• Sitemap
  • Advance Search
Infrastructure

ಭಾರತದಲ್ಲಿ ಹಡಗು ಮರುಬಳಕೆ: ನಿಯಂತ್ರಕ ರೂಪಾಂತರ ಮತ್ತು ಜಾಗತಿಕ ನಾಯಕತ್ವ

Posted On: 11 AUG 2026 1:41PM

ಭಾರತದ ಹಡಗು ಮರುಬಳಕೆ ವಲಯವು ಆಧುನಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಂದಿಕೊಂಡಿರುವ ಉದ್ಯಮವಾಗಿ ವಿಕಸನಗೊಂಡಿದೆ. 2025ರಲ್ಲಿ, ಭಾರತವು ವಿಶ್ವದ ಪ್ರಮುಖ ಹಡಗು ಮರುಬಳಕೆ ರಾಷ್ಟ್ರವಾಯಿತು. ಇದರ ಜಾಗತಿಕ ಮಾರುಕಟ್ಟೆ ಪಾಲು 2024ರಲ್ಲಿ ಶೇಕಡಾ 30.1 ರಿಂದ 2025ರಲ್ಲಿ ಶೇಕಡಾ 35.4ಕ್ಕೆ ಏರಿದೆ. ಹಡಗು ಮರುಬಳಕೆಯ ಪ್ರಮಾಣವು 1.86 ಮಿಲಿಯನ್ ಗ್ರಾಸ್‌ ಟನ್‌ಗಳಿಂದ 2.99 ಮಿಲಿಯನ್ ಗ್ರಾಸ್‌ ಟನ್‌ಗಳಿಗೆ ಹೆಚ್ಚಾಗಿದೆ. ಇದು ಮರುಬಳಕೆ ಪ್ರಮಾಣದಲ್ಲಿ ಸುಮಾರು ಶೇಕಡಾ 60 ರಷ್ಟು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಅಲಂಗ್-ಸೋಸಿಯಾ ಕ್ಲಸ್ಟರ್ ಭಾರತದ ಮರುಬಳಕೆ ಸಾಮರ್ಥ್ಯದ ಬೆನ್ನೆಲುಬಾಗಿ ಮುಂದುವರೆದಿದೆ. ಸಮಗ್ರ ಶಾಸನ, ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಸಮಾವೇಶದೊಂದಿಗಿನ ಜೋಡಣೆ ಮತ್ತು ಯಾರ್ಡ್ ಆಧುನೀಕರಣವು ಸುರಕ್ಷತೆ, ಅನುಸರಣೆ ಮತ್ತು ಸ್ಪರ್ಧಾತ್ಮಕತೆಯನ್ನು ಬಲಪಡಿಸಿವೆ.

ವಿಕಸನಗೊಳ್ಳುತ್ತಿರುವ ಕಡಲ ಕೈಗಾರಿಕಾ ಭೂದೃಶ್ಯ

ಬಲವಾದ ಕಡಲ ಪರಿಸರ ವ್ಯವಸ್ಥೆಯು ಹಡಗು ನಿರ್ಮಾಣ ಮತ್ತು ಬಂದರು ಕಾರ್ಯಾಚರಣೆಗಳಿಗಿಂತಾ ಆಚೆಗೂ ವಿಸ್ತರಿಸಿದೆ. ಇದು ತಮ್ಮ ಸೇವಾ ಅವಧಿಯ ಕೊನೆಯಲ್ಲಿರುವ ಹಡಗುಗಳ ಜವಾಬ್ದಾರಿಯುತ ನಿರ್ವಹಣೆಯನ್ನೂ ಬಯಸುತ್ತದೆ. ಹಡಗು ಮರುಬಳಕೆಯು ಕಡಲ ಜೀವಿತಾವಧಿಯ ಒಂದು ಅಭಿಭಾಜ್ಯ ಅಂಗವಾಗಿದೆ. ಇದು ಕಾರ್ಯಾಚರಣೆಯ ಜೀವಿತಾವಧಿಯ ಕೊನೆಯಲ್ಲಿ ಹಡಗುಗಳನ್ನು ಸುರಕ್ಷಿತವಾಗಿ, ಪರಿಸರ ಸ್ನೇಹಿಯಾಗಿ ಮತ್ತು ಸಂಪನ್ಮೂಲ-ಸಮರ್ಥವಾಗಿ ವಿಘಟಿಸಲು ಅನುವು ಮಾಡಿಕೊಡುತ್ತದೆ. ಬಲವಾದ ನಿಯಂತ್ರಕ ಚೌಕಟ್ಟಿನಡಿಯಲ್ಲಿ ಇದನ್ನು ಕೈಗೊಂಡಾಗ, ಉಕ್ಕು ಮತ್ತು ಇತರ ಮರುಬಳಕೆ ಮಾಡಬಹುದಾದ ವಸ್ತುಗಳ ಚೇತರಿಕೆಯ ಮೂಲಕ ವೃತ್ತಾಕಾರದ ಆರ್ಥಿಕತೆಯ ಉದ್ದೇಶಗಳನ್ನು ಇದು ಬೆಂಬಲಿಸುತ್ತದೆ. ಇದು ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ಜೊತೆಗೆ ಪರಿಸರವನ್ನು ರಕ್ಷಿಸುತ್ತದೆ.

ಬಲವಾದ ಕಾನೂನುಗಳು ಮತ್ತು ವರ್ಧಿತ ಸಾಂಸ್ಥಿಕ ಮೇಲ್ವಿಚಾರಣೆಯು ಸಾಂಪ್ರದಾಯಿಕ ವಿಘಟನಾ ಪದ್ಧತಿಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಂದಿಕೊಂಡಿರುವ ಉದ್ಯಮಕ್ಕೆ ಪರಿವರ್ತನೆಗೊಳ್ಳಲು ಕಾರಣವಾಗಿವೆ. ಅನುಸರಣೆ, ಸಮರ್ಥನೀಯತೆ ಮತ್ತು ಕಾರ್ಮಿಕರ ಸುರಕ್ಷತೆ ಈಗ ಅದರ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿವೆ. ಈ ಸುಧಾರಣೆಗಳು ಭಾರತದ ಜಾಗತಿಕ ಸ್ಥಾನವನ್ನು ಬಲಪಡಿಸಿವೆ. ಇಂದು, ಭಾರತವು ಪರಿಸರ ಸ್ನೇಹಿ ಹಡಗು ಮರುಬಳಕೆಗಾಗಿ ಪ್ರಮುಖ ಗಮ್ಯಸ್ಥಾನವಾಗಿ ಹೊರಹೊಮ್ಮಿದೆ.

ಹಡಗು ಮರುಬಳಕೆ ಯಾಕೆ ಮುಖ್ಯ?

ಭಾರತದ ಸಂಪನ್ಮೂಲ ಭದ್ರತೆ, ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆಗೆ ಹಡಗು ಮರುಬಳಕೆಯು ಕಾರ್ಯತಂತ್ರವಾಗಿ ಪ್ರಮುಖವಾಗಿದೆ.

ಪರಿಸರ ಮಹತ್ವ

  • ನಿಯಂತ್ರಿತ ಹಡಗು ಮರುಬಳಕೆಯು ಅವಧಿ ಮುಗಿದ ಹಡಗುಗಳ ಅಸುರಕ್ಷಿತ ವಿಲೇವಾರಿಯನ್ನು ತಡೆಯುತ್ತದೆ. ಇದು ಸಮುದ್ರ ಮತ್ತು ಕರಾವಳಿ ಮಾಲಿನ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಸರಿಯಾದ ಮರುಬಳಕೆ ಪದ್ಧತಿಗಳು ಕಟ್ಟುನಿಟ್ಟಾದ ನಿಯಂತ್ರಕ ಮೇಲ್ವಿಚಾರಣೆಯ ಅಡಿಯಲ್ಲಿ ಅಪಾಯಕಾರಿ ವಸ್ತುಗಳ ಸುರಕ್ಷಿತ ನಿರ್ವಹಣೆಯನ್ನು ಖಚಿತಪಡಿಸುತ್ತವೆ.

ಸಂಪನ್ಮೂಲ ಮಹತ್ವ

  • ಹಡಗು ಮರುಬಳಕೆಯು ದೇಶೀಯ ಉಕ್ಕಿನ ಉದ್ಯಮಕ್ಕೆ ಕಬ್ಬಿಣದ ಗುಜರಿಯ ಪ್ರಮುಖ ಮೂಲವನ್ನು ಒದಗಿಸುತ್ತದೆ. ಇದು ಆಮದು ಮಾಡಿಕೊಂಡ ಕಚ್ಚಾ ವಸ್ತುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಪೂರೈಕೆ ಭದ್ರತೆಯನ್ನು ಬಲಪಡಿಸುತ್ತದೆ.
  • ಉಕ್ಕಿನ ಚೇತರಿಕೆ ಮತ್ತು ಮರುಬಳಕೆಯು ಸಂಪನ್ಮೂಲಗಳ ಸಮರ್ಥ ಬಳಕೆಯನ್ನು ಬೆಂಬಲಿಸುತ್ತದೆ ಮತ್ತು ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ.
  • ಪ್ರಾಥಮಿಕ ಉಕ್ಕಿನ ಉತ್ಪಾದನೆಗಿಂತ ಮರುಬಳಕೆಯ ಉಕ್ಕಿಗೆ ಗಣನೀಯವಾಗಿ ಕಡಿಮೆ ಶಕ್ತಿಯ ಅಗತ್ಯವಿರುತ್ತದೆ. ಇದು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ, ಇದು ಭಾರತದ ಸುಸ್ಥಿರತೆ ಮತ್ತು ಡಿಕಾರ್ಬನೈಸೇಶನ್ (ಇಂಗಾಲ ಮುಕ್ತಗೊಳಿಸುವ) ಉದ್ದೇಶಗಳನ್ನು ಬೆಂಬಲಿಸುತ್ತದೆ.

ಆರ್ಥಿಕ ಮತ್ತು ಕೈಗಾರಿಕಾ ಮಹತ್ವ

  • ಹಡಗು ಮರುಬಳಕೆ ವಲಯವು ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುತ್ತದೆ. ಇದು ವಿಘಟನೆ, ಸಂಸ್ಕರಣೆ ಮತ್ತು ವಸ್ತು ಚೇತರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರ ಜೀವನೋಪಾಯವನ್ನು ಬೆಂಬಲಿಸುತ್ತದೆ.
  • ಇದು ಸಹವರ್ತಿ ಕೈಗಾರಿಕೆಗಳ ವ್ಯಾಪಕ ಜಾಲವನ್ನು ಕಾಯ್ದುಕೊಳ್ಳುತ್ತದೆ. ಇವುಗಳಲ್ಲಿ ಸಾರಿಗೆ, ಮರು-ರೋಲಿಂಗ್ ಮಿಲ್‌ಗಳು, ಉಪಕರಣಗಳ ಪೂರೈಕೆದಾರರು ಮತ್ತು ತ್ಯಾಜ್ಯ ನಿರ್ವಹಣಾ ಸೇವೆಗಳು ಸೇರಿವೆ.
  • ಚೇತರಿಸಿಕೊಂಡ ಉಕ್ಕು ಮತ್ತು ಮರುಬಳಕೆ ಮಾಡಬಹುದಾದ ಘಟಕಗಳು ದೇಶೀಯ ಉತ್ಪಾದನೆ ಮತ್ತು ಕೈಗಾರಿಕಾ ಉತ್ಪಾದನೆಯನ್ನು ಬೆಂಬಲಿಸುತ್ತವೆ. ಇದು 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ್ ಭಾರತ್' ನಂತಹ ರಾಷ್ಟ್ರೀಯ ಉಪಕ್ರಮಗಳೊಂದಿಗೆ ಹೊಂದಿಕೆಯಾಗುತ್ತದೆ. ಮುಂಚೂಣಿಯಲ್ಲಿ ಭಾರತ

ಇತ್ತೀಚಿನ ವರ್ಷಗಳಲ್ಲಿ ಭಾರತದ ಹಡಗು ಮರುಬಳಕೆ ವಲಯವು ನಿರಂತರ ಬೆಳವಣಿಗೆಯನ್ನು ಕಂಡಿದೆ. ವ್ಯಾಪಾರ ಮತ್ತು ಅಭಿವೃದ್ಧಿಯ ಮೇಲಿನ ವಿಶ್ವಸಂಸ್ಥೆಯ ಸಮ್ಮೇಳನದ (UNCTAD - ಅಂಕ್ಟಾಡ್) ಇತ್ತೀಚಿನ ವರದಿಯ ಪ್ರಕಾರ, 2025 ರಲ್ಲಿ ಹಡಗು ಮರುಬಳಕೆಯಲ್ಲಿ ಭಾರತವು ಜಾಗತಿಕವಾಗಿ ಮೊದಲ ಸ್ಥಾನವನ್ನು ಪಡೆದಿದೆ. ಜಾಗತಿಕ ಹಡಗು ಮರುಬಳಕೆಯಲ್ಲಿ ಭಾರತದ ಪಾಲು 2024 ರಲ್ಲಿ ಶೇ. 30.1 ರಿಂದ 2025 ರಲ್ಲಿ ಶೇ. 35.4 ಕ್ಕೆ ಏರಿದೆ. ಇದು ದೇಶದ ಕಡಲ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಒಂದು ಗಮನಾರ್ಹ ಮೈಲಿಗಲ್ಲಾಗಿದೆ.

ಭಾರತದಲ್ಲಿ ಹಡಗು ಮರುಬಳಕೆಯ ಪ್ರಮಾಣವು ಸಹ 2024 ರಲ್ಲಿ 1.86 ಮಿಲಿಯನ್ ಗ್ರಾಸ್ ಟನ್‌ಗಳಿಂದ 2025 ರಲ್ಲಿ 2.99 ಮಿಲಿಯನ್ ಗ್ರಾಸ್ ಟನ್‌ಗಳಿಗೆ ಹೆಚ್ಚಾಗಿದೆ. ಇದು ಮರುಬಳಕೆ ಪ್ರಮಾಣದಲ್ಲಿ ಸುಮಾರು ಶೇಕಡಾ 60 ರಷ್ಟು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಈ ಏರಿಕೆಯು ಭಾರತದ ವಿಸ್ತರಿಸುತ್ತಿರುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಹಡಗು ಮರುಬಳಕೆ ಯಾರ್ಡ್‌ಗಳ ಬೆಳೆಯುತ್ತಿರುವ ಸ್ಪರ್ಧಾತ್ಮಕತೆಯನ್ನು ಸೂಚಿಸುತ್ತದೆ. ವಿಶ್ವದ ಪ್ರಮುಖ ಹಡಗು ಮರುಬಳಕೆ ರಾಷ್ಟ್ರವಾಗಲು 'ಮ್ಯಾರಿಟೈಮ್ ಇಂಡಿಯಾ ವಿಷನ್' 2030 ರ ಅಡಿಯಲ್ಲಿ ನಿಗದಿಪಡಿಸಲಾದ ಗುರಿಯನ್ನು ನಿಗದಿತ ಸಮಯಕ್ಕಿಂತ ಐದು ವರ್ಷಗಳ ಮುಂಚಿತವಾಗಿಯೇ ಸಾಧಿಸಲಾಗಿದೆ.

ಅಲಂಗ್-ಸೋಸಿಯಾ: ಭಾರತದ ಹಡಗು ಮರುಬಳಕೆ ವಲಯಕ್ಕೆ ಶಕ್ತಿ ತುಂಬುತ್ತಿದೆ

ಗುಜರಾತ್‌ನ ಅಲಂಗ್-ಸೋಸಿಯಾ ಹಡಗು ಮರುಬಳಕೆ ಕ್ಲಸ್ಟರ್ ಭಾರತದ ಮರುಬಳಕೆ ಸಾಮರ್ಥ್ಯದ ಬೆನ್ನೆಲುಬಾಗಿದೆ. ಇದು ವಿಶ್ವದ ಅತಿದೊಡ್ಡ ಹಡಗು ಮರುಬಳಕೆ ಕೇಂದ್ರವಾಗಿ (ಹಬ್) ಗುರುತಿಸಲ್ಪಟ್ಟಿದೆ. ಈ ಕ್ಲಸ್ಟರ್ ಭಾರತದ ಹಡಗು ಮರುಬಳಕೆ ಚಟುವಟಿಕೆಯ ಸರಿಸುಮಾರು ಶೇಕಡಾ 98 ರಷ್ಟನ್ನು ಹೊಂದಿದೆ. ಇದು ವಾರ್ಷಿಕವಾಗಿ ಸುಮಾರು 6 ಮಿಲಿಯನ್ ಜಿಟಿ (GT) ಮರುಬಳಕೆ ಸಾಮರ್ಥ್ಯವನ್ನು ಹೊಂದಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳದೆ (ಶೋಷಿಸದೆ) ಅಲಂಗ್‌ನಲ್ಲಿ ವಾರ್ಷಿಕವಾಗಿ ಸುಮಾರು 3.50 ಮಿಲಿಯನ್ ಮೆಟ್ರಿಕ್ ಟನ್ ಉಕ್ಕನ್ನು ಉತ್ಪಾದಿಸಲಾಗುತ್ತದೆ. ಇದು ಅಧಿಕೃತ ಹಡಗು ಮರುಬಳಕೆ ಯಾರ್ಡ್‌ಗಳು, ಡೌನ್‌ಸ್ಟ್ರೀಮ್ ಸ್ಟೀಲ್ ಮರು-ರೋಲಿಂಗ್ ಮಿಲ್‌ಗಳು ಮತ್ತು ತ್ಯಾಜ್ಯ ನಿರ್ವಹಣಾ ಮೂಲಸೌಕರ್ಯಗಳಿಂದ ಬೆಂಬಲಿತವಾಗಿದೆ. ಕಳೆದ ವರ್ಷಗಳಲ್ಲಿ, ಈ ಕ್ಲಸ್ಟರ್ ವ್ಯಾಪಕವಾದ ಆಧುನೀಕರಣಕ್ಕೆ ಒಳಪಟ್ಟಿದೆ ಮತ್ತು ಜಾಗತಿಕ ಹಡಗು ಮರುಬಳಕೆ ಮಾರುಕಟ್ಟೆಯೊಂದಿಗೆ ಭಾರತದ ಪ್ರಾಥಮಿಕ ಸಂಪರ್ಕವನ್ನು ಪ್ರತಿನಿಧಿಸುತ್ತದೆ.

ಭಾರತವು ತನ್ನ ಹಡಗು ಮರುಬಳಕೆ ಸಾಮರ್ಥ್ಯವನ್ನು ಸುಮಾರು 9 ಮಿಲಿಯನ್ ಲೈಟ್ ಡಿಸ್ಪ್ಲೇಸ್‌ಮೆಂಟ್ ಟನ್‌ಗಳಿಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಅಲಂಗ್ ಹಡಗು ಮರುಬಳಕೆ ಯಾರ್ಡ್‌ನ ಯೋಜಿತ ಅಭಿವೃದ್ಧಿಯ ಮೂಲಕ ವಿಸ್ತರಣೆಯನ್ನು ಸಾಧಿಸಲಾಗುವುದು. ಭವಿಷ್ಯದ ಬೇಡಿಕೆಯನ್ನು ಪೂರೈಸಲು ಸಮಗ್ರ ಮಾಸ್ಟರ್ ಪ್ಲಾನ್ (ಮಹಾಯೋಜನೆ) ಸಿದ್ಧಪಡಿಸಲಾಗಿದೆ. ಈ ಯೋಜನೆಯು ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಹಡಗು ಮರುಬಳಕೆ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಬಲಪಡಿಸುವತ್ತ ಗಮನಹರಿಸುತ್ತದೆ.

ಅಲಂಗ್-ಸೋಸಿಯಾ ಹಡಗು ಮರುಬಳಕೆ ಯಾರ್ಡ್‌ನಲ್ಲಿರುವ ಸುರಕ್ಷತಾ ತರಬೇತಿ ಮತ್ತು ಕಾರ್ಮಿಕ ಕಲ್ಯಾಣ ಸಂಸ್ಥೆಯು ಒಟ್ಟಾರೆಯಾಗಿ 1.5 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ತರಬೇತಿ ನೀಡಿದೆ. ಈ ತರಬೇತಿಯು ಔದ್ಯೋಗಿಕ ಸುರಕ್ಷತೆ, ಅಪಾಯಕಾರಿ ವಸ್ತುಗಳ ನಿರ್ವಹಣೆ ಮತ್ತು ತುರ್ತು ಸ್ಪಂದನೆಯನ್ನು ಒಳಗೊಂಡಿದೆ. ಇದರ ಜೊತೆಗೆ, ಭಾರತವು ಕೋಲ್ಕತ್ತಾದ ಅಮರ್ ಐರನ್ ಉದ್ಯೋಗ್‌ನಲ್ಲಿ ಹಡಗು ಮರುಬಳಕೆ ಯಾರ್ಡ್ ಅನ್ನು ಮತ್ತು ಕೇರಳದ ಸ್ಟೀಲ್ ಇಂಡಸ್ಟ್ರಿಯಲ್ಸ್ ಕೇರಳ ಲಿಮಿಟೆಡ್‌ನಲ್ಲಿ ಮತ್ತೊಂದನ್ನು ಹೊಂದಿದೆ.

ಅಲಂಗ್-ಸೋಸಿಯಾ ಹಡಗು ಮರುಬಳಕೆ ಯಾರ್ಡ್

ಭಾರತೀಯ ಹಡಗು ಮರುಬಳಕೆ ಯಾರ್ಡ್‌ಗಳು ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ನವೀಕರಣಕ್ಕೆ ಒಳಪಟ್ಟಿವೆ. ಅವು ಈಗ ಕೆಳಗಿನ ಸೌಲಭ್ಯಗಳು ಮತ್ತು ವ್ಯವಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ:

  • ಇಂಜಿನಿಯರ್ಡ್ ಮತ್ತು ಗಡಿ ಗುರುತಿಸಲಾದ ಮರುಬಳಕೆ ಪ್ಲಾಟ್‌ಗಳು (ನಿವೇಶನಗಳು).
  • ನೀರು ತೂರಿಕೊಳ್ಳದ (ಅಪಾರಗಮ್ಯ) ಕೆಲಸದ ಮೇಲ್ಮೈಗಳು ಮತ್ತು ಒಳಚರಂಡಿ ವ್ಯವಸ್ಥೆಗಳು.
  • ಯಾಂತ್ರಿಕೃತ ವಸ್ತು ನಿರ್ವಹಣೆ ಮತ್ತು ಎತ್ತುವ ಉಪಕರಣಗಳು.
  • ಪ್ರತ್ಯೇಕಿಸಲಾದ ಅಪಾಯಕಾರಿ ತ್ಯಾಜ್ಯ ಶೇಖರಣಾ ಪ್ರದೇಶಗಳು.
  • ಅಧಿಕೃತ ಡೌನ್‌ಸ್ಟ್ರೀಮ್ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಸಂಪರ್ಕಗಳು.
  • ವ್ಯವಸ್ಥಿತ ಸುರಕ್ಷತೆ, ಆರೋಗ್ಯ ಮತ್ತು ತುರ್ತು ಸ್ಪಂದನಾ ವ್ಯವಸ್ಥೆಗಳು.

ಸುಧಾರಣೆಗಳು ಭಾರತೀಯ ಹಡಗು ಮರುಬಳಕೆ ಯಾರ್ಡ್‌ಗಳ ಸುರಕ್ಷತೆ, ಪರಿಸರ ಅನುಸರಣೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಬಲಪಡಿಸಿವೆ.

ನಿಯಂತ್ರಕ ಮತ್ತು ಅನುಸರಣೆ ಚೌಕಟ್ಟು

ಭಾರತವು ಹಡಗು ಮರುಬಳಕೆ ಚಟುವಟಿಕೆಗಳಿಗಾಗಿ ಸಮಗ್ರ ಶಾಸನಬದ್ಧ ಮತ್ತು ನಿಯಂತ್ರಕ ಚೌಕಟ್ಟನ್ನು ಸ್ಥಾಪಿಸಿದೆ. ಈ ಚೌಕಟ್ಟು ಅಂತರರಾಷ್ಟ್ರೀಯ ಸಮಾವೇಶಗಳು ಮತ್ತು ಅಂಗೀಕೃತ ಜಾಗತಿಕ ಅತ್ಯುತ್ತಮ ಪದ್ಧತಿಗಳೊಂದಿಗೆ ಹೊಂದಿಕೊಂಡಿದೆ. ಇದು ಸಂಪೂರ್ಣ ಹಡಗು ಮರುಬಳಕೆ ಜೀವಿತಾವಧಿಯನ್ನು ನಿಯಂತ್ರಿಸುತ್ತದೆ. ಇದು ಹಡಗಿನ ಸಿದ್ಧತೆ, ಪ್ರಮಾಣೀಕರಣ, ಯಾರ್ಡ್ ಅಧಿಕಾರ, ಕಾರ್ಯಾಚರಣೆಗಳು ಮತ್ತು ಅನುಸರಣೆ ಮೇಲ್ವಿಚಾರಣೆಯನ್ನು ಒಳಗೊಂಡಿದೆ.

ಕಾನೂನು ಮತ್ತು ಸಾಂಸ್ಥಿಕ ರಚನೆ

  • ಹಡಗು ಮರುಬಳಕೆ ಕಾಯ್ದೆ, 2019: ಕಾಯ್ದೆಯು ಭಾರತದಲ್ಲಿ ಹಡಗು ಮರುಬಳಕೆಯನ್ನು ನಿಯಂತ್ರಿಸಲು ಪ್ರಾಥಮಿಕ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಇದು ಅಂತಾರಾಷ್ಟ್ರೀಯ ಮಾನದಂಡಗಳಿಗೆ ದೇಶೀಯ ಮಟ್ಟದಲ್ಲಿ ಜಾರಿಯ ರೂಪವನ್ನು ನೀಡುತ್ತದೆ. ಇದು 'ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್' ಅನ್ನು 'ರಾಷ್ಟ್ರೀಯ ಪ್ರಾಧಿಕಾರ' ಎಂದು ನೇಮಿಸುತ್ತದೆ. ಕಾಯ್ದೆಯು ಅಧಿಕಾರ ನೀಡಿಕೆ, ಪ್ರಮಾಣೀಕರಣ, ತಪಾಸಣೆ ಮತ್ತು ಜಾರಿ ಕಾರ್ಯವಿಧಾನಗಳನ್ನು ಕಡ್ಡಾಯಗೊಳಿಸುತ್ತದೆ.
  • ಹಡಗು ಮರುಬಳಕೆ ನಿಯಮಗಳು, 2021: ನಿಯಮಗಳು ಕಾರ್ಯವಿಧಾನದ ಮತ್ತು ತಾಂತ್ರಿಕ ಅಗತ್ಯತೆಗಳನ್ನು ನಿಗದಿಪಡಿಸುವ ಮೂಲಕ ಕಾಯ್ದೆಯನ್ನು ಅನುಷ್ಠಾನಕ್ಕೆ ತರುತ್ತವೆ. ಇವುಗಳಲ್ಲಿ ಸೌಲಭ್ಯದ ಅಧಿಕಾರ ನೀಡಿಕೆ, ಹಡಗು ಮರುಬಳಕೆ ಯೋಜನೆಗಳು, ಅಪಾಯಕಾರಿ ವಸ್ತುಗಳ ನಿರ್ವಹಣೆ, ಕಾರ್ಮಿಕರ ಸುರಕ್ಷತೆ, ತರಬೇತಿ ಮತ್ತು ವರದಿ ಮಾಡುವ ಹೊಣೆಗಾರಿಕೆಗಳು ಸೇರಿವೆ.
  • ಹಡಗು ಮರುಬಳಕೆ ವಿನಿಯಮಗಳು, 2026: ವಿನಿಯಮಗಳು ವಿವರವಾದ ಕಾರ್ಯಾಚರಣೆ, ಸುರಕ್ಷತೆ ಮತ್ತು ಪರಿಸರ ಮಾನದಂಡಗಳ ಮೂಲಕ ಜಾರಿಯನ್ನು ಮತ್ತಷ್ಟು ಬಲಪಡಿಸುತ್ತವೆ. ಇವು ಹಡಗು ಮರುಬಳಕೆ ಸೌಲಭ್ಯಗಳಾದ್ಯಂತ ಏಕರೂಪದ ಅನುಸರಣೆ ಮತ್ತು ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಬೆಂಬಲಿಸುತ್ತವೆ.

ಒಟ್ಟಾಗಿ, ಕಾಯ್ದೆ, ನಿಯಮಗಳು ಮತ್ತು ವಿನಿಯಮಗಳು ಭಾರತದಲ್ಲಿ ಹಡಗು ಮರುಬಳಕೆಗಾಗಿ ವ್ಯವಸ್ಥಿತ ಮತ್ತು ಜಾರಿಗೊಳಿಸಬಹುದಾದ ನಿಯಂತ್ರಕ ಚೌಕಟ್ಟನ್ನು ಸ್ಥಾಪಿಸುತ್ತವೆ. ಈ ಚೌಕಟ್ಟು ದೇಶೀಯ ಪದ್ಧತಿಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ಮಾನದಂಡಗಳೊಂದಿಗೆ ಜೋಡಿಸುತ್ತದೆ.

ಹಾಂಗ್ ಕಾಂಗ್ ಅಂತರರಾಷ್ಟ್ರೀಯ ಸಮಾವೇಶದೊಂದಿಗಿನ ಜೋಡಣೆ

'ಹಡಗುಗಳ ಸುರಕ್ಷಿತ ಮತ್ತು ಪರಿಸರ ಸ್ನೇಹಿ ಮರುಬಳಕೆಗಾಗಿರುವ ಹಾಂಗ್ ಕಾಂಗ್ ಅಂತರರಾಷ್ಟ್ರೀಯ ಸಮಾವೇಶ'ವು ಹಡಗು ಮರುಬಳಕೆಯನ್ನು ನಿಯಂತ್ರಿಸುವ ಪ್ರಮುಖ ಅಂತಾರಾಷ್ಟ್ರೀಯ ಒಪ್ಪಂದವಾಗಿದೆ. ಇದು ಹಡಗುಗಳು ಮತ್ತು ಮರುಬಳಕೆ ಸೌಲಭ್ಯಗಳಿಗೆ ಕಾನೂನುಬದ್ಧವಾಗಿ ಕಡ್ಡಾಯವಾದ ಅಗತ್ಯತೆಗಳನ್ನು ನಿಗದಿಪಡಿಸುತ್ತದೆ. ಈ ಸಮಾವೇಶವು 2025 ರ ಜೂನ್ 26 ರಂದು ಜಾರಿಗೆ ಬಂದಿತು. ಈ ದಿನಾಂಕದಿಂದ, ಇದರ ಅನುಸರಣೆ ಕಡ್ಡಾಯವಾಗಿದೆ. ಭಾರತವು ಹಡಗು ಮರುಬಳಕೆ ಕಾಯ್ದೆ, ನಿಯಮಗಳು ಮತ್ತು ವಿನಿಯಮಗಳ ಮೂಲಕ ತನ್ನ ದೇಶೀಯ ಚೌಕಟ್ಟನ್ನು ಇದರೊಂದಿಗೆ ಸಂಯೋಜಿಸಿದೆ. ಹಡಗು ಮರುಬಳಕೆ ಯಾರ್ಡ್‌ಗಳ ಆಧುನೀಕರಣಕ್ಕಾಗಿ ₹53.5 ಕೋಟಿ ಆರ್ಥಿಕ ನೆರವು ನೀಡಲಾಗಿದೆ. ಈ ಬೆಂಬಲವು 115 ಸೌಲಭ್ಯಗಳು ಹಾಂಗ್ ಕಾಂಗ್ ಸಮಾವೇಶದ ನಿಯಮಗಳನ್ನು ಅನುಸರಿಸಲು ನೆರವಾಗಿದೆ.

ಗುಜರಾತ್‌ನ ಅಲಂಗ್‌ನಲ್ಲಿರುವ 35 ಹಡಗು ಮರುಬಳಕೆ ಯಾರ್ಡ್‌ಗಳು 'ಇಯು ಗ್ರೀನ್-ಲಿಸ್ಟಿಂಗ್'ಗೆ (ಐರೋಪ್ಯ ಒಕ್ಕೂಟದ ಹಸಿರು ಪಟ್ಟಿ) ಅರ್ಜಿ ಸಲ್ಲಿಸಿದ್ದು, ಯುರೋಪಿಯನ್ ಯೂನಿಯನ್ ಭಾರತೀಯ ಯಾರ್ಡ್‌ಗಳ ತಪಾಸಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. 'ಶ್ರೀ ರಾಮ್ ವೆಸೆಲ್ ಸ್ಕ್ರ್ಯಾಪ್' ಮತ್ತು 'ವೈ. ಎಸ್. ಇನ್ವೆಸ್ಟ್‌ಮೆಂಟ್ಸ್' ಸಂಸ್ಥೆಗಳನ್ನು ಹಡಗು ಮರುಬಳಕೆ ಸೌಲಭ್ಯಗಳ 16 ನೇ ಯುರೋಪಿಯನ್ ಪಟ್ಟಿಯ ಕರಡಿನಲ್ಲಿ ಸೇರಿಸಲಾಗಿದೆ.

ಐಎಚ್‌ಎಂ ಮೂಲಕ ಸುರಕ್ಷಿತ ಮರುಬಳಕೆಯನ್ನು ಖಚಿತಪಡಿಸುವುದು

'ಅಪಾಯಕಾರಿ ವಸ್ತುಗಳ ದಾಸ್ತಾನು ಪಟ್ಟಿ' ಸುರಕ್ಷಿತ ಹಡಗು ಮರುಬಳಕೆಯ ಪ್ರಮುಖ ಅಂಶವಾಗಿದೆ. ಇದು ಹಡಗುಗಳ ಕಾರ್ಯಾಚರಣೆಯ ಜೀವಿತಾವಧಿಯಲ್ಲಿ ಮತ್ತು ಮರುಬಳಕೆಗೆ ಮುನ್ನ ಅವುಗಳಲ್ಲಿರುವ ಅಪಾಯಕಾರಿ ವಸ್ತುಗಳನ್ನು ಗುರುತಿಸುತ್ತದೆ ಮತ್ತು ದಾಖಲಿಸುತ್ತದೆ. ಭಾರತವು ಜೀವಿತಾವಧಿ ಆಧಾರಿತ ಅನುಸರಣಾ ವಿಧಾನವನ್ನು ಅನುಸರಿಸುತ್ತದೆ. ಇದು ಹಡಗುಗಳು ಅಧಿಕೃತ ಮರುಬಳಕೆ ಸೌಲಭ್ಯಗಳನ್ನು ಪ್ರವೇಶಿಸುವ ಮೊದಲು ಪಾರದರ್ಶಕತೆ, ಪತ್ತೆಹಚ್ಚುವಿಕೆ ಮತ್ತು ಪರಿಣಾಮಕಾರಿ ಅಪಾಯ ತಗ್ಗಿಸುವಿಕೆಯನ್ನು ಖಚಿತಪಡಿಸುತ್ತದೆ.

ಶಿಪ್-ಬ್ರೇಕಿಂಗ್ ಕ್ರೆಡಿಟ್ ನೋಟ್ ಯೋಜನೆ

'ಹಡಗು ನಿರ್ಮಾಣ ಆರ್ಥಿಕ ನೆರವು ಯೋಜನೆ' 2.0 ರ ಅಡಿಯಲ್ಲಿ ಪರಿಚಯಿಸಲಾದ 'ಶಿಪ್-ಬ್ರೇಕಿಂಗ್ ಕ್ರೆಡಿಟ್ ನೋಟ್ ಯೋಜನೆ'ಯು, ಹಡಗು ಮಾಲೀಕರು ನಿಯಮಗಳನ್ನು ಅನುಸರಿಸುವ ಭಾರತೀಯ ಹಡಗು ಮರುಬಳಕೆ ಯಾರ್ಡ್‌ಗಳಲ್ಲಿ ಹಡಗುಗಳನ್ನು ಮರುಬಳಕೆ ಮಾಡಲು ಪ್ರೋತ್ಸಾಹಿಸುತ್ತದೆ. ಇದು ಭಾರತೀಯ ಹಡಗುಕಟ್ಟೆಗಳಲ್ಲಿ (ಶಿಪ್‌ಯಾರ್ಡ್‌ಗಳಲ್ಲಿ) ಹೊಸ ಹಡಗುಗಳ ನಿರ್ಮಾಣವನ್ನೂ ಉತ್ತೇಜಿಸುತ್ತದೆ. ಈ ಯೋಜನೆಯು ಮರುಬಳಕೆಯಾದ ಹಡಗಿನ ಗುಜರಿ ಮೌಲ್ಯದ (ಸ್ಕ್ರ್ಯಾಪ್ ವ್ಯಾಲ್ಯೂ) ಶೇಕಡಾ 40 ಕ್ಕೆ ಸಮನಾದ 'ಕ್ರೆಡಿಟ್ ನೋಟ್' ಅನ್ನು ನೀಡುವ ಮೂಲಕ ಹಡಗು ಗುಜರಿಗೆ ಹಾಕುವುದಕ್ಕೆ ಪ್ರೋತ್ಸಾಹ ನೀಡುತ್ತದೆ. ಇದನ್ನು ಭಾರತೀಯ ಹಡಗುಕಟ್ಟೆಯಲ್ಲಿ ನಿರ್ಮಿಸಲಾಗುವ ಹೊಸ ಹಡಗಿನ ಮೌಲ್ಯದ ಶೇಕಡಾ 5 ರಷ್ಟು ಪಾವತಿಸಲು ಬಳಸಬಹುದು. ಈ ಯೋಜನೆಯು ಸುಸ್ಥಿರ ಹಡಗು ಮರುಬಳಕೆ ಮತ್ತು ಭಾರತದ ಹಡಗು ನಿರ್ಮಾಣ ಉದ್ಯಮದ ಬೆಳವಣಿಗೆಯೆರಡನ್ನೂ ಬೆಂಬಲಿಸುತ್ತದೆ.

ಮಾಜಿ ಐಎನ್‌ಎಸ್ ವಿರಾಟ್: ಭಾರತದ ಜವಾಬ್ದಾರಿಯುತ ಹಡಗು ಮರುಬಳಕೆ ಸಾಮರ್ಥ್ಯದ ಪ್ರದರ್ಶನ

ಗುಜರಾತ್‌ನ ಅಲಂಗ್‌ನಲ್ಲಿ ಮಾಜಿ ಐಎನ್‌ಎಸ್ ವಿರಾಟ್‌ನ ಮರುಬಳಕೆಯು ಭಾರತದ ಅತ್ಯಂತ ಗಮನಾರ್ಹ ಹಡಗು ಮರುಬಳಕೆ ಯೋಜನೆಗಳಲ್ಲಿ ಒಂದಾಗಿದೆ. ಭಾರತೀಯ ನೌಕಾಪಡೆಯಲ್ಲಿ 30 ವರ್ಷ ಮತ್ತು ರಾಯಲ್ ನೌಕಾಪಡೆಯಲ್ಲಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಈ ವಿಮಾನವಾಹಕ ನೌಕೆಯನ್ನು ಮಾರ್ಚ್ 2017 ರಲ್ಲಿ ಸೇವೆಯಿಂದ ನಿವೃತ್ತಿಗೊಳಿಸಲಾಯಿತು. ಇದು ಸೆಪ್ಟೆಂಬರ್ 2020 ರಲ್ಲಿ ಮರುಬಳಕೆಗಾಗಿ ಅಲಂಗ್‌ಗೆ ಆಗಮಿಸಿತು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ವಿಶ್ವದ ಅತ್ಯಂತ ಸುದೀರ್ಘ ಸೇವೆ ಸಲ್ಲಿಸಿದ ಯುದ್ಧನೌಕೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ಮಾಜಿ ಐಎನ್‌ಎಸ್ ವಿರಾಟ್, ದಶಕಗಳ ವಿಶಿಷ್ಟ ನೌಕಾ ಸೇವೆಯ ಸಂಕೇತವಾಗಿತ್ತು. ಇದರ ಅಂತಿಮ ಪ್ರಯಾಣವು ಪರಿಸರ ಜವಾಬ್ದಾರಿಯುತ ಹಡಗು ಮರುಬಳಕೆಯಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಪ್ರದರ್ಶಿಸಿತು.

ನೌಕೆಯು ತನ್ನ ಸೇವೆಯ ಅವಧಿಯಲ್ಲಿ 22,622 ಕ್ಕೂ ಹೆಚ್ಚು ಹಾರಾಟದ ಗಂಟೆಗಳನ್ನು ದಾಖಲಿಸಿದೆ. ಇದು ಸಮುದ್ರದಲ್ಲಿ 2,252 ದಿನಗಳನ್ನು ಕಳೆಯಿತು ಮತ್ತು 5.88 ಲಕ್ಷಕ್ಕೂ ಹೆಚ್ಚು ನಾಟಿಕಲ್ ಮೈಲಿಗಳನ್ನು (10.94 ಲಕ್ಷ ಕಿಲೋಮೀಟರ್) ಸಂಚರಿಸಿತು. ಇಂತಹ ಬೃಹತ್ ಮತ್ತು ಸಂಕೀರ್ಣವಾದ ನೌಕೆಯನ್ನು ಮರುಬಳಕೆ ಮಾಡುವುದು ಮೌಲ್ಯಯುತ ವಸ್ತುಗಳನ್ನು ಸುರಕ್ಷಿತವಾಗಿ ಚೇತರಿಸಿಕೊಳ್ಳುವ ಭಾರತದ ಸಾಮರ್ಥ್ಯವನ್ನು ಉಲ್ಲೇಖಿಸುತ್ತದೆ. ಇದು ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸುವುದರ ಜೊತೆಗೆ ದೇಶದ ವಿಕಸನಗೊಳ್ಳುತ್ತಿರುವ ಪರಿಸರ ಮತ್ತು ಔದ್ಯೋಗಿಕ ಸುರಕ್ಷತಾ ಮಾನದಂಡಗಳನ್ನು ಪ್ರತಿಬಿಂಬಿಸುತ್ತದೆ.

ಜವಾಬ್ದಾರಿಯುತ ಮರುಬಳಕೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು

ಭಾರತದಲ್ಲಿ ಹಡಗು ಮರುಬಳಕೆಯು ಆಧುನಿಕ, ನಿಯಂತ್ರಿತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಂದಿಕೊಂಡಿರುವ ಉದ್ಯಮವಾಗಿ ವಿಕಸನಗೊಂಡಿದೆ. ಈ ವಲಯವು ಸಂಪನ್ಮೂಲ ಭದ್ರತೆ, ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪರಿಸರ ಸುಸ್ಥಿರತೆಗೆ ಕೊಡುಗೆ ನೀಡುತ್ತದೆ. ನಿರಂತರ ಮೂಲಸೌಕರ್ಯ ಮೇಲ್ದರ್ಜೆಗೇರಿಸುವಿಕೆ ಮತ್ತು ಸುಧಾರಣೆಗಳ ಮೂಲಕ, ಭಾರತವು ತನ್ನ ಹಡಗು ಮರುಬಳಕೆ ಪರಿಸರ ವ್ಯವಸ್ಥೆಯ ಸುರಕ್ಷತೆ ಮತ್ತು ಸ್ಪರ್ಧಾತ್ಮಕತೆಯನ್ನು ಬಲಪಡಿಸಿದೆ.

2025ರಲ್ಲಿ ವಿಶ್ವದ ಪ್ರಮುಖ ಹಡಗು ಮರುಬಳಕೆ ರಾಷ್ಟ್ರವಾಗಿ ಭಾರತವು ಹೊರಹೊಮ್ಮಿರುವುದು ಪ್ರಯತ್ನಗಳ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಮಾರುಕಟ್ಟೆ ಪಾಲು ಮತ್ತು ಮರುಬಳಕೆ ಪ್ರಮಾಣದಲ್ಲಿನ ಹೆಚ್ಚಳವು ಭಾರತೀಯ ಹಡಗು ಮರುಬಳಕೆ ಯಾರ್ಡ್‌ಗಳ ವಿಸ್ತರಿಸುತ್ತಿರುವ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆಯನ್ನು ಪ್ರದರ್ಶಿಸುತ್ತದೆ. ಈ ಸಾಧನೆಯು 'ಮ್ಯಾರಿಟೈಮ್ ಇಂಡಿಯಾ ವಿಷನ್ 2030' ರ ಅಡಿಯಲ್ಲಿ ಕೈಗೊಳ್ಳಲಾದ ನೀತಿ ಕ್ರಮಗಳ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸುತ್ತದೆ. ಹಡಗು ಮರುಬಳಕೆಯು ಮತ್ತಷ್ಟು ವಿಕಸನಗೊಳ್ಳುತ್ತಿರುವುದರಿಂದ, ಭಾರತವು ಹಡಗು ಮರುಬಳಕೆಗಾಗಿ ಒಂದು ವಿಶ್ವಾಸಾರ್ಹ ಗಮ್ಯಸ್ಥಾನವಾಗಿ ಮುಂದುವರೆಯಲು ಸುಭದ್ರ ಸ್ಥಾನದಲ್ಲಿದೆ.

References

Ministry of Ports, Shipping and Waterways

https://dgma.gov.in/engineering-wing/ew-ship-recycling-in-india

https://shipmin.gov.in/en/content/nodal-responsibility-entire-shipbuilding-and-ship-repair-industry-vests-ministry-shipping

https://shipmin.gov.in/sites/default/files/Modified%20Guidelines%20for%20implementation%20of%20Shipbuilding%20Financial%20Assistance%20Scheme%20%28SBFAS%29_0.pdf

https://shipmin.gov.in/sites/default/files/Annual%20Report%202024-25%20-%20English.pdf

https://shipmin.gov.in/sites/default/files/Annual%20Report%202025-26%20english.pdf

https://www.pib.gov.in/PressReleasePage.aspx?PRID=2098573&reg=48&lang=2

https://www.pib.gov.in/PressReleasePage.aspx?PRID=2280098&reg=3&lang=1

https://www.pib.gov.in/PressReleasePage.aspx?PRID=2276739&reg=3&lang=1

https://www.pib.gov.in/PressReleasePage.aspx?PRID=1659960&lang=2

Ministry of Defence

https://www.pib.gov.in/PressReleasePage.aspx?PRID=1483700&lang=2

Click here to see pdf

 

*****

(Explainer ID: 159518) आगंतुक पटल : 39
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Telugu , Malayalam