• Sitemap
  • Advance Search
Farmer's Welfare

ಪ್ರಧಾನ ಮಂತ್ರಿ ಅನ್ನದಾತ ಆಯ ಸಂರಕ್ಷಣ ಅಭಿಯಾನ

Posted On: 21 AUG 2026 10:28AM

ಎಂಎಸ್‌ಪಿ-ಆಧಾರಿತ ಬೆಲೆ ಬೆಂಬಲವನ್ನುಬಲಪಡಿಸುವ ಮೂಲಕ ರೈತರ ಸಶಕ್ತೀಕರಣ 

ಪ್ರಧಾನ ಮಂತ್ರಿ ಅನ್ನದಾತ ಆಯ ಸಂರಕ್ಷಣ ಅಭಿಯಾನ ಎನ್ನುವುದು ರೈತರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸರ್ಕಾರದ ಪ್ರಮುಖ ಬೆಲೆ ಬೆಂಬಲ ಚೌಕಟ್ಟಾಗಿದೆ. ಇದು ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಜಾರಿಯನ್ನು ಬಲಪಡಿಸಲು ಮತ್ತು ಸಂಕಷ್ಟದ ಮಾರಾಟವನ್ನು ಕಡಿಮೆ ಮಾಡಲು ವಿವಿಧ ಯೋಜನೆಗಳನ್ನು ಒಳಗೊಂಡಿದೆ. ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಕೊಬ್ಬರಿಯ ಸಂಗ್ರಹಣೆಯನ್ನು ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್‌ ನಂತಹ ಏಜೆನ್ಸಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳುತ್ತವೆ. 2026-27 ರ ಬಜೆಟ್‌ನಲ್ಲಿ ₹7,200 ಕೋಟಿ ಹಂಚಿಕೆಯೊಂದಿಗೆ, ಪಿಎಂ -ಆಶಾಪರಿಣಾಮಕಾರಿ ಬೆಲೆ-ಬೆಂಬಲ ಮಧ್ಯಸ್ಥಿಕೆಗಳನ್ನು ಬಲಪಡಿಸುತ್ತದೆ. ಆಧಾರ್-ಆಧಾರಿತ ದೃಢೀಕರಣ, ಇ-ನಾಮ್‌, ಇ-ಸಮೃದ್ಧಿ ಮತ್ತು ಇ-ಸಮ್ಯುಕ್ತಿ ಸೇರಿದಂತೆ ಡಿಜಿಟಲ್ ಸುಧಾರಣೆಗಳು ಪಾರದರ್ಶಕತೆ ಮತ್ತು ಸಂಗ್ರಹಣೆಯ ದಕ್ಷತೆಯನ್ನು ಸುಧಾರಿಸಿವೆ. ಕೃಷಿ ಮೂಲಸೌಕರ್ಯ ನಿಧಿಯ ಬೆಂಬಲ ಮತ್ತು ವಿಸ್ತರಿತ ಸಂಗ್ರಹಣಾ ವ್ಯಾಪ್ತಿಯು ಈ ಯೋಜನೆಯನ್ನು ಮತ್ತಷ್ಟು ಬಲಪಡಿಸಿದೆ.

ರೈತರಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸುವುದು

ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಪ್ರಯೋಜನಗಳು ಸಣ್ಣ ಮತ್ತು ಅಂಚಿನ ರೈತರು ಸೇರಿದಂತೆ ಎಲ್ಲಾ ರೈತರನ್ನು ತಲುಪುವಂತೆ ಮಾಡಲು ಸರ್ಕಾರವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಪ್ರಮುಖ ಉಪಕ್ರಮಗಳಲ್ಲಿ ಒಂದೆಂದರೆ ಪ್ರಧಾನ ಮಂತ್ರಿ ಅನ್ನದಾತ ಆಯ ಸಂರಕ್ಷಣ ಅಭಿಯಾನ. ಸರ್ಕಾರವು ಈ ಯೋಜನೆಯನ್ನು ಸೆಪ್ಟೆಂಬರ್ 2018 ರಲ್ಲಿ ಪ್ರಾರಂಭಿಸಿತು. ಗ್ರಾಹಕರಿಗೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಜೊತೆಗೆ ರೈತರಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

PM AASHA ಯೋಜನೆಯು ವಿವಿಧ ಬೆಲೆ ಬೆಂಬಲ ವ್ಯವಸ್ಥೆಗಳನ್ನು ಒಂದೇ ಚೌಕಟ್ಟಿನ ಅಡಿಯಲ್ಲಿ ತರುತ್ತದೆ. ಬೆಳೆ ಮತ್ತು ಮಾರುಕಟ್ಟೆಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರತಿಯೊಂದು ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಈ ಯೋಜನೆಯು ಎಂಎಸ್‌ಪಿ ಅನುಷ್ಠಾನವನ್ನು ಬಲಪಡಿಸುತ್ತದೆ ಮತ್ತು ರೈತರಲ್ಲಿ ಸಂಕಷ್ಟದ ಮಾರಾಟವನ್ನು ಕಡಿಮೆ ಮಾಡುತ್ತದೆ. ಇದು ಗ್ರಾಹಕರಿಗೆ ಆಹಾರ ಬೆಲೆ ಸ್ಥಿರತೆಯನ್ನು ಖಚಿತಪಡಿಸುವುದರ ಜೊತೆಗೆ ಕೃಷಿ ಆದಾಯವನ್ನು ಸ್ಥಿರಗೊಳಿಸುತ್ತದೆ.

ಪಿಎಂ ಆಶಾ ಅಡಿಯಲ್ಲಿ, ಪ್ರತಿಯೊಂದು ಮಾರುಕಟ್ಟೆ ಋತುವಿನ ಮೊದಲು ಸಂಗ್ರಹಣೆ ವ್ಯವಸ್ಥೆಗಳು ಪ್ರಾರಂಭವಾಗುತ್ತವೆ. ಬೆಳೆಗಳು ಮಾರುಕಟ್ಟೆಗೆ ಬರುವ ಮುನ್ನವೇ ಕೇಂದ್ರ ನೋಡಲ್ ಏಜೆನ್ಸಿಗಳು ಮತ್ತು ರಾಜ್ಯ ಸರ್ಕಾರಗಳು ಸಂಗ್ರಹಣಾ ಮೂಲಸೌಕರ್ಯಗಳನ್ನು ಸಿದ್ಧಪಡಿಸುತ್ತವೆ. ಈ ಸಮನ್ವಯದ ವಿಧಾನವು ಸಮಯೋಚಿತ ಸಂಗ್ರಹಣಾ ಕಾರ್ಯಾಚರಣೆಗಳನ್ನು ಖಚಿತಪಡಿಸುತ್ತದೆ ಮತ್ತು ದೇಶಾದ್ಯಂತ ಪರಿಣಾಮಕಾರಿ ಎಂಎಸ್‌ಪಿ ಜಾರಿಯನ್ನು ಬಲಪಡಿಸುತ್ತದೆ.

ನೀತಿ ವಿನ್ಯಾಸ ಮತ್ತು ಸಾಂಸ್ಥಿಕ ಚೌಕಟ್ಟು

ಪಿಡಿಪಿಎಸ್‌ ಮುಖ್ಯವಾಗಿ ನಾಲ್ಕು ಪ್ರಮುಖ ಘಟಕಗಳನ್ನು ಒಳಗೊಂಡಿದೆ: ಬೆಲೆ ಬೆಂಬಲ ಯೋಜನೆ, ಬೆಲೆ ಸ್ಥಿರೀಕರಣ ನಿಧಿ, ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್‌), ಮತ್ತು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ.

1. ಬೆಲೆ ಬೆಂಬಲ ಯೋಜನೆ

ಸುಗ್ಗಿ ಕಾಲದಲ್ಲಿ ಮಾರುಕಟ್ಟೆ ಬೆಲೆಗಳು ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್‌ಪಿ) ಕಡಿಮೆಯಾದಾಗ ಈ ಯೋಜನೆಯು ಎಂಎಸ್‌ಪಿ ದರದಲ್ಲಿ ಬೆಳೆಗಳ ಸಂಗ್ರಹಣೆಯನ್ನು ಖಚಿತಪಡಿಸುತ್ತದೆ. ಇದು ಮುಖ್ಯವಾಗಿ ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಕೊಬ್ಬರಿಯನ್ನು ಒಳಗೊಂಡಿದೆ. ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ಎನ್‌ಎಎಫ್‌ಇಡಿ) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಸಿಸಿಎಫ್‌) ನಂತಹ ಏಜೆನ್ಸಿಗಳ ಮೂಲಕ ಸಂಗ್ರಹಣೆಯನ್ನು ಕೈಗೊಳ್ಳಲಾಗುತ್ತದೆ. ಮಾನ್ಯವಾದ ಭೂ ದಾಖಲೆಗಳನ್ನು ಹೊಂದಿರುವ ನೋಂದಾಯಿತ ರೈತರು ಮಾತ್ರ ಇದಕ್ಕೆ ಅರ್ಹರಾಗಿದ್ದಾರೆ, ಇದು ಮಧ್ಯವರ್ತಿಗಳಿಲ್ಲದೆ ನೇರ ಪ್ರಯೋಜನವನ್ನು ಖಚಿತಪಡಿಸುತ್ತದೆ. ಇದು ಸಂಕಷ್ಟದ ಮಾರಾಟವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಬೆಲೆ ಕುಸಿತದ ಸಮಯದಲ್ಲಿ ರೈತರಿಗೆ ಆದಾಯದ ಸ್ಥಿರತೆಯನ್ನು ಖಚಿತಪಡಿಸುತ್ತದೆ.

2024–25ರ ಸಂಗ್ರಹಣೆ ವರ್ಷದಿಂದ, ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ, ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಕೊಬ್ಬರಿಯ ಸಂಗ್ರಹಣೆಯನ್ನು ಆರಂಭದಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಉತ್ಪಾದನೆಯ ಶೇಕಡಾ 25 ರಷ್ಟು ಭಾಗದವರೆಗೆ ಅನುಮತಿಸಲಾಗಿದೆ. ಈ ಮಿತಿಯನ್ನು ಮೀರಿದ ಹೆಚ್ಚುವರಿ ಸಂಗ್ರಹಣೆಯನ್ನು ಕಾರ್ಯದರ್ಶಿಗಳ ಸಮಿತಿಯು ರಾಷ್ಟ್ರೀಯ ಉತ್ಪಾದನೆಯ ಶೇಕಡಾ 25 ರಷ್ಟು ಭಾಗದವರೆಗೆ ಅನುಮೋದಿಸಬಹುದು. ಆದಾಗ್ಯೂ, ದೇಶೀಯ ಬೇಳೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಮದನ್ನು ಕಡಿಮೆ ಮಾಡಲು, ತೊಗರಿ, ಉದ್ದು ಮತ್ತು ಮಸೂರ್ ಸಂಗ್ರಹಣೆಯನ್ನು ರಾಜ್ಯದ ಉತ್ಪಾದನೆಯ ಶೇಕಡಾ 100 ರಷ್ಟು ಭಾಗದವರೆಗೆ ಅನುಮತಿಸಲಾಗಿದೆ.

2. ಬೆಲೆ ಸ್ಥಿರೀಕರಣ ನಿಧಿ

ಬೆಲೆ ಸ್ಥಿರೀಕರಣ ನಿಧಿಯು ಬೇಳೆಕಾಳುಗಳು, ಈರುಳ್ಳಿ ಮತ್ತು ಆಲೂಗಡ್ಡೆಯಂತಹ ಅಗತ್ಯ ವಸ್ತುಗಳ ಬಫರ್ ಸ್ಟಾಕ್‌ಗಳನ್ನು ನಿರ್ವಹಿಸುವ ಮೂಲಕ ಬೆಲೆ ಏರಿಳಿತಗಳಿಂದ ಗ್ರಾಹಕರನ್ನು ರಕ್ಷಿಸುತ್ತದೆ. ಪ್ರಮುಖ ಕೃಷಿ-ತೋಟಗಾರಿಕಾ ಉತ್ಪನ್ನಗಳ ಬೆಲೆಗಳನ್ನು ಸ್ಥಿರಗೊಳಿಸಲು ಇದನ್ನು ಸ್ಥಾಪಿಸಲಾಗಿದೆ. ಸುಗ್ಗಿ ಕಾಲದಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಹಾಗೂ ಕೈಗೆಟುಕುವ ದರವನ್ನು ಖಚಿತಪಡಿಸಲು ಅಭಾವದ ಅವಧಿಯಲ್ಲಿ (lean seasons) ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಪಿಎಸ್‌ಎಫ್‌ ಅನ್ನು ಈಗ ಪಿಎಂ -ಆಶಾನೊಂದಿಗೆ ವಿಲೀನಗೊಳಿಸಲಾಗಿದೆ ಆದರೆ ಗ್ರಾಹಕ ವ್ಯವಹಾರಗಳ ಇಲಾಖೆಯು ಇದನ್ನು ನಿರ್ವಹಿಸುವುದನ್ನು ಮುಂದುವರಿಸಿದೆ.

3. ಬೆಲೆ ಕೊರತೆ ಪಾವತಿ ಯೋಜನೆ

ಪಿಡಿಪಿಎಸ್‌ ಅಡಿಯಲ್ಲಿ, ರೈತರ ಉತ್ಪನ್ನಗಳನ್ನು ಭೌತಿಕವಾಗಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ, ಸೂಚಿತ ಮಾರುಕಟ್ಟೆಯಲ್ಲಿ ಎಂಎಸ್‌ಪಿ ಮತ್ತು ವಾಸ್ತವಿಕ ಮಾರುಕಟ್ಟೆ ಬೆಲೆಯ ನಡುವಿನ ವ್ಯತ್ಯಾಸದ ಮೊತ್ತವನ್ನು, ಎಂಎಸ್‌ಪಿ ಮೌಲ್ಯದ ಶೇಕಡಾ 15 ರಷ್ಟು ಭಾಗದವರೆಗೆ, ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುತ್ತದೆ. ಈ ಯೋಜನೆಯನ್ನು ಮುಖ್ಯವಾಗಿ ಎಣ್ಣೆಕಾಳುಗಳಿಗೆ ಬಳಸಲಾಗುತ್ತದೆ ಮತ್ತು ಬೃಹತ್ ಸಂಗ್ರಹಣೆ ಮೂಲಸೌಕರ್ಯದ ಅಗತ್ಯವನ್ನು ಕಡಿಮೆ ಮಾಡುತ್ತದೆ. ಇದು ಮಾರುಕಟ್ಟೆ ಆಧಾರಿತ ಮಾರಾಟವನ್ನು ಉತ್ತೇಜಿಸುತ್ತದೆ ಮತ್ತು ರೈತರಿಗೆ ಎಂಎಸ್‌ಪಿ ರಕ್ಷಣೆಯನ್ನು ಖಚಿತಪಡಿಸುತ್ತದೆ.

4. ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ

ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯನ್ನು ಶೀಘ್ರವಾಗಿ ಹಾಳಾಗುವ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಕನಿಷ್ಠ ಬೆಂಬಲ ಬೆಲೆ ಅನ್ವಯಿಸದ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಯಂತಹ ಉತ್ಪನ್ನಗಳನ್ನು ಗುರಿಯಾಗಿಸಿಕೊಂಡಿದೆ. ಮಾರುಕಟ್ಟೆ ಬೆಲೆಗಳು ಹಿಂದಿನ ಸಾಮಾನ್ಯ ಋತುವಿನ ದರಗಳಿಗಿಂತ ಕನಿಷ್ಠ ಶೇಕಡಾ 10 ರಷ್ಟು ಕಡಿಮೆಯಾದಾಗ ಈ ಯೋಜನೆ ಸಕ್ರಿಯಗೊಳ್ಳುತ್ತದೆ. ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್‌ ನಂತಹ ಕೇಂದ್ರ ನೋಡಲ್ ಏಜೆನ್ಸಿಗಳು ಕೈಗೊಳ್ಳುವ ಕಾರ್ಯಾಚರಣೆಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವೆಚ್ಚ ಹಂಚಿಕೆಯ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಪೂರೈಕೆಯು ಬೇಡಿಕೆಗಿಂತ ಹೆಚ್ಚಿರುವ ಹೆಚ್ಚುವರಿ ಉತ್ಪಾದನೆಯ ಸನ್ನಿವೇಶಗಳಲ್ಲಿ ಈ ಯೋಜನೆ ವಿಶೇಷವಾಗಿ ಉಪಯುಕ್ತವಾಗಿದೆ.

ಪಿಎಂ -ಆಶಾಅಡಿಯಲ್ಲಿ ಹೆಚ್ಚಿಸಿದ ಹಣಕಾಸು ಬೆಂಬಲ

ಪ್ರಧಾನ ಮಂತ್ರಿ ಅನ್ನದಾತ ಆಯ ಸಂರಕ್ಷಣ ಯೋಜನೆ ಅಡಿಯಲ್ಲಿ, ಬಜೆಟ್ ಹಂಚಿಕೆಯು ವರ್ಷಗಳಲ್ಲಿ ಸ್ಥಿರವಾಗಿ ಹೆಚ್ಚಾಗಿದೆ. 2024–25 ರಲ್ಲಿ, ಯೋಜನೆಯಡಿಯಲ್ಲಾದ ವಾಸ್ತವಿಕ ವೆಚ್ಚ ₹5,437.99 ಕೋಟಿಯಾಗಿತ್ತು. ಬಜೆಟ್ 2025–26 ರಲ್ಲಿ ₹6,941.36 ಕೋಟಿಗೆ ಏರಿತು ಮತ್ತು 2026-27 ರಲ್ಲಿ ಮತ್ತಷ್ಟು ₹7,200.00 ಕೋಟಿಗೆ ಹೆಚ್ಚಿಸಲಾಯಿತು. ಇದು ರೈತರಿಗೆ ಆದಾಯ ಬೆಂಬಲವನ್ನು ಖಚಿತಪಡಿಸುವ ಮತ್ತು ಬೆಲೆ ಭರವಸೆ ವ್ಯವಸ್ಥೆಗಳನ್ನು ಬಲಪಡಿಸುವ ಸರ್ಕಾರದ ಗಮನವನ್ನು ಪ್ರತಿಬಿಂಬಿಸುತ್ತದೆ.

ವೆಚ್ಚದಿಂದ ಆತ್ಮವಿಶ್ವಾಸದವರೆಗೆ: ರೈತರ ಲಾಭದಾಯಕಾಯವನ್ನು ಬಲಪಡಿಸುವುದು

ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ರೈತರ ಆದಾಯ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ, ಪಿಎಂ -ಆಶಾಅಡಿಯಲ್ಲಿನ ಯೋಜನೆಗಳ ಬೆಂಬಲದೊಂದಿಗೆ ಪ್ರಮುಖ ಬೆಳೆಗಳ ಸುಸ್ಥಿರ ಬೇಸಾಯವನ್ನು ಉತ್ತೇಜಿಸುತ್ತದೆ. 2026-27 ರಲ್ಲಿ, ಭತ್ತದ (ಸಾಮಾನ್ಯ) ವೆಚ್ಚ ಪ್ರತಿ ಕ್ವಿಂಟಾಲ್‌ಗೆ ₹1,627 ಆಗಿದ್ದರೆ, ಅದರ ಎಂಎಸ್‌ಪಿ ಪ್ರತಿ ಕ್ವಿಂಟಾಲ್‌ಗೆ ₹2,441 ಆಗಿತ್ತು, ಇದು ₹814 ರಷ್ಟು ಲಾಭಾಂಶವನ್ನು ನೀಡಿದೆ. ಸೋಯಾಬೀನ್ (ಹಳದಿ) ವೆಚ್ಚ ಪ್ರತಿ ಕ್ವಿಂಟಾಲ್‌ಗೆ ₹3,805 ಆಗಿದ್ದರೆ, ಅದರ ಎಂಎಸ್‌ಪಿ ಪ್ರತಿ ಕ್ವಿಂಟಾಲ್‌ಗೆ ₹5,708 ಆಗಿತ್ತು, ಇದು ₹1,903 ರಷ್ಟು ಲಾಭಾಂಶವನ್ನು ನೀಡಿದೆ.

2026-27 ರಲ್ಲಿ, ಗೋಧಿಯ ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಾಲ್‌ಗೆ ₹1,239 ಆಗಿದ್ದರೆ, ಅದರ ಎಂಎಸ್‌ಪಿ ಪ್ರತಿ ಕ್ವಿಂಟಾಲ್‌ಗೆ ₹2,585 ಆಗಿದೆ, ಇದು ₹1,346 ರಷ್ಟು ಲಾಭಾಂಶವನ್ನು ಖಚಿತಪಡಿಸುತ್ತದೆ. ಈ ಮಧ್ಯೆ, ಸೆಣಬಿನ ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಾಲ್‌ಗೆ ₹3,662 ಮತ್ತು ಎಂಎಸ್‌ಪಿ  ಪ್ರತಿ ಕ್ವಿಂಟಾಲ್‌ಗೆ ₹5,925 ಆಗಿದ್ದು, ₹2,293 ರಷ್ಟು ಗರಿಷ್ಠ ಲಾಭಾಂಶವನ್ನು ನೀಡುತ್ತದೆ. ಈ ಲಾಭದಾಯಕ ಎಂಎಸ್‌ಪಿ ಲಾಭಾಂಶಗಳು ಬೆಲೆ ಭರವಸೆಯನ್ನು ಬಲಪಡಿಸುವ ಮೂಲಕ ಮತ್ತು ಕೃಷಿ ಮಾರುಕಟ್ಟೆಗಳಲ್ಲಿ ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ಪಿಎಂ-ಆಶಾ ನ ಉದ್ದೇಶಗಳನ್ನು ಬಲಪಡಿಸುತ್ತವೆ.

ಒಟ್ಟಾರೆಯಾಗಿ, ಎಂಎಸ್‌ಪಿ ಯು ಎಲ್ಲಾ ಬೆಳೆಗಳು ಮತ್ತು ವರ್ಷಗಳಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಸ್ಥಿರವಾಗಿ ಹೆಚ್ಚಾಗಿರುತ್ತದೆ ಮತ್ತು ಪಿಎಂ-ಆಶಾ ರೈತರಿಗೆ ಉತ್ತಮ ಬೆಲೆ ಸಾಕಾರವನ್ನು ಖಚಿತಪಡಿಸುವ ಮೂಲಕ ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಇದು ಕೃಷಿ ವಲಯದಲ್ಲಿ ಸ್ಥಿರ ಆದಾಯ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಬೆಂಬಲಿತ ಚೌಕಟ್ಟನ್ನು ಎತ್ತಿ ತೋರಿಸುತ್ತದೆ.

ಜಮೀನಿನಿಂದ ಮಾರುಕಟ್ಟೆಗೆ ಸಂಪರ್ಕವನ್ನು ಬಲಪಡಿಸುವುದು

ಕೃಷಿ ಮಾರುಕಟ್ಟೆ ಮತ್ತು ಕೊಯ್ಲಿನ ನಂತರದ ಮೂಲಸೌಕರ್ಯಗಳನ್ನು ಬಲಪಡಿಸಲು ಸರ್ಕಾರವು ಎಐಎಫ್‌ ಮತ್ತು ಇ-ನಾಮ್‌ ನಂತಹ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಕೃಷಿ ಮೂಲಸೌಕರ್ಯ ನಿಧಿಯು 2,14,437 ಯೋಜನೆಗಳಿಗೆ ₹96,426 ಕೋಟಿ ಮೌಲ್ಯದ ಸಾಲಗಳನ್ನು ಮಂಜೂರು ಮಾಡಿದ್ದು, ₹1,66,179 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಯನ್ನು ಸಜ್ಜುಗೊಳಿಸಿದೆ. ಇ-ನಾಮ್‌ ವೇದಿಕೆಯು 23 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ 1,656 ಮಂಡಿಗಳನ್ನು ಸಂಯೋಜಿಸಿದ್ದು, ₹4,94,847 ಕೋಟಿ ಮೌಲ್ಯದ ವ್ಯಾಪಾರವನ್ನು ಸುಗಮಗೊಳಿಸಿದೆ. ಇದು ಇ-ನಾಮ್‌ ನಲ್ಲಿ 4,776 ಎಫ್‌ಪಿಒ ಗಳನ್ನು ನೋಂದಾಯಿಸಿದೆ ಮತ್ತು ಡಿಜಿಟಲ್ ಕಾಮರ್ಸ್‌ಗಾಗಿ ಮುಕ್ತ ಜಾಲದ ವೇದಿಕೆಯಲ್ಲಿ 7,334 ಎಫ್‌ಪಿಒ ಗಳನ್ನು ಸೇರ್ಪಡೆಗೊಳಿಸಿದೆ. ಸರ್ಕಾರವು 25,081 ಕೃಷಿ ಮಾರುಕಟ್ಟೆ ಮೂಲಸೌಕರ್ಯ ಯೋಜನೆಗಳ ಜೊತೆಗೆ 992.6 ಲಕ್ಷ ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯದ 50,249 ಗೋದಾಮುಗಳನ್ನು ಮಂಜೂರು ಮಾಡಿದೆ.

ಇತ್ತೀಚಿನ PM-AASHA ಸುಧಾರಣೆಗಳು ಬಯೋಮೆಟ್ರಿಕ್ ರೈತರ ದೃಢೀಕರಣ, ಮುಂಚಿತವಾಗಿ ನೋಂದಾಯಿತ ರೈತರಿಂದ ನೇರ ಸಂಗ್ರಹಣೆ, ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ (TOP) ಬೆಳೆಗಳಿಗೆ ಸಾರಿಗೆ ಬೆಂಬಲ ಮತ್ತು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿಯಲ್ಲಿ ಬೆಲೆ ವ್ಯತ್ಯಾಸ ಪಾವತಿಗಳನ್ನು ಪರಿಚಯಿಸಿವೆ.

ಬಿಹಾರ ಮತ್ತು ಛತ್ತೀಸ್‌ಗಢ: ಪಿಎಂ -ಆಶಾಜಾರಿಯನ್ನು ಮುನ್ನಡೆಸುವುದು

ಬಿಹಾರದಲ್ಲಿ, ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (ಎನ್‌ಸಿಸಿಎಫ್‌) ಮೂಲಕ ಮೊದಲ ಬಾರಿಗೆ ಮಸೂರ್ (ಬೇಳೆ) ನ ಸಂಘಟಿತ ಸಂಗ್ರಹಣೆಯನ್ನು ಪ್ರಾರಂಭಿಸಲಾಗಿದೆ. ಇದು 48 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಎಸಿಎಸ್‌) ಮತ್ತು ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಮೂಲಕ ಪಿಎಂ -ಆಶಾಅಡಿಯಲ್ಲಿ ಬೇಳೆಕಾಳುಗಳ ಸಂಗ್ರಹಣೆಯನ್ನು ಬಲಪಡಿಸುವತ್ತ ಪ್ರಮುಖ ಹೆಜ್ಜೆಯಾಗಿದೆ. 10 ಆಗಸ್ಟ್ 2026 ರ ವೇಳೆಗೆ, ಎನ್‌ಸಿಸಿಎಫ್‌ 1,042.65 ಮೆಟ್ರಿಕ್ ಟನ್ ಮಸೂರ್ ಅನ್ನು ಸಂಗ್ರಹಿಸಿದ್ದು, 358 ರೈತರನ್ನು ನೋಂದಾಯಿಸಿಕೊಂಡಿದೆ ಮತ್ತು 285 ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಇದೇ ಅವಧಿಯಲ್ಲಿ, ಎನ್‌ಎಎಫ್‌ಇಡಿ ಕೂಡ 1,814.13 ಮೆಟ್ರಿಕ್ ಟನ್ ಮಸೂರ್ ಅನ್ನು ಸಂಗ್ರಹಿಸಿದ್ದು, 495 ರೈತರನ್ನು ನೋಂದಾಯಿಸಿಕೊಂಡಿದೆ ಮತ್ತು 455 ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.

ಛತ್ತೀಸ್‌ಗಢದಲ್ಲಿ, 200 ಕಾರ್ಯನಿರತ ಪಿಎಸಿಎಸ್‌ ಮತ್ತು 12 ಎಫ್‌ಪಿಒ ಗಳ ಜಾಲದ ಮೂಲಕ ಪಿಎಂ -ಆಶಾಅಡಿಯಲ್ಲಿ ಸಂಗ್ರಹಣಾ ಕಾರ್ಯಾಚರಣೆಗಳನ್ನು ಬಲಪಡಿಸಲಾಗಿದೆ. 10 ಆಗಸ್ಟ್ 2026 ರ ವೇಳೆಗೆ, ಎನ್‌ಸಿಸಿಎಫ್‌ 18,392.228 ಮೆಟ್ರಿಕ್ ಟನ್ ಕಡಲೆ, 22.231 ಮೆಟ್ರಿಕ್ ಟನ್ ಮಸೂರ್ ಮತ್ತು 1,035.0205 ಮೆಟ್ರಿಕ್ ಟನ್ ಸಾಸಿವೆಯನ್ನು ಸಂಗ್ರಹಿಸಿದೆ. ಇದು 21,721 ರೈತರನ್ನು ನೋಂದಾಯಿಸಿಕೊಂಡಿದೆ ಮತ್ತು 13,790 ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಇದೇ ಅವಧಿಯಲ್ಲಿ, ಎನ್‌ಎಎಫ್‌ಇಡಿ 17,020.65 ಮೆಟ್ರಿಕ್ ಟನ್ ಕಡಲೆ ಮತ್ತು 355.05 ಮೆಟ್ರಿಕ್ ಟನ್ ಮಸೂರ್ ಅನ್ನು ಸಂಗ್ರಹಿಸಿದೆ. ಇದು 46,146 ರೈತರನ್ನು ನೋಂದಾಯಿಸಿಕೊಂಡಿದೆ ಮತ್ತು 13,673 ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಉಪಕ್ರಮಗಳು ಎಂಎಸ್‌ಪಿ ಸಂಗ್ರಹಣೆಯನ್ನು ಬಲಪಡಿಸಿವೆ, ಮಾರುಕಟ್ಟೆ ಪ್ರವೇಶವನ್ನು ಸುಧಾರಿಸಿವೆ ಮತ್ತು ಪ್ರದೇಶ-ನಿರ್ದಿಷ್ಟ ಬೇಳೆಕಾಳುಗಳ ಸ್ವಾವಲಂಬನೆಯ ಗುರಿಗಳನ್ನು ಬೆಂಬಲಿಸಿವೆ.

ರೈತರ ಆದಾಯಕ್ಕೆ ಭದ್ರತೆ, ಮಾರುಕಟ್ಟೆಗಳ ಸಶಕ್ತೀಕರಣ

ಖಚಿತ ಸಂಗ್ರಹಣೆ, ಬೆಲೆ ಸ್ಥಿರೀಕರಣ ಮತ್ತು ಪರಿಣಾಮಕಾರಿ ಮಾರುಕಟ್ಟೆ ಮಧ್ಯಸ್ಥಿಕೆಗಳ ಮೂಲಕ ರೈತರನ್ನು ಬೆಂಬಲಿಸಲು ಪಿಎಂ -ಆಶಾಒಂದು ಪ್ರಬಲ ಹಾಗೂ ವ್ಯವಸ್ಥಿತ ಚೌಕಟ್ಟಾಗಿ ಹೊರಹೊಮ್ಮಿದೆ. ಇದು ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್‌ ನಂತಹ ಏಜೆನ್ಸಿಗಳ ಮೂಲಕ ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಕೊಬ್ಬರಿಯಂತಹ ಪ್ರಮುಖ ಬೆಳೆಗಳ ಸಮಯೋಚಿತ ಸಂಗ್ರಹಣೆಯನ್ನು ಸಾಧ್ಯವಾಗಿಸುತ್ತದೆ. ಹೆಚ್ಚುವರಿ ಸಂಗ್ರಹಣಾ ಕೇಂದ್ರಗಳ ಸ್ಥಾಪನೆಯು ಮಾರುಕಟ್ಟೆ ಪ್ರವೇಶವನ್ನು ಮತ್ತು ರೈತರ ಸಾಮುದಾಯಿಕ ಸಶಕ್ತೀಕರಣವನ್ನು ಮತ್ತಷ್ಟು ಬಲಪಡಿಸಿದೆ.

ಡಿಜಿಟಲ್ ಸುಧಾರಣೆಗಳು ಮತ್ತು ಮೂಲಸೌಕರ್ಯ ಬೆಂಬಲವು ರಾಜ್ಯಾದ್ಯಂತ ಸಂಗ್ರಹಣಾ ಕಾರ್ಯಾಚರಣೆಗಳ ಪಾರದರ್ಶಕತೆ, ದಕ್ಷತೆ ಮತ್ತು ತಲುಪುವಿಕೆಯನ್ನು ಸುಧಾರಿಸಿದೆ. ಒಟ್ಟಾರೆಯಾಗಿ, ಈ ಪ್ರಯತ್ನಗಳು ರೈತರಿಗೆ ಉತ್ತಮ ಬೆಲೆ ಸಾಕಾರಗೊಳ್ಳುವುದನ್ನು ಖಚಿತಪಡಿಸುತ್ತವೆ, ಸಂಕಷ್ಟದ ಮಾರಾಟವನ್ನು ಕಡಿಮೆ ಮಾಡುತ್ತವೆ ಮತ್ತು ದೇಶದಲ್ಲಿ ಸ್ಥಿರ ಹಾಗೂ ಚೇತೋಹಾರಿ ಕೃಷಿ ಅರ್ಥವ್ಯವಸ್ಥೆಯನ್ನು ಉತ್ತೇಜಿಸುತ್ತವೆ.

References

Ministry of Agriculture and Farmers Welfare

https://www.pib.gov.in/PressReleasePage.aspx?PRID=2155528&reg=3&lang=2

https://www.pib.gov.in/PressReleasePage.aspx?PRID=2112407&reg=3&lang=2
https://www.pib.gov.in/PressReleasePage.aspx?PRID=2246181&reg=3&lang=2

https://www.pib.gov.in/PressReleasePage.aspx?PRID=2241414&reg=3&lang=2

https://agriwelfare.gov.in/Documents/AR_Eng_2024_25.pdf

https://www.pib.gov.in/PressNoteDetails.aspx?NoteId=154999&ModuleId=3&reg=3&lang=2

https://sansad.in/getFile/annex/268/AU2274_YtUhNS.pdf?source=pqars

Cabinet

https://www.pib.gov.in/PressReleasePage.aspx?PRID=2055990&reg=3&lang=2

Ministry of Finance

www.indiabudget.gov.in/doc/eb/sbe1.pdf

Click here to see pdf.

 

*****

(Explainer ID: 159707) आगंतुक पटल : 11
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Malayalam