• Sitemap
  • Advance Search
Social Welfare

ಕಾರ್ಯರೂಪದಲ್ಲಿ ಅಂತ್ಯೋದಯ

ಎಲ್ಲರಿಗೂ ಘನತೆ, ಅವಕಾಶ ಮತ್ತು ಬೆಳವಣಿಗೆಯನ್ನು ಖಚಿತಪಡಿಸುವುದು

Posted On: 12 JUN 2026 12:13PM

ತಲೆಮಾರುಗಳಿಂದ ಭಾರತದ ಅತ್ಯಂತ ವಂಚಿತ ಸಮುದಾಯಗಳು ಅಂಚಿನಲ್ಲೇ ಉಳಿದು, ದೀರ್ಘಕಾಲ ಮೂಲಸೌಕರ್ಯಗಳಿಂದ ದೂರವಿರಬೇಕಾಗಿತ್ತು. ಕಳೆದ 12 ವರ್ಷಗಳಲ್ಲಿ ಸರ್ಕಾರವು 'ಅಂತ್ಯೋದಯ'ವನ್ನು ತನ್ನ ಮಂತ್ರವನ್ನಾಗಿ ಅಳವಡಿಸಿಕೊಂಡಿದ್ದರಿಂದ ಈ ಪರಿಸ್ಥಿತಿಯಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ. ಎಲ್ಲರನ್ನು ಒಳಗೊಂಡ ಗುಣಮಟ್ಟದ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಜೀವನೋಪಾಯಕ್ಕೆ ಬೆಂಬಲ, ಮೂಲಸೌಕರ್ಯ ಕಲ್ಪಿಸುವುದು ಮತ್ತು ಸಾಂಸ್ಕೃತಿಕ ಮನ್ನಣೆ ನೀಡುವಂತಹ ಯೋಜನೆಗಳು ಈ ಸಮುದಾಯಗಳನ್ನು ಅಭೂತಪೂರ್ವ ಪ್ರಮಾಣದಲ್ಲಿ ತಲುಪಿವೆ. ಅಭಿವೃದ್ಧಿಯ ಹಾದಿಯಲ್ಲಿ ಹಿಂದೆ ಉಳಿದವರನ್ನು ಅವಕಾಶ ಮತ್ತು ಪ್ರಗತಿಯ ಮುಂಚೂಣಿಗೆ ತರುವುದೇ ಈ ಸರ್ಕಾರದ ಸ್ಪಷ್ಟ ಗುರಿಯಾಗಿದೆ.

ಆಡಳಿತದ ಚೌಕಟ್ಟಾಗಿ 'ಅಂತ್ಯೋದಯ'

"ನೀವು ಕಂಡ ಅತ್ಯಂತ ಬಡ ಮತ್ತು ದೀನದಲಿತ ವ್ಯಕ್ತಿಯ ಮುಖವನ್ನು ನೆನಪಿಸಿಕೊಳ್ಳಿ," ಎಂದು ಮಹಾತ್ಮ ಗಾಂಧೀಜಿಯವರು ಒಮ್ಮೆ ಸಲಹೆ ನೀಡಿದ್ದರು, "ಮತ್ತು ನೀವು ಕೈಗೊಳ್ಳುವ ಯಾವುದೇ ಹೆಜ್ಜೆಯು ಆ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಉಪಯೋಗವಾಗಲಿದೆಯೇ ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ." ದಶಕಗಳ ಕಾಲ ಈ ಪ್ರಬಲ ಚಿಂತನೆಯು ಪುಸ್ತಕಗಳಿಗೆ ಮಾತ್ರ ಸೀಮಿತವಾಗಿತ್ತು, ಆದರೆ ಲಕ್ಷಾಂತರ ಭಾರತೀಯರು ದೇಶದ ಪ್ರಗತಿಯಿಂದ ವಂಚಿತರಾಗಿದ್ದರು.

ಆದರೆ, ಕಳೆದ ಹನ್ನೆರಡು ವರ್ಷಗಳಲ್ಲಿ ಒಂದು ದೊಡ್ಡ ಬದಲಾವಣೆ ಕಂಡುಬಂದಿದೆ. ಕೇವಲ ಈ ಆದರ್ಶಗಳ ಬಗ್ಗೆ ಮಾತನಾಡುವುದನ್ನು ಮೀರಿ, ಭಾರತವು ಅವುಗಳನ್ನು ಕಾರ್ಯರೂಪಕ್ಕೆ ತರುವತ್ತ ಹೆಜ್ಜೆ ಹಾಕಿದೆ. ಸರತಿಯಲ್ಲಿ ಕೊನೆಯವರಾಗಿದ್ದವರು ಇಂದು ಅವಕಾಶ, ಘನತೆ ಮತ್ತು ಅಭಿವೃದ್ಧಿಯನ್ನು ಪಡೆಯುವಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದನ್ನು ಇದು ಖಚಿತಪಡಿಸಿದೆ. ಆಡಳಿತದ ಗಮನವು ಚದುರಿದ ಸೇವಾ ವಿತರಣೆಯಿಂದ ಸಂಪೂರ್ಣ ಒಳಗೊಳ್ಳುವಿಕೆಯ ಕಡೆಗೆ ಬದಲಾಗಿದೆ.

ಬುಡಕಟ್ಟು ವಸತಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ವಿಸ್ತರಣೆ ಹೆಚ್ಚಾಗಿದೆ. ವಂಚಿತ ಸಮುದಾಯಗಳ ವಿದ್ಯಾರ್ಥಿಗಳು ವ್ಯಾಪಕವಾದ ಶೈಕ್ಷಣಿಕ ಅವಕಾಶಗಳನ್ನು ಪಡೆದಿದ್ದಾರೆ. ನೈರ್ಮಲ್ಯ ಕಾರ್ಮಿಕರು ಬಲವಾದ ಸಾಂಸ್ಥಿಕ ಮಾನ್ಯತೆ ಮತ್ತು ಸುರಕ್ಷತಾ ಬೆಂಬಲವನ್ನು ಪಡೆದಿದ್ದಾರೆ. ಹಿಂದುಳಿದ ಮತ್ತು ಅಲೆಮಾರಿ ಸಮುದಾಯಗಳು ಗುರಿ ಆಧಾರಿತ ಕಲ್ಯಾಣ ಯೋಜನೆಗಳ ಕೇಂದ್ರಬಿಂದುವಾಗಿವೆ.

ಈ ಬದಲಾವಣೆಯು ಭೌಗೋಳಿಕವಾಗಿಯೂ ಗೋಚರಿಸುತ್ತಿದೆ. ಬುಡಕಟ್ಟು ಪ್ರದೇಶಗಳು, ಆಕಾಂಕ್ಷಿತ ಜಿಲ್ಲೆಗಳು ಮತ್ತು ದೂರದ ವಸತಿ ಪ್ರದೇಶಗಳು ಅಭಿವೃದ್ಧಿ ಯೋಜನೆ ಮತ್ತು ಮೇಲ್ವಿಚಾರಣೆಯ ಕೇಂದ್ರವಾಗಿವೆ. ವಿವಿಧ ಸಚಿವಾಲಯಗಳ ನಡುವಿನ ಸಮನ್ವಯವು, ಒಂದು ಕಾಲದಲ್ಲಿ ತಲುಪಲು ಕಷ್ಟಕರವೆಂದು ಪರಿಗಣಿಸಲ್ಪಟ್ಟ ಪ್ರದೇಶಗಳಲ್ಲಿಯೂ ಕೊನೆಯ ಹಂತದ ಸೇವಾ ವಿತರಣೆಯನ್ನು ಬಲಪಡಿಸಿದೆ.

ಅಭಿವೃದ್ಧಿಯ ಕೇಂದ್ರದಲ್ಲಿ ಬುಡಕಟ್ಟು ಸಮುದಾಯಗಳು

ಭಾರತದ ಬುಡಕಟ್ಟು ಸಮುದಾಯಗಳು ಸಂಸ್ಕೃತಿ, ಸಾಂಪ್ರದಾಯಿಕ ಜ್ಞಾನ ಮತ್ತು ಅಭಿವೃದ್ಧಿಯಲ್ಲಿ ಯಾವಾಗಲೂ ಶ್ರೀಮಂತವಾಗಿವೆ. ಅವರಿಗೆ ಕೊರತೆಯಿದ್ದುದು ಸಾರಿಗೆ, ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್ ಮತ್ತು ಉದ್ಯೋಗಾವಕಾಶಗಳಂತಹ ಮೂಲಸೌಕರ್ಯಗಳು ಮತ್ತು ಸೇವೆಗಳಿಗೆ ಸಮಾನ ಪ್ರವೇಶದ ಬಗ್ಗೆ. ಕಳೆದ 12 ವರ್ಷಗಳು ಈ ಅಂತರವನ್ನು ಪ್ರಜ್ಞಾಪೂರ್ವಕವಾಗಿ, ಅಳೆಯಬಹುದಾದ ರೀತಿಯಲ್ಲಿ ಮತ್ತು ವ್ಯಾಪಕವಾಗಿ ಕಡಿಮೆ ಮಾಡುವ ಪ್ರಯತ್ನಗಳಾಗಿವೆ.

ವಿಶೇಷವಾಗಿ ಅತಿಸೂಕ್ಷ್ಮ ಬುಡಕಟ್ಟು ಗುಂಪುಗಳು ವಾಸಿಸುವ ಪ್ರದೇಶಗಳು ಸೇರಿದಂತೆ ದೂರದ ವಸತಿಗಳಲ್ಲಿ ಈ ಬದಲಾವಣೆ ವಿಶೇಷವಾಗಿ ಕಂಡುಬಂದಿದೆ. ತಲುಪಲು ಕಷ್ಟಕರವೆಂದು ಭಾವಿಸಲಾಗಿದ್ದ ಪ್ರದೇಶಗಳು ಇಂದು ಅಭಿವೃದ್ಧಿ ಯೋಜನೆ ಮತ್ತು ಕೊನೆಯ ಹಂತದ ಸೇವಾ ವಿತರಣೆಯ ಕೇಂದ್ರಬಿಂದುಗಳಾಗಿವೆ.

ಜಾರ್ಖಂಡ್: ಅರಣ್ಯದ ಬುಡದಿಂದ ಮಾರುಕಟ್ಟೆಯ ಕಪಾಟಿನವರೆಗೆ

 

ಜಾರ್ಖಂಡ್‌ನ ಗರಿಯಾಬಂದ್ ಜಿಲ್ಲೆಯಲ್ಲಿ, ಕಮಾರ್ ಪಿವಿಟಿಜಿ ಸಮುದಾಯದ ಮಹಿಳೆಯರು ತಮ್ಮ ಹಿರಿಯರು ಅರಣ್ಯದ ಗಿಡಮೂಲಿಕೆಗಳಿಂದ ಚಿಕಿತ್ಸೆ ನೀಡುತ್ತಿದ್ದುದನ್ನು ನೋಡುತ್ತಲೇ ಬೆಳೆದವರು. ಇದು ತಾಯಿಯಿಂದ ಮಗಳಿಗೆ ರಹಸ್ಯವಾಗಿ ಹರಿದುಬಂದ ಜ್ಞಾನವಾಗಿತ್ತು. ಹಲವು ವರ್ಷಗಳ ಕಾಲ, ಅವರು ಆ ಗಿಡಮೂಲಿಕೆಗಳನ್ನು ಮಾರುಕಟ್ಟೆಯಲ್ಲಿ ಸಿಗುವ ಕಡಿಮೆ ಬೆಲೆಗೆ ಕಚ್ಚಾ ರೂಪದಲ್ಲೇ ಮಾರಾಟ ಮಾಡುತ್ತಿದ್ದರು. ಜ್ಞಾನ ಅವರದ್ದಾಗಿತ್ತು, ಆದರೆ ಅದರ ಲಾಭ ಮಾತ್ರ ಅವರ ಕೈ ಸೇರುತ್ತಿರಲಿಲ್ಲ.

 

ಪ್ರಧಾನ ಮಂತ್ರಿ ಜನ್‌ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಈ ಪರಿಸ್ಥಿತಿಯನ್ನು ಬದಲಿಸಿತು. ಅದರ 'ವನ ಧನ್ ವಿಕಾಸ್ ಕೇಂದ್ರ' ಉಪಕ್ರಮದ ಅಡಿಯಲ್ಲಿ, ಈ ಸಮುದಾಯದ 87 ಮಹಿಳೆಯರು ಒಂದಾಗಿ ಹೊಸದನ್ನೇನಾದರೂ ಸಾಧಿಸಲು ಮುಂದಾದರು. ಅವರು 'ಛತ್ತೀಸ್‌ಗಢ ಹರ್ಬಲ್ಸ್'  ಬ್ರ್ಯಾಂಡ್‌ನ ಅಡಿಯಲ್ಲಿ ಆಯುರ್ವೇದ ಎಣ್ಣೆಗಳು, ಪುಡಿಗಳು ಮತ್ತು ಔಷಧಗಳನ್ನು ತಯಾರಿಸಲು ಆಯುಶ್‌ ಪ್ರಮಾಣೀಕೃತ ಪರವಾನಗಿ ಪಡೆದ ಘಟಕವನ್ನು ಸ್ಥಾಪಿಸಿದರು. ಉದ್ಯಮಶೀಲತೆ ಮತ್ತು ಡಿಜಿಟಲ್ ಸಾಕ್ಷರತೆಯ ತರಬೇತಿಯ ಮೂಲಕ ಅವರ ಕೌಶಲ್ಯಗಳನ್ನು ಹೆಚ್ಚಿಸಲಾಯಿತು. ಈ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು ₹159.59 ಲಕ್ಷಗಳ ಮಾರಾಟವಾಗಿದೆ. ಈ ಮಹಿಳೆಯರು ಈಗ ತಮ್ಮ ಗ್ರಾಮವನ್ನು ಬಿಟ್ಟು ಹೋಗದೆಯೇ ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕೇವಲ ತಲೆಮಾರಿನಿಂದ ಬಂದ ಮೌನ ಜ್ಞಾನವಾಗಿದ್ದದ್ದು, ಇಂದು ಒಂದು ಯಶಸ್ವಿ ಉದ್ಯಮವಾಗಿ ಬೆಳೆದಿದೆ.

ಪ್ರಧಾನ ಮಂತ್ರಿ ಜಂಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ

ಪ್ರಧಾನ ಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನವು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಗುರಿಯನ್ನು ಹೊಂದಿರುವ ಕಾರ್ಯಕ್ರಮವಾಗಿದೆ. ಇವರು ಭಾರತದ ಅತ್ಯಂತ ಪ್ರತ್ಯೇಕವಾಗಿರುವ ಸಮುದಾಯಗಳಲ್ಲಿ ಸೇರಿದ್ದಾರೆ. ಇವರಲ್ಲಿ ಅನೇಕರು ಪಕ್ಕಾ ಮನೆ, ಶುದ್ಧ ನೀರು, ವಿದ್ಯುತ್ ಅಥವಾ ರಸ್ತೆಯ ಸಂಪರ್ಕವಿಲ್ಲದೆ ಜೀವನ ಸಾಗಿಸುತ್ತಿದ್ದರು. ಈ ಕೊರತೆಗಳನ್ನು ನೀಗಿಸಲು ಸರ್ಕಾರವು ನವೆಂಬರ್ 2023 ರಲ್ಲಿ ಪಿಎಂ ಜನ್‌ಮನ್‌ ಅನ್ನು ಪ್ರಾರಂಭಿಸಿತು, ಇದು ಎಲ್ಲಾ ಸಂಬಂಧಪಟ್ಟ ಸಚಿವಾಲಯಗಳ ಸಮನ್ವಯದ ಪ್ರಯತ್ನದ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯಕ್ರಮವು 18 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಾದ್ಯಂತ 75 ಪಿವಿಟಿಜಿ ಸಮುದಾಯಗಳನ್ನು ಗುರಿಯಾಗಿಸಿಕೊಂಡಿದ್ದು, 9 ಸಚಿವಾಲಯಗಳ ಮೂಲಕ 11 ಹಸ್ತಕ್ಷೇಪಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಒಟ್ಟು ಬಜೆಟ್ ವೆಚ್ಚ ₹24,104 ಕೋಟಿಗಳಾಗಿವೆ.

ಈ 11 ಹಸ್ತಕ್ಷೇಪಗಳು ವಸತಿ, ರಸ್ತೆ ಸಂಪರ್ಕ, ಕೊಳವೆ ನೀರಿನ ಪೂರೈಕೆ, ಸಂಚಾರಿ ವೈದ್ಯಕೀಯ ಘಟಕಗಳು, ಅಂಗನವಾಡಿ ಕೇಂದ್ರಗಳು, ವಸತಿ ನಿಲಯಗಳು, ವಿದ್ಯುದ್ದೀಕರಣ, ಮೊಬೈಲ್ ಟವರ್‌ಗಳು, ಬಹುಪಯೋಗಿ ಕೇಂದ್ರಗಳು, ವನ ಧನ್ ವಿಕಾಸ್ ಕೇಂದ್ರಗಳು ಮತ್ತು ವೃತ್ತಿಪರ ಕೌಶಲ್ಯ ತರಬೇತಿಯನ್ನು ಒಳಗೊಂಡಿವೆ.

ವನ ಧನ್ ವಿಕಾಸ್ ಕೇಂದ್ರಗಳ ಮೂಲಕ ಕೌಶಲ್ಯ ಮತ್ತು ಜೀವನೋಪಾಯ:

ಪಿಎಂ ಜನ್‌ಮನ್‌ ನ ಪ್ರಮುಖ ಅಂಶವೆಂದರೆ ವನ ಧನ್ ವಿಕಾಸ್ ಕೇಂದ್ರಗಳ ಸ್ಥಾಪನೆಯಾಗಿದೆ. ಇವು ಅರಣ್ಯ ಆಧಾರಿತ ಉತ್ಪನ್ನಗಳನ್ನು ಸಂಗ್ರಹಿಸಲು, ಸಂಸ್ಕರಿಸಲು ಮತ್ತು ಮಾರಾಟ ಮಾಡಲು ಪಿವಿಟಿಜಿ ಸಮುದಾಯಗಳಿಗೆ ಬೆಂಬಲ ನೀಡುತ್ತವೆ. ಇದರ ಮೂಲಕ ಸ್ಥಳೀಯ ಉದ್ಯೋಗ ಮತ್ತು ಆದಾಯ ಸೃಷ್ಟಿಯ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಎಂಟರ್‌ಪ್ರೆನ್ಯೂರ್‌ಶಿಪ್ ಅಂಡ್ ಸ್ಮಾಲ್ ಬ್ಯುಸಿನೆಸ್ ಡೆವಲಪ್‌ಮೆಂಟ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಂಟರ್‌ಪ್ರೆನ್ಯೂರ್‌ಶಿಪ್ ಸಂಸ್ಥೆಗಳು, ಟ್ರೈಬಲ್ ಕೋಆಪರೇಟಿವ್ ಮಾರ್ಕೆಟಿಂಗ್ ಡೆವಲಪ್‌ಮೆಂಟ್ ಫೆಡರೇಶನ್ ಆಫ್ ಇಂಡಿಯಾ ಬೆಂಬಲದೊಂದಿಗೆ 15 ರಾಜ್ಯಗಳಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತೆಯ ತರಬೇತಿಯನ್ನು ಅನುಷ್ಠಾನಗೊಳಿಸುತ್ತಿವೆ.

  • 500 ಗುರಿಯ ಪೈಕಿ 491 ವನ ಧನ್ ವಿಕಾಸ್ ಕೇಂದ್ರಗಳು ಕಾರ್ಯಾರಂಭಿಸಿವೆ (ಏಪ್ರಿಲ್ 2026ರ ಹೊತ್ತಿಗೆ).
  • ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ 38,391 ಪಿವಿಟಿಜಿ (ಪಿವಿಟಿಜಿ) ಸದಸ್ಯರಿಗೆ ತರಬೇತಿ ನೀಡಲಾಗಿದೆ.

ಪಿಎಂ-ಜಿಯುಜಿಎ / ಧರ್ತಿ ಆಬಾ ಜಂಜಾಟಿಯಾ ಗ್ರಾಮ ಉತ್ಕರ್ಷ ಅಭಿಯಾನ

ಧರ್ತಿ ಆಬಾ ಜಂಜಾಟಿಯಾ ಗ್ರಾಮ ಉತ್ಕರ್ಷ ಅಭಿಯಾನ, ಈಗ ಪಿಎಂ-ಜಿಯುಜಿಎ ಎಂದು ಕರೆಯಲ್ಪಡುವ ಈ ಯೋಜನೆಯನ್ನು ಅಕ್ಟೋಬರ್ 2024 ರಲ್ಲಿ ಪ್ರಾರಂಭಿಸಲಾಯಿತು. ಇದು 17 ಸಚಿವಾಲಯಗಳ ಪ್ರಯತ್ನಗಳನ್ನು ಸಂಯೋಜಿಸುತ್ತದೆ ಮತ್ತು ಬುಡಕಟ್ಟು ಜನಾಂಗದವರು ಬಹುಸಂಖ್ಯಾತರಾಗಿರುವ ಹಳ್ಳಿಗಳು ಹಾಗೂ ಪಿವಿಟಿಜಿ ವಸತಿ ಪ್ರದೇಶಗಳಲ್ಲಿ ದೀರ್ಘಕಾಲದಿಂದ ಬಾಕಿಯಿರುವ ಕೊರತೆಗಳನ್ನು ನೀಗಿಸುವತ್ತ ಗಮನಹರಿಸುತ್ತದೆ.

ಪಿಎಂ ಜಿಯುಜಿಎ ಅಡಿಯಲ್ಲಿ, ಪ್ರತ್ಯೇಕವಾದ ಯೋಜನೆಗಳ ಬದಲು, ವಿವಿಧ ವಲಯಗಳು ಮತ್ತು ಸಚಿವಾಲಯಗಳಾದ್ಯಂತ ಸಮನ್ವಯದೊಂದಿಗೆ, ಮಿಷನ್ ಮೋಡ್‌ನಲ್ಲಿ ಸೇವೆಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಏಕಲವ್ಯ ಮಾದರಿ ವಸತಿ ಶಾಲೆಗಳು

ಏಕಲವ್ಯ ಮಾದರಿ ವಸತಿ ಶಾಲೆಗಳು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸುವಲ್ಲಿ ಪ್ರಮುಖ ಹಸ್ತಕ್ಷೇಪವಾಗಿ ಹೊರಹೊಮ್ಮಿವೆ. ಬುಡಕಟ್ಟು ಜನಾಂಗದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಸ್ಥಾಪಿಸಲಾದ ಈ ವಸತಿ ಶಾಲೆಗಳು, 6ನೇ ತರಗತಿಯಿಂದ 12ನೇ ತರಗತಿಯವರೆಗೆ ಗುಣಮಟ್ಟದ ಶಿಕ್ಷಣ, ಆಧುನಿಕ ಮೂಲಸೌಕರ್ಯ ಮತ್ತು ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಬೆಂಬಲವನ್ನು ಒದಗಿಸುತ್ತವೆ.

ಕಳೆದ 12 ವರ್ಷಗಳಲ್ಲಿ, ಏಕಲವ್ಯ ಮಾದರಿ ವಸತಿ ಶಾಲೆಗಳ ವಿಸ್ತರಣೆಯು ಬುಡಕಟ್ಟು ಪ್ರದೇಶಗಳ ಶಿಕ್ಷಣ ಮೂಲಸೌಕರ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. 2018ರ ನಂತರ ಈ ಶಾಲೆಗಳ ಜಾಲವು ವೇಗವಾಗಿ ಬೆಳೆದಿದ್ದು, ತಲೆಮಾರುಗಳಿಂದ ಶಿಕ್ಷಣದಿಂದ ವಂಚಿತವಾಗಿದ್ದ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಆಧುನಿಕ ವಸತಿಯುತ ಮತ್ತು ಗುಣಮಟ್ಟದ ಶಿಕ್ಷಣವನ್ನು ಹತ್ತಿರವಾಗಿಸಿದೆ.

2026ರ ಹೊತ್ತಿಗೆ, 499 ಶಾಲೆಗಳಲ್ಲಿ 1.56 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದಲ್ಲದೆ, ಇನ್ನೂ 323 ಶಾಲೆಗಳು ನಿರ್ಮಾಣ ಹಂತದಲ್ಲಿವೆ.

ಇಲ್ಲಿ ದಾಖಲಾದ ಅನೇಕ ವಿದ್ಯಾರ್ಥಿಗಳು, ಸುಸಜ್ಜಿತ ಪ್ರೌಢ ಶಿಕ್ಷಣ ವ್ಯವಸ್ಥೆಯನ್ನು ಪ್ರವೇಶಿಸುತ್ತಿರುವ ತಮ್ಮ ಕುಟುಂಬದ ಮೊದಲ ಪೀಳಿಗೆಯ ಕಲಿಯುವವರಾಗಿದ್ದಾರೆ.

ಹೊಸ ಕ್ಯಾಂಪಸ್‌ಗಳು ಈ ಹಿಂದೆ ಹಲವಾರು ದೂರದ ಪ್ರದೇಶಗಳಲ್ಲಿ ಲಭ್ಯವಿಲ್ಲದಿದ್ದ ಸ್ಮಾರ್ಟ್ ತರಗತಿಗಳು, ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು, ಗ್ರಂಥಾಲಯಗಳು, ಕ್ರೀಡಾ ಮೂಲಸೌಕರ್ಯ, ಡಿಜಿಟಲ್ ಕಲಿಕಾ ಸೌಲಭ್ಯಗಳು ಮತ್ತು ಬಾಲಕ-ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳಂತಹ ಸೌಲಭ್ಯಗಳನ್ನು ಪರಿಚಯಿಸಿವೆ.

ಹಿಮಾಲಯದ ಹಳ್ಳಿಯಿಂದ ಐಐಟಿವರೆಗೆ: ಜತಿನ್ ನೇಗಿಯವರ ಕಥೆ

 

ಹಿಮಾಚಲ ಪ್ರದೇಶದ ಕಿನೌರ್ ಜಿಲ್ಲೆಯ ಸಾಂಗ್ಲಾ ಗ್ರಾಮವು ಟಿಬೆಟ್ ಗಡಿಯನ್ನು ಹೊಂದಿದೆ. ಇಲ್ಲಿ ಚಳಿಗಾಲದಲ್ಲಿ ಎರಡು ತಿಂಗಳ ಕಾಲ ವಿದ್ಯುತ್ ಇರುವುದಿಲ್ಲ ಮತ್ತು ಹಿಮಪಾತದಿಂದ ರಸ್ತೆಗಳ ಸಂಪರ್ಕ ಕಡಿತಗೊಳ್ಳುತ್ತದೆ. ಇಂತಹ ಕಠಿಣ ಪರಿಸರದಲ್ಲಿ ಬೆಳೆದವರು ಜತಿನ್ ನೇಗಿ.

ಅವರು 6ನೇ ತರಗತಿಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಸೇರಿದರು. ಅಲ್ಲಿನ ಸುಸಜ್ಜಿತ ಕಲಿಕೆ, ನಿಯಮಿತ ಪರೀಕ್ಷೆಗಳು ಮತ್ತು ಪಠ್ಯಪುಸ್ತಕಗಳನ್ನು ಮೀರಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಶಿಕ್ಷಕರು ಅವರ ಬದುಕನ್ನೇ ಬದಲಾಯಿಸಿದರು. ಅವರು 12ನೇ ತರಗತಿಯಲ್ಲಿದ್ದಾಗ ತಂದೆಯನ್ನು ಕಳೆದುಕೊಂಡರು, ಆ ಕಷ್ಟದ ಸಮಯದಲ್ಲಿ ಅವರ ಶಿಕ್ಷಕರು ಅವರಿಗೆ ಬೆನ್ನೆಲುಬಾಗಿ ನಿಂತರು. ಜತಿನ್ ಒಂದು ವರ್ಷದ ವಿರಾಮ ತೆಗೆದುಕೊಂಡು, ದೃಢಸಂಕಲ್ಪದಿಂದ ಅಧ್ಯಯನ ಮಾಡಿ, ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದ 421ನೇ ರ‍್ಯಾಂಕ್ ಗಳಿಸಿದರು. ಅವರು ಈಗ ಐಐಟಿ ಜೋಧ್‌ಪುರದಲ್ಲಿ ಓದುತ್ತಿದ್ದಾರೆ.

ಅವರ ಹಳ್ಳಿಯಲ್ಲಿ ಐಐಟಿ ಎಂದರೆ ಏನು ಎಂಬುದೇ ಯಾರಿಗೂ ಗೊತ್ತಿರಲಿಲ್ಲ. ಜತಿನ್ ಅವರದ್ದು ಕೇವಲ ಒಂದು ಕಥೆಯಷ್ಟೇ ಅಲ್ಲ, 2024-25ರಲ್ಲಿ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಪಾಸು ಮಾಡಿದ 597 ಇಎಂಆರ್‌ಎಸ್ ವಿದ್ಯಾರ್ಥಿಗಳ ಪೈಕಿ ಅವರು ಒಬ್ಬರು. 2022-23ರಲ್ಲಿ ಕೇವಲ 2 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದರು, ಆದರೆ ಈಗ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಬುಡಕಟ್ಟು ಸಂಶೋಧನಾ ಸಂಸ್ಥೆಗಳಿಗೆ ಬೆಂಬಲ

ಬುಡಕಟ್ಟು ಭಾಷೆಗಳು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಗಳನ್ನು ದಾಖಲಿಸುವ ಮತ್ತು ಸಂರಕ್ಷಿಸುವಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೆಂಬಲಿತವಾಗಿರುವ ಈ ಸಂಸ್ಥೆಗಳು, ಸಂಶೋಧನೆಗಳನ್ನು ಕೈಗೊಳ್ಳುತ್ತವೆ, ಮೌಖಿಕ ಇತಿಹಾಸವನ್ನು ದಾಖಲಿಸುತ್ತವೆ, ಸಾಂಸ್ಕೃತಿಕ ಆಚರಣೆಗಳನ್ನು ಸಂಗ್ರಹಿಸುತ್ತವೆ ಮತ್ತು ವಸ್ತುಸಂಗ್ರಹಾಲಯಗಳು, ಆರ್ಕೈವ್‌ಗಳು, ಪ್ರಕಟಣೆಗಳು, ಉತ್ಸವಗಳು ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಬುಡಕಟ್ಟು ಪರಂಪರೆಯ ಕುರಿತು ಜಾಗೃತಿ ಮೂಡಿಸುತ್ತವೆ. ಬುಡಕಟ್ಟು ಜ್ಞಾನವು ಪಾಂಡಿತ್ಯ ಮತ್ತು ಆಡಳಿತ ಎರಡಕ್ಕೂ ಪೂರಕವಾಗುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ, ಟಿಆರ್‌ಐಗಳು ನೀತಿ ನಿರೂಪಣೆ ಮತ್ತು ಸಾಮರ್ಥ್ಯ ವರ್ಧನೆಗೆ ಕೊಡುಗೆ ನೀಡುತ್ತವೆ. ಈ ಪ್ರಯತ್ನಗಳಿಗೆ 'ಬುಡಕಟ್ಟು ಸಂಶೋಧನೆ, ಮಾಹಿತಿ, ಶಿಕ್ಷಣ, ಸಂವಹನ ಮತ್ತು ಈವೆಂಟ್‌ಗಳು' ಯೋಜನೆಯಡಿ ಹೆಚ್ಚಿನ ಬೆಂಬಲ ಸಿಗುತ್ತದೆ. ಇದು ಐಐಟಿಗಳು, ಐಐಎಂಗಳು, ಏಮ್ಸ್, ಟೆರಿ ಮತ್ತು ಭಾಷಾ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಂತಹ ಸಂಸ್ಥೆಗಳ ಮೂಲಕ ಅಳಿವಿನಂಚಿನಲ್ಲಿರುವ ಭಾಷೆಗಳು, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳು, ಸಮುದಾಯ ಅರಣ್ಯ ಹಕ್ಕುಗಳು ಮತ್ತು ಪಿವಿಟಿಜಿ (ಪಿವಿಟಿಜಿ) ಜೀವನೋಪಾಯದಂತಹ ವಿಷಯಗಳ ಕುರಿತ ಸಂಶೋಧನೆಗಳಿಗೆ ಹಣಕಾಸು ಒದಗಿಸುತ್ತದೆ.

ಬುಡಕಟ್ಟು ಪರಂಪರೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಮನ್ನಣೆ

ಕಳೆದ 12 ವರ್ಷಗಳಲ್ಲಿ, ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಹೋರಾಡಿದ ಬುಡಕಟ್ಟು ನಾಯಕರನ್ನು ಗೌರವಿಸಲು ಸರ್ಕಾರವು 10 ರಾಜ್ಯಗಳಲ್ಲಿ 11 ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳನ್ನು ಮಂಜೂರು ಮಾಡಿದೆ. ಜಾರ್ಖಂಡ್, ಮಧ್ಯಪ್ರದೇಶ (2 ವಸ್ತುಸಂಗ್ರಹಾಲಯಗಳು) ಮತ್ತು ಛತ್ತೀಸ್‌ಗಢದಲ್ಲಿ ಈಗಾಗಲೇ ನಾಲ್ಕು ವಸ್ತುಸಂಗ್ರಹಾಲಯಗಳನ್ನು ಉದ್ಘಾಟಿಸಲಾಗಿದೆ. ಮಿಜೋರಾಂ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗುಜರಾತ್, ಗೋವಾ ಮತ್ತು ಮಣಿಪುರದಲ್ಲಿ ಇನ್ನೂ ಏಳು ವಸ್ತುಸಂಗ್ರಹಾಲಯಗಳು ನಿರ್ಮಾಣ ಹಂತದಲ್ಲಿವೆ.

ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ರಂದು ಪ್ರತಿವರ್ಷ 'ಜಂಜಾತೀಯ ಗೌರವ ದಿವಸ'ವನ್ನು ಆಚರಿಸಲಾಗುತ್ತದೆ. ಇದು ಕೇವಲ ಒಬ್ಬ ನಾಯಕನನ್ನು ಮಾತ್ರವಲ್ಲದೆ, ಮುಖ್ಯವಾಹಿನಿಯ ಭಾರತವು ದೀರ್ಘಕಾಲ ನಿರ್ಲಕ್ಷಿಸಿದ್ದ ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಬುಡಕಟ್ಟು ಜನಾಂಗದ ಸಂಪೂರ್ಣ ಪ್ರತಿರೋಧದ ಇತಿಹಾಸವನ್ನು ಗೌರವಿಸುತ್ತದೆ. ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನವನ್ನು 2024ರ ನವೆಂಬರ್ 15ರಿಂದ 2025ರ ನವೆಂಬರ್ 15ರವರೆಗೆ 'ಜಂಜಾತೀಯ ಗೌರವ ವರ್ಷ'ವನ್ನಾಗಿ ಆಚರಿಸಲಾಯಿತು.

ಪರಿಶಿಷ್ಟ ಜಾತಿಯವರಿಗೆ ನ್ಯಾಯ ಮತ್ತು ಘನತೆ

ಪರಿಶಿಷ್ಟ ಜಾತಿ ಸಮುದಾಯಗಳು ಕಳೆದ 12 ವರ್ಷಗಳಲ್ಲಿ ಗುರಿ ಆಧಾರಿತ ಅಭಿವೃದ್ಧಿ ಕಾರ್ಯತಂತ್ರದ ಕೇಂದ್ರಬಿಂದುವಾಗಿವೆ. ಈ ಕಾರ್ಯತಂತ್ರವು ಆರ್ಥಿಕ ಸಬಲೀಕರಣ, ಶೈಕ್ಷಣಿಕ ಅವಕಾಶಗಳು ಮತ್ತು ಮೀಸಲಾದ ಬಜೆಟ್ ಬೆಂಬಲವನ್ನು ಸಂಯೋಜಿಸುತ್ತದೆ - ಇದು ಕೇವಲ ಸಾಂಕೇತಿಕ ಒಳಗೊಳ್ಳುವಿಕೆಯನ್ನು ಮೀರಿ, ವಸ್ತುನಿಷ್ಠ ಸಮಾನತೆಯತ್ತ ಸಾಗುತ್ತಿದೆ.

ಪ್ರಧಾನ ಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆ

2021ರಲ್ಲಿ ಪ್ರಾರಂಭಿಸಲಾದ ಪಿಎಂ  -ಅಜಯ್‌ ಯೋಜನೆಯು ಪರಿಶಿಷ್ಟ ಜಾತಿಯವರು ಬಹುಸಂಖ್ಯಾತರಾಗಿರುವ ಹಳ್ಳಿಗಳ ಸಮಗ್ರ ಅಭಿವೃದ್ಧಿಯ ಮೇಲೆ ಗಮನಹರಿಸುತ್ತದೆ. ಈ ಯೋಜನೆಯು ವಂಚಿತ SC ಸಮುದಾಯಗಳಲ್ಲಿ ಮೂಲಸೌಕರ್ಯಗಳ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯದ ಅವಕಾಶಗಳನ್ನು ಬೆಂಬಲಿಸುತ್ತದೆ.

ಪಿಎಂ  -ಅಜಯ್‌ ಅಡಿಯಲ್ಲಿ, 'ಆದರ್ಶ ಗ್ರಾಮ' ಘಟಕವು ವಿವಿಧ ಯೋಜನೆಗಳ ಸಮನ್ವಯ, ಗ್ರಾಮ ಅಭಿವೃದ್ಧಿ ಯೋಜನೆಗಳು ಮತ್ತು ಸ್ಥಳೀಯ ನಿರ್ಣಾಯಕ ಅಗತ್ಯಗಳಿಗೆ ಪೂರಕವಾದ ಬೆಂಬಲದ ಮೂಲಕ SC-ಬಹುಸಂಖ್ಯಾತ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಕ್ಷೇತ್ರ ಆಧಾರಿತ ವಿಧಾನವನ್ನು ಅಳವಡಿಸಿಕೊಂಡಿದೆ.

ಇದು 26 ರಾಜ್ಯಗಳ 597 ಜಿಲ್ಲೆಗಳಲ್ಲಿನ 47,334 ಗ್ರಾಮಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮವು 4 ಕೋಟಿಗೂ ಹೆಚ್ಚು ಪರಿಶಿಷ್ಟ ಜಾತಿಯ ನಾಗರಿಕರನ್ನು ಮತ್ತು 83 ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ತಲುಪಿದೆ.

ಈ ಕಾರ್ಯಕ್ರಮವು ಗ್ರಾಮ ಮಟ್ಟದ ಯೋಜನೆ ಮತ್ತು ಮೂಲಸೌಕರ್ಯಗಳ ಮೇಲ್ವಿಚಾರಣೆಯನ್ನು ಬಲಪಡಿಸಿದೆ. 25,000ಕ್ಕೂ ಹೆಚ್ಚು ಗ್ರಾಮಗಳು ಮೂಲಸೌಕರ್ಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. ರಸ್ತೆಗಳು, ನೀರಿನ ಪೂರೈಕೆ, ಶಿಕ್ಷಣ, ನೈರ್ಮಲ್ಯ ಮತ್ತು ಸಂಪರ್ಕದಂತಹ ವಿಷಯಗಳಲ್ಲಿನ ಕೊರತೆಗಳನ್ನು ಹೆಚ್ಚು ವ್ಯವಸ್ಥಿತವಾಗಿ ಗುರುತಿಸಲು ಇದು ಸಹಾಯ ಮಾಡಿದೆ. ಯುವಜನರ ಭಾಗವಹಿಸುವಿಕೆ ಮತ್ತು ಜೀವನೋಪಾಯದ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೌಶಲ್ಯ ಅಭಿವೃದ್ಧಿ, ಸ್ವಸಹಾಯ ಸಂಘಗಳಲ್ಲಿ ಭಾಗವಹಿಸುವಿಕೆ ಮತ್ತು ಗ್ರಾಮ ಮೂಲಸೌಕರ್ಯಗಳ ಸೃಷ್ಟಿಯು ದೀರ್ಘಾವಧಿಯ ಆರ್ಥಿಕ ಭಾಗವಹಿಸುವಿಕೆಯತ್ತ ಸಾಗುವ ವಿಶಾಲವಾದ ಪ್ರಯತ್ನದ ಭಾಗವಾಗಿದೆ.

ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಕ್ರಿಯಾ ಯೋಜನೆ

ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಕ್ರಿಯಾ ಯೋಜನೆಯು ದೇಶದಾದ್ಯಂತ ಪರಿಶಿಷ್ಟ ಜಾತಿಯವರ ಮೇಲೆ ಕೇಂದ್ರೀಕರಿಸಿದ ವೆಚ್ಚಕ್ಕಾಗಿ ಒಂದು ಮೀಸಲಾದ ಚೌಕಟ್ಟನ್ನು ಸೃಷ್ಟಿಸಿದೆ. ಡಿಎಪಿಎಸ್‌ಸಿ ಎಂಬುದು ಕೇವಲ ಒಂದು ಪ್ರತ್ಯೇಕ ಯೋಜನೆಯಲ್ಲ. ಇದು ಪರಿಶಿಷ್ಟ ಜಾತಿಯ ಸಮುದಾಯಗಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಅನುಷ್ಠಾನಗೊಳಿಸುವ ಯೋಜನೆಗಳು ಮತ್ತು ಹಸ್ತಕ್ಷೇಪಗಳನ್ನು ಒಗ್ಗೂಡಿಸುತ್ತದೆ. ಎಸ್‌ಸಿ ಸಮುದಾಯಗಳಿಗೆ ಪ್ರಯೋಜನವಾಗುವ ಯೋಜನೆಗಳಿಗಾಗಿ ಸಚಿವಾಲಯಗಳು ಮೀಸಲಾದ ಹಣವನ್ನು ಕಾಯ್ದಿರಿಸುವುದನ್ನು ಈ ಚೌಕಟ್ಟು ಖಚಿತಪಡಿಸುತ್ತದೆ.

ಪರಿಶಿಷ್ಟ ಜಾತಿ ಮತ್ತು ಇತರರಿಗೆ ಶಿಷ್ಯವೇತನ ಬೆಂಬಲ

ಯುವ ಸಾಧಕರಿಗಾಗಿ ಉನ್ನತ ಶಿಕ್ಷಣ ಶಿಷ್ಯವೇತನ ಯೋಜನೆ (ಶ್ರೇಯಸ್)

ಫೆಬ್ರವರಿ 2019ರಲ್ಲಿ ಪ್ರಾರಂಭಿಸಲಾದ ಶ್ರೇಯಸ್ ಯೋಜನೆಯು ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಸಂಶೋಧನೆ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ವಿದೇಶಿ ವಿದ್ಯಾಭ್ಯಾಸವನ್ನು ಪಡೆಯಲು ಬೆಂಬಲ ನೀಡುತ್ತದೆ. ಈ ಯೋಜನೆಯು ಆರ್ಥಿಕ ಅಡೆತಡೆಗಳನ್ನು ಕಡಿಮೆ ಮಾಡುವ ಮತ್ತು ಗುಣಮಟ್ಟದ ಶೈಕ್ಷಣಿಕ ಅವಕಾಶಗಳಿಗೆ ಪ್ರವೇಶವನ್ನು ವಿಸ್ತರಿಸುವ ಅನೇಕ ಹಸ್ತಕ್ಷೇಪಗಳನ್ನು ಒಗ್ಗೂಡಿಸುತ್ತದೆ. 2025–26ನೇ ಸಾಲಿನಲ್ಲಿ ಮಾತ್ರವೇ, 'ಟಾಪ್ ಕ್ಲಾಸ್ ಎಜುಕೇಶನ್' ಘಟಕವು ಐಐಟಿಗಳು, ಐಐಎಂಗಳು, ಏಮ್ಸ್ ಮತ್ತು ಎನ್‌ಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ 4,156 ಎಸ್‌ಸಿ ವಿದ್ಯಾರ್ಥಿಗಳನ್ನು ಬೆಂಬಲಿಸಿದೆ, ಇದರಲ್ಲಿ 30% ಸೀಟುಗಳನ್ನು ಎಸ್‌ಸಿ ಬಾಲಕಿಯರಿಗಾಗಿ ಮೀಸಲಿಡಲಾಗಿದೆ. ಇದೇ ಅವಧಿಯಲ್ಲಿ, 'ಉಚಿತ ತರಬೇತಿ ಯೋಜನೆ'ಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ 990 ವಿದ್ಯಾರ್ಥಿಗಳಿಗೆ ನೆರವು ನೀಡಿದೆ, ಮತ್ತು 'ರಾಷ್ಟ್ರೀಯ ಸಾಗರೋತ್ತರ ಶಿಷ್ಯವೇತನ'ವು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ 72 ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದೆ. ಸಂಶೋಧನಾ ಮಟ್ಟದಲ್ಲಿ, 2025-26ನೇ ಸಾಲಿನಲ್ಲಿಯೇ ಫೆಲೋಶಿಪ್ ಯೋಜನೆಗಳು 4,153 ಎಸ್‌ಸಿ ಸಂಶೋಧಕರು ಮತ್ತು 1,969 ಒಬಿಸಿ ಸಂಶೋಧಕರಿಗೆ ಪ್ರಯೋಜನವನ್ನು ನೀಡಿವೆ.

ಗುರಿಪಡಿಸಿದ ಪ್ರದೇಶಗಳಲ್ಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಸತಿ ಶಿಕ್ಷಣ ಯೋಜನೆ (ಶ್ರೇಷ್ಠ)

ಕಡಿಮೆ ಆದಾಯದ ಕುಟುಂಬಗಳ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಸತಿ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸುವುದು ಅತ್ಯಗತ್ಯವಾಗಿದೆ. ಜೂನ್ 2022ರಲ್ಲಿ ಪ್ರಾರಂಭಿಸಲಾದ 'ಶ್ರೇಷ್ಠ' ಯೋಜನೆಯು, 9ನೇ ತರಗತಿಯಿಂದ 12ನೇ ತರಗತಿಯವರೆಗೆ ಶಿಕ್ಷಣವನ್ನು ಪಡೆಯಲು ಅನುವು ಮಾಡಿಕೊಡುವ ಮೂಲಕ ಈ ಅಗತ್ಯವನ್ನು ಪೂರೈಸುತ್ತದೆ.

ಈ ಯೋಜನೆಯು ಎರಡು ವಿಧಾನಗಳನ್ನು ಹೊಂದಿದೆ:

  • ವಿಧಾನ-I: 'ನ್ಯಾಷನಲ್ ಎಂಟ್ರನ್ಸ್ ಟೆಸ್ಟ್ ಫಾರ್ ಶ್ರೇಷ್ಠ' ಮೂಲಕ ಪ್ರತಿಭಾವಂತ ಎಸ್‌ಸಿ ವಿದ್ಯಾರ್ಥಿಗಳನ್ನು ಖಾಸಗಿ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಬೆಂಬಲಿಸುತ್ತದೆ.
  • ವಿಧಾನ-II: ಸ್ವಯಂಸೇವಾ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ನಡೆಸಲ್ಪಡುವ ವಸತಿ ಶಾಲೆಗಳಿಗೆ ಬೆಂಬಲ ನೀಡುತ್ತದೆ. ವಾರ್ಷಿಕ ಕುಟುಂಬ ಆದಾಯ ₹2.5 ಲಕ್ಷದವರೆಗೆ ಇರುವ ಅರ್ಹ ಎಸ್‌ಸಿ ವಿದ್ಯಾರ್ಥಿಗಳು ನೆಟ್ಸ್‌ ಪರೀಕ್ಷೆಗೆ ಹಾಜರಾಗಬಹುದು.

2025-26ನೇ ಸಾಲಿನಲ್ಲಿ, 'ಶ್ರೇಷ್ಠ' ಯೋಜನೆಯು 288 ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ 19,754 ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದೆ. ಈ ಯೋಜನೆಯು ವಸತಿ ಶಿಕ್ಷಣದ ಎರಡು ಮಾರ್ಗಗಳ ಮೂಲಕ ಕಾರ್ಯನಿರ್ವಹಿಸಿದೆ.

ಇಬ್ಬರು ಬಾಲಕಿಯರು, ಒಂದು ಯೋಜನೆ, ಒಂದು ಸಂಕಲ್ಪ

ತಮ್ಮ ಕುಟುಂಬವು ಸೋಲನ್ನು ಭರಿಸಲಾರದು ಎಂದು ಅರಿತ ಮಕ್ಕಳಲ್ಲಿ ಒಂದು ವಿಶಿಷ್ಟವಾದ ದೃಢನಿಶ್ಚಯ ಮೂಡುತ್ತದೆ. ಡೋಲಿ ಮತ್ತು ಊರ್ಮಿಳಾ ಇಬ್ಬರೂ ಪರಸ್ಪರ ಭೇಟಿಯಾಗಿಲ್ಲ. ಒಬ್ಬರು ಹಿಮಾಚಲ ಪ್ರದೇಶದವರು, ಮತ್ತೊಬ್ಬರು ರಾಜಸ್ಥಾನದವರು. ಭೌಗೋಳಿಕ ಅಂತರವಿದ್ದರೂ, ಇಬ್ಬರ ಕಥೆಗಳೂ ಒಂದೇ ರೀತಿಯಾಗಿವೆ.

ಡೋಲಿಯ ತಂದೆ ದಿನಗೂಲಿ ಕಾರ್ಮಿಕರು. ಅವಳು ಶಾಲೆಯಿಂದ ಹೊರಗುಳಿಯುವ ಅಪಾಯ ಬಹಳಷ್ಟಿತ್ತು. ಬೆಂಬಲವಿಲ್ಲದಿದ್ದರೆ ಅವಳ ವಿದ್ಯಾಭ್ಯಾಸವನ್ನು ಮುಂದುವರಿಸುವುದು ಅಸಾಧ್ಯವಾಗಿತ್ತು. ಉತ್ತಮ ಶಾಲೆಗಳಲ್ಲಿನ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೇರ ಆರ್ಥಿಕ ನೆರವು ನೀಡುವ 'ಶ್ರೇಷ್ಠ' ಯೋಜನೆಯ 'ಮೋಡ್-I' ಅಡಿಯಲ್ಲಿ, ಅವಳು ದಲ್ಹೌಸಿ ಪಬ್ಲಿಕ್ ಶಾಲೆಯಲ್ಲಿ ತನ್ನ ಪ್ರಮುಖ ವರ್ಷಗಳಲ್ಲಿ ವ್ಯಾಸಂಗವನ್ನು ಮುಂದುವರಿಸಿದಳು. ಈಗ ಅವಳು ಐಐಟಿ ದೆಹಲಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದಾಳೆ. "ಶ್ರೇಷ್ಠ ಯೋಜನೆಯು ನನಗೆ ಬೆಂಬಲ, ಪ್ರೇರಣೆ ಮತ್ತು ಮಿತಿಗಳ ನಡುವೆಯೂ ನನ್ನ ಗುರಿಗಳನ್ನು ಸಾಧಿಸುವ ಆತ್ಮವಿಶ್ವಾಸವನ್ನು ನೀಡಿತು" ಎಂದು ಅವಳು ಹೇಳುತ್ತಾಳೆ.

ಊರ್ಮಿಳಾಳ ತಂದೆ ರಾಜಸ್ಥಾನದ ಬಲರಾವ್ ಜಿಲ್ಲೆಯ ಒಂದು ಸಣ್ಣ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಅವಳಿಗೆ 'ಮೋಡ್-II' ಮೂಲಕ ಬೆಂಬಲ ದೊರೆಯಿತು. ಈ ಮಾರ್ಗವು ಉತ್ತಮ ಗುಣಮಟ್ಟದ ವಸತಿ ಶಾಲೆಗಳನ್ನು ಗುರುತಿಸಿ, ಅಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅನುದಾನ ಒದಗಿಸುತ್ತದೆ. ಅವಳು 12ನೇ ತರಗತಿಯ ಪರೀಕ್ಷೆಯಲ್ಲಿ ಶೇಕಡಾ 99.60 ಅಂಕಗಳನ್ನು ಗಳಿಸಿ, ಇಡೀ ರಾಜಸ್ಥಾನಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಇಬ್ಬರು ಬಾಲಕಿಯರು, ಎರಡು ಕುಟುಂಬಗಳು, ಒಂದೇ ಕಂದಕದ ಎರಡು ಅಂಚುಗಳು - ಆದರೆ ಒಂದೇ ಯೋಜನೆಯು ವಿಭಿನ್ನ ಹಾದಿಗಳ ಮೂಲಕ ಅವರನ್ನು ಆ ಅಂಚಿನಿಂದ ಪಾರು ಮಾಡಿದೆ. 'ಶ್ರೇಷ್ಠ' ಯೋಜನೆಯು ಅವರ ಪ್ರತಿಭೆಯನ್ನು ಕಂಡುಹಿಡಿಯಲಿಲ್ಲ, ಬದಲಾಗಿ ಆ ಪ್ರತಿಭೆಯು ಬಡತನದ ಕಾರಣದಿಂದಾಗಿ ನಂದಿಹೋಗದಂತೆ ರಕ್ಷಿಸಿತು.

ಶಾಲಾ ಮತ್ತು ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನಗಳು

ಪೂರ್ವ-ಮೆಟ್ರಿಕ್ ಮತ್ತು ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆಗಳು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶಿಕ್ಷಣದ ವಿವಿಧ ಹಂತಗಳಲ್ಲಿ ಬೆಂಬಲವನ್ನು ನೀಡುತ್ತವೆ. ಪೂರ್ವ-ಮೆಟ್ರಿಕ್ ವಿದ್ಯಾರ್ಥಿವೇತನವು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಶಾಲೆಯಲ್ಲಿ ಮುಂದುವರಿಯಲು ಸಹಾಯ ಮಾಡುತ್ತದೆ. ಇದು ಮ್ಯಾನುವಲ್ ಸ್ಕ್ಯಾವೆಂಜಿಂಗ್ (ಕೈಯಿಂದ ಮಲ ಹೊರುವ ಕೆಲಸ) ಮತ್ತು ಅಪಾಯಕಾರಿ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿರುವ ದುರ್ಬಲ ಕುಟುಂಬಗಳ ಮಕ್ಕಳಿಗೂ ಬೆಂಬಲ ನೀಡುತ್ತದೆ. ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿವೇತನವು ಶಿಕ್ಷಣದ ವೆಚ್ಚವನ್ನು ಭರಿಸುವ ಮೂಲಕ ಉನ್ನತ ಮತ್ತು ಪೋಸ್ಟ್-ಸೆಕೆಂಡರಿ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿಗಳಿಗೆ ನೆರವಾಗುತ್ತದೆ. ಈ ಎರಡೂ ಯೋಜನೆಗಳನ್ನು ಸಂಪೂರ್ಣ ಡಿಜಿಟಲ್ 'ನೇರ ಲಾಭ ವರ್ಗಾವಣೆ' ವ್ಯವಸ್ಥೆಯ ಮೂಲಕ ಜಾರಿಗೆ ತರಲಾಗುತ್ತಿದೆ.

ಇತ್ತೀಚಿನ ಪ್ರಗತಿ

  • ಪೂರ್ವ-ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆಯಡಿ, 2025–26ನೇ ಸಾಲಿನಲ್ಲಿ 359.47 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ಡಿಬಿಟಿ ಮೂಲಕ 17.14 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.
  • ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆಯ ಪ್ರಯತ್ನಗಳ ಮೂಲಕ, ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ದಾಖಲಾತಿಯು 2021–22ರಲ್ಲಿ 66.23 ಲಕ್ಷಕ್ಕೆ ತಲುಪಿದೆ, ಇದು 2014–15ರಿಂದೀಚೆಗೆ 44% ಹೆಚ್ಚಳವನ್ನು ಕಂಡಿದೆ.
  • ಪರಿಶಿಷ್ಟ ಜಾತಿಯ ಮಹಿಳಾ ವಿದ್ಯಾರ್ಥಿಗಳ ದಾಖಲಾತಿಯು 31.71 ಲಕ್ಷಕ್ಕೆ ಏರಿಕೆಯಾಗಿದ್ದು, ಇದು 2014–15ರಿಂದ 51% ಹೆಚ್ಚಳವಾಗಿದೆ.
  • ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಒಟ್ಟು ದಾಖಲಾತಿ ಅನುಪಾತವು 2014–15ರಲ್ಲಿ 18.9% ಇದ್ದದ್ದು, 2021–22ರಲ್ಲಿ 25.9%ಕ್ಕೆ ಏರಿದೆ. ಇದೇ ಅವಧಿಯಲ್ಲಿ ಪರಿಶಿಷ್ಟ ಜಾತಿಯ ಮಹಿಳಾ ವಿದ್ಯಾರ್ಥಿಗಳ ಜಿಇಆರ್) 18.1% ರಿಂದ 26%ಕ್ಕೆ ಏರಿಕೆಯಾಗಿದೆ.
  • 11 ಮತ್ತು 12ನೇ ತರಗತಿಯಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಜಿಇಆರ್ 2019–20ರಲ್ಲಿದ್ದ 52.9% ರಿಂದ 2021–22ರಲ್ಲಿ 61.5%ಕ್ಕೆ ಸುಧಾರಿಸಿದೆ.
  • ಒಟ್ಟಾರೆಯಾಗಿ, ಈ ಯೋಜನೆಗಳು ದೇಶಾದ್ಯಂತ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಲ್ಲಿ ಶಾಲಾ ಶಿಕ್ಷಣವನ್ನು ಮುಂದುವರಿಸುವಿಕೆಯನ್ನು ಹೆಚ್ಚಿಸಲು, ಉನ್ನತ ಶಿಕ್ಷಣಕ್ಕೆ ಪ್ರವೇಶವನ್ನು ವಿಸ್ತರಿಸಲು ಮತ್ತು ಶೈಕ್ಷಣಿಕ ಫಲಿತಾಂಶಗಳನ್ನು ಬಲಪಡಿಸಲು ಸಹಾಯ ಮಾಡಿದೆ.
  • 2021-22ನೇ ಸಾಲಿನಿಂದ, ಈ ಯೋಜನೆಯು ಸಂಪೂರ್ಣವಾಗಿ ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅನುದಾನವು ನೇರವಾಗಿ ಪರಿಶೀಲಿಸಲ್ಪಟ್ಟ ವಿದ್ಯಾರ್ಥಿಗಳ ಖಾತೆಗೆ ತಲುಪುತ್ತದೆ.

ಹಿಂದುಳಿದ ಮತ್ತು ಅಲೆಮಾರಿ ಸಮುದಾಯಗಳ ಉನ್ನತಿ

ಇತರ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳು ಮತ್ತು ಅಧಿಸೂಚಿತವಲ್ಲದ ಮತ್ತು ಅಲೆಮಾರಿ ಬುಡಕಟ್ಟು ಜನಾಂಗದವರು ದಶಕಗಳಿಂದಲೂ ಅಭಿವೃದ್ಧಿಯ ಮುಖ್ಯವಾಹಿನಿಯಿಂದ ಹೊರಗುಳಿದಿದ್ದರು. ಕಳೆದ 12 ವರ್ಷಗಳಲ್ಲಿ ಈ ಪರಿಸ್ಥಿತಿ ಬದಲಾಗಿದೆ. ವಿದ್ಯಾರ್ಥಿವೇತನ, ಕೌಶಲ್ಯ ತರಬೇತಿ, ಜೀವನೋಪಾಯ ಮತ್ತು ಕಾನೂನುಬದ್ಧ ಗುರುತಿನ ದಾಖಲೆಗಳು ಅತ್ಯಂತ ಹೆಚ್ಚು ಕಾಯುತ್ತಿದ್ದ ಸಮುದಾಯಗಳನ್ನು ತಲುಪಿವೆ.

ಪಿಎಂ-ಯಶಸ್ವಿ – ವೈಬ್ರೆಂಟ್ ಇಂಡಿಯಾಕ್ಕಾಗಿ ಪ್ರಧಾನ ಮಂತ್ರಿ ಯುವ ಸಾಧಕರ ವಿದ್ಯಾರ್ಥಿವೇತನ ಯೋಜನೆ

2021–22ರಲ್ಲಿ ಪ್ರಾರಂಭಿಸಲಾದ ಪಿಎಂ-ಯಶಸ್ವಿ ಯೋಜನೆಯು ಐದು ಘಟಕಗಳ ಮೂಲಕ ಒಬಿಸಿ, ಇಬಿಸಿ ಮತ್ತು ಡಿಎನ್‌ಟಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತದೆ: ಪೂರ್ವ-ಮೆಟ್ರಿಕ್ ವಿದ್ಯಾರ್ಥಿವೇತನ, ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿವೇತನ, ಉನ್ನತ ದರ್ಜೆಯ ಶಾಲಾ ಶಿಕ್ಷಣ, ಉನ್ನತ ದರ್ಜೆಯ ಕಾಲೇಜು ಶಿಕ್ಷಣ ಮತ್ತು ಒಬಿಸಿ ವಿದ್ಯಾರ್ಥಿನಿಲಯಗಳು. ಎಲ್ಲಾ ಪ್ರಯೋಜನಗಳನ್ನು ನೇರವಾಗಿ [ಆಧಾರ್-ಸೀಡೆಡ್] ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಎಲ್ಲಾ ಘಟಕಗಳಲ್ಲಿ ಕನಿಷ್ಠ 30% ಸ್ಥಾನಗಳನ್ನು ಬಾಲಕಿಯರಿಗಾಗಿ ಮೀಸಲಿಡಲಾಗಿದೆ.

A screenshot of a computer screenAI-generated content may be incorrect.

ಪ್ರಧಾನ ಮಂತ್ರಿ ದಕ್ಷತಾ ಔರ್ ಕುಶಲತಾ ಸಂಪನ್ನ ಹಿತಗ್ರಾಹಿ ಯೋಜನೆ  (ಪಿಎಂ ದಕ್ಷ್)

2020-21ರಲ್ಲಿ ಪ್ರಾರಂಭಿಸಲಾದ ಪಿಎಂ-ದಕ್ಷ್ ಯೋಜನೆಯು ಅಂಚಿನಲ್ಲಿರುವ ಸಮುದಾಯಗಳಿಗೆ ಉಚಿತ ಮತ್ತು ಪ್ರಮಾಣೀಕೃತ ಕೌಶಲ್ಯ ತರಬೇತಿಯನ್ನು ನೀಡುತ್ತದೆ. ಈ ಯೋಜನೆಯು ಅವರನ್ನು ನೇರವಾಗಿ ವೇತನ ಸಹಿತ ಉದ್ಯೋಗ ಮತ್ತು ಸ್ವಯಂ ಉದ್ಯೋಗದೊಂದಿಗೆ ಸಂಪರ್ಕಿಸುತ್ತದೆ.

ಯಾರಿಗೆ ಅನ್ವಯಿಸುತ್ತದೆ:

  • ಪರಿಶಿಷ್ಟ ಜಾತಿಗಳು — ಯಾವುದೇ ಆದಾಯದ ಮಿತಿಯಿಲ್ಲ
  • ಇತರೆ ಹಿಂದುಳಿದ ವರ್ಗಗಳು— ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂಪಾಯಿವರೆಗೆ
  • ಆರ್ಥಿಕವಾಗಿ ಹಿಂದುಳಿದ ವರ್ಗಗಳು — ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ರೂಪಾಯಿವರೆಗೆ
  • ಅಧಿಸೂಚಿತವಲ್ಲದ ಮತ್ತು ಅಲೆಮಾರಿ ಬುಡಕಟ್ಟು ಜನಾಂಗದವರು — ಯಾವುದೇ ಆದಾಯದ ಮಿತಿಯಿಲ್ಲ
  • ಸ್ವಚ್ಛತಾ ಕಾರ್ಯಕರ್ತರು ಮತ್ತು ತ್ಯಾಜ್ಯ ಆಯುವವರು — ಯಾವುದೇ ಆದಾಯದ ಮಿತಿಯಿಲ್ಲ

ಪಿಎಂ-ದಕ್ಷ್ ಯೋಜನೆಯು ಪ್ರಾರಂಭವಾದಾಗಿನಿಂದ 2.08 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿದೆ.

ವಂಚಿತ ಇಕಾಯಿ ಸಮೂಹ ಔರ್ ವರ್ಗೋನ್ ಕೋ ಆರ್ಥಿಕ ಸಹಾಯತಾ (ವಿಶ್ವಾಸ್) ಯೋಜನೆ

ವಿಶ್ವಾಸ್ ಯೋಜನೆಯು ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗಗಳು ಮತ್ತು ಸಫಾಯಿ ಕರ್ಮಚಾರಿಗಳಿಗೆ ಆದಾಯ ಗಳಿಸುವ ಚಟುವಟಿಕೆಗಳಿಗಾಗಿ ಕೈಗೆಟುಕುವ ದರದಲ್ಲಿ ಸಾಲವನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಯೋಜನೆಯು ಅರ್ಹ ಸಾಲಗಳ ಮೇಲೆ ವಾರ್ಷಿಕ ಶೇಕಡಾ 5ರಷ್ಟು ಬಡ್ಡಿ ಸಹಾಯಧನವನ್ನು ನೀಡುತ್ತದೆ ಮತ್ತು ಇದರ ಪ್ರಯೋಜನಗಳನ್ನು ನೇರ ಲಾಭ ವರ್ಗಾವಣೆ ಮೂಲಕ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ. ಸಾಲದ ವೆಚ್ಚವನ್ನು ಕಡಿಮೆ ಮಾಡುವ ಮೂಲಕ, ಇದು ಉದ್ಯಮಶೀಲತೆ, ಸ್ವಯಂ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುತ್ತದೆ.

ಪ್ರಮುಖ ಸಾಧನೆಗಳು (2024-25 ಮತ್ತು 2025-26):

A diagram of a creditAI-generated content may be incorrect.

ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಆರ್ಥಿಕ ಸಬಲೀಕರಣ ಯೋಜನೆ (ಸೀಡ್)

ಫೆಬ್ರವರಿ 2022ರಲ್ಲಿ ಪ್ರಾರಂಭಿಸಲಾದ 'ಸೀಡ್', ಅಧಿಸೂಚಿತವಲ್ಲದ, ಅಲೆಮಾರಿ ಮತ್ತು ಅರೆ-ಅಲೆಮಾರಿ ಬುಡಕಟ್ಟು ಜನಾಂಗದವರ  ಕಲ್ಯಾಣಕ್ಕಾಗಿ ಮೀಸಲಾಗಿರುವ ವಿಶೇಷ ಯೋಜನೆಯಾಗಿದೆ. ಈ ಯೋಜನೆಯು ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಬೆಂಬಲವನ್ನು ನೀಡುತ್ತದೆ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ಆರೋಗ್ಯ ವಿಮೆ, ಸಮುದಾಯ ಮಟ್ಟದ ಜೀವನೋಪಾಯದ ಉಪಕ್ರಮಗಳು ಮತ್ತು ವಸತಿಗಾಗಿ ಆರ್ಥಿಕ ನೆರವು.

ಕೇವಲ 2025-26ನೇ ಸಾಲಿನಲ್ಲಿಯೇ, 4,485 ಡಿಎನ್‌ಟಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು 26.75 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೇ ಅವಧಿಯಲ್ಲಿ, ತಳಮಟ್ಟದಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸಲು 64,701 ವ್ಯಕ್ತಿಗಳಿಗೆ ಅವರ ಜೀವನೋಪಾಯಕ್ಕಾಗಿ 16 ಕೋಟಿ ರೂಪಾಯಿಗಳನ್ನು ನೇರವಾಗಿ ತಲುಪಿಸಲಾಗಿದೆ. ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣದೊಂದಿಗೆ, ಸರ್ಕಾರವು ಸಾಮಾಜಿಕ ಭದ್ರತೆಗೂ ಆದ್ಯತೆ ನೀಡಿದೆ. 2025-26ರಲ್ಲಿಯೇ, 73,569 ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಕಾರ್ಡ್‌ಗಳನ್ನು ಡಿಎನ್‌ಟಿ ಕುಟುಂಬಗಳಿಗೆ ವಿತರಿಸಲಾಗಿದೆ, ಇದರಿಂದ ಅವರಿಗೆ ತುರ್ತು ಸಮಯದಲ್ಲಿ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡಲಾಗಿದೆ.

ಅಲ್ಪಸಂಖ್ಯಾತ ಸಮುದಾಯಗಳ ಸಬಲೀಕರಣ

ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್  (ಪಿಎಂ ವಿಕಾಸ್)

2025ರಲ್ಲಿ ಪ್ರಾರಂಭಿಸಲಾದ 'ಪಿಎಂ ವಿಕಾಸ್' ಯೋಜನೆಯು ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಅಗತ್ಯಗಳಿಗೆ ಪೂರಕವಾಗಿ ಒಂದು ರಚನಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತದೆ. 'ಸೀಖೋ ಔರ್ ಕಮಾವೊ', 'ಉಸ್ತಾದ್', 'ಹಮಾರಿ ಧರೋಹರ್', 'ನಯಿ ರೋಶನಿ' ಮತ್ತು 'ನಯಿ ಮಂಜಿಲ್' ಎಂಬ ಐದು ಅಸ್ತಿತ್ವದಲ್ಲಿದ್ದ ಯೋಜನೆಗಳನ್ನು ಈಗ ಒಂದೇ ಸಂಘಟಿತ ಚೌಕಟ್ಟಿನಡಿ ತರಲಾಗಿದೆ.

ಪಿಎಂ ವಿಕಾಸ್‌ನ ಪ್ರಮುಖ ಗಮನವು ಉದ್ಯಮ-ಆಧಾರಿತ ಕೌಶಲ್ಯ ಅಭಿವೃದ್ಧಿಯ ಮೇಲಿದ್ದು, ತರಬೇತಿಯು ಪ್ರಸ್ತುತ ಮಾರುಕಟ್ಟೆಯ ಬೇಡಿಕೆ ಮತ್ತು ಉದ್ಯೋಗಾವಕಾಶಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ. ಏರ್‌ಲೈನ್ ಕ್ಯಾಬಿನ್ ಕ್ರೂ, ತೋಟಗಾರಿಕೆ ಮತ್ತು ನರ್ಸರಿ ನಿರ್ವಹಣೆ, ಸಾಂಪ್ರದಾಯಿಕ ಕೈ ಕಸೂತಿ, ಗ್ರಾಫಿಕ್ ಡಿಸೈನ್, ಎಲೆಕ್ಟ್ರಿಷಿಯನ್ ಮತ್ತು ಜೂನಿಯರ್ ಇಂಜಿನಿಯರ್-ಡ್ರೋನ್ ಸೇರಿದಂತೆ ವೈವಿಧ್ಯಮಯ ಉದ್ಯೋಗ ಪಾತ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಕೌಶಲ್ಯ ಅಭಿವೃದ್ಧಿಯನ್ನು ಉದ್ಯಮಶೀಲತೆ, ನಾಯಕತ್ವ ಮತ್ತು ಸಾಂಸ್ಕೃತಿಕ ಸಂರಕ್ಷಣೆಯೊಂದಿಗೆ ಸಂಯೋಜಿಸುವ ಮೂಲಕ, ಈ ಯೋಜನೆಯು ಅಲ್ಪಸಂಖ್ಯಾತ ಸಮುದಾಯಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ.

ಪ್ರಗತಿ (10 ಜೂನ್ 2026ರಂತೆ):

  • 73,200 ಅಭ್ಯರ್ಥಿಗಳು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
  • 31 ತರಬೇತಿ ಪಾಲುದಾರರು ಮತ್ತು 353 ತರಬೇತಿ ಕೇಂದ್ರಗಳ ಮೂಲಕ 12,429 ಅಭ್ಯರ್ಥಿಗಳಿಗೆ ವಿವಿಧ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗಿದೆ.
  • ಒಟ್ಟು 2,557 ಬ್ಯಾಚ್‌ಗಳಲ್ಲಿ ಏರ್‌ಲೈನ್ ಕ್ಯಾಬಿನ್ ಕ್ರೂ, ಮಲ್ಟಿ-ಸ್ಕಿಲ್ ಟೆಕ್ನಿಷಿಯನ್, ಸಾಂಪ್ರದಾಯಿಕ ಕೈ ಕಸೂತಿ ಮುಂತಾದ ಉದ್ಯೋಗ ಪಾತ್ರಗಳಲ್ಲಿ 1,405 ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗಿದೆ.
  • ನಿರ್ವಹಣೆ (ಮ್ಯಾನೇಜ್‌ಮೆಂಟ್), ಮಾಧ್ಯಮ ಮತ್ತು ಮನರಂಜನೆ, ಆರೋಗ್ಯ ಸೇವೆ, ಕೃಷಿ ಮತ್ತು ಇತರ ಕ್ಷೇತ್ರಗಳಲ್ಲಿ ನೋಂದಣಿ ನಡೆಯುತ್ತಿದೆ.

ಸ್ವಚ್ಛತಾ ಕಾರ್ಯಕರ್ತರಿಗೆ ಘನತೆಯನ್ನು ಮರಳಿ ತರುವುದು

A screenshot of a diagramAI-generated content may be incorrect.

ಸ್ವಚ್ಛತಾ ಕಾರ್ಯಕರ್ತರಿಗೆ ಘನತೆಯನ್ನು ಮರಳಿ ತರುವುದು

ಸ್ವಚ್ಛತಾ ಕಾರ್ಯಕರ್ತರು ಭಾರತದ ನಗರಗಳನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಆದರೆ ಅನೇಕ ಬಾರಿ ತಮ್ಮ ಆರೋಗ್ಯ, ಸುರಕ್ಷತೆ ಮತ್ತು ಘನತೆಯನ್ನು ಪಣಕ್ಕಿಟ್ಟು ಈ ಕೆಲಸವನ್ನು ಮಾಡಿದ್ದಾರೆ. ಇದನ್ನು ಬದಲಾಯಿಸಲು 2023-24ನೇ ಆರ್ಥಿಕ ವರ್ಷದಲ್ಲಿ 'ನಮಸ್ತೆ' ಯೋಜನೆಯನ್ನು ಪ್ರಾರಂಭಿಸಲಾಯಿತು. ಇದು ಅಪಾಯಕಾರಿ ಕೈಯಿಂದ ಸ್ವಚ್ಛಗೊಳಿಸುವ ಪದ್ಧತಿಯನ್ನು ಯಾಂತ್ರೀಕೃತ ವ್ಯವಸ್ಥೆಗಳೊಂದಿಗೆ ಬದಲಾಯಿಸುವ ಮತ್ತು ಘನತೆ ಹಾಗೂ ಸುರಕ್ಷತೆಯೊಂದಿಗೆ ಜೀವನೋಪಾಯವನ್ನು ನಿರ್ಮಿಸುವ ಒಂದು ರಚನಾತ್ಮಕ ಸುಧಾರಣೆಯಾಗಿದೆ.

ಈ ಯೋಜನೆಯು ಮೂಲತಃ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕೆಲಸಗಾರರನ್ನು ಒಳಗೊಂಡಿತ್ತು. ಆದರೆ, 2024ರ ಜೂನ್‌ನಿಂದ, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ತ್ಯಾಜ್ಯ ಆಯುವವರನ್ನು ಸಹ ಈ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ.

ಆಕಾಂಕ್ಷಾ ಜಿಲ್ಲೆಗಳ ಕಾರ್ಯಕ್ರಮ — ಕಟ್ಟಕಡೆಯ ವ್ಯಕ್ತಿಗೂ ಆಡಳಿತ

'ಆಕಾಂಕ್ಷಾ ಜಿಲ್ಲೆಗಳ ಕಾರ್ಯಕ್ರಮ'ವನ್ನು ಸರ್ಕಾರವು ಒಂದು ಸರಳ ನಂಬಿಕೆಯ ಮೇಲೆ ರೂಪಿಸಿದೆ - ಭೌಗೋಳಿಕತೆಯು ಯಾರಿಗೂ ವಿಧಿಯನ್ನು ನಿರ್ಧರಿಸಬಾರದು. 2018ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು ಆರೋಗ್ಯ, ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ಆರ್ಥಿಕ ಅಂತರ್ಗತೀಕರಣದಲ್ಲಿ ಭಾರತದ ಅತ್ಯಂತ ಹಿಂದುಳಿದ 112 ಜಿಲ್ಲೆಗಳನ್ನು ಗುರಿಯಾಗಿಟ್ಟುಕೊಂಡಿತ್ತು. 2023ರಲ್ಲಿ, 'ಆಕಾಂಕ್ಷಾ ಬ್ಲಾಕ್‌ಗಳ ಕಾರ್ಯಕ್ರಮ'ದೊಂದಿಗೆ ಇದು ಮತ್ತಷ್ಟು ವಿಸ್ತಾರಗೊಂಡಿದ್ದು, 329 ಜಿಲ್ಲೆಗಳ 500 ಬ್ಲಾಕ್‌ಗಳನ್ನು ತಲುಪಿದೆ.

ಇದರ ಫಲಿತಾಂಶಗಳು ಸ್ಥಳೀಯವಾಗಿ, ನಿರ್ದಿಷ್ಟವಾಗಿ ಮತ್ತು ಅಳೆಯಬಹುದಾದ ರೀತಿಯಲ್ಲಿ ಕಂಡುಬಂದಿವೆ. ಪ್ರತಿ ಜಿಲ್ಲೆಯೂ ತಮಗೆ ಎದುರಾದ ಪ್ರಮುಖ ಅಡೆತಡೆಗಳನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಪರಿಹಾರಗಳನ್ನು ರೂಪಿಸಿಕೊಂಡಿವೆ.

ಆಕಾಂಕ್ಷಾ ಜಿಲ್ಲೆಗಳ ಕಾರ್ಯಕ್ರಮ — ಕಟ್ಟಕಡೆಯ ವ್ಯಕ್ತಿಗೂ ಆಡಳಿತ

ಅಸ್ಸಾಂನ ಪ್ರವಾಹ ಪೀಡಿತ ಲಖಿಪುರದಲ್ಲಿ, ವಿಶಾಲವಾದ ನದಿ ತೀರದ ಪ್ರದೇಶಗಳು ವರ್ಷಗಳ ಕಾಲ ಸಮುದಾಯಗಳನ್ನು ಆರೋಗ್ಯ ಸೇವೆಯಿಂದ ದೂರವಿರಿಸಿದ್ದವು. ಈ ಸಮಸ್ಯೆಯನ್ನು ನಿವಾರಿಸಲು, ಅಲ್ಲಿನ ಆಡಳಿತವು ಏಪ್ರಿಲ್ 2023 ರಿಂದ ಡಿಸೆಂಬರ್ 2024ರ ಅವಧಿಯಲ್ಲಿ 1,176 ಸ್ಥಳಗಳಲ್ಲಿ 'ಮೊಬೈಲ್ ಮೆಡಿಕಲ್ ಯೂನಿಟ್' (ಚಲನಶೀಲ ವೈದ್ಯಕೀಯ ಘಟಕ) ಮತ್ತು ಬೋಟ್ ಕ್ಯಾಂಪ್‌ಗಳನ್ನು ನಿಯೋಜಿಸಿತು. ಇದರ ಪರಿಣಾಮವಾಗಿ, 25,308 ಮಂದಿ ಗುರಿ ಜನಸಂಖ್ಯೆಯಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ತಪಾಸಣೆ 100% ಪೂರ್ಣಗೊಂಡಿತು.

ತಮಿಳುನಾಡಿನ ವಿರುದುನಗರದಲ್ಲಿ, ಕಳಪೆ ಸಮನ್ವಯ ಮತ್ತು ಅಪಾಯಕಾರಿ ಗರ್ಭಧಾರಣೆಯ ಮೇಲ್ವಿಚಾರಣೆಯ ಕೊರತೆಯು ತಾಯಂದಿರ ಮರಣಕ್ಕೆ ದೀರ್ಘಕಾಲದಿಂದ ಕಾರಣವಾಗಿತ್ತು. ಇದನ್ನು ಸರಿಪಡಿಸಲು, ಆ ಜಿಲ್ಲೆಯು 'ವಿರುಕೇರ್' (Virucare) ಎಂಬ ವಿಶೇಷ ಡಿಜಿಟಲ್ ಪೋರ್ಟಲ್ ಅನ್ನು ನಿರ್ಮಿಸಿತು. ಇದು ನೈಜ-ಸಮಯದ ಗರ್ಭಪೂರ್ವ ಮೇಲ್ವಿಚಾರಣೆಯನ್ನು ರಕ್ತಹೀನತೆಯಿಂದ ಬಳಲುತ್ತಿರುವ ತಾಯಂದಿರಿಗೆ ನೀಡುವ ಉದ್ದೇಶಿತ ಪೌಷ್ಟಿಕಾಂಶದ ಬೆಂಬಲದೊಂದಿಗೆ ಜೋಡಿಸಿತು. ಇದರ ಫಲವಾಗಿ, ಏಪ್ರಿಲ್ 2023 ರಿಂದ ಮಾರ್ಚ್ 2024ರ ನಡುವೆ ಜಿಲ್ಲೆಯಲ್ಲಿ ಶೂನ್ಯ ತಾಯಂದಿರ ಮರಣ ದಾಖಲಾಗಿದೆ.

ಆಕಾಂಕ್ಷಾ ಜಿಲ್ಲೆಗಳು ಮತ್ತು ಬ್ಲಾಕ್‌ಗಳ ಕಾರ್ಯಕ್ರಮವು, ತಳಮಟ್ಟದಲ್ಲಿ ಸರಿಯಾದ ವ್ಯವಸ್ಥೆಗಳು, ಜವಾಬ್ದಾರಿಯುತ ರಚನೆಗಳು ಮತ್ತು ಸಮರ್ಥ ಜನರನ್ನು ನಿಯೋಜಿಸಿದಾಗ, ಭಾರತದ ಅತ್ಯಂತ ಸಂಕೀರ್ಣವಾದ ಅಭಿವೃದ್ಧಿ ಸವಾಲುಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಸಾಬೀತುಪಡಿಸಿದೆ.

ಸಮಾನತೆಯ ಕಡೆಗಿನ ನಿರಂತರ ಪಯಣ

2014ಕ್ಕೂ ಮೊದಲು, ಸಾರ್ವಜನಿಕ ನೀತಿಗಳು ಮತ್ತು ಭಾರತದ ಅತ್ಯಂತ ಹಿಂದುಳಿದ ಸಮುದಾಯಗಳ ನಡುವೆ ದೊಡ್ಡ ಕಂದಕವಿತ್ತು. ಕಲ್ಯಾಣ ಯೋಜನೆಗಳು ಕಾಗದದ ಮೇಲೆ ಅಸ್ತಿತ್ವದಲ್ಲಿದ್ದರೂ, ಅವುಗಳ ಅನುಷ್ಠಾನವು ಅಸಮತೋಲನದಿಂದ ಕೂಡಿತ್ತು ಮತ್ತು ಸಾರ್ವಜನಿಕರಿಗೆ ಅವುಗಳ ಲಭ್ಯತೆಯು ಸೀಮಿತವಾಗಿತ್ತು. ಆದಿವಾಸಿ ಸಮುದಾಯಗಳು, ಪರಿಶಿಷ್ಟ ಜಾತಿಗಳು, ಇತರ ಹಿಂದುಳಿದ ವರ್ಗಗಳು, ಅಲೆಮಾರಿ ಗುಂಪುಗಳು ಮತ್ತು ಅಲ್ಪಸಂಖ್ಯಾತರ ಬಹುದೊಡ್ಡ ಭಾಗವು ಸಾಂಸ್ಥಿಕ ಅಭಿವೃದ್ಧಿಯ ವ್ಯಾಪ್ತಿಯಿಂದ ಹೊರಗುಳಿದಿದ್ದವು.

ತದನಂತರದ ವರ್ಷಗಳಲ್ಲಿ ಈ ಅಂತರವನ್ನು ಕಡಿಮೆ ಮಾಡಲು ಸಮನ್ವಯದ ಪ್ರಯತ್ನಗಳನ್ನು ಮಾಡಲಾಯಿತು. ಸರ್ಕಾರವು ಕೇವಲ ಒಂದೇ ಉಪಕ್ರಮವನ್ನು ಅವಲಂಬಿಸುವ ಬದಲು, ವಿವಿಧ ಸಮುದಾಯಗಳು ಎದುರಿಸುತ್ತಿರುವ ವಿಶಿಷ್ಟ ಸವಾಲುಗಳನ್ನು ಪರಿಹರಿಸಲು ಗುರಿ-ಆಧಾರಿತ ಮಧ್ಯಸ್ಥಿಕೆಗಳ ಒಂದು ವಿಶಾಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿತು. ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಜೀವನೋಪಾಯ, ಆರ್ಥಿಕ ಅಂತರ್ಗತೀಕರಣ, ಗುರುತು, ಮೂಲಸೌಕರ್ಯ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ಸಾಮಾಜಿಕ ಘನತೆಯನ್ನು ಸಮಗ್ರವಾಗಿ ಕೈಗೆತ್ತಿಕೊಳ್ಳಲಾಯಿತು.

ಹಿಂದುಳಿದ ಸಮುದಾಯಗಳಲ್ಲಿ ಇದರ ಪ್ರಭಾವವು ಇಂದು ದೇಶಾದ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿದೆ—ವಿಶ್ವವಿದ್ಯಾಲಯಗಳನ್ನು ಪ್ರವೇಶಿಸಿ ಪಿಎಚ್‌ಡಿ ಪಡೆಯುತ್ತಿರುವ ಎಸ್‌ಟಿ ವಿದ್ಯಾರ್ಥಿಗಳಲ್ಲಿ, ಸ್ವಂತ ಉದ್ಯಮಗಳನ್ನು ಕಟ್ಟುತ್ತಿರುವ ಎಸ್‌ಸಿ ಉದ್ಯಮಿಗಳಲ್ಲಿ, ರಸ್ತೆ ಮತ್ತು ವಿದ್ಯುತ್ ಸಂಪರ್ಕ ಪಡೆದ ಹಳ್ಳಿಗಳಲ್ಲಿ ಮತ್ತು ತಮ್ಮ ಮನೆಗಳಿಂದಲೇ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸಿಕೊಳ್ಳುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಲ್ಲಿ ಈ ಬದಲಾವಣೆಯನ್ನು ಕಾಣಬಹುದು.

ಪ್ರಗತಿಯು ಸ್ಥಿರವಾಗಿದೆ ಮತ್ತು ಹೆಚ್ಚು ಅಂತರ್ಗತ ಅಭಿವೃದ್ಧಿಗೆ ಬುನಾದಿಯು ಬಲವಾಗಿ ಹಾಕಲ್ಪಟ್ಟಿದೆ. ಇಂದು, ಭಾರತದ ಹಿಂದುಳಿದ ಸಮುದಾಯಗಳನ್ನು ರಾಷ್ಟ್ರದ ಬೆಳವಣಿಗೆಯ ಕಥೆಯಲ್ಲಿ ಅಂಚಿನ ಜನರೆಂದು ನೋಡಲಾಗುತ್ತಿಲ್ಲ. ಅವರು ಆ ಬೆಳವಣಿಗೆಯ ಕೇಂದ್ರಬಿಂದುವಾಗಿದ್ದಾರೆ. 'ವಿಕಸಿತ ಭಾರತ@2047' ಪರಿಕಲ್ಪನೆಯಲ್ಲಿ ತಾವೂ ಭಾಗವಾಗಿದ್ದೇವೆ ಎಂಬ ಭಾವನೆ ಅವರಲ್ಲಿದೆ.

References

Press Information Bureau

https://www.pib.gov.in/PressReleasePage.aspx?PRID=2236972&reg=3&lang=1

https://www.pib.gov.in/PressReleasePage.aspx?PRID=2248357&reg=3&lang=2

https://www.pib.gov.in/PressNoteDetails.aspx?NoteId=154915&ModuleId=3&reg=3&lang=2

https://www.pib.gov.in/PressReleasePage.aspx?PRID=2238355&reg=3&lang=2

https://www.pib.gov.in/PressReleasePage.aspx?PRID=2238355&reg=3&lang=2

https://www.pib.gov.in/PressReleasePage.aspx?PRID=2189515&reg=3&lang=2

https://www.pib.gov.in/PressReleseDetailm.aspx?PRID=2159087&reg=3&lang=2

https://www.pib.gov.in/PressNoteDetails.aspx?id=154377&NoteId=154377&ModuleId=3&reg=3&lang=2

https://www.pib.gov.in/PressReleasePage.aspx?PRID=1784229&reg=3&lang=2

https://www.pib.gov.in/PressReleasePage.aspx?PRID=2209488&reg=3&lang=2

https://www.pib.gov.in/PressReleseDetailm.aspx?PRID=2247766&reg=3&lang=2

https://www.pib.gov.in/PressReleasePage.aspx?PRID=2253348&reg=3&lang=2

https://www.pib.gov.in/PressReleasePage.aspx?PRID=2146466&reg=3&lang=2

https://www.pib.gov.in/PressReleasePage.aspx?PRID=2255017&reg=3&lang=1

Ministry of Tribal Affairs

https://tribal.nic.in/downloads/pm-janman/pm/index.html

https://nests.tribal.gov.in/

https://nests.tribal.gov.in/backend/web/dashboard/index

https://tribal.nic.in/downloads/Statistics/AnnualReport/AnnualReport2014-15.pdf

Parliament Questions

https://sansad.in/getFile/loksabhaquestions/annex/187/AU6227_bkLVA3.pdf?source=pqals

https://sansad.in/getFile/annex/270/AU3814_fWJmb3.pdf?source=pqars

Ministry of Social Justice

https://pmagy.gov.in/

https://e-utthaan.gov.in/home/eyJpdiI6IlJsWkJzNDdDcjU5Q3YxMmYvTzZyZnc9PSIsInZhbHVlIjoiTHFaNmtaTlJZOWJpcERPTUsrRXJIak9DQ1pOcmpHcHQ0Z0lsVWNFeDBPQT0iLCJtYWMiOiI5NWI5ZWEwNGNmZDkyNmNlN2FlMDI5MGE1YWVjYWEwZTczMmUxMDI0YzQwNDg0OWFkNzdiYTdhMzFmZWFiYzJjIiwidGFnIjoiIn0=

https://socialjustice.gov.in/writereaddata/UploadFile/71441776233188.pdf

https://visvas.dosje.gov.in/visvas/home

Others

https://pmvikas.minorityaffairs.gov.in/page/about-us

https://app.powerbi.com/view?r=eyJrIjoiZTgxY2RjNTktMTNkZi00NjlmLTkyZGYtMDViNTRlZWVkZDhkIiwidCI6IjcyNGI4ZWQxLTgxODMtNGNiOS1iNWIwLTFlZDY3YWZlYWNmMSIsImMiOjEwfQ%3D%3D

https://www.niti.gov.in/sites/default/files/2025-08/stories-of-chnage-aspirational-districts-and-blocks.pdf

Click here to see pdf 

 

*****

 

(Explainer ID: 158890) आगंतुक पटल : 31
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Assamese , Gujarati , Telugu , Malayalam