Social Welfare
9ನೇ ರಾಷ್ಟ್ರೀಯ ಪೋಷಣ ಮಾಸಾಚರಣೆ
ಪೋಷಣೆಯ ಒಂದು ತಿಂಗಳ ಸಂಭ್ರಮಾಚರಣೆ
Posted On:
08 SEP 2026 5:10PM
|
ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ಹದಿಹರೆಯದವರು ಮತ್ತು ಅವರ ಕುಟುಂಬಗಳಲ್ಲಿ ಪೋಷಣೆ, ಆರೋಗ್ಯ ಮತ್ತು ಪಾಲನೆಗೆ ಸಂಬಂಧಿಸಿದ ಪ್ರಮುಖ ಅಭ್ಯಾಸಗಳನ್ನು ಬಲಪಡಿಸಲು ಹಾಗೂ ಸಮುದಾಯಗಳನ್ನು ಒಗ್ಗೂಡಿಸಲು 'ರಾಷ್ಟ್ರೀಯ ಪೋಷಣ್ ಮಾಸಾಚರಣೆ'ಯನ್ನು (ರಾಷ್ಟ್ರೀಯ ಪೋಷಕಾಂಶಗಳ ತಿಂಗಳು) ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಆಚರಿಸಲಾಗುತ್ತದೆ. ಸೆಪ್ಟೆಂಬರ್ 9, 2026 ರಂದು ಪ್ರಾರಂಭವಾಗಲಿರುವ 9ನೇ ಪೋಷಣ ಮಾಸ 2026, ಅಂಗನವಾಡಿ ಕೇಂದ್ರಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತದೆ. ಇದು ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಗತ್ಯವಿರುವ ಸಮತೋಲಿತ ಮತ್ತು ಪ್ರೋಟೀನ್ ಸಭರಿತ ಪೋಷಕಾಂಶಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಸರಣಿ ಪೋಷಣ್ ಮಾಹ್ ಅಭಿಯಾನಗಳ ಮೂಲಕ ಮಾತೃ ಪೋಷಣೆ, ಶಿಶು ಮತ್ತು ಸಣ್ಣ ಮಕ್ಕಳ ಪೋಷಣೆ ಅಭ್ಯಾಸಗಳು, ಬೆಳವಣಿಗೆಯ ಮೇಲ್ವಿಚಾರಣೆ ಮತ್ತು ನೈರ್ಮಲ್ಯದ ಕುರಿತು ಜಾಗೃತಿ ಹಾಗೂ ಧನಾತ್ಮಕ ವರ್ತನಾ ಬದಲಾವಣೆಗಳನ್ನು ಬಲಪಡಿಸಲಾಗಿದೆ; ಜೊತೆಗೆ ದೇಶಾದ್ಯಂತ ಪೋಷಣೆಯ ಫಲಿತಾಂಶಗಳನ್ನು ಸುಧಾರಿಸುವಲ್ಲಿ ವಿಶಾಲ ಮಟ್ಟದ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.
|
ಹಿನ್ನೆಲೆ
ಅಪೌಷ್ಟಿಕತೆಯು ಭಾರತದ ಪ್ರಮುಖ ಸಾರ್ವಜನಿಕ ಆರೋಗ್ಯ ಸವಾಲುಗಳಲ್ಲಿ ಒಂದಾಗಿ ಉಳಿದಿದ್ದು, ಮಹಿಳೆಯರು ಮತ್ತು ಮಕ್ಕಳ ಜೀವನಚಕ್ರದಾದ್ಯಂತ ಅವರ ಆರೋಗ್ಯ, ಬೆಳವಣಿಗೆ, ಕಲಿಕೆ ಮತ್ತು ಉತ್ಪಾದಕತೆಯ ಮೇಲೆ ಪ್ರಭಾವ ಬೀರುತ್ತಿದೆ. ಇದಕ್ಕೆ ಸಮಗ್ರವಾಗಿ ಸ್ಪಂದಿಸಲು, ಭಾರತ ಸರ್ಕಾರವು ಮಾರ್ಚ್ 2018 ರಲ್ಲಿ ಪೋಷಣೆಯನ್ನು ಅಭಿವೃದ್ಧಿ ಕಾರ್ಯಸೂಚಿಯ ಕೇಂದ್ರಬಿಂದುವಾಗಿ ಇರಿಸಿ, ಬಹು-ಸಚಿವಾಲಯಗಳ ಸಂಯೋಜಿತ ಅಭಿಯಾನವಾಗಿ 'ಪೋಷಣ್ ಅಭಿಯಾನ'ವನ್ನು ಪ್ರಾರಂಭಿಸಿತು.
2021-22 ರ ಕೇಂದ್ರ ಆಯವ್ಯಯದಲ್ಲಿ (ಬಜೆಟ್), ಈ ಉಪಕ್ರಮಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ನಾಯಕತ್ವದಲ್ಲಿ ಭಾರತದ ಏಕೀಕೃತ ರಾಷ್ಟ್ರೀಯ ಪೋಷಣೆ ಅಭಿಯಾನವಾದ 'ಮಿಷನ್ ಪೋಷಣ್ 2.0' ರ ಅಡಿಯಲ್ಲಿ ಸಂಯೋಜಿಸಲಾಯಿತು. ಪೋಷಣ್ 2.0 ಮೂರು ಪ್ರಮುಖ ಯೋಜನೆಗಳನ್ನು ಒಂದೇ ಚೌಕಟ್ಟಿನಲ್ಲಿ ತರುತ್ತದೆ:
- ಪೋಷಣ್ ಅಭಿಯಾನ: ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆ, 'ಜನ ಆಂದೋಲನ' ಸಾರ್ವಜನಿಕ ಜಾಗೃತಿ ಮತ್ತು ವರ್ತನಾ ಬದಲಾವಣೆ.
- ಅಂಗನವಾಡಿ ಸೇವೆಗಳು / ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು: ಪೂರಕ ಪೌಷ್ಟಿಕಾಹಾರ, ಬಿಸಿ ಬೇಯಿಸಿದ ಊಟ ಮತ್ತು ಆರಂಭಿಕ ಬಾಲ್ಯದ ಆರೈಕೆ.
- ಕಿಶೋರಿಯರಿಗಾಗಿ ಯೋಜನೆ: ಶಾಲೆಯಿಂದ ಹೊರಗುಳಿದ/ಹದಿಹರೆಯದ ಹೆಣ್ಣುಮಕ್ಕಳಿಗೆ ಪೌಷ್ಟಿಕಾಂಶದ ಬೆಂಬಲ.
|
ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಆಚರಿಸಲಾಗುವ 'ರಾಷ್ಟ್ರೀಯ ಪೋಷಣ ಮಾಸಾಚರಣೆ'ಯು (ರಾಷ್ಟ್ರೀಯ ಪೋಷಣೆ ತಿಂಗಳು), 'ಮಿಷನ್ ಪೋಷಣ್ 2.0' ಯೋಜನೆ ಮತ್ತು ಅದರ ಉದ್ದೇಶಗಳ ಕುರಿತು ಸರ್ಕಾರವು ಜಾಗೃತಿ ಮೂಡಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ.
9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆಗೆ 2026 ರ ಸೆಪ್ಟೆಂಬರ್ 9 ರಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ರುದ್ರಾಕ್ಷಿ ಇಂಟರ್ನ್ಯಾಷನಲ್ ಕೋಆಪರೇಷನ್ ಆಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮವು ಅಂಗನವಾಡಿ ಕೇಂದ್ರಗಳ ಪ್ರಾಮುಖ್ಯತೆಯನ್ನು ಗೌರವಿಸುವ ಗುರಿಯನ್ನು ಹೊಂದಿದೆ. ಅತ್ಯಂತ ದೂರದ ಹಾಗೂ ಗ್ರಾಮೀಣ ಸಮುದಾಯಗಳಲ್ಲಿನ ಮಕ್ಕಳಿಗೂ ಅತ್ಯಗತ್ಯ ಆರೈಕೆ ಮತ್ತು ಬೆಂಬಲವನ್ನು ತಲುಪಿಸುವ ಅಂಗನವಾಡಿ ಕೇಂದ್ರಗಳು ಜಗತ್ತಿನ ಅತ್ಯಂತ ದೊಡ್ಡ ಶಿಶುಪಾಲನಾ ಜಾಲವಾಗಿವೆ. ಈ ವರ್ಷದ ಕೇಂದ್ರ ಕಲ್ಪನೆ "ನಮ್ಮ ಅಂಗನವಾಡಿ ನಮ್ಮ ಜವಾಬ್ಧಾರಿ” ಎಂದಾಗಿದ್ದು, ಅಂಗನವಾಡಿ ಕೇಂದ್ರಗಳ ಜಂಟಿ ಮಾಲೀಕತ್ವ ಮತ್ತು ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಪ್ರತಿಯೊಬ್ಬ ಪ್ರಜೆಗೆ ಕರೆ ನೀಡುತ್ತದೆ.

|
9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ
"ನಮ್ಮ ಅಂಗನವಾಡಿ, ನಮ್ಮ ಜವಾಬ್ಧಾರಿ" ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ 'ರಾಷ್ಟ್ರೀಯ ಪೋಷಣ್ ಮಾಸಾಚರಣೆ 2026' ಆಚರಿಸಲಾಗುತ್ತಿದ್ದು, ಇದು ಪೋಷಣೆಯ ಜಂಟಿ ಹೊಣೆಗಾರಿಕೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವುದರ ಜೊತೆಗೆ, ಪೋಷಣೆ, ಆರೈಕೆ ಮತ್ತು ಆರಂಭಿಕ ಬಾಲ್ಯದ ಅಭಿವೃದ್ಧಿಗಾಗಿ ಸಮುದಾಯ ನೇತೃತ್ವದ ಚಟುವಟಿಕೆಗಳ ಕೇಂದ್ರಬಿಂದುವಾಗಿ ಅಂಗನವಾಡಿ ಕೇಂದ್ರಗಳನ್ನು ತರಲು ಶ್ರಮಿಸುತ್ತದೆ. ಇದನ್ನು ಪರಸ್ಪರ ಪೂರಕವಾಗಿರುವ ಐದು ಪ್ರಮುಖ ಆದ್ಯತೆಗಳ ಆಧಾರದ ಮೇಲೆ ಜಾರಿಗೊಳಿಸಲು ಪ್ರಸ್ತಾವಿಸಲಾಗಿದೆ:
ಆಹಾರದ ವೈವಿಧ್ಯತೆಯ ಪ್ರಚಾರ: ಸೂಕ್ತ ಪ್ರೋಟೀನ್ ಸೇವನೆ, ವೈವಿಧ್ಯಮಯ ಆಹಾರ ಗುಂಪುಗಳು ಮತ್ತು ಸ್ಥಳೀಯ ಆಹಾರ ಪದಾರ್ಥಗಳ ಬಳಕೆಗೆ ವಿಶೇಷ ಒತ್ತು ನೀಡುವುದು.
- ತಾಜಾ ಮತ್ತು ವೈವಿಧ್ಯಮಯ ಬಿಸಿ ಬೇಯಿಸಿದ ಊಟದ ಪ್ರೋತ್ಸಾಹ: ಪೂರಕ ಪೌಷ್ಟಿಕಾಹಾರ ಕಾರ್ಯಕ್ರಮದ ಅಡಿಯಲ್ಲಿ ಮೆನು ಸರದಿ (ರೊಟೇಷನ್), ನೈರ್ಮಲ್ಯ ಮತ್ತು ಗುಣಮಟ್ಟದ ಭರವಸೆಯ ಮೂಲಕ ತಾಜಾ ಹಾಗೂ ವೈವಿಧ್ಯಮಯ ಬಿಸಿ ಬೇಯಿಸಿದ ಊಟವನ್ನು ಪ್ರೋತ್ಸಾಹಿಸುವುದು.
- ಸಮುದಾಯದ ಹೊಣೆಗಾರಿಕೆ ಮತ್ತು ಜವಾಬ್ದಾರಿಯ ಬಲವರ್ಧನೆ: ಹೊಸದಾಗಿ ರಚಿಸಲಾದ 'ಅಂಗನವಾಡಿ ನಿರ್ವಹಣಾ ಸಮಿತಿಗಳು' (AMCs - ಜೂನ್ 23, 2026 ರಂದು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಾಗಿದೆ) ಮತ್ತು ಎಸ್‌ಎನ್‌ಪಿ ಮೆನು ಬೋರ್ಡ್‌ಗಳ ಪ್ರದರ್ಶನದ ಮೂಲಕ ಪೋಷಣ್‌ಗಾಗಿ ಸಮುದಾಯದ ಮಾಲೀಕತ್ವ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವುದು.
- ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಮೂಲಸ್ತಂಭಗಳು: ಜ್ಞಾನಾತ್ಮಕ (ಮಾನಸಿಕ) ಅಭಿವೃದ್ಧಿ ಮತ್ತು ಸೂಕ್ತ ಪೋಷಣೆಯನ್ನು ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಮೂಲಸ್ತಂಭಗಳಾಗಿ ಪ್ರೋತ್ಸಾಹಿಸುವುದು ಹಾಗೂ ಮಗು ತಿನ್ನುವ ಆಹಾರ ಮತ್ತು ಮಗು ಕಲಿಯುವ ವಿಧಾನದ ನಡುವಿನ ಅವಿಭಾಜ್ಯ ಸಂಪರ್ಕವನ್ನು ಎತ್ತಿಹಿಡಿಯುವುದು.
- ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ 10 ವರ್ಷಗಳ ಆಚರಣೆ: 'ರಾಷ್ಟ್ರೀಯ ಪೋಷಣ್ ಮಾಸಾಚರಣೆ 2026' ರ ಸಂದರ್ಭದಲ್ಲಿ ಭಾರತದ ಪ್ರಮುಖ ಮಾತೃತ್ವ ವಂದನಾ ಕಾರ್ಯಕ್ರಮವಾದ ಪಿಎಂಎಂವಿವೈ ಯ 10 ವರ್ಷಗಳನ್ನು ಸ್ಮರಿಸಲಾಗುವುದು. ಇದು ಮಾತೃ ಪೋಷಣೆಗೆ ಬೆಂಬಲ ನೀಡುವಲ್ಲಿ, ಆರೋಗ್ಯಪೂರ್ಣ ನಡವಳಿಕೆಗಳನ್ನು ಪ್ರೋತ್ಸಾಹಿಸುವಲ್ಲಿ ಮತ್ತು ಗರ್ಭಾವಸ್ಥೆಯ ಅವಧಿಯಲ್ಲಿ ಆದಾಯದ ಬೆಂಬಲ ಒದಗಿಸುವಲ್ಲಿ ನೀಡಿದ ಕೊಡುಗೆಯನ್ನು ಎತ್ತಿಹಿಡಿಯುತ್ತದೆ; ಜೊತೆಗೆ ಮಗುವಿನ ಆರೋಗ್ಯಕರ ಬೆಳವಣಿಗೆ, ಜ್ಞಾನಾತ್ಮಕ ವಿಕಾಸ ಮತ್ತು ಜೀವನಪರ್ಯಂತದ ಯೋಗಕ್ಷೇಮಕ್ಕಾಗಿ ಜೀವನದ ಮೊದಲ 1,000 ದಿನಗಳಲ್ಲಿ ಮಾತೃ ಪೋಷಣೆ ಮತ್ತು ಆರೈಕೆಯ ನಿರ್ಣಾಯಕ ಪ್ರಾಮುಖ್ಯತೆಯನ್ನು ಪುನರುಚ್ಚರಿಸುತ್ತದೆ.
ರಾಷ್ಟ್ರೀಯ ಪೋಷಣ್ ಮಾಸಾಚರಣೆ 2026 ಕ್ಕೆ ಪ್ರಸ್ತಾವಿತ ಪ್ರಮುಖ ವಿಷಯಗಳು
1. ಆಹಾರದ ವೈವಿಧ್ಯತೆ ಮತ್ತು ಸೂಕ್ತ ಪ್ರೋಟೀನ್
ಧಾನ್ಯಗಳು ಮತ್ತು ಸಿರಿಧಾನ್ಯಗಳು, ಬೇಳೆಕಾಳುಗಳು, ಹಣ್ಣುಗಳು ಮತ್ತು ತರಕಾರಿಗಳು, ಬೀಜಗಳು ಮತ್ತು ಎಣ್ಣೆಕಾಳುಗಳು, ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನೊಳಗೊಂಡ ವೈವಿಧ್ಯಮಯ ಆಹಾರವು ಸಸ್ಯ ಮತ್ತು ಪ್ರಾಣಿ ಮೂಲಗಳಿಂದ ಸೂಕ್ತ ಪ್ರೋಟೀನ್ ಅನ್ನು ಒದಗಿಸುತ್ತದೆ. ಇದು ಪೋಷಕಾಂಶಗಳ ಅಗತ್ಯತೆಗಳನ್ನು ಪೂರೈಸಲು, ಆರೋಗ್ಯಕರ ಬೆಳವಣಿಗೆ ಮತ್ತು ವಿಕಾಸಕ್ಕೆ ಬೆಂಬಲ ನೀಡಲು ಹಾಗೂ ಎಲ್ಲಾ ರೀತಿಯ ಅಪೌಷ್ಟಿಕತೆಯನ್ನು ತಡೆಗಟ್ಟಲು ಅತ್ಯಗತ್ಯ. ಜೀವಿತಾವಧಿಯುದ್ದಕ್ಕೂ, ವಿಶೇಷವಾಗಿ ಪೂರಕ ಆಹಾರ ನೀಡುವ ಅವಧಿಯಲ್ಲಿ ಆಹಾರ ವೈವಿಧ್ಯತೆಯನ್ನು ಪ್ರೋತ್ಸಾಹಿಸುವುದು ಪೋಷಣೆಯ ಫಲಿತಾಂಶಗಳನ್ನು ಸುಧಾರಿಸಲು ಮತ್ತು ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಆಹಾರ ಅಭ್ಯಾಸಗಳನ್ನು ಬೆಳೆಸಲು ಮೂಲಭೂತವಾಗಿದೆ.
ಕೈಗೊಳ್ಳಬಹುದಾದ ಚಟುವಟಿಕೆಗಳು:
- ಆರೋಗ್ಯಕರ ಮತ್ತು ವೈವಿಧ್ಯಮಯ ಖಾದ್ಯಗಳ ಪ್ರಾತ್ಯಕ್ಷಿಕೆ: ವಿವಿಧ ಆಹಾರ ಗುಂಪುಗಳು, ಸಿರಿಧಾನ್ಯಗಳು, ಬೇಳೆಕಾಳುಗಳು, ತರಕಾರಿಗಳು, ಹಣ್ಣುಗಳು, ಡ್ರೈ ಫ್ರೂಟ್ಸ್, ಹಾಲು ಮತ್ತು ಹಾಲಿನ ಉತ್ಪನ್ನಗಳು ಹಾಗೂ ಮೊಟ್ಟೆಗಳಂತಹ ಕೈಗೆಟುಕುವ ಮತ್ತು ಸ್ಥಳೀಯವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಸಿ ಅಂಗನವಾಡಿ ಕೇಂದ್ರಗಳಲ್ಲಿ ಆರೋಗ್ಯಕರ ಖಾದ್ಯಗಳ ನೇರ ಪ್ರಾತ್ಯಕ್ಷಿಕೆಯನ್ನು ನಡೆಸುವುದು.
- ಪೋಷಣ್ ಮೇಳಗಳು: ಸಂವಾದಾತ್ಮಕ ಪ್ರದರ್ಶನಗಳು ಮತ್ತು ಖಾದ್ಯ ಪ್ರಾತ್ಯಕ್ಷಿಕೆಗಳ ಮೂಲಕ ಸ್ಥಳೀಯ ಪೌಷ್ಟಿಕ ಆಹಾರಗಳನ್ನು ಪ್ರದರ್ಶಿಸಲು ಪೋಷಣ್ ಮೇಳಗಳನ್ನು ಆಯೋಜಿಸುವುದು; ಹಾಗೂ ಪ್ರತಿಯೊಂದು ವಯೋಮಾನದವರಿಗೂ ಸಮತೋಲಿತ ಮತ್ತು ವೈವಿಧ್ಯಮಯ ಆಹಾರ ತಯಾರಿಕೆಯ ಕುರಿತು ಮಾರ್ಗದರ್ಶನ (ಕೌನ್ಸೆಲಿಂಗ್) ನೀಡುವುದು.
- 'ಪ್ರೋಟೀನ್-ಸಮೃದ್ಧ ಆಹಾರ' ಅಭ್ಯಾಸ ಅಭಿಯಾನ: ದಿನನಿತ್ಯದ ಆಹಾರದಲ್ಲಿ ಪ್ರೋಟೀನ್ ಸೇರಿಸುವ ಪ್ರಾಯೋಗಿಕ ಮತ್ತು ಕೈಗೆಟುಕುವ ಮಾರ್ಗಗಳನ್ನು ವಿವರಿಸುತ್ತಾ, ಸಸ್ಯ ಮತ್ತು ಪ್ರಾಣಿ ಮೂಲಗಳ ಪ್ರೋಟೀನ್-ಸಮೃದ್ಧ ಆಹಾರಗಳು, ಬೇಳೆಕಾಳುಗಳು, ಕಾಳುಗಳು, ಬೀಜಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು ಹಾಗೂ ಮೊಟ್ಟೆಗಳ ಕುರಿತು ಜಾಗೃತಿ ಚಟುವಟಿಕೆಗಳನ್ನು ನಡೆಸುವುದು.
- ಪೋಷಣ್ ವಾಟಿಕಾ ಉತ್ಪನ್ನಗಳು ಮತ್ತು ಸ್ಥಳೀಯ ಆಹಾರಗಳ ಪ್ರದರ್ಶನ: ಪೋಷಣ್ ವಾಟಿಕಾಗಳಲ್ಲಿ ಬೆಳೆದ ಬೆಳೆಗಳು ಮತ್ತು ಸ್ಥಳೀಯವಾಗಿ ಲಭ್ಯವಿರುವ ಕಾಲೋಚಿತ (ಸೀಸನಲ್) ಆಹಾರಗಳನ್ನು ಪ್ರದರ್ಶಿಸುವುದು, ಜೊತೆಗೆ ಗೃಹಬಳಕೆಯ ಊಟದಲ್ಲಿ ಮತ್ತು ಸಣ್ಣ ಮಕ್ಕಳ ಪೂರಕ ಆಹಾರದಲ್ಲಿ ಅವುಗಳ ನಿಯಮಿತ ಬಳಕೆಯನ್ನು ಪ್ರೋತ್ಸಾಹಿಸುವುದು.
2. ಅಂಗನವಾಡಿ ಕೇಂದ್ರಗಳಲ್ಲಿ ತಾಜಾ ಬಿಸಿ ಬೇಯಿಸಿದ ಊಟ
ಫಲಾನುಭವಿಗಳಿಗೆ ನಿಯಮಿತವಾಗಿ ತಾಜಾ, ವೈವಿಧ್ಯಮಯ ಮತ್ತು ಪೌಷ್ಟಿಕ ಬಿಸಿ ಬೇಯಿಸಿದ ಊಟವನ್ನು ತಲುಪಿಸುವುದನ್ನು ಖಚಿತಪಡಿಸುವುದು ಪೂರಕ ಪೌಷ್ಟಿಕಾಹಾರ ಕಾರ್ಯಕ್ರಮದ ಗುಣಮಟ್ಟ, ಬಳಕೆ ಮತ್ತು ದಕ್ಷತೆಯನ್ನು ಸುಧಾರಿಸುವಲ್ಲಿ ಪ್ರಮುಖವಾಗಿದೆ; ಇದು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ನಿಯಮಿತ ಹಾಜರಾತಿಯನ್ನು ಪ್ರೋತ್ಸಾಹಿಸುತ್ತದೆ. ಸಿರಿಧಾನ್ಯಗಳು, ಬೇಳೆಕಾಳುಗಳು ಮತ್ತು ಕಾಲೋಚಿತ ತರಕಾರಿಗಳು ಸೇರಿದಂತೆ ಸ್ಥಳೀಯವಾಗಿ ಲಭ್ಯವಿರುವ ಪದಾರ್ಥಗಳಿಂದ ತಯಾರಿಸಿದ ತಾಜಾ ಮತ್ತು ನೈರ್ಮಲ್ಯದ ಊಟಕ್ಕೆ ಒತ್ತು ನೀಡುವುದು ಆಹಾರದ ವೈವಿಧ್ಯತೆಯ ಪ್ರಾಮುಖ್ಯತೆಯನ್ನು ಬಲಪಡಿಸುತ್ತದೆ ಹಾಗೂ ಗೃಹ ಮಟ್ಟದಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಬೆಂಬಲಿಸುತ್ತದೆ. 'ಪೋಷಣ್ ಮಾಹ್ 2026' ವಾರಕ್ಕೊಮ್ಮೆ ಮೆನು ಸರದಿ, ಸಮುದಾಯದ ಭಾಗವಹಿಸುವಿಕೆ ಮತ್ತು ಬಲವಾದ ಗುಣಮಟ್ಟದ ಭರವಸೆಯ ವ್ಯವಸ್ಥೆಗಳ ಮೂಲಕ ಬಿಸಿ ಬೇಯಿಸಿದ ಊಟದ ಗುಣಮಟ್ಟ ಮತ್ತು ಸ್ವೀಕಾರಾರ್ಹತೆಯನ್ನು ಬಲಪಡಿಸಲು ಅವಕಾಶವನ್ನು ಒದಗಿಸುತ್ತದೆ.
ಕೈಗೊಳ್ಳಬಹುದಾದ ಚಟುವಟಿಕೆಗಳು:
- ವಾರದ ಮೆನು ಸರದಿ: ಸ್ಥಳೀಯವಾಗಿ ಲಭ್ಯವಿರುವ ಪದಾರ್ಥಗಳು, ಸಿರಿಧಾನ್ಯಗಳು, ಬೇಳೆಕಾಳುಗಳು ಮತ್ತು ಕಾಲೋಚಿತ ತರಕಾರಿಗಳನ್ನು ಬಳಸಿ ವಾರದ ವಿವಿಧ ದಿನಗಳಲ್ಲಿ ವೈವಿಧ್ಯಮಯ ಬಿಸಿ ಬೇಯಿಸಿದ ಊಟವನ್ನು ಒದಗಿಸಲು ಅಂಗನವಾಡಿ ಕೇಂದ್ರಗಳಲ್ಲಿ ವಾರದ ಮೆನು ಸರದಿಯನ್ನು ಜಾರಿಗೆ ತರಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸುವುದು.
- ಬಿಸಿ ಬೇಯಿಸಿದ ಊಟದ ಪ್ರಾತ್ಯಕ್ಷಿಕೆಗಳು: ಎಸ್‌ಎನ್‌ಪಿ ಮಾರ್ಗದರ್ಶಿ ಸೂತ್ರಗಳಂತೆ ತಯಾರಿಸಲಾದ ಬಿಸಿ ಬೇಯಿಸಿದ ಊಟದ ನೇರ ಪ್ರಾತ್ಯಕ್ಷಿಕೆಗಳನ್ನು ನೀಡುವುದು; ಸೂಕ್ತ ಪದಾರ್ಥಗಳು, ನೈರ್ಮಲ್ಯದ ತಯಾರಿಕಾ ಅಭ್ಯಾಸಗಳು ಮತ್ತು ಸಮತೋಲಿತ ಆಹಾರ ಸಂಯೋಜನೆಯನ್ನು ಎತ್ತಿಹಿಡಿಯುವುದು.
- ಮಿಷನ್-ಮೋಡ್‌ನಲ್ಲಿ ಬಿಸಿ ಬೇಯಿಸಿದ ಊಟದ ಗುಣಮಟ್ಟ ತಪಾಸಣೆ: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಬಲಪಡಿಸಲು 'ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ' (FSSAI) ಸಹಯೋಗದೊಂದಿಗೆ ದೇಶಾದ್ಯಂತ ಬಿಸಿ ಬೇಯಿಸಿದ ಊಟದ ಪರೀಕ್ಷೆಯನ್ನು ನಡೆಸುವುದು.
ಸಮುದಾಯ ಮಟ್ಟದ ಬಿಸಿ ಬೇಯಿಸಿದ ಊಟದ ರುಚಿ ನೋಡುವ ಕಾರ್ಯಕ್ರಮಗಳು: ಪೋಷಕರು, ಪಂಚಾಯತ್‌ಗಳು, ಸ್ವಸಹಾಯ ಸಂಘಗಳು ಮತ್ತು ಅಂಗನವಾಡಿ ನಿರ್ವಹಣಾ ಸಮಿತಿಗಳ ಭಾಗವಹಿಸುವಿಕೆಯೊಂದಿಗೆ ಅಂಗನವಾಡಿ ಕೇಂದ್ರಗಳಲ್ಲಿ ಬಿಸಿ ಬೇಯಿಸಿದ ಊಟದ ರುಚಿ ನೋಡುವ ಸಮುದಾಯ ಕಾರ್ಯಕ್ರಮಗಳನ್ನು ಆಯೋಜಿಸುವುದು.
3. ಸಮುದಾಯದ ಹೊಣೆಗಾರಿಕೆ ಮತ್ತು ಪಾರದರ್ಶಕತೆ
ಸಚಿವಾಲಯವು ಜೂನ್ 23, 2026 ರಂದು ಹೊರಡಿಸಿದ ಮಾರ್ಗದರ್ಶಿ ಸೂತ್ರಗಳಂತೆ ಇತ್ತೀಚೆಗೆ 'ಅಂಗನವಾಡಿ ನಿರ್ವಹಣಾ ಸಮಿತಿಗಳನ್ನು' ರಚಿಸಿರುವುದು, ಪೂರಕ ಪೌಷ್ಟಿಕಾಹಾರ ಕಾರ್ಯಕ್ರಮದಲ್ಲಿ ಸಮುದಾಯದ ಭಾಗವಹಿಸುವಿಕೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು ಸೂಕ್ತ ಅವಕಾಶವನ್ನು ಒದಗಿಸಿದೆ. ಅಂಗನವಾಡಿ ಮೇಲ್ವಿಚಾರಕರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುವ ಈ ಸಮಿತಿಗಳು ಸಾರ್ವಜನಿಕ ಉಸ್ತುವಾರಿಯನ್ನು ಉತ್ತೇಜಿಸಲು, ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಸೇವಾ ವಿತರಣೆಯ ಗುಣಮಟ್ಟ ಮತ್ತು ದಕ್ಷತೆಯನ್ನು ಸುಧಾರಿಸುವ ಉದ್ದೇಶವನ್ನು ಹೊಂದಿವೆ. ಜಾಗೃತಿ ಮೂಡಿಸುವಿಕೆ, ಫಲಾನುಭವಿಗಳ ಸಜ್ಜುಗೊಳಿಸುವಿಕೆ ಹಾಗೂ ಪೋಷಣೆ ಮತ್ತು ಆರಂಭಿಕ ಬಾಲ್ಯದ ಆರೈಕೆ ಸೇವೆಗಳ ಮೇಲ್ವಿಚಾರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಈ ಸಮಿತಿಗಳನ್ನು ಕ್ರಿಯಾಶೀಲಗೊಳಿಸಲು 'ಪೋಷಣ್ ಮಾಹ್ 2026' ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಈ ಪ್ರಯತ್ನಕ್ಕೆ ಪೂರಕವಾಗಿ, ಅಂಗನವಾಡಿ ಕೇಂದ್ರಗಳಲ್ಲಿ ಪೂರಕ ಪೌಷ್ಟಿಕಾಹಾರ ಕಾರ್ಯಕ್ರಮದ ) ಮೆನು ಬೋರ್ಡ್‌ಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವುದರಿಂದ ಫಲಾನುಭವಿಗಳ ಹಕ್ಕುಗಳು ಮತ್ತು ದೈನಂದಿನ ಮೆನು ಸಮುದಾಯಕ್ಕೆ ಗೋಚರಿಸುವಂತಾಗಿ ಪಾರದರ್ಶಕತೆ ಹೆಚ್ಚಾಗುತ್ತದೆ. ಅಂಗನವಾಡಿ ನಿರ್ವಹಣಾ ಸಮಿತಿಗಳು ಮತ್ತು ಮೆನು ಬೋರ್ಡ್‌ಗಳು ಒಟ್ಟಾಗಿ ಮೆನು ಪಾಲನೆ, ಊಟದ ಗುಣಮಟ್ಟ ಮತ್ತು ಸೇವೆಗಳ ನಿಯಮಿತತೆಯ ಮೇಲ್ವಿಚಾರಣೆಯಲ್ಲಿ ಹೆಚ್ಚಿನ ಸಮುದಾಯ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತವೆ; ಜೊತೆಗೆ ಪೂರಕ ಪೌಷ್ಟಿಕಾಹಾರ, ಫಲಾನುಭವಿಗಳ ಹಕ್ಕುಗಳು ಮತ್ತು ಜವಾಬ್ದಾರಿಯುತ ಶಿಶುಪಾಲನಾ ಅಭ್ಯಾಸಗಳ ಕುರಿತು ಜಾಗೃತಿಯನ್ನು ಹೆಚ್ಚಿಸುತ್ತವೆ.
ಕೈಗೊಳ್ಳಬಹುದಾದ ಚಟುವಟಿಕೆಗಳು:
- ಅಂಗನವಾಡಿ ನಿರ್ವಹಣಾ ಸಮಿತಿಗಳ ಕ್ರಿಯಗೊಳಿಸುವಿಕೆ: ಸಮುದಾಯದ ಭಾಗವಹಿಸುವಿಕೆಯನ್ನು ಮುನ್ನಡೆಸಲು, ಪೌಷ್ಟಿಕಾಂಶದ ಸೇವಾ ವಿತರಣೆಯನ್ನು ಪರಿಶೀಲಿಸಲು ಮತ್ತು ಪೋಷಣ್ ಮಾಹ್ ಚಟುವಟಿಕೆಗಳಿಗೆ ಬೆಂಬಲ ನೀಡಲು ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸಮಿತಿಗಳನ್ನು ಸಕ್ರಿಯಗೊಳಿಸುವುದು. ಹೆಚ್ಚುವರಿಯಾಗಿ, ಪೋಷಣ್ ಮಾಹ್ ಅವಧಿಯಲ್ಲಿ ಕನಿಷ್ಠ ಒಂದು ಸಮಿತಿ ಸಭೆಯನ್ನು ನಡೆಸುವುದು.
- ಎಸ್‌ಎನ್‌ಪಿ ಮೆನು ಬೋರ್ಡ್‌ಗಳ ಪ್ರದರ್ಶನ: ದೈನಂದಿನ ಬಿಸಿ ಬೇಯಿಸಿದ ಊಟ / ಟೇಕ್ ಹೋಮ್ ರೇಷನ್ ಮೆನುವಿನ ಕುರಿತು ಫಲಾನುಭವಿಗಳ ಜಾಗೃತಿಯನ್ನು ಹೆಚ್ಚಿಸಲು ಹಾಗೂ ಸೇವಾ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಸಮುದಾಯದ ಮೇಲ್ವಿಚಾರಣೆಯನ್ನು ಬಲಪಡಿಸಲು ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಸ್‌ಎನ್‌ಪಿ ಮೆನು ಬೋರ್ಡ್‌ಗಳನ್ನು ಪ್ರದರ್ಶಿಸುವುದನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಖಚಿತಪಡಿಸಿಕೊಳ್ಳುವುದು.
- ಊಟದ ಗುಣಮಟ್ಟದ ಸಮುದಾಯ ಮೇಲ್ವಿಚಾರಣೆ: ಊಟದ ಗುಣಮಟ್ಟ, ಪ್ರಮಾಣ, ಮೆನು ಪಾಲನೆ ಮತ್ತು ಪೂರಕ ಪೌಷ್ಟಿಕಾಹಾರ ಕಾರ್ಯಕ್ರಮದ ನಿಯಮಿತ ಸಾಮಾಜಿಕ ತಪಾಸಣೆಯ ಮೇಲ್ವಿಚಾರಣೆಯಲ್ಲಿ ಅಂಗನವಾಡಿ ನಿರ್ವಹಣಾ ಸಮಿತಿಗಳು ಮತ್ತು ಮಾತೃ ಸಮಿತಿಗಳನ್ನು ತೊಡಗಿಸುವುದು.
4. ಬಾಲ್ಯದ ಅಭಿವೃದ್ಧಿಗೆ ಪೋಷಣೆ ಮತ್ತು ಆರಂಭಿಕ ಪ್ರಚೋದನೆ
ಜ್ಞಾನಾತ್ಮಕ (ಮಾನಸಿಕ) ಅಭಿವೃದ್ಧಿ ಮತ್ತು ಸೂಕ್ತ ಪೋಷಣೆಯು ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಮೂಲಭೂತ ಅಂಶಗಳಾಗಿವೆ ಎಂಬ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದ ಮಾರ್ಗದರ್ಶನವನ್ನು ಈ ವಿಷಯವು ಪ್ರತಿಬಿಂಬಿಸುತ್ತದೆ; ಹಾಗೂ ಮಗು ತಿನ್ನುವ ಆಹಾರ ಮತ್ತು ಮಗು ಕಲಿಯುವ ವಿಧಾನದ ನಡುವಿನ ಅವಿಭಾಜ್ಯ ಸಂಪರ್ಕವನ್ನು ಎತ್ತಿಹಿಡಿಯುತ್ತದೆ.
ಜೀವನದ ಮೊದಲ 1,000 ದಿನಗಳಲ್ಲಿ ಒದಗಿಸುವ ಉತ್ತಮ ಪೋಷಣೆ ಮತ್ತು ಆರೈಕೆಯು ಅತ್ಯುತ್ತಮ ಮೆದುಳಿನ ಬೆಳವಣಿಗೆಗೆ ಅತ್ಯಗತ್ಯ. ಈ ಪ್ರಮುಖ ಅವಧಿಯಲ್ಲಿ ಉಂಟಾಗುವ ಅಪೌಷ್ಟಿಕತೆಯು ಜ್ಞಾನಾತ್ಮಕ, ಚಲನಶೀಲ (ಮೋಟಾರ್) ಮತ್ತು ಸಾಮಾಜಿಕ-ಆವೇಗಾತ್ಮಕ ಬೆಳವಣಿಗೆಯ ಮೇಲೆ ಶಾಶ್ವತ ಪರಿಣಾಮ ಬೀರಬಹುದು. 0-3 ವರ್ಷ ವಯಸ್ಸಿನ ಮಕ್ಕಳಿಗಾಗಿ 34 ಅಭಿವೃದ್ಧಿ ಮೈಲಿಗಲ್ಲುಗಳ ಚೌಕಟ್ಟನ್ನು ಹೊಂದಿರುವ 'ಪರಿಷ್ಕೃತ ಮನೆ ಭೇಟಿ ವೇಳಾಪಟ್ಟಿ', ಪೋಷಕರ ಕೌನ್ಸೆಲಿಂಗ್ ಅನ್ನು ಬಲಪಡಿಸಲು ಮತ್ತು ಆರಂಭಿಕ ಪ್ರಚೋದನೆಯನ್ನು ಉತ್ತೇಜಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಪರಿಣಾಮಕಾರಿ ಸಾಧನವಾಗಿದೆ.
ಕೈಗೊಳ್ಳಬಹುದಾದ ಚಟುವಟಿಕೆಗಳು:
- ಪರಿಷ್ಕೃತ ಮನೆ ಭೇಟಿ ವೇಳಾಪಟ್ಟಿ: ಮೊದಲ 1,000 ದಿನಗಳಲ್ಲಿ ಮತ್ತು ಆರಂಭಿಕ ಬಾಲ್ಯದಲ್ಲಿ ಸಂಯೋಜಿತ ಕೌನ್ಸೆಲಿಂಗ್ ಮತ್ತು ಅನುಸರಣೆಯನ್ನು ಸುಧಾರಿಸಲು ಪರಿಷ್ಕೃತ ಮನೆ ಭೇಟಿ ವೇಳಾಪಟ್ಟಿಯ ಜಾರಿಯನ್ನು ವೇಗಗೊಳಿಸುವುದು. 'ನವಚೇತನಾ' ಮತ್ತು 'ಆಧಾರ್‌ಶಿಲಾ' ಪಠ್ಯಕ್ರಮಗಳ ಅನುಷ್ಠಾನದ ಮೂಲಕ ಗುಣಮಟ್ಟದ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಪ್ರೋತ್ಸಾಹಿಸುವುದು; ಇದು ವಯಸ್ಸಿಗೆ ಸೂಕ್ತವಾದ ಕಲಿಕೆ, ವಿಕಾಸ ಮತ್ತು ಶಾಲಾ ಸಿದ್ಧತೆಯನ್ನು ಬೆಳೆಸುತ್ತದೆ.
- ಬೆಳವಣಿಗೆಯ ವಿಳಂಬವಿರುವ ಮಕ್ಕಳ ಶಿಫಾರಸು: ಆರೋಗ್ಯ ವ್ಯವಸ್ಥೆಗಳು ಮತ್ತು ಆರ್‌ಬಿಎಸ್‌ಕೆ ತಂಡಗಳೊಂದಿಗೆ ಬೆಳವಣಿಗೆಯ ವಿಳಂಬವಿರುವ ಮಕ್ಕಳನ್ನು ಗುರುತಿಸುವುದು ಹಾಗೂ ಅವರನ್ನು ಸೂಕ್ತ ಆಸ್ಪತ್ರೆಗೆ ಶಿಫಾರಸು ಮಾಡುವ ಪ್ರಕ್ರಿಯೆಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುವುದು.
- ಆರಂಭಿಕ ಪ್ರಚೋದನೆಯಲ್ಲಿ ಪೋಷಣೆಯ ಪ್ರಾಮುಖ್ಯತೆಯ ಕುರಿತು ಜಾಗೃತಿ: ಅತ್ಯುತ್ತಮ ಮೆದುಳಿನ ವಿಕಾಸ ಮತ್ತು ಜ್ಞಾನಾತ್ಮಕ ಅಭಿವೃದ್ಧಿಗೆ ಸೂಕ್ತ ಪೋಷಣೆ ಹಾಗೂ ಆರಂಭಿಕ ಬಾಲ್ಯದ ಪ್ರಚೋದನೆಯ ಪ್ರಾಮುಖ್ಯತೆಯ ಕುರಿತು ಬೃಹತ್ ಜಾಗೃತಿ ಅಭಿಯಾನವನ್ನು ನಡೆಸುವುದು.
5. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (ಪಿಎಂಎಂವಿವೈ): ಮಾತೃ ಆರೋಗ್ಯಕ್ಕಾಗಿ ನೇರ ನಗದು ವರ್ಗಾವಣೆ
ಮಾತೃ ಪೋಷಣೆಗೆ ಬೆಂಬಲ ನೀಡುವಲ್ಲಿ, ಆರೋಗ್ಯಪೂರ್ಣ ನಡವಳಿಕೆಗಳನ್ನು ಪ್ರೋತ್ಸಾಹಿಸುವಲ್ಲಿ ಮತ್ತು ಗರ್ಭಾವಸ್ಥೆಯ ಅವಧಿಯಲ್ಲಿ ಆದಾಯದ ಬೆಂಬಲ ಒದಗಿಸುವಲ್ಲಿ ಭಾರತದ ಪ್ರಮುಖ ಮಾತೃತ್ವ ವಂದನಾ ಕಾರ್ಯಕ್ರಮವಾದ 'ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ' (ಪಿಎಂಎಂವಿವೈ) 10 ವರ್ಷಗಳನ್ನು ಪೂರೈಸಿದೆ. 'ಪೋಷಣ್ ಮಾಹ್ 2026' ಎಲ್ಲಾ ಅರ್ಹ ಫಲಾನುಭವಿಗಳಿಗೆ ಯೋಜನೆಯ ತಲುಪುವಿಕೆಯನ್ನು ವಿಸ್ತರಿಸಲು, ನಾಗರಿಕ ಜಾಗೃತಿಯನ್ನು ಬಲಪಡಿಸಲು ಮತ್ತು ಮಾತೃ ಹಾಗೂ ಮಗುವಿನ ಆರೋಗ್ಯವನ್ನು ಉತ್ತೇಜಿಸುವಲ್ಲಿ ಒಂದು ದಶಕದ ಪ್ರಗತಿಯನ್ನು ಸಂಭ್ರಮಿಸಲು ಸೂಕ್ತ ಅವಕಾಶವನ್ನು ಒದಗಿಸುತ್ತದೆ.
ಕೈಗೊಳ್ಳಬಹುದಾದ ಚಟುವಟಿಕೆಗಳು:
- 100% ಸಂಪೂರ್ಣ ನೋಂದಣಿ ಅಭಿಯಾನ: ಪಿಎಂಎಂವಿವೈ ಅಡಿಯಲ್ಲಿ ಎಲ್ಲಾ ಅರ್ಹ ಗರ್ಭಿಣಿಯರು ಮತ್ತು ಬಾಣಂತಿಯರನ್ನು ಗುರುತಿಸಿ ನೋಂದಾಯಿಸಲು ವಿಶೇಷ ನೋಂದಣಿ ಅಭಿಯಾನಗಳನ್ನು ನಡೆಸುವುದು. ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರ ಅನುಮೋದನೆ ಮತ್ತು ನೇರ ಹಣಕಾಸು ವರ್ಗಾವಣೆಗೆ ಕ್ರಮವಹಿಸುವುದು. ಪಿಎಂಎಂವಿವೈ ಡ್ಯಾಶ್‌ಬೋರ್ಡ್‌ಗಳ ಮೂಲಕ ನಿಯಮಿತ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದು.
- ನಾಗರಿಕ ಜಾಗೃತಿ ಅಭಿಯಾನ: ಪಿಎಂಎಂವಿವೈ ಅರ್ಹತೆ, ಪ್ರಯೋಜನಗಳು, ಕಂತುಗಳು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಕುರಿತು ಜಾಗೃತಿ ಅಭಿಯಾನಗಳನ್ನು ನಡೆಸುವುದು. ಸಾಮಾಜಿಕ ಮತ್ತು ದೃಶ್ಯ-ಶ್ರವ್ಯ ಮಾಧ್ಯಮಗಳ ಮೂಲಕ ಫಲಾನುಭವಿಗಳ ಅನುಭವಗಳು ಮತ್ತು ಯಶಸ್ಸಿನ ಕಥೆಗಳನ್ನು ಪ್ರಚಾರ ಮಾಡುವುದು.
- ಪಿಎಂಎಂವಿವೈ ಪರಿಕರ ಸಾಮಗ್ರಿ ಬಿಡುಗಡೆ: ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ಷೇತ್ರ ಮಟ್ಟದ ಅನುಷ್ಠಾನಕ್ಕಾಗಿ ಪಿಎಂಎಂವಿವೈ ಟೂಲ್‌ಕಿಟ್ ಬಿಡುಗಡೆ ಮಾಡುವುದು. ಟೂಲ್‌ಕಿಟ್ ಸಾಮಗ್ರಿಗನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಿ ವ್ಯಾಪಕವಾಗಿ ಹಂಚಿಕೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸುವುದು.

ಸಮುದಾಯದ ಭಾಗವಹಿಸುವಿಕೆ: ಜನ ಆಂದೋಲನವಾಗಿ ಪೋಷಣೆ
'ಪೋಷಣ್ ಅಭಿಯಾನ'ದ ಮುಖ್ಯ ವೈಶಿಷ್ಟ್ಯವೆಂದರೆ, ಇದು ಪೌಷ್ಟಿಕಾಂಶದ ಸುಧಾರಣೆಯನ್ನು ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ನೋಡದೆ, ಒಂದು ನಿಜವಾದ 'ಜನ ಆಂದೋಲನ'ವಾಗಿ (ಸಾರ್ವಜನಿಕ ಚಳವಳಿ) ರೂಪಿಸಿರುವುದಾಗಿದೆ.
ಶಿಶು ಆಹಾರ ಪದ್ಧತಿ, ಆಹಾರದ ವೈವಿಧ್ಯತೆ, ಗರ್ಭಪೂರ್ವ ಆರೈಕೆ, ಕೈ ತೊಳೆಯುವ ನೈರ್ಮಲ್ಯ ಮತ್ತು ಆರೋಗ್ಯ ಸೇವೆಗಳನ್ನು ಪಡೆಯುವ ನಡವಳಿಕೆಗಳಲ್ಲಿ ಶಾಶ್ವತ ಬದಲಾವಣೆಯನ್ನು ತರಲು ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಮತ್ತು ತಳಮಟ್ಟದ ತೊಡಗಿಸಿಕೊಳ್ಳುವಿಕೆ ಅತ್ಯಗತ್ಯ ಎಂಬುದನ್ನು ಈ ಮಿಷನ್ ಗುರುತಿಸಿದೆ. 'ಪೋಷಣ್ ಮಾಹ್' ಮತ್ತು 'ಪೋಷಣ್ ಪಖ್ವಾಡಾ' ದೇಶದ ಅತಿದೊಡ್ಡ ಪೋಷಣೆ ಕೇಂದ್ರಿತ ಸಮುದಾಯ ಸಜ್ಜುಗೊಳಿಸುವಿಕೆ ಅಭಿಯಾನಗಳಾಗಿದ್ದು, ಆರೋಗ್ಯ, ಯೋಗಕ್ಷೇಮ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಭ್ಯಾಸಗಳನ್ನು ಸಾರ್ವಜನಿಕರಲ್ಲಿ ಪ್ರಚಾರ ಮಾಡಲು ಪ್ರತಿವರ್ಷ ನಿರ್ದಿಷ್ಟ ತಿಂಗಳುಗಳಲ್ಲಿ ನಡೆಸಲಾಗುತ್ತದೆ.
ಪೋಷಣ ಪಖ್ವಾಡಾ (ಏಪ್ರಿಲ್ 2026)
2018 ರಿಂದ ಪ್ರತಿವರ್ಷ ಆಚರಿಸಲಾಗುತ್ತಿರುವ 'ಪೋಷಣ ಪಖ್ವಾಡಾ' ಎಂಬುದು ಏಪ್ರಿಲ್ ತಿಂಗಳಿನಲ್ಲಿ ನಡೆಸಲಾಗುವ ಎರಡು ವಾರಗಳ ತೀವ್ರ ಜಾಗೃತಿ ಅಭಿಯಾನವಾಗಿದೆ. ಇದು ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸಲು ಮತ್ತು ಪೋಷಣ್ ಅಭಿಯಾನದ ಅಡಿಯಲ್ಲಿ ಪ್ರಮುಖ ಪೌಷ್ಟಿಕಾಂಶ ನಡವಳಿಕೆಗಳನ್ನು ಪುನರುಚ್ಚರಿಸಲು ಸಹಕಾರಿಯಾಗಿದೆ.
2026 ರಲ್ಲಿ, ಪೋಷಣ ಪಖ್ವಾಡಾದ 8ನೇ ಆವೃತ್ತಿಯನ್ನು ಏಪ್ರಿಲ್ 9 ರಿಂದ 23 ರವರೆಗೆ ಆಯೋಜಿಸಲಾಗಿದೆ. ವೈಜ್ಞಾನಿಕ ಆಧಾರಗಳ ಪ್ರಕಾರ, ಮಗುವಿನ ಶೇಕಡಾ 85 ಕ್ಕಿಂತ ಹೆಚ್ಚು ಮೆದುಳಿನ ವಿಕಾಸವು ಆರು ವರ್ಷ ವಯಸ್ಸಿನೊಳಗೆ ಸಂಭವಿಸುತ್ತದೆ; ಅದರಲ್ಲಿಯೂ ಅತ್ಯಂತ ವೇಗವಾದ ಬೆಳವಣಿಗೆಯು ಜೀವನದ ಮೊದಲ 1,000 ದಿನಗಳಲ್ಲಿ ನಡೆಯುತ್ತದೆ. ಇದು ಅತ್ಯುತ್ತಮ ಮೆದುಳಿನ ವಿಕಾಸ, ದೈಹಿಕ ಬೆಳವಣಿಗೆ ಮತ್ತು ಸಮಗ್ರ ಯೋಗಕ್ಷೇಮಕ್ಕಾಗಿ ಅತ್ಯಂತ ನಿರ್ಣಾಯಕ ಅವಧಿಯಾಗಿದೆ.
ಜೀವನದ ಆರಂಭಿಕ ಹಂತದಲ್ಲಿ ಮಕ್ಕಳ ಆರೈಕೆ ಮತ್ತು ಪೋಷಣೆಯ ನಿರ್ಣಾಯಕ ಪ್ರಾಮುಖ್ಯತೆಯನ್ನು ಗುರುತಿಸಿ, 8ನೇ ಪೋಷಣ ಪಖ್ವಾಡಾ"ಜೀವನದ ಮೊದಲ ಆರು ವರ್ಷಗಳಲ್ಲಿ ಮೆದುಳಿನ ಅಭಿವೃದ್ಧಿಯನ್ನು ಗರಿಷ್ಠಗೊಳಿಸುವುದು" ಎಂಬ ವೈಜ್ಞಾನಿಕ ಮತ್ತು ಪರಿವರ್ತನಾತ್ಮಕ ವಿಷಯದ ಮೇಲೆ ಗಮನ ಹರಿಸುವ ಮೂಲಕ ಜನ ಆಂದೋಲನವನ್ನು ಮತ್ತಷ್ಟು ಆಳವಾಗಿಸಲು ಶ್ರಮಿಸುತ್ತದೆ; ಹಾಗೂ ಆರೋಗ್ಯಕರ ಬೆಳವಣಿಗೆ ಮತ್ತು ಮೆದುಳಿನ ವಿಕಾಸಕ್ಕೆ ಬೆಂಬಲ ನೀಡುವ ಅಭ್ಯಾಸಗಳ ಕುರಿತು ಕುಟುಂಬಗಳು ಮತ್ತು ಸಮುದಾಯಗಳಲ್ಲಿ ಜಾಗೃತಿಯನ್ನು ಬಲಪಡಿಸುತ್ತದೆ.
ಇದು ಈ ಕೆಳಗಿನ ಮುಖ್ಯ ಪರಿಕಲ್ಪನೆಯ ಮೂಲಕ "ಆರೋಗ್ಯಕ್ಕಾಗಿ ಪೋಷಣೆ" ಎಂಬುದರಿಂದ "ಅತ್ಯುತ್ತಮ ಮೆದುಳಿನ ವಿಕಾಸಕ್ಕಾಗಿ ಪೋಷಣೆ ಮತ್ತು ಆರಂಭಿಕ ಬಾಲ್ಯದ ಪ್ರಚೋದನೆ" ಕಡೆಗೆ ಜಾಗೃತಿಯ ವ್ಯಾಖ್ಯಾನವನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ: ಮುಖ್ಯ ಪರಿಕಲ್ಪನೆ: ಮೊದಲ ಆರು ವರ್ಷಗಳಲ್ಲಿ ಮೆದುಳಿನ ಅಭಿವೃದ್ಧಿಯನ್ನು ಗರಿಷ್ಠಗೊಳಿಸುವುದು.
|
8ನೇ ರಾಷ್ಟ್ರೀಯ ಪೋಷಣ ಮಾಸಾಚರಣೆ
8ನೇ ರಾಷ್ಟ್ರೀಯ ಪೋಷಣ ಮಾಸಾಚರಣೆಗೆ ಪ್ರಧಾನಮಂತ್ರಿಯವರು ಸೆಪ್ಟೆಂಬರ್ 17, 2025 ರಂದು ಮಧ್ಯಪ್ರದೇಶದ ಧಾರ್‌ನಿಂದ ಚಾಲನೆ ನೀಡಿದರು. ಇದರೊಂದಿಗೆ 'ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನ'ಕ್ಕೂ ಚಾಲನೆ ನೀಡಲಾಯಿತು. ಈ ಉಪಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು ಜಂಟಿಯಾಗಿ ಅನುಷ್ಠಾನಗೊಳಿಸಿವೆ.
2025 ರ ರಾಷ್ಟ್ರೀಯ ಪೋಷಣ ಮಾಸಾಚರಣೆಯು ಪೌಷ್ಟಿಕಾಂಶದ ಸಾಕ್ಷರತೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸುವುದರ ಮೇಲೆ ಹೆಚ್ಚಿನ ಗಮನ ಹರಿಸಿತ್ತು. ಇದರ ಪ್ರಮುಖ ವಿಷಯಗಳು: ಮಾತೃ ಪೋಷಣೆ, ಶಿಶು ಮತ್ತು ಸಣ್ಣ ಮಕ್ಕಳ ಪೋಷಣೆ, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ) ಹಾಗೂ ಬೊಜ್ಜು (ಸ್ಥೂಲಕಾಯ) ತಡೆಯಲು ಸಕ್ಕರೆ ಮತ್ತು ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವುದಾಗಿದ್ದವು. 20 ಕ್ಕೂ ಹೆಚ್ಚು ಸಚಿವಾಲಯಗಳ ಸಂಯೋಜನೆಯೊಂದಿಗೆ ದೇಶಾದ್ಯಂತ ಒಟ್ಟು 14.33 ಕೋಟಿ ಚಟುವಟಿಕೆಗಳನ್ನು ನಡೆಸಲಾಯಿತು.
|
ಪೋಷಣ್ ಟ್ರ್ಯಾಕರ್: ಪೌಷ್ಟಿಕಾಂಶ ಆಡಳಿತಕ್ಕೊಂದು ಡಿಜಿಟಲ್ ವೇದಿಕೆ
ಮಾರ್ಚ್ 1, 2021 ರಂದು ಪ್ರಾರಂಭಿಸಲಾದ 'ಪೋಷಣ ಟ್ರ್ಯಾಕರ್', ಮೂಲಸೌಕರ್ಯ ಮತ್ತು ಸೇವಾ ವಿತರಣೆಯನ್ನು ಮೇಲ್ವಿಚಾರಣೆ ಮಾಡುವ ಪ್ರಮುಖ ಆಡಳಿತಾತ್ಮಕ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಅಪ್ಲಿಕೇಶನ್ ಅಂಗನವಾಡಿ ಕೇಂದ್ರಗಳ ತೆರೆಯುವಿಕೆ, ಮಕ್ಕಳ ದೈನಂದಿನ ಹಾಜರಾತಿ, 'ಇಸಿಸಿಇ' ಚಟುವಟಿಕೆಗಳು ಮತ್ತು ಬೆಳವಣಿಗೆಯ ಮೇಲ್ವಿಚಾರಣೆ ಸೇರಿದಂತೆ ಅಂಗನವಾಡಿ ಸೇವೆಗಳಿಗೆ ಸಂಬಂಧಿಸಿದ ಸನ್ನಿಹಿತ ನೈಜ-ಸಮಯದ ದತ್ತಾಂಶ ಸಂಗ್ರಹಣೆಯನ್ನು ಸುಗಮಗೊಳಿಸಿದೆ. ಪ್ರಸ್ತುತ, ಈ ವ್ಯವಸ್ಥೆಯು ಗರ್ಭಿಣಿಯರು, ಬಾಣಂತಿಯರು, 6 ವರ್ಷದೊಳಗಿನ ಮಕ್ಕಳು ಮತ್ತು ಹದಿಹರೆಯದ ಹೆಣ್ಣುಮಕ್ಕಳನ್ನು ಒಳಗೊಂಡ ವ್ಯಾಪಕ ವ್ಯಾಪ್ತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

ಜುಲೈ 31, 2026 ರ ವೇಳೆಗೆ, ಭಾರತದ ಪೌಷ್ಟಿಕಾಂಶ ಮೂಲಸೌಕರ್ಯವು ಸುಮಾರು 13.99 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಒಳಗೊಂಡಿದ್ದು, 13.30 ಲಕ್ಷ ಅಂಗನವಾಡಿ ಕಾರ್ಯಕರ್ತೆಯರನ್ನು ಹೊಂದಿದೆ. ಈ ಬೃಹತ್ ತಳಮಟ್ಟದ ಜಾಲವು ಸುಮಾರು 8.94 ಕೋಟಿ ಫಲಾನುಭವಿಗಳನ್ನು ತಲುಪುತ್ತಿದೆ.
ಇವರಲ್ಲಿ ಮಕ್ಕಳೇ ಪ್ರಮುಖ ಗಮನಹರಿಸಬೇಕಾದ ವರ್ಗವಾಗಿದ್ದು, 6 ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳು ಒಟ್ಟು ಫಲಾನುಭವಿಗಳಲ್ಲಿ 7.2 ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇದು ಆರಂಭಿಕ ಬಾಲ್ಯದ ಪೋಷಣೆ ಮತ್ತು ವಿಕಾಸಕ್ಕೆ ನೀಡಲಾಗುತ್ತಿರುವ ಒತ್ತು ಮತ್ತು ಪ್ರಾಮುಖ್ಯತೆಯನ್ನು ತಿಳಿಸುತ್ತದೆ.
ಮತ್ತೊಂದೆಡೆ, ಗರ್ಭಿಣಿಯರು ಮತ್ತು ಬಾಣಂತಿಯರ ಸಂಖ್ಯೆ ಒಟ್ಟಾಗಿ ಸುಮಾರು 1.1 ಕೋಟಿಯಷ್ಟಿದ್ದು, ಮಗುವಿನ ಜೀವನದ ನಿರ್ಣಾಯಕ ಮೊದಲ 1,000 ದಿನಗಳಲ್ಲಿ ಮಾತೃ ಆರೋಗ್ಯಕ್ಕೆ ನೀಡಲಾಗುತ್ತಿರುವ ನಿರಂತರ ಗಮನವನ್ನು ಇದು ಪ್ರತಿಬಿಂಬಿಸುತ್ತದೆ.
ಆರೋಗ್ಯಕರ ಕುಟುಂಬಗಳು ಮತ್ತು ರಾಷ್ಟ್ರದ ಕಡೆಗೆ
ತಂತ್ರಜ್ಞಾನ ಆಧಾರಿತ ನೈರ್ಮಲ್ಯ ಮತ್ತು ನೈಜ-ಸಮಯದ ಟ್ರ್ಯಾಕಿಂಗ್ ಅನ್ನು ಬೃಹತ್ ಪ್ರಮಾಣದ ಸಮುದಾಯ ಸಜ್ಜುಗೊಳಿಸುವಿಕೆಯೊಂದಿಗೆ ಸಂಯೋಜಿಸುವ ಮೂಲಕ, 'ರಾಷ್ಟ್ರೀಯ ಪೋಷಣ್ ಮಾಸಾಚರಣೆ'ಯು ಪೋಷಣೆಯನ್ನು ದೇಶವ್ಯಾಪಿ ಸಾರ್ವಜನಿಕ ಚಳವಳಿಯಾಗಿ ಪರಿವರ್ತಿಸಿದೆ. 'ಮಿಷನ್ ಪೋಷಣ್ 2.0' ರ ಏಕೀಕೃತ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವಾರ್ಷಿಕ ಅಭಿಯಾನವು ಸೇವಾ ವಿತರಣೆಯಲ್ಲಿನ ಕೊರತೆಗಳನ್ನು ನೀಗಿಸಲು, ಆಹಾರದ ವೈವಿಧ್ಯತೆಯನ್ನು ಪ್ರೋತ್ಸಾಹಿಸಲು ಹಾಗೂ ಆರೋಗ್ಯಕರ ಮತ್ತು ಅಪೌಷ್ಟಿಕತೆ-ಮುಕ್ತ ಭಾರತವನ್ನು ನಿರ್ಮಿಸಲು ಮಗುವಿನ ಅತ್ಯಂತ ನಿರ್ಣಾಯಕ ಆರಂಭಿಕ ವರ್ಷಗಳಿಗೆ ಆದ್ಯತೆ ನೀಡುವುದನ್ನು ಮುಂದುವರಿಸಿದೆ.
References
Ministry of Women and Child Development
https://www.pib.gov.in/Pressreleaseshare.aspx?PRID=1910097®=48&lang=2
https://www.pib.gov.in/PressReleasePage.aspx?PRID=2180384®=48&lang=2
https://www.pib.gov.in/PressReleasePage.aspx?PRID=2249920®=48&lang=2
https://www.poshantracker.in/aboutus
https://www.pib.gov.in/PressReleaseDetail.aspx?PRID=2307291®=48&lang=1
https://cdn.poshantracker.in/public-assets/pdf/Resources/Awareness/Navchetana/Navchetana_en.pdf
Ministry of Health and Family Welfare
https://www.nfhsiips.in/nfhsuser/assets/National%20Family%20Health%20Survey%20(NFHS-6)%202023-2024%20Fact%20Sheets.pdf
https://www.nfhsiips.in/nfhsuser/publication.php
PIB Backgrounders
https://static.pib.gov.in/WriteReadData/specificdocs/documents/2025/sep/doc2025918640501.pdf
https://www.pib.gov.in/PressReleasePage.aspx?PRID=2251769®=3&lang=1
UNICEF
https://www.unicef.org/laos/ensuring-healthy-start-first-1000-days-0
9th Rashtriya Poshan Maah
******
(Explainer ID: 159894)
आगंतुक पटल : 7
Provide suggestions / comments