• Sitemap
  • Advance Search
Economy

ಪಿಎಂ ವಿಶ್ವಕರ್ಮ: ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕಲಾಕಾರರ ಸಬಲೀಕರಣ

Posted On: 16 SEP 2026 11:14AM

ಪಿಎಂ ವಿಶ್ವಕರ್ಮ ಯೋಜನೆಯು ಮೂರು ವರ್ಷಗಳನ್ನು ಪೂರೈಸುತ್ತಾ ಬಂದಂತೆ, 30 ಲಕ್ಷ ಫಲಾನುಭವಿಗಳ ನೋಂದಣಿ ಗುರಿಯನ್ನು ಸಾಧಿಸಲಾಗಿದೆ. ಈ ಯೋಜನೆಯು ಕೌಶಲ್ಯ ತರಬೇತಿ, ಸಲಕರಣಿಗಳು, ಸಾಲದ ಬೆಂಬಲ, ಡಿಜಿಟಲ್ ಪ್ರೋತ್ಸಾಹಕಗಳು ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಸಹ ಒದಗಿಸಿದೆ. ಫಲಾನುಭವಿಗಳನ್ನು ಉದ್ಯಮ್ ಅಸಿಸ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಲಾಗುತ್ತಿದೆ ಮತ್ತು ಜೆಮ್‌, ಇ-ಕಾಮರ್ಸ್ ವೇದಿಕೆಗಳು, ವ್ಯಾಪಾರ ಮೇಳಗಳು ಮತ್ತು ಪ್ರದರ್ಶನಗಳು ಸೇರಿದಂತೆ ವಿಶಾಲವಾದ ಮಾರುಕಟ್ಟೆ ಮಾರ್ಗಗಳೊಂದಿಗೆ ಜೋಡಿಸಲಾಗುತ್ತಿದೆ. ಈ ಯೋಜನೆಯನ್ನು ಸಮ್ಮಾನ್, ಸಾಮರ್ಥ್ಯ ಮತ್ತು ಸಮೃದ್ಧಿಯ ಸುತ್ತ ನಿರ್ಮಿಸಲಾಗಿದ್ದು, ಸಾಂಪ್ರದಾಯಿಕ ಕೌಶಲ್ಯಗಳ ಗುರು-ಶಿಷ್ಯ ಪರಂಪರೆ ಮತ್ತು ಕುಟುಂಬ ಆಧಾರಿತ ಅಭ್ಯಾಸವನ್ನು ಬಲಪಡಿಸಲು ಶ್ರಮಿಸುತ್ತದೆ.

ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕಲಾಕಾರರಿಗೆ ಬೆಂಬಲ

ಭಾರತದ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕಲಾಕಾರರು ದೇಶದ ಸ್ಥಳೀಯ ಆರ್ಥಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದ್ದಾರೆ. ಈ ವೃತ್ತಿಗಳಲ್ಲಿ ಹಲವು ಕೈಯಿಂದ ಮಾಡುವ ಕೌಶಲ್ಯಗಳು, ಕುಟುಂಬ ಆಧಾರಿತ ಜ್ಞಾನ ಮತ್ತು ಸಣ್ಣ ಪ್ರಮಾಣದ ಉದ್ಯಮಗಳನ್ನು ಅವಲಂಬಿಸಿವೆ. ಅಂತಹ ಕುಶಲಕರ್ಮಿಗಳು ಮತ್ತು ಕಲಾಕಾರರಿಗೆ ಸಮಗ್ರ ಬೆಂಬಲವನ್ನು ಒದಗಿಸಲು 2023ರ ಸೆಪ್ಟೆಂಬರ್ 17 ರಂದು ಪಿಎಂ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸಲಾಯಿತು.

ಪಿಎಂ ವಿಶ್ವಕರ್ಮ ಯೋಜನೆಯು ಸಮ್ಮಾನ್, ಸಾಮರ್ಥ್ಯ ಮತ್ತು ಸಮೃದ್ಧಿ ಎಂಬ ಮೂರು ಸ್ತಂಭಗಳ ಸುತ್ತ ರೂಪುಗೊಂಡಿದ್ದು, ಇದು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕಲಾಕಾರರಿಗೆ ಗೌರವ, ಸಾಮರ್ಥ್ಯ ಮತ್ತು ಸಮೃದ್ಧಿಯನ್ನು ಪ್ರತಿಬಿಂಬಿಸುತ್ತದೆ. ಈ ಯೋಜನೆಯು ಗುರು-ಶಿಷ್ಯ ಪರಂಪರೆ ಅಥವಾ ಸಾಂಪ್ರದಾಯಿಕ ಕೌಶಲ್ಯಗಳ ಕುಟುಂಬ ಆಧಾರಿತ ಅಭ್ಯಾಸವನ್ನು ಬಲಪಡಿಸಲು ಮತ್ತು ಪೋಷಿಸಲು ಪ್ರಯತ್ನಿಸುತ್ತದೆ.

ಈ ಕೇಂದ್ರ ವಲಯದ ಯೋಜನೆಯು 2023-24ರಿಂದ 2027-28ರ ಹಣಕಾಸು ವರ್ಷದವರೆಗೆ 18 ಸಾಂಪ್ರದಾಯಿಕ ವೃತ್ತಿಗಳನ್ನು ಒಳಗೊಂಡಂತೆ ₹13,000 ಕೋಟಿಗಳ ವೆಚ್ಚವನ್ನು ಹೊಂದಿದೆ. ಈ ಯೋಜನೆಯು ಕುಶಲಕರ್ಮಿಗಳ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟ ಹಾಗೂ ವ್ಯಾಪ್ತಿಯನ್ನು ಸುಧಾರಿಸಲು ಮತ್ತು ದೇಶೀಯ ಹಾಗೂ ಜಾಗತಿಕ ಪೂರೈಕೆ ಸರಪಳಿಯೊಂದಿಗೆ ಅವುಗಳ ಒಗ್ಗೂಡುವಿಕೆಯನ್ನು ಸುಲಭಗೊಳಿಸಲು ಪ್ರಯತ್ನಿಸುತ್ತದೆ.

2026ರ ಸೆಪ್ಟೆಂಬರ್ 17ಕ್ಕೆ ಈ ಯೋಜನೆಯು ಮೂರು ವರ್ಷಗಳನ್ನು ಪೂರೈಸುತ್ತಿರುವುದರಿಂದ, 30 ಲಕ್ಷ ಫಲಾನುಭವಿಗಳ ನೋಂದಣಿ ಗುರಿಯನ್ನು ಈಗಾಗಲೇ ಸಾಧಿಸಲಾಗಿದೆ.

ಯೋಜನೆಯ ಚೌಕಟ್ಟು ಮತ್ತು ಪ್ರಮುಖ ಘಟಕಗಳು

ಪಿಎಂ ವಿಶ್ವಕರ್ಮ ಯೋಜನೆಯು ವಿವಿಧ ರೀತಿಯ ಬೆಂಬಲವನ್ನು ಒಂದೇ ಚೌಕಟ್ಟಿನಡಿಯಲ್ಲಿ ತರುತ್ತದೆ. ಇದರ ಪ್ರಮುಖ ಘಟಕಗಳೆಂದರೆ ಮಾನ್ಯತೆ, ಕೌಶಲ್ಯ ಉನ್ನತೀಕರಣ, ಟೂಲ್‌ಕಿಟ್ ಪ್ರೋತ್ಸಾಹಕ, ಸಾಲದ ಬೆಂಬಲ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹಕ ಮತ್ತು ಮಾರುಕಟ್ಟೆ ಬೆಂಬಲ.

ಮಾನ್ಯತೆ

ನೋಂದಣಿ ಮತ್ತು ಪರಿಶೀಲನಾ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಫಲಾನುಭವಿಗಳಿಗೆ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಯ ಮೂಲಕ ಮಾನ್ಯತೆ ನೀಡಲಾಗುತ್ತದೆ.

ಕೌಶಲ್ಯ ಉನ್ನತೀಕರಣ

  • ಕೌಶಲ್ಯ ಉನ್ನತೀಕರಣದ ಮೂಲಕ, ಫಲಾನುಭವಿಗಳಿಗೆ ಆಧುನಿಕ ಉಪಕರಣಗಳು, ಉತ್ತಮ ಅಭ್ಯಾಸಗಳು ಮತ್ತು ನವೀನ ವಿನ್ಯಾಸಗಳನ್ನು ಪರಿಚಯಿಸಲಾಗುತ್ತದೆ. ಈ ತರಬೇತಿಯು ಡಿಜಿಟಲ್ ವಹಿವಾಟುಗಳು, ಮಾರುಕಟ್ಟೆ ಮತ್ತು ಉದ್ಯಮಶೀಲತೆಯ ಜ್ಞಾನವನ್ನ ಸಹ ಒಳಗೊಂಡಿರುತ್ತದೆ.
  • ಮೂಲ ತರಬೇತಿಯು 5 ರಿಂದ 7 ದಿನಗಳವರೆಗೆ ಇರುತ್ತದೆ, ಆದರೆ ಉನ್ನತ ತರಬೇತಿಯು 15 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ದಿನಗಳವರೆಗೆ ಇರುತ್ತದೆ. ತರಬೇತಿದಾರರಿಗೆ ದಿನಕ್ಕೆ ₹500 ಸ್ಟೈಫಂಡ್ (ಪ್ರೋತ್ಸಾಹಧನ) ನೀಡಲಾಗುತ್ತದೆ.

ಆಧುನಿಕ ಸಲಕರಣಿಗಳು

ಯೋಜನೆಗೆ ಅರ್ಹರಾದ ಫಲಾನುಭವಿಗಳಿಗೆ ₹15,000 ವರೆಗಿನ ಆಧುನಿಕ ಟೂಲ್‌ಕಿಟ್‌ಗಳನ್ನು ಸಹ ಒದಗಿಸಲಾಗುತ್ತದೆ.

ಸಾಲದ ಬೆಂಬಲ

ಔಪಚಾರಿಕ ಸಾಲದ ಲಭ್ಯತೆಯು ಪಿಎಂ ವಿಶ್ವಕರ್ಮ ಯೋಜನೆಯ ಪ್ರಮುಖ ಭಾಗವಾಗಿದೆ. ಈ ಯೋಜನೆಯು ಎರಡು ಕಂತುಗಳಲ್ಲಿ ₹3 ಲಕ್ಷದವರೆಗೆ ಈಡಿಲ್ಲದ (ಕೊಲ್ಯಾಟ್ರಲ್-ಫ್ರೀ) ಉದ್ಯಮ ಅಭಿವೃದ್ಧಿ ಸಾಲವನ್ನು ಒದಗಿಸುತ್ತದೆ. ಮೊದಲ ಕಂತು 18 ತಿಂಗಳ ಮರುಪಾವತಿ ಅವಧಿಯೊಂದಿಗೆ ₹1 ಲಕ್ಷದವರೆಗೆ ಇರುತ್ತದೆ. ಮೂಲ ತರಬೇತಿಯನ್ನು ಪೂರ್ಣಗೊಳಿಸಿದ ಫಲಾನುಭವಿಗಳು ಮೊದಲ ಕಂತಿನ ಸಾಲಕ್ಕೆ ಅರ್ಹರಾಗಿರುತ್ತಾರೆ. ಎರಡನೇ ಕಂತು 30 ತಿಂಗಳ ಮರುಪಾವತಿ ಅವಧಿಯೊಂದಿಗೆ ₹2 ಲಕ್ಷದವರೆಗೆ ಇರುತ್ತದೆ.

ಈ ಸಾಲಗಳನ್ನು ಶೇಕಡಾ 5ರಷ್ಟು ನಿಗದಿತ ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುತ್ತದೆ, ಮತ್ತು ಶೇಕಡಾ 8ರಷ್ಟು ಬಡ್ಡಿ ಸಬ್ಸಿಡಿಯನ್ನು ಸರ್ಕಾರವು ಭರಿಸುತ್ತದೆ. ಎರಡನೇ ಕಂತಿನ ಅರ್ಹತೆಯು ಮೊದಲ ಕಂತಿನ ಮರುಪಾವತಿ ಮತ್ತು ಡಿಜಿಟಲ್ ವಹಿವಾಟುಗಳ ಅಳವಡಿಕೆ ಅಥವಾ ಉನ್ನತ ತರಬೇತಿಯ ಪೂರ್ಣಗೊಳಿಸುವಿಕೆಗೆ ಸಂಬಂಧಿಸಿದೆ.

ಡಿಜಿಟಲ್ ಮತ್ತು ಮಾರುಕಟ್ಟೆ ಬೆಂಬಲ

ಪಿಎಂ ವಿಶ್ವಕರ್ಮ ಯೋಜನೆಯು ಆರ್ಥಿಕ ಬೆಂಬಲವನ್ನು ಡಿಜಿಟಲ್ ಮತ್ತು ಮಾರುಕಟ್ಟೆ ಸಹಾಯದೊಂದಿಗೆ ಜೋಡಿಸುತ್ತದೆ. ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯಲ್ಲಿ ಪ್ರತಿ ಡಿಜಿಟಲ್ ಪಾವತಿ ಅಥವಾ ಸ್ವೀಕೃತಿಗೆ ರೂ. 1 ರಂತೆ, ಪ್ರತಿ ತಿಂಗಳಿಗೆ ಗರಿಷ್ಠ 100 ಅರ್ಹ ವಹಿವಾಟುಗಳವರೆಗೆ ಪಡೆಯಬಹುದು. ಮಾರುಕಟ್ಟೆ ಬೆಂಬಲವು ವ್ಯಾಪಾರ ಮೇಳಗಳು, ಪ್ರದರ್ಶನಗಳು, ಬ್ರ್ಯಾಂಡಿಂಗ್ ಮತ್ತು ಜಿಇಎಂ ನಂತಹ ಇ-ಕಾಮರ್ಸ್ ವೇದಿಕೆಗಳು, ಜಾಹೀರಾತು ಮತ್ತು ಪ್ರಚಾರವನ್ನು ಒಳಗೊಂಡಿದೆ. ಇದು ಕುಶಲಕರ್ಮಿಗಳು ಔಪಚಾರಿಕ ವ್ಯಾಪಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ವಿಶಾಲವಾದ ಮಾರುಕಟ್ಟೆಗಳನ್ನು ತಲುಪಲು ಪ್ರೋತ್ಸಾಹಿಸುತ್ತದೆ.

ಅರ್ಹತೆ, ನೋಂದಣಿ ಮತ್ತು ಔಪಚಾರಿಕೀಕರಣ

ಅರ್ಹ ಅರ್ಜಿದಾರರು

ಪಿಎಂ ವಿಶ್ವಕರ್ಮ ಯೋಜನೆಯು 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ, ಕೈಯಿಂದ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಹಾಗೂ ಸೂಚಿಸಲಾದ 18 ಕುಟುಂಬ ಆಧಾರಿತ ಸಾಂಪ್ರದಾಯಿಕ ವೃತ್ತಿಗಳಲ್ಲಿ ಒಂದರಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು ಮತ್ತು ಕಲಾಕಾರರಿಗೆ ಮುಕ್ತವಾಗಿದೆ. ಅವರು ಅಸಂಘಟಿತ ವಲಯದಲ್ಲಿ ಸ್ವಯಂ ಉದ್ಯೋಗ ಆಧಾರದ ಮೇಲೆ ಕೆಲಸ ಮಾಡುತ್ತಿರಬೇಕು.

  • ಅರ್ಜಿದಾರರು ಕಳೆದ ಐದು ವರ್ಷಗಳಲ್ಲಿ ಸ್ವಯಂ ಉದ್ಯೋಗ ಅಥವಾ ವ್ಯಾಪಾರ ಅಭಿವೃದ್ಧಿಗಾಗಿ ಇದೇ ರೀತಿಯ ಸಾಲ ಆಧಾರಿತ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಾಲಗಳನ್ನು ಪಡೆದಿರಬಾರದು.
  • ನೋಂದಣಿ ಮತ್ತು ಪ್ರಯೋಜನಗಳು ಗಂಡ, ಹೆಂಡತಿ ಮತ್ತು ಮದುವೆಯಾಗದ ಮಕ್ಕಳನ್ನು ಒಳಗೊಂಡ ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೀಮಿತವಾಗಿರುತ್ತವೆ.
  • ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿ ಮತ್ತು ಅವರ ಕುಟುಂಬದ ಸದಸ್ಯರು ಅರ್ಹರಲ್ಲ.

ಮುದ್ರಾ ಮತ್ತು ಪಿಎಂ ಸ್ವನಿಧಿ ಯೋಜನೆಗಳ ಫಲಾನುಭವಿಗಳು ತಮ್ಮ ಸಾಲಗಳನ್ನು ಸಂಪೂರ್ಣವಾಗಿ ಮರುಪಾವತಿಸಿದ್ದರೆ, ಅವರು ಪಿಎಂ ವಿಶ್ವಕರ್ಮ ಯೋಜನೆಯಡಿ ಅರ್ಹರಾಗಿರುತ್ತಾರೆ.

ಸ್ವಯಂ ಉದ್ಯೋಗಿ ಕಾರ್ಮಿಕ ಮತ್ತು ಅಸಂಘಟಿತ ವಲಯ ಎಂದರೇನು?

ಸ್ವಯಂ ಉದ್ಯೋಗಿ ಕಾರ್ಮಿಕನೆಂದರೆ ಯಾವುದೇ ಮಾಲೀಕನ ಬಳಿ ಉದ್ಯೋಗದಲ್ಲಿರದೆ, ಸ್ವತಂತ್ರವಾಗಿ ಯಾವುದೇ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ. ಅಸಂಘಟಿತ ವಲಯವು ವಿಶಾಲವಾಗಿ ಅನೌಪಚಾರಿಕ ಉದ್ಯಮಗಳನ್ನು ಮತ್ತು ಸಂಘಟಿತ ವಲಯದ ಹೊರಗಿನ ಕಾರ್ಮಿಕರನ್ನು ಒಳಗೊಳ್ಳುತ್ತದೆ.

 

ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಒಳಗೊಂಡಿರುವ ವ್ಯಾಪಾರಗಳು

ಬಡಗಿ

ದೋಣಿ ತಯಾರಕ

ಶಸ್ತ್ರಾಸ್ತ್ರ ತಯಾರಕ

ಕಮ್ಮಾರ

ಸುತ್ತಿಗೆ ಮತ್ತು ಟೂಲ್‌ಕಿಟ್ ತಯಾರಕ

ಬೀಗ ತಯಾರಕ

ಅಕ್ಕಸಾಲಿಗ

ಕುಂಬಾರ

ಶಿಲ್ಪಿ, ಕಲ್ಲು ಒಡೆಯುವವರು

ಚಮ್ಮಾರ / ಪಾದರಕ್ಷೆ ತಯಾರಕ

ಕಟ್ಟಡ ಕಾರ್ಮಿಕರು

ಬುಟ್ಟಿ / ಚಾಪೆ / ಪೊರಕೆ ತಯಾರಕ / ನಾರು ನೇಯುವವರು

ಬೊಂಬೆ ಮತ್ತು ಆಟಿಕೆ ತಯಾರಕ

ಕ್ಷೌರಿಕ

ಹೂಮಾಲೆ ತಯಾರಕ

ಅಗಸ

ದರ್ಜಿ

ಮೀನುಗಾರಿಕೆ ಬಲೆ ತಯಾರಕ

ನೋಂದಣಿ

ಅರ್ಜಿಗಳನ್ನು ಕೇವಲ ಕಾಮನ್ ಸರ್ವೀಸ್ ಸೆಂಟರ್‌ಗಳ ಮೂಲಕ ಮಾತ್ರ ಸಲ್ಲಿಸಬಹುದು.

ಮೂರು ಹಂತದ ಪರಿಶೀಲನೆ ಮತ್ತು ಅನುಮೋದನೆ

  • ಪರಿಶೀಲನೆ: ಗ್ರಾಮ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ.
  • ಪರಿಶೀಲನೆ ಮತ್ತು ಶಿಫಾರಸು: ಜಿಲ್ಲಾ ಅನುಷ್ಠಾನ ಸಮಿತಿಯಿಂದ.
  • ಅನುಮೋದನೆ: ಸ್ಕ್ರೀನಿಂಗ್ ಸಮಿತಿಯಿಂದ.

ಪಿಎಂ ವಿಶ್ವಕರ್ಮ ಫಲಾನುಭವಿಗಳನ್ನು ಔಪಚಾರಿಕ ಎಂಎಸ್‌ಎಂಇ ಪರಿಸರ ವ್ಯವಸ್ಥೆಯಲ್ಲಿ ಉದ್ಯಮಿಗಳಾಗಿ ಉದ್ಯಮ್ ಅಸಿಸ್ಟ್ ಪ್ಲಾಟ್‌ಫಾರ್ಮ್‌ನಲ್ಲಿಯೂ ನೋಂದಾಯಿಸಲಾಗುತ್ತದೆ. ಇದು ಅವರಿಗೆ ಅನ್ವಯವಾಗುವ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಉದ್ಯಮ್ ಅಸಿಸ್ಟ್ ಪ್ಲಾಟ್‌ಫಾರ್ಮ್

ಇದು ಅನೌಪಚಾರಿಕ ಸೂಕ್ಷ್ಮ ಉದ್ಯಮಗಳನ್ನು ನೋಂದಾಯಿಸಲು ಮತ್ತು ಅವರಿಗೆ ಉದ್ಯಮ್ ನೋಂದಣಿ ಸಂಖ್ಯೆ ಹಾಗೂ ಪ್ರಮಾಣಪತ್ರವನ್ನು ಒದಗಿಸಲು ಇರುವ ಒಂದು ಆನ್‌ಲೈನ್ ವ್ಯವಸ್ಥೆಯಾಗಿದೆ.

ಪಿಎಂ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಪ್ರಗತಿ

ಕೌಶಲ್ಯ ಉನ್ನತೀಕರಣ ಮತ್ತು ಸಲಕರಣಿಗಳ ಬೆಂಬಲ

ಸಪ್ಟೆಂಬರ್ 15, 2026 ರ ಹೊತ್ತಿಗೆ, 24.37 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ಮೂಲ ಕೌಶಲ್ಯ ತರಬೇತಿಯನ್ನು ಪಡೆದಿದ್ದಾರೆ ಮತ್ತು 18.16 ಲಕ್ಷಕ್ಕೂ ಹೆಚ್ಚು ಜನರು ಟೂಲ್‌ಕಿಟ್‌ಗಳನ್ನು ಪಡೆದಿದ್ದಾರೆ.

ಸಾಂಸ್ಥಿಕ ಸಾಲದ ಲಭ್ಯತೆಯನ್ನು ಬಲಪಡಿಸುವುದು

ಯೋಜನೆಯಡಿಯಲ್ಲಿ ₹5,316 ಕೋಟಿ ಮೌಲ್ಯದ 6.19 ಲಕ್ಷಕ್ಕೂ ಹೆಚ್ಚು ಸಾಲಗಳನ್ನು ಮಂಜೂರು ಮಾಡಲಾಗಿದೆ. ಈ ಸಾಲದ ಬೆಂಬಲವು ಫಲಾನುಭವಿಗಳಿಗೆ ಕಚ್ಚಾ ವಸ್ತುಗಳನ್ನು ಖರೀದಿಸಲು, ಉಪಕರಣಗಳನ್ನು ಮೇಲ್ದಜೆಗೇರಿಸಲು, ತಮ್ಮ ವ್ಯವಹಾರವನ್ನು ವಿಸ್ತರಿಸಲು ಮತ್ತು ಉದ್ಯಮಗಳನ್ನು ಬಲಪಡಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಡಿಜಿಟಲ್ ಸಬಲೀಕರಣ

8.11 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಡಿಜಿಟಲ್ ಪ್ರೋತ್ಸಾಹಕಗಳನ್ನು ಪಡೆದಿದ್ದಾರೆ ಮತ್ತು ಪ್ರೋತ್ಸಾಹಧನವಾಗಿ ₹42 ಕೋಟಿಗೂ ಹೆಚ್ಚು ಹಣವನ್ನು ವಿತರಿಸಲಾಗಿದೆ.

ಬ್ರ್ಯಾಂಡing, ಉತ್ಪನ್ನ ವಿನ್ಯಾಸ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆಗಾಗಿ AI (ಕೃತಕ ಬುದ್ಧಿಮತ್ತೆ) ಉಪಕರಣಗಳ ಬಳಕೆಯಲ್ಲಿ 12,000ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ತರಬೇತಿ ನೀಡಲಾಗಿದೆ.

ಮಾರುಕಟ್ಟೆ ಪ್ರವೇಶ ಮತ್ತು ಸಂಪರ್ಕ

  • ದೇಶಾದ್ಯಂತ 1,500ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳು ಮತ್ತು ಶಿಬಿರಗಳು, 50ಕ್ಕೂ ಹೆಚ್ಚು ಕಾರ್ಯಾಗಾರಗಳು, 82 ವ್ಯಾಪಾರ ಮೇಳಗಳು, 37 ರಾಜ್ಯ ಮಟ್ಟದ ಪ್ರದರ್ಶನಗಳು ಮತ್ತು 50ಕ್ಕೂ ಹೆಚ್ಚು ಫ್ಲಾಶ್ ಮೊಬ್ಸ್‌ (ಸಾಮೂಹಿಕ ನೃತ್ಯ/ಪ್ರದರ್ಶನಗಳು) ಆಯೋಜಿಸಲಾಗಿದೆ.
  • ಮೊದಲ ಪಿಎಂ ವಿಶ್ವಕರ್ಮ ರಾಷ್ಟ್ರೀಯ ಪ್ರದರ್ಶನ ಹಾಗೂ ವ್ಯಾಪಾರ ಮೇಳವನ್ನು 2026ರ ಜನವರಿ 17 ರಿಂದ ಜನವರಿ 31 ರವರೆಗೆ ದೆಹಲಿ ಹಾಟ್‌ನಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾರತದಾದ್ಯಂತ 117ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿ, 2 ಕೋಟಿ ರೂ.ಗಳಿಗೂ ಹೆಚ್ಚಿನ ದಾಖಲೆಯ ಮಾರಾಟವನ್ನು ಮಾಡಿದರು. ಈ ಕಾರ್ಯಕ್ರಮಕ್ಕೆ ವಿವಿಧ ದೇಶಗಳ ವಿದೇಶಿ ರಾಜತಾಂತ್ರಿಕರು, ಭಾರತ ಸರ್ಕಾರದ ಅನೇಕ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, 60,000ಕ್ಕೂ ಹೆಚ್ಚು ಜನರ ಜನಸಂದಣಿ ಕಂಡುಬಂದಿತು.
  • ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್, ಒಎನ್‌ಡಿಸಿ, ಮೀಶೋ, ಅಮೆಜಾನ್, ಫ್ಯಾಬ್‌ಇಂಡಿಯಾ, ಸುಲೇಖಾ ಇತ್ಯಾದಿ ವಿವಿಧ ಇ-ಕಾಮರ್ಸ್ ವೇದಿಕೆಗಳಲ್ಲಿ 30,000ಕ್ಕೂ ಹೆಚ್ಚು ವಿಶ್ವಕರ್ಮ ಫಲಾನುಭವಿಗಳನ್ನು ಆನ್‌ಬೋರ್ಡ್ ಮಾಡಲಾಗಿದೆ (ನೋಂದಾಯಿಸಲಾಗಿದೆ).
  • ಅರ್ಹ ಕುಶಲಕರ್ಮಿಗಳು ತನ್ನ ಮಾರುಕಟ್ಟೆಯಲ್ಲಿ ನೋಂದಾಯಿಸಿಕೊಳ್ಳಲು ಅನುಕೂಲವಾಗುವಂತೆ ಎಂಎಸ್‌ಎಂಇ ಸಚಿವಾಲಯವು ಅಮೆಜಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ.
  • ದಿವ್ಯಾಂಗ ವಿಶ್ವಕರ್ಮ ಕುಶಲಕರ್ಮಿಗಳಿಗೆ ಮಾರುಕಟ್ಟೆ ಪ್ರವೇಶ ಕಲ್ಪಿಸಲು ಪಿಎಂ ವಿಶ್ವಕರ್ಮ ಯೋಜನೆಯು 'ಒಂದು ನಿಲ್ದಾಣ ಒಂದು ಉತ್ಪನ್ನ'  ಉಪಕ್ರಮವನ್ನು ಬಳಸಿಕೊಳ್ಳುತ್ತಿದೆ. ಹೆಚ್ಚು ಜನದಟ್ಟಣೆ ಇರುವ ಆಯ್ದ ರೈಲು ನಿಲ್ದಾಣಗಳಲ್ಲಿರುವ ಮೀಸಲು ಚಿಲ್ಲರೆ ಮಳಿಗೆಗಳು ಅವರ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಜಾಗವನ್ನು ಒದಗಿಸುತ್ತವೆ. 14 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ವೃತ್ತಿಗಳ 42 ಕ್ಕೂ ಹೆಚ್ಚು ದಿವ್ಯಾಂಗ ಫಲಾನುಭವಿಗಳಿಗೆ ಮಳಿಗೆಗಳನ್ನು ಒದಗಿಸಲಾಗಿದೆ.
  • ನಾಗರಿಕ ವಿಮಾನಯಾನ ಸಚಿವಾಲಯದ ಎವಿಎಸ್‌ಎಆರ್‌ ಯೋಜನೆಯ ಸಹಯೋಗದೊಂದಿಗೆ ಭೋಪಾಲ್ ಮತ್ತು ಚಂಡೀಗಢ ಸೇರಿದಂತೆ ವಿಮಾನ ನಿಲ್ದಾಣಗಳಲ್ಲಿಯೂ ಪಿಎಂ ವಿಶ್ವಕರ್ಮ ಮಳಿಗೆಗಳನ್ನು ತೆರೆಯಲಾಗಿದೆ.
  • ಪಿಎಂ ವಿಶ್ವಕರ್ಮ ಉತ್ಪನ್ನಗಳ ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್‌ ಅನ್ನು ಉತ್ತೇಜಿಸಲು, ಭಾರತೀಯ ಪ್ಯಾಕೇಜಿಂಗ್ ಸಂಸ್ಥೆಯ ಸಹಯೋಗದೊಂದಿಗೆ 6 ನಗರಗಳಲ್ಲಿ ಅನೇಕ ಕಾರ್ಯಾಗಾರಗಳನ್ನು ಆಯೋಜಿಸಲಾಗಿದ್ದು, 1500 ವಿಶ್ವಕರ್ಮಿಗಳಿಗೆ (ಪ್ರತಿ ನಗರಕ್ಕೆ 250 ಕುಶಲಕರ್ಮಿಗಳು) ತರಬೇತಿ ನೀಡಲಾಗಿದೆ.
  • ಬುಡಕಟ್ಟು ಕುಶಲಕರ್ಮಿಗಳನ್ನು ಉತ್ತೇಜಿಸಲು ಮತ್ತು ಅವರ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು, ಸಚಿವಾಲಯವು ಟಿಆರ್‌ಐಎಫ್‌ಇಡಿ ಸಹಯೋಗದೊಂದಿಗೆ ಅನೇಕ ಬುಡಕಟ್ಟು ಕುಶಲಕರ್ಮಿ ಮೇಳಗಳನ್ನು  ಆಯೋಜಿಸಿ, ಬುಡಕಟ್ಟು ಪಿಎಂವಿ ಕುಶಲಕರ್ಮಿಗಳನ್ನು 'ಟ್ರೈಬ್ಸ್ ಇಂಡಿಯಾ' ಮುಂತಾದ ಪ್ರತಿಷ್ಠಿತ ವೇದಿಕೆಗಳೊಂದಿಗೆ ಜೋಡಿಸಿದೆ.
  • ಬಿಹಾರ, ಗುಜರಾತ್, ಗೋವಾ, ಹಿಮಾಚಲ ಪ್ರದೇಶ, ಒಡಿಶಾ, ಪುದುಚೇರಿ ಇತ್ಯಾದಿ ರಾಜ್ಯಗಳಲ್ಲಿನ ಸ್ಟಾರ್ ಕೆಟಗರಿ ಹೋಟೆಲ್‌ಗಳು ಮತ್ತು ರಿಸಾರ್ಟ್‌ಗಳಲ್ಲಿ (ವಿವಿಧ ರಾಜ್ಯಗಳಲ್ಲಿನ ಹೋಟೆಲ್ ತಾಜ್, ರಾಡಿಸನ್, ಅಡ್ಬುಜ್ ಇತ್ಯಾದಿ) ಅನೇಕ ಪಿಎಂ ವಿಶ್ವಕರ್ಮ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಫಲಾನುಭವಿಗಳ ಅನುಭವಗಳು ಮತ್ತು ಮೌಲ್ಯಮಾಪನ ವರದಿಗಳು

ಈ ಯೋಜನೆಯು ವಿವಿಧ ಸಾಂಪ್ರದಾಯಿಕ ವೃತ್ತಿಗಳು ಮತ್ತು ಪ್ರದೇಶಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಕೆಳಗಿನ ಪ್ರಕರಣ ಅಧ್ಯಯನಗಳು ಎರಡು ವಿಭಿನ್ನ ವೃತ್ತಿಗಳು ಮತ್ತು ರಾಜ್ಯಗಳ ಫಲಾನುಭವಿಗಳ ಅನುಭವಗಳನ್ನು ಪ್ರಸ್ತುತಪಡಿಸುತ್ತವೆ.

ಫಲಾನುಭವಿಗಳ ಯಶೋಗಾಥೆ

ಶ್ರೀಮತಿ ವಿಲ್ಲಿ, ನಾಗಾಲ್ಯಾಂಡ್‌ನ ಜುನ್‌ಹೆಬೊಟೊದ ಬುಟ್ಟಿ ತಯಾರಕರು, ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಕೌಶಲ್ಯ ತರಬೇತಿಯನ್ನು ಪೂರ್ಣಗೊಳಿಸಿ, 1 ಲಕ್ಷ ರೂ.ಗಳ ಮೇಲಾಧಾರ ರಹಿತ ಸಾಲವನ್ನು ಪಡೆದಿದ್ದಾರೆ. ಅವರು ಕಚ್ಚಾ ವಸ್ತುಗಳನ್ನು ಖರೀದಿಸಲು ಮತ್ತು ತಮ್ಮ ಉದ್ಯಮವನ್ನು ವಿಸ್ತರಿಸಲು ಈ ಸಾಲವನ್ನು ಬಳಸಿಕೊಂಡರು. ಪರಿಣಾಮವಾಗಿ ಅವರ ಮಾಸಿಕ ಆದಾಯವು ಸುಮಾರು ಶೇಕಡಾ 40 ರಷ್ಟು ಹೆಚ್ಚಾಗಿ, ಸುಮಾರು 15,000 ರೂ. ತಲುಪಿದೆ.

ಉತ್ತರಾಖಂಡದ ಚಮೋಲಿಯ ಮರಗೆಲಸಗಾರರಾದ ಶ್ರೀ ದರ್ಶನ್ ಲಾಲ್ ಅವರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಈ ಕರಕುಶಲತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಕುಟುಂಬದ ಪರಂಪರೆಯು ಬದರಿನಾಥ ದೇವಸ್ಥಾನದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಕುಶಲಕರ್ಮಿಗಳೊಂದಿಗೆ ನಿಕಟ ಸಂಬಂಧ ಹೊಂದಿದೆ.

ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಅವರು ಕೌಶಲ್ಯ ತರಬೇತಿ, ಸಲಕರಣಿಗಳು ಮತ್ತು ಕೈಗೆಟುಕುವ ಸಾಲದ ಸೌಲಭ್ಯವನ್ನು ಪಡೆದಿದ್ದಾರೆ. 2026 ರಲ್ಲಿ, ಅವರು ದೆಹಲಿಯಲ್ಲಿ ನಡೆದ ಪಿಎಂ ವಿಶ್ವಕರ್ಮ ಹಾಟ್‌ನಲ್ಲಿಯೂ ಭಾಗವಹಿಸಿದರು. ರಾಷ್ಟ್ರೀಯ ರಾಜಧಾನಿಯಲ್ಲಿ ಅವರು ಭಾಗವಹಿಸಿದ ಮೊದಲ ಪ್ರದರ್ಶನ ಇದಾಗಿದ್ದು, ಇದು ತಮ್ಮ ಉತ್ಪನ್ನಗಳನ್ನು ವಿಶಾಲ ಮಾರುಕಟ್ಟೆಗೆ ಪ್ರದರ್ಶಿಸಲು ಅವರಿಗೆ ಉತ್ತಮ ಅವಕಾಶವನ್ನು ಒದಗಿಸಿಕೊಟ್ಟಿತು.

 

ಐಐಎಂ ಮುಂಬೈನಿಂದ ಸಮಕಾಲೀನ ಮೌಲ್ಯಮಾಪನ

ಐಐಎಂ ಮುಂಬೈ ವತಿಯಿಂದ ಪಿಎಂ ವಿಶ್ವಕರ್ಮ ಯೋಜನೆಯ ಸಮಕಾಲೀನ ಮೌಲ್ಯಮಾಪನವನ್ನು ನಡೆಸಲಾಗಿದ್ದು, ಇದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 11,591 ಫಲಾನುಭವಿಗಳನ್ನು ಒಳಗೊಂಡಿದೆ. ಈ ಮೌಲ್ಯಮಾಪನದಲ್ಲಿ ಬ್ಯಾಂಕ್‌ಗಳು, ಕಾಮನ್ ಸರ್ವೀಸ್ ಸೆಂಟರ್‌ಗಳು, ಇಂಡಿಯಾ ಪೋಸ್ಟ್ ಸಿಬ್ಬಂದಿ ಮತ್ತು ತರಬೇತಿ ಕೇಂದ್ರಗಳ ಅಭಿಪ್ರಾಯಗಳನ್ನು ಸಹ ಪಡೆಯಲಾಗಿದೆ.

ಮೌಲ್ಯಮಾಪನದ ಪ್ರಕಾರ, ಸಮೀಕ್ಷೆ ನಡೆಸಿದ ಶೇಕಡಾ 93 ರಷ್ಟು ಫಲಾನುಭವಿಗಳು ತರಬೇತಿಯ ನಂತರ ತಮ್ಮ ಆದಾಯದಲ್ಲಿ ಮಧ್ಯಮದಿಂದ ಗಣನೀಯ ಹೆಚ್ಚಳವಾಗಿರುವುದಾಗಿ ವರದಿ ಮಾಡಿದ್ದಾರೆ. ಕೌಶಲ್ಯ ಉನ್ನತೀಕರಣವು ಸಮೀಕ್ಷೆ ಮಾಡಿದ ಹೆಚ್ಚಿನ ಫಲಾನುಭವಿಗಳಿಗೆ ಸ್ಪಷ್ಟವಾದ ಆರ್ಥಿಕ ಲಾಭವನ್ನು ತಂದುಕೊಟ್ಟಿದೆ ಎಂಬುದನ್ನು ಈ ಸಂಶೋಧನೆಯು ಸೂಚಿಸುತ್ತದೆ.

ಸಾಂಪ್ರದಾಯಿಕ ಕೌಶಲ್ಯಗಳು ಮತ್ತು ಜೀವನೋಪಾಯವನ್ನು ಉಳಿಸಿಕೊಳ್ಳುವುದು

ಪಿಎಂ ವಿಶ್ವಕರ್ಮ ಯೋಜನೆಯು ಸಾಂಪ್ರದಾಯಿಕ ವೃತ್ತಿಗಳ ಸ್ಥಳೀಯ ಮತ್ತು ಕುಟುಂಬ ಆಧಾರಿತ ಸ್ವರೂಪವನ್ನು ಉಳಿಸಿಕೊಂಡೇ, ಅವುಗಳನ್ನು ಬೆಂಬಲಿಸುವ ರಾಷ್ಟ್ರೀಯ ಚೌಕಟ್ಟಿನೊಳಗೆ ತರುತ್ತದೆ. ಈ ಯೋಜನೆಯು ಸಾಂಪ್ರದಾಯಿಕ ಕೌಶಲ್ಯಗಳ ನಿರಂತರತೆಯನ್ನು ಮತ್ತು ಈ ಅನೇಕ ವೃತ್ತಿಗಳೊಂದಿಗೆ ಸಂಬಂಧಿಸಿದ ಗುರು-ಶಿಷ್ಯ ಪರಂಪರೆಯನ್ನು ಬಲಪಡಿಸಲು ಪ್ರಯತ್ನಿಸುತ್ತದೆ. ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳಿಗೆ ಅವರ ಕೆಲಸದ ವಿವಿಧ ಹಂತಗಳಲ್ಲಿ ಬೆಂಬಲ ನೀಡುವುದರ ಮೂಲಕ, ಬದಲಾಗುತ್ತಿರುವ ಆರ್ಥಿಕ ವಾತಾವರಣದಲ್ಲಿ ಸಾಂಪ್ರದಾಯಿಕ ಜ್ಞಾನ ಮತ್ತು ಕೌಶಲ್ಯಗಳು ಪ್ರಸ್ತುತವಾಗಿ ಉಳಿಯಲು ಸಹಾಯ ಮಾಡುತ್ತಾ, ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಇದು ಹೊಂದಿದೆ.

References:

Ministry of Micro, Small & Medium Enterprises

https://www.pib.gov.in/PressReleasePage.aspx?PRID=1959098&lang=2&reg=3

https://www.pib.gov.in/PressReleasePage.aspx?PRID=2291931&lang=1&reg=48

https://www.pib.gov.in/PressReleasePage.aspx?PRID=2236871&lang=1&reg=3

https://www.pib.gov.in/PressReleasePage.aspx?PRID=2198702&lang=1&reg=3

https://www.pib.gov.in/PressReleasePage.aspx?PRID=2202916&lang=1&reg=3

https://www.pib.gov.in/PressReleasePage.aspx?PRID=2286958&lang=1&reg=3

https://www.pib.gov.in/PressReleaseIframePage.aspx?PRID=2253553&lang=2&reg=48

https://www.msme.gov.in/static/uploads/2026/05/3040dc36fd7023c4d4d1f647ee816165.pdf

https://pmvishwakarma.gov.in/

https://www.pib.gov.in/PressReleasePage.aspx?PRID=2271522&lang=1&reg=6

https://dic.py.gov.in/sites/default/files/pm-vishwakarma.pdf

Ministry of Commerce & Industry

https://www.dpiit.gov.in/static/uploads/2026/03/863a5fef349d79a1bba316c4b51eaacb.pdf

PIB Archives

https://www.pib.gov.in/PressReleasePage.aspx?PRID=2298755&lang=1&reg=3

https://www.pib.gov.in/PressReleasePage.aspx?PRID=2260904&lang=1&reg=3

https://www.pib.gov.in/PressReleasePage.aspx?PRID=2278107&lang=1&reg=1

https://www.pib.gov.in/PressNoteDetails.aspx?ModuleId=2&NoteId=157068&lang=1&reg=3

Rajya Sabha Secretariat

https://www.pib.gov.in/PressReleasePage.aspx?PRID=2238242&lang=1&reg=1

Click here to see pdf 

 

*****

 

(Explainer ID: 160004) आगंतुक पटल : 3
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी