• Sitemap
  • Advance Search
Economy

ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ

ಭಾರತದಲ್ಲಿ ವ್ಯವಹಾರ ಅನುಮೋದನೆಗಳ ಪರಿವರ್ತನೆ

Posted On: 22 SEP 2026 9:37PM

ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯು ಒಂದು ಡಿಜಿಟಲ್ ವೇದಿಕೆಯಾಗಿದ್ದು, ಹೂಡಿಕೆದಾರರು ತಮ್ಮ ಉದ್ಯಮಗಳಿಗೆ ಅಗತ್ಯವಿರುವ ಅನುಮೋದನೆಗಳನ್ನು ಗುರುತಿಸಲು ಮಾರ್ಗದರ್ಶನ ನೀಡುತ್ತದೆ. ಅಲ್ಲದೆ, ತಮ್ಮ ನಿರ್ದಿಷ್ಟ ವ್ಯವಹಾರದ ಅಗತ್ಯತೆಗಳಿಗೆ ಅನುಗುಣವಾಗಿ ಈ ಅನುಮೋದನೆಗಳಿಗೆ ಅರ್ಜಿ ಸಲ್ಲಿಸಲು ಇದು ಅವರಿಗೆ ನೆರವಾಗುತ್ತದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಿಂದ ಅನುಷ್ಠಾನಗೊಳಿಸಲಾದ ಈ ವ್ಯವಸ್ಥೆಯು, ಹೂಡಿಕೆದಾರರು ಒಂದೇ ಇಂಟರ್‌ಫೇಸ್ ಮೂಲಕ ಅನುಮೋದನೆಗಳನ್ನು ಗುರುತಿಸಲು, ಅರ್ಜಿ ಸಲ್ಲಿಸಲು ಮತ್ತು ಅವುಗಳನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ.'ನಿಮ್ಮ ಅನುಮೋದನೆಗಳನ್ನು ತಿಳಿದುಕೊಳ್ಳಿ' ಮಾಡ್ಯೂಲ್, ಸಾಮಾನ್ಯ ನೋಂದಣಿ ನಮೂನೆ, ಅರ್ಜಿದಾರರ ಡ್ಯಾಶ್‌ಬೋರ್ಡ್, ಡಾಕ್ಯುಮೆಂಟ್ ರೆಪೊಸಿಟರಿ ಮತ್ತು ಇ-ಸಂವಹನ ಮಾಡ್ಯೂಲ್ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಒಮ್ಮೆ ದಾಖಲೆಗಳನ್ನು ಸಲ್ಲಿಸುವುದು, ಆನ್‌ಲೈನ್ ಪ್ರಕ್ರಿಯೆ ಮತ್ತು ರಿಯಲ್-ಟೈಮ್ ಟ್ರ್ಯಾಕಿಂಗ್‌ಗೆ ಅವಕಾಶ ನೀಡುವ ಮೂಲಕ, ಎನ್‌ಎಸ್‌ಡಬ್ಲುಎಸ್‌ ಮರುಸಲ್ಲಿಕೆಯ ಶ್ರಮ, ನಿಯಮಗಳ ಪಾಲನೆಯ ಹೊರೆ ಮತ್ತು ಅನುಮೋದನೆಯ ಸಮಯವನ್ನು ಕಡಿಮೆ ಮಾಡುತ್ತದೆ; ಜೊತೆಗೆ ಪಾರದರ್ಶಕತೆ ಹಾಗೂ ಸಮನ್ವಯತೆಯನ್ನು ಸುಧಾರಿಸುತ್ತದೆ. ಕೇಂದ್ರ ಸಚಿವಾಲಯಗಳು, ರಾಜ್ಯಗಳು ಮತ್ತು ನಿಯಂತ್ರಣ ಪ್ರಾಧಿಕಾರಗಳ ಹೆಚ್ಚುತ್ತಿರುವ ಸಂಯೋಜನೆಯೊಂದಿಗೆ, ಎನ್‌ಎಸ್‌ಡಬ್ಲುಎಸ್‌ ಭಾರತದ 'ಸುಲಭ ವ್ಯವಹಾರ ನಿರ್ವಹಣೆ'ಯನ್ನು ಬಲಪಡಿಸುತ್ತಿದೆ ಮತ್ತು ಹೆಚ್ಚು ತಡೆರಹಿತ ಹೂಡಿಕೆ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ.

ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ: ಒಂದು ಅವಲೋಕನ

ಬಂಡವಾಳ ಹೂಡಿಕೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಮರ್ಥ ನಿಯಂತ್ರಣ ವ್ಯವಸ್ಥೆಯು ಅತ್ಯಗತ್ಯ. ಸುಪಾರದರ್ಶಕ ಮತ್ತು ಹೂಡಿಕೆದಾರ ಸ್ನೇಹಿ ನಿಯಂತ್ರಣ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರವು ಹಲವಾರು ಡಿಜಿಟಲ್ ಆಡಳಿತ ಸುಧಾರಣೆಗಳನ್ನು ಕೈಗೊಂಡಿದೆ. ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯು ಅಂತಹ ಸುಧಾರಣೆಗಳಲ್ಲಿ ಒಂದಾಗಿದೆ. ಇದು ಹೂಡಿಕೆದಾರರಿಗೆ ತಮ್ಮ ಉದ್ಯಮಗಳಿಗೆ ಅಗತ್ಯವಿರುವ ಅನುಮೋದನೆಗಳನ್ನು ಗುರುತಿಸಲು ಮತ್ತು ಅರ್ಜಿ ಸಲ್ಲಿಸಲು ಮಾರ್ಗದರ್ಶನ ನೀಡುವ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

22 ಸೆಪ್ಟೆಂಬರ್ 2021 ರಂದು ಚಾಲನೆ ನೀಡಲಾದ ಈ ವ್ಯವಸ್ಥೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು ಅನುಷ್ಠಾನಗೊಳಿಸಿದೆ. ಈ ವರ್ಷ, ಇದು ತನ್ನ ಯಶಸ್ವಿ 5 ವರ್ಷಗಳನ್ನು ಪೂರೈಸುತ್ತದೆ. ಇದು ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ನಿಯಂತ್ರಣ ಪ್ರಾಧಿಕಾರಗಳು ನೀಡುವ ಅನುಮೋದನೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸಂಯೋಜಿಸುತ್ತದೆ.

ಸುಲಭ ವ್ಯವಹಾರ ನಿರ್ವಹಣೆಗೆ ಕೊಡುಗೆ

ಮಾಹಿತಿ ಮತ್ತು ದಾಖಲೆಗಳನ್ನು ಒಮ್ಮೆಯಷ್ಟೇ ಸಲ್ಲಿಸಲು ಅವಕಾಶ ನೀಡುವ ಮೂಲಕ ಈ ವ್ಯವಸ್ಥೆಯು ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಇದು ನಿಯಮಗಳ ಪಾಲನೆಯ ಹೊರೆ ಮತ್ತು ಅನುಮೋದನೆಯ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ವೇದಿಕೆಯು ನೇರ ಅರ್ಜಿ ಸ್ಥಿತಿ ಪರಿಶೀಲನೆ ಮತ್ತು ನಿಯಂತ್ರಣ ಪ್ರಾಧಿಕಾರಗಳೊಂದಿಗೆ ಆನ್‌ಲೈನ್ ಸಂವಹನದ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಈ ವೈಶಿಷ್ಟ್ಯಗಳು ಅನುಮೋದನೆ ಪ್ರಕ್ರಿಯೆಯನ್ನು ಹೆಚ್ಚು ನಿರೀಕ್ಷಿತ ಮತ್ತು ಪರಿಣಾಮಕಾರಿಯನ್ನಾಗಿ ಮಾಡುತ್ತವೆ.

ಈ ವ್ಯವಸ್ಥೆಯು ಇಲಾಖೆಗಳ ನಡುವಿನ ಮಾಹಿತಿಯ ಪುನರಾವರ್ತನೆಯನ್ನು ಕಡಿಮೆ ಮಾಡುತ್ತದೆ ಮತ್ತು ಸಂಯೋಜಿತ ಡಿಜಿಟಲ್ ವ್ಯವಸ್ಥೆಯ ಮೂಲಕ ಸರ್ಕಾರಿ ಸಂಸ್ಥೆಗಳ ನಡುವೆ ಸಮನ್ವಯತೆಯನ್ನು ಸುಧಾರಿಸುತ್ತದೆ. ಒಟ್ಟಾರೆಯಾಗಿ, ಈ ಸುಧಾರಣೆಗಳು ಭಾರತದ 'ಸುಲಭ ವ್ಯವಹಾರ ನಿರ್ವಹಣೆ'ಯನ್ನು ಬಲಪಡಿಸುತ್ತವೆ, ಹೂಡಿಕೆಯನ್ನು ಸುಗಮಗೊಳಿಸುತ್ತವೆ ಮತ್ತು ಸರ್ಕಾರದ 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ'ದ ಪರಿಕಲ್ಪನೆಗೆ ಬೆಂಬಲ ನೀಡುತ್ತವೆ.

ಈ ವ್ಯವಸ್ಥೆಯ ಪ್ರಮುಖ ಕಾರ್ಯಚಟುವಟಿಕೆಗಳು

ಈ ವೇದಿಕೆಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಅವಕಾಶ ನೀಡುತ್ತದೆ. 'ನಿಮ್ಮ ಅನುಮೋದನೆಗಳನ್ನು ತಿಳಿದುಕೊಳ್ಳಿ' ವಿಭಾಗವು ಇದರ ಪ್ರಮುಖ ವೈಶಿಷ್ಟ್ಯವಾಗಿದ್ದು, ಉದ್ದೇಶಿತ ಚಟುವಟಿಕೆಗಳ ಆಧಾರದ ಮೇಲೆ ಉದ್ಯಮಕ್ಕೆ ಅನ್ವಯವಾಗುವ ಅನುಮೋದನೆಗಳನ್ನು ಇದು ಗುರುತಿಸುತ್ತದೆ. ಈ ಜಾಲತಾಣವು 32 ಕೇಂದ್ರ ಸಚಿವಾಲಯಗಳು/ಇಲಾಖೆಗಳು ಹಾಗೂ 34 ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅನುಮೋದನಾ ಅರ್ಜಿಗಳನ್ನು ಒಳಗೊಂಡಿದೆ. ಇದು ಹೂಡಿಕೆದಾರರಿಗೆ ನಿಯಂತ್ರಣ ಅಗತ್ಯತೆಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಈ ವಿಭಾಗದ ಮೂಲಕ ನೀಡಲಾಗುವ ಮಾರ್ಗದರ್ಶನವು ಕೇವಲ ಸಲಹಾತ್ಮಕವಾಗಿದ್ದು, ಕಾನೂನು ಸಲಹೆಯಾಗಿರುವುದಿಲ್ಲ.

ನಿಯಮಗಳ ಪಾಲನೆಯನ್ನು ಸರಳಗೊಳಿಸಲು, 'ಸಾಮಾನ್ಯ ನೋಂದಣಿ ನಮೂನೆ'ಯನ್ನು ಒದಗಿಸಲಾಗಿದೆ. ಇದು ಒಂದೇ ವೇದಿಕೆಯ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ವಿವಿಧ ಅರ್ಜಿಗಳಿಗೆ ಆ ಮಾಹಿತಿಯನ್ನು ಮರುಬಳಕೆ ಮಾಡಲು ಅನುವು ಮಾಡಿಕೊಡುತ್ತದೆ. ಪ್ರತ್ಯೇಕ 'ರಾಜ್ಯ ನೋಂದಣಿ ನಮೂನೆ'ಯ ಮೂಲಕ ರಾಜ್ಯ ಮಟ್ಟದ ಏಕ ಗವಾಕ್ಷಿ ವ್ಯವಸ್ಥೆಗಳೊಂದಿಗೆ ತಡೆರಹಿತ ಸಂಪರ್ಕವನ್ನು ಸಹ ಕಲ್ಪಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸಲು, ಅವುಗಳ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಇಲಾಖೆಯ ಪ್ರಶ್ನೆಗಳಿಗೆ ಉತ್ತರಿಸಲು 'ಅರ್ಜಿದಾರರ ಮಾಹಿತಿ ಫಲಕ'ವನ್ನು ಇದು ಒಳಗೊಂಡಿದೆ. ಹೂಡಿಕೆದಾರರು ಅನ್ವಯವಾಗುವ ಅನುಮೋದನೆಗಳನ್ನು ಸುಲಭವಾಗಿ ನವೀಕರಿಸಲು ಮತ್ತು ನೇರ ಸ್ಥಿತಿಯನ್ನು ವೀಕ್ಷಿಸಲು ಇದು ಅವಕಾಶ ನೀಡುತ್ತದೆ. 'ಕೇಂದ್ರೀಕೃತ ದಾಖಲೆಗಳ ಸಂಗ್ರಹಾಗಾರ'ವು ದಾಖಲೆಗಳನ್ನು ಒಮ್ಮೆ ಮಾತ್ರ ಅಪ್‌ಲೋಡ್ ಮಾಡಿ, ಹಲವು ಅನುಮೋದನೆಗಳಿಗೆ ಮರುಬಳಕೆ ಮಾಡಲು ಅನುಕೂಲ ಮಾಡಿಕೊಡುತ್ತದೆ. ಇದರಿಂದ ಪದೇ ಪದೇ ದಾಖಲೆಗಳನ್ನು ಸಲ್ಲಿಸುವ ಶ್ರಮ ತಪ್ಪುತ್ತದೆ. 'ವಿದ್ಯುನ್ಮಾನ ಸಂವಹನ ವಿಭಾಗ'ವು ಅರ್ಜಿದಾರರು ಮತ್ತು ಸಂಬಂಧಪಟ್ಟ ಸಚಿವಾಲಯಗಳು ಅಥವಾ ರಾಜ್ಯ ಸರ್ಕಾರಗಳ ನಡುವೆ ಆನ್‌ಲೈನ್ ಮೂಲಕ ಪ್ರಶ್ನೆಗಳು ಹಾಗೂ ಸ್ಪಷ್ಟೀಕರಣಗಳ ವಿನಿಮಯಕ್ಕೆ ನೆರವಾಗುತ್ತದೆ.

ಈ ವ್ಯವಸ್ಥೆಯಡಿ ಅನುಮೋದನೆ ಪ್ರಕ್ರಿಯೆಯ ಹಂತಗಳು

ಹೂಡಿಕೆದಾರರು ತಮ್ಮ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ಈ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. ನಂತರ 'ನಿಮ್ಮ ಅನುಮೋದನೆಗಳನ್ನು ತಿಳಿದುಕೊಳ್ಳಿ' ವಿಭಾಗದ ಮೂಲಕ ಅಥವಾ ಅನುಮೋದನೆಗಳ ಪಟ್ಟಿಯಿಂದ ತಮಗೆ ಅಗತ್ಯವಿರುವ ಅನುಮೋದನೆಗಳನ್ನು ಗುರುತಿಸಿಕೊಳ್ಳಬಹುದು. ಪರಿಶೀಲನೆಯ ನಂತರ, ವಿವಿಧ ಕೇಂದ್ರ ಮತ್ತು ರಾಜ್ಯ ಮಟ್ಟದ ಅನುಮೋದನೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ಅರ್ಜಿಯನ್ನು ಸಲ್ಲಿಸಿದ ತಕ್ಷಣ, ಈ ವ್ಯವಸ್ಥೆಯು ಅದನ್ನು ಸಂಬಂಧಪಟ್ಟ ಸಚಿವಾಲಯ, ಇಲಾಖೆ ಅಥವಾ ರಾಜ್ಯ ಸರ್ಕಾರದ ಆಂತರಿಕ ಪ್ರಕ್ರಿಯೆ ವ್ಯವಸ್ಥೆಗೆ ವಿದ್ಯುನ್ಮಾನ ರೂಪದಲ್ಲಿ ರವಾನಿಸುತ್ತದೆ. ಈ ವೇದಿಕೆಯಲ್ಲಿ ನೋಂದಣಿ ಉಚಿತವಾಗಿದ್ದರೂ, ಅರ್ಜಿದಾರರು ಆಯಾ ಪ್ರಾಧಿಕಾರಗಳು ನಿಗದಿಪಡಿಸಿದ ಶಾಸನಬದ್ಧ ಶುಲ್ಕವನ್ನು ಈ ಜಾಲತಾಣದ ಮೂಲಕವೇ ಪಾವತಿಸಬೇಕಾಗುತ್ತದೆ.

ಅರ್ಜಿದಾರರು 'ಅರ್ಜಿದಾರರ ಮಾಹಿತಿ ಫಲಕ'ದ ಮೂಲಕ ತಮ್ಮ ಅರ್ಜಿಗಳ ಸ್ಥಿತಿಯನ್ನು ವೀಕ್ಷಿಸಬಹುದು. 'ವಿದ್ಯುನ್ಮಾನ ಸಂವಹನ ವಿಭಾಗ'ವನ್ನು ಬಳಸಿ ಇಲಾಖೆಯ ಪ್ರಶ್ನೆಗಳಿಗೆ ಉತ್ತರಿಸಬಹುದು ಹಾಗೂ ಕೇಂದ್ರೀಕೃತ ದಾಖಲೆ ಸಂಗ್ರಹಾಗಾರದಿಂದ ತಾವು ಅಪ್‌ಲೋಡ್ ಮಾಡಿದ ಎಲ್ಲಾ ದಾಖಲೆಗಳನ್ನು ಪಡೆಯಬಹುದು.

ಡಿಜಿಟಲ್ ಸಂಯೋಜನೆಯ ವಿಸ್ತರಣೆ

ಈ ವ್ಯವಸ್ಥೆಯು ಕಾಯಂ ಖಾತೆ ಸಂಖ್ಯೆಯನ್ನು ಏಕೈಕ ಉದ್ಯಮ ಗುರುತಿನ ಸಂಖ್ಯೆಯಾಗಿ ಬಳಸುತ್ತದೆ. ಡಿಜಿಟಲ್ ಸಹಿ ಪ್ರಮಾಣಪತ್ರ  ಮತ್ತು ಡಿಜಿಲಾಕರ್ (ವೈಯಕ್ತಿಕ ಮಾಲೀಕತ್ವದ ಉದ್ಯಮಗಳಿಗೆ) ಮೂಲಕ ಅಧಿಕೃತ ಪ್ರತಿನಿಧಿಗಳ ಗುರುತಿನ ಪರಿಶೀಲನೆ ನಡೆಸಲಾಗುತ್ತದೆ.

ಸರ್ಕಾರದ ಅನುಮೋದನೆ ಅಗತ್ಯವಿರುವ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಅರ್ಜಿಗಳಿಗಾಗಿ ವಿದೇಶಿ ಹೂಡಿಕೆ ಸೌಲಭ್ಯ ವೇದಿಕೆಯನ್ನು (ಎಫ್‌ಐಎಫ್‌ ಪೊರ್ಟಲ್‌) ಇದರೊಂದಿಗೆ ಸಂಯೋಜಿಸಲಾಗಿದೆ. ಕೈಗಾರಿಕಾ ಉದ್ಯಮಿ ಜ್ಞಾಪಕ ಪತ್ರ (ಐಇಎಂ) ಮತ್ತು ಕೈಗಾರಿಕಾ ಪರವಾನಗಿ (ಐಎಲ್‌) ಪ್ರಕ್ರಿಯೆಗಳನ್ನು ಕ್ರಮವಾಗಿ ಅಕ್ಟೋಬರ್ 2025 ಮತ್ತು ಮಾರ್ಚ್ 2026 ರಿಂದ ಸಂಪೂರ್ಣವಾಗಿ ಈ ವ್ಯವಸ್ಥೆಗೆ ಸ್ಥಳಾಂತರಿಸಲಾಗಿದ್ದು, ಈಗ ಇವು ಸಂಪೂರ್ಣ ಡಿಜಿಟಲ್ ರೂಪದಲ್ಲಿವೆ. ಈ ಡಿಜಿಟಲ್ ಪ್ರಕ್ರಿಯೆಯು ಸಂಬಂಧಿತ ಸರ್ಕಾರಿ ದತ್ತಸಂಚಯಗಳ ಸಂಯೋಜನೆಯೊಂದಿಗೆ ಸ್ವಯಂಚಾಲಿತವಾಗಿ ಮಾಹಿತಿಯನ್ನು ಭರ್ತಿ ಮಾಡುತ್ತದೆ, ಭೌತಿಕ ಅನುಮೋದನೆಯ ಅಗತ್ಯವನ್ನು ತೆಗೆದುಹಾಕುತ್ತದೆ ಮತ್ತು ತಕ್ಷಣವೇ ಸ್ವೀಕೃತಿ ಪತ್ರಗಳನ್ನು ನೀಡಲು ಉದ್ಯಮಗಳಿಗೆ ನೆರವಾಗುತ್ತದೆ. ಇದರಿಂದ ಕಾರ್ಯಕ್ಷಮತೆ ಹೆಚ್ಚಿ, ಪ್ರಕ್ರಿಯೆಯ ಸಮಯ ಕಡಿಮೆಯಾಗುತ್ತದೆ.

ಹೆಚ್ಚುವರಿಯಾಗಿ, ಇ-ಉತ್ಪಾದನಾ ಹೂಡಿಕೆ ಉದ್ಯಮ ವೀಸಾ (e-B-4 Visa) ಅಡಿಯಲ್ಲಿ ವಿದೇಶಿ ವೃತ್ತಿಪರರನ್ನು ಆಹ್ವಾನಿಸಲು ಪ್ರಾಯೋಜಕತ್ವ ಪತ್ರಗಳನ್ನು ನೀಡಲು ಭಾರತೀಯ ಕಂಪನಿಗಳಿಗೆ ಅನುಕೂಲವಾಗುವಂತೆ ನವೆಂಬರ್ 2025 ರಲ್ಲಿ ಈ ವೇದಿಕೆಯಲ್ಲಿ ಹೊಸ ವಿಭಾಗವನ್ನು ಪ್ರಾರಂಭಿಸಲಾಯಿತು. ಈ ವಿಭಾಗವು ನೋಂದಣಿ ಮತ್ತು ಪ್ರಾಯೋಜಕತ್ವ ಸಂಬಂಧಿತ ದಾಖಲೆಗಳನ್ನು ನೀಡಲು ಸರಳೀಕೃತ ಡಿಜಿಟಲ್ ವ್ಯವಸ್ಥೆಯನ್ನು ಒದಗಿಸುತ್ತದೆ.

ಅಲ್ಲದೆ, ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆಯು ತನ್ನ ಎಲ್ಲಾ 74 ಪರವಾನಗಿ ವಿಭಾಗಗಳನ್ನು ಈ ವ್ಯವಸ್ಥೆಯೊಂದಿಗೆ ಸಂಯೋಜಿಸಿದ್ದು, ಸಂಪೂರ್ಣ ಪ್ರಕ್ರಿಯೆಯ ಹಂತದ ಸಂಯೋಜನೆಯನ್ನು ಸಾಧಿಸಿದ ಮೊದಲ ಇಲಾಖೆಯಾಗಿದೆ.

ವ್ಯಾಪ್ತಿ ಮತ್ತು ಸಾಧನೆ

ಆರಂಭದಿಂದಲೂ ಈ ವ್ಯವಸ್ಥೆಯು ತನ್ನ ಸೇವಾ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಿದೆ. 21 ಸೆಪ್ಟೆಂಬರ್ 2026 ರ ಹೊತ್ತಿಗೆ, ಈ ವೇದಿಕೆಯು ವರ್ಷಕ್ಕೆ ಸರಾಸರಿ 3.06 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಪಡೆಯುತ್ತಿದ್ದು, ಪ್ರತಿ ವರ್ಷ 2.26 ಲಕ್ಷಕ್ಕೂ ಹೆಚ್ಚು ಅನುಮೋದನೆಗಳನ್ನು ನೀಡಲು ನೆರವಾಗುತ್ತಿದೆ. ವೈಯಕ್ತಿಕ ಮಾಲೀಕತ್ವದ ಉದ್ಯಮಗಳು, ಕಂಪನಿಗಳು, ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆಗಳು ಮತ್ತು ವಿದೇಶಿ ಸಂಸ್ಥೆಗಳು ಸೇರಿದಂತೆ 5.69 ಲಕ್ಷಕ್ಕೂ ಹೆಚ್ಚು ಉದ್ಯಮಗಳು ಇದರಲ್ಲಿ ನೋಂದಾಯಿಸಿಕೊಂಡಿವೆ.

ಪ್ರಸ್ತುತ ಈ ವ್ಯವಸ್ಥೆಯು 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 327 ಕ್ಕೂ ಹೆಚ್ಚು ಕೇಂದ್ರ ಅನುಮೋದನೆಗಳು ಮತ್ತು 3,452 ರಾಜ್ಯ ಅನುಮೋದನೆಗಳಿಗೆ ಲಭ್ಯತೆ ನೀಡುತ್ತದೆ. ಕಂಪನಿ ನೋಂದಣಿ, ಕೈಗಾರಿಕಾ ಪರವಾನಗಿಗಳು, ನವೋದ್ಯಮ ಮಾನ್ಯತೆ, ವಿದೇಶಿ ನೇರ ಹೂಡಿಕೆ ಅನುಮೋದನೆಗಳು ಮತ್ತು ಗುತ್ತಿಗೆ ಕಾರ್ಮಿಕ ಕಾಯ್ದೆಯಡಿಯ ನೋಂದಣಿಯಂತಹ ಪ್ರಮುಖ ಪ್ರಕ್ರಿಯೆಗಳಿಗೆ ಇದು ನೆರವಾಗುತ್ತದೆ. ಅಸ್ಸಾಂ (335), ಕರ್ನಾಟಕ (327), ತಮಿಳುನಾಡು (223) ಮತ್ತು ಮಣಿಪುರ (190) ಅತಿ ಹೆಚ್ಚು ಸಂಯೋಜಿತ ಅನುಮೋದನೆಗಳನ್ನು ಒದಗಿಸುತ್ತಿರುವ ಪ್ರಮುಖ ರಾಜ್ಯಗಳಾಗಿವೆ.

ಈ ವೇದಿಕೆಯು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಎಥನಾಲ್ ನೀತಿ, ವಾಹನ ಸ್ಕ್ರ್ಯಾಪಿಂಗ್ (ಗುಜರಿ) ನೀತಿ ಮತ್ತು ಭಾರತೀಯ ಪಾದರಕ್ಷೆ ಮತ್ತು ಚರ್ಮ ಅಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಸರ್ಕಾರದ ಪ್ರಮುಖ ಯೋಜನೆಗಳ ಅಡಿಯಲ್ಲಿ ಅನುಮೋದನೆಗಳನ್ನು ಪಡೆಯಲು ಜಂಟಿ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ.

ತಡೆರಹಿತ ಉದ್ಯಮ ವ್ಯವಸ್ಥೆಯತ್ತ

ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯು ಪಾರದರ್ಶಕ ಮತ್ತು ತಂತ್ರಜ್ಞಾನ ಆಧಾರಿತ ನಿಯಂತ್ರಣ ವಾತಾವರಣವನ್ನು ನಿರ್ಮಿಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಸಚಿವಾಲಯಗಳು, ರಾಜ್ಯಗಳು ಮತ್ತು ನಿಯಂತ್ರಣ ಪ್ರಾಧಿಕಾರಗಳ ನಿರಂತರ ಒಗೂಡುವಿಕೆಯು ಇದರ ಪರಿಣಾಮಕಾರಿಯಾದ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಮತ್ತು ಸರಳೀಕೃತ ಪ್ರಕ್ರಿಯೆಗಳು ಹೂಡಿಕೆದಾರರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಹಾಗೂ ಭಾರತದ 'ಸುಲಭ ವ್ಯವಹಾರ ನಿರ್ವಹಣೆ'ಯನ್ನು ಸುಧಾರಿಸುತ್ತವೆ. ಈ ವೇದಿಕೆಯು ಬೆಳೆಯುತ್ತಿದ್ದಂತೆ, ಭಾರತದಲ್ಲಿ ಒಂದು ಸಮ್ಮಿಳಿತ ಉದ್ಯಮ ನಿಯಂತ್ರಣ ಚೌಕಟ್ಟಿನ ಭದ್ರ ಬುನಾದಿಯಾಗುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ.

References

Ministry of Commerce and Industry

https://www.dpiit.gov.in/static/uploads/2026/03/863a5fef349d79a1bba316c4b51eaacb.pdf

https://www.nsws.gov.in/

https://www.dpiit.gov.in/static/uploads/2026/03/863a5fef349d79a1bba316c4b51eaacb.pdf

https://www.pib.gov.in/PressReleaseIframePage.aspx?PRID=1880251&reg=48&lang=2

https://www.pib.gov.in/PressReleasePage.aspx?PRID=1756966&reg=48&lang=2

https://www.pib.gov.in/PressReleasePage.aspx?PRID=1796506&lang=2&reg=3

PIB Archive

https://www.pib.gov.in/FactsheetDetails.aspx?id=150871&NoteId=150871&ModuleId=16&reg=6&lang=1

Click here to see pdf

 

******

 

 

(Explainer ID: 160136) आगंतुक पटल : 19
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Tamil , Telugu