ವಿಕಾಸ, ಸಹಕಾರ ಮತ್ತು ಭಾರತದ ನಾಯಕತ್ವ
Posted On:
10 SEP 2026 12:35PM
|
ಬೋರ್ಡ್‌ರೂಮ್ ಒಂದರ ಸಂಕ್ಷಿಪ್ತ ಪದವಾಗಿ ಆರಂಭವಾದ ನಾಲ್ಕು ಉದಯೋನ್ಮುಖ ಮಾರುಕಟ್ಟೆಗಳ ಗುಂಪು ಇಂದು ಅತ್ಯಂತ ಬೃಹತ್ ರೂಪ ಪಡೆದುಕೊಂಡಿದೆ. ಇಂದು ಇದು ನಾಲ್ಕು ಖಂಡಗಳಿಗೆ ಹರಡಿರುವ ಜಿಯೋಪೊಲಿಟಿಕಲ್ ಒಕ್ಕೂಟವಾಗಿದೆ. ನಾಲ್ಕು ದೇಶಗಳ ಸಂವಾದವಾಗಿ ಪ್ರಾರಂಭವಾದ ಈ ಪ್ರಯಾಣವು ಇಂದು ಅತ್ಯಂತ ವಿಶಾಲವಾದ ಗುಂಪಾಗಿ ಬೆಳೆದಿದೆ. ಸದಸ್ಯತ್ವದ ಸತತ ವಿಸ್ತರಣೆಯು ತೈಲ ಸಮೃದ್ಧ ರಾಷ್ಟ್ರಗಳು, ಆಫ್ರಿಕನ್ ಅರ್ಥವ್ಯವಸ್ಥೆಗಳು ಮತ್ತು ಆಗ್ನೇಯ ಏಷ್ಯಾದ ಪಾಲುದಾರರನ್ನು ತನ್ನತ್ತ ಸೆಳೆದಿದೆ. ವಿಸ್ತರಿಸುತ್ತಿರುವ ಈ ಚೌಕಟ್ಟಿನ ಕೇಂದ್ರದಲ್ಲಿ ಈ ವರ್ಷ ಭಾರತವಿದ್ದು, ತನ್ನ ಸ್ಥಾಪನೆಯ ನಂತರ ನಾಲ್ಕನೇ ಬಾರಿಗೆ ಈ ಗುಂಪಿನ ಅಧ್ಯಕ್ಷತೆಯನ್ನು ವಹಿಸಿದೆ.
|
ಬ್ರಿಕ್ಸ್: ಸಮಾವೇಶಿ ಜಾಗತಿಕ ವ್ಯವಸ್ಥೆಯ ರೂಪಿಸುವಿಕೆ
ಪ್ರಮುಖ ಉದಯೋನ್ಮುಖ ಅರ್ಥವ್ಯವಸ್ಥೆಗಳ ನಡುವೆ ಆರ್ಥಿಕ ನೀತಿಯನ್ನು ಸಂಘಟಿಸಲು ಬ್ರಿಕ್ಸ್ ಒಂದು ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ಜಾಗತಿಕ ಆಡಳಿತದ ಕುರಿತು ಈ ರಾಷ್ಟ್ರಗಳು ಜಂಟಿ ನಿಲುವನ್ನು ತಳೆಯಲು ಇದು ಮುಖ್ಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ನಿರಂತರ ಸಂವಾದದ ಮೂಲಕ, ಬಹುಪಕ್ಷೀಯ ಸಂಸ್ಥೆಗಳಲ್ಲಿ ಗ್ಲೋಬಲ್ ಸೌತ್ ರಾಷ್ಟ್ರಗಳ ಹಿತಾಸಕ್ತಿಗಳನ್ನು ಮುನ್ನಡೆಸುವ ಮಾಧ್ಯಮವಾಗಿ ಇದು ಬೆಳೆದಿದೆ. ಇದರ ಕಾರ್ಯಸೂಚಿಯು ಅಭಿವೃದ್ಧಿ, ಹಣಕಾಸು, ತಂತ್ರಜ್ಞಾನ, ವ್ಯಾಪಾರ ಮತ್ತು ಜನರ ನಡುವಿನ ಸಂಪರ್ಕ ವಿನಿಮಯಗಳನ್ನು ಒಳಗೊಂಡಿದೆ. ಈ ಒಕ್ಕೂಟವು ಜಾಗತಿಕವಾಗಿ ಉದಯೋನ್ಮುಖ ಅರ್ಥವ್ಯವಸ್ಥೆಗಳ ಬೆಳೆಯುತ್ತಿರುವ ಆರ್ಥಿಕ ಸಾಮರ್ಥ್ಯ ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಇದು ಸದಸ್ಯ ರಾಷ್ಟ್ರಗಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಸಾಮಾನ್ಯ ಸವಾಲುಗಳನ್ನು ಎದುರಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.
ತನ್ನ 2026ರ ಅಧ್ಯಕ್ಷತೆಯಲ್ಲಿ, ಭಾರತವು 12-13 ಸೆಪ್ಟೆಂಬರ್ 2026 ರಂದು ನವದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಲಿದೆ. ಇದು 2026 ರಲ್ಲಿ ಭಾರತದ ನಾಲ್ಕನೇ ಬ್ರಿಕ್ಸ್ ಅಧ್ಯಕ್ಷತೆಯನ್ನು ಗುರುತಿಸುತ್ತದೆ. ಭಾರತದ ಅಧ್ಯಕ್ಷತೆಯು "ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ ಎಂಬ ವಿಷಯದ ಆಧಾರದ ಮೇಲೆ ನಡೆಯಲಿದೆ. ಈ ವಿಷಯವು ಅಸ್ತಿತ್ವದಲ್ಲಿರುವ ಸಾಧನೆಗಳನ್ನು ಮತ್ತು ಸಾಂಸ್ಥಿಕ ಕಾರ್ಯಕ್ಷಮತೆಯನ್ನು ಬಲಪಡಿಸುವ ಭಾರತದ ಗಮನವನ್ನು ಪ್ರತಿಬಿಂಬಿಸುತ್ತದೆ. ಇದು ಅಭಿವೃದ್ಧಿ, ಸುಸ್ಥಿರತೆ ಮತ್ತು ನಾವೀನ್ಯತೆಯನ್ನು ಈ ಕಾರ್ಯಸೂಚಿಯ ಕೇಂದ್ರಬಿಂದುವನ್ನಾಗಿ ಮಾಡುತ್ತದೆ. ಅಲ್ಲದೆ, ಇದು ಗ್ಲೋಬಲ್ ಸೌತ್ ರಾಷ್ಟ್ರಗಳ ಆಕಾಂಕ್ಷೆಗಳನ್ನು ಎತ್ತಿಹಿಡಿಯುತ್ತದೆ. ಭಾರತವು ಬ್ರಿಕ್ಸ್ ಅನ್ನು ರಚನಾತ್ಮಕ ಮತ್ತು ಪರಿಹಾರ ಆಧಾರಿತ ವೇದಿಕೆಯಾಗಿ ಬಲಪಡಿಸಲು ಶ್ರಮಿಸುತ್ತದೆ.

ಇಂದು, ಬ್ರಿಕ್ಸ್ 11 ದೇಶಗಳನ್ನು ಒಳಗೊಂಡಿದೆ: ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ. ಒಟ್ಟಾರೆಯಾಗಿ, ಈ ಸದಸ್ಯ ರಾಷ್ಟ್ರಗಳು ಜಾಗತಿಕ ಜನಸಂಖ್ಯೆಯ ಶೇ. 49.5, ಜಾಗತಿಕ ಜಿಡಿಪಿಯ ಶೇ. 40 ಮತ್ತು ಜಾಗತಿಕ ವ್ಯಾಪಾರದ ಶೇ. 26 ರಷ್ಟನ್ನು ಪ್ರತಿನಿಧಿಸುತ್ತವೆ. ಈ ಅಂಕಿಅಂಶಗಳು ಅವುಗಳ ಗಮನಾರ್ಹ ಜನಸಂಖ್ಯಾ ಮತ್ತು ಆರ್ಥಿಕ ಸಾಮರ್ಥ್ಯವನ್ನು ಎತ್ತಿಹಿಡಿಯುತ್ತವೆ. ಇದರ ವಿಸ್ತರಿತ ಸದಸ್ಯತ್ವವು ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತ ಇದರ ಭೌಗೋಳಿಕ ವ್ಯಾಪ್ತಿಯನ್ನು ಹೆಚ್ಚಿಸಿದೆ. ಈ ವೈವಿಧ್ಯತೆಯು ಪ್ರಮುಖ ಮಾರುಕಟ್ಟೆಗಳು, ನೈಸರ್ಗಿಕ ಸಂಪನ್ಮೂಲಗಳು, ತಾಂತ್ರಿಕ ಸಾಮರ್ಥ್ಯಗಳು ಮತ್ತು ವೈವಿಧ್ಯಮಯ ಅಭಿವೃದ್ಧಿ ಅನುಭವಗಳನ್ನು ಒಂದೆಡೆ ತರುತ್ತದೆ.
|
ಆರಂಭಿಕ ಹಿನ್ನೆಲೆ
‘ಬ್ರಿಕ್’ ಎಂಬ ಸಂಕ್ಷಿಪ್ತ ಪದವನ್ನು 2001ರಲ್ಲಿ ಗೋಲ್ಡ್‌ಮ್ಯಾನ್ ಸ್ಯಾಚ್ಸ್ ಸಂಸ್ಥೆಯು ‘ದಿ ವರ್ಲ್ಡ್ ನೀಡ್ಸ್ ಬೆಟರ್ ಎಕನಾಮಿಕ್ ಬ್ರಿಕ್ಸ್’ ಎಂಬ ತನ್ನ ಜಾಗತಿಕ ಅರ್ಥಶಾಸ್ತ್ರ ಪತ್ರಿಕೆಯಲ್ಲಿ ಮೊದಲ ಬಾರಿಗೆ ಬಳಕೆಗೆ ತಂದಿತು. ಆರ್ಥಿಕ ವಿಶ್ಲೇಷಣೆಯ ಆಧಾರದ ಮೇಲೆ, ಮುಂದಿನ ಐದು ದಶಕಗಳಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಪ್ರಪಂಚದ ಅತ್ಯಂತ ದೊಡ್ಡ ಅರ್ಥವ್ಯವಸ್ಥೆಗಳ ಪಟ್ಟಿಗೆ ಸೇರಲಿವೆ ಎಂದು ಈ ವರದಿ ಮುನ್ಸೂಚನೆ ನೀಡಿತ್ತು. ಅವುಗಳ ಬೆಳೆಯುತ್ತಿರುವ ಆರ್ಥಿಕ ಸಾಮರ್ಥ್ಯ ಮತ್ತು ಮೂರು ಖಂಡಗಳಿಗೆ ಹರಡಿರುವ ಬೃಹತ್ ಭೌಗೋಳಿಕ ವ್ಯಾಪ್ತಿಯು ಅವುಗಳ ಉದಯೋನ್ಮುಖ ಜಾಗತಿಕ ಪ್ರಾಮುಖ್ಯತೆಯನ್ನು ಉಲ್ಲೇಖಿಸಿತು. ತದನಂತರ ‘ಬ್ರಿಕ್’ ಪರಿಕಲ್ಪನೆಯು ಒಂದು ಅಧಿಕೃತ ಒಕ್ಕೂಟವಾಗಿ ಬದಲಾಯಿತು. 2010 ರಲ್ಲಿ ದಕ್ಷಿಣ ಆಫ್ರಿಕಾ ಸೇರ್ಪಡೆಯಾಗುವುದರೊಂದಿಗೆ ‘ಬ್ರಿಕ್’, ‘ಬ್ರಿಕ್ಸ್’ ಆಗಿ ರೂಪಾಂತರಗೊಂಡಿತು. ಈ ವಿಕಾಸವು ಕೇವಲ ವಿಶ್ಲೇಷಕರು ಗುರುತಿಸಿದ ಆರ್ಥಿಕ ಗುಂಪಿನಿಂದ ರಾಜಕೀಯ, ಆರ್ಥಿಕ ಮತ್ತು ಅಭಿವೃದ್ಧಿ ಸಹಕಾರದ ಅಧಿಕೃತ ವೇದಿಕೆಯಾಗಿ ಬೆಳೆದ ಪರಿವರ್ತನೆಯನ್ನು ಗುರುತಿಸುತ್ತದೆ.
|
ಉದ್ದೇಶ, ಗುರಿ ಮತ್ತು ಸಹಕಾರದ ಕ್ಷೇತ್ರಗಳು
ಆರಂಭದಲ್ಲಿ ಬ್ರಿಕ್ಸ್ ಅಂತಾರಾಷ್ಟ್ರೀಯ ಕಾರ್ಯಸೂಚಿಯನ್ನು ರೂಪಿಸುವ ಪ್ರಮುಖ ವಿಷಯಗಳ ಕುರಿತು ಸಂವಾದ ನಡೆಸುವ ಒಂದು ವೇದಿಕೆಯಾಗಿ ರೂಪುಗೊಂಡಿತು. ಜಾಗತಿಕ ರಾಜಕೀಯ ಮತ್ತು ಆರ್ಥಿಕ ವಿಷಯಗಳ ಕುರಿತು ಜಂಟಿ ನಿಲುವುಗಳನ್ನು ತಳೆಯುವುದು ಇದರ ಆರಂಭಿಕ ಆದ್ಯತೆಯಾಗಿತ್ತು. ಇದು ಹೆಚ್ಚು ಪ್ರಜಾಸತ್ತಾತ್ಮಕ, ನ್ಯಾಯಸಮ್ಮತ ಮತ್ತು ಸಮತೋಲಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಉತ್ತೇಜಿಸಲು ಶ್ರಮಿಸಿತು. ಈ ಒಕ್ಕೂಟವು ಉದಯೋನ್ಮುಖ ಅರ್ಥವ್ಯವಸ್ಥೆಗಳಲ್ಲಿ ಸುಸ್ಥಿರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ಸಾಮಾಜಿಕ ಸೇರ್ಪಡೆ ಹಾಗೂ ಹಂಚಿಕೆಯ ಸಮೃದ್ಧಿಯನ್ನು ಒತ್ತಿಹೇಳಿತು. ಕಾಲಕ್ರಮೇಣ, ಈ ಆದ್ಯತೆಗಳು ಸದಸ್ಯ ರಾಷ್ಟ್ರಗಳ ನಡುವೆ ಆಳವಾದ ಮತ್ತು ವ್ಯಾಪಕವಾದ ನಿರಂತರ ತೊಡಗಿಸಿಕೊಳ್ಳುವಿಕೆಗೆ ಅಡಿಪಾಯವನ್ನು ಒದಗಿಸಿವೆ.
ಸತತ ಶೃಂಗಸಭೆಗಳ ಮೂಲಕ, ಬ್ರಿಕ್ಸ್ ಸಹಕಾರವು ಕಾರ್ಯತಂತ್ರದ ಜಾಗತಿಕ ವಿಷಯಗಳು ಮತ್ತು ಪ್ರಾಯೋಗಿಕ ಸಹಯೋಗದ ಕ್ಷೇತ್ರಗಳನ್ನು ಒಳಗೊಳ್ಳಲು ಹಂತ ಹಂತವಾಗಿ ವಿಸ್ತರಿಸಿದೆ. ಇದರ ಕಾರ್ಯಸೂಚಿಯು ಭಯೋತ್ಪಾದನೆ, ಹವಾಮಾನ ವೈಪರೀತ್ಯ, ಆಹಾರ ಮತ್ತು ಇಂಧನ ಭದ್ರತೆ, ವ್ಯಾಪಾರ ಹಾಗೂ ಕೃಷಿ ಕ್ಷೇತ್ರಗಳನ್ನು ಒಳಗೊಂಡಿದೆ. ಇದು ಕಾರ್ಮಿಕ ಮತ್ತು ಉದ್ಯೋಗ, ದೂರಸಂಪರ್ಕ, ಅಂತರರಾಷ್ಟ್ರೀಯ ಹಣಕಾಸು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನೂ ನಿರ್ವಹಿಸುತ್ತದೆ. ಬ್ರಿಕ್ಸ್ ವಿಶ್ವ ವ್ಯಾಪಾರ ಸಂಸ್ಥೆ ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳು ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಮತ್ತು ಈಕ್ವಿಟಿಗಾಗಿ (ಸಮಾನತೆ) ವಾದಿಸುತ್ತದೆ. ಈ ಪ್ರಯತ್ನಗಳು ಜಾಗತಿಕ ಆಡಳಿತವನ್ನು ಹೆಚ್ಚು ಸಮಾವೇಶಿ, ಪರಿಣಾಮಕಾರಿ ಮತ್ತು ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವಂತೆ ಮಾಡಲು ಶ್ರಮಿಸುತ್ತವೆ.
ವರ್ಷಗಳ ಹಾದಿಯಲ್ಲಿ ಬ್ರಿಕ್ಸ್: ಬಿಕ್ಕಟ್ಟಿನಿಂದ ಸಾಮೂಹಿಕ ಕ್ರಿಯೆಯತ್ತ
2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಬ್ರಿಕ್ಸ್ ವಿಕಾಸದಲ್ಲಿ ಒಂದು ನಿರ್ಣಾಯಕ ತಿರುವಾಗಿತ್ತು. ಇದು ಅಸ್ತಿತ್ವದಲ್ಲಿದ್ದ ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಬಹಿರಂಗಪಡಿಸಿತು. ಜೊತೆಗೆ, ಜಾಗತಿಕ ಆರ್ಥಿಕ ಆಡಳಿತದ ಕುರಿತು ವಿಶಾಲವಾದ ಸಮ್ಮತಿಯ ಅಗತ್ಯವನ್ನು ಸೃಷ್ಟಿಸಿತು. ನಾಲ್ಕು 'ಬ್ರಿಕ್' ದೇಶಗಳು ಈ ವಿಷಯಗಳ ಕುರಿತು ಜಂಟಿ ನಿಲುವನ್ನು ಸ್ಪಷ್ಟಪಡಿಸಿದವು. ಅವು ಹೆಚ್ಚು ಪ್ರಾತಿನಿಧ್ಯ ಹೊಂದಿರುವ ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಕರೆ ನೀಡಿದವು. ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್‌ನಲ್ಲಿ ಉದಯೋನ್ಮುಖ ಅರ್ಥವ್ಯವಸ್ಥೆಗಳಿಗೆ ಹೆಚ್ಚಿನ ಧ್ವನಿ ಸಿಗಬೇಕೆಂದು ಶ್ರಮಿಸಿದವು. ಅಲ್ಲದೆ, ಅವು ರಕ್ಷಣಾತ್ಮಕ ನಯಾಪೈಸೆ ನೀತಿಯನ್ನು ವಿರೋಧಿಸಿದವು ಮತ್ತು ಮುಕ್ತ, ನಿಯಮ-ಆಧಾರಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಬೆಂಬಲಿಸಿದವು. ಈ ಸಮನ್ವಯತೆಯು 2009 ರಲ್ಲಿ ರಷ್ಯಾದ ಯೆಕಟೆರಿನ್‌ಬರ್ಗ್‌ನಲ್ಲಿ ನಡೆದ ಮೊದಲ ಬ್ರಿಕ್ ಶೃಂಗಸಭೆಗೆ ಅಡಿಪಾಯ ಹಾಕಿತು.

ಬ್ರಿಕ್ ಅನ್ನು ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ದೇಶಗಳ ನಡುವಿನ ರಾಜಕೀಯ ಸಹಕಾರ ವೇದಿಕೆಯಾಗಿ 2006 ರಲ್ಲಿ ಅಧಿಕೃತವಾಗಿ ಸ್ಥಾಪಿಸಲಾಯಿತು. ಇದರ ಸಂಸ್ಥಾಪಕ ಸದಸ್ಯರು ಹೆಚ್ಚು ಪ್ರಾತಿನಿಧ್ಯ ಮತ್ತು ಈಕ್ವಿಟಿ ಹೊಂದಿರುವ ಜಾಗತಿಕ ವ್ಯವಸ್ಥೆಯ ಆಕಾಂಕ್ಷೆಯನ್ನು ಹಂಚಿಕೊಂಡಿದ್ದರು. 2011 ರಲ್ಲಿ ದಕ್ಷಿಣ ಆಫ್ರಿಕಾ ಪೂರ್ಣಪ್ರಮಾಣದ ಸದಸ್ಯನಾಗಿ ಸೇರ್ಪಡೆಗೊಂಡಿತು, ಇದು ಬ್ರಿಕ್ ಅನ್ನು 'ಬ್ರಿಕ್ಸ್' ಆಗಿ ಮಾರ್ಪಡಿಸಿತು. ಈ ಸೇರ್ಪಡೆಯು ವಿವಿಧ ಖಂಡಗಳಾದ್ಯಂತ ಒಕ್ಕೂಟದ ಭೌಗೋಳಿಕ ಪ್ರಾತಿನಿಧ್ಯವನ್ನು ವಿಸ್ತರಿಸಿತು. ತದನಂತರ ಈ ಒಕ್ಕೂಟವು ತನ್ನ ಕಾರ್ಯಸೂಚಿಯನ್ನು ಕೇವಲ ಆರ್ಥಿಕ ವಿಷಯಗಳಿಗೆ ಸೀಮಿತಗೊಳಿಸದೆ ಅಭಿವೃದ್ಧಿ, ಹಣಕಾಸು, ಆರೋಗ್ಯ, ಹವಾಮಾನ ಕಾರ್ಯಪಡೆ, ತಂತ್ರಜ್ಞಾನ ಮತ್ತು ವ್ಯಾಪಾರದಂತಹ ಕ್ಷೇತ್ರಗಳಿಗೂ ವಿಸ್ತರಿಸಿತು. ಈ ವಿಕಾಸವು ಉದಯೋನ್ಮುಖ ಅರ್ಥವ್ಯವಸ್ಥೆಗಳ ನಡುವಿನ ನಿರಂತರ ತೊಡಗಿಸಿಕೊಳ್ಳುವಿಕೆಗೆ ಬ್ರಿಕ್ಸ್ ಅನ್ನು ಒಂದು ವಿಶಾಲವಾದ ಚೌಕಟ್ಟಾಗಿ ಬಲಪಡಿಸಿತು.
ವಿಸ್ತೃತ ಬ್ರಿಕ್ಸ್: ತಲುಪುವಿಕೆ ವಿಸ್ತರಣೆ, ತೊಡಗಿಸಿಕೊಳ್ಳುವಿಕೆಯ ಗಾಢತೆ

ಜನವರಿ 2024 ರಲ್ಲಿ ವಿಸ್ತರಣೆಯ ಪ್ರಮುಖ ಹಂತವು ಪ್ರಾರಂಭವಾಯಿತು. ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ಪೂರ್ಣಪ್ರಮಾಣದ ಸದಸ್ಯರಾದರು. ಜನವರಿ 2025ರಲ್ಲಿ ಇಂಡೋನೇಷ್ಯಾ 11ನೇ ಪೂರ್ಣಪ್ರಮಾಣದ ಸದಸ್ಯನಾಗಿ ಸೇರ್ಪಡೆಗೊಂಡಿತು. ಈ ಸೇರ್ಪಡೆಗಳು ಬ್ರಿಕ್ಸ್‌ನ ಭೌಗೋಳಿಕ ಮತ್ತು ಆರ್ಥಿಕ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿದವು. ಈ ವಿಸ್ತರಣೆಯ ಜೊತೆಗೆ 'ಪಾಲುದಾರ ದೇಶ' ಎಂಬ ಹೊಸ ವರ್ಗವನ್ನು ಸೃಷ್ಟಿಸಲಾಯಿತು. 2025ರ ಅವಧಿಯಲ್ಲಿ ಬೆಲಾರಸ್, ಬೊಲಿವಿಯಾ, ಕ್ಯೂಬಾ, ಕಝಾಕಿಸ್ತಾನ್, ಮಲೇಷ್ಯಾ, ನೈಜೀರಿಯಾ, ಥೈಲ್ಯಾಂಡ್, ಉಗಾಂಡಾ, ಉಜ್ಬೇಕಿಸ್ತಾನ್ ಮತ್ತು ವಿಯೆಟ್ನಾಂ ಸೇರಿದಂತೆ ಹತ್ತು ದೇಶಗಳು ಈ ಚೌಕಟ್ಟಿಗೆ ಸೇರಿಕೊಂಡವು. ಈ ನೂತನ ವ್ಯವಸ್ಥೆಯು ಬ್ರಿಕ್ಸ್ ಜೊತೆಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಹೆಚ್ಚುವರಿ ಮಾರ್ಗವನ್ನು ಒದಗಿಸುತ್ತದೆ.

'ಪಾಲುದಾರ ದೇಶ' ಚೌಕಟ್ಟು ಬ್ರಿಕ್ಸ್‌ನ ಪೂರ್ಣ-ಸದಸ್ಯತ್ವ ರಚನೆಗೆ ಯಾವುದೇ ಬದಲಾವಣೆ ತರದೆ, ಅದರ ತಲುಪುವಿಕೆ ಮತ್ತು ವಿಸ್ತಾರವನ್ನು ಹೆಚ್ಚಿಸುತ್ತದೆ. ಇದು ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಯುರೇಷಿಯಾದ್ಯಂತ 'ದಕ್ಷಿಣ-ದಕ್ಷಿಣ ಸಹಕಾರ'ಕ್ಕೆ ಹೆಚ್ಚಿನ ಅವಕಾಶಗಳನ್ನು ಬಲಪಡಿಸುತ್ತದೆ. ಈ ವಿಶಾಲವಾದ ಜಾಲವು ವ್ಯಾಪಾರ, ಹಣಕಾಸು, ಹವಾಮಾನ ಕಾರ್ಯಪಡೆ ಮತ್ತು ಸುಸ್ಥಿರ ಅಭಿವೃದ್ಧಿಯ ವಿಷಯಗಳಲ್ಲಿ ಸಹಯೋಗಕ್ಕೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಇದು ಜಾಗತಿಕ ಆಡಳಿತದ ಚರ್ಚೆಗಳಲ್ಲಿ ಭಾಗವಹಿಸಲು ಉದಯೋನ್ಮುಖ ಅರ್ಥವ್ಯವಸ್ಥೆಗಳಲ್ಲಿ ಬೆಳೆಯುತ್ತಿರುವ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಬ್ರಿಕ್ಸ್‌ನ ಈ ವಿಕಾಸವು ನಾಲ್ಕು ದೇಶಗಳ ಆರ್ಥಿಕ ಸಂವಾದದಿಂದ ರಾಜಕೀಯ, ಆರ್ಥಿಕ, ಹಣಕಾಸು ಮತ್ತು ಸಾಮಾಜಿಕ ಸಹಕಾರದ ವಿಶಾಲವಾದ ಚೌಕಟ್ಟಿಗೆ ಆದ ಬದಲಾವಣೆಯನ್ನು ತೋರಿಸುತ್ತದೆ. ಇದರ ವಿಸ್ತರಣೆಯು ಇದರ ಜನಸಂಖ್ಯಾ ಮತ್ತು ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಿದೆ. ಜೊತೆಗೆ, ಇದು ತನ್ನ ಪ್ರಾದೇಶಿಕ ಪ್ರಾತಿನಿಧ್ಯ ಮತ್ತು ತೊಡಗಿಸಿಕೊಳ್ಳುವಿಕೆಯ ಕ್ಷೇತ್ರಗಳನ್ನು ವಿಸ್ತರಿಸಿದೆ. ಈ ಒಕ್ಕೂಟದ ಸಾಂಸ್ಥಿಕ ವಿಕಾಸವು ಉದಯೋನ್ಮುಖ ಅರ್ಥವ್ಯವಸ್ಥೆಗಳ ಬದಲಾಗುತ್ತಿರುವ ಆದ್ಯತೆಗಳಿಗೆ ಅನುಗುಣವಾಗಿ ಹೆಜ್ಜೆ ಹಾಕಿದೆ.
|
ಬ್ರಿಕ್ಸ್ ಅಧ್ಯಕ್ಷತೆ: ಸರದಿ ಮತ್ತು ಜವಾಬ್ದಾರಿಗಳು
ಬ್ರಿಕ್ಸ್ ಅಧ್ಯಕ್ಷತೆಯು ಅದರ ಹೆಸರಿನ ಅಕ್ಷರಗಳ ಸರಣಿಯ ಪ್ರಕಾರ ಪ್ರತಿ ವರ್ಷ ಸರದಿಯ ಆಧಾರದ ಮೇಲೆ ಬದಲಾಗುತ್ತದೆ. ಪ್ರತಿ ಅಧ್ಯಕ್ಷತೆಯ ಅವಧಿಯು ಆಯಾ ವರ್ಷದ ಜನವರಿ 1 ರಂದು ಪ್ರಾರಂಭವಾಗಿ ಡಿಸೆಂಬರ್ 31 ರಂದು ಕೊನೆಗೊಳ್ಳುತ್ತದೆ. ಅಧ್ಯಕ್ಷತೆಯನ್ನು ಹೊಂದಿರುವ ದೇಶವು ಆ ವರ್ಷದ ಕಾರ್ಯಸೂಚಿಯ ಆದ್ಯತೆಗಳನ್ನು ನಿರ್ಧರಿಸುತ್ತದೆ. ಅಲ್ಲದೆ, ಇದು ಒಕ್ಕೂಟದ ವಾರ್ಷಿಕ ಶೃಂಗಸಭೆಯನ್ನು ಆಯೋಜಿಸುತ್ತದೆ ಮತ್ತು ಪ್ರಮುಖ ಸಚಿವರ ಹಾಗೂ ಕಾರ್ಯನಿರತ ಗುಂಪುಗಳ ಸಭೆಗಳ ನೇತೃತ್ವ ವಹಿಸುತ್ತದೆ. ಬ್ರಿಕ್ಸ್ ಸದಸ್ಯತ್ವದ ಇತ್ತೀಚಿನ ವಿಸ್ತರಣೆಯೊಂದಿಗೆ, ಅಧ್ಯಕ್ಷತೆಗಾಗಿ ಹೊಸ ಸರದಿ ಸೂತ್ರದ ಕುರಿತು ಸದಸ್ಯ ದೇಶಗಳ ನಡುವೆ ಚರ್ಚಿಸಲಾಗುತ್ತಿದೆ.
|
ಬ್ರಿಕ್ಸ್ ಅಧ್ಯಕ್ಷತೆಯಲ್ಲಿ ಭಾರತ: ಸತತತೆಯಿಂದ ಸರ್ವಸಮ್ಮತಿಯತ್ತ
ಈ ವರ್ಷಕ್ಕಿಂತ ಮೊದಲು, ಭಾರತವು ಈ ಹಿಂದೆ 2012, 2016 ಮತ್ತು 2021ರಲ್ಲಿ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿತ್ತು. ಪ್ರತಿಯೊಂದು ಅಧ್ಯಕ್ಷತೆಯು ಆಯಾ ಅವಧಿಯ ಆದ್ಯತೆಗಳು ಮತ್ತು ಸವಾಲುಗಳನ್ನು ಪ್ರತಿಬಿಂಬಿಸಿತ್ತು. ಭಾರತದ ಮರುಪರಿಶೀಲಿತ ನಾಯಕತ್ವವು ಒಕ್ಕೂಟದೊಂದಿಗಿನ ಅದರ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಪ್ರದರ್ಶಿಸುತ್ತದೆ. ಇದು ರಚನಾತ್ಮಕ ಬಹುಪಕ್ಷೀಯತೆ ಮತ್ತು ಅಭಿವೃದ್ಧಿಶೀಲ ಅರ್ಥವ್ಯವಸ್ಥೆಗಳ ಆದ್ಯತೆಗಳಿಗೆ ಭಾರತದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ.
2012: ಬಲವಾದ ಸಹಕಾರಕ್ಕೆ ಅಡಿಪಾಯ
ಭಾರತವು 29 ಮಾರ್ಚ್ 2012 ರಂದು ನವದೆಹಲಿಯಲ್ಲಿ ನಾಲ್ಕನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಿತ್ತು. ಈ ಶೃಂಗಸಭೆಯನ್ನು "ಜಾಗತಿಕ ಸ್ಥಿರತೆ, ಭದ್ರತೆ ಮತ್ತು ಸಮೃದ್ಧಿಗಾಗಿ ಬ್ರಿಕ್ಸ್ ಪಾಲುದಾರಿಕೆ" ಎಂಬ ವಿಷಯದಡಿ ನಡೆಸಲಾಯಿತು. ಜಾಗತಿಕ ಆಡಳಿತ ಸುಧಾರಣೆ, ಸುಸ್ಥಿರ ಅಭಿವೃದ್ಧಿ, ಆಹಾರ ಭದ್ರತೆ ಮತ್ತು ಇಂಧನ ಭದ್ರತೆಯ ಮೇಲೆ ಚರ್ಚೆಗಳು ಗಮನಹರಿಸಿದವು. ಈ ಶೃಂಗಸಭೆಯು ಬ್ರಿಕ್ಸ್ ಸಹಕಾರವನ್ನು ಬಲಪಡಿಸಲು 'ದೆಹಲಿ ಘೋಷಣೆ' ಮತ್ತು ಕ್ರಿಯಾ ಯೋಜನೆಯನ್ನು ಅಂಗೀಕರಿಸಿತು. ಈ ಫಲಿತಾಂಶಗಳು ಸಾಂಸ್ಥಿಕ ಮತ್ತು ವಲಯವಾರು ತೊಡಗಿಸಿಕೊಳ್ಳುವಿಕೆಗೆ ಬಲವಾದ ಅಡಿಪಾಯವನ್ನು ಹಾಕಿದವು. ದೆಹಲಿ ಘೋಷಣೆಯ ಬಗ್ಗೆ ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ
|
ಪ್ರಮುಖ ಫಲಿತಾಂಶಗಳು
- ಶೃಂಗಸಭೆಯು ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ನೂತನ ಅಭಿವೃದ್ಧಿ ಬ್ಯಾಂಕ್ ಒಂದನ್ನು ಸ್ಥಾಪಿಸುವ ಕುರಿತು ಪರಿಶೀಲಿಸಲು ಪ್ರಸ್ತಾಪಿಸಿತು. ಪ್ರಸ್ತಾವಿತ ಸಂಸ್ಥೆಯು ಬ್ರಿಕ್ಸ್, ಉದಯೋನ್ಮುಖ ಅರ್ಥವ್ಯವಸ್ಥೆಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿತ್ತು. ಜಾಗತಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವಲ್ಲಿ ಇದು ಅಸ್ತಿತ್ವದಲ್ಲಿರುವ ಬಹುಪಕ್ಷೀಯ ಮತ್ತು ಪ್ರಾದೇಶಿಕ ಹಣಕಾಸು ಸಂಸ್ಥೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಎನ್‌ಡಿಬಿ ಕುರಿತು ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.
- ಸದಸ್ಯ ರಾಷ್ಟ್ರಗಳು ಸ್ಥಳೀಯ ಕರೆನ್ಸಿಯಲ್ಲಿ ಸಾಲ ಸೌಲಭ್ಯವನ್ನು ವಿಸ್ತರಿಸಲು ಮತ್ತು ಬ್ರಿಕ್ಸ್ ರಾಷ್ಟ್ರಗಳ ನಡುವಿನ ವ್ಯಾಪಾರವನ್ನು ಹೆಚ್ಚಿಸಲು 'ಮಾಸ್ಟರ್ ಒಪ್ಪಂದ'ಕ್ಕೆ ಸಹಿ ಹಾಕಿದವು.
- ಈ ಶೃಂಗಸಭೆಯು ಬ್ರಿಕ್ಸ್ ದೇಶಗಳಿಗೆ ಹಣಕಾಸಿನ ಸುರಕ್ಷತಾ ವ್ಯವಸ್ಥೆಯಾಗಿ 'ಆಕಸ್ಮಿಕ ಮೀಸಲು ವ್ಯವಸ್ಥೆ'ಗೆ ಅಡಿಪಾಯವನ್ನು ಹಾಕಿತು. ಈ ವ್ಯವಸ್ಥೆಯನ್ನು ಅಲ್ಪಾವಧಿಯ ನಗದು ಸುಲಭ್ಯತೆ ಒದಗಿಸಲು ಮತ್ತು ಆರ್ಥಿಕ ಅಸ್ಥಿರತೆಯನ್ನು ಎದುರಿಸಲು ಸದಸ್ಯ ದೇಶಗಳಿಗೆ ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ.
- ಭಾರತವು ಕೃಷಿ, ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಸಹಕಾರಕ್ಕಾಗಿ ಹೊಸ ಜಂಟಿ ಕಾರ್ಯಕ್ರಮಗಳನ್ನು ಸಾಂಸ್ಥಿಕಗೊಳಿಸಿತು.
|
2016: ಗೋವಾ ಶೃಂಗಸಭೆ - ಬ್ರಿಕ್ಸ್ ತಲುಪುವಿಕೆಯ ವಿಸ್ತರಣೆ
ಭಾರತವು ಅಕ್ಟೋಬರ್ 2016ರಲ್ಲಿ ಗೋವಾದಲ್ಲಿ ಎಂಟನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಿತ್ತು. ಈ ಶೃಂಗಸಭೆಯನ್ನು "ಸ್ಪಂದನಶೀಲ, ಸಮಾವೇಶಿ ಮತ್ತು ಸಾಮೂಹಿಕ ಪರಿಹಾರಗಳ ನಿರ್ಮಾಣ" ಎಂಬ ವಿಷಯದಡಿ ನಡೆಸಲಾಯಿತು. ಭಾರತದ ಅಧ್ಯಕ್ಷತೆಯು ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರವನ್ನು ಬಲಪಡಿಸುವುದು ಮತ್ತು ತಲುಪುವಿಕೆಯನ್ನು ವಿಸ್ತರಿಸುವುದರ ಮೇಲೆ ಗಮನ ಹರಿಸಿತು. ಇದು ಭಯೋತ್ಪಾದನೆ ನಿಗ್ರಹ, ವ್ಯಾಪಾರ, ನಾವೀನ್ಯತೆ ಮತ್ತು ಬಹುಪಕ್ಷೀಯ ಸಮನ್ವಯತೆಯ ಮೇಲಿನ ಸಹಯೋಗವನ್ನು ಮುಂದಕ್ಕೆ ಕೊಂಡೊಯ್ದಿತು. ಗೋವಾ ಶೃಂಗಸಭೆಯು ಉದಯೋನ್ಮುಖ ಜಾಗತಿಕ ಸವಾಲುಗಳು ಮತ್ತು ಪ್ರಾಯೋಗಿಕ ಸಹಕಾರದ ಮೇಲಿನ ಒಕ್ಕೂಟದ ಗಮನವನ್ನು ಮತ್ತಷ್ಟು ಬಲಪಡಿಸಿತು.
|
ಪ್ರಮುಖ ಫಲಿತಾಂಶಗಳು
- ಪುನರುತ್ಪಾದಕ ಇಂಧನ ಯೋಜನೆಗಳಿಗೆ ಬೆಂಬಲ ನೀಡುವ ಮೂಲಕ ನೂತನ ಅಭಿವೃದ್ಧಿ ಬ್ಯಾಂಕ್ ತನ್ನ ಸಾಲಗಳ ಮೊದಲ ಸರಣಿಯನ್ನು ಬಿಡುಗಡೆ ಮಾಡಿ, ತನ್ನ ಕಾರ್ಯಚಟುವಟಿಕೆಯನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಿತು.
- ಬ್ರಿಕ್ಸ್ ಒಕ್ಕೂಟವು ಪುನರುತ್ಪಾದಕ ಇಂಧನದ ಲಭ್ಯತೆ, ಶುದ್ಧ ಇಂಧನದ ಕಡೆಗೆ ಸ್ಥಿತ್ಯಂತರ ಮತ್ತು ಇಂಧನ ಭದ್ರತೆಯನ್ನು ಜಂಟಿ ಆದ್ಯತೆಗಳಾಗಿ ಬಲಪಡಿಸಿತು.
- ಎಚ್‌ಐವಿ ಮತ್ತು ಕ್ಷಯರೋಗವನ್ನು ತಡೆಗಟ್ಟುವ ಕುರಿತು ಹೆಚ್ಚಿನ ಗಮನ ಹರಿಸಲಾಯಿತು.
- ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ಭಾರತವು ಬ್ರಿಕ್ಸ್ ವೇದಿಕೆಯಲ್ಲಿ ಕಠಿಣ ನಿಲುವನ್ನು ಪ್ರತಿಪಾದಿಸಿತು ಹಾಗೂ ಎಫ್‌ಎಟಿಎಫ್ ಮಾನದಂಡಗಳ ಪಾಲನೆಗೆ ಕರೆ ನೀಡಿತು.
- ‘ಬಿಮ್ಸ್‌ಟೆಕ್’ ತಲುಪುವಿಕೆ ಶೃಂಗಸಭೆಯು ಬ್ರಿಕ್ಸ್ ಮತ್ತು ಬಂಗಾಳ ಕೊಲ್ಲಿ ಪ್ರದೇಶದ ದೇಶಗಳ ನಡುವಿನ ಬಾಂಧವ್ಯವನ್ನು ವಿಸ್ತರಿಸಿತು. ಈ ಚರ್ಚೆಗಳು ಭಯೋತ್ಪಾದನೆ ನಿಗ್ರಹ, ವ್ಯಾಪಾರ, ಇಂಧನ, ಹೂಡಿಕೆ, ಪರಿಸರ, ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ಒಳಗೊಂಡಿದ್ದವು.
- ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ, ಬ್ರಿಕ್ಸ್ ರೈಲ್ವೆ ಸಂಶೋಧನಾ ಜಾಲ, ಬ್ರಿಕ್ಸ್ ಕ್ರೀಡಾ ಮಂಡಳಿ ಮತ್ತು ಯುವಜನ-ಕೇಂದ್ರಿತ ಸಹಕಾರ ವೇದಿಕೆಗಳನ್ನು ಸ್ಥಾಪಿಸಲು ಸಮ್ಮತಿಸಲಾಯಿತು.
|
2021: ಬದಲಾಗುತ್ತಿರುವ ಜಗತ್ತಿನಲ್ಲಿ ಸಹಕಾರದ ಬಲವರ್ಧನೆ
ಭಾರತವು 9 ಸೆಪ್ಟೆಂಬರ್ 2021 ರಂದು 13ನೇ ಬ್ರಿಕ್ಸ್ ಶೃಂಗಸಭೆಯನ್ನು ವರ್ಚುವಲ್ (ಆನ್‌ಲೈನ್) ಮೂಲಕ ಆಯೋಜಿಸಿತು. ಈ ಶೃಂಗಸಭೆಯು ಬ್ರಿಕ್ಸ್ ಸ್ಥಾಪನೆಯ 15ನೇ ವರ್ಷಾಚರಣೆಯನ್ನು ಗುರುತಿಸಿತು. ಇದನ್ನು "BRICS@15: ಸತತತೆ, ಬಲವರ್ಧನೆ ಮತ್ತು ಸರ್ವಸಮ್ಮತಿಗಾಗಿ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರ" ಎಂಬ ವಿಷಯದಡಿ ನಡೆಸಲಾಯಿತು. ಭಾರತವು ಸಾಂಸ್ಥಿಕ ಸತತತೆಯನ್ನು ಬಲಪಡಿಸುವುದು, ಸಹಕಾರವನ್ನು ಆಳವಾಗಿಸುವುದು ಮತ್ತು ಹೆಚ್ಚಿನ ಸರ್ವಸಮ್ಮತಿಯನ್ನು ನಿರ್ಮಿಸುವುದರ ಮೇಲೆ ಗಮನ ಹರಿಸಿತು. ಜೊತೆಗೆ, ಈ ಅಧ್ಯಕ್ಷತೆಯು ಆರೋಗ್ಯ, ಡಿಜಿಟಲ್ ತಂತ್ರಜ್ಞಾನಗಳು, ಭಯೋತ್ಪಾದನೆ ನಿಗ್ರಹ ಮತ್ತು ಸುಸ್ಥಿರ ಅಭಿವೃದ್ಧಿಯಾದ್ಯಂತ ಸಹಕಾರವನ್ನು ಮುಂದಕ್ಕೆ ಕೊಂಡೊಯ್ದಿತು.
|
ಪ್ರಮುಖ ಫಲಿತಾಂಶಗಳು
- ಭಾರತವು 'ಏಕೀಕೃತ ಬ್ರಿಕ್ಸ್ ಭಯೋತ್ಪಾದನೆ ವಿರೋಧಿ ಕ್ರಿಯಾ ಯೋಜನೆ'ಯನ್ನು ಅಂಗೀಕರಿಸುವಲ್ಲಿ ನಾಯಕತ್ವ ವಹಿಸಿತು. ಕ್ರಿಯಾ ಯೋಜನೆಯ ಬಗ್ಗೆ ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.
- ಭಾರತವು ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಚೊಚ್ಚಲ 'ಬ್ರಿಕ್ಸ್ ಡಿಜಿಟಲ್ ಆರೋಗ್ಯ ಶೃಂಗಸಭೆ'ಯನ್ನು ಆಯೋಜಿಸಿತು.
- ಪ್ರಸ್ತುತ ಮತ್ತು ಭವಿಷ್ಯದ ಸಾಂಕ್ರಾಮಿಕ ರೋಗಗಳ ನಿರ್ವಹಣೆಯನ್ನು ಜಂಟಿಯಾಗಿ ಎದುರಿಸಲು 'ಬ್ರಿಕ್ಸ್ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ'ವನ್ನು ಪ್ರಾರಂಭಿಸಲಾಯಿತು.
- 'ಬ್ರಿಕ್ಸ್ ಉಪಗ್ರಹ ಆಧಾರಿತ ದೂರಸಂವೇದಿ ನಕ್ಷತ್ರಪುಂಜ' ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಪರಿಸರ ಸಂರಕ್ಷಣೆ, ವಿಕೋಪ ನಿರ್ವಹಣೆ ಮತ್ತು ಹವಾಮಾನ ಮೇಲ್ವಿಚಾರಣೆಗಾಗಿ ದೇಶಗಳ ನಡುವೆ ದೂರಸಂವೇದಿ ಡೇಟಾವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.
- ಭಾರತವು ಸಚಿವ ಮಟ್ಟದ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಿತು; ಸುಸ್ಥಿರ ಸಂಪನ್ಮೂಲ ನಿರ್ವಹಣೆಗಾಗಿ 'ಹಸಿರು ಪ್ರವಾಸೋದ್ಯಮಕ್ಕಾಗಿ ಬ್ರಿಕ್ಸ್ ಒಕ್ಕೂಟ' ಮತ್ತು ಪ್ರಥಮ 'ಬ್ರಿಕ್ಸ್ ಜಲ ಸಂಪನ್ಮೂಲ ಸಚಿವರ ಸಭೆ'ಯನ್ನು ಚಾಲನೆಗೊಳಿಸಿತು.
|
ಅನುಕ್ರಮ ಅಧ್ಯಕ್ಷತೆಗಳ ಮೂಲಕ, ಭಾರತವು ಬ್ರಿಕ್ಸ್ ಸಂಸ್ಥೆಯ ಸಾಂಸ್ಥಿಕ ಮತ್ತು ವಿಷಯಾಧಾರಿತ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದೆ. ಪ್ರಾಯೋಗಿಕ ಸಹಕಾರದ ಮೇಲೆ ತನ್ನ ಗಮನವನ್ನು ಉಳಿಸಿಕೊಂಡು, ಉದಯೋನ್ಮುಖ ಜಾಗತಿಕ ಸವಾಲುಗಳಿಗೆ ಅನುಗುಣವಾಗಿ ಭಾರತದ ಆದ್ಯತೆಗಳು ವಿಕಸನಗೊಂಡಿವೆ. ಭಾರತದ 2026ರ ಅಧ್ಯಕ್ಷತೆಯು ಈ ಹಿಂದಿನ ಅನುಭವ ಮತ್ತು ಒಕ್ಕೂಟದ ವಿಸ್ತರಿತ ಸದಸ್ಯತ್ವದ ಬಲದ ಮೇಲೆ ರೂಪುಗೊಂಡಿದೆ.
ಬ್ರಿಕ್ಸ್ 2026: ಸಚಿವರ ಮಟ್ಟದ ಸಭೆಗಳಿಂದ ಹೊರಹೊಮ್ಮಿದ ಪ್ರಮುಖ ಫಲಿತಾಂಶಗಳು
ಭಾರತವು 1 ಜನವರಿ 2026 ರಂದು ತನ್ನ ನಾಲ್ಕನೇ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿತು. ತನ್ನ ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಬ್ರಿಕ್ಸ್ ಸಹಕಾರದ ಆದ್ಯತೆಯ ಕ್ಷೇತ್ರಗಳಾದ್ಯಂತ ಸಚಿವರ ಮಟ್ಟದ ಸರಣಿ ಸಭೆಗಳನ್ನು ಕರೆದಾಯೋಜಿಸಿತು. ಈ ವರ್ಷದಲ್ಲಿ, ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಜಂಟಿ ಆದ್ಯತೆಗಳು ಹಾಗೂ ಜಾಗತಿಕ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಂಡವು. ಈ ಚರ್ಚೆಗಳು ಒಕ್ಕೂಟದ ಮೂರು ಮೂಲಭೂತ ಸ್ತಂಭಗಳಾದ್ಯಂತ ಸಹಕಾರವನ್ನು ಮುಂದಕ್ಕೆ ಕೊಂಡೊಯ್ದವು. ಈ ಸ್ತಂಭಗಳು ರಾಜಕೀಯ ಮತ್ತು ಭದ್ರತಾ ಸಹಕಾರ, ಆರ್ಥಿಕ ಮತ್ತು ಹಣಕಾಸು ಸಹಕಾರ, ಹಾಗೂ ಸಾಂಸ್ಕೃತಿಕ ಮತ್ತು ಜನರೊಂದಿಗಿನ ಸಂಬಂಧಗಳನ್ನು ಒಳಗೊಂಡಿವೆ.
ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ 25 ನಗರಗಳಲ್ಲಿ 350ಕ್ಕೂ ಹೆಚ್ಚು ಸಭೆಗಳು ಮತ್ತು ಉನ್ನತ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಈ ಸಭೆಗಳು ಸಹಕಾರದ ಪ್ರಮುಖ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಮತ್ತು ಅಭಿವೃದ್ಧಿ ಆಧಾರಿತ ಫಲಿತಾಂಶಗಳನ್ನು ನೀಡಿದವು. ಭಾರತದ 2026 ರ ಬ್ರಿಕ್ಸ್ ಅಧ್ಯಕ್ಷತೆಯಲ್ಲಿ ನಡೆದ ಸಚಿವರ ಮಟ್ಟದ ಸಭೆಗಳಿಂದ ಈ ಕೆಳಗಿನ ಫಲಿತಾಂಶಗಳು ಹೊರಹೊಮ್ಮಿವೆ.
- ಬ್ರಿಕ್ಸ್ ಅ್ಯಗ್ರೋ-ಎಕಾಲಜಿ ಉತ್ಕೃಷ್ಟತಾ ಕೇಂದ್ರಗಳು : ಸುಸ್ಥಿರ ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿ ವ್ಯವಸ್ಥೆಗಳನ್ನು ಉತ್ತೇಜಿಸಲು ನೈಸರ್ಗಿಕ, ಸಾವಯವ ಮತ್ತು ಪುನರುಜ್ಜೀವನಗೊಳಿಸುವ ಕೃಷಿ ಪದ್ಧತಿಗಳ ಕುರಿತು ಜಂಟಿ ಸಂಶೋಧನೆ, ಜ್ಞಾನ ವಿನಿಮಯ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಸಹಯೋಗದ ವೇದಿಕೆಯಾಗಿ ಇದನ್ನು ಒಪ್ಪಿಕೊಳ್ಳಲಾಗಿದೆ (ಆರಂಭದಲ್ಲಿ ಇದನ್ನು ಐಸಿಎಆರ್-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಿಂಗ್ ಸಿಸ್ಟಮ್ಸ್ ರಿಸರ್ಚ್, ಮೋದಿಪುರಂ ಸಮನ್ವಯಗೊಳಿಸಿದೆ). ಬ್ರಿಕ್ಸ್ ಡಿಜಿಟಲ್ ಕೃಷಿ ಜಾಲ: ಕೃಷಿಯಲ್ಲಿ ಎಐ-ಚಾಲಿತ ನಿರ್ಧಾರ ಬೆಂಬಲ ವ್ಯವಸ್ಥೆಗಳು, ಜಿಯೋಸ್ಪೇಷಿಯಲ್ ಇಂಟೆಲಿಜೆನ್ಸ್, ಐಒಟಿ-ಸಕ್ರಿಯಗೊಳಿಸಿದ ಮೇಲ್ವಿಚಾರಣೆ ಮತ್ತು ಸುಧಾರಿತ ಡೇಟಾ ಅನಾಲಿಟಿಕ್ಸ್ ಉಪಯೋಗವನ್ನು ವಿಸ್ತರಿಸಲು ಮತ್ತು ಸಹಕಾರವನ್ನು ಆಳವಾಗಿಸಲು ಈ ಜಾಲವನ್ನು ರಚಿಸಲಾಗಿದೆ (ಆರಂಭದಲ್ಲಿ ಇದನ್ನು ಐಐಟಿ ದೆಹಲಿ ಸಮನ್ವಯಗೊಳಿಸಿದೆ).
- ಬ್ರಿಕ್ಸ್ ಅಗ್ರಿನ್ (ಕೃಷಿ-ಉತ್ಪನ್ನಗಳು, ತಳೀಯ ಸಂಪನ್ಮೂಲಗಳು ಮತ್ತು ಮಾಹಿತಿ ಜಾಲ): ಬೀಜಗಳು, ತಳಿ ದ್ರವ್ಯ ಮತ್ತು ಕೃಷಿ ಉತ್ಪನ್ನಗಳಲ್ಲಿನ ಸಹಯೋಗವನ್ನು ಬಲಪಡಿಸಲು ಬ್ರಿಕ್ಸ್ ದೇಶಗಳ ನಡುವಿನ ಸ್ವಯಂಪ್ರೇರಿತ, ರೈತ-ಕೇಂದ್ರಿತ ಸಹಕಾರ ಚೌಕಟ್ಟಾಗಿ ಇದನ್ನು ಒಪ್ಪಿಕೊಳ್ಳಲಾಗಿದೆ.
- ಆರೋಗ್ಯಕರ ಜೀವನಶೈಲಿಗಾಗಿ ಬ್ರಿಕ್ಸ್ ಮಿಷನ್ : 'ಆರೋಗ್ಯಕರ ಜೀವನಶೈಲಿ ಉತ್ತೇಜನಕ್ಕಾಗಿ ಜಂಟಿ ಉಪಕ್ರಮದ ಬ್ರಿಕ್ಸ್ ಮಾರ್ಗಸೂಚಿ (2026-2029)' ಜೊತೆಗೆ ಈ ಆದ್ಯತೆಗೆ ಚಾಲನೆ ನೀಡಲಾಯಿತು. ಇದು ಬೊಜ್ಜು ಮತ್ತು ಇತರ ಸಾಂಕ್ರಾಮಿಕವಲ್ಲದ ರೋಗಗಳಿಗೆ ತಡೆಗಟ್ಟುವ ಮತ್ತು ಆಯುಷ್ಯ-ಆಧಾರಿತ ವಿಧಾನಗಳನ್ನು ಉತ್ತೇಜಿಸುವ ಮೂಲಕ ತಾಂತ್ರಿಕ ಸಹಕಾರ, ಜ್ಞಾನ ವಿನಿಮಯ ಮತ್ತು ಸಮನ್ವಯ ಜಾಗೃತಿ ಉಪಕ್ರಮಗಳಿಗೆ ಸಹಯೋಗದ ವೇದಿಕೆಯಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ.
- ಸಾಂಪ್ರದಾಯಿಕ, ಪೂರಕ ಮತ್ತು ಸಂಯೋಜಿತ ವೈದ್ಯಕೀಯ ಬ್ರಿಕ್ಸ್ ತಜ್ಞರ ಕಾರ್ಯನಿರತ ಗುಂಪು: ಇದು ನೀತಿ ಸಂವಾದ, ಸಂಶೋಧನೆ ಮತ್ತು ಸಾಕ್ಷ್ಯ ಸೃಷ್ಟಿ, ಸಾಮರ್ಥ್ಯ ವೃದ್ಧಿ ಮತ್ತು ಶೈಕ್ಷಣಿಕ ವಿನಿಮಯ, ಡಿಜಿಟಲ್ ಜ್ಞಾನ ವೇದಿಕೆಗಳು, ಗುಣಮಟ್ಟ ಮತ್ತು ನಿಯಂತ್ರಕ ಮಾನದಂಡಗಳು ಹಾಗೂ ಸಾಂಪ್ರದಾಯಿಕ ಮತ್ತು ಸ್ಥಳೀಯ ಜ್ಞಾನದ ಸಂರಕ್ಷಣೆಯನ್ನು ಒಳಗೊಂಡಂತೆ ಟಿಸಿಐಎಂ ಕುರಿತು ರಚನಾತ್ಮಕ ಮತ್ತು ಸರ್ವಸಮ್ಮತಿಯ ಸಹಕಾರದ ವೇದಿಕೆಯಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ.
- ಮಾನಸಿಕ ಆರೋಗ್ಯದ ಮೇಲೆ ಗಮನ: ಭಾರತದ ನಿಮ್ಹಾನ್ಸ್ ಸಮನ್ವಯ ಕೇಂದ್ರವಾಗಿ ಕಾರ್ಯನಿರ್ವಹಿಸುವುದರೊಂದಿಗೆ, 'ಬ್ರಿಕ್ಸ್ ತರಬೇತಿ ಹಬ್ ಜಾಲ' ಮತ್ತು 'ಬ್ರಿಕ್ಸ್ ಉತ್ಕೃಷ್ಟತಾ ಕೇಂದ್ರಗಳ ಜಾಲ'ದ ಮೂಲಕ ಮಾನಸಿಕ ಆರೋಗ್ಯದ ಮೇಲೆ ಗಮನ ಹರಿಸಲಾಗಿದೆ. ನೈಪುಣ್ಯ ಅಭಿವೃದ್ಧಿ, ಕಾರ್ಯ-ಹಂಚಿಕೆ ಮತ್ತು ಪ್ರಮಾಣೀಕೃತ ತರಬೇತಿಯ ಮೂಲಕ ಮಾನಸಿಕ ಆರೋಗ್ಯಕ್ಕಾಗಿ ಮಾನವ ಸಂಪನ್ಮೂಲವನ್ನು ಅತ್ಯುತ್ತಮಗೊಳಿಸುವುದು ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿ ಮಾನಸಿಕ ಕ್ಷೇಮವನ್ನು ಸಂಯೋಜಿಸುವುದು ಇದರ ಗುರಿಯಾಗಿದೆ.
- ಸಾಂಪ್ರದಾಯಿಕ ಜ್ಞಾನದ ಮುಖ್ಯವಾಹಿನೀಕರಣ: 'ಜನ-ಕೇಂದ್ರಿತ ಮತ್ತು ಸಮುದಾಯ-ಆಧಾರಿತ ಅಳವಡಿಕೆಯ ಮೂಲಕ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಮುನ್ನಡೆಸುವ ಬ್ರಿಕ್ಸ್ ತತ್ವಗಳು' ಮತ್ತು 'ಸಾಂಪ್ರದಾಯಿಕ ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಗಳ ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವ ಬ್ರಿಕ್ಸ್ ಮಾರ್ಗದರ್ಶಿ ತತ್ವಗಳ' ಅಂಗೀಕಾರದ ಮೂಲಕ ಇದನ್ನು ಸಾಧಿಸಲಾಗುವುದು.
- ಸುಸ್ಥಿರ ಜೀವನಶೈಲಿಯನ್ನು ಮುನ್ನಡೆಸುವುದು: ನೀತಿಗಳು, ಕಾರ್ಯಕ್ರಮಗಳು, ಉಪಕ್ರಮಗಳು ಮತ್ತು ಪ್ರಮುಖ ಪದ್ಧತಿಗಳ ಕುರಿತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು; ವಿಷಯಾಧಾರಿತ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿ ಕಾರ್ಯಾಗಾರಗಳನ್ನು ನಡೆಸಲು; ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು ಸೇರಿದಂತೆ ಪಾಲುದಾರರ ನಡುವೆ ಸಂವಾದವನ್ನು ಸುಗಮಗೊಳಿಸಲು ಮತ್ತು ಪ್ರಕರಣ ಅಧ್ಯಯನಗಳನ್ನು ಸಂಗ್ರಹಿಸಲು 'ಜ್ಞಾನ ಹಂಚಿಕೆ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುನ್ನಡೆಸಲು ಬ್ರಿಕ್ಸ್ ಸಂಸ್ಥೆಗಳ ಜಾಲ' ಮತ್ತು 'ಸುಸ್ಥಿರ ಜೀವನಶೈಲಿ ವಾರ'ದ ಮೂಲಕ ಶ್ರಮಿಸಲಾಗುವುದು.
- ಕೌಶಲ್ಯಕ್ಕಾಗಿ ಬ್ರಿಕ್ಸ್ ಕನೆಕ್ಟ್: 'ಬ್ರಿಕ್ಸ್ ವರ್ಚುವಲ್ ಸಂಪರ್ಕ ಕಚೇರಿ'ಯ ಆಧಾರದ ಮೇಲೆ ರೂಪುಗೊಂಡ ಸಾಮರ್ಥ್ಯ ವೃದ್ಧಿ, ಉದ್ಯೋಗಾರ್ಹತೆ ಮತ್ತು ಹೊಸ ಕೌಶಲ್ಯಗಳು ಹಾಗೂ ತಂತ್ರಜ್ಞಾನಗಳಿಗಾಗಿ ಬ್ರಿಕ್ಸ್ ಸಹಕಾರ ಜಾಲ. ಇದು ಸಾಮಾಜಿಕ ಭದ್ರತೆಯನ್ನು ಮುನ್ನಡೆಸುವುದು, ಶ್ರಮಶಕ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ, ಕೌಶಲ್ಯ ಮತ್ತು ಉದ್ಯೋಗಾರ್ಹತೆ ಹಾಗೂ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಎಂಬ ನಾಲ್ಕು ಘಟಕಗಳನ್ನು ಹೊಂದಿರುವ ನಮ್ಯ ವೇದಿಕೆಯಾಗಿದೆ. ಇದರ ಅಡಿಯಲ್ಲಿನ ಸಹಕಾರವು ಸ್ವಯಂಪ್ರೇರಿತ ಮತ್ತು ಬಂಧನಕಾರಿಯಲ್ಲದ್ದಾಗಿದೆ.
- ಸ್ಮಾರ್ಟ್ ಗ್ರಿಡ್‌ಗಳು ಮತ್ತು ಇಂಧನ ಸಂಗ್ರಹಣೆ: 'ಇಂಧನ ಸಂಗ್ರಹಣೆ ಮತ್ತು ಸ್ಮಾರ್ಟ್ ಗ್ರಿಡ್‌ಗಳ ಮೇಲಿನ ಬ್ರಿಕ್ಸ್ ಮಾರ್ಗದರ್ಶಿ ತತ್ವಗಳನ್ನು' ಅಂಗೀಕರಿಸಲಾಯಿತು. ಜ್ಞಾನ ಹಂಚಿಕೆ, ಸಾಮರ್ಥ್ಯ ವೃದ್ಧಿ, ನೀತಿ ಮತ್ತು ನಿಯಂತ್ರಕ ಉತ್ತಮ ಪದ್ಧತಿಗಳ ವಿನಿಮಯ ಮತ್ತು ಬ್ರಿಕ್ಸ್ ದೇಶಗಳ ನಡುವೆ ಪ್ರಾಯೋಗಿಕ ಉಪಕ್ರಮಗಳ ಪ್ರೋತ್ಸಾಹಕ್ಕಾಗಿ ಸ್ವಯಂಪ್ರೇರಿತ ವೇದಿಕೆಯಾಗಿ ಕಾರ್ಯನಿರ್ವಹಿಸಲು 'ಸ್ಮಾರ್ಟ್ ಗ್ರಿಡ್‌ಗಳು ಮತ್ತು ಇಂಧನ ಸಂಗ್ರಹಣೆಗಾಗಿ ಬ್ರಿಕ್ಸ್ ಡಿಜಿಟಲ್ ಉತ್ಕೃಷ್ಟತಾ ಕೇಂದ್ರ'ವನ್ನು ಪ್ರಾರಂಭಿಸಲಾಯಿತು.
- ನಗರ ಮೂಲಸೌಕರ್ಯ ಬಲವರ್ಧನೆ: ಸುಸ್ಥಿರ ನಗರ ಚಲನಶೀಲತೆಯಲ್ಲಿ ಜ್ಞಾನ ಹಂಚಿಕೆ, ಸಾಮರ್ಥ್ಯ ವೃದ್ಧಿ ಮತ್ತು ತಾಂತ್ರಿಕ ಸಹಕಾರವನ್ನು ಉತ್ತೇಜಿಸುವ ವರ್ಚುವಲ್ ಸಹಯೋಗ ವೇದಿಕೆಯಾದ 'ಬ್ರಿಕ್ಸ್ ಅರ್ಬನ್ ಮೊಬಿಲಿಟಿ ಹಬ್' ಸ್ಥಾಪನೆ; ನಗರ ಯೋಜನೆ, ವಿನ್ಯಾಸ, ಹೂಡಿಕೆ, ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಹವಾಮಾನ ಮತ್ತು ವಿಪತ್ತು ಅಪಾಯದ ಅಂಶಗಳ ಸಂಯೋಜನೆಯನ್ನು ಬೆಂಬಲಿಸಲು 'ಹವಾಮಾನ ಸ್ಥಿತಿಸ್ಥಾಪಕ ನಗರ ಮೂಲಸೌಕರ್ಯಕ್ಕಾಗಿ ಬ್ರಿಕ್ಸ್ ಸ್ವಯಂಪ್ರೇರಿತ ತತ್ವಗಳ' ಅಂಗೀಕಾರ; ಮತ್ತು ಅನ್ವಯಿಕ ನಗರ ಸಂಶೋಧನೆ, ಗಡಿಯಾಚೆಗಿನ ಪರಸ್ಪರ ಕಲಿಕೆ ಮತ್ತು ನಿರಂತರ ಸಾಂಸ್ಥಿಕ ಸಹಯೋಗಕ್ಕಾಗಿ 'ಬ್ರಿಕ್ಸ್ ಅರ್ಬನ್ ರಿಸರ್ಚ್ ಅಂಡ್ ನಾಲೆಡ್ಜ್ ನೆಟ್‌ವರ್ಕ್' ಸ್ಥಾಪನೆಯ ಮೂಲಕ ನಗರ ಮೂಲಸೌಕರ್ಯವನ್ನು ಬಲಪಡಿಸಲಾಗಿದೆ.
- ಬ್ರಿಕ್ಸ್ ಎಂಎಸ್‌ಎಂಇ ಸಹಕಾರ ಪೋರ್ಟಲ್: ಎಲ್ಲಾ ಬ್ರಿಕ್ಸ್ ಸದಸ್ಯ ದೇಶಗಳಿಗೆ ಲಭ್ಯವಾಗುವ ಡಿಜಿಟಲ್ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲು 'ಬ್ರಿಕ್ಸ್ ಎಂಎಸ್‌ಎಂಇ ಸಹಕಾರ ಪೋರ್ಟಲ್', ಇದು ಎಂಎಸ್‌ಎಂಇಗಳು, ತಂತ್ರಜ್ಞಾನ ಕೇಂದ್ರಗಳು, ವ್ಯಾಪಾರ ಸಂಘಗಳು, ಹಣಕಾಸು ಸಂಸ್ಥೆಗಳು, ತರಬೇತಿ ಸಂಸ್ಥೆಗಳು, ನೀತಿ ನಿರೂಪಕರು ಮತ್ತು ಇತರ ಪಾಲುದಾರರಿಗೆ ಬೆಂಬಲ ನೀಡುತ್ತದೆ. ಇದರೊಂದಿಗೆ ಮಾರುಕಟ್ಟೆಗಳು ಮತ್ತು ಹಣಕಾಸಿಗೆ ಎಂಎಸ್‌ಎಂಇಗಳ ಪ್ರವೇಶವನ್ನು ಹೆಚ್ಚಿಸಲು 'ಎಂಎಸ್‌ಎಂಇ ಹಣಕಾಸಿನ ಮೇಲಿನ ಸಾಂಸ್ಥಿಕ ಸಂವಾದ' ಮತ್ತು 'ಎಂಎಸ್‌ಎಂಇಗಳ ಅಂತರರಾಷ್ಟ್ರೀಯಕರಣದ ಕ್ರಿಯಾ ಯೋಜನೆ' ಪ್ರಮುಖ ಫಲಿತಾಂಶಗಳಾಗಿವೆ.
- ಬ್ರಿಕ್ಸ್ ಪ್ರಯೋಗಾಲಯ ಜಾಲ: ಬ್ರಿಕ್ಸ್ ದೇಶಗಳಾದ್ಯಂತ ರಾಷ್ಟ್ರೀಯ ನೋಡಲ್ ಏಜೆನ್ಸಿಗಳು, ಆಯ್ಕೆಯಾದ ಇನ್ಕ್ಯುಬೇಟರ್‌ಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಸಂಪರ್ಕಿಸಲು, ಭಾಗವಹಿಸುವ ಇನ್ಕ್ಯುಬೇಟರ್‌ಗಳೊಂದಿಗೆ ನೋಂದಣಿ ಮತ್ತು ಸಂಪರ್ಕಗಳನ್ನು ಸುಗಮಗೊಳಿಸಲು ಮತ್ತು ಇತರ ಬ್ರಿಕ್ಸ್ ದೇಶಗಳ ಇನ್ಕ್ಯುಬೇಟರ್‌ಗಳಿಗೆ ಅರ್ಹ ಸ್ಟಾರ್ಟ್‌ಅಪ್‌ಗಳನ್ನು ಉಲ್ಲೇಖಿಸಲು ಅನುವು ಮಾಡಿಕೊಡುವ ಡಿಜಿಟಲ್ ಜಾಲ.
- ಬ್ರಿಕ್ಸ್ ಸ್ಟಾರ್ಟ್‌ಅಪ್ ನಾವೀನ್ಯತೆ ನಿಧಿ: ಆರಂಭಿಕ ಮತ್ತು ಬೆಳವಣಿಗೆಯ ಹಂತದ ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ಒದಗಿಸಲು ಮತ್ತು ಬ್ರಿಕ್ಸ್ ದೇಶಗಳಲ್ಲಿ ನಾವೀನ್ಯತೆ ಆಧಾರಿತ ಉದ್ಯಮಶೀಲತೆಯನ್ನು ಪೋಷಿಸಲು ಈ ನಿಧಿಯನ್ನು ಸ್ಥಾಪಿಸಲಾಗಿದೆ.
- ಬ್ರಿಕ್ಸ್ ವಿಜ್ಞಾನ ಮತ್ತು ಸಂಶೋಧನಾ ಶೇಖರಣಾಗಾರ: ಬ್ರಿಕ್ಸ್ ದೇಶಗಳ ನಡುವೆ ವೈಜ್ಞಾನಿಕ ಜ್ಞಾನದ ಸಂಗ್ರಹಣೆ ಮತ್ತು ಹಂಚಿಕೆಗಾಗಿ ರಚನಾತ್ಮಕ ವೇದಿಕೆಯಾಗಿ ಇದನ್ನು ಸ್ವಾಗತಿಸಲಾಗಿದೆ.
- ಬ್ರಿಕ್ಸ್ ಸರಕು ಸಾಗಣೆ ಪೂರೈಕೆ- ನೇರ ಲಾಜಿಸ್ಟಿಕ್ಸ್ ಸಹಕಾರ ಚೌಕಟ್ಟು: ವಿವಿಧ ವಲಯಗಳ ಸಾರಿಗೆ ಲಾಜಿಸ್ಟಿಕ್ಸ್ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಯನ್ನು ಬಲಪಡಿಸಲು ಸ್ವಯಂಪ್ರೇರಿತ, ಸರ್ವಸಮ್ಮತಿಯ ಚೌಕಟ್ಟು. ಇದು ತಾಂತ್ರಿಕ ವಿನಿಮಯ, ಸರಕು ಮತ್ತು ಹಡಗು ಸೇವೆಗಳ ಜ್ಞಾನ ಹಂಚಿಕೆ, ಸ್ಥಳೀಯ ಜೋಡಣೆ ಮತ್ತು ಉತ್ಪಾದನಾ ವ್ಯವಸ್ಥೆಗಳು ಹಾಗೂ ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸುವ ಮೂಲಕ ವಿಭಜಿತ ಪೂರೈಕೆ ಸರಪಳಿಗಳು ಮತ್ತು ದುರ್ಬಲ ಸಂಪರ್ಕವನ್ನು ಸರಿಪಡಿಸುವ ಗುರಿಯನ್ನು ಹೊಂದಿದೆ.
- ಜಾಗತಿಕ ಮೌಲ್ಯ ಸರಪಳಿಗಳ ಮೇಲಿನ ಬ್ರಿಕ್ಸ್ ಸಹಕಾರ: ಜಿವಿಸಿ ಕ್ರಿಯಾ ಯೋಜನೆ 2026-2030 ರ ಮೂಲಕ ತಾಂತ್ರಿಕ ಮಂಡಳಿ ಮತ್ತು ಜಿವಿಸಿ ಜಂಟಿ ಅಧ್ಯಯನವನ್ನು ಒಳಗೊಂಡಿದೆ. ಇದು ಜಾಗತಿಕ ಮೌಲ್ಯ ಸರಪಳಿಗಳು ಸ್ಥಿತಿಸ್ಥಾಪಕ, ಪರಿಣಾಮಕಾರಿ ಮತ್ತು ಉತ್ಪಾದಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಮಾರುಕಟ್ಟೆಗಳ ಮುಕ್ತತೆ ಹಾಗೂ ಆರ್ಥಿಕ ವೈವಿಧ್ಯೀಕರಣವನ್ನು ಮುನ್ನಡೆಸಲು ಸಹಾಯ ಮಾಡುತ್ತದೆ.
- ಸುಂಕದ ವಿಷಯಗಳಲ್ಲಿ ಸಹಕಾರ ಮತ್ತು ಪರಸ್ಪರ ಆಡಳಿತಾತ್ಮಕ ನೆರವಿನ ಮೇಲಿನ ಬ್ರಿಕ್ಸ್ ಒಪ್ಪಂದ: ವೇಗದ ವ್ಯಾಪಾರ, ಕಡಿಮೆ ವಹಿವಾಟು ವೆಚ್ಚಗಳು, ಹೆಚ್ಚು ಸುರಕ್ಷಿತ ಗಡಿಗಳು, ನಂಬಿಕಾರ್ಹ ವ್ಯಾಪಾರ ಸುಲಭಗೊಳಿಸುವಿಕೆ, ಸುಲಭ ವ್ಯವಹಾರ ಸೌಲಭ್ಯ ಮತ್ತು ಅಕ್ರಮ ವ್ಯಾಪಾರವನ್ನು ತಡೆಯಲು ಈ ಒಪ್ಪಂದಕ್ಕೆ ಸಹಿ ಹಾಕಲು ಸದಸ್ಯರು ತಮ್ಮ ತಾತ್ವಿಕ ಅನುಮೋದನೆ ಮತ್ತು ಸಮ್ಮತಿಯನ್ನು ದೃಢಪಡಿಸಿದರು.
- ಪ್ರಮಾಣೀಕರಣ ಕ್ಷೇತ್ರದಲ್ಲಿ ಸಹಕಾರ: ಬ್ರಿಕ್ಸ್ ರಾಷ್ಟ್ರೀಯ ಮಾನದಂಡಗಳ ಸಂಸ್ಥೆಯ ಮುಖ್ಯಸ್ಥರು ಅಂಕಿತ ಹಾಕಿದ ತಿಳುವಳಿಕಾ ಒಡಂಬಡಿಕೆಯು, ಮಾನದಂಡಗಳ ಅಭಿವೃದ್ಧಿ, ಅಳವಡಿಕೆ ಮತ್ತು ಅನುಷ್ಠಾನದಲ್ಲಿ ಸಹಯೋಗವನ್ನು ಬಲಪಡಿಸಲು, ಮಾಹಿತಿ ಹಂಚಿಕೆ, ತಾಂತ್ರಿಕ ಸಹಕಾರ, ಗುಣಮಟ್ಟದ ಮೂಲಸೌಕರ್ಯ ಬಲವರ್ಧನೆ ಮತ್ತು ವ್ಯಾಪಾರಕ್ಕೆ ಇರುವ ತಾಂತ್ರಿಕ ಅಡೆತಡೆಗಳನ್ನು ಕಡಿಮೆ ಮಾಡಲು ಔಪಚಾರಿಕ ಚೌಕಟ್ಟನ್ನು ಒದಗಿಸುತ್ತದೆ.
- ಬ್ರಿಕ್ಸ್ ಯುವ ಸಹಕಾರ ಚೌಕಟ್ಟು 2026: ಬ್ರಿಕ್ಸ್ ಯುವ ವಿಭಾಗದ ಅಡಿಯಲ್ಲಿ ಭವಿಷ್ಯದ ಸಂವಾದ, ಅನುಭವ ಹಂಚಿಕೆ ಮತ್ತು ಪ್ರಾಯೋಗಿಕ ಉಪಕ್ರಮಗಳನ್ನು ಮುನ್ನಡೆಸಲು ಸತತತೆ, ಸುಸಂಬದ್ಧತೆ ಮತ್ತು ರಚನಾತ್ಮಕ ಸಹಕಾರವನ್ನು ಬೆಂಬಲಿಸುವ ಉಲ್ಲೇಖಿತ ದಾಖಲೆಯಾಗಿ ಇದನ್ನು ಅಂಗೀಕರಿಸಲಾಗಿದೆ.
- ಕ್ರೀಡಾ ತಂತ್ರಜ್ಞಾನ ಸಹಕಾರ: ಉತ್ತಮ ಪದ್ಧತಿಗಳು, ಸಾಂಸ್ಥಿಕ ಅನುಭವಗಳು, ತಾಂತ್ರಿಕ ಮಾಹಿತಿ ಮತ್ತು ಸಂಶೋಧನಾ ಒಳಹರಿವುಗಳ ವಿನಿಮಯದ ರೂಪದಲ್ಲಿ ಕ್ರೀಡಾ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರವನ್ನು ಉತ್ತೇಜಿಸಲು ಹೊಸ ಕಾರ್ಯನಿರತ ಗುಂಪಿನ ಮೂಲಕ ಇದನ್ನು ಸಾಂಸ್ಥಿಕಗೊಳಿಸಲಾಗಿದೆ.
ಭಾರತದ 2026ರ ಬ್ರಿಕ್ಸ್ ಅಧ್ಯಕ್ಷತೆಯ ಅಡಿಯಲ್ಲಿದ್ದ ಸಚಿವರ ಮಟ್ಟದ ಸಭೆಗಳ ಫಲಿತಾಂಶಗಳು ಪ್ರಾಯೋಗಿಕ ಸಹಕಾರ, ಸಮಾವೇಶಿ ಬೆಳವಣಿಗೆ ಮತ್ತು ಜಾಗತಿಕ ದಕ್ಷಿಣದ ಬಲವಾದ ಧ್ವನಿಯ ಮೇಲಿನ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತವೆ.
2026: ಹೆಚ್ಚು ಸಮಾವೇಶಿ ಭವಿಷ್ಯದತ್ತ ಬ್ರಿಕ್ಸ್‌ನ ಮುನ್ನಡೆ
ಭಾರತದ 2026ರ ಬ್ರಿಕ್ಸ್ ಅಧ್ಯಕ್ಷತೆಯು ಜಾಗತಿಕವಾಗಿ ಗಮನಾರ್ಹ ಬದಲಾವಣೆಗಳು ನಡೆಯುತ್ತಿರುವ ಸಮಯದಲ್ಲಿ ಬಂದಿದೆ. ಅಂತರರಾಷ್ಟ್ರೀಯ ವ್ಯವಸ್ಥೆಯು ಆರ್ಥಿಕ ವಿಭಜನೆ, ತಾಂತ್ರಿಕ ಅಡಚಣೆಗಳು ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಹವಾಮಾನ ವೈಪರೀತ್ಯ ಮತ್ತು ಸಂಪನ್ಮೂಲಗಳ ಮೇಲಿನ ಒತ್ತಡವು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದೆ. ಈ ಪರಸ್ಪರ ಸಂಪರ್ಕಿತ ಸವಾಲುಗಳಿಗೆ ಸಮಾವೇಶಿ, ಪ್ರಾಯೋಗಿಕ ಮತ್ತು ವಿವಿಧ ರಾಷ್ಟ್ರೀಯ ಸನ್ನಿವೇಶಗಳಿಗೆ ಸ್ಪಂದಿಸುವ ಸಹಕಾರದ ಅಗತ್ಯವಿದೆ.
ಸಂವಾದ ಮತ್ತು ಸಮನ್ವಯದ ಕ್ರಮಗಳ ಮೂಲಕ ಈ ಸವಾಲುಗಳನ್ನು ಎದುರಿಸಲು ಬ್ರಿಕ್ಸ್ ಒಂದು ಪ್ರಮುಖ ಮಾರ್ಗವನ್ನು ಒದಗಿಸುತ್ತದೆ. ಇದರ ವಿಸ್ತರಿತ ಸದಸ್ಯತ್ವವು ಪ್ರಮುಖ ಉದಯೋನ್ಮುಖ ಅರ್ಥವ್ಯವಸ್ಥೆಗಳಿಂದ ವಿವಿಧ ದೃಷ್ಟಿಕೋನಗಳನ್ನು ತರುತ್ತದೆ. ಈ ಒಕ್ಕೂಟವು ಅಭಿವೃದ್ಧಿ, ಹವಾಮಾನ ಕಾರ್ಯಪಡೆ, ತಂತ್ರಜ್ಞಾನ, ಇಂಧನ ಮತ್ತು ಹಣಕಾಸಿನ ಸ್ಥಿತಿಸ್ಥಾಪಕತ್ವದ ಕುರಿತು ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ಅಲ್ಲದೆ, ಜಾಗತಿಕ ಸಂಸ್ಥೆಗಳ ಸುಧಾರಣೆಗಳ ಕುರಿತಾದ ಚರ್ಚೆಗಳಿಗೂ ಇದು ಕೊಡುಗೆ ನೀಡುತ್ತದೆ.
ಭಾರತಕ್ಕೆ ಸಂಬಂಧಿಸಿದಂತೆ, ಇದರ ಉದ್ದೇಶವು ಕೇವಲ ಒಕ್ಕೂಟದ ಗಾತ್ರವನ್ನು ವಿಸ್ತರಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಹೆಚ್ಚಿನ ಪ್ರಾತಿನಿಧ್ಯವನ್ನು ಅರ್ಥಪೂರ್ಣ ಸಹಕಾರ ಮತ್ತು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವುದಾಗಿದೆ. ಭಾರತದ ಅಧ್ಯಕ್ಷತೆಯು ಅಸ್ತಿತ್ವದಲ್ಲಿರುವ ವ್ಯವಸ್ಥೆಗಳ ಪರಿಣಾಮಕಾರತ್ವವನ್ನು ಬಲಪಡಿಸುವ ಜೊತೆಗೆ, ವಿವಿಧ ಸದಸ್ಯ ರಾಷ್ಟ್ರಗಳ ನಡುವೆ ಸರ್ವಸಮ್ಮತಿಯನ್ನು ನಿರ್ಮಿಸಲು ಶ್ರಮಿಸುತ್ತದೆ. ಹೆಚ್ಚು ಸಮಾವೇಶಿ ಜಾಗತಿಕ ವ್ಯವಸ್ಥೆಗಾಗಿ ಬ್ರಿಕ್ಸ್ ಅನ್ನು ಒಂದು ರಚನಾತ್ಮಕ ಶಕ್ತಿಯಾಗಿ ಬಲಪಡಿಸುವುದು ಭಾರತದ ಮುಖ್ಯ ಗುರಿಯಾಗಿದೆ.
References
Cabinet
Special Service and Features
Prime Minister's Office
Ministry of Commerce & Industry
Ministry of Environment, Forest and Climate Change
Ministry of Micro, Small & Medium Enterprises
BRICS
Ministry of External Affairs
Ministry Of Agriculture and Farmers Welfare
- https://sansad.in/getFile/loksabhaquestions/annex/185/AU271_UZhNkJ.pdf?source=pqals
Ministry of Health and Family Welfare
Click here to see pdf
*****
(Explainer ID: 159954)
आगंतुक पटल : 25
Provide suggestions / comments