Technology
ಡಿಜಿಟಲ್ ಭಾರತಕ್ಕೆ ಶಕ್ತಿ ತುಂಬುತ್ತಿರುವ ಡೇಟಾ ಸೆಂಟರ್‌ಗಳು
Posted On:
14 SEP 2026 10:55AM
|
ಡೇಟಾ ಸೆಂಟರ್‌ಗಳು ಭಾರತದ ಡಿಜಿಟಲ್ ಜೀವನಕ್ಕೆ ಶಕ್ತಿ ತುಂಬುವ ಅದೃಶ್ಯ ಇಂಜಿನ್‌ಗಳಾಗಿವೆ. ಅವು ಪ್ರತಿ ಸೆಕೆಂಡಿಗೂ ಬ್ಯಾಂಕಿಂಗ್, ಇ-ಆಡಳಿತ ಮತ್ತು ಆನ್‌ಲೈನ್ ಸೇವೆಗಳನ್ನು ಬೆಂಬಲಿಸುತ್ತವೆ. ಉದಯೋನ್ಮುಖ ತಂತ್ರಜ್ಞಾನಗಳು ವೇಗದ ಡೇಟಾ ಬೆಳವಣಿಗೆಯನ್ನು ಮುನ್ನಡೆಸುತ್ತಿರುವಂತೆ, ಸರ್ಕಾರವು ಬೆಂಬಲಿತ ನೀತಿ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಮೂಲಸೌಕರ್ಯದ ಸ್ಥಾನಮಾನ, ಹಣಕಾಸಿನ ಪ್ರೋತ್ಸಾಹಕಗಳು ಮತ್ತು ಶುದ್ಧ ಇಂಧನದ ಅಳವಡಿಕೆಯು ಭಾರತದ ಡೇಟಾ ಸೆಂಟರ್ ವ್ಯವಸ್ಥೆಯನ್ನು ಬಲಪಡಿಸುತ್ತಿವೆ.
|
ದತ್ತಾಂಶ ಕೇಂದ್ರಗಳ ಮೂಲಕ ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವುದು
ಭಾರತದ ಡಿಜಿಟಲ್ ಆರ್ಥಿಕತೆಯು ವೇಗದ ಬೆಳವಣಿಗೆ ಮತ್ತು ತಾಂತ್ರಿಕ ಪರಿವರ್ತನೆಯ ಹೊಸ ಹಂತವನ್ನು ಪ್ರವೇಶಿಸುತ್ತಿದೆ. ಡಿಜಿಟಲೀಕರಣವು ವಲಯಗಳಾದ್ಯಂತ ಉತ್ಪಾದಕತೆ, ಸ್ಪರ್ಧಾತ್ಮಕತೆ ಮತ್ತು ಸೇವಾ ವಿತರಣೆಯನ್ನು ಮರುರೂಪಿಸುತ್ತಿದೆ. ಡಿಜಿಟಲ್ ಸೇವೆಗಳು ವಿಸ್ತರಿಸುತ್ತಿದ್ದಂತೆ, ಅವು ಕಂಪ್ಯೂಟಿಂಗ್ ಸಾಮರ್ಥ್ಯ, ಡೇಟಾ ಸಂಗ್ರಹಣೆ ಮತ್ತು ಹೆಚ್ಚಿನ ವೇಗದ ಸಂಪರ್ಕಕ್ಕಾಗಿ ಅಭೂತಪೂರ್ವ ಬೇಡಿಕೆಯನ್ನು ಸೃಷ್ಟಿಸುತ್ತಿವೆ. ಈ ಬೇಡಿಕೆಯನ್ನು ಪೂರೈಸಲು ನಿರಂತರವಾಗಿ, ಸುರಕ್ಷಿತವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬಲ್ಲ ಮೂಲಸೌಕರ್ಯಗಳ ಅಗತ್ಯವಿದೆ. ಡೇಟಾ ಸೆಂಟರ್‌ಗಳು ಈ ನಿರ್ಣಾಯಕ ತಡಿಪಾಯವನ್ನು ಒದಗಿಸುತ್ತವೆ, ಭಾರತದ ಆರ್ಥಿಕತೆ ಮತ್ತು ಆಡಳಿತವನ್ನು ಹೆಚ್ಚಾಗಿ ಚಾಲನೆ ಮಾಡುವ ಡಿಜಿಟಲ್ ಸೇವೆಗಳಿಗೆ ಶಕ್ತಿ ತುಂಬುತ್ತವೆ.

ಡೇಟಾ ಸೆಂಟರ್ ಎಂಬುದು ಕಂಪ್ಯೂಟಿಂಗ್, ಸಂಗ್ರಹಣೆ ಮತ್ತು ನೆಟ್‌ವರ್ಕಿಂಗ್ ಉಪಕರಣಗಳನ್ನು ಹೊಂದಿರುವ ಒಂದು ಸುರಕ್ಷಿತ ಸೌಲಭ್ಯವಾಗಿದೆ. ಇದು ಬೃಹತ್ ಪ್ರಮಾಣದ ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸುತ್ತದೆ, ಸಂಸ್ಕರಿಸುತ್ತದೆ, ನಿರ್ವಹಿಸುತ್ತದೆ ಮತ್ತು ವಿತರಿಸುತ್ತದೆ. ಈ ಸಾಮರ್ಥ್ಯಗಳು ಆನ್‌ಲೈನ್ ಬ್ಯಾಂಕಿಂಗ್, ಇ-ಆಡಳಿತ, ಡಿಜಿಟಲ್ ಪಾವತಿಗಳು, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳಿಗೆ ಬೆಂಬಲ ನೀಡುತ್ತವೆ.
|
ಡೇಟಾ ಸೆಂಟರ್ ಎಂಬುದು ಕಂಪ್ಯೂಟಿಂಗ್, ಶೇಖರಣಾ ಮತ್ತು ನೆಟ್‌ವರ್ಕಿಂಗ್ ಉಪಕರಣಗಳನ್ನು ಹೊಂದಿರುವ ಒಂದು ಸುರಕ್ಷಿತ ಸೌಲಭ್ಯವಾಗಿದೆ. ಇದು ಅಪಾರ ಪ್ರಮಾಣದ ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸುತ್ತದೆ, ಸಂಸ್ಕರಿಸುತ್ತದೆ, ನಿರ್ವಹಿಸುತ್ತದೆ ಮತ್ತು ವಿತರಿಸುತ್ತದೆ. ಈ ಸಾಮರ್ಥ್ಯಗಳು ಆನ್‌ಲೈನ್ ಬ್ಯಾಂಕಿಂಗ್, ಇ-ಆಡಳಿತ, ಡಿಜಿಟಲ್ ಪಾವತಿಗಳು, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳನ್ನು ಬೆಂಬಲಿಸುತ್ತವೆ.
|
ಡೇಟಾ ಸೆಂಟರ್ ಒಳಗೆ: ಡಿಜಿಟಲ್ ಸೇವೆಗಳಿಗೆ ಶಕ್ತಿ ತುಂಬುವ ತಂತ್ರಜ್ಞಾನಗಳು
ಡಾಟಾ ಸೆಂಟರ್ ತನ್ನ ನಿರ್ಣಾಯಕ ಉಪಕರಣಗಳ ಅಡೆತಡೆಯಿಲ್ಲದ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ವಿಶ್ವಾಸಾರ್ಹ ವಿದ್ಯುತ್ ಮೂಲಸೌಕರ್ಯವನ್ನು ನೆಚ್ಚಿಕೊಂಡಿದೆ. ಡಾಟಾ ಸೆಂಟರ್‌ನ ಕಂಪ್ಯೂಟರ್‌ಗಳು ಎಂದಿಗೂ ಬಂದ್ ಆಗಬಾರದು—ಒಂದು ಮಿಲಿಸೆಕೆಂಡ್ ಸಹ ಬಂದ್ ಆಗುವಂತಿಲ್ಲ. ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆ ವ್ಯವಸ್ಥೆಗಳು ವಿದ್ಯುತ್ ವ್ಯತ್ಯಯವಾದ ತಕ್ಷಣವೇ ಬ್ಯಾಕಪ್ ಒದಗಿಸುತ್ತವೆ. ಬ್ಯಾಕಪ್ ಜೆನೆರೇಟರ್‌ಗಳು ಮತ್ತು ವಿದ್ಯುತ್ ವಿತರಣಾ ವ್ಯವಸ್ಥೆಗಳು ಸುದೀರ್ಘ ವಿದ್ಯುತ್ ಕಡಿತದ ಸಮಯದಲ್ಲಿ ಹೆಚ್ಚುವರಿ ಸ್ಥಿರತೆಯನ್ನು ಒದಗಿಸುತ್ತವೆ. ಈ ಪ್ರಮಾಣದ ನಿರಂತರ ಕಾರ್ಯಾಚರಣೆಗಳಿಗೆ ಕಂಪ್ಯೂಟಿಂಗ್ ಉಪಕರಣಗಳಿಗೆ ಸೂಕ್ತವಾದ ವಾತಾವರಣವನ್ನು ನಿರ್ವಹಿಸಲು ಕೂಲಿಂಗ್ ವ್ಯವಸ್ಥೆಗಳ ಅಗತ್ಯವಿರುತ್ತದೆ. ತಾಪನ, ಗಾಳಿ ಬೆಳಕಿನ ವ್ಯವಸ್ಥೆ ಮತ್ತು ಹವಾನಿಯಂತ್ರಣ ವ್ಯವಸ್ಥೆಗಳು ಕಟ್ಟಡದ ಒಳಗಿನ ತಾಪಮಾನ ಮತ್ತು ಗಾಳಿಯ ಚಲನೆಯನ್ನು ನಿಯಂತ್ರಿಸುತ್ತವೆ. ಸುಧಾರಿತ ಗಾಳಿಯ ಹರಿವಿನ ನಿರ್ವಹಣೆ ಮತ್ತು ದ್ರವ ಕೂಲಿಂಗ್ ತಾಪಮಾನದ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ತದನಂತರ, ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯವು ಮುಖ್ಯ ಕಂಪ್ಯೂಟಿಂಗ್ ಕಾರ್ಯಗಳನ್ನು ನಿರ್ವಹಿಸುತ್ತದೆ. ಸರ್ವರ್‌ಗಳು ಮಾಹಿತಿಯನ್ನು ಸಂಸ್ಕರಿಸುತ್ತವೆ ಮತ್ತು ಡಿಜಿಟಲ್ ಅಪ್ಲಿಕೇಶನ್‌ಗಳನ್ನು ಚಲಾಯಿಸುತ್ತವೆ. ಶೇಖರಣಾ ವ್ಯವಸ್ಥೆಗಳು ಹಾರ್ಡ್ ಡಿಸ್ಕ್ ಡ್ರೈವ್‌ಗಳು ಮತ್ತು ಸಾಲಿಡ್-ಸ್ಟೇಟ್ ಡ್ರೈವ್‌ಗಳನ್ನು ಬಳಸಿ ಅಪಾರ ಪ್ರಮಾಣದ ಡಾಟಾವನ್ನು ಸುರಕ್ಷಿತವಾಗಿ ಕಾಯ್ದಿರಿಸುತ್ತವೆ. ಭೌತಿಕ ಮತ್ತು ಡಿಜಿಟಲ್ ಬೆದರಿಕೆಗಳಿಂದ ಉಪಕರಣಗಳು, ನೆಟ್‌ವರ್ಕ್‌ಗಳು ಮತ್ತು ಡಾಟಾವನ್ನು ಸುರಕ್ಷತಾ ವ್ಯವಸ್ಥೆಗಳು ರಕ್ಷಿಸುತ್ತವೆ.
ರೌಟರ್‌ಗಳು ಮತ್ತು ಹೈ-ಸ್ಪೀಡ್ ಸ್ವಿಚ್‌ಗಳು ಸೇರಿದಂತೆ ನೆಟ್‌ವರ್ಕಿಂಗ್ ಉಪಕರಣಗಳು, ಕಟ್ಟಡದ ಒಳಗಡೆ ಮತ್ತು ಹೊರಗಡೆ ಡಾಟಾ ವಿನಿಮಯವನ್ನು ಸಾಧ್ಯವಾಗಿಸುತ್ತವೆ. ಫೈಬರ್-ಆಪ್ಟಿಕ್ ಸಂಪರ್ಕಗಳು ಡಾಟಾ ಸೆಂಟರ್ ಮತ್ತು ಬಾಹ್ಯ ನೆಟ್‌ವರ್ಕ್‌ಗಳ ನಡುವೆ ಅತಿವೇಗದ ಸಂವಹನವನ್ನು ಒದಗಿಸುತ್ತವೆ.
ಕೊನೆಯದಾಗಿ, ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್ ಸಿಸ್ಟಮ್‌ಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ದಕ್ಷತೆಯಿಂದ ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ವರ್ಚುವಲೈಸೇಶನ್ ಒಂದೇ ಭೌತಿಕ ಸರ್ವರ್‌ನಲ್ಲಿ ಹಲವು ವರ್ಚುವಲ್ ಮೆಷಿನ್‌ಗಳನ್ನು ಚಲಾಯಿಸಲು ಅನುವು ಮಾಡಿಕೊಡುತ್ತದೆ, ಇದು ಸಂಪನ್ಮೂಲಗಳ ಬಳಕೆಯನ್ನು ಸುಧಾರಿಸುತ್ತದೆ. ಒಂದು ದೊಡ್ಡ ಮನೆಯನ್ನು ತೆಗೆದುಕೊಂಡು ಅದನ್ನು ಹಲವಾರು ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳಾಗಿ ವಿಭಾಗಿಸುವುದನ್ನು ಊಹಿಸಿಕೊಳ್ಳಿ. ವರ್ಚುವಲೈಸೇಶನ್ ಒಂದು ಭೌತಿಕ ಕಂಪ್ಯೂಟರ್‌ಗೆ ಅದರೊಳಗೆ ಹಲವು ವರ್ಚುವಲ್ "ಮಿಷಿನ್/ಮಿನಿ-ಕಂಪ್ಯೂಟರ್‌ಗಳನ್ನು" ಚಲಾಯಿಸಲು ಅವಕಾಶ ನೀಡುತ್ತದೆ, ಇದರಿಂದ ಸಂಪನ್ಮೂಲಗಳ ದಕ್ಷತೆಯನ್ನು ಗರಿಷ್ಠಗೊಳಿಸಬಹುದು. ಆಟೊಮೇಷನ್ ಉಪಕರಣಗಳು ಕೆಲಸದ ಹೊರೆಯನ್ನು ನಿರ್ವಹಿಸುತ್ತವೆ, ನಿರ್ವಹಣೆಗೆ ಬೆಂಬಲ ನೀಡುತ್ತವೆ ಮತ್ತು ಕಾರ್ಯಾಚರಣೆಯ ಸಮಸ್ಯೆಗಳನ್ನು ಗುರುತಿಸಲು ಸಹಾಯ ಮಾಡುತ್ತವೆ.
ಕ್ಲಿಕ್‌ನಿಂದ ಪ್ರತಿಕ್ರಿಯೆಯವರೆಗೆ: ಡಾಟಾ ಸೆಂಟರ್ ನಿಮ್ಮ ವಿನಂತಿಯನ್ನು ಹೇಗೆ ನಿರ್ವಹಿಸುತ್ತದೆ

ಪ್ರತಿಯೊಂದು ಡಿಜಿಟಲ್ ವಿನಂತಿಯೂ ಅಪ್ಲಿಕೇಶನ್ ತೆರೆಯುವುದು, ಬ್ಯಾಂಕ್ ಬ್ಯಾಲೆನ್ಸ್ ನಿರೀಕ್ಷಿಸುವುದು ಅಥವಾ ಡಾಕ್ಯುಮೆಂಟ್ ಅನ್ನು ಆಕ್ಸೆಸ್ ಮಾಡುವುದರಂತಹ ಒಂದು ಸರಳ ಕ್ರಿಯೆಯೊಂದಿಗೆ ಪ್ರಾರಂಭವಾಗುತ್ತದೆ. ಈ ತ್ವರಿತ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ, ವಿನಂತಿಯು ನೆಟ್‌ವರ್ಕ್ ಮೂಲಕ ಡಾಟಾ ಸೆಂಟರ್ ತಲುಪುತ್ತದೆ, ಅಲ್ಲಿ ಹಲವು ವ್ಯವಸ್ಥೆಗಳು ಅದನ್ನು ಸುರಕ್ಷಿತವಾಗಿ ಮತ್ತು ದಕ್ಷತೆಯಿಂದ ಸಂಸ್ಕರಿಸಲು ಒಟ್ಟಾಗಿ ಕೆಲಸ ಮಾಡುತ್ತವೆ.
ಮೊದಲಿಗೆ ಭದ್ರತಾ ಹಂತವು ವಿನಂತಿಯನ್ನು ಪರಿಶೀಲಿಸುತ್ತದೆ ಮತ್ತು ಸೈಬರ್ ಬೆದರಿಕೆಗಳಿಂದ ವ್ಯವಸ್ಥೆಯನ್ನು ರಕ್ಷಿಸುತ್ತದೆ. ನಂತರ ಲೋಡ್ ಬ್ಯಾಲನ್ಸರ್ ವಿನಂತಿಯನ್ನು ಲಭ್ಯವಿರುವ ಸರ್ವರ್‌ಗೆ ರವಾನಿಸುತ್ತದೆ, ಇದು ಕೆಲಸದ ಹೊರೆಯನ್ನು ದಕ್ಷತೆಯಿಂದ ಹಂಚಲು ಸಹಾಯ ಮಾಡುತ್ತದೆ.
ಅಪ್ಲಿಕೇಶನ್ ಸರ್ವರ್ ವಿನಂತಿಯನ್ನು ಸಂಸ್ಕರಿಸುತ್ತದೆ ಮತ್ತು ಯಾವ ಮಾಹಿತಿ ಅಥವಾ ಸೇವೆ ಅಗತ್ಯವಿದೆ ಎಂಬುದನ್ನು ನಿರ್ಧರಿಸುತ್ತದೆ. ಅಗತ್ಯವಿದ್ದರೆ, ಇದು ಇತರ ಅಪ್ಲಿಕೇಶನ್‌ಗಳು ಅಥವಾ ಸೇವೆಗಳೊಂದಿಗೆ ಸಂವಹನ ನಡೆಸಲು ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ಅನ್ನು ಬಳಸುತ್ತದೆ.
ನಂತರ ಡೇಟಾಬೇಸ್ ಸರ್ವರ್ ಅಗತ್ಯವಿರುವ ಮಾಹಿತಿಯನ್ನು ಪಡೆದುಕೊಂಡು ಅದನ್ನು ಅಪ್ಲಿಕೇಶನ್ ಸರ್ವರ್‌ಗೆ ಮರಳಿ ಕಳುಹಿಸುತ್ತದೆ. ಸಂಸ್ಕರಿಸಿದ ನಂತರ, ಮಾಹಿತಿಯು ನೆಟ್‌ವರ್ಕ್ ಮೂಲಕ ಹಿಂತಿರುಗಿ ಬಳಕೆದಾರರ ಸಾಧನವನ್ನು ತಲುಪುತ್ತದೆ.
ಈ ಸಂಪೂರ್ಣ ಪ್ರಕ್ರಿಯೆಯು ಕೇವಲ 1–2 ಸೆಕೆಂಡುಗಳನ್ನು ತೆಗೆದುಕೊಳ್ಳಬಹುದು, ಇದು ವೇಗದ ಮತ್ತು ಅಡೆತಡೆಯಿಲ್ಲದ ಡಿಜಿಟಲ್ ಸೇವೆಗಳನ್ನು ಸಾಧ್ಯವಾಗಿಸುತ್ತದೆ. ಈ ಪರಸ್ಪರ ಸಂಪರ್ಕಿತ ಸರಣಿ— ಸಂಪರ್ಕಿಸಿ → ಸ್ವೀಕರಿಸಿ → ನೆಟ್‌ವರ್ಕ್ → ಸಂಸ್ಕರಿಸಿ → ಸಂಗ್ರಹಿಸಿ → ಸುರಕ್ಷಿತಗೊಳಿಸಿ → ಪ್ರತಿಕ್ರಿಯಿಸಿ — ಕ್ಲೌಡ್ ಸೇವೆಗಳು, ಇ-ಆಡಳಿತ ವೇದಿಕೆಗಳು ಮತ್ತು ಕೃತಕ ಬುದ್ಧಿಮತ್ತೆ ಅಪ್ಲಿಕೇಶನ್‌ಗಳು ಮಾಹಿತಿಯನ್ನು ನಂಬಿಗಸ್ತವಾಗಿ ಮತ್ತು ಬೃಹತ್ ಪ್ರಮಾಣದಲ್ಲಿ ತಲುಪಿಸಲು ಅನುವು ಮಾಡಿಕೊಡುತ್ತದೆ. ಆಧುನಿಕ ಡಾಟಾ ಸೆಂಟರ್‌ಗಳು ಕೇವಲ ಶೇಖರಣಾ ಸೌಲಭ್ಯಗಳಿಗಿಂತ ಹೆಚ್ಚು ಏಕೆ ಎಂಬುದನ್ನು ಇದು ತೋರಿಸುತ್ತದೆ; ಅವು ದೈನಂದಿನ ಆನ್‌ಲೈನ್ ಸೇವೆಗಳನ್ನು ಸಾಧ್ಯವಾಗಿಸುವ ಡಿಜಿಟಲ್ ಮೂಲಸೌಕರ್ಯಗಳಾಗಿವೆ.
|
ಸರಳ ಪದಗಳಲ್ಲಿ: ತೆರೆಮರೆಯ ತಂಡ
- ನೆಟ್‌ವರ್ಕ್ = ಕಾರಿಡಾರ್‌ಗಳು ಮತ್ತು ಇಂಟರ್‌ಕಾಮ್, ಅಡಚಣೆಯಿಲ್ಲದೆ ಮಾಹಿತಿಯನ್ನು ತಕ್ಷಣವೇ ಪರಸ್ಪರ ವಿನಿಮಯ ಮಾಡಿಕೊಳ್ಳಲು ಇಡೀ ತಂಡವನ್ನು ಸಂಪರ್ಕಿಸುವ ಆಂತರಿಕ ಕಾರಿಡಾರ್‌ಗಳು.
- ಸೆಕ್ಯುರಿಟಿ ಲೇಯರ್ = ಸೆಕ್ಯುರಿಟಿ ಗಾರ್ಡ್, ಸುರಕ್ಷತೆಯ ಹಿತದೃಷ್ಟಿಯಿಂದ ಪ್ರವೇಶ ದ್ವಾರದಲ್ಲೇ ನಿಮ್ಮ ವಿನಂತಿಯನ್ನು ಪರಿಶೀಲಿಸುತ್ತಾನೆ.
- ಲೋಡ್ ಬ್ಯಾಲನ್ಸರ್ = ಟ್ರಾಫಿಕ್ ಪೊಲೀಸ್, ಯಾವುದೇ ಒಂದೇ ಸರ್ವರ್‌ಗೆ ಅತಿಯಾದ ಹೊರೆಯಾಗದಂತೆ ಬರುವ ಡಿಜಿಟಲ್ ಸಂಚಾರವನ್ನು ನಿಯಂತ್ರಿಸುತ್ತಾನೆ.
- ಅಪ್ಲಿಕೇಶನ್ ಸರ್ವರ್ = ಬಾಣಸಿಗ, ನಿಮ್ಮ ಆದೇಶವನ್ನು ಸ್ವೀಕರಿಸಿ, ಅದಕ್ಕೆ ಯಾವ ಮಾಹಿತಿ ಅಥವಾ ಪಾಕವಿಧಾನದ ಅಗತ್ಯವಿದೆ ಎಂಬುದನ್ನು ನಿರ್ಧರಿಸುತ್ತಾನೆ.
- ಎಪಿಐ = ವೇಟರ್, ಸಂದೇಶವಾಹಕನಾಗಿ ಕೆಲಸ ಮಾಡುತ್ತಾನೆ.
- ಡಾಟಾಬೇಸ್ ಸರ್ವರ್= ಡಿಜಿಟಲ್ ಲಾಕರ್, ಅಗತ್ಯವಿದ್ದಾಗ ವಿವರಗಳನ್ನು ಹಿಂಪಡೆಯಲು ಮಾಹಿತಿಯನ್ನು ಸುರಕ್ಷಿತವಾಗಿ ಕಾಯ್ದಿರಿಸುವ ಸ್ಥಳ.
|
ಭಾರತದಲ್ಲಿ ಡಾಟಾ ಸೆಂಟರ್‌ಗಳ ಸ್ಥಿತಿಗತಿ
ಇ-ಆಡಳಿತ ಮತ್ತು ಡಿಜಿಟಲ್ ಸೇವೆಗಳ ಕ್ಷಿಪ್ರ ವಿಸ್ತರಣೆಯೊಂದಿಗೆ ಭಾರತದ ಡಾಟಾ ಸೆಂಟರ್ ಪ್ರಯಾಣವು ಅಭಿವೃದ್ಧಿಗೊಂಡಿದೆ. ಆನ್‌ಲೈನ್ ಸೇವೆಗಳಿಗಾಗಿ ನಾಗರಿಕರ ಹೆಚ್ಚುತ್ತಿರುವ ನಿರೀಕ್ಷೆಗಳು ಬಲವಾದ ಡಾಟಾ ಸೆಂಟರ್ ಮೂಲಸೌಕರ್ಯದ ಬೇಡಿಕೆಯನ್ನು ಹೆಚ್ಚಿಸುತ್ತಿವೆ. ನ್ಯಾಷನಲ್ ಇನ್‌ಫಾರ್ಮ್ಯಾಟಿಕ್ಸ್ ಸೆಂಟರ್ ದೇಶಾದ್ಯಂತ ಆಧುನಿಕ ರಾಷ್ಟ್ರೀಯ ಡಾಟಾ ಸೆಂಟರ್‌ಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ ದೆಹಲಿಯಲ್ಲಿರುವ ಎನ್‌ಐಸಿ ಪ್ರಧಾನ ಕಚೇರಿ, ಪುಣೆ, ಹೈದರಾಬಾದ್ ಮತ್ತು ಭುವನೇಶ್ವರದಲ್ಲಿರುವ ಸೌಲಭ್ಯಗಳು ಸೇರಿವೆ. ಎನ್‌ಐಸಿ ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ 37 ಸಣ್ಣ ಡಾಟಾ ಸೆಂಟರ್‌ಗಳನ್ನು ಸಹ ಸ್ಥಾಪಿಸಿದೆ. ಈ ಸೌಲಭ್ಯಗಳು ವಿವಿಧ ಹಂತಗಳಲ್ಲಿರುವ ಸರ್ಕಾರಿ ಸಂಸ್ಥೆಗಳಿಗೆ ವಿಶ್ವಾಸಾರ್ಹ ಡಿಜಿಟಲ್ ಸೇವೆಗಳನ್ನು ಒದಗಿಸುತ್ತವೆ. ಇವು ನಿರಂತರ ಕಾರ್ಯಾಚರಣೆಗಳು, ಸಿಸ್ಟಮ್ ನಿರ್ವಹಣೆ ಮತ್ತು ಪರಿಣಿತ ಆನ್‌ಸೈಟ್ ಸಿಬ್ಬಂದಿಯನ್ನು ಬೆಂಬಲಿಸುತ್ತವೆ.


ಭಾರತದ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಅರ್ಥವ್ಯವಸ್ಥೆಯು ಸುರಕ್ಷಿತ ಮತ್ತು ವಿಶ್ವಾಸಾರ್ಹ ಡಾಟಾ ಮೂಲಸೌಕರ್ಯದ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಅನುಸ್ಥಾಪಿತ ಡಾಟಾ ಸೆಂಟರ್ ವಿದ್ಯುತ್ ಸಾಮರ್ಥ್ಯವು 2020 ರಲ್ಲಿ ಸುಮಾರು 375 ಎಂಡಬ್ಲು ಇತ್ತು. ಇದು ಆಗಸ್ಟ್ 2026 ರ ವೇಳೆಗೆ 1.57 ಜಿಡಬ್ಲು ಗೆ ಹೆಚ್ಚಾಗಿದೆ. ಈ ಸಾಮರ್ಥ್ಯವು 2030 ರ ವೇಳೆಗೆ ಸುಮಾರು 8 ಜಿಡಬ್ಲು ಗೆ ವಿಸ್ತರಿಸುವ ನಿರೀಕ್ಷೆಯಿದೆ. ಭಾರತದ ಡಾಟಾ ಸೆಂಟರ್ ವಲಯದಲ್ಲಿ ಸುಮಾರು 70 ಬಿಲಿಯನ್ ಯುಎಸ್‌ಡಿ ಹೂಡಿಕೆಗಳು ಈಗಾಗಲೇ ಪ್ರಗತಿಯಲ್ಲಿವೆ, ಜೊತೆಗೆ ಹೆಚ್ಚುವರಿಯಾಗಿ 90 ಬಿಲಿಯನ್ ಯುಎಸ್‌ಡಿ ಮೌಲ್ಯದ ಯೋಜನೆಗಳನ್ನು ಘೋಷಿಸಲಾಗಿದೆ. ಇದು ವಿಸ್ತರಣೆಯ ಪ್ರಮಾಣವನ್ನು ಎತ್ತಿ ತೋರಿಸುತ್ತದೆ ಮತ್ತು ಬಲವಾದ ಹೂಡಿಕೆದಾರರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಡಾಟಾ ಸೆಂಟರ್‌ಗಳಿಗೆ ಅನುಕೂಲಕರ ನೀತಿ ವಾತಾವರಣ
ಸರ್ಕಾರವು ಸೂಕ್ತ ನೀತಿ ಮತ್ತು ಹಣಕಾಸಿನ ಕ್ರಮಗಳ ಮೂಲಕ ಡಾಟಾ ಸೆಂಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಿದೆ. ಕೇಂದ್ರ ಬಜೆಟ್ 2022–23 ರಲ್ಲಿ, ಡಾಟಾ ಸೆಂಟರ್‌ಗಳನ್ನು ಮೂಲಸೌಕರ್ಯಗಳ ಸಂಯೋಜಿತ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಡಾಟಾ ಸೆಂಟರ್‌ಗಳಿಗೆ ಮೂಲಸೌಕರ್ಯದ ಸ್ಥಾನಮಾನವನ್ನು ನೀಡಿತು ಮತ್ತು ಡಿಜಿಟಲ್ ಮೂಲಸೌಕರ್ಯಕ್ಕಾಗಿ ಸುಲಭವಾಗಿ ಸಾಲ ಸೌಲಭ್ಯ ದೊರೆಯಲು ನೆರವಾಯಿತು. ಈ ಕ್ರಮವು ಭಾರತದ ಡಾಟಾ ಸೆಂಟರ್ ಸಾಮರ್ಥ್ಯದ ಹೂಡಿಕೆ ಮತ್ತು ವಿಸ್ತರಣೆಗೆ ಬೆಂಬಲ ನೀಡಿತು.
|
ಸರಳ ಪದಗಳಲ್ಲಿ ಮೂಲಸೌಕರ್ಯ ಸ್ಥಾನಮಾನ
ಡಾಟಾ ಸೆಂಟರ್‌ಗಳಿಗೆ "ಮೂಲಸೌಕರ್ಯ ಸ್ಥಾನಮಾನ" ನೀಡುವುದು ಎಂದರೆ ಅವುಗಳನ್ನು ರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಗ್ರಿಡ್‌ಗಳಂತೆಯೇ ಪರಿಗಣಿಸುವುದು. ಇದು ಅವುಗಳಿಗೆ ಸುಲಭವಾಗಿ ಮತ್ತು ಕಡಿಮೆ ಬಡ್ಡಿದರದಲ್ಲಿ ಸುದೀರ್ಘ ಅವಧಿಯ ಸಾಲಗಳನ್ನು ಪಡೆಯಲು ಅವಕಾಶ ನೀಡುತ್ತದೆ.
|
ಕೇಂದ್ರ ಬಜೆಟ್ 2026-27 ಅರ್ಹ ವಿದೇಶಿ ಕ್ಲೌಡ್ ಸೇವಾ ಪೂರೈಕೆದಾರರಿಗೆ 2047 ರವರೆಗೆ ತೆರಿಗೆ ವಿನಾಯಿತಿ ಸೌಲಭ್ಯವನ್ನು ಪರಿಚಯಿಸಿದೆ. ಈ ಪ್ರೋತ್ಸಾಹಕವು ಭಾರತ ಆಧಾರಿತ ಡಾಟಾ ಸೆಂಟರ್ ಮೂಲಸೌಕರ್ಯವನ್ನು ಬಳಸುವ ಜಾಗತಿಕ ಕಾರ್ಯಾಚರಣೆಗಳಿಗೆ ಅನ್ವಯಿಸುತ್ತದೆ. ಇದು ಅಧಿಸೂಚಿತ ವಿದೇಶಿ ಕಂಪನಿಗಳಿಗೆ 2026–27 ರಿಂದ 2046–47 ರವರೆಗಿನ ತೆರಿಗೆ ವರ್ಷಗಳನ್ನು ಒಳಗೊಳ್ಳುತ್ತದೆ. ಈ ಕ್ರಮಗಳು ಡಾಟಾ ಸೆಂಟರ್‌ಗಳು ಮತ್ತು ಕ್ಲೌಡ್ ಮೂಲಸೌಕರ್ಯಗಳಿಗಾಗಿ ಭಾರತದ ಹೂಡಿಕೆ ವಾತಾವರಣವನ್ನು ಬಲಪಡಿಸುತ್ತವೆ.
|
ಡಾಟಾ ಸೆಂಟರ್ ಬೆಳವಣಿಗೆಗೆ ಬೆಂಬಲ ನೀಡುವ ಲಿಂಕ್ಡ್ ಇಕೋಸಿಸ್ಟಮ್ ಯೋಜನೆಗಳು
- ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಎರಡನೇ ಹಂತಕ್ಕೆ (ಸೆಮಿಕಾನ್ 2.0) ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ₹1,27,500 ಕೋಟಿ ವೆಚ್ಚದೊಂದಿಗೆ 15.07.2026 ರಂದು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಇದು ದೇಶದಲ್ಲಿ ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಸಮಗ್ರವಾಗಿ ನಿರ್ಮಿಸುವ ಗುರಿಯನ್ನು ಹೊಂದಿದೆ.
- ದೇಶದಲ್ಲಿ ಸಮಗ್ರ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಒಟ್ಟು ₹10,371.92 ಕೋಟಿ ಬಜೆಟ್ ವೆಚ್ಚದೊಂದಿಗೆ ಇಂಡಿಯಾ ಎಐ ಮಿಷನ್‌ಗೆ ಅನುಮೋದನೆ ನೀಡಲಾಗಿದೆ. ಈ ಮಿಷನ್ ಅಡಿಯಲ್ಲಿ ಪೋಷಿಸಲಾಗುತ್ತಿರುವ AI ಪರಿಸರ ವ್ಯವಸ್ಥೆಯು ಭಾರತದಲ್ಲಿ ಡಾಟಾ ಸೆಂಟರ್ ಬೆಳವಣಿಗೆಯ ಮುಖ್ಯ ಚಾಲಕ ಶಕ್ತಿಯಾಗಿದೆ.
- ಎಲೆಕ್ಟ್ರಾನಿಕ್ಸ್ ಘಟಕಗಳ ಉತ್ಪಾದನಾ ಯೋಜನೆಗೆ ಹೆಚ್ಚಿನ ಹಣಕಾಸಿನ ನೆರವು ನೀಡಲಾಗಿದೆ. ಇದರ ಹಂಚಿಕೆಯನ್ನು ₹22,000 ಕೋಟಿಯಿಂದ ₹40,000 ಕೋಟಿಗೆ ಹೆಚ್ಚಿಸಲಾಗಿದೆ.
- ಐಟಿ ಹಾರ್ಡ್‌ವೇರ್‌ಗಳಿಗಾಗಿ (ಉದಾಹರಣೆಗೆ ಸರ್ವರ್‌ಗಳು) ಬಲವಾದ ದೇಶೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ರಚಿಸಲು, ಬೃಹತ್ ಹೂಡಿಕೆಗಳನ್ನು ಆಕರ್ಷಿಸಲು, ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಭಾರತವನ್ನು ವಿಶ್ವಾಸಾರ್ಹ ಜಾಗತಿಕ ಪೂರೈಕೆ ಸರಪಳಿ ಕೇಂದ್ರವಾಗಿನಮಾಡಲು ಭಾರತ ಸರ್ಕಾರವು ಐಟಿ ಹಾರ್ಡ್‌ವೇರ್‌ಗಾಗಿ ಪಿಎಲ್‌ಐ ಯೋಜನೆ 2.0 ಅನ್ನು ಸಹ ಪ್ರಾರಂಭಿಸಿದೆ.
|
ಡಾಟಾ ಸೆಂಟರ್ ವಲಯದ ಸುಸ್ಥಿರತೆ: ಇಂಧನ ಮತ್ತು ನೀರಿನ ಯೋಜನೆ
ಡಾಟಾ ಸೆಂಟರ್ ಸಾಮರ್ಥ್ಯವು ಕ್ಷಿಪ್ರವಾಗಿ ವಿಸ್ತರಿಸುತ್ತಿದ್ದು, ಇಂಧನ ಮತ್ತು ಸಂಪನ್ಮೂಲಗಳ ದಕ್ಷತೆಯನ್ನು ಹೆಚ್ಚಿಸುವುದು ಅತ್ಯಂತ ಮುಖ್ಯವಾಗಿದೆ. ನಿರಂತರ ಕಾರ್ಯಾಚರಣೆಗಳಿಗಾಗಿ ಡಾಟಾ ಸೆಂಟರ್‌ಗಳಿಗೆ ವಿಶ್ವಾಸಾರ್ಹ ವಿದ್ಯುತ್ ಮತ್ತು ಪರಿಣಾಮಕಾರಿ ಕೂಲಿಂಗ್ ವ್ಯವಸ್ಥೆಗಳ ಅಗತ್ಯವಿರುತ್ತದೆ. ಇಂಧನ ಸಚಿವಾಲಯದ ಕೇಂದ್ರ ವಿದ್ಯುತ್ ಪ್ರಾಧಿಕಾರದ ಪ್ರಕಾರ, ವಿದ್ಯುತ್ ಬೇಡಿಕೆಯು 2031-32 ರ ವೇಳೆಗೆ 17 ಜಿಡಬ್ಲು ಗೆ ತಲುಪಬಹುದು. ಈ ವಲಯವು ವಿಸ್ತರಿಸುತ್ತಿರುವಂತೆಯೇ, ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸಲು ಸರ್ಕಾರವು ಸ್ವಚ್ಛ ಇಂಧನ ಮತ್ತು ಪರಿಣಾಮಕಾರಿ ಸಂಪನ್ಮೂಲ ಬಳಕೆಯನ್ನು ಉತ್ತೇಜಿಸುತ್ತಿದೆ.
ಪುನರುತ್ಪಾದಕ ಇಂಧನ ಮತ್ತು ಸ್ವಚ್ಛ ವಿದ್ಯುತ್
ಹಲವಾರು ಪ್ರಮುಖ ಉಪಕ್ರಮಗಳ ಮೂಲಕ ಸರ್ಕಾರವು ಪುನರುತ್ಪಾದಕ ಇಂಧನವನ್ನು ಉತ್ತೇಜಿಸುತ್ತಿದೆ. ಇವುಗಳಲ್ಲಿ ಗ್ರೀನ್ ಎನರ್ಜಿ ಓಪನ್ ಆಕ್ಸೆಸ್ ರೂಲ್ಸ್, ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆ ಮತ್ತು ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್ ಸೇರಿವೆ. ಹೈ ಎಫಿಷಿಯನ್ಸಿ ಸೋಲಾರ್ ಪಿವಿ ಮಾಡ್ಯೂಲ್‌ಗಳ ಮೇಲಿನ ರಾಷ್ಟ್ರೀಯ ಕಾರ್ಯಕ್ರಮ ಮತ್ತು ಸೋಲಾರ್ ಪಾರ್ಕ್ ಯೋಜನೆಗಳು ಸ್ವಚ್ಛ ಇಂಧನದ ಬಳಕೆಗೆ ಮತ್ತಷ್ಟು ಬೆಂಬಲ ನೀಡುತ್ತವೆ. ಈ ಕ್ರಮಗಳು ಹೆಚ್ಚು ಇಂಧನ-ಸಾಂದ್ರತೆಯ ಡಿಜಿಟಲ್ ಮೂಲಸೌಕರ್ಯಗಳಿಗೆ ಸ್ವಚ್ಛ ಮತ್ತು ಹೆಚ್ಚು ವಿಶ್ವಾಸಾರ್ಹ ವಿದ್ಯುತ್ ತಲುಪಲು ನೆರವಾಗುತ್ತವೆ.
ಶಾಂತಿ ಕಾಯ್ದೆ ಮತ್ತು ಶುದ್ಧ ವಿದ್ಯುತ್
"ಸುಸ್ಥಿರ ಬಳಕೆ ಮತ್ತು ಭಾರತದ ಪರಿವರ್ತನೆಗಾಗಿ ಪರಮಾಣು ಶಕ್ತಿಯ ಅಭಿವೃದ್ಧಿ" ಕಾಯ್ದೆಯು ಸ್ವಚ್ಛ-ವಿದ್ಯುತ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಕೃತಕ ಬುದ್ಧಿಮತ್ತೆ ಮತ್ತು ಡಾಟಾ ಸೆಂಟರ್‌ಗಳು ಸೇರಿದಂತೆ ಉದಯೋನ್ಮುಖ ವಲಯಗಳಿಗೆ ವಿಶ್ವಾಸಾರ್ಹ ಪರಮಾಣು ವಿದ್ಯುತ್ ಶಕ್ತಿಯನ್ನು ಬೆಂಬಲಿಸುತ್ತದೆ. ಈ ಚೌಕಟ್ಟು ಭವಿಷ್ಯದಲ್ಲಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು ಮತ್ತು ಮೈಕ್ರೋ ಪರಮಾಣು ರಿಯಾಕ್ಟರ್‌ಗಳ ನಿಯೋಜನೆಗೆ ಅನುವು ಮಾಡಿಕೊಡುತ್ತದೆ.
ಡಾಟಾ ಸೆಂಟರ್‌ಗಳಿಗಾಗಿ ಬಿಸ್ ಮಾನದಂಡಗಳು
ಭಾರತೀಯ ಮಾನಕ ಬ್ಯೂರೋ ಡಾಟಾ ಸೆಂಟರ್ ದಕ್ಷತೆಗಾಗಿ ವಿವಿಧ ಮಾನದಂಡಗಳನ್ನು ಅಭಿವೃದ್ಧಿಪಡಿಸಿದೆ. ಇದರ ತಾಂತ್ರಿಕ ಸಮಿತಿ ಎಲ್‌ಐಟಿಡಿ 31 ಕ್ಲೌಡ್ ಕಂಪ್ಯೂಟಿಂಗ್, ಮಾಹಿತಿ ತಂತ್ರಜ್ಞಾನ ಮತ್ತು ಡಾಟಾ ಸೆಂಟರ್‌ಗಳನ್ನು ಒಳಗೊಂಡಿದೆ. ಬಿಸ್ ಪವರ್ ಯೂಸೇಜ್ ಎಫೆಕ್ಟಿವ್‌ನೆಸ್ (ಪಿಯುಇ) ಮತ್ತು ಕಾರ್ಬನ್ ಯೂಸೇಜ್ ಎಫೆಕ್ಟಿವ್‌ನೆಸ್ (ಸಿಯುಇ) ಅನ್ನು ಒಳಗೊಂಡಿರುವ ಮಾನದಂಡಗಳನ್ನು ಪ್ರಕಟಿಸಿದೆ. ಈ ಮಾನದಂಡಗಳು ಕೂಲಿಂಗ್ ಎಫಿಷಿಯನ್ಸಿ ರೇಶಿಯೋ (ಸಿಇಆರ್) ಮತ್ತು ವಾಟರ್ ಯೂಸೇಜ್ ಎಫೆಕ್ಟಿವ್‌ನೆಸ್ (ಡಬ್ಲುಯುಇ) ಗಳನ್ನೂ ಸಹ ನಿರ್ವಹಿಸುತ್ತವೆ.
|
ಸರಳ ಪದಗಳಲ್ಲಿ
- ಪಿಯುಇ ಮತ್ತು ಡಬ್ಲುಯುಇ - ಒಂದು ಸೌಲಭ್ಯವು ವಿದ್ಯುತ್ ಮತ್ತು ನೀರನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತದೆ ಎಂಬುದನ್ನು ಅಳೆಯಲು 'ಹಸಿರು ಮೈಲೇಜ್ ರೇಟಿಂಗ್‌ಗಳಾಗಿ' ಕಾರ್ಯನಿರ್ವಹಿಸುತ್ತವೆ.
- ಸಿಯುಇ - ಡೇಟಾ ಸೆಂಟರ್‌ನ ಕಂಪ್ಯೂಟರ್‌ಗಳು ಬಳಸುವ ಪ್ರತಿಯೊಂದು ವಿದ್ಯುತ್ ಪ್ರಮಾಣಕ್ಕೂ ಎಷ್ಟು ಇಂಗಾಲದ ಮಾಲಿನ್ಯವನ್ನು ಉತ್ಪಾದಿಸುತ್ತದೆ ಎಂಬುದನ್ನು ಅಳೆಯುತ್ತದೆ.
- ಸಿಇಆರ್ - ತಂಪಾಗಿಸುವ ವ್ಯವಸ್ಥೆಗಳು (ಫ್ಯಾನ್‌ಗಳು, ತಂಪಾಗಿಸಿದ ನೀರಿನ ಪೈಪ್‌ಗಳು ಅಥವಾ ದ್ರವ ಕೂಲಂಟ್‌ನಂತಹವು) ಅವು ಸೇವಿಸುವ ವಿದ್ಯುತ್‌ಗೆ ಹೋಲಿಸಿದರೆ ಆ ಶಾಖವನ್ನು ಎಷ್ಟು ಪರಿಣಾಮಕಾರಿಯಾಗಿ ತೆಗೆದುಹಾಕುತ್ತವೆ ಎಂಬುದನ್ನು ಅಳೆಯುತ್ತದೆ.
|
ಶಕ್ತಿ ಮತ್ತು ನೀರಿನ ದಕ್ಷತೆಯ ಮಾನದಂಡಗಳು
ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ 2017 ರ 'ಎನರ್ಜಿ ಕನ್ಸರ್ವೇಶನ್ ಬಿಲ್ಡಿಂಗ್ ಕೋಡ್' ಅನ್ನು ಅಧಿಸೂಚಿಸಿದೆ. ಇದು 2024 ರ 'ಎನರ್ಜಿ ಕನ್ಸರ್ವೇಶನ್ ಆಂಡ್ ಸಸ್ಟೈನಬಲ್ ಬಿಲ್ಡಿಂಗ್ ಕೋಡ್' ಅನ್ನು ಸಹ ಅಧಿಸೂಚಿಸಿದೆ. ಈ ಸಂಹಿತೆಗಳು ಕಟ್ಟಡಗಳಿಗೆ ಶಕ್ತಿ-ದಕ್ಷತೆ ಮತ್ತು ಜಲ-ಸಂರಕ್ಷಣೆಯ ನಿಯಮಗಳನ್ನು ನಿಗದಿಪಡಿಸುತ್ತವೆ. ಇವು ಡೇಟಾ-ಸೆಂಟರ್ ಮೂಲಸೌಕರ್ಯಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಸಹ ಒಳಗೊಂಡಿವೆ.
ಸುಧಾರಿತ ಕೂಲಿಂಗ್ ಮತ್ತು ನೀರಿನ ನಿರ್ವಹಣೆ
ಡೇಟಾ-ಸೆಂಟರ್‌ನ ನೀರಿನ ಅವಶ್ಯಕತೆಗಳು ಅಲ್ಲಿ ಬಳಸಲಾಗುವ ಕೂಲಿಂಗ್ ತಂತ್ರಜ್ಞಾನಗಳನ್ನು ಆಧರಿಸಿರುತ್ತವೆ. ಕೈಗಾರಿಕಾ ಉದ್ದೇಶಗಳು ಸೇರಿದಂತೆ ಅಂತರ್ಜಲ ಹೊರತೆಗೆಯುವಿಕೆಯನ್ನು ಜಲಶಕ್ತಿ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಎಐ ಮೂಲಸೌಕರ್ಯವು ಡೇಟಾ ಸೆಂಟರ್‌ಗಳಲ್ಲಿ ಸುಧಾರಿತ ಕೂಲಿಂಗ್ ತಂತ್ರಜ್ಞಾನಗಳ ಅಳವಡಿಕೆಗೆ ಕಾರಣವಾಗುತ್ತಿದೆ. ಇವುಗಳಲ್ಲಿ ಡೈರೆಕ್ಟ್-ಟು-ಚಿಪ್ ಲಿಕ್ವಿಡ್ ಕೂಲಿಂಗ್, ಅಡಿಯಾಬ್ಯಾಟಿಕ್ ಕೂಲಿಂಗ್ ಮತ್ತು ಇಮ್ಮರ್ಶನ್ ಕೂಲಿಂಗ್ ಸೇರಿವೆ. ಕ್ಲೋಸ್ಡ್-ಲೂಪ್ ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಗಳು ಸಹ ಸಂಪನ್ಮೂಲ-ದಕ್ಷ ಪರಿಹಾರಗಳಾಗಿ ಹೊರಹೊಮ್ಮುತ್ತಿವೆ.
ಮುಂದಿನ ಹಾದಿ
ಭಾರತದ ಡೇಟಾ-ಸೆಂಟರ್ ಬೆಳವಣಿಗೆಯು ಚೇತರಿಕೆ ಮತ್ತು ಸಾರ್ವಭೌಮ ಡಿಜಿಟಲ್ ಮೂಲಸೌಕರ್ಯದತ್ತ ಸಾಗುತ್ತಿರುವ ಸ್ಥಿರ ನೀತಿ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ. ಡೇಟಾ ಸಾರ್ವಭೌಮತ್ವ, ಡಿಜಿಟಲ್ ನಂಬಿಕೆ, ಆರ್ಥಿಕ ಸ್ಪರ್ಧಾತ್ಮಕತೆ ಮತ್ತು ತಾಂತ್ರಿಕ ಸ್ವಾವಲಂಬನೆಗೆ ಇದು ಹೆಚ್ಚು ಮುಖ್ಯವಾಗಿದೆ. ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ ಮೂಲಸೌಕರ್ಯಗಳ ವಿಸ್ತರಣೆಯು ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಆದಾಗ್ಯೂ, ಈ ಬೆಳವಣಿಗೆಗೆ ಡೇಟಾ, ತಂತ್ರಜ್ಞಾನ, ಶಕ್ತಿ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಜವಾಬ್ದಾರಿಯುತ ಆಡಳಿತದ ಅಗತ್ಯವಿದೆ. ತಂತ್ರಜ್ಞಾನ ಆಡಳಿತ ವಿಧಾನವು ಭದ್ರತೆ, ಸುಸ್ಥಿರತೆ, ಹೊಣೆಗಾರಿಕೆ ಮತ್ತು ಸಾರ್ವಜನಿಕ ಹಿತಾಸಕ್ತಿಯೊಂದಿಗೆ ನಾವೀನ್ಯತೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕೆ ಬಲವಾದ ಮಾನದಂಡಗಳು, ದೃಢವಾದ ಸೈಬರ್ ಭದ್ರತೆ, ಜವಾಬ್ದಾರಿಯುತ ಡೇಟಾ ಅಭ್ಯಾಸಗಳು ಮತ್ತು ಪರಿಣಾಮಕಾರಿ ಸಂಪನ್ಮೂಲ ನಿರ್ವಹಣೆಯ ಅಗತ್ಯವಿದೆ. ಇದು ಕಂಪ್ಯೂಟಿಂಗ್, ಸೆಮಿಕಂಡಕ್ಟರ್‌ಗಳು, ಶಕ್ತಿ ಮತ್ತು ನಿರ್ಣಾಯಕ ಡಿಜಿಟಲ್ ಮೂಲಸೌಕರ್ಯಗಳಲ್ಲಿ ಹೆಚ್ಚಿನ ದೇಶೀಯ ಸಾಮರ್ಥ್ಯಗಳಿಗೆ ಕರೆ ನೀಡುತ್ತದೆ. ಭಾರತವು 2047ರ ವೇಳೆಗೆ 'ವಿಕಸಿತ ಭಾರತ'ದತ್ತ ಮುನ್ನಡೆಯುತ್ತಿರುವಂತೆ, ಡೇಟಾ ಸೆಂಟರ್‌ಗಳು ಡಿಜಿಟಲ್ ಆರ್ಥಿಕತೆಯ ಮೂಲಭೂತ ಸ್ತರವಾಗಿ ಸೇವೆ ಸಲ್ಲಿಸಬಲ್ಲವು.
References:
Niti Aayog
Ministry of Electronics & IT
Ministry of Finance
Ministry of Communications
Press Information Bureau
Others:
Click here to see pdf
*****
(Explainer ID: 159988)
आगंतुक पटल : 16
Provide suggestions / comments