Technology
ಸೈಬರ್-ಭೌತಿಕ ವ್ಯವಸ್ಥೆಗಳು
ತಂತ್ರಜ್ಞಾನ ಆಧಾರಿತ ಭವಿಷ್ಯದ ಅಡಿಪಾಯ
Posted On:
31 AUG 2026 12:33PM
|
ಸೈಬರ್-ಭೌತಿಕ ವ್ಯವಸ್ಥೆಗಳು (ಸಿಪಿಎಸ್) ಡಿಜಿಟಲ್ ಮತ್ತು ಭೌತಿಕ ಜಗತ್ತನ್ನು ಒಂದಕ್ಕೊಂದು ಜೋಡಿಸುತ್ತವೆ; ಇದು ಯಂತ್ರಗಳು ಸಂವೇದಿಸಲು, ವಿಶ್ಲೇಷಿಸಲು ಮತ್ತು ಬುದ್ಧಿವಂತಿಕೆಯಿಂದ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ. "ಅಂತರಶಿಸ್ತೀಯ ಸೈಬರ್-ಭೌತಿಕ ವ್ಯವಸ್ಥೆಗಳ ರಾಷ್ಟ್ರೀಯ ಮಿಷನ್" (ಎನ್‌ಎಂ-ಐಸಿಪಿಎಸ್) ಮೂಲಕ ಭಾರತವು ಬಲವಾದ ಸಿಪಿಎಸ್ ಪರಿಸರ ವ್ಯವಸ್ಥೆಯನ್ನು (ಇಕೋಸಿಸ್ಟಮ್) ಅಭಿವೃದ್ಧಿಪಡಿಸುತ್ತಿದೆ. ಈ ಮಿಷನ್ ದೇಶೀಯ ಸಿಪಿಎಸ್ ಸಾಮರ್ಥ್ಯಗಳನ್ನು ಮುನ್ನಡೆಸಲು ಸಂಶೋಧನಾ ಸಂಸ್ಥೆಗಳು, ಉದ್ಯಮ, ಸರ್ಕಾರ ಮತ್ತು ಜಾಗತಿಕ ಪಾಲುದಾರರನ್ನು ಒಂದಾಗಿಸುತ್ತದೆ. ಇದರ ತಂತ್ರಜ್ಞಾನ ನಾವೀನ್ಯತೆ ಕೇಂದ್ರಗಳು ಮತ್ತು ಅನುವಾದಿತ ಸಂಶೋಧನಾ ಉದ್ಯಾನವನಗಳು ಸಂಶೋಧನೆಯನ್ನು ಪ್ರಮುಖ ವಲಯಗಳಾದ್ಯಂತ ಅನ್ವಯಿಕ ಬಳಕೆಯಾಗಿ ಪರಿವರ್ತಿಸುತ್ತಿವೆ. ಈ ಪ್ರಯತ್ನಗಳು ತಂತ್ರಜ್ಞಾನ-ಚಾಲಿತ, ನಾವೀನ್ಯತೆ ಮತ್ತು ಸ್ವಾವಲಂಬಿ 'ವಿಕಸಿತ ಭಾರತ'ದತ್ತ ಭಾರತದ ಪಯಣಕ್ಕೆ ಬೆಂಬಲ ನೀಡುತ್ತಿವೆ.
|
ಸೈಬರ್-ಭೌತಿಕ ವ್ಯವಸ್ಥೆಗಳನ್ನು (ಸಿಪಿಎಸ್) ಅರ್ಥಮಾಡಿಕೊಳ್ಳುವುದು
ಜಗತ್ತು ಕೇವಲ ಕೆಲಸಗಳನ್ನು ನಿರ್ವಹಿಸುವ ಯಂತ್ರಗಳಿಂದ, ಪರಿಸ್ಥಿತಿಯನ್ನು ಸಂವೇದಿಸುವ, ಆಲೋಚಿಸುವ ಮತ್ತು ಪ್ರತಿಕ್ರಿಯಿಸುವ ಸಾಮರ್ಥ್ಯವಿರುವ ವ್ಯವಸ್ಥೆಗಳತ್ತ ಸಾಗುತ್ತಿದೆ. ಭೌತಿಕ ಮತ್ತು ಡಿಜಿಟಲ್ ಜಗತ್ತಿನ ಈ ಸಮ್ಮಿಲನವು 'ಸೈಬರ್-ಭೌತಿಕ ವ್ಯವಸ್ಥೆಗಳು' (ಸಿಪಿಎಸ್) ಎಂಬ ನೂತನ ಪೀಳಿಗೆಯ ಬುದ್ಧಿವಂತ ವ್ಯವಸ್ಥೆಗಳ ಹುಟ್ಟಿಗೆ ಕಾರಣವಾಗಿದೆ.
ಸೈಬರ್-ಭೌತಿಕ ವ್ಯವಸ್ಥೆಯು (ಸಿಪಿಎಸ್) ಸಂವೇದಕಗಳು, ಸಾಫ್ಟ್‌ವೇರ್ ಮತ್ತು ಸಂವಹನ ಜಾಲಗಳ ಮೂಲಕ ಕಂಪ್ಯೂಟಿಂಗ್ ತಂತ್ರಜ್ಞಾನಗಳನ್ನು ಭೌತಿಕ ವ್ಯವಸ್ಥೆಗಳೊಂದಿಗೆ ಜೋಡಿಸುತ್ತದೆ. ಇದು ಯಂತ್ರಗಳು ತಮ್ಮ ಸುತ್ತಲಿನ ವಾತಾವರಣವನ್ನು ಗ್ರಹಿಸಲು, ಮಾಹಿತಿಯನ್ನು ಸಂಸ್ಕರಿಸಲು ಮತ್ತು ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ನೈಜ-ಸಮಯದಲ್ಲಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, ಚಾಲಕರಹಿತ ಕಾರುಗಳು ಮಾನವನ ಕನಿಷ್ಠ ಹಸ್ತಕ್ಷೇಪದೊಂದಿಗೆ ರಸ್ತೆಗಳಲ್ಲಿ ಸಂಚರಿಸಬಲ್ಲವು. ಸ್ಮಾರ್ಟ್ ಕಾರ್ಖಾನೆಗಳು ಉತ್ಪಾದನಾ ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ಸ್ವಯಂಚಾಲಿತವಾಗಿ ಕಾರ್ಯಾಚರಣೆಗಳನ್ನು ಸರಿದೂಗಿಸಬಲ್ಲವು. ವೈದ್ಯಕೀಯ ಉಪಕರಣಗಳು ರೋಗಿಗಳನ್ನು ನಿರಂತರವಾಗಿ ಟ್ರ್ಯಾಕ್ ಮಾಡಬಹುದು ಮತ್ತು ಸಕಾಲಿಕ ಚಿಕಿತ್ಸೆಗೆ ಬೆಂಬಲ ನೀಡಬಲ್ಲವು. ಸ್ಮಾರ್ಟ್ ಕಟ್ಟಡಗಳು ನೈಜ-ಸಮಯದ ಪರಿಸ್ಥಿತಿಗಳಿಗೆ ಅನುಗುಣವಾಗಿ ಬೆಳಕು, ತಾಪಮಾನ ಮತ್ತು ವಿದ್ಯುತ್ ಬಳಕೆಯನ್ನು ನಿಯಂತ್ರಿಸಬಲ್ಲವು. ರೋಬೋಟ್ ಕ್ಲೀನರ್‌ಗಳು ಮತ್ತು ಫಿಟ್‌ನೆಸ್ ಟ್ರ್ಯಾಕರ್‌ಗಳಂತಹ ದೈನಂದಿನ ಉಪಕರಣಗಳು ಸಹ ಇದೇ ರೀತಿಯ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತವೆ.
ತನ್ನ ಮೂಲ ತತ್ವದಲ್ಲಿ, ಸಿಪಿಎಸ್ ಕಂಪ್ಯೂಟೇಶನ್ (ಗಣಕೀಕರಣ), ಸಂವಹನ ಮತ್ತು ಭೌತಿಕ ಪ್ರಕ್ರಿಯೆಗಳನ್ನು ಒಂದೆಡೆ ತರುತ್ತದೆ. ಈ ಸಂಯೋಜನೆಯು ಬುದ್ಧಿವಂತ, ಪರಸ್ಪರ ಸಂಪರ್ಕಿತ ಮತ್ತು ತಕ್ಷಣ ಸ್ಪಂದಿಸುವ ನೂತನ ಪೀಳಿಗೆಯ ವ್ಯವಸ್ಥೆಗಳನ್ನು ರೂಪಿಸುತ್ತಿದೆ.

ಸೈಬರ್-ಭೌತಿಕ ವ್ಯವಸ್ಥೆಗಳಿಗಾಗಿ ಭಾರತ ಸರ್ಕಾರದ ಪ್ರಮುಖ ಉಪಕ್ರಮಗಳು

ಸೈಬರ್-ಭೌತಿಕ ವ್ಯವಸ್ಥೆಗಳು (ಸಿಪಿಎಸ್) ಪ್ರಮುಖ ಮೂಲಸೌಕರ್ಯ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಹೆಚ್ಚು ರೂಪಿಸುತ್ತಿರುವುದರಿಂದ, ಈ ಕ್ಷೇತ್ರದಲ್ಲಿ ದೇಶೀಯ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದು ಭಾರತಕ್ಕೆ ವ್ಯೂಹಾತ್ಮಕವಾಗಿ ಅತ್ಯಂತ ಮುಖ್ಯವಾಗಿದೆ. ಈ ಪ್ರಾಮುಖ್ಯತೆಯನ್ನು ಮನಗಂಡು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು "ಅಂತರಶಿಸ್ತೀಯ ಸೈಬರ್-ಭೌತಿಕ ವ್ಯವಸ್ಥೆಗಳ ರಾಷ್ಟ್ರೀಯ ಮಿಷನ್" (ಎನ್‌ಎಂ-ಐಸಿಪಿಎಸ್) ಅನ್ನು ಜಾರಿಗೆ ತರುತ್ತಿದೆ. ಒಕ್ಕೂಟ ಸಂಪುಟವು 2018 ರಲ್ಲಿ ಒಂಬತ್ತು ವರ್ಷಗಳ ಅವಧಿಗೆ ₹3,660 ಕೋಟಿ ವೆಚ್ಚದೊಂದಿಗೆ ಈ ಮಿಷನ್‌ಗೆ ಅನುಮೋದನೆ ನೀಡಿತು. ಎನ್‌ಎಂ-ಐಸಿಪಿಎಸ್ ಆದ್ಯತೆಯ ವಲಯಗಳಾದ್ಯಂತ ಸಿಪಿಎಸ್ ಸಂಶೋಧನೆ, ನಾವೀನ್ಯತೆ ಮತ್ತು ಅನ್ವಯಿಕೆಗಳನ್ನು ಮುನ್ನಡೆಸಲು ರಾಷ್ಟ್ರೀಯ ಚೌಕಟ್ಟನ್ನು ಒದಗಿಸುತ್ತದೆ.
ಈ ಮಿಷನ್ ಶೈಕ್ಷಣಿಕ ಕ್ಷೇತ್ರ, ಉದ್ಯಮ, ಸರ್ಕಾರ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒಂದೇ ವೇದಿಕೆಯಡಿಗೆ ತರುತ್ತದೆ. ಈ ಸಮ್ಮಿಲನವು ವೈಜ್ಞಾನಿಕ ಸಂಶೋಧನೆಯನ್ನು ರಾಷ್ಟ್ರೀಯ ಆದ್ಯತೆಗಳು, ಕೈಗಾರಿಕಾ ಸಾಮರ್ಥ್ಯಗಳು ಮತ್ತು ಉದಯೋನ್ಮುಖ ಮಾರುಕಟ್ಟೆ ಅವಕಾಶಗಳೊಂದಿಗೆ ಜೋಡಿಸುತ್ತದೆ. ಇದು ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಅನುವಾದಿತ ಸಂಶೋಧನೆಯಿಂದ ಹಿಡಿದು ಉತ್ಪನ್ನ ಅಭಿವೃದ್ಧಿ ಮತ್ತು ಸ್ಟಾರ್ಟ್-ಅಪ್ ಇನ್‌ಕ್ಯುಬೇಶನ್‌ವರೆಗಿನ ಸಂಪೂರ್ಣ ನಾವೀನ್ಯತೆಯ ಪಯಣವನ್ನು ಒಳಗೊಂಡಿದೆ.
ಎನ್‌ಎಂ-ಐಸಿಪಿಎಸ್ ಉದಯೋನ್ಮುಖ ಸಿಪಿಎಸ್ ಕ್ಷೇತ್ರಗಳಲ್ಲಿ ರಾಷ್ಟ್ರೀಯ-ಆದ್ಯತೆಯ ತಂತ್ರಜ್ಞಾನಗಳು, ಪ್ರಮುಖ ಪರಿಣತಿ ಮತ್ತು ವಿಶಿಷ್ಟ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ದೇಶಾದ್ಯಂತ ವಿಶ್ವದರ್ಜೆಯ ಅಂತರಶಿಸ್ತೀಯ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಈ ಕೇಂದ್ರಗಳು ಸುಧಾರಿತ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ, ಪರಿಣತಿ ಮತ್ತು ನೀತಿ ಸಲಹೆಗಳನ್ನು ಒದಗಿಸುವ ಕೇಂದ್ರ ಬಿಂದುಗಳಾಗಿ ಕಾರ್ಯನಿರ್ವಹಿಸುತ್ತವೆ.

ಈ ಸಂಘಟಿತ ವಿಧಾನದ ಮೂಲಕ, ಎನ್‌ಎಂ-ಐಸಿಪಿಎಸ್ ಪ್ರಮುಖ ರಾಷ್ಟ್ರೀಯ ಸವಾಲುಗಳಿಗೆ ದೇಶೀಯ ಸಿಪಿಎಸ್ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಭಾರತದ ಸಾಮರ್ಥ್ಯವನ್ನು ನಿರ್ಮಿಸುತ್ತಿದೆ. ಇದು ಭಾರತೀಯ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯಿಂದ ರೂಪುಗೊಳ್ಳುವ ತಂತ್ರಜ್ಞಾನ-ಚಾಲಿತ ಭವಿಷ್ಯಕ್ಕಾಗಿ ಸಾಂಸ್ಥಿಕ ಅಡಿಪಾಯವನ್ನು ಹಾಕುತ್ತಿದೆ.
ಸೈಬರ್-ಭೌತಿಕ ಭವಿಷ್ಯದತ್ತ ಭಾರತದ ಜಿಗಿತ
ಸೈಬರ್-ಭೌತಿಕ ವ್ಯವಸ್ಥೆಗಳನ್ನು (ಸಿಪಿಎಸ್) ಸಂಶೋಧನಾ ಪ್ರಯೋಗಾಲಯಗಳಿಂದ ಪ್ರಾಯೋಗಿಕ ಅನ್ವಯಿಕ ಬಳಕೆಗೆ ತರಲು ಭಾರತವು ರಾಷ್ಟ್ರೀಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಎನ್‌ಎಂ-ಐಸಿಪಿಎಸ್ ವಿಶೇಷ ಸಾಂಸ್ಥಿಕ ಕೇಂದ್ರಗಳು, ಪರಿಣಿತ ಪ್ರತಿಭೆಗಳು ಮತ್ತು ಕೈಗಾರಿಕಾ ಪಾಲುದಾರಿಕೆಗಳ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಈ ಮಿಷನ್ ಅಡಿಯಲ್ಲಿ, ಸರ್ಕಾರವು ೨೫ ತಂತ್ರಜ್ಞಾನ ನಾವೀನ್ಯತೆ ಕೇಂದ್ರಗಳನ್ನು (ಟಿಐಎಚ್s) ಸೆಕ್ಷನ್ ೮ ಕಂಪನಿಗಳಾಗಿ ಸ್ಥಾಪಿಸಿದೆ. ಈ ಕೇಂದ್ರಗಳನ್ನು ದೇಶಾದ್ಯಂತ ಇರುವ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿವೆ. ಈ ಟಿಐಎಚ್‌ಗಳು ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ: ತಂತ್ರಜ್ಞಾನ ಅಭಿವೃದ್ಧಿ; ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿ; ನಾವೀನ್ಯತೆ, ಉದ್ಯಮಶೀಲತೆ ಮತ್ತು ಸ್ಟಾರ್ಟ್-ಅಪ್ ಅಭಿವೃದ್ಧಿ; ಮತ್ತು ಅಂತಾರಾಷ್ಟ್ರೀಯ ಸಹಯೋಗಗಳು.
ಈ ಕೇಂದ್ರಗಳು ಸಾಂಪ್ರದಾಯಿಕ ಸಂಶೋಧನಾ ಚಟುವಟಿಕೆಗಳನ್ನೂ ಮೀರಿ ಕಾರ್ಯನಿರ್ವಹಿಸುತ್ತವೆ. ಅವು ತಂತ್ರಜ್ಞಾನ ವೇದಿಕೆಗಳನ್ನು ಅಭಿವೃದ್ಧಿಪಡಿಸುತ್ತವೆ, ಸಂಶೋಧನೆಯನ್ನು ಉತ್ಪನ್ನಗಳಾಗಿ ಪರಿವರ್ತಿಸುತ್ತವೆ ಮತ್ತು ತಂತ್ರಜ್ಞಾನ ಆಧಾರಿತ ಸ್ಟಾರ್ಟ್-ಅಪ್‌ಗಳನ್ನು ಪೋಷಿಸುತ್ತವೆ. ರಾಷ್ಟ್ರೀಯ ಸವಾಲುಗಳನ್ನು ಗುರುತಿಸಲು ಮತ್ತು ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಇವು ಸರ್ಕಾರಿ ಸಚಿವಾಲಯಗಳೊಂದಿಗೆ ತೊಡಗಿಸಿಕೊಳ್ಳುತ್ತವೆ. ಈ ವಿಧಾನವು ವೈಜ್ಞಾನಿಕ ಸಾಮರ್ಥ್ಯಗಳನ್ನು ಸಮಾಜ ಮತ್ತು ಅರ್ಥವ್ಯವಸ್ಥೆಯ ಅಗತ್ಯಗಳೊಂದಿಗೆ ಜೋಡಿಸುತ್ತದೆ.

ತಂತ್ರಜ್ಞಾನ ಅಭಿವೃದ್ಧಿಯಿಂದ ತಂತ್ರಜ್ಞಾನ ಅನುವಾದದತ್ತ
ಈ ಮಿಷನ್ ಈಗ ಭರವಸೆಯ ತಂತ್ರಜ್ಞಾನಗಳನ್ನು ಬಳಕೆಗೆ ತರುವ ಮತ್ತು ವಾಣಿಜ್ಯೀಕರಣಗೊಳಿಸುವ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. 2025 ರಲ್ಲಿ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಟಿಐಎಚ್‌ಗಳನ್ನು ಆಯ್ಕೆ ಮಾಡಿ, ತಂತ್ರಜ್ಞಾನ ಅನುವಾದಿತ ಸಂಶೋಧನಾ ಉದ್ಯಾನವನಗಳಾಗಿ (ಟಿಟಿಆರ್‌ಪಿ) ಬೆಂಬಲಿಸಲಾಯಿತು. ಈ ಉದ್ಯಾನವನಗಳನ್ನು ಐಐಟಿ ಕಾನ್ಪುರ, ಐಐಎಸ್‌ಸಿ ಬೆಂಗಳುರು, ಐಐಟಿ (ಐಎಸ್‌ಎಂ) ಧನ್‌ಬಾದ್ ಮತ್ತು ಐಐಟಿ ಇಂದೋರ್‌ಗಳಲ್ಲಿ ಸ್ಥಾಪಿಸಲಾಯಿತು. ಪ್ರತಿಯೊಂದು ಟಿಟಿಆರ್‌ಪಿ ಯು ಒಂದು ವ್ಯೂಹಾತ್ಮಕ ತಂತ್ರಜ್ಞಾನ ಕ್ಷೇತ್ರದ ಮೇಲೆ ಗಮನ ಹರಿಸುತ್ತದೆ. ಐಐಟಿ ಕಾನ್ಪುರ ಸೈಬರ್ ಭದ್ರತೆಯ ಮೇಲೆ ಗಮನ ಹರಿಸಿದರೆ, ಐಐಎಸ್‌ಸಿ ಬೆಂಗಳುರು ರೊಬೊಟಿಕ್ಸ್ ಮತ್ತು ಎಐ ಸಿಸ್ಟಮ್ಸ್ ಮೇಲೆ ಗಮನ ಹರಿಸುತ್ತದೆ. ಐಐಟಿ (ಐಎಸ್‌ಎಂ) ಧನ್‌ಬಾದ್ ಅನ್ವೇಷಣೆಯಿಂದ ಖನಿಜ ಸಂಸ್ಕರಣೆಯವರೆಗಿನ ಗಣಿಗಾರಿಕೆ ತಂತ್ರಜ್ಞಾನಗಳ ಮೇಲೆ ಗಮನ ಹರಿಸುತ್ತದೆ. ಐಐಟಿ ಇಂದೋರ್ ಡಿಜಿಟಲ್ ಆರೋಗ್ಯ ರಕ್ಷಣೆಯ ಮೇಲೆ ಗಮನ ಹರಿಸುತ್ತದೆ. ಈ ನಾಲ್ಕು ಟಿಟಿಆರ್‌ಪಿಗಳನ್ನು ತಂತ್ರಜ್ಞಾನ ಅನುವಾದ ಮತ್ತು ವಾಣಿಜ್ಯೀಕರಣವನ್ನು ವೇಗಗೊಳಿಸಲು ವಿನ್ಯಾಸಗೊಳಿಸಲಾಗಿದೆ.

ತಂತ್ರಜ್ಞಾನ, ಪ್ರತಿಭೆ ಮತ್ತು ಉದ್ಯಮದ ನಿರ್ಮಾಣ
ಎನ್‌ಎಂ-ಐಸಿಪಿಎಸ್ ತನ್ನ ಟಿಐಎಚ್‌ಗಳು ಮತ್ತು ಟಿಟಿಆರ್‌ಪಿಗಳ ಮೂಲಕ ತಂತ್ರಜ್ಞಾನ, ಪ್ರತಿಭೆ ಮತ್ತು ಉದ್ಯಮವನ್ನು ಜೋಡಿಸುವ ಸಮಗ್ರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಆಗಸ್ಟ್ 2026 ರ ಹೊತ್ತಿಗೆ, ಈ ಮಿಷನ್ 1,146 ತಂತ್ರಜ್ಞಾನಗಳನ್ನು ಸಕ್ರಿಯಗೊಳಿಸಿದೆ ಮತ್ತು ಬೌದ್ಧಿಕ ಆಸ್ತಿ ಸೃಷ್ಟಿ ಹಾಗೂ ಪರವಾನಗಿ ಪಡೆಯುವುದನ್ನು ಬೆಂಬಲಿಸಿದೆ. ಇದು ಕೃಷಿ, ಆರೋಗ್ಯ ರಕ್ಷಣೆ, ಗಣಿಗಾರಿಕೆ, ಸೈಬರ್ ಭದ್ರತೆ, ಸುಧಾರಿತ ಸಂವಹನ ಮತ್ತು ಪೊಸಿಷನಿಂಗ್ ಸೇರಿದಂತೆ ಇತರ ಕ್ಷೇತ್ರಗಳಾದ್ಯಂತ 1,329 ತಂತ್ರಜ್ಞಾನ ಉತ್ಪನ್ನಗಳಿಗೆ ಕೊಡುಗೆ ನೀಡಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಕೌಶಲ್ಯ ವರ್ಧನೆಯು ಈ ಪರಿಸರ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭಗಳಾಗಿ ಉಳಿದಿವೆ. ಚಾಣಕ್ಯ ಫೆಲೋಶಿಪ್ ಕಾರ್ಯಕ್ರಮವು ಪದವಿ, ಸ್ನಾತಕೋತ್ತರ, ಪಿಎಚ್‌ಡಿ ಮತ್ತು ಪೋಸ್ಟ್ ಡಾಕ್ಟರಲ್ ಸಂಶೋಧಕರನ್ನು ಬೆಂಬಲಿಸುತ್ತದೆ. ಇದು ನಿಗದಿತ ತಂತ್ರಜ್ಞಾನ ನಾವೀನ್ಯತೆ ಕೇಂದ್ರಗಳ ಮೂಲಕ ನೈಜ-ಜಗತ್ತಿನ ಸಿಪಿಎಸ್ ಸವಾಲುಗಳನ್ನು ಪರಿಹರಿಸುವ ಯೋಜನೆಗಳಿಗೆ ಧನಸಹಾಯ ನೀಡುತ್ತದೆ. ಆಗಸ್ಟ್ 2026 ರ ಹೊತ್ತಿಗೆ, ಮಿಷನ್ 5,824 ಫೆಲೋಶಿಪ್‌ಗಳನ್ನು ನೀಡಿದೆ.
ಈ ಪ್ರಯತ್ನಗಳಿಗೆ ಭಾರತದ ವಿಶಿಷ್ಟ ಸಿಪಿಎಸ್ ಪ್ರತಿಭಾ ಸಂಪತ್ತನ್ನು ಬಲಪಡಿಸುವ ವ್ಯಾಪಕ ಕೌಶಲ್ಯಾಭಿವೃದ್ಧಿ ಉಪಕ್ರಮಗಳ ಬೆಂಬಲವೂ ಇದೆ. ಈ ಮಿಷನ್ 2.46 ಲಕ್ಷಕ್ಕೂ ಹೆಚ್ಚು ವೃತ್ತಿಪರರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಿದೆ.
ಸಂಶೋಧನೆ-ಆಧಾರಿತ ನಾವೀನ್ಯತೆಗಳು ವಾಣಿಜ್ಯೀಕರಣದತ್ತ ಸಾಗಲು ನೆರವಾಗುವ ಮೂಲಕ ಈ ಮಿಷನ್ ಉದ್ಯಮಶೀಲತೆಯನ್ನೂ ಪೋಷಿಸುತ್ತಿದೆ. ಇದು 1,136 ಸ್ಟಾರ್ಟ್-ಅಪ್‌ಗಳು ಮತ್ತು ಉಪ-ಸಂಸ್ಥೆಗಳ ಗಳನ್ನು ಪ್ರಯೋಗಾಲಯಗಳನ್ನು ಮಾಡಿದ್ದು, 24,000 ಕ್ಕೂ ಹೆಚ್ಚು ಉದ್ಯೋಗಗಳಿಗೆ ಕೊಡುಗೆ ನೀಡಿದೆ.
ಅಂತಾರಾಷ್ಟ್ರೀಯ ಪಾಲುದಾರಿಕೆಗಳು ಭಾರತದ ಸಿಪಿಎಸ್ ಸಾಮರ್ಥ್ಯಗಳನ್ನು ಮತ್ತಷ್ಟು ವಿಸ್ತರಿಸಿವೆ. ಈ ಮಿಷನ್ 200 ಅಂತಾರಾಷ್ಟ್ರೀಯ ಸಹಯೋಗಗಳನ್ನು ಸ್ಥಾಪಿಸಿದ್ದು, ಈ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಿದೆ.

ಟಿಐಎಚ್‌ಗಳು ಮತ್ತು ಟಿಟಿಆರ್‌ಪಿಗಳ ಬೆಳೆಯುತ್ತಿರುವ ಜಾಲವು ಸಂಶೋಧನೆ, ಕೌಶಲ್ಯಗಳು, ಉದ್ಯಮಶೀಲತೆ ಮತ್ತು ಉದ್ಯಮದಾದ್ಯಂತ ಭಾರತದ ಸಿಪಿಎಸ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಎನ್‌ಎಂ-ಐಸಿಪಿಎಸ್ ನಾವೀನ್ಯತೆಯಿಂದ ಅನ್ವಯಿಕ ಬಳಕೆಯವರೆಗಿನ ಪಯಣವನ್ನು ವೇಗಗೊಳಿಸುತ್ತಿದೆ ಮತ್ತು ರಾಷ್ಟ್ರೀಯ ಆದ್ಯತೆಗಳಿಗಾಗಿ ದೇಶೀಯ ಪರಿಹಾರಗಳನ್ನು ನಿರ್ಮಿಸುತ್ತಿದೆ.
|
ಭಾರತ್‌ಜೆನ್: ಸೈಬರ್-ಭೌತಿಕ ವ್ಯವಸ್ಥೆಗಳ ಬುದ್ಧಿವಂತಿಕೆಯ ಪದರವನ್ನು ಬಲಪಡಿಸುವುದು

ಸೈಬರ್-ಭೌತಿಕ ವ್ಯವಸ್ಥೆಗಳು (ಸಿಪಿಎಸ್) ಹೆಚ್ಚು ಬುದ್ಧಿವಂತವಾಗುತ್ತಿದ್ದಂತೆ, ಯಂತ್ರಗಳು, ಜನರು ಮತ್ತು ಭೌತಿಕ ಪರಿಸರವನ್ನು ಜೋಡಿಸುವ ಪ್ರಮುಖ ಪದರವಾಗಿ ಕೃತಕ ಬುದ್ಧಿಮತ್ತೆ (Aಐ) ಹೊರಹೊಮ್ಮುತ್ತಿದೆ. ಈ ನಿಟ್ಟಿನಲ್ಲಿ, ಎನ್‌ಎಂ-ಐಸಿಪಿಎಸ್ ಅಡಿಯಲ್ಲಿ ಬೆಂಬಲಿತವಾಗಿರುವ 'ಭಾರತ್‌ಜೆನ್', ಭಾರತೀಯ ಭಾಷೆಗಳು ಮತ್ತು ಸಂದರ್ಭಗಳಿಗೆ ಸೂಕ್ತವಾದ ಸಾರ್ವಭೌಮ Aಐ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಐಐಟಿ ಬಾಂಬೆಯ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತ್‌ಜೆನ್, ಪಠ್ಯ, ಭಾಷಣ ಮತ್ತು ದೃಶ್ಯ-ಭಾಷಾ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇದರ ಹೊಸ 'ಪರಮ್-2 ಫೌಂಡೇಶನ್ ಮಾಡೆಲ್ 17 ಬಿಲಿಯನ್ ಪ್ಯಾರಾಮೀಟರ್‌ಗಳನ್ನು ಹೊಂದಿದ್ದು, ಭಾರತದ ಎಲ್ಲಾ 22 ಪರಿಶಿಷ್ಟ ಭಾಷೆಗಳನ್ನು ಬೆಂಬಲಿಸುತ್ತದೆ.
ಭಾರತ್‌ಜೆನ್ 12 ಭಾರತೀಯ ಭಾಷೆಗಳನ್ನು ಬೆಂಬಲಿಸುವ 'ಶ್ರುತಮ್' ಮತ್ತು 'ಸೂಕ್ತಮ್' ಮಾಡೆಲ್‌ಗಳನ್ನು ಸಹ ಅಭಿವೃದ್ಧಿಪಡಿಸಿದೆ. 'ಡಾಕ್‌ಬೋಧ್ ಚೌಕಟ್ಟಿನಡಿಯಲ್ಲಿ ಅಭಿವೃದ್ಧಿಪಡಿಸಲಾದ 'ಪತ್ರಮ್', ಸಂಕೀರ್ಣ ಭಾರತೀಯ ದಾಖಲೆಗಳಿಗೆ ಬಹುಭಾಷಾ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ.
ವಿಷಯ-ನಿರ್ದಿಷ್ಟ ಮಾಡೆಲ್‌ಗಳಲ್ಲಿ ಆಯುರ್ವೇದಕ್ಕಾಗಿ 'ಆಯುರ್ ಪರಮ್', ಕೃಷಿಗಾಗಿ 'ಅಗ್ರಿ ಪರಮ್' ಮತ್ತು ಭಾರತೀಯ ಕಾನೂನು ಕ್ಷೇತ್ರಕ್ಕಾಗಿ 'ಲೀಗಲ್ ಪರಮ್' ಸೇರಿವೆ. ಈ ಸಾಮರ್ಥ್ಯಗಳು ಭಾರತದ ಭಾಷಿಕ ವೈವಿಧ್ಯತೆ ಮತ್ತು ವಲಯ-ನಿರ್ದಿಷ್ಟ ಅಗತ್ಯಗಳಿಗೆ ಸಿಪಿಎಸ್ ಅನ್ನು ಹೆಚ್ಚು ಸ್ಪಂದಿಸುವಂತೆ ಮಾಡಬಲ್ಲವು.
ದೇಶೀಯ ಎಐ ಅನ್ನು ಸಂಪರ್ಕಿತ ಭೌತಿಕ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಮೂಲಕ, ಭಾರತ್‌ಜೆನ್ ಹೆಚ್ಚು ಸುಲಭಲಭ್ಯ ಮಾನವ-ಯಂತ್ರ ಸಂವಹನವನ್ನು ಸಕ್ರಿಯಗೊಳಿಸುತ್ತದೆ. ಇದು ಆರೋಗ್ಯ ರಕ್ಷಣೆ, ಕೃಷಿ, ಆಡಳಿತ ಮತ್ತು ಇತರ ಸಾರ್ವಜನಿಕ ಹಿತಾಸಕ್ತಿಯ ಅನ್ವಯಿಕೆಗಳಾದ್ಯಂತ ಸ್ಥಳೀಯವಾಗಿ ಸೂಕ್ತವಾದ ನಿರ್ಧಾರ ಕೈಗೊಳ್ಳಲು ಬೆಂಬಲ ನೀಡುತ್ತದೆ. ಈ ಮೂಲಕ ಭಾರತ್‌ಜೆನ್, ಸಾರ್ವಭೌಮ, ಬಹುಭಾಷಾ ಮತ್ತು ಬಹುಮಾಧ್ಯಮ ಬುದ್ಧಿವಂತಿಕೆಯ ಪದರವನ್ನು ಸೇರಿಸುವ ಮೂಲಕ ಭಾರತದ ಸಿಪಿಎಸ್ ಪರಿಸರ ವ್ಯವಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
|
ಎನ್‌ಎಂ-ಐಸಿಪಿಎಸ್: ನಾವೀನ್ಯತೆಯನ್ನು ನೈಜ-ಜಗತ್ತಿನ ಪ್ರಭಾವವಾಗಿ ಪರಿವರ್ತಿಸುವುದು
ಸೈಬರ್-ಭೌತಿಕ ವ್ಯವಸ್ಥೆಗಳ ಶಕ್ತಿಯು ಪ್ರಯೋಗಾಲಯದಿಂದ ಆಚೆಗೆ ನೈಜ ಸಮಸ್ಯೆಗಳನ್ನು ಪರಿಹರಿಸುವ ಅದರ ಸಾಮರ್ಥ್ಯದಲ್ಲಿದೆ. ಎನ್‌ಎಂ-ಐಸಿಪಿಎಸ್-ಬೆಂಬಲಿತ ತಂತ್ರಜ್ಞಾನಗಳು ಈಗ ಆರೋಗ್ಯ ರಕ್ಷಣೆ, ಕೃಷಿ, ಗಣಿಗಾರಿಕೆ, ಸಂವಹನ, ಸೈಬರ್ ಭದ್ರತೆ ಮತ್ತು ಮೊಬಿಲಿಟಿ (ಸಂಚಾರ) ಕ್ಷೇತ್ರಗಳಾದ್ಯಂತ ಇರುವ ಸವಾಲುಗಳನ್ನು ಬಗೆಹರಿಸುತ್ತಿವೆ.
ಆರೋಗ್ಯ ರಕ್ಷಣೆ (Healthcare)
ಸೈಬರ್-ಭೌತಿಕ ವ್ಯವಸ್ಥೆಗಳು ನಿರಂತರ ಮೇಲ್ವಿಚಾರಣೆ, ಸಿಮ್ಯುಲೇಶನ್-ಆಧಾರಿತ ಚಿಕಿತ್ಸೆ ಮತ್ತು ಆರಂಭಿಕ ಹಂತದಲ್ಲೇ ರೋಗಗಳನ್ನು ಪತ್ತೆಹಚ್ಚುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರೂಪಾಂತರಿಸುತ್ತಿವೆ. ಐಐಟಿ ಇಂದೋರ್‌ನ 'ದೃಷ್ಟಿ ಸಿಪಿಎಸ್ ಫೌಂಡೇಶನ್' ಮಾನವ ದೇಹದ ಡಿಜಿಟಲ್ ಟ್ವಿನ್ ಆದ 'ಚರಕ್-ಡಿಟಿ' ಅನ್ನು ಅಭಿವೃದ್ಧಿಪಡಿಸಿದೆ. ಇದು ರೋಗದ ಬೆಳವಣಿಗೆಯನ್ನು ಅಧ್ಯಯನ ಮಾಡಲು ಮತ್ತು ಚಿಕಿತ್ಸೆಗಳನ್ನು ವರ್ಚುವಲ್ ಆಗಿ ಪರೀಕ್ಷಿಸಲು ಶ್ವಾಸಕೋಶಗಳು, ಕಣ್ಣುಗಳು ಮತ್ತು ಹೃದಯದ ಕಾರ್ಯವೈಖರಿಯನ್ನು ಸಿಮ್ಯುಲೇಟ್ (ಅನುಕರಣೆ) ಮಾಡುತ್ತದೆ.
|
ಡಿಜಿಟಲ್ ಟ್ವಿನ್
ಡಿಜಿಟಲ್ ಟ್ವಿನ್ ಎಂಬುದು ನೈಜ-ಜಗತ್ತಿನ ಭೌತಿಕ ವಸ್ತು, ಪ್ರಕ್ರಿಯೆ ಅಥವಾ ವ್ಯವಸ್ಥೆಯ ಲೈವ್ (ಸಜೀವ) ಮತ್ತು વર્ಚುವಲ್ (ಆಭಾಸಿ) ನಕಲಾಗಿದೆ. ಇದು ನೈಜ ವಸ್ತುವು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ವರ್ತಿಸುತ್ತದೆ ಎಂಬುದನ್ನು ಪ್ರತಿಬಿಂಬಿಸಲು, ಟ್ರ್ಯಾಕ್ ಮಾಡಲು ಮತ್ತು ಅಧ್ಯಯನ ಮಾಡಲು ಸ್ಮಾರ್ಟ್ ಸಂವೇದಕಗಳಿಂದ ಬರುವ ನೈಜ-ಸಮಯದ ಡೇಟಾವನ್ನು ಬಳಸುತ್ತದೆ.
|
ಕೃಷಿ
ಸಿಪಿಎಸ್ ರೈತರಿಗೆ ಬೆಳೆಗಳು ಮತ್ತು ಜಮೀನಿನ ಪರಿಸ್ಥಿತಿಯ ನೈಜ-ಸಮಯದ ಡೇಟಾವನ್ನು ಬಳಸಿಕೊಂಡು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತಿದೆ. ಐಐಟಿ ಬಾಂಬೆಯ ಸಂಶೋಧಕರು ಮಣ್ಣು, ಹವಾಮಾನ ಮತ್ತು ಸೂಕ್ಷ್ಮ-ಹವಾಮಾನ ಪರಿಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡಲು 'ಅಗ್ರಿ-ಐoT ಫಾರ್ಮ್ ಮ್ಯಾನೇಜ್‌ಮೆಂಟ್ ಸಿಸ್ಟಮ್' ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನವು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಜೊತೆಗೆ ನೀರು ಮತ್ತು ರಸಗೊಬ್ಬರಗಳ ಪರಿಣಾಮಕಾರಿ ಬಳಕೆಗೆ ಬೆಂಬಲ ನೀಡುತ್ತದೆ.
ಗಣಿಗಾರಿಕೆ
ಗಣಿಗಾರಿಕೆ ಕಾರ್ಯಾಚರಣೆಗಳು ಅಪಾಯಕಾರಿ ಮತ್ತು ದೂರದ ಪ್ರದೇಶಗಳನ್ನು ಒಳಗೊಂಡಿರುತ್ತವೆ. ಸಿಪಿಎಸ್ ಡ್ರೋನ್‌ಗಳು, ರೊಬೊಟಿಕ್ಸ್ ಮತ್ತು ರಿಮೋಟ್ ಮಾನಿಟರಿಂಗ್ ಮೂಲಕ ಸುರಕ್ಷತೆಯನ್ನು ಹೆಚ್ಚಿಸುತ್ತಿದೆ. ಐಐಟಿ (ಐಎಸ್‌ಎಂ) ಧನ್‌ಬಾದ್‌ನ 'TEXMIN' ಹಬ್,50 ಕಿ.ಮೀ ವರೆಗೆ ಡೇಟಾವನ್ನು ರವಾನಿಸುವ ಸಾಮರ್ಥ್ಯವಿರುವ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಿದೆ. ಇದು ಅಪಾಯಕಾರಿ ಸ್ಥಳಗಳಿಗೆ ಅಪಾಯವನ್ನು ಕಡಿಮೆ ಮಾಡುವ ಜೊತೆಗೆ ನೈಜ-ಸಮಯದ ಮೇಲ್ವಿಚಾರಣೆಯನ್ನು ಸಾಧ್ಯವಾಗಿಸುತ್ತದೆ.
ಸುಧಾರಿತ ಸಂವಹನ ಮತ್ತು ಪೊಸಿಷನಿಂಗ್
ಸಿಪಿಎಸ್ ತಂತ್ರಜ್ಞಾನಗಳು ಸರಿಯಾದ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಸಂಪರ್ಕವನ್ನು ಒದಗಿಸಲು ಬೆಂಬಲಿಸುತ್ತಿವೆ. ತ್ರಿಪಲ್ ಐಟಿ ಬೆಂಗಳುರಿನಲ್ಲಿ ಅಭಿವೃದ್ಧಿಪಡಿಸಲಾದ '5G-Advanced ORAN Massive MiMO Radio Unit (32TR RU)' ಒಂದು ಪ್ರಮುಖ ಸಾಧನೆಯಾಗಿದೆ. ಈ ದೇಶೀಯ ತಂತ್ರಜ್ಞಾನವು ಅತೀವೇಗ, ವಿಶ್ವಾಸಾರ್ಹ ಮತ್ತು ವೆಚ್ಚ-ಪರಿಣಾಮಕಾರಿ 5G ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಇದು ವಿಶೇಷವಾಗಿ ದೂರದ ಪ್ರದೇಶಗಳಿಗೆ ಸುಧಾರಿತ ಸಂವಹನ ಮೂಲಸೌಕರ್ಯವನ್ನು ವಿಸ್ತರಿಸಲು ಅತ್ಯಂತ ಸೂಕ್ತವಾಗಿದೆ.
ಸೈಬರ್ ಭದ್ರತೆ
ಭೌತಿಕ ಮೂಲಸೌಕರ್ಯಗಳು ಡಿಜಿಟಲ್ ರೂಪದಲ್ಲಿ ಸಂಪರ್ಕಗೊಳ್ಳುತ್ತಿದ್ದಂತೆ, ಸಿಪಿಎಸ್ ಅನ್ನು ಸೈಬರ್ ಬೆದರಿಕೆಗಳಿಂದ ರಕ್ಷಿಸುವುದು ಹೆಚ್ಚು ಮುಖ್ಯವಾಗುತ್ತದೆ. ಐಐಟಿ ಕಾನ್ಪುರದ 'ಐಹಬ್‌ಎನ್‌ಟಿಐಎಚ್‌ಎಸಿ ಫೌಂಡೇಶನ್', ಪ್ರಮುಖ ಮೂಲಸೌಕರ್ಯ ಮತ್ತು ಸಿಪಿಎಸ್ ಅನ್ನು ಸುರಕ್ಷಿತತಗೊಳಿಸಲು ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರ 'ಐಟಿ-ಒಟಿ ಮಾಹಿತಿ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ತಂತ್ರಜ್ಞಾನ ಪರಿಸರಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಈ ಹಬ್ ಕ್ರಿಪ್ಟೋ ಕರೆನ್ಸಿ ಸಂಬಂಧಿಸಿದ ಅಪರಾಧಗಳನ್ನು ತನಿಖೆ ಮಾಡಲು ಕಾನೂನು ಜಾರಿ ಸಂಸ್ಥೆಗಳಿಗೆ ಬೆಂಬಲ ನೀಡಲು 'ಕ್ರಿಪ್ಟೋ-ಫೋರೆನ್ಸಿಕ್ ಟೂಲ್ಸ್'ಗಳನ್ನು ಸಹ ಅಭಿವೃದ್ಧಿಪಡಿಸಿದೆ.
ಮೊಬಿಲಿಟಿ, ರೊಬೊಟಿಕ್ಸ್ ಮತ್ತು ಸ್ವಾಯತ್ತ ವ್ಯವಸ್ಥೆಗಳು
ನಿಯಂತ್ರಿತ ಪರೀಕ್ಷೆ ಮತ್ತು ಬುದ್ಧಿವಂತ ವ್ಯವಸ್ಥೆಗಳ ಮೂಲಕ ಸ್ವಾಯತ್ತ ವಾಹನಗಳು ಹಾಗೂ ಡ್ರೋನ್‌ಗಳನ್ನು ಅತ್ಯಂತ ಸುರಕ್ಷಿತವಾಗಿ ಬಳಸಲು ಸಿಪಿಎಸ್ ಅನುವು ಮಾಡಿಕೊಡುತ್ತಿದೆ. ಐಐಟಿ ಹೈದರಾಬಾದ್‌ನ 'ಟಿಐಎಚ್‌ಎಎನ್ 'ಫೌಂಡೇಶನ್ ಸ್ವಾಯತ್ತ ನ್ಯಾವಿಗೇಷನ್‌ಗಾಗಿ ಭಾರತದ ಮೊದಲ ಪ್ರತ್ಯೇಕ ಪರೀಕ್ಷಾ ಕ್ಷೇತ್ರವನ್ನು ಸ್ಥಾಪಿಸಿದೆ. ಈ ಪರೀಕ್ಷಾ ತಾಣವು ವೈಮಾನಿಕ ಮತ್ತು ಭೂಪ್ರದೇಶದ ಸ್ವಾಯತ್ತ ವಾಹನಗಳನ್ನು ನೈಜ-ಜಗತ್ತಿನಲ್ಲಿ ಬಳಸುವ ಮೊದಲು ಅವುಗಳನ್ನು ಪ್ರಮಾಣೀಕರಿಸುತ್ತದೆ. ಐಐಎಸ್‌ಸಿ ಬೆಂಗಳುರಿನ 'ಐ-ಹಬ್ ಫಾರ್ ರೊಬೊಟಿಕ್ಸ್ ಅಂಡ್ ಆಟೋನಾಮಸ್ ಸಿಸ್ಟಮ್ಸ್' ಬುದ್ಧಿವಂತ ಮೊಬಿಲಿಟಿ ಪರಿಹಾರಗಳನ್ನು ಮುನ್ನಡೆಸುತ್ತಿದೆ. ಇದರ 'ಐಆರ್‌ಎಎಸ್‌ಟಿಇ' ಅಪ್ಲಿಕೇಶನ್ ಅಪಘಾತಕ್ಕೊಳಗಾಗುವ ಸಾಧ್ಯತೆಯಿರುವ ಸ್ಥಳಗಳನ್ನು ಗುರುತಿಸುತ್ತದೆ ಮತ್ತು ಚಾಲಕರಿಗೆ ನೈಜ-ಸಮಯದ ಎಚ್ಚರಿಕೆಗಳನ್ನು ನೀಡುತ್ತದೆ. ಈ ವ್ಯವಸ್ಥೆಯನ್ನು ಪ್ರಸ್ತುತ ನಾಗ್ಪುರದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದ್ದು, ಇತರ ನಗರಗಳಿಗೂ ವಿಸ್ತರಿಸುವ ಯೋಜನೆಗಳಿವೆ.
ಈ ಅನ್ವಯಿಕೆಗಳು ಎನ್‌ಎಂ-ಐಸಿಪಿಎಸ್ ಹೇಗೆ ಸುಧಾರಿತ ಸಂಭಾವ್ಯ ಸಂಶೋಧನೆಯನ್ನು ಪ್ರಮುಖ ವಲಯಗಳಿಗೆ ಪ್ರಾಯೋಗಿಕ ಪರಿಹಾರಗಳಾಗಿ ಪರಿವರ್ತಿಸುತ್ತಿದೆ ಎಂಬುದನ್ನು ಪ್ರದರ್ಶಿಸುತ್ತವೆ. ದೇಶೀಯ ತಂತ್ರಜ್ಞಾನಗಳು, ಕೌಶಲ್ಯಗಳು ಮತ್ತು ನಾವೀನ್ಯತೆಯನ್ನು ಸಕ್ರಿಯಗೊಳಿಸುವ ಮೂಲಕ, ಈ ಮಿಷನ್ ಹೆಚ್ಚು ಸುರಕ್ಷಿತ, ಚುರುಕಾದ ಮತ್ತು ಪರಿಣಾಮಕಾರಿ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುತ್ತಿದೆ. ಈ ಪ್ರಯತ್ನಗಳು ತಂತ್ರಜ್ಞಾನ-ಚಾಲಿತ ಮತ್ತು ಸ್ವಾವಲಂಬಿ 'ವಿಕಸಿತ ಭಾರತ'ದತ್ತ ಭಾರತದ ಸಾಮರ್ಥ್ಯಗಳನ್ನು ಮುನ್ನಡೆಸುತ್ತಿವೆ.
ತಂತ್ರಜ್ಞಾನ-ಚಾಲಿತ ಮತ್ತು ಸ್ವಾವಲಂಬಿ ವಿಕಸಿತ ಭಾರತದತ್ತ
ಸೈಬರ್-ಭೌತಿಕ ವ್ಯವಸ್ಥೆಗಳು (ಸಿಪಿಎಸ್) ಬುದ್ಧಿವಂತ ಮೂಲಸೌಕರ್ಯ ಮತ್ತು ಸುಧಾರಿತ ಸಾರ್ವಜನಿಕ ಸೇವೆಗಳಿಗೆ ಹೊಸ ಸಾಧ್ಯತೆಗಳನ್ನು ತೆರೆಯುತ್ತಿವೆ. ಎನ್‌ಎಂ-ಐಸಿಪಿಎಸ್ ಮೂಲಕ, ಭಾರತವು ವೈಜ್ಞಾನಿಕ ಸಂಶೋಧನೆಯನ್ನು ರಾಷ್ಟ್ರೀಯ ಅಭಿವೃದ್ಧಿ ಆದ್ಯತೆಗಳೊಂದಿಗೆ ಜೋಡಿಸುವ ಸಾಮರ್ಥ್ಯವನ್ನು ನಿರ್ಮಿಸುತ್ತಿದೆ.
ಈ ಮಿಷನ್ ಆರೋಗ್ಯ ರಕ್ಷಣೆ, ಕೃಷಿ, ಗಣಿಗಾರಿಕೆ, ಸಂವಹನ, ಸೈಬರ್ ಭದ್ರತೆ ಮತ್ತು ಮೊಬಿಲಿಟಿ ಕ್ಷೇತ್ರಗಳಾದ್ಯಂತ ದೇಶೀಯ ಪರಿಹಾರಗಳನ್ನು ಪೋಷಿಸುತ್ತಿದೆ. ಇದರ ಟಿಐಎಚ್‌ಗಳು ಮತ್ತು ಟಿಟಿಆರ್‌ಪಿಗಳು ಸಂಶೋಧನೆಯಿಂದ ಪ್ರಮಾಣೀಕರಣ, ಅನ್ವಯಿಕ ಬಳಕೆ ಮತ್ತು ವಾಣಿಜ್ಯೀಕರಣದವರೆಗಿನ ಪಯಣವನ್ನು ವೇಗಗೊಳಿಸುತ್ತಿವೆ.
'ಭಾರತ್‌ಜೆನ್' ನಂತಹ ಉಪಕ್ರಮವು ಈ ಉದಯೋನ್ಮುಖ ತಂತ್ರಜ್ಞಾನ ರಂಗಕ್ಕೆ ಸಾರ್ವಭೌಮ, ಬಹುಭಾಷಾ ಎಐ ಸಾಮರ್ಥ್ಯಗಳನ್ನು ಸೇರಿಸುತ್ತಿದೆ. ಒಟ್ಟಾಗಿ, ಈ ಪ್ರಯತ್ನಗಳು ಸಂಪರ್ಕಿತ ವ್ಯವಸ್ಥೆಗಳನ್ನು ಹೆಚ್ಚು ಬುದ್ಧಿವಂತ, ಸುರಕ್ಷಿತ, ಸುಲಭಲಭ್ಯ ಮತ್ತು ಭಾರತೀಯ ಅಗತ್ಯಗಳಿಗೆ ಸ್ಪಂದಿಸುವಂತೆ ಮಾಡಬಲ್ಲವು. ಬಲವಾದ ಶೈಕ್ಷಣಿಕ-ಕೈಗಾರಿಕಾ ಪಾಲುದಾರಿಕೆಗಳು ನಾವೀನ್ಯತೆ ಮತ್ತು ತಂತ್ರಜ್ಞಾನದ ಅಳವಡಿಕೆಯನ್ನು ಮತ್ತಷ್ಟು ವೇಗಗೊಳಿಸುತ್ತವೆ. ಕೌಶಲ್ಯಪೂರ್ಣ ಪ್ರತಿಭೆ, ಸ್ಟಾರ್ಟ್‌ಅಪ್‌ಗಳು ಮತ್ತು ಜಾಗತಿಕ ಸಹಯೋಗಗಳು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಾದ್ಯಂತ ಭಾರತದ ಸಾಮರ್ಥ್ಯಗಳನ್ನು ವಿಸ್ತರಿಸಲಿವೆ.
ದೇಶೀಯ ಸಿಪಿಎಸ್ ನ ವ್ಯಾಪಕ ಬಳಕೆಯು ಅತ್ಯಂತ ಚುರುಕಾದ ಮೂಲಸೌಕರ್ಯ, ಪರಿಣಾಮಕಾರಿ ಸೇವೆಗಳು ಮತ್ತು ಹೊಸ ಆರ್ಥಿಕ ಅವಕಾಶಗಳನ್ನು ಬೆಂಬಲಿಸುತ್ತದೆ. ಆದ್ದರಿಂದ ಎನ್‌ಎಂ-ಐಸಿಪಿಎಸ್ ತಂತ್ರಜ್ಞಾನ-ಚಾಲಿತ, ನಾವೀನ್ಯತೆ-ಚಾಲಿತ ಮತ್ತು ಸ್ವಾವಲಂಬಿ ವಿಕಸಿತ ಭಾರತಕ್ಕೆ ತನ್ನ ಕೊಡುಗೆ ನೀಡುತ್ತಿದೆ.
References:
NM-ICPS
Ministry of Science & Technology
IIT Madras
Departmemt of Science & Technology
Click here to see pdf
*****
(Explainer ID: 159790)
आगंतुक पटल : 6
Provide suggestions / comments