• Sitemap
  • Advance Search
Infrastructure

ಪಿಎಂಎವೈ-ನಗರ: ವಸತಿ, ಸೇರ್ಪಡೆ ಮತ್ತು ಸಬಲೀಕರಣದ ಕಥೆ

Posted On: 16 SEP 2026 1:05PM

ಪಿಎಂಎವೈ-ಯು ಎನ್ನುವುದು ನಗರ ಪ್ರದೇಶಗಳಲ್ಲಿ "ಎಲ್ಲರಿಗೂ ವಸತಿ" ಖಚಿತಪಡಿಸುವ ಗುರಿಯನ್ನು ಹೊಂದಿರುವ ಒಂದು ಪ್ರಮುಖ ನಗರ ವಸತಿ ಅಭಿಯಾನವಾಗಿದೆ. ಇದು ದೇಶಾದ್ಯಂತ ಅರ್ಹ ನಗರ ಕುಟುಂಬಗಳಿಗೆ ಮೂಲ ನಾಗರಿಕ ಸೌಲಭ್ಯಗಳೊಂದಿಗೆ ಪಕ್ಕಾ ಮನೆಗಳನ್ನು ಒದಗಿಸುತ್ತದೆ. ಈ ಅಭಿಯಾನವು ಪ್ರಾಥಮಿಕವಾಗಿ ನಗರಗಳು ಮತ್ತು ಪಟ್ಟಣಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗಗಳು (ಇಡಬ್ಲುಎಸ್‌), ಕಡಿಮೆ ಆದಾಯ ಗುಂಪುಗಳು (ಎಲ್‌ಐಜಿ), ಮಧ್ಯಮ ಆದಾಯ ಗುಂಪುಗಳು ಮತ್ತು ಕೊಳೆಗೇರಿ ನಿವಾಸಿಗಳನ್ನು ಗುರಿಯಾಗಿರಿಸಿಕೊಂಡಿದೆ. ಪಿಎಂಎವೈ-ಯು ಅಡಿಯಲ್ಲಿನ ಅನುಷ್ಠಾನದ ಅನುಭವವು 2024ರಲ್ಲಿ ಪುನರ್ರಚಿಸಲಾದ ಪಿಎಂಎವೈ-ನಗರ2.0ರ ಬಿಡುಗಡೆಗೆ ಕಾರಣವಾಯಿತು. ಮಹಿಳೆಯರು ಮತ್ತು ಇತರ ದುರ್ಬಲ ನಗರ ಗುಂಪುಗಳಿಗೆ ಪ್ರಯೋಜನಗಳನ್ನು ವಿಸ್ತರಿಸುವುದರೊಂದಿಗೆ, ಒಳಗೊಳ್ಳುವಿಕೆಗೆ ಬಲವಾದ ಮಹತ್ವ ನೀಡಲಾಗಿದೆ. ಜಿಯೋ-ಟ್ಯಾಗಿಂಗ್ ಮತ್ತು ರಿಯಲ್-ಟೈಮ್ ಡ್ಯಾಶ್‌ಬೋರ್ಡ್‌ಗಳಂತಹ ತಂತ್ರಜ್ಞಾನ-ಸಕ್ರಿಯಗೊಳಿಸಿದ ವ್ಯವಸ್ಥೆಗಳು ಪಾರದರ್ಶಕತೆ ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಿವೆ.

ನಗರ ಆಕಾಂಕ್ಷೆಯ ಅಡಿಪಾಯ

ಸುರಕ್ಷಿತ ಮತ್ತು ಭದ್ರವಾದ ಮನೆಯು ಗೌರವಾನ್ವಿತ ಜೀವನದ ಅಡಿಪಾಯವಾಗಿದೆ. ಇದು ಕುಟುಂಬಗಳಿಗೆ ಸ್ಥಿರತೆ, ರಕ್ಷಣೆ ಮತ್ತು ಉತ್ತಮ ಅವಕಾಶಗಳನ್ನು ಮುಂದುವರಿಸಲು ವಿಶ್ವಾಸವನ್ನು ಒದಗಿಸುತ್ತದೆ. ಗುಣಮಟ್ಟದ ವಸತಿ ಸೌಲಭ್ಯವು ಜೀವನ ಪರಿಸ್ಥಿತಿಗಳನ್ನು ಸುಧಾರಿಸುವುದು ಮಾತ್ರವಲ್ಲದೆ, ಉತ್ತಮ ಆರೋಗ್ಯ, ಶಿಕ್ಷಣ, ಆರ್ಥಿಕ ಭದ್ರತೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೂ ಕೊಡುಗೆ ನೀಡುತ್ತದೆ. ಲಕ್ಷಾಂತರ ನಗರ ಕುಟುಂಬಗಳಿಗೆ, ಶಾಶ್ವತ ಮನೆಯು ಆಶ್ರಯಕ್ಕಿಂತ ಹೆಚ್ಚಿನದಾಗಿದೆ; ಇದು ಉಜ್ವಲ ಮತ್ತು ಹೆಚ್ಚು ಸುರಕ್ಷಿತ ಭವಿಷ್ಯದ ಹಾದಿಯಾಗಿದೆ.

ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ವಸತಿಯ ಪರಿವರ್ತನಾತ್ಮಕ ಪಾತ್ರವನ್ನು ಗುರುತಿಸಿ, ಜೂನ್ 2015 ರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ ಅನ್ನು ಪ್ರಾರಂಭಿಸಲಾಯಿತು. ಈ ಮಿಷನ್ ಕೈಗೆಟುಕುವ ವಸತಿಯನ್ನು ನಗರ ಅಭಿವೃದ್ಧಿಯ ಕೇಂದ್ರದಲ್ಲಿರಿಸುತ್ತದೆ. ವರ್ಷಗಳಲ್ಲಿ, ಇದು ಪ್ರಮಾಣ, ನಾವೀನ್ಯತೆ ಮತ್ತು ಹೆಚ್ಚಿನ ಬೆಂಬಲದ ಅಗತ್ಯವಿರುವವರ ಮೇಲೆ ಗಮನಹರಿಸುವ ಮೂಲಕ ವಸತಿ ಭೂದೃಶ್ಯವನ್ನು ವಿಕಸಿಸಿದೆ.

ಪಿಎಂಎವೈ- ನಗರ: ನಗರ ವಸತಿ ಅಗತ್ಯಗಳಿಗೆ ರಾಷ್ಟ್ರೀಯ ಪ್ರತಿಕ್ರಿಯೆ

ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ ದೇಶಾದ್ಯಂತ ಅರ್ಹ ನಗರ ಕುಟುಂಬಗಳಿಗೆ ಮೂಲ ನಾಗರಿಕ ಸೌಲಭ್ಯಗಳೊಂದಿಗೆ ಎಲ್ಲಾ ಹವಾಮಾನಗಳಿಗೆ ತಕ್ಕ ಪಕ್ಕಾ ಮನೆಗಳನ್ನು ಒದಗಿಸುತ್ತದೆ. ಇದು ಕೊಳೆಗೇರಿ ನಿವಾಸಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು (ಇಡಬ್ಲುಎಸ್‌), ಕಡಿಮೆ ಆದಾಯ ಗುಂಪುಗಳು (ಎಲ್‌ಐಜಿ), ಮತ್ತು ಮಧ್ಯಮ ಆದಾಯ ಗುಂಪುಗಳಿಗೆ ಸೇರಿದ ಕುಟುಂಬಗಳ ವಸತಿ ಅಗತ್ಯಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಯೋಜನೆಯಡಿಯಲ್ಲಿ, ಕೈಗೆಟುಕುವ ವಸತಿಗಳ ನಿರ್ಮಾಣ ಮತ್ತು ವಿತರಣೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ನೆರವು ನೀಡಲಾಗುತ್ತದೆ. ಮೂಲ ಮಿಷನ್ ಅವಧಿಯು ಮಾರ್ಚ್ 2022 ರವರೆಗೆ ಇತ್ತು. ಆದಾಗ್ಯೂ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕೋರಿಕೆಯ ಮೇರೆಗೆ ಮತ್ತು ಮಂಜೂರಾದ ಯೋಜನೆಗಳ ಪೂರ್ಣಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಯೋಜನೆಯ ಅವಧಿಯನ್ನು ಸೆಪ್ಟೆಂಬರ್ 30, 2026 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚುವರಿಯಾಗಿ, ಪಿಎಂಎವೈ-ನಗರಅನುಷ್ಠಾನದಿಂದ ಪಡೆದ ಕಲಿಕೆ ಮತ್ತು ಅನುಭವಗಳ ಆಧಾರದ ಮೇಲೆ ಮತ್ತು ವಸತಿ ಬೇಡಿಕೆಯ ಹೆಚ್ಚಳದಿಂದಾಗಿ, ಈ ಯೋಜನೆಯನ್ನು ಪರಿಷ್ಕರಿಸಿ ಸೆಪ್ಟೆಂಬರ್ 2024 ರಲ್ಲಿ ಪಿಎಂಎವೈ-ನಗರ2.0 ಎಂದು ಪ್ರಾರಂಭಿಸಲಾಯಿತು. ಈ ಯೋಜನೆಯು ಹೆಚ್ಚು ಸ್ಪಂದಿಸುವ ಮತ್ತು ಅಂತರ್ಗತ ವಿಧಾನದೊಂದಿಗೆ ನಗರ ಪ್ರದೇಶಗಳಲ್ಲಿ "ಎಲ್ಲರಿಗೂ ವಸತಿ" ಎಂಬ ದೃಷ್ಟಿಕೋನವನ್ನು ಮುಂದುವರೆಸಿದೆ.

ಫಲಾನುಭವಿ ಕುಟುಂಬ ಯಾರು?

ಪಿಎಂಎವೈ-ನಗರಅಡಿಯಲ್ಲಿ ಫಲಾನುಭವಿ ಕುಟುಂಬವು ಗಂಡ, ಹೆಂಡತಿ ಮತ್ತು ಮದುವೆಯಾಗದ ಗಂಡು ಮಕ್ಕಳು ಮತ್ತು/ಅಥವಾ ಮದುವೆಯಾಗದ ಹೆಣ್ಣು ಮಕ್ಕಳನ್ನು ಒಳಗೊಂಡಿರುತ್ತದೆ. ಕುಟುಂಬವು ಭಾರತದಲ್ಲಿ ಎಲ್ಲಿಯೂ ಯಾವುದೇ ಸದಸ್ಯರ ಹೆಸರಿನಲ್ಲಿ ಪಕ್ಕಾ ಮನೆ (ಎಲ್ಲಾ ಹವಾಮಾನಗಳಿಗೆ ತಕ್ಕ ವಾಸಯೋಗ್ಯ ಯುನಿಟ್) ಹೊಂದಿರಬಾರದು. ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ, ವಯಸ್ಕ ಆದಾಯ ಗಳಿಸುವ ಸದಸ್ಯರನ್ನು ಪ್ರತ್ಯೇಕ ಕುಟುಂಬವೆಂದು ಪರಿಗಣಿಸಲಾಗುತ್ತದೆ. ಇದು ಈ ಕೆಳಗಿನ ಸಂದರ್ಭಗಳಲ್ಲಿ ಮಾತ್ರ ಅನ್ವಯಿಸುತ್ತದೆ:

  • ಅವರು ಅಥವಾ ಅವಳು ಭಾರತದಲ್ಲಿ ಎಲ್ಲಿಯೂ ತಮ್ಮ ಹೆಸರಿನಲ್ಲಿ ಪಕ್ಕಾ ಮನೆ ಹೊಂದಿಲ್ಲದಿದ್ದರೆ.
  • ಮದುವೆಯಾದ ದಂಪತಿಗಳಲ್ಲಿ, ಇಬ್ಬರು ಸಂಗಾತಿಗಳು ಅಥವಾ ಇಬ್ಬರೂ ಜಂಟಿಯಾಗಿ ಒಂದೇ ಮನೆಯನ್ನು ಪಡೆಯಬಹುದು. ಇದು ಯೋಜನೆಯಡಿಯಲ್ಲಿ ಕುಟುಂಬದ ಆದಾಯ ಅರ್ಹತೆಗೆ ಒಳಪಟ್ಟಿರುತ್ತದೆ. ಅರ್ಹ ಫಲಾನುಭವಿಗಳು ಮಿಷನ್‌ನ ನಾಲ್ಕು ಲಂಬಸಾಲುಗಳಲ್ಲಿ ಯಾವುದಾದರೂ ಒಂದರ ಅಡಿಯಲ್ಲಿ ಮಾತ್ರ ಪ್ರಯೋಜನಗಳನ್ನು ಪಡೆಯಬಹುದು.
  • 21 ಚದರ ಮೀಟರ್‌ಗಿಂತ ಕಡಿಮೆ ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವ ವ್ಯಕ್ತಿಗಳನ್ನು ಈ ಯೋಜನೆಯಡಿಯಲ್ಲಿ 30 ಚದರ ಮೀಟರ್‌ವರೆಗೆ ವಿಸ್ತರಣೆಯೊಂದಿಗೆ ನವೀಕರಣಕ್ಕಾಗಿ ಪರಿಗಣಿಸಬಹುದು. ಭೂಮಿ ಅಥವಾ ಇತರ ತೊಂದರೆಗಳಿಂದ ಇದುಸಾಧ್ಯವಾಗದಿದ್ದರೆ, ಅವರು ಬೇರೆಡೆ ಪಿಎಂಎವೈ(ನಗರ) ಅಡಿಯಲ್ಲಿ ಮನೆಯನ್ನು ಪಡೆಯಬಹುದು.

ಪ್ರಧಾನಮಂತ್ರಿ ಆವಾಸ್ ಯೋಜನೆ - ನಗರ 2.0 (ಪಿಎಂಎವೈ-ನಗರ 2.0): ಮುಂದಿನ ಅಧ್ಯಾಯವನ್ನು ನಿರ್ಮಿಸುವುದು

ಪಿಎಂಎವೈ-ನಗರಹಾಕಿದ ಬಲವಾದ ಅಡಿಪಾಯದ ಮೇಲೆ ನಿರ್ಮಿಸಲಾದ ಪಿಎಂಎವೈ-ನಗರ 2.0, ಭಾರತದ ಕೈಗೆಟುಕುವ ವಸತಿ ಮಿಷನ್‌ನ ಮುಂದಿನ ಹಂತವನ್ನು ಸೂಚಿಸುತ್ತದೆ. ಈ ಯೋಜನೆಯು 1 ಕೋಟಿ ಹೆಚ್ಚುವರಿ ನಗರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಗುರಿಯನ್ನು ಹೊಂದಿದೆ ಮತ್ತು ಇದನ್ನು 2024 ರಿಂದ 2029 ರವರೆಗೆ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿಯಲ್ಲಿ, ಅರ್ಹ ಕುಟುಂಬಗಳು ನಗರ ಪ್ರದೇಶಗಳಲ್ಲಿ ಕೈಗೆಟುಕುವ ಮನೆಗಳ ನಿರ್ಮಾಣ ಅಥವಾ ಖರೀದಿಯನ್ನು ಬೆಂಬಲಿಸಲು ಪ್ರತಿ ಯುನಿಟ್‌ಗೆ ₹2.50 ಲಕ್ಷದವರೆಗೆ ಆರ್ಥಿಕ ನೆರವನ್ನು ಪಡೆಯುತ್ತವೆ. ಪಿಎಂಎವೈ-ನಗರ 2.0 ಅರ್ಹ ಫಲಾನುಭವಿಗಳಿಗೆ ಕೈಗೆಟುಕುವ ಬಾಡಿಗೆ ವಸತಿ ಸೌಲಭ್ಯವನ್ನು ಸಹ ಬೆಂಬಲಿಸುತ್ತದೆ, ಇದು ಭಾರತದ ನಗರಗಳಲ್ಲಿನ ವಿವಿಧ ವಸತಿ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ಪಿಎಂಎವೈ-ನಗರ 2.0 ಯೋಜನೆಯು ಇಡಬ್ಲುಎಸ್‌, ಎಲ್‌ಐಜಿ ಮತ್ತು ಎಂಐಜಿ ವಿಭಾಗಗಳಿಗೆ ಸೇರಿದ ಕುಟುಂಬಗಳಿಗೆ ಮುಕ್ತವಾಗಿದೆ. ಫಲಾನುಭವಿಗಳ ಆದಾಯದ ಮಾನದಂಡಗಳು ಈ ಕೆಳಗಿನಂತಿವೆ:

  • ಇಡಬ್ಲುಎಸ್‌ ಕುಟುಂಬಗಳು: ವಾರ್ಷಿಕ ಆದಾಯ ₹3 ಲಕ್ಷದವರೆಗೆ.
  • ಎಲ್‌ಐಜಿ ಕುಟುಂಬಗಳು: ವಾರ್ಷಿಕ ಆದಾಯ ₹3 ಲಕ್ಷದಿಂದ ₹6 ಲಕ್ಷದವರೆಗೆ.
  • ಎಂಐಜಿ ಕುಟುಂಬಗಳು: ವಾರ್ಷಿಕ ಆದಾಯ ₹6 ಲಕ್ಷದಿಂದ ₹9 ಲಕ್ಷದವರೆಗೆ.

ಪಿಎಂಎವೈ-ನಗರ 2.0 ನ ನಾಲ್ಕು ಲಂಬಸಾಲುಗಳು

ಪಿಎಂಎವೈ-ನಗರನ ಅನುಭವದ ಆಧಾರದ ಮೇಲೆ, ಪಿಎಂಎವೈ-ನಗರ2.0 ಭಾರತದ ನಗರ ಪ್ರದೇಶಗಳಲ್ಲಿನ ವಿವಿಧ ವಸತಿ ಅಗತ್ಯಗಳನ್ನು ಪೂರೈಸಲು ಅಂತಹುದೇ ನಾಲ್ಕು ಆಯಾಮಗಳ ವಿಧಾನವನ್ನು ಅಳವಡಿಸಿಕೊಂಡಿದೆ.

ಫಲಾನುಭವಿ-ನೇತೃತ್ವದ ನಿರ್ಮಾಣ

ಬಿಎಲ್‌ಸಿ ಲಂಬಸಾಲು ಅರ್ಹ ಇಡಬ್ಲುಎಸ್‌ ಕುಟುಂಬಗಳಿಗೆ ₹2.5 ಲಕ್ಷದವರೆಗೆ ಆರ್ಥಿಕ ನೆರವು ನೀಡುತ್ತದೆ. ಅವರು ಗರಿಷ್ಠ 45 ಚದರ ಮೀಟರ್ ಕಾರ್ಪೆಟ್ ವಿಸ್ತೀರ್ಣದೊಂದಿಗೆ ತಮ್ಮದೇ ಆದ ಲಭ್ಯವಿರುವ ಭೂಮಿಯಲ್ಲಿ ಹೊಸ ಪಕ್ಕಾ ಮನೆಗಳನ್ನು ನಿರ್ಮಿಸಿಕೊಳ್ಳಬಹುದು.

ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ

ಎಎಚ್‌ಪಿ ಲಂಬಸಾಲು ಇಡಬ್ಲುಎಸ್‌ ಫಲಾನುಭವಿಗಳಿಗೆ ಪಕ್ಕಾ ಮನೆಯನ್ನು ಹೊಂದಲು ಆರ್ಥಿಕ ನೆರವು ನೀಡುತ್ತದೆ. ಸಾರ್ವಜನಿಕ ಅಥವಾ ಖಾಸಗಿ ಏಜೆನ್ಸಿಗಳು ಅರ್ಹ ಫಲಾನುಭವಿಗಳಿಗಾಗಿ 30–45 ಚದರ ಮೀಟರ್ ಕಾರ್ಪೆಟ್ ವಿಸ್ತೀರ್ಣದೊಂದಿಗೆ ಕೈಗೆಟುಕುವ ಮನೆಗಳನ್ನು ನಿರ್ಮಿಸುತ್ತವೆ. ಆಸ್ತಿಯ ಖರೀದಿದಾರರ ಬೆಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಪ್ರತಿ ಯುನಿಟ್‌ಗೆ ₹2.5 ಲಕ್ಷದವರೆಗೆ ಆರ್ಥಿಕ ನೆರವನ್ನು ನೀಡುತ್ತವೆ.

ಕೈಗೆಟುಕುವ ಬಾಡಿಗೆ ವಸತಿ

ಎಆಋಎಚ್‌ ಲಂಬಸಾಲು ಅಲ್ಪಾವಧಿಯ ವಸತಿ ಅಗತ್ಯವಿರುವ ಅಥವಾ ಮನೆಗಳನ್ನು ಖರೀದಿಸಲು ಅಥವಾ ನಿರ್ಮಿಸಲು ಅಸಮರ್ಥರಾದ ನಗರವಾಸಿಗಳಿಗೆ ಕೈಗೆಟುಕುವ, ಗೌರವ ಮತ್ತು ಸ್ವಚ್ಛವಾದ ಬಾಡಿಗೆ ವಸತಿಯನ್ನು ಒದಗಿಸುತ್ತದೆ. ಇದು ವಲಸಿಗರು, ನಿರಾಶ್ರಿತರು, ಕೈಗಾರಿಕಾ ಕಾರ್ಮಿಕರು, ಕೆಲಸ ಮಾಡುವ ಮಹಿಳೆಯರು, ನಿರ್ಮಾಣ ಕಾರ್ಮಿಕರು, ನಗರ ಬಡವರು ಮತ್ತು ನಿರ್ಗತಿಕರು ಸೇರಿದಂತೆ ಇಡಬ್ಲುಎಸ್‌ ಮತ್ತು ಎಲ್‌ಐಜಿ ಫಲಾನುಭವಿಗಳನ್ನು ಒಳಗೊಂಡಿದೆ. ಇದು ಬೀದಿಬದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಒಪ್ಪಂದದ ನೌಕರರು ಮತ್ತು ಇತರರನ್ನು ಸಹ ಒಳಗೊಂಡಿದೆ. ಮನೆಗಳನ್ನು ವಾಸಯೋಗ್ಯವಾಗಿಸಲು ನೀರು, ಒಳಚರಂಡಿ ಅಥವಾ ಸೆಪ್ಟೇಜ್, ನೈರ್ಮಲ್ಯ, ಆಂತರಿಕ ರಸ್ತೆಗಳು, ಆರೋಗ್ಯ ಕೇಂದ್ರಗಳು ಇತ್ಯಾದಿಗಳನ್ನು ಒಳಗೊಂಡಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ.

ಬಡ್ಡಿ ಸಬ್ಸಿಡಿ ಯೋಜನೆ

ಐಎಸ್‌ಎಸ್‌ ಲಂಬಸಾಲು ಪಿಎಂಎವೈ-ನಗರ2.0 ಅಡಿಯಲ್ಲಿ ಅರ್ಹ ಗೃಹ ಸಾಲಗಳ ಮೇಲೆ ಬಡ್ಡಿ ಸಬ್ಸಿಡಿಯನ್ನು ಒದಗಿಸುತ್ತದೆ. ಇದು ಸೆಪ್ಟೆಂಬರ್ 1, 2024 ರಂದು ಅಥವಾ ನಂತರ ಮಂಜೂರು ಮಾಡಲಾದ ಮತ್ತು ವಿತರಿಸಲಾದ ಸಾಲಗಳನ್ನು ಒಳಗೊಂಡಿದೆ. ಅರ್ಹ ಇಡಬ್ಲುಎಸ್‌, ಎಲ್‌ಐಜಿ ಮತ್ತು ಎಂಐಜಿ ಫಲಾನುಭವಿಗಳು ಮನೆಗಳ ಖರೀದಿ, ಮರುಖರೀದಿ ಅಥವಾ ನಿರ್ಮಾಣಕ್ಕಾಗಿ ಸಬ್ಸಿಡಿಯನ್ನು ಪಡೆಯಬಹುದು. ಐದು ವರ್ಷಗಳಿಗಿಂತ ಹೆಚ್ಚಿನ ಸಾಲದಾವಧಿಯನ್ನು ಹೊಂದಿರುವ ಅರ್ಹ ಫಲಾನುಭವಿಗಳಿಗೆ ಗರಿಷ್ಠ ₹1.80 ಲಕ್ಷ ಬಡ್ಡಿ ಸಬ್ಸಿಡಿಯನ್ನು ಒದಗಿಸಲಾಗುತ್ತದೆ.

ಪಿಎಂಎವೈ-ನಗರಮತ್ತು ಪಿಎಂಎವೈ-ನಗರ 2.0 ರ ಪ್ರಮುಖ ಸಾಧನೆಗಳು

ಪಿಎಂಎವೈ-ನಗರನ ಪ್ರಯಾಣವು ದೊಡ್ಡ ಪ್ರಮಾಣದಲ್ಲಿ ಕೈಗೆಟುಕುವ ವಸತಿ ಸೌಲಭ್ಯವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 2005 ಮತ್ತು 2014 ರ ನಡುವೆ, ಹಿಂದಿನ ಯೋಜನೆಗಳ ಅಡಿಯಲ್ಲಿ ಕೇವಲ 8 ಲಕ್ಷ ನಗರ ಮನೆಗಳು ಮಾತ್ರ ಪೂರ್ಣಗೊಂಡಿದ್ದವು. ಆಗಸ್ಟ್ 9, 2026 ರ ವೇಳೆಗೆ, ಪಿಎಂಎವೈ-ನಗರಮತ್ತು ಪಿಎಂಎವೈ-ನಗರ2.0 ಅಡಿಯಲ್ಲಿ 1.25 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದೆ. ಇವುಗಳಲ್ಲಿ, ದೇಶಾದ್ಯಂತ 1 ಕೋಟಿಗೂ ಅಧಿಕ ಮನೆಗಳು ಪೂರ್ಣಗೊಂಡು ಫಲಾನುಭವಿಗಳಿಗೆ ಹಸ್ತಾಂತರಿಸಲ್ಪಟ್ಟಿವೆ.

ನಗರ ವಸತಿಗಾಗಿ ಸಮಾನ ಪ್ರವೇಶವನ್ನು ಖಚಿತಪಡಿಸುವುದು

ನಗರ ಅಭಿವೃದ್ಧಿಯ ನಿಜವಾದ ಯಶಸ್ಸು ಅದರ ಪ್ರಯೋಜನಗಳು ಎಷ್ಟು ವ್ಯಾಪಕವಾಗಿ ಹಂಚಿಕೆಯಾಗುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಮಿಷನ್ ತನ್ನ ವಿಧಾನದ ಕೇಂದ್ರಬಿಂದುವಾಗಿ ಸಮಗ್ರ ಅಭಿವೃದ್ಧಿಗೆ ಮಹತ್ವ ನೀಡಿದ್ದು, ನಗರಗಳು ಮತ್ತು ಪಟ್ಟಣಗಳಲ್ಲಿರುವ ದುರ್ಬಲ ಕುಟುಂಬಗಳಿಗೆ ಬೆಂಬಲ ನೀಡುತ್ತಿದೆ.

ಈ ಪರಿವರ್ತನೆಯ ಕೇಂದ್ರಬಿಂದುವಾಗಿ ಮಹಿಳೆಯರು ಇದ್ದಾರೆ. ಪಿಎಂಎವೈ-ನಗರಯೋಜನೆಯು ಮಹಿಳಾ ಫಲಾನುಭವಿಗಳ ಹೆಸರಿನಲ್ಲಿ ಅಥವಾ ಜಂಟಿ ಹೆಸರಿನಲ್ಲಿ ಮನೆಗಳ ಮಾಲೀಕತ್ವವನ್ನು ಹೊಂದಿರುವುದನ್ನು ಕಡ್ಡಾಯಗೊಳಿಸುತ್ತದೆ. ಈ ನಿಬಂಧನೆಯು ಆರ್ಥಿಕ ಭದ್ರತೆಯನ್ನು ಬಲಪಡಿಸಿದೆ ಮತ್ತು ಕುಟುಂಬದ ನಿರ್ಧಾರಗಳಲ್ಲಿ ಅವರ ಪಾತ್ರವನ್ನು ಹೆಚ್ಚಿಸಿದೆ.

ಈ ಮಿಷನ್ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರೆ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಹಿರಿಯ ನಾಗರಿಕರು, ವಿಕಲಚೇತನರು ಮತ್ತು ಲಿಂಗಪರಿವರ್ತಿತ ವ್ಯಕ್ತಿಗಳಿಗೆ ವಸತಿ ಸೌಲಭ್ಯಕ್ಕೆ ಆದ್ಯತೆ ನೀಡುತ್ತದೆ. ವಿವಿಧ ಫಲಾನುಭವಿ ಗುಂಪುಗಳ ಅಗತ್ಯಗಳನ್ನು ಪೂರೈಸುವ ಮೂಲಕ, ಪಿಎಂಎವೈ-ನಗರನಗರ ಬೆಳವಣಿಗೆಯನ್ನು ಹೆಚ್ಚು ಸಮಾನ ಮತ್ತು ಸುಲಭವಾಗಿ ಪ್ರವೇಶಿಸಬಹುದಾದಂತೆ ಮಾಡಲು ಸಹಾಯ ಮಾಡಿದೆ.

ಪಿಎಂಎವೈ-ನಗರ2.0 ವಿವಿಧ ಫಲಾನುಭವಿ ಗುಂಪುಗಳಿಗೆ ಉದ್ದೇಶಿತ ಬೆಂಬಲದ ಮೂಲಕ ಈ ಬದ್ಧತೆಯನ್ನು ಮುಂದುವರೆಸಿದೆ. ಆಗಸ್ಟ್ 9, 2026 ರ ವೇಳೆಗೆ, ಈ ಯೋಜನೆಯಡಿಯಲ್ಲಿ ಸುಮಾರು 18.38 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಇದು ದುರ್ಬಲ ಸಮುದಾಯಗಳಿಗಾಗಿ ಕೇಂದ್ರೀಕೃತ ಮಧ್ಯಪ್ರವೇಶಗಳೊಂದಿಗೆ ಮನೆಗಳ ಮಾಲೀಕತ್ವದ ಅವಕಾಶಗಳನ್ನು ಸಂಯೋಜಿಸುತ್ತದೆ.

  • ಮಂಜೂರಾದ 18.38 ಲಕ್ಷ ಮನೆಗಳಲ್ಲಿ, 14.40 ಲಕ್ಷ ಮನೆಗಳು ಫಲಾನುಭವಿ-ನೇತೃತ್ವದ ನಿರ್ಮಾಣ ಲಂಬಸಾಲಿನ ಅಡಿಯಲ್ಲಿ ಬರುತ್ತವೆ.
  • 2.48 ಲಕ್ಷ ಮನೆಗಳನ್ನು ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ ಲಂಬಸಾಲಿನ ಅಡಿಯಲ್ಲಿ ಮಂಜೂರು ಮಾಡಲಾಗಿದೆ.
  • 1.36 ಲಕ್ಷ ಮನೆಗಳನ್ನು ಬಡ್ಡಿ ಸಬ್ಸಿಡಿ ಯೋಜನೆ ಲಂಬಸಾಲಿನ ಅಡಿಯಲ್ಲಿ ಒಳಗೊಳ್ಳಲಾಗಿದೆ.
  • ಕೈಗೆಟುಕುವ ಬಾಡಿಗೆ ವಸತಿ ಘಟಕದ ಅಡಿಯಲ್ಲಿ 13,046 ವಸತಿ ಯುನಿಟ್‌ಗಳನ್ನು ಮಂಜೂರು ಮಾಡಲಾಗಿದೆ.
  • ಪಿಎಂಎವೈ-ನಗರಮತ್ತು ಪಿಎಂಎವೈ-ನಗರ2.0 ಅಡಿಯಲ್ಲಿ ಮಂಜೂರಾದ ಒಟ್ಟು 1.25 ಕೋಟಿ ಮನೆಗಳಲ್ಲಿ, 1 ಕೋಟಿ ಮನೆಗಳನ್ನು ಮಹಿಳೆಯರಿಗೆ (ಮನೆಯ ಮಹಿಳಾ ಮುಖ್ಯಸ್ಥರ ಹೆಸರಿನಲ್ಲಿ ಅಥವಾ ಜಂಟಿ ಮಾಲೀಕತ್ವದಲ್ಲಿ) ಹಂಚಿಕೆ ಮಾಡಲಾಗಿದೆ.

ಈ ಸಾಧನೆಗಳು ವಸತಿ ಸೌಲಭ್ಯಗಳು ಅತ್ಯಂತ ಅರ್ಹರಿಗೆ ತಲುಪುವುದನ್ನು ಖಚಿತಪಡಿಸುವಲ್ಲಿ ಮಿಷನ್‌ನ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತವೆ. ಕೈಗೆಟುಕುವಿಕೆಯನ್ನು ಒಳಗೊಳ್ಳುವಿಕೆಯೊಂದಿಗೆ ಸಂಯೋಜಿಸುವುದರ ಮೂಲಕ, ಪಿಎಂಎವೈ-ನಗರಹೆಚ್ಚು ಸಮಾನ ಮತ್ತು ಸ್ಥಿತಿಸ್ಥಾಪಕ ನಗರ ಸಮುದಾಯಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತಿದೆ.

ತಂತ್ರಜ್ಞಾನ-ಸಕ್ರಿಯಗೊಳಿಸಿದ ಅನುಷ್ಠಾನ ಮತ್ತು ಮೇಲ್ವಿಚಾರಣೆ

ಆಧುನಿಕ ತಂತ್ರಜ್ಞಾನವು ನಗರ ವಸತಿ ವಿತರಣೆಗೆ ಹೊಸ ಆಯಾಮವನ್ನು ನೀಡಿದೆ. ಡಿಜಿಟಲ್ ಡ್ಯಾಶ್‌ಬೋರ್ಡ್‌ಗಳು, ಜಿಯೋ-ಟ್ಯಾಗಿಂಗ್ ಮತ್ತು ಸಂಯೋಜಿತ ಮೇಲ್ವಿಚಾರಣಾ ವ್ಯವಸ್ಥೆಗಳು ಪಿಎಂಎವೈ-ನಗರಅಡಿಯಲ್ಲಿ ಅನುಷ್ಠಾನವನ್ನು ಬಲಪಡಿಸಿವೆ. ಈ ಉಪಕರಣಗಳು ಪಾರದರ್ಶಕತೆಯನ್ನು ಸುಧಾರಿಸಿವೆ ಮತ್ತು ಯೋಜನೆಯ ಮೇಲ್ವಿಚಾರಣೆಯನ್ನು ಹೆಚ್ಚಿಸಿವೆ.

  • ಏಕೀಕೃತ ವೆಬ್ ಪೋರ್ಟಲ್: ಪಿಎಂಎವೈ-ನಗರ2.0 ನ ಏಕೀಕೃತ ವೆಬ್ ಪೋರ್ಟಲ್ ನಗರ ಪ್ರದೇಶಗಳಲ್ಲಿ ಯೋಜನೆಯ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಏಕೈಕ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಅರ್ಹ ಫಲಾನುಭವಿಗಳಿಗೆ ವಸತಿ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ ಮತ್ತು ಅರ್ಜಿಗಳ ಪ್ರಕ್ರಿಯೆ ಹಾಗೂ ಟ್ರ್ಯಾಕಿಂಗ್ ಅನ್ನು ಸುಲಭಗೊಳಿಸುತ್ತದೆ. ಈ ಪೋರ್ಟಲ್ ಫಲಾನುಭವಿಗಳು, ನಗರ ಸ್ಥಳೀಯ ಸಂಸ್ಥೆಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಅನುಷ್ಠಾನಾತ್ಮಕ ಸಂಸ್ಥೆಗಳು ಸೇರಿದಂತೆ ಪ್ರಮುಖ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ತರುತ್ತದೆ. ಇದು ನಿರ್ಮಾಣದ ವಿವಿಧ ಹಂತಗಳಲ್ಲಿ ಮನೆಗಳ ಜಿಯೋ-ಟ್ಯಾಗಿಂಗ್ ಅನ್ನು ಸುಲಭಗೊಳಿಸುತ್ತದೆ ಮತ್ತು ನಿಧಿ ಹಂಚಿಕೆಯನ್ನು ಸರಳಗೊಳಿಸುತ್ತದೆ, ಇದು ಪಾರದರ್ಶಕತೆ, ಜವಾಬ್ದಾರಿ ಮತ್ತು ಯೋಜನೆಯ ಸಮರ್ಥ ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತದೆ.
  • ಪಿಎಂಎವೈ-ನಗರಡ್ಯಾಶ್‌ಬೋರ್ಡ್: ಡ್ಯಾಶ್‌ಬೋರ್ಡ್ ಪ್ರಮುಖ ಕಾರ್ಯಕ್ಷಮತೆಯ ಸೂಚಕಗಳ ಮೇಲಿನ ನೈಜ-ಸಮಯದ ಪ್ರಗತಿಯನ್ನು ಒದಗಿಸುತ್ತದೆ, ಇದನ್ನು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಯುಎಲ್‌ಬಿ ಗಳು/ಅನುಷ್ಠಾನಾತ್ಮಕ ಸಂಸ್ಥೆಗಳು, ಮಾನ್ಯತೆ ಪಡೆದ ಸಂಸತ್ತಿನ ಸದಸ್ಯರು ಮತ್ತು ಶಾಸಕರು, ಫಲಾನುಭವಿಗಳು ಮತ್ತು ಎಲ್ಲಾ ಸಂಬಂಧಿತ ಪಾಲುದಾರರು ಪ್ರವೇಶಿಸಬಹುದು. ಇದು ತಿಳುವಳಿಕೆಯುಳ್ಳ ಮತ್ತು ಡೇಟಾ-ಚಾಲಿತ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಅನುಷ್ಠಾನದ ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಸುಲಭಗೊಳಿಸುತ್ತದೆ.
  • ಜಿಯೋ-ಟ್ಯಾಗಿಂಗ್: ಯೋಜನೆಗಳನ್ನು ಕಾಮಗಾರಿ ಆರಂಭಿಸುವುದು, ಅಡಿಪಾಯ, ಮೇಲ್ವಿಚಾರಣೆ/ಸೂಪರ್‌ಸ್ಟ್ರಕ್ಚರ್, ಮುಕ್ತಾಯ ಮತ್ತು ಬಾಹ್ಯ ಅಭಿವೃದ್ಧಿ, ಮತ್ತು ಪೂರ್ಣಗೊಳ್ಳುವಿಕೆ ಎಂಬ ಐದು ಹಂತಗಳಲ್ಲಿ ಟ್ರ್ಯಾಕ್ ಮಾಡಲಾಗುತ್ತದೆ. ಈ ಹಂತ-ಹಂತದ ಮೇಲ್ವಿಚಾರಣೆಯು ದೊಡ್ಡ ಪ್ರಮಾಣದ ಯೋಜನೆಗಳು ಸಮಯಕ್ಕೆ ಸರಿಯಾಗಿ ನಡೆಯುವುದನ್ನು ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸುತ್ತದೆ.
  • ತಂತ್ರಜ್ಞಾನ ಉಪ-ಮಿಷನ್: ಇದು ವೇಗವಾದ ಮತ್ತು ಉತ್ತಮ ಗುಣಮಟ್ಟದ ವಸತಿಗಾಗಿ ಆಧುನಿಕ, ಹಸಿರು ಮತ್ತು ನವೀನ ನಿರ್ಮಾಣ ತಂತ್ರಜ್ಞಾನಗಳ ಬಳಕೆಯನ್ನು ಬೆಂಬಲಿಸುತ್ತದೆ. ಟಿಎಸ್‌ಎಂ ಅಡಿಯಲ್ಲಿ, ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ - ಇಂಡಿಯಾ ಅನ್ನು ಆಯೋಜಿಸಲಾಗಿದೆ. ಪ್ರಪಂಚದಾದ್ಯಂತದ ಒಟ್ಟು 54 ಸಾಬೀತಾದ ತಂತ್ರಜ್ಞಾನಗಳನ್ನು ಮುಖ್ಯವಾಹಿನಿಯ, ಜಾಗತಿಕವಾಗಿ ಸಾಬೀತಾದ ವಿಪತ್ತು-ನಿರೋಧಕ ತಂತ್ರಜ್ಞಾನಗಳೆಂದು ಸಣ್ಣಪಟ್ಟಿಗೆ ಸೇರಿಸಲಾಗಿದೆ. ಜಿಎಚ್‌ಟಿಸಿ-ಇಂಡಿಯಾ ಅಡಿಯಲ್ಲಿ ಸಣ್ಣಪಟ್ಟಿಗೆ ಸೇರಿಸಲಾದ ಆರು ವಿಶಿಷ್ಟ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರು ಲೈಟ್ ಹೌಸ್ ಪ್ರಾಜೆಕ್ಟ್‌ಗಳನ್ನು ದೇಶದ ಆರು ಸ್ಥಳಗಳಲ್ಲಿ ನಿರ್ಮಿಸಲಾಗಿದೆ.
  • ತಂತ್ರಜ್ಞಾನ ಮತ್ತು ನಾವೀನ್ಯತೆ ಉಪ-ಮಿಷನ್: ಟಿಎಸ್‌ಎಂ ನ ಪ್ರಗತಿಯ ಮೇರೆಗೆ, ಪಿಎಂಎವೈ-ನಗರ2.0 ಅಡಿಯಲ್ಲಿರುವ ತಂತ್ರಜ್ಞಾನ ಮತ್ತು ನಾವೀನ್ಯತೆ ಉಪ-ಮಿಷನ್ ವಸತಿ ನಿರ್ಮಾಣದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುತ್ತದೆ. ಇದು ಸುಸ್ಥಿರ ವಸತಿಗಾಗಿ ನಾವೀನ್ಯತಾ ವಿನ್ಯಾಸ, ಗುಣಮಟ್ಟ ಭರವಸೆ ಮತ್ತು ಹಸಿರು ಕಟ್ಟಡ ಮಾನದಂಡಗಳ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಟಿಐಎಸ್‌ಎಂ ವಿವಿಧ ಭೌಗೋಳಿಕ-ಹವಾಮಾನ ವಲಯಗಳಲ್ಲಿ ಹವಾಮಾನ-ಸ್ಪಂದನಾತ್ಮಕ ವಿನ್ಯಾಸಗಳು ಮತ್ತು ಕಟ್ಟಡ ಯೋಜನೆಗಳನ್ನು ಬೆಂಬಲಿಸುತ್ತದೆ.
  • ತಂತ್ರಜ್ಞಾನ ನಾವೀನ್ಯತಾ ಅನುದಾನ: ಪಿಎಂಎವೈ-ನಗರ2.0 ಯು ಎಎಚ್‌ಪಿ ಯೋಜನೆಗಳಿಗಾಗಿ ಹೆಚ್ಚುವರಿ ತಂತ್ರಜ್ಞಾನ ನಾವೀನ್ಯತಾ ಅನುದಾನವನ್ನು ಒದಗಿಸುತ್ತದೆ. ಈ ಅನುದಾನವು ಜಿಎಚ್‌ಟಿಸಿ-ಇಂಡಿಯಾ ಅಡಿಯಲ್ಲಿ ಸೂಚಿಸಲಾದ ನವೀನ ಮತ್ತು ಪರ್ಯಾಯ ತಂತ್ರಜ್ಞಾನಗಳ ಬಳಕೆಯನ್ನು ಬೆಂಬಲಿಸುತ್ತದೆ.

ಫಲಾನುಭವಿಗಳ ಜೀವನದ ಮೇಲೆ ಬೀರಿರುವ ಪ್ರಭಾವ

ಪಿಎಂಎವೈ-ನಗರದ ನಿಜವಾದ ಪರಿಣಾಮವು ಅದು ನಗರ ಭಾರತದಾದ್ಯಂತ ಪರಿವರ್ತಿಸಿರುವ ಜೀವನದ ಮೂಲಕ ಉತ್ತಮವಾಗಿ ಅರ್ಥವಾಗುತ್ತದೆ. ಈ ಯಶಸ್ಸಿನ ಕಥೆಗಳು ಸುರಕ್ಷಿತ ವಸತಿಯು ಫಲಾನುಭವಿಗಳಿಗೆ ಗೌರವ, ಸ್ಥಿರತೆ ಮತ್ತು ಸ್ವಾವಲಂಬನೆಯನ್ನು ಹೇಗೆ ಬಲಪಡಿಸಿದೆ ಎಂಬುದನ್ನು ಪ್ರತಿಬಿಂಬಿಸುತ್ತವೆ.

ತಮ್ಮದೇ ಆದ ಸೂರು, ಸಾಧ್ಯತೆಗಳ ಭವಿಷ್ಯ

ಆಂಧ್ರಪ್ರದೇಶದ ಅಡ್ಡಂಕಿಯಲ್ಲಿ ಮಂದಾಲಪು ಅನಂತಲಕ್ಷ್ಮಿ ಅವರು ತಮ್ಮ ಪತಿ ಮತ್ತು ಮೂರು ಮಕ್ಕಳೊಂದಿಗೆ ತಾತ್ಕಾಲಿಕ ಸೂರು ಹೊಂದಿದ್ದ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದರು. ಕುಟುಂಬವು ಎಮ್ಮೆ ಸಾಕಾಣಿಕೆಯಿಂದ ಬರುವ ಅಲ್ಪ ಸ್ವಲ್ಪ ಆದಾಯವನ್ನು ಅವಲಂಬಿಸಿತ್ತು ಮತ್ತು ಶಾಶ್ವತ ಮನೆಯನ್ನು ಹೊಂದುವುದು ಅವರ ಕೈಗೆಟುಕದ ಕನಸಾಗಿತ್ತು. ಪಿಎಂಎವೈ-ನಗರದ ಅಡಿಯಲ್ಲಿ ಬೆಂಬಲ ಪಡೆದ ನಂತರ, ಅವರು ಸ್ವತಃ ಮನೆಯನ್ನು ನಿರ್ಮಿಸುವ ಮೂಲಕ ಆರ್ಥಿಕ ತೊಂದರೆಗಳನ್ನು ಜಯಿಸಿದರು. ಹೊಸ ಪಕ್ಕಾ ಮನೆಯು ಸುರಕ್ಷಿತ ನೈರ್ಮಲ್ಯವನ್ನು ತಂದಿತು, ಬಯಲು ಶೌಚವನ್ನು ಕೊನೆಗೊಳಿಸಿತು ಮತ್ತು ಅವರ ಜೀವನಮಟ್ಟವನ್ನು ಸುಧಾರಿಸಿತು. ಮುಖ್ಯವಾಗಿ, ಇದು ಆತ್ಮವಿಶ್ವಾಸವನ್ನು ಮೂಡಿಸಿತು ಮತ್ತು ತಮ್ಮ ಮಕ್ಕಳ ಭವಿಷ್ಯದಲ್ಲಿ ಹೂಡಿಕೆ ಮಾಡಲು ಕುಟುಂಬಕ್ಕೆ ಸ್ಫೂರ್ತಿ ನೀಡಿತು.

ನಿರಂತರ ರಿಪೇರಿಯಿಂದ ಶಾಶ್ವತ ಸ್ಥಿರತೆಯವರೆಗೆ

ಮೇಘಾಲಯದ ನೊಂಗ್‌ಪೋ ಪಟ್ಟಣದಲ್ಲಿ, ಲೂಸಿಬಾನ್ ಸಿಂಗ್‌ಕ್ಲಿ ಅವರು ಕುಟುಂಬದ ಏಕೈಕ ಆಧಾರಸ್ತಂಭವಾಗಿ ತಮ್ಮ ತಂದೆ ಮತ್ತು ಸಹೋದರಿಯರನ್ನು ನೋಡಿಕೊಳ್ಳುತ್ತಿದ್ದಾರೆ. ಆಶಾ ಕಾರ್ಯಕರ್ತೆಯಾಗಿ ಮತ್ತು ಅನಾನಸ್ ಕೃಷಿಕರಾಗಿರುವ ಅವರು, ವಿಶೇಷವಾಗಿ ಮಳೆಗಾಲದಲ್ಲಿ ಪದೇ ಪದೇ ರಿಪೇರಿ ಮಾಡಬೇಕಾದ ಕಚ್ಚಾ ಮನೆಯಲ್ಲಿ ವಾಸಿಸುತ್ತಿದ್ದರು. ಈ ವೆಚ್ಚಗಳು ಸಾಮಾನ್ಯವಾಗಿ ಕುಟುಂಬದ ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತಿದ್ದವು ಮತ್ತು ಅವರ ತಂದೆಯ ವೈದ್ಯಕೀಯ ಚಿಕಿತ್ಸೆಯ ಮೇಲೆ ಪರಿಣಾಮ ಬೀರುತ್ತಿದ್ದವು. ಪಿಎಂಎವೈ-ನಗರ ಫಲಾನುಭವಿ ಆದ ನಂತರ, ಲೂಸಿಬಾನ್ ಅವರು ಶಾಶ್ವತವಾದ ಎಲ್ಲಾ ಹವಾಮಾನಗಳಿಗೆ ತಕ್ಕ ಮನೆಯನ್ನು ಪಡೆದರು, ಇದು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಿತು ಮತ್ತು ಕುಟುಂಬದ ಆರ್ಥಿಕ ಸ್ಥಿರತೆಯನ್ನು ಸುಧಾರಿಸಿತು. ಈ ಉಳಿತಾಯವು ಅವರ ತಂದೆಯ ಆರೋಗ್ಯ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಕುಟುಂಬವು ಮಳೆನೀರು ಕೊಯ್ಲು ಅಳವಡಿಸಿಕೊಂಡಿದೆ, ಹಣ್ಣು ಬಿಡುವ ಮರಗಳನ್ನು ನೆಟ್ಟಿದೆ, ಎಲ್‌ಪಿಜಿ ಸಂಪರ್ಕವನ್ನು ಪಡೆದಿದೆ ಮತ್ತು ಎಲ್‌ಇಡಿ ಬೆಳಕಿಗೆ ಬದಲಾಯಿಸಿಕೊಂಡಿದೆ. ಅವರ ಹೊಸ ಮನೆ ಇಡೀ ಕುಟುಂಬಕ್ಕೆ ನೆಮ್ಮದಿಯನ್ನು ತಂದಿದೆ.

ಎಲ್ಲರಿಗೂ ವಸತಿ ಕಲ್ಪಿಸುವ ಕನಸನ್ನು ಮುನ್ನಡೆಸುವುದು

ಒಂದು ನಗರದ ಕಥೆಯೆಂದರೆ ಅಂತಿಮವಾಗಿ ಅದನ್ನು ತಮ್ಮ ಮನೆ ಎಂದು ಕರೆಯುವ ಜನರ ಕಥೆಯಾಗಿದೆ. ನಗರ ಬೆಳೆದಂತೆ ಮತ್ತು ವಿಕಸನಗೊಂಡಂತೆ, ವಸತಿಯು ಸೇರ್ಪಡೆ, ಅವಕಾಶ ಮತ್ತು ಜೀವನಮಟ್ಟದ ಅತ್ಯಂತ ಗೋಚರ ಸೂಚಕಗಳಲ್ಲಿ ಒಂದಾಗುತ್ತದೆ. ಪಿಎಂಎವೈ-ನಗರದ ಪ್ರಯಾಣವು ಈ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ನಗರ ಅಭಿವೃದ್ಧಿಯ ಅಂಚಿನಲ್ಲಿ ದೀರ್ಘಕಾಲ ಉಳಿದಿದ್ದ ಲಕ್ಷಾಂತರ ಜನರಿಗೆ ವಸತಿ ಸೌಲಭ್ಯವನ್ನು ಹತ್ತಿರ ತಂದಿದೆ. ಹಾಗೆ ಮಾಡುವುದರ ಮೂಲಕ, ಇದು ದೇಶಾದ್ಯಂತ ಅಸಂಖ್ಯಾತ ಕುಟುಂಬಗಳಿಗೆ ಸ್ವಂತ ಮನೆಯನ್ನು ಹೊಂದುವ ಆಕಾಂಕ್ಷೆಯನ್ನು ನೈಜತೆಯಾಗಿ ಪರಿವರ್ತಿಸಲು ಸಹಾಯ ಮಾಡಿದೆ.

ಯೋಜನೆಗಳ ಯೋಜನೆ, ಮೇಲ್ವಿಚಾರಣೆ ಮತ್ತು ಪಾರದರ್ಶಕ ಅನುಷ್ಠಾನಕ್ಕಾಗಿ ತಂತ್ರಜ್ಞಾನ-ಚಾಲಿತ ವ್ಯವಸ್ಥೆಗಳ ಬಳಕೆಯು ಈ ಮಿಷನ್ ಅನ್ನು ಮತ್ತಷ್ಟು ಬಲಪಡಿಸಿದೆ. ಪಿಎಂಎವೈ-ನಗರ 2.0 ಮೂಲಕ, ಪ್ರತಿಯೊಂದು ಕುಟುಂಬವು ತಾವೇ ಹೆಮ್ಮೆಯಿಂದ ನೆಲೆಸಲು ಒಂದು ಸುರಕ್ಷಿತ ತಾಣವನ್ನು ಹೊಂದುವುದನ್ನು ಈ ಮಿಷನ್ ಮುಂದುವರೆಸಿದೆ.

References

Ministry of Housing and Urban Affairs

https://pmay-urban.gov.in/about

https://pmaymis.gov.in/pmaymis2_2024/PMAY_SURVEY/EligiblityCheck.aspx

https://www.pib.gov.in/PressReleasePage.aspx?PRID=2274164&reg=48&lang=2

https://www.pib.gov.in/PressReleasePage.aspx?PRID=2239027&reg=48&lang=2

https://dashboard.pmay-urban.gov.in/

https://www.pib.gov.in/PressReleasePage.aspx?PRID=2231861&reg=3&lang=2

https://pmay-urban.gov.in/uploads/progress-pdfs/68ac528160e77-Achievement_under_PMAY-U_&_PMAY-U2.0_cropped.pdf

https://pmay-urban.gov.in/uploads/guidelines/AHP-SOP.pdf

https://pmaymis.gov.in/PMAYMIS2_2024/PmayUrban.aspx

https://pmay-urban.gov.in/uploads/pmayu-9-years/Booklet.pdf

https://www.pib.gov.in/PressReleasePage.aspx?PRID=1953776&reg=48&lang=2

https://www.pib.gov.in/PressReleaseDetail.aspx?PRID=2296797&reg=48&lang=1

https://pmay-urban.gov.in/uploads/success-stories/605c36ab8e06f-Meghalaya_Lucybon%20Syngkli.pdf

https://pmay-urban.gov.in/uploads/success-stories/605c2ccda9adb-Andhra%20Pradesh_Mandhalpu%20Ananthalakshmi.pdf

https://pmay-urban.gov.in/uploads/success-stories/605c347e9d8cd-Kerala%20A%20R%20Ragasree.pdf

https://pmay-urban.gov.in/uploads/guidelines/Operational-Guidelines-of-PMAY-U-2.pdf

Click here to see pdf

 

*****

(Explainer ID: 160003) आगंतुक पटल : 32
Provide suggestions / comments
इस विज्ञप्ति को इन भाषाओं में पढ़ें: English , Malayalam , हिन्दी , Bengali , Assamese