Social Welfare
ಪಿಎಂ ವಿದ್ಯಾಲಕ್ಷ್ಮಿ ಯೋಜನೆ
ಭಾರತದಲ್ಲಿ ಶೈಕ್ಷಣಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು
Posted On:
29 JUL 2026 1:26PM
|
ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯು ಶಿಕ್ಷಣ ಸಚಿವಾಲಯದ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಸುಲಭವಾಗಿ ದೊರೆಯುವಂತೆ ಮಾಡುವ ಗುರಿಯನ್ನು ಹೊಂದಿದೆ. ಈ ಯೋಜನೆಯು ದೇಶದ ಉನ್ನತ ಶ್ರೇಣಿಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಇಂತಹ ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆ ಅಥವಾ ಜಾಮೀನುದಾರರ ಅವಶ್ಯಕತೆಯಿಲ್ಲದೆ ಶಿಕ್ಷಣ ಸಾಲವನ್ನು ಒದಗಿಸುತ್ತದೆ. ಅಲ್ಲದೆ, ಕುಟುಂಬದ ಆದಾಯದ ಆಧಾರದ ಮೇಲೆ ಬಡ್ಡಿ ವಿನಾಯಿತಿ ನೀಡುವ ಮೂಲಕ ಫಲಾನುಭವಿಗಳಿಗೆ ಬೆಂಬಲ ನೀಡುತ್ತದೆ ಮತ್ತು ಶಿಕ್ಷಣ ಪಡೆಯುವಲ್ಲಿ ಎದುರಾಗುವ ಆರ್ಥಿಕ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಈ ಮೂಲಕ, 2030 ರ ವೇಳೆಗೆ ಎಲ್ಲರಿಗೂ ಒಳಗೊಳ್ಳುವ ಸಮಾನ ಮತ್ತು ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳುವ ಹಾಗೂ ಆಜೀವ ಕಲಿಕಾ ಅವಕಾಶಗಳನ್ನು ಉತ್ತೇಜಿಸುವ ಎಸ್‌ಡಿಜಿ 4 ರ (ಸುಸ್ಥಿರ ಅಭಿವೃದ್ಧಿ ಗುರಿ 4) ಸಾಧನೆಯತ್ತ ಭಾರತದ ಪ್ರಗತಿಗೆ ಈ ಯೋಜನೆಯು ಕೊಡುಗೆ ನೀಡುತ್ತದೆ.
|
ಉನ್ನತ ಶಿಕ್ಷಣಕ್ಕೆ ಇರುವ ಆರ್ಥಿಕ ಅಡೆತಡೆಗಳನ್ನು ನಿವಾರಿಸುವುದು
ಕಳೆದ ದಶಕದಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣದ ದಾಖಲಾತಿಯು ವೇಗವಾಗಿ ವಿಸ್ತರಿಸಿದ್ದು, ಒಟ್ಟು ದಾಖಲಾತಿ ಅನುಪಾತವು 2014-15 ರಲ್ಲಿ ಶೇಕಡಾ 23.7 ರಿಂದ 2023-24 ರಲ್ಲಿ ಶೇಕಡಾ 30.0 ಕ್ಕೆ ಏರಿದೆ. ಆದಾಗ್ಯೂ, ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಮುಗ್ಗಟ್ಟಿನಿಂದಾಗಿ ದೇಶದ ಉನ್ನತ ಶ್ರೇಣಿಯ ಸಂಸ್ಥೆಗಳಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆಯುವುದು ಕಷ್ಟಕರವಾಗಿಯೇ ಉಳಿದಿದೆ. ಅನೇಕರು ಶಿಕ್ಷಣ ಸಾಲದ ಮೂಲಕ ಈ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಾರೆ, ಆದರೆ ಈ ಸಾಲಗಳ ಮೇಲಿನ ಹೆಚ್ಚಿನ ಬಡ್ಡಿ ದರವನ್ನು ಭರಿಸಲಾಗದವರೂ ಬಹಳಷ್ಟಿದ್ದಾರೆ. ತಮ್ಮ ಪ್ರತಿಭೆಯ ಹೊರತಾಗಿಯೂ ಐಐಟಿಗಳು, ಐಐಎಂಗಳು ಮತ್ತು ದೇಶದ ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ಈ ವಿದ್ಯಾರ್ಥಿಗಳ ಕನಸುಗಳು ಈಚೆಗೆ ಈ ಕಾರಣದಿಂದ ಈಡೇರದೆ ಉಳಿಯುತ್ತವೆ.
ಕೇಂದ್ರ ಸಚಿವ ಸಂಪುಟವು 2024ರ ನವೆಂಬರ್ 6 ರಂದು ಅನುಮೋದಿಸಿರುವ ಪಿಎಂ ವಿದ್ಯಾಲಕ್ಷ್ಮಿ ಯೋಜನೆಯು ಇಂತಹ ವಿದ್ಯಾರ್ಥಿಗಳ ನೆರವಿಗೆ ಬರುತ್ತದೆ. ಇದು ಒಂದು ಮಿಷನ್-ಮೋಡ್ ಹಸ್ತಕ್ಷೇಪವಾಗಿದ್ದು, ದೇಶದ ನಿರ್ದಿಷ್ಟ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮದೇ ಆದ ಅರ್ಹತೆಯ ಮೇರೆಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆ ಅಥವಾ ಜಾಮೀನುದಾರರ ಅವಶ್ಯಕತೆಯಿಲ್ಲದೆ ಶಿಕ್ಷಣ ಸಾಲವನ್ನು ಒದಗಿಸಲಾಗುತ್ತದೆ. ವಾರ್ಷಿಕ ಕುಟುಂಬದ ಆದಾಯ ₹8,00,000 ವರೆಗೆ ಇರುವ ವಿದ್ಯಾರ್ಥಿಗಳಿಗೆ ಶೇಕಡಾ 3ರಷ್ಟು ಬಡ್ಡಿ ವಿನಾಯಿತಿಯನ್ನು ಸಹ ನೀಡಲಾಗುತ್ತದೆ.
ಈ ಸಾಲಗಳನ್ನು ಪಡೆಯುವ ಸಂಪೂರ್ಣ ಪ್ರಕ್ರಿಯೆಯು ಸರಳವಾಗಿದ್ದು, ಪಾರದರ್ಶಕವಾಗಿದೆ, ವಿದ್ಯಾರ್ಥಿ ಸ್ನೇಹಿಯಾಗಿದೆ ಮತ್ತು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿದೆ. ವಿದ್ಯಾರ್ಥಿಗಳು ಶಿಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸಲು, ತಮ್ಮ ಅರ್ಜಿಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡಲು, ಬಡ್ಡಿ ವಿನಾಯಿತಿಯನ್ನು ಕೋರಲು ಮತ್ತು ದೂರುಗಳನ್ನು ದಾಖಲಿಸಲು ಒಂದು ಏಕೀಕೃತ ಪೋರ್ಟಲ್ ಲಭ್ಯವಿದೆ.
ಈ ಯೋಜನೆಯು ರಾಷ್ಟ್ರೀಯ ಶಿಕ್ಷಣ ನೀತಿ 2020 ರಿಂದ ರೂಪುಗೊಂಡಿದ್ದು, ಸಾರ್ವಜನಿಕ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ) ಅಧ್ಯಯನ ಮಾಡಲು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಕ್ರಮಗಳ ಮೂಲಕ ಆರ್ಥಿಕ ನೆರವು ಲಭ್ಯವಾಗುವಂತೆ ಮಾಡಬೇಕು ಎಂದು ಶಿಫಾರಸು ಮಾಡುತ್ತದೆ. ಹಣದ ಕೊರತೆಯು ಯಾವುದೇ ಪ್ರತಿಭಾವಂತ ವಿದ್ಯಾರ್ಥಿ ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಓದುವುದನ್ನು ತಡೆಯಬಾರದು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ. ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯು ಎಲ್ಲರಿಗೂ ಒಳಗೊಳ್ಳುವ ಸಮಾನ ಮತ್ತು ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವ ಹಾಗೂ ಆಜೀವ ಕಲಿಕಾ ಅವಕಾಶಗಳನ್ನು ಒದಗಿಸುವ ಎಸ್‌ಡಿಜಿ 4 ಮತ್ತು ಎನ್ಇಪಿ2020 ರ ಗುರಿಗಳಿಗೆ ಸಕಾರಾತ್ಮಕವಾಗಿ ಕೊಡುಗೆ ನೀಡುತ್ತದೆ.
ವೈಶಿಷ್ಟ್ಯಗಳು, ಪ್ರಯೋಜನಗಳು ಮತ್ತು ವ್ಯಾಪ್ತಿ
ದೇಶದ ನಿರ್ದಿಷ್ಟಪಡಿಸಿದ ಕ್ಯೂಎಚ್‌ಇಐಗಳಲ್ಲಿ ತಮ್ಮದೇ ಆದ ಅರ್ಹತೆಯ ಮೇರೆಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯು ಯಾವುದೇ ಭದ್ರತೆ ಮತ್ತು ಜಾಮೀನುದಾರರಿಲ್ಲದ ಶಿಕ್ಷಣ ಸಾಲಗಳನ್ನು ಒದಗಿಸುತ್ತದೆ. ಪ್ರಸ್ತುತ, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಸೇರಿದಂತೆ 1,425 ಕ್ಯೂಎಚ್‌ಇಐಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ. ಮ್ಯಾನೇಜ್‌ಮೆಂಟ್ ಕೋಟಾ, ಎನ್‌ಆರ್‌ಐ ಕೋಟಾ ಇತ್ಯಾದಿ ಪ್ರವೇಶಗಳಿಗೆ ಈ ಸೌಲಭ್ಯ ಸಿಗುವುದಿಲ್ಲ.
ಬ್ಯಾಂಕ್‌ಗಳಿಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಬೆಂಬಲ ನೀಡುವ ಸಲುವಾಗಿ, ₹7.5 ಲಕ್ಷದವರೆಗಿನ ಸಾಲಗಳಿಗೆ ಭಾರತ ಸರ್ಕಾರದಿಂದ ಶೇಕಡಾ 75 ರಷ್ಟು ಕ್ರೆಡಿಟ್ ಗ್ಯಾರೆಂಟಿ ಒದಗಿಸಲಾಗುತ್ತದೆ. ವಾರ್ಷಿಕ ಕುಟುಂಬದ ಆದಾಯ ₹8 ಲಕ್ಷದವರೆಗೆ ಇರುವ ವಿದ್ಯಾರ್ಥಿಗಳಿಗೆ, ಈ ಯೋಜನೆಯು ₹10 ಲಕ್ಷದವರೆಗಿನ ಸಾಲಗಳ ಮೇಲೆ ಶೇಕಡಾ 3ರಷ್ಟು ಬಡ್ಡಿ ವಿನಾಯಿತಿಯನ್ನು ಒದಗಿಸುತ್ತದೆ. ಇದು ವಾರ್ಷಿಕ ಕುಟುಂಬದ ಆದಾಯ ₹4.5 ಲಕ್ಷದವರೆಗೆ ಇರುವ ವಿದ್ಯಾರ್ಥಿಗಳಿಗೆ ಈಗಾಗಲೇ ನೀಡಲಾಗುತ್ತಿರುವ ಪೂರ್ಣ ಬಡ್ಡಿ ವಿನಾಯಿತಿಯ ಜೊತೆಗೆ ಲಭ್ಯವಿರುತ್ತದೆ.

ಭದ್ರತೆ ಮತ್ತು ಜಾಮೀನುದಾರರಿಲ್ಲದ ಶಿಕ್ಷಣ ಸಾಲಗಳು
ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯ ಅಡಿಯಲ್ಲಿ, ಅರ್ಹ ಕ್ಯೂಎಚ್‌ಇಐಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಯಾವುದೇ ಆಸ್ತಿ ಭದ್ರತೆ ಅಥವಾ ಮೂರನೇ ವ್ಯಕ್ತಿಯ ಖಾತರಿಯನ್ನು ನೀಡದೆ ಶಿಕ್ಷಣ ಸಾಲವನ್ನು ಪಡೆಯಬಹುದು. ಶಿಕ್ಷಣ ಸಾಲದ ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಇದು ಕೋರ್ಸ್ ಶುಲ್ಕ, ಕ್ಯೂಎಚ್‌ಇಐ ವಿಧಿಸುವ ಇತರ ಶುಲ್ಕಗಳು ಮತ್ತು ಸಂಬಂಧಿತ ವೆಚ್ಚಗಳನ್ನು (ಮೆಸ್, ಹಾಸ್ಟೆಲ್ ಶುಲ್ಕ, ಕ್ಯೂಎಚ್‌ಇಐನ ಮರುಪಾವತಿಸಬಹುದಾದ ಮತ್ತು ಮರುಪಾವತಿಸಲಾಗದ ಇತರ ಶುಲ್ಕಗಳು, ಸಮಂಜಸವಾದ ಗುಣಮಟ್ಟದ ಲ್ಯಾಪ್‌ಟಾಪ್‌ನ ವೆಚ್ಚ ಮತ್ತು ಕೋರ್ಸ್ ಅವಧಿಯಲ್ಲಿ ವಿದ್ಯಾರ್ಥಿಗೆ ಅಗತ್ಯವಿರುವ ಜೀವನ ವೆಚ್ಚ) ಅವಲಂಬಿಸಿರುತ್ತದೆ ಮತ್ತು ಎಲ್ಲಾ ಆದಾಯ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಸಾಲ ನೀಡುವ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಾಲ ನೀಡಲು ಉತ್ತೇಜನ ನೀಡುವ ಸಲುವಾಗಿ, ಸರ್ಕಾರವು ₹7.5 ಲಕ್ಷದವರೆಗಿನ ಸಾಲಗಳಿಗೆ ಶೇಕಡಾ 75 ರಷ್ಟು ಕ್ರೆಡಿಟ್ ಗ್ಯಾರೆಂಟಿಯನ್ನು ಒದಗಿಸುತ್ತದೆ. ಇದು ಸಾಲ ನೀಡುವವರ ಜುಲುಮೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಸಾಲಭ್ಯವನ್ನು ಸುಧಾರಿಸುತ್ತದೆ.
ಈ ಯೋಜನೆಯಡಿಯಲ್ಲಿ ಶಿಕ್ಷಣ ಸಾಲದ ಮೇಲೆ ವಿಧಿಸಲಾಗುವ ಬಡ್ಡಿ ದರವು ಆಯಾ ಬ್ಯಾಂಕ್‌ನ ಬಾಹ್ಯವಾಗಿ ಬೆಂಚ್‌ಮಾರ್ಕ್ ಮಾಡಲಾದ ಸಾಲದ ದರ + 0.5% ಗೆ ಸೀಮಿತವಾಗಿರುತ್ತದೆ. ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯ ವ್ಯಾಪ್ತಿಗೆ ಬಾರದ ಇತರ ಶಿಕ್ಷಣ ಸಾಲಗಳ ಮೇಲೆ ಬ್ಯಾಂಕ್ ವಿಧಿಸುವ ಬಡ್ಡಿ ದರಕ್ಕಿಂತ ಈ ದರವು ಯಾವಾಗಲೂ ಕಡಿಮೆಯಿರುತ್ತದೆ. ಶಿಕ್ಷಣ ಸಾಲದ ಮರುಪಾವತಿ ಅವಧಿಯು ಕೋರ್ಸ್ ಅವಧಿ ಮತ್ತು ಒಂದು ವರ್ಷದ ಮೊರಟೋರಿಯಮ್ ಅವಧಿಯನ್ನು ಹೊರತುಪಡಿಸಿ 15 ವರ್ಷಗಳವರೆಗೆ ಇರುತ್ತದೆ. ಈ ಸಾಲವು ಭಾರತದಲ್ಲಿನ ಎಲ್ಲಾ ಡಿಗ್ರಿ / ಡಿಪ್ಲೊಮಾ ಕಾರ್ಯಕ್ರಮಗಳಿಗೆ ಲಭ್ಯವಿದೆ ಮತ್ತು ಇಂತಹ ಸಾಲಗಳನ್ನು ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಈ ಯೋಜನೆಯಲ್ಲಿ ಭಾಗವಹಿಸುವ ಶೆಡ್ಯೂಲ್ಡ್ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳ ಮೂಲಕ ಶಿಕ್ಷಣ ಸಾಲವನ್ನು ಒದಗಿಸಲಾಗುತ್ತದೆ.
ಬಡ್ಡಿ ವಿನಾಯಿತಿ
ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯು ಪಿಎಂ-ಯುಎಸ್ಪಿ ಸಿಎಸ್ಐಎಸ್ (ಪಿಎಂ-ಯುಎಸ್ಪಿ ಸಿಎಸ್ಐಎಸ್ - ಪ್ರಧಾನಮಂತ್ರಿ ಉಚ್ಚತರ ಶಿಕ್ಷಣ ಪ್ರೋತ್ಸಾಹ ಕೇಂದ್ರ ವಲಯದ ಬಡ್ಡಿ ಸಬ್ಸಿಡಿ ಯೋಜನೆ) ಯನ್ನು ಪೂರೈಸುತ್ತದೆ. ಪಿಎಂ-ಯುಎಸ್ಪಿ ಸಿಎಸ್ಐಎಸ್ ಅಡಿಯಲ್ಲಿ, ಅನುಮೋದಿತ NAAC ಮಾನ್ಯತೆ ಪಡೆದ ಎಚ್‌ಇಐಗಳು / ಎನ್‌ಬಿಎ ಮಾನ್ಯತೆ ಪಡೆದ ಕೋರ್ಸ್‌ಗಳಿಂದ ತಾಂತ್ರಿಕ/ವೃತ್ತಿಪರ ಕೋರ್ಸ್‌ಗಳನ್ನು ಮುಂದುವರಿಸುತ್ತಿರುವ ಮತ್ತು ಯಾರ ವಾರ್ಷಿಕ ಕುಟುಂಬದ ಆದಾಯವು ₹4.5 ಲಕ್ಷದವರೆಗೆ ಇರುತ್ತದೆಯೋ, ಅಂತಹ ವಿದ್ಯಾರ್ಥಿಗಳು ₹10 ಲಕ್ಷದವರೆಗಿನ ಶಿಕ್ಷಣ ಸಾಲಕ್ಕೆ ಮೊರಟೋರಿಯಮ್ ಅವಧಿಯಲ್ಲಿ ಶೇಕಡಾ 100 ರಷ್ಟು ಬಡ್ಡಿ ವಿನಾಯಿತಿಗೆ ಅರ್ಹರಾಗಿರುತ್ತಾರೆ.
ಪಿಎಂ-ವಿದ್ಯಾಲಕ್ಷ್ಮಿ ಬಡ್ಡಿ ವಿನಾಯಿತಿ ಯೋಜನೆಯ ವ್ಯಾಪ್ತಿಯು ವಿಶಾಲವಾಗಿದ್ದು, ನಿರ್ದಿಷ್ಟಪಡಿಸಿದ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಎಲ್ಲಾ ಕೋರ್ಸ್‌ಗಳನ್ನು ಒಳಗೊಂಡಿದೆ. ಈ ಯೋಜನೆಯಡಿಯಲ್ಲಿ, ಕುಟುಂಬದ ವಾರ್ಷಿಕ ಆದಾಯವು ₹8,00,000 ಕ್ಕಿಂತ ಕಡಿಮೆ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೊರಟೋರಿಯಮ್ ಅವಧಿಯಲ್ಲಿ (ಕೋರ್ಸ್ ಅವಧಿ ಮತ್ತು ಒಂದು ವರ್ಷ) ₹10 ಲಕ್ಷದವರೆಗಿನ ಸಾಲಗಳ ಮೇಲೆ ಶೇಕಡಾ 3 ರಷ್ಟು ಬಡ್ಡಿ ವಿನಾಯಿತಿಯನ್ನು ನೀಡಲಾಗುತ್ತದೆ.
ಶಿಕ್ಷಣ ಸಾಲದ ಮೊತ್ತವು ₹10 ಲಕ್ಷಕ್ಕಿಂತ ಹೆಚ್ಚಿದ್ದರೆ, ಕೇವಲ ₹10 ಲಕ್ಷದವರೆಗೆ ವಿತರಿಸಲಾದ ಒಟ್ಟು ಅಸಲು ಮೊತ್ತಕ್ಕೆ ಮಾತ್ರ ಬಡ್ಡಿ ವಿನಾಯಿತಿಯನ್ನು ಒದಗಿಸಲಾಗುತ್ತದೆ.
ಯಾವುದೇ ಇತರ ಕೇಂದ್ರ/ರಾಜ್ಯ ಸರ್ಕಾರದ ವಿದ್ಯಾರ್ಥಿವೇತನ ಅಥವಾ ಯಾವುದೇ ಇತರ ಬಡ್ಡಿ ವಿನಾಯಿತಿ ಯೋಜನೆ ಅಥವಾ ಶುಲ್ಕ ಮರುಪಾವತಿಯನ್ನು ಪಡೆಯುವ ವಿದ್ಯಾರ್ಥಿಯು ಸಿಎಸ್‌ಐಎಸ್ ಅಥವಾ ಪಿಎಂ-ವಿದ್ಯಾಲಕ್ಷ್ಮಿ ಅಡಿಯಲ್ಲಿ ಬಡ್ಡಿ ವಿನಾಯಿತಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ.
ಒಂದು ವರ್ಷದಲ್ಲಿ, ಗರಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳು ಮೊರಟೋರಿಯಮ್ ಅವಧಿಯಲ್ಲಿ ಶೇಕಡಾ 3 ರಷ್ಟು ಬಡ್ಡಿ ವಿನಾಯಿತಿಗೆ ಅರ್ಹರಾಗಿರುತ್ತಾರೆ. ಸಿಎಸ್‌ಐಎಸ್ ಫಲಾನುಭವಿಗಳಿಗೆ ಅಂತಹ ಯಾವುದೇ ಮಿತಿಯಿಲ್ಲ.
ಪಿಎಂ-ಯುಎಸ್ಪಿ ಸಿಎಸ್‌ಐಎಸ್ ಮತ್ತು ಪಿಎಂ-ವಿದ್ಯಾಲಕ್ಷ್ಮಿ ಅಡಿಯಲ್ಲಿ ಬಡ್ಡಿ ವಿನಾಯಿತಿಯನ್ನು ಅರ್ಥಮಾಡಿಕೊಳ್ಳುವುದು – ಪಿಎಂ-ವಿದ್ಯಾಲಕ್ಷ್ಮಿ ಪೋರ್ಟಲ್‌ನಲ್ಲಿ ಲಭ್ಯವಿದೆ:
| |
ಪಿಎಂ-ಯುಎಸ್ಪಿ ಸಿಎಸ್ಐಎಸ್
|
ಪಿಎಂ-ವಿದ್ಯಾಲಕ್ಷ್ಮಿ
|
|
ಸಂಸ್ಥೆಗಳು
|
ಎನ್‌ಎಎಸಿ/ಎನ್‌ಬಿಎ ಮಾನ್ಯತೆ ಪಡೆದ ಸಂಸ್ಥೆಗಳು, ಐಎನ್‌ಐಗಳು, ಇಂಡಿಯನ್ ಮೆಡಿಕಲ್ ಕಮಿಷನ್, ನರ್ಸಿಂಗ್ ಕೌನ್ಸಿಲ್, ಬಾರ್ ಕೌನ್ಸಿಲ್, ಫಾರ್ಮಸಿ ಕೌನ್ಸಿಲ್, ಡೆಂಟಲ್ ಕೌನ್ಸಿಲ್ ಮುಂತಾದ ನಿಯಂತ್ರಕ ಸಂಸ್ಥೆಗಳಿಂದ ಅನುಮೋದಿಸಲ್ಪಟ್ಟ ತಾಂತ್ರಿಕ ಸಂಸ್ಥೆಗಳು
|
ಎನ್‌ಐಆರ್‌ಎಫ್ ನಲ್ಲಿ ಅಗ್ರ 100 - ಖಾಸಗಿ ಸಂಸ್ಥೆಗಳು
ರಾಜ್ಯ ಸರ್ಕಾರಿ – ಎನ್‌ಐಆರ್‌ಎಫ್ ನಲ್ಲಿ ಅಗ್ರ 200
ಉಳಿದ ಕೇಂದ್ರ ಸರ್ಕಾರಿ ಸಂಸ್ಥೆಗಳು
|
|
ಕೋರ್ಸ್
|
ವೃತ್ತಿಪರ / ತಾಂತ್ರಿಕ ಕೋರ್ಸ್‌ಗಳು
|
ಎಲ್ಲಾ ಡಿಗ್ರಿ / ಡಿಪ್ಲೊಮಾ ಕೋರ್ಸ್‌ಗಳು
|
|
ಕುಟುಂಬದ ಆದಾಯ
|
₹ 4.5 ಲಕ್ಷ
|
₹ 8 ಲಕ್ಷ
|
|
ಬಡ್ಡಿ ವಿನಾಯಿತಿ
|
ಮೊರಟೋರಿಯಮ್ ಅವಧಿಯಲ್ಲಿ ಪೂರ್ಣ ಬಡ್ಡಿ ವಿನಾಯಿತಿ
|
ಮೊರಟೋರಿಯಮ್ ಅವಧಿಯಲ್ಲಿ ಶೇಕಡಾ 3ರಷ್ಟು ಬಡ್ಡಿ ವಿನಾಯಿತಿ
|
|
ಸ್ಲಾಟ್ಗಳ ಸಂಖ್ಯೆ
|
ಯಾವುದೇ ಮಿತಿಯಿಲ್ಲ
|
ಪ್ರತಿ ವರ್ಷ 1 ಲಕ್ಷ ಹೊಸ ಸ್ಲಾಟ್‌ಗಳು
|
|
ಸಾಲ ಮರುಪಾವತಿ
|
ಮೊರಟೋರಿಯಮ್ ಅವಧಿಯ (ಕೋರ್ಸ್ ಅವಧಿ + 1 ವರ್ಷ) ನಂತರ 15 ವರ್ಷಗಳವರೆಗೆ
|
ಈ ಯೋಜನೆಯು ಬ್ಯಾಂಕ್‌ನ ಬಾಹ್ಯವಾಗಿ ಬೆಂಚ್‌ಮಾರ್ಕ್ ಮಾಡಲಾದ ಸಾಲದ ದರ + 0.5% ಕ್ಕೆ ಸೀಮಿತವಾದ ಬಡ್ಡಿ ದರಗಳೊಂದಿಗೆ ಕೈಗೆಟುಕುವ ಶಿಕ್ಷಣ ಸಾಲಗಳನ್ನು ನೀಡುತ್ತದೆ. ಇದರ ಜೊತೆಗೆ, ಅಧ್ಯಯನ ಮತ್ತು ಮೊರಟೋರಿಯಮ್ ಅವಧಿಯಲ್ಲಿ ಬಡ್ಡಿಯನ್ನು ಪಾವತಿಸಿದರೆ, ಬ್ಯಾಂಕ್‌ಗಳು ಸಾಲಗಾರರಿಗೆ ಶೇಕಡಾ 1 ರವರೆಗೆ ಹೆಚ್ಚುವರಿ ಬಡ್ಡಿ ರಿಯಾಯಿತಿಯನ್ನು ನೀಡಬಹುದು. ಈ ಯೋಜನೆಯು ಸೆಕ್ಷನ್ 80ಇ ಅಡಿಯಲ್ಲಿ ಪಾವತಿಸಿದ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಸೌಲಭ್ಯವನ್ನೂ ಒದಗಿಸುತ್ತದೆ.
ಬಡ್ಡಿ ವಿನಾಯಿತಿ ಮತ್ತು ಕ್ರೆಡಿಟ್ ಗ್ಯಾರೆಂಟಿ ಪ್ರಯೋಜನಗಳು ಪದವಿಪೂರ್ವ, ಸ್ನಾತಕೋತ್ತರ ಅಥವಾ ಇಂಟಿಗ್ರೇಟೆಡ್ ಕೋರ್ಸ್‌ಗಳಿಗೆ ಒಮ್ಮೆ ಮಾತ್ರ ಲಭ್ಯವಿರುತ್ತವೆ. ಸರ್ಕಾರವು ಈ ಯೋಜನೆಗಾಗಿ 2024-2025 ರಿಂದ 2030-2031 ರವರೆಗೆ ₹ 3,600 ಕೋಟಿಗಳ ಬಜೆಟ್ ಅನ್ನು ಮೀಸಲಿಟ್ಟಿದೆ. ಏಳು ವರ್ಷಗಳ ಅವಧಿಯಲ್ಲಿ 7 ಲಕ್ಷ ಹೊಸ ವಿದ್ಯಾರ್ಥಿಗಳು ಈ ಬಡ್ಡಿ ವಿನಾಯಿತಿಯ ಪ್ರಯೋಜನವನ್ನು ಪಡೆಯುವ ನಿರೀಕ್ಷೆಯಿದೆ.
ವಿದ್ಯಾರ್ಥಿಗಳ ಅರ್ಹತಾ ಮಾನದಂಡಗಳು
- ಭಾರತದ ಯಾವುದೇ ನಿರ್ದಿಷ್ಟಪಡಿಸಿದ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಮೆರಿಟ್ ಆಧಾರಿತ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಈ ಯೋಜನೆಯು ಲಭ್ಯವಿದೆ.
- ಈ ಯೋಜನೆಯು ಎಲ್ಲಾ ಡಿಗ್ರಿ ಮತ್ತು ಡಿಪ್ಲೊಮಾ ಕೋರ್ಸ್‌ಗಳಿಗೆ ಶಿಕ್ಷಣ ಸಾಲವನ್ನು ಒದಗಿಸುತ್ತದೆ.
- ಶಿಕ್ಷಣ ಸಾಲದ ಮರುಪಾವತಿ ಅವಧಿಯು ಮೊರಟೋರಿಯಮ್ ಅವಧಿಯನ್ನು (ಕೋರ್ಸ್ ಅವಧಿ + 1 ವರ್ಷ) ಹೊರತುಪಡಿಸಿ 15 ವರ್ಷಗಳವರೆಗೆ ಇರುತ್ತದೆ.
- ಈ ಎಲ್ಲಾ ಪ್ರಯೋಜನಗಳನ್ನು ಪಡೆಯಲು, ವಿದ್ಯಾರ್ಥಿಗಳು [ಆಧಾರ್] ಮೂಲಕ ನೋಂದಾಯಿಸಿಕೊಳ್ಳಬೇಕು, ತಮ್ಮ ಕೋರ್ಸ್‌ಗಳಲ್ಲಿ ಮುಂದುವರಿಯಬೇಕು ಮತ್ತು ತೃಪ್ತಿಕರವಾದ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳಬೇಕು.
ಹೆಚ್ಚುವರಿ ನಿಬಂಧನೆಗಳು:
- ಅರ್ಜಿದಾರರು ಕೋರ್ßಅನ್ನು ಅರ್ಧದಲ್ಲೇ ನಿಲ್ಲಿಸಬಾರದು ಅಥವಾ ಶಿಸ್ತಿನ ಅಥವಾ ಶೈಕ್ಷಣಿಕ ಕಾರಣಗಳಿಗಾಗಿ ಸಂಸ್ಥೆಯಿಂದ ಹೊರಹಾಕಲ್ಪಡಬಾರದು.
- ಎರಡನೇ ವರ್ಷದಿಂದ ಪ್ರಾರಂಭಿಸಿ, ವಿದ್ಯಾರ್ಥಿಯು ಬಡ್ಡಿ ವಿನಾಯಿತಿ ಪ್ರಯೋಜನಗಳನ್ನು ಮುಂದುವರಿಸಲು ತೃಪ್ತಿಕರ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳಬೇಕು.
- ವಿದ್ಯಾರ್ಥಿಯು ಪದವಿಪೂರ್ವ, ಸ್ನಾತಕೋತ್ತರ ಅಥವಾ ಇಂಟಿಗ್ರೇಟೆಡ್ ಕೋರ್ಸ್‌ಗಾಗಿ ಒಮ್ಮೆ ಮಾತ್ರ ಬಡ್ಡಿ ವಿನಾಯಿತಿ ಮತ್ತು ಕ್ರೆಡಿಟ್ ಗ್ಯಾರೆಂಟಿ ಪ್ರಯೋಜನಗಳನ್ನು ಪಡೆಯಬಹುದು.
ಉನ್ನತ ಶಿಕ್ಷಣ ಸಂಸ್ಥೆಗಳ ಅರ್ಹತಾ ಮಾನದಂಡಗಳು
ಸಂಸ್ಥೆಗಳನ್ನು ಕಿರುಪಟ್ಟಿ ಮಾಡುವ ಮಾನದಂಡಗಳು ಅವುಗಳ ಎನ್‌ಐಆರ್‌ಎಫ್ ಶ್ರೇಯಾಂಕಗಳನ್ನು ಆಧರಿಸಿವೆ. ಇದು ಪ್ರಸ್ತುತ ಕೆಳಗಿನ ಸಂಸ್ಥೆಗಳನ್ನು ಒಳಗೊಂಡಿದೆ:
- ಶಿಕ್ಷಣ ಸಚಿವಾಲಯವು ಪ್ರಕಟಿಸಿದ ಇತ್ತೀಚಿನ ಎನ್‌ಐಆರ್‌ಎಫ್ ಪಟ್ಟಿಯಲ್ಲಿ ಒಟ್ಟಾರೆ/ವರ್ಗ-ನಿರ್ದಿಷ್ಟ ಮತ್ತು/ಅಥವಾ ಡೊಮೈನ್-ನಿರ್ದಿಷ್ಟ ಶ್ರೇಯಾಂಕಗಳಲ್ಲಿ ಅಗ್ರ 100 ಸ್ಥಾನ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳು.
- ಶಿಕ್ಷಣ ಸಚಿವಾಲಯವು ಪ್ರಕಟಿಸಿದ ಇತ್ತೀಚಿನ ಎನ್‌ಐಆರ್‌ಎಫ್ ಪಟ್ಟಿಯಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಆಡಳಿತಕ್ಕೆ ಒಳಪಡುವ ಅಗ್ರ 200 ಶ್ರೇಯಾಂಕಿತ ಉನ್ನತ ಶಿಕ್ಷಣ ಸಂಸ್ಥೆಗಳು.
- ಭಾರತ ಸರ್ಕಾರದ ಆಡಳಿತಕ್ಕೆ ಒಳಪಡುವ ಉಳಿದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು.
ಭಾರತೀಯ ಶಿಕ್ಷಣ ಸಂಸ್ಥೆಗಳ ವಿದೇಶಿ ಕ್ಯಾಂಪಸ್‌ಗಳು, ವಿದೇಶಿ ಶಿಕ್ಷಣ ಸಂಸ್ಥೆಗಳ ಭಾರತೀಯ ಕ್ಯಾಂಪಸ್‌ಗಳು ಮತ್ತು ವಿದೇಶಿ ಶಿಕ್ಷಣ ಸಂಸ್ಥೆಗಳು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಭಾರತದಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡುವ ಮಾನದಂಡವು ರಾಜ್ಯಗಳ ನಡುವೆ ಸಮಾನ ಪ್ರಾಶಸ್ತ್ಯವನ್ನು ಖಚಿತಪಡಿಸುತ್ತದೆ. ಇತ್ತೀಚಿನ ಎನ್‌ಐಆರ್‌ಎಫ್ ಶ್ರೇಯಾಂಕವನ್ನು ಬಳಸಿ ಈ ಪಟ್ಟಿಯನ್ನು ನವೀಕರಿಸಲಾಗುತ್ತದೆ. ಪ್ರಸ್ತುತ, 1,425 ಸಂಸ್ಥೆಗಳು ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ ಮತ್ತು ಪಿಎಂ-ವಿದ್ಯಾಲಕ್ಷ್ಮಿ ಶಿಕ್ಷಣ ಸಾಲಗಳಿಗೆ ಅರ್ಹವಾಗಿವೆ.
ಸೌಲಭ್ಯಗಳನ್ನು ಪಡೆಯಲು ಅನುಸರಿಸಬೇಕಾದ ಹಂತಗಳು
ಬಳಕೆದಾರ ಸ್ನೇಹಿ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ವಿದ್ಯಾರ್ಥಿಗಳಿಗೆ ಸುಲಭವಾಗಿ ಶಿಕ್ಷಣ ಸಾಲ ದೊರೆಯುವಂತೆ ಮಾಡುವ ಮೂಲಕ ಉನ್ನತ ಶಿಕ್ಷಣವನ್ನು ಹೆಚ್ಚು ಸುಲಭಲಭ್ಯವಾಗಿಸುವುದು ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯ ಗುರಿಯಾಗಿದೆ. ಈ ಯೋಜನೆಯು ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ತಮ್ಮ ಅರ್ಜಿಗಳನ್ನು ಟ್ರ್ಯಾಕ್ ಮಾಡಲು ಮತ್ತು ಸಮಯಕ್ಕೆ ಸರಿಯಾಗಿ ಅನುಮೋದನೆ ಹಾಗೂ ವಿತರಣೆಯನ್ನು ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಸಾಲದ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.
ಈ ಯೋಜನೆಯು ಮೀಸಲಾದ ಪೋರ್ಟಲ್ ಮೂಲಕ ಕಾರ್ಯನಿರ್ವಹಿಸುತ್ತದೆ, ಇದು ಈ ಕೆಳಗಿನ ಸೌಲಭ್ಯಗಳನ್ನು ಒದಗಿಸುತ್ತದೆ:
- ಸಾಮಾನ್ಯ ಸಾಲದ ಅರ್ಜಿಗಳು
- ಬ್ಯಾಂಕ್ ಆಯ್ಕೆ
- ಅರ್ಜಿ ಸ್ಥಿತಿಯ ಟ್ರ್ಯಾಕಿಂಗ್
- ಬಡ್ಡಿ ವಿನಾಯಿತಿ ವಿನಂತಿಗಳು
- ಡಿಜಿಟಲ್ ಪ್ರಕ್ರಿಯೆ ಮತ್ತು ಪಾರದರ್ಶಕತೆ

ಪಿಎಂ ವಿದ್ಯಾಲಕ್ಷ್ಮಿ ಡಿಜಿಟಲ್ ರೂಪಿ ಆ್ಯಪ್ (ಸಿಬಿಡಿಸಿ ವಾಲೆಟ್)
ಸಾಲವು ಮಂಜೂರಾಗಿ ವಿತರಣೆಯಾದ ನಂತರ, ಅರ್ಹ ವಿದ್ಯಾರ್ಥಿಗಳು ತಮ್ಮ ಕುಟುಂಬದ ಆದಾಯದ ಆಧಾರದ ಮೇಲೆ ಬಡ್ಡಿ ವಿನಾಯಿತಿಗಾಗಿ ಅರ್ಜಿ ಸಲ್ಲಿಸಬಹುದು. ಸಬ್ಸಿಡಿಯ ಮೊತ್ತವನ್ನು ಫಲಾನುಭವಿಯ ಪಿಎಂ ವಿದ್ಯಾಲಕ್ಷ್ಮಿ ಡಿಜಿಟಲ್ ರೂಪಿ ಆ್ಯಪ್‌ಗೆ ಜಮಾ ಮಾಡಲಾಗುತ್ತದೆ ಮತ್ತು ನಂತರ ಅದನ್ನು ಶಿಕ್ಷಣ ಸಾಲದ ಖಾತೆಗೆ ವರ್ಗಾಯಿಸಲಾಗುತ್ತದೆ.

ಕೇಂದ್ರ ವಲಯದ ಬಡ್ಡಿ ಸಬ್ಸಿಡಿ ಯೋಜನೆ ಮತ್ತು ಪಿಎಂ ವಿದ್ಯಾಲಕ್ಷ್ಮಿ ಯೋಜನೆಯ ಪ್ರಭಾವ
ಭಾರತದಲ್ಲಿ ತಾಂತ್ರಿಕ ಅಥವಾ ವೃತ್ತಿಪರ ಕೋರ್ಸ್‌ಗಳನ್ನು ಮುಂದುವರಿಸಲು ಪಡೆದ ಸಾಲದ ಮೇಲೆ ಮೊರಟೋರಿಯಮ್ ಅವಧಿಯಲ್ಲಿ ಕೇಂದ್ರ ವಲಯದ ಬಡ್ಡಿ ಸಬ್ಸಿಡಿ ಯೋಜನೆಯು ಸಂಪೂರ್ಣ ಬಡ್ಡಿ ಸಬ್ಸಿಡಿಯನ್ನು ಒದಗಿಸುತ್ತದೆ. ವಾರ್ಷಿಕ ಒಟ್ಟು ಪೋಷಕರ/ಕುಟುಂಬದ ಆದಾಯವು ₹ 4.5 ಲಕ್ಷದವರೆಗೆ ಇರುವ ವಿದ್ಯಾರ್ಥಿಗಳು ಈ ಯೋಜನೆಯಡಿ ಅರ್ಹರಾಗಿರುತ್ತಾರೆ.
ಅಸ್ತಿತ್ವದಲ್ಲಿರುವ ಪಿಎಂ-ಯುಎಸ್ಪಿ ಸಿಎಸ್‌ಐಎಸ್ ಅನ್ನು ಪಿಎಂ-ವಿದ್ಯಾಲಕ್ಷ್ಮಿ ಪೋರ್ಟಲ್ ಮತ್ತು ಪಿಎಂ-ವಿದ್ಯಾಲಕ್ಷ್ಮಿ ಡಿಜಿಟಲ್ ರೂಪಿ ವಾಲೆಟ್ ಮೂಲಕ ನಿರ್ವಹಿಸಲಾಗುತ್ತಿದೆ. ಜುಲೈ 22, 2026 ರಂತೆ, ₹ 57.66 ಕೋಟಿ ಮೌಲ್ಯದ ಸಬ್ಸಿಡಿಗಳ ವಿತರಣೆಯನ್ನು ಸಕ್ರಿಯಗೊಳಿಸುವ 35,777 ಸಕ್ರಿಯ ವಾಲೆಟ್‌ಗಳಿವೆ. ಈ ಡಿಜಿಟಲ್ ಕಾರ್ಯವಿಧಾನವು ಪ್ರಯೋಜನಗಳ ವಿತರಣೆಯನ್ನು ಸುಗಮಗೊಳಿಸಲು, ವಿಳಂಬವನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಬೆಂಬಲವು ಅರ್ಹ ವಿದ್ಯಾರ್ಥಿಗಳನ್ನು ಸಮರ್ಥವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿದೆ. 2025-26 ನೇ ಸಾಲಿಗೆ, ಕೆನರಾ ಬ್ಯಾಂಕ್‌ನಲ್ಲಿ ಸ್ವೀಕರಿಸಲಾದ 2024-25 ಕ್ಕೆ ಸಂಬಂಧಿಸಿದ ಒಟ್ಟು ಕ್ಲೈಮ್‌ಗಳು 414,844 ಆಗಿದ್ದು, ಇದರ ಮೊತ್ತ ₹ 892.81 ಕೋಟಿಯಾಗಿದೆ. ಇದು ವಿದ್ಯಾರ್ಥಿ ಫಲಾನುಭವಿಗಳ ಮರುಪಾವತಿ ಹೊೀಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಈ ಪೋರ್ಟಲ್ ವಿದ್ಯಾರ್ಥಿಗಳಿಗೆ ದೂರುಗಳನ್ನು ಎತ್ತಲು ಮತ್ತು ಮೇಲ್ವಿಚಾರಣೆ ಮಾಡಲು ಒಂದು ವೇದಿಕೆಯನ್ನು ಒದಗಿಸುತ್ತದೆ, ಇದು ಪಾರದರ್ಶಕತೆ ಮತ್ತು ವಿವಾದಗಳ ಸಮಯೋಚಿತ ಪರಿಹಾರವನ್ನು ಖಚಿತಪಡಿಸುತ್ತದೆ.
ಪಿಎಂ ವಿದ್ಯಾಲಕ್ಷ್ಮಿ ಯೋಜನೆಯ ಪ್ರಭಾವ
ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯು ಏಕೀಕೃತ, ಸಂಪೂರ್ಣ ಡಿಜಿಟಲ್ ಮತ್ತು ಪಾರದರ್ಶಕ ಶಿಕ್ಷಣ ಸಾಲ ಸುಲಭೀಕರಣ ವೇದಿಕೆಯಾಗಿ ರೂಪುಗೊಂಡಿದೆ. ಇದು ವಿದ್ಯಾರ್ಥಿಗಳಿಗೆ ಒಂದೇ ಪೋರ್ಟಲ್ ಮೂಲಕ ಪಿಎಂ-ವಿದ್ಯಾಲಕ್ಷ್ಮಿ ಸಾಲಗಳು ಸೇರಿದಂತೆ ಎಲ್ಲಾ ರೀತಿಯ ಶಿಕ್ಷಣ ಸಾಲಗಳಿಗೆ ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಮ್ಮ ಅರ್ಜಿಗಳ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಡ್ಯಾಶ್‌ಬೋರ್ಡ್ ಅರ್ಜಿಗಳು, ಅನುಮೋದನೆಗಳು ಮತ್ತು ಪ್ರಕ್ರಿಯೆಯ ಹಂತಗಳ ಕುರಿತು ನೈಜ-ಸಮಯದ ಅಂಕಿಅಂಶಗಳನ್ನು ಒದಗಿಸುತ್ತದೆ.
2025-26 ನೇ ಸಾಲಿನಲ್ಲಿ, ಎಲ್ಲಾ ಶಿಕ್ಷಣ ಯೋಜನೆಗಳ ಅಡಿಯಲ್ಲಿ ಪೋರ್ಟಲ್‌ನಲ್ಲಿ 645,514 ಶಿಕ್ಷಣ ಸಾಲದ ಅರ್ಜಿಗಳು ಸ್ವೀಕರಿಸಲ್ಪಟ್ಟಿವೆ. ಇವುಗಳಲ್ಲಿ, 110,667 ಅರ್ಜಿಗಳು ಪಿಎಂ-ವಿದ್ಯಾಲಕ್ಷ್ಮಿ ಸಾಲಗಳಿಗಾಗಿ ಸಲ್ಲಿಸಲ್ಪಟ್ಟಿದ್ದವು.

2025-26 ನೇ ಸಾಲಿನಲ್ಲಿ, ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯಡಿ 110,667 ಶಿಕ್ಷಣ ಸಾಲದ ಅರ್ಜಿಗಳು ಸ್ವೀಕರಿಸಲ್ಪಟ್ಟಿವೆ. ಇವುಗಳಲ್ಲಿ, 70,852 ಸಾಲಗಳು ಮಂಜೂರಾಗಿವೆ ಮತ್ತು 67,728 ಸಾಲಗಳನ್ನು ಈಗಾಗಲೇ ವಿತರಿಸಲಾಗಿದೆ.
ಲಿಂಗ ಒಳಗೊಳ್ಳುವಿಕೆ
ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯು ಲಿಂಗಭೇದವಿಲ್ಲದೆ ಎಲ್ಲಾ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಬೆಂಬಲ ಸಿಗುವುದನ್ನು ಖಚಿತಪಡಿಸುತ್ತದೆ. ಮಹಿಳೆಯರು ಮತ್ತು ತೃತೀಯಲಿಂಗಿ ವಿದ್ಯಾರ್ಥಿಗಳು ಕೂಡ ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದು, ಇದು ಉನ್ನತ ಶಿಕ್ಷಣವನ್ನು ಹೆಚ್ಚು ಒಳಗೊಳ್ಳುವ ಮತ್ತು ಸುಲಭವಾಗಿ ದೊರೆಯುವಂತೆ ಮಾಡುತ್ತದೆ. ಆರ್ಥಿಕ ಅಡೆತಡೆಗಳನ್ನು ಕಡಿಮೆ ಮಾಡುವ ಮೂಲಕ, ಈ ಯೋಜನೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಮುಂದುವರಿಸಲು, ತಮ್ಮ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಮತ್ತು ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇದು ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸುತ್ತದೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ, ಇದು ಹೆಚ್ಚು ಒಳಗೊಳ್ಳುವ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. 2025-26 ನೇ ಸಾಲಿನಲ್ಲಿ, 368,742 ಪುರುಷರು ಮತ್ತು 276,764 ಮಹಿಳೆಯರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಪುರುಷರಿಗೆ 203,438 ಸಾಲಗಳು ಮತ್ತು ಮಹಿಳೆಯರಿಗೆ 158,629 ಸಾಲಗಳು ಮಂಜೂರಾಗಿವೆ.
ವಂಚಿತ ವಿದ್ಯಾರ್ಥಿಗಳಿಗೆ ಅಧಿಕಾರ ನೀಡುವುದು
ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಗೆ ಸೇರಿಸಲು ಅನುಕೂಲ ಕಲ್ಪಿಸುತ್ತದೆ, ಆ ಮೂಲಕ ಒಟ್ಟಾರೆ ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಸಲ್ಲಿಕೆಯಾದ ಒಟ್ಟು ಅರ್ಜಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ, ಸಾಮಾನ್ಯ ವರ್ಗ, ಕ್ರೀಮಿ ಲೇಯರ್ ಅಲ್ಲದ ಇತರ ಹಿಂದುಳಿದ ವರ್ಗಗಳು, ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ದಿವ್ಯಾಂಗ ವಿದ್ಯಾರ್ಥಿಗಳು ಸೇರಿದ್ದಾರೆ. ಎಲ್ಲಾ ಪ್ರಮುಖ ಸಾಮಾಜಿಕ ಗುಂಪುಗಳ ಅರ್ಜಿದಾರರ ಒಳಗೊಳ್ಳುವಿಕೆಯು ಈ ಯೋಜನೆಯ ವ್ಯಾಪಕ ತಲುಪುವಿಕೆ ಮತ್ತು ಒಳಗೊಳ್ಳುವ ಚೌಕಟ್ಟನ್ನು ಪ್ರತಿಬಿಂಬಿಸುತ್ತದೆ. ಇದು ಆರ್ಥಿಕ ಅಡೆತಡೆಗಳನ್ನು ಕಡಿಮೆ ಮಾಡುವಲ್ಲಿ ಮತ್ತು ಸಮಾಜದ ವಿವಿಧ ವರ್ಗಗಳಾದ್ಯಂತ ಶೈಕ್ಷಣಿಕ ಅವಕಾಶಗಳಿಗೆ ನ್ಯಾಯಯುತ ಹಾಗೂ ಸಮಾನ ಪ್ರವೇಶವನ್ನು ಉತ್ತೇಜಿಸುವಲ್ಲಿ ಈ ಯೋಜನೆಯ ಕೊಡುಗೆಯನ್ನು ಉಲ್ಲೇಖಿಸುತ್ತದೆ.
ಪಿಎಂ ವಿದ್ಯಾಲಕ್ಷ್ಮಿ ಯೋಜನೆ: ಶೈಕ್ಷಣಿಕ ಸಮಾನತೆಯತ್ತ ಒಂದು ಹೆಜ್ಜೆ
ಪಿಎಂ-ವಿದ್ಯಾಲಕ್ಷ್ಮಿಯು ಅರ್ಹ ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆ ಮತ್ತು ಜಾಮೀನುದಾರರಿಲ್ಲದೆ ಶಿಕ್ಷಣ ಸಾಲವನ್ನು ಒದಗಿಸುವ ಮೂಲಕ ಉನ್ನತ ಶಿಕ್ಷಣಕ್ಕೆ ಸಮಾನ ಪ್ರವೇಶವನ್ನು ವಿಸ್ತರಿಸುವ ಒಂದು ಮಹತ್ವದ ಹೆಜ್ಜೆಯಾಗಿದೆ. ಇದರೊಂದಿಗೆ ಅರ್ಹ ಕುಟುಂಬಗಳಿಗೆ ಗುರಿಪಡಿಸಿದ ಬಡ್ಡಿ ವಿನಾಯಿತಿಯ ಬೆಂಬಲವೂ ಇದೆ. ಆರ್ಥಿಕ ಅಡೆತಡೆಗಳನ್ನು ಕಡಿಮೆ ಮಾಡುವ ಮೂಲಕ, ಈ ಯೋಜನೆಯು ಗುಣಮಟ್ಟದ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದು ಬಹಳ ಸಹಕಾರಿಯಾಗಿದೆ.
ಹೀಗೆ ಮಾಡುವುದರ ಮೂಲಕ, ಇದು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಉದ್ದೇಶಗಳನ್ನು ಮುನ್ನಡೆಸುತ್ತದೆ, ಎಲ್ಲರಿಗೂ ಒಳಗೊಳ್ಳುವ ಮತ್ತು ಸಮಾನ ಗುಣಮಟ್ಟದ ಶಿಕ್ಷಣದ ಕುರಿತಾದ ಸುಸ್ಥಿರ ಅಭಿವೃದ್ಧಿ ಗುರಿ 4ರ ಸಾಧನೆಗೆ ಕೊಡುಗೆ ನೀಡುತ್ತದೆ ಮತ್ತು ದೇಶಕ್ಕೆ ನುರಿತ ಹಾಗೂ ಭವಿಷ್ಯಕ್ಕೆ ಸಿದ್ಧವಿರುವ ಮಾನವ ಬಂಡವಾಳದ ನೆಲೆಗೆ ಬೆಂಬಲ ನೀಡುತ್ತದೆ.
References
- Ministry of Electronics and Information Technology (MeitY)
https://www.myscheme.gov.in/schemes/pmvs
- United Nations Department of Economic and Social Affairs
https://sdgs.un.org/goals/goal4#targets_and_indicators
- Press Information Bureau
https://www.pib.gov.in/PressNoteDetails.aspx?NoteId=154950&ModuleId=3®=48&lang=2
- NITI Aayog
https://www.niti.gov.in/sites/default/files/2025-08/india-voluntary-national-review.pdf
- Ministry of Educatio
https://cdnbbsr.s3waas.gov.in/s392049debbe566ca5782a3045cf300a3c/uploads/2025/06/202506041473712372.pdf
https://cdnbbsr.s3waas.gov.in/s392049debbe566ca5782a3045cf300a3c/uploads/2026/07/202607131602421770.pdf
https://aicte.gov.in/sites/default/files/nep2020.pdf
https://www.govtschemes.in/sites/default/files/2024-11/PM%20Vidyalaxmi%20Scheme%20Details.pdf?v=1
https://pmvidyalaxmi.co.in/Index.aspx
https://pmvidyalaxmi.co.in/img/UserManual-Student.pdf
https://www.education.gov.in/en/pradhan-mantri-vidyalaxmi-pm-vidyalaxmi-scheme-guidelines
Click to See PDF
*****
(Explainer ID: 159368)
आगंतुक पटल : 18
Provide suggestions / comments