Technology
ಭಾರತದಲ್ಲಿ ಪರಮಾಣು ಶಕ್ತಿ
ಅನ್ವಯಗಳು, ಸುರಕ್ಷತೆ ಮತ್ತು ಸನ್ನದ್ಧತೆ
Posted On:
28 AUG 2026 10:10AM
|
ಭಾರತದ ಪರಮಾಣು ಶಕ್ತಿ ಕಾರ್ಯಕ್ರಮವನ್ನು 'ಸುರಕ್ಷತೆಗೆ ಮೊದಲ ಆದ್ಯತೆ' ಎನ್ನುವ ತತ್ವದ ಮೇಲೆ ನಿರ್ಮಿಸಲಾಗಿದೆ. ಕಟ್ಟುನಿಟ್ಟಾದ ನಿಯಂತ್ರಣದ ಉಸ್ತುವಾರಿ, ರಕ್ಷಣೆಯ ಅನೇಕ ಸ್ತರಗಳು ಮತ್ತು ಸಮಗ್ರ ತುರ್ತು ಸನ್ನದ್ಧತೆಯ ಮಾರ್ಗದರ್ಶನದೊಂದಿಗೆ, ಇದು ಜನರನ್ನು ಹಾಗೂ ಪರಿಸರವನ್ನು ರಕ್ಷಿಸುವುದರ ಜತೆಗೆ ವಿಶ್ವಾಸಾರ್ಹ, ಕಡಿಮೆ-ಕಾರ್ಬನ್ ವಿದ್ಯುತ್ ಅನ್ನು ಒದಗಿಸುತ್ತದೆ. ವಿದ್ಯುತ್ ಉತ್ಪಾದನೆಯನ್ನು ಹೊರತುಪಡಿಸಿ, ಪರಮಾಣು ಶಕ್ತಿಯು ಆರೋಗ್ಯ ರಕ್ಷಣೆ, ಕೃಷಿ, ಆಹಾರ ಸಂರಕ್ಷಣೆ, ಉದ್ಯಮ, ವೈಜ್ಞಾನಿಕ ಸಂಶೋಧನೆ ಮತ್ತು ಸ್ವಚ್ಛ ಹೈಡ್ರೋಜನ್ ಉತ್ಪಾದನೆಗೆ ಬೆಂಬಲ ನೀಡುತ್ತದೆ. ಶಾಂತಿ ಕಾಯ್ದೆ 2025, ವಿಕಸಿತ ಭಾರತಕ್ಕಾಗಿ ಪರಮಾಣು ಶಕ್ತಿ ಮಿಷನ್ ಮತ್ತು ಸ್ವದೇಶಿ ತಂತ್ರಜ್ಞಾನಗಳ ಮೂಲಕ, ಭಾರತವು ಪರಮಾಣು ಶಕ್ತಿಯನ್ನು ರಾಷ್ಟ್ರೀಯ ಅಭಿವೃದ್ಧಿಯ ಸುರಕ್ಷಿತ, ಸುಸ್ಥಿರ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಶಕ್ತಿಶಾಲಿ ಸ್ತಂಭವಾಗಿ ವಿಸ್ತರಿಸುತ್ತಿದೆ.
|
ಭಾರತದ ಸಮಗ್ರ ಅಭಿವೃದ್ಧಿಗಾಗಿ ಪರಮಾಣು ಶಕ್ತಿ

ತಾರಾಪುರ ಅಣು ವಿದ್ಯುತ್ ಸ್ಥಾವರವು 1969ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಂದಿನಿಂದ ಪರಮಾಣು ಶಕ್ತಿಯು ಭಾರತದ ಅಭಿವೃದ್ಧಿಯ ಪಯಣದ ಅವಿಭಾಜ್ಯ ಅಂಗವಾಗಿದೆ. ಇಂದು, ಇದು ವಿಶ್ವಾಸಾರ್ಹ, ಕಡಿಮೆ-ಕಾರ್ಬನ್ ವಿದ್ಯುತ್‌ನೊಂದಿಗೆ ಮನೆಗಳು, ಕೈಗಾರಿಕೆಗಳು ಮತ್ತು ಆರ್ಥಿಕ ಪ್ರಗತಿಗೆ ಶಕ್ತಿ ತುಂಬುತ್ತಿದೆ. ವಿದ್ಯುತ್ ಉತ್ಪಾದನೆಯನ್ನು ಹೊರತುಪಡಿಸಿ, ಪರಮಾಣು ತಂತ್ರಜ್ಞಾನಗಳು ಆರೋಗ್ಯ ರಕ್ಷಣೆ, ಕೃಷಿ, ಆಹಾರ ಸಂರಕ್ಷಣೆ, ಉದ್ಯಮ, ನೀರು ಸಂಸ್ಕರಣೆ (ಉಪ್ಪು ನೀರನ್ನು ಸಿಹಿ ನೀರಾಗಿಸುವುದು) ಮತ್ತು ವೈಜ್ಞಾನಿಕ ಸಂಶೋಧನೆಗೆ ಬೆಂಬಲ ನೀಡುತ್ತವೆ. ಸುರಕ್ಷತೆಯು ಭಾರತದ ಪರಮಾಣು ಕಾರ್ಯಕ್ರಮದ ಮುಖ್ಯ ಅಡಿಪಾಯವಾಗಿದೆ. ಪ್ರತಿಯೊಂದು ಪರಮಾಣು ಸೌಲಭ್ಯವೂ ಕಟ್ಟುನಿಟ್ಟಾದ ನಿಯಂತ್ರಣ ಚೌಕಟ್ಟು, ರಕ್ಷಣೆಯ ಅನೇಕ ಸ್ತರಗಳು, ನಿರಂತರ ಮೇಲ್ವಿಚಾರಣೆ, ತುರ್ತು ಸನ್ನದ್ಧತೆ ಮತ್ತು ದೃಢವಾದ ಭದ್ರತಾ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಭಾರತವು ಪರಮಾಣು ಸುರಕ್ಷತೆ, ಭದ್ರತೆ ಮತ್ತು ಸುರಕ್ಷೋಪಾಯಗಳನ್ನು ಬಲಪಡಿಸಲು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯೊಂದಿಗೆ ನಿಕಟವಾಗಿ ನಿಕಟವಾಗಿ ಕೆಲಸ ಮಾಡುತ್ತದೆ. ಭಾರತವು ಪ್ರಸ್ತುತ ಏಳು ಸ್ಥಳಗಳಲ್ಲಿ ೨೪ ಪರಮಾಣು ವಿದ್ಯುತ್ ರಿಯಾಕ್ಟರ್‌ಗಳನ್ನು ಒಟ್ಟು 8.78 ಗಿಗಾವ್ಯಾಟ್ (GW) ಸ್ಥಾಪಿತ ಸಾಮರ್ಥ್ಯದೊಂದಿಗೆ ನಿರ್ವಹಿಸುತ್ತಿದೆ. ಹೆಚ್ಚುವರಿಯಾಗಿ ಒಂಬತ್ತು ರಿಯಾಕ್ಟರ್‌ಗಳು ನಿರ್ಮಾಣ ಹಂತದಲ್ಲಿದ್ದರೆ, ಇನ್ನು 10 ಯುನಿಟ್‌ಗಳಿಗೆ ಸಿದ್ಧತೆಗಳು ಮುಂದುವರಿದಿವೆ. 'ವಿಕಸಿತ ಭಾರತಕ್ಕಾಗಿ ಪರಮಾಣು ಶಕ್ತಿ ಮಿಷನ್' 2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಕೇಂದ್ರ ಬಜೆಟ್ 2025-26 ರಲ್ಲಿ ಸ್ವದೇಶಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳಿಗಾಗಿ (SMRs) ₹20,000 ಕೋಟಿಯನ್ನು ಹಂಚಿಕೆ ಮಾಡಲಾಗಿದೆ. ಶಾಂತಿ ಕಾಯ್ದೆ 2025, ಭಾರತದ ಪರಮಾಣು ಶಕ್ತಿ ಕಾರ್ಯಕ್ರಮದ ಸುರಕ್ಷಿತ, ಸುಭದ್ರ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ವಿಸ್ತರಣೆಯ ಚೌಕಟ್ಟನ್ನು ಇನ್ನಷ್ಟು ಬಲಪಡಿಸುತ್ತದೆ.
|
ಅಣು ವಿದ್ಯುತ್: ಕಾರ್ಬನ್-ರಹಿತ ವಿದ್ಯುತ್ ಮೂಲ
ಸ್ಥಾಪಿತ ಸಾಮರ್ಥ್ಯದ ಪ್ರತಿ ಯೂನಿಟ್‌ಗೆ ಲೆಕ್ಕಹಾಕಿದಾಗ, ಭಾರತದ ಅತ್ಯಂತ ಕಾರ್ಬನ್-ರಹಿತ ಸ್ವಚ್ಛ ಇಂಧನ ಮೂಲವೆಂದರೆ ಅದು ಪರಮಾಣು ಶಕ್ತಿ. ಹಣಕಾಸು ವರ್ಷ 2025-26 ರಲ್ಲಿ, ಒಂದು ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯವು ಸುಮಾರು 5.4 ಮಿಲಿಯನ್ ಟನ್ CO₂ ಸಮಾನ ಹೊರಸೂಸುವಿಕೆಯನ್ನು ತಡೆಗಟ್ಟಿದೆ. ಇದಕ್ಕೆ ಹೋಲಿಸಿದರೆ ಜಲವಿದ್ಯುತ್ ೨.೭ ಮಿಲಿಯನ್ ಟನ್, ಪವನ ವಿದ್ಯುತ್ 1.6 ಮಿಲಿಯನ್ ಟನ್ ಮತ್ತು ಸೌರ ವಿದ್ಯುತ್ 0.8 ಮಿಲಿಯನ್ ಟನ್ ಹೊರಸೂಸುವಿಕೆಯನ್ನು ತಡೆಗಟ್ಟಿವೆ. 1969 ರಿಂದ, ಭಾರತದ ಪರಮಾಣು ವಿದ್ಯುತ್ ಕಾರ್ಯಕ್ರಮವು ಒಟ್ಟು 851 ಮಿಲಿಯನ್ ಟನ್ CO₂ ಸಮಾನ ಹೊರಸೂಸುವಿಕೆಯನ್ನು ತಡೆಗಟ್ಟಿದೆ - ಇದು 38 ಶತಕೋಟಿಗೂ ಹೆಚ್ಚು ಬೆಳೆದ ಮರಗಳು ವಾರ್ಷಿಕವಾಗಿ ಹೀರಿಕೊಳ್ಳುವ ಕಾರ್ಬನ್ ಪ್ರಮಾಣಕ್ಕೆ ಸಮಾನವಾಗಿದೆ.
|
ವಿದ್ಯುತ್ ಹೊರತಾದ ಪರಮಾಣು ಶಕ್ತಿಯ ಅನ್ವಯಗಳು
ಪರಮಾಣು ಶಕ್ತಿ ತಂತ್ರಜ್ಞಾನಗಳು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾದ ಅನ್ವಯಗಳನ್ನು ಹೊಂದಿವೆ. ಈ ಅನ್ವಯಗಳು ಸಾರ್ವಜನಿಕ ಕಲ್ಯಾಣ, ತಾಂತ್ರಿಕ ಪ್ರಗತಿ ಮತ್ತು ಸುಸ್ಥಿರ ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ.
ಆರೋಗ್ಯ ರಕ್ಷಣೆ
ಪರಮಾಣು ತಂತ್ರಜ್ಞಾನವು ರೋಗಗಳ ಶೀಘ್ರ ಪತ್ತೆ, ಕರಾರುವಾಕ್ ಕ್ಯಾನ್ಸರ್ ಚಿಕಿತ್ಸೆ ಮತ್ತು ಸುಧಾರಿತ ವೈದ್ಯಕೀಯ ಸಂಶೋಧನೆಯ ಮೂಲಕ ಆರೋಗ್ಯ ಕ್ಷೇತ್ರವನ್ನು ಬದಲಾಯಿಸುತ್ತಿದೆ. ಭಾಭಾ ಪರಮಾಣು ಸಂಶೋಧನಾ ಕೇಂದ್ರ (ಬಿಎಆರ್‌ಸಿ), ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರ, ಟಾಟಾ ಮೆಮೋರಿಯಲ್ ಸೆಂಟರ್, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮತ್ತು ಹರೀಶ್-ಚಂದ್ರ ಸಂಶೋಧನಾ ಸಂಸ್ಥೆ ಸೇರಿದಂತೆ ಪರಮಾಣು ಶಕ್ತಿ ಇಲಾಖೆಯ ಅಡಿಯ ಸಂಶೋಧನಾ ಸಂಸ್ಥೆಗಳು ಸ್ವದೇಶಿ ರೇಡಿಯೋಫಾರ್ಮಾಸ್ಯೂಟಿಕಲ್ಸ್, ಸುಧಾರಿತ ಇಮೇಜಿಂಗ್ ತಂತ್ರಜ್ಞಾನಗಳು ಮತ್ತು ನವೀನ ಕ್ಯಾನ್ಸರ್ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುತ್ತಿವೆ.
ಸರ್ಕಾರವು ಕೈಗೆಟುಕುವ ದರದ ಕ್ಯಾನ್ಸರ್ ಆರೈಕೆಯ ಲಭ್ಯತೆಯನ್ನು ವಿಸ್ತರಿಸುತ್ತಿದೆ. 2025 ರಲ್ಲಿ, ಮುಜಫರ್‌ಪುರದಲ್ಲಿ ೧೫೦ ಹಾಸಿಗೆಗಳ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಹಣಕಾಸು ವರ್ಷ 2024-25ರ ಅವಧಿಯಲ್ಲಿ, ಟಾಟಾ ಮೆಮೋರಿಯಲ್ ಸೆಂಟರ್ 1.3 ಲಕ್ಷ ರೋಗಿಗಳನ್ನು ನೋಂದಾಯಿಸಿದೆ ಮತ್ತು ಸುಮಾರು ಐದು ಲಕ್ಷ ಮಹಿಳೆಯರನ್ನು ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆಗೆ ಒಳಪಡಿಸಿದೆ. ಸ್ವದೇಶಿ ವಿಕಿರಣ ತಂತ್ರಜ್ಞಾನಗಳು 1.53 ಕೋಟಿ ವೈದ್ಯಕೀಯ ಉಪಕರಣಗಳನ್ನು ಕ್ರಿಮಿನಾಶಕಗೊಳಿಸಿವೆ, ಇದು ರೋಗಿಗಳ ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸೋಂಕುಗಳನ್ನು ಕಡಿಮೆ ಮಾಡುತ್ತದೆ.
ಕೃಷಿ
ವಿಕಿರಣ-ಪ್ರೇರಿತ ರೂಪಾಂತರ ಮತ್ತು ತಳಿ ಸಂಕರಣದ ಮೂಲಕ ಸುಧಾರಿತ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪರಮಾಣು ತಂತ್ರಜ್ಞಾನವು ಕೃಷಿಗೆ ಬೆಂಬಲ ನೀಡುತ್ತದೆ. ಈ ತಳಿಗಳು ಹೆಚ್ಚಿನ ಇಳುವರಿ, ದೊಡ್ಡ ಬೀಜದ ಗಾತ್ರ, ಸುಧಾರಿತ ಗುಣಮಟ್ಟದ ಲಕ್ಷಣಗಳು, ಬೇಗನೆ ಕೊಯ್ಲಿಗೆ ಬರುವುದು ಮತ್ತು ಬರ, ಶಾಖ, ಉಪ್ಪು ಹಾಗೂ ರೋಗಗಳಿಗೆ ಹೆಚ್ಚಿನ ನಿರೋಧಕತೆಯನ್ನು ಒದಗಿಸುತ್ತವೆ. ಆಹಾರ ಮತ್ತು ಕೃಷಿ ಉತ್ಪನ್ನಗಳ ಶೇಖರಣಾ ಅವಧಿಯನ್ನು ಹೆಚ್ಚಿಸುವ ಮೂಲಕ, ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡುವ ಮೂಲಕ, ಧಾನ್ಯಗಳು ಮತ್ತು ಮಸಾಲೆಗಳ ರಾಸಾಯನಿಕ ರಹಿತ ಸಂರಕ್ಷಣೆಯನ್ನು ಸಕ್ರಿಯಗೊಳಿಸುವ ಮೂಲಕ ಹಾಗೂ ರಫ್ತುಗಾಗಿ ಅಂತಾರಾಷ್ಟ್ರೀಯ ಸಸ್ಯಸಂರಕ್ಷಣಾ ಅವಶ್ಯಕತೆಗಳನ್ನು ಪೂರೈಸಲು ನೆರವಾಗುವ ಮೂಲಕ ಪರಮಾಣು ಶಕ್ತಿ ಇಲಾಖೆಯುಆಹಾರ ಸಂರಕ್ಷಣೆಗಾಗಿ ವಿಕಿರಣ ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸುತ್ತಿದೆ.
ಬಿಎಆರ್‌ಸಿ 2025ರಲ್ಲಿ ಬಿಡುಗಡೆಯಾದ ಟಿಬಿಎಂ-9 ಬಾಳೆಹಣ್ಣು ಮತ್ತು RTS-43 ಜೋಳ ಸೇರಿದಂತೆ 70 ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಈ ಹೆಚ್ಚಿನ ಇಳುವರಿ ಕೊಡುವ ಮತ್ತು ಬೇಗನೆ ಕೊಯ್ಲಿಗೆ ಬರುವ ತಳಿಗಳನ್ನು ದೇಶದಾದ್ಯಂತ ಬೆಳೆಯಲಾಗುತ್ತದೆ. ಬೆಳೆ ಸುಧಾರಣೆಯನ್ನು ಚುರುಕುಗೊಳಿಸಲು ಮತ್ತು ಆಹಾರ ಭದ್ರತೆಯನ್ನು ಬಲಪಡಿಸಲು ಬಿಎಆರ್‌ಸಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಕೃಷಿ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ಹೊಂದಿದೆ.
ಆಹಾರ ಸಂರಕ್ಷಣೆ
ವಿಕಿರಣ ತಂತ್ರಜ್ಞಾನವು ಕೃಷಿ ಉತ್ಪನ್ನಗಳು, ಮೀನು ಮತ್ತು ಮಸಾಲೆ ಪದಾರ್ಥಗಳು ಹಾಳಾಗುವುದನ್ನು ಕಡಿಮೆ ಮಾಡುವ ಮೂಲಕ ಅವುಗಳ ಶೇಖರಣಾ ಅವಧಿಯನ್ನು ಹೆಚ್ಚಿಸಿ ಆಹಾರ ಸಂರಕ್ಷಣೆಗೆ ಬೆಂಬಲ ನೀಡುತ್ತದೆ. ಮಾವಿನಹಣ್ಣುಗಳ ಶೇಖರಣಾ ಅವಧಿಯ ವಿಸ್ತರಣೆಯು ಸಮುದ್ರ ಮಾರ್ಗದ ಮೂಲಕ ಕನಿಷ್ಠ ವೆಚ್ಚದಲ್ಲಿ ರಫ್ತು ಮಾಡಲು ಅನುವು ಮಾಡಿಕೊಟ್ಟಿದೆ; ಹಾಗೆಯೇ ಈರುಳ್ಳಿ ಮತ್ತು ಆಲೂಗಡ್ಡೆಗಳ ಶೇಖರಣಾ ಅವಧಿಯ ವಿಸ್ತರಣೆಯು ಅವು ಹಾಳಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ರೈತರಿಗೆ ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ. ವಿವಿಧ ಆಹಾರ ಪದಾರ್ಥಗಳ ವಿಕಿರಣ ಸಂಸ್ಕರಣೆಯನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು ಅನುಮೋದಿಸಿದೆ.
ಆಹಾರ ವಿಕಿರಣ ಮೂಲಸೌಕರ್ಯವನ್ನು ವಿಸ್ತರಿಸಲು ಸರ್ಕಾರವು 2025ರಲ್ಲಿ 17 ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಿದೆ. ಆರು ಗ್ಯಾಮಾ ವಿಕಿರಣ ಸಂಸ್ಕರಣಾ ಸೌಲಭ್ಯಗಳನ್ನು ಚಾಲನೆಗೆ ತರಲಾಗಿದ್ದು, ದೇಶದ ಕಾರ್ಯಾಚರಣಾ ಸೌಲಭ್ಯಗಳ ಸಂಖ್ಯೆಯನ್ನು ೪೦40ಕ್ಕೆ ಹೆಚ್ಚಿಸಲಾಗಿದೆ. ಈ ಸೌಲಭ್ಯಗಳು ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಇತರ ಬೇಗನೆ ಹಾಳಾಗುವ ಸರಕುಗಳ ಗುಣಮಟ್ಟವನ್ನು ಸಂರಕ್ಷಿಸಲು ನೆರವಾಗುತ್ತವೆ.
ಗಣಿಗಾರಿಕೆ ಮತ್ತು ಅಪರೂಪದ ಭೂಮಿಯ ಧಾತುಗಳು
ಭಾರತದ ಪ್ರಮುಖ ಖನಿಜ ಮತ್ತು ಅಪರೂಪದ ಭೂಮಿಯ ಧಾತುಗಳ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪರಮಾಣು ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತಿದೆ. ಸುಧಾರಿತ ಪರಮಾಣು ವಿಶ್ಲೇಷಣಾತ್ಮಕ ತಂತ್ರಗಳು ಖನಿಜ ಸಂಪನ್ಮೂಲಗಳ ಪರಿಶೋಧನೆ, ಗುಣಲಕ್ಷಣ ಗುರುತಿಸುವಿಕೆ ಮತ್ತು ಸಂಸ್ಕರಣೆಗೆ ಬೆಂಬಲ ನೀಡುತ್ತವೆ; ಇವು ಅದಿರು ಮೌಲ್ಯಮಾಪನ, ಹೊರತೆಗೆಯುವಿಕೆ ಮತ್ತು ಗುಣಮಟ್ಟ ನಿಯಂತ್ರಣದ ನಿಖರತೆಯನ್ನು ಸುಧಾರಿಸುತ್ತವೆ.
ಅಪರೂಪದ ಭೂಮಿಯ ಧಾತುಗಳಿಗಾಗಿ ಭಾರತವು ತನ್ನ ಮೊದಲ ಪ್ರಮಾಣೀಕೃತ ಉಲ್ಲೇಖಿತ ವಸ್ತುವಾದ 'ಫೆರೊಕಾರ್ಬೊನಾಟೈಟ್ – ಬಿಎಆರ್‌ಸಿ B1401' ಅನ್ನು ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಮೊದಲನೆಯದು ಮತ್ತು ಜಾಗತಿಕವಾಗಿ ನಾಲ್ಕನೆಯದಾಗಿದೆ. ಇದು ಭೌಗೋಳಿಕ ರಾಸಾಯನಿಕ ವಿಶ್ಲೇಷಣೆಗೆ ಮಾನದಂಡವನ್ನು ಒದಗಿಸುತ್ತದೆ. ಇದು ಅಪರೂಪದ ಭೂಮಿಯ ಅದಿರು ಗಣಿಗಾರಿಕೆಯಲ್ಲಿ ವಿಶ್ವಾಸಾರ್ಹ ಪರಿಶೋಧನೆ, ಪರಿಣಾಮಕಾರಿ ಹೊರತೆಗೆಯುವಿಕೆ ಮತ್ತು ಪ್ರಕ್ರಿಯೆ ನಿಯಂತ್ರಣವನ್ನು ಬೆಂಬಲಿಸುತ್ತದೆ; ಜತೆಗೆ ದೇಶದ ಪ್ರಮುಖ ಖನಿಜ ಭದ್ರತೆಗೆ ಕೊಡುಗೆ ನೀಡುತ್ತದೆ.
ಸೆಮಿಕಂಡಕ್ಟರ್‌ಗಳು ಮತ್ತು ಎಲೆಕ್ಟ್ರಾನಿಕ್ಸ್
ಸ್ವದೇಶಿ ಸಂಶೋಧನೆ ಮತ್ತು ಸುಧಾರಿತ ವಸ್ತುಗಳ ಅಭಿವೃದ್ಧಿಯ ಮೂಲಕ ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ಪರಮಾಣು ತಂತ್ರಜ್ಞಾನವು ಕೊಡುಗೆ ನೀಡುತ್ತಿದೆ. ಪರಮಾಣು ತಂತ್ರಜ್ಞಾನಗಳನ್ನು ಬಳಸಿ ತಯಾರಿಸಿದ ಹೆಚ್ಚಿನ ಶುದ್ಧತೆಯ ಐಸೋಟೋಪ್‌ಗಳು ಮತ್ತು ವಿಶೇಷ ವಸ್ತುಗಳು ಸೆಮಿಕಂಡಕ್ಟರ್ ತಯಾರಿಕೆಗೆ ಅತ್ಯಂತ ನಿರ್ಣಾಯಕವಾಗಿದ್ದು, ನಿಖರವಾದ ತಯಾರಿಕೆ, ಸುಧಾರಿತ ಎಲೆಕ್ಟ್ರಾನಿಕ್ಸ್ ಮತ್ತು ಸನ್ನದ್ಧ ತಾಂತ್ರಿಕ ಅನ್ವಯಗಳಿಗೆ ಬೆಂಬಲ ನೀಡುತ್ತವೆ.
ಸೆಮಿಕಂಡಕ್ಟರ್ ಅನ್ವಯಗಳಿಗಾಗಿ ಭಾರತವು ತನ್ನ ಮೊದಲ ಎಲೆಕ್ಟ್ರಾನಿಕ್ಸ್-ಗ್ರೇಡ್ (99.8% ಶುದ್ಧತೆ) ಬೋರಾನ್-11 ಸಂವರ್ಧಿತ ಸೌಲಭ್ಯವನ್ನು ತಾಲ್ಚೆರ್‌ನಲ್ಲಿ ಸ್ಥಾಪಿಸಿದೆ. ಸಂವರ್ಧಿತ ಉತ್ಪನ್ನವನ್ನು ಹೆಚ್ಚಿನ ಸಂಸ್ಕರಣೆಗಾಗಿ ಶುದ್ಧೀಕರಿಸಿದ ಸಂವರ್ಧಿತ ಬೋರಿಕ್ ಆಸಿಡ್ ಆಗಿ ಯಶಸ್ವಿಯಾಗಿ ಪರಿವರ್ತಿಸಲಾಗಿದೆ. ಇದು 'ಭಾರತೀಯ ಸೆಮಿಕಂಡಕ್ಟರ್ ಮಿಷನ್' ಅನ್ನು ಬಲಪಡಿಸುತ್ತದೆ, ಪ್ರಮುಖ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ತಾಂತ್ರಿಕ ಸ್ವಾವಲಂಬನೆಯನ್ನು ಮುನ್ನಡೆಸುತ್ತದೆ.
ಸ್ವಚ್ಛ ಹೈಡ್ರೋಜನ್
ಹೈಡ್ರೋಜನ್ ಅನ್ನು ಭವಿಷ್ಯದ ಪ್ರಮುಖ ಇಂಧನ ವಾಹಕ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದ್ದು, ಸ್ವಚ್ಛ ಮತ್ತು ಸುಸ್ಥಿರ ಇಂಧನ ವ್ಯವಸ್ಥೆಗಳಿಗೆ ಬದಲಾಗುವಲ್ಲಿ ಇದು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಪರಮಾಣು ಶಕ್ತಿಯು ವಿಶ್ವಾಸಾರ್ಹ ವಿದ್ಯುತ್ ಮತ್ತು ಹೆಚ್ಚಿನ ತಾಪಮಾನದ ಪ್ರಕ್ರಿಯೆಯ ಶಾಖ ಎರಡನ್ನೂ ಒದಗಿಸುವ ಮೂಲಕ ಹೈಡ್ರೋಜನ್ ಉತ್ಪಾದನೆಗೆ ಕಾರ್ಬನ್-ರಹಿತ ಮಾರ್ಗವನ್ನು ಒದಗಿಸುತ್ತದೆ. ಇದು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಮತ್ತು ಸಾಂಪ್ರದಾಯಿಕ ಉತ್ಪಾದನಾ ವಿಧಾನಗಳಿಗೆ ಸಂಬಂಧಿಸಿದ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.
2026ರಲ್ಲಿ, ಭಾರತವು ಕಲ್ಪಾಕಂನಲ್ಲಿ ಪರಮಾಣು ಪ್ರಕ್ರಿಯೆಯ ಶಾಖವನ್ನು ಬಳಸಿಕೊಂಡು ವಿಶ್ವದ ಮೊದಲ ಹೈಡ್ರೋಜನ್ ಉತ್ಪಾದನಾ ಸೌಲಭ್ಯವನ್ನು ಉದ್ಘಾಟಿಸಿತು. ಈ ಸ್ವದೇಶಿ ತಂತ್ರಜ್ಞಾನವು ಸ್ವಚ್ಛ ಇಂಧನ, ಇಂಧನ ಭದ್ರತೆ ಮತ್ತು ಭಾರತದ 'ನೆಟ್ ಝೀರೋ' ಹಾಗೂ 'ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್' ಗುರಿಗಳಿಗೆ ಬೆಂಬಲ ನೀಡುತ್ತದೆ.
ಪರಮಾಣು ತಂತ್ರಜ್ಞಾನದ ವಿಸ್ತರಿಸುತ್ತಿರುವ ಅನ್ವಯಗಳು ಭಾರತದ ಬೆಳೆಯುತ್ತಿರುವ ವೈಜ್ಞಾನಿಕ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಿಂಬಿಸುತ್ತವೆ. ಸಂಶೋಧನೆ, ನಾವೀನ್ಯತೆ ಮತ್ತು ಸ್ವದೇಶಿ ತಂತ್ರಜ್ಞಾನಗಳಲ್ಲಿನ ನಿರಂತರ ಹೂಡಿಕೆಗಳು ಆಯಕಟ್ಟಿನ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ತೆರೆಯುತ್ತವೆ, ಇದು ಆರ್ಥಿಕ ಪ್ರಗತಿ, ಇಂಧನ ಭದ್ರತೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ.
ಭಾರತದ ಪರಮಾಣು ಸ್ಥಾವರಗಳು ಸುರಕ್ಷತೆಯನ್ನು ಖಚಿತಪಡಿಸುತ್ತವೆ

ವಿಕಿರಣ ಮತ್ತು ವಿಕಿರಣಶೀಲ ವಸ್ತುಗಳು ಸುತ್ತಮುತ್ತಲಿನ ಪರಿಸರ ಹಾಗೂ ವಾತಾವರಣಕ್ಕೆ ಆಕಸ್ಮಿಕವಾಗಿ ಸೋರಿಕೆಯಾಗುವುದು ಪರಮಾಣು ವಿದ್ಯುತ್ ಸ್ಥಾವರಗಳಿಗೆ ಸಂಬಂಧಿಸಿದ ಪ್ರಾಥಮಿಕ ಸುರಕ್ಷತಾ ಕಳವಳವಾಗಿದೆ. ಭಾರತೀಯ ಪರಮಾಣು ವಿದ್ಯುತ್ ಸ್ಥಾವರಗಳನ್ನು ಜನರು ಮತ್ತು ಪರಿಸರವನ್ನು ರಕ್ಷಿಸಲು ಅನೇಕ ಸ್ತರಗಳ ಸುರಕ್ಷತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ, ನಿರ್ಮಿಸಲಾಗಿದೆ ಮತ್ತು ನಿರ್ವಹಿಸಲಾಗುತ್ತದೆ.
ವಿನ್ಯಾಸ ಹಂತದ ಸುರಕ್ಷತೆ
ಭಾರತದ ಪರಮಾಣು ವಿದ್ಯುತ್ ಸ್ಥಾವರಗಳು ಜಾಗತಿಕವಾಗಿ ಅಂಗೀಕರಿಸಲ್ಪಟ್ಟ 'ಡಿಫೆನ್ಸ್ ಇನ್ ಡೆಪ್ತ್' ( ಬಹುಸ್ತರದ ರಕ್ಷಣೆ) ವಿನ್ಯಾಸ ತತ್ವವನ್ನು ಅನುಸರಿಸುತ್ತವೆ, ಇದು ಅಪಘಾತಗಳ ವಿರುದ್ಧ ಅನೇಕ ಸ್ತರಗಳ ರಕ್ಷಣೆಯನ್ನು ಖಚಿತಪಡಿಸುತ್ತದೆ. ಸುರಕ್ಷತೆಯು ಉತ್ತಮ ಗುಣಮಟ್ಟದ ವಿನ್ಯಾಸ, ನಿರ್ಮಾಣ, ಕಟ್ಟುನಿಟ್ಟಾದ ಗುಣಮಟ್ಟ ನಿಯಂತ್ರಣ ಮತ್ತು ತಾಪದೋಷ ರಹಿತ ಎಂಜಿನಿಯರಿಂಗ್‌ನಿಂದ ಪ್ರಾರಂಭವಾಗುತ್ತದೆ. ನಿರಂತರ ಮೇಲ್ವಿಚಾರಣೆ, ನಿಯಮಿತ ತಪಾಸಣೆ ಮತ್ತು ಹೆಚ್ಚುವರಿ ಸುರಕ್ಷತಾ ವ್ಯವಸ್ಥೆಗಳು ಉಪಕರಣಗಳ ಅಥವಾ ಮಾನವನ ತಪ್ಪಿನಿಂದಾಗುವ ವೈಫಲ್ಯಗಳನ್ನು ಪತ್ತೆಹಚ್ಚಿ ನಿರ್ವಹಿಸುತ್ತವೆ. ಅನೇಕ ಭೌತಿಕ ತಡೆಗೋಡೆಗಳು ವಿಕಿರಣಶೀಲ ವಸ್ತುಗಳು ಪರಿಸರಕ್ಕೆ ಸೋರಿಕೆಯಾಗುವುದನ್ನು ತಡೆಯುತ್ತವೆ. ಇವುಗಳಲ್ಲಿ ಸಿರಾಮಿಕ್ ಇಂಧನ ಚೂರುಗಳು, ಸೀಲ್ ಮಾಡಿದ ಝಿರ್ಕೋನಿಯಮ್ ಆಲಾಯ್ ಇಂಧನ ಕಡ್ಡಿಗಳು, ಬಲವಾದ ಒತ್ತಡದ ಪಾತ್ರೆ ಅಥವಾ ಪ್ರೆಶರ್ ಟ್ಯೂಬ್‌ಗಳು ಮತ್ತು ಬಲವರ್ಧಿತ ಕಾಂಕ್ರೀಟ್ ಕಂಟೈನ್‌ಮೆಂಟ್ ರಚನೆಗಳು ಸೇರಿವೆ. ಅಸಂಭವ ಘಟನೆಗಳು ಸಂಭವಿಸಿದಾಗ ಸ್ವತಂತ್ರ ಬ್ಯಾಕಪ್ ವ್ಯವಸ್ಥೆಗಳು ತುರ್ತು ರಿಯಾಕ್ಟರ್ ಸ್ಥಗಿತ, ಕೋರ್ ತಂಪಾಗಿಸುವಿಕೆ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಒದಗಿಸುತ್ತವೆ. ಪ್ರತಿಯೊಂದು ಸ್ಥಾವರವನ್ನು ಭೂಕಂಪ, ಪ್ರವಾಹ, ಚಂಡಮಾರುತ, ಸುನಾಮಿ ಮತ್ತು ಇತರ ಬಾಹ್ಯ ಅಪಾಯಗಳನ್ನು ಎದುರಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಕಾರ್ಯಾಚರಣೆಯ ಸಮಯದಲ್ಲಿ ವಿಕಿರಣ ರಕ್ಷಣೆ
ಭಾರತದ ಪರಮಾಣು ವಿದ್ಯುತ್ ಸ್ಥಾವರಗಳು ವಿಕಿರಣದ ಪ್ರಭಾವವನ್ನು ಕನಿಷ್ಠಗೊಳಿಸಲು 'ಆಸ್ ಲೋ ಆಸ್ ರೀಸನಬ್ಲಿ ಅಚೀವಬಲ್' (ಸಾಧ್ಯವಾದಷ್ಟು ಕಡಿಮೆ ಮಟ್ಟದ) ತತ್ವವನ್ನು ಅನುಸರಿಸುತ್ತವೆ. ಉದ್ಯೋಗಿಗಳ ಮೇಲಾಗುವ ವಿಕಿರಣದ ಪ್ರಮಾಣವನ್ನು ಅತ್ಯಂತ ಕಡಿಮೆ ಮಟ್ಟದಲ್ಲಿಡಲು ಸ್ಥಾವರಗಳ ವಿನ್ಯಾಸ, ವಿಕಿರಣ ಶೀಲ್ಡಿಂಗ್ (ತಡೆಗೋಡೆ) ಮತ್ತು ನಿರ್ವಹಣಾ ಪದ್ಧತಿಗಳನ್ನು ಯೋಜಿಸಲಾಗಿದೆ. ಅಟಾಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ (ಎಇಆರ್‌ಬಿ) ಐದು ವರ್ಷಗಳ ಅವಧಿಯಲ್ಲಿ ವರ್ಷಕ್ಕೆ ಸರಾಸರಿ 20 ಮಿಲಿಸಿವರ್ಟ್ ವೃತ್ತಿಪರ ಡೋಸ್ ಮಿತಿಯನ್ನು ನಿಗದಿಪಡಿಸಿದೆ, ಒಟ್ಟು ಗರಿಷ್ಠ ಮಿತಿ 100 mSv ಮತ್ತು ಯಾವುದೇ ಒಂದು ವರ್ಷದಲ್ಲಿ ಗರಿಷ್ಠ 30 mSv ಮಿತಿಯನ್ನು ನಿಗದಿಪಡಿಸಿದೆ. ಪ್ರತಿಯೊಂದು ಪರಮಾಣು ವಿದ್ಯುತ್ ಸ್ಥಾವರವು ವಿಕಿರಣ ಮಟ್ಟಗಳು, ಸಿಬ್ಬಂದಿಯ ವಿಕಿರಣ ಸ್ಪರ್ಶ, ಸ್ಥಾವರ ವ್ಯವಸ್ಥೆಗಳು ಮತ್ತು ಪರಿಸರಕ್ಕೆ ಬಿಡುಗಡೆಯಾಗುವ ವಿಕಿರಣವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಪ್ರತ್ಯೇಕ 'ಹೆಲ್ತ್ ಫಿಸಿಕ್ಸ್ ಯುನಿಟ್' ಅನ್ನು ಹೊಂದಿದೆ. ಎಂಜಿನಿಯರಿಂಗ್ ನಿಯಂತ್ರಣಗಳು, ರಕ್ಷಣಾತ್ಮಕ ಉಪಕರಣಗಳು, ಗಾಳಿ-ಬೆಳಕಿನ ವ್ಯವಸ್ಥೆಗಳು ಮತ್ತು ನಿಯಮಿತ ತರಬೇತಿಯು ವಿಕಿರಣ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸುತ್ತವೆ.

|
ಮಿಲಿಸಿವರ್ಟ್
ಮಿಲಿಸಿವರ್ಟ್ ಎಂಬುದು ಮಾನವ ದೇಹದ ಮೇಲಾಗುವ ವಿಕಿರಣದ ಪರಿಣಾಮವನ್ನು ಅಳೆಯುವ ಮಾನದಂಡವಾಗಿದೆ. ಭಾರತದಲ್ಲಿ ಸಾರ್ವಜನಿಕರಿಗೆ ವಾರ್ಷಿಕ ವಿಕಿರಣ ಡೋಸ್ ಮಿತಿಯನ್ನು 1 mSv (1 mSv) ಎಂದು ನಿಗದಿಪಡಿಸಲಾಗಿದೆ. ಇದು ಸಂಪೂರ್ಣವಾಗಿ ಸುರಕ್ಷಿತ ಮಿತಿಯಲ್ಲಿದ್ದು, ಸಾಮಾನ್ಯ ಪರಮಾಣು ವಿದ್ಯುತ್ ಸ್ಥಾವರ ಕಾರ್ಯಾಚರಣೆಯ ಸಮಯದಲ್ಲಿ ಜನರು ಮತ್ತು ಪರಿಸರಕ್ಕೆ ಬಲವಾದ ರಕ್ಷಣೆಯನ್ನು ಖಚಿತಪಡಿಸುತ್ತದೆ. ಈ ವಿಕಿರಣ ಸುರಕ್ಷತಾ ಮಾನದಂಡಗಳ ಅನುಸರಣೆಯನ್ನು ಪರಿಶೀಲಿಸಲು ಎಇಆರ್‌ಬಿ ನಿಯಮಿತ ನಿಯಂತ್ರಣ ತಪಾಸಣೆಗಳನ್ನು ನಡೆಸುತ್ತದೆ.
|
ವಿಕಿರಣಶೀಲ ತ್ಯಾಜ್ಯದ ನಿರ್ವಹಣೆ
ಸುರಕ್ಷಿತ ವಿಕಿರಣಶೀಲ ತ್ಯಾಜ್ಯ ನಿರ್ವಹಣೆಯು ಭಾರತದ ಪರಮಾಣು ಕಾರ್ಯಕ್ರಮದ ಪ್ರಮುಖ ಕೇಂದ್ರಬಿಂದುವಾಗಿದೆ. ಸಂಸ್ಕರಣೆಯಿಂದ ಹಿಡಿದು ವಿಲೇವಾರಿಯವರೆಗಿನ ಪ್ರತಿಯೊಂದು ಹಂತವೂ ಕಟ್ಟುನಿಟ್ಟಾದ, ಬಹುಸ್ತರೀಯ ನಿಯಂತ್ರಣ ಚೌಕಟ್ಟನ್ನು ಅನುಸರಿಸುತ್ತದೆ. ಅಟಾಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ ಎಲ್ಲಾ ತ್ಯಾಜ್ಯ ನಿರ್ವಹಣಾ ಚಟುವಟಿಕೆಗಳ ಉಸ್ತುವಾರಿ ವಹಿಸುತ್ತದೆ. ಈ ಕಾರ್ಯಾಚರಣೆಗಳು 'ಪರಮಾಣು ಶಕ್ತಿ (ವಿಕಿರಣಶೀಲ ತ್ಯಾಜ್ಯಗಳ ಸುರಕ್ಷಿತ ವಿಲೇವಾರಿ) ನಿಯಮಗಳು, 1987' ಮತ್ತು 'ವಿಕಿರಣಶೀಲ ತ್ಯಾಜ್ಯ ನಿರ್ವಹಣೆಯ ಮೇಲಿನ ಎಇಆರ್‌ಬಿ ಸುರಕ್ಷತಾ ಸಂಹಿತೆ'ಗೆ ಬದ್ಧವಾಗಿವೆ. ಬಿಎಆರ್‌ಸಿ ಯ ಪರಿಸರ ಸಮೀಕ್ಷಾ ಪ್ರಯೋಗಾಲಯಗಳು ಪರಿಸರ ಸುರಕ್ಷತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತವೆ. ತ್ಯಾಜ್ಯ ನಿರ್ವಹಣಾ ಸೌಲಭ್ಯಗಳು ಸಹ ವಾರದ 7 ದಿನವೂ 24 ಗಂಟೆಗಳ ಕಾಲ ನಿರಂತರ ಕಾವಲಿನಲ್ಲಿರುತ್ತವೆ.
ದ್ರವ ವಿಕಿರಣಶೀಲ ತ್ಯಾಜ್ಯವನ್ನು ಸಂಸ್ಕರಿಸಿ, ಅದರ ಸಾಂದ್ರತೆಯನ್ನು ಕಡಿಮೆಗೊಳಿಸಿ, ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳನ್ನು ಪೂರೈಸಿದ ನಂತರವೇ ಹೊರಬಿಡಲಾಗುತ್ತದೆ. ಘನ ತ್ಯಾಜ್ಯವನ್ನು ಸ್ಥಳದಲ್ಲೇ ನಿರ್ಮಿಸಲಾದ ವಿಶೇಷ ಎಂಜಿನಿಯರಿಂಗ್ ಸೌಲಭ್ಯಗಳಲ್ಲಿ ಸಂಸ್ಕರಿಸಿ ವಿಲೇವಾರಿ ಮಾಡಲಾಗುತ್ತದೆ. ವಿಲೇವಾರಿ ವಿಧಾನಗಳನ್ನು ತ್ಯಾಜ್ಯದ ವಿಕಿರಣಶೀಲತೆಯ ಮಟ್ಟಕ್ಕೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ಎಇಆರ್‌ಬಿ ಸ್ಥಳ-ನಿರ್ದಿಷ್ಟ ಹೊರಸೊಸುವಿಕೆ ಮಿತಿಗಳನ್ನು ನಿಗದಿಪಡಿಸುತ್ತದೆ ಮತ್ತು ಅವುಗಳ ಅನುಸರಣೆಯನ್ನು ನಿಯಮಿತವಾಗಿ ಪರಿಶೀಲಿಸುತ್ತದೆ. ಸುಧಾರಿತ ತಂತ್ರಜ್ಞಾನಗಳು ಮತ್ತು ಕಾರ್ಯಾಚರಣೆಯ ಪದ್ಧತಿಗಳ ಮೂಲಕ ಪರಮಾಣು ವಿದ್ಯುತ್ ಸ್ಥಾವರಗಳು ತ್ಯಾಜ್ಯ ಉತ್ಪಾದನೆಯನ್ನು ನಿರಂತರವಾಗಿ ಕಡಿಮೆ ಮಾಡುತ್ತಿವೆ. ಈ ಸಮಗ್ರ ವಿಧಾನವು ಜನರನ್ನು ರಕ್ಷಿಸುತ್ತದೆ, ಪರಿಸರವನ್ನು ಕಾಪಾಡುತ್ತದೆ ಮತ್ತು ಪರಮಾಣು ಸುರಕ್ಷತೆಯ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯುತ್ತದೆ.
|
ವಿಟ್ರಿಫಿಕೇಶನ್ ತಂತ್ರಜ್ಞಾನ
ಉನ್ನತ ಮಟ್ಟದ ವಿಕಿರಣಶೀಲ ತ್ಯಾಜ್ಯದ ಸುರಕ್ಷಿತ ನಿರ್ವಹಣೆಗಾಗಿ ಸ್ವದೇಶಿ 'ವಿಟ್ರಿಫಿಕೇಶನ್' ತಂತ್ರಜ್ಞಾನವನ್ನು ಹೊಂದಿರುವ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದಾಗಿದೆ. ಭಾಭಾ ಪರಮಾಣು ಸಂಶೋಧನಾ ಕೇಂದ್ರವು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಇದು ಉನ್ನತ ಮಟ್ಟದ ವಿಕಿರಣಶೀಲ ತ್ಯಾಜ್ಯವನ್ನು ಸುಸ್ಥಿರ ಹಾಗೂ ಸುರಕ್ಷಿತ ದೀರ್ಘಕಾಲೀನ ನಿರ್ವಹಣೆಗಾಗಿ ಗಟ್ಟಿ ಗಾಜಿನ ತುಂಡುಗಳಾಗಿ ಪರಿವರ್ತಿಸುತ್ತದೆ.
|
ಒಟ್ಟಾರೆಯಾಗಿ, ಈ ಕ್ರಮಗಳು ಭಾರತದ ಪರಮಾಣು ಸೌಲಭ್ಯಗಳು ಕಟ್ಟುನಿಟ್ಟಾದ ರಾಷ್ಟ್ರೀಯ ನಿಯಮಗಳು ಮತ್ತು ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಸುರಕ್ಷಿತ, ಸುಭದ್ರ ಮತ್ತು ವಿಶ್ವಾಸಾರ್ಹವಾಗಿ ಕಾರ್ಯಾಚರಣೆ ನಡೆಸುವುದನ್ನು ಖಚಿತಪಡಿಸುತ್ತವೆ.
ಪರಮಾಣು ತುರ್ತುಸ್ಥಿತಿಗಳಿಗೆ ಸನ್ನದ್ಧತೆ
ಭಾರತವು ಪರಮಾಣು ತುರ್ತು ಸನ್ನದ್ಧತೆಗಾಗಿ ಬಹುಸ್ತರೀಯ ಆಡಳಿತ ಚೌಕಟ್ಟನ್ನು ಸ್ಥಾಪಿಸಿದ್ದು, ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ಸ್ಥಾವರ ಮಟ್ಟದ ಪ್ರತಿಕ್ರಿಯಾ ಕಾರ್ಯವಿಧಾನಗಳನ್ನು ಸಂಯೋಜಿಸಿದೆ. ಅಟಾಮಿಕ್ ಎನರ್ಜಿ ಇಲಾಖೆಯ ನೇತೃತ್ವದಲ್ಲಿ ಮತ್ತು ಎಇಆರ್‌ಬಿಯ ನಿಯಂತ್ರಣದಲ್ಲಿರುವ ಈ ಚೌಕಟ್ಟು, ಯಾವುದೇ ಅಸಂಭವ ಪರಮಾಣು ಅಥವಾ ವಿಕಿರಣ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಮನ್ವಯದ ಯೋಜನೆ, ತ್ವರಿತ ಪ್ರತಿಕ್ರಿಯೆ ಮತ್ತು ಸಾರ್ವಜನಿಕ ರಕ್ಷಣೆಯನ್ನು ಖಚಿತಪಡಿಸುತ್ತದೆ.
- ಸಂಯೋಜಿತ ರಾಷ್ಟ್ರೀಯ ಚೌಕಟ್ಟು: ಪರಮಾಣು ಮತ್ತು ವಿಕಿರಣ ತುರ್ತುಸ್ಥಿತಿಗಳನ್ನು ರಾಷ್ಟ್ರೀಯ ವಿಕೋಪ ನಿರ್ವಹಣಾ ಯೋಜನೆಯಡಿ ಒಳಪಡಿಸಲಾಗಿದ್ದು, ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಗಳಲ್ಲೂ ಸಂಯೋಜಿಸಲಾಗಿದೆ.
- ಮೀಸಲಾದ ರಾಷ್ಟ್ರೀಯ ಸಮನ್ವಯ: ಪರಮಾಣು ಶಕ್ತಿ ಇಲಾಖೆಯು ಮೀಸಲಾದ ಬಿಕ್ಕಟ್ಟು ನಿರ್ವಹಣಾ ಯೋಜನೆಯ ಮೂಲಕ ತಾಂತ್ರಿಕ ಸನ್ನದ್ಧತೆ ಮತ್ತು ಪ್ರತಿಕ್ರಿಯೆಯ ನೇತೃತ್ವ ವಹಿಸುತ್ತದೆ.
- ಕಡ್ಡಾಯ ತುರ್ತು ಸನ್ನದ್ಧತೆ: ಪ್ರತಿಯೊಂದು ಪರಮಾಣು ವಿದ್ಯುತ್ ಸ್ಥಾವರವು ಅಟಾಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ ಅನುಮೋದಿಸಿದ ಕಡ್ಡಾಯ 'ಸ್ಥಳದಲ್ಲೇ' ಮತ್ತು 'ಸ್ಥಳದಿಂದ ಹೊರಗಿನ' ತುರ್ತು ಸ್ಪಂದನಾ ಯೋಜನೆಗಳನ್ನು ನಿರ್ವಹಿಸುತ್ತದೆ.
- ಬಹು-ಸಂಸ್ಥೆಗಳ ತುರ್ತು ಯೋಜನೆ: ಪರಮಾಣು ವಿದ್ಯುತ್ ಸ್ಥಾವರಗಳು, ಜಿಲ್ಲಾಡಳಿತ ಮತ್ತು ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರಗಳು ನಿಯಮಿತವಾಗಿ ತಾಲೀಮುಗಳನ್ನು ಮತ್ತು ತುರ್ತು ಅಭ್ಯಾಸಗಳನ್ನು ನಡೆಸುತ್ತವೆ.
- ಸಾಮರ್ಥ್ಯ ವೃದ್ಧಿ ಮತ್ತು ಸಾರ್ವಜನಿಕ ರಕ್ಷಣೆ: ಪೊಲೀಸ್, ತುರ್ತು ಸ್ಪಂದನ ಸಿಬ್ಬಂದಿ ಮತ್ತು ಇತರ ಸಂಸ್ಥೆಗಳು ವಿಶೇಷ ತರಬೇತಿಯನ್ನು ಪಡೆಯುತ್ತವೆ. ಪ್ರಮುಖ ಸ್ಥಳಗಳಲ್ಲಿ ವಿಕಿರಣ ಪತ್ತೆ ಉಪಕರಣಗಳನ್ನು ನಿಯೋಜಿಸಲಾಗಿದೆ.
- ವೈದ್ಯಕೀಯ ಸನ್ನದ್ಧತೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಪರಮಾಣು ಶಕ್ತಿ ಇಲಾಖೆ ಹಾಗೂ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ವೈದ್ಯಕೀಯ ತಜ್ಞರಿಗೆ ತರಬೇತಿ ನೀಡುತ್ತವೆ ಮತ್ತು ವಿಶೇಷ ಆರೈಕೆಗಾಗಿ 'ವಿಕಿರಣ ತುರ್ತು ವೈದ್ಯಕೀಯ ಜಾಲಗಳನ್ನು' ನಿರ್ವಹಿಸುತ್ತವೆ.
- ನಿಷೇಧಿತ ಮತ್ತು ತುರ್ತು ಯೋಜನಾ ವಲಯಗಳು: ಪರಮಾಣು ವಿದ್ಯುತ್ ಸ್ಥಾವರಗಳನ್ನು ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದ್ದು, ಅಗತ್ಯ ಬಿದ್ದಲ್ಲಿ ಸಮನ್ವಯದ ತುರ್ತು ಸ್ಪಂದನೆಗೆ ಬೆಂಬಲ ನೀಡಲು ಮೀಸಲಾದ ಸುರಕ್ಷತಾ ವಲಯಗಳು ಮತ್ತು ೧೬ ಕಿಲೋಮೀಟರ್ 'ತುರ್ತು ಯೋಜನಾ ವಲಯ'ವನ್ನು ಹೊಂದಿವೆ.
- ಮೇಲ್ವಿಚಾರಣೆ: ಪ್ರತಿಯೊಂದು ಪರಮಾಣು ವಿದ್ಯುತ್ ಸ್ಥಾವರವು 'ಪರಿಸರ ಸಮೀಕ್ಷಾ ಪ್ರಯೋಗಾಲಯ'ವನ್ನು ಹೊಂದಿದ್ದು, ಅದು ಸಾಮಾನ್ಯ ಕಾರ್ಯಾಚರಣೆಯ ಸಮಯದಲ್ಲಿ ಮತ್ತು ಯಾವುದೇ ಅಸಂಭವ ತುರ್ತು ಪರಿಸ್ಥಿತಿಯಲ್ಲಿ ಗಾಳಿ, ನೀರು, ಮಣ್ಣು, ಸಸ್ಯವರ್ಗ ಹಾಗೂ ಆಹಾರವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ.
|
ಬಹುಸ್ತರೀಯ ಸುರಕ್ಷತೆಯೊಂದಿಗೆ ನಿರ್ಮಿಸಲಾದ ಪಿಎಚ್‌ಡಬ್ಲುಆರ್‌ಗಳು
ಭಾರತೀಯ ಒತ್ತಡದ ಭಾರಿ ನೀರು ರಿಯಾಕ್ಟರ್‌ಗಳು ಎರಡು ಸ್ವತಂತ್ರ ಮತ್ತು ವೈವಿಧ್ಯಮಯ ಸ್ವಯಂಚಾಲಿತ ಸ್ಥಗಿತ ವ್ಯವಸ್ಥೆಗಳನ್ನು ಹೊಂದಿವೆ. ಅಸಹಜ ಕಾರ್ಯಾಚರಣೆಯ ಪರಿಸ್ಥಿತಿಗಳು ಕಂಡುಬಂದರೆ, ಈ ವ್ಯವಸ್ಥೆಗಳು ಸ್ವಯಂಚಾಲಿತವಾಗಿ ರಿಯಾಕ್ಟರ್ ಅನ್ನು ಸ್ಥಗಿತಗೊಳಿಸುತ್ತವೆ; ಅದೇ ಸಮಯದಲ್ಲಿ, ಮೀಸಲಾದ ತಂಪಾಗಿಸುವ ವ್ಯವಸ್ಥೆಗಳು ಸುರಕ್ಷತೆಯನ್ನು ಕಾಯ್ದುಕೊಳ್ಳಲು ರಿಯಾಕ್ಟರ್ ಕೋರ್‌ನಿಂದ ತಾಪಮಾನವನ್ನು (ಶಾಖ) ನಿರಂತರವಾಗಿ ಹೊರತೆಗೆಯುತ್ತವೆ.
|
ಈ ಕ್ರಮಗಳು ದೃಢವಾದ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಸರಿಹೊಂದುವ ಪರಮಾಣು ತುರ್ತು ನಿರ್ವಹಣಾ ವ್ಯವಸ್ಥೆಯ ಮೂಲಕ ಜನರು, ಪರಿಸರ ಹಾಗೂ ಪ್ರಮುಖ ಮೂಲಸೌಕರ್ಯಗಳನ್ನು ರಕ್ಷಿಸುವ ಭಾರತದ ಬದ್ಧತೆಯನ್ನು ಬಿಂಬಿಸುತ್ತವೆ.
ಪರಮಾಣು ಶಕ್ತಿ: ಸುಳ್ಳು ಕಲ್ಪನೆಗಳು ಮತ್ತು ನೈಜ ಸಂಗತಿಗಳು
ಪರಮಾಣು ಶಕ್ತಿಯು ವಿದ್ಯುತ್ ಉತ್ಪಾದನೆ, ಆರೋಗ್ಯ ರಕ್ಷಣೆ, ಕೃಷಿ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ; ಆದರೂ ಹಲವಾರು ತಪ್ಪು ಕಲ್ಪನೆಗಳು ಇಂದಿಗೂ ಸಾರ್ವಜನಿಕರ ಅಭಿಪ್ರಾಯವನ್ನು ರೂಪಿಸುತ್ತಿವೆ. ವೈಜ್ಞಾನಿಕ ಸಾಕ್ಷ್ಯಗಳು ಮತ್ತು ದಶಕಗಳ ಸುರಕ್ಷಿತ ಕಾರ್ಯಾಚರಣೆಯು ಇದರ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಶಾಂತಿಯುತ ಅನ್ವಯಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ.
ಸುಳ್ಳು ಕಲ್ಪನೆ: ಪರಮಾಣು ವಿದ್ಯುತ್ ಸ್ಥಾವರದ ಹತ್ತಿರ ವಾಸಿಸುವುದು ಆರೋಗ್ಯಕ್ಕೆ ಹಾನಿಕಾರಕ.
ನೈಜ ಸಂಗತಿ: ಕಾರ್ಯಾಚರಣೆಯಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಗಳಿಂದ ಹೊರಹೊಮ್ಮುವ ವಿಕಿರಣವು ನಿಗದಿತ ಸುರಕ್ಷತಾ ಮಿತಿಗಳ ಒಳಗೇ ಇರುತ್ತದೆ ಮತ್ತು ಹತ್ತಿರದ ಪ್ರದೇಶಗಳ ಜನರಿಗೆ ಯಾವುದೇ ಹೆಚ್ಚುವರಿ ಆರೋಗ್ಯ ಭೀತಿಯನ್ನು ಉಂಟುಮಾಡುವುದಿಲ್ಲ.
ಸುಳ್ಳು ಕಲ್ಪನೆ: ವಿಕಿರಣಶೀಲ ತ್ಯಾಜ್ಯವನ್ನು ಸುರಕ್ಷಿತವಾಗಿ ನಿರ್ವಹಿಸಲು ಸಾಧ್ಯವಿಲ್ಲ ಮತ್ತು ಅದು ಪರಿಸರವನ್ನು ಕಾಯಂ ಆಗಿ ಕಲುಷಿತಗೊಳಿಸುತ್ತದೆ.
ನೈಜ ಸಂಗತಿ: ವಿಕಿರಣಶೀಲ ತ್ಯಾಜ್ಯವನ್ನು ಅನೇಕ ರಕ್ಷಣಾತ್ಮಕ ತಡೆಗೋಡೆಗಳು, ನಿರಂತರ ಮೇಲ್ವಿಚಾರಣೆ ಮತ್ತು ಕಟ್ಟುನಿಟ್ಟಾದ ನಿಯಂತ್ರಣ ಚೌಕಟ್ಟಿನ ಮೂಲಕ ಅತ್ಯಂತ ಸುರಕ್ಷಿತವಾಗಿ ನಿರ್ವಹಿಸಲಾಗುತ್ತದೆ.
ಸುಳ್ಳು ಕಲ್ಪನೆ: ಯಾವುದೇ ಪ್ರಮಾಣದ ವಿಕಿರಣವೂ ಅಪಾಯಕಾರಿ.
ನೈಜ ಸಂಗತಿ: ವಿಕಿರಣವು ನಮ್ಮ ನೈಸರ್ಗಿಕ ಪರಿಸರದ ಒಂದು ಭಾಗವಾಗಿದೆ. ಸೂರ್ಯ, ಮಣ್ಣು, ಗಾಳಿ ಮತ್ತು ಆಹಾರದಿಂದ ಬರುವ ಕಡಿಮೆ ಮಟ್ಟದ ವಿಕಿರಣವು ದೈನಂದಿನ ಜೀವನದ ಭಾಗವಾಗಿದ್ದು, ಅದು ಹಾನಿಕಾರಕವಲ್ಲ.
ಸುಳ್ಳು ಕಲ್ಪನೆ: ಭಾರತದ ಪರಮಾಣು ವಿದ್ಯುತ್ ಸ್ಥಾವರಗಳು ಸುರಕ್ಷಿತವಾಗಿಲ್ಲ.
ನೈಜ ಸಂಗತಿ: ಭಾರತವು ದಶಕಗಳಿಂದ ಅತ್ಯಂತ ಬಲವಾದ ಪರಮಾಣು ಸುರಕ್ಷತಾ ದಾಖಲೆಯನ್ನು ಕಾಯ್ದುಕೊಂಡು ಬಂದಿದೆ. ಅನೇಕ ಸುರಕ್ಷತಾ ವ್ಯವಸ್ಥೆಗಳು ಮತ್ತು ಭೌತಿಕ ತಡೆಗೋಡೆಗಳು ಪರಮಾಣು ವಿದ್ಯುತ್ ಸ್ಥಾವರಗಳ ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸುತ್ತವೆ.
ಸುಳ್ಳು ಕಲ್ಪನೆ: ನಮ್ಮ ರಸ್ತೆಗಳು/ರೈಲ್ವೆಗಳಲ್ಲಿ ಪರಮಾಣು ವಸ್ತುಗಳನ್ನು ಸಾಗಿಸುವುದು ಸಾರ್ವಜನಿಕರಿಗೆ ಅತ್ಯಂತ ಅಪಾಯಕಾರಿ.
ನೈಜ ಸಂಗತಿ: ಪರಮಾಣು ವಸ್ತುಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳನ್ನು ಪೂರೈಸುವ, ವಿಶೇಷವಾಗಿ ವಿನ್ಯಾಸಗೊಳಿಸಿದ ಮತ್ತು ಪರೀಕ್ಷಿಸಲ್ಪಟ್ಟ ಕಂಟೈನರ್‌ಗಳಲ್ಲಿ ಸಾಗಿಸಲಾಗುತ್ತದೆ.
ಸುಳ್ಳು ಕಲ್ಪನೆ: ಕಲ್ಲಿದ್ದಲು ಅಥವಾ ತೈಲದಂತೆಯೇ ಪರಮಾಣು ಶಕ್ತಿಯೂ ಪರಿಸರಕ್ಕೆ ಹಾನಿ ಮಾಡುತ್ತದೆ.
ನೈಜ ಸಂಗತಿ: ಪರಮಾಣು ಶಕ್ತಿಯು ಪಳೆಯುಳಿಕೆ ಇಂಧನಗಳನ್ನು ಉರಿಸದೆ ಸ್ವಚ್ಛ, ಕಡಿಮೆ-ಕಾರ್ಬನ್ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ಇದು ಕಲ್ಲಿದ್ದಲಿನ ಬಳಕೆಗೆ ಪರ್ಯಾಯವಾಗಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಸುಳ್ಳು ಕಲ್ಪನೆ: ಪ್ಲುಟೋನಿಯಂ / ಪರಮಾಣು ವಸ್ತುಗಳನ್ನು ಮುಟ್ಟುವುದು ಮಾರಕವಾಗಬಹುದು.
ನೈಜ ಸಂಗತಿ: ಪರಮಾಣು ವಸ್ತುಗಳನ್ನು ಕಟ್ಟುನಿಟ್ಟಾದ ಸುರಕ್ಷತಾ ನಿಯಂತ್ರಣಗಳ ಅಡಿಯಲ್ಲಿ ನಿರ್ವಹಿಸಲಾಗುತ್ತದೆ. ವಿಶೇಷ ಕಾರ್ಯವಿಧಾನಗಳು ಮತ್ತು ರಕ್ಷಣಾತ್ಮಕ ಉಪಕರಣಗಳು ಅಪಾಯದ ಸ್ಪರ್ಶವನ್ನು ತಡೆಯುತ್ತವೆ ಮತ್ತು ಸುರಕ್ಷಿತ ನಿರ್ವಹಣೆಯನ್ನು ಖಚಿತಪಡಿಸುತ್ತವೆ.
ಸುಳ್ಳು ಕಲ್ಪನೆ: ನಾವು ಪರಮಾಣು ಶಕ್ತಿಯ ಬದಲಿಗೆ ನವೀಕರಿಸಬಹುದಾದ ಇಂಧನವನ್ನು ಆಯ್ಕೆ ಮಾಡಬೇಕು.
ನೈಜ ಸಂಗತಿ: ಪರಮಾಣು ಮತ್ತು ನವೀಕರಿಸಬಹುದಾದ ಇಂಧನಗಳು ಒಂದಕ್ಕೊಂದು ಪೂರಕವಾಗಿವೆ. ಪರಮಾಣು ಶಕ್ತಿಯು ವಿಶ್ವಾಸಾರ್ಹ ೨೪×೭ ವಿದ್ಯುತ್ ಅನ್ನು ಒದಗಿಸುತ್ತದೆ ಮತ್ತು ಸೌರಶಕ್ತಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಭೂಮಿಯನ್ನು ತೆಗೆದುಕೊಳ್ಳುತ್ತದೆ.
ಭಾರತದ ಪರಮಾಣು ಕಾರ್ಯಕ್ರಮವು ವೈಜ್ಞಾನಿಕ ಶ್ರೇಷ್ಠತೆ, ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳು ಮತ್ತು ನಿಯಂತ್ರಣ ಉಸ್ತುವಾರಿಯ ಮೇಲೆ ನಿರ್ಮಿತವಾಗಿದೆ. ಹೆಚ್ಚಿನ ಸಾರ್ವಜನಿಕ ಜಾಗೃತಿಯು ರಾಷ್ಟ್ರೀಯ ಅಭಿವೃದ್ಧಿಗಾಗಿ ಅಣುಶಕ್ತಿಯ ಸುರಕ್ಷಿತ, ಸುಭದ್ರ ಮತ್ತು ಶಾಂತಿಯುತ ಬಳಕೆಯ ಮೇಲಿನ ಭರವಸೆಯನ್ನು ಬಲಪಡಿಸುತ್ತದೆ.
|
ವಿಕಿರಣ ಮೇಲ್ವಿಚಾರಣೆ
ಜಾರ್ಖಂಡ್‌ನಲ್ಲಿರುವ ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ಯುರೇನಿಯಂ ಗಣಿಗಾರಿಕೆ ಪ್ರದೇಶಗಳ ಸುತ್ತಮುತ್ತ ನಡೆಸಲಾದ ವ್ಯಾಪಕ ಆರೋಗ್ಯ ಸಮೀಕ್ಷೆಗಳು, ಗ್ರಾಮಸ್ಥರಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು ತತ್ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಹೊಂದಿರುವ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳನ್ನೇ ಹೋಲುತ್ತವೆ ಎಂದು ಕಂಡುಕೊಂಡಿವೆ. ಸ್ಥಳೀಯ ರೋಗಗಳ ಸ್ವರೂಪವು ವಿಕಿರಣದ ಸ್ಪರ್ಶಕ್ಕೆ ಸಂಬಂಧಿಸಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಬಿಎಆರ್‌ಸಿ ಮತ್ತು ನಿಯಂತ್ರಣ ಸಂಸ್ಥೆಗಳ ಸಹಯೋಗದೊಂದಿಗೆ ಯುಸಿಐಎಲ್ ನಿರಂತರ ಆರೋಗ್ಯ ಮೇಲ್ವಿಚಾರಣೆ, ಪರಿಸರ ಕಾವಲು ಮತ್ತು ಸಮುದಾಯ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ.
|
ಉಪಸಂಹಾರ
ಭಾರತದ ಪರಮಾಣು ಕಾರ್ಯಕ್ರಮವು ಇಂಧನ ಭದ್ರತೆ, ತಾಂತ್ರಿಕ ಸ್ವಾವಲಂಬನೆ, ಸಾರ್ವಜನಿಕ ಕಲ್ಯಾಣ ಮತ್ತು ಅತ್ಯುನ್ನತ ಸುರಕ್ಷತಾ ಮಾನದಂಡಗಳಿಗೆ ಭಾರತ ಸರ್ಕಾರದ ಬದ್ಧತೆಯನ್ನು ಬಿಂಬಿಸುತ್ತದೆ. ಸ್ವಚ್ಛ ವಿದ್ಯುತ್ ಉತ್ಪಾದಿಸುವುದನ್ನು ಹೊರತುಪಡಿಸಿ, ಪರಮಾಣು ತಂತ್ರಜ್ಞಾನಗಳು ದೇಶದ ಪ್ರತಿಯೊಂದು ಕ್ಷೇತ್ರವನ್ನು ರೂಪಾಂತರಿಸುತ್ತಿವೆ. 'ವಿಕಸಿತ ಭಾರತಕ್ಕಾಗಿ ಪರಮಾಣು ಶಕ್ತಿ ಮಿಷನ್' ಮತ್ತು 'ಶಾಂತಿ ಕಾಯ್ದೆ'ಯಂತಹ ಪರಿವರ್ತನಾತ್ಮಕ ಉಪಕ್ರಮಗಳಿಂದ ಮಾರ್ಗದರ್ಶನ ಪಡೆದ ಭಾರತವು ಸುಸ್ಥಿರ, ನಾವೀನ್ಯತೆ ಆಧಾರಿತ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಪರಮಾಣು ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ದೃಢವಾದ ನಿಯಂತ್ರಣ ಉಸ್ತುವಾರಿ, ಸುಧಾರಿತ ರಿಯಾಕ್ಟರ್ ವಿನ್ಯಾಸಗಳು ಮತ್ತು ಸಮಗ್ರ ತುರ್ತು ಸನ್ನದ್ಧತೆಯು ಪರಮಾಣು ಸೌಲಭ್ಯಗಳ ಸುರಕ್ಷಿತ ಮತ್ತು ಸುಭದ್ರ ಕಾರ್ಯಾಚರಣೆಯನ್ನು ಖಚಿತಪಡಿಸುವುದನ್ನು ಮುಂದುವರಿಸಿವೆ. 2011 ರ ಫುಕುಶಿಮಾ ಅಪಘಾತದ ನಂತರ, ಭಾರತದ ಪ್ರತಿಯೊಂದು ಪರಮಾಣು ವಿದ್ಯುತ್ ಸ್ಥಾವರವು ಸಮಗ್ರ ಸುರಕ್ಷತಾ ಪರಾಮರ್ಶೆಗೆ ಒಳಪಟ್ಟಿದ್ದು, ಭಾರತದ ರಿಯಾಕ್ಟರ್ ವಿನ್ಯಾಸಗಳ ಬಲವನ್ನು ಮರುಸ್ಥಾಪಿಸಿದೆ. ಶಿಫಾರಸು ಮಾಡಲಾದ ಎಲ್ಲಾ ಅಲ್ಪಾವಧಿ ಮತ್ತು ಮಧ್ಯಮ ಅವಧಿಯ ಸುರಕ್ಷತಾ ಸುಧಾರಣೆಗಳನ್ನು ಪೂರ್ಣಗೊಳಿಸಲಾಗಿದೆ, ಹಾಗೆಯೇ ಹಾಲಿ ಮತ್ತು ಭವಿಷ್ಯದ ರಿಯಾಕ್ಟರ್‌ಗಳಾದ್ಯಂತ ದೀರ್ಘಕಾಲೀನ ನವೀಕರಣಗಳು ಮುಂದುವರಿದಿವೆ. ಭಾರತವು 'ವಿಕಸಿತ ಭಾರತ ೨೦೪೭' ಮತ್ತು ೨೦೭೦ ರ ವೇಳೆಗೆ ತನ್ನ 'ನೆಟ್ ಝೀರೋ' ಗುರಿಯತ್ತ ಸಾಗುತ್ತಿರುವಾಗ, ಪರಮಾಣು ಶಕ್ತಿಯು ಸುಸ್ಥಿರ ಅಭಿವೃದ್ಧಿ, ಇಂಧನ ಭದ್ರತೆ ಮತ್ತು ರಾಷ್ಟ್ರೀಯ ಪ್ರಗತಿಯ ಪ್ರಮುಖ ಸ್ತಂಭವಾಗಿ ಉಳಿಯಲಿದೆ.
References:
Department of Atomic Energy
Atomic Energy Regulatory Board (AERB)
Bhabha Atomic Research Centre (BARC)
Nuclear Power Corporation of India Limited (NPCIL)
Press Information Bureau
Click here to see PDF
*****
(Explainer ID: 159742)
आगंतुक पटल : 13
Provide suggestions / comments