ತಿದೆ. ಈ ನೀತಿಯನ್ನು ಈ ಕೆಳಗಿನ ಉದ್ದೇಶಗಳಿಗಾಗಿ ರೂಪಿಸಲಾಗಿದೆ:

  • ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಗಿಡ ನೆಡಲು ನೀತಿ ಚೌಕಟ್ಟನ್ನು ವಿಕಸನಗೊಳಿಸುವುದು.
  • ಗಾಳಿಯ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವಲ್ಲಿ ಮರ ಮತ್ತು ಪೊದೆಗಳು ನೈಸರ್ಗಿಕ ಮೂಲಗಳಾಗಿರುವುದರಿಂದ, ವಾಯು ಮಾಲಿನ್ಯ ಮತ್ತು ಧೂಳಿನ ಪ್ರಭಾವವನ್ನು ಕಡಿಮೆ ಮಾಡುವುದು.
  • ತಗ್ಗು ಪ್ರದೇಶಗಳ ಇಳಿಜಾರಿನಲ್ಲಿ ಮಣ್ಣಿನ ಸವೆತವನ್ನು ತಡೆಯುವುದು.
  • ಗಾಳಿ ಮತ್ತು ವಿಕಿರಣದ ಪರಿಣಾಮವನ್ನು ತಗ್ಗಿಸುವುದು.
  • ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.

ಈ ನೀತಿಯ ಅನುಷ್ಠಾನವು ಹಲವು ಪಾಲುದಾರರನ್ನು ಒಂದೆಡೆ ತರುತ್ತದೆ. ಮಂಜೂರಾದ ಕಾಮಗಾರಿಗಳ ವ್ಯಾಪ್ತಿಗೆ ಅನುಗುಣವಾಗಿ ಸ್ವಸಹಾಯ ಸಂಘಗಳು, ಖಾಸಗಿ ಸಂಸ್ಥೆಗಳು, ರಾಜ್ಯ ಅರಣ್ಯ ಇಲಾಖೆಗಳು, ಅರಣ್ಯ ನಿಗಮಗಳು ಮತ್ತು ಗುತ್ತಿಗೆದಾರರು ಗಿಡ ನೆಡುವ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗಳು ಮತ್ತು ಇತರ ಸಂಸ್ಥೆಗಳ ಮೂಲಕ ಒಟ್ಟಾರೆ ಮೇಲ್ವಿಚಾರಣೆಗಾಗಿ 'ನೆಡುತೋಪು ಕೋಶ'ವನ್ನು ಸ್ಥಾಪಿಸಲಾಗಿದೆ.

ಸಂಪರ್ಕ ಮಾರ್ಗಗಳ ಹಸಿರೀಕರಣ: ನೆಡುತೋಪು ಮತ್ತು ಅರಣ್ಯೀಕರಣ

ರಾಷ್ಟ್ರೀಯ ಹೆದ್ದಾರಿಗಳ ಹಸಿರೀಕರಣವನ್ನು ಹೆದ್ದಾರಿ ಮಾರ್ಗಗಳಲ್ಲಿ ನೆಡಲಾದ ಸಸಿಗಳ ಸಂಖ್ಯೆ, ಅವುಗಳ ಬದುಕುಳಿಯುವಿಕೆ, ಬೆಳವಣಿಗೆ ಮತ್ತು ಹರಡುವಿಕೆಯ ಆಧಾರದ ಮೇಲೆ ಅಳೆಯಲಾಗುತ್ತಿದೆ. ಜುಲೈ 2026 ರ ವೇಳೆಗೆ, ಕಳೆದ ಐದು ವರ್ಷಗಳಲ್ಲಿ ಸುಮಾರು 1.32 ಲಕ್ಷ ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳಲ್ಲಿ 3.61 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಈ ವಿಧಾನವು ಗಿಡ ನೆಡುವುದರಿಂದ ಹಿಡಿದು ವಿಶಾಲವಾದ ಪರಿಸರ ನಿರ್ವಹಣೆಯತ್ತ ವಿಸ್ತರಿಸಿದೆ.

ಹಿಂದೆ, ನೆಡುತೋಪುಗಳ ಮೇಲ್ವಿಚಾರಣೆಯು ಮುಖ್ಯವಾಗಿ ಕ್ಷೇತ್ರ ಸಿಬ್ಬಂದಿಯ ಸ್ಥಳ ಭೇಟಿಗಳನ್ನು ಆಧರಿಸಿತ್ತು. ಇಂದು, ಇದನ್ನು ಡ್ರೋನ್ ಮತ್ತು ಉಪಗ್ರಹ ಆಧಾರಿತ ಮೇಲ್ವಿಚಾರಣೆಯಿಂದ ಹೆಚ್ಚಿಸಲಾಗಿದೆ. ಹಸಿರು ಹೊದಿಕೆಯನ್ನು ಹೆಚ್ಚಿಸಲು ಮಿಯಾವಾಕಿ ಅರಣ್ಯೀಕರಣ ವಿಧಾನವನ್ನೂ ಪರಿಚಯಿಸಲಾಗಿದೆ. ಹೆದ್ದಾರಿ ಅಭಿವೃದ್ಧಿಗೆ ಮರಗಳನ್ನು ಕಡಿಯುವುದು ಅನಿವಾರ್ಯವಾದಾಗ, ಪರ್ಯಾಯ ಅರಣ್ಯೀಕರಣ ಮತ್ತು ಮರಗಳ ಮರುನೆಡುವಿಕೆಯನ್ನು ಕೈಗೊಳ್ಳಲಾಗುತ್ತಿದೆ.

ಮಿಯಾವಾಕಿ  ತಂತ್ರಜ್ಞಾನವು ಸೀಮಿತ ಜಾಗದಲ್ಲಿ ಸಾಂದ್ರವಾದ (ದಟ್ಟವಾದ) ಕಾಡುಗಳನ್ನು ಬೆಳೆಸುವ ಒಂದು ವಿಧಾನವಾಗಿದೆ. ಇದನ್ನು 'ಪಾಟ್ ಪ್ಲಾಂಟೇಶನ್ ವಿಧಾನ' ಎಂದೂ ಕರೆಯಲಾಗುತ್ತಿದ್ದು, ಇದು ವೇಗದ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕಡಿಮೆ ಅವಧಿಯಲ್ಲಿ ಕಾಡಿನಂತಹ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಗಿಡ ಹಾಗೂ ಪೊದೆಗಳನ್ನು ಪರಸ್ಪರ ಹತ್ತಿರವಾಗಿ ನೆಡುವುದನ್ನು ಒಳಗೊಂಡಿರುತ್ತದೆ. ಈ ವಿಧಾನದಡಿಯಲ್ಲಿ ಸಸ್ಯಗಳು 10 ಪಟ್ಟು ವೇಗವಾಗಿ ಬೆಳೆಯಬಲ್ಲವು, ಇದು ಜಾಗದ ಅಭಾವವಿರುವ ನಗರ ಪ್ರದೇಶಗಳಲ್ಲಿ ಹಸಿರು ಹೊದಿಕೆಯನ್ನು ವಿಸ್ತರಿಸಲು ಅತ್ಯಂತ ಸೂಕ್ತವಾಗಿದೆ.

ನೆಡುತೋಪು ಮತ್ತು ಭೂದೃಶ್ಯ ವಿನ್ಯಾಸವು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮತ್ತು ಯೋಜನೆಗಳ ಪೂರ್ಣಗೊಳಿಸುವಿಕೆಯ ಪ್ರಮುಖ ಭಾಗವಾಗಿದೆ. ಎನ್‌ಎಚ್‌ಎಐನ ಸೆಪ್ಟೆಂಬರ್ 2026 ರ ಮಾರ್ಗಸೂಚಿಗಳು ಈ ವಿಧಾನವನ್ನು ಮತ್ತಷ್ಟು ಬಲಪಡಿಸಿವೆ. ನೆಡುತೋಪಿಗಾಗಿ ಕಾಯ್ದಿರಿಸಲಾದ ಲಭ್ಯವಿರುವ 'ರೈಟ್ ಆಫ್ ವೇ' (ಭೂಸ್ವಾಧೀನ ಪ್ರದೇಶ) ಭಾಗದಲ್ಲಿ ಕನಿಷ್ಠ ಶೇಕಡಾ 80 ರಷ್ಟು ನೆಡುತೋಪು ಕಾರ್ಯ ಪೂರ್ಣಗೊಂಡಾಗ ಮಾತ್ರ ತಾತ್ಕಾಲಿಕ ಪೂರ್ಣಗೊಳಿಸುವಿಕೆ ಪ್ರಮಾಣಪತ್ರಕ್ಕೆ ಪರಿಗಣಿಸಲಾಗುತ್ತದೆ. 'ರೈಟ್ ಆಫ್ ವೇ' ಎಂದರೆ ಹೆದ್ದಾರಿ ಮೂಲಸೌಕರ್ಯಗಳ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಕಾನೂನುಬದ್ಧವಾಗಿ ಅಗತ್ಯವಿರುವ ನಿಗದಿತ ಭೂಪ್ರದೇಶವಾಗಿದೆ. ಅಧಿಕಾರಿಗಳ ಪರಿಶೀಲನೆಯ ಸಮಯದಲ್ಲಿ ನೆಡಲಾದ ಸಸಿಗಳು ಕನಿಷ್ಠ ಶೇಕಡಾ 90 ರಷ್ಟು ಬದುಕುಳಿಯುವ ದರವನ್ನು ಹೊಂದಿರಬೇಕು. ಕಾರ್ಯಾಚರಣೆ ಮತ್ತು ನಿರ್ವಹಣೆಯ ಅವಧಿಯಲ್ಲೂ ಇದೇ ಬದುಕುಳಿಯುವ ದರದ ಮಾನದಂಡ ಅನ್ವಯಿಸುತ್ತದೆ, ಹಾಗೂ ಒಣಗಿಹೋದ ಗಿಡಗಳ ಬದಲಿಗೆ ತಕ್ಷಣ ಹೊಸ ಸಸಿಗಳನ್ನು ನೆಡಲು ಅವಕಾಶ ಕಲ್ಪಿಸಲಾಗಿದೆ.

ಉತ್ತಮ ಅಭ್ಯಾಸಗಳನ್ನು ಪ್ರೋತ್ಸಾಹಿಸಲು, ಎನ್‌ಎಚ್‌ಎಐ 2025 ರಲ್ಲಿ 'ಹಸಿರು ಹೆದ್ದಾರಿಗಳ ಶ್ರೇಷ್ಠತಾ ಪ್ರಶಸ್ತಿಗಳನ್ನು' ಸ್ಥಾಪಿಸಿತು. 2026 ರ ಪ್ರಶಸ್ತಿಗಳಲ್ಲಿ ಗಿಡಗಳ ಬದುಕುಳಿಯುವಿಕೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದರೊಂದಿಗೆ ಸಸ್ಯ ಪ್ರಭೇದಗಳ ವೈವಿಧ್ಯತೆ, ದೇಶೀಯ ತಳಿಗಳ ಬಳಕೆ, ಸ್ಥಳೀಯ ಯೋಜನೆಗಳು ಮತ್ತು ರಕ್ಷಣಾ ಕ್ರಮಗಳನ್ನು ಪರಿಗಣಿಸಲಾಗಿದೆ.

  • ರಸ್ತೆ ಬದಿ ನೆಡುತೋಪು ವಿಭಾಗ: ಆಂಧ್ರಪ್ರದೇಶದ ಎನ್‌ಎಚ್‌-16 ರ ಚಿಲಕಲೂರಿಪೇಟೆ ಬೈಪಾಸ್‌ನ ಆರು ಪಥಗಳ ರಸ್ತೆ ಕಾಮಗಾರಿಯು ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ.
  • ಮಧ್ಯದ ಸಾಲು ನೆಡುತೋಪು ವಿಭಾಗ: ಎನ್‌ಎಚ್‌-163 ರ ಹೈದರಾಬಾದ್–ಯಾದಗಿರಿ ವಿಭಾಗದ ನಾಲ್ಕು ಪಥಗಳ ರಸ್ತೆಗೆ ಪ್ರಥಮ ಬಹುಮಾನ ಲಭಿಸಿದೆ.
  • ಜಾಗದ ಪಾರ್ಸೆಲ್‌ಗಳಲ್ಲಿ ನೆಡುತೋಪು ವಿಭಾಗ: ನಾಗಪುರದ ಎನ್‌ಎಚ್‌-44 ರಲ್ಲಿರುವ ಜಾಮ್ತಾ ಕ್ಲೋವರ್ ಲೀಫ್ ಆಕ್ಸಿಜನ್ ಬರ್ಡ್ ಪಾರ್ಕ್‌ಗೆ ಪ್ರಥಮ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿ ವಿಜೇತ ಈ ಪ್ರಯತ್ನಗಳು ಹೆದ್ದಾರಿಯ ಪ್ರತಿಯೊಂದು ಭಾಗವೂ ಹಸಿರನ್ನು ಹೆಚ್ಚಿಸಲು ಮತ್ತು ಸುತ್ತಮುತ್ತಲಿನ ಪರಿಸರವನ್ನು ಬಲಪಡಿಸಲು ಹೇಗೆ ಒಂದು ಅವಕಾಶವಾಗಬಲ್ಲದು ಎಂಬುದನ್ನು ತೋರಿಸಿಕೊಡುತ್ತವೆ.

ರಾಷ್ಟ್ರೀಯ ಹೆದ್ದಾರಿಗಳು – ಹಸಿರು ಹೊದಿಕೆ ಸೂಚ್ಯಂಕ

ಸುಸ್ಥಿರ ಹೆದ್ದಾರಿ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಾ, 'ರಾಷ್ಟ್ರೀಯ ಹೆದ್ದಾರಿಗಳ ಹಸಿರು ಹೊದಿಕೆ ಸೂಚ್ಯಂಕ'ದ ಮೊದಲ ವಾರ್ಷಿಕ ವರದಿ (2025–26) ಬಿಡುಗಡೆಯಾಗಿದೆ. ಇಸ್ರೋದ 'ರಾಷ್ಟ್ರೀಯ ದೂರಸಂವೇದಿ ಕೇಂದ್ರ'ದ ಸಹಯೋಗದೊಂದಿಗೆ ಸಿದ್ಧಪಡಿಸಲಾದ ಈ ವರದಿಯು, ರಾಷ್ಟ್ರೀಯ ಹೆದ್ದಾರಿಗಳ ಭೂಸ್ವಾಧೀನ ಪ್ರದೇಶದ ವ್ಯಾಪ್ತಿಯಲ್ಲಿರುವ ಹಸಿರು ಹೊದಿಕೆಯ ದೇಶದ ಮೊದಲ ವೈಜ್ಞಾನಿಕ ಮತ್ತು ಪರಿಮಾಣಾತ್ಮಕ ಮೌಲ್ಯಮಾಪನವನ್ನು ಒದಗಿಸುತ್ತದೆ. ಈ ಮೌಲ್ಯಮಾಪನವು 24 ರಾಜ್ಯಗಳಲ್ಲಿನ ಕಾರ್ಯಾಚರಣೆ ಮತ್ತು ನಿರ್ವಹಣೆ ಹಂತದಲ್ಲಿರುವ ಸುಮಾರು 30,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ಒಳಗೊಂಡಿದೆ. ಇದು ಮುಂಗಾರು ಪೂರ್ವ ಮತ್ತು ಮುಂಗಾರು ನಂತರದ ಅವಧಿಯಲ್ಲಿ ದಾಖಲಾದ ವೀಕ್ಷಣೆಗಳನ್ನು ಒಳಗೊಂಡಿದೆ. ಸುಧಾರಿತ ಬಾಹ್ಯಾಕಾಶ ಆಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು, ರಸ್ತೆ ಬದಿಯ ನೆಡುತೋಪುಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸುಧಾರಿಸಲು ಇದು ನಂಬಿಗಸ್ಥ ಮೂಲಸೂಚಕವನ್ನು ಸ್ಥಾಪಿಸುತ್ತದೆ. ಈ ಮೌಲ್ಯಮಾಪನವು ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಹಸಿರು ಹೊದಿಕೆಯಲ್ಲಿ ಗಮನಾರ್ಹ ವ್ಯತ್ಯಾಸವಿರುವುದನ್ನು ಬಹಿರಂಗಪಡಿಸುತ್ತದೆ. ಈ ಸಂಶೋಧನೆಗಳು ಹೋಲಿಕೆ, ಶ್ರೇಯಾಂಕ ಮತ್ತು ಸುಧಾರಿತ ನೆಡುತೋಪು ನಿರ್ವಹಣೆಗಾಗಿ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ನೆರವಾಗುತ್ತವೆ.

A highway with trees and bushesAI-generated content may be incorrect.

ಸುಸ್ಥಿರ ಸಾಮಗ್ರಿಗಳ ಬಳಕೆಯತ್ತ ದಾಪುಗಾಲು

ಭಾರತದ ಹೆದ್ದಾರಿಗಳು ಪಳೆಯುಳಿಕೆ ಇಂಧನ ಆಧಾರಿತ ಸಾಮಗ್ರಿಗಳಿಂದ ಜೈವಿಕ ಆಧಾರಿತ ಹಾಗೂ ಪುನರುತ್ಪಾದಕ ಪರಿಹಾರಗಳತ್ತ ಬದಲಾಗುತ್ತಿವೆ. ಕೃಷಿ ತ್ಯಾಜ್ಯದ 'ಪೈರೋಲಿಸಿಸ್' ಪ್ರಕ್ರಿಯೆಯ ಮೂಲಕ ತಯಾರಿಸಲಾದ ಜೈವಿಕ ಬೈಟುಮೆನ್ ತಂತ್ರಜ್ಞಾನ ಹಸ್ತಾಂತರದೊಂದಿಗೆ ಜನವರಿ 2026 ರಲ್ಲಿ ಪ್ರಮುಖ ವೈಜ್ಞಾನಿಕ ಮೈಲಿಗಲ್ಲನ್ನು ಘೋಷಿಸಲಾಯಿತು. ತಂತ್ರಜ್ಞಾನ ಹಸ್ತಾಂತರ ಎಂಬುದು ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಂದ ವೈಜ್ಞಾನಿಕ ಸಂಶೋಧನೆಗಳು, ಜ್ಞಾನ ಮತ್ತು ಬೌದ್ಧಿಕ ಆಸ್ತಿಯನ್ನು ಸಾರ್ವಜನಿಕ ಹಾಗೂ ಖಾಸಗಿ ಬಳಕೆದಾರರಿಗೆ ತಲುಪಿಸುವ ಒಂದು ಪ್ರಕ್ರಿಯೆಯಾಗಿದೆ.

"ಪೈರೋಲಿಸಿಸ್ ಮೂಲಕ ಜೈವಿಕ ಬೈಟುಮೆನ್: ಕೃಷಿ ತ್ಯಾಜ್ಯದಿಂದ ರಸ್ತೆಗಳವರೆಗೆ" ಎಂಬ ಈ ನಾವೀನ್ಯತೆಯನ್ನು ನವದೆಹಲಿಯ ಸಿಎಸ್‌ಐಆರ್-ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ ಮತ್ತು ಡೆಹ್ರಾಡೂನ್‌ನ ಸಿಎಸ್‌ಐಆರ್-ಭಾರತೀಯ ಪೆಟ್ರೋಲಿಯಂ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಬೈಟುಮೆನ್ ಎಂಬುದು ಸಾವಯವ ದ್ರವಗಳು ಮತ್ತು ಹೈಡ್ರೋಕಾರ್ಬನ್‌ಗಳ ಮಿಶ್ರಣವಾಗಿದ್ದು, ಇದನ್ನು ರಸ್ತೆಗಳನ್ನು ಡಾಂಬರೀಕರಣಗೊಳಿಸಲು ಬಳಸಲಾಗುತ್ತದೆ. ರಸ್ತೆ ನಿರ್ಮಾಣ ಉದ್ಯಮದಲ್ಲಿ ಇದನ್ನು 'ಕಪ್ಪು ಚಿನ್ನ' ಎಂದೇ ಕರೆಯಲಾಗುತ್ತದೆ. ಪ್ರಸ್ತುತ, ಭಾರತವು ತನ್ನ ಬೈಟುಮೆನ್ ಅಗತ್ಯದ ಸುಮಾರು 50% ರಷ್ಟನ್ನು ಆಮದುಗಳ ಮೂಲಕ ಪೂರೈಸಿಕೊಳ್ಳುತ್ತಿದೆ. ಜೈವಿಕ ಬೈಟುಮೆನ್‌ನಂತಹ ನಾವೀನ್ಯತೆಗಳು ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಜೊತೆಗೆ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸಬಲ್ಲವು.

ಈ ಪ್ರಕ್ರಿಯೆಯು 'ಪೈರೋಲಿಸಿಸ್' ಮೂಲಕ ಜೈವಿಕ ಎಣ್ಣೆಯನ್ನು ಉತ್ಪಾದಿಸಲು ಕೊಯ್ಲೊತ್ತರದ ಭತ್ತದ ಹುಲ್ಲನ್ನು ಮೂಲ ವಸ್ತುವಾಗಿ ಬಳಸುತ್ತದೆ.

ನಂತರ ಈ ಜೈವಿಕ ಎಣ್ಣೆಯನ್ನು ಸಾಂಪ್ರದಾಯಿಕ ಬೈಟುಮೆನ್‌ಗೆ ಮಿಶ್ರಣ ಮಾಡಿ ಜೈವಿಕ ಬೈಟುಮೆನ್ ಮಿಶ್ರಣವನ್ನು ತಯಾರಿಸಲಾಗುತ್ತದೆ. ಈ ತಂತ್ರಜ್ಞಾನವು ಬಯೋಮಾಸ್ ಪೈರೋಲಿಸಿಸ್ ಬಳಸಿ ರಸ್ತೆಗಳಿಗೆ ಜೈವಿಕ ಬಂಧಕಗಳು, ಇಂಧನ-ಸಮರ್ಥ ಅನಿಲ ಇಂಧನ, ಜೈವಿಕ ಕ್ರಿಮಿನಾಶಕದ ಭಾಗಗಳು ಮತ್ತು ಉನ್ನತ ದರ್ಜೆಯ ಕಾರ್ಬನ್ ಒಳಗೆ ಹಲವು ಮೌಲ್ಯಯುತ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಈ ಉತ್ಪನ್ನಗಳನ್ನು ಬ್ಯಾಟರಿಗಳು, ನೀರು ಶುದ್ಧೀಕರಣ ಮತ್ತು ಸುಧಾರಿತ ವಸ್ತುಗಳಲ್ಲಿ ಬಳಸಬಹುದಾಗಿದ್ದು, ಭವಿಷ್ಯಕ್ಕಾಗಿ ಮಾಲಿನ್ಯರಹಿತ ಹಾಗೂ ವೆಚ್ಚ-ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತವೆ.

ಮೇಘಾಲಯದ ಜೋರಾಬಾಟ್-ಶಿಲ್ಲಾಂಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಜೈವಿಕ ಬೈಟುಮೆನ್ ಬಳಸಿ 100 ಮೀಟರ್ ಪ್ರಯೋಗಾತ್ಮಕ ರಸ್ತೆ ಮಾರ್ಗವನ್ನು ಯಶಸ್ವಿಯಾಗಿ ನಿರ್ಮಿಸಲಾಗಿದ್ದು, ಇದರ ಕಾರ್ಯಸಾಧ್ಯತೆಯನ್ನು ಪ್ರದರ್ಶಿಸಲಾಗಿದೆ. ಈ ತಂತ್ರಜ್ಞಾನವು ಕೃಷಿ ತ್ಯಾಜ್ಯದ ನಿರ್ವಹಣೆಗೂ ಬೆಂಬಲ ನೀಡುತ್ತದೆ. ಇದನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾನದಂಡ ಸಂಹಿತೆಗಳಲ್ಲಿ ಸಂಯೋಜಿಸುವ ಯೋಜನೆಗಳು ಪ್ರಗತಿಯಲ್ಲಿವೆ. ಇದರೊಂದಿಗೆ, ಒಂದೇ ವರ್ಷದಲ್ಲಿ ಜೈವಿಕ ಬೈಟುಮೆನ್ ತಂತ್ರಜ್ಞಾನವನ್ನು ಕೈಗಾರಿಕಾ ಮತ್ತು ವಾಣಿಜ್ಯ ಮಟ್ಟಕ್ಕೆ ವಿಸ್ತರಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ.

ಪರ್ಯಾಯ ಸಾಮಗ್ರಿಗಳತ್ತ ಈ ಬದಲಾವಣೆಯು ಹೆದ್ದಾರಿ ನಿರ್ಮಾಣದಲ್ಲಿ ಮರುಬಳಕೆಯ ಹಾಗೂ ಕೈಗಾರಿಕಾ ಉಪ-ಉತ್ಪನ್ನಗಳ ವ್ಯಾಪಕ ಬಳಕೆಯಲ್ಲೂ ಕಂಡುಬರುತ್ತಿದೆ. ಥರ್ಮಲ್ ವಿದ್ಯುತ್ ಸ್ಥಾವರದ ಉಪ-ಉತ್ಪನ್ನವಾದ 'ಫ್ಲೈ ಆಶ್' ಮತ್ತು 'ಪಾಂಡ್ ಆಶ್'ಗಳನ್ನು ಏರಿಗಳು ಹಾಗೂ ರಚನಾತ್ಮಕ ಕಾಮಗಾರಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ತಾಂತ್ರಿಕ ವಿವರಣೆಗಳಿಗೆ ಅನುಗುಣವಾಗಿ, 'ಪುನರುಜ್ಜೀವನಗೊಳಿಸಿದ ಆಸ್ಫಾಲ್ಟ್ ಪೇವ್‌ಮೆಂಟ್', ನಿರ್ಮಾಣ ಮತ್ತು ಕೆಡವುವಿಕೆ ತ್ಯಾಜ್ಯ ಹಾಗೂ ಮರುಬಳಕೆಯ ಕಲ್ಲು-ಮಣ್ಣುಗಳನ್ನು ಸೂಕ್ತ ಹೆದ್ದಾರಿ ಕಾಮಗಾರಿಗಳಲ್ಲಿ ಬಳಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ, ಸ್ಲ್ಯಾಗ್, ರಬ್ಬರ್ ತುಣುಕುಗಳು, ಜೈವಿಕ ಬೈಟುಮೆನ್ ಮತ್ತು ಇತರ ಮರುಬಳಕೆಯ ಅಥವಾ ಕೈಗಾರಿಕಾ ಉಪ-ಉತ್ಪನ್ನಗಳು ಪ್ರೋತ್ಸಾಹಿಸಲ್ಪಡುತ್ತಿರುವ ಇತರ ಸಾಮಗ್ರಿಗಳಾಗಿವೆ. ಒಟ್ಟಾರೆಯಾಗಿ, ಈ ಅಭ್ಯಾಸಗಳು ಸಂಪನ್ಮೂಲ ಸಾಮರ್ಥ್ಯವನ್ನು ಸುಧಾರಿಸುತ್ತವೆ, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುತ್ತವೆ ಮತ್ತು ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದ ಪರಿಸರ ಕಾಳಜಿಗಳನ್ನು ಪರಿಹರಿಸಲು ನೆರವಾಗುತ್ತವೆ.

ಸಮುದಾಯದ ಭಾಗಿತ್ವ ಮತ್ತು ಸಾರ್ವಜನಿಕ ಜಾಗೃತಿ

ಹಸಿರು ಹೆದ್ದಾರಿ ಉಪಕ್ರಮಗಳ ಪ್ರಭಾವವು ತಳಮಟ್ಟದಲ್ಲಿ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಅಲ್ಲಿ ನೆಡುತೋಪುಗಳನ್ನು ಜೈವಿಕ ವೈವಿಧ್ಯತೆ ಮತ್ತು ಸಮುದಾಯದ ಭಾಗವಹಿಸುವಿಕೆಗೆ ಜೋಡಿಸಲಾಗುತ್ತಿದೆ. ಹೆದ್ದಾರಿ ಜಾಗಗಳು ಹೇಗೆ ವ್ಯಾಪಕ ಪರಿಸರ ಕ್ರಿಯೆಗೆ ವೇದಿಕೆಯಾಗಬಹುದು ಎಂಬುದನ್ನು ವಿವಿಧ ರಾಜ್ಯಗಳ ಅನುಭವಗಳು ತೋರಿಸುತ್ತವೆ.

ಹೆದ್ದಾರಿ ಹಸಿರನ್ನು ಪರಾಗರೇಣು ಪ್ರಸರಣ ಪಥಗಳಾಗಿ ಪರಿವರ್ತಿಸುವುದು

ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಹಸಿರು ಪಥಗಳು ಕೇವಲ ನೆರಳು ಮತ್ತು ಭೂದೃಶ್ಯ ಸುಧಾರಣೆಗೆಷ್ಟೇ ಸೀಮಿತವಾಗಿರದೆ ಹೆಚ್ಚಿನ ಉದ್ದೇಶಗಳನ್ನು ಪೂರೈಸಬಲ್ಲವು. ದೆಹಲಿ-ಅಮೃತಸರ-ಕಾತ್ರಾ ಎಕ್ಸ್‌ಪ್ರೆಸ್‌ವೇಯ ನಿಗದಿತ ಭಾಗಗಳಲ್ಲಿ, "ಟ್ರೀಸ್ ಫಾರ್ ಬೀಸ್" ಪ್ರಚಾರದಡಿಯಲ್ಲಿ ಪರಾಗರೇಣು ಪ್ರಸರಣ ಪಥಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಉಪಕ್ರಮವು ಜೇನ್ನೊಣಗಳು ಮತ್ತು ಇತರ ಪರಾಗಸ್ಪರ್ಶಕಗಳಿಗೆ ವರ್ಷವಿಡೀ ಮಕರಂದ ಹಾಗೂ ಪರಾಗವನ್ನು ಒದಗಿಸಲು ಹೂ ಬಿಡುವ ಮತ್ತು ಸ್ಥಳೀಯವಾಗಿ ಸೂಕ್ತವಾದ ಸಸ್ಯ ಪ್ರಭೇದಗಳನ್ನು ಬಳಸುತ್ತದೆ.

ಹಸಿರು ಹೊದಿಕೆಯ ಸಮರ್ಥ ನಿರ್ವಹಣೆ

ಆಂಧ್ರಪ್ರದೇಶವು ತನ್ನ ರಾಷ್ಟ್ರೀಯ ಹೆದ್ದಾರಿ ಜಾಲದ ಉದ್ದಕ್ಕೂ ಸುಸ್ಥಿರ ನೆಡುತೋಪು ಚಟುವಟಿಕೆಯನ್ನು ಕಂಡಿದೆ. 2010 ಮತ್ತು 2025 ರ ನಡುವೆ, ರಸ್ತೆ ಬದಿ ಮತ್ತು ಮಧ್ಯದ ಸಾಲುಗಳಲ್ಲಿ ಸುಮಾರು 18 ಲಕ್ಷ ಸಸಿಗಳನ್ನು ನೆಡಲಾಗಿದೆ. ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳನ್ನು ತಗ್ಗಿಸಲು ಮತ್ತು ಹೆದ್ದಾರಿ ಬಳಕೆದಾರರಿಗೆ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ನೆಡುತೋಪುಗಳನ್ನು ನಿರ್ವಹಿಸಲಾಗುತ್ತಿದೆ.

2026–27 ರ ಸಾಲಿನಲ್ಲಿ, ರಾಜ್ಯದಾದ್ಯಂತ ರಸ್ತೆ ಬದಿ ಹಾಗೂ ಮಧ್ಯದ ಸಾಲಿನ ನೆಡುತೋಪುಗಳಿಗಾಗಿ ಮತ್ತೆ 3.86 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ವಿಶ್ವ ಪರಿಸರ ದಿನ 2026 ರಂದು, "ಏಕ್ ಪೇಡ್ ಮಾ ಕೆ ನಾಮ್" ಉಪಕ್ರಮದಡಿಯಲ್ಲಿ ಆಂಧ್ರಪ್ರದೇಶದಾದ್ಯಂತ ಸುಮಾರು 3,200 ಸಸಿಗಳನ್ನು ನೆಡಲಾಗಿದೆ.

ಒಟ್ಟಾರೆಯಾಗಿ, ಈ ಪ್ರಯತ್ನಗಳು ಹೆದ್ದಾರಿಗಳಲ್ಲಿ ಕೇವಲ ಗಿಡಗಳನ್ನು ನೆಡುವುದರಿಂದ ಹಿಡಿದು, ಸಮುದಾಯಗಳು ಕಾಲಕ್ರಮೇಣ ಪೋಷಿಸಲು ನೆರವಾಗುವ ಹಸಿರು ಪಥಗಳನ್ನು ಪೋಷಿಸುವತ್ತ ಬದಲಾಗಿರುವುದನ್ನು ಪ್ರತಿಬಿಂಬಿಸುತ್ತವೆ.

ನಾಳೆಯ ಹೆದ್ದಾರಿಗಳ ನಿರ್ಮಾಣ

ಭಾರತದ ಹೆದ್ದಾರಿ ವಲಯವು ಇಂದು ಬೃಹತ್ ಪ್ರಮಾಣದ ಮೂಲಸೌಕರ್ಯ ವಿತರಣೆ ಮತ್ತು ಪರಿಸರ ಉಸ್ತುವಾರಿಯ ಸಮ್ಮಿಲನದಲ್ಲಿ ನಿಂತಿದೆ. ತಳಮಟ್ಟದ ನೆಡುತೋಪಿನಿಂದ ಹಿಡಿದು ದೇಶೀಯ ಜೈವಿಕ ಬೈಟುಮೆನ್‌ನವರೆಗಿನ ಪ್ರತಿಯೊಂದು ಉಪಕ್ರಮವೂ ಒಂದು ಸಾಮಾನ್ಯ ಸಂದೇಶವನ್ನು ಸಾರುತ್ತದೆ. ಹಸಿರು ಹೊದಿಕೆಯ ವೆಚ್ಚದಲ್ಲಿ ಬೆಳೆಯುವ ಅಗತ್ಯವಿಲ್ಲ ಎಂಬುದೇ ಆ ಸಂದೇಶ. ಹಸಿರು ಹೆದ್ದಾರಿಗಳ ಕಥೆಯು ಭಾರತದ ವಿಶಾಲ ರಾಷ್ಟ್ರೀಯ ಆದ್ಯತೆಗಳೊಂದಿಗೆ ಹೆಣೆದುಕೊಂಡಿದೆ. ಇವು ಹವಾಮಾನ ಕ್ರಿಯೆ, ಸ್ವಾವಲಂಬನೆ ಮತ್ತು ಒಳಗೊಳ್ಳುವಿಕೆಯ ಬೆಳವಣಿಗೆಯನ್ನು ಒಳಗೊಂಡಿವೆ. ಇದು ಸುಸ್ಥಿರ, ತಂತ್ರಜ್ಞಾನ ಆಧಾರಿತ ಮೂಲಸೌಕರ್ಯಗಳ ಮೂಲಕ 'ವಿಕಸಿತ ಭಾರತ'ದ ಕಲ್ಪನೆಯನ್ನು ಬಲಪಡಿಸುತ್ತದೆ. ಭಾರತದ ಹೆದ್ದಾರಿ ಜಾಲವು ವಿಸ್ತರಿಸುತ್ತಿದ್ದಂತೆ, ಅದರ ಹಸಿರು ಹೊದಿಕೆಯೂ ಅದರೊಂದಿಗೆ ವಿಸ್ತರಿಸುತ್ತಿದೆ.

References

Ministry of Road Transport & Highways / NHAI

https://www.pib.gov.in/PressReleasePage.aspx?PRID=2272639&reg=48&lang=2

https://www.pib.gov.in/newsite/PrintRelease.aspx?relid=128298&reg=3&lang=2

https://www.pib.gov.in/PressReleasePage.aspx?PRID=2291229&reg=3&lang=1

https://www.pib.gov.in/PressReleasePage.aspx?PRID=1794693&reg=48&lang=2

https://www.pib.gov.in/PressReleasePage.aspx?PRID=2145745&reg=48&lang=2

https://www.pib.gov.in/PressReleasePage.aspx?PRID=2226651&reg=1&lang=1

https://www.pib.gov.in/PressReleaseIframePage.aspx?PRID=2042496&reg=48&lang=2

https://www.pib.gov.in/Pressreleaseshare.aspx?PRID=2145745&reg=3&lang=2

https://pib.gov.in/PressReleasePage.aspx?PRID=2086035

https://www.pib.gov.in/PressReleasePage.aspx?PRID=2039982&reg=48&lang=2

https://nhai.gov.in/nhai/sites/default/files/mix_file/NRSC_NH-GCI_FinalReport_09Dec2025.pdf

https://www.pib.gov.in/PressReleasePage.aspx?PRID=2237080&reg=3&lang=1

https://www.pib.gov.in/PressReleasePage.aspx?PRID=2269433&reg=48&lang=2

https://nhai.gov.in/nhai/sites/default/files/mix_file/NRSC_NH-GCI_FinalReport_09Dec2025.pdf

Ministry of Science & Technology / CSIR

https://www.pib.gov.in/PressReleasePage.aspx?PRID=2212118&lang=1&reg=1

Ministry of Agriculture & Farmers Welfare

https://www.pib.gov.in/PressReleasePage.aspx?PRID=2246872&reg=20&lang=1

Click here to see pdf 

 

*****

(Explainer ID: 160230) आगंतुक पटल : 13
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Telugu , Malayalam