• Sitemap
  • Advance Search
Social Welfare

ಪ್ರಧಾನ ಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆ (ಪಿಎಂ-ಅಜಯ್‌)

ಪ್ರಗತಿಯತ್ತ ಹಾದಿ ನಿರ್ಮಾಣ

Posted On: 28 SEP 2026 12:04PM

ಭಾರತದ ಜನಸಂಖ್ಯೆಯ ಶೇಕಡಾ 16.6 ರಷ್ಟಿರುವ ಪರಿಶಿಷ್ಟ ಜಾತಿಯವರು ಐತಿಹಾಸಿಕವಾಗಿ ಸಾಮಾಜಿಕ-ಆರ್ಥಿಕ ಪ್ರಗತಿ ಮತ್ತು ಸಮಗ್ರ ಒಳಗೊಳ್ಳುವಿಕೆಯಲ್ಲಿ ಹಲವು ಅಡೆತಡೆಗಳನ್ನು ಎದುರಿಸಿದ್ದಾರೆ. ಈ ಅಸಮಾನತೆಗಳನ್ನು ನಿವಾರಿಸುವುದು ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳು ಮತ್ತು ಭಾರತದ ವಿಕಾಸದ ಪಯಣದಲ್ಲಿ ವ್ಯಾಪಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಗತ್ಯವಾಗಿದೆ. ಈ ಅಭಿವೃದ್ಧಿ ವ್ಯತ್ಯಾಸಗಳನ್ನು ಗುರುತಿಸಿ, ಭಾರತ ಸರ್ಕಾರವು ಪರಿಶಿಷ್ಟ ಜಾತಿಯವರ ಸರ್ವಾಂಗೀಣ ಅಭಿವೃದ್ಧಿಯನ್ನು ಉತ್ತೇಜಿಸಲು 'ಪ್ರಧಾನ ಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆ'ಯನ್ನು ಪ್ರಾರಂಭಿಸಿತು.

ಸಮಗ್ರ ಸಬಲೀಕರಣದ ದೂರದೃಷ್ಟಿ

'ಪ್ರಧಾನ ಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆ'ಯು 2021-22 ರ ಹಣಕಾಸು ವರ್ಷದಲ್ಲಿ ಪ್ರಾರಂಭಿಸಲಾದ ಶೇಕಡಾ 100 ರಷ್ಟು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಇದು ಒಂದು ಸಮಗ್ರ ಮತ್ತು ಸಮ್ಮಿಳಿತ ವಿಧಾನದ ಮೂಲಕ ಪರಿಶಿಷ್ಟ ಜಾತಿ ಸಮುದಾಯಗಳ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣವನ್ನು ಸಾಧಿಸುವ ದೂರದೃಷ್ಟಿಯನ್ನು ಹೊಂದಿದೆ. 'ಪಿಎಂ-ಅಜಯ್' ಯೋಜನೆಯನ್ನು ಶೀಘ್ರವಾಗಿ ಮತ್ತು ಗುಣಮಟ್ಟದಿಂದ ಅನುಷ್ಠಾನಗೊಳಿಸಲು ಸರ್ಕಾರವು ಪಿಎಂ-ಅಜಯ್‌ ಮೊಬೈಲ್ ಆಪ್ ಮತ್ತು ಪಿಎಂ-ಅಜಯ್‌ಪೋರ್ಟಲ್ ಅನ್ನು ಪ್ರಾರಂಭಿಸಿದೆ.

'ಪಿಎಂ-ಅಜಯ್' ಯೋಜನೆಯು ಈ ಹಿಂದೆ ಚಾಲ್ತಿಯಲ್ಲಿದ್ದ ಮೂರು ಕೇಂದ್ರ ಪ್ರಾಯೋಜಿತ ಯೋಜನೆಗಳಾದ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ, ಪರಿಶಿಷ್ಟ ಜಾತಿಗಳ ಉಪ ಯೋಜನೆಗೆ ವಿಶೇಷ ಕೇಂದ್ರ ನೆರವು ಮತ್ತು ಬಾಬು ಜಗಜೀವನ್ ರಾಮ್ ಛತ್ರಾವಾಸ್ ಯೋಜನೆ ಗಳನ್ನು ವಿಲೀನಗೊಳಿಸಿ ರೂಪಿಸಲಾದ ಯೋಜನೆಯಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಅನುಷ್ಠಾನಗೊಳ್ಳುತ್ತಿರುವ 'ಪಿಎಂ-ಅಜಯ್' ಯೋಜನೆಯು, 'ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ'ಯ ತನ್ನ ವಿಶಾಲ ಗುರಿಯನ್ನು ಈ ಕೆಳಗಿನ ಮೂರು ಪ್ರಮುಖ ಉದ್ದೇಶಗಳ ಮೂಲಕ ಪ್ರಾಯೋಗಿಕ ಕಾರ್ಯರೂಪಕ್ಕೆ ತರುತ್ತದೆ:

  • ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿಯ ಮೂಲಕ ಪರಿಶಿಷ್ಟ ಜಾತಿ ಸಮುದಾಯಗಳ ಬಡತನವನ್ನು ಕಡಿಮೆ ಮಾಡುವುದು: ಇದನ್ನು ಕೌಶಲ್ಯಾಭಿವೃದ್ಧಿ, ಆದಾಯ ತರುವ ಯೋಜನೆಗಳು ಮತ್ತು ಇತರ ಉಪಕ್ರಮಗಳ ಮೂಲಕ ಮಾಡಲಾಗುತ್ತದೆ. ಈ ಕ್ರಮಗಳು ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲು ಮತ್ತು ಫಲಾನುಭವಿಗಳು ಸುಸ್ಥಿರ ಆದಾಯ ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತವೆ.
  • ಪರಿಶಿಷ್ಟ ಜಾತಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಸೂಕ್ತ ಮೂಲಸೌಕರ್ಯ ಮತ್ತು ಅಗತ್ಯ ಸೇವೆಗಳನ್ನು ಖಚಿತಪಡಿಸುವ ಮೂಲಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸೂಚಕಗಳನ್ನು ಸುಧಾರಿಸುವುದು: ಈ ಯೋಜನೆಯು ಅಭಿವೃದ್ಧಿಯ ಪ್ರಮುಖ ಕೊರತೆಗಳನ್ನು ನೀಗಿಸಲು ಮತ್ತು ಉತ್ತಮ ಜೀವನಮಟ್ಟಕ್ಕೆ ಕೊಡುಗೆ ನೀಡುವ ಅಗತ್ಯ ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ಮಾಡಲು ಶ್ರಮಿಸುತ್ತದೆ.
  • ಸಾಕ್ಷರತೆಯನ್ನು ಹೆಚ್ಚಿಸುವುದು ಮತ್ತು ಶಾಲೆಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ನೋಂದಣಿಯನ್ನು ಉತ್ತೇಜಿಸುವುದು: ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಮತ್ತು ವಸತಿ ಶಾಲೆಗಳಲ್ಲಿ, ವಿಶೇಷವಾಗಿ ಮಹತ್ವಾಕಾಂಕ್ಷೆಯ ಜಿಲ್ಲೆಗಳು/ಪರಿಶಿಷ್ಟ ಜಾತಿ ಪ್ರಾಬಲ್ಯದ ಬ್ಲಾಕ್‌ಗಳಲ್ಲಿ ಹಾಗೂ ಭಾರತದಾದ್ಯಂತ ಸೂಕ್ತ ವಸತಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ.

ಯಾರು 'ಪಿಎಂ-ಅಜಯ್' ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು?

'ಪಿಎಂ-ಅಜಯ್' ಯೋಜನೆಯ ಹೃದಯಭಾಗದಲ್ಲಿ ಅರ್ಹತೆಯ ನಿಖರವಾದ ಚೌಕಟ್ಟಿದ್ದು, ಯೋಜನೆಯ ಪ್ರಯೋಜನಗಳು ಸೂಕ್ತ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ತಲುಪುವುದನ್ನು ಖಚಿತಪಡಿಸುತ್ತದೆ. ಅದರಂತೆ, ಈ ಕೆಳಗಿನ ಮಾನದಂಡಗಳ ಆಧಾರದ ಮೇಲೆ ಯೋಜನೆಗೆ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ:

  • ಅನುದಾನಿತ ಸಹಾಯ ಘಟಕದಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ, ವಾರ್ಷಿಕ ಆದಾಯ ರೂ. 2.50 ಲಕ್ಷಕ್ಕಿಂತ ಹೆಚ್ಚಿಲ್ಲದ ಕುಟುಂಬಗಳಿಗೆ/ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಪ್ರಾಬಲ್ಯವಿರುವ ಗುಂಪುಗಳ ಪರಿಶಿಷ್ಟ ಜಾತಿ ಸದಸ್ಯರು ಸಹ ಅರ್ಹರಾಗಿರುತ್ತಾರೆ.
  • ಮೂಲಸೌಕರ್ಯ ಅಭಿವೃದ್ಧಿಯ ಸಂದರ್ಭದಲ್ಲಿ, ಶೇಕಡಾ 40 ಅಥವಾ ಅದಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿರುವ ಮತ್ತು ಒಟ್ಟು 500 ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಹಳ್ಳಿಗಳು ಈ ಯೋಜನೆಯಡಿಯಲ್ಲಿ ಅನುದಾನಕ್ಕೆ ಅರ್ಹವಾಗಿರುತ್ತವೆ.

ಕಾರ್ಯರೂಪದಲ್ಲಿ 'ಪಿಎಂ-ಅಜಯ್'

'ಪಿಎಂ-ಅಜಯ್' ಯೋಜನೆಯ ರಚನೆಯು ಅಭಿವೃದ್ಧಿಯ ವಿವಿಧ ಆಯಾಮಗಳನ್ನು ನಿರ್ವಹಿಸಲು ಮೂರು ವಿಭಿನ್ನ ಘಟಕಗಳ ಮೇಲೆ ಆಧಾರಿತವಾಗಿದೆ:

ಪರಿಶಿಷ್ಟ ಜಾತಿ ಪ್ರಾಬಲ್ಯವಿರುವ ಹಳ್ಳಿಗಳನ್ನು "ಆದರ್ಶ ಗ್ರಾಮ"ಗಳಾಗಿ ಅಭಿವೃದ್ಧಿಪಡಿಸುವುದು

ಮೂಲಸೌಕರ್ಯ ಮತ್ತು ಸೇವೆಗಳಲ್ಲಿನ ಪ್ರಮುಖ ಕೊರತೆಗಳನ್ನು ನೀಗಿಸುವ ಮೂಲಕ ಪರಿಶಿಷ್ಟ ಜಾತಿ ಬಹುಸಂಖ್ಯಾತರಿರುವ ಹಳ್ಳಿಗಳನ್ನು 'ಆದರ್ಶ ಗ್ರಾಮ'ಗಳನ್ನಾಗಿ (ಮಾದರಿ ಹಳ್ಳಿಗಳು) ಪರಿವರ್ತಿಸುವುದು. ಆದರ್ಶ ಗ್ರಾಮ ಘಟಕವು ದೇಶಾದ್ಯಂತ 47,243 ಹಳ್ಳಿಗಳನ್ನು ಒಳಗೊಂಡಿದ್ದು, 47.79 ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಪ್ರಯೋಜನವನ್ನು ತಲುಪಿಸಿದೆ. ಒಟ್ಟು 46,944 ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, 27,032 ಗ್ರಾಮ ಅಭಿವೃದ್ಧಿ ಯೋಜನೆಗಳನ್ನು (VDP) ಸಿದ್ಧಪಡಿಸಲಾಗಿದೆ. ಸೆಪ್ಟೆಂಬರ್ 8, 2026 ರ ಹೊತ್ತಿಗೆ, 18,093 ಹಳ್ಳಿಗಳನ್ನು ಆದರ್ಶ ಗ್ರಾಮಗಳೆಂದು ಘೋಷಿಸಲಾಗಿದೆ, ಇದು ಪರಿಶಿಷ್ಟ ಜಾತಿ ಬಹುಸಂಖ್ಯಾತರಿರುವ ಹಳ್ಳಿಗಳಲ್ಲಿ ಮೂಲಸೌಕರ್ಯ, ಮೂಲಭೂತ ಸೇವೆಗಳು ಮತ್ತು ಜೀವನಮಟ್ಟವನ್ನು ಸುಧಾರಿಸುವಲ್ಲಿನ ಗಮನಾರ್ಹ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.

'ಆದರ್ಶ ಗ್ರಾಮ' ಎಂಬುದು ಜನರು ವಿವಿಧ ಮೂಲಭೂತ ಸೇವೆಗಳನ್ನು ಪಡೆದುಕೊಳ್ಳುವ ವಾತಾವರಣವಿರುವ ಗ್ರಾಮವಾಗಿದೆ. ಸಮಾಜದ ಎಲ್ಲಾ ವರ್ಗಗಳ ಕನಿಷ್ಠ ಅಗತ್ಯಗಳನ್ನು ಇಲ್ಲಿ ಸಂಪೂರ್ಣವಾಗಿ ಪೂರೈಸಲಾಗುತ್ತದೆ ಮತ್ತು ಅಸಮಾನತೆಗಳನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸಲಾಗುತ್ತದೆ. ಗೌರವಾನ್ವಿತ ಜೀವನಕ್ಕೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳು ಮತ್ತು ಸೇವಾವ್ಯವಸ್ಥೆಗಳು ಪ್ರತಿಯೊಬ್ಬರಿಗೂ ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಈ ಹಳ್ಳಿಗಳನ್ನು ಕಲ್ಪಿಸಲಾಗಿದೆ. ಇದು ಪ್ರತಿಯೊಬ್ಬ ನಿವಾಸಿಯೂ ತಮ್ಮ ಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸಿಕೊಳ್ಳಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ.

ರಾಜ್ಯಗಳು/ಜಿಲ್ಲೆಗಳಿಗೆ ಸಾಮಾಜಿಕ-ಆರ್ಥಿಕ ಯೋಜನೆಗಳಿಗಾಗಿ ಅನುದಾನಿತ ನೆರವು

ಪರಿಶಿಷ್ಟ ಜಾತಿಯವರ ಸಾಮಾಜಿಕ-ಆರ್ಥಿಕ ಪ್ರಗತಿಯನ್ನು ಗುರಿಯಾಗಿಸಿಕೊಂಡು ಜಿಲ್ಲಾ/ರಾಜ್ಯ ಮಟ್ಟದ ಯೋಜನೆಗಳಿಗೆ ಆರ್ಥಿಕ ನೆರವು ನೀಡುವುದು. ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ:

  • ಕೌಶಲ್ಯಾಭಿವೃದ್ಧಿ ಮತ್ತು ಸಂಬಂಧಿತ ಮೂಲಸೌಕರ್ಯಗಳನ್ನು ಒಳಗೊಂಡಂತೆ, ಸಮಗ್ರ ಜೀವನೋಪಾಯ ಯೋಜನೆಗಳ ಮೂಲಕ ಗುರಿ ಜನಸಂಖ್ಯೆಯ ಆದಾಯವನ್ನು ಹೆಚ್ಚಿಸುವುದು.
  • ಪರಿಶಿಷ್ಟ ಜಾತಿ ಪ್ರಾಬಲ್ಯವಿರುವ ಹಳ್ಳಿಗಳಲ್ಲಿ ಸೂಕ್ತ ಮೂಲಸೌಕರ್ಯಗಳನ್ನು ಸೃಷ್ಟಿಸುವ ಮೂಲಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸೂಚಕಗಳನ್ನು ಸುಧಾರಿಸುವುದು.
  • ಅಗತ್ಯವಿರುವಲ್ಲಿ ವಸತಿ ಶಾಲೆಗಳನ್ನು ಒದಗಿಸುವ ಮೂಲಕ ಸಾಕ್ಷರತೆಯನ್ನು ಹೆಚ್ಚಿಸುವುದು ಮತ್ತು ಶಾಲೆಗಳಲ್ಲಿ ಪರಿಶಿಷ್ಟ ಜಾತಿಯ ಮಕ್ಕಳ ನೋಂದಣಿಯನ್ನು ಉತ್ತೇಜಿಸುವುದು.

2021-22 ರಿಂದ 2025-26 ರ ಹಣಕಾಸು ವರ್ಷಗಳಲ್ಲಿ ಅನುದಾನಿತ ನೆರವು ಘಟಕದಡಿಯಲ್ಲಿ ನೇರವಾಗಿ ರಾಜ್ಯಗಳಿಗೆ ₹1,730 ಕೋಟಿಗೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದು 2.5 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಮತ್ತು ಗುಂಪು ಫಲಾನುಭವಿಗಳಿಗೆ ಕೌಶಲ್ಯ ಮತ್ತು ಜೀವನೋಪಾಯದ ಬೆಂಬಲವನ್ನು ವಿಸ್ತರಿಸುತ್ತದೆ.

ವಸತಿ ನಿಲಯಗಳ (ಹಾಸ್ಟೆಲ್) ನಿರ್ಮಾಣ/ದುರಸ್ತಿ

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅನುಕೂಲ ಮಾಡಿಕೊಡುವುದು ಮತ್ತು ಉತ್ತೇಜಿಸುವುದು ವಸತಿ ನಿಲಯಗಳ ನಿರ್ಮಾಣ ಹಾಗೂ ದುರಸ್ತಿಯ ಮುಖ್ಯ ಉದ್ದೇಶವಾಗಿದೆ. ಇಂತಹ ವಸತಿ ನಿಲಯಗಳು ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿವೆ. ಸೆಪ್ಟೆಂಬರ್ 2026 ರ ಹೊತ್ತಿಗೆ, ಒಟ್ಟು 785 ವಿದ್ಯಾರ್ಥಿ ವಸತಿ ನಿಲಯಗಳು ಪೂರ್ಣಗೊಂಡಿವೆ. 2026-27ರ ಹಣಕಾಸು ವರ್ಷಕ್ಕೆ 264 ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಒದಗಿಸಲು ಎರಡು ವಸತಿ ನಿಲಯ ಯೋಜನೆಗಳ (ಬಾಲಕಿಯರಿಗೆ ಒಂದು ಮತ್ತು ಬಾಲಕರಿಗೆ ಒಂದು) ನಿರ್ಮಾಣಕ್ಕಾಗಿ ಸರ್ಕಾರವು ₹61.46 ಕೋಟಿ ಕೇಂದ್ರ ನೆರವನ್ನು ಹಂಚಿಕೆ ಮಾಡಿದೆ.

ಸಬಲೀಕರಣದಲ್ಲಿ ಹೂಡಿಕೆ

ಯಾವುದೇ ಕಲ್ಯಾಣ ಉಪಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಸುಸ್ಥಿರ ಆರ್ಥಿಕ ಬೆಂಬಲದ ಅಗತ್ಯವಿರುತ್ತದೆ. 'ಪಿಎಂ-ಅಜಯ್' ಯೋಜನೆಯಡಿಯ ಹಣಕಾಸು ಚೌಕಟ್ಟಿನ ಅವಲೋಕನವನ್ನು ಕೆಳಗೆ ನೀಡಲಾಗಿದೆ.

ಹಣಕಾಸು ಹಂಚಿಕೆಯ ಒಂದು ನೋಟ

ಹಣಕಾಸು ಮಾದರಿ

100% ಕೇಂದ್ರ ಅನುದಾನಿತ ಯೋಜನೆ

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಕೊಡುಗೆ

ಅಗತ್ಯವಿದ್ದಲ್ಲಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಹೆಚ್ಚುವರಿ ಸಂಪನ್ಮೂಲಗಳ ಮೂಲಕ ಯೋಜನೆಗೆ ಪೂರಕ ಬೆಂಬಲ ನೀಡಬಹುದು

ಘಟಕವಾರು ಹಂಚಿಕೆ

• 50% ರವರೆಗೆ: ಆಯ್ಕೆಮಾಡಿದ ಆದರ್ಶ ಗ್ರಾಮಗಳಲ್ಲಿ ಕೊರತೆ ನೀಗಿಸುವ (Gap-filling) ಚಟುವಟಿಕೆಗಳಿಗೆ.

• 5% ರವರೆಗೆ: ಕೇಂದ್ರ ಮಟ್ಟದಲ್ಲಿ TSG (ತಾಂತ್ರಿಕ ಬೆಂಬಲ ಗುಂಪು) ಮತ್ತು PIU (ಯೋಜನೆ ಅನುಷ್ಠಾನ ಘಟಕಗಳು) ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪಿಐಯುಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗಾಗಿ.

• 2% ರವರೆಗೆ: ವಸತಿ ನಿಲಯಗಳ ನಿರ್ಮಾಣ ಮತ್ತು ದುರಸ್ತಿಗಾಗಿ - ಇದನ್ನು ಕೇಂದ್ರ ಸಂಸ್ಥೆಗಳಿಗೆ ಬಳಸಲಾಗುತ್ತದೆ ಮತ್ತು ಸಚಿವಾಲಯವು ನೇರವಾಗಿ ಅನುಷ್ಠಾನ ಸಂಸ್ಥೆಗಳಿಗೆ ಬಿಡುಗಡೆ ಮಾಡುತ್ತದೆ.

• ಉಳಿದ ನಿಧಿ: ಜಿಲ್ಲಾ/ರಾಜ್ಯ ಮಟ್ಟದ ಯೋಜನೆಗಳಿಗೆ ಅನುದಾನಿತ ನೆರವು, ಇದನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿ ಜನಸಂಖ್ಯೆ ಮತ್ತು ವಾರ್ಷಿಕ ಯೋಜನೆಗೆ ರಾಜ್ಯದ 'ಪರಿಶಿಷ್ಟ ಜಾತಿ ಉಪ ಯೋಜನೆ'ಯ ಅನುಪಾತದ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ.

ನಿರ್ವಹಣೆ

ಯೋಜನೆಯಡಿ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಂಡ ನಂತರ, ಅವುಗಳ ಪಾಲನೆ ಮತ್ತು ಕಾರ್ಯಾಚರಣೆಗಳನ್ನು ಸಂದರ್ಭಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಗಳು/ಅನುಷ್ಠಾನ ಸಂಸ್ಥೆಗಳು ನೋಡಿಕೊಳ್ಳುತ್ತವೆ.

ಪರಿಣಾಮಕಾರಿ ಆಡಳಿತದತ್ತ ಡಿಜಿಟಲ್ ಹೆಜ್ಜೆ

'ಪಿಎಂ-ಅಜಯ್' ಮೊಬೈಲ್ ಆಪ್ ಮತ್ತು 'ಪಿಎಂ-ಅಜಯ್' ಪೋರ್ಟಲ್‌ನ ಇತ್ತೀಚಿನ ಚಾಲನೆಯು ಕಾಗದ ಆಧಾರಿತ ಕಾರ್ಯವಿಧಾನ ಮತ್ತು ಪ್ರಕ್ರಿಯೆಗಳಿಂದ ನೈಜ ಸಮಯದಲ್ಲಿ ಕಾರ್ಯನಿರ್ವಹಿಸುವ ಸಂಪೂರ್ಣ ಡಿಜಿಟಲ್ ಕಾರ್ಯವಿಧಾನ ಮತ್ತು ಪ್ರಕ್ರಿಯೆಗೆ ಬದಲಾಯಿಸುವ ಗುರಿಯನ್ನು ಹೊಂದಿದೆ.

ಉತ್ತಮ ಆಡಳಿತವು ಪಾರದರ್ಶಕತೆ, ಜವಾಬ್ದಾರಿ ಮತ್ತು ದಕ್ಷತೆಯ ತತ್ವಗಳ ಮೇಲೆ ನಿರ್ಮಾಣಗೊಳ್ಳುತ್ತದೆ.

ಡಿಜಿಟಲ್ ತಂತ್ರಜ್ಞಾನಗಳು ಸಾರ್ವಜನಿಕ ಕಾರ್ಯಕ್ರಮಗಳ ಯೋಜನೆ, ವಿತರಣೆ ಮತ್ತು ಮೇಲ್ವಿಚಾರಣೆಯನ್ನು ಸಂಪೂರ್ಣವಾಗಿ ಬದಲಾಯಿಸಿವೆ. ತಂತ್ರಜ್ಞಾನ ಆಧಾರಿತ ಆಡಳಿತವು ಮಾಹಿತಿಯ ಸುಲಭ ಲಭ್ಯತೆಯನ್ನು ಸುಧಾರಿಸುತ್ತದೆ, ಮೇಲ್ವಿಚಾರಣೆಯನ್ನು ಬಲಪಡಿಸುತ್ತದೆ ಮತ್ತು ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳಲು ಬೆಂಬಲ ನೀಡುತ್ತದೆ. ಇದು ಸಮನ್ವಯತೆ, ಪಾರದರ್ಶಕತೆ ಮತ್ತು ಯೋಜನೆಗಳ ಅನುಷ್ಠಾನದ ಒಟ್ಟಾರೆ ಪರಿಣಾಮಕಾರಿಯತ್ವವನ್ನು ಹೆಚ್ಚಿಸುತ್ತದೆ.

ಭಾರತದ ವಿಕಾಸದ ಕಥೆಯ ಮುಂದಿನ ಅಧ್ಯಾಯ

'ವಿಕಸಿತ ಭಾರತ @2047' ರತ್ತ ಪಯಣವು, ಅಭಿವೃದ್ಧಿಯ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪಬೇಕು ಮತ್ತು ಎಲ್ಲರೂ ಪ್ರಗತಿ ಹೊಂದಲು ಅವಕಾಶಗಳನ್ನು ಸೃಷ್ಟಿಸಬೇಕು ಎಂಬ ತತ್ವದ ಮೇಲೆ ಆಧಾರಿತವಾಗಿದೆ. ಈ ಪ್ರಯತ್ನದಲ್ಲಿ, 'ಪಿಎಂ-ಅಜಯ್' ಯೋಜನೆಯು ಸುಸ್ಥಿರ ಜೀವನೋಪಾಯಗಳು, ಗುಣಮಟ್ಟದ ಶಿಕ್ಷಣ ಮತ್ತು ಸುಧಾರಿತ ಮೂಲಸೌಕರ್ಯಗಳನ್ನು ಉತ್ತೇಜಿಸುವ ಗುರಿ ಆಧಾರಿತ ಉಪಕ್ರಮಗಳ ಮೂಲಕ ಪರಿಶಿಷ್ಟ ಜಾತಿ ಸಮುದಾಯಗಳ ಸಾಮಾಜಿಕ-ಆರ್ಥಿಕ ಮತ್ತು ಶೈಕ್ರಣಿಕ ಸಬಲೀಕರಣವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಯೋಜನೆಯು ವಿಸ್ತರಿಸುತ್ತಾ ಸಾಗಿದಂತೆ, ತಂತ್ರಜ್ಞಾನದ ಹೆಚ್ಚಿನ ಬಳಕೆ, ಬಲವಾದ ಮೇಲ್ವಿಚಾರಣಾ ವ್ಯವಸ್ಥೆಗಳು ಮತ್ತು ತಳಮಟ್ಟದ ಜನರಿಗೆ ತಲುಪಿಸುವ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿರುವುದು ಇದರ ಪರಿಣಾಮಕಾರಿಯತ್ವ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯಗಳು ತಮ್ಮ ಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸಿಕೊಳ್ಳಲು ಹಾಗೂ ಭಾರತದ ಅಭಿವೃದ್ಧಿಯ ಪಯಣದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಬಲಗೊಳಿಸುವ ಮೂಲಕ, 'ಪಿಎಂ-ಅಜಯ್' ಯೋಜನೆಯು ಹೆಚ್ಚು ಒಳಗೊಳ್ಳುವಿಕೆಯ, ಸಮಾನತೆಯ ಮತ್ತು ಸಬಲ ದೇಶವನ್ನು ನಿರ್ಮಿಸುವುದನ್ನು ಮುಂದುವರಿಸಲಿದೆ.

References

Ministry of Social Justice and Empowerment:

https://socialjustice.gov.in/

https://socialjustice.gov.in/schemes/104

https://socialjustice.gov.in/writereaddata/UploadFile/71441776233188.pdf

https://pmajay.dosje.gov.in/

https://pmajay.dosje.gov.in/Writereaddata/Guidelines.pdf

https://www.pib.gov.in/PressReleasePage.aspx?PRID=2265530&reg=3&lang=1

https://www.pib.gov.in/PressReleasePage.aspx?PRID=2285859&reg=48&lang=1

https://www.pib.gov.in/PressReleasePage.aspx?PRID=2268689&reg=48&lang=1

https://www.indiabudget.gov.in/doc/eb/sbe93.pdf

Ministry of Finance:

https://www.indiabudget.gov.in/doc/OutcomeBudgetE2026_2027.pdf

myScheme:

https://www.myscheme.gov.in/schemes/pmajay-ag

Click here to see pdf 

 

*****

 

(Explainer ID: 160194) आगंतुक पटल : 4
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Telugu