Technology
ಡಿಜಿಟಲ್ ಇಂಡಿಯಾ
ಪರಿವರ್ತನೆಯ 11 ವರ್ಷಗಳು
Posted On:
27 JUN 2026 5:06PM
|
ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ದೇಶಾದ್ಯಂತ ನಾಗರಿಕರು ಪರಸ್ಪರ ಸಂಪರ್ಕ ಸಾಧಿಸುವ, ಕಲಿಯುವ, ಹಣಕಾಸಿನ ವಹಿವಾಟು ನಡೆಸುವ ಮತ್ತು ಸಾರ್ವಜನಿಕ ಸೇವೆಗಳನ್ನು ಪಡೆಯುವ ರೀತಿಯನ್ನೇ ಬದಲಿಸಿದೆ. ಕಳೆದ 11 ವರ್ಷಗಳಲ್ಲಿ, ಭಾರತವು ವಿಶ್ವದ ಅತಿದೊಡ್ಡ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಗಳಲ್ಲಿ ಒಂದನ್ನು ಬೃಹತ್ ಪ್ರಮಾಣದಲ್ಲಿ ನಿರ್ಮಿಸಿದೆ. ಡಿಜಿಟಲ್ ವೇದಿಕೆಗಳು ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಕೃಷಿ ಮತ್ತು ಕಲ್ಯಾಣ ಯೋಜನೆಗಳ ಪ್ರವೇಶವನ್ನು ವಿಸ್ತರಿಸಿವೆ. ಡಿಜಿಟಲ್ ಪಾವತಿಗಳು ಮತ್ತು ಡಿಜಿಟಲ್ ಆಡಳಿತದ ಆವಿಷ್ಕಾರದಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. 'ಇಂಡಿಯಾ ಸ್ಟ್ಯಾಕ್' ಇದೀಗ ಹಲವು ದೇಶಗಳಿಗೆ ತಲುಪುತ್ತಿರುವುದರಿಂದ, ಒಳಗೊಳ್ಳುವ, ನಾಗರಿಕ-ಕೇಂದ್ರಿತ ಮತ್ತು ತಂತ್ರಜ್ಞಾನ-ಚಾಲಿತ ಅಭಿವೃದ್ಧಿಯಲ್ಲಿ ಡಿಜಿಟಲ್ ಇಂಡಿಯಾವು ಭಾರತದ ಜಾಗತಿಕ ನಾಯಕತ್ವವನ್ನು ಬಲಪಡಿಸುತ್ತಿದೆ.
|
ಡಿಜಿಟಲ್ ಇಂಡಿಯಾದ ವಿಕಸನ
ಡಿಜಿಟಲ್ ಇಂಡಿಯಾ ಕಾರ್ಯಕ್ರಮವು 2026ರ ಜುಲೈ 1ರಂದು 11 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದು, ಇದು ಭಾರತದ ಡಿಜಿಟಲ್ ರೂಪಾಂತರದ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. 2015ಕ್ಕೂ ಮೊದಲು, ಸಾರ್ವಜನಿಕ ಸೇವೆಗಳನ್ನು ಪಡೆಯುವುದೆಂದರೆ ಸುದೀರ್ಘ ಸಾಲುಗಳಲ್ಲಿ ನಿಲ್ಲುವುದು, ಕಾಗದಪತ್ರಗಳ ಕೆಲಸಗಳು ಮತ್ತು ಸೀಮಿತ ಸಂಪರ್ಕವೇ ಆಗಿತ್ತು. ಡಿಜಿಟಲ್ ಇಂಡಿಯಾದ ಮೂಲಕ ಅಂತರ್ಜಾಲ ಸಂಪರ್ಕವನ್ನು ವಿಸ್ತರಿಸಿ, ಸೇವೆಗಳನ್ನು ಆನ್‌ಲೈನ್‌ಗೆ ತರುವ ಮೂಲಕ ಡಿಜಿಟಲ್ ಅಂತರವನ್ನು ಹೋಗಲಾಡಿಸಲು ಸಾಧ್ಯವಾಯಿತು. ಇದು ಡಿಜಿಟಲ್ ಆಡಳಿತವನ್ನು ಬಲಪಡಿಸಿ, ಸೇವೆಗಳನ್ನು ಹೆಚ್ಚು ವೇಗವಾಗಿ, ಪಾರದರ್ಶಕವಾಗಿ ಮತ್ತು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡಿದೆ. ಇಂದು ಲಕ್ಷಾಂತರ ಜನರು ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ಮತ್ತು ಕಲ್ಯಾಣ ಸೇವೆಗಳಿಗಾಗಿ ಡಿಜಿಟಲ್ ವೇದಿಕೆಗಳನ್ನು ಬಳಸುತ್ತಿದ್ದಾರೆ. ಡಿಜಿಟಲ್ ಮೂಲಸೌಕರ್ಯದಲ್ಲಿನ ಸರ್ಕಾರಿ ಹೂಡಿಕೆಯು ಗ್ರಾಮೀಣ ಮತ್ತು ನಗರ ಭಾರತದಾದ್ಯಂತ ಸಂಪರ್ಕವನ್ನು ಸುಧಾರಿಸಿದೆ. ಅಲ್ಲದೆ, ಕೈಗೆಟುಕುವ ದರದ ಇಂಟರ್ನೆಟ್ ಮತ್ತು ಡಿಜಿಟಲ್ ಪ್ರವೇಶದ ಮೂಲಕ ಡಿಜಿಟಲ್ ತಂತ್ರಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವ ‘ಡಿಜಿಟಲ್ ಪ್ರಜಾಪ್ರಭುತ್ವೀಕರಣ’ವನ್ನು ಈ ಕಾರ್ಯಕ್ರಮ ಉತ್ತೇಜಿಸಿದೆ.
ಕಳೆದ ಒಂದು ದಶಕದಲ್ಲಿ, ಡಿಜಿಟಲ್ ಇಂಡಿಯಾವು ಭಾರತದ ಡಿಜಿಟಲ್ ಆರ್ಥಿಕತೆ ಮತ್ತು ‘ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ’ದ ಅಡಿಪಾಯವಾಗಿ ಹೊರಹೊಮ್ಮಿದೆ. ಭಾರತವು ಈಗ ಜಾಗತಿಕ ರಿಯಲ್-ಟೈಮ್ ಡಿಜಿಟಲ್ ಪಾವತಿಗಳಲ್ಲಿ ಮುಂಚೂಣಿಯಲ್ಲಿದ್ದು, ಯುಪಿಐ ಮೂಲಕ ಜಾಗತಿಕ ವಹಿವಾಟಿನ ಪ್ರಮಾಣದ ಸುಮಾರು 49% ರಷ್ಟನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಡಿಜಿಟಲ್ ಆರ್ಥಿಕತೆಯು ಭಾರತದ ಒಟ್ಟು ಆಂತರಿಕ ಉತ್ಪನ್ನದ ಸುಮಾರು 12–14% ರಷ್ಟು ಕೊಡುಗೆ ನೀಡುತ್ತಿದೆ ಮತ್ತು ಮುಂದಿನ ದಶಕದಲ್ಲಿ ಇದು ಸುಮಾರು ಐದನೇ ಒಂದರಷ್ಟು (ಒಂದನೇ ಐದಾಂಶ) ತಲುಪುವ ನಿರೀಕ್ಷೆಯಿದೆ. ಡಿಜಿಟಲ್ ಇಂಡಿಯಾವು ನಾವೀನ್ಯತೆ, ಸ್ಟಾರ್ಟಪ್ ಬೆಳವಣಿಗೆ ಮತ್ತು ವಿವಿಧ ವಲಯಗಳಲ್ಲಿ ತಂತ್ರಜ್ಞಾನದ ಅಳವಡಿಕೆಯನ್ನು ವೇಗಗೊಳಿಸಿದೆ. ಜೊತೆಗೆ, ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸೈಬರ್ ಭದ್ರತೆಯಲ್ಲಿ ಭಾರತದ ಸಾಮರ್ಥ್ಯವನ್ನು ವೃದ್ಧಿಸಿದೆ. ‘ವಿಕಸಿತ ಭಾರತ 2047’ರ ಗುರಿಯತ್ತ ಭಾರತ ಸಾಗುತ್ತಿರುವಾಗ, ಡಿಜಿಟಲ್ ಇಂಡಿಯಾವು ಅಂತರ್ಗತ ಬೆಳವಣಿಗೆ, ತಾಂತ್ರಿಕ ಸ್ವಾವಲಂಬನೆ ಮತ್ತು ದೇಶಾದ್ಯಂತ ನಾಗರಿಕರ ಸಬಲೀಕರಣದ ಚಾಲನಾ ಶಕ್ತಿಯಾಗಿ ಮುಂದುವರಿದಿದೆ.
ಡಿಜಿಟಲ್ ಇಂಡಿಯಾದ ಒಂಬತ್ತು ಸ್ತಂಭಗಳು
ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಡಿಜಿಟಲ್ ಪ್ರವೇಶವನ್ನು ವಿಸ್ತರಿಸಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಒಂದು ಏಕೀಕೃತ ಚೌಕಟ್ಟಿನ ರೂಪದಲ್ಲಿ 9 ಸ್ತಂಭಗಳ ಮೇಲೆ ನಿರ್ಮಿಸಲ್ಪಟ್ಟಿದೆ.

ಸ್ತಂಭ 1: ಬ್ರಾಡ್‌ಬ್ಯಾಂಡ್ ಹೆದ್ದಾರಿಗಳು ದೇಶಾದ್ಯಂತ ಡಿಜಿಟಲ್ ಅಂತರವನ್ನು ಹೋಗಲಾಡಿಸಲು ಮೊಬೈಲ್ ಸಂಪರ್ಕವು ಅತ್ಯಂತ ನಿರ್ಣಾಯಕವಾಗಿದೆ. ಭಾರತ್‌ನೆಟ್-1 ಮತ್ತು ಭಾರತ್‌ನೆಟ್-2 ಅಡಿಯಲ್ಲಿ, ದೇಶದ 2.22 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಲಾಗಿತ್ತು. 2026ರ ಜನವರಿ ವೇಳೆಗೆ, ಸುಮಾರು 2.15 ಲಕ್ಷ ಗ್ರಾಮ ಪಂಚಾಯಿತಿಗಳು, ಅಂದರೆ ಸುಮಾರು 97% ಪಂಚಾಯಿತಿಗಳನ್ನು ಸಂಪರ್ಕಿಸಲಾಗಿದೆ. ಇದಕ್ಕಾಗಿ ದೇಶಾದ್ಯಂತ ಸುಮಾರು 7 ಲಕ್ಷ ಕಿಲೋಮೀಟರ್‌ಗಳಷ್ಟು ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಇದು ಗ್ರಾಮೀಣ ಭಾರತದಲ್ಲಿ ಇ-ಆಡಳಿತ, ಡಿಜಿಟಲ್ ಪಾವತಿಗಳು, ಆನ್‌ಲೈನ್ ಶಿಕ್ಷಣ, ಟೆಲಿಮೆಡಿಸಿನ್ ಮತ್ತು ಸ್ಥಳೀಯ ಉದ್ಯಮಶೀಲತೆಯನ್ನು ಗಮನಾರ್ಹವಾಗಿ ಬಲಪಡಿಸಿದೆ.
ಸ್ತಂಭ 2: ಸಾರ್ವತ್ರಿಕ ಮೊಬೈಲ್ ಸಂಪರ್ಕ ಪ್ರವೇಶ ಡಿಜಿಟಲ್ ಆಡಳಿತ ಮತ್ತು ಅಂತರ್ಗತ ಆರ್ಥಿಕ ಬೆಳವಣಿಗೆಗೆ ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಅತ್ಯಗತ್ಯವಾಗಿದೆ. 2026ರ ಮಾರ್ಚ್ ಅಂತ್ಯದ ವೇಳೆಗೆ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಚಂದಾದಾರರ ಸಂಖ್ಯೆ 106.58 ಕೋಟಿಗೆ ಏರಿಕೆಯಾಗಿದೆ. ಇದು ಗ್ರಾಮೀಣ ಭಾರತದಾದ್ಯಂತ ಕೊನೆಯ ಹಂತದವರೆಗೆ ವಿಶ್ವಾಸಾರ್ಹ ಡಿಜಿಟಲ್ ಸಂಪರ್ಕವನ್ನು ಬಲಪಡಿಸಿದೆ.
ಸ್ತಂಭ 3: ಸಾರ್ವಜನಿಕ ಇಂಟರ್ನೆಟ್ ಪ್ರವೇಶ ಕಾರ್ಯಕ್ರಮ ಸುಲಭವಾಗಿ ಲಭ್ಯವಿರುವ ಡಿಜಿಟಲ್ ಕೇಂದ್ರಗಳು ನಾಗರಿಕರಿಗೆ ತಮ್ಮ ಮನೆಯ ಸಮೀಪದಲ್ಲೇ ಸೇವೆಗಳನ್ನು ಪಡೆಯಲು ಸಹಾಯ ಮಾಡುತ್ತವೆ. ಇಂದು 6.5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳು ಮತ್ತು 1.6 ಲಕ್ಷ ಅಂಚೆ ಕಚೇರಿಗಳು ಡಿಜಿಟಲ್ ಸೇವೆಗಳನ್ನು ತಲುಪಿಸುತ್ತಿವೆ. ಈ ಕೇಂದ್ರಗಳು ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಇ-ಆಡಳಿತ, ಬ್ಯಾಂಕಿಂಗ್ ಮತ್ತು ನಾಗರಿಕ ಸೇವೆಗಳನ್ನು ಒದಗಿಸುತ್ತಿವೆ.
ಸ್ತಂಭ 4: ಇ-ಆಡಳಿತ: ತಂತ್ರಜ್ಞಾನದ ಮೂಲಕ ಆಡಳಿತ ಸುಧಾರಣೆ ಸೇವೆಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ತಲುಪಿಸಲು ರೂಪಿಸಲಾದ ಇ-ಆಡಳಿತವು, ಕಾಗದರಹಿತ, ಸಮಗ್ರ ಮತ್ತು ಸಾರ್ವಜನಿಕ-ಕೇಂದ್ರಿತ ಆಡಳಿತವನ್ನು ಉತ್ತೇಜಿಸುತ್ತದೆ. ಇಂದು ಡಿಜಿಲಾಕರ್ ಮತ್ತು ನ್ಯಾಷನಲ್ ಸಿಂಗಲ್ ಸೈನ್-ಆನ್ ನಂತಹ ವೇದಿಕೆಗಳು ಪ್ರಮಾಣಪತ್ರಗಳು, ಅರ್ಜಿಗಳು, ಪಾವತಿಗಳು ಮತ್ತು ಸಾರ್ವಜನಿಕ ಸೇವೆಗಳಿಗೆ ತಡೆರಹಿತ ಪ್ರವೇಶವನ್ನು ಕಲ್ಪಿಸುತ್ತಿವೆ. ಇದು ಕಾಗದಪತ್ರಗಳ ಕೆಲಸವನ್ನು ಕಡಿಮೆ ಮಾಡಿ, ಜನರ ಜೀವನವನ್ನು ಸುಲಭಗೊಳಿಸಿದೆ.
ಸ್ತಂಭ 5: ಇ-ಕ್ರಾಂತಿ: ಸೇವೆಗಳ ಎಲೆಕ್ಟ್ರಾನಿಕ್ ವಿತರಣೆ ಡಿಜಿಟಲ್ ಇಂಡಿಯಾದ ಸೇವಾ ವಿತರಣಾ ಸ್ತಂಭವಾಗಿರುವ 'ಇ-ಕ್ರಾಂತಿ', ಭೌತಿಕ ಆಡಳಿತದಿಂದ ಡಿಜಿಟಲ್ ಆಡಳಿತದತ್ತ ಬದಲಾವಣೆಯನ್ನು ವೇಗಗೊಳಿಸಿದೆ. ಇ-ಹಾಸ್ಪಾಟಲ್, ಇ-ಸಂಜೀವಿನಿ ಮತ್ತು ಇ-ಕೋರ್ಟ್ಸ್ ನಂತಹ ಸಮಗ್ರ ವೇದಿಕೆಗಳು ಪ್ರಮಾಣಪತ್ರಗಳು, ಆರೋಗ್ಯ ಮತ್ತು ನ್ಯಾಯಾಂಗ ಸೇವೆಗಳನ್ನು ಪಡೆಯುವುದನ್ನು ಸರಳಗೊಳಿಸಿವೆ. ಇದು ಆಡಳಿತವನ್ನು ಹೆಚ್ಚು ದಕ್ಷ ಮತ್ತು ನಾಗರಿಕ-ಕೇಂದ್ರಿತವನ್ನಾಗಿ ಮಾಡಿದೆ.
|
ನಿಮಗೆ ಗೊತ್ತೇ? 'ಇ-ಕೋರ್ಟ್ಸ್' ಮಿಷನ್ ಮೋಡ್ ಯೋಜನೆಯು ಭಾರತದ ಕಾಗದ ಆಧಾರಿತ ನ್ಯಾಯಾಂಗ ವ್ಯವಸ್ಥೆಯನ್ನು ಡಿಜಿಟಲ್ ನ್ಯಾಯ ವ್ಯವಸ್ಥೆಯಾಗಿ ಪರಿವರ್ತಿಸಿದೆ. ಈ ಯೋಜನೆಯಡಿ 660 ಕೋಟಿಗೂ ಹೆಚ್ಚು ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ, ಮತ್ತು 1.07 ಕೋಟಿಗೂ ಹೆಚ್ಚು ಪ್ರಕರಣಗಳನ್ನು ಆನ್‌ಲೈನ್ ಮೂಲಕ ದಾಖಲಿಸಲಾಗಿದೆ.
|

ಸ್ತಂಭ 6: ಎಲ್ಲರಿಗೂ ಮಾಹಿತಿ ಈ ಸ್ತಂಭವು ಸರ್ಕಾರಿ ಮಾಹಿತಿಯನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಮೂಲಕ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ನಾಗರಿಕರ ಸಹಭಾಗಿತ್ವವನ್ನು ಉತ್ತೇಜಿಸುವ ಮೂಲಕ ಪಾರದರ್ಶಕ ಹಾಗೂ ಭಾಗವಹಿಸುವಿಕೆಯ ಆಡಳಿತವನ್ನು ಬಲಪಡಿಸುತ್ತದೆ. 'ಮೈಗವ್' ಮತ್ತು 'ಓಪನ್ ಗವರ್ನಮೆಂಟ್ ಡೇಟಾ'ದಂತಹ ಉಪಕ್ರಮಗಳು ನಾಗರಿಕರಿಗೆ ಮಾಹಿತಿಯನ್ನು ಪಡೆಯಲು ಮತ್ತು ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸೇವೆಗಳೊಂದಿಗೆ ನೈಜ ಸಮಯದಲ್ಲಿ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತವೆ.
ಸ್ತಂಭ 7: ಎಲೆಕ್ಟ್ರಾನಿಕ್ಸ್ ಉತ್ಪಾದನೆ ಡಿಜಿಟಲ್ ಇಂಡಿಯಾದ ನೀತಿ ಬೆಂಬಲ, ನಾವೀನ್ಯತೆ ಮತ್ತು ಹೂಡಿಕೆಯ ಮೂಲಕ ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 2014-15ರ ಹಣಕಾಸು ವರ್ಷದಲ್ಲಿ 1.9 ಲಕ್ಷ ಕೋಟಿ ರೂಪಾಯಿಗಳಿಂದ, ಮಾರ್ಚ್ 2026ರ ವೇಳೆಗೆ ಸುಮಾರು 12 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇಂದು ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿದ್ದು, ಇದು ಜಾಗತಿಕ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತದೆ.
ಸ್ತಂಭ 8: ಐಟಿಗಾಗಿ ಉದ್ಯೋಗಾವಕಾಶಗಳು ಭಾರತದ ಡಿಜಿಟಲ್ ಆರ್ಥಿಕತೆಯು ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. NASSCOM ಪ್ರಕಾರ, 2025ರ ಹಣಕಾಸು ವರ್ಷದಲ್ಲಿ ಐಟಿ ಮತ್ತು ಐಟಿಇಎಸ್ ಉದ್ಯಮವು 283 ಬಿಲಿಯನ್ ಅಮೆರಿಕನ್ ಡಾಲರ್ ಆದಾಯವನ್ನು ಗಳಿಸಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿರುವ 2,100ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು ಇಂಜಿನಿಯರಿಂಗ್, ಅನಾಲಿಟಿಕ್ಸ್, ಸೈಬರ್ ಭದ್ರತೆ ಮತ್ತು ಎಐ ಆಧಾರಿತ ಪಾತ್ರಗಳಲ್ಲಿ ಸುಮಾರು 26 ಲಕ್ಷ ವೃತ್ತಿಪರರಿಗೆ ಉದ್ಯೋಗ ನೀಡುತ್ತಿವೆ.
ಸ್ತಂಭ 9: ಆರಂಭಿಕ ಸುಗ್ಗಿ ಕಾರ್ಯಕ್ರಮಗಳು
ಬಯೋಮೆಟ್ರಿಕ್ ಹಾಜರಾತಿ, ಸುರಕ್ಷಿತ ಸರ್ಕಾರಿ ಇ-ಮೇಲ್, ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್‌ಗಳು, ಇ-ಪುಸ್ತಕಗಳು, ಎಸ್‌ಎಂಎಸ್ ಆಧಾರಿತ ಹವಾಮಾನ ಮುನ್ಸೂಚನೆಗಳು ಮತ್ತು ಡಿಜಿಟಲ್ ಸಂವಹನ ವೇದಿಕೆಗಳಂತಹ ತ್ವರಿತ ಪ್ರಭಾವ ಬೀರುವ ಉಪಕ್ರಮಗಳು ತಂತ್ರಜ್ಞಾನ-ಚಾಲಿತ ಆಡಳಿತದ ತಕ್ಷಣದ ಪ್ರಯೋಜನಗಳನ್ನು ಸಾಬೀತುಪಡಿಸಿವೆ.
ಈ 9 ಸ್ತಂಭಗಳು ಡಿಜಿಟಲ್ ಇಂಡಿಯಾಕ್ಕೆ ಕಾರ್ಯತಂತ್ರದ ಚೌಕಟ್ಟನ್ನು ಒದಗಿಸಿದ್ದು, ಸಂಪರ್ಕಿತ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ರಾಷ್ಟ್ರಕ್ಕೆ ಅಡಿಪಾಯವನ್ನು ಹಾಕಿವೆ.
ಒಂದು ದಶಕದ ಅಂತರ್ಗತ ಬೆಳವಣಿಗೆಯನ್ನು ಚಾಲನೆಗೊಳಿಸಿದ ಪ್ರಮುಖ ಉಪಕ್ರಮಗಳು
ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಡಿಜಿಟಲ್ ಅಂತರವನ್ನು ಹೋಗಲಾಡಿಸುವ ಉಪಕ್ರಮದಿಂದ ವಿಶ್ವದ ಅತಿದೊಡ್ಡ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಗಳಲ್ಲಿ ಒಂದಾಗಿ ವಿಕಸನಗೊಂಡಿದೆ.
JAM ತ್ರಿಮೂರ್ತಿ: ಡಿಜಿಟಲ್ ಇಂಡಿಯಾದ ಅಡಿಪಾಯ 'ಜನ್ ಧನ್', [ಆಧಾರ್ ರೆಡ್ಯಾಕ್ಟೆಡ್] ಮತ್ತು ಮೊಬೈಲ್ ಸಂಪರ್ಕ - ಈ 'JAM' ತ್ರಿಮೂರ್ತಿಯು ಭಾರತದಲ್ಲಿ ಆರ್ಥಿಕ ಒಳಗೊಳ್ಳುವಿಕೆ ಮತ್ತು ಕಲ್ಯಾಣ ಯೋಜನೆಗಳ ವಿತರಣೆಯಲ್ಲಿ ಕ್ರಾಂತಿಯನ್ನುಂಟುಮಾಡಿದೆ. ಇದು ಕೋಟ್ಯಂತರ ಜನರನ್ನು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ತಂದಿದೆ ಮತ್ತು ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ದಾರಿ ಮಾಡಿಕೊಟ್ಟಿದೆ.
ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ: ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳನ್ನು ತ್ವರಿತವಾಗಿ ವಿಸ್ತರಿಸಿತು. ಬ್ಯಾಂಕ್ ಖಾತೆಗಳ ಸಂಖ್ಯೆ ಮಾರ್ಚ್ 2015ರಲ್ಲಿ 14.72 ಕೋಟಿ ಇದ್ದದ್ದು, ಫೆಬ್ರವರಿ 2026ರ ವೇಳೆಗೆ 57.78 ಕೋಟಿಗೆ ಏರಿಕೆಯಾಯಿತು. ಇದೇ ಅವಧಿಯಲ್ಲಿ ಠೇವಣಿಗಳು 15,670 ಕೋಟಿ ರೂಪಾಯಿಗಳಿಂದ 2.94 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆ ಕಂಡವು.
[ಆಧಾರ್ ರೆಡ್ಯಾಕ್ಟೆಡ್]: ಸುರಕ್ಷಿತ ಮತ್ತು ತ್ವರಿತ ಡಿಜಿಟಲ್ ದೃಢೀಕರಣಕ್ಕಾಗಿ ವಿಶ್ವಾಸಾರ್ಹ ಬಯೋಮೆಟ್ರಿಕ್ ಗುರುತಿನ ವೇದಿಕೆಯನ್ನು ಸೃಷ್ಟಿಸಿತು. [ಆಧಾರ್ ರೆಡ್ಯಾಕ್ಟೆಡ್] ನೋಂದಣಿಯು 2010-11ರಲ್ಲಿ 0.42 ಕೋಟಿ ಇದ್ದದ್ದು, ಮಾರ್ಚ್ 2026ರ ವೇಳೆಗೆ 144 ಕೋಟಿಗೂ ಅಧಿಕವಾಗಿದೆ.
ಮೊಬೈಲ್ ಸಂಪರ್ಕ: ಭಾರತದಾದ್ಯಂತ ಡಿಜಿಟಲ್ ಪ್ರವೇಶವನ್ನು ವಿಸ್ತರಿಸುವ ಮೂಲಕ JAM ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿತು. ಮಾರ್ಚ್ 2026ರ ಅಂತ್ಯಕ್ಕೆ, 85.5% ಭಾರತೀಯ ಕುಟುಂಬಗಳು ಕನಿಷ್ಠ ಒಂದು ಸ್ಮಾರ್ಟ್‌ಫೋನ್ ಹೊಂದಿದ್ದರೆ, 109 ಕೋಟಿಗೂ ಹೆಚ್ಚು ಜನರು ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದಾರೆ.
ಒಟ್ಟಾರೆಯಾಗಿ, JAM ಡಿಜಿಟಲ್ ಇಂಡಿಯಾದ ಅಂತರ್ಗತ ಆಡಳಿತದ ಬೆನ್ನೆಲುಬಾಗಿದೆ. ಜೂನ್ 2026ರ ಹೊತ್ತಿಗೆ, ಪಾರದರ್ಶಕತೆಯನ್ನು ಹೆಚ್ಚಿಸುವ ಮತ್ತು ರಾಷ್ಟ್ರವ್ಯಾಪಿ ಡಿಜಿಟಲ್ ಆಡಳಿತವನ್ನು ಸುಧಾರಿಸುವ ಉದ್ದೇಶದಿಂದ, 176 ಕೋಟಿ ನಾಗರಿಕರಿಗೆ ನೇರವಾಗಿ 51 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ನೇರ ಲಾಭ ವರ್ಗಾವಣೆ ಮಾಡಲಾಗಿದೆ.

|
ಕೇಸ್ ಸ್ಟಡಿ: ಭಾರತವು ತನ್ನ ಡಿಜಿಟಲ್ ಗುರುತನ್ನು ಹೇಗೆ ಕ್ರಾಂತಿಗೊಳಿಸಿತು
[ಆಧಾರ್ ರೆಡ್ಯಾಕ್ಟೆಡ್] ವ್ಯವಸ್ಥೆಯ ಜಾರಿಗೆ ಬರುವ ಮೊದಲು, ಲಕ್ಷಾಂತರ ಭಾರತೀಯರು ಪರಿಶೀಲಿಸಬಹುದಾದ ಗುರುತಿನ ಚೀಟಿಯನ್ನು ಹೊಂದಿರಲಿಲ್ಲ, ಇದು ಬ್ಯಾಂಕಿಂಗ್, ಕಲ್ಯಾಣ ಯೋಜನೆಗಳು ಮತ್ತು ಸಾರ್ವಜನಿಕ ಸೇವೆಗಳ ಪ್ರವೇಶವನ್ನು ಮಿತಿಗೊಳಿಸಿತ್ತು. ಈ ಸವಾಲನ್ನು [ಆಧಾರ್ ರೆಡ್ಯಾಕ್ಟೆಡ್] ತನ್ನ ಸುರಕ್ಷಿತ ಬಯೋಮೆಟ್ರಿಕ್-ಆಧಾರಿತ ಡಿಜಿಟಲ್ ಗುರುತಿನ ವೇದಿಕೆಯ ಮೂಲಕ ಪರಿಹರಿಸಿತು. ಈ ಕಾರ್ಯಕ್ರಮದ ಒಳಗೊಳ್ಳುವಿಕೆಯ ಗಮನವನ್ನು ಸಂಕೇತಿಸುವಂತೆ, ಮಹಾರಾಷ್ಟ್ರದ ಟೆಂಭ್ಲಿ ಗ್ರಾಮದ ಬುಡಕಟ್ಟು ಮಹಿಳೆಯಾದ ಶ್ರೀಮತಿ ರಂಜನಾ ಸೋನವಣೆ ಅವರು ಮೊದಲ [ಆಧಾರ್ ರೆಡ್ಯಾಕ್ಟೆಡ್] ಹೊಂದಿದವರಾದರು. [ಆಧಾರ್ ರೆಡ್ಯಾಕ್ಟೆಡ್] ಕೇವಲ ಮುಖ್ಯವಾಹಿನಿಯ ನಾಗರಿಕರಿಗೆ ಮಾತ್ರವಲ್ಲದೆ, ಭಾರತದಾದ್ಯಂತ ಇರುವ ಬುಡಕಟ್ಟು ಮತ್ತು ಹಿಂದುಳಿದ ಸಮುದಾಯಗಳಿಗೆ ಬ್ಯಾಂಕಿಂಗ್, ನೇರ ಲಾಭ ವರ್ಗಾವಣೆ ಮತ್ತು ಸರ್ಕಾರಿ ಸೇವೆಗಳ ಪ್ರವೇಶವನ್ನು ವಿಸ್ತರಿಸಿತು. 2016ರ [ಆಧಾರ್ ರೆಡ್ಯಾಕ್ಟೆಡ್] ಕಾಯಿದೆಯು ಯುಐಡಿಎಐಗೆ ಶಾಸನಬದ್ಧ ಅಧಿಕಾರವನ್ನು ನೀಡಿದ ನಂತರ ಮತ್ತು [ಆಧಾರ್ ರೆಡ್ಯಾಕ್ಟೆಡ್] ಅನ್ನು ಮೂಲಭೂತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಎಂದು ಗುರುತಿಸಿದ ನಂತರ ಈ ರೂಪಾಂತರವು ಮತ್ತಷ್ಟು ವೇಗವನ್ನು ಪಡೆದುಕೊಂಡಿತು.
[ಆಧಾರ್ ರೆಡ್ಯಾಕ್ಟೆಡ್] ಬೃಹತ್ ಪ್ರಮಾಣದಲ್ಲಿ ಬ್ಯಾಂಕ್ ಖಾತೆ ತೆರೆಯುವಿಕೆ ಮತ್ತು ದೃಢೀಕರಣವನ್ನು ಸಕ್ರಿಯಗೊಳಿಸುವ ಮೂಲಕ ಹಾಗೂ ಹಣಕಾಸಿನ ಸೇವೆಗಳನ್ನು ಸುಲಭವಾಗಿ ಪಡೆಯುವಂತೆ ಮಾಡುವ ಮೂಲಕ ಭಾರತದ ಆರ್ಥಿಕ ಒಳಗೊಳ್ಳುವಿಕೆಯನ್ನು ಮರುರೂಪಿಸಿತು.

ಮಧ್ಯವರ್ತಿಗಳಿಲ್ಲದ ಕಲ್ಯಾಣ ಯೋಜನೆಗಳು: ವ್ಯವಸ್ಥೆಯು ಸುರಕ್ಷಿತ ಮತ್ತು ಪಾರದರ್ಶಕ ಸೇವಾ ವಿತರಣೆಯನ್ನು ಸಕ್ರಿಯಗೊಳಿಸುವ ಮೂಲಕ ಕಲ್ಯಾಣ ಯೋಜನೆಗಳ ತಲುಪುವಿಕೆಯನ್ನು ಪರಿವರ್ತಿಸಿದೆ. ಇಂದು ಸಾರ್ವಜನಿಕ ಪಡಿತರ ವಿತರಣೆಯ 98% ಕ್ಕಿಂತ ಹೆಚ್ಚು ವ್ಯವಹಾರಗಳು-ದೃಢೀಕರಣದ ಮೂಲಕ ನಡೆಯುತ್ತಿವೆ. ಅರ್ಹ ಫಲಾನುಭವಿಗಳು 3,100ಕ್ಕೂ ಹೆಚ್ಚು ನೇರ ಲಾಭ ವರ್ಗಾವಣೆ ಯೋಜನೆಗಳು ಮತ್ತು 360ಕ್ಕೂ ಹೆಚ್ಚು ಸಾರ್ವಜನಿಕ ಸೇವೆಗಳನ್ನು-ಆಧಾರಿತ ದೃಢೀಕರಣದ ಮೂಲಕ ಪಡೆಯುತ್ತಿದ್ದಾರೆ.
ಕಾಗದರಹಿತ ಪರಿಶೀಲನೆ: ವಿವಿಧ ಕ್ಷೇತ್ರಗಳಲ್ಲಿ ಗುರುತಿನ ಪರಿಶೀಲನೆಯನ್ನು ಸರಳಗೊಳಿಸಿದೆ. 30 ಏಪ್ರಿಲ್ 2025 ರ ಹೊತ್ತಿಗೆ, ಇ-ಕೆವೈಸಿ ವಹಿವಾಟುಗಳು 2,393 ಕೋಟಿಯನ್ನು ತಲುಪಿದ್ದು, ಇದು ಕಾಗದಪತ್ರಗಳ ಬಳಕೆಯನ್ನು ಕಡಿಮೆ ಮಾಡಿ ಸಾರ್ವಜನಿಕ ಸೇವೆಗಳನ್ನು ವೇಗವಾಗಿ ಪಡೆಯಲು ಸಹಾಯ ಮಾಡಿದೆ.
ಇದರ ಇತ್ತೀಚಿನ ವಿಕಸನವಾದ 'ಆಧಾರ್ ಆ್ಯಪ್', ಬಿಡುಗಡೆಯಾದ ಐದು ತಿಂಗಳಲ್ಲಿಯೇ 3.1 ಕೋಟಿ ಡೌನ್‌ಲೋಡ್‌ಗಳನ್ನು ದಾಟಿದೆ. ಇದು ಮೊಬೈಲ್ ಸಂಖ್ಯೆ ಮತ್ತು ವಿಳಾಸಗಳ ಡಿಜಿಟಲ್ ಅಪ್‌ಡೇಟ್‌ನಂತಹ ಸೇವೆಗಳನ್ನು ಸುಲಭಗೊಳಿಸಿದ್ದು, ದೈನಂದಿನ ಬಳಕೆಯಲ್ಲಿ ಕಾಗದರಹಿತ ಪರಿಶೀಲನೆಯ ವ್ಯಾಪ್ತಿಯನ್ನು ವಿಸ್ತರಿಸಿದೆ.
ವಿಶ್ವವೇ ಗಮನ ಸೆಳೆಯುತ್ತಿರುವ ಮಾದರಿ: ಇಂದು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಜಾಗತಿಕ ಮಾನದಂಡವೆಂದು ಗುರುತಿಸಲ್ಪಟ್ಟಿದೆ. ಈಜಿಪ್ಟ್, ನೈಜೀರಿಯಾ, ಇಂಡೋನೇಷ್ಯಾ ಮತ್ತು ಪಾಪುವಾ ನ್ಯೂಗಿನಿಯಾದಂತಹ ದೇಶಗಳು ಈ ಮಾದರಿಯನ್ನು ಅಧ್ಯಯನ ಮಾಡುತ್ತಿವೆ. ಇದು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಗುರುತಿನ ವ್ಯವಸ್ಥೆಗಳಲ್ಲಿ ಒಂದಾಗಿ ನಿಂತಿದ್ದು, ಜಾಗತಿಕವಾಗಿ ಡಿಜಿಟಲ್ ಆಡಳಿತ ಮಾದರಿಗಳಿಗೆ ಸ್ಫೂರ್ತಿಯಾಗಿದೆ.
|
ಡಿಜಿಲಾಕರ್:
ಡಿಜಿಲಾಕರ್ ಭೌತಿಕ ದಾಖಲೆಗಳ ಬದಲಿಗೆ ಸುರಕ್ಷಿತ ಡಿಜಿಟಲ್ ವ್ಯಾಲೆಟ್ ಅನ್ನು ಪರಿಚಯಿಸುವ ಮೂಲಕ, ಭಾರತದಾದ್ಯಂತ ದಾಖಲೆಗಳ ಸಂಗ್ರಹಣೆ ಮತ್ತು ಪರಿಶೀಲನಾ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ. 2026ರ ಮಾರ್ಚ್ ಅಂತ್ಯದ ವೇಳೆಗೆ, ಈ ವೇದಿಕೆಯು 70.69 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ ಮತ್ತು 850 ಕೋಟಿಗೂ ಹೆಚ್ಚು ದಾಖಲೆಗಳನ್ನು ವಿತರಿಸಿದೆ. ಇದು ದಾಖಲೆಗಳ ಪರಿಶೀಲನೆಯನ್ನು ವೇಗಗೊಳಿಸುವುದಲ್ಲದೆ, ಕಾಗದರಹಿತ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಿದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್
2026ರಲ್ಲಿ ಹತ್ತು ವರ್ಷಗಳನ್ನು ಪೂರೈಸುತ್ತಿರುವ ಯುಪಿಐ, ನಾಗರಿಕರು ಮತ್ತು ವ್ಯಾಪಾರಿಗಳಿಗೆ ತತ್‌ಕ್ಷಣದ ಮತ್ತು ಸುರಕ್ಷಿತ ವಹಿವಾಟುಗಳನ್ನು ಸಕ್ರಿಯಗೊಳಿಸುವ ಮೂಲಕ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಒಂದು ಸರಳ ಪಾವತಿ ವೇದಿಕೆಯಾಗಿ ಪ್ರಾರಂಭವಾದ ಇದು, ಇಂದು ಭಾರತದಾದ್ಯಂತ ದೈನಂದಿನ ಡಿಜಿಟಲ್ ವಾಣಿಜ್ಯದ ಬೆನ್ನೆಲುಬಾಗಿದೆ. 2016-17ರ ಹಣಕಾಸು ವರ್ಷದಲ್ಲಿ ಕೇವಲ 2 ಕೋಟಿ ಇದ್ದ ವಹಿವಾಟುಗಳು, 2025-26ರ ಹಣಕಾಸು ವರ್ಷದಲ್ಲಿ 24,162 ಕೋಟಿಗೂ ಹೆಚ್ಚು ವಹಿವಾಟುಗಳಿಗೆ ಏರಿಕೆಯಾಗಿವೆ. ಯುಪಿಐನ ಜಾಗತಿಕ ವ್ಯಾಪ್ತಿಯು ಇದೀಗ ಒಂಬತ್ತು ದೇಶಗಳಿಗೆ ವಿಸ್ತರಿಸಿದ್ದು, ಪ್ರಯಾಣಿಕರಿಗೆ ತಡೆರಹಿತ ಯುಪಿಐ ಆಧಾರಿತ ಪಾವತಿಗಳನ್ನು ಸಕ್ರಿಯಗೊಳಿಸಿದ ಇತ್ತೀಚಿನ ದೇಶವಾಗಿ ಕಾಂಬೋಡಿಯಾ ಹೊರಹೊಮ್ಮಿದೆ.

|
ನಿಮಗೆ ಗೊತ್ತೇ? 'ಭೀಮ್' ಎನ್ನುವುದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿಪಡಿಸಿದ ಸರ್ಕಾರಿ ಸ್ವಾಮ್ಯದ ಯುಪಿಐ ಆ್ಯಪ್ ಆಗಿದೆ. ಇದು ಯುಪಿಐ ಬಳಸಿಕೊಂಡು ತತ್‌ಕ್ಷಣದ ಹಣ ವರ್ಗಾವಣೆಯನ್ನು ಸುಗಮಗೊಳಿಸುತ್ತದೆ. ಇದು ಭಾರತದಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಸುರಕ್ಷಿತ ಮತ್ತು ನಗದು ರಹಿತ ಡಿಜಿಟಲ್ ಪಾವತಿಗಳನ್ನು ಸರಳ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ.
|
ಡಿಜಿಟಲ್ ವೇದಿಕೆಗಳು ಮತ್ತು ಸಾರ್ವಜನಿಕ ಆರೋಗ್ಯ
ಕಳೆದ ಒಂದು ದಶಕದಲ್ಲಿ, ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಸಾರ್ವಜನಿಕ ಆರೋಗ್ಯ ಸೇವೆಯನ್ನು ವೇಗವಾಗಿ, ಹೆಚ್ಚು ಸಂಪರ್ಕಿತ ಮತ್ತು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡುವ ಮೂಲಕ ರೂಪಾಂತರಗೊಳಿಸುತ್ತಿದೆ. 'ಆನ್‌ಲೈನ್ ನೋಂದಣಿ ವ್ಯವಸ್ಥೆ'ಯು ರೋಗಿಗಳಿಗೆ ಡಿಜಿಟಲ್ ಮೂಲಕ ವೈದ್ಯರ ಭೇಟಿಯ ಸಮಯವನ್ನು ನಿಗದಿಪಡಿಸಲು ಅನುವು ಮಾಡಿಕೊಡುತ್ತದೆ, ಅದೇ ಸಮಯದಲ್ಲಿ ಆಸ್ಪತ್ರೆಗಳಲ್ಲಿನ ದೀರ್ಘ ಸಾಲುಗಳನ್ನು ಮತ್ತು ಕಾಗದಪತ್ರಗಳ ಕೆಲಸವನ್ನು ಕಡಿಮೆ ಮಾಡುತ್ತದೆ. 24 ಜೂನ್ 2026 ರ ಹೊತ್ತಿಗೆ, ORS ವೇದಿಕೆಯು 1.37 ಕೋಟಿಗೂ ಹೆಚ್ಚು ಆನ್‌ಲೈನ್ ಅಪಾಯಿಂಟ್‌ಮೆಂಟ್‌ಗಳನ್ನು ದಾಖಲಿಸಿದೆ. ಈ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಕ್ಲೌಡ್-ಆಧಾರಿತ 'ಇ-ಹಾಸ್ಪಿಟಲ್' ವೇದಿಕೆಯು ಆಸ್ಪತ್ರೆಯ ದೈನಂದಿನ ಕಾರ್ಯಾಚರಣೆಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದರೆ, 'ಇ-ಬ್ಲಡ್ ಬ್ಯಾಂಕ್' ಆರೋಗ್ಯ ಸಂಸ್ಥೆಗಳಾದ್ಯಂತ ರಕ್ತದ ಲಭ್ಯತೆಯನ್ನು ಮತ್ತು ನಿರ್ವಹಣೆಯನ್ನು ಸುಧಾರಿಸುತ್ತಿದೆ.

ಸಾರ್ವಜನಿಕ ಆರೋಗ್ಯಕ್ಕೆ ಡಿಜಿಟಲ್ ವೇದಿಕೆಗಳ ಬಲ
ಇ-ಸಂಜೀವಿನಿಯ ಮೂಲಕ ಆರೋಗ್ಯ ಸೇವೆಗಳ ಪ್ರವೇಶವು ಮತ್ತಷ್ಟು ವಿಸ್ತರಣೆಯಾಗುತ್ತಿದೆ. ಈ ಟೆಲಿಮೆಡಿಸಿನ್ ವೇದಿಕೆಯು ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ರೋಗಿಗಳನ್ನು ವೈದ್ಯರೊಂದಿಗೆ ದೂರದಿಂದಲೇ ಸಂಪರ್ಕಿಸುತ್ತಿದೆ. ಇದು ಪ್ರಯಾಣದ ವೆಚ್ಚ ಮತ್ತು ಕಾಯುವ ಸಮಯವನ್ನು ಕಡಿಮೆ ಮಾಡುವುದಲ್ಲದೆ, ದೇಶಾದ್ಯಂತ ತಜ್ಞರ ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುತ್ತಿದೆ. 24 ಜೂನ್ 2026 ರ ಹೊತ್ತಿಗೆ, ಇ-ಸಂಜೀವಿನಿಯು 48 ಕೋಟಿಗೂ ಹೆಚ್ಚು ಸಮಾಲೋಚನೆಗಳನ್ನು ಸುಗಮಗೊಳಿಸಿದೆ ಮತ್ತು 2.3 ಲಕ್ಷಕ್ಕೂ ಹೆಚ್ಚು ಆರೋಗ್ಯ ಸೇವೆ ಒದಗಿಸುವವರನ್ನು ನೋಂದಾಯಿಸಿಕೊಂಡಿದೆ, ಇದು ಟೆಲಿಮೆಡಿಸಿನ್ ಅನ್ನು ಸಾರ್ವಜನಿಕ ಆರೋಗ್ಯ ವಿತರಣೆಯ ಪ್ರಮುಖ ಸ್ತಂಭವನ್ನಾಗಿ ಮಾಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ, ಭಾರತವು ಆರೋಗ್ಯ ಸೇತು ಮತ್ತು ಕೋವಿನ್ ನಂತಹ ವೇದಿಕೆಗಳ ಮೂಲಕ ತನ್ನ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಿತು. ಆರೋಗ್ಯ ಸೇತು ಆರಂಭದಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್ (ಸೋಂಕಿತರ ಸಂಪರ್ಕ ಪತ್ತೆ) ಮತ್ತು ಆರೋಗ್ಯ ಸಲಹೆಗಳಿಗೆ ಬೆಂಬಲ ನೀಡುತ್ತಿತ್ತು. ನಂತರ ಅದು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಆ್ಯಪ್ ಆಗಿ ವಿಕಸನಗೊಂಡಿತು. ಕೋವಿನ್, ಭಾರತದ ಲಸಿಕಾ ಕಾರ್ಯಕ್ರಮದ ಡಿಜಿಟಲ್ ಬೆನ್ನೆಲುಬಾಯಿತು. ಇದು 220 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನಿರ್ವಹಿಸಿತು ಮತ್ತು ಡಿಜಿಟಲ್ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಿಗೆ ಜಾಗತಿಕ ಮಾದರಿಯಾಗಿ ಹೊರಹೊಮ್ಮಿತು.

ಟೆಲಿ-ಮನಸ್ ಮತ್ತು ಮಾದಕವಸ್ತು ವಿರೋಧಿ ಪ್ರಯತ್ನಗಳು:
ಟೆಲಿ-ಮನಸ್ 14416 ಮತ್ತು 1-800-891-4416 ಸಂಖ್ಯೆಗಳ ಮೂಲಕ ದೇಶಾದ್ಯಂತ ಉಚಿತ ಟೆಲಿ-ಕೌನ್ಸೆಲಿಂಗ್ ಮತ್ತು ಮಾನಸಿಕ ಆರೋಗ್ಯ ಬೆಂಬಲವನ್ನು ಒದಗಿಸುತ್ತಿದೆ. ಜೂನ್ 2026 ರ ಹೊತ್ತಿಗೆ, ಇದು 40.42 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದೆ, ದೇಶಾದ್ಯಂತ 53 ಟೆಲಿ-ಮನಸ್ ಸೆಲ್‌ಗಳು, 23 ಮಾರ್ಗದರ್ಶಕ ಸಂಸ್ಥೆಗಳು ಮತ್ತು 5 ಪ್ರಾದೇಶಿಕ ಸಮನ್ವಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ, 'ಮನಸ್' (ಮಾದಕ-ಪದಾರ್ಥ ನಿಷೇಧ ಆಸೂಚನಾ ಕೇಂದ್ರ) ನಾಗರಿಕರಿಗೆ ಟೋಲ್-ಫ್ರೀ ಸಂಖ್ಯೆ 1933 ಮತ್ತು ಉಮಂಗ್ ಆ್ಯಪ್ ಮೂಲಕ ಮಾದಕವಸ್ತು ಸಾಗಾಟ ಮತ್ತು ಸಂಬಂಧಿತ ಅಪರಾಧಗಳನ್ನು ಅನಾಮಧೇಯವಾಗಿ ವರದಿ ಮಾಡಲು ಅನುವು ಮಾಡಿಕೊಡುತ್ತದೆ. ಈ ವೇದಿಕೆಯು ಕೌನ್ಸೆಲಿಂಗ್ ಮತ್ತು ಪುನರ್ವಸತಿ ಬೆಂಬಲವನ್ನೂ ಒದಗಿಸುತ್ತದೆ. ಜೂನ್ 2026 ರ ಹೊತ್ತಿಗೆ, ಇದು ಮಾದಕವಸ್ತುಗಳಿಗೆ ಸಂಬಂಧಿಸಿದ 2.16 ಲಕ್ಷಕ್ಕೂ ಹೆಚ್ಚು ಮಾಹಿತಿಗಳನ್ನು ಸ್ವೀಕರಿಸಿದೆ ಮತ್ತು 16,200ಕ್ಕೂ ಹೆಚ್ಚು ಮಾದಕವಸ್ತು ಸಾಗಾಟದ ಗುಪ್ತಚರ ಮಾಹಿತಿಗಳನ್ನು ಕ್ರಿಯೆಗೆ ಒಳಪಡಿಸುವ ಮೂಲಕ 'ಡ್ರಗ್-ಫ್ರೀ ಭಾರತ' ಅಭಿಯಾನವನ್ನು ಬಲಪಡಿಸಿದೆ.
ತಂತ್ರಜ್ಞಾನದ ಮೂಲಕ ವಾಣಿಜ್ಯದ ಸಬಲೀಕರಣ
ಸರ್ಕಾರಿ ಇ-ಮಾರುಕಟ್ಟೆ: ಜೆಮ್ ವೇದಿಕೆಯು ಸಾರ್ವಜನಿಕ ಸಂಗ್ರಹಣೆಯನ್ನು ಪಾರದರ್ಶಕ, ದಕ್ಷ ಮತ್ತು ಕಾಗದರಹಿತವಾಗಿಸುವ ಮೂಲಕ ಪರಿವರ್ತಿಸಿದೆ. ಜೂನ್ 2026 ರ ಹೊತ್ತಿಗೆ, ಇದು 18.4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಚಿತ ಗ್ರಾಸ್ ಮರ್ಚಂಡೈಸ್ ವ್ಯಾಲ್ಯೂ ದಾಖಲಿಸಿದೆ (ಇದರಲ್ಲಿ 2025–26ರ ಹಣಕಾಸು ವರ್ಷವೊಂದರಲ್ಲೇ 5 ಲಕ್ಷ ಕೋಟಿ ರೂಪಾಯಿ ಒಳಗೊಂಡಿದೆ). ಅಲ್ಲದೆ, ಇದು 11 ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇಗಳಿಗೆ ಸರ್ಕಾರಿ ಮಾರುಕಟ್ಟೆಗಳನ್ನು ಪ್ರವೇಶಿಸಲು ಅವಕಾಶ ಕಲ್ಪಿಸಿದೆ.
ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ಜಾಲ: ಒಎನ್‌ಡಿಸಿ ವೇದಿಕೆಯು ವಿವಿಧ ಪ್ಲಾಟ್‌ಫಾರ್ಮ್‌ಗಳ ನಡುವೆ ಖರೀದಿದಾರರು ಮತ್ತು ಮಾರಾಟಗಾರರನ್ನು ಸಂಪರ್ಕಿಸುವ ಮುಕ್ತ ಮತ್ತು ಪರಸ್ಪರ ಕಾರ್ಯಸಾಧ್ಯವಾದ ಡಿಜಿಟಲ್ ವಾಣಿಜ್ಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ. ಜೂನ್ 2026 ರ ಹೊತ್ತಿಗೆ, ಒಎನ್‌ಡಿಸಿ 20 ಕೋಟಿಗೂ ಹೆಚ್ಚು ಖರೀದಿದಾರರು, 5 ಲಕ್ಷ ಮಾರಾಟಗಾರರು, 1,000 ನಗರಗಳಲ್ಲಿ ಇರುವಿಕೆ ಮತ್ತು ತಿಂಗಳಿಗೆ ಸುಮಾರು 90 ಲಕ್ಷ ವಹಿವಾಟುಗಳನ್ನು ತಲುಪುವ ಮೂಲಕ ವಿಸ್ತರಿಸಿದೆ. ಒಎನ್‌ಡಿಸಿ ಇಂಡಿಯಾ ಪೋಸ್ಟ್ ಅನ್ನು ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಾಗಿ ಸಂಯೋಜಿಸಿದ್ದು, ದೇಶಾದ್ಯಂತ ವಿಶ್ವಾಸಾರ್ಹ ಇ-ಕಾಮರ್ಸ್ ವಿತರಣೆಯನ್ನು ಬಲಪಡಿಸಿದೆ. ಪರಸ್ಪರ ಕಾರ್ಯಸಾಧ್ಯತೆಯನ್ನು ಉತ್ತೇಜಿಸುವ ಮತ್ತು ಪ್ಲಾಟ್‌ಫಾರ್ಮ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ, ಒಎನ್‌ಡಿಸಿ ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಕಲ್ಪಿಸುತ್ತಿದೆ ಮತ್ತು ಡಿಜಿಟಲ್ ವಾಣಿಜ್ಯದಲ್ಲಿ ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುತ್ತಿದೆ.
ಈ ವೇದಿಕೆಗಳು ಸಂಗ್ರಹಣಾ ಪ್ರಕ್ರಿಯೆಗಳನ್ನು ಸರಳೀಕರಿಸಿವೆ, ಸಣ್ಣ ವ್ಯಾಪಾರಿಗಳಿಗೆ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸಿವೆ ಮತ್ತು ಸ್ಪರ್ಧಾತ್ಮಕ ಬೆಲೆಗಳನ್ನು ಉತ್ತೇಜಿಸುತ್ತಿವೆ. ಜೆಮ್ ಮತ್ತು ಒಎನ್‌ಡಿಸಿ ಎರಡೂ 'ಈಸ್ ಆಫ್ ಡೂಯಿಂಗ್ ಬಿಸಿನೆಸ್' ಅನ್ನು ಹೆಚ್ಚಿಸಿವೆ ಮತ್ತು ಭಾರತದಲ್ಲಿ ಸಾರ್ವಜನಿಕ ಸೇವಾ ವಿತರಣೆಯ ಡಿಜಿಟಲೀಕರಣವನ್ನು ಮುನ್ನಡೆಸಿವೆ.

|
ನಿಮಗೆ ಗೊತ್ತೇ? 'ಇ-ಸರಸ್' ಮತ್ತು 'ಇಂಡಿಯಾಹ್ಯಾಂಡ್‌ಮೇಡ್' ವೇದಿಕೆಗಳು ಸ್ವಸಹಾಯ ಸಂಘಗಳು, ನೇಕಾರರು ಮತ್ತು ಕುಶಲಕರ್ಮಿಗಳಿಗೆ ಡಿಜಿಟಲ್ ಮಾರುಕಟ್ಟೆಗಳನ್ನು ನೇರವಾಗಿ ತಲುಪಲು ಅನುವು ಮಾಡಿಕೊಡುತ್ತಿವೆ. ಇದು ಗ್ರಾಮೀಣ ಜೀವನೋಪಾಯವನ್ನು ಬೆಂಬಲಿಸುವುದಲ್ಲದೆ, ಸಾಂಪ್ರದಾಯಿಕ ಕಲೆಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇವುಗಳನ್ನು 'ಒಎನ್‌ಡಿಸಿ' ಯೊಂದಿಗೆ ಸಂಯೋಜಿಸಿರುವುದರಿಂದ, ಈ ಉತ್ಪನ್ನಗಳು 11ಕ್ಕೂ ಹೆಚ್ಚು ಖರೀದಿದಾರರ ಆ್ಯಪ್‌ಗಳಲ್ಲಿ ಗೋಚರಿಸುವಂತಾಗಿ, ಅವುಗಳ ಮಾರುಕಟ್ಟೆ ವ್ಯಾಪ್ತಿಯು ಮತ್ತಷ್ಟು ವಿಸ್ತರಿಸಿದೆ.
|
ತಂತ್ರಜ್ಞಾನ-ಚಾಲಿತ ಸಾರ್ವಜನಿಕ ಸೇವೆಗಳು: ಸಮಾಜ ಕಲ್ಯಾಣದ ಹೊಸ ಯುಗ

ಉಮಾಂಗ್: ಉಮಾಂಗ್ ಸರ್ಕಾರಿ ಸೇವೆಗಳಿಗಾಗಿ ಏಕೈಕ ಡಿಜಿಟಲ್ ಹೆಬ್ಬಾಗಿಲಾಗಿ ಮಾರ್ಪಟ್ಟಿದೆ. 2017ರಲ್ಲಿ 166 ಸೇವೆಗಳನ್ನು ಹೊಂದಿದ್ದ ಇದು, ಜೂನ್ 2026ರ ವೇಳೆಗೆ 2,572 ಸೇವೆಗಳಿಗೆ ವಿಸ್ತರಿಸಿದೆ. ವಹಿವಾಟುಗಳು 3.9 ಕೋಟಿಯಿಂದ 796.69 ಕೋಟಿಗೆ ಏರಿಕೆಯಾಗಿದ್ದು, ಇದು ವ್ಯಾಪಕವಾದ ಡಿಜಿಟಲ್ ಅಳವಡಿಕೆಯನ್ನು ಪ್ರತಿಬಿಂಬಿಸುತ್ತದೆ. ವೈವಿಧ್ಯಮಯ ನಾಗರಿಕ ಸೇವೆಗಳನ್ನು ಒಂದೇ ವೇದಿಕೆಗೆ ಸಂಯೋಜಿಸುವ ಮೂಲಕ, ಉಮಾಂಗ್ ದೇಶಾದ್ಯಂತ ಸಾರ್ವಜನಿಕ ಸೇವೆಗಳನ್ನು ಪಡೆಯುವಲ್ಲಿ ಪ್ರವೇಶಸಾಧ್ಯತೆ, ಅನುಕೂಲತೆ ಮತ್ತು ಸುಲಭತೆಯನ್ನು ಸುಧಾರಿಸಿದೆ.
ಸರಕು ಮತ್ತು ಸೇವಾ ತೆರಿಗೆ ಜಾಲ: ಜಿಎಸ್‌ಟಿಎನ್ ನೋಂದಣಿ, ರಿಟರ್ನ್ ಫೈಲಿಂಗ್, ತೆರಿಗೆ ಪಾವತಿ ಮತ್ತು ಇ-ಇನ್ವಾಯ್ಸಿಂಗ್ ಅನ್ನು ಸಂಯೋಜಿಸುವ ಮೂಲಕ ಪರೋಕ್ಷ ತೆರಿಗೆ ಪದ್ಧತಿಯನ್ನು ಆಧುನೀಕರಿಸಿದೆ. ಏಪ್ರಿಲ್ 2026ರ ಹೊತ್ತಿಗೆ, ಒಟ್ಟು ಜಿಎಸ್‌ಟಿ ಸಂಗ್ರಹವು ಸುಮಾರು 2.43 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ. ಈ ವೇದಿಕೆಯು ತೆರಿಗೆ ಅನುಸರಣೆಯನ್ನು ಹೆಚ್ಚಿಸಿದೆ, ಪಾರದರ್ಶಕತೆಯನ್ನು ಸುಧಾರಿಸಿದೆ ಮತ್ತು ಜಿಎಸ್‌ಟಿ ಆಡಳಿತದ ವೇಗದ, ತಂತ್ರಜ್ಞಾನ-ಚಾಲಿತ ನಿರ್ವಹಣೆಯನ್ನು ಸಕ್ರಿಯಗೊಳಿಸಿದೆ.
ಪೋಷಣ್ ಟ್ರ್ಯಾಕರ್: ಪೋಷಣ್ ಟ್ರ್ಯಾಕರ್ ಪೌಷ್ಟಿಕಾಂಶ ಸೇವೆಗಳ ನೈಜ-ಸಮಯದ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ. ಇದು 13.35 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಸಂಪರ್ಕಿಸುತ್ತದೆ ಮತ್ತು ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಮಕ್ಕಳು (0-6 ವರ್ಷಗಳು) ಮತ್ತು ಹದಿಹರೆಯದ ಹುಡುಗಿಯರು (ಆಕಾಂಕ್ಷಿತ ಜಿಲ್ಲೆಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ) ಸೇರಿದಂತೆ 8.9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಸೇವೆ ಸಲ್ಲಿಸುತ್ತದೆ. ಈ ಡಿಜಿಟಲ್ ವೇದಿಕೆಯು ದತ್ತಾಂಶ-ಆಧಾರಿತ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಿದೆ ಮತ್ತು ಮಹಿಳೆಯರು ಹಾಗೂ ಮಕ್ಕಳಿಗಾಗಿ ಪೌಷ್ಟಿಕಾಂಶ ಮತ್ತು ಕಲ್ಯಾಣ ಕಾರ್ಯಕ್ರಮಗಳ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡಿದೆ.

|
ನಿಮಗೆ ಗೊತ್ತೇ? 'ಪೋಷಣ್ ಸಹಾಯವಾಣಿ' (ಪೋಷಣ್ ಹೆಲ್ಪ್‌ಲೈನ್ - 1515) ಎಂಬುದು 'ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0' ಹಾಗೂ 'ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ'ಯ ಫಲಾನುಭವಿಗಳಿಗಾಗಿ ಮೀಸಲಾದ ಸರ್ಕಾರಿ ಬೆಂಬಲ ವ್ಯವಸ್ಥೆಯಾಗಿದೆ. ಇದು 17 ಭಾಷೆಗಳಲ್ಲಿ ಮಾಹಿತಿಯನ್ನು ಪಡೆಯಲು, ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಮತ್ತು ತಾಂತ್ರಿಕ ಬೆಂಬಲವನ್ನು ಪಡೆಯಲು ತತ್‌ಕ್ಷಣದ ಅವಕಾಶವನ್ನು ಒದಗಿಸುತ್ತದೆ.
|
ಪಿಎಂ ಗತಿಶಕ್ತಿ:
ಪಿಎಂ ಗತಿಶಕ್ತಿ ಸಂಯೋಜಿತ ಮೂಲಸೌಕರ್ಯ ಯೋಜನೆಗಾಗಿ ಜಿಐಎಸ್ -ಆಧಾರಿತ ವೇದಿಕೆಯನ್ನು ಸೃಷ್ಟಿಸಿದೆ. ಫೆಬ್ರವರಿ 2026ರ ಹೊತ್ತಿಗೆ, ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ 16.10 ಲಕ್ಷ ಕೋಟಿ ರೂಪಾಯಿ ಮೌಲ್ಯದ 352 ಯೋಜನೆಗಳನ್ನು ಮೌಲ್ಯಮಾಪನ ಮಾಡಿದೆ. ಇದರಲ್ಲಿ 201 ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, 167 ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ. ವಿವಿಧ ವಲಯಗಳು ಮತ್ತು ಸಚಿವಾಲಯಗಳ ನಡುವೆ ಸಮನ್ವಯದ ಯೋಜನೆಯನ್ನು ಸಕ್ರಿಯಗೊಳಿಸುವ ಮೂಲಕ, ಈ ವೇದಿಕೆಯು ದಕ್ಷತೆಯನ್ನು ಸುಧಾರಿಸಿದೆ, ಲಾಜಿಸ್ಟಿಕ್ಸ್ ಅಂತರವನ್ನು ಕಡಿಮೆ ಮಾಡಿದೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸಿದೆ.


ಮೈ ಭಾರತ (ಮೇರಾ ಯುವ ಭಾರತ್):
ಮೈ ಭಾರತ ಭಾರತದ ಯುವಜನರಿಗಾಗಿ ರೂಪಿಸಲಾದ ಅತಿದೊಡ್ಡ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಆಗಿದೆ. ಇದು ಯುವ ನಾಗರಿಕರನ್ನು ಸ್ವಯಂಸೇವಕ ಕಾರ್ಯಗಳು, ಪ್ರಾಯೋಗಿಕ ಕಲಿಕೆ, ಇಂಟರ್ನ್‌ಶಿಪ್‌ಗಳು, ಉದ್ಯೋಗಾವಕಾಶಗಳು, ಕೌಶಲ್ಯ ಅಭಿವೃದ್ಧಿ, ನಾಯಕತ್ವ, ನಾವೀನ್ಯತೆ ಮತ್ತು ರಾಷ್ಟ್ರೀಯ ಉಪಕ್ರಮಗಳೊಂದಿಗೆ ಸಂಪರ್ಕಿಸುವ ಒಂದು ಏಕೀಕೃತ, ಸುರಕ್ಷಿತ ಮತ್ತು ವಿಸ್ತರಣೀಯ ವೇದಿಕೆಯಾಗಿದೆ.
31 ಅಕ್ಟೋಬರ್ 2023 ರಂದು ಪ್ರಾರಂಭವಾದ ಈ ವೇದಿಕೆಯು ಇಲ್ಲಿಯವರೆಗೆ 2.21 ಕೋಟಿಗೂ ಹೆಚ್ಚು ಯುವಕರನ್ನು ನೋಂದಾಯಿಸಿಕೊಂಡಿದೆ. ಅಲ್ಲದೆ, 1.52 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕ ಅವಕಾಶಗಳನ್ನು ಮತ್ತು 28,000 ಕ್ಕೂ ಹೆಚ್ಚು ಪ್ರಾಯೋಗಿಕ ಕಲಿಕಾ ಕಾರ್ಯಕ್ರಮಗಳನ್ನು ಒದಗಿಸಿದ್ದು, 1.19 ಲಕ್ಷಕ್ಕೂ ಹೆಚ್ಚು ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.ಕೃತಕ ಬುದ್ಧಿಮತ್ತೆ, ಬಹುಭಾಷಾ ಬೆಂಬಲ, ಮೊಬೈಲ್-ಫಸ್ಟ್ ಸೇವೆಗಳು, ಗ್ಯಾಮಿಫಿಕೇಶನ್, ಓಪನ್ ಎಪಿಐ ಮತ್ತು ನೈಜ-ಸಮಯದ ದತ್ತಾಂಶ ವಿಶ್ಲೇಷಣೆಯೊಂದಿಗೆ ನಿರ್ಮಿಸಲಾದ 'ಮೈ ಭಾರತ', ಸರ್ಕಾರ ಮತ್ತು ಪಾಲುದಾರ ಸಂಸ್ಥೆಗಳಿಗೆ ಒಂದೇ ರಾಷ್ಟ್ರೀಯ ಡಿಜಿಟಲ್ ಪರಿಸರ ವ್ಯವಸ್ಥೆಯ ಮೂಲಕ ಮಿಲಿಯನ್‌ಗಟ್ಟಲೆ ಯುವಕರನ್ನು ತೊಡಗಿಸಿಕೊಳ್ಳಲು, ಗುರುತಿಸಲು ಮತ್ತು ಸಬಲೀಕರಣಗೊಳಿಸಲು ಅವಕಾಶ ನೀಡುತ್ತದೆ. ಇದು 'ಡಿಜಿಟಲ್ ಇಂಡಿಯಾ' ಮತ್ತು 'ವಿಕಸಿತ ಭಾರತ@2047' ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ.
|
ನಿಮಗೆ ಗೊತ್ತೇ?
'ಮೈ ಭಾರತ' ವೇದಿಕೆಯು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಿದೆ. ಇದು "ಒಂದು ವಾರದಲ್ಲಿ ಆನ್‌ಲೈನ್ ರಸಪ್ರಶ್ನೆಯಲ್ಲಿ ಭಾಗವಹಿಸಿದ ಅತಿ ಹೆಚ್ಚು ಬಳಕೆದಾರರು" ಎಂಬ ವಿಭಾಗದಲ್ಲಿ 390,812 ಮಂದಿ ಪರಿಶೀಲಿಸಲ್ಪಟ್ಟ ಭಾಗವಹಿಸುವವರೊಂದಿಗೆ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
|
ಅಗ್ರಿ-ಸ್ಟಾಕ್: ತಂತ್ರಜ್ಞಾನದ ಮೂಲಕ ರೈತರ ಸಬಲೀಕರಣ

'ಡಿಜಿಟಲ್ ಅಗ್ರಿಕಲ್ಚರ್ ಮಿಷನ್' ಅಡಿಯಲ್ಲಿ ಅಭಿವೃದ್ಧಿಪಡಿಸಲಾದ 'ಅಗ್ರಿ-ಸ್ಟಾಕ್' ರೈತ-ಕೇಂದ್ರಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಆಗಿದೆ. ಇದು ಆನ್‌ಲೈನ್ ಕೃಷಿ ವಾಣಿಜ್ಯಕ್ಕಾಗಿ ಇ-ನಾಮ್ ಮತ್ತು ತತ್‌ಕ್ಷಣದ ಕೃಷಿ ಮಾಹಿತಿ ಹಾಗೂ ಸರ್ಕಾರಿ ಯೋಜನೆಗಳ ಬೆಂಬಲವನ್ನು ಒದಗಿಸುವ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ 'ಕಿಸಾನ್ ಇ-ಮಿತ್ರ' ದಂತಹ ಸೇವೆಗಳಿಗೆ ಶಕ್ತಿಯನ್ನು ನೀಡುತ್ತಿದೆ. ರೈತರು, ಭೂಮಿ ಮತ್ತು ಬೆಳೆಗಳ ದತ್ತಾಂಶವನ್ನು ಸಂಯೋಜಿಸುವ ಮೂಲಕ, ಇದು ಸಾಲ, ವಿಮೆ, ಸಬ್ಸಿಡಿ, ಸಂಗ್ರಹಣೆ ಮತ್ತು ವೈಯಕ್ತಿಕಗೊಳಿಸಿದ ಸಲಹಾ ಸೇವೆಗಳನ್ನು ತಡೆರಹಿತವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ. ಮಾರ್ಚ್ 2026ರ ಹೊತ್ತಿಗೆ, 9.20 ಕೋಟಿಗೂ ಹೆಚ್ಚು ರೈತರ ಐಡಿಗಳನ್ನು ಸೃಷ್ಟಿಸಲಾಗಿದೆ.
|
ನಿಮಗೆ ಗೊತ್ತೇ?
ವೈಜ್ಞಾನಿಕ ಮತ್ತು ತಂತ್ರಜ್ಞಾನ-ಚಾಲಿತ ಕೃಷಿಯನ್ನು ಉತ್ತೇಜಿಸಲು ಭಾರತವು ದೇಶಾದ್ಯಂತ 731 ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಿದೆ. 'ಕಿಸಾನ್ ಸಾರಥಿ' ಡಿಜಿಟಲ್ ಸಲಹಾ ವೇದಿಕೆಯ ಮೂಲಕ, ರೈತರು ಕೆವಿಕೆಗಳು, ಐಸಿಎಆರ್ ಮತ್ತು ಕೃಷಿ ವಿಶ್ವವಿದ್ಯಾಲಯಗಳಿಂದ ನೈಜ-ಸಮಯದ ಮಾರ್ಗದರ್ಶನವನ್ನು ಪಡೆಯುತ್ತಾರೆ. ಇದು ಹವಾಮಾನ-ಸ್ಥಿತಿಸ್ಥಾಪಕ ಮತ್ತು ರೈತ-ಕೇಂದ್ರಿತ ಕೃಷಿ ಪದ್ಧತಿಗಳನ್ನು ಬೆಂಬಲಿಸುವುದರ ಜೊತೆಗೆ, ಕೃಷಿ ಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪುವಂತೆ ಮಾಡಿದೆ.
|
ಶಿಕ್ಷಣಕ್ಕೆ ಪ್ರವೇಶವನ್ನು ಕಲ್ಪಿಸುತ್ತಿರುವ ಡಿಜಿಟಲ್ ವೇದಿಕೆಗಳು
'ಡಿಜಿಟಲ್ ಇಂಡಿಯಾ'ವು ಗುಣಮಟ್ಟದ ಕಲಿಕೆಯನ್ನು ತರಗತಿ ಕೊಠಡಿಗಳಾಚೆಗೂ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ ತಲುಪಿಸುವ ಮೂಲಕ ಶಿಕ್ಷಣದಲ್ಲಿನ ಅಂತರವನ್ನು ಕಡಿಮೆ ಮಾಡುತ್ತಿದೆ.
ದೀಕ್ಷಾ ಪಠ್ಯಕ್ರಮಕ್ಕೆ ಸಂಬಂಧಿಸಿದ ಡಿಜಿಟಲ್ ಕಲಿಕಾ ಸಂಪನ್ಮೂಲಗಳು ಮತ್ತು ಶಿಕ್ಷಕರ ತರಬೇತಿಯ ಮೂಲಕ ಶಾಲಾ ಶಿಕ್ಷಣವನ್ನು ಪರಿವರ್ತಿಸುತ್ತಿದೆ. ಈ ವೇದಿಕೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಕ್ಯೂಆರ್-ಕೋಡ್ ಹೊಂದಿರುವ ಪಠ್ಯಪುಸ್ತಕಗಳು, ಸಂವಾದಾತ್ಮಕ ವಿಷಯಗಳು ಮತ್ತು ಕೃತಕ ಬುದ್ಧಿಮತ್ತೆ -ಆಧಾರಿತ ಕಲಿಕಾ ಸಾಧನಗಳನ್ನು ಒದಗಿಸುತ್ತದೆ. ಇದು ಭಾರತೀಯ ಸಂಕೇತ ಭಾಷೆಯ ಸಂಪನ್ಮೂಲಗಳು ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ಡಿಜಿಟಲ್ ವಿಷಯಗಳ ಮೂಲಕ ಅಂತರ್ಗತ ಶಿಕ್ಷಣವನ್ನು ಬೆಂಬಲಿಸುತ್ತಿದೆ. ಮಾರ್ಚ್ 2026ರ ಹೊತ್ತಿಗೆ, ದೀಕ್ಷಾ ದೇಶಾದ್ಯಂತ 2 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ದಾಟಿದೆ.
ಹೆಚ್ಚುವರಿಯಾಗಿ, ಸ್ವಯಂ ಮತ್ತು ಸ್ವಯಂ ಪ್ರಭಾ ಗುಣಮಟ್ಟದ ಶಿಕ್ಷಣದ ಪ್ರವೇಶವನ್ನು ತರಗತಿಗಳ ಆಚೆಗೂ ವಿಸ್ತರಿಸುತ್ತಿವೆ. ಸ್ವಯಂ 9ನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗೆ ಪ್ರಮುಖ ಶಿಕ್ಷಣ ಸಂಸ್ಥೆಗಳ ಮೂಲಕ ಉಚಿತ ಆನ್‌ಲೈನ್ ಕೋರ್ಸ್‌ಗಳನ್ನು ಒದಗಿಸುತ್ತದೆ ಮತ್ತು ಜನವರಿ 2026ರ ಹೊತ್ತಿಗೆ, ವಿವಿಧ ವಿಷಯಗಳಲ್ಲಿ 4,400ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಹೊಂದಿದೆ. ಇದಕ್ಕೆ ಪೂರಕವಾಗಿ, ಸ್ವಯಂ ಪ್ರಭಾ 48 ಮೀಸಲಾದ ಡಿಟಿಹೆಚ್ ಚಾನೆಲ್‌ಗಳ ಮೂಲಕ ಶೈಕ್ಷಣಿಕ ವಿಷಯಗಳನ್ನು ಪ್ರಸಾರ ಮಾಡುತ್ತದೆ, ಇದು ಇಂಟರ್ನೆಟ್ ಸಂಪರ್ಕ ಸೀಮಿತವಾಗಿರುವ ಪ್ರದೇಶಗಳಲ್ಲಿಯೂ ಕಲಿಕೆಯ ಅವಕಾಶ ಲಭ್ಯವಾಗುವುದನ್ನು ಖಚಿತಪಡಿಸುತ್ತದೆ.

ಈ ಉಪಕ್ರಮಗಳ ಮೇಲೆ ನಿರ್ಮಿಸಲಾದ 'ಪಿಎಂ ಇ-ವಿದ್ಯಾ', ತಡೆರಹಿತ ಮತ್ತು ಬಹು-ಮಾದರಿಯ ಕಲಿಕೆಯನ್ನು ಒದಗಿಸಲು ದೀಕ್ಷಾ, ಸ್ವಯಂ, ಸ್ವಯಂ ಪ್ರಭಾ, ಸಮುದಾಯ ರೇಡಿಯೋ ಮತ್ತು ಮೀಸಲಾದ ಶೈಕ್ಷಣಿಕ ದೂರದರ್ಶನ ಚಾನೆಲ್‌ಗಳನ್ನು ಒಂದೇ ಚೌಕಟ್ಟಿನಡಿಯಲ್ಲಿ ಸಂಯೋಜಿಸುತ್ತದೆ. ಇದು ವಿಶೇಷಚೇತನ ಕಲಿಯುವವರಿಗಾಗಿ ವಿನ್ಯಾಸಗೊಳಿಸಲಾದ ವಿಷಯಗಳ ಮೂಲಕ ಅಂತರ್ಗತ ಕಲಿಕೆಯನ್ನು ಉತ್ತೇಜಿಸುತ್ತಲೇ, ಗುಣಮಟ್ಟದ ಶಿಕ್ಷಣದ ಪ್ರವೇಶವನ್ನು ವಿಸ್ತರಿಸುತ್ತಿದೆ.
|
ನಿಮಗೆ ಗೊತ್ತೇ?
ಅಪಾರ್ ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ವಿಶಿಷ್ಟ ಡಿಜಿಟಲ್ ಶೈಕ್ಷಣಿಕ ಗುರುತನ್ನು ಒದಗಿಸುತ್ತದೆ. ಇದು ಶೈಕ್ಷಣಿಕ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸುತ್ತದೆ ಮತ್ತು ಪ್ರವೇಶಾತಿ, ವಿದ್ಯಾರ್ಥಿವೇತನ ಹಾಗೂ ಇತರ ಸೇವೆಗಳಿಗೆ ಕಾಗದರಹಿತ ಪರಿಶೀಲನೆಯನ್ನು ಸಾಧ್ಯವಾಗಿಸುತ್ತದೆ. ಜೂನ್ 2026ರ ಹೊತ್ತಿಗೆ, 33.74 ಕೋಟಿಗೂ ಹೆಚ್ಚು ಅಪಾರ್ ಐಡಿಗಳನ್ನು ಸೃಷ್ಟಿಸಲಾಗಿದೆ.
|
ಭಾರತದ ಡಿಜಿಟಲ್ ಕಾರ್ಯಪಡೆಯನ್ನು ಸಶಕ್ತಗೊಳಿಸುವುದು
'ಡಿಜಿಟಲ್ ಇಂಡಿಯಾ'ವು ಡಿಜಿಟಲ್ ಕೌಶಲ್ಯಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಉದ್ಯೋಗಾವಕಾಶಗಳನ್ನು ದೇಶಾದ್ಯಂತ ವಿಸ್ತರಿಸುವ ಮೂಲಕ ಭವಿಷ್ಯಕ್ಕೆ ಸಜ್ಜಾಗಿರುವ ಕಾರ್ಯಪಡೆಯನ್ನು ನಿರ್ಮಿಸುತ್ತಿದೆ.
ಪಿಎಂಜಿ ದಿಶಾ: ಪಿಎಂಜಿ ದಿಶಾ ಯೋಜನೆಯು ಸ್ಮಾರ್ಟ್‌ಫೋನ್ ಬಳಕೆ, ಇಂಟರ್ನೆಟ್ ಪ್ರವೇಶ, ಡಿಜಿಟಲ್ ಪಾವತಿಗಳು ಮತ್ತು ಆನ್‌ಲೈನ್ ಸೇವೆಗಳ ಬಗ್ಗೆ ನಾಗರಿಕರಿಗೆ ತರಬೇತಿ ನೀಡುವ ಮೂಲಕ ಗ್ರಾಮೀಣ ಡಿಜಿಟಲ್ ಅಂತರವನ್ನು ಹೋಗಲಾಡಿಸಿದೆ. ಮಾರ್ಚ್ 2024ರ ಹೊತ್ತಿಗೆ, ಈ ಯೋಜನೆಯು ತನ್ನ ಗುರಿಯನ್ನು ಮೀರಿ 6.39 ಕೋಟಿ ಗ್ರಾಮೀಣ ನಾಗರಿಕರಿಗೆ ಯಶಸ್ವಿಯಾಗಿ ತರಬೇತಿ ನೀಡಿದೆ.

ಫ್ಯೂಚರ್ ಸ್ಕಿಲ್ಸ್ ಪ್ರೈಮ್: ಫ್ಯೂಚರ್ ಸ್ಕಿಲ್ಸ್ ಪ್ರೈಮ್ ಕಲಿಯುವವರನ್ನು ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತೆ ಮತ್ತು ಡೇಟಾ ಅನಾಲಿಟಿಕ್ಸ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳಿಗೆ ಸಿದ್ಧಪಡಿಸುತ್ತಿದೆ. ಇದು 26 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನೋಂದಾಯಿಸಿಕೊಂಡಿದೆ ಮತ್ತು ನಾಸ್ಕಾಂ ನ 'ಟ್ಯಾಲೆಂಟ್ ಕನೆಕ್ಟ್' ಮೂಲಕ ಕಲಿಯುವವರನ್ನು ಉದ್ಯೋಗಗಳೊಂದಿಗೆ ಸಂಪರ್ಕಿಸುತ್ತದೆ.
ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್: ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ ಕೌಶಲ್ಯ ತರಬೇತಿ, ಪ್ರಮಾಣೀಕರಣ ಮತ್ತು ಉದ್ಯೋಗ ಸೇವೆಗಳಿಗಾಗಿ ಒಂದು ಏಕೀಕೃತ ವೇದಿಕೆಯಾಗಿದೆ. ಮಾರ್ಚ್ 2026ರ ಹೊತ್ತಿಗೆ, ಇದು 32 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ದಾಖಲಿಸಿಕೊಂಡಿದೆ ಮತ್ತು ಪಿಎಂಕೆವಿವೈ, ಪಿಎಂ ವಿಶ್ವಕರ್ಮ, ಸರ್ಕಾರಿ ಯೋಜನೆಗಳು ಹಾಗೂ ಡಿಜಿಟಲ್ ಕಲಿಕಾ ಪಾಲುದಾರರ ಅಡಿಯಲ್ಲಿ ವಿವಿಧ ಕೋರ್ಸ್‌ಗಳನ್ನು ನೀಡುತ್ತಿದೆ.

'ಇಂಡಿಯಾ ಎಐ ಮಿಷನ್' ಕೃತಕ ಬುದ್ಧಿಮತ್ತೆಯ ಶಿಕ್ಷಣ, ಮೂಲಸೌಕರ್ಯ ಮತ್ತು ಜವಾಬ್ದಾರಿಯುತ ಎಐ ಅಳವಡಿಕೆಯನ್ನು ಬಲಪಡಿಸುತ್ತಿದೆ. ಇದು 'ಇಂಡಿಯಾ ಎಐ ಕೋಶ್' ನಂತಹ ಉಪಕ್ರಮಗಳ ಮೂಲಕ ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವೃತ್ತಿಪರ ತರಬೇತಿ ಕಾರ್ಯಕ್ರಮಗಳಲ್ಲಿ ಎಐ ಕೌಶಲ್ಯವನ್ನು ಉತ್ತೇಜಿಸುತ್ತಿದೆ.
|
ನಿಮಗೆ ಗೊತ್ತೇ?
ಭಾರತವು ಫೆಬ್ರವರಿ 2026ರಲ್ಲಿ 'ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್' ಅನ್ನು ಆಯೋಜಿಸಿತ್ತು. ಜಾಗತಿಕ ದಕ್ಷಿಣದ ದೇಶಗಳ ಪೈಕಿ ಇಂತಹ ಜಾಗತಿಕ ಎಐ ಶೃಂಗಸಭೆಯನ್ನು ಆಯೋಜಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಈ ಶೃಂಗಸಭೆಯು ಪ್ರಪಂಚದಾದ್ಯಂತದ 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ತಂದಿತ್ತು.
|
ಭಾರತದ ಡಿಜಿಟಲ್ ನಾಯಕತ್ವ ಮತ್ತು ಮುಂದಿನ ಹಾದಿ

ಭಾರತವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದ್ದು, ಪ್ರಮಾಣೀಕರಿಸಬಹುದಾದ ಮತ್ತು ನಾಗರಿಕ-ಕೇಂದ್ರಿತ ಡಿಜಿಟಲ್ ಆಡಳಿತ ವೇದಿಕೆಗಳ ಮೂಲಕ ಈ ಸಾಧನೆಯನ್ನು ಮಾಡುತ್ತಿದೆ. ಫೆಬ್ರವರಿ 2026ರ ಹೊತ್ತಿಗೆ, ಭಾರತವು 'ಇಂಡಿಯಾ ಸ್ಟಾಕ್' ಮತ್ತು ಡಿಪಿಐ ವ್ಯವಸ್ಥೆಗಳ ಕುರಿತು ಸಹಕಾರಕ್ಕಾಗಿ 24 ದೇಶಗಳೊಂದಿಗೆ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಿದೆ. ಇದು ಡಿಜಿಟಲ್ ಗುರುತು, ಪಾವತಿಗಳು, ದತ್ತಾಂಶ ವಿನಿಮಯ ಮತ್ತು ಸೇವಾ ವಿತರಣೆಯ ಕ್ಷೇತ್ರಗಳನ್ನು ಒಳಗೊಂಡಿದೆ. ಯುಪಿಐ ಈಗ ಯುಎಇ, ಸಿಂಗಾಪುರ್, ಫ್ರಾನ್ಸ್, ಮಾರಿಷಸ್ ಮತ್ತು ಶ್ರೀಲಂಕಾ ಸೇರಿದಂತೆ ಎಂಟು ದೇಶಗಳಲ್ಲಿ ಲಭ್ಯವಿದ್ದು, ಇದು ಭಾರತದ ಜಾಗತಿಕ ಫಿನ್‌ಟೆಕ್ ಉಪಸ್ಥಿತಿಯನ್ನು ಬಲಪಡಿಸಿದೆ. [Aadhaar Redacted], ಡಿಜಿಲಾಕರ್, ಕೋವಿನ್, ಜಿಇಎಂ, ದೀಕ್ಷಾ, ಉಮಂಗ್ ಮತ್ತು ಇ-ಸಂಜೀವಿನಿಯಂತಹ ವೇದಿಕೆಗಳು ಅಂತರರಾಷ್ಟ್ರೀಯ ಡಿಜಿಟಲ್ ಆಡಳಿತ ಮಾದರಿಗಳನ್ನು ರೂಪಿಸುತ್ತಿವೆ. 2023ರ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ಭಾರತವು 'ಇಂಡಿಯಾ ಸ್ಟಾಕ್ ಗ್ಲೋಬಲ್' ಮತ್ತು 'ಗ್ಲೋಬಲ್ ಡಿಪಿಐ ರೆಪೊಸಿಟರಿ'ಯನ್ನು ಪ್ರಾರಂಭಿಸಿತು, ಇದು ಭಾರತೀಯ ಡಿಜಿಟಲ್ ಪರಿಹಾರಗಳನ್ನು ಜಾಗತಿಕವಾಗಿ ವಿಸ್ತರಿಸಲು ನೆರವಾಯಿತು. ಡಿಜಿಟಲ್ ಇಂಡಿಯಾ ತನ್ನ ಮುಂದಿನ ದಶಕಕ್ಕೆ ಕಾಲಿಡುತ್ತಿರುವಾಗ, ಭಾರತವು ತಂತ್ರಜ್ಞಾನವನ್ನು ಅಂತರ್ಗತ ಬೆಳವಣಿಗೆ, ಡಿಜಿಟಲ್ ಸಬಲೀಕರಣ ಮತ್ತು ಜಾಗತಿಕ ಸಹಕಾರಕ್ಕಾಗಿ ಒಂದು ಸಾಧನವಾಗಿ ಬಳಸಲು ಸಜ್ಜಾಗಿದೆ.
References
Ministry of Communications
Ministry of Finance
Ministry of Panchayati Raj
Ministry of Electronics & IT
Ministry of Commerce & Industry
Ministry of Law and Justice
Ministry of Agriculture & Farmers Welfare
Rajya Sabha
Others:
Click here for pdf file.
*****
(Explainer ID: 159070)
आगंतुक पटल : 8
Provide suggestions / comments