• Sitemap
  • Advance Search
Global Affairs

ಪ್ರಧಾನಮಂತ್ರಿ ಅವರ ನೆದರ್ ಲ್ಯಾಂಡ್ಸ್ ಭೇಟಿ

ಇಂಧನ, ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಸಹಕಾರದ ಪ್ರಗತಿ

Posted On: 21 MAY 2026 5:16PM

ಭಾರತ ಮತ್ತು ನೆದರ್ ಲ್ಯಾಂಡ್ಸ್ ಇತ್ತೀಚಿನ ವರ್ಷಗಳಲ್ಲಿ ತಮ್ಮ ಸಂಬಂಧವನ್ನು ಗಮನಾರ್ಹವಾಗಿ ಬಲಪಡಿಸಿಕೊಂಡಿವೆ. ಇವರ ನಡುವಿನ ಸಹಕಾರವು ಈಗ ಸಾಂಪ್ರದಾಯಿಕ ಕ್ಷೇತ್ರಗಳನ್ನು ಮೀರಿ ಉದಯೋನ್ಮುಖ ಮತ್ತು ಕಾರ್ಯತಂತ್ರದ ಕ್ಷೇತ್ರಗಳಿಗೂ ವಿಸ್ತರಿಸಿದೆ. ಮೇ 2026 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ಭೇಟಿಯು ಸೆಮಿಕಂಡಕ್ಟರ್‌ಗಳು, ಇಂಧನ ಭದ್ರತೆ, ಸ್ವಚ್ಛ ಇಂಧನ, ತಂತ್ರಜ್ಞಾನ, ನಾವೀನ್ಯತೆ (ಆವಿಷ್ಕಾರ) ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸಹಯೋಗವನ್ನು ಮತ್ತಷ್ಟು ವೇಗಗೊಳಿಸಿತು. ಈ ಭೇಟಿಯು ಸುಸ್ಥಿರ ಬೆಳವಣಿಗೆ, ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಸಹಕಾರದ ಬಗೆಗಿನ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸಿತು. ಇದು ಬಲಿಷ್ಠ ಮತ್ತು ಹೆಚ್ಚು ಮುನ್ನೋಟದ ಪಾಲುದಾರಿಕೆಯ ದೃಷ್ಟಿಕೋನವನ್ನು ಪುನರುಚ್ಚರಿಸಿತು.

ಉದಯೋನ್ಮುಖ ಜಾಗತಿಕ ವ್ಯವಸ್ಥೆಯಲ್ಲಿ ಭಾರತ-ನೆದರ್ ಲ್ಯಾಂಡ್ಸ್ ಸಂಬಂಧಗಳು

ಭಾರತ ಮತ್ತು ನೆದರ್ ಲ್ಯಾಂಡ್ಸ್ 1947 ರಲ್ಲಿ ರಾಜತಾಂತ್ರಿಕ ಬಾಂಧವ್ಯವನ್ನು ಸ್ಥಾಪಿಸಿದಾಗಿನಿಂದಲೂ ಬಲಿಷ್ಠ ಮತ್ತು ವಿಸ್ತರಿಸುತ್ತಿರುವ ಪಾಲುದಾರಿಕೆಯನ್ನು ಹಂಚಿಕೊಂಡಿವೆ. ದಶಕಗಳಿಂದ, ಇವರ ನಡುವಿನ ಸಹಕಾರವು ವ್ಯಾಪಾರ, ಹೂಡಿಕೆ, ನೀರು, ಕೃಷಿ, ಆರೋಗ್ಯ ಮತ್ತು ನಾವೀನ್ಯತೆ (ಆವಿಷ್ಕಾರ) ಕ್ಷೇತ್ರಗಳಾದ್ಯಂತ ವಿಸ್ತರಿಸಿದೆ. ಉದಯೋನ್ಮುಖ ಜಾಗತಿಕ ವ್ಯವಸ್ಥೆಯಲ್ಲಿ, ನಿಯಮಿತ ಉನ್ನತ ಮಟ್ಟದ ವಿನಿಮಯಗಳು ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಿವೆ. ಅವು ಆಳವಾದ ಆರ್ಥಿಕ ಮತ್ತು ತಾಂತ್ರಿಕ ಸಹಯೋಗಕ್ಕೆ ಹೊಸ ವೇಗವನ್ನು ಸೃಷ್ಟಿಸಿವೆ. ಎರಡೂ ದೇಶಗಳು ಈಗ ಸೆಮಿಕಂಡಕ್ಟರ್‌ಗಳು, ನವೀಕರಿಸಬಹುದಾದ ಇಂಧನ, ಕಡಲ ತಂತ್ರಜ್ಞಾನ (ಮ್ಯಾರಿಟೈಮ್ ಟೆಕ್ನಾಲಜಿ), ರಕ್ಷಣಾ, ಶಿಕ್ಷಣ ಮತ್ತು ಡಿಜಿಟಲ್ ನಾವೀನ್ಯತೆಗಳಲ್ಲಿ ಸಹಕರಿಸುತ್ತಿವೆ. ಈ ಪಾಲುದಾರಿಕೆಯು ಸುಸ್ಥಿರ ಅಭಿವೃದ್ಧಿ, ಜಾಗತಿಕ ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಮತ್ತು ನಿಯಮ-ಆಧಾರಿತ ಅಂತಾರಾಷ್ಟ್ರೀಯ ಸಹಕಾರವನ್ನು ಸಹ ಬೆಂಬಲಿಸುತ್ತದೆ. ಬಲವಾದ ಪರಸ್ಪರ ಜನರ ನಡುವಿನ ಸಂಬಂಧಗಳು ಮತ್ತು ಬೆಳೆಯುತ್ತಿರುವ ವ್ಯಾಪಾರ ತೊಡಗಿಸಿಕೊಳ್ಳುವಿಕೆಯು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಆಳವಾಗಿಸಿದೆ. ಮೇ 2026 ರಲ್ಲಿ ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರು ನೀಡಿದ ಭೇಟಿಯು ಈ ಭವಿಷ್ಯದ-ಆಧಾರಿತ ಪಾಲುದಾರಿಕೆಯನ್ನು ಮತ್ತು ಯುರೋಪ್ ಜೊತೆಗಿನ ಭಾರತದ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸಿತು.

ಭಾರತ-ನೆದರ್ ಲ್ಯಾಂಡ್ಸ್: ನಾವೀನ್ಯತೆ, ವ್ಯಾಪಾರ ಮತ್ತು ಸುಸ್ಥಿರತೆಯ ಚಾಲನೆ

ಭಾರತ-ಡಚ್ ಪಾಲುದಾರಿಕೆಯು ಬಲವಾದ ಐತಿಹಾಸಿಕ ಸಂಬಂಧಗಳು ಮತ್ತು ವಿಸ್ತರಿಸುತ್ತಿರುವ ವ್ಯೂಹಾತ್ಮಕ ಸಹಕಾರದ ಮೇಲೆ ನಿರ್ಮಾಣವಾಗಿದೆ. ಇದು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿನ (ಫ್ರಾಂಟಿಯರ್ ಟೆಕ್ನಾಲಜಿ) ಡಚ್ ಸಾಮರ್ಥ್ಯಗಳನ್ನು ಭಾರತದ ಬೃಹತ್ ಪ್ರಮಾಣದ ಮಾರುಕಟ್ಟೆ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯೊಂದಿಗೆ ಸಂಯೋಜಿಸುತ್ತದೆ. ಸೆಮಿಕಂಡಕ್ಟರ್‌ಗಳು, ಗ್ರೀನ್ ಹೈಡ್ರೋಜನ್, ಕಡಲ ತಂತ್ರಜ್ಞಾನ ಮತ್ತು ನುರಿತ ವಲಸೆ (ಸ್ಕಿಲ್ಡ್ ಮೊಬಿಲಿಟಿ) ಕ್ಷೇತ್ರಗಳಲ್ಲಿ ಸಹಕಾರವು ಬೆಳೆಯುತ್ತಿದೆ. ಈ ಪಾಲುದಾರಿಕೆಯು ಜಾಗತಿಕ ಆಡಳಿತ, ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಅಭಿವೃದ್ಧಿಗೂ ಮುಖ್ಯವಾಗಿದೆ. ಇದು ಹಂಚಿಕೆಯ ಆರ್ಥಿಕ ಹಿತಾಸಕ್ತಿಗಳು, ತಾಂತ್ರಿಕ ಸಹಯೋಗ ಮತ್ತು ಸಾಮಾನ್ಯ ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ.

ವ್ಯೂಹಾತ್ಮಕ ಮತ್ತು ಭೌಗೋಳಿಕ ರಾಜಕೀಯ ಸಂದರ್ಭ

ನೆದರ್ ಲ್ಯಾಂಡ್ಸ್ ಇಂದು ಭಾರತವನ್ನು ಕೇವಲ ಒಂದು ಮಾರುಕಟ್ಟೆಯಾಗಿ ಮಾತ್ರವಲ್ಲದೆ, ಒಂದು ಪ್ರಮುಖ ರಾಷ್ಟ್ರವಾಗಿ ಪರಿಗಣಿಸುತ್ತದೆ. ಡಚ್‌ನ ಅತ್ಯಾಧುನಿಕ ತಂತ್ರಜ್ಞಾನದ ಪರಿಸರ ವ್ಯವಸ್ಥೆಯು ಭಾರತದ ಬೃಹತ್ ಪ್ರಮಾಣದ ಅನುಷ್ಠಾನದ ಸಾಮರ್ಥ್ಯದೊಂದಿಗೆ ಜೊತೆಯಾಗಿರುವುದು "ನಾವೀನ್ಯತೆಯು ಬೃಹತ್ ಪ್ರಮಾಣವನ್ನು ಸಂಧಿಸುತ್ತದೆ" ಎಂಬ ಪಾಲುದಾರಿಕೆಯನ್ನು ವ್ಯಾಖ್ಯಾನಿಸುತ್ತದೆ; ಇದು ಸೆಮಿಕಂಡಕ್ಟರ್‌ಗಳು, ನೀರು, ಹೈಡ್ರೋಜನ್ ಮತ್ತು ಕಡಲ ತಂತ್ರಜ್ಞಾನದಲ್ಲಿ ಅತ್ಯಂತ ಗಮನಾರ್ಹವಾಗಿ ಗೋಚರಿಸುತ್ತದೆ.

ವ್ಯಾಪಾರ, ಹೂಡಿಕೆ ಮತ್ತು ಇಯು ಎಫ್‌ಟಿಎ ಗೇಟ್‌ವೇ

ನೆದರ್ ಲ್ಯಾಂಡ್ಸ್ ಯುರೋಪ್‌ನಲ್ಲಿ ಭಾರತದ ಅತಿ ದೊಡ್ಡ ವ್ಯಾಪಾರ ತಾಣಗಳಲ್ಲಿ ಒಂದಾಗಿದೆ, ಇವರ ನಡುವಿನ ದ್ವಿಪಕ್ಷೀಯ ವ್ಯಾಪಾರವು 27.8 ಬಿಲಿಯನ್ ಯುಎಸ್‌ಡಿ (2024-25) ಮೌಲ್ಯದ್ದಾಗಿದೆ. ಇದು 55.6 ಬಿಲಿಯನ್ ಯುಎಸ್‌ಡಿ ಒಟ್ಟು ಎಫ್‌ಡಿಐನೊಂದಿಗೆ ಭಾರತದಲ್ಲಿ ನಾಲ್ಕನೇ ಅತಿ ದೊಡ್ಡ ಹೂಡಿಕೆದಾರ ರಾಷ್ಟ್ರವಾಗಿದೆ. ನೆದರ್ ಲ್ಯಾಂಡ್ಸ್ ಜೊತೆಗಿನ ಒಟ್ಟು ಸರಕು ವ್ಯಾಪಾರವು ಭಾರತದ ಒಟ್ಟು ಸರಕು ವ್ಯಾಪಾರದ ಶೇಕಡಾ 2.46 ರಷ್ಟಿದೆ. ಭಾರತವು ನೆದರ್ಲ್ಯಾಂಡ್ಸ್‌ನೊಂದಿಗೆ 17.393 ಬಿಲಿಯನ್ ಯುಎಸ್‌ಡಿ (144,095 ಕೋಟಿ ರೂಪಾಯಿ) ವ್ಯಾಪಾರ ಲಾಭವನ್ನು ಹೊಂದಿದೆ. ಭಾರತದಲ್ಲಿ 300 ಕ್ಕೂ ಹೆಚ್ಚು ಡಚ್ ಕಂಪನಿಗಳು ಮತ್ತು ನೆದರ್ಲ್ಯಾಂಡ್ಸ್‌ನಲ್ಲಿ 300 ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ನೆದರ್ ಲ್ಯಾಂಡ್ಸ್ ಇಂಡಿಯಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಟ್ರೇಡ್ ಮತ್ತು ಇಂಡಿಯನ್ ಬಿಸಿನೆಸ್ ಚೇಂಬರ್ ನಂತಹ ಸಂಸ್ಥೆಗಳು ಆರ್ಥಿಕತೆಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುತ್ತವೆ.

ಸೆಮಿಕಂಡಕ್ಟರ್ ಸಹಯೋಗ

2024ರಲ್ಲಿ, ಭಾರತ ಮತ್ತು ನೆದರ್ ಲ್ಯಾಂಡ್ಸ್ ಕೌಶಲ್ಯ ಅಭಿವೃದ್ಧಿ, ತರಬೇತಿ ಕಾರ್ಯಕ್ರಮಗಳು, ಸಹಯೋಗದ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಈ ಕ್ಷೇತ್ರದಲ್ಲಿ ಸ್ಟಾರ್ಟ್-ಅಪ್‌ಗಳು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ ಭಾರತದ ಸೆಮಿಕಂಡಕ್ಟರ್ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಪಾಲುದಾರಿಕೆಯನ್ನು ರೂಪಿಸಿಕೊಂಡವು.

ಇಂಧನ ಭದ್ರತೆ ಮತ್ತು ಸ್ವಚ್ಛ ಇಂಧನ

ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಹೊಂದಾಣಿಕೆಗಾಗಿ ಜಂಟಿ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸಲು ಭಾರತ ಮತ್ತು ನೆದರ್ ಲ್ಯಾಂಡ್ಸ್ ಒಟ್ಟಾಗಿ ಕೆಲಸ ಮಾಡುತ್ತಿವೆ. ಉಭಯ ದೇಶಗಳು ಹಿತಾಸಕ್ತಿದಾರರನ್ನು ಜೋಡಿಸುವುದು; ಜ್ಞಾನ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳುವುದು; ತಂತ್ರಜ್ಞಾನದ ಜಂಟಿ ಅಭಿವೃದ್ಧಿ; ಉತ್ತಮ ಪದ್ಧತಿಗಳ ವಿನಿಮಯ; ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ಸುರಕ್ಷತೆಯ ಮೇಲೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಗ್ರೀನ್ ಹೈಡ್ರೋಜನ್ ಬಳಕೆಯನ್ನು ಉತ್ತೇಜಿಸುವುದು ಮತ್ತು ಹಸಿರು ಬಂದರುಗಳನ್ನು (ಗ್ರೀನ್ ಪೋರ್ಟ್ಸ್) ಅಭಿವೃದ್ಧಿಪಡಿಸುವುದು ಸಹಯೋಗದ ಪ್ರಮುಖ ಕ್ಷೇತ್ರಗಳಾಗಿವೆ.

ವಲಸೆ, ಅನಿವಾಸಿಗಳು (ಡಯಾಸ್ಪೊರಾ) ಮತ್ತು ಪ್ರವಾಸೋದ್ಯಮ

ಯುರೋಪ್‌ನಲ್ಲಿ (ಯುಕೆ ಹೊರತುಪಡಿಸಿ) ಭಾರತೀಯ ಮೂಲದ ಜನರ ಎರಡನೇ ಅತಿ ದೊಡ್ಡ ಜನಸಂಖ್ಯೆಯನ್ನು ನೆದರ್ ಲ್ಯಾಂಡ್ಸ್ ಹೊಂದಿದೆ. ಇದು ಸುಮಾರು 2,40,000 ಭಾರತೀಯ ಅನಿವಾಸಿಗಳಿಗೆ ನೆಲೆಯಾಗಿದೆ, ಇದರಲ್ಲಿ ಡಚ್ ಸಮಾಜದಲ್ಲಿ ಸಂಪೂರ್ಣವಾಗಿ ಸಂಯೋಜನೆಗೊಂಡಿರುವ ಹಿಂದುಸ್ತಾನಿ-ಸುರಿನಾಮಿ ಸಮುದಾಯದ ಸರಿಸುಮಾರು 2,00,000 ಸದಸ್ಯರು ಸೇರಿದ್ದಾರೆ. ಉಭಯ ಕಡೆಯವರು ವಲಸೆ ಮತ್ತು ಸಂಚಾರವನ್ನು ಸರಳಗೊಳಿಸಲು ಕೆಲಸ ಮಾಡುತ್ತಿದ್ದಾರೆ.

ಭಾರತ-ನೆದರ್ ಲ್ಯಾಂಡ್ಸ್ ಪಾಲುದಾರಿಕೆಯು ಬಲವಾದ ಐತಿಹಾಸಿಕ ಸಂಬಂಧಗಳಿಂದ ಭವಿಷ್ಯದ-ಆಧಾರಿತ ವ್ಯೂಹಾತ್ಮಕ ಸಹಯೋಗವಾಗಿ ವಿಕಸನಗೊಂಡಿದೆ. ಪ್ರಧಾನಮಂತ್ರಿ ಮೋದಿಯವರ ಭೇಟಿಯು ಈ ಸಮಗ್ರ ಪಾಲುದಾರಿಕೆಯನ್ನು ಆಳವಾಗಿಸುವಲ್ಲಿ ಮತ್ತು ಹೆಚ್ಚು ಬಹುಧ್ರುವೀಯವಾಗುತ್ತಿರುವ ಜಗತ್ತಿನಲ್ಲಿ ಯುರೋಪ್ ಜೊತೆಗಿನ ಭಾರತದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

ದ್ವಿಪಕ್ಷೀಯ ವ್ಯಾಪಾರ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ವಿಸ್ತರಿಸಲು ಪ್ರಧಾನಮಂತ್ರಿಯವರ ಭೇಟಿ

ಭಾರತದ ಪ್ರಧಾನಮಂತ್ರಿಯವರು ಮತ್ತು ನೆದರ್ಲ್ಯಾಂಡ್ಸ್‌ನ ಘನತೆವೆತ್ತ ದೊರೆ ವಿಲ್ಲೆಮ್-ಅಲೆಕ್ಸಾಂಡರ್ ಮತ್ತು ರಾಣಿ ಮ್ಯಾಕ್ಸಿಮಾ ಅವರು ಪರಸ್ಪರ ಜನರ ನಡುವಿನ ಸಂಬಂಧಗಳು ಮತ್ತು ಶಿಕ್ಷಣ, ನಾವೀನ್ಯತೆ, ಸೆಮಿಕಂಡಕ್ಟರ್‌ಗಳು, ಡಿಜಿಟಲ್ ತಂತ್ರಜ್ಞಾನ, ಜಲ ನಿರ್ವಹಣೆ ಮತ್ತು ಹಸಿರು ಪಾಲುದಾರಿಕೆಗಳಲ್ಲಿನ ಸಹಕಾರದ ಮೇಲೆ ಗಮನ ಹರಿಸಿ ಭಾರತ-ನೆದರ್ ಲ್ಯಾಂಡ್ಸ್ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚೆಗಳನ್ನು ನಡೆಸಿದರು. ಇತ್ತೀಚಿನ ವರ್ಷಗಳಲ್ಲಿ ಈ ಆದ್ಯತೆಯ ಕ್ಷೇತ್ರಗಳಲ್ಲಿ ಸಾಧಿಸಲಾದ ಗಮನಾರ್ಹ ಪ್ರಗತಿಯನ್ನು ಅವರು ಶ್ಲಾಘಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನೆದರ್ ಲ್ಯಾಂಡ್ಸ್ ಪ್ರಧಾನಮಂತ್ರಿ ಶ್ರೀ ರೋಬ್ ಜೆಟ್ಟೆನ್ ಅವರು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ವೇಗ ಮತ್ತು ವ್ಯೂಹಾತ್ಮಕ ಒಮ್ಮುಖವನ್ನು ಒಪ್ಪಿಕೊಂಡರು. ದ್ವಿಪಕ್ಷೀಯ ಸಹಕಾರದ ವಿಸ್ತರಿಸುತ್ತಿರುವ ವ್ಯಾಪ್ತಿಯನ್ನು ಗುರುತಿಸಿದ ಇಬ್ಬರೂ ನಾಯಕರು, 2026-2030 ರ ಅವಧಿಗೆ ಭಾರತ-ನೆದರ್ ಲ್ಯಾಂಡ್ಸ್ ಸಂಬಂಧಗಳನ್ನು "ವ್ಯೂಹಾತ್ಮಕ ಪಾಲುದಾರಿಕೆ" ಗೆ ಏರಿಸಲು ನಿರ್ಧರಿಸಿದರು. ಈ ಪಾಲುದಾರಿಕೆಯು ನಿಯಮಿತ ಉನ್ನತ ಮಟ್ಟದ ನೀತಿ ಸಂವಾದಗಳು ಮತ್ತು ಪರಸ್ಪರ ಹಿತಾಸಕ್ತಿಯ ವಲಯಗಳಾದ್ಯಂತ ಆಳವಾದ ಸಹಕಾರದ ಮೇಲೆ ಗಮನ ಹರಿಸಲಿದೆ.

ಉಭಯ ಕಡೆಯವರು ಕೆಳಗಿನ ಕ್ರಮಗಳ ಮೂಲಕ ಆರ್ಥಿಕ ಮತ್ತು ಹೂಡಿಕೆ ಸಂಬಂಧಗಳನ್ನು ಬಲಪಡಿಸಲು ಒಪ್ಪಿಕೊಂಡರು:

  • ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುವುದು
  • ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವುದು
  • ಎಸ್‌ಎಮ್‌ಇ  (ಸಣ್ಣ ಮತ್ತು ಮಧ್ಯಮ ಉದ್ಯಮಗಳ) ಭಾಗವಹಿಸುವಿಕೆಯನ್ನು ಉತ್ತೇಜಿಸುವುದು
  • ಹೂಡಿಕೆಗಳನ್ನು ಸುಗಮಗೊಳಿಸುವುದು
  • ಸ್ಥಿತಿಸ್ಥಾಪಕ ಮೌಲ್ಯ ಸರಪಳಿಗಳನ್ನು ನಿರ್ಮಿಸುವುದು,

ಹೆಚ್ಚುವರಿಯಾಗಿ, ವರ್ಧಿತ ಸಹಯೋಗವು ಕೆಳಗಿನ ಕ್ಷೇತ್ರಗಳಿಗೂ ವಿಸ್ತರಿಸಲಿದೆ:

  • ನೀರು, ಕೃಷಿ ಮತ್ತು ಆರೋಗ್ಯ
  • ಉದಯೋನ್ಮುಖ ತಂತ್ರಜ್ಞಾನಗಳು
  • ನಾವೀನ್ಯತೆ (ಆವಿಷ್ಕಾರ), ವಿಜ್ಞಾನ ಮತ್ತು ಶಿಕ್ಷಣ
  • ಇಂಧನ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿ
  • ಕಡಲ ವ್ಯವಹಾರಗಳು (ಮ್ಯಾರಿಟೈಮ್ ಅಫೇರ್ಸ್)
  • ರಕ್ಷಣೆ ಮತ್ತು ಭದ್ರತಾ ಸಹಕಾರ
  • ವಲಸೆ ಮತ್ತು ಸಂಚಾರ (ಮೈಗ್ರೇಷನ್ ಅಂಡ್ ಮೊಬಿಲಿಟಿ) ಮತ್ತು
  • ಸಂಸ್ಕೃತಿ ಹಾಗೂ ಪರಸ್ಪರ ಜನರ ನಡುವಿನ ವಿನಿಮಯಗಳು

ಪ್ರಧಾನಮಂತ್ರಿಯವರ ಭೇಟಿಯು ಹಂಚಿಕೆಯ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಆಳವಾದ ಅಂತಾರಾಷ್ಟ್ರೀಯ ಸಹಯೋಗದ ಮಹತ್ವವನ್ನು ಪುನರುಚ್ಚರಿಸಿತು. ಇದು ನಾವೀನ್ಯತೆ (ಆವಿಷ್ಕಾರ), ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ನಿಯಮ-ಆಧಾರಿತ ಜಾಗತಿಕ ಸಹಕಾರವನ್ನು ಬಲಪಡಿಸುವಲ್ಲಿ ವ್ಯೂಹಾತ್ಮಕ ಪಾಲುದಾರಿಕೆಗಳ ಬೆಳೆಯುತ್ತಿರುವ ಪಾತ್ರವನ್ನು ಎತ್ತಿ ತೋರಿಸಿತು.

ದ್ವಿಪಕ್ಷೀಯ ಚರ್ಚೆಯ ಪ್ರಮುಖ ಫಲಿತಾಂಶಗಳು ಪ್ರಧಾನಮಂತ್ರಿಯವರ ಭೇಟಿಯ ಫಲಿತಾಂಶಗಳು ಭಾರತ-ನೆದರ್ ಲ್ಯಾಂಡ್ಸ್ ಬಾಂಧವ್ಯದ ಆಳವನ್ನು ಮತ್ತು ವ್ಯೂಹಾತ್ಮಕ ವಲಯಗಳಾದ್ಯಂತ ದೀರ್ಘಕಾಲೀನ, ಸ್ಥಿತಿಸ್ಥಾಪಕ ಸಹಕಾರದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ. ಅವು ಬಲವಾದ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ತೊಡಗಿಸಿಕೊಳ್ಳುವಿಕೆಯ ಮೂಲಕ ಜಾಗತಿಕ ಆಡಳಿತವನ್ನು ಬಲಪಡಿಸಲು, ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸಲು, ನಾವೀನ್ಯತೆ-ಚಾಲಿತ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಉದಯೋನ್ಮುಖ ಜಾಗತಿಕ ಸವಾಲುಗಳ ಮೇಲಿನ ಸಹಕಾರವನ್ನು ಹೆಚ್ಚಿಸಲು ಇರುವ ಹಂಚಿಕೆಯ ಬದ್ಧತೆಯನ್ನು ಉಲ್ಲೇಖಿಸುತ್ತವೆ.

ಫಲಿತಾಂಶ 1: ಭಾರತ-ನೆದರ್ ಲ್ಯಾಂಡ್ಸ್ ವ್ಯೂಹಾತ್ಮಕ ಪಾಲುದಾರಿಕೆಗೆ ಸಹಿ ಹಾಕಿರುವುದು

ಈ ವ್ಯೂಹಾತ್ಮಕ ಪಾಲುದಾರಿಕೆಯು ಉಭಯ ದೇಶಗಳ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ ಮತ್ತು 'ವಿಕಸಿತ ಭಾರತ'ದ ದೃಷ್ಟಿಕೋನಕ್ಕೆ ಅನುಗುಣವಾಗಿ ಸ್ಥಿತಿಸ್ಥಾಪಕ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲಿದೆ. ಇದು ಭಾರತದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜೊತೆಗೆ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ವರ್ಧಿಸಲಿದೆ. ಈ ಸಹಯೋಗವು ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರವನ್ನು ಉತ್ತೇಜಿಸಲಿದ್ದು, ನಾವೀನ್ಯತೆ ಹಾಗೂ ಹೆಚ್ಚಿನ ಸಂಶೋಧನಾ ಫಲಿತಾಂಶಗಳನ್ನು ಬೆಳೆಸಲಿದೆ. ಇದರೊಂದಿಗೆ, ಇದು ಭಾರತದ ಭದ್ರತೆ ಮತ್ತು ಅಭಿವೃದ್ಧಿ ಗುರಿಗಳಿಗೆ ಆಯಕಟ್ಟಿನ (ಕಾರ್ಯತಂತ್ರದ) ಮಹತ್ವವನ್ನು ಹೊಂದಿರುವ ಕ್ಷೇತ್ರಗಳನ್ನು ಒಳಗೊಂಡಿದೆ.

ಫಲಿತಾಂಶ 2: ಚೋಳರ ತಾಮ್ರದ ಶಾಸನಗಳನ್ನು ಭಾರತ ಸರ್ಕಾರಕ್ಕೆ ಮರಳಿ ಒಪ್ಪಿಸಿರುವುದು (ಪ್ರತ್ಯರ್ಪಣೆ)

11ನೇ ಶತಮಾನದ ಚೋಳರ ತಾಮ್ರದ ಶಾಸನಗಳು ಭಾರತಕ್ಕೆ ಮರಳಿರುವುದು ಒಂದು ಪ್ರಮುಖ ಸಾಂಸ್ಕೃತಿಕ ಮೈಲಿಗಲ್ಲಾಗಿದೆ. ಈ ತಾಮ್ರದ ಫಲಕಗಳು ಚೋಳ ರಾಜರು ಹೊರಡಿಸಿದ ರಾಜವಂಶದ ಶಾಸನಗಳಾಗಿದ್ದು (ರಾಯಲ್ ಚಾರ್ಟರ್ಸ್), ಇವುಗಳಲ್ಲಿ ತಮಿಳು ಮತ್ತು ಸಂಸ್ಕೃತ ಭಾಷೆಯ ಬರಹಗಳಿವೆ. ಇವು ತಮಿಳುನಾಡಿನ ನಾಗಪಟ್ಟಣಂನಲ್ಲಿರುವ ಬೌದ್ಧ ವಿಹಾರಕ್ಕೆ ಅನೈಮಂಗಲಂ ಗ್ರಾಮವನ್ನು ದಾನವಾಗಿ ನೀಡಿದ್ದನ್ನು ದಾಖಲಿಸುತ್ತವೆ. ಇವುಗಳ ಮರಳುವಿಕೆಯು ಭಾರತದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಬಗ್ಗೆ ಹೆಚ್ಚಿನ ಸಂಶೋಧನೆ ಹಾಗೂ ಮೆಚ್ಚುಗೆಗೆ ಪೂರಕವಾಗಿ ಬೆಂಬಲ ನೀಡಲಿದೆ.

ಫಲಿತಾಂಶ 3: ಅನಿವಾಸಿ (ಡಯಾಸ್ಪೊರಾ) ಸಹಕಾರವನ್ನು ಬಲಪಡಿಸುವುದು

ವರ್ಧಿತ ಸಂಚಾರ ಮತ್ತು ಅನಿವಾಸಿ ಸಹಕಾರವು ಭಾರತ ಮತ್ತು ನೆದರ್ ಲ್ಯಾಂಡ್ಸ್ ನಡುವಿನ ಸಂಚಾರವನ್ನು ಸುಲಭ ಹಾಗೂ ಹೆಚ್ಚು ಸುಗಮವಾಗಿಸಲಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಸುಧಾರಿತ ಶೈಕ್ಷಣಿಕ, ಸಂಶೋಧನೆ ಮತ್ತು ಇಂಟರ್ನ್‌ಶಿಪ್ ಅವಕಾಶಗಳು ಲಭ್ಯವಾಗಲಿವೆ. ನುರಿತ ವೃತ್ತಿಪರರು ವೇಗವಾದ ಮತ್ತು ಹೆಚ್ಚು ಸುಲಭವಾದ ವೀಸಾ ಪ್ರವೇಶದ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ಪಾಲುದಾರಿಕೆಯು ಭಾರತೀಯ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸಲಿದೆ. ಈ ಕ್ರಮಗಳು ಪರಸ್ಪರ ಜನರ ನಡುವಿನ ಬಾಂಧವ್ಯವನ್ನು ಆಳವಾಗಿಸಲಿವೆ ಮತ್ತು ಬಲಿಷ್ಠ ಶೈಕ್ಷಣಿಕ ಹಾಗೂ ವೃತ್ತಿಪರ ಸಹಯೋಗವನ್ನು ಉತ್ತೇಜಿಸಲಿವೆ.

ಫಲಿತಾಂಶ 4: ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಎಎಸ್ಎಮ್ಎಲ್ ನಡುವೆ ಸಹಕಾರ

ಸೆಮಿಕಂಡಕ್ಟರ್ ವಲಯದಲ್ಲಿನ ಸಹಕಾರವು ಭಾರತದ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ. ಇದು ಗುಜರಾತ್‌ನ ಧೋಲೇರಾದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಸೌಲಭ್ಯದ (ತಯಾರಿಕಾ ಘಟಕದ) ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ಈ ಪಾಲುದಾರಿಕೆಯು ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲಿದೆ ಮತ್ತು ತಂತ್ರಜ್ಞಾನದ ಸಹಯೋಗವನ್ನು ಉತ್ತೇಜಿಸಲಿದೆ. ಇದು ಭಾರತೀಯ ಸೆಮಿಕಂಡಕ್ಟರ್ ಮಿಷನ್‌ನ ಉದ್ದೇಶಗಳಿಗೆ ಪೂರಕವಾಗಿದ್ದು, ಭಾರತದಲ್ಲಿ ಸುಧಾರಿತ ಉತ್ಪಾದನಾ ಸಾಮರ್ಥ್ಯಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

ಫಲಿತಾಂಶ 5: ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ಸಹಕಾರ

ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿನ ಸಹಕಾರವು ಅತ್ಯಗತ್ಯ ಸಂಪನ್ಮೂಲಗಳಿಗಾಗಿ ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ಬಲಪಡಿಸಲಿದೆ. ಇದು ಭಾರತದ ಸ್ವಚ್ಛ ಇಂಧನ ಮತ್ತು ಸುಧಾರಿತ ಉತ್ಪಾದನಾ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸುತ್ತದೆ. ಈ ಪಾಲುದಾರಿಕೆಯು ಸುಧಾರಿತ ತಂತ್ರಜ್ಞಾನಗಳು, ಹೂಡಿಕೆಗಳು ಮತ್ತು ನುರಿತ ಉದ್ಯೋಗಾವಕಾಶಗಳನ್ನು ಸಹ ತರಲಿದೆ. ಇದು ಆಯಕಟ್ಟಿನ (ಕಾರ್ಯತಂತ್ರದ) ಖನಿಜಗಳಲ್ಲಿ ಭಾರತದ ಗಣಿಗಾರಿಕೆ ಮತ್ತು ಸಂಸ್ಕರಣಾ ಸಾಮರ್ಥ್ಯಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಫಲಿತಾಂಶ 6: ಗುಜರಾತ್ ಕಲ್ಪಸರ್ ಯೋಜನೆಯಲ್ಲಿ ನೆದರ್ ಲ್ಯಾಂಡ್ಸ್ ಜೊತೆ ತಾಂತ್ರಿಕ ಸಹಕಾರ

ಭಾರತದಲ್ಲಿ ಎದುರಾಗುತ್ತಿರುವ ನೀರು-ಸಂಬಂಧಿತ ಸವಾಲುಗಳನ್ನು ಪರಿಹರಿಸಲು ಡಚ್ ಪರಿಣತಿಯೊಂದಿಗೆ ಈ 'ವ್ಯೂಹಾತ್ಮಕ ಜಲ ಪಾಲುದಾರಿಕೆ'ಯನ್ನು ಬಲಪಡಿಸಲಾಗುವುದು. ಇದು ಗೃಹಬಳಕೆ ಮತ್ತು ಕೃಷಿ ಬಳಕೆಗಾಗಿ ಸ್ವಚ್ಛ ನೀರಿನ ಲಭ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಆ ಮೂಲಕ ಜೀವನದ ಗುಣಮಟ್ಟವನ್ನು ಹೆಚ್ಚಿಸಲಿದೆ. ಕಲ್ಪಸರ್ ಯೋಜನೆಯು ಖಂಭಾತ್ ಕೊಲ್ಲಿಯಾದ್ಯಂತ ಉಬ್ಬರವಿಳಿತದ ಶಕ್ತಿ (ಟೈಡಲ್ ಪವರ್), ನೀರಾವರಿ ಮತ್ತು ಸಾರಿಗೆ ಸಂಪರ್ಕಗಳನ್ನು ಒಳಗೊಂಡ ಸಿಹಿನೀರಿನ ಜಲಾಶಯವನ್ನು ನಿರ್ಮಿಸಲು ಪ್ರಸ್ತಾಪಿಸುತ್ತದೆ. ಈ ಸಹಕಾರವು ಸುಸ್ಥಿರ ಜಲ ನಿರ್ವಹಣೆ ಮತ್ತು ದೊಡ್ಡ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿಯನ್ನು ಸಹ ಬೆಂಬಲಿಸಲಿದೆ.

ಫಲಿತಾಂಶ 7: ಗ್ರೀನ್ ಹೈಡ್ರೋಜನ್ (ಹಸಿರು ಹೈಡ್ರೋಜನ್) ಕುರಿತಾದ ಮಾರ್ಗಸೂಚಿ (ರೋಡ್ಮ್ಯಾಪ್)

ಗ್ರೀನ್ ಹೈಡ್ರೋಜನ್ (ಹಸಿರು ಹೈಡ್ರೋಜನ್) ಕುರಿತಾದ ಭಾರತ-ನೆದರ್ ಲ್ಯಾಂಡ್ಸ್ ಮಾರ್ಗಸೂಚಿಯು ನವೀಕರಿಸಬಹುದಾದ ಇಂಧನ ಮತ್ತು ಹೂಡಿಕೆಗಳ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸಲಿದೆ. ಇದು ಗ್ರೀನ್ ಹೈಡ್ರೋಜನ್‌ನ ಉತ್ಪಾದನೆ, ಬಳಕೆ ಮತ್ತು ರಫ್ತಿನಲ್ಲಿ ಭಾರತ ಹೊಂದಿರುವ ಗುರಿಗಳನ್ನು ಬೆಂಬಲಿಸುತ್ತದೆ. ಈ ಉಪಕ್ರಮವು ಉಭಯ ದೇಶಗಳಲ್ಲಿ ಸ್ವಚ್ಛ ಇಂಧನ ಮೂಲವಾಗಿ ಗ್ರೀನ್ ಹೈಡ್ರೋಜನ್ ಅನ್ನು ವೇಗವಾಗಿ ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುತ್ತದೆ. ಇದು ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುವ, ಹೂಡಿಕೆಯನ್ನು ಆಕರ್ಷಿಸುವ, ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಭಾರತವು ಸ್ವಚ್ಛ ಇಂಧನಗಳತ್ತ ಪರಿವರ್ತನೆಗೊಳ್ಳುವುದನ್ನು ಬೆಂಬಲಿಸುವ ನಿರೀಕ್ಷೆಯಿದೆ.

ಫಲಿತಾಂಶ 8: ನವೀಕರಿಸಬಹುದಾದ ಇಂಧನ ಕುರಿತು ಜಂಟಿ ಕಾರ್ಯಪಡೆಯ ಸ್ಥಾಪನೆ

ಉಭಯ ಕಡೆಯವರು ಸಹಕಾರವನ್ನು ಹೆಚ್ಚಿಸಲು ಮತ್ತು ಅತ್ಯುತ್ತಮ ಪದ್ಧತಿಗಳನ್ನು ಹಂಚಿಕೊಳ್ಳಲು ನವೀಕರಿಸಬಹುದಾದ ಇಂಧನ ಕುರಿತು ಜಂಟಿ ಕಾರ್ಯಪಡೆಯನ್ನು ಸ್ಥಾಪಿಸಿದ್ದಾರೆ. ಇದು ಗ್ರೀನ್ ಹೈಡ್ರೋಜನ್, ಜೈವಿಕ ಇಂಧನ (ಬಯೋಎನರ್ಜಿ), ಬಯೋ-ಕೆಮಿಕಲ್ಸ್, ಸರ್ಕ್ಯುಲರ್ ಫೀಡ್‌ಸ್ಟಾಕ್ಸ್, ನವೀಕರಿಸಬಹುದಾದ ಇಂಧನಗಳು ಮತ್ತು ಬ್ಯಾಟರಿ ಸ್ಟೋರೇಜ್ (ಸಂಗ್ರಹಣೆ) ಮೇಲೆ ಗಮನ ಹರಿಸಲಿದೆ. ಈ ಕಾರ್ಯಪಡೆಯು ಉಭಯ ದೇಶಗಳ ನಡುವೆ ಕೈಗಾರಿಕಾ ಪಾಲುದಾರಿಕೆ ಮತ್ತು ಜ್ಞಾನ ವಿನಿಮಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಉದ್ಯೋಗಗಳು ಮತ್ತು ಸಂಶೋಧನಾ ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ಭಾರತದ ಸ್ವಚ್ಛ ಇಂಧನ ಪರಿವರ್ತನೆಯನ್ನು ಬೆಂಬಲಿಸಲಿದೆ.

ಫಲಿತಾಂಶ 9: ಇಂಧನ ಪರಿವರ್ತನೆಗಾಗಿ ಸಾಮರ್ಥ್ಯ ವೃದ್ಧಿಯ ಕುರಿತು ನೀತಿ ಆಯೋಗ್ ಮತ್ತು ನೆದರ್ ಲ್ಯಾಂಡ್ಸ್ ನಡುವಿನ ಜಂಟಿ ಉದ್ದೇಶದ ಹೇಳಿಕೆಯ ನವೀಕರಣ

ಸುಸ್ಥಿರ ಇಂಧನ ಪರಿವರ್ತನೆಯಲ್ಲಿನ ಯೋಜನೆಗಳು ಮತ್ತು ಪಾಲುದಾರಿಕೆಗಳು ಇಂಧನ ಭದ್ರತೆ ಮತ್ತು ಸ್ವಚ್ಛ ಇಂಧನ ಅಭಿವೃದ್ಧಿಯಲ್ಲಿನ ಸಹಕಾರವನ್ನು ಬಲಪಡಿಸಲಿವೆ. ಅವು ಆಳವಾದ ಸಹಯೋಗ ಮತ್ತು ಜ್ಞಾನ ವಿನಿಮಯಕ್ಕಾಗಿ ನೀತಿ ನಿರೂಪಕರು, ಕೈಗಾರಿಕಾ ಮುಖಂಡರು ಮತ್ತು ತಾಂತ್ರಿಕ ತಜ್ಞರನ್ನು ಒಂದೆಡೆ ತರಲಿವೆ. ಈ ಉಪಕ್ರಮಗಳು ಹಿತಾಸಕ್ತಿದಾರರ ನಡುವಿನ ಸಮನ್ವಯವನ್ನು ಸುಧಾರಿಸುವ ಮತ್ತು ಈ ವಲಯದಾದ್ಯಂತ ತಂತ್ರಜ್ಞಾನದ ಸಹಕಾರವನ್ನು ಬೆಂಬಲಿಸುವ ನಿರೀಕ್ಷೆಯಿದೆ. ಇವು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಮತ್ತು ದೀರ್ಘಕಾಲೀನ ಸುಸ್ಥಿರ ಬೆಳವಣಿಗೆಗೆ ಕೊಡುಗೆ ನೀಡಲಿವೆ.

ಫಲಿತಾಂಶ 10: ಪಶ್ಚಿಮ ತ್ರಿಪುರಾದಲ್ಲಿ ಹೂವುಗಳಿಗಾಗಿ ಇಂಡೋ-ಡಚ್ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆ

ಉತ್ಕೃಷ್ಟತಾ ಕೇಂದ್ರವನ್ನು ಅಭಿವೃದ್ಧಿಪಡಿಸುವ ಈ ಉಪಕ್ರಮವು ತ್ರಿಪುರಾದಲ್ಲಿ ಹೂವಿನ ಕೃಷಿಯನ್ನು (ಫ್ಲೋರಿಕಲ್ಚರ್) ಅಭಿವೃದ್ಧಿಪಡಿಸಲಿದೆ ಮತ್ತು ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸಲಿದೆ. ಇದು ರೈತರ ಆದಾಯವನ್ನು ಹೆಚ್ಚಿಸಲಿದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಇದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರ ಜೀವನೋಪಾಯವನ್ನು ಸುಧಾರಿಸಲಿದೆ. ಒಟ್ಟಾರೆಯಾಗಿ, ಇದು ಜನರ ಜೀವನ ಮಟ್ಟವನ್ನು ಹೆಚ್ಚಿಸಲಿದೆ.

ಫಲಿತಾಂಶ 11: ಬೆಂಗಳೂರಿನ ಪಶುಸಂಗೋಪನಾ ಉತ್ಕೃಷ್ಟತಾ ಕೇಂದ್ರದಲ್ಲಿ ಡೈರಿ (ಹಾಲು ಉತ್ಪಾದನೆ) ತರಬೇತಿಗಾಗಿ ಇಂಡೋ-ಡಚ್ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆ

ಬೆಂಗಳೂರಿನ ಪಶುಸಂಗೋಪನಾ ಉತ್ಕೃಷ್ಟತಾ ಕೇಂದ್ರದಲ್ಲಿ ಡೈರಿ (ಹಾಲು ಉತ್ಪಾದನೆ) ತರಬೇತಿಗಾಗಿ ಇಂಡೋ-ಡಚ್ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಇದು ಭಾರತ ಮತ್ತು ನೆದರ್ ಲ್ಯಾಂಡ್ಸ್ ನಡುವೆ ಡೈರಿ, ಪೂರಕ ಕೃಷಿ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸಲಿದೆ. ತರಬೇತಿ ಮತ್ತು ಜ್ಞಾನ ವಿನಿಮಯವು ಈ ವಲಯದಲ್ಲಿ ಉತ್ಪಾದಕತೆ, ಗುಣಮಟ್ಟ ಮತ್ತು ಕೌಶಲ್ಯಗಳನ್ನು ಸುಧಾರಿಸಲಿದೆ. ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜೊತೆಗೆ ಪಶುಸಂಗೋಪನೆಯನ್ನು ಬಲಪಡಿಸಲಿದೆ.

ಫಲಿತಾಂಶ 12: ಪಶುಸಂಗೋಪನೆ ಮತ್ತು ಡೈರಿ (ಹಾಲಿನ ಉದ್ಯಮ) ಕ್ಷೇತ್ರದಲ್ಲಿ ಸಹಯೋಗ

ಈ ಸಹಯೋಗವು ಮಾರುಕಟ್ಟೆ ಪ್ರವೇಶ, ಹವಾಮಾನ-ಸ್ಥಿತಿಸ್ಥಾಪಕ ಕೃಷಿ ಮತ್ತು ಆಹಾರ ಭದ್ರತೆಯ ಮೇಲೆ ಗಮನ ಹರಿಸುವ ಮೂಲಕ ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರಗಳಲ್ಲಿ ಭಾರತ-ನೆದರ್ ಲ್ಯಾಂಡ್ಸ್ ಸಹಕಾರವನ್ನು ಬಲಪಡಿಸಲಿದೆ. ಇದು ಈ ವಲಯದಾದ್ಯಂತ ಜ್ಞಾನ ವಿನಿಮಯ, ತಂತ್ರಜ್ಞಾನದ ಸಹಕಾರ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲಿದೆ. ಈ ಪಾಲುದಾರಿಕೆಯು ಕೃಷಿ ಉತ್ಪಾದಕತೆಯನ್ನು ಸುಧಾರಿಸುವ, ಜಾನುವಾರುಗಳ ಆರೋಗ್ಯ ಮತ್ತು ರೋಗ ನಿರ್ವಹಣೆಯನ್ನು ಬಲಪಡಿಸುವ ಹಾಗೂ ಪೂರೈಕೆ ಸರಪಳಿಯ ದಕ್ಷತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದು ಗ್ರಾಮೀಣ ಜೀವನೋಪಾಯವನ್ನು ಬೆಂಬಲಿಸಲಿದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಮತ್ತು ದೀರ್ಘಕಾಲೀನ ಕೃಷಿ ಸುಸ್ಥಿರತೆಗೆ ಕೊಡುಗೆ ನೀಡಲಿದೆ.

ಫಲಿತಾಂಶ 13: ಆರೋಗ್ಯ ಕ್ಷೇತ್ರದಲ್ಲಿನ ಸಹಯೋಗಕ್ಕಾಗಿ ಒಪ್ಪಂದ

ಆರೋಗ್ಯ ಕ್ಷೇತ್ರದಲ್ಲಿನ ಸಹಯೋಗವು ಸಂಶೋಧನೆ, ಸಹಕಾರ ಮತ್ತು ಜ್ಞಾನ ವಿನಿಮಯದ ಮೂಲಕ ಜಾಗತಿಕ ಆರೋಗ್ಯದ ಅಪಾಯಗಳನ್ನು ಎದುರಿಸಲು ಭಾರತ-ನೆದರ್ ಲ್ಯಾಂಡ್ಸ್ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದೆ. ಇದು ಸಾಂಕ್ರಾಮಿಕ ರೋಗಗಳು, ಆಂಟಿಮೈಕ್ರೋಬಿಯಲ್ ಪ್ರತಿರೋಧ, ಸಾಂಕ್ರಾಮಿಕವಲ್ಲದ ರೋಗಗಳು, ಡಿಜಿಟಲ್ ಆರೋಗ್ಯ ಮತ್ತು ಹವಾಮಾನ-ಆರೋಗ್ಯದ ನಡುವಿನ ಕೊಂಡಿಗಳ ಮೇಲೆ ಗಮನ ಹರಿಸುತ್ತದೆ. ಇದು ನೆದರ್ಲ್ಯಾಂಡ್ಸ್‌ನ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂಸ್ಥೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡುವಿನ ಸಹಕಾರದ ಮೂಲಕ ಮತ್ತಷ್ಟು ಬೆಂಬಲಿತವಾಗಿದೆ.

ಫಲಿತಾಂಶ 14: ಕಸ್ಟಮ್ಸ್ ಪರಸ್ಪರ ಆಡಳಿತಾತ್ಮಕ ಸಹಾಯ ಒಪ್ಪಂದ

ಕಸ್ಟಮ್ಸ್ ಅಧಿಕಾರಿಗಳ ನಡುವಿನ ಸಹಕಾರವನ್ನು ಹೆಚ್ಚಿಸಲು 'ಕಸ್ಟಮ್ಸ್ ವಿಷಯಗಳಲ್ಲಿ ಪರಸ್ಪರ ಆಡಳಿತಾತ್ಮಕ ಸಹಾಯದ ಒಪ್ಪಂದ' ನೆರವಾಗಲಿದೆ. ಇದು ಜಾರಿಕ್ರಮಗಳನ್ನು ಸುಧಾರಿಸಲು ಮಾಹಿತಿ ಹಂಚಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಭಾರತ ಹಾಗೂ ನೆದರ್ ಲ್ಯಾಂಡ್ಸ್ ನಡುವೆ ಕಾನೂನುಬದ್ಧ ವ್ಯಾಪಾರವನ್ನು ಸುಗಮಗೊಳಿಸುತ್ತದೆ. ಈ ಒಪ್ಪಂದವು ವೆಚ್ಚಗಳು ಮತ್ತು ವಿಳಂಬಗಳನ್ನು ಕಡಿಮೆ ಮಾಡುವ ಮೂಲಕ ವ್ಯಾಪಾರವನ್ನು ಹೆಚ್ಚು ದಕ್ಷಗೊಳಿಸಲಿದೆ; ಜೊತೆಗೆ ಪಾರದರ್ಶಕತೆ ಮತ್ತು ರಫ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸಲಿದೆ.

ಫಲಿತಾಂಶ 15: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಹಕಾರ

ಉನ್ನತ ಶಿಕ್ಷಣದಲ್ಲಿನ ಈ ದ್ವಿಪಕ್ಷೀಯ ಸಹಕಾರವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಚಾರವನ್ನು ಹೆಚ್ಚಿಸಲಿದೆ ಮತ್ತು ಜಂಟಿ ಸಂಶೋಧನೆಯನ್ನು ಬಲಪಡಿಸಲಿದೆ. ಇದು ಕೌಶಲ್ಯಗಳು, ಉದ್ಯೋಗಾರ್ಹತೆ, ಸಂಶೋಧನಾ ಫಲಿತಾಂಶಗಳನ್ನು ಸುಧಾರಿಸಲಿದೆ ಮತ್ತು ಹೊಸ ಉದ್ಯೋಗ ಹಾಗೂ ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸಲಿದೆ.

ಫಲಿತಾಂಶ 16: ನಳಂದಾ ವಿಶ್ವವಿದ್ಯಾಲಯ ಮತ್ತು ನೆದರ್ಲ್ಯಾಂಡ್ಸ್ ಗ್ರೋನಿಂಗನ್ ವಿಶ್ವವಿದ್ಯಾಲಯದ ನಡುವೆ ಸಹಕಾರ

ನಳಂದಾ ವಿಶ್ವವಿದ್ಯಾಲಯ ಮತ್ತು ಗ್ರೋನಿಂಗನ್ ವಿಶ್ವವಿದ್ಯಾಲಯದ ನಡುವಿನ ಸಹಕಾರವು ಭಾರತ ಮತ್ತು ನೆದರ್ ಲ್ಯಾಂಡ್ಸ್ ನಡುವಿನ ಶೈಕ್ಷಣಿಕ ಹಾಗೂ ಸಾಂಸ್ಥಿಕ ಸಹಯೋಗವನ್ನು ಆಳವಾಗಿಸಲಿದೆ. ಇದು ಜಂಟಿ ಶೈಕ್ಷಣಿಕ ಚಟುವಟಿಕೆಗಳು, ವಿನಿಮಯಗಳು ಮತ್ತು ಜಂಟಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಹೆಚ್ಚಿನ ಜಾಗತಿಕ ಮಾನ್ಯತೆ (ಎಕ್ಸ್‌ಪೋಷರ್) ಒದಗಿಸಲಿದೆ. ಈ ಪಾಲುದಾರಿಕೆಯು ಉದಯೋನ್ಮುಖ ಅಧ್ಯಯನ ಕ್ಷೇತ್ರಗಳಲ್ಲಿ ಅಂತರಶಿಸ್ತೀಯ ಸಂಶೋಧನೆ, ಬೋಧನಾ ಸಹಯೋಗ ಮತ್ತು ಜ್ಞಾನ ವಿನಿಮಯಕ್ಕೆ ಅವಕಾಶಗಳನ್ನು ಸೃಷ್ಟಿಸಲಿದೆ. ಇದರೊಂದಿಗೆ, ಇದು ಅಂತಾರಾಷ್ಟ್ರೀಯ ಧನಸಹಾಯದ (ಫಂಡಿಂಗ್) ಅವಕಾಶಗಳನ್ನು ಸುಲಭಗೊಳಿಸುವ, ನಾವೀನ್ಯತೆ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಉನ್ನತ ಶಿಕ್ಷಣದಲ್ಲಿ ಪ್ರತಿಭೆಗಳ ಅಭಿವೃದ್ಧಿ ಹಾಗೂ ಸಾಮರ್ಥ್ಯ ವೃದ್ಧಿಯನ್ನು ಬೆಂಬಲಿಸುವ ನಿರೀಕ್ಷೆಯಿದೆ.

ಫಲಿತಾಂಶ 17: ಲೈಡನ್ ವಿಶ್ವವಿದ್ಯಾಲಯದ ಗ್ರಂಥಾಲಯಗಳು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡುವೆ ಸಹಯೋಗ

ಲೈಡನ್ ವಿಶ್ವವಿದ್ಯಾಲಯದ ಗ್ರಂಥಾಲಯಗಳು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡುವಿನ ಸಹಯೋಗವು ಐತಿಹಾಸಿಕ ಸಂಶೋಧನೆ, ದಾಖಲೆಗಳ (ಆರ್ಕೈವ್ಸ್) ರಕ್ಷಣೆ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿನ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲಿದೆ. ಈ ಉಪಕ್ರಮವು ಚೋಳರ ಕಾಲದ ಕುರಿತಾದ ಜಂಟಿ ಸಂಶೋಧನೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ, ಶೈಕ್ಷಣಿಕ ಸಹಯೋಗವನ್ನು ಉತ್ತೇಜಿಸಲಿದೆ ಮತ್ತು ಅಮೂಲ್ಯವಾದ ಐತಿಹಾಸಿಕ ದಾಖಲೆಗಳು ಹಾಗೂ ಹಸ್ತಪ್ರತಿಗಳ ಲಭ್ಯತೆಯನ್ನು ಸುಧಾರಿಸಲಿದೆ. ಇದು ಸಾಂಸ್ಕೃತಿಕ ರಾಜತಾಂತ್ರಿಕತೆಯನ್ನು ಆಳವಾಗಿಸಲಿದೆ ಮತ್ತು ಭಾರತದ ಶ್ರೀಮಂತ ನಾಗರಿಕ ಹಾಗೂ ಪುರಾತತ್ವ ಪರಂಪರೆಯ ಬಗ್ಗೆ ಜಾಗತಿಕ ಜಾಗೃತಿಯನ್ನು ಹೆಚ್ಚಿಸಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಫಲಿತಾಂಶಗಳು ಸಾಂಪ್ರದಾಯಿಕ ಸಹಕಾರದಿಂದ ಭವಿಷ್ಯದ-ಆಧಾರಿತ ವ್ಯೂಹಾತ್ಮಕ ಪಾಲುದಾರಿಕೆಯತ್ತ ಹೆಜ್ಜೆ ಇಟ್ಟಿರುವುದನ್ನು ಸೂಚಿಸುತ್ತವೆ. ಅವು ಸ್ಥಿತಿಸ್ಥಾಪಕ ಬೆಳವಣಿಗೆ, ತಾಂತ್ರಿಕ ಪ್ರಗತಿ ಮತ್ತು ಜಾಗತಿಕ ಸವಾಲುಗಳ ಮೇಲಿನ ಬಲವಾದ ಸಮನ್ವಯಕ್ಕಾಗಿ ಉಭಯ ದೇಶಗಳು ಹೊಂದಿರುವ ಹಂಚಿಕೆಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ವಿಸ್ತರಿಸುತ್ತಿರುವ ಭಾರತ-ನೆದರ್ ಲ್ಯಾಂಡ್ಸ್ ಪಾಲುದಾರಿಕೆಯು ನಾವೀನ್ಯತೆ-ಚಾಲಿತ ಅಂತರರಾಷ್ಟ್ರೀಯ ಸಹಕಾರದ ಪ್ರಮುಖ ಸ್ತಂಭವಾಗಲು ಸಜ್ಜಾಗಿದೆ.

ಭವಿಷ್ಯ ಸನ್ನದ್ಧ ಭಾರತ-ನೆದರ್ ಲ್ಯಾಂಡ್ಸ್ ಪಾಲುದಾರಿಕೆಯತ್ತ

ಭಾರತ ಮತ್ತು ನೆದರ್ ಲ್ಯಾಂಡ್ಸ್ ದೇಶಗಳು ತಮ್ಮ ಪಾಲುದಾರಿಕೆಯನ್ನು ಸಮಗ್ರ ಮತ್ತು ಭವಿಷ್ಯದ-ಆಧಾರಿತ ಸಹಯೋಗವಾಗಿ ಸ್ಥಿರವಾಗಿ ವಿಸ್ತರಿಸುತ್ತಿವೆ. ತಂತ್ರಜ್ಞಾನ, ಸ್ವಚ್ಛ ಇಂಧನ, ಸೆಮಿಕಂಡಕ್ಟರ್‌ಗಳು, ಜಲ ನಿರ್ವಹಣೆ, ನಾವೀನ್ಯತೆ ಮತ್ತು ವ್ಯಾಪಾರದಲ್ಲಿನ ಬಲವಾದ ಪೂರಕತೆಗಳು ಆಳವಾದ ತೊಡಗಿಸಿಕೊಳ್ಳುವಿಕೆಗೆ ದೃಢವಾದ ಅಡಿಪಾಯವನ್ನು ಒದಗಿಸುತ್ತವೆ. ಈ ಬಾಂಧವ್ಯವನ್ನು 'ವ್ಯೂಹಾತ್ಮಕ ಪಾಲುದಾರಿಕೆ'ಗೆ ಏರಿಸಿರುವುದು ಬೆಳೆಯುತ್ತಿರುವ ಪರಸ್ಪರ ವಿಶ್ವಾಸ ಮತ್ತು ಹಂಚಿಕೆಯ ಜಾಗತಿಕ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ಉಭಯ ದೇಶಗಳು ಆರ್ಥಿಕ, ತಾಂತ್ರಿಕ ಮತ್ತು ಜನರ ನಡುವಿನ ಕೊಂಡಿಗಳನ್ನು ಬಲಪಡಿಸುತ್ತಿದ್ದಂತೆ, ಈ ಪಾಲುದಾರಿಕೆಯು ಸುಸ್ಥಿರ ಬೆಳವಣಿಗೆ, ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳು ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕೆ ಮಹತ್ವದ ಕೊಡುಗೆ ನೀಡಲು ಸಜ್ಜಾಗಿದೆ.

References:

  1. Ministry of External Affairs
  1. Press Information Bureau
  1. Embassy of the Netherlands in India

· https://www.netherlandsandyou.nl/web/india/w/the-netherlands-and-india-work-together-to-boost-the-semiconductor-industry

·  https://www.netherlandsandyou.nl/web/india/themes/climate-energy

Click here to see pdf

 

*****

(Explainer ID: 158682) आगंतुक पटल : 12
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Manipuri , Bengali , Assamese , Malayalam