• Sitemap
  • Advance Search
Economy

ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆ

ಔಪಚಾರಿಕ ಉದ್ಯೋಗವನ್ನು ವಿಸ್ತರಿಸುವುದು, ಭಾರತದ ಕಾರ್ಯಪಡೆಯನ್ನು ಭದ್ರಪಡಿಸುವುದು

Posted On: 01 AUG 2026 10:53AM

ಭಾರತದ ಕಾರ್ಯಪಡೆಯು 'ವಿಕಸಿತ ಭಾರತ 2047'ರ ಕಡೆಗಿನ ಅದರ ಪಯಾಣದ ಪ್ರಮುಖ ವೇಗವರ್ಧಕವಾಗಿದೆ. ಎಲ್ಲರನ್ನೊಳಗೊಂಡ ಬೆಳವಣಿಗೆಗೆ ಗುಣಮಟ್ಟದ ಉದ್ಯೋಗವು ಅತ್ಯಂತ ಕೇಂದ್ರಬಿಂದುವಾಗಿದೆ. ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರನ್ನು ಉತ್ತೇಜಿಸುವ ಮೂಲಕ ಮತ್ತು ಹೊಸ ಔಪಚಾರಿಕ ಉದ್ಯೋಗಗಳನ್ನು ಸೃಷ್ಟಿಸಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವ ಮೂಲಕ ಈ ದೃಷ್ಟಿಕೋನವನ್ನು ಬೆಂಬಲಿಸುತ್ತದೆ. ಇಪಿಎಫ್‌ಒ ನೊಂದಿಗೆ ಜೋಡಿಸಲ್ಪಟ್ಟ, ತಂತ್ರಜ್ಞಾನ-ಚಾಲಿತ ಚೌಕಟ್ಟಿನ ಮೂಲಕ ಈ ಯೋಜನೆಯು ಕಾರ್ಯಪಡೆಯ ಔಪಚಾರಿಕತೆಯನ್ನು ಉತ್ತೇಜಿಸುತ್ತದೆ, ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಮತ್ತು ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಗಟ್ಟಿಗೊಳಿಸುತ್ತದೆ. ಉದ್ಯೋಗ ಸೃಷ್ಟಿ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಪಾರದರ್ಶಕ ಅನುಷ್ಠಾನವನ್ನು ಸಂಯೋಜಿಸುವ ಮೂಲಕ, ಪಿಎಂ-ವಿಬಿಆರ್‌ವೈಯು ಭಾರತದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ನುರಿತ, ಸುರಕ್ಷಿತ ಹಾಗೂ ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆಯನ್ನು ನಿರ್ಮಿಸುತ್ತಿದೆ.

ಭಾರತದ ಜನಸಂಖ್ಯಾ ಲಾಭಾಂಶದ ಭರವಸೆ

ಭಾರತದ ಯುವ ಮತ್ತು ಕ್ರಿಯಾಶೀಲ ಕಾರ್ಯಪಡೆಯು ಅದರ ಅಗತ್ಯವಾದ ಶಕ್ತಿಗಳಲ್ಲಿ ಒಂದಾಗಿದೆ. ಇದು ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸಲು ಮತ್ತು ವಿಕಸಿತ ಭಾರತ 2047ರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಪ್ರತಿವರ್ಷ ಲಕ್ಷಾಂತರ ಯುವಕರು ಶ್ರಮಿಕ ಮಾರುಕಟ್ಟೆಯನ್ನು ಪ್ರವೇಶಿಸುತ್ತಾರೆ. ಈ ಜನಸಂಖ್ಯಾ ಅನುಕೂಲವನ್ನು ಸುಸ್ಥಿರ ಮತ್ತು ಎಲ್ಲರನ್ನೊಳಗೊಂಡ ಅಭಿವೃದ್ಧಿಯಾಗಿ ಪರಿವರ್ತಿಸಲು ಸಾಮಾಜಿಕ ಭದ್ರತೆಯೊಂದಿಗೆ ಔಪಚಾರಿಕ ಉದ್ಯೋಗವನ್ನು ವಿಸ್ತರಿಸುವುದು ಅತ್ಯಗತ್ಯವಾಗಿದೆ.

ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರನ್ನು ಉತ್ತೇಜಿಸುವ ಮತ್ತು ಉದ್ಯೋಗ ಸೃಷ್ಟಿಯನ್ನು ಬೆಂಬಲಿಸುವ ಮೂಲಕ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಬಲಪಡಿಸುತ್ತದೆ. ಪಾರದರ್ಶಕವಾದ, ನೌಕರರ ಭವಿಷ್ಯ ನಿಧಿ ಸಂಸ್ಥೆ ಯಿಂದ ನಿರ್ವಹಿಸಲ್ಪಡುವ ಚೌಕಟ್ಟಿನ ಮೂಲಕ, ಇದು ನೌಕರರು ಮತ್ತು ಉದ್ಯೋಗದಾತರಿಬ್ಬರಿಗೂ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಕಾರ್ಯಪಡೆಯ ಔಪಚಾರಿಕತೆಯನ್ನು ಗಟ್ಟಿಗೊಳಿಸುತ್ತದೆ.

ಅವಕಾಶವನ್ನು ಉದ್ಯೋಗವನ್ನಾಗಿ ಪರಿವರ್ತಿಸುವುದು

ಆಗಸ್ಟ್ 2025 ರಲ್ಲಿ ಘೋಷಿಸಲಾದ ಪಿಎಂ-ವಿಬಿಆರ್‌ವೈಯೋಜನೆಯು 99,446 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ ಆಗಸ್ಟ್ 1, 2025 ರಿಂದ ಜುಲೈ 31, 2027 ರವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲ್ಪಡುತ್ತಿದೆ. ಆಗಸ್ಟ್ 1, 2026 ರಂದು ಈ ಯೋಜನೆಯು ಅನುಷ್ಠಾನದ ಒಂದು ವರ್ಷವನ್ನು ಪೂರ್ಣಗೊಳಿಸುತ್ತದೆ, ಇದು ಭಾರತದಲ್ಲಿ ಔಪಚಾರಿಕ ಉದ್ಯೋಗ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.

ಪಿಎಂ-ವಿಬಿಆರ್‌ವೈಯು 1.92 ಕೋಟಿ ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರು ಸೇರಿದಂತೆ 3.5 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಇಪಿಎಫ್‌ಒ ನೋಂದಣಿಯ ಮೂಲಕ ಯುವಕರು ಸಂಘಟಿತ ಕಾರ್ಯಪಡೆಯನ್ನು ಪ್ರವೇಶಿಸಲು ಪ್ರೋತ್ಸಾಹಿಸುತ್ತದೆ. ಇದು ವಿವಿಧ ಕ್ಷೇತ್ರಗಳಲ್ಲಿ, ವಿಶೇಷವಾಗಿ ಕಾರ್ಮಿಕ-ತೀವ್ರತೆಯ ಉತ್ಪಾದನಾ ವಲಯಗಳಲ್ಲಿ ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಇದು ಹೊಸ ಮತ್ತು ವಿಸ್ತರಿಸುತ್ತಿರುವ ಕೈಗಾರಿಕೆಗಳಲ್ಲಿ ಉದ್ಯೋಗವನ್ನು ಉತ್ತೇಜಿಸುವ ಮೂಲಕ ರಾಷ್ಟ್ರೀಯ ಉತ್ಪಾದನಾ ಮಿಷನ್‌ಗೆ ಪೂರಕವಾಗಿದೆ.

ನೌಕರರು ಮತ್ತು ಉದ್ಯೋಗದಾತರಿಗೆ ಪರಸ್ಪರ ಲಾಭದಾಯಕ (ವಿನ್-ವಿನ್) ಯೋಜನೆ

ಪಿಎಂ-ವಿಬಿಆರ್‌ವೈಯ ಮೂಲಾಧಾರವು ಎರಡು ಭಾಗಗಳನ್ನೊಳಗೊಂಡ ಪ್ರೋತ್ಸಾಹಕ ಚೌಕಟ್ಟಾಗಿದ್ದು, ಇದು ನೌಕರರು ಮತ್ತು ಉದ್ಯೋಗದಾತರಿಗೆ ಪ್ರತ್ಯೇಕವಾದ ಸೌಲಭ್ಯಗಳನ್ನು ಒದಗಿಸುತ್ತದೆ.

ಭಾಗ A: ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವ ನೌಕರರಿಗೆ ಪ್ರೋತ್ಸಾಹಕ

  • ತಿಂಗಳಿಗೆ ₹1,00,000 ವರೆಗೆ ಗಳಿಸುವ ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವ ನೌಕರರು ಈ ಭಾಗಕ್ಕೆ ಅರ್ಹರಾಗಿರುತ್ತಾರೆ.
  • ಅವರು ಒಂದು ತಿಂಗಳ ಇಪಿಎಫ್ ವೇತನಕ್ಕೆ ಸಮಾನವಾದ, ಗರಿಷ್ಠ ₹15,000 ಮಿತಿಯ ಒಟ್ಟು ಒಂದು ಬಾರಿಯ ಪ್ರೋತ್ಸಾಹಕವನ್ನು ಪಡೆಯುತ್ತಾರೆ.
  • ಈ ಪ್ರೋತ್ಸಾಹಕವನ್ನು ಎರಡು ಕಂತುಗಳಲ್ಲಿ ಪಾವತಿಸಲಾಗುತ್ತದೆ. ಮೊದಲ ಕಂತು ಆರು ತಿಂಗಳ ಸೇವೆಯ ನಂತರ ಮತ್ತು ಎರಡನೇ ಕಂತು ಹನ್ನೆರಡು ತಿಂಗಳ ನಿರಂತರ ಸೇವೆಯ ನಂತರ, ಹಣಕಾಸು ಸಾಕ್ಷರತಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಬಳಿಕ ನೀಡಲಾಗುತ್ತದೆ.
  • ಪ್ರೋತ್ಸಾಹಕದ ಒಂದು ಭಾಗವನ್ನು ನಿರ್ದಿಷ್ಟ ಉಳಿತಾಯ ಸಾಧನದಲ್ಲಿ ಹೂಡಿಕೆ ಮಾಡಲಾಗುತ್ತದೆ, ಇದು ಆರ್ಥಿಕ ಭದ್ರತೆ ಮತ್ತು ಉಳಿತಾಯವನ್ನು ಉತ್ತೇಜಿಸುತ್ತದೆ. ಇದನ್ನು ನೌಕರರು ನಂತರದ ದಿನಗಳಲ್ಲಿ ಹಿಂಪಡೆಯಬಹುದು.

ಭಾಗ B: ಉದ್ಯೋಗದಾತರಿಗೆ ಬೆಂಬಲ

  • ತಿಂಗಳಿಗೆ ₹1,00,000 ವರೆಗೆ ಸಂಬಳವಿರುವ ನೌಕರರಿಗೆ ಉದ್ಯೋಗದಾತರು ಪ್ರೋತ್ಸಾಹಕಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಕನಿಷ್ಠ ಆರು ತಿಂಗಳವರೆಗೆ ಉಳಿಸಿಕೊಳ್ಳಲಾದ ಪ್ರತಿಯೊಬ್ಬ ಅರ್ಹ ಹೆಚ್ಚುವರಿ ನೌಕರನಿಗಾಗಿ ಉದ್ಯೋಗದಾತರಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ ₹3,000 ವರೆಗೆ ನೀಡಲಾಗುತ್ತದೆ.
  • ಈ ಬೆಂಬಲವು ನೇಮಕಾತಿ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ನಿರಂತರ ಉದ್ಯೋಗ ಸೃಷ್ಟಿಯನ್ನು ಪ್ರೋತ್ಸಾಹಿಸುತ್ತದೆ.
  • ಉತ್ಪಾದನಾ ವಲಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯ ಸಾಮರ್ಥ್ಯವಿರುವುದರಿಂದ, ಈ ಪ್ರೋತ್ಸಾಹಕಗಳನ್ನು ಮೂರು ಮತ್ತು ನಾಲ್ಕನೇ ವರ್ಷಗಳಿಗೂ ವಿಸ್ತರಿಸಲಾಗಿದೆ.

ಪಿಎಂವಿಬಿಆರ್‌ವೈ ಯ ಪ್ರಭಾವ

ಅದರ ಮೊದಲ ವರ್ಷದಲ್ಲೇ, ಪಿಎಂ-ವಿಬಿಆರ್‌ವೈಯೋಜನೆಯು ಮೊದಲ ಬಾರಿಗೆ ನೇಮಕಾತಿಯನ್ನು ಪ್ರೋತ್ಸಾಹಿಸುವ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಕಾರ್ಯಪಡೆಯ ಔಪಚಾರಿಕತೆಯನ್ನು ಬಲಪಡಿಸಿದೆ. ಈ ಯೋಜನೆಯು ಉದ್ಯೋಗದಾತರು ವಿವಿಧ ಕೈಗಾರಿಕೆಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಉತ್ತೇಜಿಸುವುದರ ಜೊತೆಗೆ, ಹೆಚ್ಚಿನ ಕಾರ್ಮಿಕರನ್ನು ಸಂಘಟಿತ ವಲಯಕ್ಕೆ ತರಲು ಸಹಾಯ ಮಾಡುತ್ತಿದೆ.

  • ಆಗಸ್ಟ್ 2025 ರಿಂದ 72 ಲಕ್ಷಕ್ಕೂ ಹೆಚ್ಚು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರು ಔಪಚಾರಿಕ ಕಾರ್ಯಪಡೆಯನ್ನು ಸೇರಿದ್ದಾರೆ.
  • ಫಲಾನುಭವಿಗಳಲ್ಲಿ ಸುಮಾರು 30% ರಷ್ಟು ಮಹಿಳೆಯರಾಗಿದ್ದು, ಇದು ಔಪಚಾರಿಕ ಉದ್ಯೋಗದಲ್ಲಿ ಹೆಚ್ಚಿನ ಮಹಿಳಾ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತಿದೆ.
  • ಈ ಯೋಜನೆಯಡಿಯಲ್ಲಿ ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಉದ್ಯೋಗ-ಸಂಯೋಜಿತ ಪ್ರೋತ್ಸಾಹಕಗಳನ್ನು ಪಡೆದಿದ್ದಾರೆ.
  • ಉದ್ಯೋಗವನ್ನು ಇಪಿಎಫ್‌ಒ ನೋಂದಣಿ ಮತ್ತು ನೇರ ಲಾಭ ವರ್ಗಾವಣೆಯೊಂದಿಗೆ ಜೋಡಿಸುವ ಮೂಲಕ, ಪಿಎಂ-ವಿಬಿಆರ್‌ವೈಯು ಭಾರತದ ಸಂಘಟಿತ ಶ್ರಮಿಕ ಮಾರುಕಟ್ಟೆಯನ್ನು ಬಲಪಡಿಸುತ್ತಿದೆ ಮತ್ತು ಹೆಚ್ಚು ಸುರಕ್ಷಿತವಾದ ಪ್ರತಿಭಾ ಮಂಡಳಿಯನ್ನು (ಟಲೆಂಟ್ ಪೂಲ್) ಸೃಷ್ಟಿಸುತ್ತಿದೆ.

ಪಿಎಂ-ವಿಬಿಆರ್‌ವೈಯ ಡಿಜಿಟಲ್ ಆಡಳಿತ ಮತ್ತು ಸಮರ್ಥ ವಿತರಣೆ

ಪಾರದರ್ಶಕ, ಸಮರ್ಥ ಮತ್ತು ಜವಾಬ್ದಾರಿಯುತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಪಿಎಂ-ವಿಬಿಆರ್‌ವೈಯು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತದೆ. ಈ ಯೋಜನೆಯು ಸುಲಭ ಪರಿಶೀಲನೆ, ಸೌಲಭ್ಯಗಳ ವರ್ಗಾವಣೆ ಮತ್ತು ನೈಜ-ಸಮಯದ ಮೇಲ್ವಿಚಾರಣೆಯನ್ನು ಸಾಧ್ಯವಾಗಿಸುತ್ತದೆ.

  • ಈ ಯೋಜನೆಯು ಸಂಪೂರ್ಣವಾಗಿ ಡಿಜಿಟಲ್ ಆಗಿರುವ, ಇಪಿಎಫ್‌ಒನೊಂದಿಗೆ ಜೋಡಿಸಲ್ಪಟ್ಟ ವೇದಿಕೆಯ ಮೂಲಕ ಅನುಷ್ಠಾನಗೊಳ್ಳುತ್ತದೆ, ಇದು ತಡೆರಹಿತ ಪರಿಶೀಲನೆ ಮತ್ತು ಸಮರ್ಥ ಸೌಲಭ್ಯ ವಿತರಣೆಯನ್ನು ಖಚಿತಪಡಿಸುತ್ತದೆ.
  • ಇದು ಆಧಾರ್ ಆಧಾರಿತ ದೃಢೀಕರಣ, ಸಾರ್ವತ್ರಿಕ ಖಾತೆ ಸಂಖ್ಯೆಗಳು ಮತ್ತು ನಿಯಮಿತ ಎಲೆಕ್ಟ್ರಾನಿಕ್ ಚಲನ್-ಕಮ್-ರಿಟರ್ನ್ ಸಲ್ಲಿಕೆಗಳನ್ನು ಬಳಸುತ್ತದೆ. ಯುಎಎನ್ ಅನ್ನು ಉಮಾಂಗ್ ಅಪ್ಲಿಕೇಶನ್‌ನಲ್ಲಿ ಮುಖ ದೃಢೀಕರಣ ತಂತ್ರಜ್ಞಾನದ ಮೂಲಕ ದೃಢೀಕರಿಸಿದ ನಂತರ ಮಾತ್ರ ಪ್ರೋತ್ಸಾಹಕಗಳು ಲಭ್ಯವಿರುತ್ತವೆ. ಇದು ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸುವ ಜೊತೆಗೆ ನಿಯಮಗಳ ಪಾಲನೆಯನ್ನು ಖಚಿತಪಡಿಸುತ್ತದೆ.
  • ನೇರ ಲಾಭ ವರ್ಗಾವಣೆ ಮೂಲಕ ಪ್ರೋತ್ಸಾಹಕಗಳನ್ನು ನೇರವಾಗಿ ಆಧಾರ್-ಸಂಯೋಜಿತ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ, ಇದು ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.
  • ಪಿಎಂ-ವಿಬಿಆರ್‌ವೈಪೋರ್ಟಲ್ ಯೋಜನೆಯ ಸಮಗ್ರ ಅನುಷ್ಠಾನವನ್ನು ಸುಲಭಗೊಳಿಸುತ್ತದೆ ಮತ್ತು ಫಲಾನುವಿಗಳು ಹಾಗೂ ವಲಯವಾರು ಪ್ರಗತಿಯ ನೈಜ-ಸಮಯದ ಮೇಲ್ವಿಚಾರಣೆಯನ್ನು ಒದಗಿಸುತ್ತದೆ.

ದೇಶಾದ್ಯಂತ ವ್ಯಾಪಕವಾದ ಜನ ಸಂಪರ್ಕ ಪ್ರಯತ್ನಗಳ ಮೂಲಕ ಈ ಯೋಜನೆ ಮತ್ತು ಅದರ ಕುರಿತಾದ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇಪಿಎಫ್‌ಒ, ನೌಕರರ ರಾಜ್ಯ ವಿಮಾ ನಿಗಮ ಮತ್ತು ಮುಖ್ಯ ಶ್ರಮಿಕ ಆಯುಕ್ತರ ಅಧಿಕಾರಿಗಳನ್ನು ಒಳಗೊಂಡ ಅಂತರ-ಕಾರ್ಯಕಾರಿ ತಂಡಗಳು ತಳಮಟ್ಟದಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮೂಲಕ ಈ ಪ್ರಯತ್ನಗಳನ್ನು ಬೆಂಬಲಿಸುತ್ತವೆ.

ಭಾರತದ ಕಾರ್ಯಪಡೆಯನ್ನು ಸಬಲೀಕರಣಗೊಳಿಸುವುದು

ಭಾರತವು ಸುಸ್ಥಿರ ಮತ್ತು ಎಲ್ಲರನ್ನೊಳಗೊಂಡ ಬೆಳವಣಿಗೆಯತ್ತ ಮುನ್ನಡೆಯುತ್ತಿರುವಂತೆ, ಜೀವನೋಪಾಯ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವಲ್ಲಿ ಗುಣಮಟ್ಟದ ಉದ್ಯೋಗವು ಪ್ರಮುಖ ಕೇಂದ್ರಬಿಂದುವಾಗಿ ಉಳಿಯುತ್ತದೆ. ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರನ್ನು ಉತ್ತೇಜಿಸುವ ಮತ್ತು ಉದ್ಯೋಗ ಸೃಷ್ಟಿಯನ್ನು ಬೆಂಬಲಿಸುವ ಮೂಲಕ, ಪಿಎಂ-ವಿಬಿಆರ್‌ವೈಯು ಭಾರತದ ಔಪಚಾರಿಕ ಉದ್ಯೋಗ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ ಮತ್ತು ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಈ ಯೋಜನೆಯು ತನ್ನ ಮೊದಲ ವರ್ಷವನ್ನು ಪೂರ್ಣಗೊಳಿಸುತ್ತಿದ್ದಂತೆ, ಇದು ಭಾರತದ ಜನಸಂಖ್ಯಾ ಲಾಭಾಂಶದ ಸಂಪೂರ್ಣ ಸಾಮರ್ಥ್ಯವನ್ನು ಮುಕ್ತಗೊಳಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

References

Ministry of Labour and Employment

https://pmvbry.epfindia.gov.in/

https://pmvbry.epfindia.gov.in/pmvbry-scheme/

https://pmvbry.epfindia.gov.in/wp-content/themes/epfo-child/assets/images/PMVBRY-Final.pdf

https://sansad.in/getFile/annex/270/AU1536_GzvOyc.pdf?source=pqars

https://sansad.in/getFile/loksabhaquestions/annex/187/AU1392_4I7wJ2.pdf?source=pqals

https://www.pib.gov.in/PressReleasePage.aspx?PRID=2275419&reg=48&lang=2

https://www.pib.gov.in/PressReleasePage.aspx?PRID=2148270&reg=48&lang=2

https://www.pib.gov.in/PressReleasePage.aspx?PRID=2275547&reg=48&lang=2

Others

http://pmindia.gov.in/hi/news_updates/%E0%A4%AA%E0%A5%8D%E0%A4%B0%E0%A4%A7%E0%A4%BE%E0%A4%A8%E0%A4%AE%E0%A4%82%E0%A4%A4%E0%A5%8D%E0%A4%B0%E0%A5%80-%E0%A4%B6%E0%A5%8D%E0%A4%B0%E0%A5%80-%E0%A4%A8%E0%A4%B0%E0%A5%87%E0%A4%A8%E0%A5%8D-1154/

https://www.youtube.com/shorts/UMSneQm7H90

https://www.youtube.com/watch?v=GQt75TsuzBI&list=PLNLJCvbS5aqS4h_BsqW9UboJ2N9a5RGKk&index=11

Click here to see pdf

 

*****

 

(Explainer ID: 159408) आगंतुक पटल : 207
Provide suggestions / comments
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Telugu , Malayalam