Infrastructure
ಭಾರತೀಯ ಕಡಲ ವಿಮಾ ಪೂಲ್
ಭಾರತದ ಕಡಲ ಸಾರ್ವಭೌಮತ್ವದ ಬಲವರ್ಧನೆ
Posted On:
27 SEP 2026 11:40AM
|
ಭಾರತವು ತನ್ನ ಹೆಚ್ಚಿನ ಸರಕು ಮತ್ತು ಇಂಧನ ಪೂರೈಕೆಗಾಗಿ ಸಮುದ್ರ ಮಾರ್ಗಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವುದರಿಂದ, ದೇಶದ ವ್ಯಾಪಾರವು ಕಡಲ ಸಾರಿಗೆಯನ್ನೇ ಪ್ರಮುಖವಾಗಿ ಆಧರಿಸಿದೆ. 'ಭಾರತೀಯ ಕಡಲ ವಿಮಾ ಪೂಲ್' (ಬಿಎಂಐಪಿ) ಭಾರತೀಯ ಧ್ವಜವನ್ನು ಹೊಂದಿರುವ, ಭಾರತೀಯ ಸಂಸ್ಥೆಗಳ ಒಡೆತನದ, ನಿರ್ವಹಣೆಯ ಅಥವಾ ನಿಯಂತ್ರಣದಲ್ಲಿರುವ ಹಡಗುಗಳಿಗೆ ಹಾಗೂ ಭಾರತಕ್ಕೆ ಆಗಮಿಸುವ ಅಥವಾ ಭಾರತದಿಂದ ಹೊರಡುವ ಸರಕು ಹಡಗುಗಳಿಗೆ 'ಹಲ್ ಮತ್ತು ಯಂತ್ರೋಪಕರಣ' ಅಪಾಯಗಳ ವಿರುದ್ಧ ಕಡಲ ವಿಮೆಯನ್ನು ಒದಗಿಸುತ್ತದೆ. ಇದನ್ನು ಮೇ 2026 ರಲ್ಲಿ ₹13,906.50 ಕೋಟಿ (1.5 ಶತಕೋಟಿ ಅಮೆರಿಕನ್ ಡಾಲರ್) ವರೆಗಿನ ವಿಮಾ ರಕ್ಷಣೆಯೊಂದಿಗೆ ಪ್ರಾರಂಭಿಸಲಾಯಿತು. ಇದು ಹಡಗಿನ ಕಾಯ (ಹಲ್), ಸರಕು (ಕಾರ್ಗೋ), ರಕ್ಷಣೆ ಮತ್ತು ನಷ್ಟ ಪರಿಹಾರ ಹಾಗೂ ಯುದ್ಧದ ಅಪಾಯಗಳಿಗೆ ದೇಶೀಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಬಿಎಂಐಪಿ ವಿದೇಶಿ ವಿಮಾದಾರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಜಾಗತಿಕ ಸಂಕಷ್ಟಗಳ ಸಮಯದಲ್ಲಿ ಕೈಗೆಟುಕುವ ಹಾಗೂ ತಡೆರಹಿತ ವಿಮಾ ರಕ್ಷಣೆಯನ್ನು ಖಚಿತಪಡಿಸುತ್ತದೆ. ಸದಸ್ಯರ ಬದ್ಧತೆಗಳ ಆಧಾರದ ಮೇಲೆ ಅಪಾಯಗಳನ್ನು ಸಾಮೂಹಿಕವಾಗಿ ಮರು-ವಿಮೆ ಮಾಡುವುದರೊಂದಿಗೆ, ದೇಶೀಯ ವಿಮಾದಾರರು ಈ ಪಾಲಿಸಿಗಳನ್ನು ವಿತರಿಸುತ್ತಾರೆ. 100 ಮಿಲಿಯನ್ ಅಮೆರಿಕನ್ ಡಾಲರ್‌ವರೆಗಿನ ಹಕ್ಕುಸ್ವಾಮ್ಯಗಳನ್ನು (ಕ್ಲೇಮ್‌ಗಳು) ಮೀಸಲು ನಿಧಿಯ ಮೂಲಕ ಇತ್ಯರ್ಥಪಡಿಸಲಾಗುತ್ತದೆ, ಆದರೆ ದೊಡ್ಡ ಮಟ್ಟದ ಹಕ್ಕುಸ್ವಾಮ್ಯಗಳಿಗೆ ಸಾರ್ವಭೌಮ ಖಾತರಿಗಳನ್ನು ಬಳಸಲಾಗುತ್ತದೆ. ಪ್ರಾರಂಭವಾದಂದಿನಿಂದ, ಬಿಎಂಐಪಿ ಕರಾವಳಿ ಹಡಗುಗಳಿಗೆ ಯುದ್ಧದ ಅಪಾಯ ಮತ್ತು ಪಿ&ಐ ಪಾಲಿಸಿಗಳನ್ನು ನೀಡಿದೆ, ಪ್ರೀಮಿಯಂ ದರಗಳನ್ನು ಕಡಿಮೆ ಮಾಡಿದೆ ಮತ್ತು ಭಾರತದ ಕಡಲ ಸಾರ್ವಭೌಮತ್ವವನ್ನು ಬಲಪಡಿಸಿದೆ.
|
ಅವಲೋಕನ
ಭಾರತವು ವಿಶ್ವದ ಮುಂಚೂಣಿಯಲ್ಲಿರುವ ವ್ಯಾಪಾರಿ ರಾಷ್ಟ್ರಗಳಲ್ಲಿ ಒಂದಾಗಿದ್ದು, ಅದರ ಹೆಚ್ಚಿನ ಪ್ರಮಾಣದ ವ್ಯಾಪಾರವು ಸಮುದ್ರ ಮಾರ್ಗಗಳ ಮೂಲಕವೇ ನಡೆಯುತ್ತದೆ. ಸಮುದ್ರವು ಭಾರತಕ್ಕೆ ಕೇವಲ ಒಂದು ಸಾರಿಗೆ ಮಾಧ್ಯಮವಲ್ಲ; ಅದು ವಾಣಿಜ್ಯದ ಬೆನ್ನೆಲುಬಾಗಿದೆ. ಇದು ಇಂಧನ ಭದ್ರತೆಯನ್ನು ಬೆಂಬಲಿಸುತ್ತದೆ ಮತ್ತು ರಾಷ್ಟ್ರೀಯ ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕಚ್ಚಾ ತೈಲದ ಆಮದಿನಿಂದ ಹಿಡಿದು ಸರಕುಗಳ ರಫ್ತಿನವರೆಗೆ, ಕಡಲ ಸಂಪರ್ಕವು ಭಾರತದ ಆರ್ಥಿಕತೆಯ ಪ್ರತಿಯೊಂದು ಕ್ಷೇತ್ರಕ್ಕೂ ಆಧಾರವಾಗಿದೆ. ಕರಾವಳಿ ಹಡಗು ಸಾರಿಗೆ ಮತ್ತು ಆಂತರಿಕ ಜಲಮಾರ್ಗಗಳು ಈ ಜೀವನಾಡಿಯನ್ನ ಮತ್ತಷ್ಟು ಬಲಪಡಿಸುತ್ತವೆ, ವ್ಯಾಪಾರದಲ್ಲಿ ಸ್ಥಿರತೆ ಮತ್ತು ದಕ್ಷತೆಯನ್ನು ಖಚಿತಪಡಿಸುತ್ತವೆ.
ಭಾರತದ ಕಡಲ ವ್ಯಾಪಾರವು ವಿಸ್ತರಿಸಿದೆಯಾದರೂ, ಪ್ರಮುಖ ಕಡಲ ವಿಮಾ ಸೇವೆಗಳು ಹೆಚ್ಚಾಗಿ ವಿದೇಶಿ ಪೂರೈಕೆದಾರರ ಮೇಲೆಯೇ ಅವಲಂಬಿತವಾಗಿವೆ. ಇದರಿಂದಾಗಿ 'ರಕ್ಷಣೆ ಮತ್ತು ನಷ್ಟ ಪರಿಹಾರ' ಪ್ರೀಮಿಯಂ ರೂಪದಲ್ಲಿ ವಾರ್ಷಿಕ 45-60 ಮಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಹಣ ವಿದೇಶಕ್ಕೆ ಹರಿಯುತ್ತಿದ್ದು, ವಿದೇಶಗಳಲ್ಲಿ ಹೆಚ್ಚಿನ ಕಡಲ ವಿಮಾ ಪಾವತಿಗಳು ನಡೆಯುತ್ತಿವೆ.
ದೇಶೀಯ ಕಡಲ ವಿಮಾ ಸಾಮರ್ಥ್ಯದಲ್ಲಿನ ಈ ಆಯಕಟ್ಟಿನ ಕೊರತೆಯನ್ನು ನಿವಾರಿಸಲು 'ಭಾರತೀಯ ಕಡಲ ವಿಮಾ ಪೂಲ್' (ಬಿಎಂಐಪಿ) ಅನ್ನು ಒಂದು ಸಾರ್ವಭೌಮ ಪರಿಹಾರವಾಗಿ ರೂಪಿಸಲಾಗಿದೆ. ಏಪ್ರಿಲ್ 18, 2026 ರಂದು ಅನುಮೋದನೆಗೊಂಡು ಮೇ 12, 2026 ರಂದು ಅಧಿಕೃತವಾಗಿ ಚಾಲನೆ ನೀಡಲಾದ 'ಭಾರತೀಯ ಕಡಲ ವಿಮಾ ಪೂಲ್', ಭಾರತದ ಮೊದಲ ₹13,906.50 ಕೋಟಿ (1.5 ಶತಕೋಟಿ ಅಮೆರಿಕನ್ ಡಾಲರ್) ಮೌಲ್ಯದ ದೇಶೀಯ ಕಡಲ ವಿಮಾ ಪೂಲ್ ಆಗಿದೆ. ಇದು ₹12,980 ಕೋಟಿ (1.4 ಶತಕೋಟಿ ಅಮೆರಿಕನ್ ಡಾಲರ್) ಸಾರ್ವಭೌಮ ಬೆಂಬಲವನ್ನು ಖಾತರಿಪಡಿಸುತ್ತದೆ. ಮೊದಲ ಬಾರಿಗೆ, ಭಾರತೀಯ ಕಂಪನಿಗಳು ಹೆಚ್ಚಿನ ಮೌಲ್ಯದ ಹಡಗುಗಳಿಗೆ ಸ್ವತಂತ್ರವಾಗಿ ವಿಮೆ ಮಾಡುತ್ತಿವೆ. ಈ ವಿಮಾ ರಕ್ಷಣೆಯು ಹಡಗಿನ ಕಾಯ ಮತ್ತು ಯಂತ್ರೋಪಕರಣ, ಅಪಾಯಕಾರಿ ಪ್ರದೇಶಗಳಲ್ಲಿನ ಯುದ್ಧದ ಅಪಾಯಗಳ ವಿರುದ್ಧ ಸರಕು ಮತ್ತು ರಕ್ಷಣೆ ಹಾಗೂ ನಷ್ಟ ಪರಿಹಾರವನ್ನು ಒಳಗೊಂಡಿದೆ.
ಭಾರತದ ಕಡಲ ಕ್ಷೇತ್ರ: ಕಡಲ ತೀರದ ರಾಷ್ಟ್ರ
ಭಾರತವು 12 ಪ್ರಮುಖ ಮತ್ತು 217 ಪ್ರಮುಖವಲ್ಲದ ಬಂದರುಗಳನ್ನು ನಿರ್ವಹಿಸುತ್ತಿದ್ದು, ದೇಶಾದ್ಯಂತ ವಿವಿಧ ರೀತಿಯ ಸರಕುಗಳನ್ನು ನಿರ್ವಹಿಸುತ್ತದೆ. ಭಾರತದ ಪ್ರಮುಖ ಮತ್ತು ಪ್ರಮುಖವಲ್ಲದ ಬಂದರುಗಳು 2025–26 ರಲ್ಲಿ 1,668 ಮಿಲಿಯನ್ ಮೆಟ್ರಿಕ್ ಟನ್ ಸರಕನ್ನು ನಿರ್ವಹಿಸಿದ್ದು, ಆರ್ಥಿಕ ಬೆಳವಣಿಗೆ ಮತ್ತು ವ್ಯಾಪಾರ ವಿಸ್ತರಣೆಯೊಂದಿಗೆ ಈ ಸಂಖ್ಯೆಯು ಏರುತ್ತಿದೆ.
- ಭಾರತದ ಕರಾವಳಿಯು ಸುಮಾರು 11,098 ಕಿಲೋಮೀಟರ್‌ಗಳಷ್ಟು ವಿಸ್ತಾರವಾಗಿದ್ದು, ನೈಸರ್ಗಿಕ ಬಂದರುಗಳು ಮತ್ತು ಬಂದರು ತಾಣಗಳೊಂದಿಗೆ ವಿಶ್ವದಲ್ಲೇ ಅತ್ಯಂತ ಉದ್ದವಾದ ಕರಾವಳಿಗಳಲ್ಲಿ ಒಂದಾಗಿದೆ.
- ವಿಶೇಷ ಆರ್ಥಿಕ ವಲಯವು 2.4 ಮಿಲಿಯನ್ ಚದರ ಕಿಲೋಮೀಟರ್ ಪ್ರದೇಶದಲ್ಲಿದ್ದು, ಕಡಲ ಸಂಪನ್ಮೂಲಗಳು ಮತ್ತು ಮೀನುಗಾರಿಕೆ ಚಟುವಟಿಕೆಗಳ ಮೇಲೆ ಸಾರ್ವಭೌಮ ಹಕ್ಕುಗಳನ್ನು ನೀಡುತ್ತದೆ.
- ಆಂತರಿಕ ಜಲಮಾರ್ಗಗಳು 14,500 ಕಿಲೋಮೀಟರ್‌ಗಳಿಗಿಂತ ಹೆಚ್ಚಿದ್ದು, ವೆಚ್ಚ-ದಾಯಕ ಸರಕು ಸಾಗಣೆಗೆ ನದಿಗಳು, ಕಾಲುವೆಗಳು ಮತ್ತು ಹಿನ್ನೀರುಗಳನ್ನು ಒದಗಿಸುತ್ತವೆ.
- ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಮುದ್ರದ ಗಡಿಯನ್ನು ಹೊಂದಿದ್ದು, ಜನಸಂಖ್ಯೆ ಮತ್ತು ಉದ್ಯಮಗಳು ಕಡಲ ವ್ಯಾಪಾರದಿಂದ ಪ್ರಯೋಜನ ಪಡೆಯುವಂತೆ ಮಾಡಿದೆ.
- ಕಡಲ ಜೀವನೋಪಾಯವು ಮೀನುಗಾರರು, ಬಂದರು ಕಾರ್ಮಿಕರು, ನಾವಿಕರು ಮತ್ತು ಹಡಗು ನಿರ್ಮಿಸುವವರು ಸೇರಿದಂತೆ 30 ಮಿಲಿಯನ್ (3 ಕೋಟಿ) ಗೂ ಹೆಚ್ಚು ಜನರನ್ನು ಬೆಂಬಲಿಸುತ್ತದೆ.
ಭಾರತಕ್ಕೆ ಭಾರತೀಯ ಕಡಲ ವಿಮಾ ಪೂಲ್ ಏಕಾಗಿ ಅಗತ್ಯವಿದೆ
2026 ರ ಮಧ್ಯದ ವೇಳೆಗೆ ಭಾರತೀಯ ಧ್ವಜವನ್ನು ಹೊಂದಿರುವ ಹಡಗುಗಳ ಸಮೂಹವು 1,609 ಹಡಗುಗಳಿಗೆ ಮತ್ತು 14.33 ಮಿಲಿಯನ್ ಗ್ರಾಸ್ ಟನ್ ಗೆ ಬೆಳೆದಿದೆ, ಇದು 2015 ರಿಂದ ಹಡಗುಗಳ ಸಾಮರ್ಥ್ಯದಲ್ಲಿ ಸುಮಾರು ಶೇಕಡಾ 36 ರಷ್ಟು ಹೆಚ್ಚಳವಾಗಿದೆ. ಭಾರತದ ವ್ಯಾಪಾರ ಮೌಲ್ಯದ ಶೇಕಡಾ 95 ರಷ್ಟು ಮತ್ತು ವ್ಯಾಪಾರ ಪ್ರಮಾಣದ ಶೇಕಡಾ 70 ರಷ್ಟು ಭಾಗವು ಸಮುದ್ರ ಮಾರ್ಗಗಳ ಮೂಲಕವೇ ಸಾಗುತ್ತದೆ.

ಜಾಗತಿಕ ವ್ಯಾಪಾರಕ್ಕೆ ಕಡಲ ವಿಮೆ ಕಡ್ಡಾಯವಾಗಿದೆ. 'ಹಲ್ ಮತ್ತು ಯಂತ್ರೋಪಕರಣ' ಪಾಲಿಸಿಗಳು ಹಡಗುಗಳನ್ನು ರಕ್ಷಿಸಿದರೆ, ಸರಕು ವಿಮೆಯು ಸಾಮಗ್ರಿಗಳನ್ನು ಭದ್ರಪಡಿಸುತ್ತದೆ ಹಾಗೂ 'ರಕ್ಷಣೆ ಮತ್ತು ನಷ್ಟ ಪರಿಹಾರ'ವು ಮಾಲಿನ್ಯ ಅಥವಾ ಹಡಗಿನ ಸಿಬ್ಬಂದಿಗೆ ಆಗುವ ಗಾಯಗಳಂತಹ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತದೆ. ಯುದ್ಧದ ಅಪಾಯದ (ವಾರ್ ರಿಸ್ಕ್) ವಿಮೆಯು ಕಡಲ್ಗಳ್ಳತನ ಮತ್ತು ಸಂಘರ್ಷಗಳಿಂದ ರಕ್ಷಣೆ ನೀಡುತ್ತದೆ. ಇವೆಲ್ಲವೂ ಒಟ್ಟಾಗಿ ವಿಮೆಯನ್ನು ಭಾರತದ ಹಡಗು ಆರ್ಥಿಕತೆಗೆ ಕಾನೂನುಬದ್ಧ ಮತ್ತು ವಾಣಿಜ್ಯಿಕ ಅಗತ್ಯವನ್ನಾಗಿ ಮಾಡುತ್ತವೆ.
- ವಿದೇಶಿ P&I ಕ್ಲಬ್‌ಗಳ ಮೇಲಿನ ಅತಿಯಾದ ಅವಲಂಬನೆ
|
ಅಂತರರಾಷ್ಟ್ರೀಯ 'ರಕ್ಷಣೆ ಮತ್ತು ನಷ್ಟ ಪರಿಹಾರ' ಕ್ಲಬ್‌ಗಳ ಒಕ್ಕೂಟ
ಅಂತರರಾಷ್ಟ್ರೀಯ 'ರಕ್ಷಣೆ ಮತ್ತು ನಷ್ಟ ಪರಿಹಾರ' ಕ್ಲಬ್‌ಗಳ ಒಕ್ಕೂಟವು ಹದಿಮೂರು ಮುಖ್ಯ ಕ್ಲಬ್‌ಗಳನ್ನು ಒಳಗೊಂಡಿದೆ. ಇವು ಒಟ್ಟಾಗಿ ಸರಕು ನಷ್ಟ, ಮಾಲಿನ್ಯ, ಹಡಗುಗಳ ಡಿಕ್ಕಿ ಮತ್ತು ಸಿಬ್ಬಂದಿಗೆ ಆಗುವ ಗಾಯಗಳಂತಹ ಅಪಾಯಗಳ ವಿರುದ್ಧ ವಿಶ್ವದ ಸುಮಾರು ಶೇಕಡಾ 90 ರಷ್ಟು ದೊಡ್ಡ ಹಡಗುಗಳಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತವೆ.
|
ಭಾರತವು ವಿಮಾ ಸರಣಿಗಾಗಿ ವಿದೇಶಿ ವಿಮಾದಾರರ ಮೇಲೆಯೇ ಅವಲಂಬಿತವಾಗಿದೆ. ಭಾರತೀಯ ಹಡಗು ಮಾಲೀಕರು ಬಹುತೇಕ ಪಾಶ್ಚಿಮಾತ್ಯ ದೇಶಗಳಲ್ಲಿ ನೆಲೆಸಿರುವ 13 ಅಂತರರಾಷ್ಟ್ರೀಯ ಪಿ&ಐ ಕ್ಲಬ್‌ಗಳನ್ನು ಸಂಪೂರ್ಣವಾಗಿ ನೆಚ್ಚಿಕೊಂಡಿದ್ದಾರೆ. ಈ ಅವಲಂಬನೆಯು ವಿಮಾ ರಕ್ಷಣೆಯ ದಿಢೀರ್ ಹಿಂತೆಗೆದುಕೊಳ್ಳುವಿಕೆ ಅಥವಾ ರಾಜಕೀಯ ಪ್ರಭಾವದ ನಿರ್ಧಾರಗಳಿಂದ ಭಾರತಕ್ಕೆ ತೊಂದರೆಯಾಗುವಂತೆ ಮಾಡುತ್ತದೆ, ಇದು ದೇಶೀಯ ಪರ್ಯಾಯದ ಮಹತ್ವವನ್ನು ಎತ್ತಿ ತೋರಿಸುತ್ತದೆ.
- ಭೌಗೋಳಿಕ ರಾಜಕೀಯ ಅಭದ್ರತೆ ಮತ್ತು ವ್ಯಾಪಾರಕ್ಕೆ ಅಡಚಣೆ
ಕೆಂಪು ಸಮುದ್ರದಲ್ಲಿನ ಸಂಘರ್ಷಗಳು ಮತ್ತು ಹಾರ್ಮುಜ್ ಜಲಸಂಧಿಯ ಬಳಿಯ ಉದ್ವಿಗ್ನತೆಗಳು ಪ್ರಮುಖ ಸಮುದ್ರ ಮಾರ್ಗಗಳಿಗೆ ಅಡಚಣೆ ಉಂಟುಮಾಡಿವೆ. ಭಾರತದ ಕಚ್ಚಾ ತೈಲ ಆಮದಿನ ಬಹುಪಾಲು ಭಾಗ ಸಮುದ್ರದ ಮೂಲಕವೇ ಬರುವುದರಿಂದ, ದೇಶದ ಇಂಧನ ಭದ್ರತೆಯು ತಡೆರಹಿತ ವಿಮಾ ರಕ್ಷಣೆಯನ್ನು ಅವಲಂಬಿಸಿದೆ. ಈ ಸಮಯದಲ್ಲಿ, ವಿದೇಶಿ ವಿಮಾದಾರರು ವಿಮಾ ಪ್ರೀಮಿಯಂ ದರಗಳನ್ನು ಹೆಚ್ಚಿಸಿದರು ಅಥವಾ ವಿಮಾ ರಕ್ಷಣೆ ನೀಡುವುದನ್ನೇ ನಿಲ್ಲಿಸಿದರು. ಇದು ಹಡಗು ಮಾಲೀಕರಿಗೆ ವೆಚ್ಚವನ್ನು ತೀವ್ರವಾಗಿ ಹೆಚ್ಚಿಸಿತು, ಹಾಗೂ ದೇಶೀಯ ಭದ್ರತಾ ವ್ಯವಸ್ಥೆಯ ಅಗತ್ಯವನ್ನು ಹೆಚ್ಚಿಸಿತು.
ಈ ಮೊದಲು, ಭಾರತದಲ್ಲಿ ಕಡಲ ವಿಮಾ ಪಾಲಿಸಿ ರಚನೆ (ಅಂಡರ್ರೈಟಿಂಗ್) ಮತ್ತು ಹಕ್ಕುಸ್ವಾಮ್ಯ ನಿರ್ವಹಣೆಯಲ್ಲಿ (ಕ್ಲೇಮ್ಸ್ ಮ್ಯಾನೇಜ್‌ಮೆಂಟ್) ತಾಂತ್ರಿಕ ಆಳವಿರಲಿಲ್ಲ. 'ಭಾರತೀಯ ಕಡಲ ವಿಮಾ ಪೂಲ್' (ಬಿಎಂಐಪಿ) ಈ ಪರಿಣತಿಯನ್ನು ಸ್ವದೇಶಿಯಾಗಿ ಬೆಳೆಸುತ್ತಿದ್ದು, ಜಾಗತಿಕ ಮಟ್ಟದ ದೇಶೀಯ ವಿಮಾ ಕ್ಷೇತ್ರಕ್ಕೆ ಅಡಿಪಾಯ ಹಾಕುತ್ತಿದೆ ಮತ್ತು ಲಂಡನ್ ಅಥವಾ ಸ್ವಿಟ್ಜರ್‌ಲ್ಯಾಂಡ್‌ನಂತಹ ವಿದೇಶಿ ಕೇಂದ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿದೆ.
'ಭಾರತೀಯ ಕಡಲ ವಿಮಾ ಪೂಲ್' ಹಡಗುಗಳು ಮತ್ತು ಸರಕುಗಳಿಗೆ ಕೈಗೆಟುಕುವ ಹಾಗೂ ಸಾರ್ವಭೌಮ ಬೆಂಬಲಿತ ವಿಮಾ ರಕ್ಷಣೆಯನ್ನು ಖಚಿತಪಡಿಸುತ್ತದೆ, ಜಾಗತಿಕ ಅಪಾಯಗಳ ವಿರುದ್ಧ ಸ್ಥಿರತೆಯನ್ನು ಹೆಚ್ಚಿಸುತ್ತದೆ.
- ಭಾರತೀಯ ಕಡಲ ವಿಮಾ ಪೂಲ್: ವಿನ್ಯಾಸ, ರಚನೆ ಮತ್ತು ರಕ್ಷಣೆ
ಈ ಪೂಲ್ (ನಿಧಿ ಸಂಸ್ಥೆ) ವ್ಯಾಪಾರ ಮಾರ್ಗಗಳಲ್ಲಿ ಹಡಗುಗಳು ಮತ್ತು ಸರಕುಗಳನ್ನು ರಕ್ಷಿಸಲು ಕಡಲ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಬೃಹತ್ ಕಡಲ ಅಪಾಯಗಳನ್ನು ನಿರ್ವಹಿಸಲು ಇದು ವಿಮಾದಾರರ ಜಂಟಿ ಭಾಗವಹಿಸುವಿಕೆ ಮತ್ತು ರಚನಾತ್ಮಕ ಆಡಳಿತ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತದೆ.
- ಸಾರ್ವಭೌಮ ಖಾತರಿ: ₹12,980 ಕೋಟಿ (1.4 ಶತಕೋಟಿ ಅಮೆರಿಕನ್ ಡಾಲರ್) ಮೌಲ್ಯದ ಸರ್ಕಾರಿ ಬೆಂಬಲವು ಆರ್ಥಿಕ ಶಕ್ತಿಯನ್ನು ಖಚಿತಪಡಿಸುತ್ತದೆ. ಈ ಖಾತರಿಯು ಅತ್ಯಂತ ಭಾರಿ ನಷ್ಟದ ಸಂದರ್ಭಗಳಲ್ಲೂ ಆರ್ಥಿಕ ಹೊಣೆಗಾರಿಕೆಗಳನ್ನು ಈಡೇರಿಸುತ್ತದೆ.
- ವಿಮಾ ಸ್ವೀಕಾರ ಸಾಮರ್ಥ್ಯ: ಸಾರ್ವಭೌಮ ಖಾತರಿಯ ಬೆಂಬಲದೊಂದಿಗೆ, ಈ ಪೂಲ್ ₹13,906.5 ಕೋಟಿ (1.5 ಶತಕೋಟಿ ಅಮೆರಿಕನ್ ಡಾಲರ್) ಮೌಲ್ಯದ ಅಪಾಯಗಳಿಗೆ ವಿಮಾ ರಕ್ಷಣೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಭಾರಿ ಕಡಲ ನಷ್ಟಗಳನ್ನು ಭರಿಸುವ ಅದರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
- ಅಪಾಯದ ರಕ್ಷಣೆ: ಹಡಗಿನ ಕಾಯ ಮತ್ತು ಯಂತ್ರೋಪಕರಣ, ಸರಕು, ರಕ್ಷಣೆ ಮತ್ತು ನಷ್ಟ ಪರಿಹಾರ ಹಾಗೂ ಯುದ್ಧದ ಅಪಾಯದ ವಿಮೆಗಳನ್ನು ಇದು ಒಳಗೊಂಡಿದೆ.
- ಹಡಗುಗಳ ಅರ್ಹತೆ: ಭಾರತೀಯ ಧ್ವಜವನ್ನು ಹೊಂದಿರುವ, ಭಾರತೀಯ ಸಂಸ್ಥೆಗಳ ಒಡೆತನದ, ನಿರ್ವಹಣೆಯ ಅಥವಾ ನಿಯಂತ್ರಣದಲ್ಲಿರುವ ಹಡಗುಗಳು, ಅಥವಾ ಭಾರತದಿಂದ ಹೊರಡುವ ಅಥವಾ ಭಾರತಕ್ಕೆ ಆಗಮಿಸುವ ಸರಕು ಹಡಗುಗಳು ಈ ವಿಮೆಗೆ ಅರ್ಹವಾಗಿರುತ್ತವೆ.
- ಕಾಲಾವಧಿ: ಇದರ ಕಾಲಾವಧಿ 10 ವರ್ಷಗಳಾಗಿದ್ದು, ಅದನ್ನು 15 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.
- ಜಂಟಿ ಪಾಲಿಸಿ ವಿತರಣೆ: ಪೂಲ್‌ನ ಸದಸ್ಯರಾಗಿರುವ ದೇಶೀಯ ವಿಮಾದಾರರು ತಮ್ಮ ಸಂಯೋಜಿತ ಸಾಮರ್ಥ್ಯವನ್ನು ಬಳಸಿ ಪಾಲಿಸಿಗಳನ್ನು ವಿತರಿಸುತ್ತಾರೆ. ಈ ಪಾಲಿಸಿಗಳ ಅಡಿಯಲ್ಲಿ ಬರುವ ಅಪಾಯಗಳನ್ನು, ಪ್ರತಿಯೊಬ್ಬ ಸದಸ್ಯರು ಒಪ್ಪಿಕೊಂಡ ಸಾಮರ್ಥ್ಯದ ಪ್ರಮಾಣಕ್ಕೆ ಅನುಗುಣವಾಗಿ ಎಲ್ಲಾ ಪೂಲ್ ಸದಸ್ಯರು ಸಾಮೂಹಿಕವಾಗಿ ಮರು-ವಿಮೆ ಮಾಡುತ್ತಾರೆ.
- ಹಕ್ಕುಸ್ವಾಮ್ಯ ನಿರ್ವಹಣೆ : 100 ಮಿಲಿಯನ್ ಅಮೆರಿಕನ್ ಡಾಲರ್‌ವರೆಗಿನ ಹಕ್ಕುಸ್ವಾಮ್ಯಗಳನ್ನು (ಕ್ಲೇಮ್‌ಗಳು) ಶೇಖರಿತ ಮೀಸಲು ನಿಧಿ ಮತ್ತು ಮರು-ವಿಮೆ ವಸೂಲಾತಿಗಳ ಮೂಲಕ ಈಡೇರಿಸಲಾಗುತ್ತದೆ. ಬೃಹತ್ ಮಟ್ಟದ ಹಕ್ಕುಸ್ವಾಮ್ಯಗಳಿಗಾಗಿ, ಪೂಲ್‌ನ ಮೀಸಲು ನಿಧಿಯು ಸಂಪೂರ್ಣವಾಗಿ ಖಾಲಿಯಾದ ನಂತರವಷ್ಟೇ ಸಾರ್ವಭೌಮ ಖಾತರಿಯು ಸಕ್ರಿಯಗೊಳ್ಳುತ್ತದೆ.
- ಆಡಳಿತ: ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಪೂಲ್ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ದೈನಂದಿನ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ಇದು ಕಾರ್ಯಕ್ಷಮತೆಯ ವರದಿಗಳನ್ನು ಸಲ್ಲಿಸುತ್ತದೆ ಮತ್ತು ಪೂಲ್‌ನ ದಕ್ಷ ಕಾರ್ಯನಿರ್ವಹಣೆಗೆ ಬೆಂಬಲ ನೀಡುತ್ತದೆ.
- ಆಡಳಿತ ಮಂಡಳಿ: ಆಡಳಿತ ಮಂಡಳಿಯು ಪೂಲ್‌ನ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ನಿಯಂತ್ರಿಸುತ್ತದೆ, ಜೊತೆಗೆ ನಿಯಮಗಳ ಪಾಲನೆ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸುತ್ತದೆ.
- ವಿಮಾ ಮೌಲ್ಯಮಾಪನ ಶಿಸ್ತು: ವಿಮಾ ಸ್ವೀಕಾರ ಸಮಿತಿಯು ನಿಖರ ಮತ್ತು ಸ್ಥಿರವಾದ ಅಪಾಯದ ಮೌಲ್ಯಮಾಪನವನ್ನು ಖಚಿತಪಡಿಸುತ್ತದೆ, ಇದು ದೀರ್ಘಕಾಲೀನ ಆರ್ಥಿಕ ಸುಸ್ಥಿರತೆಗೆ ಬೆಂಬಲ ನೀಡುತ್ತದೆ.

- ವಿಮಾ ರಕ್ಷಣೆಯ ಪ್ರಕಾರಗಳು ಮತ್ತು ವ್ಯಾಪ್ತಿ
'ಭಾರತೀಯ ಕಡಲ ವಿಮಾ ಪೂಲ್' (ಬಿಎಂಐಪಿ) ಅನ್ನು ಕಡಲ ಅಪಾಯದ ಪ್ರತಿಯೊಂದು ಕ್ಷೇತ್ರಕ್ಕೂ ಸಮಗ್ರ ವಿಮಾ ರಕ್ಷಣೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಮಾರ್ಗ ಅಥವಾ ಅಪಾಯದ ಸ್ವರೂಪ ಏನೇ ಇರಲಿ, ಭಾರತೀಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಯಾವುದೇ ಹಡಗು ಅಥವಾ ಸರಕು ದೇಶೀಯ ವಿಮಾ ರಕ್ಷಣೆಯಿಂದ ವಂಚಿತವಾಗದಂತೆ ಇದು ಖಚಿತಪಡಿಸುತ್ತದೆ.
- ಹಡಗಿನ ಕಾಯ ಮತ್ತು ಯಂತ್ರೋಪಕರಣದ ಯುದ್ಧದ ಅಪಾಯದ ರಕ್ಷಣೆ: ಇದು ಹಡಗಿನ ಕಾಯದ ರಚನೆ (ಹಡಗಿನ ಮುಖ್ಯ ಭಾಗ), ಚಾಲನಾ ವ್ಯವಸ್ಥೆ (ಹಡಗಿನ ಚಲನೆಗೆ ಶಕ್ತಿ ನೀಡುವ ಯಂತ್ರೋಪಕರಣಗಳು) ಮತ್ತು ಅಳವಡಿಸಲಾದ ಉಪಕರಣಗಳಿಗೆ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಇದು ಭಾರತದ ವಾಣಿಜ್ಯ ಹಡಗುಗಳ ಬಂಡವಾಳ ಮೌಲ್ಯವು ಸುಸ್ಥಿರವಾಗಿರಲು ಮತ್ತು ದೇಶೀಯವಾಗಿ ವಿಮೆ ಪಡೆಯಲು ನೆರವಾಗುತ್ತದೆ.
- ಸರಕುಗಳ ಯುದ್ಧದ ಅಪಾಯದ ರಕ್ಷಣೆ: ಇದು ಅಂತರರಾಷ್ಟ್ರೀಯ ಸಮುದ್ರ ಮಾರ್ಗಗಳಲ್ಲಿ ಸಾಗಣೆಯಾಗುವ ಸರಕುಗಳಿಗೆ ಆಗುವ ನಷ್ಟ ಅಥವಾ ಹಾನಿಯಿಂದ ರಕ್ಷಿಸುತ್ತದೆ. ಭಾರತೀಯ ರಫ್ತುದಾರರು ಮತ್ತು ಆಮದುದಾರರು ಅತ್ಯಂತ ಅಪಾಯಕಾರಿ ಅಥವಾ ಸಂಘರ್ಷ ಪೀಡಿತ ಕಡಲ ಮಾರ್ಗಗಳಲ್ಲೂ ಇದರ ಪ್ರಯೋಜನವನ್ನು ಪಡೆಯುತ್ತಾರೆ.
- ರಕ್ಷಣೆ ಮತ್ತು ನಷ್ಟ ಪರಿಹಾರ: ಇದು ಮಾಲಿನ್ಯ, ತೈಲ ಮಾಲಿನ್ಯ ಸ್ವಚ್ಛಗೊಳಿಸುವಿಕೆ, ಹಡಗಿನ ಅವಶೇಷಗಳ ತೆರವು, ಸಿಬ್ಬಂದಿಗೆ ಆಗುವ ಗಾಯ ಮತ್ತು ಸರಕು ಹಾನಿ ಸೇರಿದಂತೆ ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತದೆ. ಈ ಹಿಂದೆ ವಿದೇಶಿ ಕ್ಲಬ್‌ಗಳ ಮೂಲಕ ಮಾತ್ರ ಲಭ್ಯವಿದ್ದ ವಿಮಾ ರಕ್ಷಣೆಯನ್ನು ಭಾರತೀಯ ಹಡಗು ಮಾಲೀಕರು ಈಗ ದೇಶೀಯವಾಗಿ ಪಡೆಯುತ್ತಿದ್ದಾರೆ.
- ಯುದ್ಧದ ಅಪಾಯಗಳ ರಕ್ಷಣೆ: ಇದು ಸಶಸ್ತ್ರ ಸಂಘರ್ಷ, ಕಡಲ್ಗಳ್ಳತನ, ಭಯೋತ್ಪಾದನೆ ಮತ್ತು ಶತ್ರು ಹಡಗುಗಳ ವಶಪಡಿಸಿಕೊಳ್ಳುವಿಕೆಯಿಂದ ಉಂಟಾಗುವ ನಷ್ಟಗಳ ವಿರುದ್ಧ ವಿಮೆ ನೀಡುತ್ತದೆ. ಕೆಂಪು ಸಮುದ್ರ, ಹಾರ್ಮುಜ್ ಜಲಸಂಧಿಯಂತಹ ಸೂಕ್ಷ್ಮ ಪ್ರದೇಶಗಳು ಮತ್ತು ಇತರ ಅಪಾಯಕಾರಿ ಕಡಲ ಮಾರ್ಗಗಳಲ್ಲಿ ಸಾಗುವ ಭಾರತೀಯ ವ್ಯಾಪಾರಕ್ಕೆ ಈ ರಕ್ಷಣೆಯು ಅತ್ಯಂತ ಪ್ರಮುಖವಾಗಿದೆ.
ಫಲಿತಾಂಶ ಮತ್ತು ಪ್ರಭಾವ
ಮೇ 2026 ರಲ್ಲಿ 'ಭಾರತೀಯ ಕಡಲ ವಿಮಾ ಪೂಲ್' ಅನ್ನು ಪ್ರಾರಂಭಿಸಿರುವುದು ಭಾರತದ ಕಡಲ ವಿಮಾ ಕ್ಷೇತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಕಾರ್ಯಾಚರಣೆ ಪ್ರಾರಂಭವಾದಂದಿನಿಂದ, ಬಿಎಂಐಪಿ ಭಾರತೀಯ ಕಡಲ ಪಾಲುದಾರರಿಗೆ ತಡೆರಹಿತ ಯುದ್ಧ-ಅಪಾಯದ ವಿಮೆಯನ್ನು ಖಚಿತಪಡಿಸಿದೆ. ಪಶ್ಚಿಮ ಏಷ್ಯಾ ಸಂಘರ್ಷದ ಗರಿಷ್ಠ ಸಮಯಕ್ಕೆ ಹೋಲಿಸಿದರೆ ಯುದ್ಧದ ಅಪಾಯದ ವಿಮಾ ಪ್ರೀಮಿಯಂ ದರಗಳು ಸುಮಾರು ಶೇಕಡಾ 35-40 ರಷ್ಟು ಇಳಿಕೆಯಾಗಿವೆ. ಸೆಪ್ಟೆಂಬರ್ 7, 2026 ರ ಹೊತ್ತಿಗೆ, ಈ ಪೂಲ್ 3,000 ಸರಕು ಯುದ್ಧ ವಿಮೆ, 92 ಹಡಗಿನ ಯುದ್ಧ-ಅಪಾಯದ ವಿಮೆ ಮತ್ತು 3 ರಕ್ಷಣೆ ಮತ್ತು ನಷ್ಟ ಪರಿಹಾರ ವಿಮಾ ಪಾಲಿಸಿಗಳನ್ನು ವಿತರಿಸಿದೆ.
- ಒಂದು ಬಲವಾದ ಆರಂಭ: ಈ ಚಾಲನೆಯು ನೀಡಿದ ಪ್ರಮುಖ ಸಾಧನೆಗಳು
- ಭಾರತದ ಮೊದಲ P&I ಪಾಲಿಸಿ: ಜುಲೈ 30, 2026 ರಂದು, ಬಿಎಂಐಪಿ ಅಡಿಯಲ್ಲಿ ಭಾರತದ ಮೊದಲ 'ರಕ್ಷಣೆ ಮತ್ತು ನಷ್ಟ ಪರಿಹಾರ' ವಿಮಾ ಪಾಲಿಸಿಯನ್ನು ಶಿಸ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ಗೆ ವಿತರಿಸಲಾಯಿತು. ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ವಿತರಿಸಿದ ಈ ಪಾಲಿಸಿಯು ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳ ವಿರುದ್ಧ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.
- ಮೊದಲ ಹಡಗಿನ ಕಾಯ ಮತ್ತು ಯಂತ್ರೋಪಕರಣದ ಯುದ್ಧ-ಅಪಾಯದ ಪಾಲಿಸಿ: ಮೇ 12, 2026 ರಂದು, ಸಂಘರ್ಷ ಪೀಡಿತ ವಲಯಗಳಲ್ಲಿ ಚಲಿಸುವ ಹಡಗಿಗಾಗಿ ಪೂಲ್‌ನ ತೀರಾ ಮೊದಲ ಪಾಲಿಸಿಯನ್ನು ನೀಡಲಾಯಿತು. ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯು ಮೆಸರ್ಸ್ ಹೊಗರ್ ಆಫ್‌ಶೋರ್ ಅಂಡ್ ಮೆರೈನ್ ಪ್ರೈವೇಟ್ ಲಿಮಿಟೆಡ್‌ಗೆ ಈ 'ಮೆರೈನ್ ಹಲ್ ಅಂಡ್ ಮೆಷಿನರಿ ವಾರ್ ಪಾಲಿಸಿ'ಯನ್ನು ವಿತರಿಸಿತು. ಸರಳವಾಗಿ ಹೇಳುವುದಾದರೆ, ಭಾರತೀಯ ಹಡಗು ಈಗ ಯುದ್ಧದ ಅಪಾಯಗಳ ವಿರುದ್ಧ ಸ್ವದೇಶಿ ರಕ್ಷಣೆಯೊಂದಿಗೆ ಸಮುದ್ರಯಾನ ಮಾಡುತ್ತಿದೆ.
- ಭಾರತಕ್ಕೆ ಆಗಮಿಸುವ ಸರಕುಗಳಿಗೆ ವಿಮಾ ರಕ್ಷಣೆ: ಮೆಸರ್ಸ್ ವೇದಾಂತ ಸ್ಟರ್ಲೈಟ್ ಕಾಪರ್ ಲಿಮಿಟೆಡ್‌ಗೆ 'ಮೆರೈನ್ ಕಾರ್ಗೋ ವಾರ್ ಪಾಲಿಸಿ' ನೀಡಲಾಯಿತು. ಇದು ಭಾರತಕ್ಕೆ ಕಂಪನಿಯು ಆಮದು ಮಾಡಿಕೊಳ್ಳುವ ಕೇಬಲ್ ವೈರ್‌ಗಳನ್ನು ರಕ್ಷಿಸುತ್ತದೆ. ಭಾರತದ ಬೃಹತ್ ಕೈಗಾರಿಕಾ ಆಮದುದಾರರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ ಈ ಪೂಲ್‌ಗೆ ಇದೆ ಎಂಬುದನ್ನು ಇದು ತೋರಿಸುತ್ತದೆ. ಇದು ಭಾರತೀಯ ಉದ್ಯಮಗಳಿಗೆ ಪೂರೈಕೆಯಾಗುವ ಸರಪಳಿಯನ್ನು ಸುರಕ್ಷಿತವಾಗಿಡುತ್ತದೆ.
- ಹಡಗು ಕಂಪನಿಗಳಾಚೆಗಿನ ವ್ಯಾಪ್ತಿ: ಸಕ್ಕರೆ ತಯಾರಿಕಾ ಸಂಸ್ಥೆಯಾದ ಬಲರಾಮ್‌ಪುರ್ ಚೀನಿ ಮಿಲ್ಸ್ ಲಿಮಿಟೆಡ್‌ಗೆ ಸಹ ಪಾಲಿಸಿಯನ್ನು ವಿತರಿಸಲಾಗಿದೆ. ಈ ಪೂಲ್ ಕೇವಲ ಹಡಗು ಮಾಲೀಕರಿಗಷ್ಟೇ ಸೀಮಿತವಾಗಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಸಮುದ್ರ ಮಾರ್ಗದ ಮೂಲಕ ಸರಕುಗಳನ್ನು ಸಾಗಿಸುವ ಕೃಷಿ ಕ್ಷೇತ್ರ, ಕಾರ್ಖಾನೆಗಳು ಮತ್ತು ಸರಕು ವ್ಯಾಪಾರಿಗಳು ಸಹ ವಿಮಾ ರಕ್ಷಣೆಯನ್ನು ಪಡೆಯಬಹುದು. ಆದ್ದರಿಂದ, ಈ ಪೂಲ್ ವಿಶಾಲವಾದ ಭಾರತೀಯ ಆರ್ಥಿಕತೆಗೆ ನೆರವಾಗುತ್ತಿದೆ.
- ಆಡಳಿತ ಮತ್ತು ಜಾರಿಯಲ್ಲಿರುವ ವ್ಯವಸ್ಥೆಗಳು: ಚಾಲನೆ ನೀಡಿದಂದಿನಿಂದ ಆಡಳಿತ ಮಂಡಳಿ ಮತ್ತು ವಿಮಾ ಸ್ವೀಕಾರ ಸಮಿತಿಯನ್ನು ಸ್ಥಾಪಿಸಲಾಗಿದೆ. ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಪೂಲ್ ಮ್ಯಾನೇಜರ್/ಆಡಳಿತಾಧಿಕಾರಿಯಾಗಿ ಹೊಣೆ ವಹಿಸಿಕೊಂಡಿದೆ. ವಿಮಾ ಮೌಲ್ಯಮಾಪನ, ಹಕ್ಕುಸ್ವಾಮ್ಯ ಇತ್ಯರ್ಥ ಮತ್ತು ನಿಯಂತ್ರಕ ಪಾಲನೆಗಾಗಿ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಈ ಪೂಲ್ ಈಗ ಪೂರ್ಣ ಪ್ರಮಾಣದ ವಾಣಿಜ್ಯ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಮುಂದಿನ ಹಾದಿ
'ಭಾರತೀಯ ಕಡಲ ವಿಮಾ ಸಂಸ್ಥೆ' ಭಾರತದ ಕಡಲ ಕ್ಷೇತ್ರದ ಆರ್ಥಿಕ ಸ್ವಾವಲಂಬನೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಪಾಲುದಾರರಿಗೆ ನಂಬಿಕಸ್ಥ ಕಾರ್ಯಾಚರಣೆ, ಸ್ಪರ್ಧಾತ್ಮಕ ದರಗಳು ಮತ್ತು ವಿಶ್ವಾಸಾರ್ಹ ಹಕ್ಕುಸ್ವಾಮ್ಯ ಇತ್ಯರ್ಥವನ್ನು ಖಚಿತಪಡಿಸುವುದು ಇದರ ಪ್ರಮುಖ ಪಾತ್ರವಾಗಿದೆ. ಮಾನವ ಸಂಪನ್ಮೂಲ, ಕಾನೂನು ಚೌಕಟ್ಟುಗಳು ಮತ್ತು ಮರು-ವಿಮೆ ಸಹಭಾಗಿತ್ವವನ್ನು ಬಲಪಡಿಸುವುದರ ಮೇಲೆ ಮಧ್ಯಮ ಅವಧಿಯ ಗಮನವನ್ನು ಹರಿಸಲಾಗುತ್ತದೆ. ಈ ಪ್ರಯತ್ನಗಳು ಸಾರ್ವಭೌಮ ಬೆಂಬಲದ ಮೇಲಿನ ಅವಲಂಬನೆಯನ್ನು ಕನಿಷ್ಠವಾಗಿರಿಸಿಕೊಂಡು, ರಕ್ಷಣಾತ್ಮಕ ಸ್ಥಿರತೆಯನ್ನು ಹೆಚ್ಚಿಸುತ್ತವೆ.
ದೀರ್ಘಾವಧಿಯಲ್ಲಿ, ಈ ಪೂಲ್ ಹಿಂದೂ ಮಹಾಸಾಗರ ಪ್ರದೇಶದ ಕಡಲ ವಿಮೆಗೆ ಒಂದು ಪ್ರಾದೇಶಿಕ ನೆಲೆಸಾಪವಾಗಿ ಹೊರಹೊಮ್ಮಲಿದೆ. ಆರ್ಥಿಕ ಸೇವೆಗಳ ಪೂರೈಕೆದಾರರಾಗಿ ಮತ್ತು ಕಡಲ ಅಪಾಯದ ಮಾನದಂಡಗಳನ್ನು ರೂಪಿಸುವ ರಾಷ್ಟ್ರವಾಗಿ ಭಾರತವು ಗುರುತಿಸಿಕೊಳ್ಳಲಿದೆ. ಹಡಗು ನಿರ್ಮಾಣ ಕ್ಷೇತ್ರವು ವಿಸ್ತರಿಸುತ್ತಿದ್ದಂತೆ ಮತ್ತು ಬಂದರುಗಳು ಹೆಚ್ಚಿನ ಪ್ರಮಾಣದ ಸರಕುಗಳನ್ನು ನಿರ್ವಹಿಸುತ್ತಿದ್ದಂತೆ, ಈ ಪೂಲ್ ಭಾರತದ ಕಡಲ ಕ್ಷೇತ್ರದ ಮಹತ್ವಾಕಾಂಕ್ಷೆಗಳೊಂದಿಗೆ ಬೆಳೆಯಲಿದೆ. ಇದರ ಸಾಮರ್ಥ್ಯ ಮತ್ತು ವಿಮಾ ರಕ್ಷಣೆಯ ವ್ಯಾಪ್ತಿಯು ಭಾರತದ ಕಡಲ ಮೂಲಸೌಕರ್ಯದ ಶಾಶ್ವತ ಸ್ತಂಭವಾಗಿ ನಿಲ್ಲಲಿದೆ.
References:
Ministry of Ports, Shipping and Waterways:
https://www.pib.gov.in/PressReleasePage.aspx?PRID=2253432®=3&lang=1
https://www.pib.gov.in/PressReleasePage.aspx?PRID=2260712®=3&lang=2
https://www.pib.gov.in/PressReleasePage.aspx?PRID=2244786®=3&lang=1
https://shipmin.gov.in/sites/default/files/Maritime%20Amrit%20Kaal%20Vision%202047%20%28MAKV%202047%29_compressed.pdf
https://sansad.in/getFile/lsapps/loksabhaquestions/annex/188/AU927_Q1ssYz.pdf?source=lsapps
Ministry of Finance:
https://www.pib.gov.in/PressReleasePage.aspx?PRID=2260413®=3&lang=1
https://x.com/DFS_India/status/2045461170069594537
Directorate General of Shipping:
https://dgma.gov.in/download/1781517244_6a2fcbbc219f8_bmip-note.pdf
https://dgma.gov.in/nautical-wing/insurance
Inland Waterways Authority of India:
https://iwai.nic.in/
Cabinet:
https://www.pib.gov.in/PressReleasePage.aspx?PRID=2253242®=3&lang=1
Click here for hindi PDF file.
*****
(Explainer ID: 160196)
आगंतुक पटल : 4
Provide suggestions / comments