• Sitemap
  • Advance Search
Economy

ಜಿಲ್ಲೆಗಳನ್ನು ರಫ್ತು ಕೇಂದ್ರಗಳನ್ನಾಗಿ ಮಾಡುವುದು

ಭಾರತದ ರಫ್ತುಗಳನ್ನು ಪ್ರತಿಯೊಂದು ಜಿಲ್ಲೆಗೂ ವಿಸ್ತರಿಸುವುದು

Posted On: 02 SEP 2026 11:38AM

ಭಾರತದ ರಫ್ತು ಪಯಣವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದರೂ, ಈ ವೇಗವನ್ನು ಕಾಯ್ದುಕೊಳ್ಳಲು ಅಭಿವೃದ್ಧಿಗೆ ಹೆಚ್ಚು ಒಳಗೊಳ್ಳುವ ವಿಧಾನದ ಅಗತ್ಯವಿದೆ. 'ಜಿಲ್ಲೆಗಳನ್ನು ರಫ್ತು ಕೇಂದ್ರಗಳನ್ನಾಗಿ ಮಾಡುವುದು' (ಡಿಇಎಚ್‌) ಉಪಕ್ರಮವು ಒಳಗೊಳ್ಳುವ ರಫ್ತು ಪ್ರಗತಿಯನ್ನು ಸಾಕಾರಗೊಳಿಸುವ ಒಂದು ಚೌಕಟ್ಟಾಗಿದೆ. ಇದು ಜಾಗತಿಕ ಸಾಮರ್ಥ್ಯವಿರುವ ಉತ್ಪನ್ನಗಳು ಮತ್ತು ಸೇವೆಗಳನ್ನು ಗುರುತಿಸುವ ಮೂಲಕ ಹಾಗೂ ಸ್ಥಳೀಯ ಉತ್ಪಾದಕರನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಜೋಡಿಸುವ ಮೂಲಕ ಪ್ರತಿಯೊಂದು ಜಿಲ್ಲೆಯನ್ನು ರಫ್ತು ಯೋಜನೆಯ ಕೇಂದ್ರವಾಗಿ ಪರಿವರ್ತಿಸುತ್ತದೆ. 'ಒಂದು ಜಿಲ್ಲೆ ಒಂದು ಉತ್ಪನ್ನ' ಪರಿಕಲ್ಪನೆಯನ್ನು ಆಧರಿಸಿ, ಡಿಇಎಚ್‌ ಕೇಂದ್ರ ಮತ್ತು ರಾಜ್ಯ ಯೋಜನೆಗಳು, ಸಂಸ್ಥೆಗಳು ಹಾಗೂ ಉದ್ಯಮಗಳನ್ನು ಒಂದೆಡೆ ತರುವ ಸಮನ್ವಯ ಆಧಾರಿತ ವಿಧಾನವನ್ನು ಅಳವಡಿಸಿಕೊಂಡಿದೆ. ಜಿಲ್ಲಾ ಮಟ್ಟದ ಸಾಮರ್ಥ್ಯಗಳನ್ನು ಸಕ್ರಿಯಗೊಳಿಸುವ ಮತ್ತು ಅವುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಸಂಪರ್ಕಿಸುವ ಮೂಲಕ, ಡಿಇಎಚ್‌ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತಿದೆ, ಎಂಎಸ್‌ಎಂಇ ಗಳನ್ನು ಬಲಪಡಿಸುತ್ತಿದೆ ಹಾಗೂ ಭಾರತದ ರಫ್ತು ಪ್ರಗತಿಯನ್ನು ಹೆಚ್ಚು ಒಳಗೊಳ್ಳುವಂತೆ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಮಾಡುತ್ತಿದೆ.

ಭಾರತಕ್ಕೆ ಜಿಲ್ಲಾ-ಧಾರಿತ ರಫ್ತು ಮಾದರಿಯ ಅಗತ್ಯವೇಕಿತ್ತು

ರಫ್ತು ಭಾರತದ ಅಭಿವೃದ್ಧಿ ಪಯಣದಲ್ಲಿ ಅತ್ಯಂತ ಪ್ರಮುಖ ಯಂತ್ರವಾಗಿ ಮಾರ್ಪಟ್ಟಿದೆ. ವಿದೇಶಿ ಮಾರುಕಟ್ಟೆಗಳಿಂದ ಗಳಿಸುವ ಪ್ರತಿಯೊಂದು ರೂಪಾಯಿಯೂ ದೇಶದ ಒಳಗೆ ಉದ್ಯೋಗ, ಆದಾಯ ಮತ್ತು ಉದ್ಯಮ ರಂಗಕ್ಕೆ ಬಲ ನೀಡುತ್ತದೆ. ಭಾರತದ ಸರಕು ಮತ್ತು ಸೇವೆಗಳ ಒಟ್ಟು ರಫ್ತು 2024-25ರಲ್ಲಿ 825.25 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಸಾರ್ವಕಾಲಿಕ ಎತ್ತರವನ್ನು ತಲುಪಿದ್ದು, 2025-26ರಲ್ಲಿ ಅಂದಾಜು 863.11 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಮತ್ತಷ್ಟು ಏರಿಕೆಯಾಗಿದೆ.

ದಶಕಗಳಿಂದ, ರಫ್ತು ಚಟುವಟಿಕೆಗಳು ಕೆಲವು ನಿರ್ದಿಷ್ಟ ಕೈಗಾರಿಕಾ ವಲಯಗಳು ಮತ್ತು ಬಂದರು ನಗರಗಳಿಗೆ ಮಾತ್ರ ಸೀಮಿತವಾಗಿದ್ದವು. ಸಣ್ಣ ನಗರಗಳು, ಗ್ರಾಮೀಣ ಜಿಲ್ಲೆಗಳು ಮತ್ತು ದೂರದ ಪ್ರದೇಶಗಳು ಅನನ್ಯ ಹಾಗೂ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಹೊಂದಿದ್ದಾಗ್ಯೂ, ರಫ್ತು ಪಟ್ಟಿಗಳಲ್ಲಿ ಅಪರೂಪಕ್ಕೆ ಮಾತ್ರ ಜಾಗ ಪಡೆಯುತ್ತಿದ್ದವು. ಬಸ್ತಾರ್‌ನ ಕಬ್ಬಿನ ಕರಕುಶಲತೆ (ಐರನ್ ಕ್ರಾಫ್ಟ್), ಜಲಗಾಂವ್‌ನ ಬಾಳೆಹಣ್ಣುಗಳು ಮತ್ತು ಮೇಘಾಲಯದ ಮ್ಯಾಂಡರಿನ್ ಕಿತ್ತಳೆ ಹಣ್ಣುಗಳಂತಹ ಉತ್ಪನ್ನಗಳು ಈ ಬಳಸಿಕೊಳ್ಳದ ಸಾಮರ್ಥ್ಯಕ್ಕೆ ನಿದರ್ಶನವಾಗಿದ್ದವು.

ಈ ಅವಕಾಶವನ್ನು ಗುರುತಿಸಿದ ಸರ್ಕಾರವು 'ಜಿಲ್ಲೆಗಳನ್ನು ರಫ್ತು ಕೇಂದ್ರಗಳನ್ನಾಗಿ ಮಾಡುವುದು' (ಡಿಇಎಚ್‌) ಉಪಕ್ರಮದ ರೂಪದಲ್ಲಿ ಜಿಲ್ಲಾ-ಧಾರಿತ ರಫ್ತು ತಂತ್ರವನ್ನು ಜಾರಿಗೆ ತಂದಿತು. ಇದು ಪ್ರತಿಯೊಂದು ಜಿಲ್ಲೆಯೂ ತನ್ನದೇ ಆದ ಅನನ್ಯ ಸಾಮರ್ಥ್ಯಗಳನ್ನು ಬಳಸಿಕೊಂಡು ಭಾರತದ ರಫ್ತು ಪ್ರಗತಿಗೆ ಕೊಡುಗೆ ನೀಡಲು ಸಶಕ್ತಗೊಳಿಸಿತು.

ಒಡಿಒಪಿಯಿಂದ ಡಿಇಎಚ್‌ ವರೆಗೆ: ಚೌಕಟ್ಟಿನ ವಿಕಸನ

ಪ್ರತಿಯೊಂದು ಜಿಲ್ಲೆಯ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಹಾಗೂ ಅದರ ರಫ್ತು ಸಾಮರ್ಥ್ಯವನ್ನು ಸಕ್ರಿಯಗೊಳಿಸಲು 'ಜಿಲ್ಲೆಗಳನ್ನು ರಫ್ತು ಕೇಂದ್ರಗಳನ್ನಾಗಿ ಮಾಡುವುದು' (ಡಿಇಎಚ್‌) ಉಪಕ್ರಮವನ್ನು ಪ್ರಾರಂಭಿಸಲಾಯಿತು. ಪ್ರತಿಯೊಂದು ಜಿಲ್ಲೆಯನ್ನು ಕೇವಲ ಉತ್ಪಾದನಾ ಘಟಕವಾಗಿ ನೋಡದೆ, ರಫ್ತು ಯೋಜನೆಯ ಮೂಲ ಘಟಕವಾಗಿ ಪರಿಗಣಿಸಲಾಗುತ್ತಿದೆ. ಇದು ಸ್ಥಳೀಯ ಉದ್ದಿಮೆಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು, ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಜಿಲ್ಲಾ-ಧಾರಿತ ಆರ್ಥಿಕ ಪ್ರಗತಿಯನ್ನು ಮುನ್ನಡೆಸಲು ನೆರವಾಗುತ್ತಿದೆ. ಅಲ್ಲದೆ, ಇದು ಭಾರತದ ವಿಶಾಲ ದೃಷ್ಟಿಕೋನವಾದ 'ಆತ್ಮನಿರ್ಭರ ಭಾರತ' ಮತ್ತು 'ವೋಕಲ್ ಫಾರ್ ಲೋಕಲ್' ತತ್ವಗಳಿಗೆ ಪೂರಕವಾಗಿದೆ.

ನಿಮಗಿದು ಗೊತ್ತೇ?

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯು 2018 ರಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಒಂದು ಉಪಕ್ರಮವಾಗಿ ಪ್ರಾರಂಭವಾಯಿತು. ಇದನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸುವ ಮೊದಲು ಮೊರಾದಾಬಾದ್‌ನ ಹಿತ್ತಾಳೆ (ಬ್ರಾಸ್) ಕೈಗಾರಿಕೆಯನ್ನು ಆಧರಿಸಿ ರೂಪಿಸಲಾಗಿತ್ತು.

ಡಿಇಎಚ್‌ ನ ಕಥೆಯು 'ಒಂದು ಜಿಲ್ಲೆ ಒಂದು ಉತ್ಪನ್ನ' ಕಾರ್ಯಕ್ರಮದಿಂದ ಪ್ರಾರಂಭವಾಗುತ್ತದೆ. ODOP ಕಾರ್ಯಕ್ರಮವು ಪ್ರತಿಯೊಂದು ಜಿಲ್ಲೆಯಿಂದ ಒಂದು ವಿಶಿಷ್ಟ ಉತ್ಪನ್ನವನ್ನು ಆಯ್ಕೆ ಮಾಡಲು, ಬ್ರ್ಯಾಂಡ್ ಮಾಡಲು ಮತ್ತು ಪ್ರಚಾರ ಮಾಡಲು ಶ್ರಮಿಸಿತು, ಈ ಮೂಲಕ ಸ್ಥಳೀಯ ಗುರುತನ್ನು ಆರ್ಥಿಕ ಅವಕಾಶವನ್ನಾಗಿ ಪರಿವರ್ತಿಸಿತು.

A blue and white timeline with icons

ಈ ವಿಧಾನವನ್ನು ಮತ್ತಷ್ಟು ಬಲಪಡಿಸಲು, ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದ (ಡಿಜಿಎಫ್‌ಟಿ) ಅಡಿಯಲ್ಲಿನ ಡಿಇಎಚ್‌ ಉಪಕ್ರಮದ ಮೂಲಕ ವಾಣಿಜ್ಯ ಇಲಾಖೆಯು ತನ್ನ ಗಮನವನ್ನು ಕೇವಲ ಉತ್ಪನ್ನದ ಪ್ರಚಾರಕ್ಕೆ ಸೀಮಿತಗೊಳಿಸದೆ, ಸಮಗ್ರ ರಫ್ತು ಪ್ರಚಾರ ಮತ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸುವತ್ತ ವಿಸ್ತರಿಸಿದೆ. ಜನವರಿ 2026 ರ ಹೊತ್ತಿಗೆ, ಡಿಇಎಚ್‌ ಉಪಕ್ರಮವು ದೇಶಾದ್ಯಂತ 770 ಕ್ಕೂ ಹೆಚ್ಚು ಜಿಲ್ಲೆಗಳನ್ನು ವ್ಯಾಪಿಸಿದ್ದು, ಇದು ಒಟ್ಟಾರೆ ರಫ್ತು ಯೋಜನೆಯೊಂದಿಗೆ ತನ್ನ ವಿಸ್ತರಿಸುತ್ತಿರುವ ತಲುಪುವಿಕೆ ಮತ್ತು ಬಲವಾದ ಏಕೀಕರಣವನ್ನು ಪ್ರತಿಬಿಂಬಿಸುತ್ತದೆ.

ಡಿಇಎಚ್‌ ಅನ್ನು ಹಣಕಾಸು ಒದಗಿಸುವ ಯೋಜನೆಯಾಗಿ ಅಲ್ಲ, ಬದಲಿಗೆ ಸಂಸ್ಥೆಗಳ ‘ಸಮನ್ವಯ ಚೌಕಟ್ಟು’ ಆಗಿ ಅರ್ಥೈಸಿಕೊಳ್ಳುವುದು ಸೂಕ್ತ. ಪ್ರತ್ಯೇಕ ಆರ್ಥಿಕ ಯೋಜನೆಯನ್ನು ಪರಿಚಯಿಸುವ ಬದಲಿಗೆ, ಡಿಇಎಚ್‌ ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಅಡಿಯಲ್ಲೇ ಲಭ್ಯವಿರುವ ಅನುದಾನವನ್ನು ಬಳಸಿಕೊಳ್ಳುತ್ತದೆ. ಇದು ತಳಮಟ್ಟದಲ್ಲಿ ರಫ್ತು, ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡುತ್ತದೆ. ಈ ಮೂಲಕ, ಇದು ಜಿಲ್ಲಾ-ನಿರ್ದಿಷ್ಟ ರಫ್ತು ಸವಾಲುಗಳನ್ನು ಪರಿಹರಿಸುತ್ತದೆ ಮತ್ತು ಜಿಲ್ಲೆಯ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.

ಸಂಸ್ಥಾಗತ ರಚನೆ

ಡಿಇಎಚ್‌ ಕೇಂದ್ರ, ರಾಜ್ಯಗಳು ಮತ್ತು ಜಿಲ್ಲೆಗಳ ನಡುವಿನ ಹಂತ-ಹಂತದ ಸಮನ್ವಯ ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುತ್ತದೆ. ವಾಣಿಜ್ಯ ಇಲಾಖೆಯು ಒಟ್ಟಾರೆ ನೀತಿ ನಿರ್ದೇಶನವನ್ನು ನೀಡಿದರೆ, ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಜಾರಿಯ ಉಸ್ತುವಾರಿ ವಹಿಸುತ್ತದೆ, ಪಾಲುದಾರರ ನಡುವೆ ಸಮನ್ವಯವನ್ನು ಕಲ್ಪಿಸುತ್ತದೆ ಮತ್ತು ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತದೆ.

  • ರಾಜ್ಯ ಮಟ್ಟದಲ್ಲಿ, ರಾಜ್ಯ ರಫ್ತು ಪ್ರಚಾರ ಸಮಿತಿಗಳು ಯೋಜನೆಯ ಜಾರಿಗೆ ಮಾರ್ಗದರ್ಶನ ನೀಡುತ್ತವೆ ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯತೆಯನ್ನು ಖಚಿತಪಡಿಸುತ್ತವೆ.
  • ಜಿಲ್ಲಾ ಮಟ್ಟದಲ್ಲಿ, ಜಿಲ್ಲಾ ರಫ್ತು ಪ್ರಚಾರ ಸಮಿತಿಗಳು (ಡಿಇಪಿಸಿಗಳು) ರಫ್ತು ಅವಕಾಶಗಳನ್ನು ಗುರುತಿಸುತ್ತವೆ, ಸ್ಥಳೀಯ ಸವಾಲುಗಳನ್ನು ಪರಿಹರಿಸುತ್ತವೆ ಹಾಗೂ ಉದ್ಯಮಗಳು, ರಫ್ತುದಾರರು ಮತ್ತು ಇತರ ಪಾಲುದಾರರೊಂದಿಗೆ ಸಮನ್ವಯ ಸಾಧಿಸುತ್ತವೆ.

ಜಿಲ್ಲಾ ರಫ್ತು ಕ್ರಿಯಾ ಯೋಜನೆಗಳನ್ನು (ಡಿಇಎಪಿಗಳು) ಸಿದ್ಧಪಡಿಸುವುದು ಡಿಇಪಿಸಿ ಗಳ ಒಂದು ಪ್ರಮುಖ ಜವಾಬ್ದಾರಿಯಾಗಿದೆ. ಈ ಯೋಜನೆಗಳು ರಫ್ತು ಸಾಮರ್ಥ್ಯವಿರುವ ಉತ್ಪನ್ನಗಳು ಮತ್ತು ಸೇವೆಗಳನ್ನು ಗುರುತಿಸುತ್ತವೆ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಅನ್ನು ಮೌಲ್ಯಮಾಪನ ಮಾಡುತ್ತವೆ ಹಾಗೂ ರಫ್ತು ಅಡೆತಡೆಗಳನ್ನು ಕಂಡುಕೊಳ್ಳುತ್ತವೆ. ಅಲ್ಲದೆ, ಅವು ಸ್ಪರ್ಧಾತ್ಮಕತೆ ಮತ್ತು ಮಾರುಕಟ್ಟೆ ಪ್ರವೇಶವನ್ನು ಸುಧಾರಿಸಲು ಅಗತ್ಯವಿರುವ ಮಧ್ಯಸ್ಥಿಕೆಗಳನ್ನು (ಸಲಹೆಗಳನ್ನು) ಶಿಫಾರಸು ಮಾಡುತ್ತವೆ. ಮಾರ್ಚ್ 2026 ರ ಹೊತ್ತಿಗೆ, 590 ಜಿಲ್ಲೆಗಳಿಗೆ ಕರಡು ಡಿಇಎಪಿ ಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳಲ್ಲಿ 249 ಕರಡುಗಳನ್ನು ಸಂಬಂಧಪಟ್ಟ ಡಿಇಪಿಸಿ ಗಳು ಅಧಿಕೃತವಾಗಿ ಅಂಗೀಕರಿಸಿವೆ.

ಜಿಲ್ಲಾ ಮಟ್ಟದ ರಫ್ತು ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು

ರಫ್ತಿಗೆ ಕೇವಲ ಸ್ಪರ್ಧಾತ್ಮಕ ಉತ್ಪನ್ನವೊಂದೇ ಸಾಲದು. ಜಿಲ್ಲೆಗಳು ತಮ್ಮ ರಫ್ತು ಸಿದ್ಧತೆಯನ್ನು ಬಲಪಡಿಸಿಕೊಳ್ಳಲು ಅಗತ್ಯವಿರುವ ರಫ್ತುದಾರರ ಸಾಮರ್ಥ್ಯ ವೃದ್ಧಿ, ರಫ್ತು ಸಂಬಂಧಿತ ಲಾಜಿಸ್ಟಿಕ್ಸ್, ಗುಣಮಟ್ಟದ ಮಾನದಂಡಗಳು ಮತ್ತು ಮಾರುಕಟ್ಟೆ ಪ್ರವೇಶದ ಕುರಿತಾದ ಅರಿವಿನ ಕೊರತೆಯನ್ನು ನೀಗಿಸಲು ಡಿಇಎಚ್‌ ನೆರವಾಗುತ್ತದೆ.

ಉತ್ಪನ್ನಗಳು ಮತ್ತು ಸೇವೆಗಳ ಮ್ಯಾಪಿಂಗ್ (ಸಮೀಕ್ಷೆ/ಗುರುತಿಸುವಿಕೆ)

ಡಿಇಎಚ್‌ ವಿವಿಧ ಜಿಲ್ಲೆಗಳಲ್ಲಿ ರಫ್ತು ಮಾಡಲು ಯೋಗ್ಯವಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಗುರುತಿಸುತ್ತದೆ. ಇವುಗಳಲ್ಲಿ ಭೌಗೋಳಿಕ ಸೂಚ್ಯಂಕ ಟ್ಯಾಗ್ ಹೊಂದಿರುವ ಉತ್ಪನ್ನಗಳು, ಕೃಷಿ ವಲಯಗಳು, ಆಟಿಕೆ ಉತ್ಪಾದನಾ ಕೇಂದ್ರಗಳು ಮತ್ತು ಎಂಜಿನಿಯರಿಂಗ್ ಸರಕುಗಳು ಮುಂತಾದವುಗಳು ಸೇರಿವೆ. ಜಿಲ್ಲಾ-ನಿರ್ದಿಷ್ಟ ಮ್ಯಾಪಿಂಗ್ ಮಾಡುವುದು ಉದ್ದೇಶಿತ ರಫ್ತು ತಂತ್ರಗಳನ್ನು ರೂಪಿಸಲು ನೆರವಾಗುತ್ತದೆ. ರಫ್ತು ಸಾಮರ್ಥ್ಯವನ್ನು ಹೊಂದಿರುವ ಕೆಲವು ಪ್ರಮುಖ ಉತ್ಪನ್ನಗಳು ಹೀಗಿವೆ:

ಉತ್ಪನ್ನ

ಜಿಲ್ಲೆ

ರಾಜ್ಯ

ಸೆರಾಮಿಕ್ ಮತ್ತು ಟೈಲ್ಸ್, ಆಲೂಗಡ್ಡೆ

ಸಬರ್‌ಕಾಂಠಾ

ಗುಜರಾತ್

ಖನಿಜಗಳು, ಕೃಷಿ ಸಂಸ್ಕರಣೆ, ಗಾಜು ಮತ್ತು ಟೈಲ್ಸ್

ಅರಾವಳಿ

ಗುಜರಾತ್

ಜಲಗಾಂವ್ ಬಾಳೆಹಣ್ಣು, ಜಲಗಾಂವ್ ಭರೀತ್ ಬದನೆಕಾಯಿ

ಜಲಗಾಂವ್

ಮಹಾರಾಷ್ಟ್ರ

ಕಿತ್ತಳೆ (ಆರೆಂಜ್)

ಅಗರ್ ಮಾಳವ

ಮಧ್ಯಪ್ರದೇಶ

ಬಸ್ತಾರ್ ಐರನ್ ಕ್ರಾಫ್ಟ್ (ಕಬ್ಬಿನ ಕರಕುಶಲತೆ), ಅಕ್ಕಿ, ಜೋಳ, ಮೆಕ್ಕೆಜೋಳ

ಬಸ್ತಾರ್

ಛತ್ತೀಸ್‌ಗಢ

ಬಿದಿರಿನ ಕರಕುಶಲತೆ, ಗೋಡಂಬಿ

ಜಮ್ತಾರಾ

ಜಾರ್ಖಂಡ್

ವಿವಿಧ ಜಿಲ್ಲೆಗಳಾದ್ಯಂತ ಇರುವ ಡಿಇಎಚ್‌ ಉತ್ಪನ್ನಗಳ ಪಟ್ಟಿಯನ್ನು ಇಲ್ಲಿ ವೀಕ್ಷಿಸಬಹುದು.

ಜಾಗತಿಕ ಮಾನದಂಡಗಳನ್ನು ತಲುಪುವುದು

ಒಮ್ಮೆ ಗುರುತಿಸಿದ ನಂತರ, ಈ ಉತ್ಪನ್ನಗಳು ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಗುಣಮಟ್ಟದ ಮಾನದಂಡಗಳು, ಪರೀಕ್ಷಾ ಸೌಲಭ್ಯಗಳು, ಪ್ಯಾಕೇಜಿಂಗ್ (ಪೊಟ್ಟಣ ಕಟ್ಟುವಿಕೆ), ಬ್ರ್ಯಾಂಡಿಂಗ್ ಮತ್ತು ಪ್ರಮಾಣೀಕರಣದ ಬಗ್ಗೆ ಅರಿವು ಮೂಡಿಸಲು ಮತ್ತು ಸಾಮರ್ಥ್ಯ ವೃದ್ಧಿಸಲು ಡಿಇಎಚ್‌ ಬೆಂಬಲ ನೀಡುತ್ತದೆ. ಇದರಿಂದ ಸ್ಥಳೀಯ ಸರಕುಗಳು ಜಾಗತಿಕ ಅನುಸರಣಾ (ಕಂಪ್ಲೈಯನ್ಸ್) ಅಗತ್ಯತೆಗಳನ್ನು ಸುಲಭವಾಗಿ ಪೂರೈಸಲು ಸಹಾಯವಾಗುತ್ತದೆ.

ಡಿಜಿಟಲ್ ರಫ್ತಿಗೆ ಅನುವು ಮಾಡಿಕೊಡುವುದು

ಡಿಜಿಟಲ್ ಪ್ರವೇಶವು ದೂರದ ಪ್ರದೇಶಗಳಲ್ಲಿರುವ ವ್ಯಾಪಾರಗಳಿಗೂ ಸಹ ಅತ್ಯಂತ-ಸ್ಥಳೀಯ (ಹೈಪರ್-ಲೋಕಲ್) ತಲುಪುವಿಕೆ ಮತ್ತು ವಿಸ್ತೃತ ಮಾರುಕಟ್ಟೆ ಪ್ರವೇಶವನ್ನು ಸಾಧ್ಯವಾಗಿಸಿದೆ. ಡಿಇಎಚ್‌ ಉಪಕ್ರಮದ ಅಡಿಯಲ್ಲಿ ಅಮೆಜಾನ್, ಶಿಪ್‌ರಾಕೆಟ್ ಮತ್ತು ಡಿಎಚ್‌ಎಲ್ ನಂತಹ ಇ-ಕಾಮರ್ಸ್ ವೇದಿಕೆಗಳೊಂದಿಗಿನ ಪಾಲುದಾರಿಕೆಗಳು, ಸರಕು ಸಾಗಣೆ ದರಗಳ ಏರಿಳಿತಗಳನ್ನು ತಡೆಗಟ್ಟಲು ಎಂಎಸ್‌ಎಂಇ ಗಳಿಗೆ ಕೈಗೆಟುಕುವ ವೆಚ್ಚದ ಕೊರಿಯರ್ ಶಿಪ್ಪಿಂಗ್ ಪರ್ಯಾಯಗಳನ್ನು ಒದಗಿಸುತ್ತವೆ. 'ಡಾಕ್ ಘರ್ ನಿರ್ಯಾತ್ ಕೇಂದ್ರ'ಗಳು ದಾಖಲೀಕರಣ, ಪ್ಯಾಕೇಜಿಂಗ್ ಮತ್ತು ಸಣ್ಣ ರವಾನೆಗಳಿಗಾಗಿ ಕಡಿಮೆ-ವೆಚ್ಚದ ಅಂಚೆ ರಫ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ಈ ತಲುಪುವಿಕೆಯನ್ನು ಮತ್ತಷ್ಟು ವಿಸ್ತರಿಸುತ್ತವೆ.

ಸಾಮರ್ಥ್ಯ ವೃದ್ಧಿ ಮತ್ತು ಜನರನ್ನು ತಲುಪುವುದು

ರಫ್ತು ಸಿದ್ಧತೆಯನ್ನು ಹೆಚ್ಚಿಸಲು, ಡಿಜಿಎಫ್‌ಟಿ ಪ್ರಾದೇಶಿಕ ಅಧಿಕಾರಿಗಳು ಜಿಲ್ಲಾಡಳಿತಗಳೊಂದಿಗೆ ಸೇರಿ ಲಾಜಿಸ್ಟಿಕ್ಸ್ ಯೋಜನೆ, ರಫ್ತು ಕಾರ್ಯವಿಧಾನಗಳು, ಪ್ಯಾಕೇಜಿಂಗ್ ನಿಯಮಗಳು ಮತ್ತು ನಿಯಂತ್ರಕ ಅನುಸರಣೆಗಳನ್ನು ಒಳಗೊಂಡಂತೆ ಸಾಮರ್ಥ್ಯ ವೃದ್ಧಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ವಿವಿಧ ಪರಿಸರ ವ್ಯವಸ್ಥೆಯ ಪಾಲುದಾರರು ಈ ಜಾಗೃತಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ಸಕ್ರಿಯವಾಗಿ ಕೊಡುಗೆ ನೀಡಿದ್ದಾರೆ. ಇವುಗಳಲ್ಲಿ ಭಾರತೀಯ ರಫ್ತು ಸಾಲ ಖಾತರಿ ನಿಗಮ, ಕರಕುಶಲ ವಸ್ತುಗಳ ರಫ್ತು ಉತ್ತೇಜನ ಮಂಡಳಿ, ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ, ಎಂಎಸ್‌ಎಂಇ ಸಚಿವಾಲಯ, ಇಂಡಿಯಾ ಪೋಸ್ಟ್ ಮತ್ತು ಎಕ್ಸಿಮ್ ಬ್ಯಾಂಕ್ ಸೇರಿವೆ. ಈ ಕಾರ್ಯಕ್ರಮಗಳು ಗುರುತಿಸಲಾದ ಸಮಸ್ಯೆಗಳನ್ನು ನಿವಾರಿಸಲು ರಫ್ತುದಾರರಿಗೆ ಮೌಲ್ಯಯುತವಾದ ಕೌಶಲ್ಯಗಳನ್ನು ಒದಗಿಸಿವೆ. ಅಲ್ಲದೆ, ಪಾವತಿ-ಸಂಬಂಧಿತ ಸಮಸ್ಯೆಗಳು, ವಿಶ್ವಾಸ ಮತ್ತು ಖರೀದಿದಾರರ ಪರಿಶೀಲನೆಯಂತಹ ಇ-ಕಾಮರ್ಸ್ ಅಳವಡಿಕೆಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ಅರಿವು ಹೆಚ್ಚಿಸುವುದರ ಮೇಲೂ ಇವು ಗಮನಹರಿಸುತ್ತವೆ.

ಅಭಿವೃದ್ಧಿಗಾಗಿ ತಳಮಟ್ಟದ ಉಪಕ್ರಮಗಳನ್ನು ಪೋಷಿಸುವುದು

ವಿಶೇಷ ಸಂಸ್ಥೆಗಳೊಂದಿಗಿನ ಪಾಲುದಾರಿಕೆಗಳ ಮೂಲಕ ಡಿಇಎಚ್‌ ಗೆ ಬೆಂಬಲ ನೀಡಲಾಗುತ್ತಿದೆ. ಆಯ್ದ ಜಿಲ್ಲೆಗಳಲ್ಲಿ ರಫ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಡಿಜಿಎಫ್‌ಟಿ ಎಕ್ಸಿಮ್ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಸಹಯೋಗದ ಭಾಗವಾಗಿ, ಎಕ್ಸಿಮ್ ಬ್ಯಾಂಕ್‌ನ 'ಗ್ರಾಸ್‌ರೂಟ್ಸ್ ಇನಿಶಿಯೇಟಿವ್ಸ್ ಫಾರ್ ಡೆವಲಪ್‌ಮೆಂಟ್' ಕಾರ್ಯಕ್ರಮದ ಅಡಿ ಬೆಂಬಲ ನೀಡಲು ಆರು ಜಿಲ್ಲೆಗಳನ್ನು - ಅನಂತಪುರ, ರಾಯ್‌ಪುರ, ಸೋಲನ್, ತಿರುಪ್ಪೂರ್, ಕಾನ್ಪುರ ಮತ್ತು ಕೊಲ್ಲಾಪುರ - ಆಯ್ಕೆ ಮಾಡಲಾಗಿದೆ. ಈ ಉಪಕ್ರಮವು ವಲಯ-ನಿರ್ದಿಷ್ಟ ಅಡೆತಡೆಗಳನ್ನು ಪರಿಹರಿಸುತ್ತದೆ, ಸಂಭಾವ್ಯ ಫಲಾನುಭವಿಗಳನ್ನು ಗುರುತಿಸುತ್ತದೆ ಮತ್ತು ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಜಿಲ್ಲಾ-ನಿರ್ದಿಷ್ಟ ಮಧ್ಯಸ್ಥಿಕೆಗಳನ್ನು ರೂಪಿಸುತ್ತದೆ.

ನಿಮಗಿದು ಗೊತ್ತೇ?

ಭಾರತದ ಹೆಣಿಗೆ ಉಡುಪುಗಳ (ನಿಟ್‌ವೇರ್) ರಾಜಧಾನಿ ಎಂದೇ ಕರೆಯಲ್ಪಡುವ ತಿರುಪ್ಪೂರ್, 2025-26ರ ಹಣಕಾಸು ವರ್ಷದಲ್ಲಿ ₹46,000 ಕೋಟಿಗಳ ಸಾರ್ವಕಾಲಿಕ ದಾಖಲೆಯ ರಫ್ತು ಸಾಧನೆ ಮಾಡಿದೆ. ತಿರುಪ್ಪೂರ್ ರಫ್ತುದಾರರ ಸಂಘವು ಈಗ 2030 ರ ವೇಳೆಗೆ ₹1 ಲಕ್ಷ ಕೋಟಿ ರಫ್ತು ಮಾಡುವ ಪ್ರಮುಖ ಗುರಿಯನ್ನು ನಿಗದಿಪಡಿಸಿದೆ. ಇದು 2030ರ ವೇಳೆಗೆ ಜವಳಿ ರಫ್ತನ್ನು 38 ಬಿಲಿಯನ್ ಡಾಲರ್‌ನಿಂದ 100 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಭಾರತದ ಗುರಿಗೆ ಪೂರಕವಾಗಿದೆ.

ಡಿಇಎಚ್‌ ಅನುಷ್ಠಾನಕ್ಕಾಗಿ ಗಮನಹರಿಸಿದ (ಫೋಕಸ್ಡ್) ವಿಧಾನ

ಅನುಷ್ಠಾನವನ್ನು ಕ್ಷಿಪ್ರಗೊಳಿಸಲು, ಸರ್ಕಾರವು 1 ಜೂನ್ 2026 ರಿಂದ 'ಜಿಲ್ಲೆಗಳನ್ನು ರಫ್ತು ಕೇಂದ್ರಗಳನ್ನಾಗಿ ಮಾಡುವುದು' (ಡಿಇಎಚ್‌) ಉಪಕ್ರಮದ ಅಡಿಯಲ್ಲಿ ಫಲಿತಾಂಶ-ಸರಿತ, ಗಮನಹರಿಸಿದ ಮತ್ತು ಹಂತ-ಹಂತದ ವಿಧಾನವನ್ನು ಅಳವಡಿಸಿಕೊಂಡಿದೆ. ಅನುಷ್ಠಾನದ ಮೊದಲ ಹಂತದಲ್ಲಿ, 24 ಡಿಜಿಎಫ್‌ಟಿ ಪ್ರಾದೇಶಿಕ ಅಧಿಕಾರಿಗಳು ಮತ್ತು 11 ಪಾಲುದಾರ ಸಂಸ್ಥೆಗಳ ಬೆಂಬಲದೊಂದಿಗೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಇರುವ ಜಿಲ್ಲೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಕೇಂದ್ರ ಮತ್ತು ರಾಜ್ಯ ಯೋಜನೆಗಳ ಸಮನ್ವಯತೆ, ಜಿಐ ಉತ್ಪನ್ನಗಳು ಮತ್ತು ಎಂಎಸ್‌ಎಂಇ ವಲಯಗಳನ್ನು ಬಳಸಿಕೊಳ್ಳುವ ಮೂಲಕ ಹೊಸ ರಫ್ತುದಾರರ ನೋಂದಣಿ ಹಾಗೂ ರಫ್ತು ಮೌಲ್ಯದ ಹೆಚ್ಚಳದಂತಹ ಅಳೆಯಬಹುದಾದ ಫಲಿತಾಂಶಗಳ ಮೇಲೆ ಗಮನ ಹರಿಸಲಾಗಿದೆ.

ಒಟ್ಟಾರೆಯಾಗಿ, ಡಿಇಎಚ್‌ ಚೌಕಟ್ಟು ಜಿಲ್ಲೆಗಳು ತಮ್ಮ ದೀರ್ಘಕಾಲದ ರಚನಾತ್ಮಕ ಅಡೆತಡೆಗಳನ್ನು ಮೆಟ್ಟಿ ನಿಲ್ಲಲು ಮತ್ತು ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳನ್ನು ರಫ್ತು ಅವಕಾಶಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತಿದೆ.

ಮುಂದಿನ ಹಾದಿ

'ಜಿಲ್ಲೆಗಳನ್ನು ರಫ್ತು ಕೇಂದ್ರಗಳನ್ನಾಗಿ ಮಾಡುವುದು' ಉಪಕ್ರಮವು ಭಾರತದ ರಫ್ತು ತಂತ್ರದಲ್ಲಿ ಒಂದು ದೊಡ್ಡ ಬದಲಾವಣೆಯನ್ನು ಸೂಚಿಸುತ್ತದೆ. ಅಂದರೆ, ಕೇವಲ ಕೆಲವು ಕೈಗಾರಿಕಾ ಕೇಂದ್ರಗಳಲ್ಲಿ ಪ್ರಗತಿಯನ್ನು ಕೇಂದ್ರೀಕರಿಸುವ ಬದಲು ಪ್ರತಿಯೊಂದು ಜಿಲ್ಲೆಯ ಸಾಮರ್ಥ್ಯವನ್ನು ಸಕ್ರಿಯಗೊಳಿಸುವುದು ಇದರ ಉದ್ದೇಶವಾಗಿದೆ. ಸ್ಥಳೀಯ ಸಾಮರ್ಥ್ಯಗಳನ್ನು ಉತ್ತಮ ರಫ್ತು ಸಾಮರ್ಥ್ಯ, ಮಾರುಕಟ್ಟೆ ಪ್ರವೇಶ ಮತ್ತು ಸಂಸ್ಥಾಗತ ಬೆಂಬಲದೊಂದಿಗೆ ಸಂಯೋಜಿಸುವ ಮೂಲಕ, ಈ ಅಭಿಯಾನವು ಹೆಚ್ಚು ಒಳಗೊಳ್ಳುವ ಮತ್ತು ಸ್ಥಿತಿಸ್ಥಾಪಕ ರಫ್ತು ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ.

ಭಾರತವು 1 ಟ್ರಿಲಿಯನ್ ಅಮೆರಿಕನ್ ಡಾಲರ್ ರಫ್ತು ಸಾಧಿಸುವ ತನ್ನ ಮಹತ್ವಾಕಾಂಕ್ಷೆಯತ್ತ ಸಾಗುತ್ತಿರುವಾಗ, ಕೇಂದ್ರ, ರಾಜ್ಯಗಳು ಮತ್ತು ಜಿಲ್ಲೆಗಳ ನಡುವಿನ ಬಲವಾದ ಸಮನ್ವಯವು ಅತ್ಯಂತ ಮೂಲಭೂತವಾಗಿದೆ. ಇದು ಸ್ಥಳೀಯ ಆರ್ಥಿಕತೆಗಳನ್ನು ವ್ಯಾಪಾರ, ಹೂಡಿಕೆ ಮತ್ತು ಉದ್ಯೋಗದ ಯಂತ್ರಗಳಾಗಿ ಪರಿವರ್ತಿಸುತ್ತದೆ ಹಾಗೂ ದೇಶಾದ್ಯಂತ ರಫ್ತು-ಧಾರಿತ ಪ್ರಗತಿಯನ್ನು ವಿಸ್ತರಿಸುತ್ತದೆ.

References:

Ministry of Commerce & Industry

https://www.pib.gov.in/PressReleasePage.aspx?PRID=2197651&reg=3&lang=1

https://content.dgft.gov.in/Website/dgftprod/a667478a-d204-4d95-a71c-a58452e1c6d9/Note%20-%20Districts%20as%20Export%20Hubs%20Initiative.pdf

https://sansad.in/getFile/loksabhaquestions/annex/187/AU5109_bmg27T.pdf?source=pqals

https://www.facebook.com/DeptofCommerceIndia/videos/india-is-strengthening-district-level-export-competitiveness-through-the-distric/1826517751372921/

https://www.pib.gov.in/PressReleasePage.aspx?PRID=2280927&reg=48&lang=2

https://www.pib.gov.in/PressReleasePage.aspx?PRID=2244401&reg=3&lang=1

https://www.pib.gov.in/PressReleasePage.aspx?PRID=1897408&reg=48&lang=2

https://www.pib.gov.in/PressReleasePage.aspx?PRID=2201284&reg=3&lang=1

https://www.pib.gov.in/PressReleasePage.aspx?PRID=2256724&reg=3&lang=1

DD News

https://ddnews.gov.in/en/services-boom-drives-indias-exports-to-record-usd-863-billion-in-2025-26/

Other organizations

https://ifpuat.gujarat.gov.in/DIGIGOV/digigov.htm;jsessionid=-VKltUfx4n22mbT4IYiYjyFavY2jMvzQVM49b4Hn.DIGIGOV?actionFlag=getDistrictAsExportHubForView&pagedisp=static

https://silpasathi.wb.gov.in/export-hub/

https://prsindia.org/policy/report-summaries/implementation-of-the-districts-as-export-hubs-initiative

https://eodbodisha.odisha.gov.in/Home/DEH

ODOP

https://odopup.in/en#district-products

IBEF

https://www.ibef.org/news/government-expands-deh-initiative-to-boost-district-level-export-competitiveness

PIB Archives

https://www.pib.gov.in/PressReleasePage.aspx?PRID=2217539&reg=3&lang=1

Click here to see pdf

 

*****

(Explainer ID: 159810) आगंतुक पटल : 9
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese