Infrastructure
ಮುಂಬೈ–ಅಹಮದಾಬಾದ್ ಹೈ-ಸ್ಪೀಡ್ ರೈಲು: ಭಾರತದ ರೈಲ್ವೆ ಆಧುನೀಕರಣದತ್ತ ಒಂದು ಹೆಜ್ಜೆ
Posted On:
12 JUN 2026 5:04PM
|
ಮುಂಬೈ–ಅಹಮದಾಬಾದ್ ಹೈ-ಸ್ಪೀಡ್ ರೈಲು (ಎಂಎಎಚ್‌ಎಸ್‌ಆರ್) ಯೋಜನೆಯು ಭಾರತದ ರೈಲ್ವೆ ಆಧುನೀಕರಣದ ಪ್ರಯತ್ನಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ದೇಶದ ಮೊದಲ ಹೈ-ಸ್ಪೀಡ್ ರೈಲು ಕಾರಿಡಾರ್ ಆಗಿರುವ ಇದು, ನಗರಗಳ ನಡುವಿನ ಸಂಚಾರ ವ್ಯವಸ್ಥೆಯನ್ನು ಪರಿವರ್ತಿಸುವ ಮತ್ತು ದೇಶೀಯ ರೈಲ್ವೆ ಸಾಮರ್ಥ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ 508 ಕಿಲೋಮೀಟರ್ ಉದ್ದದ ಕಾರಿಡಾರ್ ಮಹಾರಾಷ್ಟ್ರ, ಗುಜರಾತ್ ಮತ್ತು ದಾದ್ರಾ ಮತ್ತು ನಗರ ಹವೇಲಿಯ ಮೂಲಕ ಹಾದುಹೋಗುತ್ತದೆ. ಇದು ಹೈ-ಸ್ಪೀಡ್ ಪ್ರಯಾಣಿಕ ಸಾರಿಗೆಯ ಜೊತೆಗೆ ವಯಾಡಕ್ಟ್‌ಗಳು, ಸುರಂಗಗಳು, ಸೇತುವೆಗಳು, ನಿಲ್ದಾಣಗಳು ಹಾಗೂ ಅತ್ಯಾಧುನಿಕ ಸಿಗ್ನಲಿಂಗ್ ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಒಳಗೊಂಡಿರುವ ವ್ಯಾಪಕ ಮೂಲಸೌಕರ್ಯ ಅಭಿವೃದ್ಧಿಯನ್ನು ಸಂಯೋಜಿಸುತ್ತದೆ. ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರ ಜೊತೆಗೆ, ಈ ಯೋಜನೆಯು ತಾಂತ್ರಿಕ ಪರಿಣಿತಿ, ಕೈಗಾರಿಕಾ ಸಾಮರ್ಥ್ಯ ಮತ್ತು ಸಾಂಸ್ಥಿಕ ಜ್ಞಾನವನ್ನು ವೃದ್ಧಿಸುತ್ತಿದೆ. ಈ ಸಾಮರ್ಥ್ಯಗಳು ಭವಿಷ್ಯದಲ್ಲಿ ಭಾರತದಾದ್ಯಂತ ಹೈ-ಸ್ಪೀಡ್ ರೈಲು ಜಾಲದ ವಿಸ್ತರಣೆಗೆ ಸಹಕಾರಿಯಾಗಲಿವೆ.
|
ಸಾಂಪ್ರದಾಯಿಕ ರೈಲ್ವೆಯಿಂದ ಹೈ-ಸ್ಪೀಡ್ ಸಂಪರ್ಕದವರೆಗೆ
ಭಾರತೀಯ ರೈಲ್ವೆಯು ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದ್ದು, ಪ್ರಯಾಣಿಕರ ಮತ್ತು ಸರಕು ಸಾಗಣೆಗೆ ಅತ್ಯಂತ ಅವಶ್ಯಕವಾದ ಸಾರಿಗೆ ಮಾಧ್ಯಮವಾಗಿ ಮುಂದುವರಿದಿದೆ. ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಮೂಲಕ, ಇದು ದೇಶದಾದ್ಯಂತ ಜನ ಮತ್ತು ಸರಕುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಈ ಸಂಪರ್ಕವು ಆರ್ಥಿಕ ಬೆಳವಣಿಗೆಗೆ ಹಾಗೂ ಮಾರುಕಟ್ಟೆಗಳು, ಶಿಕ್ಷಣ ಮತ್ತು ಅಗತ್ಯ ಸೇವೆಗಳ ಸುಲಭ ಲಭ್ಯತೆಗೆ ಕೊಡುಗೆ ನೀಡುತ್ತದೆ. ಹೆಚ್ಚುತ್ತಿರುವ ಸಾರಿಗೆ ಬೇಡಿಕೆಯನ್ನು ಪೂರೈಸಲು, ರೈಲ್ವೆ ಜಾಲ ಮತ್ತು ಅದರ ಸಾಗಣಾ ಸಾಮರ್ಥ್ಯವು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ವಿಸ್ತರಣೆಗೊಂಡಿದೆ.
ಭಾರತದ ಬದಲಾಗುತ್ತಿರುವ ನಗರ ಭೂದೃಶ್ಯವು ಜನರ ಜೀವನಶೈಲಿ, ಕೆಲಸ ಮತ್ತು ಪ್ರಯಾಣದ ವಿಧಾನವನ್ನು ಸಹ ಪರಿವರ್ತಿಸಿದೆ. ಪ್ರಮುಖ ಆರ್ಥಿಕ ಕೇಂದ್ರಗಳ ಅಭಿವೃದ್ಧಿಯು ದೂರದ ಪ್ರಯಾಣ ಮತ್ತು ನಗರಗಳ ನಡುವಿನ ಸಂಚಾರದ ಅವಶ್ಯಕತೆಯನ್ನು ಹೆಚ್ಚಿಸಿದೆ. ಇಂತಹ ಬದಲಾಗುತ್ತಿರುವ ಸಾರಿಗೆ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ, ಭಾರತವು ಮುಂಬೈ–ಅಹಮದಾಬಾದ್ ಹೈ-ಸ್ಪೀಡ್ ರೈಲು (ಎಂಎಎಚ್‌ಎಸ್‌ಆರ್) ಕಾರಿಡಾರ್‌ಗೆ ಚಾಲನೆ ನೀಡಿತು. ಸೆಪ್ಟೆಂಬರ್ 2017ರಲ್ಲಿ ಶಂಕುಸ್ಥಾಪನೆ ನೆರವೇರಿಸುವುದರೊಂದಿಗೆ, ಈ ಯೋಜನೆಯು ಭಾರತದ ಹೈ-ಸ್ಪೀಡ್ ರೈಲು ಪ್ರಯಾಣಕ್ಕೆ ನಾಂದಿ ಹಾಡಿತು. ಈ ಕಾರಿಡಾರ್ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಜೊತೆಗೆ ಪ್ರಯಾಣಿಕರ ಸೌಕರ್ಯ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು ಭಾರತದ ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಿಸುವ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುವ ಪ್ರಮುಖ ಹೆಜ್ಜೆಯಾಗಿದೆ.
ಎಂಎಎಚ್‌ಎಸ್‌ಆರ್: ದೃಷ್ಟಿಕೋನವನ್ನು ಮೂಲಸೌಕರ್ಯವನ್ನಾಗಿ ಪರಿವರ್ತಿಸುವುದು
ಹೈ-ಸ್ಪೀಡ್ ರೈಲು ಎಂದರೆ ಸಾಂಪ್ರದಾಯಿಕ ರೈಲುಗಳಿಗಿಂತ ಗಮನಾರ್ಹವಾಗಿ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಪ್ರಯಾಣಿಕ ರೈಲು ವ್ಯವಸ್ಥೆ. ಇಂತಹ ವ್ಯವಸ್ಥೆಗಳು ಸಾಮಾನ್ಯವಾಗಿ ಮೀಸಲಾದ ಕಾರಿಡಾರ್‌ಗಳಲ್ಲಿ ಸಂಚರಿಸುತ್ತವೆ ಮತ್ತು ಸುಧಾರಿತ ರೋಲಿಂಗ್ ಸ್ಟಾಕ್, ಸಿಗ್ನಲಿಂಗ್, ಸಂವಹನ ಮತ್ತು ಸುರಕ್ಷತಾ ತಂತ್ರಜ್ಞಾನಗಳನ್ನು ಅವಲಂಬಿಸಿವೆ. ಅಂತಹ ವೈಶಿಷ್ಟ್ಯಗಳು ಕಾರ್ಯಾಚರಣೆಯ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತವೆ. ಕಾರ್ಯಾಚರಣೆಯ ದೃಷ್ಟಿಯಿಂದ, ಹೈ-ಸ್ಪೀಡ್ ರೈಲು ಎಂದರೆ ಗಂಟೆಗೆ 250 ಕಿಲೋಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ರೈಲ್ವೆ ವ್ಯವಸ್ಥೆಯಾಗಿದೆ.
ಪ್ರಸ್ತುತ, ಭಾರತೀಯ ರೈಲ್ವೆ ಜಾಲದಲ್ಲಿ ಗರಿಷ್ಠ ವಿನ್ಯಾಸ ವೇಗವು ಸುಮಾರು 180 ಕಿ.ಮೀ/ಗಂ (ವಂದೇ ಭಾರತ್‌ನಂತಹ ಸೆಮಿ-ಹೈ-ಸ್ಪೀಡ್ ಸೇವೆಗಳು) ಆಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮುಂಬೈ–ಅಹಮದಾಬಾದ್ ಹೈ-ಸ್ಪೀಡ್ ರೈಲು (ಎಂಎಎಚ್‌ಎಸ್‌ಆರ್) ಯೋಜನೆಯು 350 ಕಿ.ಮೀ/ಗಂ ವಿನ್ಯಾಸ ವೇಗ ಮತ್ತು 320 ಕಿ.ಮೀ/ಗಂ ಕಾರ್ಯಾಚರಣಾ ವೇಗವನ್ನು ಹೊಂದಿದೆ. ಇದು ಭಾರತದಲ್ಲಿ ಕೈಗೊಳ್ಳಲಾದ ಅತ್ಯಂತ ವಿಸ್ತಾರವಾದ ರೈಲ್ವೆ ಮೂಲಸೌಕರ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಮುಂಬೈ ಮತ್ತು ಅಹಮದಾಬಾದ್ ಅನ್ನು ಸುಮಾರು 1 ಗಂಟೆ 58 ನಿಮಿಷಗಳಲ್ಲಿ ಸಂಪರ್ಕಿಸಲಿದೆ.
ಹೈ-ಸ್ಪೀಡ್ ಪ್ರಯಾಣಿಕ ಸಾರಿಗೆಯನ್ನು ಒದಗಿಸುವುದರ ಜೊತೆಗೆ, ಈ ಯೋಜನೆಯು ಮೊದಲ ಬಾರಿಗೆ ದೇಶೀಯ ಹೈ-ಸ್ಪೀಡ್ ರೈಲು ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲಿದೆ. ಈ ವ್ಯವಸ್ಥೆಯು ವಯಾಡಕ್ಟ್ ನಿರ್ಮಾಣ, ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಅಳವಡಿಕೆ, ಸುರಂಗ ನಿರ್ಮಾಣ, ಸೇತುವೆಗಳ ನಿರ್ಮಾಣ ಮತ್ತು ನಿಲ್ದಾಣದ ಪ್ರದೇಶದ ಯೋಜನೆಗಳನ್ನು ಒಳಗೊಂಡಿದೆ. ಅಲ್ಲದೆ, ಭಾರತೀಯ ಇಂಜಿನಿಯರ್‌ಗಳು ಮತ್ತು ತಂತ್ರಜ್ಞರಿಗೆ ವಿಶೇಷ ತರಬೇತಿ, ಸಿಗ್ನಲಿಂಗ್ ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಸಹ ಇದು ಒಳಗೊಂಡಿದೆ. ಈ ಯೋಜನೆಯ ಮೂಲಕ ಅಭಿವೃದ್ಧಿಪಡಿಸಲಾದ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯಗಳು ಭವಿಷ್ಯದಲ್ಲಿ ದೇಶದಾದ್ಯಂತ ಬರಲಿರುವ ಇತರ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳಿಗೆ ಬೆಂಬಲ ನೀಡುವ ನಿರೀಕ್ಷೆಯಿದೆ.
508 ಕಿಲೋಮೀಟರ್ ಉದ್ದದ ಎಂಎಎಚ್‌ಎಸ್‌ಆರ್ ಕಾರಿಡಾರ್ ಮಹಾರಾಷ್ಟ್ರ, ಗುಜರಾತ್ ಮತ್ತು ದಾದ್ರಾ ಮತ್ತು ನಗರ ಹವೇಲಿಯ ಮೂಲಕ ಹಾದುಹೋಗುತ್ತದೆ. ಈ ಕಾರಿಡಾರ್ ಮುಂಬೈ, ಥಾಣೆ, ವಿರಾರ್, ಬೊಯ್ಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರ, ಆನಂದ್, ಅಹಮದಾಬಾದ್ ಮತ್ತು ಸಬರಮತಿ ಸೇರಿದಂತೆ ಒಟ್ಟು 12 ನಿಲ್ದಾಣಗಳನ್ನು ಹೊಂದಿದೆ. ಪ್ರತಿಯೊಂದು ನಿಲ್ದಾಣವನ್ನು ಆಯಾ ನಗರದ ಸಂಸ್ಕೃತಿ ಮತ್ತು ವೈಶಿಷ್ಟ್ಯವನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸಮಕಾಲೀನ ವಾಸ್ತುಶಿಲ್ಪ, ಆಧುನಿಕ ಸೌಲಭ್ಯಗಳು ಮತ್ತು ಬಹುಮಾದರಿಯ ಸಂಪರ್ಕವು ಅವುಗಳ ವಿನ್ಯಾಸದ ಅವಿಭಾಜ್ಯ ಅಂಗಗಳಾಗಿವೆ. ಸಬರಮತಿ ನಿಲ್ದಾಣವನ್ನು ಬುಲೆಟ್ ರೈಲು, ಮೆಟ್ರೋ, ಬಿಆರ್‌ಟಿಎಸ್ ಮತ್ತು ರೈಲ್ವೆ ಜಾಲಗಳನ್ನು ಸಂಪರ್ಕಿಸುವ ಮಲ್ಟಿಮೋಡಲ್ ಹಬ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶವನ್ನು ಸಹ 'ಟ್ರಾನ್ಸಿಟ್-ಓರಿಯೆಂಟೆಡ್ ಡೆವಲಪ್‌ಮೆಂಟ್' ತತ್ವಗಳ ಆಧಾರದ ಮೇಲೆ ಯೋಜಿಸಲಾಗುತ್ತಿದೆ. ಈ ಕಾರಿಡಾರ್‌ನ ಮೊದಲ ಹೈ-ಸ್ಪೀಡ್ ರೈಲು ಸೇವೆಯು ಆಗಸ್ಟ್ 2027ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ರೈಲು ಮಾರ್ಗವು ಸುಮಾರು 90% ಎತ್ತರಿಸಿದ ವಿನ್ಯಾಸವನ್ನು ಹೊಂದಿದ್ದು, ನಿರ್ಮಾಣ ಕಾರ್ಯವನ್ನು ಮುಖ್ಯವಾಗಿ 'ಫುಲ್ ಸ್ಪ್ಯಾನ್ ಲಾಂಚಿಂಗ್ ಮೆಥಡ್' ಮೂಲಕ ನಡೆಸಲಾಗುತ್ತಿದೆ. ಈ ತಂತ್ರಜ್ಞಾನವನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಬಳಸಲಾಗುತ್ತಿದ್ದು, ಇದು ಸಾಂಪ್ರದಾಯಿಕ ವಿಭಾಗೀಯ ನಿರ್ಮಾಣ ವಿಧಾನಕ್ಕಿಂತ ಹತ್ತು ಪಟ್ಟು ವೇಗವಾಗಿದೆ. ಕಾರ್ಯಾಚರಣೆಯ ಶಬ್ದವನ್ನು ಕಡಿಮೆ ಮಾಡಲು ವಯಾಡಕ್ಟ್‌ನ ಎರಡೂ ಬದಿಗಳಲ್ಲಿ ಶಬ್ದ ತಡೆಗೋಡೆಗಳನ್ನು ಅಳವಡಿಸಲಾಗುತ್ತಿದೆ. ಒಟ್ಟಾರೆಯಾಗಿ, ಈ ವೈಶಿಷ್ಟ್ಯಗಳು ಕಾರಿಡಾರ್‌ನ ಸಮರ್ಥ ನಿರ್ಮಾಣ, ಕಾರ್ಯಾಚರಣೆಯ ಕಾರ್ಯಕ್ಷಮತೆ ಮತ್ತು ಸಮಗ್ರ ನಗರ ಅಭಿವೃದ್ಧಿಯ ಮೇಲಿರುವ ಗಮನವನ್ನು ಉಲ್ಲೇಖಿಸುತ್ತವೆ.
ತಾಂತ್ರಿಕ ವೈಶಿಷ್ಟ್ಯಗಳು ಮತ್ತು ವ್ಯವಸ್ಥೆಗಳು
ಎಂಎಎಚ್‌ಎಸ್‌ಆರ್ ಯೋಜನೆಯನ್ನು ಜಪಾನೀಸ್ ಶಿಂಕನ್ಸೆನ್ ತ್ರಜ್ಞಾನ ಮತ್ತು ಕಾರ್ಯಾಚರಣೆಯ ಮಾನದಂಡಗಳನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರಿಡಾರ್ ಟ್ರಾಕ್ಷನ್, ವಿದ್ಯುದೀಕರಣ, ಟ್ರ್ಯಾಕ್ ಮೂಲಸೌಕರ್ಯ ಮತ್ತು ಕಾರ್ಯಾಚರಣೆಗಳಿಗಾಗಿ ಸುಧಾರಿತ ವ್ಯವಸ್ಥೆಗಳನ್ನು ಒಳಗೊಂಡಿದೆ. ಯೋಜನೆಯ ಅಧಿಕೃತ ಅವಲೋಕನವು ಈ ಕೆಳಗಿನ ಪ್ರಮುಖ ತಾಂತ್ರಿಕ ಅಂಶಗಳನ್ನು ದಾಖಲಿಸಿದೆ:
- ಓವರ್‌ಹೆಡ್ ಎಲೆಕ್ಟ್ರಿಫಿಕೇಶನ್: ಕಾರಿಡಾರ್‌ನ ಉದ್ದಕ್ಕೂ 20,000ಕ್ಕೂ ಹೆಚ್ಚು ಒಎಚ್‌ಇ ಮಾಸ್ಟ್‌ಗಳನ್ನು (ಕಂಬಗಳು) ಯೋಜಿಸಲಾಗಿದೆ. 2×25 kV ಓವರ್‌ಹೆಡ್ ಟ್ರಾಕ್ಷನ್ ವ್ಯವಸ್ಥೆಯು ಶಿಂಕನ್ಸೆನ್ ಆಧಾರಿತ OHE ಕ್ಯಾಂಟಿಲಿವರ್‌ಗಳನ್ನು ಬಳಸುತ್ತದೆ.
- ಟ್ರಾಕ್ಷನ್ ಮತ್ತು ವಿದ್ಯುತ್ ಸರಬರಾಜು: ಈ ಯೋಜನೆಯು 12 ಟ್ರಾಕ್ಷನ್ ಸಬ್‌ಸ್ಟೇಷನ್‌ಗಳು, 2 ಡಿಪೋ ಟ್ರಾಕ್ಷನ್ ಸಬ್‌ಸ್ಟೇಷನ್‌ಗಳು ಮತ್ತು 16 ವಿತರಣಾ ಸಬ್‌ಸ್ಟೇಷನ್‌ಗಳನ್ನು ಒಳಗೊಂಡಿದೆ.
- ಟ್ರ್ಯಾಕ್ ವ್ಯವಸ್ಥೆ: ಜಪಾನಿನ ಶಿಂಕನ್ಸೆನ್ ತಂತ್ರಜ್ಞಾನವನ್ನು ಆಧರಿಸಿದ ಜೆ-ಸ್ಲ್ಯಾಬ್ (J-Slab) ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಅಳವಡಿಸಲಾಗುತ್ತಿದೆ.
- ಟ್ರ್ಯಾಕ್ ನಿರ್ಮಾಣ ಕೇಂದ್ರಗಳು: ಹಳಿಗಳು, ಟ್ರ್ಯಾಕ್ ಸ್ಲ್ಯಾಬ್‌ಗಳು, ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ನಿರ್ವಹಿಸಲು ಮೀಸಲಾದ ಟ್ರ್ಯಾಕ್ ನಿರ್ಮಾಣ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
- ರೋಲಿಂಗ್ ಸ್ಟಾಕ್ ಡಿಪೋಗಳು: ಗುಜರಾತ್‌ನ ಸಬರಮತಿ ಮತ್ತು ಸೂರತ್ ಹಾಗೂ ಮಹಾರಾಷ್ಟ್ರದ ಥಾಣೆಯಲ್ಲಿ ಮೂರು ಡಿಪೋಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಕಾರಿಡಾರ್‌ನಾದ್ಯಂತ ಇಂಜಿನಿಯರಿಂಗ್ ಪ್ರಗತಿ
ಎಂಎಎಚ್‌ಎಸ್‌ಆರ್ ಕಾರಿಡಾರ್ ನದಿಗಳು, ನಗರ ಪ್ರದೇಶಗಳು ಮತ್ತು ಸವಾಲಿನ ಭೂಪ್ರದೇಶಗಳ ಮೂಲಕ ಹಾದುಹೋಗುವುದರಿಂದ, ಇಲ್ಲಿ ವ್ಯಾಪಕವಾದ ಸೇತುವೆ ಮತ್ತು ಸುರಂಗ ಮೂಲಸೌಕರ್ಯಗಳ ಅವಶ್ಯಕತೆಯಿದೆ. ಈ ರಚನೆಗಳು ಯೋಜನೆಯ ಅತ್ಯಂತ ಸಂಕೀರ್ಣವಾದ ಇಂಜಿನಿಯರಿಂಗ್ ಭಾಗಗಳನ್ನು ಪ್ರತಿನಿಧಿಸುತ್ತವೆ.
ಕಾರಿಡಾರ್‌ನಾದ್ಯಂತ ಸೇತುವೆ ನಿರ್ಮಾಣ ಕಾರ್ಯಗಳು
ಈ ಕಾರಿಡಾರ್‌ನಲ್ಲಿ ಒಟ್ಟು 25 ನದಿ ಸೇತುವೆಗಳಿವೆ, ಅದರಲ್ಲಿ 21 ಗುಜರಾತ್‌ನಲ್ಲಿದ್ದರೆ, 4 ಮಹಾರಾಷ್ಟ್ರದಲ್ಲಿವೆ. ಮೆಶ್ವಾ, ವತ್ರಕ್, ಮೋಹರ್ (ಶೇಧಿ), ವಿಶ್ವಾಮಿತ್ರಿ, ದಢಾರ್, ಕಿಮ್, ಮಿಂಧೋಲಾ, ಪೂರ್ಣಾ, ಅಂಬಿಕಾ, ವೆಂಗನಿಯಾ, ಕಾವೇರಿ, ಖರೇರಾ, ಔರಂಗಾ, ಪಾರ್, ಕೋಲಕ್, ದಮನ್ ಗಂಗಾ ಮತ್ತು ದರೋಥಾ ನದಿಗಳನ್ನು ಒಳಗೊಂಡಂತೆ ಹಲವಾರು ನದಿಗಳ ಮೇಲೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಸಬರಮತಿ, ನರ್ಮದಾ, ತಾಪಿ, ಜಗನಿ ಮತ್ತು ವೈತರಣಾ ನದಿಗಳ ಮೇಲಿನ ಪ್ರಮುಖ ಸೇತುವೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
- ಮಹೀ ನದಿ ಸೇತುವೆಯಲ್ಲಿ, 12 ಬಾವಿಗಳ ಪೈಕಿ 11 ಪೂರ್ಣಗೊಂಡಿದ್ದು, ಐದು ಸ್ಪ್ಯಾನ್‌ಗಳನ್ನು ಲಾಂಚ್ ಮಾಡಲಾಗಿದೆ.
- ತಾಪಿ ನದಿ ಸೇತುವೆಯಲ್ಲಿ ಅಡಿಪಾಯದ ಕೆಲಸಗಳು ನಡೆಯುತ್ತಿದ್ದು, 12 ಬಾವಿಗಳ ಪೈಕಿ 10 ಪೂರ್ಣಗೊಂಡಿವೆ.
- ಸಬರಮತಿ ನದಿ ಸೇತುವೆಯಲ್ಲಿ ಸಬ್‌ಸ್ಟ್ರಕ್ಚರ್ ಕಾಮಗಾರಿ ಪೂರ್ಣಗೊಂಡಿದ್ದು, ಸೂಪರ್‌ಸ್ಟ್ರಕ್ಚರ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
- ದೇಸಾಯಿ ಖಾದಿ ಕ್ರಾಸಿಂಗ್‌ಗಾಗಿ ಭೂತಾಂತ್ರಿಕ ತನಿಖೆಗಳು ಪೂರ್ಣಗೊಂಡಿದ್ದು, ವಿನ್ಯಾಸದ ಕೆಲಸಗಳು ನಡೆಯುತ್ತಿವೆ.
- ಉಲ್ಲಾಸ ನದಿಯ ಶಾಖೆಯ ಕ್ರಾಸಿಂಗ್‌ನಲ್ಲಿ ತಾತ್ಕಾಲಿಕ ಪ್ರವೇಶ ಸೇತುವೆಯೂ ಪೂರ್ಣಗೊಂಡಿದೆ.
ನದಿ ದಾಟುವಿಕೆಗಳ ಜೊತೆಗೆ, ಈ ಕಾರಿಡಾರ್ ಹೆದ್ದಾರಿಗಳು, ಕಾಲುವೆಗಳು, ನದಿಗಳು ಮತ್ತು ರೈಲ್ವೆ ಹಳಿಗಳ ಮೇಲೆ 28 ಉಕ್ಕಿನ ಸೇತುವೆಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ, ಈ ರಚನೆಗಳು ಕಾರಿಡಾರ್‌ನ ಇಂಜಿನಿಯರಿಂಗ್ ಮೂಲಸೌಕರ್ಯದ ಪ್ರಮುಖ ಭಾಗಗಳಾಗಿವೆ.
ಭಾರತದ ಮೊದಲ ಸಮುದ್ರದೊಳಗಿನ ರೈಲು ಸುರಂಗ
ಈ ಕಾರಿಡಾರ್ ಮಹಾರಾಷ್ಟ್ರದಲ್ಲಿ ಸುಮಾರು 21 ಕಿಮೀ ಸುರಂಗ ವಿಭಾಗವನ್ನು ಹೊಂದಿದೆ. ಈ ವಿಭಾಗವು ಠಾಣೆ ಕ್ರೀಕ್‌ನ ಕೆಳಗೆ ಭಾರತದ ಮೊದಲ ಸಮುದ್ರದೊಳಗಿನ ರೈಲು ಸುರಂಗವನ್ನು ಹೊಂದಿದೆ. ಸಮುದ್ರದೊಳಗಿನ ಈ ಭಾಗವು ಸರಿಸುಮಾರು 7 ಕಿಮೀ ವಿಸ್ತರಿಸಿದೆ. ಸುರಂಗ ನಿರ್ಮಾಣದಲ್ಲಿ 'ನ್ಯೂ ಆಸ್ಟ್ರಿಯನ್ ಟನೆಲ್ಲಿಂಗ್ ಮೆಥಡ್' ಮತ್ತು 'ಟನೆಲ್ ಬೋರಿಂಗ್ ಮೆಷಿನ್' (ಟಿಬಿಎಂ) ತಂತ್ರಜ್ಞಾನವನ್ನು ಸಂಯೋಜಿಸಲಾಗಿದೆ. ಈ ಮಾರ್ಗವು 5 ಕಿಮೀ ಎನ್‌ಎಟಿಎಂ ವಿಭಾಗ ಮತ್ತು 16 ಕಿಮೀ ಟಿಬಿಎಂ ವಿಭಾಗವನ್ನು ಒಳಗೊಂಡಿದೆ. ಎರಡೂ ಹಳಿಗಳನ್ನು 13.1 ಮೀಟರ್ ವ್ಯಾಸದ ಒಂದೇ ಸುರಂಗ ಕೊಳವೆಯಲ್ಲಿ ಅಳವಡಿಸಲಾಗುತ್ತದೆ. ಟಿಬಿಎಂ ಕಟ್ಟರ್ ಹೆಡ್ 13.6 ಮೀಟರ್ ವ್ಯಾಸವನ್ನು ಹೊಂದಿದ್ದು, ಇದು ಭಾರತದ ರೈಲ್ವೆ ಯೋಜನೆಯಲ್ಲಿ ಬಳಸಲಾದ ಅತಿದೊಡ್ಡ ಕಟ್ಟರ್ ಹೆಡ್ ಆಗಿದೆ. ಘನ್ಸೋಲಿ ಮತ್ತು ಶಿಲ್ಪಾಟಾ ನಡುವಿನ 4.8 ಕಿಮೀ ಸಮುದ್ರದೊಳಗಿನ ಸುರಂಗದ ಕೆಲಸ ಈಗಾಗಲೇ ಪೂರ್ಣಗೊಂಡಿದ್ದು, ನಿರ್ಮಾಣ ಕಾರ್ಯವು ಸ್ಥಿರವಾಗಿ ಮುಂದುವರಿಯುತ್ತಿದೆ.
|
ಟನೆಲ್ ಬೋರಿಂಗ್ ಮೆಷಿನ್‌ಗಳು
ಮೆಟ್ರೋ ಜಾಲಗಳು ಮತ್ತು ದೀರ್ಘ ರೈಲು/ರಸ್ತೆ ಸುರಂಗಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಟನೆಲ್ ಬೋರಿಂಗ್ ಮೆಷಿನ್‌ಗಳು , ಹೆಚ್ಚು ಜನಸಂಖ್ಯೆ ಇರುವ ಮತ್ತು ಭೂವೈಜ್ಞಾನಿಕವಾಗಿ ಸಂಕೀರ್ಣವಾದ ಪ್ರದೇಶಗಳಲ್ಲಿ ಹೆಚ್ಚಿನ ನಿಖರತೆ, ಕಡಿಮೆ ಕಂಪನ ಮತ್ತು ವರ್ಧಿತ ಸುರಕ್ಷತೆಯನ್ನು ಒದಗಿಸುತ್ತವೆ.
ನ್ಯೂ ಆಸ್ಟ್ರಿಯನ್ ಟನೆಲ್ಲಿಂಗ್ ಮೆಥಡ್
ಪರ್ವತ ಪ್ರದೇಶಗಳಲ್ಲಿ ವ್ಯಾಪಕವಾಗಿ ಅಳವಡಿಸಲಾದ NATM, ಇಂಜಿನಿಯರ್‌ಗಳಿಗೆ ಉತ್ಖನನದ ಬೆಂಬಲವನ್ನು ನೈಜ ಸಮಯದಲ್ಲಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇದು ಬದಲಾಗುವ ಮತ್ತು ದುರ್ಬಲವಾದ ಬಂಡೆಗಳ ರಚನೆಗಳಿಗೆ ಅತ್ಯಂತ ಸೂಕ್ತವಾಗಿದೆ.
|

ಕಾರ್ಯಾಚರಣೆಯ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವುದು
ಎಂಎಎಚ್‌ಎಸ್‌ಆರ್ ಕಾರಿಡಾರ್ ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ವಿಶ್ವಾಸಾರ್ಹ ರೈಲು ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸುಧಾರಿತ ಸುರಕ್ಷತೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಒಳಗೊಂಡಿದೆ. ಇವುಗಳಲ್ಲಿ ಭೂಕಂಪ ಪತ್ತೆಹಚ್ಚುವಿಕೆ, ಮಳೆ ಮಾಪನ ಮತ್ತು ಗಾಳಿಯ ವೇಗವನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆಗಳು ಸೇರಿವೆ. ಈ ವ್ಯವಸ್ಥೆಗಳು ನೈಜ-ಸಮಯದ ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸುವುದಲ್ಲದೆ, ಅಗತ್ಯವಿದ್ದಾಗ ತಕ್ಷಣದ ಕಾರ್ಯಾಚರಣೆಯ ಪ್ರತಿಕ್ರಿಯೆಯನ್ನು ನೀಡಲು ಸಹಕರಿಸುತ್ತವೆ.
ಮಳೆ ಮಾಪನ ವ್ಯವಸ್ಥೆ

ಬುಲೆಟ್ ರೈಲು ಸೇವೆಗಳ ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸ್ವಯಂಚಾಲಿತ 'ಮಳೆ ಮಾಪನ ವ್ಯವಸ್ಥೆ'ಯನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯು ಕಾರಿಡಾರ್‌ನಾದ್ಯಂತ ನಿರ್ಣಾಯಕ ಸ್ಥಳಗಳಲ್ಲಿ ಸ್ಥಾಪಿಸಲಾದ ಮಳೆ ಮಾಪಕಗಳ ಮೂಲಕ ನೈಜ-ಸಮಯದ ಮಳೆಯ ದತ್ತಾಂಶವನ್ನು ಒದಗಿಸುತ್ತದೆ. ಮಳೆಗೆ ಸಂಬಂಧಿಸಿದ ಮಾಹಿತಿಯನ್ನು ನಿರಂತರವಾಗಿ 'ಆಪರೇಷನ್ ಕಂಟ್ರೋಲ್ ಸೆಂಟರ್'ಗೆ ರವಾನಿಸಲಾಗುತ್ತದೆ, ಅಲ್ಲಿ ಕಾರ್ಯಾಚರಣೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ದತ್ತಾಂಶವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಪ್ರಮುಖವಾಗಿ ಎರಡು ಮಾನದಂಡಗಳನ್ನು ಅಳೆಯಲಾಗುತ್ತದೆ: ಪ್ರತಿ ಗಂಟೆಯ ಮಳೆಯ ಪ್ರಮಾಣ ಮತ್ತು ಹಿಂದಿನ 24 ಗಂಟೆಗಳಲ್ಲಿನ ಒಟ್ಟು ಮಳೆಯ ಪ್ರಮಾಣ. ಈ ಮಾಪನಗಳು ಭೂ ರಚನೆಗಳು, ನೈಸರ್ಗಿಕ ಇಳಿಜಾರುಗಳು, ಸುರಂಗ ದ್ವಾರಗಳು ಮತ್ತು ಇತರ ದುರ್ಬಲ ಸ್ಥಳಗಳ ಸುತ್ತಲಿನ ಪರಿಸ್ಥಿತಿಯನ್ನು ಅಂದಾಜು ಮಾಡಲು ಸಹಾಯ ಮಾಡುತ್ತವೆ. ಪೂರ್ವನಿರ್ಧರಿತ ಮಿತಿ ಮೌಲ್ಯಗಳು ಮತ್ತು ನಿರ್ವಹಣಾ ತಂಡಗಳಿಂದ ಕ್ಷೇತ್ರ ಪರಿಶೀಲನೆಯ ಆಧಾರದ ಮೇಲೆ, ಅಗತ್ಯವಿದ್ದಾಗ ಸೂಕ್ತ ಕಾರ್ಯಾಚರಣೆಯ ಕ್ರಮಗಳನ್ನು ಜಾರಿಗೆ ತರಬಹುದು. ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್‌ನಲ್ಲಿ ಆರು ಮಳೆ ಮಾಪನ ಕೇಂದ್ರಗಳನ್ನು ಪ್ರಸ್ತಾಪಿಸಲಾಗಿದೆ. ಪ್ರತಿಯೊಂದು ಕೇಂದ್ರವು ಸುಮಾರು 10 ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ಮೇಲ್ವಿಚಾರಣೆ ಮಾಡಲಿದೆ.
ಗಾಳಿಯ ವೇಗ ಮಾಪನ ವ್ಯವಸ್ಥೆ

ಎಂಎಎಚ್‌ಎಸ್‌ಆರ್ ಕಾರಿಡಾರ್‌ನ ಕೆಲವು ಭಾಗಗಳು ಕರಾವಳಿ ಪ್ರದೇಶಗಳು ಮತ್ತು ಬಲವಾದ ಗಾಳಿಯನ್ನು ಅನುಭವಿಸುವ ಇತರ ಸ್ಥಳಗಳ ಮೂಲಕ ಹಾದುಹೋಗುತ್ತವೆ. ಅಂತಹ ಪ್ರದೇಶಗಳಲ್ಲಿ ರೈಲು ಕಾರ್ಯಾಚರಣೆಯನ್ನು ಸುರಕ್ಷಿತವಾಗಿ ಖಚಿತಪಡಿಸಿಕೊಳ್ಳಲು, ಕಾರಿಡಾರ್‌ನ ಉದ್ದಕ್ಕೂ ಮೀಸಲಾದ 'ಗಾಳಿಯ ವೇಗ ಮಾಪನ ವ್ಯವಸ್ಥೆ'ಯನ್ನು ಅಳವಡಿಸಲಾಗಿದೆ. ಗುಜರಾತ್‌ನಲ್ಲಿ 9 ಮತ್ತು ಮಹಾರಾಷ್ಟ್ರದಲ್ಲಿ 5 ಸೇರಿದಂತೆ ಒಟ್ಟು 14 ಸ್ಥಳಗಳನ್ನು ಅನಿಮೋಮೀಟರ್‌ಗಳನ್ನು ಅಳವಡಿಸಲು ಗುರುತಿಸಲಾಗಿದೆ. ಈ ಉಪಕರಣಗಳು ಗಾಳಿಯ ವೇಗ ಮತ್ತು ದಿಕ್ಕಿನ ನೈಜ-ಸಮಯದ ಅಳತೆಯನ್ನು ಒದಗಿಸುತ್ತವೆ ಮತ್ತು 0 ರಿಂದ 252 ಕಿ.ಮೀ/ಗಂಟೆವರೆಗಿನ ಗಾಳಿಯ ವೇಗವನ್ನು ದಾಖಲಿಸಬಲ್ಲವು. ದತ್ತಾಂಶವನ್ನು 'ಆಪರೇಷನ್ ಕಂಟ್ರೋಲ್ ಸೆಂಟರ್'ನಲ್ಲಿ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಗಾಳಿಯ ವೇಗವು ನಿಗದಿತ ಮಿತಿಗಳನ್ನು ತಲುಪಿದಾಗ, ಕಾರ್ಯಾಚರಣೆಯ ನಿಯಮಾವಳಿಗಳನ್ನು ಸಕ್ರಿಯಗೊಳಿಸಲಾಗುತ್ತದೆ. 72 ಕಿ.ಮೀ/ಗಂಟೆಯಿಂದ 130 ಕಿ.ಮೀ/ಗಂಟೆಯವರೆಗಿನ ಗಾಳಿಯ ವೇಗಕ್ಕಾಗಿ, ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ರೈಲುಗಳ ವೇಗವನ್ನು ನಿಯಂತ್ರಿಸಲಾಗುತ್ತದೆ.
ಭೂಕಂಪ ಪತ್ತೆಹಚ್ಚುವ ಮುನ್ನೆಚ್ಚರಿಕೆ ವ್ಯವಸ್ಥೆ
ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು, ಎಂಎಎಚ್‌ಎಸ್‌ಆರ್ ವ್ಯವಸ್ಥೆಯು 28 ಭೂಕಂಪ ಮಾಪಕಗಳನ್ನು ಒಳಗೊಂಡ 'ಭೂಕಂಪ ಪತ್ತೆಹಚ್ಚುವ ಮುನ್ನೆಚ್ಚರಿಕೆ ವ್ಯವಸ್ಥೆ'ಯನ್ನು ಹೊಂದಿರಲಿದೆ. ಈ ವ್ಯವಸ್ಥೆಯು ಭೂಕಂಪದ ಪ್ರಾಥಮಿಕ ಅಲೆಗಳನ್ನು ಪತ್ತೆಹಚ್ಚಿ ಸ್ವಯಂಚಾಲಿತವಾಗಿ ವಿದ್ಯುತ್ ಸ್ಥಗಿತಗೊಳಿಸುತ್ತದೆ. ಇದರಿಂದ ಬಾಧಿತ ವಿಭಾಗದಲ್ಲಿರುವ ರೈಲುಗಳು ತುರ್ತು ಬ್ರೇಕಿಂಗ್ ಮೂಲಕ ಸುರಕ್ಷಿತವಾಗಿ ನಿಲ್ಲಲು ಸಾಧ್ಯವಾಗುತ್ತದೆ. 28 ಭೂಕಂಪ ಮಾಪಕಗಳಲ್ಲಿ, 22 ಅನ್ನು ಕಾರಿಡಾರ್ ಮಾರ್ಗದ ಉದ್ದಕ್ಕೂ ಅಳವಡಿಸಲಾಗುವುದು. ಉಳಿದ 6 ಮಾಪಕಗಳನ್ನು ವಿವರವಾದ ಭೂಕಂಪನ ಸಮೀಕ್ಷೆಗಳು ಮತ್ತು ಮಣ್ಣಿನ ಸೂಕ್ತತೆಯ ಅಧ್ಯಯನಗಳ ಮೂಲಕ ಗುರುತಿಸಲಾದ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸ್ಥಾಪಿಸಲಾಗುವುದು. ಐತಿಹಾಸಿಕ ಭೂಕಂಪದ ದತ್ತಾಂಶ ಮತ್ತು ಮೈಕ್ರೋಟ್ರೆಮರ್ ಪರೀಕ್ಷೆಯ ಆಧಾರದ ಮೇಲೆ ಈ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.
2026ನೇ ಇಸವಿಯ ಪ್ರಮುಖ ಯೋಜನಾ ಮೈಲಿಗಲ್ಲುಗಳು
2026ರ ಅವಧಿಯಲ್ಲಿ ಹಲವಾರು ಮಹತ್ವದ ಮೈಲಿಗಲ್ಲುಗಳನ್ನು ದಾಖಲಿಸಲಾಗಿದ್ದು, ಇವು ಕಾರಿಡಾರ್‌ನ ವಿವಿಧ ಘಟಕಗಳಲ್ಲಿನ ಪ್ರಗತಿಯನ್ನು ಗುರುತಿಸುತ್ತವೆ. ಈ ಕೆಳಗಿನ ಬೆಳವಣಿಗೆಗಳು ಯೋಜನೆಯ ಅನುಷ್ಠಾನದ ವೇಗವನ್ನು ಪ್ರತಿಬಿಂಬಿಸುತ್ತವೆ.
|
ದಿನಾಂಕ
|
ಮೈಲಿಗಲ್ಲು
|
|
29 ಜನವರಿ 2026
|
ಅಹಮದಾಬಾದ್‌ನಲ್ಲಿ 100 ಮೀಟರ್ ಉದ್ದದ 'ಮೇಕ್ ಇನ್ ಇಂಡಿಯಾ' ಉಕ್ಕಿನ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ.
|
|
03 ಫೆಬ್ರವರಿ 2026
|
ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಎರಡನೇ ಪರ್ವತ ಸುರಂಗದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
|
|
17 ಮಾರ್ಚ್ 2026
|
ಬುಲೆಟ್ ರೈಲು ನಿಲ್ದಾಣಗಳನ್ನು ನಗರದ ಸಾರಿಗೆ ಪರಿಸರ ವ್ಯವಸ್ಥೆಯೊಂದಿಗೆ ಸಂಯೋಜಿಸಲು ಸಿದ್ಧತೆ.
|
|
08 ಏಪ್ರಿಲ್ 2026
|
ಕಾರ್ಯನಿರತ ರೈಲ್ವೆ ಹಳಿಗಳ ಮೇಲೆ ಅತ್ಯಂತ ಭಾರವಾದ ಪೋರ್ಟಲ್ ಬೀಮ್ ಅನ್ನು ಅಳವಡಿಸಲಾಗಿದೆ.
|
|
09 ಏಪ್ರಿಲ್ 2026
|
ಮಹಾರಾಷ್ಟ್ರದ ವಿಖ್ರೋಲಿಯಲ್ಲಿ ಮೊದಲ ಟಿಬಿಎಂ ಜೋಡಣಾ ಕಾರ್ಯ ಪ್ರಾರಂಭವಾಯಿತು.
|
|
11 ಏಪ್ರಿಲ್ 2026
|
ಸಾವ್ಲಿಯಲ್ಲಿ ಎರಡನೇ ಟಿಬಿಎಂ ಜೋಡಣಾ ಕಾರ್ಯ ಪ್ರಾರಂಭವಾಯಿತು.
|
|
22 ಏಪ್ರಿಲ್ 2026
|
ಬುಲೆಟ್ ರೈಲು ವಯಾಡಕ್ಟ್ ಮೇಲೆ ಹಳಿ ಅಳವಡಿಸುವ ಕಾರ್ಯ ಪ್ರಾರಂಭವಾಯಿತು.
|
|
27 ಏಪ್ರಿಲ್ 2026
|
ಸಬರಮತಿ ನದಿ ಸೇತುವೆಯ ನಿರ್ಮಾಣ ಕಾರ್ಯದಲ್ಲಿ ಪ್ರಗತಿ.
|
|
04 ಮೇ 2026
|
ಅಹಮದಾಬಾದ್‌ನಲ್ಲಿ ರೈಲ್ವೆ ಹಳಿಗಳ ಮೇಲೆ ಎಲ್ಲಾ ಐದು ಭಾರೀ ಪೋರ್ಟಲ್ ಬೀಮ್‌ಗಳನ್ನು 22 ದಿನಗಳಲ್ಲಿ ಅಳವಡಿಸಲಾಯಿತು.
|
|
17 ಮೇ 2026
|
ವಿಖ್ರೋಲಿಯಲ್ಲಿ 350 ಟನ್ ತೂಕದ ಕಟ್ಟರ್‌ಹೆಡ್ ಅನ್ನು ಕೆಳಗಿಳಿಸಲಾಯಿತು.
|
|
20 ಮೇ 2026
|
ಭರೂಚ್ ಬಳಿ 130 ಮೀಟರ್ ಉದ್ದದ ಉಕ್ಕಿನ ಸೇತುವೆಯ ಸ್ಪ್ಯಾನ್ ಅನ್ನು ಅಳವಡಿಸಲಾಯಿತು.
|
|
23 ಮೇ 2026
|
ಮುಂಬೈ ಸಮೀಪದ ಸಾವ್ಲಿಯಲ್ಲಿ ಎರಡನೇ ಟಿಬಿಎಂ ಕಟ್ಟರ್‌ಹೆಡ್ ಅನ್ನು ಕೆಳಗಿಳಿಸಲಾಯಿತು.
|
|
27 ಮೇ 2026
|
ಅಹಮದಾಬಾದ್‌ನ ಕಲುಪುರ್ ಫ್ಲೈಓವರ್ ಮೇಲೆ 45 ಮೀಟರ್ ಉದ್ದದ ಸೆಗ್ಮೆಂಟಲ್ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ.
|
|
02 ಜೂನ್ 2026
|
ಪಾಲ್ಘರ್ ಜಿಲ್ಲೆಯಲ್ಲಿ ಮೂರನೇ ಪರ್ವತ ಸುರಂಗದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
|
ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗೆ ಚಾಲನೆ
ಸಂಪರ್ಕವನ್ನು ಹೆಚ್ಚಿಸುವುದರ ಜೊತೆಗೆ, ಬುಲೆಟ್ ರೈಲು ಯೋಜನೆಯು ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಬಲವರ್ಧನೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಮತ್ತು ದೇಶೀಯ ಉತ್ಪಾದನಾ ವಲಯವನ್ನು ಅಭಿವೃದ್ಧಿಪಡಿಸುವ ನಿರೀಕ್ಷೆಯನ್ನು ಹೊಂದಿದೆ.
ವೇಗದ ಸಂಪರ್ಕ
ಎಂಎಎಚ್‌ಎಸ್‌ಆರ್ ಯೋಜನೆಯು ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಎರಡು ಗಂಟೆಗಳಿಗಿಂತ ಕಡಿಮೆ ಅವಧಿಗೆ ಇಳಿಸಲಿದೆ. ಇದೇ ಪ್ರಯಾಣವು ಪ್ರಸ್ತುತ ರಸ್ತೆ ಮಾರ್ಗದಲ್ಲಿ 8-9 ಗಂಟೆಗಳನ್ನು ಮತ್ತು ವಿಮಾನದಲ್ಲಿ ವಿಮಾನ ನಿಲ್ದಾಣದ ಪ್ರಕ್ರಿಯೆಗಳನ್ನು ಒಳಗೊಂಡಂತೆ 4-5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ವೇಗದ ಪ್ರಯಾಣವು ವ್ಯವಹಾರದ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಪ್ರಯಾಣಿಕರ ಅಮೂಲ್ಯ ಸಮಯವನ್ನು ಉಳಿಸುತ್ತದೆ.
ಪ್ರಾದೇಶಿಕ ಆರ್ಥಿಕತೆಯ ಬಲವರ್ಧನೆ
ಹೈ-ಸ್ಪೀಡ್ ರೈಲು ಸೇವೆಯು ಕೈಗಾರಿಕಾ ಕೇಂದ್ರಗಳು ಮತ್ತು ಮಾರುಕಟ್ಟೆಗಳನ್ನು ಇನ್ನಷ್ಟು ಹತ್ತಿರಕ್ಕೆ ತರಲಿದೆ. ವಾಪಿ ಮತ್ತು ಮುಂಬೈನಂತಹ ಉತ್ಪಾದನಾ ಕೇಂದ್ರಗಳ ನಡುವಿನ ಸುಧಾರಿತ ಸಂಪರ್ಕವು ಸರಬರಾಜು ಸರಪಳಿಯನ್ನು (supply chains) ಬಲಪಡಿಸುತ್ತದೆ ಮತ್ತು ಕಾರಿಡಾರ್‌ನಾದ್ಯಂತ ವ್ಯಾಪಾರ ಅವಕಾಶಗಳನ್ನು ವಿಸ್ತರಿಸುತ್ತದೆ.
ಪ್ರವಾಸೋದ್ಯಮ ಮತ್ತು ಸ್ಥಳೀಯ ಅಭಿವೃದ್ಧಿ
ಈ ಕಾರಿಡಾರ್ ನೈಸರ್ಗಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಆಕರ್ಷಣೆಗಳಿಗೆ ಹೆಸರುವಾಸಿಯಾದ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಉತ್ತಮ ಸಂಪರ್ಕವು ಪ್ರವಾಸೋದ್ಯಮ, ಆತಿಥ್ಯ ಮತ್ತು ಸಂಬಂಧಿತ ಸೇವೆಗಳಿಗೆ ಬೆಂಬಲ ನೀಡಲಿದೆ. ನಿಲ್ದಾಣಗಳು ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಮತ್ತು ಸ್ಥಳೀಯ ಅಭಿವೃದ್ಧಿಗೆ ಕಾರಣವಾಗುವ ನಿರೀಕ್ಷೆಯಿದೆ.
ಕೌಶಲ್ಯ ವೃದ್ಧಿ, ಅವಕಾಶಗಳ ಸೃಷ್ಟಿ
ಈ ಯೋಜನೆಯು ಸುಮಾರು 4,000 ನೇರ ಉದ್ಯೋಗಗಳನ್ನು ಮತ್ತು 35,000 ರಿಂದ 40,000 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ನಿರ್ಮಾಣ ಹಂತದಲ್ಲಿ ಸುಮಾರು 40,000 ಕಾರ್ಮಿಕರು ಕಾರ್ಯನಿರ್ವಹಿಸಲಿದ್ದಾರೆ. ವಡೋದರದಲ್ಲಿರುವ ಮೀಸಲಾದ 'ಹೈ-ಸ್ಪೀಡ್ ರೈಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್' ಸುಧಾರಿತ ರೈಲು ತಂತ್ರಜ್ಞಾನಗಳಲ್ಲಿ ಪರಿಣತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ.
'ಮೇಕ್ ಇನ್ ಇಂಡಿಯಾ'ಗೆ ಬೆಂಬಲ
ಈ ಯೋಜನೆಯು ತಂತ್ರಜ್ಞಾನ ವರ್ಗಾವಣೆ ಮತ್ತು ದೇಶೀಯ ಉತ್ಪಾದನೆಯ ಮೂಲಕ 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಬೆಂಬಲಿಸುತ್ತದೆ. ಯೋಜನೆಯ ವಿವಿಧ ಭಾಗಗಳಲ್ಲಿ ಭಾರತೀಯ ಕಂಪನಿಗಳ ಭಾಗವಹಿಸುವಿಕೆಯು ಕೈಗಾರಿಕಾ ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉಪಕರಣಗಳಂತಹ ಸಂಬಂಧಿತ ವಲಯಗಳಿಗೆ ಉತ್ತೇಜನ ನೀಡಲಿದೆ.
ಕೇಂದ್ರ ಬಜೆಟ್ 2026–27ರಲ್ಲಿ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು
ಆಧುನಿಕ ಮತ್ತು ಹೈ-ಸ್ಪೀಡ್ ರೈಲು ಜಾಲದ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುತ್ತಾ, ಕೇಂದ್ರ ಬಜೆಟ್ 2026–27ರಲ್ಲಿ ಏಳು ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು 'ಗ್ರೋತ್ ಕನೆಕ್ಟರ್‌ಗಳಾಗಿ' ಘೋಷಿಸಲಾಗಿದೆ. ಈ ಕಾರಿಡಾರ್‌ಗಳು ಪ್ರಮುಖ ನಗರಗಳು ಮತ್ತು ಪ್ರದೇಶಗಳನ್ನು ಸಂಯೋಜಿಸುತ್ತವೆ, ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತವೆ ಮತ್ತು ರಾಜ್ಯಗಳ ನಡುವಿನ ಆರ್ಥಿಕ ಪರಸ್ಪರ ಕ್ರಿಯೆಯನ್ನು ಬೆಂಬಲಿಸುತ್ತವೆ. ಸುಮಾರು 4,000 ಕಿಲೋಮೀಟರ್ ಉದ್ದದ ಈ ಪ್ರಸ್ತಾವಿತ ಕಾರಿಡಾರ್‌ಗಳು ಅಂದಾಜು ₹16 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ. ಈ ಬೆಳವಣಿಗೆಗಳು ಭಾರತದ ಸಾರಿಗೆ ಮೂಲಸೌಕರ್ಯದ ಪ್ರಮುಖ ಅಂಗವಾಗಿ ಹೈ-ಸ್ಪೀಡ್ ರೈಲು ವ್ಯವಸ್ಥೆಯತ್ತ ಆಗುತ್ತಿರುವ ಬದಲಾವಣೆಯನ್ನು ಸೂಚಿಸುತ್ತವೆ.
ಯೋಜಿತ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು ದೇಶದ ವಿವಿಧ ಪ್ರದೇಶಗಳಲ್ಲಿ ಕಾರ್ಯತಂತ್ರದ ದೃಷ್ಟಿಯಿಂದ ಯೋಜಿಸಲಾಗಿದೆ.
|
ಮಾರ್ಗಗಳು
|
ಪ್ರಯಾಣದ ಸಮಯ
|
|
ದೆಹಲಿ–ವಾರಣಾಸಿ
|
3 ಗಂಟೆ 50 ನಿಮಿಷ
|
|
ವಾರಣಾಸಿ–ಪಾಟ್ನಾ–ಸಿಲಿಗುರಿ
|
2 ಗಂಟೆ 55 ನಿಮಿಷ
|
|
ಚೆನ್ನೈ–ಬೆಂಗಳೂರು
|
1 ಗಂಟೆ 13 ನಿಮಿಷ
|
|
ಬೆಂಗಳೂರು–ಹೈದರಾಬಾದ್
|
2 ಗಂಟೆ
|
|
ಚೆನ್ನೈ–ಹೈದರಾಬಾದ್
|
2 ಗಂಟೆ 55 ನಿಮಿಷ
|
|
ಮುಂಬೈ–ಪುಣೆ
|
48 ನಿಮಿಷ
|
|
ಪುಣೆ–ಹೈದರಾಬಾದ್
|
1 ಗಂಟೆ 55 ನಿಮಿಷ
|
ರೈಲು ಸಾರಿಗೆಯ ಭವಿಷ್ಯವನ್ನು ರೂಪಿಸುವುದು
ಮುಂಬೈ–ಅಹಮದಾಬಾದ್ ಹೈ-ಸ್ಪೀಡ್ ರೈಲು ಯೋಜನೆಯು ಭಾರತದ ರೈಲ್ವೆ ಅಭಿವೃದ್ಧಿಯಲ್ಲಿ ಒಂದು ಪರಿವರ್ತನಾಶೀಲ ಹಂತವನ್ನು ಪ್ರತಿನಿಧಿಸುತ್ತದೆ. ದೇಶದ ಮೊದಲ ಹೈ-ಸ್ಪೀಡ್ ರೈಲು ಕಾರಿಡಾರ್ ಆಗಿ, ಇದು ವೇಗ, ಸಂಪರ್ಕ ಮತ್ತು ಮೂಲಸೌಕರ್ಯ ನಿರ್ಮಾಣದಲ್ಲಿ ಹೊಸ ಮಾನದಂಡಗಳನ್ನು ಪರಿಚಯಿಸುತ್ತಿದೆ. ಸಿವಿಲ್ ಕಾಮಗಾರಿಗಳು, ಸೇತುವೆ ನಿರ್ಮಾಣ ಮತ್ತು ಸುರಂಗ ನಿರ್ಮಾಣದಲ್ಲಿನ ಮಹತ್ವದ ಪ್ರಗತಿಯು ಯೋಜನೆಯ ಪೂರ್ಣಗೊಳ್ಳುವಿಕೆಯ ಕಡೆಗೆ ಸ್ಥಿರವಾದ ವೇಗವನ್ನು ಸೂಚಿಸುತ್ತದೆ. ಇಲ್ಲಿಯವರೆಗೆ ಸಾಧಿಸಲಾದ ನಿರ್ಮಾಣದ ಪ್ರಮಾಣವು ಯೋಜನೆಯ ಬಹು ಘಟಕಗಳಲ್ಲಿನ ನಿರಂತರ ಪ್ರಗತಿಯನ್ನು ಪ್ರದರ್ಶಿಸುತ್ತದೆ. ಅದೇ ಸಮಯದಲ್ಲಿ, ಸುಧಾರಿತ ತಂತ್ರಜ್ಞಾನಗಳು ಮತ್ತು ಇಂಜಿನಿಯರಿಂಗ್ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿರುವುದು ಹೈ-ಸ್ಪೀಡ್ ರೈಲು ಅಭಿವೃದ್ಧಿಯಲ್ಲಿ ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ. ಎಂಎಎಚ್‌ಎಸ್‌ಆರ್ ಯೋಜನೆಯು ಕೇವಲ ಸಾರಿಗೆ ಉಪಕ್ರಮವಾಗಿ ಮಾತ್ರವಲ್ಲದೆ, ಭಾರತದ ದೀರ್ಘಾವಧಿಯ ಹೈ-ಸ್ಪೀಡ್ ರೈಲು ಮಹತ್ವಾಕಾಂಕ್ಷೆಗಳಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ.
References
Prime Minister’s Office
https://www.pib.gov.in/newsite/printrelease.aspx?relid=170771®=48&lang=2
Ministry of Railways
https://www.pib.gov.in/PressReleasePage.aspx?PRID=2257831®=1&lang=1
https://www.pib.gov.in/PressReleasePage.aspx?PRID=2267962®=48&lang=1
https://sansad.in/getFile/loksabhaquestions/annex/187/AS538_MhnJmI.pdf?source=pqals
https://www.pib.gov.in/PressReleasePage.aspx?PRID=2176788®=48&lang=2
https://www.pib.gov.in/PressReleasePage.aspx?PRID=2221838®=48&lang=2
National High-Speed Rail Corporation Limited
https://www.nhsrcl.in/en/project/project-overview
https://www.nhsrcl.in/en/media/press-release
https://www.nhsrcl.in/en/project/safety-features
https://www.nhsrcl.in/en/media/blog/long-short-economic-prosperity-indias-first-hsr-project-expected-bring
Click here to see pdf
*****
(Explainer ID: 158891)
आगंतुक पटल : 26
Provide suggestions / comments