• Sitemap
  • Advance Search
Social Welfare

ಪಿಎಂ ಸ್ವನಿಧಿ: ಬದುಕುಳಿಯುವಿಕೆಯಿಂದ ಸ್ವಾವಲಂಬನೆಯತ್ತ

Posted On: 30 MAY 2026 12:05PM

ಭಾರತದ ಅನೌಪಚಾರಿಕ ನಗರ ಆರ್ಥಿಕತೆಯಲ್ಲಿ  ಕೆಲಸ ಮಾಡುವ ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ನೀಡುವಲ್ಲಿ 'ಪಿಎಂ ಸ್ವನಿಧಿ' ಒಂದು ಪ್ರಮುಖ ಯೋಜನೆಯಾಗಿ ಹೊರಹೊಮ್ಮಿದೆ. ಯಾವುದೇ ಗ್ಯಾರಂಟಿ ಇಲ್ಲದೆ ಸಾಲಗಳನ್ನು ಒದಗಿಸುವುದರ ಜೊತೆಗೆ, ಈ ಯೋಜನೆಯು ಡಿಜಿಟಲ್ ವಹಿವಾಟು ಅಳವಡಿಕೆಯನ್ನು ಉತ್ತೇಜಿಸಿದೆ, ಸಾಂಸ್ಥಿಕ ಸಾಲದ ಲಭ್ಯತೆಯನ್ನು ಸುಧಾರಿಸಿದೆ ಮತ್ತು ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸಿದೆ. 2020 ರಲ್ಲಿ ಇದು ಪ್ರಾರಂಭವಾದಾಗಿನಿಂದ, ಇದುವರೆಗೆ 1.12 ಕೋಟಿಗೂ ಹೆಚ್ಚು ಸಾಲಗಳನ್ನು ವಿತರಿಸಲಾಗಿದೆ. ಈ ಉಪಕ್ರಮದಿಂದ ನಗರ ಮತ್ತು ಪಟ್ಟಣಗಳ 75 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಯೋಜನೆಯಡಿ ₹17,800 ಕೋಟಿಗೂ ಹೆಚ್ಚು ಮೌಲ್ಯದ ಸಾಲಗಳನ್ನು ಒದಗಿಸಲಾಗಿದೆ. ಇದರ ಪ್ರಭಾವವು ಕೇವಲ ಅಧಿಕೃತ ಅಂಕಿ-ಅಂಶಗಳಲ್ಲಿ ಮಾತ್ರವಲ್ಲದೆ, ಬಲಿಷ್ಠ ಮತ್ತು ಹೆಚ್ಚು ಸುಸ್ಥಿರ ಜೀವನೋಪಾಯವನ್ನು ಕಂಡುಕೊಳ್ಳುತ್ತಿರುವ ಬೀದಿ ಬದಿ ವ್ಯಾಪಾರಿಗಳ ದೈನಂದಿನ ಜೀವನದ ಯಶೋಗಾಥೆಯಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಭಾರತದ ಬೀದಿ ಬದಿ ವ್ಯಾಪಾರಿಗಳ ಬದಲಾಗುತ್ತಿರುವ ಜೀವನದ ಕಥೆ

ಕಿಕ್ಕಿರಿದ ಮಾರುಕಟ್ಟೆಯಲ್ಲಿರುವ ತರಕಾರಿ ಮಾರಾಟಗಾರ ಮತ್ತು ಬ್ಯುಸಿ ಕಚೇರಿಯ ಹೊರಗಿರುವ ಚಹಾ ವ್ಯಾಪಾರಿ ಭಾರತದ ನಗರಗಳಲ್ಲಿ ಪರಿಚಿತ ದೃಶ್ಯಗಳಾಗಿವೆ. ಗಲ್ಲಿಗಳಲ್ಲಿ ಸಂಚರಿಸುವ ಹಣ್ಣಿನ ಗಾಡಿಯ ಮಾಲೀಕರು ಮತ್ತು ರಸ್ತೆಬದಿಯ ಪಾದಚಾರಿ ಮಾರ್ಗದಲ್ಲಿ ಪಾದರಕ್ಷೆಗಳನ್ನು ದುರಸ್ತಿ ಮಾಡುವ ಚಮ್ಮಾರರು ಸಹ ದೈನಂದಿನ ನಗರ ಜೀವನಕ್ಕೆ ಅಷ್ಟೇ ಅತ್ಯಗತ್ಯವಾಗಿದ್ದಾರೆ. ಒಟ್ಟಾಗಿ, ಈ ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳು ಭಾರತದ ನಗರ ಆರ್ಥಿಕತೆಯನ್ನು ಪ್ರತಿದಿನ ಚಲನೆಯಲ್ಲಿಡುತ್ತಾರೆ. ಅವರು ಕೈಗೆಟುಕುವ ದರದಲ್ಲಿ ಸರಕುಗಳನ್ನು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವುದರ ಜೊತೆಗೆ ಸ್ಥಳೀಯ ಮಾರುಕಟ್ಟೆಗಳು ಮತ್ತು ನೆರೆಹೊರೆಯ ಪೂರೈಕೆ ಸರಪಳಿಗಳನ್ನು ಉಳಿಸಿಕೊಳ್ಳುತ್ತಾರೆ. ಆದಾಗ್ಯೂ, ಅವರು ಸಾಂಸ್ಥಿಕ ಸಾಲದ ಸೌಲಭ್ಯಕ್ಕೆ ಸೀಮಿತ ಪ್ರವೇಶವನ್ನು ಹೊಂದಿದ್ದರು, ಇದು ಅನೇಕ ವ್ಯಾಪಾರಿಗಳನ್ನು ಅತಿ ಹೆಚ್ಚಿನ ಬಡ್ಡಿದರಗಳಲ್ಲಿ ಅನೌಪಚಾರಿಕ ಸಾಲದ ಮೇಲೆ ಅವಲಂಬಿತರಾಗುವಂತೆ ಮಾಡಿತು. ಅವರ ಸವಾಲುಗಳನ್ನು ಪರಿಹರಿಸಲು, ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ ಯೋಜನೆಯನ್ನು ಜೂನ್ 2020 ರಲ್ಲಿ ಸರ್ಕಾರಿ ಪ್ರಾಯೋಜಿತ ಸಾಲ ಖಾತರಿ ಬೆಂಬಲದೊಂದಿಗೆ ಬೀದಿ ಬದಿ ವ್ಯಾಪಾರಿಗಳ ಮೇಲೆ ಕೇಂದ್ರೀಕರಿಸಿದ ಮೊದಲ ರೀತಿಯ ಕಿರು-ಸಾಲ ಉಪಕ್ರಮವಾಗಿ ಪ್ರಾರಂಭಿಸಲಾಯಿತು. ಈ ಯೋಜನೆಯು ಬೀದಿ ಬದಿ ವ್ಯಾಪಾರಿಗಳಿಗೆ "ಸ್ವರೋಜ್ಗಾರ್, ಸ್ವಾವಲಂಬನ್ ಮತ್ತು ಸ್ವಾಭಿಮಾನ್" ಅನ್ನು ಒದಗಿಸಲು ಪ್ರಯತ್ನಿಸಿತು. ಇಂದು, ಪಿಎಂ ಸ್ವನಿಧಿಯು ಕೇವಲ ಒಂದು ಸರಳ ಸಾಲದ ಕಾರ್ಯಕ್ರಮವನ್ನು ಮೀರಿ, ಭಾರತದ ಅನೌಪಚಾರಿಕ ಆರ್ಥಿಕತೆಯಲ್ಲಿ ಕೆಲಸ ಮಾಡುವ ಲಕ್ಷಾಂತರ ಜನರಿಗೆ ಆರ್ಥಿಕ ಸಬಲೀಕರಣ, ಡಿಜಿಟಲ್ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಭದ್ರತೆಯನ್ನು ಉತ್ತೇಜಿಸುವ ರಾಷ್ಟ್ರವ್ಯಾಪಿ ಚಳುವಳಿಯಾಗಿ ವಿಕಸನಗೊಂಡಿದೆ.

ಕಳೆದ ವರ್ಷಗಳಲ್ಲಿ, ಈ ಯೋಜನೆಯು ದೇಶಾದ್ಯಂತದ ನಗರಗಳು ಮತ್ತು ಪಟ್ಟಣಗಳಲ್ಲಿ ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಗಿದೆ. 75.5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ₹17,800 ಕೋಟಿಗೂ ಹೆಚ್ಚಿನ ಮೊತ್ತದ 1.12 ಕೋಟಿಗೂ ಹೆಚ್ಚು ಸಾಲಗಳನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಯಡಿ 55 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಡಿಜಿಟಲ್ ಆಗಿ ಒನ್-ಬೋರ್ಡ್ ಮಾಡಲಾಗಿದೆ. ಇವರೆಲ್ಲರೂ ಒಟ್ಟಾಗಿ ಸುಮಾರು ₹8.96 ಲಕ್ಷ ಕೋಟಿ ಮೌಲ್ಯದ 841 ಕೋಟಿಗೂ ಹೆಚ್ಚು ಡಿಜಿಟಲ್ ವಹಿವಾಟುಗಳನ್ನು ನಡೆಸಿದ್ದಾರೆ. ಪಿಎಂ ಸ್ವನಿಧಿ ಅಡಿಯಲ್ಲಿ ಫಲಾನುಭವಿಗಳು ಡಿಜಿಟಲ್ ಕ್ಯಾಶ್‌ಬ್ಯಾಕ್ ಪ್ರೋತ್ಸಾಹಕಗಳು ಮತ್ತು ಬಡ್ಡಿ ಸಬ್ಸಿಡಿಗಳ ಮೂಲಕ ಸುಮಾರು ₹800 ಕೋಟಿಗಳನ್ನು ಪಡೆದಿದ್ದಾರೆ. ಬಲವಾದ ಸಾಧನೆಗಳು ಮತ್ತು ಅಳೆಯಬಹುದಾದ ಪ್ರಭಾವದ ಆಧಾರದ ಮೇಲೆ, ಈ ಯೋಜನೆಯನ್ನು ಮಾರ್ಚ್ 2030 ರವರೆಗೆ ವಿಸ್ತರಿಸಲಾಗಿದೆ.

ಪಿಎಂ ಸ್ವನಿಧಿ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು

  1. ದುಡಿಯುವ ಬಂಡವಾಳ ಸಾಲ: ಬಡ್ಡಿ ಸಬ್ಸಿಡಿ ಮತ್ತು ಸಾಲ ಖಾತರಿ ಬೆಂಬಲದೊಂದಿಗೆ ಮೂರು ಪ್ರಗತಿಪರ ಕಂತುಗಳಲ್ಲಿ ₹15,000, ₹25,000 ಮತ್ತು ₹50,000 ಗಳ ಗ್ಯಾರಂಟಿ ರಹಿತ ಸಾಲಗಳನ್ನು ಒದಗಿಸಲಾಗುತ್ತದೆ.
  2. ಯುಪಿಐ-ಸಂಯೋಜಿತ ರೂಪೇ ಕ್ರೆಡಿಟ್ ಕಾರ್ಡ್‌ಗಳು: ಎರಡನೇ ಕಂತನ್ನು ಯಶಸ್ವಿಯಾಗಿ ಮರುಪಾವತಿಸುವ ವ್ಯಾಪಾರಿಗಳು ₹30,000 ವರೆಗಿನ ಮಿತಿಯೊಂದಿಗೆ ಯುಪಿಐ-ಸಂಯೋಜಿತ ರೂಪೇ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
  3. ಡಿಜಿಟಲ್ ಅಳವಡಿಕೆ: ಡಿಜಿಟಲ್ ಅಳವಡಿಕೆ ಮತ್ತು ಆರ್ಥಿಕ ಸಾಕ್ಷರತೆಯನ್ನು ಉತ್ತೇಜಿಸಲು ಚಿಲ್ಲರೆ/ಸಗಟು ಡಿಜಿಟಲ್ ವಹಿವಾಟುಗಳನ್ನು ನಡೆಸುವ ಬೀದಿ ಬದಿ ವ್ಯಾಪಾರಿಗಳಿಗೆ ₹1,600 ವರೆಗೆ ಕ್ಯಾಶ್‌ಬ್ಯಾಕ್ ಪ್ರೋತ್ಸಾಹಕಗಳನ್ನು ಒದಗಿಸಲಾಗುತ್ತದೆ.
  4. ಸ್ವನಿಧಿಯಿಂದ ಸಮೃದ್ಧಿ - ಎಸ್ಎಸ್ಎಸ್ : ಫಲಾನುಭವಿಗಳು ಮತ್ತು ಅವರ ಕುಟುಂಬಗಳ ಸಾಮಾಜಿಕ-ಆರ್ಥಿಕ ಪ್ರೊಫೈಲಿಂಗ್  ನಡೆಸಿ, ಅವರನ್ನು ಎಂಟು ಆಯ್ದ ಕೇಂದ್ರ ಕಲ್ಯಾಣ ಯೋಜನೆಗಳೊಂದಿಗೆ ಜೋಡಿಸುವ ಮೂಲಕ ಸಮಗ್ರ ಸಾಮಾಜಿಕ ಭದ್ರತಾ ಜಾಲವನ್ನು ರಚಿಸಲಾಗುತ್ತದೆ.
  5. ಸಾಮರ್ಥ್ಯ ವೃದ್ಧಿ ಮತ್ತು ಉದ್ಯಮಶೀಲತೆ ಅಭಿವೃದ್ಧಿ: ಎಫ್‌ಎಸ್‌ಎಸ್‌ಎಐ ಸಹಯೋಗದೊಂದಿಗೆ ವ್ಯಾಪಾರಿಗಳಿಗೆ ಆರ್ಥಿಕ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ ಮತ್ತು ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯದ ಕುರಿತು ತರಬೇತಿಯನ್ನು ನೀಡಲಾಗುತ್ತದೆ.

ಪಿಎಂ ಸ್ವನಿಧಿ ಯೋಜನೆಯ ಪ್ರಭಾವ

ಪಿಎಂ ಸ್ವನಿಧಿ ಯೋಜನೆಯ ಸ್ವತಂತ್ರ ಪ್ರಭಾವದ ಮೌಲ್ಯಮಾಪನಗಳನ್ನು 2023 ಮತ್ತು 2025 ರಲ್ಲಿ ನಡೆಸಲಾಯಿತು. ಈ ಅಧ್ಯಯನಗಳು ಈ ಕೆಳಗಿನ ಮಹತ್ವದ ಸುಧಾರಣೆಗಳನ್ನು ಉಲ್ಲೇಖಿಸುತ್ತವೆ:

ಆರ್ಥಿಕ ಸಬಲೀಕರಣ

ಈ ಯೋಜನೆಯು ದೇಶಾದ್ಯಂತದ ವ್ಯಾಪಾರಿಗಳ ವ್ಯವಹಾರದ ಸುಸ್ಥಿರತೆಯನ್ನು ಬಲಪಡಿಸಿದೆ ಮತ್ತು ಅವರ ಗಳಿಕೆಯನ್ನು ಸುಧಾರಿಸಿದೆ. ಸುಮಾರು ಶೇಕಡಾ 95 ರಷ್ಟು ಫಲಾನುಭವಿಗಳು ಪಿಎಂ ಸ್ವನಿಧಿ ಅಡಿಯಲ್ಲಿ ಮೊದಲ ಬಾರಿಗೆ ಸಾಂಸ್ಥಿಕ ಸಾಲದ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಸುಮಾರು ಶೇಕಡಾ 30 ರಷ್ಟು ಜನರು ನಂತರ ಸ್ವನಿಧಿ ಸಾಲಗಳನ್ನು ಮೀರಿ ಹೆಚ್ಚುವರಿ ಸಾಲವನ್ನು ಪಡೆದಿದ್ದಾರೆ, ಇದು ಅವರ ಸುಧಾರಿತ ಸಾಲದ ಅರ್ಹತೆ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ. ಫಲಾನುಭವಿಗಳ ಆದಾಯವು ಸರಾಸರಿ ವಾರ್ಷಿಕ ಶೇಕಡಾ 20 ರಷ್ಟು ಹೆಚ್ಚಳವನ್ನು ದಾಖಲಿಸಿದೆ.

ಕುಟುಂಬ ಕಲ್ಯಾಣದಲ್ಲಿ ಸುಧಾರಣೆ

ಪಿಎಂ ಸ್ವನಿಧಿ ಅಡಿಯಲ್ಲಿನ ಆರ್ಥಿಕ ಲಾಭಗಳು ಫಲಾನುಭವಿಗಳ ಜೀವನ ಮಟ್ಟವನ್ನು ಸುಧಾರಿಸಲು ಗಣನೀಯ ಕೊಡುಗೆ ನೀಡಿವೆ. ಈ ಯೋಜನೆಯು ಹೆಚ್ಚಿನ ವಸತಿ ಸ್ಥಿರತೆಯನ್ನು ಬೆಂಬಲಿಸಿದೆ ಮತ್ತು ಪೌಷ್ಟಿಕ ಆಹಾರ, ಆರೋಗ್ಯ ರಕ್ಷಣೆ ಹಾಗೂ ಶಿಕ್ಷಣದ ಲಭ್ಯತೆಯನ್ನು ಸುಧಾರಿಸಿದೆ.

ಪಿಎಂ ಸ್ವನಿಧಿಯು ದುರ್ಬಲ ನಗರ ಸಮುದಾಯಗಳಲ್ಲಿ ಸಾಮಾಜಿಕ ಒಳಗೊಳ್ಳುವಿಕೆಯನ್ನು ಬಲಪಡಿಸಿದೆ. ಯೋಜನೆಯಡಿಯ ಫಲಾನುಭವಿಗಳಲ್ಲಿ ಸುಮಾರು ಶೇಕಡಾ 46 ರಷ್ಟು ಮಹಿಳೆಯರಾಗಿದ್ದಾರೆ, ಇದು ಬಲವಾದ ಲಿಂಗ ಒಳಗೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ. ಸುಮಾರು ಶೇಕಡಾ 70 ರಷ್ಟು ಜನರು ಹಿಂದುಳಿದ/ವಂಚಿತ ಸಮುದಾಯಗಳಿಗೆ ಸೇರಿದವರಾಗಿದ್ದಾರೆ, ಇದು ಯೋಜನೆಯ ಒಳಗೊಳ್ಳುವಿಕೆಯ ವ್ಯಾಪ್ತಿಯನ್ನು ಉಲ್ಲೇಖಿಸುತ್ತದೆ.

ಸ್ಥಿತಿಸ್ಥಾಪಕತ್ವ ಮತ್ತು ಸಬಲೀಕರಣದ ಧ್ವನಿಗಳು

 ಅಂಕಿ-ಅಂಶಗಳು ಮತ್ತು ಸಾಲ ವಿತರಣೆಗಳ ಹಿಂದೆ ಪರಿಶ್ರಮ, ಧೈರ್ಯ ಮತ್ತು ಹೊಸ ಆಕಾಂಕ್ಷೆಗಳ ಕಥೆಗಳಿವೆ. ಅನೇಕ ವ್ಯಾಪಾರಿಗಳಿಗೆ, ಪಿಎಂ ಸ್ವನಿಧಿಯು ಒಂದು ಕಾಲದಲ್ಲಿ ತಲುಪಲು ಅಸಾಧ್ಯವೆಂದು ಪರಿಗಣಿಸಲಾದ ಸ್ಥಿರತೆ, ಬೆಳವಣಿಗೆ ಮತ್ತು ಅವಕಾಶಗಳ ಬಾಗಿಲುಗಳನ್ನು ತೆರೆದಿದೆ. ದೇಶದ ವಿವಿಧ ಭಾಗಗಳ ಈ ಅನುಭವಗಳು, ಸಮಯೋಚಿತ ನೆರವು ಸಣ್ಣ ಉದ್ಯಮಗಳು ಚೇತರಿಸಿಕೊಳ್ಳಲು, ಹೊಂದಿಕೊಳ್ಳಲು ಮತ್ತು ಹೆಚ್ಚಿನ ವಿಶ್ವಾಸದೊಂದಿಗೆ ಮುನ್ನಡೆಯಲು ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತವೆ.

ಒಂದು ಸಣ್ಣ ಅಂಗಡಿಯಿಂದ (ಸ್ಟಾಲ್) ದೊಡ್ಡ ಮಳಿಗೆಯವರೆಗೆ

ಘಾಜಿಯಾಬಾದ್‌ನ ನಂದಗ್ರಾಮ್‌ನ ಬಬಿತಾ ಶರ್ಮಾ ಅವರು ಸ್ಥಳೀಯ ದೇವಸ್ಥಾನದ ಬಳಿ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ. ಪ್ರತಿದಿನ, ಭಕ್ತರು ತಮ್ಮ ಪೂಜೆಗೆ ಅಗತ್ಯವಿರುವ ಧೂಪದ್ರವ್ಯಗಳು (ಅಗರಬತ್ತಿ), ದೀಪಗಳು (ದಿಯಾ), ಹೂವುಗಳು, ತೆಂಗಿನಕಾಯಿ ಮತ್ತು ಇತರ ವಸ್ತುಗಳನ್ನು ಖರೀದಿಸಲು ಅವರ ಅಂಗಡಿಗೆ ಭೇಟಿ ನೀಡುತ್ತಾರೆ. ಈ ವ್ಯವಹಾರವು ಅವರ ಕುಟುಂಬವನ್ನು ಬೆಂಬಲಿಸಲು ಸಹಾಯ ಮಾಡಿತಾದರೂ, ಸೀಮಿತ ಬಂಡವಾಳದಿಂದಾಗಿ ಅವರಿಗೆ ವ್ಯವಹಾರವನ್ನು ವಿಸ್ತರಿಸಲು ಮತ್ತು ಗ್ರಾಹಕರ ಬೇಡಿಕೆಯನ್ನು ಪೂರೈಸಲು ಕಷ್ಟವಾಗುತ್ತಿತ್ತು. ಜುಲೈ 2020 ರಲ್ಲಿ, ಬಬಿತಾ ಅವರು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ಮೂಲಕ ಪಿಎಂ ಸ್ವನಿಧಿ ಯೋಜನೆಯ ಬಗ್ಗೆ ತಿಳಿದುಕೊಂಡರು. ಇದನ್ನು ತಮ್ಮ ಜೀವನೋಪಾಯವನ್ನು ಸುಧಾರಿಸಲು ಒಂದು ಅವಕಾಶವೆಂದು ಭಾವಿಸಿ, ಅವರು ಈ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರು. ಮೊದಲ ಪಿಎಂ ಸ್ವನಿಧಿ ಸಾಲವನ್ನು ಪಡೆದ ನಂತರ, ಬಬಿತಾ ಅವರು ಆ ಹಣವನ್ನು ಹೆಚ್ಚುವರಿ ಸರಕುಗಳನ್ನು ಖರೀದಿಸಲು ಮತ್ತು ತಮ್ಮ ಅಂಗಡಿಯಲ್ಲಿ ಹೆಚ್ಚಿನ ಉತ್ಪನ್ನಗಳನ್ನು ಪರಿಚಯಿಸಲು ಹೂಡಿಕೆ ಮಾಡಿದರು. ವ್ಯಾಪಕವಾದ ವೈವಿಧ್ಯತೆಯು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿತು ಮತ್ತು ಅವರ ದೈನಂದಿನ ಮಾರಾಟ ಹಾಗೂ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿತು. ತಮ್ಮ ವ್ಯವಹಾರದಲ್ಲಾದ ಸುಧಾರಣೆಯಿಂದ ಉತ್ತೇಜಿತರಾದ ಅವರು, ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿ ಎರಡನೇ ಕಂತಿನ ಸಾಲಕ್ಕೆ ಅರ್ಹರಾದರು. ಅವರು ಈ ಸಾಲವನ್ನು ಒಂದು ಕೈಗಾಡಿಯನ್ನು (ಕಾರ್ಟ್) ಖರೀದಿಸಲು ಮತ್ತು ತಮ್ಮ ವ್ಯಾಪಾರದ ವ್ಯವಸ್ಥೆಯನ್ನು ಸುಧಾರಿಸಲು ಬಳಸಿಕೊಂಡರು.

ಉದ್ಯಮದ ಮೂಲಕ ದಿಗಂತಗಳನ್ನು ವಿಸ್ತರಿಸುವುದು

ತಿರುವನಂತಪುರಂನ ಶಾಂತಿ ಆರ್ ಅವರು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ತಮ್ಮ ಒಣ ಮೀನು ವ್ಯವಹಾರದ ಮೂಲಕ ತಮ್ಮ ಕುಟುಂಬದ ಪ್ರಮುಖ ಆಧಾರಸ್ತಂಭವಾಗಿದ್ದಾರೆ (ದುಡಿಯುವ ಸದಸ್ಯರಾಗಿದ್ದಾರೆ). ಪಿಎಂ ಸ್ವನಿಧಿ ಯೋಜನೆಗೆ ಮುನ್ನ, ಅವರು ಕಠಿಣವಾದ ವಾರಾವಾರು ಮರುಪಾವತಿ ನಿಯಮಗಳನ್ನು ಹೊಂದಿದ್ದ ಅತಿ ಹೆಚ್ಚು ಬಡ್ಡಿಯ ಕಿರುಹಣಕಾಸು ಸಾಲಗಳ ಮೇಲೆ ಅವಲಂಬಿತರಾಗಿದ್ದರು. ಈ ಆರ್ಥಿಕ ಒತ್ತಡಗಳು ಅವರ ವ್ಯವಹಾರದ ಬೆಳವಣಿಗೆಯನ್ನು ಸೀಮಿತಗೊಳಿಸಿದ್ದವು ಮತ್ತು ದೈನಂದಿನ ವಹಿವಾಟಿನ ಮೇಲೆ ಪ್ರಭಾವ ಬೀರಿದ್ದವು. ಪಿಎಂ ಸ್ವನಿಧಿಯು ಸುಲಭವಾಗಿ ಸಿಗುವ ಸಾಂಸ್ಥಿಕ ಸಾಲದ ಮೂಲಕ ಶಾಂತಿ ಅವರು ತಮ್ಮ ವ್ಯವಹಾರವನ್ನು ಹಂತಹಂತವಾಗಿ ಬಲಪಡಿಸಿಕೊಳ್ಳಲು ಸಹಾಯ ಮಾಡಿತು. ಅವರ ವ್ಯವಹಾರವು ಸ್ಥಿರಗೊಳ್ಳುತ್ತಿದ್ದಂತೆ, ಅವರು ಕೇವಲ ಬೀದಿ ಬದಿ ವ್ಯಾಪಾರಕ್ಕೆ ಸೀಮಿತವಾಗದೆ ಒಣ ಮೀನು ಪ್ಯಾಕಿಂಗ್ ಮತ್ತು ಸ್ಥಳೀಯ ಅಂಗಡಿಗಳಿಗೆ ಸರಬರಾಜು ಮಾಡುವಲ್ಲಿಗೆ ತಮ್ಮ ಉದ್ಯಮವನ್ನು ವಿಸ್ತರಿಸಿದರು. ಶಾಂತಿ ಅವರು ಈ ಯೋಜನೆಯಡಿ ಮೊದಲ ಕಂತಿನಲ್ಲಿ ₹10,000 ಪಡೆದರು ಮತ್ತು ನಂತರ ಪ್ರಗತಿ ಸಾಧಿಸಿ ಮೂರನೇ ಕಂತಿನ ₹50,000 ಸಾಲವನ್ನು ಪಡೆದುಕೊಂಡರು. ಇದು ಅವರ ನಗದು ಹರಿವನ್ನು ಸುಧಾರಿಸಿತು ಮತ್ತು ಸರಕು ದಾಸ್ತಾನನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡಿತು. ಅವರು ಜನವರಿ 2026 ರಲ್ಲಿ ಸ್ವನಿಧಿ ಕ್ರೆಡಿಟ್ ಕಾರ್ಡ್ ಅನ್ನು ಸಹ ಪಡೆದರು, ಇದು ಅವರ ಬೆಳೆಯುತ್ತಿರುವ ವ್ಯವಹಾರದ ಕಾರ್ಯಾಚರಣೆಗಳನ್ನು ಮತ್ತಷ್ಟು ಬಲಪಡಿಸಿತು. ಪಿಎಂ ಸ್ವನಿಧಿಯು ಮಹಿಳಾ ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ವೈವಿಧ್ಯಗೊಳಿಸಲು ಮತ್ತು ಸುಸ್ಥಿರ ಜೀವನೋಪಾಯವನ್ನು ಕಂಡುಕೊಳ್ಳಲು ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಶಾಂತಿ ಆರ್ ಅವರ ಅನುಭವವು ಉಲ್ಲೇಖಿಸುತ್ತದೆ.

ಸವಾಲನ್ನು ಅವಕಾಶವಾಗಿ ಪರಿವರ್ತಿಸುವುದು

ಗುವಾಹಟಿಯ ನೂನ್‌ಮತಿಯ ಜನನಿಬಿಡ ಬೀದಿಗಳಲ್ಲಿ, ಸೆವಾಲಿ ಕಲಿತಾ ಅವರು ತಮ್ಮ ನಾಲ್ಕು ಜನರ ಕುಟುಂಬದ ಜೀವನ ನಿರ್ವಹಣೆಗಾಗಿ ಒಂದು ಸಣ್ಣ ಪಾನ್ ಅಂಗಡಿಯನ್ನು ನಡೆಸುತ್ತಿದ್ದರು. ಕಠಿಣ ಪರಿಸ್ಥಿತಿಯ ದಿನಗಳಲ್ಲಿ, ಕೇವಲ ಬದುಕುಳಿಯುವುದಕ್ಕಾಗಿಯೇ ಅವರು ನೆರೆಹೊರೆಯವರಿಂದ ಹಣವನ್ನು ಸಾಲವಾಗಿ ಪಡೆಯಬೇಕಾಗಿತ್ತು. ಗುವಾಹಟಿ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗಿನ ಸಂಭಾಷಣೆಯು ಸೆವಾಲಿ ಅವರಿಗೆ ಪಿಎಂ ಸ್ವನಿಧಿ ಯೋಜನೆಯನ್ನು ಪರಿಚಯಿಸಿತು. ₹10,000 ಸಾಲದ ನೆರವಿನೊಂದಿಗೆ, ಸೆವಾಲಿ ಅವರು ತಮ್ಮ ಉದ್ಯಮಶೀಲತೆಯ ಮನೋಭಾವವನ್ನು ಹೊರಹಾಕಿದರು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಾವಯವ ತರಕಾರಿಗಳಿಗೆ ಹೆಚ್ಚುತ್ತಿದ್ದ ಬೇಡಿಕೆಯನ್ನು ಅವರು ಗುರುತಿಸಿದರು. ಅವರು ಸ್ಥಳೀಯವಾಗಿ ತಾಜಾ ತರಕಾರಿಗಳನ್ನು ಸಂಗ್ರಹಿಸಿ, ತಮ್ಮ ಪಾನ್ ಅಂಗಡಿಯ ಜೊತೆಯಲ್ಲೇ ಮಾರಾಟ ಮಾಡಲು ಪ್ರಾರಂಭಿಸಿದರು. ವ್ಯಾಪಾರ ಸುಧಾರಿಸುತ್ತಿದ್ದಂತೆ, ಸೆವಾಲಿ ಅವರು ತಮ್ಮ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದರು ಮತ್ತು ಕ್ರಮೇಣ ತಮ್ಮ ಉದ್ಯಮವನ್ನು ವಿಸ್ತರಿಸಿದರು. ಅವರು ಮುಂದೆ ಕ್ರಮವಾಗಿ ₹20,000 ಮತ್ತು ₹50,000 ಗಳ ಹೆಚ್ಚುವರಿ ಸಾಲಗಳನ್ನು ಪಡೆದುಕೊಂಡರು. ಈ ಆರ್ಥಿಕ ಬೆಂಬಲವು ಅವರ ಸಾಲಗಳನ್ನು ತೀರಿಸಲು, ಸರಕು ದಾಸ್ತಾನನ್ನು ಹೆಚ್ಚಿಸಲು ಮತ್ತು ಪ್ರತ್ಯೇಕ ತರಕಾರಿ ಅಂಗಡಿಯನ್ನು ತೆರೆಯಲು ಅವರಿಗೆ ಸಹಾಯ ಮಾಡಿತು. ಇಂದು, ಸೆವಾಲಿ ಅವರು ಗುವಾಹಟಿಯಲ್ಲಿ ತಮ್ಮ ಪತಿಯೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ವ್ಯವಹಾರವನ್ನು ನಡೆಸುತ್ತಿದ್ದಾರೆ. ಅವರು ಈಗ ತಮ್ಮ ಬೆಳೆಯುತ್ತಿರುವ ವ್ಯವಹಾರದಿಂದ ಮಾಸಿಕ ಸುಮಾರು ₹8,000 ಲಾಭವನ್ನು ಗಳಿಸುತ್ತಿದ್ದಾರೆ. ಅವರ ಈ ಪ್ರಗತಿಯು ಪರಿಶ್ರಮ ಮತ್ತು ಅವಕಾಶಕ್ಕೆ ಒಂದು ಬಲವಾದ ಉದಾಹರಣೆಯಾಗಿ ನಿಂತಿದೆ.

ಸಣ್ಣ ಸಾಲ, ದೊಡ್ಡ ಬದಲಾವಣೆ: ಬೀದಿ ಬದಿ ವ್ಯಾಪಾರಿಯ ಜೀವನದ ಪರಿವರ್ತನೆ

ಗಾಂಧಿನಗರದಲ್ಲಿ 30 ವರ್ಷದ ಬಿ. ಕಾಂ. ವಿದ್ಯಾರ್ಥಿಯಾದ ಯೋಗ್‌ರಾಜ್ ಮಾಲಿ ಅವರು 'ಚೋಲಾಫಲಿ' ಮಾರಾಟ ಮಾಡುವ ಬೀದಿ ಬದಿಯ ಆಹಾರದ ವ್ಯವಹಾರವನ್ನು ನಡೆಸುತ್ತಿದ್ದರು. ದುರದೃಷ್ಟವಶಾತ್, ಕೋವಿಡ್-19 ಸಾಂಕ್ರಾಮಿಕ ರೋಗವು ಅವರ ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿತು. ಆದಾಗ್ಯೂ, ಪಿಎಂ ಸ್ವನಿಧಿ ಯೋಜನೆಯಡಿಯ ಸಾಲದ ರೂಪದಲ್ಲಿ ಭರವಸೆ ಮೂಡಿತು. ಈ ಸಾಲವು ಅವರ ವ್ಯವಹಾರವನ್ನು ಮರುಚೇತನಗೊಳಿಸಿದ್ದು ಮಾತ್ರವಲ್ಲದೆ, ಅವರಿಗೆ ಮತ್ತು ಅವರ ಕುಟುಂಬಕ್ಕೆ ಅಪಾರ ಸಂತೋಷವನ್ನು ತಂದಿತು, ಏಕೆಂದರೆ ಅವರು ಇನ್ನು ಮುಂದೆ ಆರ್ಥಿಕವಾಗಿ ಹೋರಾಡಬೇಕಾಗಿರಲಿಲ್ಲ. ಸಾಲದ ನೆರವಿನೊಂದಿಗೆ, ಯೋಗ್‌ರಾಜ್ ಅವರು ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಂಡರು ಮತ್ತು ಕ್ಯಾಶ್‌ಬ್ಯಾಕ್ ಬಹುಮಾನಗಳ ಪ್ರಯೋಜನವನ್ನು ಪಡೆದರು. ಇದರ ಜೊತೆಗೆ, ಅವರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಮತ್ತು ಶ್ರಮಯೋಗಿ ಮಾನ್ ಧನ್ ಯೋಜನೆಯಂತಹ ಇತರ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆದುಕೊಂಡರು. ಈ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸುವ ಯೋಗ್‌ರಾಜ್ ಅವರು, ಕಷ್ಟದ ಸಮಯದಲ್ಲಿ ಸರ್ಕಾರವು ಬೆಂಬಲದ ಪಿಲ್ಲರ್ (ಆಧಾರಸ್ತಂಭ) ಆಗಿ ನಿಲ್ಲುತ್ತದೆ, ವಿಶೇಷವಾಗಿ ನಿರ್ಲಕ್ಷಿಸಲ್ಪಟ್ಟ ಭಾವನೆ ಹೊಂದಿರುವವರಿಗೆ ಇದು ಸಹಕಾರಿಯಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ.

ಸಾಲವನ್ನು ಮೀರಿ: ಬದಲಾಗುತ್ತಿರುವ ನಗರ

ಕಿಕ್ಕಿರಿದ ಮಾರುಕಟ್ಟೆಗಳಿಂದ ಹಿಡಿದು ಕಿರಿದಾದ ರಸ್ತೆಬದಿಯ ಗಲ್ಲಿಗಳವರೆಗೆ, ಪಿಎಂ ಸ್ವನಿಧಿಯು ದೇಶಾದ್ಯಂತ ಅಸಂಖ್ಯಾತ ದೈನಂದಿನ ಜೀವನದ ಪಯಣಗಳನ್ನು ಮೌನವಾಗಿ ಪರಿವರ್ತಿಸಿದೆ. ಈ ಯೋಜನೆಯು ವ್ಯಾಪಾರಿಗಳು ಮರಳಿ ಕೆಲಸಕ್ಕೆ ಬರಲು ಮತ್ತು ಸಣ್ಣ ಉದ್ಯಮಗಳನ್ನು ವಿಸ್ತರಿಸಲು ಶಕ್ತಗೊಳಿಸಿದೆ. ಇದು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಿದೆ ಮತ್ತು ಸುರಕ್ಷಿತ ಹಾಗೂ ಹೆಚ್ಚು ಸಂಘಟಿತ ವ್ಯವಹಾರ ಪದ್ಧತಿಗಳನ್ನು ಪ್ರೋತ್ಸಾಹಿಸಿದೆ. ಇದು ವಂಚಿತ/ಹಿಂದುಳಿದ ಸಮುದಾಯಗಳಿಗೆ ಸಾಂಸ್ಥಿಕ ಬೆಂಬಲದ ಪ್ರವೇಶವನ್ನು ವಿಸ್ತರಿಸಿದೆ.

ಯೋಜನೆಯ ವಿಸ್ತರಿಸುತ್ತಿರುವ ವ್ಯಾಪ್ತಿಯು ಅಭಿವೃದ್ಧಿ ಮತ್ತು ಒಳಗೊಳ್ಳುವಿಕೆಯಲ್ಲಿನ ದೊಡ್ಡ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಅನೌಪಚಾರಿಕ ಆರ್ಥಿಕತೆಯಲ್ಲಿ ಕೆಲಸ ಮಾಡುವ ಲಕ್ಷಾಂತರ ಜನರಿಗೆ, ಪಿಎಂ ಸ್ವನಿಧಿಯು ಒಂದು ಕಾಲದಲ್ಲಿ ಪ್ರವೇಶಿಸಲು ಕಷ್ಟವಾಗಿದ್ದ ಅವಕಾಶಗಳ ಹಾದಿಗಳನ್ನು ಸೃಷ್ಟಿಸಿದೆ. ಹಲವು ವಿಧಗಳಲ್ಲಿ, ಈ ಉಪಕ್ರಮವು ನಗರ ಆಡಳಿತದ ಬದಲಾಗುತ್ತಿರುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಸಣ್ಣ ವ್ಯಾಪಾರಿಗಳನ್ನು ಈಗ ಕೇವಲ ಕಡೆಗಣಿಸಲ್ಪಟ್ಟ ವರ್ಗವಾಗಿ ನೋಡುವುದಿಲ್ಲ. ಬದಲಾಗಿ, ಅವರನ್ನು ಭಾರತದ ಆರ್ಥಿಕ ಬೆಳವಣಿಗೆಯ ಕಥೆಗೆ ಕೊಡುಗೆ ನೀಡುವವರಾಗಿ ಹೆಚ್ಚಾಗಿ ಗುರುತಿಸಲಾಗುತ್ತಿದೆ.

References

Ministry of Housing and Urban Affairs

https://www.pmsvanidhi.mohua.gov.in/Home/PMSDashboard

https://www.facebook.com/pmsvanidhi/

https://www.pib.gov.in/PressReleasePage.aspx?PRID=2225510&reg=3&lang=1

https://www.pib.gov.in/PressReleasePage.aspx?PRID=2006580&reg=3&lang=2

Ministry of Information and Broadcasting

https://www.pib.gov.in/PressReleaseIframePage.aspx?PRID=1984414&reg=3&lang=2

Prime Minister’s Office

https://www.pmindia.gov.in/en/news_updates/cabinet-approves-restructuring-extension-of-lending-period-beyond-31-12-2024-of-pm-street-vendors-atmanirbhar-nidhi-pm-svanidhi-scheme

Click To See PDF

 

*****

(Explainer ID: 158730) आगंतुक पटल : 23
Provide suggestions / comments
इस विज्ञप्ति को इन भाषाओं में पढ़ें: English , हिन्दी , Manipuri , Bengali , Gujarati , Telugu_Vw , Telugu , Malayalam