• Sitemap
  • Advance Search
Rural Prosperity

ಸಮೃದ್ಧ ಗ್ರಾಮಗಳ ಕಾರ್ಯಕ್ರಮ

ಸಮಗ್ರ ವಿಕಾಸದ ಮೂಲಕ ಭಾರತದ ಗಡಿಗಳನ್ನು ಬಲಪಡಿಸುವುದು

Posted On: 06 SEP 2026 10:52AM

'ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ' ಭಾರತದ ಗಡಿ ಗ್ರಾಮಗಳ ಪಾತ್ರವನ್ನು ಮರುಬ್ಯಾಖ್ಯಾನಿಸಿದೆ. ಅವು ಇನ್ನು ಮುಂದೆ ದೂರದ ಹೊರಠಾಣೆಗಳಾಗಿ ಉಳಿದಿಲ್ಲ. ಅವು ಈಗ ರಾಷ್ಟ್ರೀಯ ಭದ್ರತೆ ಮತ್ತು ಅಭಿವೃದ್ಧಿಯಲ್ಲಿ ಆಯಕಟ್ಟಿನ ಪಾಲುದಾರರಾಗಿವೆ. ಒಟ್ಟು ₹11,639 ಕೋಟಿ ಅನುದಾನದೊಂದಿಗೆ ಈ ಯೋಜನೆಯನ್ನು 'ವಿವಿಪಿ-I' ಮತ್ತು 'ವಿವಿಪಿ-II' ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಭಾರತದ ಅಂತಾರಾಷ್ಟ್ರೀಯ ಭೂ ಗಡಿಗಳಲ್ಲಿರುವ ಗ್ರಾಮಗಳಾದ್ಯಂತ ರಸ್ತೆ ಸಂಪರ್ಕ, ವಿದ್ಯುತ್, ದೂರಸಂಪರ್ಕ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸುತ್ತಿದೆ. ವಿವಿಪಿ ಯೋಜನೆಯು ಸಕ್ರಿಯ, ಸ್ಥಿತಿಸ್ಥಾಪಕ ಮತ್ತು ಸಮೃದ್ಧ ಗಡಿ ಸಮುದಾಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಸುಸ್ಥಿರ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ. ಹೀಗೆ ಮಾಡುವ ಮೂಲಕ, ಇದು ಭಾರತದ ಗಡಿಗಳಲ್ಲಿ ಸಮೃದ್ಧ ಸಮುದಾಯಗಳನ್ನು ಕಾಯ್ದುಕೊಳ್ಳುವ ಮೂಲಕ ದೇಶದ ಗಡಿ ಭದ್ರತೆಯನ್ನು ಬಲಪಡಿಸುತ್ತದೆ.

ಗಡಿ ಗ್ರಾಮವು ಏಕೆ ಪ್ರಮುಖವಾಗುತ್ತದೆ?

ಭಾರತವು ಏಳು ನೆರೆಹೊರೆಯ ದೇಶಗಳೊಂದಿಗೆ 15,000 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ಅಂತಾರಾಷ್ಟ್ರೀಯ ಭೂ ಗಡಿಯನ್ನು ಹಂಚಿಕೊಂಡಿದೆ. ಅತ್ಯಂತ ಉದ್ದವಾದ ಗಡಿಯು ಬಾಂಗ್ಲಾದೇಶದೊಂದಿಗೆ 4,096.7 ಕಿಮೀ ವ್ಯಾಪಿಸಿದೆ. ತದನಂತರ ಚೀನಾ 3,488 ಕಿಮೀ ಮತ್ತು ಪಾಕಿಸ್ತಾನ 3,323 ಕಿಮೀ ಹೊಂದಿವೆ. ನೇಪಾಳ, ಮ್ಯಾನ್ಮಾರ್, ಭೂತಾನ್ ಮತ್ತು ಅಫ್ಘಾನಿಸ್ತಾನಗಳು ಉಳಿದ ಭಾಗವನ್ನು ಒಳಗೊಂಡಿವೆ.

ದಶಕಗಳಿಂದ, ಅನೇಕ ಗಡಿ ಗ್ರಾಮಗಳು ಕಷ್ಟಕರವಾದ ಭೂಪ್ರದೇಶ, ದುರ್ಬಲ ಸಂಪರ್ಕ, ಸೀಮಿತ ಮೂಲಸೌಕರ್ಯ ಮತ್ತು ಕಡಿಮೆ ಜೀವನೋಪಾಯದ ಅವಕಾಶಗಳಿಂದಾಗಿ ಪ್ರತ್ಯೇಕಿಸಲ್ಪಟ್ಟಿದ್ದವು. ಈ ಸವಾಲುಗಳು ಹೊರ-ವಲಸೆಯನ್ನು ಪ್ರಚೋದಿಸಿದವು, ಇದರಿಂದಾಗಿ ಹಲವಾರು ಗಡಿ ಪ್ರದೇಶಗಳು ವಿರಳ ಜನಸಂಖ್ಯೆಯನ್ನು ಹೊಂದಿದವು. ಈ ಸುದೀರ್ಘ ಸವಾಲುಗಳನ್ನು ಪರಿಹರಿಸಲು, 2023 ರಲ್ಲಿ 'ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ' ಅನ್ನು ಪ್ರಾರಂಭಿಸಲಾಯಿತು. ಇದು ಭಾರತದ ಗಡಿಯಲ್ಲಿರುವ ಆಯ್ದ ಗ್ರಾಮಗಳ ಸಮಗ್ರ ಅಭಿವೃದ್ಧಿಯನ್ನು ವೇಗಗೊಳಿಸಲು ಶ್ರಮಿಸುತ್ತದೆ. ಗಡಿ ನಿವಾಸಿಗಳನ್ನು ಗಡಿ ರಕ್ಷಣಾ ಪಡೆಗಳ ಕಣ್ಣು ಮತ್ತು ಕಿವಿಗಳೆಂದು ಗುರುತಿಸುವ ಈ ಯೋಜನೆಯು ಸಕ್ರಿಯ, ಸುರಕ್ಷಿತ ಮತ್ತು ಸಮೃದ್ಧ ಗಡಿ ಸಮುದಾಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಈ ವಸಾಹತುಗಳನ್ನು ದೇಶದ 'ಕೊನೆಯ ಗ್ರಾಮಗಳು' ಎಂದು ನೋಡುವ ಬದಲು 'ಮೊದಲ ಗ್ರಾಮಗಳು' ಎಂದು ಪರಿಗಣಿಸುವ ಮೂಲಕ ದೃಷ್ಟಿಕೋನದಲ್ಲಿ ಬದಲಾವಣೆಯನ್ನು ತಂದಿದೆ.

ಉತ್ತರ ಗಡಿ ಗ್ರಾಮಗಳಿಂದ ಪ್ರಾರಂಭಿಸಿ, ಸರ್ಕಾರವು ಹಂತ ಹಂತವಾಗಿ ಸಂಪೂರ್ಣ ಭೂ ಗಡಿಯುದ್ದಕ್ಕೂ ಈ ಕಾರ್ಯಕ್ರಮವನ್ನು ವಿಸ್ತರಿಸಿದೆ. ಸಬಲೀಕರಣಗೊಂಡ ಗಡಿ ಸಮುದಾಯಗಳು 'ವಿಕಸಿತ ಭಾರತ@2047' ರ ಸುರಕ್ಷಿತ ಮತ್ತು ಬಲವಾದ ಬಡಿಪಾಯವನ್ನು ರೂಪಿಸುತ್ತವೆ.

ನಿಮಗೆ ತಿಳಿದಿದೆಯೇ? 1999ರ ಕಾರ್ಗಿಲ್ ಒಳನುಸುಳುವಿಕೆಯ ಮೊದಲ ಎಚ್ಚರಿಕೆಯು ಯಾವುದೇ ರಾಡಾರ್ ಅಥವಾ ಗಸ್ತು ಪಡೆಯಿಂದ ಬರಲಿಲ್ಲ. 3 ಮೇ 1999 ರಂದು, ಕಾರ್ಗಿಲ್ ವಲಯದಲ್ಲಿ ಶಂಕಾಸ್ಪದ ಚಲನವಲನವನ್ನು ಮೊದಲು ವರದಿ ಮಾಡಿದವರು ಸ್ಥಳೀಯ ನಿವಾಸಿಗಳಾಗಿದ್ದರು. ಇದು ದೇಶದ ರಕ್ಷಣೆಯ ಮೊದಲ ಸಾಲಾಗಿ ಗಡಿ ಸಮುದಾಯಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತದೆ.

ಎರಡು ಹಂತಗಳು, ಒಂದು ಗಡಿ ಮಿಷನ್

ಸರ್ಕಾರವು 'ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ' ಅನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಇವೆರಡೂ ಒಟ್ಟಾಗಿ ಭಾರತದ ಸಂಪೂರ್ಣ ಅಂತರರಾಷ್ಟ್ರೀಯ ಭೂ ಗಡಿಯನ್ನು ಒಳಗೊಳ್ಳುತ್ತವೆ. 'ವಿವಿಪಿ-I' ಉತ್ತರ ಗಡಿಯಲ್ಲಿರುವ ಗ್ರಾಮಗಳನ್ನು ಒಳಗೊಂಡಿದೆ. 'ವಿವಿಪಿ-II' ಇದೇ ವಿಧಾನವನ್ನು ಇತರ ಅಂತರರಾಷ್ಟ್ರೀಯ ಭೂ ಗಡಿಗಳಿಗೂ ವಿಸ್ತರಿಸುತ್ತದೆ. ಒಟ್ಟಾರೆಯಾಗಿ, ಈ ಎರಡು ಹಂತಗಳು ₹11,639 ಕೋಟಿ ಅನುದಾನದೊಂದಿಗೆ 2,616 ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿವೆ.

ಈ ಎರಡು ಹಂತಗಳು ವಿನ್ಯಾಸದಲ್ಲಿ ಭಿನ್ನವಾಗಿದ್ದರೂ, ಒಂದೇ ಉದ್ದೇಶವನ್ನು ಹಂಚಿಕೊಳ್ಳುತ್ತವೆ. 'ವಿವಿಪಿ-I' ರಾಜ್ಯಗಳೊಂದಿಗೆ ಅನುಷ್ಠಾನಗೊಳಿಸಲಾದ 'ಕೇಂದ್ರ ಪುರಸ್ಕೃತ ಯೋಜನೆ'ಯಾಗಿದ್ದರೆ, 'ವಿವಿಪಿ-II' ಸಂಪೂರ್ಣವಾಗಿ ಕೇಂದ್ರದಿಂದ ಧನಸಹಾಯ ಪಡೆಯುವ 'ಕೇಂದ್ರ ವಲಯದ ಯೋಜನೆ'ಯಾಗಿದೆ. ಈ ಉಪಕ್ರಮದ ಎರಡೂ ಹಂತಗಳು ಜೀವನ ಮಟ್ಟವನ್ನು ಸುಧಾರಿಸುವ, ಸ್ಥಳೀಯ ಜೀವನೋಪಾಯಗಳನ್ನು ಸೃಷ್ಟಿಸುವ ಮತ್ತು ಗಡಿ ಸಮುದಾಯಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿವೆ. ಇವು "ಮೊದಲ ಗ್ರಾಮಗಳನ್ನು" ಸಕ್ರಿಯ ಬೆಳವಣಿಗೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಮೂಲಕ ದೇಶದ ಗಡಿ ಭದ್ರತೆಯನ್ನು ಬಲಪಡಿಸಲು ಶ್ರಮಿಸುತ್ತವೆ.

ವಿವಿಪಿ-I: ಉತ್ತರ ಗಡಿ ಸಮುದಾಯಗಳ ಸಬಲೀಕರಣ

ಉತ್ತರ ಗಡಿಯಲ್ಲಿರುವ ಗ್ರಾಮಗಳಿಗಾಗಿ 'ವಿವಿಪಿ'ಯ ಮೊದಲ ಹಂತವನ್ನು 2022-23ರ ಕೇಂದ್ರ ಆಯವ್ಯಯದಲ್ಲಿ ಘೋಷಿಸಲಾಯಿತು. ಇದನ್ನು 10 ಏಪ್ರಿಲ್ 2023 ರಂದು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಕಿಬಿಥೂನಲ್ಲಿ ಪ್ರಾರಂಭಿಸಲಾಯಿತು. 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 19 ಜಿಲ್ಲೆಗಳಲ್ಲಿ ಉತ್ತರ ಗಡಿಗೆ ಹೊಂದಿಕೊಂಡಿರುವ 46 ಬ್ಲಾಕ್‌ಗಳಲ್ಲಿನ ಗ್ರಾಮಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಸುಮಾರು 1.42 ಲಕ್ಷ ಜನಸಂಖ್ಯೆಯನ್ನು ಒಳಗೊಂಡಿರುವ 662 ಆಯಕಟ್ಟಿನ ಗ್ರಾಮಗಳನ್ನು ಸಮಗ್ರ ಅಭಿವೃದ್ಧಿಗಾಗಿ ಆದ್ಯತೆಯ ಮೇರೆಗೆ ತೆಗೆದುಕೊಳ್ಳಲಾಗಿದೆ. ಈ ರಾಜ್ಯಗಳೆಂದರೆ ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶ. ಈ ಯೋಜನೆಯನ್ನು ₹4,800 ಕೋಟಿ ಅನುದಾನದೊಂದಿಗೆ ಅನುಮೋದಿಸಲಾಗಿದೆ. ಇದು 2022-23 ರಿಂದ 2026-27 ರ ಹಣಕಾಸು ವರ್ಷಗಳನ್ನು ಒಳಗೊಳ್ಳುತ್ತದೆ. ಈ ಮೊತ್ತದಲ್ಲಿ, ರಸ್ತೆ ಸಂಪರ್ಕಕ್ಕಾಗಿ ₹2,500 ಕೋಟಿಯನ್ನು ಕಾಯ್ದಿರಿಸಲಾಗಿದೆ. ಈ ಕಾರ್ಯಕ್ರಮವು ದೂರದ ಗಡಿ ಗ್ರಾಮಗಳಲ್ಲಿನ ಅಭಿವೃದ್ಧಿಯ ಅಂತರವನ್ನು ಸರಿದೂಗಿಸುವ ಗುರಿಯನ್ನು ಹೊಂದಿದೆ. ದೇಶದ ಇತರ ಭಾಗಗಳಲ್ಲಿ ಲಭ್ಯವಿರುವಂತಹ ಗುಣಮಟ್ಟದ ಮೂಲಸೌಕರ್ಯ ಮತ್ತು ಅಗತ್ಯ ಸೇವೆಗಳನ್ನು ಇವುಗಳಿಗೂ ಒದಗಿಸಲು ಇದು ಶ್ರಮಿಸುತ್ತದೆ.

ನಿಮಗೆ ತಿಳಿದಿದೆಯೇ? ಕಿಬಿಥೂ ಗ್ರಾಮದ ಆಯಕಟ್ಟಿನ ಸ್ಥಳ, ಇತಿಹಾಸ ಮತ್ತು ಅಭಿವೃದ್ಧಿಯ ಅಗತ್ಯತೆಗಳ ಕಾರಣದಿಂದಾಗಿ 'ವಿವಿಪಿ' ಯೋಜನೆಯನ್ನು ಪ್ರಾರಂಭಿಸಲು ಅದನ್ನು ಆಯ್ಕೆ ಮಾಡಲಾಯಿತು. ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿರುವ ಇದು, ಭಾರತದ ಅತ್ಯಂತ ಪೂರ್ವದ ಜನವಾಸವಿರುವ ಗ್ರಾಮಗಳಲ್ಲಿ ಒಂದಾಗಿದೆ. ಈ ಪ್ರದೇಶವು 1962 ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ತೀವ್ರವಾದ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕಷ್ಟಕರವಾದ ಭೂಪ್ರದೇಶ, ದುರ್ಬಲ ಸಂಪರ್ಕ ಮತ್ತು ಹೊರ-ವಲಸೆಯು ದೀರ್ಘಕಾಲದಿಂದ ಇಲ್ಲಿನ ಅಭಿವೃದ್ಧಿಯನ್ನು ನಿಯಂತ್ರಿಸಿದ್ದವು. ಕಿಬಿಥೂನಿಂದ ಈ ಕಾರ್ಯಕ್ರಮವನ್ನು ಪ್ರಾರಂಭಿಸುವುದು ದೇಶದ ಗಡಿಗೆ ಮೊದಲು ಅಭಿವೃದ್ಧಿಯನ್ನು ತರುವ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.

ವಿವಿಪಿ-I ಅಡಿಯಲ್ಲಿ ಪ್ರಮುಖ ಮಧ್ಯಸ್ಥಿಕೆಗಳು / ಉಪಕ್ರಮಗಳು

ಈ ಕಾರ್ಯಕ್ರಮವು ಎಲ್ಲಾ ಋತುಗಳಿಗೂ ಸೂಕ್ತವಾದ ರಸ್ತೆಗಳು, ಕುಡಿಯುವ ನೀರು, ನಂಬಿಗಸ್ಥ ವಿದ್ಯುತ್ ಸರಬರಾಜು, ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕ ಹಾಗೂ ಅಗತ್ಯ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಮೂಲಸೌಕರ್ಯಗಳನ್ನು ಬೆಂಬಲಿಸುತ್ತದೆ. ಇದು ಜೀವನೋಪಾಯ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸಲು ಪ್ರವಾಸೋದ್ಯಮ ಸೌಲಭ್ಯಗಳು ಮತ್ತು ಬಹುೋದ್ದೇಶ ಸಮುದಾಯ ಕೇಂದ್ರಗಳನ್ನು ಉತ್ತೇಜಿಸುತ್ತದೆ. ಜೀವನೋಪಾಯದ ಬೆಂಬಲವನ್ನು 'ಹಬ್-ಅಂಡ್-ಸ್ಪೋಕ್' ಮಾದರಿಯಲ್ಲಿ ಸಂಘಟಿಸಲಾಗಿದೆ. ಇದು ಸಾಮಾಜಿಕ ಉದ್ಯಮಶೀಲತೆ, ಯುವಕರು ಮತ್ತು ಮಹಿಳೆಯರ ಸಬಲೀಕರಣ, ಪ್ರವಾಸೋದ್ಯಮ ಮತ್ತು ಸ್ಥಳೀಯ ಸಂಸ್ಕೃತಿಯ ಪ್ರಚಾರ ಹಾಗೂ 'ಒಂದು ಬ್ಲಾಕ್-ಒಂದು ಉತ್ಪನ್ನ' ಉದ್ಯಮಗಳನ್ನು ಪ್ರೋತ್ಸಾಹಿಸುತ್ತದೆ. ಸಮಗ್ರ ಒಗ್ಗೂಡಿಸುವಿಕೆಯನ್ನು ಸೃಷ್ಟಿಸುವ ಮೂಲಕ, ವಿವಿಪಿ-I ಒಂದು ಪರಿಣಾಮಕಾರಿ ಅನುಷ್ಠಾನ ಮಾದರಿಯನ್ನು ಸ್ಥಾಪಿಸಿದ್ದು, ಎರಡನೇ ಹಂತವು ಇದನ್ನು ಉಳಿದ ಭೂ ಗಡಿಭಾಗಗಳಿಗೆ ವಿಸ್ತರಿಸುತ್ತಿದೆ.

ನಿಮಗೆ ತಿಳಿದಿದೆಯೇ? ಭಾರತವು ಸುಮಾರು ನಾಲ್ಕು ದಶಕಗಳಿಂದ ಗಡಿ ಗ್ರಾಮಗಳನ್ನು ಬೆಂಬಲಿಸುತ್ತಿದೆ. 'ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ'ವನ್ನು 1986-87 ರಲ್ಲಿ ಪಶ್ಚಿಮ ಗಡಿಯಲ್ಲಿ ಪ್ರಾರಂಭಿಸಲಾಯಿತು. ನಂತರ ಇದನ್ನು ಅಂತರರಾಷ್ಟ್ರೀಯ ಗಡಿಯ ಮೊದಲ ಆವಾಸಸ್ಥಾನದಿಂದ 10 ಕಿಮೀ పరిಧಿಯಲ್ಲಿರುವ ಗ್ರಾಮಗಳನ್ನು ಒಳಗೊಳ್ಳಲು ವಿಸ್ತರಿಸಲಾಯಿತು. ಇದು 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಾದ್ಯಂತ 111 ಜಿಲ್ಲೆಗಳನ್ನು ಒಳಗೊಂಡಿತ್ತು ಮತ್ತು 2004-05 ರಿಂದ 39,000 ಕ್ಕೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿದೆ. ಈ ಕಾರ್ಯಕ್ರಮವು ಈಗ ತನ್ನ ಅಂತಿಮ ಹಂತದಲ್ಲಿದೆ. ಈ ಅಡಿಪಾಯದ ಮೇಲೆ ನಿರ್ಮಿಸಲಾದ 'ವಿವಿಪಿ' ಯೋಜನೆ, ಆಯ್ದ ಗಡಿ ಗ್ರಾಮಗಳ ಮೇಲೆ ಗಮನ ಹರಿಸುತ್ತದೆ. ಇದು ಪ್ರತಿಯೊಂದು ಅನ್ವಯವಾಗುವ ಸರ್ಕಾರಿ ಯೋಜನೆಯನ್ನು ಅವು ಪಡೆಯುವುದನ್ನು ಖಾತ್ರಿಪಡಿಸುತ್ತದೆ, ಇದರಿಂದ ಜನರು ತಮ್ಮ ಗ್ರಾಮಗಳಲ್ಲೇ ಉಳಿಯಲು ಮತ್ತು ಗಡಿ ಭದ್ರತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ವಿವಿಪಿ-II: ಎಲ್ಲಾ ಭೂ ಗಡಿಗಳಿಗೆ ಈ ಮಾದರಿಯ ವಿಸ್ತರಣೆ ಕೇಂದ್ರ ಸಂಪುಟವು 2 ಏಪ್ರಿಲ್ 2025 ರಂದು 'ವಿವಿಪಿ-II' ಗೆ ಅನುಮೋದನೆ ನೀಡಿತು. ಮೊದಲ ಹಂತಕ್ಕಿಂತ ಭಿನ್ನವಾಗಿ, 'ವಿವಿಪಿ-II' ಸಂಪೂರ್ಣವಾಗಿ ಕೇಂದ್ರದಿಂದ ಧನಸಹಾಯ ಪಡೆಯುತ್ತದೆ ಮತ್ತು ಗೃಹ ಸಚಿವಾಲಯದಿಂದ ಅನುಷ್ಠಾನಗೊಳಿಸಲ್ಪಡುತ್ತದೆ. ಇದನ್ನು 20 ಫೆಬ್ರವರಿ 2026 ರಂದು ಅಸ್ಸಾಂನ ಕಚಾರ್ ಜಿಲ್ಲೆಯ ನಾಥನ್ಪುರ ಗ್ರಾಮದಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯು 2028-29ರ ಹಣಕಾಸು ವರ್ಷದವರೆಗೆ ₹6,839 ಕೋಟಿ ಅನುದಾನವನ್ನು ಹೊಂದಿದೆ.

ಅಂತರರಾಷ್ಟ್ರೀಯ ಭೂ ಗಡಿಗಳಿಗೆ ಹೊಂದಿಕೊಂಡಿರುವ 334 ಬ್ಲಾಕ್‌ಗಳಲ್ಲಿನ 1,954 ಗ್ರಾಮಗಳನ್ನು ಸಮಗ್ರ ಅಭಿವೃದ್ಧಿಗಾಗಿ ಇದು ಗುರುತಿಸಿದೆ. ಈ ಬ್ಲಾಕ್‌ಗಳು 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಈ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೆಂದರೆ ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗುಜರಾತ್, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತ್ರಿಪುರ, ಉತ್ತರಾಖಂಡ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ (ಕೇಂದ್ರಾಡಳಿತ ಪ್ರದೇಶ) ಮತ್ತು ಲಡಾಖ್ (ಕೇಂದ್ರಾಡಳಿತ ಪ್ರದೇಶ). ಕೆಲಸಗಳ ಪುನರಾವರ್ತನೆಯನ್ನು  ತಪ್ಪಿಸಲು, 'ವಿವಿಪಿ-I' ಅಡಿಯಲ್ಲಿ ಈಗಾಗಲೇ ಒಳಗೊಂಡಿರುವ ಉತ್ತರ ಗಡಿಯ ಬ್ಲಾಕ್‌ಗಳನ್ನು ಹೊರತುಪಡಿಸಲಾಗಿದೆ.

ವಿವಿಪಿ-II ಅಡಿಯಲ್ಲಿನ ಮಧ್ಯಸ್ಥಿಕೆಗಳು / ಉಪಕ್ರಮಗಳು

ಗಡಿ ಗ್ರಾಮಗಳನ್ನು ಬಲಪಡಿಸಲು ಭಾರತ ಸರ್ಕಾರವು 'ವಿವಿಪಿ-II' ಅಡಿಯಲ್ಲಿ ಸಮಗ್ರ ಪ್ಯಾಕೇಜ್ ಅನ್ನು ಅನುಮೋದಿಸಿದೆ. ಈ ಯೋಜನೆಯು ಮೂಲಸೌಕರ್ಯ, ಸಹಕಾರ ಸಂಘಗಳು ಮತ್ತು ಸ್ವಸಹಾಯ ಗುಂಪುಗಳ ಮೂಲಕ ಮೌಲ್ಯ ಸರಪಳಿಗಳು, ಸ್ಮಾರ್ಟ್ ತರಗತಿ ಕೊಠಡಿಗಳು, ಪ್ರವಾಸೋದ್ಯಮ ಸರ್ಕ್ಯೂಟ್‌ಗಳು ಮತ್ತು ಸುಸ್ಥಿರ ಜೀವನೋಪಾಯಗಳನ್ನು ಬೆಂಬಲಿಸುತ್ತದೆ. ಇದು ರಸ್ತೆ ಸಂಪರ್ಕ, ಆರೋಗ್ಯ ರಕ್ಷಣೆ, ಆರ್ಥಿಕ ಸೇರ್ಪಡೆ, ಕೌಶಲ್ಯ ಅಭಿವೃದ್ಧಿ ಮತ್ತು ದೂರಸಂಪರ್ಕ ಸಂಪರ್ಕವನ್ನು ಸಹ ಉತ್ತೇಜಿಸುತ್ತದೆ. ಜೀವನ ಮಟ್ಟವನ್ನು ಸುಧಾರಿಸುವುದು, ಜೀವನೋಪಾಯಗಳನ್ನು ಸೃಷ್ಟಿಸುವುದು ಮತ್ತು ಜನರು ಗಡಿ ಗ್ರಾಮಗಳಲ್ಲಿಯೇ ಉಳಿಯಲು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಇದು ಏಕೀಕೃತ ಅಭಿವೃದ್ಧಿ ಚೌಕಟ್ಟಿನಡಿಯಲ್ಲಿ 'ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ' ಅನ್ನು ಭಾರತದ ಸಂಪೂರ್ಣ ಭೂ ಗಡಿಗೆ ವಿಸ್ತರಿಸುತ್ತದೆ.

ನಿಮಗೆ ತಿಳಿದಿದೆಯೇ? 'ವಿವಿಪಿ-II' ಸಮೃದ್ಧ ಮತ್ತು ಸುರಕ್ಷಿತ ಗಡಿ ಪ್ರದೇಶಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದು ಬಲವಾದ ಗಡಿ ಸಮುದಾಯಗಳ ಮೂಲಕ ಗಡಿಯಾಚೆಗಿನ ಅಪರಾಧಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ವಿಶೇಷ ಒತ್ತು ನೀಡುತ್ತದೆ.

ಯೋಜನೆಗಳ ಒಗ್ಗೂಡಿಸುವಿಕೆಯ ಮೂಲಕ ಅಭಿವೃದ್ಧಿಯ ತಲುಪಿಸುವಿಕೆ

'ವಿವಿಪಿ' ಅನುಷ್ಠಾನವನ್ನು 'ಗ್ರಾಮ ಕ್ರಿಯಾ ಯೋಜನೆಗಳು' ಮಾರ್ಗದರ್ಶನ ಮಾಡುತ್ತವೆ. ಸ್ಥಳೀಯ ಅಗತ್ಯಗಳ ಆಧಾರದ ಮೇಲೆ ಗಡಿ-ನಿರ್ದಿಷ್ಟ, ರಾಜ್ಯ-ನಿರ್ದಿಷ್ಟ ಮತ್ತು ಗ್ರಾಮ-ನಿರ್ದಿಷ್ಟ ಮಧ್ಯಸ್ಥಿಕೆಗಳ ಮೂಲಕ ಇದನ್ನು ಸಾಧಿಸಲಾಗುತ್ತದೆ. ಈ ಕಾರ್ಯಕ್ರಮವು ಒಗ್ಗೂಡಿಸುವಿಕೆ ಆಧಾರಿತ ವಿಧಾನವನ್ನು ಅನುಸರಿಸುತ್ತದೆ ಹಾಗೂ ಚಾಲ್ತಿಯಲ್ಲಿರುವ ನಿಯಮಗಳ ಅಡಿಯಲ್ಲಿ ಯೋಜನೆಗಳ ಪೂರ್ಣ ಪ್ರಮಾಣದ ತಲುಪುವಿಕೆಯನ್ನು ಖಾತ್ರಿಪಡಿಸುತ್ತದೆ. ಗ್ರಾಮೀಣ ಅಭಿವೃದ್ಧಿ ಸಚಿವಾಲಯದ 'ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ' -IV ಅಡಿಯಲ್ಲಿ ಎಲ್ಲಾ ಋತುಗಳಿಗೂ ಸೂಕ್ತವಾದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಗಡಿ ಗ್ರಾಮಗಳು ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿರುವುದರಿಂದ, ಸಂಪುಟ ಕಾರ್ಯದರ್ಶಿಗಳ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಅವುಗಳನ್ನು ಪರಿಹರಿಸಲು ಯೋಜನಾ ಮಾರ್ಗಸೂಚಿಗಳಲ್ಲಿ ಸಡಿಲಿಕೆಗಳನ್ನು ಶಿಫಾರಸು ಮಾಡಬಹುದು. ಗೃಹ ಸಚಿವಾಲಯವು ಇದರ ನೋಡಲ್ ಸಚಿವಾಲಯವಾಗಿದೆ. ಸಂಯೋಜಿತ ಯೋಜನೆ ಮತ್ತು ಅನುಷ್ಠಾನಕ್ಕಾಗಿ ಇದು ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು ಮತ್ತು ಗಡಿ ರಕ್ಷಣಾ ಪಡೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.

ನೆಲಮಟ್ಟದ ಪ್ರಭಾವ

ಪ್ರಾರಂಭವಾದಂದಿನಿಂದ, 'ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ-I' ಉತ್ತರ ಗಡಿ ಗ್ರಾಮಗಳಲ್ಲಿ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಡಿಪಾಯ ಹಾಕಿದೆ.

ಜುಲೈ 2026 ರ ಹೊತ್ತಿಗೆ, ಗೃಹ ಸಚಿವಾಲಯವು ₹3,020.32 ಕೋಟಿ ವೆಚ್ಚದ 1,248 ಯೋಜನೆಗಳನ್ನು ಮಂಜೂರು ಮಾಡಿದೆ. ಯೋಜನೆಗಳ ಒಗ್ಗೂಡಿಸುವಿಕೆಯ ಅಡಿಯಲ್ಲಿ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಂದ ಹೆಚ್ಚುವರಿಯಾಗಿ 1,655 ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ₹953.47 ಕೋಟಿ ಮೊತ್ತವನ್ನು ಬಿಡುಗಡೆ ಮಾಡಲಾಗಿದ್ದು, ಅವುಗಳಿಂದ 283 ಯೋಜನೆಗಳು ಪೂರ್ಣಗೊಂಡಿವೆ ಎಂದು ವರದಿಯಾಗಿದೆ. ಮಂಜೂರಾದ ಯೋಜನೆಗಳ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಕೋಷ್ಟಕವನ್ನು ಕೆಳಗೆ ನೀಡಲಾಗಿದೆ.

ಕ್ರ. ಸಂ.

ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ

ಗೃಹ ಸಚಿವಾಲಯವು ಮಂಜೂರು ಮಾಡಿದ ಯೋಜನೆಗಳು

1.

ಅರುಣಾಚಲ ಪ್ರದೇಶ

832

2.

ಹಿಮಾಚಲ ಪ್ರದೇಶ

98

3.

ಲಡಾಖ್ (ಕೇಂದ್ರಾಡಳಿತ ಪ್ರದೇಶ)

79

4.

ಸಿಕ್ಕಿಂ

87

5.

ಉತ್ತರಾಖಂಡ

152

ಒಟ್ಟು

 

1,248

ಸಂಪರ್ಕ: ರಸ್ತೆಗಳು ಮತ್ತು ಸುದೀರ್ಘ ವಿಸ್ತೀರ್ಣದ ಸೇತುವೆಗಳು

ಒಟ್ಟಾರೆಯಾಗಿ, ₹2,481.93 ಕೋಟಿ ವೆಚ್ಚದ 111 ರಸ್ತೆ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಈ ರಸ್ತೆಗಳು ಹಿಂದೆ ಯಾವುದೇ ರಸ್ತೆ ಸಂಪರ್ಕವನ್ನು ಹೊಂದಿರದ 134 ಗ್ರಾಮಗಳನ್ನು ಸಂಪರ್ಕಿಸಲಿವೆ. ಈ ಯೋಜನೆಗಳ ಅಡಿಯಲ್ಲಿ ಒಟ್ಟು 35 ಸುದೀರ್ಘ ವಿಸ್ತೀರ್ಣದ ಸೇತುವೆಗಳನ್ನು ಸಹ ಮಂಜೂರು ಮಾಡಲಾಗಿದೆ. ಉತ್ತಮ ರಸ್ತೆಗಳು ಪ್ರಯಾಣವನ್ನು ಸುಲಭಗೊಳಿಸುತ್ತವೆ, ಸ್ಥಳೀಯ ಮಾರುಕಟ್ಟೆಗಳನ್ನು ವಿಸ್ತರಿಸುತ್ತವೆ ಮತ್ತು ಈ ಗ್ರಾಮಗಳಲ್ಲಿ ಪ್ರವಾಸೋದ್ಯಮವನ್ನು ಬೆಂಬಲಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.

ಆದಾಯದ ಹೊಸ ಮೂಲವಾಗಿ ಪ್ರವಾಸೋದ್ಯಮ ಪ್ರವಾಸೋದ್ಯಮವು ನೆಲಮಟ್ಟದಲ್ಲಿ ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. 'ವಿವಿಪಿ-I' ಅಡಿಯಲ್ಲಿ, ₹145 ಕೋಟಿ ವೆಚ್ಚದ 327 ಪ್ರವಾಸೋದ್ಯಮ ಯೋಜನೆಗಳನ್ನು ಅನುಮೋದಿಸಲಾಗಿದೆ. ಇವುಗಳಲ್ಲಿ ವೀಕ್ಷಣಾ ತಾಣಗಳು, ಸಾಹಸ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಇಕೋ-ರೆಸಾರ್ಟ್‌ಗಳು, ಚಾರಣ ಮಾರ್ಗಗಳು ಮತ್ತು ಪ್ರವಾಸಿ ಕೇಂದ್ರಗಳು ಸೇರಿವೆ.

ಪ್ರಚಾರ ಮತ್ತು ಸೇವಾ ವಿತರಣೆ 31 ಜುಲೈ 2026 ರವರೆಗೆ 8,800 ಕ್ಕೂ ಹೆಚ್ಚು ಚಟುವಟಿಕೆಗಳನ್ನು ನಡೆಸಲಾಗಿದೆ. ಇವುಗಳಲ್ಲಿ ಜಾಗೃತಿ ಅಭಿಯಾನಗಳು, ಸೇವಾ ವಿತರಣಾ ಶಿಬಿರಗಳು, ಆರೋಗ್ಯ ಮತ್ತು ಪಶುವೈದ್ಯಕೀಯ ಶಿಬಿರಗಳು ಹಾಗೂ ಕೌಶಲ್ಯ ತರಬೇತಿ ಸೇರಿವೆ. ಅರುಣಾಚಲ ಪ್ರದೇಶವು 2,990 ಚಟುವಟಿಕೆಗಳನ್ನು ಮತ್ತು ಲಡಾಖ್ 2,221 ಚಟುವಟಿಕೆಗಳನ್ನು ದಾಖಲಿಸಿವೆ. ಉತ್ತರಾಖಂಡ 2,038, ಹಿಮಾಚಲ ಪ್ರದೇಶ 1,037 ಮತ್ತು ಸಿಕ್ಕಿಂ 530 ಚಟುವಟಿಕೆಗಳನ್ನು ನಡೆಸಿವೆ.

ನಿಮಗೆ ತಿಳಿದಿದೆಯೇ? 'ವಿಕಸಿತ ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ' ಗಡಿ ಗ್ರಾಮಗಳನ್ನು ಭಾರತದ ಯುವಜನತೆಗಾಗಿ ಜೀವಂತ ತರಗತಿ ಕೊಠಡಿಗಳಾಗಿ ಪರಿವರ್ತಿಸುತ್ತದೆ. 2026 ರಲ್ಲಿ, ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ 400 ಕ್ಕೂ ಹೆಚ್ಚು ಸ್ವಯಂಸೇವಕರು ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ 74 ಗಡಿ ಗ್ರಾಮಗಳಲ್ಲಿ ಒಂದು ವಾರವನ್ನು ಕಳೆದರು. ಅವರು ಸಮುದಾಯ ಸೇವೆ, ಸಾಂಸ್ಕೃತಿಕ ವಿನಿಮಯ ಮತ್ತು ತಳಮಟ್ಟದ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ವಿವಿಪಿ: ಮೂಲಸೌಕರ್ಯ ಮೀರಿದ ಪ್ರಭಾವ

'ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ'ನ ಪ್ರಭಾವವು ಕೇವಲ ಮೂಲಸೌಕರ್ಯಕ್ಕೆ ಸೀಮಿತವಾಗದೆ ಭದ್ರತೆ, ಜೀವನೋಪಾಯ, ಆಡಳಿತ ಮತ್ತು ಸಮುದಾಯದ ಸಾಮರ್ಥ್ಯವನ್ನು ಬಲಪಡಿಸಲು ವಿಸ್ತರಿಸುತ್ತದೆ.

ಭದ್ರತೆ: ಜನಭರಿತ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಗಡಿಪ್ರದೇಶವು ಗಡಿ ರಕ್ಷಣಾ ಪಡೆಗಳ ಕಾರ್ಯಚಟುವಟಿಕೆಗೆ ಬೆಂಬಲ ನೀಡುತ್ತದೆ. ಎರಡೂ ಹಂತಗಳು ರಾಷ್ಟ್ರಕ್ಕೆ ವ್ಯೂಹಾತ್ಮಕ ಆಸ್ತಿಯಾಗಿ ಕಾರ್ಯಾಚರಿಸುವ ಬಲವಾದ ಗಡಿ ಜನಸಂಖ್ಯೆಯನ್ನು ಸೃಷ್ಟಿಸಲು ಶ್ರಮಿಸುತ್ತವೆ.

ಜನಸಂಖ್ಯಾಶಾಸ್ತ್ರ ಮತ್ತು ಹಿಮ್ಮುಖ ವಲಸೆ: ಜೀವನೋಪಾಯದ ಅವಕಾಶಗಳು ಮತ್ತು ಸುಧಾರಿತ ಸಂಪರ್ಕ ಜಾಲವು ಗಡಿ ಗ್ರಾಮಗಳಲ್ಲೇ ಉಳಿದುಕೊಳ್ಳಲು ಕುಟುಂಬಗಳಿಗೆ ಪ್ರೇರಣೆ ನೀಡುತ್ತವೆ. ಅರುಣಾಚಲ ಪ್ರದೇಶದ ಕುರುಂಗ್ ಕುಮೇ, ದಿಬಾಂಗ್ ವ್ಯಾಲಿ ಮತ್ತು ಶಿ-ಯೋಮಿ ಜಿಲ್ಲೆಗಳ ಗಡಿ ಗ್ರಾಮಗಳ ಜನರು ತಮ್ಮ ಗ್ರಾಮಗಳಿಗೆ ಹಿಂತಿರುಗುತ್ತಿದ್ದಾರೆ. ಇದು ಈ ಕಾರ್ಯಕ್ರಮದ ಪ್ರಭಾವವನ್ನು ತೋರಿಸುತ್ತದೆ.

ಅರ್ಥವ್ಯವಸ್ಥೆ: ಗಡಿ ಪ್ರವಾಸೋದ್ಯಮ, ಸಹಕಾರ ಸಂಘಗಳು, ಸ್ವಸಹಾಯ ಗುಂಪುಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳು ಹಿಂದೆ ಆರ್ಥಿಕ ಅವಕಾಶಗಳು ಸೀಮಿತವಾಗಿದ್ದ ಪ್ರದೇಶಗಳಲ್ಲಿ ಸ್ಥಳೀಯ ಆದಾಯದ ಮೂಲವನ್ನು ಸೃಷ್ಟಿಸುತ್ತಿವೆ. ಗಡಿ ರಕ್ಷಣಾ ಪಡೆಗಳಿಂದ ಮಾಡಲಾಗುವ ಸ್ಥಳೀಯ ಸಂಗ್ರಹಣೆಯು ಗ್ರಾಮದ ಒಳಗಡೆಯೇ ಖಚಿತವಾದ ಮಾರುಕಟ್ಟೆಯನ್ನು ಒದಗಿಸುತ್ತದೆ.

ಆಡಳಿತ: ಪೂರ್ಣ ಪ್ರಮಾಣದ ತಲುಪುವಿಕೆಯ ವಿಧಾನವು ಈ ಗ್ರಾಮಗಳಲ್ಲಿನ ಪ್ರತಿಯೊಂದು ಅರ್ಹ ಕುಟುಂಬವನ್ನು ಚಾಲ್ತಿಯಲ್ಲಿರುವ ಕೇಂದ್ರ ಮತ್ತು ರಾಜ್ಯ ಯೋಜನೆಗಳ ವ್ಯಾಪ್ತಿಗೆ ತರುತ್ತದೆ. ಗ್ರಾಮ ಕ್ರಿಯಾ ಯೋಜನೆಗಳು ಹಲವು ಇಲಾಖೆಗಳಲ್ಲಿ ನಡೆಯುವ ಕೆಲಸಗಳನ್ನು ಅನುಕ್ರಮವಾಗಿ ಕಾರ್ಯಗತಗೊಳಿಸಲು ಜಿಲ್ಲಾಡಳಿತಕ್ಕೆ ಒಂದೇ ಉಪಕರಣವಾಗಿ ನೆರವಾಗುತ್ತವೆ.

ಸಾಮೂಹಿಕವಾಗಿ, ಈ ನಾಲ್ಕು ಅಂಕಣಗಳು ಒಂದೇ ಕಲ್ಪನೆಯನ್ನು ವಿವರಿಸುತ್ತವೆ: ಗಡಿಭಾಗದಲ್ಲಿ ಅಭಿವೃದ್ಧಿ ಮತ್ತು ಭದ್ರತೆಗಳು ಪರಸ್ಪರ ಸ್ಪರ್ಧಾತ್ಮಕ ವಿಷಯಗಳಲ್ಲ, ಬದಲಿಗೆ ಅವು ಒಂದನ್ನೊಂದು ಬಲಪಡಿಸುತ್ತವೆ.

ನಿಮಗೆ ತಿಳಿದಿದೆಯೇ? ಅರುಣಾಚಲ ಪ್ರದೇಶದಲ್ಲಿ, ಭಾರತ-ಟಿಬೆಟ್ ಗಡಿ ಪೊಲೀಸರು ಹಾಲು, ತರಕಾರಿಗಳು, ಮೊಟ್ಟೆಗಳು ಮತ್ತು ಧಾನ್ಯಗಳನ್ನು 'ವೈಬ್ರೆಂಟ್' ಗ್ರಾಮಗಳಿಂದ ನೇರವಾಗಿ ಸಂಗ್ರಹಿಸುತ್ತಾರೆ. ಆ ಮೂಲಕ ಗಡಿ ನೆಲೆಯೊಂದು ತನ್ನ ಪಕ್ಕದ ಹೊಲ-ಗದ್ದೆಗಳಿಗೆ ನಂಬಿಕಸ್ಥ ಗ್ರಾಹಕನಾಗುತ್ತದೆ.

ಸಂಪರ್ಕಿತ ಮತ್ತು ಆತ್ಮನಿರ್ಭರ ಗಡಿಭಾಗದತ್ತ

'ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ' ಎಂಬುದು ಭಾರತದ ಗಡಿ ಸಮುದಾಯಗಳು ದೇಶದ ಪ್ರಗತಿಯಲ್ಲಿ ಸಂಪೂರ್ಣವಾಗಿ ಭಾಗಿಯಾಗುತ್ತವೆ ಎಂಬ ಭರವಸೆಯಾಗಿದೆ. ಉತ್ತಮ ಮೂಲಸೌಕರ್ಯ, ಸುಸ್ಥಿರ ಜೀವನೋಪಾಯಗಳು ಮತ್ತು ಸರ್ಕಾರಿ ಯೋಜನೆಗಳ ಒಗ್ಗೂಡಿಸುವಿಕೆಯು ಮನೆಬಾಗಿಲಲ್ಲೇ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಅದೇ ಸಮಯದಲ್ಲಿ, ಗಡಿ ಪ್ರವಾಸೋದ್ಯಮ ಮತ್ತು ಸ್ಥಳೀಯ ಉದ್ಯಮಶೀಲತೆಯು ಈ ಪ್ರದೇಶದ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತಿವೆ. ಈ ಗ್ರಾಮಗಳು ಹೆಚ್ಚು ಸಕ್ರಿಯ, ಸಮೃದ್ಧ ಮತ್ತು ಆತ್ಮನಿರ್ಭರ (ವಿಕಸಿತ) ಆಗುತ್ತಿದ್ದಂತೆ, ಅವು ಭಾರತದ ಗಡಿಗಳನ್ನು ಬಲಪಡಿಸುವುದನ್ನು ಮುಂದುವರಿಸುತ್ತವೆ ಹಾಗೂ 2047ರ ವೇಳೆಗೆ ಸುರಕ್ಷಿತ, ಸಮಗ್ರ ಮತ್ತು ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸುತ್ತವೆ.

 

References

Prime Minister’s Office

Cabinet

Ministry of Home Affairs

Ministry of Youth Affairs and Sports

Press Information Bureau (Research Unit)

Sansad TV

Click here to see pdf

 

*****

(Explainer ID: 159886) आगंतुक पटल : 22
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Tamil , Telugu , Malayalam