• Sitemap
  • Advance Search
Social Welfare

ಅಂಕಿಅಂಶಗಳನ್ನು ಮೀರಿದ ನೋಟ: ಭಾರತದ ಶಾಲಾ ಶಿಕ್ಷಣದ ಪ್ರಗತಿಯ ವಿಶ್ಲೇಷಣೆ

ಯುಡಿಐಎಸ್‌ಇ2025–26 ವರದಿ (ಎನ್‌ಇಪಿ ರಚನೆ)

Posted On: 17 AUG 2026 3:05PM

 

ಯುಡಿಐಎಸ್‌ಇವರದಿ 2025–26 ಭಾರತದ ಶಾಲಾ ಶಿಕ್ಷಣದ ಸಮಗ್ರ ಮೌಲ್ಯಮಾಪನವನ್ನು ಪ್ರಸ್ತುತಪಡಿಸುತ್ತದೆ. ಇದು 14.67 ಲಕ್ಷ ಶಾಲೆಗಳು, 1.03 ಕೋಟಿ ಶಿಕ್ಷಕರು ಮತ್ತು 24.72 ಕೋಟಿ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಇದು ನೋಂದಣಿ, ಒಟ್ಟು ನೋಂದಣಿ ಪ್ರಮಾಣ (ಜಿಇಆರ್‌), ಶಿಕ್ಷಕರ ಲಭ್ಯತೆ, ವಿದ್ಯಾರ್ಥಿ-ಶಿಕ್ಷಕರ ಅನುಪಾತ, ಉಳಿಸಿಕೊಳ್ಳುವಿಕೆ ಮತ್ತು ಪರಿವರ್ತನೆಯ ದರಗಳಲ್ಲಿನ ಸುಧಾರಣೆಗಳ ಜೊತೆಗೆ ಶಾಲೆಯಿಂದ ಹೊರಗುಳಿಯುವ (ಡ್ರಾಪ್‌ಔಟ್) ದರಗಳ ಇಳಿಕೆಯನ್ನು ಎತ್ತಿ ತೋರಿಸುತ್ತದೆ. ಈ ವರದಿಯು ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯಗಳಲ್ಲಿನ ಪ್ರಗತಿ, ಮಹಿಳಾ ಶಿಕ್ಷಕರ ಹೆಚ್ಚಿನ ಭಾಗವಹಿಸುವಿಕೆ, ಹಾಗೂ ಲಿಂಗ ಸಮಾನತೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸುಲಭವಾಗಿ ಸಿಗುವ ಶಿಕ್ಷಣದಲ್ಲಿನ ನಿರಂತರ ಪ್ರಗತಿಯನ್ನು ದಾಖಲಿಸುತ್ತದೆ. ಇದು NEP 2020 ರ ಅಡಿಯಲ್ಲಿ ಆಧಾರಸಹಿತ ಯೋಜನೆಯನ್ನು ಬಲಪಡಿಸುತ್ತದೆ.

ಶಿಕ್ಷಣದಲ್ಲಿ ದತ್ತಾಂಶ-ಆಧಾರಿತ ಆಡಳಿತ: ಯುಡಿಐಎಸ್‌ಇನಿಂದ ಪ್ರಮುಖ ಒಳನೋಟಗಳು

ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ ಪ್ಲಸ್ (ಯುಡಿಐಎಸ್‌ಇ) ಎಂಬುದು ಭಾರತದಾದ್ಯಂತ ಶಾಲಾ ಶಿಕ್ಷಣದ ಸಮಗ್ರ ದತ್ತಾಂಶವನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಅಭಿವೃದ್ಧಿಪಡಿಸಲಾದ ಒಂದು ಡಿಜಿಟಲ್ ವೇದಿಕೆಯಾಗಿದೆ. 2018–19ರಲ್ಲಿ ಪ್ರಾರಂಭವಾದಾಗಿನಿಂದ, ಯುಡಿಐಎಸ್‌ಇಸಾಕ್ಷ್ಯಾಧಾರಿತ ಯೋಜನೆ, ನೀತಿ ನಿರೂಪಣೆ ಮತ್ತು ಶೈಕ್ಷಣಿಕ ಪ್ರಗತಿಯ ಮೇಲ್ವಿಚಾರಣೆಯನ್ನು ಸುಗಮಗೊಳಿಸಿದೆ. ಇದು ಸಾರ್ವತ್ರಿಕ ಪ್ರವೇಶ, ಸಮಾನತೆ, ಗುಣಮಟ್ಟದ ಕಲಿಕೆ ಮತ್ತು ಸುಧಾರಿತ ವಿದ್ಯಾರ್ಥಿ ಉಳಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಯತ್ನಿಸುವ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಪ್ರಮುಖ ದತ್ತಾಂಶ ಸಂಗ್ರಹಾಗಾರವಾಗಿಯೂ ಕಾರ್ಯನಿರ್ವಹಿಸುತ್ತದೆ.

ಶಾಲಾ ಶಿಕ್ಷಣದ ಪರಿಚಿತ್ರ

ಯುಡಿಐಎಸ್‌ಇ2025–26 ರ ವರದಿಯು ಭಾರತೀಯ ಶಾಲಾ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಯನ್ನು ಪ್ರತಿಬಿಂಬಿಸುತ್ತದೆ. ಇದು ಸುಮಾರು 14.67 ಲಕ್ಷ ಶಾಲೆಗಳು, 1.03 ಕೋಟಿ ಶಿಕ್ಷಕರು ಮತ್ತು 24.72 ಕೋಟಿಗೂ ಹೆಚ್ಚು ನೋಂದಾಯಿತ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಈ ಸುಸ್ಥಿರ ನೋಂದಣಿ ಮತ್ತು ಶಿಕ್ಷಕರ ಸುಧಾರಿತ ಲಭ್ಯತೆಯು ಪ್ರತಿ ಶಾಲೆಗೆ ಸರಾಸರಿ ಏಳು ಶಿಕ್ಷಕರು ಮತ್ತು 169 ವಿದ್ಯಾರ್ಥಿಗಳಿಗೆ ಕಾರಣವಾಗಿದೆ. ಪರಿಣಾಮವಾಗಿ, ಈ ವ್ಯವಸ್ಥೆಯು ಒಟ್ಟಾರೆ 24:1 ರ ಅತ್ಯಂತ ಅನುಕೂಲಕರ ವಿದ್ಯಾರ್ಥಿ–ಶಿಕ್ಷಕ ಅನುಪಾತವನ್ನು ಕಾಯ್ದುಕೊಂಡಿದೆ, ಇದು ಎನ್‌ಇಪಿ 2020 ಶಿಫಾರಸು ಮಾಡಿದ 30:1 ರ ಮಿತಿಯೊಳಗೆ ನಿರಾತಂಕವಾಗಿ ಸ್ಥಾನ ಪಡೆದಿದೆ.

ಸಾಕಲ್ಯ ದಾಖಲಾತಿ ಅನುಪಾತ: ಶಾಲಾ ಶಿಕ್ಷಣಕ್ಕೆ ಪ್ರವೇಶವನ್ನು ವಿಸ್ತರಿಸುವುದು

ದ್ವಿತೀಯ (ಸೆಕೆಂಡರಿ) ಹಂತದಲ್ಲಿ ಸಾಕಲ್ಯ ದಾಖಲಾತಿ ಅನುಪಾತವು (ಜಿಇಆರ್‌) 71.7%ಕ್ಕೆ ಸುಧಾರಿಸಿದೆ, ಆದರೆ ಮಧ್ಯಮ (ಮಿಡಲ್) ಹಂತದ ಜಿಇಆರ್‌ ನಿರಂತರವಾಗಿ 89.6% ನಷ್ಟು ಹೆಚ್ಚಾಗಿದೆ. ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲೂ ದಾಖಲಾತಿಯು ಉತ್ತಮವಾಗಿ ಹಂಚಿಕೆಯಾಗಿದ್ದು, ಒಟ್ಟು ದಾಖಲಾತಿಯಲ್ಲಿ ದ್ವಿತೀಯ ಹಂತವು 27.16%, ನಂತರದ ಸ್ಥಾನಗಳಲ್ಲಿ ಸಿದ್ಧತಾ (ಪ್ರಿಪರೇಟರಿ) ಹಂತ (25.60%), ಮಧ್ಯಮ ಹಂತ (25.58%), ಮತ್ತು ಮೂಲಭೂತ (ಫೌಂಡೇಶನಲ್) ಹಂತ (21.66%) ಇವೆ. ಒಟ್ಟಾರೆಯಾಗಿ, ಈ ಸಮತೋಲಿತ ಹಂಚಿಕೆ ಮತ್ತು ದ್ವಿತೀಯ ಹಂತದ ಹೆಚ್ಚುತ್ತಿರುವ ಜಿಇಆರ್‌, ಭಾರತವು ಶಿಕ್ಷಣದ ಲಭ್ಯತೆಯನ್ನು ವಿಸ್ತರಿಸುವಲ್ಲಿ ಹಾಗೂ ಶಾಲಾ ಶಿಕ್ಷಣದ ಉದ್ದಕ್ಕೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಕಾಯ್ದುಕೊಳ್ಳುವಲ್ಲಿ ಸಾಧಿಸುತ್ತಿರುವ ನಿರಂತರ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.

ಅನುಕೂಲಕರ ವಿದ್ಯಾರ್ಥಿ-ಶಿಕ್ಷಕರ ಅನುಪಾತ: ಕಲಿಕಾ ಫಲಿತಾಂಶಗಳ ಸುಧಾರಣೆ

2025–26 ರಲ್ಲಿ, ಶಾಲಾ ಶಿಕ್ಷಣದ ಎಲ್ಲಾ ಹಂತಗಳ ವಿದ್ಯಾರ್ಥಿ-ಶಿಕ್ಷಕರ ಅನುಪಾತವು ಶಿಕ್ಷಕರ ಲಭ್ಯತೆಯಲ್ಲಿನ ನಿರಂತರ ಸುಧಾರಣೆಯನ್ನು ಪ್ರತಿಬಿಂಬಿಸಿದೆ. ಹಂತವಾರು ಪಿಟಿಆರ್‌ ಮೂಲಭೂತ (ಫೌಂಡೇಶನಲ್) ಹಂತದಲ್ಲಿ 10:1, ಸಿದ್ಧತಾ (ಪ್ರಿಪರೇಟರಿ) ಹಂತದಲ್ಲಿ 12:1, ಮಧ್ಯಮ (ಮಿಡಲ್) ಹಂತದಲ್ಲಿ 17:1, ಮತ್ತು ದ್ವಿತೀಯ (ಸೆಕೆಂಡರಿ) ಹಂತದಲ್ಲಿ 21:1 ರಷ್ಟಿದೆ.

ಈ ಅತ್ಯಂತ ಅನುಕೂಲಕರ ಅನುಪಾತಗಳು ವೈಯಕ್ತಿಕ ಗಮನವನ್ನು ನೀಡಲು ಸಹಾಯ ಮಾಡುತ್ತವೆ, ತರಗತಿಯಲ್ಲಿ ಪರಿಣಾಮಕಾರಿ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುತ್ತವೆ ಮತ್ತು ಕಲಿಕಾ ಫಲಿತಾಂಶಗಳನ್ನು ಸುಧಾರಿಸಲು ಸೂಕ್ತ ವಾತಾವರಣವನ್ನು ನಿರ್ಮಿಸುತ್ತವೆ.

ವಿದ್ಯಾರ್ಥಿ–ಶಿಕ್ಷಕರ ಅನುಪಾತ (ಪಿಟಿಆರ್‌)

ವಿದ್ಯಾರ್ಥಿ–ಶಿಕ್ಷಕರ ಅನುಪಾತವು (ಪಿಟಿಆರ್‌) ಶಿಕ್ಷಣದ ನಿರ್ದಿಷ್ಟ ಹಂತದಲ್ಲಿ ಪ್ರತಿ ಶಿಕ್ಷಕರಿಗೆ ಇರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಅಳೆಯುತ್ತದೆ. ಉದಾಹರಣೆಗೆ, 10:1 ರ ಪಿಟಿಆರ್‌ ಎಂದರೆ, ಸರಾಸರಿಯಾಗಿ ನಿರ್ದಿಷ್ಟ ಹಂತದಲ್ಲಿ 10 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು ಲಭ್ಯವಿದ್ದಾರೆ ಎಂದರ್ಥ. ಕಡಿಮೆ ಪಿಟಿಆರ್‌ ಶಿಕ್ಷಕರಿಗೆ ಹೆಚ್ಚಿನ ವೈಯಕ್ತಿಕ ಗಮನ ನೀಡಲು, ಬಲವಾದ ಶಿಕ್ಷಕ–ವಿದ್ಯಾರ್ಥಿ ಸಂವಹನವನ್ನು ಬೆಳೆಸಲು ಮತ್ತು ಬೋಧನೆ ಹಾಗೂ ಕಲಿಕೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸುಧಾರಿತ ವಿದ್ಯಾರ್ಥಿ ಉಳಿಸಿಕೊಳ್ಳುವಿಕೆ ಮತ್ತು ಕಡಿಮೆ ಶಾಲಾ ತ್ಯಾಗದ (ಡ್ರಾಪ್ಔಟ್) ಪ್ರಮಾಣ

ಯುಡಿಐಎಸ್‌ಇ2025–26 ರ ವರದಿಯು ಭಾರತೀಯ ಶಾಲಾ ವ್ಯವಸ್ಥೆಯಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವಲ್ಲಿನ ನಿರಂತರ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಶಾಲೆಯಿಂದ ಹೊರಗುಳಿಯುವ (ಡ್ರಾಪ್‌ಔಟ್) ಪ್ರಮಾಣವು ಸಿದ್ಧತಾ (ಪ್ರಿಪರೇಟರಿ) ಹಂತದಲ್ಲಿ 1.8% ಕ್ಕೆ ಮತ್ತು ದ್ವಿತೀಯ (ಸೆಕೆಂಡರಿ) ಹಂತದಲ್ಲಿ 7.0% ಕ್ಕೆ ಗಮನಾರ್ಹವಾಗಿ ಕಡಿಮೆಯಾಗಿದೆ. ಮಧ್ಯಮ (ಮಿಡಲ್) ಹಂತದಲ್ಲಿ ಇದು 3.6% ಕ್ಕೆ ಸಲ್ಪಮಟ್ಟಿಗೆ ಹೆಚ್ಚಾಗಿದ್ದರೂ, ಮೂರೂ ಹಂತಗಳ ಡ್ರಾಪ್‌ಔಟ್ ಪ್ರಮಾಣವು 2022–23 ಕ್ಕೆ ಹೋಲಿಸಿದರೆ ಸಾಕಷ್ಟು ಕಡಿಮೆಯಾಗಿದೆ.

ಈ ಧನಾತ್ಮಕ ಪ್ರವೃತ್ತಿಯು ಬಲವಾದ ವಿದ್ಯಾರ್ಥಿ ಉಳಿಸಿಕೊಳ್ಳುವಿಕೆಯ ದರಗಳಲ್ಲಿ ಪ್ರತಿಫಲಿಸುತ್ತದೆ, ಇದು 98.5% (ಮೂಲಭೂತ), 91.1% (ಸಿದ್ಧತಾ), 83.7% (ಮಧ್ಯಮ), ಮತ್ತು 51.9% (ದ್ವಿತೀಯ) ರಷ್ಟಿದೆ. ಇದಲ್ಲದೆ, ಸತತ ಹಂತಗಳ ನಡುವಿನ ಪರಿವರ್ತನೆ ದರಗಳು ಬಲವಾಗಿ ಉಳಿದಿವೆ—99.2% ವಿದ್ಯಾರ್ಥಿಗಳು ಮೂಲಭೂತ ಹಂತದಿಂದ ಸಿದ್ಧತಾ ಹಂತಕ್ಕೆ, 93.8% ವಿದ್ಯಾರ್ಥಿಗಳು ಮಧ್ಯಮ ಹಂತಕ್ಕೆ ಮತ್ತು 88.3% ವಿದ್ಯಾರ್ಥಿಗಳು ದ್ವಿತೀಯ ಹಂತಕ್ಕೆ ಮುನ್ನಡೆಯುತ್ತಿದ್ದಾರೆ. ಒಟ್ಟಾರೆಯಾಗಿ, ಈ ಮಾಪನಗಳು ಶೈಕ್ಷಣಿಕ ಲಭ್ಯತೆ ಮತ್ತು ವಿದ್ಯಾರ್ಥಿಗಳ ಪ್ರಗತಿಯಲ್ಲಿನ ಸ್ಪಷ್ಟ ಹಾಗೂ ಸುಧಾರಿತ ನಿರಂತರತೆಯನ್ನು ಉಲ್ಲೇಖಿಸುತ್ತದೆ.

ಏಕ-ಶಿಕ್ಷಕರ ಮತ್ತು ಶೂನ್ಯ-ದಾಖಲಾತಿ ಶಾಲೆಗಳ ಸಂಖ್ಯೆಯಲ್ಲಿ ಇಳಿಕೆ

2025–26 ರಲ್ಲಿ, ಏಕ-ಶಿಕ್ಷಕರೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶಾಲೆಗಳ ಸಂಖ್ಯೆಯು ಸುಮಾರು 3% ರಷ್ಟು ಕಡಿಮೆಯಾಗಿ 1,00,843 ಕ್ಕೆ ತಲುಪಿದೆ, ಆದರೆ ಶೂನ್ಯ-ದಾಖಲಾತಿ ಶಾಲೆಗಳು ಹಿಂದಿನ ವರ್ಷಕ್ಕೆ (2024-25) ಹೋಲಿಸಿದರೆ 29% ರಷ್ಟು ಗಮನಾರ್ಹ ಇಳಿಕೆಯನ್ನು ಕಂಡು 5,663 ಕ್ಕೆ ಕುಸಿದಿವೆ. ಈ ಸುಧಾರಣೆಗಳು ಶಿಕ್ಷಕರ ಹಂಚಿಕೆಯನ್ನು ವೈಚಾರಿಕಗೊಳಿಸಲು, ನಿಯೋಜನೆಯನ್ನು ಅತ್ಯುತ್ತಮಗೊಳಿಸಲು ಮತ್ತು ದೇಶದಾದ್ಯಂತ ವಿದ್ಯಾರ್ಥಿಗಳ ಅಗತ್ಯತೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜೋಡಿಸಲು ಕೈಗೊಳ್ಳಲಾಗುತ್ತಿರುವ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತವೆ.

ಲಿಂಗತ್ವ ಮತ್ತು ಸಾಮಾಜಿಕ ಒಳಗೊಳ್ಳುವಿಕೆ

ಯುಡಿಐಎಸ್‌ಇ2025–26 ರ ವರದಿಯು ಹೆಚ್ಚು ಒಳಗೊಳ್ಳುವ ಶಾಲಾ ಶಿಕ್ಷಣ ವ್ಯವಸ್ಥೆಯತ್ತ ನಿರಂತರ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ಒಟ್ಟು ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಹೆಣ್ಣುಮಕ್ಕಳು 48.4% ರಷ್ಟಿದ್ದು, ಶಾಲೆಗಳಲ್ಲಿ ಸಮತೋಲಿತ ಲಿಂಗ ಹಂಚಿಕೆಯನ್ನು ಸೂಚಿಸುತ್ತಾರೆ. ಬೋಧನಾ ಪಡೆಯಲ್ಲೂ ಮಹಿಳೆಯರು ಗಮನಾರ್ಹ ಪಾತ್ರವನ್ನು ವಹಿಸುವುದನ್ನು ಮುಂದುವರಿಸಿದ್ದು, ಒಟ್ಟು ಶಿಕ್ಷಕರಲ್ಲಿ 54.9% ರಷ್ಟಿದ್ದಾರೆ.

ಶಾಲಾ ದಾಖಲಾತಿಯ ಸಾಮಾಜಿಕ ರಚನೆಯು ವ್ಯಾಪಕವಾಗಿದ್ದು, ಎಲ್ಲಾ ವರ್ಗಗಳನ್ನು ಪ್ರತಿನಿಧಿಸುವಂತಿದೆ. ಒಟ್ಟು ದಾಖಲಾತಿಯಲ್ಲಿ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು 44.9% ನಷ್ಟು ದೊಡ್ಡ ಪಾಲನ್ನು ಹೊಂದಿದ್ದಾರೆ, ನಂತರದ ಸ್ಥಾನಗಳಲ್ಲಿ ಸಾಮಾನ್ಯ ವರ್ಗ (27.5%), ಪರಿಶಿಷ್ಟ ಜಾತಿ (17.7%), ಮತ್ತು ಪರಿಶಿಷ್ಟ ಪಂಗಡ (10%) ಇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಒಟ್ಟಾಗಿ ಒಟ್ಟು ದಾಖಲಾತಿಯ 27.7% ನಷ್ಟಿದ್ದು, ಶಾಲಾ ಶಿಕ್ಷಣಕ್ಕೆ ಸಮಾನ ಪ್ರವೇಶವನ್ನು ಉತ್ತೇಜಿಸುವ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತಾರೆ. ಒಳಗೊಳ್ಳುವಿಕೆಯ ಮೇಲಿನ ಈ ಬದ್ಧತೆಯು ವಿಶೇಷ ಅಗತ್ಯವುಳ್ಳ ಮಕ್ಕಳಿಗೂ (CWSN) ವಿಸ್ತರಿಸಿದ್ದು, ಈ ಜನಸಂಖ್ಯಾಶಾಸ್ತ್ರದಲ್ಲಿ 57.16% ಹುಡುಗರು ಮತ್ತು 42.84% ಹುಡುಗಿಯರು ಇದ್ದಾರೆ. ಒಟ್ಟಾರೆಯಾಗಿ, ಈ ದತ್ತಾಂಶವು ಸುಲಭವಾಗಿ ಸಿಗುವ ಮೂಲಸೌಕರ್ಯ, ವಿಶಿಷ್ಟ ಬೆಂಬಲ ಸೇವೆಗಳು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಕಲಿಕಾ ಅವಕಾಶಗಳ ಮೂಲಕ ಒಳಗೊಳ್ಳುವ ಶಿಕ್ಷಣವನ್ನು ಮುನ್ನಡೆಸಲು ಭಾರತಕ್ಕಿರುವ ಸಮರ್ಪಣಾಭಾವವನ್ನು ಎತ್ತಿ ತೋರಿಸುತ್ತದೆ.

ಮೂಲಸೌಕರ್ಯ ಅಭಿವೃದ್ಧಿ

ಯುಡಿಐಎಸ್‌ಇ2025–26 ರ ವರದಿಯು ಬೋಧನೆ ಮತ್ತು ಕಲಿಕೆಗೆ ಹೆಚ್ಚು ಸೂಕ್ತವಾದ ವಾತಾವರಣವನ್ನು ನಿರ್ಮಿಸಲು ಶಾಲಾ ಮೂಲಸೌಕರ್ಯಗಳನ್ನು ಆಧುನೀಕರಿಸುವಲ್ಲಿ ಸಾಧಿಸಿದ ಗಮನಾರ್ಹ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಡಿಜಿಟಲ್ ರಂಗದಲ್ಲಿ, ಕಂಪ್ಯೂಟರ್ ಸೌಲಭ್ಯ ಹೊಂದಿರುವ ಶಾಲೆಗಳ ಪ್ರಮಾಣವು 69.9% ಕ್ಕೆ ಏರಿದೆ ಮತ್ತು ಇಂಟರ್ನೆಟ್ ಸಂಪರ್ಕವು 67.4% ಕ್ಕೆ ಹೆಚ್ಚಾಗಿದ್ದು, ತಂತ್ರಜ್ಞಾನ-ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳನ್ನು ವಿಸ್ತರಿಸಿದೆ.

ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳಲ್ಲೂ ನಿರಂತರ ಸುಧಾರಣೆ ಕಂಡುಬಂದಿದ್ದು, ಕೆಳಗಿನ ಸೌಲಭ್ಯಗಳು ಲಭ್ಯವಿವೆ:

  • ವಿದ್ಯುತ್: 95% ಶಾಲೆಗಳಲ್ಲಿ
  • ಸುರಕ್ಷಿತ ಕುಡಿಯುವ ನೀರು: 99.5% ಶಾಲೆಗಳಲ್ಲಿ
  • ಹೆಣ್ಣುಮಕ್ಕಳ ಶೌಚಾಲಯ: 98.5% ಶಾಲೆಗಳಲ್ಲಿ
  • ಗಂಡುಮಕ್ಕಳ ಶೌಚಾಲಯ: 97.2% ಶಾಲೆಗಳಲ್ಲಿ
  • ಕೈ ತೊಳೆಯುವ ಸೌಲಭ್ಯಗಳು: 96.9% ಶಾಲೆಗಳಲ್ಲಿ
  • ಗ್ರಂಥಾಲಯಗಳು: 90.5% ಶಾಲೆಗಳಲ್ಲಿ
  • ಮಳೆನೀರು ಕೊಯ್ಲು: 29.9% ಶಾಲೆಗಳಲ್ಲಿ
  • ಹಿಡಿಕೆಯುಳ್ಳ (ಹ್ಯಾಂಡ್ರೈಲ್) ರ್ಯಾಂಪ್ಗಳು: 58.2% ಶಾಲೆಗಳಲ್ಲಿ

 

ಒಟ್ಟಾರೆಯಾಗಿ, ಈ ಡಿಜಿಟಲ್ ಮತ್ತು ಭೌತಿಕ ಸೌಲಭ್ಯಗಳ ವಿಸ್ತರಣೆಯು ಭಾರತದ ಶೈಕ್ಷಣಿಕ ಪರಿಚಿತ್ರದ ಲಭ್ಯತೆ, ಒಳಗೊಳ್ಳುವಿಕೆ ಮತ್ತು ಒಟ್ಟಾರೆ ಗುಣಮಟ್ಟವನ್ನು ಸುಧಾರಿಸುವ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಪ್ರಗತಿಯನ್ನು ವಿಶ್ಲೇಷಿಸುವುದು: ಯುಡಿಐಎಸ್‌ಇ2025–26 ಪ್ರಮುಖ ಅಂಶಗಳು

ಯುಡಿಐಎಸ್‌ಇ2025–26 ರ ವರದಿಯು ಸುಧಾರಿತ ಲಭ್ಯತೆ, ಸಮಾನತೆ, ಗುಣಮಟ್ಟ ಮತ್ತು ಮೂಲಸೌಕರ್ಯಗಳ ಮೂಲಕ ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವಲ್ಲಿನ ನಿರಂತರ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ಹೊಸ ವರದಿಯು ಶಿಕ್ಷಕರ ಲಭ್ಯತೆ, ಅನುಕೂಲಕರ ವಿದ್ಯಾರ್ಥಿ-ಶಿಕ್ಷಕರ ಅನುಪಾತ, ವಿದ್ಯಾರ್ಥಿ ಉಳಿಸಿಕೊಳ್ಳುವಿಕೆ ಮತ್ತು ಪರಿವರ್ತನೆ, ಲಿಂಗ ಸಮಾನತೆ, ಸಾಮಾಜಿಕ ಒಳಗೊಳ್ಳುವಿಕೆ, ಡಿಜಿಟಲ್ ಸಿದ್ಧತೆ ಮತ್ತು ಶಾಲಾ ಮೂಲಸೌಕರ್ಯಗಳಲ್ಲಿನ ಪ್ರಮುಖ ಸುಧಾರಣೆಗಳನ್ನು ಎತ್ತಿ ತೋರಿಸುತ್ತದೆ. ಇದು ದೇಶಾದ್ಯಂತ ಶೈಕ್ಷಣಿಕ ಫಲಿತಾಂಶಗಳನ್ನು ಸುಧಾರಿಸಲು ಕೈಗೊಳ್ಳಲಾಗುತ್ತಿರುವ ನಿರಂತರ ಪ್ರಯತ್ನಗಳನ್ನು ಬಲಪಡಿಸುತ್ತದೆ.

ಸಮಗ್ರ ರಾಷ್ಟ್ರೀಯ ದತ್ತಾಂಶ ಸಂಗ್ರಹಾಗಾರವಾಗಿ, ಯುಡಿಐಎಸ್‌ಇಸಾಕ್ಷ್ಯಾಧಾರಿತ ಯೋಜನೆ, ಮಾಹಿತಿ-ಆಧಾರಿತ ನೀತಿ ನಿರೂಪಣೆ ಮತ್ತು ಶಾಲಾ ಶಿಕ್ಷಣ ಕ್ಷೇತ್ರದ ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಸುಗಮಗೊಳಿಸುವುದನ್ನು ಮುಂದುವರಿಸಿದೆ. ಇದರ ನಿಷಕರ್ಷಗಳು ಸಮಾನ, ಒಳಗೊಳ್ಳುವ, ತಂತ್ರಜ್ಞಾನ-ಆಧಾರಿತ ಮತ್ತು ಕಲಿಯುವವರನ್ನು ಕೇಂದ್ರವಾಗಿರಿಸಿಕೊಂಡ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವ ಎನ್‌ಇಪಿ 2020ರ ಪರಿಕಲ್ಪನೆಯತ್ತ ಸಾಗುತ್ತಿರುವ ಸ್ಥಿರ ಪ್ರಗತಿಯನ್ನು ಪುನರುಚ್ಚರಿಸುತ್ತವೆ.

 

References:

Ministry of Education

https://udiseplus.gov.in/#/en/page/publications https://www.pib.gov.in/PressReleasePage.aspx?PRID=2282141&reg=48&lang=1

https://dashboard.udiseplus.gov.in/

Click here to see PDF

 

*****

(Explainer ID: 159580) आगंतुक पटल : 17
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Assamese , Telugu , Malayalam