Social Welfare
ವೇವ್ಸ್ ಒಟಿಟಿ ಮತ್ತು ಮೈವೇವ್ಸ್
ಸಾರ್ವಜನಿಕ ಪ್ರಸಾರದಿಂದ ಸಾರ್ವಜನಿಕ ಭಾಗವಹಿಸುವಿಕೆಯತ್ತ
Posted On:
23 SEP 2026 12:06PM
|
ವೇವ್ಸ್ ಸಾಂಪ್ರದಾಯಿಕ ಪ್ರಸಾರದಿಂದ ಸಮಗ್ರ ಡಿಜಿಟಲ್ ಸಾರ್ವಜನಿಕ ಸೇವಾ ವ್ಯವಸ್ಥೆಗೆ ಪ್ರಸಾರ ಭಾರತಿಯು ಹೊಂದಿಕೊಂಡಿರುವುದನ್ನು ಪ್ರತಿಬಿಂಬಿಸುತ್ತದೆ. ವೇವ್ಸ್ ಒಟಿಟಿ ನೇರಪ್ರಸಾರ, ಬಾನುಲಿ, ಬೇಡಿಕೆಯಾಧಾರಿತ ಕಾರ್ಯಕ್ರಮಗಳು, ಅಪರೂಪದ ಸಂಗ್ರಹಗಳು, ಶಿಕ್ಷಣ, ಭಕ್ತಿಪೂರ್ವಕ ವಿಷಯಗಳು ಮತ್ತು ಪ್ರಕಟಣೆಗಳನ್ನು ಒಂದೇ ಡಿಜಿಟಲ್ ವೇದಿಕೆಗೆ ತರುತ್ತದೆ. 1.2 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರು, 1.5 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳು ಮತ್ತು 24,000ಕ್ಕೂ ಹೆಚ್ಚು ಶೀರ್ಷಿಕೆಗಳೊಂದಿಗೆ, ಇದು ವಿವಿಧ ಸಾಧನಗಳು ಹಾಗೂ ಭಾಷೆಗಳಾದ್ಯಂತ ತನ್ನ ತಲುಪುವಿಕೆಯನ್ನು ವಿಸ್ತರಿಸುತ್ತಿದೆ. 'ಮೈವೇವ್ಸ್' ಕ್ರೀಯೆಟರ್ಸ್ ಗೆ ತಮ್ಮ ಕೃತಿಗಳನ್ನು ಸಲ್ಲಿಸಲು, ಪ್ರದರ್ಶಿಸಲು ಮತ್ತು ಹೊಸ ಅವಕಾಶಗಳನ್ನು ಕಂಡುಕೊಳ್ಳಲು ಒಂದು ಸಾಂಸ್ಥಿಕ ವೇದಿಕೆಯನ್ನು ಒದಗಿಸುತ್ತದೆ; ಹಾಗೂ 'ಜೆಮ್ಸ್ ಆಫ್ ಇಂಡಿಯಾ' ಜಿಲ್ಲಾ ಮಟ್ಟದ ಕಥೆಗಳು ಮತ್ತು ಪ್ರತಿಭೆಗಳನ್ನು ಉತ್ತೇಜಿಸುತ್ತದೆ. ಹೊಸ ವಿಷಯ-ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆಗಳು ಸಾರ್ವಜನಿಕ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ವೇವ್ಸ್ ಶೃಂಗಸಭೆಯೊಂದಿಗೆ ಸೇರಿ, ಈ ಉಪಕ್ರಮಗಳು ಭಾರತದ ಪ್ರಸಾರ ಪರಂಪರೆ ಮತ್ತು ಉದಯೋನ್ಮುಖ ಕ್ರೀಯೆಟರ್ಸ್ ಗಳನ್ನು ವಿಶಾಲ ಪ್ರೇಕ್ಷಕರು ಹಾಗೂ ಜಾಗತಿಕ ಮಾರುಕಟ್ಟೆಗಳೊಂದಿಗೆ ಜೋಡಿಸುತ್ತವೆ
|
ಡಿಜಿಟಲ್ ಪೀಳಿಗೆಗಾಗಿ ಸಾರ್ವಜನಿಕ ಪ್ರಸಾರ
ದಶಕಗಳಿಂದ ದೂರ್‌ದರ್ಶನ್ ಮತ್ತು ಆಕಾಶವಾಣಿ ಕಥೆಗಳು, ಸುದ್ದಿ, ಸಂಸ್ಕೃತಿ ಮತ್ತು ಸಂಗೀತದ ಮೂಲಕ ಲಕ್ಷಾಂತರ ಜನರನ್ನು ತಲುಪುತ್ತಿದ್ದವು. ಇಂದು, ಪ್ರೇಕ್ಷಕರು ಹೆಚ್ಚು ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ವಿಷಯಗಳನ್ನು ವೀಕ್ಷಿಸುತ್ತಿದ್ದಾರೆ. ಆದ್ದರಿಂದ, ಸಾರ್ವಜನಿಕ ಪ್ರಸಾರವು ಬದಲಾಗುತ್ತಿರುವ ಸ್ವರೂಪಗಳು, ಭಾಷೆಗಳು ಮತ್ತು ವೀಕ್ಷಣಾ ಅಭ್ಯಾಸಗಳಿಗೆ ಅನುಗುಣವಾಗಿ ಡಿಜಿಟಲ್ ಅಥವಾ ಒಟಿಟಿ ಮಾದರಿಯನ್ನು ಅಳವಡಿಸಿಕೊಂಡಿದೆ. ಈ ಮಾದರಿಯಡಿಯಲ್ಲಿ, ಕೇಬಲ್, ಉಪಗ್ರಹ ಮತ್ತು ಸೇವಾ ಪೂರೈಕೆದಾರರ ಅಗತ್ಯವಿಲ್ಲದೇ ವೀಡಿಯೊ, ಆಡಿಯೊ ಮತ್ತು ಸಂದೇಶ ವಿಷಯಗಳನ್ನು ಇಂಟರ್ನೆಟ್ ಮೂಲಕ ನೇರವಾಗಿ ವೀಕ್ಷಕರಿಗೆ ಪ್ರಸಾರ ಮಾಡಲಾಗುತ್ತದೆ. ಪ್ರಸಾರ ಭಾರತಿಯು 2024 ರ ನವೆಂಬರ್ 20 ರಂದು ಪ್ರಾರಂಭಿಸಿದ 'ವೇವ್ಸ್ ಒಟಿಟಿ' ಈ ಬದಲಾವಣೆಗೆ ಸಾಕ್ಷಿಯಾಗಿದೆ. ಇದು ಟಿವಿ ಮತ್ತು ರೇಡಿಯೋದ ಅಪರೂಪದ ಹಳೆಯ ಸಂಗ್ರಹಗಳು, ಸಮಕಾಲೀನ ಕಾರ್ಯಕ್ರಮಗಳು ಮತ್ತು ನೇರ ಪ್ರಸಾರವನ್ನು ಒಂದೇ ಬಹುಭಾಷಾ ಡಿಜಿಟಲ್ ವೇದಿಕೆಗೆ ತರುತ್ತದೆ. 'ಮೈವೇವ್ಸ್' ಪ್ರಜೆಗಳು ತಮ್ಮ ಸ್ವಂತ ವಿಷಯಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅವಕಾಶ ನೀಡುವ ಮೂಲಕ ಈ ಬದಲಾವಣೆಯನ್ನು ಮತ್ತಷ್ಟು ಮುನ್ನಡೆಸುತ್ತದೆ.
ಈ ಪರಿವರ್ತನೆಯು ಭಾರತದ ಸೃಜನಶೀಲ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಮಾಧ್ಯಮ ಹಾಗೂ ಮನರಂಜನಾ ವಲಯದಾದ್ಯಂತ ಅವಕಾಶಗಳನ್ನು ವಿಸ್ತರಿಸಲು ಕೈಗೊಂಡ ರಾಷ್ಟ್ರೀಯ ಪ್ರಯತ್ನದ ಭಾಗವಾಗಿದೆ. ಜಾಗತಿಕ ಮಟ್ಟದಲ್ಲಿ ಸೃಷ್ಟಿಕರ್ತರು, ಉದ್ಯಮದ ಮುಖಂಡರು, ನೀತಿ ನಿರೂಪಕರು ಮತ್ತು ಹೂಡಿಕೆದಾರರನ್ನು ಒಂದೆಡೆ ತರಲು, ಸಹಭಾಗಿತ್ವ, ವ್ಯವಹಾರ ಅವಕಾಶಗಳು ಹಾಗೂ ಅಂತಾರಾಷ್ಟ್ರೀಯ ಸಂವಾದವನ್ನು ಉತ್ತೇಜಿಸಲು ಹಮ್ಮಿಕೊಳ್ಳಲಾದ 'ವೇವ್ಸ್ ಶೃಂಗಸಭೆ' ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ವೇವ್ಸ್ ಶೃಂಗಸಭೆಯ ಮೊದಲ ಆವೃತ್ತಿಯು 2025 ರಲ್ಲಿ ನಡೆಯಿತು. ಈ ಶೃಂಗಸಭೆಯು ಸೃಷ್ಟಿಕರ್ತರು ಮತ್ತು ನವೋದ್ಯಮಗಳಿಗೆ ಬೆಂಬಲ ನೀಡಲು, ಹೂಡಿಕೆಯನ್ನು ಸುಗಮಗೊಳಿಸಲು ಹಾಗೂ ತನ್ನ ವಿವಿಧ ವೇದಿಕೆಗಳ ಮೂಲಕ ಮಾಧ್ಯಮ ಮತ್ತು ಮನರಂಜನಾ ವ್ಯವಸ್ಥೆಯಾದ್ಯಂತ ಜಾಗತಿಕ ಸಹಯೋಗವನ್ನು ಬಲಪಡಿಸಲು ಕೊಡುಗೆ ನೀಡಿದೆ.
ವೇವ್ಸ್ ಒಟಿಟಿ: ಸಾರ್ವಜನಿಕ ಪ್ರಸಾರವನ್ನು ಡಿಜಿಟಲ್ ಮಾಡುವುದು
ಪ್ರಸಾರ ಸಂಗ್ರಹಗಳಿಂದ ಡಿಜಿಟಲ್ ಲಭ್ಯತೆಯತ್ತ

ವೇವ್ಸ್ ಒಟಿಟಿ ಅನ್ನು 2024 ರ ನವೆಂಬರ್ 20 ರಂದು ಗೋವಾದಲ್ಲಿ ನಡೆದ ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಾರಂಭಿಸಲಾಯಿತು. ಇದನ್ನು ಪ್ರಸಾರ ಭಾರತಿಯ ಸಾರ್ವಜನಿಕ ಸೇವಾ ಒಟಿಟಿ ವೇದಿಕೆಯಾಗಿ ಅನಾವರಣಗೊಳಿಸಲಾಯಿತು. ಈ ಚಾಲನೆಯು ಭಾರತದ ಪ್ರಸಾರ ಪರಂಪರೆಯನ್ನು ಆಧುನಿಕ ಡಿಜಿಟಲ್ ಜಗತ್ತಿಗೆ ತಂದಿತು. ವಾಣಿಜ್ಯಿಕ ಒಟಿಟಿ ವೇದಿಕೆಗಳಿಗಿಂತ ಭಿನ್ನವಾಗಿ, ವೇವ್ಸ್ ಒಟಿಟಿ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಇದು ವಿಶ್ವಾಸಾರ್ಹ ಮಾಹಿತಿ, ಶಿಕ್ಷಣ, ಸಂಸ್ಕೃತಿ, ಸುದ್ದಿ ಮತ್ತು ಆಯ್ಕೆ ಮಾಡಿದ ಮನರಂಜನೆಯನ್ನು ಒಂದೆಡೆ ತರುತ್ತದೆ. ಇದು ಸಾರ್ವಜನಿಕ ಪ್ರಸಾರವನ್ನು ನಿಗದಿತ ಸಮಯ ಮತ್ತು ಸಾಂಪ್ರದಾಯಿಕ ಟಿವಿ ಸೆಟ್‌ಗಳಿಂದ ಆಚೆಗೆ ಕೊಂಡೊಯ್ಯುತ್ತದೆ. ಪ್ರೇಕ್ಷಕರು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳನ್ನು ವೀಕ್ಷಿಸಬಹುದು.
ಇದು ಪ್ರಸಾರ ಭಾರತಿಯ ವಿಶಾಲವಾದ ಅಪರೂಪದ ಸಂಗ್ರಹಗಳನ್ನು ಯುವಕರಿಗೆ ಮತ್ತು ವಿಶಾಲ ಪ್ರೇಕ್ಷಕರಿಗೆ ತಲುಪಿಸುತ್ತದೆ. ಇದರ ಸುಲಭ ಲಭ್ಯತೆಯು ಪ್ರಮುಖ ನಗರಗಳು ಮತ್ತು ಹಣ ಪಾವತಿಸುವ ಸ್ಟ್ರೀಮಿಂಗ್ ಸೇವೆಗಳ ಆಚೆಗಿನ ಜನರನ್ನು ತಲುಪಲು ಸಹಾಯ ಮಾಡುತ್ತದೆ. ಸಹಭಾಗಿತ್ವಗಳು, ಉಪಶೀರ್ಷಿಕೆಗಳು ಮತ್ತು ಸುಧಾರಿತ ಹುಡುಕಾಟ ಮಾಹಿತಿಯು ಪ್ರಾದೇಶಿಕ ವಿಷಯಗಳನ್ನು ಸುಲಭವಾಗಿ ಹುಡುಕಲು ನೆರವಾಗುತ್ತವೆ. ಇದರ ಚಾಲನೆಯು ಮೂರು ಪ್ರಮುಖ ಗುರಿಗಳಿಗೆ ಬೆಂಬಲ ನೀಡುತ್ತದೆ: ವ್ಯಾಪಕ ಡಿಜಿಟಲ್ ಲಭ್ಯತೆ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ಭಾಷಿಕ ವೈವಿಧ್ಯತೆ. ಒಂದು ರಾಷ್ಟ್ರೀಯ ಸಂಸ್ಥೆಯು ತನ್ನ ಸಾರ್ವಜನಿಕ ಸೇವಾ ಉದ್ದೇಶವನ್ನು ಉಳಿಸಿಕೊಂಡು ಹೇಗೆ ಆಧುನಿಕಗೊಳ್ಳಬಹುದು ಎಂಬುದನ್ನು ಇದು ತೋರಿಸುತ್ತದೆ.
ಆದ್ದರಿಂದ, ವೇವ್ಸ್ ಒಟಿಟಿ ಕೇವಲ ಮತ್ತೊಂದು ಸ್ಟ್ರೀಮಿಂಗ್ ವೇದಿಕೆಯಷ್ಟೇ ಅಲ್ಲ. ಪ್ರಸಾರ ಭಾರತಿಯು ವಿಷಯಗಳನ್ನು ಹೇಗೆ ವಿತರಿಸುತ್ತದೆ, ಪ್ರೇಕ್ಷಕರನ್ನು ಹೇಗೆ ತಲುಪುತ್ತದೆ ಮತ್ತು ಸೃಷ್ಟಿಕರ್ತರು, ನಿರ್ಮಾಪಕರು ಹಾಗೂ ವಿಷಯ ಪಾಲುದಾರರೊಂದಿಗೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರಲ್ಲಿನ ವ್ಯಾಪಕ ಸುಧಾರಣೆಯನ್ನು ಇದು ಪ್ರತಿನಿಧಿಸುತ್ತದೆ.
ಒಂದೇ ವೇದಿಕೆ, ಹಲವು ಅನುಭವಗಳು
ವೇವ್ಸ್ ಒಟಿಟಿ ದೂರದರ್ಶನ, ರೇಡಿಯೋ, ಸ್ಟ್ರೀಮಿಂಗ್, ಕಲಿಕೆ ಮತ್ತು ಡಿಜಿಟಲ್ ಪ್ರಕಟಣೆಗಳನ್ನು ಒಂದೇ ವೇದಿಕೆಗೆ ತರುತ್ತದೆ. ಇದರ ಬೆಳೆಯುತ್ತಿರುವ ಸಂಗ್ರಹವು ಈಗ 24,000 ಕ್ಕೂ ಹೆಚ್ಚು ಶೀರ್ಷಿಕೆಗಳನ್ನು ಮತ್ತು 15,000 ಕ್ಕೂ ಹೆಚ್ಚು ಗಂಟೆಗಳ ವಿಷಯಗಳನ್ನು ಒಳಗೊಂಡಿದೆ.
ನಿಮ್ಮ ಅಗತ್ಯಕ್ಕೆ ತಕ್ಕಂತೆ ವೀಕ್ಷಿಸಿ: ಚಲನಚಿತ್ರಗಳು, ಧಾರಾವಾಹಿಗಳು, ಜಾಲತಾಣ ಸರಣಿಗಳು (ವೆಬ್ ಸರಣಿ), ಸಾಕ್ಷ್ಯಚಿತ್ರಗಳು ಮತ್ತು ಅಪರೂಪದ ಹಳೆಯ ಕಾರ್ಯಕ್ರಮಗಳು.
- ನೇರ ಪ್ರಸಾರ ಆಲಿಸಿ ಮತ್ತು ವೀಕ್ಷಿಸಿ: 140 ಕ್ಕೂ ಹೆಚ್ಚು ದೂರದರ್ಶನ ವಾಹಿನಿಗಳು ಮತ್ತು ೨೨೦ ಕ್ಕೂ ಹೆಚ್ಚು ಬಾನುಲಿ ಸೇವೆಗಳು.
- ಪ್ರಮುಖ ಕಾರ್ಯಕ್ರಮಗಳನ್ನು ವೀಕ್ಷಿಸಿ: ರಾಷ್ಟ್ರೀಯ ಶುಭ ಸಮಾರಂಭಗಳು, ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಭಕ್ತಿಪ್ರಧಾನ ಪ್ರಸಾರಗಳು.
- ಕಲಿಯಿರಿ ಮತ್ತು ಸಿದ್ಧರಾಗಿ: ಪಿಎಂ ಇ-ವಿದ್ಯಾ ವಾಹಿನಿಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹಾಗೂ ಕಲಿಯುವವರಿಗೆ ನೆರವಾಗುತ್ತವೆ.
- ಓದಿ ಮತ್ತು ತಿಳಿದುಕೊಳ್ಳಿ: ಇ-ಪುಸ್ತಕಗಳು, ಛಾಯಾಚಿತ್ರ ಸಂಗ್ರಹಗಳು ಹಾಗೂ ಯೋಜನಾ ಮತ್ತು ಕುರುಕ್ಷೇತ್ರದಂತಹ ನಿಯತಕಾಲಿಕೆಗಳು.
- ಆಟವಾಡಿ ಮತ್ತು ಖರೀದಿ ಮಾಡಿ: ಆಟಗಳು ಮತ್ತು ಡಿಜಿಟಲ್ ವಾಣಿಜ್ಯದ ಮುಕ್ತ ಜಾಲದೊಂದಿಗೆ ಸಂಯೋಜಿತ ಖರೀದಿ ಸೌಲಭ್ಯವು ಈ ವೇದಿಕೆಯನ್ನು ಸಾಮಾನ್ಯ ಪ್ರಸಾರಕ್ಕಿಂತ ಆಚೆಗೆ ವಿಸ್ತರಿಸುತ್ತದೆ.
ಈ ವೇದಿಕೆಯು ಮನರಂಜನೆಯನ್ನು ಶಿಕ್ಷಣ, ಸಂಸ್ಕೃತಿ, ಪರಂಪರೆ ಮತ್ತು ಉಪಯುಕ್ತ ಸಾರ್ವಜನಿಕ ಮಾಹಿತಿಯೊಂದಿಗೆ ಸಂಯೋಜಿಸುತ್ತದೆ. ಪ್ರಸಾರ ಭಾರತಿಯ ಸಂಗ್ರಹಾಗಾರದಲ್ಲಿರುವ ಸಾವಿರಾರು ಗಂಟೆಗಳ ಹಳೆಯ ಕಾರ್ಯಕ್ರಮಗಳು ನವ ಪೀಳಿಗೆಯ ಪ್ರೇಕ್ಷಕರನ್ನು ಭಾರತದ ಪ್ರಸಾರ ಇತಿಹಾಸದೊಂದಿಗೆ ಸಂಪರ್ಕಿಸುತ್ತವೆ.
ವಿವಿಧ ಭಾಷೆಗಳು ಮತ್ತು ಪರದೆಗಳಾದ್ಯಂತ ತಲುಪುವಿಕೆ
ವೇವ್ಸ್ ಒಟಿಟಿ ಪ್ರಸ್ತುತ 1.2 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹಾಗೂ 1.5 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದ್ದು, ಪ್ರಸಾರ ಭಾರತಿಯ ಡಿಜಿಟಲ್ ಸೇವೆಗಳ ಬೆಳೆಯುತ್ತಿರುವ ಬಳಕೆಯನ್ನು ಇದು ಪ್ರತಿಬಿಂಬಿಸುತ್ತದೆ. ಇದು ಈಗ 130 ಕ್ಕೂ ಹೆಚ್ಚು ದೇಶಗಳಾದ್ಯಂತ ಪ್ರೇಕ್ಷಕರನ್ನು ತಲುಪುತ್ತಿದೆ.
ಇದರ ಬಳಕೆದಾರರ ವ್ಯವಸ್ಥೆಯು (ಇಂಟರ್‌ಫೇಸ್) 10 ಕ್ಕೂ ಹೆಚ್ಚು ಭಾಷೆಗಳನ್ನು ಬೆಂಬಲಿಸುತ್ತದೆ. ಇದರ ಕಾರ್ಯಕ್ರಮಗಳು 26 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿವೆ.
- ಇದನ್ನು ಮೊಬೈಲ್ ಅಪ್ಲಿಕೇಶನ್‌ಗಳು, ಜಾಲತಾಣಗಳು ಮತ್ತು ಸ್ಮಾರ್ಟ್ ದೂರದರ್ಶನಗಳ (ಟಿವಿ) ಮೂಲಕ ವೀಕ್ಷಿಸಬಹುದು.
- ಇದು ಇತರ ಪ್ರಸಾರಕರ ವಾಹಿನಿಗಳೊಂದಿಗೆ ದೂರದರ್ಶನದ ಎಲ್ಲಾ ೩೫ ಉಪಗ್ರಹ ವಾಹಿನಿಗಳನ್ನು ಒಳಗೊಂಡಿದೆ.
- ಇದರ ಬಾನುಲಿ ಸೇವೆಗಳು ಆಕಾಶವಾಣಿಯ ರಾಷ್ಟ್ರೀಯ ಮತ್ತು ಪ್ರಾದೇಶಿಕ ಜಾಲಗಳನ್ನು ಬಳಸಿಕೊಳ್ಳುತ್ತವೆ.
- ಪ್ರಾದೇಶಿಕ ವಿಷಯಗಳು ಮತ್ತು ಉಪಶೀರ್ಷಿಕೆಗಳು ವಿವಿಧ ಭಾಷೆಗಳು ಹಾಗೂ ಪ್ರದೇಶಗಳ ಪ್ರೇಕ್ಷಕರನ್ನು ತಲುಪಲು ಸಹಾಯ ಮಾಡುತ್ತವೆ.
ವೇವ್ಸ್ ಒಟಿಟಿ ಭಾರತದಾದ್ಯಂತ ಇರುವ ಪ್ರೇಕ್ಷಕರನ್ನು, ವಿಶೇಷವಾಗಿ ಯುವಜನರನ್ನು, ಡಿಜಿಟಲ್ ಸ್ನೇಹಿ ಬಳಕೆದಾರರನ್ನು, ಪ್ರಾದೇಶಿಕ ಮತ್ತು ಭಾಷಿಕ ಸಮುದಾಯಗಳನ್ನು ಹಾಗೂ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಅಪರೂಪದ ಹಳೆಯ ವಿಷಯಗಳನ್ನು ಬಯಸುವವರನ್ನು ತಲುಪುತ್ತದೆ. ಇದು ವಿದೇಶಗಳಲ್ಲಿರುವ ಭಾರತೀಯರಿಗೆ ಮತ್ತು ಜಾಗತಿಕ ಪ್ರೇಕ್ಷಕರಿಗೆ ಭಾರತೀಯ ವಿಷಯಗಳು, ಸಂಸ್ಕೃತಿ ಹಾಗೂ ಸಾರ್ವಜನಿಕ ಪ್ರಸಾರ ಸೇವೆಗಳ ಲಭ್ಯತೆಯನ್ನು ವಿಸ್ತರಿಸುತ್ತದೆ. ಈ ಬೆಳೆಯುತ್ತಿರುವ ಡಿಜಿಟಲ್ ತಲುಪುವಿಕೆಯು ವೇವ್ಸ್ ಒಟಿಟಿಯನ್ನು ಭಾರತದ ವಿಕಸನಗೊಳ್ಳುತ್ತಿರುವ ಸಾರ್ವಜನಿಕ ಪ್ರಸಾರ ವ್ಯವಸ್ಥೆಯ ಪ್ರಮುಖ ಅಂಗವಾಗಿ ಬಲಪಡಿಸುತ್ತದೆ; ಜೊತೆಗೆ ದೇಶದ ಸಾಂಸ್ಕೃತಿಕ ಪರಂಪರೆ, ಜ್ಞಾನ ಪರಂಪರೆ, ಪ್ರಾದೇಶಿಕ ವೈವಿಧ್ಯತೆ ಮತ್ತು ಸೃಜನಶೀಲ ಅಭಿವ್ಯಕ್ತಿಗಳನ್ನು ಪ್ರದರ್ಶಿಸುವ ವೇದಿಕೆಯನ್ನು ಒದಗಿಸುತ್ತದೆ.
ಹೆಚ್ಚಿನ ವಿಷಯಗಳಿಗೆ ವೇದಿಕೆಯನ್ನು ಮುಕ್ತಗೊಳಿಸುವುದು
ವೇವ್ಸ್ ಒಟಿಟಿಯು ಸಾರ್ವಜನಿಕ ಪ್ರಸಾರಕ್ಕೆ ವಿಷಯಗಳು ಹೇಗೆ ಸೇರ್ಪಡೆಯಾಗುತ್ತವೆ ಎಂಬುದನ್ನೂ ಬದಲಾಯಿಸುತ್ತಿದೆ. 'ಪ್ರತಿ ವೀಕ್ಷಣೆಗೆ ಪಾವತಿ' ವಿಷಯ ಸಂಗ್ರಹಣೆ ನೀತಿಯು ನಿರ್ಮಾಪಕರು ಮತ್ತು ಹಕ್ಕುಸ್ವಾಮ್ಯ ಹೊಂದಿರುವವರು ವೇದಿಕೆಗೆ ಗುಣಮಟ್ಟದ ವಿಷಯಗಳನ್ನು ಒದಗಿಸಲು ಪಾರದರ್ಶಕ ಮತ್ತು ವಿಸ್ತರಿಸಬಹುದಾದ ವ್ಯವಸ್ಥೆಯನ್ನು ಒದಗಿಸುತ್ತದೆ.
ವೇವ್ಸ್ ವೇದಿಕೆಯು ಒಎನ್‌ಡಿಸಿ ಸಂಯೋಜನೆ ಮತ್ತು ರೈಲ್ವೆ ಸಂಬಂಧಿತ ಡಿಜಿಟಲ್ ವಿತರಣಾ ಉಪಕ್ರಮಗಳನ್ನು ಸಹ ಪರಿಚಯಿಸಿದೆ. ಈ ಕ್ರಮಗಳು ವಿತರಣೆಯನ್ನು ವಿಸ್ತರಿಸುತ್ತವೆ, ವಿಷಯ ಪಾಲುದಾರಿಕೆಗಳನ್ನು ಪ್ರೋತ್ಸಾಹಿಸುತ್ತವೆ ಮತ್ತು ಭಾರತೀಯ ಹಾಗೂ ಪ್ರಾದೇಶಿಕ ವಿಷಯಗಳು ಪ್ರೇಕ್ಷಕರನ್ನು ತಲುಪಲು ಹೆಚ್ಚುವರಿ ಮಾರ್ಗಗಳನ್ನು ಸೃಷ್ಟಿಸುತ್ತವೆ.
ಮೈವೇವ್ಸ್: ವೀಕ್ಷಕರನ್ನು ಸೃಷ್ಟಿಕರ್ತರನ್ನಾಗಿ ಪರಿವರ್ತಿಸುವುದು
ಮೈವೇವ್ಸ್ ಅನ್ನು 23 ಮಾರ್ಚ್ 2026 ರಂದು ವೇವ್ಸ್ ಒಟಿಟಿ ಯೊಳಗೆ ಪ್ರಾರಂಭಿಸಲಾಯಿತು. ಇದು ವೇದಿಕೆಯನ್ನು ಕೇವಲ ವಿಷಯ ವೀಕ್ಷಣೆಯಿಂದ ಸಕ್ರಿಯ ಸಾರ್ವಜನಿಕ ಭಾಗವಹಿಸುವಿಕೆಗೆ ವಿಸ್ತರಿಸುತ್ತದೆ. ನಾಗರಿಕರು ಸಂಘಟಿತ ರಾಷ್ಟ್ರೀಯ ವೇದಿಕೆಯ ಮೂಲಕ ತಮ್ಮ ಸ್ವಂತ ವಿಷಯಗಳನ್ನು ರಚಿಸಬಹುದು, ಅಪ್‌ಲೋಡ್ ಮಾಡಬಹುದು ಮತ್ತು ಹಂಚಿಕೊಳ್ಳಬಹುದು. ಮೈವೇವ್ಸ್ ಕಿರು ವೀಡಿಯೊಗಳು, ಲಂಬ ಸ್ವರೂಪದ ವೀಡಿಯೊಗಳು ಮತ್ತು ಕಂತುಗಳ ರೂಪದ ವಿಷಯಗಳನ್ನು ಬೆಂಬಲಿಸುತ್ತದೆ. ಇದರ ಬಹುಭಾಷಾ ವ್ಯವಸ್ಥೆಯು ಕ್ರೀಯೆಟರ್ಸ್ ಗೆ ಭಾರತೀಯ ಭಾಷೆಗಳಲ್ಲಿ ಕಥೆಗಳನ್ನು ಹೇಳಲು ಸಹಾಯ ಮಾಡುತ್ತದೆ. ಇದು 'ಕ್ರಿಯೇಟ್ ಇನ್ ಇಂಡಿಯಾ' ಸವಾಲು ಸೇರಿದಂತೆ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನೂ ಬೆಂಬಲಿಸುತ್ತದೆ.
ಸ್ಥಾಪಿತ ಮಾಧ್ಯಮ ಜಾಲಗಳ ಹೊರಗಿರುವ ಉದಯೋನ್ಮುಖ ಕ್ರೀಯೆಟರ್ಸ್ ಗೆ ಈ ವೇದಿಕೆಯು ವಿಶೇಷವಾಗಿ ಉಪಯುಕ್ತವಾಗಿದೆ. ಇದು ಪ್ರಾದೇಶಿಕ ಕಥೆಗಳು, ಸ್ಥಳೀಯ ಪ್ರತಿಭೆಗಳು ಮತ್ತು ಸಮುದಾಯದ ಅನುಭವಗಳನ್ನು ವಿಶಾಲ ಪ್ರೇಕ್ಷಕರಿಗೆ ತಲುಪಿಸುತ್ತದೆ. ಹೀಗೆ ಮಾಡುವ ಮೂಲಕ, ಮೈವೇವ್ಸ್ ನಾಗರಿಕರ ಭಾಗವಹಿಸುವಿಕೆ ಮತ್ತು ಭಾರತದ ಬೆಳೆಯುತ್ತಿರುವ ಸೃಷ್ಟಿಕರ್ತರ ಆರ್ಥಿಕತೆ ಎರಡನ್ನೂ ಬಲಪಡಿಸುತ್ತದೆ.
ಮೈವೇವ್ಸ್ ನಾಗರಿಕರನ್ನು ಬೇವಲ ಪ್ರೇಕ್ಷಕರನ್ನಾಗಿ ನೋಡದೆ, ಭಾರತದ ಡಿಜಿಟಲ್ ಕಥಾನಕದ ಪ್ರಯಾಣದಲ್ಲಿ ಭಾಗವಹಿಸುವವರನ್ನಾಗಿ ಪರಿವರ್ತಿಸುತ್ತದೆ.
ಜೆಮ್ಸ್ ಆಫ್ ಇಂಡಿಯಾ: ಮೈವೇವ್ಸ್ ಕ್ರಿಯಾರೂಪದಲ್ಲಿ
'ಜೆಮ್ಸ್ ಆಫ್ ಇಂಡಿಯಾ' ಸವಾಲು ಮೈವೇವ್ಸ್ ಹೇಗೆ ದೇಶಾದ್ಯಂತ ಕ್ರೀಯೆಟರ್ಸ್ ಗೆ ಬೆಂಬಲ ನೀಡುತ್ತದೆ ಎಂಬುದನ್ನು ತೋರಿಸುತ್ತದೆ. ಇದರ ಪ್ರಾಯೋಗಿಕ ಹಂತವನ್ನು 21 ಜುಲೈ 2026 ರಂದು ಆರು ಪ್ರಾಯೋಗಿಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭಿಸಲಾಯಿತು. ಸೃಷ್ಟಿಕರ್ತರು ವೇವ್ಸ್ ಒಟಿಟಿಯ ಮೈವೇವ್ಸ್ ವಿಭಾಗದ ಮೂಲಕ ಒಂದರಿಂದ ಮೂರು ನಿಮಿಷಗಳ ತಮ್ಮ ಸ್ವಂತ ವೀಡಿಯೊಗಳನ್ನು ಸಲ್ಲಿಸಬಹುದಿತ್ತು. ಪ್ರಾಯೋಗಿಕ ಹಂತಕ್ಕಾಗಿ 1 ರಿಂದ 31 ಆಗಸ್ಟ್ 2026 ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಈ ಸವಾಲು ನಾಗರಿಕರಿಗೆ ತಮ್ಮ ಜಿಲ್ಲೆಗಳ ಬಗ್ಗೆ ಕಥೆಗಳನ್ನು ಹೇಳಲು ಆಹ್ವಾನ ನೀಡುತ್ತದೆ. ಇದರ ವಿಷಯಗಳು ಹೀಗಿವೆ:
- ಸಾಂಸ್ಕೃತಿಕ, ಪಾರಂಪರಿಕ ಮತ್ತು ಐತಿಹಾಸಿಕ ಸ್ಥಳಗಳು.
- ಪ್ರವಾಸೋದ್ಯಮ, ನಿಸರ್ಗ ಮತ್ತು ಅಷ್ಟಾಗಿ ಪ್ರಸಿದ್ಧಿಯಲ್ಲದ ಪ್ರವಾಸಿ ತಾಣಗಳು.
- ಜಾನಪದ ಪರಂಪರೆಗಳು, ಹಬ್ಬಗಳು ಮತ್ತು ಪ್ರದರ್ಶನ ಕಲೆಗಳು.
- ಕರಕುಶಲ ವಸ್ತುಗಳು, ಕೈಮಗ್ಗಗಳು ಮತ್ತು ಪ್ರಾದೇಶಿಕ ಆಹಾರ ಶೈಲಿಗಳು.
- ಸ್ಥಳೀಯ ವ್ಯಕ್ತಿಗಳು, ನಾವೀನ್ಯತೆಗಳು ಮತ್ತು ಸಾಧನೆಗಳು.
ಈ ಉಪಕ್ರಮವು ಪ್ರಸಾರ ಭಾರತಿ, ಮೈ ಭಾರತ್ ಹಾಗೂ ರಾಜ್ಯ ಮತ್ತು ಜಿಲ್ಲಾ ಆಡಳಿತಗಳನ್ನು ಒಳಗೊಂಡಿದೆ. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳು ಸೃಷ್ಟಿಕರ್ತರ ಭಾಗವಹಿಸುವಿಕೆ ಮತ್ತು ವಿಷಯ ಅಭಿವೃದ್ಧಿಗೆ ಬೆಂಬಲ ನೀಡುತ್ತವೆ. ಜೊತೆಗೆ, ಯೂಟ್ಯೂಬ್ ಮತ್ತು ಮೆಟಾ ಸಂಸ್ಥೆಗಳು ಸಹ ತಮ್ಮ ಸೃಷ್ಟಿಕರ್ತರ ಸಮುದಾಯಗಳ ಮೂಲಕ ಈ ಯೋಜನೆಯ ಪ್ರಚಾರಕ್ಕೆ ಬೆಂಬಲ ನೀಡುತ್ತಿವೆ.
ಈ ಕಾರ್ಯಕ್ರಮವು ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ವಿಸ್ತರಿಸುವ ನಿರೀಕ್ಷೆಯಿದೆ. ತಳಮಟ್ಟದ ಡಿಜಿಟಲ್ ಸೃಷ್ಟಿಕರ್ತರ ರಾಷ್ಟ್ರವ್ಯಾಪಿ ಜಾಲವನ್ನು ನಿರ್ಮಿಸುವುದು ಇದರ ಪ್ರಮುಖ ಗುರಿಯಾಗಿದೆ. ಇದು ಭಾರತದ ವೈವಿಧ್ಯಮಯ ಸ್ಥಳೀಯ ಗುರುತುಗಳ ಡಿಜಿಟಲ್ ಸಂಗ್ರಹವನ್ನು ಸೃಷ್ಟಿಸಲು ಸಹ ನೆರವಾಗುತ್ತದೆ.
ವಿಷಯಗಳು, ಸೃಷ್ಟಿಕರ್ತರು ಮತ್ತು ಸೃಜನಶೀಲ ಆರ್ಥಿಕತೆಯ ಸಂಪರ್ಕ
ಭಾರತದ ಡಿಜಿಟಲ್ ಮಾಧ್ಯಮದ ಪರಿವರ್ತನೆಯು ಕೇವಲ ವಿಷಯಗಳನ್ನು ಆನ್‌ಲೈನ್‌ಗೆ ತರುವುದಷ್ಟೇ ಅಲ್ಲ. ಇದು ಲಭ್ಯತೆಯನ್ನು ವಿಸ್ತರಿಸುವುದು, ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಪ್ರತಿಭೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದಾಗಿದೆ.

ಪ್ರತಿಯೊಂದು ಉಪಕ್ರಮವೂ ಭಾರತದ ಸೃಜನಶೀಲ ಪಯಣದ ವಿಭಿನ್ನ ರಂಗಗಳನ್ನು ಪ್ರತಿನಿಧಿಸುತ್ತದೆ. ವೇವ್ಸ್ ಒಟಿಟಿ ಪ್ರಸಾರ ರಂಗದ ಹಳೆಯ ಅಪರೂಪದ ಸಂಗ್ರಹಗಳನ್ನು ರಕ್ಷಿಸಿ, ಅವುಗಳನ್ನು ನವ ಪೀಳಿಗೆಯ ಪ್ರೇಕ್ಷಕರಿಗೆ ಲಭ್ಯವಾಗುವಂತೆ ಮಾಡುತ್ತದೆ. ಇದರ ಬಹುಭಾಷಾ ವಿಷಯಗಳು ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯನ್ನು ವಿವಿಧ ಪ್ರದೇಶಗಳು ಹಾಗೂ ಸಾಧನಗಳಾದ್ಯಂತ ತಲುಪುವಂತೆ ಮಾಡುತ್ತವೆ.
'ಮೈವೇವ್ಸ್' ನಾಗರಿಕರಿಗೆ ಧ್ವನಿಯಾಗುವ ಮೂಲಕ ಈ ಲಭ್ಯತೆಯನ್ನು ಮತ್ತಷ್ಟು ವಿಸ್ತರಿಸುತ್ತದೆ. ಇದು ಪ್ರಾದೇಶಿಕ ಕ್ರೀಯೆಟರ್ಸ್ ಗೆ ತಮ್ಮ ಸ್ಥಳೀಯ ಸಂಸ್ಕೃತಿ, ಪರಂಪರೆ, ಸ್ಥಳಗಳು ಮತ್ತು ಸಾಧನೆಗಳನ್ನು ದಾಖಲಿಸಲು ಅವಕಾಶ ನೀಡುತ್ತದೆ. ಒಮ್ಮೆ ಕೇವಲ ಸ್ಥಳೀಯ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದ ಕಥೆಗಳು ಈಗ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ.
|
ವ್ಯಾಪಕ ವೇವ್ಸ್ ಪರಿಸರ ವ್ಯವಸ್ಥೆ
ವಿಶ್ವ ಆಡಿಯೋ ವಿಜ್ಯುವಲ್ ಮತ್ತು ಮನರಂಜನಾ ಶೃಂಗಸಭೆಯು ಮಾಧ್ಯಮ ಮತ್ತು ಮನರಂಜನೆಗಾಗಿ ಭಾರತದ ಜಾಗತಿಕ ವೇದಿಕೆಯಾಗಿದೆ. ಇದರ ಮೊದಲ ಆವೃತ್ತಿಯು 2025ರ ಮೇ 1 ರಿಂದ 4 ರವರೆಗೆ ಮುಂಬೈನಲ್ಲಿ ನಡೆಯಿತು. ಇದು ಸೃಷ್ಟಿಕರ್ತರು, ಉದ್ಯಮಗಳು, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ತಂತ್ರಜ್ಞಾನ ನಾಯಕರನ್ನು ಒಂದೇ ಕಡೆ ಸೇರಿಸಿತು. ಇದು ಪ್ರಸಾರ ಮತ್ತು ಮಾಹಿತಿ-ಮನರಂಜನೆ, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ ಮತ್ತು ವಿಸ್ತೃತ ರಿಯಾಲಿಟಿ, ಡಿಜಿಟಲ್ ಮಾಧ್ಯಮ ಹಾಗೂ ಚಲನಚಿತ್ರಗಳನ್ನು ಒಳಗೊಂಡಿತ್ತು.
ಒಂದು ನೋಟದಲ್ಲಿ ವೇವ್ಸ್ 2025
100+ ದೇಶಗಳು | 10,000+ ಪ್ರತಿನಿಧಿಗಳು | 1,000 ಸೃಷ್ಟಿಕರ್ತರು | 300+ ಕಂಪನಿಗಳು | 350+ ನವೋದ್ಯಮಗಳು | ಒಂದು ಲಕ್ಷಕ್ಕೂ ಹೆಚ್ಚು ಭಾಗವಹಿಸುವವರು
ಪ್ರಮುಖ ವೇದಿಕೆಗಳು
ಜಾಗತಿಕ ಮಾಧ್ಯಮ ಸಂವಾದವು ಅಂತಾರಾಷ್ಟ್ರೀಯ ಸಹಕಾರವನ್ನು ಮುನ್ನಡೆಸಿತು, ಆದರೆ ಕ್ರಿಯೇಟೋಸ್ಫಿಯರ್ ಮತ್ತು ಭಾರತದಲ್ಲಿ ಸೃಷ್ಟಿಸಿ ಸವಾಲುಗಳು ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ ಪ್ರದರ್ಶಿಸಿದವು. ವೇವ್ಸ್ ಬಜಾರ್ ಯೋಜನೆಗಳನ್ನು ಖರೀದಿದಾರರು ಮತ್ತು ಹೂಡಿಕೆದಾರರೊಂದಿಗೆ ಸಂಪರ್ಕಿಸಿತು, ಹಾಗೂ ವೇವ್-ಎಕ್ಸ್ ಮಾರ್ಗದರ್ಶನ, ಇನ್‌ಕ್ಯುಬೇಷನ್ ಮತ್ತು ಹೂಡಿಕೆ ಅವಕಾಶಗಳ ಮೂಲಕ ಮಾಧ್ಯಮ-ತಂತ್ರಜ್ಞಾನ ನವೋದ್ಯಮಗಳಿಗೆ ಬೆಂಬಲ ನೀಡಿತು. ಭಾರತ ಪೆವಿಲಿಯನ್ ಮತ್ತು ಜ್ಞಾನ ಸಭೆಗಳು ಭಾರತದ ಕಥೆ ಹೇಳುವ ಪರಂಪರೆ ಹಾಗೂ ಉದಯೋನ್ಮುಖ ಸಾಮರ್ಥ್ಯಗಳನ್ನು ಪ್ರದರ್ಶಿಸಿದವು.
ಪ್ರಮುಖ ಫಲಿತಾಂಶಗಳು
- 77 ದೇಶಗಳು ವೇವ್ಸ್ ಘೋಷಣೆಯನ್ನು ಅಂಗೀಕರಿಸಿದವು.
- 60 ಕ್ಕೂ ಹೆಚ್ಚು ದೇಶಗಳಿಂದ ಸುಮಾರು ಒಂದು ಲಕ್ಷ ನೋಂದಣಿಗಳನ್ನು ಭಾರತದಲ್ಲಿ ಸೃಷ್ಟಿಸಿ ಸವಾಲುಗಳು ಆಕರ್ಷಿಸಿದವು, ಇದರಲ್ಲಿ 750+ ಅಂತಿಮ ಸ್ಪರ್ಧಿಗಳು ಮತ್ತು 150+ ವಿಜೇತರು ಇದ್ದಾರೆ.
- ವೇವ್ಸ್ ಬಜಾರ್ 3,000+ ಸಭೆಗಳ ಮೂಲಕ 1,328 ಕೋಟಿ ರೂಪಾಯಿಗಳ ವ್ಯಾಪಾರ ವಹಿವಾಟನ್ನು ಸೃಷ್ಟಿಸಿತು.
- ವೀಕ್ಷಣಾ ಕೊಠಡಿಯು ಎಂಟು ದೇಶಗಳ 100 ಚಲನಚಿತ್ರಗಳನ್ನು ಪ್ರದರ್ಶಿಸಿತು, ಮತ್ತು 30+ ನವೋದ್ಯಮಗಳು ವೇವ್-ಎಕ್ಸ್ ಮೂಲಕ ತಮ್ಮ ಯೋಜನೆಗಳನ್ನು ಮಂಡಿಸಿದವು.
ವೇವ್ಸ್ ಶೃಂಗಸಭೆಯ ನಂತರವೂ ತನ್ನ ಸೃಷ್ಟಿಕರ್ತ, ವ್ಯಾಪಾರ ಮತ್ತು ನವೋದ್ಯಮ ವೇದಿಕೆಗಳ ಮೂಲಕ ಮುಂದುವರಿಯುತ್ತದೆ. ಈ ಉಪಕ್ರಮಗಳು ವರ್ಷವಿಡೀ ಪ್ರತಿಭೆಗಳನ್ನು ಮಾರುಕಟ್ಟೆಗಳು, ಹೂಡಿಕೆ ಮತ್ತು ಜಾಗತಿಕ ಅವಕಾಶಗಳೊಂದಿಗೆ ಸಂಪರ್ಕಿಸುತ್ತವೆ.
|
ವೇವ್ಸ್ ಶೃಂಗಸಭೆಯು ಈ ಎಲ್ಲಾ ಪ್ರಯತ್ನಗಳನ್ನು ಜಾಗತಿಕ ಸೃಜನಶೀಲ ಉದ್ಯಮದ ವ್ಯವಸ್ಥೆಯೊಂದಿಗೆ ಜೋಡಿಸಿತು. ಇದು ಕಂಟೆಂಟ್ ಕ್ರೀಯೆಟರ್ಸ್‌ಗಳನ್ನು ಉದ್ಯಮಗಳು, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ತಂತ್ರಜ್ಞಾನ ನಾಯಕರೊಂದಿಗೆ ಸಂಪರ್ಕಿಸಿತು. ತನ್ನ ಮಾರುಕಟ್ಟೆಗಳು, ಕ್ರೀಯೆಟರ್ಸ್‌ಗಳ ಸವಾಲುಗಳು ಮತ್ತು ನವೋದ್ಯಮ ವೇದಿಕೆಗಳ ಮೂಲಕ, ಇದು ಪ್ರತಿಭೆಗಳಿಗೆ ವೃತ್ತಿಪರ ಜಾಲಗಳು, ಪ್ರೇಕ್ಷಕರು ಮತ್ತು ಜಾಗತಿಕ ಅವಕಾಶಗಳನ್ನು ತಲುಪಲು ದಾರಿ ಮಾಡಿಕೊಡುತ್ತದೆ.
ಈ ಉಪಕ್ರಮಗಳ ಪ್ರಮುಖ ಶಕ್ತಿಯು ಅವುಗಳ ಪರಸ್ಪರ ಸಂಪರ್ಕದಲ್ಲಿದೆ. ಹಳೆಯ ಸಂಗ್ರಹಗಳು ಭಾರತದ ಸಾಂಸ್ಕೃತಿಕ ನೆನಪುಗಳನ್ನು ರಕ್ಷಿಸುತ್ತವೆ, ಪ್ರಾದೇಶಿಕ ವೇದಿಕೆಗಳು ವೈವಿಧ್ಯಮಯ ಕಥೆಗಳನ್ನು ಜನರಿಗೆ ತಲುಪಿಸುತ್ತವೆ ಮತ್ತು ಹೊಸ ಪ್ರತಿಭೆಗಳಿಗೆ ನಾವೀನ್ಯತೆ ಹಾಗೂ ಸೃಷ್ಟಿ ಕಾರ್ಯ ಮಾಡಲು ಅವಕಾಶಗಳನ್ನು ನೀಡಲಾಗುತ್ತದೆ. ಇವೆಲ್ಲವೂ ಸೇರಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅದರ ವಿಕಸನಗೊಳ್ಳುತ್ತಿರುವ ಸೃಜನಶೀಲ ಭವಿಷ್ಯದೊಂದಿಗೆ ಜೋಡಿಸುತ್ತವೆ. ಇದರೊಂದಿಗೆ, ಸಾರ್ವಜನಿಕ ಪ್ರಸಾರವು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮತ್ತು ವಿಷಯ ಸೃಷ್ಟಿಯು ಎಲ್ಲರನ್ನು ಒಳಗೊಳ್ಳುವಂತೆ ಮಾಡುತ್ತದೆ.
ಅಸ್ತಿತ್ವದಲ್ಲಿರುವ ಕಥಾನಕಗಳನ್ನು ಸಂರಕ್ಷಿಸುವ ಜೊತೆಗೆ ಹೊಸ ಧ್ವನಿಗಳಿಗೆ ಅವಕಾಶ ನೀಡುವ ಮೂಲಕ, ಈ ಉಪಕ್ರಮಗಳು ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಭಾರತದ ಬೆಳೆಯುತ್ತಿರುವ ಉಪಸ್ಥಿತಿಗೆ ಕೊಡುಗೆ ನೀಡುತ್ತಿವೆ. ಸ್ಥಳೀಯ ಸಾಂಸ್ಕೃತಿಕ ಗುರುತುಗಳಲ್ಲಿ ಬೇರೂರಿರುವ, ರಾಷ್ಟ್ರೀಯ ವೇದಿಕೆಗಳ ಮೂಲಕ ಸಂಪರ್ಕಗೊಂಡಿರುವ ಮತ್ತು ಜಾಗತಿಕ ಮಟ್ಟದಲ್ಲಿ ಹೆಚ್ಚು ಗೋಚರಿಸುವ ಸೃಜನಶೀಲ ಆರ್ಥಿಕತೆಯನ್ನು ರೂಪಿಸಲು ಇವು ಸಹಾಯ ಮಾಡುತ್ತಿವೆ.
References
Ministry of Information and Broadcasting
https://prasarbharati.gov.in/waves/
https://www.pib.gov.in/PressReleasePage.aspx?PRID=2243949®=3&lang=1
https://www.pib.gov.in/waves/2025/index.aspx?reg=48&lang=2
https://www.pib.gov.in/PressReleasePage.aspx?PRID=2154230®=48&lang=2
https://www.pib.gov.in/PressReleasePage.aspx?PRID=2268091®=48&lang=2
https://www.pib.gov.in/PressReleasePage.aspx?PRID=2286946®=48&lang=2
https://www.pib.gov.in/PressReleasePage.aspx?PRID=2126844&utm®=48&lang=2
https://www.pib.gov.in/PressReleaseIframePage.aspx?PRID=2125495&utm®=48&lang=2
https://www.pib.gov.in/PressReleasePage.aspx?PRID=2125725®=48&lang=2
https://www.pib.gov.in/PressReleasePage.aspx?PRID=2209982®=3&lang=1
PIB Backgrounders
https://www.pib.gov.in/PressReleasePage.aspx?PRID=2229463®=48&lang=2
https://www.pib.gov.in/FeaturesDeatils.aspx?NoteId=154360&ModuleId=2®=48&lang=2
Click here for pdf file.
******
(Explainer ID: 160137)
आगंतुक पटल : 14
Provide suggestions / comments