• Sitemap
  • Advance Search
Farmer's Welfare

ಪ್ರತಿ ಹನಿಗೆ ಹೆಚ್ಚು ಬೆಳೆ ಸಾಕಾರಗೊಳಿಸುವ ಜಲ-ಸಾಮರ್ಥ್ಯದ ಕೃಷಿ

ಜಲ-ಸಾಮರ್ಥ್ಯದ ಮೂಲಕ ಭಾರತೀಯ ಕೃಷಿಯ ಪರಿವರ್ತನೆ

Posted On: 29 AUG 2026 12:34PM

ಪ್ರತಿ ಹನಿಗೆ ಹೆಚ್ಚು ಬೆಳೆ (ಪಿಡಿಎಮ್‌ಸಿ) ಯೋಜನೆಯು ನೀರಿನ ಬಳಕೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಕೃಷಿ ಉತ್ಪಾದಕತೆಯನ್ನು ಉತ್ತಮಗೊಳಿಸಲು ಲಘು ನೀರಾವರಿಯನ್ನು (ಮೈಕ್ರೋ-ಇರಿಗೇಷನ್) ಪ್ರೋತ್ಸಾಹಿಸುತ್ತದೆ. ಜುಲೈ 2026ರ ವೇಳೆಗೆ ಈ ಯೋಜನೆಯು 115 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶವನ್ನು ಲಘು ನೀರಾವರಿ ವ್ಯಾಪ್ತಿಗೆ ತಂದಿದೆ. ನೇರ ನಗದು ವರ್ಗಾವಣೆ (ಡಿಬಿಟಿ) ಮತ್ತು ಡಿಜಿಟಲ್ ಜಾರಿಯ ಮೂಲಕ ನೀಡಲಾಗುವ ಆರ್ಥಿಕ ನೆರವು, ಪಾರದರ್ಶಕತೆಯನ್ನು ಹೆಚ್ಚಿಸಿದೆ ಹಾಗೂ ರೈತರಿಗೆ ಕೈಗೆಟುಕುವ ವೆಚ್ಚದಲ್ಲಿ ಲಘು ನೀರಾವರಿ ಸೌಲಭ್ಯಗಳು ಸಿಗುವಂತೆ ಮಾಡಿದೆ. ಹೆಚ್ಚಿನ ಇಳುವರಿ, ಗಮನಾರ್ಹ ನೀರು ಉಳಿತಾಯ, ಕಡಿಮೆ ಸಾగు ವೆಚ್ಚ ಮತ್ತು ರೈತರ ಆದಾಯ ಹೆಚ್ಚಳವನ್ನು ಸ್ವತಂತ್ರ ಅಧ್ಯಯನಗಳು ವರದಿ ಮಾಡಿವೆ. ನೀರಿನ ಪ್ರತಿಯೊಂದು ಹನಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಪಿಡಿಎಮ್‌ಸಿ ಯೋಜನೆಯು ಸಂಪನ್ಮೂಲ-ಸಮರ್ಥ ಮತ್ತು ಸುಸ್ಥಿರ ಕೃಷಿಯನ್ನು ಬಲಪಡಿಸುತ್ತಿದೆ.

ಪ್ರತಿ ಹನಿಗೆ ಹೆಚ್ಚು ಬೆಳೆ’ (ಪಿಡಿಎಮ್‌ಸಿ) ಯೋಜನೆಯೊಂದಿಗೆ ನೀರಾವರಿ ಕಾರ್ಯಕ್ಷಮತೆಯ ಸುಧಾರಣೆ

ಭಾರತದಲ್ಲಿ ಲಭ್ಯವಿರುವ ಶೇಕಡಾ 80 ಕ್ಕಿಂತ ಹೆಚ್ಚು ಜಲಸಂಪನ್ಮೂಲವನ್ನು ಕೃಷಿ ನೀರಾವರಿಗಾಗಿ ಬಳಸಲಾಗುತ್ತದೆ. ಆದಾಗ್ಯೂ, ನಿವ್ವಳ ಬಿತ್ತನೆ ಪ್ರದೇಶದ ಸುಮಾರು ಶೇಕಡಾ 50 ರಷ್ಟು ಭಾಗ ಮಾತ್ರ ನೀರಾವರಿ ಸೌಲಭ್ಯವನ್ನು ಹೊಂದಿದೆ. ಆದ್ದರಿಂದ, ನೀರಿನ ಬಳಕೆಯ ಕಾರ್ಯಕ್ಷಮತೆಯನ್ನು ಸುಧಾರಿಸುವುದು ರಾಷ್ಟ್ರೀಯ ಆದ್ಯತೆಯಾಗಿದೆ. ಕೃಷಿಯಲ್ಲಿ ನೀರಿನ ಬಳಕೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಲಘು ನೀರಾವರಿಯು ಒಂದು ಪ್ರಮುಖ ಪರಿಹಾರವಾಗಿದೆ. ಏಕೆಂದರೆ ಇದು ಯಾವುದೇ ಪೋಲಿಲ್ಲದೆ ನೇರವಾಗಿ ಬೆಳೆಗಳಿಗೆ ನೀರನ್ನು ಒದಗಿಸುತ್ತದೆ. ಜಮೀನಿನ ಮಟ್ಟದಲ್ಲಿ ಸಮರ್ಥ ನೀರಿನ ಬಳಕೆಯನ್ನು ಉತ್ತೇಜಿಸಲು ಸರ್ಕಾರವು ‘ಪ್ರತಿ ಹನಿಗೆ ಹೆಚ್ಚು ಬೆಳೆ’ (ಪಿಡಿಎಮ್‌ಸಿ) ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ. ಇದು ಹನಿ ನೀರಾವರಿ ಮತ್ತು ಸಿಂಪಡಣೆ ನೀರಾವರಿಯಂತಹ ಲಘು ನೀರಾವರಿ ವ್ಯವಸ್ಥೆಗಳಿಗೆ ಬೆಂಬಲ ನೀಡುತ್ತದೆ.

ಈ ಯೋಜನೆಯಡಿಯಲ್ಲಿ, ಲಘು ನೀರಾವರಿ ವ್ಯವಸ್ಥೆಗಳನ್ನು ಅಳವಡಿಸಲು ಸರ್ಕಾರವು ಪ್ರತಿ ಫಲಾನುಭವಿಗೆ ಗರಿಷ್ಠ ಐದು ಹೆಕ್ಟೇರ್‌ವರೆಗೆ ಆರ್ಥಿಕ ನೆರವು ನೀಡುತ್ತದೆ. ಸಣ್ಣ ಮತ್ತು ಅಂಚಿನ ರೈತರು ಶೇಕಡಾ 55 ರಷ್ಟು ಹಾಗೂ ಇತರೆ ರೈತರು ಶೇಕಡಾ 45 ರಷ್ಟು ಆರ್ಥಿಕ ನೆರವು ಪಡೆಯುತ್ತಾರೆ. ಕಳೆದ ಮೂರು ವರ್ಷಗಳಲ್ಲಿ 8,123.24 ಕೋಟಿ ರೂಪಾಯಿಗಳ ಕೇಂದ್ರ ನೆರವನ್ನು ಬಿಡುಗಡೆ ಮಾಡಲಾಗಿದೆ. ಕೆಲವು ರಾಜ್ಯ ಸರ್ಕಾರಗಳು ತಮ್ಮದೇ ಆದ ಮುಂಗಡಪತ್ರದಿಂದ (ಬಜೆಟ್) ಹೆಚ್ಚುವರಿ ಸಬ್ಸಿಡಿಗಳನ್ನು ಸಹ ನೀಡುತ್ತವೆ. ರೈತರು ಏಳು ವರ್ಷಗಳ ನಂತರ ಅದೇ ಭೂಮಿಗೆ ಮತ್ತೆ ನೆರವು ಪಡೆಯಬಹುದು.

ಈ ಉಪಕ್ರಮವು ಮೂಲತಃ ಜನವರಿ 2006 ರಲ್ಲಿ ಲಘು ನೀರಾವರಿಗಾಗಿ ಕೇಂದ್ರ ಪುರಸ್ಕೃತ ಯೋಜನೆ (ಸಿಎಸ್ಎಸ್) ಆಗಿ ಪ್ರಾರಂಭವಾಯಿತು. ನಂತರ ಇದನ್ನು 2010-11 ರಲ್ಲಿ ಲಘು ನೀರಾವರಿ ರಾಷ್ಟ್ರೀಯ ಮಿಷನ್ (ಎನ್‌ಎಮ್‌ಎಮ್‌ಐ) ಆಗಿ ಮೇಲ್ದರ್ಜೆಗೇರಿಸಲಾಯಿತು. 2014-15ರ ಹಣಕಾಸು ವರ್ಷದಲ್ಲಿ, ಇದು "ಜಮೀನು ಜಲ ನಿರ್ವಹಣೆ" (ಒಎಫ್‌ಡಬ್ಲ್ಯೂಎಮ್) ಘಟಕದಡಿಯಲ್ಲಿ ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ (ಎನ್‌ಎಮ್‌ಎಸ್ಎ) ನ ಭಾಗವಾಯಿತು. 2015-16 ರಿಂದ 2021-22 ರ ಹಣಕಾಸು ವರ್ಷದವರೆಗೆ, ಇದನ್ನು ಅಧಿಕೃತವಾಗಿ ‘ಪ್ರತಿ ಹನಿಗೆ ಹೆಚ್ಚು ಬೆಳೆ’ (ಪಿಡಿಎಮ್‌ಸಿ) ಎಂದು ಹೆಸರಿಸಲಾಯಿತು ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಮ್‌ಕೆಎಸ್ ವೈ) ಯ ಪ್ರಮುಖ ಘಟಕವಾಗಿ ಜಾರಿಗೊಳಿಸಲಾಯಿತು. 2022-23 ರಿಂದ, ಪಿಡಿಎಮ್‌ಸಿ ಯೋಜನೆಯನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಮ್-ಆರ್‌ಕೆವಿವೈ) ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

2007–08 ರಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯು ಕೃಷಿ ಮತ್ತು ಸಂಯೋಜಿತ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಅಕ್ಟೋಬರ್ 2024 ರಲ್ಲಿ ಈ ಯೋಜನೆಯನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಮ್-ಆರ್‌ಕೆವಿವೈ) ಎಂದು ಮರುರಚಿಸಲಾಯಿತು. ಇದು ಒಂಬತ್ತು ಯೋಜನೆಗಳನ್ನು ಸಂಯೋಜಿಸುವ ಒಂದು ಮೇಲ್ಛಾವಣಿ (ಅಂಬ್ರೆಲಾ) ಯೋಜನೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ‘ಪ್ರತಿ ಹನಿಗೆ ಹೆಚ್ಚು ಬೆಳೆ’ (ಪಿಡಿಎಮ್‌ಸಿ), ಕೃಷಿ ಯಾಂತ್ರೀಕರಣ, ಮಣ್ಣಿನ ಆರೋಗ್ಯ ನಿರ್ವಹಣೆ, ಬೆಳೆ ವೈವಿಧ್ಯೀಕರಣ ಮತ್ತು ಕೃಷಿ-ಸ್ಟಾರ್ಟ್‌ಅಪ್‌ಗಳಿಗಾಗಿ ವೇಗವರ್ಧಕ ನಿಧಿಯಂತಹ (ಆಕ್ಸಿಲರೇಟರ್ ಫಂಡ್) ಘಟಕಗಳನ್ನು ಒಳಗೊಂಡಿದೆ. ಈ ಮರುರಚಿಸಲಾದ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ, ರಾಜ್ಯ ಸರ್ಕಾರಗಳು ತಮ್ಮ ನಿರ್ದಿಷ್ಟ, ಸ್ಥಳೀಯ ಕೃಷಿ ಅಗತ್ಯಗಳ ಆಧಾರದ ಮೇಲೆ ಹಣವನ್ನು ಒಂದು ಘಟಕದಿಂದ ಇನ್ನೊಂದಕ್ಕೆ ಮರುಹಂಚಿಕೆ ಮಾಡುವ ನಮ್ಯತೆಯನ್ನು ಹೊಂದಿವೆ. ಇದು ವಾಯುಗುಣ ಸ್ಥಿತಿಸ್ಥಾಪಕತ್ವವನ್ನು (ಕ್ಲೈಮೇಟ್ ರೆಸಿಲಿಯನ್ಸ್) ಎದುರಿಸುವುದು, ಬೆಳೆ ಉತ್ಪಾದಕತೆಯನ್ನು ಉತ್ತಮಗೊಳಿಸುವುದು ಮತ್ತು ಮೌಲ್ಯ ಸರಪಳಿ ಅಭಿವೃದ್ಧಿಯನ್ನು ಮುನ್ನಡೆಸುವಂತಹ ಉದಯೋನ್ಮುಖ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. 2025-26 ರ ಅವಧಿಯಲ್ಲಿ, ಪಿಎಮ್-ಆರ್‌ಕೆವಿವೈ ಯೋಜನೆಗೆ ಒಟ್ಟು ₹8,957.72 ಕೋಟಿ ಬಿಡುಗಡೆ/ಮಂಜೂರು ಮಾಡಲಾಗಿದ್ದು, ಇದರಲ್ಲಿ ₹3,226.36 ಕೋಟಿಯನ್ನು ವಿಶೇಷವಾಗಿ ಪಿಡಿಎಮ್‌ಸಿ ಯೋಜನೆಗೆ ಮೀಸಲಿಡಲಾಗಿದೆ.

ಪಿಡಿಎಮ್‌ಸಿ ಯೋಜನೆಯ ಆಯಕಟ್ಟಿನ ಗಮನಾರ್ಹ ಕ್ಷೇತ್ರಗಳು

ಪಿಡಿಎಮ್‌ಸಿ ಯೋಜನೆಯು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ರೈತರ ಆದಾಯವನ್ನು ಉತ್ತಮಗೊಳಿಸಲು ನಿಖರ ಜಲ ನಿರ್ವಹಣೆಯನ್ನು ಉತ್ತೇಜಿಸುತ್ತದೆ. ಈ ಯೋಜನೆಯು ಪೋಷಕಾಂಶಗಳ ಬಳಕೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ‘ಫರ್ಟಿಗೇಷನ್’ (ಗೊಬ್ಬರ ಮಿಶ್ರಿತ ನೀರಾವರಿ) ಪದ್ಧತಿಯನ್ನು ಉತ್ತೇಜಿಸುತ್ತದೆ ಹಾಗೂ ನೀರಿನ ಅಭಾವವಿರುವ ಮತ್ತು ಅಂತರ್ಜಲ ಕುಸಿತ ಕಂಡಿರುವ ಪ್ರದೇಶಗಳಿಗೆ ಆದ್ಯತೆ ನೀಡುತ್ತದೆ. ಫರ್ಟಿಗೇಷನ್ ಎಂಬುದು ಸಸ್ಯದ ಹೆಚ್ಚಿನ ಬೇರುಗಳು ಬೆಳೆಯುವ ಪ್ರದೇಶಕ್ಕೆ ನೇರವಾಗಿ ನೀರಾವರಿ ನೀರಿನೊಂದಿಗೆ ರಸಗೊಬ್ಬರಗಳನ್ನು ಪೂರೈಸುವ ಪ್ರಕ್ರಿಯೆಯಾಗಿದೆ. ಇದಲ್ಲದೆ, ಪಿಡಿಎಮ್‌ಸಿ ಯೋಜನೆಯು ಲಘು ನೀರಾವರಿಯನ್ನು ಕೊಳವೆ ಬಾವಿಗಳು, ನದಿ-ಎತ್ತುವ ನೀರಾವರಿ ಮತ್ತು ಸೌರಶಕ್ತಿ ಚಾಲಿತ ನೀರಾವರಿ ವ್ಯವಸ್ಥೆಗಳೊಂದಿಗೆ ಸಂಯೋಜಿಸುವುದನ್ನು ಬೆಂಬಲಿಸುತ್ತದೆ. ಜಲಸಂಪನ್ಮೂಲಗಳ ಗರಿಷ್ಠ ಬಳಕೆಯನ್ನು ಸಾಧಿಸಲು ಇದು ಸರ್ಕಾರದ ಇತರ ಕಾರ್ಯಕ್ರಮಗಳೊಂದಿಗೆ ಒಗೂಡುವಿಕೆಯನ್ನು (ಕಾನ್ವರ್ಜೆನ್ಸ್) ಪ್ರೋತ್ಸಾಹಿಸುತ್ತದೆ. ಈ ಯೋಜನೆಯು ಕೃಷಿ ಮತ್ತು ತೋಟಗಾರಿಕೆಯಲ್ಲಿ ಲಘು ನೀರಾವರಿಯ ವೈಜ್ಞಾನಿಕ ಪ್ರಗತಿಯನ್ನು ಸಹ ಉತ್ತೇಜಿಸುತ್ತದೆ.

ಲಘು ನೀರಾವರಿಯ ಪ್ರಯೋಜನಗಳು

ಲಘು ನೀರಾವರಿಯು ನೀರನ್ನು ನೇರವಾಗಿ ಸಸ್ಯದ ಬೇರು ಪ್ರದೇಶಕ್ಕೆ ತಲುಪಿಸುವ ಮೂಲಕ ನೀರಿನ ಸಮರ್ಥ ಬಳಕೆಯನ್ನು ಸಾಧ್ಯವಾಗಿಸುತ್ತದೆ, ಪೋಲಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ನೀರಾವರಿ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ನೀರು ಮತ್ತು ಪೋಷಕಾಂಶಗಳ ನಿಖರ ಪೂರೈಕೆಯ ಮೂಲಕ ಉತ್ತಮ ಬೆಳೆ ಬೆಳವಣಿಗೆ ಮತ್ತು ಹೆಚ್ಚಿನ ಉತ್ಪಾದಕತೆಗೆ ಬೆಂಬಲ ನೀಡುವ ಜತೆಗೆ, ಇದು ನೀರು, ವಿದ್ಯುತ್ ಶಕ್ತಿ, ರಸಗೊಬ್ಬರ ಮತ್ತು ಶ್ರಮದ (ಕೂಲಿ) ಬಳಕೆಯನ್ನು ಕಡಿಮೆ ಮಾಡುತ್ತದೆ. ಈ ತಂತ್ರಜ್ಞಾನವು ತೋಟಗಾರಿಕಾ ಬೆಳೆಗಳ ಬೇಸಾಯವನ್ನು ಪ್ರೋತ್ಸಾಹಿಸುತ್ತದೆ, ಬೆಳೆ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಸಾಗುವಳಿಗೆ ಯೋಗ್ಯವಲ್ಲದ ಭೂಮಿಯನ್ನು ಉತ್ಪಾದಕ ಬಳಕೆಗೆ ತರುತ್ತದೆ. ಹೂಡಿಕೆ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಮತ್ತು ಕೃಷಿ ಆದಾಯವನ್ನು ಹೆಚ್ಚಿಸುವ ಮೂಲಕ, ಲಘು ನೀರಾವರಿಯು ಸುಸ್ಥಿರ ಕೃಷಿಗೆ ಕೊಡುಗೆ ನೀಡುತ್ತದೆ, ರೈತರ ಜೀವನೋಪಾಯವನ್ನು ಬಲಪಡಿಸುತ್ತದೆ ಮತ್ತು ದೀರ್ಘಕಾಲೀನ ಆಹಾರ ಹಾಗೂ ಪೌಷ್ಟಿಕಾಂಶ ಭದ್ರತೆಯನ್ನು ಉತ್ತೇಜಿಸುತ್ತದೆ.

ಪಿಡಿಎಮ್‌ಸಿ ಮೂಲಕ ಭಾರತದಾದ್ಯಂತ ಲಘು ನೀರಾವರಿ ವಿಸ್ತರಣೆಯ ಪ್ರಗತಿ

ಜುಲೈ 2026ರ ಹೊತ್ತಿಗೆ, ಪಿಡಿಎಮ್‌ಸಿ ಯೋಜನೆಯು ತನ್ನ ಪ್ರಾರಂಭದಿಂದ ಇದುವರೆಗೆ 115 ಲಕ್ಷ ಹೆಕ್ಟೇರ್ ಪ್ರದೇಶವನ್ನು ಲಘು ನೀರಾವರಿ ವ್ಯಾಪ್ತಿಗೆ ತಂದಿದೆ. ಇದು ಭಾರತದ ಒಟ್ಟು ನಿವ್ವಳ ಬಿತ್ತನೆ ಪ್ರದೇಶದ ಸುಮಾರು ಶೇಕಡಾ 8.11 ರಷ್ಟಾಗಿದೆ. 2025-26 ರಲ್ಲಿ:

  1. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ರಾಜಸ್ಥಾನಗಳು ಪಿಡಿಎಮ್‌ಸಿ ಅಡಿಯಲ್ಲಿ ಲಘು ನೀರಾವರಿ ವ್ಯಾಪ್ತಿಗೆ ಒಳಪಟ್ಟ ಅತಿ ಹೆಚ್ಚು ಪ್ರದೇಶವನ್ನು ದಾಖಲಿಸಿವೆ.
  2. ಈ ಯೋಜನೆಯಿಂದ 130 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ.
  3. ಫಲಾನುಭವಿಗಳಲ್ಲಿ ಶೇಕಡಾ 20 ರಷ್ಟು ಮಹಿಳೆಯರಾಗಿದ್ದಾರೆ.

ಹರಿವು ನೀರಾವರಿಯಿಂದ ಹನಿ ನೀರಾವರಿಯತ್ತ

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ರೈತರಾದ ಎಲ್.ಎಎಮ್. ಶ್ರೀನಿವಾಸ ರಾವ್ ಅವರು ರಾಜ್ಯದ ಲಘು ನೀರಾವರಿ ಯೋಜನೆ ಮತ್ತು ಪಿಡಿಎಮ್‌ಸಿ ಯೋಜನೆಯಡಿಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡರು. ಅವರು ಸಾಂಪ್ರದಾಯಿಕ ಹರಿವು ನೀರಾವರಿ ಪದ್ಧತಿಯ ಬದಲಿಗೆ ತಮ್ಮ ಎರಡು ಎಕರೆ ನಿಂಬೆ ಹಣ್ಣಿನ ತೋಟದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿದರು. ಹೊಸ ವ್ಯವಸ್ಥೆಯು ಫರ್ಟಿಗೇಷನ್ (ಗೊಬ್ಬರ ಮಿಶ್ರಿತ ನೀರಾವರಿ) ಮೂಲಕ ನೀರು ಮತ್ತು ಪೋಷಕಾಂಶಗಳ ನಿಖರ ಪೂರೈಕೆಯನ್ನು ಖಚಿತಪಡಿಸಿತು. ಪರಿಣಾಮವಾಗಿ, ಇಳುವರಿಯು ಎಕರೆಗೆ 90 ಕ್ವಿಂಟಾಲ್‌ನಿಂದ 105 ಕ್ವಿಂಟಾಲ್‌ಗೆ ಹೆಚ್ಚಾಯಿತು. ಸಾಗು ವೆಚ್ಚವು ₹3.0 ಲಕ್ಷದಿಂದ ₹2.4 ಲಕ್ಷಕ್ಕೆ ಕಡಿಮೆಯಾಯಿತು. ಸ್ಥಿರ ಮಾರುಕಟ್ಟೆ ಬೆಲೆಗಳೊಂದಿಗೆ, ಅವರ ನಿವ್ವಳ ಆದಾಯವು ₹1.5 ಲಕ್ಷದಿಂದ ₹2.85 ಲಕ್ಷಕ್ಕೆ ಏರಿಕೆಯಾಯಿತು. ಅವರು ₹1.35 ಲಕ್ಷ ಹೆಚ್ಚುವರಿ ಆದಾಯವನ್ನು ಗಳಿಸಿದರು, ಇದು ಉತ್ಪಾದಕತೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಲಘು ನೀರಾವರಿಯ ಪ್ರಯೋಜನಗಳನ್ನು ಪ್ರದರ್ಶಿಸುತ್ತದೆ.

ನೀರಿನ ಸಮರ್ಥ ಬಳಕೆಯನ್ನು ಮತ್ತಷ್ಟು ಉತ್ತೇಜಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು, ಸರ್ಕಾರವು ಪಿಡಿಎಮ್‌ಸಿ ಯೋಜನೆಯಡಿಯಲ್ಲಿ ಹೊಸ ನಮ್ಯತೆಗಳನ್ನು (ಸಡಿಲಿಕೆಗಳನ್ನು) ಪರಿಚಯಿಸಿದೆ. ಈ ಉಪಕ್ರಮವು "ಇತರ ಮಧ್ಯಸ್ಥಿಕೆಗಳು" (ಅದರ್ ಇಂಟರ್ವೆನ್ಶನ್ಸ್) ಘಟಕದಡಿಯಲ್ಲಿ ದಿಗ್ಗಿಗಳ (ದೊಡ್ಡ ನೀರು ಸಂಗ್ರಹಣಾ ತೊಟ್ಟಿಗಳು ಅಥವಾ ಕೃಷಿ ಹೊಂಡಗಳು) ನಿರ್ಮಾಣ ಮತ್ತು ನೀರು ಕೊಯ್ಲು ವ್ಯವಸ್ಥೆಗಳಂತಹ ಸುಕ್ಷ್ಮ ಮಟ್ಟದ ನೀರು ಸಂಗ್ರಹಣೆ ಮತ್ತು ಸಂರಕ್ಷಣಾ ಚಟುವಟಿಕೆಗಳನ್ನು ಕೈಗೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕಾರ ನೀಡುತ್ತದೆ. ಸ್ಥಳೀಯ ಅಗತ್ಯಗಳ ಆಧಾರದ ಮೇಲೆ ಈ ವ್ಯವಸ್ಥೆಗಳನ್ನು ವೈಯಕ್ತಿಕ ಮತ್ತು ಸಮುದಾಯ ಬಳಕೆಗಳೆರಡಕ್ಕೂ ಅಭಿವೃದ್ಧಿಪಡಿಸಬಹುದಾಗಿರುವುದರಿಂದ, ಇವು ಲಘು ನೀರಾವರಿಗೆ ವಿಶ್ವಾಸಾರ್ಹ ಹಾಗೂ ಸುಸ್ಥಿರ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತವೆ.

ಅತ್ಯಂತ ಪ್ರಮುಖವಾಗಿ, ಪರಿಷ್ಕೃತ ಮಾರ್ಗಸೂಚಿಗಳು ಈ ಸಂರಕ್ಷಣಾ ಯೋಜನೆಗಳಿಗಾಗಿದ್ದ ಹಿಂದಿನ ನಿಧಿ ಮಿತಿಗಳನ್ನು ರದ್ದುಗೊಳಿಸಿವೆ. ಈ ಮೊದಲು, ಇಂತಹ ಚಟುವಟಿಕೆಗಳಿಗಾಗಿ ಹಣವನ್ನು ಸಾಮಾನ್ಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು ಅನುದಾನದ ಗರಿಷ್ಠ ಶೇಕಡಾ 20 ಕ್ಕೆ ಕಟ್ಟುನಿಟ್ಟಾಗಿ ಸೀಮಿತಗೊಳಿಸಲಾಗಿತ್ತು. ಈ ಮಿತಿಯು ಈಶಾನ್ಯ ರಾಜ್ಯಗಳು, ಹಿಮಾಲಯನ್ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಗೆ ಶೇಕಡಾ 40 ರಷ್ಟಿತ್ತು. ಈಗ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣವಾಗಿ ತಮ್ಮ ನಿರ್ದಿಷ್ಟ ಸ್ಥಳೀಯ ಅಗತ್ಯಗಳ ಆಧಾರದ ಮೇಲೆ ಈ ಮಿತಿಗಳನ್ನು ಮೀರಿ ಅನುದಾನ ಬಳಸಿಕೊಳ್ಳುವ ನಮ್ಯತೆಯನ್ನು ಹೊಂದಿವೆ.

ಪಿಡಿಎಮ್‌ಸಿ ಅಡಿಯಲ್ಲಿರುವ ಲಘು ನೀರಾವರಿ ವ್ಯವಸ್ಥೆಗಳ ಪ್ರಕಾರಗಳು

ಪಿಡಿಎಮ್‌ಸಿ ಅಡಿಯಲ್ಲಿ ಎರಡು ಪ್ರಮುಖ ಲಘು ನೀರಾವರಿ ವ್ಯವಸ್ಥೆಗಳಿವೆ:

ಹನಿ ನೀರಾವರಿ ವ್ಯವಸ್ಥೆ

ಹನಿ ನೀರಾವರಿ ತಂತ್ರಜ್ಞಾನವು ಪಾರ್ಶ್ವ ಕೊಳವೆಗೆ (ಲ್ಯಾಟರಲ್ ಟ್ಯೂಬ್) ಅಳವಡಿಸಲಾದ ಅಥವಾ ಕೊಳವೆಯ ಒಳಗೆ ಜೋಡಿಸಲಾದ ಎಮಿಟರ್‌ಗಳ (ಹನಿ ಬಿಂದುಗಳು) ಮೂಲಕ ಸಸ್ಯದ ಬೇರು ಪ್ರದೇಶಕ್ಕೆ ನೀರುಣಿಸುವುದನ್ನು ಒಳಗೊಂಡಿರುತ್ತದೆ. ಸರಳವಾಗಿ ಹೇಳುವುದಾದರೆ, ಸಣ್ಣ ಕೊಳವೆಗಳು ಅಥವಾ ಟ್ಯೂಬ್‌ಗಳಲ್ಲಿ ಅಳವಡಿಸಲಾದ ಸಣ್ಣ ನಿರ್ಗಮನ ದ್ವಾರಗಳ (ಎಮಿಟರ್‌ಗಳು) ಮೂಲಕ ಬೆಳೆಗಳ ಬೇರುಗಳಿಗೆ ನೇರವಾಗಿ ಮತ್ತು ನಿಧಾನವಾಗಿ ನೀರನ್ನು ಒದಗಿಸುವ ಪದ್ಧತಿಯೇ ಹನಿ ನೀರಾವರಿ. ಇದು ಸಸ್ಯದ ಸುತ್ತಲಿನ ಅಗತ್ಯ ಪ್ರದೇಶಕ್ಕೆ ಮಾತ್ರ ನೀರು ಸಿಗುವಂತೆ ಮಾಡುತ್ತದೆ, ಇದರಿಂದ ಪೋಲಾಗುವುದು ಕಡಿಮೆಯಾಗುತ್ತದೆ ಮತ್ತು ಕಾರ್ಯಕ್ಷಮತೆ ಹೆಚ್ಚಾಗುತ್ತದೆ.

ಹನಿ ನೀರಾವರಿ ವ್ಯವಸ್ಥೆಯಲ್ಲಿ ಎರಡು ವಿಧಗಳಿವೆ:

  • ಆನ್‌ಲೈನ್ ಹನಿ ನೀರಾವರಿ: ಸಸ್ಯ ಇರುವ ಪ್ರತಿಯೊಂದು ಸ್ಥಳದಲ್ಲೂ ಕೊಳವೆಯ ಉದ್ದಕ್ಕೂ ಜೋಡಿಸಲಾದ ಸಣ್ಣ ಡ್ರಿಪ್ಪರ್‌ಗಳ ಮೂಲಕ ಪ್ರತಿಯೊಂದು ಸಸ್ಯಕ್ಕೂ ನೀರನ್ನು ನೀಡಲಾಗುತ್ತದೆ. ಇದು ಅಸಮಾನ ಅಂತರವನ್ನು ಹೊಂದಿರುವ ಬೆಳೆಗಳಿಗೆ ಸೂಕ್ತವಾಗಿದೆ.
  • ಇನ್‌ಲೈನ್ ಹನಿ ನೀರಾವರಿ: ಕೊಳವೆಯೊಳಗೆ ನಿಗದಿತ ಅಂತರದಲ್ಲಿ ನಿರ್ಮಿಸಲಾದ ಡ್ರಿಪ್ಪರ್‌ಗಳಿಂದ ನೀರು ಹೊರಬರುತ್ತದೆ. ಈ ವ್ಯವಸ್ಥೆಯಲ್ಲಿ, ಎಲ್ಲಾ ಸಸ್ಯಗಳು ಸಮಾನವಾಗಿ ನೀರನ್ನು ಪಡೆಯುತ್ತವೆ.

ಸಿಂಪಡಣೆ ನೀರಾವರಿ ವ್ಯವಸ್ಥೆ

ಸಿಂಪಡಣೆ ನಿರಾವರಿಯಲ್ಲಿ (ಸ್ಪ್ರಿಂಕ್ಲರ್), ಕೊಳವೆಗಳ ಜಾಲಕ್ಕೆ ಸಂಪರ್ಕಗೊಂಡಿರುವ ನೋಝಲ್‌ಗಳ ಮೂಲಕ ಒತ್ತಡದ ಅಡಿಯಲ್ಲಿ ನೀರನ್ನು ಗಾಳಿಯಲ್ಲಿ ಸಿಂಪಡಿಸಲಾಗುತ್ತದೆ. ಈ ವ್ಯವಸ್ಥೆಯು ಮಳೆಯ ಅನುಭವವನ್ನು ಸೃಷ್ಟಿಸುತ್ತದೆ ಮತ್ತು ಬೆಳೆಗಳಿಗೆ ಸಮಾನವಾಗಿ ನೀರನ್ನು ಒದಗಿಸುತ್ತದೆ. ಸಸ್ಯಗಳ ಸಾಂದ್ರತೆಯು ಅತ್ಯಂತ ಹೆಚ್ಚಾಗಿರುವ ಬೆಳೆಗಳಿಗೆ ನೀರುಣಿಸಲು ಸಿಂಪಡಣೆ ನೀರಾವರಿ ವ್ಯವಸ್ಥೆಯು ಸೂಕ್ತವಾಗಿದೆ. ಧಾನ್ಯಗಳು, ಬೇಳೆಕಾಳುಗಳು, ಬೀಜಗಳು, ಸಾಂಬಾರ ಪದಾರ್ಥಗಳು ಮತ್ತು ಹೊಲದ ಬೆಳೆಗಳಿಗೆ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಸಿಂಪಡಣೆ ನೀರಾವರಿ ವ್ಯವಸ್ಥೆಯನ್ನು ಇನ್ನು ಮುಂದೆ ಈ ಕೆಳಗಿನ ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ:

  • ಪೋರ್ಟಬಲ್ (ಸಾಗಿಸಬಹುದಾದ) ಸಿಂಪಡಕಗಳು: ಈ ವ್ಯವಸ್ಥೆಯಲ್ಲಿ, ಅಗತ್ಯಕ್ಕೆ ಅನುಗುಣವಾಗಿ ಮುಖ್ಯ ಮತ್ತು ಉಪ-ಮುಖ್ಯ ಕೊಳವೆಗಳನ್ನು ಜಮೀನಿನ ವಿವಿಧ ಭಾಗಗಳಿಗೆ ಸ್ಥಳಾಂತರಿಸಬಹುದು. ಇದು ಬೆಳೆಯ ನೀರಿನ ಅಗತ್ಯಕ್ಕೆ ತಕ್ಕಂತೆ ನೀರಾವರಿ ಮಾಡಲು ಅವಕಾಶ ನೀಡುತ್ತದೆ. ಇವುಗಳನ್ನು ಸಮತಟ್ಟಾದ ಭೂಮಿ ಹಾಗೂ ಏರಿಳಿತದ (ವಿಷಮ) ಭೂಪ್ರದೇಶಗಳೆರಡರಲ್ಲೂ ಬಳಸಬಹುದು.
  • ಮೈಕ್ರೋ ಸಿಂಪಡಕಗಳು: ಮೈಕ್ರೋ ಸಿಂಪಡಕಗಳು ಕಡಿಮೆ ವ್ಯಾಪ್ತಿಯ (ರೇಡಿಯಸ್) ಸಿಂಪಡಕಗಳಾಗಿವೆ. ಇವುಗಳನ್ನು ಹೆಚ್ಚಾಗಿ ಎಲೆಗಳ ತರಕಾರಿಗಳು, ನರ್ಸರಿಗಳು ಮತ್ತು ಸಸಿಗಳನ್ನು ಗಟ್ಟಿಮಾಡಲು (ಹಾರ್ಡನಿಂಗ್) ನೀರುಣಿಸಲು ಬಳಸಲಾಗುತ್ತದೆ. ನೀರಾವರಿ ಒದಗಿಸುವುದರ ಜೊತೆಗೆ, ಮೈಕ್ರೋ ಸಿಂಪಡಕವು ಸಸ್ಯದ ಸುತ್ತಲಿನ ಸೂಕ್ಷ್ಮ ವಾತಾವರಣದ (ಮೈಕ್ರೋ ಕ್ಲೈಮೇಟ್) ಸ್ಥಿತಿಗತಿಗಳನ್ನು ಬದಲಾಯಿಸಲು ಸಹಾಯ ಮಾಡುತ್ತದೆ.
  • ಮಿನಿ ಸಿಂಪಡಕಗಳು: ಇವುಗಳನ್ನು ಸಾಂದ್ರವಾಗಿ ಬೆಳೆಯುವ ಬೆಳೆಗಳಾದ ಶೇಂಗಾ (ಕಡಲೆಕಾಯಿ), ಆಲೂಗಡ್ಡೆ, ಈರುಳ್ಳಿ, ಶುಂಠಿ, ಕಡಿಮೆ ಎತ್ತರದ ಮೇವಿನ ಬೆಳೆಗಳು ಇತ್ಯಾದಿಗಳಿಗೆ ಸಾಮಾನ್ಯವಾಗಿ ಬಳಸಲಾಗುತ್ತದೆ. ಮಿನಿ ಸಿಂಪಡಕಗಳು ಹಿಮದಿಂದ (ಫ್ರಾಸ್ಟ್) ರಕ್ಷಣೆ ನೀಡಲು ಸಹ ಸೂಕ್ತವಾಗಿವೆ. ಇವುಗಳ ವ್ಯಾಪ್ತಿಯು ಮೈಕ್ರೋ ಸಿಂಪಡಕಗಳಿಗಿಂತ ಹೆಚ್ಚಿರುತ್ತದೆ.
  • ಅರೆ-ಶಾಶ್ವತ (ಸೆಮಿ-ಪರ್ಮನೆಂಟ್) ಸಿಂಪಡಕಗಳು: ಈ ವ್ಯವಸ್ಥೆಯಲ್ಲಿ, ಮುಖ್ಯ ಮತ್ತು ಪಾರ್ಶ್ವ (ಲ್ಯಾಟರಲ್) ಕೊಳವೆಗಳನ್ನು ಭೂಮಿಯ ಅಡಿಯಲ್ಲಿ ಶಾಶ್ವತವಾಗಿ ಅಳವಡಿಸಲಾಗಿರುತ್ತದೆ. ರೈಸರ್ ಕೊಳವೆಗಳಿಗೆ ಸಂಪರ್ಕಗೊಂಡಿರುವ ಸಿಂಪಡಕ ನೋಝಲ್‌ಗಳನ್ನು ವಿವಿಧ ಸ್ಥಳಗಳಿಗೆ ಸಾಗಿಸಬಹುದು. ಇದು ಬೆಳೆಯ ನೀರಿನ ಅಗತ್ಯಕ್ಕೆ ಅನುಗುಣವಾಗಿ ಜಮೀನಿನ ವಿವಿಧ ಭಾಗಗಳಿಗೆ ನೀರಾವರಿ ಮಾಡಲು ಅನುಕೂಲ ಮಾಡಿಕೊಡುತ್ತದೆ.
  • ಹೆಚ್ಚಿನ ಪ್ರಮಾಣದ ಸಿಂಪಡಕಗಳು (ರೆನ್-ಗನ್): ಒಂದೆರಡು ಸಿಂಪಡಕಗಳ ಮೂಲಕ ವಿಶಾಲವಾದ ಪ್ರದೇಶವನ್ನು ಆವರಿಸಬೇಕಾದ ಸ್ಥಳಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ಈ ಸಿಂಪಡಕಗಳು ಗಂಟೆಗೆ 10,000 ಲೀಟರ್‌ನಿಂದ 32,000 ಲೀಟರ್‌ವರೆಗಿನ ನೀರನ್ನು ಹೊರಚೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದು, 24 ಮೀಟರ್‌ನಿಂದ 36 ಮೀಟರ್‌ವರೆಗೆ ನೀರನ್ನು ಚಿಮ್ಮಿಸುವ ವ್ಯಾಪ್ತಿಯನ್ನು ಹೊಂದಿರುತ್ತವೆ. ಇವುಗಳನ್ನು ನಿರ್ವಹಿಸಲು ಅಧಿಕ ಒತ್ತಡ ಮತ್ತು ಹೆಚ್ಚಿನ ನೀರು ಪೂರೈಸುವ ಕೊಳವೆಗಳು ಹಾಗೂ ಪಂಪ್‌ಗಳ ಅಗತ್ಯವಿರುತ್ತದೆ. ಕಡಿಮೆ ಸಮಯದಲ್ಲಿ ವಿಶಾಲ ಪ್ರದೇಶದಲ್ಲಿ ಹರಡಿರುವ ಬೆಳೆಗಳಿಗೆ ನೀರುಣಿಸಲು ಇವುಗಳಿಗೆ ಆದ್ಯತೆ ನೀಡಲಾಗುತ್ತದೆ.

ಅನುಷ್ಠಾನದ ಚೌಕಟ್ಟು (ಇಂಪ್ಲಿಮೆಂಟೇಶನ್ ಫ್ರೇಮ್‌ವರ್ಕ್)

ಪಿಡಿಎಮ್‌ಸಿ ಯೋಜನೆಯನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಮ್-ಆರ್‌ಕೆವಿವೈ) ಅಡಿಯಲ್ಲಿ ಜಾರಿಗೊಳಿಸುತ್ತಿರುವುದರಿಂದ, ಇದು ಈ ಯೋಜನೆಯ ಸಮಗ್ರ ಸಾಂಸ್ಥಿಕ ಸಂರಚನೆಯನ್ನು (ಇನ್‌ಸ್ಟಿಟ್ಯೂಷನಲ್ ಆರ್ಕಿಟೆಕ್ಚರ್) ಅಳವಡಿಸಿಕೊಂಡಿದೆ. ರಾಷ್ಟ್ರೀಯ ಮಟ್ಟದಲ್ಲಿ, ‘ರಾಷ್ಟ್ರೀಯ ಸ್ಟೀವರ್ಡ್‌ಶಿಪ್ ಕೌನ್ಸಿಲ್’ (ಎನ್‌ಎಸ್‌ಸಿ) ಮಾರ್ಗದರ್ಶನ ಮತ್ತು ಯೋಜನೆಗಾಗಿ ಆಯಕಟ್ಟಿನ ದಿಕ್ಸೂಚಿಯನ್ನು ಒದಗಿಸುತ್ತದೆ.

ರಾಜ್ಯ ಮಟ್ಟದಲ್ಲಿ, ಈ ಚೌಕಟ್ಟು ಮೂರು ಹಂತಗಳ ಸಂರಚನೆಯ ಮೂಲಕ ಕಾರ್ಯನಿರ್ವಹಿಸುತ್ತದೆ. ಉನ್ನತ ಹಂತದಲ್ಲಿ, ‘ರಾಜ್ಯ ಮಟ್ಟದ ಮಂಜೂರಾತಿ ಸಮಿತಿ’ಯು (ಎಸ್‌ಎಲ್‌ಎಸ್‌ಸಿ) ಯೋಜನೆಗಳಿಗೆ ಅನುಮೋದನೆ ನೀಡುತ್ತದೆ. ‘ಇಲಾಖಾಂತರ ಕಾರ್ಯಾಚರಣೆ ಗುಂಪು’ (ಐಡಿಡಬ್ಲ್ಯೂಜಿ) ವಿವಿಧ ಇಲಾಖೆಗಳ ನಡುವೆ ಯೋಜನೆ ಮತ್ತು ಅನುಷ್ಠಾನವನ್ನು ಸಂಯೋಜಿಸುತ್ತದೆ.

ಜಿಲ್ಲಾ ಮಟ್ಟದಲ್ಲಿ, ‘ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ’ಯು (ಡಿಎಲ್‌ಐಸಿ) ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತದೆ ಮತ್ತು ಇಲಾಖಾಂತರ ಸಂಯೋಜನೆಯನ್ನು ಖಚಿತಪಡಿಸುತ್ತದೆ.

ಪರಿಣಾಮ ಮೌಲ್ಯಮಾಪನ ಅಧ್ಯಯನಗಳು

ಸ್ವತಂತ್ರ ಅಧ್ಯಯನಗಳು ಪಿಡಿಎಮ್‌ಸಿ ಯೋಜನೆಯ ಸಕಾರಾತ್ಮಕ ಪರಿಣಾಮವನ್ನು ಎತ್ತಿಹಿಡಿದಿವೆ. 2020-21 ರಲ್ಲಿ ನಿತಿ ಆಯೋಗ ನಡೆಸಿದ ಮೌಲ್ಯಮಾಪನವು ಈ ಯೋಜನೆಯು ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿದೆ ಎಂದು ಕಂಡುಕೊಂಡಿದೆ. ಇವುಗಳಲ್ಲಿ ನೀರಿನ ಬಳಕೆಯ ಕಾರ್ಯಕ್ಷಮತೆಯನ್ನು ಸುಧಾರಿಸುವುದು, ಬೆಳೆ ಉತ್ಪಾದಕತೆಯನ್ನು ಹೆಚ್ಚಿಸುವುದು, ಉದ್ಯೋಗ ಸೃಷ್ಟಿ ಮತ್ತು ರೈತರ ಆದಾಯವನ್ನು ಉತ್ತಮಗೊಳಿಸುವುದು ಸೇರಿವೆ. ಈ ಅಧ್ಯಯನವು ಶೇಕಡಾ 10 ರಿಂದ 69 ರಷ್ಟು ಆದಾಯದ ಗಳಿಕೆಯನ್ನು ವರದಿ ಮಾಡಿದೆ. ನೀರಿನ ಬಳಕೆಯ ಕಾರ್ಯಕ್ಷಮತೆಯು ಶೇಕಡಾ 30 ರಿಂದ 70 ರಷ್ಟು ಸುಧಾರಿಸಿದೆ. ಈ ಯೋಜನೆಯು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸಿದೆ.

ಮತ್ತಷ್ಟು ಹೇಳುವುದಾದರೆ, 2020-21 ರ ಆರ್ಥಿಕ ಸಮೀಕ್ಷೆಯು ಲಘು ನೀರಾವರಿಯಿಂದ ಸಿಗುವ ಬೃಹತ್ ಸಂಪನ್ಮೂಲ ಪ್ರಯೋಜನಗಳನ್ನು ಅಂಕಿ-ಅಂಶಗಳೊಂದಿಗೆ ಪ್ರಮಾಣೀಕರಿಸಿದೆ. ಈ ಸಮೀಕ್ಷೆಯು ಶೇಕಡಾ 20 ರಿಂದ 48 ರಷ್ಟು ನೀರು ಉಳಿತಾಯ, ಶೇಕಡಾ 10 ರಿಂದ 17 ರಷ್ಟು ವಿದ್ಯುತ್ ಶಕ್ತಿ ಉಳಿತಾಯ, ಶೇಕಡಾ 30 ರಿಂದ 40 ರಷ್ಟು ಕೂಲಿ ವೆಚ್ಚದ ಕಡಿತ ಮತ್ತು ಶೇಕಡಾ 11 ರಿಂದ 19 ರಷ್ಟು ರಸಗೊಬ್ಬರ ಉಳಿತಾಯವನ್ನು ವರದಿ ಮಾಡಿದೆ. ಬೆಳೆ ಇಳುವರಿಯಲ್ಲಿ ಶೇಕಡಾ 20 ರಿಂದ 38 ರಷ್ಟು ಹೆಚ್ಚಳವಾಗಿರುವುದು ಸಹ ವರದಿಯಾಗಿದೆ. ಆರು ರಾಜ್ಯಗಳಲ್ಲಿ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್' (ಐಐಎಮ್‌ಎ) 2023 ರಲ್ಲಿ ನಡೆಸಿದ ಪ್ರತ್ಯೇಕ ಅಧ್ಯಯನವು ಈ ಯೋಜನೆಯ ಅನುಷ್ಠಾನವನ್ನು ಮೌಲ್ಯಮಾಪನ ಮಾಡಿದೆ. ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಎದುರಿಸಲು, ತಮ್ಮ ನಿರ್ದಿಷ್ಟ ಬೆಳೆ ಅಗತ್ಯಗಳನ್ನು ಪೂರೈಸಲು ಮತ್ತು ದೀರ್ಘಕಾಲೀನ ಕೃಷಿ ಪ್ರಯೋಜನಗಳನ್ನು ಪಡೆಯಲು ರೈತರು ಮುಖ್ಯವಾಗಿ ಲಘು ನೀರಾವರಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಈ ಅಧ್ಯಯನವು ಖಚಿತಪಡಿಸಿದೆ.

ಕೃಷಿಗಾಗಿ ಜಲ-ಸಮರ್ಥ ಭವಿಷ್ಯದ ನಿರ್ಮಾಣ

‘ಪ್ರತಿ ಹನಿಗೆ ಹೆಚ್ಚು ಬೆಳೆ’ (ಪಿಡಿಎಮ್‌ಸಿ) ಯೋಜನೆಯು ಲಘು ನೀರಾವರಿ ತಂತ್ರಜ್ಞಾನಗಳ ಮೂಲಕ ಸಮರ್ಥ ನೀರಿನ ಬಳಕೆಯನ್ನು ಉತ್ತೇಜಿಸುವ ಮೂಲಕ ಭಾರತದ ನೀರಾವರಿ ವಿಧಾನವನ್ನೇ ಪರಿವರ್ತಿಸಿದೆ. ಈ ಯೋಜನೆಯು ನೀರಿನ ಬಳಕೆಯ ಕಾರ್ಯಕ್ಷಮತೆ, ಬೆಳೆ ಉತ್ಪಾದಕತೆ ಮತ್ತು ರೈತರ ಆದಾಯವನ್ನು ಸುಧಾರಿಸುವುದರ ಜೊತೆಗೆ ಆಧುನಿಕ ನೀರಾವರಿಯ ಲಭ್ಯತೆಯನ್ನು ವಿಸ್ತರಿಸಿದೆ.

ಬಲವಾದ ಸಾಂಸ್ಥಿಕ ವ್ಯವಸ್ಥೆಗಳು, ಡಿಜಿಟಲ್ ಜಾರಿ ಮತ್ತು ಸರ್ಕಾರದ ಇತರ ಕಾರ್ಯಕ್ರಮಗಳೊಂದಿಗಿನ ಒಗೂಡುವಿಕೆಯಿಂದ ಬೆಂಬಲಿತವಾದ ಪಿಡಿಎಮ್‌ಸಿ, ದೇಶಾದ್ಯಂತ ಸುಸ್ಥಿರ ನೀರಾವರಿ ಪದ್ಧತಿಗಳನ್ನು ಬಲಪಡಿಸಿದೆ. ಭಾರತವು ತನ್ನ ಜಲಸಂಪನ್ಮೂಲಗಳ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಸಂಪನ್ಮೂಲ-ಸಮರ್ಥ ಹಾಗೂ ಸುಸ್ಥಿರ ಕೃಷಿಯನ್ನು ಮುನ್ನಡೆಸುವಲ್ಲಿ ಪಿಡಿಎಮ್‌ಸಿ ಪ್ರಮುಖ ಪಾತ್ರ ವಹಿಸುತ್ತಿದೆ.

 

References

Ministry of Agriculture & Farmers Welfare

https://pdmc.da.gov.in/

https://www.pmksy.gov.in/microirrigation/Archive/August2015.pdf

https://horticulturedept.ap.gov.in/Horticulture/NewSuccessStories.aspx

https://rkvy.da.gov.in/static/download/pdf/PM_RKVY_Guidelines_2024.pdf

https://www.pib.gov.in/PressReleasePage.aspx?PRID=2179856&reg=3&lang=2

https://www.pib.gov.in/PressReleasePage.aspx?PRID=2061649&reg=48&lang=2

https://sansad.in/getFile/loksabhaquestions/annex/186/AS23_qnphui.pdf?source=pqals

https://sansad.in/getFile/loksabhaquestions/annex/185/AU448_bMl0qu.pdf?source=pqals

https://sansad.in/getFile/loksabhaquestions/annex/182/AU2428_kPCRmr.pdf?source=pqals

https://www.pib.gov.in/PressNoteDetails.aspx?NoteId=159085&ModuleId=3&reg=17&lang=6

https://sansad.in/getFile/lsapps/loksabhaquestions/annex/187/AU3949_3xRqy3.pdf?source=lsapps

https://sansad.in/getFile/lsapps/loksabhaquestions/annex/184/AU2767_zvN42a.pdf?source=lsapps

https://www.iima.ac.in/sites/default/files/2024-09/3.%20Micro%20Irrigation_Final%20Report_2023_final_compressed_compressed_compressed_compressed.pdf

https://sansad.in/getFile/loksabhaquestions/annex/13/AU2359.pdf?source=pqals

Food and Agriculture Organisation

https://www.fao.org/4/a1336e/a1336e16.pdf

Government of Punjab

https://tupkasinchayee.punjab.gov.in/home/mischeme

Click here to see pdf

(Explainer ID: 159782) आगंतुक पटल : 11
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Telugu