Farmer's Welfare
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
ಪ್ರತಿಯೊಬ್ಬ ರೈತಗಾಗಿ ಕೈಗೆಟುಕುವಂತಹ ಬೆಳೆ ವಿಮೆ
Posted On:
29 AUG 2026 6:46PM
|
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ದೇಶಾದ್ಯಂತ ಬರ, ಪ್ರವಾಹ, ಚಂಡಮಾರುತ, ಆಲಿಕಲ್ಲು ಮಳೆ, ಕೀಟಬಾಧೆ, ರೋಗಗಳು, ಬಿತ್ತನೆ ತಡೆಯಾಗುವುದು, ಸ್ಥಳೀಯ ವಿಪತ್ತುಗಳು, ನೀರು ನಿಲ್ಲುವುದರಿಂದಾಗುವ ಹಾನಿ, ಅಕಾಲಿಕ ಮಳೆ, ಆಲಿಕಲ್ಲು ಮಳೆ ಮತ್ತು ನಿರ್ದಿಷ್ಟಪಡಿಸಿದ ಕೊಯ್ಲಿನ ನಂತರದ ನಷ್ಟಗಳ ವಿರುದ್ಧ ಸಮಗ್ರ ರಕ್ಷಣೆಯನ್ನು ನೀಡುತ್ತದೆ. 2026–27ನೇ ಸಾಲಿಗೆ ₹12,200 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ಪಿಎಂಎಫ್‌ಬಿವೈ ರೈತರ ಸ್ಥಿರತೆ, ಜೀವನೋಪಾಯ ರಕ್ಷಣೆ, ಆದಾಯ ಸುಸ್ಥಿರತೆ ಮತ್ತು ದೇಶಾದ್ಯಂತ ಹವಾಮಾನ ಸ್ಥಿತಿಸ್ಥಾಪಕ ಕೃಷಿಯನ್ನು ಬಲಪಡಿಸುವುದನ್ನು ಮುಂದುವರಿಸಿದೆ. 2016ರ ಮುಂಗಾರು ಋತುವಿನಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ 2025-26ರ ರಬಿ ಋತುವಿನವರೆಗೆ, ಕಳೆದ 10 ವರ್ಷಗಳಲ್ಲಿ 92.46 ಕೋಟಿಗೂ ಹೆಚ್ಚು ರೈತರ ಅರ್ಜಿಗಳನ್ನು ವಿಮೆಗೊಳಪಡಿಸಲಾಗಿದೆ. ಹಾಗೂ 26.33 ಕೋಟಿಗೂ ಹೆಚ್ಚು ರೈತರ ಅರ್ಜಿಗಳಿಗೆ ₹2.06 ಲಕ್ಷ ಕೋಟಿಗೂ ಅಧಿಕ ನಷ್ಟ ಪರಿಹಾರ ನೀಡಲಾಗಿದೆ. ತಂತ್ರಜ್ಞಾನ ಆಧಾರಿತ ಇಳುವರಿ ಅಂದಾಜು ವ್ಯವಸ್ಥೆ ಮತ್ತು ಹವಾಮಾನ ಮಾಹಿತಿ ಜಾಲ ಮತ್ತು ದತ್ತಾಂಶ ವ್ಯವಸ್ಥೆಯಂತಹ ತಾಂತ್ರಿಕ ಉಪಕ್ರಮಗಳ ಸಂಯೋಜನೆಯು ಪರಿಹಾರ ಪಾವತಿಯನ್ನು ವೇಗವಾಗಿ, ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಮಾಡಲು ಸಹಾಯ ಮಾಡಿದ್ದು, ಯೋಜನೆಯನ್ನು ಇನ್ನಷ್ಟು ಬಲಪಡಿಸಿದೆ.
|
ಬೆಳೆ ವಿಮೆಯ ಮೂಲಕ ಗ್ರಾಮೀಣ ಜೀವನೋಪಾಯವನ್ನು ಭದ್ರಪಡಿಸುವುದು
ಬೆಳೆ ವಿಮೆಯು ನೈಸರ್ಗಿಕ ವಿಕೋಪಗಳು, ಪ್ರತಿಕೂಲ ಹವಾಮಾನ, ಕೀಟಗಳು ಮತ್ತು ರೋಗಗಳಿಂದ ಉಂಟಾಗುವ ಬೆಳೆ ನಷ್ಟದಿಂದ ರೈತರನ್ನು ರಕ್ಷಿಸುತ್ತದೆ. ಸಕಾಲಿಕ ಪರಿಹಾರವು ರೈತರಿಗೆ ಆದಾಯದ ಆಘಾತಗಳನ್ನು ನಿಭಾಯಿಸಲು, ನಷ್ಟವನ್ನು ಸರಿದೂಗಿಸಲು, ಸಾಲಗಳನ್ನು ತೀರಿಸಲು ಮತ್ತು ಮುಂದಿನ ಬೆಳೆ ಋತುವಿನಲ್ಲಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ಇದು ಕೃಷಿ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ, ಜೀವನೋಪಾಯವನ್ನು ರಕ್ಷಿಸುತ್ತದೆ ಮತ್ತು ಅನಿಶ್ಚಿತ ಪರಿಸ್ಥಿತಿಗಳಲ್ಲಿ ಕೃಷಿ ಉತ್ಪಾದನೆಯ ಸಾಂತತ್ಯವನ್ನು ಬೆಂಬಲಿಸುತ್ತದೆ.
ಗರಿಷ್ಠ ಸಂಖ್ಯೆಯ ರೈತರನ್ನು ಬೆಳೆ ವಿಮಾ ರಕ್ಷಣೆಯಡಿಗೆ ತರಲು 18 ಫೆಬ್ರವರಿ 2016 ರಂದು 'ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ' (ಪಿಎಂಎಫ್‌ಬಿವೈ) ಯನ್ನು ಪ್ರಾರಂಭಿಸಲಾಯಿತು. ಇದು ಬಿತ್ತನೆ ಪೂರ್ವ ಅಪಾಯಗಳಿಂದ (ತಡೆಯಲ್ಪಟ್ಟ ಅಥವಾ ವಿಫಲವಾದ ಬಿತ್ತನೆ ಸೇರಿದಂತೆ), ಮಧ್ಯ ಋತುವಿನ ವ್ಯಾಪಕ ಸಂಕಷ್ಟಗಳು, ಪ್ರತ್ಯೇಕ ಜಮೀನು ತುಂಡುಗಳಲ್ಲಿ ಆಲಿಕಲ್ಲು ಮಳೆ, ನೀರು ನಿಲ್ಲುವುದು, ಭೂಕುಸಿತ ಇತ್ಯಾದಿಗಳಿಂದ ಉಂಟಾಗುವ ಸ್ಥಳೀಯ ವಿಪತ್ತುಗಳಿಂದ ಹಿಡಿದು, ಚಂಡಮಾರುತಗಳು, ಅಕಾಲಿಕ ಮಳೆ ಮತ್ತು ಇತರ ನಿರ್ದಿಷ್ಟಪಡಿಸಿದ ಅಪಾಯಗಳಿಂದ ಉಂಟಾಗುವ ಕೊಯ್ಲಿನ ನಂತರದ ನಷ್ಟಗಳವರೆಗೆ ಅಪಾಯಗಳನ್ನು ಒಳಗೊಳ್ಳುತ್ತದೆ. ವ್ಯಾಪಕ ರೈತರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕಂತಿನ (ಪ್ರೀಮಿಯಂ) ದರಗಳನ್ನು ಕಡಿಮೆ ಮತ್ತು ಕೈಗೆಟುಕುವಂತೆ ಇರಿಸಲಾಗಿದೆ. ಕೇಂದ್ರ ಸರ್ಕಾರವು ಕೇಂದ್ರ ಮುಂಗಡ ಪತ್ರ (ಬಜೆಟ್) 2026–27ರಲ್ಲಿ ಪಿಎಂಎಫ್‌ಬಿವೈ ಗಾಗಿ ₹12,200 ಕೋಟಿಯನ್ನು ಮೀಸಲಿಟ್ಟಿದ್ದು, ಬೆಳೆ ವಿಮೆ ಮತ್ತು ರೈತರ ರಕ್ಷಣೆಗೆ ತನ್ನ ನಿರಂತರ ಬದ್ಧತೆಯನ್ನು ಬಲಪಡಿಸಿದೆ.
|
ಪಿಎಂಎಫ್‌ಬಿವೈ ಕಾರ್ಯರೂಪದಲ್ಲಿ: ಒಬ್ಬ ರೈತನ ಸ್ಥಿತಿಸ್ಥಾಪಕತ್ವದ ಕಥೆ
ಅಸ್ಸಾಂನ ನಗಾಂವ್ ಜಿಲ್ಲೆಯ ಚಂಖಾಲಾ ಗ್ರಾಮದ ಸಣ್ಣ ರೈತ ಅನ್ವರ್ ಹುಸೇನ್, ತಮ್ಮ ಕುಟುಂಬದ ಜೀವನೋಪಾಯಕ್ಕಾಗಿ ಸಂಪೂರ್ಣವಾಗಿ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಭಾರಿ ಮಳೆಯಿಂದಾಗಿ ಅವರ ಬೆಳೆ ತೀವ್ರವಾಗಿ ಹಾನಿಗೊಳಗಾದಾಗ, ಅವರು ತಮ್ಮ ಸಾಲಗಳನ್ನು ತೀರಿಸುವ ಮತ್ತು ಮುಂದಿನ ಬಿತ್ತನೆಗೆ ಹಣಕಾಸು ಒದಗಿಸುವ ವಿಚಾರದಲ್ಲಿ ಅನಿಶ್ಚಿತತೆಯನ್ನು ಎದುರಿಸಿದರು.
ಅದೃಷ್ಟವಶಾತ್, ಅನ್ವರ್ ಕೇವಲ 100 ರೂ.ಗಳ ಅತ್ಯಲ್ಪ ಕಂತು (ಪ್ರೀಮಿಯಂ) ಪಾವತಿಸುವ ಮೂಲಕ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಯಡಿ ನೋಂದಾಯಿಸಿಕೊಂಡಿದ್ದರು. ಬೆಳೆ ನಷ್ಟವನ್ನು ಅಂದಾಜು ಮಾಡಿದ ನಂತರ, ಈ ಯೋಜನೆಯಡಿಯಲ್ಲಿ ಅವರಿಗೆ ₹50,600 ಪರಿಹಾರ ದೊರೆಯಿತು. ಈ ಸಕಾಲಿಕ ಆರ್ಥಿಕ ನೆರವು ಅವರು ನಷ್ಟದಿಂದ ಚೇತರಿಸಿಕೊಳ್ಳಲು, ಸಾಲದ ಒಂದು ಭಾಗವನ್ನು ತೀರಿಸಲು ಮತ್ತು ಮುಂದಿನ ಋತುವಿನ ಕೃಷಿ ಸಾಮಗ್ರಿಗಳಲ್ಲಿ ಹೂಡಿಕೆ ಮಾಡಲು ಸಹಾಯ ಮಾಡಿತು. ಈ ಬೆಂಬಲದೊಂದಿಗೆ, ಅನ್ವರ್ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಬದಲು ನವ ಚೈತನ್ಯದ ಆತ್ಮವಿಶ್ವಾಸದೊಂದಿಗೆ ಕೃಷಿಯನ್ನು ಮುಂದುವರಿಸಲು ಸಾಧ್ಯವಾಯಿತು. ಇಂದು, ಬಿಕ್ಕಟ್ಟಿನ ಸಮಯದಲ್ಲಿ ಪಿಎಂಎಫ್‌ಬಿವೈ ಒಂದು ಸುರಕ್ಷತಾ ಜಾಲವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳುತ್ತಾ, ಅವರು ತಮ್ಮ ಗ್ರಾಮದ ಇತರ ರೈತರಿಗೂ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಲು ಬಲವಾಗಿ ಪ್ರೋತ್ಸಾಹಿಸುತ್ತಾರೆ.
|
ಪಿಎಂಎಫ್‌ಬಿವೈ ಯೋಜನೆ ಬೆಳೆ ನಷ್ಟದ ವಿರುದ್ಧ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ರೈತರ ಆದಾಯವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದು ಆಧುನಿಕ ಕೃಷಿ ಪದ್ಧತಿಗಳು, ಬೆಳೆ ವೈವಿಧ್ಯೀಕರಣ ಮತ್ತು ಉತ್ಪಾದನಾ ಅಪಾಯಗಳ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು (ಚೇತರಿಸಿಕೊಳ್ಳುವ ಸಾಮರ್ಥ್ಯ) ಉತ್ತೇಜಿಸುತ್ತದೆ.

ರೈತರ ಸಮಗ್ರ ರಕ್ಷಣೆ (ಇನ್‌ಕ್ಲೂಸಿವ್ ಕವರೇಜ್)
ಸೂಕ್ತವಾದ ಅರ್ಹತಾ ಷರತ್ತುಗಳಿಗೆ ಒಳಪಟ್ಟು, ಪಿಎಂಎಫ್‌ಬಿವೈ ಯೋಜನೆಯು ಗೇಣಿ ರೈತರು ಮತ್ತು ಪಾಲುದಾರರು (ಶೇರ್‌ಕ್ರಾಪರ್ಸ್) ಸೇರಿದಂತೆ ಎಲ್ಲಾ ರೈತರಿಗೆ ಸಮಗ್ರ ಬೆಳೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ರೈತರು ವಿಮೆ ಮಾಡಿಸಲು ಅರ್ಹವಾದ ಆಸಕ್ತಿ (ಇನ್ಶೂರೆಬಲ್ ಇಂಟರೆಸ್ಟ್), ಮಾನ್ಯವಾದ ಜಮೀನಿನ ದಾಖಲೆಗಳು ಅಥವಾ ಗೇಣಿ ಒಪ್ಪಂದಗಳು ಅಥವಾ ರಾಜ್ಯ ನಿರ್ದಿಷ್ಟ ನಿಯಮಗಳ ಪ್ರಕಾರ ಬಿತ್ತನೆ ಪ್ರಮಾಣಪತ್ರಗಳನ್ನು ಹೊಂದಿರಬೇಕು ಮತ್ತು ನಿಗದಿಪಡಿಸಿದ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಬೇಕು. ಸಮಗ್ರ ಅಪಾಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಪಿಎಂಎಫ್‌ಬಿವೈ ಯೋಜನೆಯು ಕೃಷಿ ವಲಯದ ಸಾಲ ಪಡೆದ ಮತ್ತು ಸಾಲ ಪಡೆಯದ ಎರಡೂ ವರ್ಗದ ರೈತರನ್ನು ಒಳಗೊಳ್ಳುತ್ತದೆ.
- ಸಾಲ ಪಡೆಯದ ರೈತರು ಎಂದರೆ ಬೆಳೆ ಸಾಲವಿಲ್ಲದವರು ಅಥವಾ ಅಮಾನಕ (ನಾನ್-ಸ್ಟ್ಯಾಂಡರ್ಡ್) ಕಿಸಾನ್ ಕ್ರೆಡಿಟ್ ಕಾರ್ಡ್ ಲಿಂಕ್ಡ್ ಸಾಲಗಳನ್ನು ಹೊಂದಿರುವವರು. ಅವರು ಬೆಳೆ ವಿಮಾ ರಕ್ಷಣೆಗಾಗಿ ಪಿಎಂಎಫ್‌ಬಿವೈ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ನೋಂದಾಯಿಸಿಕೊಳ್ಳಬಹುದು. ಕಳೆದ 10 ವರ್ಷಗಳಲ್ಲಿ, ಸರಾಸರಿ ೫೦% ರಷ್ಟು ರೈತರು ಸಾಲ ಪಡೆಯದ ರೈತರಾಗಿ ಸ್ವಯಂಪ್ರೇರಿತವಾಗಿ ನೋಂದಾಯಿಸಿಕೊಂಡಿದ್ದು, ಯೋಜನೆಯ ಬಗ್ಗೆ ರೈತರಲ್ಲಿರುವ ನಂಬಿಕೆಯನ್ನು ಇದು ಸ್ಥಾಪಿಸುತ್ತದೆ.
- ಸಾಲ ಪಡೆದ ರೈತರು ಎಂದರೆ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಋತುಮಾನದ ಬೆಳೆ ಸಾಲಗಳನ್ನು ಪಡೆದವರು, ಮತ್ತು ಅವರ ಸಾಲಗಳು ಅಥವಾ ಕೆಸಿಸಿ ಗಳು ಸಕ್ರಿಯ ಹಾಗೂ ಮಾನಕ (ಸ್ಟ್ಯಾಂಡರ್ಡ್) ಆಗಿರುತ್ತವೆ. ಅವರ ಪ್ರೀಮಿಯಂ ಮೊತ್ತವನ್ನು ಸಂಬಂಧಪಟ್ಟ ಬ್ಯಾಂಕುಗಳು ಸಾಲದ ಮೊತ್ತದಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸುತ್ತವೆ.
- ಬೆಳೆಗೆ ವಿಮೆ ಮಾಡಿಸಲಾಗಿದ್ದು ಮತ್ತು ಸಂಬಂಧಪಟ್ಟ ಪ್ರೀಮಿಯಂ ಅನ್ನು ನಿಗದಿತ ಕಾಲಮಿತಿಯೊಳಗೆ ವಿಮಾ ಕಂಪನಿಗೆ ಪಾವತಿಸಿದ್ದರೆ, ಪಿಎಂಎಫ್‌ಬಿವೈ ಸಾಧಾರಣವಾಗಿ ಬೆಳೆ ಹಾನಿ ಅಥವಾ ನಷ್ಟಕ್ಕೆ ಕಾರಣವಾಗುವ ಎಲ್ಲಾ ನೈಸರ್ಗಿಕ ಮತ್ತು ಹವಾಮಾನ ವೈಪರೀತ್ಯಗಳಿಗೆ ಸಮಗ್ರ ಅಪಾಯ ರಕ್ಷಣೆಯನ್ನು ಒದಗಿಸುತ್ತದೆ. ಆದಾಗ್ಯೂ, ಸೂಚಿಸದ (ನಾನ್-ನೋಟಿಫೈಡ್) ಪ್ರದೇಶಗಳಲ್ಲಿನ ಬೆಳೆ ನಷ್ಟ, ಬೆಳೆಯ ಜೀವಿತಾವಧಿಯ ಹೊರಗಿನ ನಷ್ಟ (ಅಂದರೆ ಬಿತ್ತನೆ ಮಾಡುವ ಮೊದಲು ಮತ್ತು ಹೊಲದಿಂದ ಬೆಳೆಯನ್ನು ತೆಗೆದ ನಂತರ), ಮತ್ತು ನಿರ್ಲಕ್ಷ್ಯ, ಮಾನವನಿರ್ಮಿತ ಅಥವಾ ತಡೆಯಬಹುದಾದ ಅಪಾಯಗಳಿಂದ ಉಂಟಾಗುವ ನಷ್ಟಗಳನ್ನು ಈ ಯೋಜನೆಯಡಿ ಒಳಪಡಿಸಲಾಗುವುದಿಲ್ಲ.

ಒಳಗೊಳ್ಳಲಾದ ಅಪಾಯಗಳು (ರಿಸ್ಕ್ಸ್ ಕವರ್ಡ್)
ಪಿಎಂಎಫ್‌ಬಿವೈ ಯೋಜನೆಯು ಕೃಷಿ ಮತ್ತು ಕೊಯ್ಲಿನ ವಿವಿಧ ಹಂತಗಳಲ್ಲಿ ಉಂಟಾಗುವ ಬೆಳೆ ನಷ್ಟದ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ:
- ಇಳುವರಿ ನಷ್ಟಗಳು (ನಿಂತ ಬೆಳೆಗಳು, ಸೂಚಿತ ಪ್ರದೇಶದ ಆಧಾರದ ಮೇಲೆ): ಪಿಎಂಎಫ್‌ಬಿವೈ ಯೋಜನೆಯು ಬರ, ಒಣ ಹವೆ, ಪ್ರವಾಹ, ನೀರು ನಿಲ್ಲುವುದು, ಚಂಡಮಾರುತ, ಆಲಿಕಲ್ಲು ಮಳೆ, ಮಿಂಚು, ಕೀಟಬಾಧೆ ಮತ್ತು ರೋಗಗಳಂತಹ ತಡೆಯಲಾಗದ ಅಪಾಯಗಳ ವಿರುದ್ಧ ಪ್ರದೇಶ-ಆಧಾರಿತ ರಕ್ಷಣೆಯನ್ನು ನೀಡುತ್ತದೆ.
- ತಡೆಯಲ್ಪಟ್ಟ ಬಿತ್ತನೆ (ಪ್ರಿವೆಂಟೆಡ್ ಸೋಯಿಂಗ್): ವಿಮೆ ಮಾಡಿಸಿದ ರೈತರು ವೆಚ್ಚವನ್ನು ಭರಿಸಿದ್ದರೂ, ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಬಿತ್ತನೆ ಮಾಡಲು ಸಾಧ್ಯವಾಗದಿದ್ದರೆ, ಅವರು ವಿಮಾ ಮೊತ್ತದ ಗರಿಷ್ಠ 25% ವರೆಗೆ ಪರಿಹಾರಕ್ಕೆ ಅರ್ಹರಾಗಿರುತ್ತಾರೆ.
- ಕೊಯ್ಲಿನ ನಂತರದ ನಷ್ಟಗಳು: ಹೊಲದಲ್ಲಿ ಒಣಗಲು 'ಕತ್ತರಿಸಿ ಹರಡಿದ' (ಕಟ್-ಅಂಡ್-ಸ್ಪ್ರೆಡ್) ಸ್ಥಿತಿಯಲ್ಲಿಟ್ಟಿರುವ ಬೆಳೆಗಳಿಗೆ ಕೊಯ್ಲು ಮಾಡಿದ 14 ದಿನಗಳವರೆಗೆ ನಿರ್ದಿಷ್ಟಪಡಿಸಿದ ಚಂಡಮಾರುತ ಮತ್ತು ಅಕಾಲಿಕ ಮಳೆಯ ವಿರುದ್ಧ ರಕ್ಷಣೆ ನೀಡಲಾಗುತ್ತದೆ.
- ಸ್ಥಳೀಯ ವಿಪತ್ತುಗಳು: ಆಲಿಕಲ್ಲು ಮಳೆ, ಭೂಕುಸಿತ, ನೀರು ನಿಲ್ಲುವುದು, ಮೋಡಸ್ಪೋಟ ಮತ್ತು ನೈಸರ್ಗಿಕ ಬೆಂಕಿಯಿಂದ ಉಂಟಾಗುವ ಹಾನಿಗಳಿಂದ ಪ್ರತ್ಯೇಕ ಜಮೀನು ಮಟ್ಟದಲ್ಲಿ ಉಂಟಾಗುವ ನಷ್ಟಗಳನ್ನು ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಒಳಪಡಿಸಲಾಗುತ್ತದೆ.
ಆದಾಗ್ಯೂ, ಯುದ್ಧ, ಪರಮಾಣು ಅಪಾಯಗಳು, ಗಲಭೆಗಳು, ಕಳ್ಳತನ, ನಿರ್ದಿಷ್ಟಪಡಿಸಿದ ಕೊಯ್ಲಿನ ನಂತರದ ಸ್ಥಿತಿಗಳು ಮತ್ತು ಇತರ ತಡೆಯಬಹುದಾದ ಅಪಾಯಗಳಿಂದ ಉಂಟಾಗುವ ನಷ್ಟಗಳನ್ನು ಪಿಎಂಎಫ್‌ಬಿವೈ ನಿಂದ ಹೊರಗಿಡಲಾಗುತ್ತದೆ.
ಪಿಎಂಎಫ್‌ಬಿವೈ ಅಡಿಯಲ್ಲಿ ಪ್ರಗತಿ ಮತ್ತು ಸಾಧನೆಗಳು
ಸಮೀಪದ ವರ್ಷಗಳಲ್ಲಿ ಪಿಎಂಎಫ್‌ಬಿವೈ ಯೋಜನೆಯು ರೈತರ ಭಾಗವಹಿಸುವಿಕೆ, ವಿಮಾ ರಕ್ಷಣೆ ಮತ್ತು ಸಾಂಸ್ಥಿಕ ತಲುಪುವಿಕೆಯಲ್ಲಿ ಗಮನಾರ್ಹ ವಿಸ್ತರಣೆಯನ್ನು ಕಂಡಿದೆ. ಆಹಾರ ಧಾನ್ಯಗಳು ಮತ್ತು ಎಣ್ಣೆಕಾಳು ಬೆಳೆಗಳಿಗೆ ರೈತರು ಮುಂಗಾರು ಋತುವಿನಲ್ಲಿ ಗರಿಷ್ಠ 2% ಮತ್ತು ರಬಿ ಋತುವಿನಲ್ಲಿ ೧.೫% ಪ್ರೀಮಿಯಂ ಅನ್ನು ಪಾವತಿಸುತ್ತಾರೆ. ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಗರಿಷ್ಠ ಪ್ರೀಮಿಯಂ 5% ಆಗಿರುತ್ತದೆ. ಉಳಿದ ಪ್ರೀಮಿಯಂ ಮೊತ್ತಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ೫೦:೫೦ ಅನುಪಾತದಲ್ಲಿ ಸಬ್ಸಿಡಿ ನೀಡುತ್ತವೆ. ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ರೈತರಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ ಕೊಡುಗೆಯು 90:10ರ ಅನುಪಾತದಲ್ಲಿದೆ. ಈ ಕೈಗೆಟುಕುವ ಪ್ರೀಮಿಯಂ ರಚನೆಯು ದೇಶದ ಉದ್ದಗಲಕ್ಕೂ ವ್ಯಾಪಕ ವರ್ಗದ ರೈತರಿಗೆ ಬೆಳೆ ವಿಮೆಯನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸಹಾಯ ಮಾಡಿದೆ.

2026ರ ಮುಂಗಾರು ಋತುವಿನಲ್ಲಿ ಪಿಎಂಎಫ್‌ಬಿವೈ ಯೋಜನೆಯನ್ನು ಪ್ರಸ್ತುತ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗುತ್ತಿದೆ.
ಯೋಜನೆ ಪ್ರಾರಂಭವಾದಾಗಿನಿಂದ, 92.46 ಕೋಟಿಗೂ ಹೆಚ್ಚು ರೈತರ ಅರ್ಜಿಗಳನ್ನು ವಿಮೆಗೊಳಪಡಿಸಲಾಗಿದೆ, ಮತ್ತು 26.33 ಕೋಟಿಗೂ ಹೆಚ್ಚು ರೈತರ ಅರ್ಜಿಗಳಿಗೆ ₹2.06 ಲಕ್ಷ ಕೋಟಿಗೂ ಅಧಿಕ ನಷ್ಟ ಪರಿಹಾರ ಪಾವತಿಸಲಾಗಿದೆ.
2025 ರ ಮುಂಗಾರು ಋತುವಿನಲ್ಲಿ, ಬೆಳೆ ವಿಮೆಯು 269.38 ಲಕ್ಷ ಹೆಕ್ಟೇರ್ ಪ್ರದೇಶವನ್ನು ಆವರಿಸುವ ಮೂಲಕ 229.77 ಲಕ್ಷ ರೈತರಿಗೆ ಬೆಳೆ ಸಂಬಂಧಿತ ಅಪಾಯಗಳ ವಿರುದ್ಧ ರಕ್ಷಣೆ ನೀಡಿದೆ. 2026 ರ ಮುಂಗಾರು ಋತುವಿಗಾಗಿ ರೈತರ ನೋಂದಣಿ ಮತ್ತು ವಿಮೆ ಮಾಡಿಸಲಾದ ಪ್ರದೇಶವು 2025 ರ ಮುಂಗಾರು ಮಟ್ಟವನ್ನು ಈಗಾಗಲೇ ಮೀರಿಸಿದೆ. 27 ಆಗಸ್ಟ್ 2026 ರ ಹೊತ್ತಿಗೆ, 241.38 ಲಕ್ಷ ರೈತರು ವಿಮೆ ಪಡೆದಿದ್ದು, 278.12 ಲಕ್ಷ ಹೆಕ್ಟೇರ್ ಪ್ರದೇಶವು ವ್ಯಾಪಿಸಿದೆ. ಇದು ಬೆಳೆ ವಿಮಾ ರಕ್ಷಣೆಯ ನಿರಂತರ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ.
2025ರ ಮುಂಗಾರು ಋತುವಿಗಾಗಿ, 60.89 ಲಕ್ಷ ಅರ್ಹ ರೈತರಿಗೆ ಈಗಾಗಲೇ ₹9,837.61 ಕೋಟಿ ಮೌಲ್ಯದ ಪರಿಹಾರವನ್ನು ಪಾವತಿಸಲಾಗಿದ್ದು, ಬೆಳೆ ನಷ್ಟದ ವಿರುದ್ಧ ನಿರ್ಣಾಯಕ ಆರ್ಥಿಕ ಬೆಂಬಲವನ್ನು ನೀಡಲಾಗಿದೆ.
2024-25 ರಲ್ಲಿ ರಾಷ್ಟ್ರೀಯ ನೋಂದಣಿಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, 4 ಕೋಟಿಗೂ ಹೆಚ್ಚು ರೈತರನ್ನು ಒಳಗೊಂಡ 15.23 ಕೋಟಿಗೂ ಹೆಚ್ಚು ರೈತರ ಅರ್ಜಿಗಳನ್ನು ವಿಮೆಗೊಳಪಡಿಸಲಾಗಿದೆ ಮತ್ತು 623 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸಲಾಗಿದೆ.
ಗೇಣಿ ರೈತರು ಮತ್ತು ಪಾಲುದಾರ (ಶೇರ್‌ಕ್ರಾಪರ್) ರೈತರನ್ನು ಈ ಯೋಜನೆಯಡಿ ಸೇರಿಸಲಾಗಿದೆ ಮತ್ತು ರಕ್ಷಣೆ ನೀಡಲಾಗಿದೆ. 2014 ರಿಂದ, ಒಟ್ಟಾರೆಯಾಗಿ 1.44 ಕೋಟಿಗೂ ಹೆಚ್ಚು ಇಂತಹ ರೈತರು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.
ರಾಜ್ಯ-ನಿರ್ದಿಷ್ಟ ಪ್ರಗತಿ ಮತ್ತು ಒಳನೋಟಗಳು
ಪ್ರಮುಖ ರಾಜ್ಯಗಳ ಮರುಸೇರ್ಪಡೆಯು ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ
ಪಿಎಂಎಫ್‌ಬಿವೈ ಚೌಕಟ್ಟಿನ ಮೇಲೆ ರಾಜ್ಯ ಸರ್ಕಾರಗಳ ವಿಶ್ವಾಸವು ಗಮನಾರ್ಹವಾಗಿ ಬೆಳೆದಿದೆ. ಈ ಹಿಂದೆ ಯೋಜನೆಯಿಂದ ಹೊರನಡೆದಿದ್ದ ಅಥವಾ ತಮ್ಮದೇ ಆದ ವಿಮೇತರ ಬೆಳೆ ಪರಿಹಾರ ಯೋಜನೆಗಳನ್ನು ಪ್ರಾರಂಭಿಸಿದ್ದ ಪ್ರಮುಖ ಕೃಷಿ ರಾಜ್ಯಗಳು ವ್ಯವಸ್ಥಿತವಾಗಿ ಮರಳಿ ಬಂದಿರುವುದು ಇದಕ್ಕೆ ಸಾಕ್ಷಿಯಾಗಿದೆ.
- ಆಂಧ್ರಪ್ರದೇಶವು 2022ರ ಮುಂಗಾರುನಿಂದ ಮರುಸೇರ್ಪಡೆಯಾಗಿದೆ.
- ಜಾರ್ಖಂಡ್ 2024ರ ಮುಂಗಾರುನಿಂದ ಮರುಸೇರ್ಪಡೆಯಾಗಿದೆ.
- ಪಶ್ಚಿಮ ಬಂಗಾಳವು 2026ರ ಮುಂಗಾರುನಿಂದ ಮರುಸೇರ್ಪಡೆಯಾಗಿದೆ.
- ಬಿಹಾರ ರಾಜ್ಯವು ರಾಷ್ಟ್ರೀಯ ಚೌಕಟ್ಟಿಗೆ ಮರಳಲು ತೀರ್ಮಾನಿಸಿದ್ದು, 2026-27ರ ಹಿಂಗಾರು ಋತುವಿನಿಂದ ಪಿಎಂಎಫ್‌ಬಿವೈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಮರುಸೇರ್ಪಡೆಯ ಈ ಅಲೆಯು, ಪ್ರಾದೇಶಿಕ ವಿಮೇತರ ಪರಿಹಾರ ಮಾದರಿಗಳಿಗೆ ಹೋಲಿಸಿದರೆ ಈ ಕೇಂದ್ರೀಕೃತ ಯೋಜನೆಯು ಒದಗಿಸುವ ಸಾಟಿಯಿಲ್ಲದ ದಕ್ಷತೆ ಮತ್ತು ಆರ್ಥಿಕ ಸುರಕ್ಷತಾ ಜಾಲವನ್ನು ಎತ್ತಿ ತೋರಿಸುತ್ತದೆ.
ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಸಾರ್ವತ್ರಿಕರಣದ (ಯುನಿವರ್ಸಲೈಸೇಶನ್) ಸ್ಥಗಿತಗೊಳಿಸುವಿಕೆಯ ಪ್ರಭಾವ:
ಪ್ರಾದೇಶಿಕ ನೋಂದಣಿ ಪ್ರವೃತ್ತಿಗಳ ವಿವರವಾದ ಪರಿಶೀಲನೆಯು, 2025–26ರ ಋತುವಿನಲ್ಲಿ ವಿಮೆ ಮಾಡಿದ ರೈತರ ಅರ್ಜಿಗಳಲ್ಲಿ ಕಂಡುಬಂದ ಸಾಧಾರಣ ರಾಷ್ಟ್ರೀಯ ಕುಸಿತವು ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಇದು ಯೋಜನೆಯ ಮೇಲಿನ ರೈತರ ವ್ಯಾಪಕ ಅಪನಂಬಿಕೆಯನ್ನು ಸೂಚಿಸುವ ಬದಲು, ಅನುಷ್ಠಾನಗೊಳಿಸುವ ವಿಧಾನದಲ್ಲಿ ಆದ ಬದಲಾವಣೆಯಿಂದಾಗಿ ಸಂಭವಿಸಿದೆ.
- ಉಭಯ ರಾಜ್ಯಗಳೂ ಈ ಹಿಂದೆ 2023 ಮತ್ತು 2024 ರ ಅವಧಿಯಲ್ಲಿ "ಸಾರ್ವತ್ರಿಕರಣ ವಿಧಾನವನ್ನು" (ಯುನಿವರ್ಸಲೈಸೇಶನ್ ಅಪ್ರೋಚ್) ಜಾರಿಗೊಳಿಸಿದ್ದವು. ಅಲ್ಲಿ ರಾಜ್ಯ ಸರ್ಕಾರವೇ ಎಲ್ಲಾ ರೈತರ ಪರವಾಗಿ 100% ಪ್ರೀಮಿಯಂ ಅನ್ನು ಭರಿಸುತ್ತಿತ್ತು, ಇದರಿಂದಾಗಿ 2024 ರ ಮುಂಗಾರು ಋತುವಿನಲ್ಲಿ ಅತ್ಯಂತ ಹೆಚ್ಚಿನ ನೋಂದಣಿಯಾಗಿತ್ತು.
- 2025ರಲ್ಲಿ, ಎರಡೂ ರಾಜ್ಯಗಳು ಈ 100% ರೈತ ಪ್ರೀಮಿಯಂ ಸಬ್ಸಿಡಿ ವಿಧಾನವನ್ನು ಸ್ಥಗಿತಗೊಳಿಸಿದವು. ಇದು ರೈತರ ನೋಂದಣಿಯಲ್ಲಿ ನಿರೀಕ್ಷಿತ ಕುಸಿತಕ್ಕೆ ಕಾರಣವಾಯಿತು:
- 2025 ರ ಮುಂಗಾರುನಲ್ಲಿ, ಆಂಧ್ರಪ್ರದೇಶದ ರೈತರ ನೋಂದಣಿ ೭೭% ರಷ್ಟು ಕುಸಿಯಿತು (2024 ರ ಮುಂಗಾರುನಲ್ಲಿ 31.92 ಲಕ್ಷ ಇದ್ದದ್ದು 2025 ರ ಮುಂಗಾರುನಲ್ಲಿ ೭.೪೩ ಲಕ್ಷಕ್ಕೆ ಇಳಿಯಿತು). 2026 ರ ಮುಂಗಾರುನಲ್ಲಿ ಈ ಪ್ರವೃತ್ತಿ ಬದಲಾಗಿದ್ದು, 28 ಆಗಸ್ಟ್ 2026 ರವರೆಗೆ 16.22 ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ. ಇದು 2025 ರ ಮುಂಗಾರು ಋತುವಿಗಿಂತ 108% ರಷ್ಟು ಹೆಚ್ಚಳವನ್ನು ತೋರಿಸುತ್ತದೆ.
- ಅದೇ ರೀತಿ, 2025 ರ ಮುಂಗಾರುನಲ್ಲಿ, ಮಹಾರಾಷ್ಟ್ರದಲ್ಲಿ ರೈತರ ನೋಂದಣಿ ೪೦% ರಷ್ಟು ಕುಸಿಯಿತು (2024 ರ ಮುಂಗಾರುನಲ್ಲಿ 76.59ಲಕ್ಷ ಇದ್ದದ್ದು 2025 ರ ಮುಂಗಾರುನಲ್ಲಿ 45.99 ಲಕ್ಷಕ್ಕೆ ಇಳಿಯಿತು). 2026 ರ ಮುಂಗಾರುನಲ್ಲಿ ೨೮28 ಆಗಸ್ಟ್ 2026 ರವರೆಗೆ 42.55 ಲಕ್ಷ ರೈತರು ನೋಂದಾಯಿಸಿಕೊಂಡಿದ್ದು, 2025 ರ ಮುಂಗಾರು ಋತುವಿನ 92% ಮಟ್ಟವನ್ನು ತಲುಪಿದ್ದಾರೆ. ಈ ಸಾಧಾರಣ ಕುಸಿತಕ್ಕೆ ರಾಜ್ಯವು ಕೆಲವು ಹೆಚ್ಚುವರಿ (ಆಡ್-ಆನ್) ಪರಿಹಾರ ವಿಮಾಗಳನ್ನು ಯೋಜನೆಯಿಂದ ಹೊರಗಿಟ್ಟಿರುವುದು ಕಾರಣವಾಗಿದೆ.
ಇತರ ಪ್ರಮುಖ ರಾಜ್ಯಗಳಲ್ಲಿ ಸ್ಥಿರ ಮತ್ತು ಬಲವಾದ ಬೆಳವಣಿಗೆ
ಈ ರಾಜ್ಯ-ನಿರ್ದಿಷ್ಟ, ಸ್ಥಳೀಯ ನೀತಿ-ಆಧಾರಿತ ಹೊಂದಾಣಿಕೆಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿ, ಇತರ ಪ್ರಮುಖ ಕೃಷಿ ರಾಜ್ಯಗಳು 2025ರ ಮುಂಗಾರುನಲ್ಲಿ ರೈತರ ನೋಂದಣಿಯಲ್ಲಿ ಅತ್ಯಂತ ಬಲವಾದ ಬೆಳವಣಿಗೆಯನ್ನು ದಾಖಲಿಸಿವೆ:
- ಉತ್ತರ ಪ್ರದೇಶ: ಬೃಹತ್ 35% ಹೆಚ್ಚಳದೊಂದಿಗೆ ಮುಂಚೂಣಿಯಲ್ಲಿದ್ದು, ವಿಮೆ ಮಾಡಿದ ರೈತರ ಸಂಖ್ಯೆ 15.48 ಲಕ್ಷದಿಂದ 20.84 ಲಕ್ಷಕ್ಕೆ ಏರಿಕೆಯಾಗಿದೆ.
- ಹರಿಯಾಣ: 20% ಹೆಚ್ಚಳದೊಂದಿಗೆ ತನ್ನ ಸ್ಥಿರ ಬೆಳವಣಿಗೆಯ ಪಥವನ್ನು ಮುಂದುವರಿಸಿದ್ದು, 2024 ರ ಮುಂಗಾರುನಲ್ಲಿ 3.75 ಲಕ್ಷಕ್ಕೆ ಹೋಲಿಸಿದರೆ 2025 ರ ಮುಂಗಾರುನಲ್ಲಿ 4.49 ಲಕ್ಷ ರೈತರನ್ನು ವಿಮೆಗೊಳಪಡಿಸಿದೆ (ಇದು 2023 ಮತ್ತು 2024 ರ ನಡುವಿನ ೮೨% ರಷ್ಟು ಭವ್ಯವಾದ ಬೆಳವಣಿಗೆಯನ್ನು ಆಧರಿಸಿದೆ).
- ರಾಜಸ್ಥಾನ: 19% ಹೆಚ್ಚಳವನ್ನು ದಾಖಲಿಸಿದ್ದು, ವಿಮೆ ಮಾಡಿದ ರೈತರ ಸಂಖ್ಯೆ ೩೦.೫೯ ಲಕ್ಷದಿಂದ 26.45 ಲಕ್ಷಕ್ಕೆ ಏರಿದೆ.
- ಮಧ್ಯಪ್ರದೇಶ: 12% ಹೆಚ್ಚಳವನ್ನು ನೋಂದಾಯಿಸಿಕೊಂಡಿದ್ದು, ವಿಮೆ ಮಾಡಿದ ರೈತರ ಸಂಖ್ಯೆ 26.80 ಲಕ್ಷಕ್ಕೆ ಬೆಳೆದಿದೆ.
- ಛತ್ತೀಸ್‌ಗಢ: ತನ್ನ ವಿಮೆ ಮಾಡಿದ ರೈತರ ಸಂಖ್ಯೆಯಲ್ಲಿ 9% ಹೆಚ್ಚಳವನ್ನು ಕಂಡು 15.75 ಲಕ್ಷಕ್ಕೆ ತಲುಪಿದೆ.
- ಒಡಿಶಾ: 5% ಹೆಚ್ಚಳವನ್ನು ಕಂಡಿದ್ದು, ಒಟ್ಟು ವಿಮೆ ಮಾಡಿದ ರೈತರ ಸಂಖ್ಯೆಯನ್ನು 24.92 ಲಕ್ಷಕ್ಕೆ ತಂದಿದೆ.
ಈ ಸತತ ಸಕಾರಾತ್ಮಕ ಇಮ್ಮಡಿ ಅಂಕಿಗಳ ಪ್ರವೃತ್ತಿಗಳು ಭಾರತದ ಪ್ರಾಥಮಿಕ ಕೃಷಿ ವಲಯಗಳಾದ್ಯಂತ ಕೃಷಿ ಅಪಾಯದ ರಕ್ಷಣೆಗೆ ಇರುವ ಬಲವಾದ ಮತ್ತು ಸ್ವಯಂಪ್ರೇರಿತ ಬೇಡಿಕೆಯನ್ನು ಪ್ರದರ್ಶಿಸುತ್ತವೆ.
ಪಿಎಂಎಫ್‌ಬಿವೈ ಅನುಷ್ಠಾನವನ್ನು ಬಲಪಡಿಸಲು ಸರ್ಕಾರದ ಪ್ರಮುಖ ಉಪಕ್ರಮಗಳು
ಪಿಎಂಎಫ್‌ಬಿವೈ ಯೋಜನೆಯನ್ನು ಪ್ರಬಲವಾದ ಡಿಜಿಟಲ್ ಮತ್ತು ಆಡಳಿತಾತ್ಮಕ ಚೌಕಟ್ಟಿನ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಇದು ಪಾರದರ್ಶಕ, ಸಕಾಲಿಕ ಮತ್ತು ನಿಖರವಾದ ಬೆಳೆ ವಿಮಾ ಸೇವೆಗಳನ್ನು ಖಾತ್ರಿಪಡಿಸುತ್ತದೆ.
- ರಾಷ್ಟ್ರೀಯ ಬೆಳೆ ವಿಮಾ ಪೋರ್ಟಲ್ (ಎನ್‌ಸಿಐಪಿ): ಡಿಜಿಟಲ್ ರೈತರ ನೋಂದಣಿ, ಸಬ್ಸಿಡಿ ಆಡಳಿತ, ಸಮನ್ವಯ ಮತ್ತು ಮಾಹಿತಿ ಪ್ರಸಾರವನ್ನು ಸಕ್ರಿಯಗೊಳಿಸುತ್ತದೆ. ಇದು ವಿಮೆ ಮಾಡಿದ ರೈತರ ವಿವರಗಳ ಲಭ್ಯತೆ, ಅರ್ಹ ಪರಿಹಾರಗಳ ಲೆಕ್ಕಾಚಾರ ಮತ್ತು ಪರಿಹಾರ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಎಲೆಕ್ಟ್ರಾನಿಕ್ ವರ್ಗಾವಣೆ ಮಾಡುವುದನ್ನು ಸುಗಮಗೊಳಿಸುತ್ತದೆ.
- ಎನ್‌ಸಿಐಪಿ ನೊಂದಿಗೆ ಜಮೀನು ದಾಖಲೆಗಳ ಸಂಯೋಜನೆ: ರಾಜ್ಯದ ಇ-ಭೂಮಿ (ಇ-ಲ್ಯಾಂಡ್) ದಾಖಲೆಗಳ ಮೂಲಕ ವಿಮೆ ಮಾಡಿಸಲಾದ ಪ್ರದೇಶಗಳ ಸಿಂಧುತ್ವವನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಜಮೀನು ದಾಖಲೆಗಳ ಡಿಜಿಟಲ್ ಪರಿಶೀಲನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ರಾಜ್ಯಗಳಲ್ಲಿ ವಿಮೆ ಮಾಡಿಸಲಾದ ಪ್ರದೇಶದ ಸುಮಾರು ೮೫% ಭಾಗವನ್ನು ಈಗ ಸಮಗ್ರ ಜಮೀನು ದಾಖಲೆಗಳ ಮೂಲಕ ಪರಿಶೀಲಿಸಲಾಗುತ್ತಿದ್ದು, ಜಮೀನಿನ ತುಂಡು, ವಿಮೆ ಮಾಡಿದ ಪ್ರದೇಶ ಮತ್ತು ರೈತನ ಸರಿಯಾದ ಗುರುತಿಸುವಿಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
- ಡಿಜಿಕ್ಲೇಮ್ ಮಾಡ್ಯೂಲ್: 2022ರ ಮುಂಗಾರುನಿಂದ ಪರಿಚಯಿಸಲಾದ ಇದು, ಎನ್‌ಸಿಐಪಿ ಯಲ್ಲಿ ಪರಿಹಾರಗಳ ಪಾರದರ್ಶಕ ಲೆಕ್ಕಾಚಾರ ಮತ್ತು ಇತ್ಯರ್ಥಕ್ಕೆ ಅನುವು ಮಾಡಿಕೊಡುತ್ತದೆ. ಪರಿಹಾರಗಳನ್ನು ಎನ್‌ಸಿಐಪಿ ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಮೂಲಕ ಪಾವತಿಸಲಾಗುತ್ತದೆ. ಇದು ರೈತರ ಹಂತದವರೆಗೆ ಪರಿಹಾರಗಳ ಪೂರ್ಣ-ಚಕ್ರ ಮೇಲ್ವಿಚಾರಣೆಯನ್ನು ಸಹ ಸಕ್ರಿಯಗೊಳಿಸುತ್ತದೆ. ಪ್ರಾರಂಭವಾದಾಗಿನಿಂದ, ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ₹55,000 ಕೋಟಿಗೂ ಹೆಚ್ಚು ಪರಿಹಾರಗಳನ್ನು ಲೆಕ್ಕಹಾಕಿ ಪಾವತಿಸಲಾಗಿದೆ.
- ಬೆಳೆ ಕಟಾವು ಪ್ರಯೋಗ ಸಿಸಿಇ-ಆಗ್ರಿ ಆಪ್: ಸಿಸಿಇ ಇಳುವರಿ ದತ್ತಾಂಶವನ್ನು ಡಿಜಿಟಲ್ ರೂಪದಲ್ಲಿ ಸೆರೆಹಿಡಿಯಲು ಮತ್ತು ಎನ್‌ಸಿಐಪಿ ಗೆ ಅಪ್‌ಲೋಡ್ ಮಾಡಲು ಸಕ್ರಿಯಗೊಳಿಸುತ್ತದೆ. ಈ ಇಳುವರಿ ದತ್ತಾಂಶವನ್ನು ವಿಮಾ ಘಟಕದ ನೈಜ ಇಳುವರಿಯನ್ನು ಲೆಕ್ಕಾಚಾರ ಮಾಡಲು ಬಳಸಲಾಗುತ್ತದೆ, ಇದರ ಆಧಾರದ ಮೇಲೆ ಬೆಳೆ ಇಳುವರಿ ನಷ್ಟದ ಕಾರಣದಿಂದಾಗಿ ಪಾವತಿಸಬೇಕಾದ ಅರ್ಹ ಪರಿಹಾರಗಳನ್ನು ಲೆಕ್ಕಹಾಕಲಾಗುತ್ತದೆ. ಇದು ವಿಮಾ ಕಂಪನಿಗಳಿಗೆ ಸಿಸಿಇ ಗಳನ್ನು ನೇರವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ, ಪಾರದರ್ಶಕತೆಯನ್ನು ಸುಧಾರಿಸುತ್ತದೆ ಮತ್ತು ಸಕಾಲಿಕ ಪರಿಹಾರ ಇತ್ಯರ್ಥಕ್ಕೆ ಬೆಂಬಲ ನೀಡುತ್ತದೆ.
ಬೆಳೆ ವಿಮಾ ವಿತರಣೆಯನ್ನು ಬಲಪಡಿಸುವ ಡಿಜಿಟಲ್ ನಾವೀನ್ಯತೆಗಳು
ಪಿಎಂಎಫ್‌ಬಿವೈ ಯ ಡಿಜಿಟಲ್ ಪ್ಲಾಟ್‌ಫಾರ್ಮ್ ರೈತರು, ವಿಮೆದಾರರು, ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಒಂದೇ ಐಟಿ ವ್ಯವಸ್ಥೆಯಲ್ಲಿ (ಐಟಿ ಇಕೋಸಿಸ್ಟಮ್) ಸಂಯೋಜಿಸುತ್ತದೆ. ಇದು ನೈಜ-ಸಮಯದ (ರಿಯಲ್-ಟೈಮ್) ಮಾಹಿತಿ ಹಂಚಿಕೆ, ಪಾರದರ್ಶಕ ಆಡಳಿತ ಮತ್ತು ಸುಗಮಗೊಳಿಸಲಾದ ಬೆಳೆ ವಿಮಾ ಸೇವೆಗಳನ್ನು ಸಕ್ರಿಯಗೊಳಿಸುತ್ತದೆ. ಈ ಪೋರ್ಟಲ್ ಪ್ರದೇಶ, ಬೆಳೆ ಮತ್ತು ಯೋಜನೆಯ ಅಧಿಸೂಚನೆಗಳನ್ನು ಡಿಜಿಟಲೀಕರಣಗೊಳಿಸುತ್ತದೆ, ಕೈಯಿಂದ ಮಾಡುವ ಪ್ರಕ್ರಿಯೆಗಳನ್ನು (ಮ್ಯಾನ್ಯುವಲ್ ಪ್ರೊಸೆಸ್) ಕಡಿಮೆ ಮಾಡುತ್ತದೆ ಮತ್ತು ವಿಶೇಷವಾಗಿ ದೂರದ ಹಾಗೂ ಆರ್ಥಿಕವಾಗಿ ಹಿಂದುಳಿದ ರೈತರಿಗೆ ವಿಮೆಯ ಲಭ್ಯತೆಯನ್ನು ಸುಧಾರಿಸುತ್ತದೆ.

ತಂತ್ರಜ್ಞಾನ ಆಧಾರಿತ ಇಳುವರಿ ಅಂದಾಜು ವ್ಯವಸ್ಥೆ : ನ್ಯಾಯಯುತ ಮತ್ತು ನಿಖರವಾದ ಬೆಳೆ ಇಳುವರಿ ಅಂದಾಜುಗಳನ್ನು ಒದಗಿಸಲು ಉಪಗ್ರಹ ಸಂವೇದನೆ (ರಿಮೋಟ್ ಸೆನ್ಸಿಂಗ್) ಮತ್ತು ತಂತ್ರಜ್ಞಾನ ಆಧಾರಿತ ವಿಧಾನಗಳನ್ನು ಬಳಸುತ್ತದೆ. ಇದನ್ನು 2023 ರ ಮುಂಗಾರುನಲ್ಲಿ ಭತ್ತ ಮತ್ತು ಗೋದಿಗೆ ಹಾಗೂ 2024ರ ಮುಂಗಾರುನಲ್ಲಿ ಸೋಯಾಬೀನ್‌ಗೆ ಪ್ರಾರಂಭಿಸಲಾಯಿತು. ಇದನ್ನು ಯೆಸ್-ಟೆಕ್‌ನಿಂದ ಪಡೆದ ಇಳುವರಿಗೆ ಕನಿಷ್ಠ 30% ವೇಟೇಜ್ ನೀಡುವುದರೊಂದಿಗೆ ಪ್ರಾರಂಭಿಸಲಾಯಿತು ಮತ್ತು ಈಗ ಕೆಲವು ರಾಜ್ಯಗಳಲ್ಲಿ 50% ರವರೆಗೆ ಹೆಚ್ಚಿಸಲಾಗಿದೆ.
ಹವಾಮಾನ ಮಾಹಿತಿ ಜಾಲ ಮತ್ತು ದತ್ತಾಂಶ ವ್ಯವಸ್ಥೆ: ಬ್ಲಾಕ್ ಮತ್ತು ಗ್ರಾಂ ಪಂಚಾಯಿತಿ ಮಟ್ಟದಲ್ಲಿ ಅತಿ ಸ್ಥಳೀಯ ಹವಾಮಾನ ದತ್ತಾಂಶವನ್ನು ಸಂಗ್ರಹಿಸಲು ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಮತ್ತು ಸ್ವಯಂಚಾಲಿತ ಮಳೆ ಮಾಪಕಗಳನ್ನು ಬಳಸಿಕೊಳ್ಳುತ್ತದೆ. ಈ ದತ್ತಾಂಶವು ಹಣ್ಣುಗಳು, ತರಕಾರಿಗಳು ಮತ್ತು ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅನುಷ್ಠಾನ, ಯೆಸ್-ಟೆಕ್‌ಬಳಸಿ ಬೆಳೆ ಇಳುವರಿ ಅಂದಾಜು, ವಿಪತ್ತು ನಿರ್ವಹಣೆ, ಹವಾಮಾನ ಮುನ್ಸೂಚನೆ ಮತ್ತು ಇತರ ಪಾರಾಮೆಟ್ರಿಕ್ ವಿಮಾ ಉತ್ಪನ್ನಗಳಿಗೆ ಬೆಂಬಲ ನೀಡುತ್ತದೆ.
ಬೆಳೆಗಳ ನೈಜ-ಸಮಯದ ಛಾಯಾಚಿತ್ರಗಳು ಮತ್ತು ವೀಕ್ಷಣೆಗಳ ಸಂಗ್ರಹಣೆ: ಕೊಟ್ಟಿರುವ ವಿಮಾ ಘಟಕದಲ್ಲಿ ಸಾಮಾನ್ಯ ಬೆಳೆ ಆರೋಗ್ಯವನ್ನು ನಿಯತಕಾಲಿಕವಾಗಿ ಪರಿಶೀಲಿಸಲು ಜಿಯೋ-ಟ್ಯಾಗ್ ಮಾಡಿದ ಛಾಯಾಚಿತ್ರಗಳನ್ನು ಬಳಸುತ್ತದೆ. ಇದನ್ನು ಚಿತ್ರಾತ್ಮಕ ವಿಶ್ಲೇಷಣೆಯ (ಪಿಕ್ಟೋರಿಯಲ್ ಅನಲಿಟಿಕ್ಸ್) ಮೂಲಕ ಬೆಳೆ ಹಾನಿ ಮೌಲ್ಯಮಾಪನ ಮತ್ತು ಇಳುವರಿ ಅಂದಾಜನ್ನು ಬೆಂಬಲಿಸಲು ಯೋಜಿಸಲಾಗಿದ್ದು, ಇದಕ್ಕಾಗಿ ದೇಶಾದ್ಯಂತ ಪೈಲಟ್ ಯೋಜನೆಗಳನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದೆ.
ಕೃಷಿ ರಕ್ಷಕ ಪೋರ್ಟಲ್ ಮತ್ತು ಸಹಾಯವಾಣಿ: ರೈತರು ಕುಂದುಕೊರತೆಗಳನ್ನು ನೋಂದಾಯಿಸಲು, ನೆರವು ಪಡೆಯಲು ಮತ್ತು ಬೆಳೆ ವಿಮೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರವನ್ನು ಟ್ರ್ಯಾಕ್ ಮಾಡಲು ಮೀಸಲಾದ ಟೋಲ್-ಫ್ರೀ ಸಹಾಯವಾಣಿಯನ್ನು (14447) ಒದಗಿಸುತ್ತದೆ. ಇದನ್ನು ಜನೆವರಿ 2024 ರಲ್ಲಿ ದೇಶಾದ್ಯಂತ ಪ್ರಾರಂಭಿಸಲಾಯಿತು ಮತ್ತು ಆಗಿನಿಂದ, ವಿಮೆ ಮಾಡಿದ ರೈತರ 26. 12 ಲಕ್ಷ ಕುಂದುಕೊರತೆಗಳನ್ನು 99.66% ಪರಿಹಾರ ದರದೊಂದಿಗೆ ಬಗೆಹರಿಸಲಾಗಿದೆ.
ಕಲಿಕಾ ನಿರ್ವಹಣಾ ವ್ಯವಸ್ಥೆ: ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಪಾಲುದಾರರಲ್ಲಿ ಬೆಳೆ ವಿಮೆಯ ಜ್ಞಾನ ಮತ್ತು ತಿಳುವಳಿಕೆಯನ್ನು ವಿಸ್ತರಿಸುತ್ತದೆ. ಮಧ್ಯವರ್ತಿಗಳ ನೋಂದಣಿಗಾಗಿ ಆಪ್: ಸಾಲ ಪಡೆಯದ ರೈತರ ಮನೆಬಾಗಿಲಿನ ನೋಂದಣಿಯನ್ನು ಸಕ್ರಿಯಗೊಳಿಸುತ್ತದೆ. ಇದು ವಿಮಾ ಮಧ್ಯವರ್ತಿಗಳ ಮೂಲಕ ಬೆಳೆ ವಿಮೆಯನ್ನು ಹೆಚ್ಚು ಲಭ್ಯವಾಗುವಂತೆ ಮಾಡುತ್ತದೆ. ಅದೇ ರೀತಿ, ಬೆಳೆ ನಷ್ಟ ಮೌಲ್ಯಮಾಪನ ಆಪ್: ಬೆಳೆ ನಷ್ಟ ಸಮೀಕ್ಷೆಗಳ ಮೂಲಕ ಸ್ಥಳೀಯ ವಿಪತ್ತುಗಳ ಅಡಿಯಲ್ಲಿ ಪ್ರತ್ಯೇಕ ಜಮೀನು ಮಟ್ಟದಲ್ಲಿ ಬೆಳೆ ನಷ್ಟದ ಪ್ರಮಾಣವನ್ನು ಡಿಜಿಟಲ್ ರೂಪದಲ್ಲಿ ರೆಕಾರ್ಡ್ ಮಾಡಲು ಬಳಸಲಾಗುತ್ತಿದ್ದು, ವೇಗವಾಗಿ ಮತ್ತು ಪಾರದರ್ಶಕವಾಗಿ ಪರಿಹಾರದ ಲೆಕ್ಕಾಚಾರ ಹಾಗೂ ಇತ್ಯರ್ಥಕ್ಕೆ ಅನುವು ಮಾಡಿಕೊಡುತ್ತದೆ.
ಈ ತಾಂತ್ರಿಕ ಉಪಕ್ರಮಗಳು ರೈತರಿಗೆ ವೇಗದ ನೋಂದಣಿ, ನಿಖರವಾದ ನಷ್ಟದ ಮೌಲ್ಯಮಾಪನ, ಸಕಾಲಿಕ ಪರಿಹಾರ ಇತ್ಯರ್ಥ ಮತ್ತು ಪರಿಣಾಮಕಾರಿ ಕುಂದುಕೊರತೆ ಪರಿಹಾರವನ್ನು ಸಕ್ರಿಯಗೊಳಿಸುವ ಮೂಲಕ ಪಿಎಂಎಫ್‌ಬಿವೈ ಯೋಜನೆಯನ್ನು ರೂಪಾಂತರಿಸಿವೆ.
ಪುನಾರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (ಆರ್‌ಡಬ್ಲುಬಿಸಿಐಎಸ್)
ಪಿಎಂಎಫ್‌ಬಿವೈ ಯೋಜನೆಗೆ ಪೂರಕವಾಗಿ, ಸರ್ಕಾರವು ನಿರ್ದಿಷ್ಟವಾಗಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುವ ಅಪಾಯಗಳನ್ನು ಎದುರಿಸಲು 'ಪುನಾರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ' (ಆರ್‌ಡಬ್ಲುಬಿಸಿಐಎಸ್) ಅನ್ನು ಜಾರಿಗೊಳಿಸುತ್ತದೆ. ಆರ್‌ಡಬ್ಲುಬಿಸಿಐಎಸ್ ಎಂಬುದು ಹವಾಮಾನ ಸೂಚ್ಯಂಕ-ಆಧಾರಿತ ಯೋಜನೆಯಾಗಿದ್ದು, ಇದರಲ್ಲಿ ನೈಜವಾಗಿ ಅಂದಾಜು ಮಾಡಿದ ಬೆಳೆ-ಇಳುವರಿ ನಷ್ಟಗಳಿಗಿಂತ ಹೆಚ್ಚಾಗಿ, ಬೆಳೆ ಹಾನಿಗೆ ಸೂಚಕವಾಗಿ (ಪ್ರಾಕ್ಸಿ) ನಿರ್ದಿಷ್ಟಪಡಿಸಿದ ಹವಾಮಾನ ನಿಯಮಾವಳಿಗಳನ್ನು ಬಳಸಿಕೊಂಡು ಅರ್ಹ ಪರಿಹಾರಗಳನ್ನು ನಿರ್ಧರಿಸಲಾಗುತ್ತದೆ. ಈ ಯೋಜನೆಯಡಿಯಲ್ಲಿ, ಬೆಳೆಯ ಜೀವಿತಾವಧಿಯನ್ನು ವಿಭಿನ್ನ ಹಂತಗಳಾಗಿ ವಿಂಗಡಿಸಲಾಗುತ್ತದೆ ಮತ್ತು ಪ್ರತಿ ಹಂತದಲ್ಲೂ ಬೆಳೆಯ ಸೂಕ್ಷ್ಮತೆಯ ಆಧಾರದ ಮೇಲೆ ವಿಮಾ ಮೊತ್ತವನ್ನು ಹಂಚಿಕೆ ಮಾಡಲಾಗುತ್ತದೆ.
ಈ ಯೋಜನೆಯು ನಿರ್ದಿಷ್ಟಪಡಿಸಿದ ಉಲ್ಲೇಖಿತ ಘಟಕ ಪ್ರದೇಶಗಳಲ್ಲಿ (ಆರ್‌ಯುಎ) "ಪ್ರದೇಶ ಆಧಾರಿತ ವಿಧಾನದಲ್ಲಿ" (ಏರಿಯಾ ಅಪ್ರೋಚ್) ಕಾರ್ಯನಿರ್ವಹಿಸುತ್ತದೆ. ಸೂಚಿತ ಸ್ಥಳೀಯ ಹವಾಮಾನ ಕೇಂದ್ರಗಳಲ್ಲಿ ಅಳೆಯಲಾದ ಕೊರತೆ ಅಥವಾ ಅಧಿಕ ಮಳೆ, ಒಣ ಹವೆ, ವಿಪರೀತ ತಾಪಮಾನ, ಆರ್ದ್ರತೆ ಮತ್ತು ಗಾಳಿಯ ವೇಗ ಸೇರಿದಂತೆ ಪರಿಮಾಣಾತ್ಮಕ ಹವಾಮಾನ ವ್ಯತ್ಯಾಸಗಳು ಪೂರ್ವನಿರ್ಧರಿತ ಮಿತಿಗಳಿಂದ ಬದಲಾದಾಗ ಪರಿಹಾರ ಪಾವತಿಗಳು ಪ್ರಚೋದಿಸಲ್ಪಡುತ್ತವೆ (ಟ್ರಿಗರ್ ಆಗುತ್ತವೆ). ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಆಲಿಕಲ್ಲು ಮಳೆ ಮತ್ತು ಮೋಡಸ್ಪೋಟದಂತಹ ತೀವ್ರ ಸ್ಥಳೀಯ ವಿಪತ್ತುಗಳಿಗೆ ಪ್ರತ್ಯೇಕ ಜಮೀನು ಮಟ್ಟದ ಹೆಚ್ಚುವರಿ ರಕ್ಷಣೆಯನ್ನು ಸಹ ಒದಗಿಸಬಹುದು. ಪಿಎಂಎಫ್‌ಬಿವೈ ಯೋಜನೆಯಂತೆಯೇ ಕೈಗೆಟುಕುವ ಪ್ರೀಮಿಯಂ ದರಗಳನ್ನು (ಬೆಳೆಯ ಮಾದರಿಯನ್ನು ಆಧರಿಸಿ 1.5% ರಿಂದ 5%) ಹಂಚಿಕೊಳ್ಳುವ ಆರ್‌ಡಬ್ಲುಬಿಸಿಐಎಸ್, ವಿಶೇಷವಾಗಿ ಹಣ್ಣು, ತರಕಾರಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಅತ್ಯಂತ ಜನಪ್ರಿಯ ಸುರಕ್ಷತಾ ಜಾಲವಾಗಿ ಉಳಿದಿದೆ. ಇದು 2026ರ ಮುಂಗಾರು ಹಂಗಾಮಿನಲ್ಲಿ 12.31 ಲಕ್ಷ ಹೆಕ್ಟೇರ್ ಪ್ರದೇಶವನ್ನು ಆವರಿಸುವ 25.95 ಲಕ್ಷ ರೈತರ ಅರ್ಜಿಗಳನ್ನು ಒಳಗೊಂಡಿದೆ.
ಪಿಎಂಎಫ್‌ಬಿವೈ ಮೂಲಕ ಕೃಷಿ ಅಪಾಯ ನಿರ್ವಹಣೆಯ ರೂಪಾಂತರ
ಕಳೆದ ದಶಕದಲ್ಲಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಭಾರತದ ಕೃಷಿ ಅಪಾಯ ನಿರ್ವಹಣಾ ಚೌಕಟ್ಟಿನ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿದೆ. ಇದು ಕೋಟಿಗಟ್ಟಲೆ ರೈತರಿಗೆ ಹವಾಮಾನ ಬದಲಾವಣೆ, ತೀವ್ರ ಹವಾಮಾನ ಘಟನೆಗಳು ಮತ್ತು ಜೈವಿಕ ಅಪಾಯಗಳ ವಿರುದ್ಧ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಕೈಗೆಟುಕುವ ಪ್ರೀಮಿಯಂಗಳನ್ನು ಸಮಗ್ರ ಬೆಳೆ-ಚಕ್ರ ರಕ್ಷಣೆಯೊಂದಿಗೆ ಸಂಯೋಜಿಸುವ ಮೂಲಕ, ಈ ಯೋಜನೆಯು ಆದಾಯದ ಆಘಾತಗಳಿಗೆ ರೈತರ ಸೂಕ್ಷ್ಮತೆಯನ್ನು ಕಡಿಮೆ ಮಾಡಿದೆ. ಇದು ಆಧುನಿಕ ಪರಿಕರಗಳು, ಸುಧಾರಿತ ತಳಿ ಬೀಜಗಳು ಮತ್ತು ಉತ್ತಮ ಕೃಷಿ ಪದ್ಧತಿಗಳಲ್ಲಿ ಹೂಡಿಕೆ ಮಾಡುವ ಅವರ ಸಾಮರ್ಥ್ಯವನ್ನು ಬಲಪಡಿಸಿದೆ.
ಎನ್‌ಸಿಐಪಿ, ಡಿಜಿ ಕ್ಲೈಮ್, ಸಿಸಿಇ-ಅಗ್ರೀ ಆಪ್, ಸಿಎಲ್‌ಎಎಪಿ, ಯೆಸ್-ಟೆಕ್ ಮತ್ತು ಡಬ್ಲುಐಎನ್‌ಡಿಎಸ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಉಪಕ್ರಮಗಳು ಪಿಎಂಎಫ್‌ಬಿವೈ ಅಡಿಯಲ್ಲಿ ಪರಿಹಾರ ಇತ್ಯರ್ಥದ ಪಾರದರ್ಶಕತೆ, ನಿಖರತೆ ಮತ್ತು ವೇಗವನ್ನು ಸುಧಾರಿಸಿವೆ. ಈ ತಂತ್ರಜ್ಞಾನಗಳು ಪಿಎಂಎಫ್‌ಬಿವೈ ಅನ್ನು ಹೆಚ್ಚು ದಕ್ಷ ಮತ್ತು ಜವಾಬ್ದಾರಿಯುತವಾಗಿ ಮಾಡಿವೆ. ಭಾರತವು ಹವಾಮಾನ ಸ್ಥಿತಿಸ್ಥಾಪಕ ಕೃಷಿಯತ್ತ ಮುನ್ನಡೆಯುತ್ತಿರುವಾಗ, ಪಿಎಂಎಫ್‌ಬಿವೈ ರೈತರ ಜೀವನೋಪಾಯವನ್ನು ರಕ್ಷಿಸಲು, ಕೃಷಿಯಲ್ಲಿ ಸ್ಥಿತಿಸ್ಥಾಪಕತ್ವವನ್ನು ಪೋಷಿಸಲು ಮತ್ತು ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತೆಯನ್ನು ಬಲಪಡಿಸಲು ಸೂಕ್ತವಾಗಿ ಸಜ್ಜಾಗಿದೆ.
References
Ministry of Agriculture and Farmers Welfare
https://pmfby.gov.in/pdf/New%20Schemes-english_.pdf
https://agriwelfare.gov.in/en/CropInsurance
https://www.myscheme.gov.in/schemes/pmfby
https://agriwelfare.gov.in/en/CropInsurance
https://www.pib.gov.in/PressReleseDetail.aspx?PRID=2097959®=3&lang=1
https://www.pib.gov.in/PressReleasePage.aspx?PRID=2089250®=3&lang=2
https://www.pib.gov.in/PressReleasePage.aspx?PRID=2148513®=3&lang=2
Microsoft Word - lu431
https://sansad.in/getFile/loksabhaquestions/annex/186/AU1610_Vz2gT8.pdf?source=pqals
https://sansad.in/getFile/loksabhaquestions/annex/184/AU269_UCTI1z.pdf?source=pqals
https://sansad.in/getFile/loksabhaquestions/annex/186/AU2752_K8yh1l.pdf?source=pqalshttps://sansad.in/getFile/loksabhaquestions/annex/186/AU2582_mUayeg.pdf?source=pqals
https://sansad.in/getFile/loksabhaquestions/annex/186/AU2608_FGMVt9.pdf?source=pqals
https://sansad.in/getFile/loksabhaquestions/annex/187/AU496_DO5aVo.pdf?source=pqals
https://sansad.in/getFile/loksabhaquestions/annex/184/AU431_EwtiAQ.pdf?source=pqals
https://sansad.in/getFile/loksabhaquestions/annex/184/AU431_EwtiAQ.pdf?source=pqalsHhttps://www.myscheme.gov.in/schemes/pmfby
https://www.pib.gov.in/PressReleasePage.aspx?PRID=2004173®=48&lang=2
https://agriwelfare.gov.in/en/CropInsurance
https://pmfby.gov.in/pdf/New%20Schemes-english_.pdf
https://sansad.in/getFile/loksabhaquestions/annex/186/AU2582_mUayeg.pdf?source=pqals
https://pmfby.gov.in/adminStatistics/dashboard
https://pmfby.gov.in/aboutUs
https://pmfby.gov.in/pdf/RWBCIS_Revised_Guidelines_1.pdf
Ministry of Finance
https://www.indiabudget.gov.in/doc/eb/allsbe.pdf
Success Story
https://www.youtube.com/watch?v=sXEjHod1ltY
PIB Backgrounders
https://www.pib.gov.in/PressNoteDetails.aspx?id=155010&NoteId=155010&ModuleId=3®=3&lang=2
https://www.pib.gov.in/FactsheetDetails.aspx?ModuleId=16&NoteId=150838&id=150838&lang=2®=48&utm_source
Click here to see PDF
*****
(Explainer ID: 159785)
आगंतुक पटल : 10
Provide suggestions / comments