• Sitemap
  • Advance Search
Farmer's Welfare

ಕೃಷಿ ಯಾಂತ್ರೀಕರಣದ ಉಪ-ಯೋಜನೆ

ಕೃಷಿ ಯಾಂತ್ರೀಕರಣದ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವುದು

Posted On: 09 JUL 2026 11:32AM

ಕೃಷಿ ಯಾಂತ್ರೀಕರಣದ ಉಪ-ಯೋಜನೆಯು ಸಣ್ಣ ರೈತರು, ಮಹಿಳೆಯರು ಮತ್ತು ಹಿಂದುಳಿದ ವರ್ಗದವರಿಗೆ ದೇಶಾದ್ಯಂತ ಗುರಿ ಆಧಾರಿತ ಯಾಂತ್ರೀಕರಣದ ಬೆಂಬಲವನ್ನು ನೀಡುವ ಮೂಲಕ ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಕೃಷಿ ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನದ ಲಭ್ಯತೆಯಲ್ಲಿನ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು, ನಿರ್ಲಕ್ಷಿತ ಮತ್ತು ಈಶಾನ್ಯ ರಾಜ್ಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಈ ಯೋಜನೆಯ ಪ್ರಾರಂಭದಿಂದಲೂ, 9,404.47 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭಾರತದಾದ್ಯಂತ ವೈಯಕ್ತಿಕ ರೈತರಿಗೆ 21.61 ಲಕ್ಷ ಕೃಷಿ ಯಂತ್ರಗಳನ್ನು ವಿತರಿಸಲಾಗಿದೆ. ಅಲ್ಲದೆ, ನಿಖರ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, 52.5 ಕೋಟಿ ರೂಪಾಯಿಗಳ ಆರ್ಥಿಕ ನೆರವಿನೊಂದಿಗೆ 40,918 ಹೆಕ್ಟೇರ್ ಪ್ರದೇಶದಲ್ಲಿ 40,928ಕ್ಕೂ ಹೆಚ್ಚು ಡ್ರೋನ್ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗಿದೆ.

ಕೃಷಿ ಯಾಂತ್ರೀಕರಣದ ಮೂಲಕ ಕೃಷಿಯನ್ನು ಬಲಪಡಿಸುವುದು

ಭಾರತದಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಕೃಷಿ ಯಾಂತ್ರೀಕರಣವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಬೆಳೆ ಉತ್ಪಾದನಾ ಚಕ್ರದ ಉದ್ದಕ್ಕೂ ಕೃಷಿ ಚಟುವಟಿಕೆಗಳಿಗಾಗಿ ಯಂತ್ರಗಳು, ಉಪಕರಣಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸುವುದನ್ನು ಒಳಗೊಂಡಿದೆ. ಈ ಚಟುವಟಿಕೆಗಳು ಭೂಮಿ ಸಿದ್ಧಪಡಿಸುವುದು, ಬಿತ್ತನೆ, ನೀರಾವರಿ, ಸಸ್ಯ ಸಂರಕ್ಷಣೆ, ಕೊಯ್ಲು ಮತ್ತು ಕೊಯ್ಲು ನಂತರದ ನಿರ್ವಹಣೆಯನ್ನು ಒಳಗೊಂಡಿರುತ್ತವೆ. ದೈಹಿಕ ಶ್ರಮ ಮತ್ತು ಪ್ರಾಣಿ ಶಕ್ತಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ, ಯಾಂತ್ರೀಕರಣವು ಕೃಷಿ ಚಟುವಟಿಕೆಗಳನ್ನು ಸಕಾಲದಲ್ಲಿ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಕೃಷಿ ಪದ್ಧತಿಗಳ ಗುಣಮಟ್ಟವನ್ನು ಸುಧಾರಿಸುತ್ತದೆ.

ಭಾರತದಲ್ಲಿ ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು, 2014-15ರಲ್ಲಿ ಕೃಷಿ ಯಾಂತ್ರೀಕರಣದ ಉಪ-ಯೋಜನೆಯನ್ನು ಪ್ರಾರಂಭಿಸಲಾಯಿತು. ಇದು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಎಸ್‌ಎಂಎಎಂ ಯೋಜನೆಯು ಯಾಂತ್ರೀಕರಣದ ಪ್ರಯೋಜನಗಳನ್ನು ತಲುಪದ ವರ್ಗಗಳಿಗೆ ವಿಸ್ತರಿಸುವ ಮೂಲಕ "ತಲುಪದವರನ್ನು ತಲುಪುವುದು" ಎಂಬ ಗುರಿಯನ್ನು ಹೊಂದಿದೆ. ಇದು ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ  ರೈತರು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಮತ್ತು ಗ್ರಾಮೀಣ ಉದ್ಯಮಿಗಳನ್ನು ಒಳಗೊಂಡಂತೆ ಸಣ್ಣ ಮತ್ತು ಅತಿಸಣ್ಣ ರೈತರನ್ನು ಒಳಗೊಂಡಿದೆ.

ಈ ಯೋಜನೆಯು ಕಸ್ಟಮ್ ಹೈರಿಂಗ್ ಸೆಂಟರ್‌ಗಳನ್ನು ಸ್ಥಾಪಿಸುವುದನ್ನು ಉತ್ತೇಜಿಸುತ್ತದೆ. ಇವು ರೈತರಿಗೆ ಬಾಡಿಗೆಗೆ ಲಭ್ಯವಿರುವ ಕೃಷಿ ಯಂತ್ರೋಪಕರಣಗಳು, ಉಪಕರಣಗಳು ಮತ್ತು ಸಲಕರಣೆಗಳ ಗುಂಪನ್ನು ಹೊಂದಿರುವ ಘಟಕಗಳಾಗಿವೆ. ಅಲ್ಲದೆ, ಇದು ಹೈ-ಟೆಕ್ ಮತ್ತು ಹೆಚ್ಚಿನ ಮೌಲ್ಯದ ಕೃಷಿ ಉಪಕರಣಗಳ ಕೇಂದ್ರಗಳ ಅಭಿವೃದ್ಧಿಗೆ ಮತ್ತು ಕೃಷಿ ಯಂತ್ರೋಪಕರಣಗಳ ವಿತರಣೆಗೆ ಬೆಂಬಲ ನೀಡುತ್ತದೆ. ಪ್ರಾತ್ಯಕ್ಷಿಕೆಗಳು ಮತ್ತು ಸಾಮರ್ಥ್ಯ ವೃದ್ಧಿಯ ಉಪಕ್ರಮಗಳ ಮೂಲಕ ಅರಿವು ಮೂಡಿಸುವ ಕಾರ್ಯವನ್ನೂ ಕೈಗೊಳ್ಳಲಾಗುತ್ತದೆ. ಕೃಷಿ ವಿದ್ಯುತ್ ಲಭ್ಯತೆ ಕಡಿಮೆ ಇರುವ ಪ್ರದೇಶಗಳ ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ ಮತ್ತು ಸಿಎಚ್‌ಸಿಗಳ ಮೂಲಕ ಕೈಗೆಟುಕುವ ಬಾಡಿಗೆ ಸೇವೆಗಳನ್ನು ಒದಗಿಸುವ ಮೂಲಕ ಸಣ್ಣ ಹಿಡುವಳಿಗಳು ಹಾಗೂ ಅಧಿಕ ಬಂಡವಾಳ ವೆಚ್ಚದಂತಹ ರಚನಾತ್ಮಕ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತಿದೆ. ಹೆಚ್ಚುವರಿಯಾಗಿ, ಎಸ್‌ಎಂಎಎಂ ಕೃಷಿ ಯಂತ್ರೋಪಕರಣಗಳ ಕಾರ್ಯಕ್ಷಮತೆ ಪರೀಕ್ಷೆ ಮತ್ತು ಪ್ರಮಾಣೀಕರಣವನ್ನು ಬೆಂಬಲಿಸುತ್ತದೆ. ಸಂಬಂಧಪಟ್ಟವರಲ್ಲಿ ಯೋಜನೆಯ ಸ್ವೀಕಾರವನ್ನು ಹೆಚ್ಚಿಸಲು ಗುರಿ ಆಧಾರಿತ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

2007ರಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯು ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಲು ರಾಜ್ಯಗಳನ್ನು ಉತ್ತೇಜಿಸುವ ಒಂದು ಪ್ರಮುಖ ಯೋಜನೆಯಾಗಿದೆ. ಇದು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ರಾಜ್ಯಗಳಿಗೆ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ನೀಡುತ್ತದೆ. ಈ ಯೋಜನೆಯು ಬೆಳೆ ಉತ್ಪಾದನೆ, ಮೂಲಸೌಕರ್ಯ ಅಭಿವೃದ್ಧಿ, ಯಾಂತ್ರೀಕರಣ ಮತ್ತು ಮೌಲ್ಯವರ್ಧನೆ ಸೇರಿದಂತೆ ವ್ಯಾಪಕ ಶ್ರೇಣಿಯ ಮಧ್ಯಸ್ಥಿಕೆಗಳನ್ನು ಒಳಗೊಂಡಿದೆ. 2017-18ರಲ್ಲಿ, ಕೃಷಿ ಮತ್ತು ಸಂಬಂಧಿತ ವಲಯದ ಪುನರುಜ್ಜೀವನಕ್ಕಾಗಿ ಲಾಭದಾಯಕ ವಿಧಾನಗಳ ಅಡಿಯಲ್ಲಿ ಈ ಯೋಜನೆಯನ್ನು ಪುನರ್ರಚಿಸಲಾಯಿತು, ಇದರಲ್ಲಿ ಕೊಯ್ಲಿಗೆ ಪೂರ್ವ ಮತ್ತು ನಂತರದ ಮೂಲಸೌಕರ್ಯಗಳನ್ನು ಬಲಪಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ.

ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು SMAM ನ ಕಾರ್ಯತಂತ್ರದ ಸ್ತಂಭಗಳು

ಕೃಷಿ ಯಾಂತ್ರೀಕರಣದ ಉಪ-ಯೋಜನೆಯನ್ನು ಆಧುನಿಕ ಕೃಷಿ ಉಪಕರಣಗಳ ಲಭ್ಯತೆಯನ್ನು ಸುಧಾರಿಸುವ ಮೂಲಕ, ದೈಹಿಕ ಶ್ರಮವನ್ನು ಕಡಿಮೆ ಮಾಡುವ ಮೂಲಕ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಅಂತರ್ಗತ ಮತ್ತು ಪರಿಣಾಮಕಾರಿ ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ.

  • ತರಬೇತಿ, ಪರೀಕ್ಷೆ, ಪ್ರಾತ್ಯಕ್ಷಿಕೆ ಮತ್ತು ಕೊಯ್ಲು ನಂತರದ ಯಾಂತ್ರೀಕರಣದ ಮೂಲಕ ಕೃಷಿ ಯಾಂತ್ರೀಕರಣದ ಉತ್ತೇಜನ: ಆಧುನಿಕ ಕೃಷಿ ತಂತ್ರಜ್ಞಾನಗಳ ಲಭ್ಯತೆಯನ್ನು ಸುಧಾರಿಸುವ ಮೂಲಕ ಕೃಷಿ ಉತ್ಪಾದಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಇದು ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸುವ ಮೂಲಕ ಸಂಸ್ಕರಣೆ, ಸಂಗ್ರಹಣೆ, ಮೌಲ್ಯವರ್ಧನೆ ಮತ್ತು ಬೆಳೆ ಅವಶೇಷಗಳ ನಿರ್ವಹಣೆಗೆ ಕೊಯ್ಲು ನಂತರದ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.
  • ಕೃಷಿ ಯಂತ್ರೋಪಕರಣಗಳು ಮತ್ತು ಉಪಕರಣಗಳ ಖರೀದಿಗೆ ಆರ್ಥಿಕ ನೆರವು: ನೇರ ಲಾಭ ವರ್ಗಾವಣೆ ವ್ಯವಸ್ಥೆಯ ಮೂಲಕ ವೈಯಕ್ತಿಕ ಕೃಷಿ ಯಂತ್ರೋಪಕರಣಗಳ ಮಾಲೀಕತ್ವಕ್ಕೆ ಸಹಾಯಧನದ ಬೆಂಬಲವನ್ನು ಒದಗಿಸುತ್ತದೆ. ಇದು ಸಾಮಾನ್ಯ ಫಲಾನುಭವಿಗಳಿಗೆ ಯಂತ್ರದ ವೆಚ್ಚದ 40% ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರು, ಸಣ್ಣ ಮತ್ತು ಅತಿಸಣ್ಣ ರೈತರು ಹಾಗೂ ಈಶಾನ್ಯ ರಾಜ್ಯಗಳ ಫಲಾನುಭವಿಗಳಿಗೆ 50% ರಷ್ಟು ವೆಚ್ಚವನ್ನು ಭರಿಸುತ್ತದೆ. ಸಣ್ಣ ಮತ್ತು ಅತಿಸಣ್ಣ ರೈತರು ಸಿಎಚ್‌ಸಿಗಳು, ಎಸ್‌ಎಚ್‌ಜಿಗಳು ಮತ್ತು ಎಫ್‌ಪಿಒಗಳ ಮೂಲಕ ಡ್ರೋನ್‌ಗಳು ಸೇರಿದಂತೆ ಯಾಂತ್ರೀಕೃತ ಸೇವೆಗಳಿಗಾಗಿ ಪ್ರತಿ ಹೆಕ್ಟೇರ್‌ಗೆ 2,000 ರೂಪಾಯಿಗಳನ್ನು ಪಡೆಯುತ್ತಾರೆ.
  • ಬಾಡಿಗೆಗಾಗಿ ಕೃಷಿ ಯಂತ್ರೋಪಕರಣ ಬ್ಯಾಂಕ್ಗಳ ಸ್ಥಾಪನೆ: ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಎಸ್‌ಎಚ್‌ಜಿಗಳು, ಎಫ್‌ಪಿಒಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ 80–90% ಆರ್ಥಿಕ ಬೆಂಬಲವನ್ನು ನೀಡುವ ಮೂಲಕ ಕೃಷಿ ಯಾಂತ್ರೀಕರಣವನ್ನು ಹೆಚ್ಚಿಸುತ್ತದೆ. ಸಿಎಚ್‌ಸಿಗಳಿಗೆ ₹250 ಲಕ್ಷದವರೆಗಿನ ಯೋಜನೆಗಳಿಗೆ ಯೋಜನಾ ವೆಚ್ಚದ 40 ಪ್ರತಿಶತದಷ್ಟು ಆರ್ಥಿಕ ನೆರವು ಲಭ್ಯವಿದ್ದರೆ, ಎಫ್‌ಎಂಬಿಗಳು ₹30 ಲಕ್ಷದವರೆಗಿನ ಯೋಜನೆಗಳಿಗೆ 80 ಪ್ರತಿಶತದಷ್ಟು ಬೆಂಬಲವನ್ನು ಪಡೆಯುತ್ತವೆ.
  • ಹೈ-ಟೆಕ್ ಮತ್ತು ಹೆಚ್ಚಿನ ಉತ್ಪಾದಕತೆಯ ಸಲಕರಣೆಗಳ ಕೇಂದ್ರಗಳ ಸ್ಥಾಪನೆ: ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಹೆಚ್ಚಿನ ಮೌಲ್ಯದ ಉಪಕರಣಗಳ ಲಭ್ಯತೆಯನ್ನು ಹೆಚ್ಚಿಸಲು ಬೆಳೆ-ನಿರ್ದಿಷ್ಟ ಚಟುವಟಿಕೆಗಳಿಗಾಗಿ ಸುಧಾರಿತ, ಹೆಚ್ಚಿನ ಸಾಮರ್ಥ್ಯದ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ.
  • ಈಶಾನ್ಯ ಪ್ರದೇಶದಲ್ಲಿ ಕೃಷಿ ಯಾಂತ್ರೀಕರಣದ ಉತ್ತೇಜನ: ಸಣ್ಣ ಯಂತ್ರಗಳಿಗೆ 100% ವರೆಗಿನ ಸಹಾಯಧನ ಮತ್ತು ಕೃಷಿ ಯಂತ್ರೋಪಕರಣ ಬ್ಯಾಂಕ್‌ಗಳಿಗೆ 95% ಬೆಂಬಲ ಸೇರಿದಂತೆ, ಪ್ರದೇಶ-ನಿರ್ದಿಷ್ಟ ಮಧ್ಯಸ್ಥಿಕೆಗಳ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಬೆಂಬಲವನ್ನು ಒದಗಿಸುತ್ತದೆ.

ಕೃಷಿ ಯಾಂತ್ರೀಕರಣಕ್ಕೆ ಶಕ್ತಿ ತುಂಬುವುದು: ಎಸ್ಎಂಎಎಂ ಆರ್ಥಿಕ ಬೆನ್ನೆಲುಬು

ಎಸ್‌ಎಂಎಎಂ ಅಡಿಯಲ್ಲಿ, 2014-15 ರಿಂದ 2025-26 ರವರೆಗೆ, 9,404.47 ಕೋಟಿ ರೂಪಾಯಿಗಳ ಕೇಂದ್ರ ಸಹಾಯವು ವೈಯಕ್ತಿಕ ರೈತರಿಗೆ 21.61 ಲಕ್ಷ ಯಂತ್ರಗಳ ವಿತರಣೆಗೆ ಬೆಂಬಲ ನೀಡಿದೆ. ಹೆಚ್ಚುವರಿಯಾಗಿ, ಇದು 27,554 ಕಸ್ಟಮ್ ಹೈರಿಂಗ್ ಸೆಂಟರ್‌ಗಳು, 646 ಹೈ-ಟೆಕ್ ಹಬ್‌ಗಳು ಮತ್ತು 25,608 ಕೃಷಿ ಯಂತ್ರೋಪಕರಣ ಬ್ಯಾಂಕ್‌ಗಳ ಸ್ಥಾಪನೆಗೆ ಬೆಂಬಲ ನೀಡಿದೆ. ಎಸ್‌ಎಂಎಎಂ ಅಡಿಯಲ್ಲಿ, ವೈಯಕ್ತಿಕ ಕೃಷಿ ಯಂತ್ರೋಪಕರಣಗಳ ಮಾಲೀಕತ್ವಕ್ಕಾಗಿನ ಫಲಾನುಭವಿಗಳ ಸಂಖ್ಯೆಯು 2020-21 ರಲ್ಲಿ 2.07 ಲಕ್ಷದಿಂದ 2024-25 ರಲ್ಲಿ 2.32 ಲಕ್ಷಕ್ಕೆ ಏರಿಕೆಯಾಗಿದೆ, ಇದು ಯೋಜನೆಯ ವ್ಯಾಪ್ತಿಯಲ್ಲಿನ ಒಟ್ಟಾರೆ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ.

ಈ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವೆಚ್ಚ-ಹಂಚಿಕೆ ವ್ಯವಸ್ಥೆಯನ್ನು ಅನುಸರಿಸುತ್ತದೆ. ಹೆಚ್ಚಿನ ರಾಜ್ಯಗಳಿಗೆ, ನಿಧಿಯ ಮಾದರಿಯು 60:40 ರಷ್ಟಿದ್ದರೆ, ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳಿಗೆ ಇದು 90:10 ರಷ್ಟಿದೆ. ಕೇಂದ್ರಾಡಳಿತ ಪ್ರದೇಶಗಳ ವಿಷಯದಲ್ಲಿ, 100 ಪ್ರತಿಶತ ಕೇಂದ್ರದ ನಿಧಿಯನ್ನು ಒದಗಿಸಲಾಗುತ್ತದೆ. ಈ ವಿಭಿನ್ನ ನಿಧಿಯ ರಚನೆಯು ವೈವಿಧ್ಯಮಯ ಪ್ರಾದೇಶಿಕ ಸನ್ನಿವೇಶಗಳಲ್ಲಿ ಯಾಂತ್ರೀಕರಣದ ವ್ಯಾಪಕ ಅಳವಡಿಕೆಗೆ ಅನುಕೂಲ ಮಾಡಿಕೊಡುತ್ತದೆ.

ನಾವೀನ್ಯತೆ ಕಾರ್ಯರೂಪದಲ್ಲಿ: ಎಸ್‌ಎಂಎಎಂ ಡ್ರೋನ್ ಆಧಾರಿತ ಕೃಷಿಯನ್ನು ಹೇಗೆ ವಿಸ್ತರಿಸುತ್ತಿದೆ ಕೃಷಿ ಯಾಂತ್ರೀಕರಣದ ಉಪ-ಯೋಜನೆಯು ಕೃಷಿ ಕಾರ್ಯಾಚರಣೆಗಳನ್ನು ಸುಧಾರಿಸಲು ಡ್ರೋನ್‌ಗಳ ಬಳಕೆಯನ್ನು ಉತ್ತೇಜಿಸುತ್ತದೆ. ಯೋಜನೆಯಡಿ 52.50 ಕೋಟಿ ರೂಪಾಯಿಗಳ ಆರ್ಥಿಕ ಬೆಂಬಲದೊಂದಿಗೆ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ದೇಶಾದ್ಯಂತ ದೊಡ್ಡ ಪ್ರಮಾಣದ ಕ್ಷೇತ್ರ ಪ್ರಾತ್ಯಕ್ಷಿಕೆಗಳ ಮೂಲಕ ಡ್ರೋನ್ ಅಳವಡಿಕೆಯನ್ನು ಉತ್ತೇಜಿಸಿದೆ.

2023-24 ರಿಂದ 2025-26ರ ಅವಧಿಯಲ್ಲಿ, ಐಸಿಎಎಆರ್‌, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ, 40,918 ಹೆಕ್ಟೇರ್ ಪ್ರದೇಶದಲ್ಲಿ 40,928 ಕಿಸಾನ್ ಡ್ರೋನ್ ಪ್ರಾತ್ಯಕ್ಷಿಕೆಗಳನ್ನು ನಡೆಸಿದೆ. ಈ ಪ್ರಾತ್ಯಕ್ಷಿಕೆಗಳು ನಿಗದಿತ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳಿಗೆ ಅನುಗುಣವಾಗಿ ಪೋಷಕಾಂಶಗಳು, ರಸಗೊಬ್ಬರಗಳು ಮತ್ತು ಕೃಷಿ-ರಸಾಯನಿಕಗಳ ಅನ್ವಯದ ಮೇಲೆ ಕೇಂದ್ರೀಕರಿಸಿದವು.

ವ್ಯಾಪಕ ಅಳವಡಿಕೆಯನ್ನು ಸುಲಭಗೊಳಿಸಲು, ಎಸ್‌ಎಂಎಎಂ ಡ್ರೋನ್ ಖರೀದಿ ಮತ್ತು ಪ್ರಾತ್ಯಕ್ಷಿಕೆಗಳಿಗಾಗಿ ಆರ್ಥಿಕ ನೆರವು ನೀಡುತ್ತದೆ ಐಸಿಎಆರ್‌ ಸಂಸ್ಥೆಗಳು, ಕೆವಿಕೆಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಂತಹ ಅರ್ಹ ಸಂಸ್ಥೆಗಳು ಈ ಚಟುವಟಿಕೆಗಳಿಗಾಗಿ ಪ್ರತಿ ಡ್ರೋನ್‌ಗೆ 10 ಲಕ್ಷ ರೂಪಾಯಿಗಳವರೆಗೆ 100 ಪ್ರತಿಶತ ಆರ್ಥಿಕ ಬೆಂಬಲವನ್ನು ಪಡೆಯುತ್ತವೆ. ರೈತ ಉತ್ಪಾದಕ ಸಂಸ್ಥೆಗಳು 75 ಪ್ರತಿಶತದವರೆಗೆ ಅನುದಾನ ಬೆಂಬಲಕ್ಕೆ ಅರ್ಹವಾಗಿವೆ. ಹೆಚ್ಚುವರಿಯಾಗಿ, ಸೇವಾ ಮಾದರಿಗಳ ಮೂಲಕ ಡ್ರೋನ್‌ಗಳನ್ನು ಬಳಸುವ ಏಜೆನ್ಸಿಗಳಿಗೆ ಪ್ರತಿ ಹೆಕ್ಟೇರ್‌ಗೆ 6,000 ರೂಪಾಯಿಗಳ ಆಕಸ್ಮಿಕ ವೆಚ್ಚದೊಂದಿಗೆ ಬೆಂಬಲ ನೀಡಲಾಗುತ್ತದೆ.

ಇದಲ್ಲದೆ, ಎಸ್‌ಎಂಎಎಂ ಅಂತರ್ಗತಗೊಳಿಸುವಿಕೆಗೆ ಹೆಚ್ಚಿನ ಒತ್ತು ನೀಡುತ್ತದೆ ಮತ್ತು ಒಟ್ಟು ನಿಧಿಯ 30 ಪ್ರತಿಶತವನ್ನು ಮಹಿಳಾ ರೈತರಿಗಾಗಿ ಮೀಸಲಿಡುತ್ತದೆ. ಈ ನಿಬಂಧನೆಯು ಕೃಷಿ ಯಂತ್ರೋಪಕರಣಗಳಿಗೆ ಅವರ ಪ್ರವೇಶವನ್ನು ಸುಧಾರಿಸುವ ಮತ್ತು ಯಾಂತ್ರೀಕೃತ ಕೃಷಿ ವ್ಯವಸ್ಥೆಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಅಂತರವನ್ನು ಕಡಿಮೆ ಮಾಡುವುದು, ಬೆಳವಣಿಗೆಯನ್ನು ಹೆಚ್ಚಿಸುವುದು: ಎಸ್‌ಎಂಎಎಂ ಪರಿಣಾಮ ಎಸ್‌ಎಂಎಎಂ ಕೃಷಿ ಉತ್ಪಾದಕತೆ, ದಕ್ಷತೆ ಮತ್ತು ಒಳಗೊಳ್ಳುವಿಕೆಯನ್ನು ಬಲಪಡಿಸುವಲ್ಲಿ ಒಂದು ಪ್ರಮುಖ ಮಧ್ಯಸ್ಥಿಕೆಯಾಗಿ ಹೊರಹೊಮ್ಮಿದೆ. ಸಣ್ಣ ಮತ್ತು ಅತಿಸಣ್ಣ ರೈತರು, ಮಹಿಳೆಯರು, ಎಸ್‌ಸಿ/ಎಸ್‌ಟಿ ಸಮುದಾಯಗಳು ಮತ್ತು ನಿರ್ಲಕ್ಷಿತ ಪ್ರದೇಶಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಈ ಯೋಜನೆಯು ಸಹಾಯಧನ, ಕಸ್ಟಮ್ ಹೈರಿಂಗ್ ಸೆಂಟರ್‌ಗಳು, ಕೃಷಿ ಯಂತ್ರೋಪಕರಣ ಬ್ಯಾಂಕ್‌ಗಳು ಮತ್ತು ಉದ್ದೇಶಿತ ಪ್ರಾದೇಶಿಕ ಬೆಂಬಲದ ಮೂಲಕ ಯಾಂತ್ರೀಕರಣದಲ್ಲಿನ ನಿರ್ಣಾಯಕ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ತರಬೇತಿ, ಪ್ರಾತ್ಯಕ್ಷಿಕೆಗಳು, ಕೊಯ್ಲು ನಂತರದ ನಿರ್ವಹಣೆ ಮತ್ತು ಡ್ರೋನ್‌ಗಳಂತಹ ಉದಯೋನ್ಮುಖ ತಂತ್ರಜ್ಞಾನಗಳಿಗೆ ನೀಡಲಾದ ಒತ್ತು, ಕೃಷಿಯನ್ನು ಆಧುನೀಕರಿಸುವ ದೂರದೃಷ್ಟಿಯ ವಿಧಾನವನ್ನು ಪ್ರತಿಬಿಂಬಿಸುತ್ತದೆ. ಸಾಂಸ್ಥಿಕ ಮೂಲಸೌಕರ್ಯವನ್ನು ಸೃಷ್ಟಿಸುವ ಮೂಲಕ, ಎಸ್‌ಎಂಎಎಂ ದೈಹಿಕ ಶ್ರಮವನ್ನು ಕಡಿಮೆ ಮಾಡಲು, ಕಾರ್ಯಾಚರಣೆಗಳ ಸಮಯಪ್ರಜ್ಞೆಯನ್ನು ಸುಧಾರಿಸಲು ಮತ್ತು ಹೆಚ್ಚಿನ ಕೃಷಿ ಉತ್ಪಾದಕತೆಯನ್ನು ಬೆಂಬಲಿಸಲು ಕೊಡುಗೆ ನೀಡಿದೆ.

References

Ministry of Agriculture and Farmers Welfare

https://agriportal.cg.nic.in/agridept/CentralScheme/2.3%20smam%20gl.pdf

https://farmech.dac.gov.in/Content/New_Folder/Revised_SMAM_Guidelines_%282025%29_With_Covering.pdf

https://www.pib.gov.in/PressReleasePage.aspx?PRID=2146927&reg=3&lang=2

https://agriwelfare.gov.in/sites/default/files/rkvy_inro.pdf
https://farmech.dac.gov.in/Content/New_Folder/Revised_SMAM_Guidelines_%282025%29_With_Covering.pdf

https://www.pib.gov.in/PressReleasePage.aspx?PRID=2225993&reg=3&lang=1

https://sansad.in/getFile/loksabhaquestions/annex/184/AU1307_PlCuP7.pdf?source=pqals

https://sansad.in/getFile/loksabhaquestions/annex/187/AU2869_rYAp4R.pdf?source=pqals

https://sansad.in/getFile/loksabhaquestions/annex/184/AU4030_u5gVDd.pdf?source=pqals

https://sansad.in/getFile/loksabhaquestions/annex/187/AU2910_hr4mIN.pdf?source=pqals

https://sansad.in/getFile/annex/270/AU1621_FVTLGW.pdf?source=pqars


Ministry of Finance

https://www.indiabudget.gov.in/economicsurvey/doc/echapter.pdf

Ministry of Rural Development

https://sansad.in/getFile/loksabhaquestions/annex/186/AU2540_lhHekv.pdf?source=pqals


PIB Backgrounder

https://www.pib.gov.in/PressReleasePage.aspx?PRID=2248987&reg=3&lang=2

Click here to see pdf 

 

*****

(Explainer ID: 159156) आगंतुक पटल : 29
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Telugu , Malayalam