Social Welfare
ಸೋಮನಾಥ: ಭಾರತದ ಅಕ್ಷಯ ಜ್ಯೋತಿ
ಶ್ರದ್ಧೆ, ಧೈರ್ಯ ಮತ್ತು ಸಾಂಸ್ಕೃತಿಕ ನಿರಂತರತೆಯ 75 ವರ್ಷಗಳ ಸಂಭ್ರಮಾಚರಣೆ
Posted On:
08 MAY 2026 6:05PM
|
ಸೋಮನಾಥವು ಭಾರತದ ಅತ್ಯಂತ ಪವಿತ್ರ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾಗಿದೆ. 1026 ರಿಂದ ಸತತವಾಗಿ ವಿದೇಶಿ ದಾಳಿಗಳು ನಡೆದರೂ ಸಹ, ಸೋಮನಾಥವು ಶ್ರದ್ಧೆ, ಮತ್ತು ಸಾಂಸ್ಕೃತಿಕ ನಿರಂತರತೆಯ ಸಂಕೇತವಾಗಿ ಉಳಿದಿದೆ. ರಾಷ್ಟ್ರೀಯ ನಾಯಕತ್ವದ ಅಡಿಯಲ್ಲಿ 1951 ರಲ್ಲಿ ಪುನರ್ನಿರ್ಮಿಸಲಾದ ಈ ದೇವಾಲಯದ ಪುನರಾರಂಭವು ಭಾರತದ ನಾಗರಿಕತೆಯ ಪುನರುತ್ಥಾನವನ್ನು ಗುರುತಿಸಿತು. 'ಸೋಮನಾಥ ಸ್ವಾಭಿಮಾನ್ ಪರ್ವ'ವು 1026 ರಲ್ಲಿ ದೇವಾಲಯದ ಮೇಲೆ ನಡೆದ ಮೊದಲ ದಾಳಿಯ 1000 ವರ್ಷಗಳ ನೆನಪನ್ನು ಸ್ಮರಿಸುತ್ತದೆ. ಇದು ಮೇ 1951 ರಲ್ಲಿ ದೇವಾಲಯವು ಪುನರಾರಂಭಗೊಂಡ 75 ವರ್ಷಗಳ ಸಂಭ್ರಮವನ್ನೂ ಸಹ ಸೂಚಿಸುತ್ತದೆ. ಈ ಪರ್ವವು ದೇವಾಲಯದ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸುತ್ತದೆ ಮತ್ತು ಅದರ ಅಳಿಯದ ಪರಂಪರೆಯನ್ನು ಆಚರಿಸುತ್ತದೆ. ಈ ಘಟನೆಯ ಸ್ಮರಣಾರ್ಥವಾಗಿ ಪ್ರಧಾನಮಂತ್ರಿ ಮೋದಿಯವರು ಮೇ 11 ರಂದು ಸೋಮನಾಥ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.
|
ಸೋಮನಾಥದ ಪವಿತ್ರ ತೀರಗಳು

ಗುಜರಾತ್‌ನ ಸೌರಾಷ್ಟ್ರ ಕರಾವಳಿಯ ಪ್ರಭಾಸ ಪಟಾಣ್‌ನಲ್ಲಿರುವ ಸೋಮನಾಥವು ಭಾರತದ ಅತ್ಯಂತ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಶಿವಪುರಾಣದಲ್ಲಿ ಉಲ್ಲೇಖಿಸಲಾದ ಅತ್ಯಂತ ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಈ ದೇವಾಲಯವು ತನ್ನಲ್ಲಿ ಪ್ರತಿಷ್ಠಾಪಿಸಿಕೊಂಡಿದೆ. ಇದು ಶಿವ, ಶ್ರೀಕೃಷ್ಣ ಮತ್ತು ಶಕ್ತಿಯ ಆರಾಧನೆಗೆ ಅತ್ಯಂತ ಪೂಜನೀಯವಾದ ಸ್ಥಳವಾಗಿದೆ.
'ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ'ವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಸೋಮನಾಥಕ್ಕೆ ಪ್ರಥಮ ಸ್ಥಾನವನ್ನು ನೀಡಿದೆ. ಇದು ಭಾರತದ ಆಧ್ಯಾತ್ಮಿಕ ಮತ್ತು ನಾಗರಿಕತೆಯ ಪರಂಪರೆಯಲ್ಲಿ ಈ ಕ್ಷೇತ್ರಕ್ಕಿರುವ ಮಹೋನ್ನತ ಸ್ಥಾನವನ್ನು ಎತ್ತಿ ತೋರಿಸುತ್ತದೆ.
ಸೋಮನಾಥ ದೇವಾಲಯವು ಶತಮಾನಗಳ ಕಾಲ ಆಕ್ರಮಣಕಾರರಿಂದ ಪದೇ ಪದೇ ಧ್ವಂಸಗೊಂಡು ಲೂಟಿಯಾಗಿದೆ; ಆದರೆ ಪ್ರತಿ ಬಾರಿಯೂ ಭಕ್ತರು ಮತ್ತು ಆಡಳಿತಗಾರರು ಇದನ್ನು ಪುನರ್ನಿರ್ಮಿಸಿ, ಅದರ ಕಳೆದುಹೋದ ವೈಭವವನ್ನು ಮರುಸ್ಥಾಪಿಸಿದ್ದಾರೆ. ಆದ್ದರಿಂದ, ಶತಮಾನಗಳ ಕಾಲ ನಡೆದ ಸತತ ದಾಳಿಗಳ ವಿರುದ್ಧ ಜಯಗಳಿಸಿ ನಿಂತಿರುವ ಸೋಮನಾಥವು, ಭಾರತದ ಅಚಲವಾದ ನಂಬಿಕೆಗೆ ಒಂದು ಜೀವಂತ ಸಾಕ್ಷಿಯಾಗಿದೆ. ಇದು ನಮ್ಮ ನಾಗರಿಕತೆಯ ನಿರಂತರತೆ, ನಮ್ಮ ನಂಬಿಕೆಯ ಆಳ ಮತ್ತು ನಮ್ಮ ಸಾಮೂಹಿಕ ಸಂಕಲ್ಪದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಅಕ್ಷಯ ಜ್ಯೋತಿ: ಕಾಲದ ಸವಾಲುಗಳನ್ನು ಮೀರಿದ ಸೋಮನಾಥ
ಸೋಮನಾಥದ ಉಗಮವು ಪ್ರಾಚೀನ ಭಾರತೀಯ ಸಂಪ್ರದಾಯದಲ್ಲಿ ಆಳವಾಗಿ ಬೇರೂರಿದೆ. ಈ ಕ್ಷೇತ್ರವು ಶಿವನ ಆರಾಧನೆ ಮತ್ತು ಚಂದ್ರನ (ಚಂದ್ರ ದೇವ) ಪೂಜೆಯೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ.

ಶತಮಾನಗಳ ಸುದೀರ್ಘ ಪಯಣ ಮತ್ತು ಪುನರುತ್ಥಾನ
ಶತಮಾನಗಳ ಅವಧಿಯಲ್ಲಿ, ಸೋಮನಾಥವು ಹಲವಾರು ಹಂತದ ನಿರ್ಮಾಣ ಕಾರ್ಯಗಳಿಗೆ ಸಾಕ್ಷಿಯಾಗಿದೆ. ಪ್ರಾಚೀನ ಸಂಪ್ರದಾಯಗಳು ವಿವಿಧ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾದ ಸರಣಿ ದೇವಾಲಯಗಳನ್ನು ವಿವರಿಸುತ್ತವೆ; ಇದು ನವೀಕರಣ ಮತ್ತು ನಿರಂತರತೆಯ ಸಂಕೇತವಾಗಿದೆ.
ಸೋಮನಾಥದ ಇತಿಹಾಸದ ಅತ್ಯಂತ ಕಠಿಣ ಹಂತವು ಹನ್ನೊಂದನೇ ಶತಮಾನದಲ್ಲಿ ಪ್ರಾರಂಭವಾಯಿತು. ಜನವರಿ 1026 ರಲ್ಲಿ, ಸೋಮನಾಥವು ಆಕ್ರಮಣಕಾರರಿಂದ ಮೊದಲ ದಾಖಲಿತ ದಾಳಿಯನ್ನು ಎದುರಿಸಿತು. ಇದು ಹನ್ನೊಂದನೇ ಮತ್ತು ಹದಿನೆಂಟನೇ ಶತಮಾನದ ನಡುವೆ ದೇವಾಲಯವು ಪದೇ ಪದೇ ಧ್ವಂಸಗೊಂಡ ಸುದೀರ್ಘ ಅವಧಿಯ ಆರಂಭವಾಗಿತ್ತು.
ಪ್ರತಿ ಬಾರಿ ದೇವಾಲಯವು ನಾಶವಾದಾಗಲೂ, ಭಕ್ತರು ಮತ್ತು ರಾಜರು ಅದನ್ನು ಮರುನಿರ್ಮಿಸಲು ಮುಂದೆ ಬಂದರು. ಇವರಲ್ಲಿ ಪ್ರಮುಖರಾದ ರಾಜ ಕುಮಾರಪಾಲ 12 ನೇ ಶತಮಾನದಲ್ಲಿ ದೇವಾಲಯವನ್ನು ಪುನಃಸ್ಥಾಪಿಸಿದರು. ಜುನಾಗಢದ ರಾಜ 13 ನೇ ಶತಮಾನದಲ್ಲಿ ಇದನ್ನು ಮರುನಿರ್ಮಿಸಿದನು. ಮತ್ತೊಮ್ಮೆ ಧ್ವಂಸಗೊಂಡ ನಂತರ, ಇಂದೋರ್‌ನ ಮರಾಠ ರಾಣಿ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರು 18 ನೇ ಶತಮಾನದಲ್ಲಿ ಸೋಮನಾಥದಲ್ಲಿ ಹೊಸ ದೇವಾಲಯವನ್ನು ಪ್ರತಿಷ್ಠಾಪಿಸಲು ನಿರ್ಧರಿಸಿದರು. ಹೀಗೆ, ಪದೇ ಪದೇ ವಿನಾಶಕ್ಕೊಳಗಾದರೂ, ಸೋಮನಾಥವು ಜನರ ಸಾಮೂಹಿಕ ಪ್ರಜ್ಞೆಯಿಂದ ಎಂದಿಗೂ ಮರೆಯಾಗಲಿಲ್ಲ.
ಸ್ವಾತಂತ್ರ್ಯದ ನಂತರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1947 ರಲ್ಲಿ ಸೋಮನಾಥದ ಅವಶೇಷಗಳನ್ನು ಸಂದರ್ಶಿಸಿ, ದೇವಾಲಯವನ್ನು ಪುನರ್ನಿರ್ಮಿಸಲು ಸಂಕಲ್ಪ ಮಾಡಿದರು. ಸೋಮನಾಥದ ಪುನರ್ನಿರ್ಮಾಣವು ಭಾರತದ ಸಾಂಸ್ಕೃತಿಕ ಆತ್ಮವಿಶ್ವಾಸವನ್ನು ಮರುಸ್ಥಾಪಿಸಲು ಅತ್ಯಗತ್ಯ ಎಂಬ ನಂಬಿಕೆಯಲ್ಲಿ ಅವರ ದೃಷ್ಟಿಕೋನ ಅಡಗಿತ್ತು. ಸಾರ್ವಜನಿಕರ ಸಹಭಾಗಿತ್ವ ಮತ್ತು ರಾಷ್ಟ್ರೀಯ ಸಂಕಲ್ಪದ ಬೆಂಬಲದೊಂದಿಗೆ, ಪ್ರಸ್ತುತ ದೇವಾಲಯವನ್ನು 'ಕೈಲಾಸ ಮಹಾಮೇರು ಪ್ರಸಾದ' ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಯಿತು.
11 ಮೇ 1951 ರಂದು, ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ದೇವಾಲಯವನ್ನು ವಿಧ್ಯುಕ್ತವಾಗಿ ಲೋಕಾರ್ಪಣೆ ಮಾಡಿದರು. ಇಂದು, 75 ವರ್ಷಗಳ ನಂತರ, ಸೋಮನಾಥವು ರಾಷ್ಟ್ರೀಯ ಹೆಮ್ಮೆ ಮತ್ತು ಆಧ್ಯಾತ್ಮಿಕ ಸಹಿಷ್ಣುತೆಯ ಸಂಕೇತವಾಗಿ ನವಚೈತನ್ಯದೊಂದಿಗೆ ಕಂಗೊಳಿಸುತ್ತಿದೆ.
|
ವೀರ ಹಮಿರ್ಜಿ ಗೋಹಿಲ್: ಇತಿಹಾಸದ ಪುಟಗಳಾಚೆಗಿನ ಅಜರಾಮರ ನೆನಪು

ಸೋಮನಾಥದ ಇತಿಹಾಸವು ಧೀಮಂತ ವ್ಯಕ್ತಿಗಳ ಶೌರ್ಯದಿಂದ ರೂಪಿತವಾಗಿದೆ, ಅವರ ಧೈರ್ಯವು ಇಂದಿಗೂ ಜನರ ನೆನಪುಗಳಲ್ಲಿ ಜೀವಂತವಾಗಿದೆ. ಅಂತಹ ವ್ಯಕ್ತಿಗಳಲ್ಲಿ ವೀರ ಹಮಿರ್ಜಿ ಗೋಹಿಲ್ ಪ್ರಮುಖರು.
ಇವರು ಸೌರಾಷ್ಟ್ರ ಪ್ರಾಂತ್ಯದ ಒಬ್ಬ ವೀರ ಯೋಧ. ಕ್ರಿ.ಶ. 1299 ರಲ್ಲಿ ಜಫರ್ ಖಾನ್‌ನ ಆಕ್ರಮಣದ ಸಮಯದಲ್ಲಿ ಸೋಮನಾಥ ದೇವಾಲಯವನ್ನು ರಕ್ಷಿಸಲು ಹೋರಾಡುತ್ತಾ ತಮ್ಮ ಪ್ರಾಣವನ್ನೇ ಅರ್ಪಿಸಿದ ಇವರನ್ನು ಇಂದಿಗೂ ಅತ್ಯಂತ ಭಕ್ತಿಯಿಂದ ಸ್ಮರಿಸಲಾಗುತ್ತದೆ.
ಅಧಿಕೃತ ಐತಿಹಾಸಿಕ ದಾಖಲೆಗಳಿಗಿಂತ ಹೆಚ್ಚಾಗಿ, ಸ್ಥಳೀಯ ಸಂಪ್ರದಾಯಗಳು ಮತ್ತು ಜನರ ಸಾಮೂಹಿಕ ಸ್ಮರಣೆಯ ಮೂಲಕ ಇವರು ಇಂದಿಗೂ ಜೀವಂತವಾಗಿದ್ದಾರೆ. ಗೆಲುವು ಅನಿಶ್ಚಿತವಾಗಿದ್ದರೂ ಅಥವಾ ಬೆಂಬಲ ಸೀಮಿತವಾಗಿದ್ದರೂ ಸಹ, ಪವಿತ್ರ ಸ್ಥಳಗಳನ್ನು, ಸಮಾಜವನ್ನು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ 'ರಾಜಧರ್ಮ'ಕ್ಕೆ ಇವರ ಜೀವನವು ಒಂದು ಉತ್ತಮ ಉದಾಹರಣೆಯಾಗಿದೆ.
|
ಸೋಮನಾಥ ಸ್ವಾಭಿಮಾನ ಪರ್ವ
ಸೋಮನಾಥ ಸ್ವಾಭಿಮಾನ ಪರ್ವವು ಸೋಮನಾಥ ದೇವಾಲಯದ ಅಳಿಯದ ಪರಂಪರೆಯನ್ನು ಗೌರವಿಸುತ್ತದೆ. ಕ್ರಿ.ಶ. 1026 ರಲ್ಲಿ ಸೋಮನಾಥ ದೇವಾಲಯದ ಮೇಲೆ ನಡೆದ ಮೊದಲ ದಾಖಲಿತ ದಾಳಿಗೆ ಈಗ ಒಂದು ಸಾವಿರ ವರ್ಷಗಳು ತುಂಬಿವೆ. ಮೇ 11, 2026 ರಂದು, ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು 1951 ರಲ್ಲಿ ಸೋಮನಾಥ ದೇವಾಲಯವನ್ನು ಪುನಃ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದ 75 ನೇ ವಾರ್ಷಿಕೋತ್ಸವವನ್ನೂ ಸಹ ಇದು ಸೂಚಿಸುತ್ತದೆ. ಅಂದು ಅವರು ಸೋಮನಾಥವನ್ನು ಭಾರತದ ಆಧ್ಯಾತ್ಮಿಕ ಶಕ್ತಿ ಮತ್ತು ಸಾಂಸ್ಕೃತಿಕ ಪುನರುತ್ಥಾನದ ಸಂಕೇತ ಎಂದು ಬಣ್ಣಿಸಿದ್ದರು. ಈ ದೇವಾಲಯದ ಪುನರಾರಂಭವು ಕೇವಲ ಒಂದು ಮಂದಿರದ ಜೀರ್ಣೋದ್ಧಾರಕ್ಕಿಂತ ಮಿಗಿಲಾದದ್ದಾಗಿತ್ತು; ಇದು ಶತಮಾನಗಳ ಹೋರಾಟದ ನಂತರ ಭಾರತದ ನಾಗರಿಕತೆಯ ಆತ್ಮವಿಶ್ವಾಸದ ಪುನಶ್ಚೇತನವನ್ನು ಪ್ರತಿನಿಧಿಸಿತ್ತು.
ಆದ್ದರಿಂದ, ಸೋಮನಾಥ ಸ್ವಾಭಿಮಾನ ಪರ್ವವು ಭಾರತದ ಇತಿಹಾಸದ ಎರಡು ಪ್ರಮುಖ ಮೈಲಿಗಲ್ಲುಗಳನ್ನು ಒಟ್ಟಿಗೆ ಸ್ಮರಿಸುತ್ತದೆ. ಮೊದಲ ಮೈಲಿಗಲ್ಲು ವಿನಾಶವನ್ನು ಪ್ರತಿನಿಧಿಸಿದರೆ, ಎರಡನೆಯದು ವಿನಾಶದ ಮೇಲೆ ವಿಜಯ ಸಾಧಿಸಿ ಪುಟಿದೆದ್ದ ದೇಶದ ಗಾಢ ನಂಬಿಕೆ ಮತ್ತು ಚೇತರಿಸಿಕೊಳ್ಳುವ ಶಕ್ತಿಯನ್ನು ಪ್ರತಿನಿಧಿಸುತ್ತದೆ.
ಸೋಮನಾಥ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದೇವಾಲಯದ ಪುನರಾರಂಭದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಮೇ 11 ರಂದು ಸೋಮನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

ತಮ್ಮ ಭೇಟಿಗೂ ಮುನ್ನ ಪ್ರಧಾನಮಂತ್ರಿಯವರು ಸೋಮನಾಥ ದೇವಾಲಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿನಾಶದಿಂದ ಪುನರುತ್ಥಾನದವರೆಗಿನ ಈ ದೇವಾಲಯದ ಪಯಣವನ್ನು ವಿವರಿಸಿದ ಅವರು, ಇದನ್ನು 'ಭಾರತದ ಅಜೇಯ ಚೇತನದ ಸಂಕೇತ' ಎಂದು ಕರೆದರು. ಶತಮಾನಗಳ ಕಾಲ ಈ ದೇವಾಲಯವನ್ನು ಸಂರಕ್ಷಿಸಿದ ಮತ್ತು ಪುನರ್ನಿರ್ಮಿಸಿದವರಿಗೆ ಅವರು ಗೌರವ ಸಲ್ಲಿಸಿದರು. ಪ್ರಧಾನಮಂತ್ರಿಯವರು ವಿಶೇಷವಾಗಿ "ವಿಕಾಸ್ ಭಿ, ವಿರಾಸತ್ ಭಿ" (ಅಭಿವೃದ್ಧಿಯ ಜೊತೆಗೆ ಪರಂಪರೆ) ಎಂಬ ದೃಷ್ಟಿಕೋನವನ್ನು ಎತ್ತಿ ತೋರಿಸಿದರು, ಇದು ಪರಂಪರೆಯ ಸಂರಕ್ಷಣೆಯೊಂದಿಗೆ ಆಧುನಿಕ ಅಭಿವೃದ್ಧಿಗೂ ಒತ್ತು ನೀಡುತ್ತದೆ. ಇದೇ ಸಂದರ್ಭದಲ್ಲಿ ಅವರು ಸೋಮನಾಥ ದೇವಾಲಯದ ಇತಿಹಾಸವನ್ನು ಗೌರವಿಸುವ ಸಲುವಾಗಿ ಮುಂದಿನ 1,000 ದಿನಗಳ ಕಾಲ ಅಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುವುದು ಎಂದು ಘೋಷಿಸಿದರು. ಈ ಪ್ರಮುಖ ಕಾಲಘಟ್ಟದಲ್ಲಿ ಸೋಮನಾಥಕ್ಕೆ ಭೇಟಿ ನೀಡುವಂತೆ ಅವರು ಜನರಿಗೆ ಕರೆ ನೀಡಿದರು.

ಇದಕ್ಕೂ ಮೊದಲು, 2026ರ ಜನವರಿಯಲ್ಲಿ, ಪ್ರಧಾನಿ ಮೋದಿಯವರು ಜನವರಿ 10-11 ರಂದು ದೇವಾಲಯದಲ್ಲಿ ನಡೆದ ಸೋಮನಾಥ ಸ್ವಾಭಿಮಾನ ಪರ್ವದ ಆಚರಣೆಗಳಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರದ ಕಲ್ಯಾಣ ಮತ್ತು ಸಮೃದ್ಧಿಗಾಗಿ ಪವಿತ್ರ ವಿಧಿವಿಧಾನಗಳು ಮತ್ತು ಪ್ರಾರ್ಥನೆಗಳೊಂದಿಗೆ 72 ಗಂಟೆಗಳ ಕಾಲ ಸತತವಾಗಿ ಓಂಕಾರ ಮಂತ್ರದ ಪಠಣ ನಡೆಯಿತು.
ಶತಮಾನಗಳ ಕಾಲ ಸೋಮನಾಥವನ್ನು ರಕ್ಷಿಸಿದ ವೀರರಿಗೆ ಗೌರವ ಸಲ್ಲಿಸಲು ಪ್ರಭಾಸ ಪಟಾಣದಲ್ಲಿ ಭವ್ಯವಾದ ಶೌರ್ಯ ಯಾತ್ರೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸಾಂಕೇತಿಕವಾಗಿ 108 ಕುದುರೆಗಳ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು.
|
ಸೋಮನಾಥ ಸ್ವಾಭಿಮಾನ ಪರ್ವ ಯಾತ್ರೆ
“ಚಲೋ ಚಲೈಂ ಸೋಮನಾಥ್” (ನಡೆಯಿರಿ ಸೋಮನಾಥಕ್ಕೆ ಹೋಗೋಣ) ಅಭಿಯಾನದ ಅಡಿಯಲ್ಲಿ ಆಯೋಜಿಸಲಾದ ಸೋಮನಾಥ ಸ್ವಾಭಿಮಾನ ಪರ್ವ ಯಾತ್ರೆಗೆ, 2026ರ ಏಪ್ರಿಲ್ 30ರಂದು ದೆಹಲಿಯ ಸಫ್ದರ್‌ಜಂಗ್ ರೈಲ್ವೆ ನಿಲ್ದಾಣದಿಂದ ಚಾಲನೆ ನೀಡಲಾಯಿತು. ದೇವಾಲಯದ ನಂಬಿಕೆ ಮತ್ತು ಚೇತರಿಸಿಕೊಳ್ಳುವ ಶಕ್ತಿಯ 1,000 ವರ್ಷಗಳ ನೆನಪಿಗಾಗಿ ವರ್ಷವಿಡೀ ನಡೆಯುವ ಸಂಭ್ರಮಾಚರಣೆಯ ಭಾಗವಾಗಿ, 1,300ಕ್ಕೂ ಹೆಚ್ಚು ಭಕ್ತರನ್ನು ಹೊತ್ತ ಈ ವಿಶೇಷ ರೈಲು ಸೋಮನಾಥಕ್ಕೆ ಪ್ರಯಾಣ ಬೆಳೆಸಿತು.
ಈ ಯಾತ್ರೆಯು ಮೇ 1 ರಂದು ಸೋಮನಾಥವನ್ನು ತಲುಪಿತು. ನಂತರದ ದಿನಗಳಲ್ಲಿ ಆರತಿ, ದೇವಾಲಯದ ದರ್ಶನ ಮತ್ತು ಲೈಟ್ ಅಂಡ್ ಸೌಂಡ್ ಶೋ (ಬೆಳಕು ಮತ್ತು ಧ್ವನಿ ಪ್ರದರ್ಶನ) ಸೇರಿದಂತೆ ಸರಣಿ ಭಕ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
|
ಸೋಮನಾಥ ದೇವಾಲಯ: ಭವ್ಯತೆ, ಭಕ್ತಿ ಮತ್ತು ಜೀವಂತ ಪರಂಪರೆ
ಭಗವಾನ್ ಶಿವನ ಹನ್ನೆರಡು ಆದಿ ಜ್ಯೋತಿರ್ಲಿಂಗಗಳಲ್ಲಿ ಸೋಮನಾಥವು ಅತ್ಯಂತ ಪವಿತ್ರವಾದ ಮೊದಲ ಸ್ಥಾನವನ್ನು ಹೊಂದಿದೆ. ಈ ದೇವಾಲಯದ ಸಂಕೀರ್ಣವು ಗರ್ಭಗೃಹ, ಸಭಾ ಮಂಟಪ ಮತ್ತು ನೃತ್ಯ ಮಂಟಪಗಳನ್ನು ಒಳಗೊಂಡಿದೆ. ಅರಬ್ಬಿ ಸಮುದ್ರದ ತೀರದಲ್ಲಿ ಈ ದೇವಾಲಯವು ಅತ್ಯಂತ ಭವ್ಯವಾಗಿ ಎದ್ದು ನಿಂತಿದೆ.
ದೇವಾಲಯದ ಶಿಖರವು 150 ಅಡಿ ಎತ್ತರವಿದ್ದು, ಅದರ ಮೇಲೆ 10 ಟನ್ ತೂಕದ ಬೃಹತ್ ಕಳಶವಿದೆ. ಇಲ್ಲಿರುವ 27 ಅಡಿ ಎತ್ತರದ ಧ್ವಜದಂಡವು ದೇವಾಲಯದ ಅಳಿಯದ ಆಧ್ಯಾತ್ಮಿಕ ಅಸ್ತಿತ್ವವನ್ನು ಪ್ರತಿನಿಧಿಸುತ್ತದೆ. ಈ ದೇವಾಲಯದ ಸಂಕೀರ್ಣದಲ್ಲಿ 1,666 ಚಿನ್ನದ ಲೇಪಿತ ಕಳಶಗಳು ಮತ್ತು 14,200 ಧ್ವಜಗಳಿವೆ, ಇವು ಶತಮಾನಗಳ ಭಕ್ತಿ ಮತ್ತು ಕಲಾ ನೈಪುಣ್ಯತೆಯನ್ನು ಪ್ರತಿಬಿಂಬಿಸುತ್ತವೆ.

ಸೋಮನಾಥವು ಇಂದಿಗೂ ಭಕ್ತಿ ಮತ್ತು ಯಾತ್ರಾಸ್ಥಳದ ಪ್ರಮುಖ ಕೇಂದ್ರವಾಗಿ ಮುಂದುವರಿದಿದೆ. ಇಲ್ಲಿಗೆ ವಾರ್ಷಿಕವಾಗಿ ಸುಮಾರು 92 ರಿಂದ 97 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಪ್ರತಿವರ್ಷ ಸುಮಾರು 13.77 ಲಕ್ಷಕ್ಕೂ ಹೆಚ್ಚು ಭಕ್ತರು 'ಬಿಲ್ವ ಪೂಜೆ'ಯಂತಹ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳುತ್ತಾರೆ.
ಸಾಂಸ್ಕೃತಿಕ ಉಪಕ್ರಮಗಳು ಸೋಮನಾಥದ ಪರಂಪರೆಯೊಂದಿಗೆ ಸಾರ್ವಜನಿಕರ ಒಡನಾಟವನ್ನು ಮತ್ತಷ್ಟು ಆಳವಾಗಿಸಿವೆ. 2003 ರಲ್ಲಿ ಪ್ರಾರಂಭವಾದ 'ಲೈಟ್ ಅಂಡ್ ಸೌಂಡ್ ಶೋ' (ಬೆಳಕು ಮತ್ತು ಧ್ವನಿ ಪ್ರದರ್ಶನ) 2017 ರಲ್ಲಿ ಆಧುನೀಕರಣಗೊಂಡಿತು. ಇಂದು ಇದು ನಿರೂಪಣೆ ಮತ್ತು 3D ಲೇಸರ್ ತಂತ್ರಜ್ಞಾನವನ್ನು ಬಳಸುತ್ತದೆ.
'ವಂದೇ ಸೋಮನಾಥ ಕಲಾ ಮಹೋತ್ಸವ' ದಂತಹ ಕಾರ್ಯಕ್ರಮಗಳು 1,500 ವರ್ಷಗಳ ಹಳೆಯ ನೃತ್ಯ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಸೋಮನಾಥವು ನವೀಕೃತ ಸಾಂಸ್ಕೃತಿಕ ಅಭಿವೃದ್ಧಿಯನ್ನು ಕಂಡಿದೆ. ಆಡಳಿತಾತ್ಮಕ ಸುಧಾರಣೆಗಳು ಮತ್ತು ಪರಂಪರೆಯ ಸಂರಕ್ಷಣೆಯು ಅದರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮತ್ತಷ್ಟು ಬಲಪಡಿಸಿವೆ.
ಶ್ರೀ ಸೋಮನಾಥ ಟ್ರಸ್ಟ್‌ನ ಸಾಮಾಜಿಕ ಮತ್ತು ಕಲ್ಯಾಣ ಚಟುವಟಿಕೆಗಳು
ಶೈಕ್ಷಣಿಕ ಅಭಿವೃದ್ಧಿ ಮತ್ತು ಕೌಶಲ್ಯ ತರಬೇತಿ
ಟ್ರಸ್ಟ್ ಶಿಕ್ಷಣ ಮತ್ತು ಉದ್ಯೋಗಾಧಾರಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತದೆ. ವೃತ್ತಿಪರ ತರಬೇತಿ ಕಾರ್ಯಕ್ರಮಗಳು ಹತ್ತಿರದ ಪ್ರದೇಶಗಳ ಯುವಕರು ಮತ್ತು ಮಹಿಳೆಯರಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತಿವೆ. ಈ ಕೋರ್ಸ್‌ಗಳಲ್ಲಿ ಗಣಕಯಂತ್ರ ಶಿಕ್ಷಣ, ಹೊಲಿಗೆ ತರಬೇತಿ, ಬ್ಯೂಟಿ ಸರ್ವಿಸಸ್ ಮತ್ತು ಡಿಜಿಟಲ್ ಸಾಕ್ಷರತಾ ತರಬೇತಿ ಸೇರಿವೆ. 10 ಮತ್ತು 12 ನೇ ತರಗತಿಯ ನಂತರ ಶಿಕ್ಷಣವನ್ನು ಮುಂದುವರಿಸುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೆರವು ನೀಡಲಾಗುತ್ತದೆ.
“ಸ್ಕೂಲ್ ಆನ್ ವೀಲ್ಸ್” (ಚಕ್ರದ ಮೇಲಿನ ಶಾಲೆ) ಉಪಕ್ರಮವು ಹಳ್ಳಿಗಳಲ್ಲಿ ಮೊಬೈಲ್ ಡಿಜಿಟಲ್ ಕಲಿಕೆಯನ್ನು ಒದಗಿಸುತ್ತದೆ. ಗ್ರಾಮೀಣ ವಿದ್ಯಾರ್ಥಿಗಳು ಪ್ರಾಯೋಗಿಕ ಕಂಪ್ಯೂಟರ್ ತರಬೇತಿ ಮತ್ತು ಮೂಲಭೂತ ಡಿಜಿಟಲ್ ಸಾಕ್ಷರತಾ ಶಿಕ್ಷಣವನ್ನು ಪಡೆಯುತ್ತಾರೆ. ಶೈಕ್ಷಣಿಕ ಸ್ಪರ್ಧೆಗಳ ಮೂಲಕ ಸ್ವಚ್ಛತೆ ಮತ್ತು ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಸ್ಥಳೀಯ ಸಮುದಾಯಗಳಿಗಾಗಿ ಪರಿಸರ ಜವಾಬ್ದಾರಿಯ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತದೆ.
ಅನ್ನದಾನ ಮತ್ತು ಸಮುದಾಯ ಕಲ್ಯಾಣ
ಟ್ರಸ್ಟ್ ಭಕ್ತರು ಮತ್ತು ಅಗತ್ಯವಿರುವವರಿಗಾಗಿ ನಿಯಮಿತವಾಗಿ ಅನ್ನದಾನ ಉಪಕ್ರಮಗಳನ್ನು ನಡೆಸುತ್ತದೆ. ಸಮುದಾಯದ ಬೆಂಬಲಿತ ಆಹಾರ ನೆರವು ಕಾರ್ಯಕ್ರಮಗಳ ಮೂಲಕ ಪ್ರತಿದಿನ ಉಚಿತ ಊಟವನ್ನು ನೀಡಲಾಗುತ್ತದೆ.
ದಾನಿಗಳ ಸಹಕಾರವು ಈ ಕಲ್ಯಾಣ ಕಾರ್ಯಕ್ರಮಗಳನ್ನು ವರ್ಷವಿಡೀ ನಡೆಸಲು ಸಹಾಯ ಮಾಡುತ್ತದೆ. ತುರ್ತು ಸಂದರ್ಭಗಳಲ್ಲಿ, ಟ್ರಸ್ಟ್ ಪೀಡಿತ ಸಮುದಾಯಗಳಿಗೆ ಮಾನವೀಯ ನೆರವು ನೀಡುತ್ತದೆ. ಪರಿಹಾರ ಚಟುವಟಿಕೆಗಳಲ್ಲಿ ಆಹಾರ ವಿತರಣೆ, ವೈದ್ಯಕೀಯ ನೆರವು ಮತ್ತು ಅಗತ್ಯ ಸಾಮಗ್ರಿಗಳ ಪೂರೈಕೆ ಸೇರಿವೆ. ಸಮುದಾಯ ಕಾರ್ಯಕ್ರಮಗಳ ಮೂಲಕ ಹಿಂದುಳಿದ ಕುಟುಂಬಗಳಿಗೂ ನೆರವು ನೀಡಲಾಗುತ್ತದೆ.
ಆರೋಗ್ಯ, ಶಿಕ್ಷಣ ಮತ್ತು ಸಮುದಾಯ ಕಲ್ಯಾಣ ಉಪಕ್ರಮಗಳು
ಶ್ರೀ ಸೋಮನಾಥ ಟ್ರಸ್ಟ್ ಆರೋಗ್ಯ ಮತ್ತು ಸಮುದಾಯ ಕಲ್ಯಾಣ ಕಾರ್ಯಕ್ರಮಗಳನ್ನು ಬೆಂಬಲಿಸುವುದನ್ನು ಮುಂದುವರಿಸಿದೆ. ವೈದ್ಯಕೀಯ ನೆರವು ಕಾರ್ಯಕ್ರಮಗಳು ಸೋಮನಾಥ-ಪ್ರಭಾಸ ಪಟಾಣ ಸುತ್ತಮುತ್ತಲಿನ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ಮಾಡುತ್ತವೆ. ಫಿಸಿಯೋಥೆರಪಿ ಸೌಲಭ್ಯಗಳು ಸ್ಥಳೀಯ ನಿವಾಸಿಗಳಿಗೆ ಕೈಗೆಟುಕುವ ದರದಲ್ಲಿ ಪುನರ್ವಸತಿ ಮತ್ತು ಚೇತರಿಕೆ ಬೆಂಬಲವನ್ನು ನೀಡುತ್ತವೆ. ಹತ್ತಿರದ ಸಮುದಾಯಗಳಿಗಾಗಿ ಉಚಿತ ದಂತ ಮತ್ತು ಕಣ್ಣಿನ ತಪಾಸಣಾ ಶಿಬಿರಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತದೆ.
ವೈದ್ಯಕೀಯ ನೆರವು ಶಿಬಿರಗಳ ಮೂಲಕ ವಿಕಲಚೇತನರಿಗಾಗಿ ಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕಾರ್ಯಕ್ರಮಗಳ ಸಮಯದಲ್ಲಿ ಚಕ್ರಕುರ್ಚಿಗಳು, ಶ್ರವಣ ಸಾಧನಗಳು ಮತ್ತು ಕ್ರಚಸ್‌ಗಳನ್ನು ವಿತರಿಸಲಾಗುತ್ತದೆ.
|
ಶ್ರೀ ಸೋಮನಾಥ ಟ್ರಸ್ಟ್‌ನಿಂದ ಕೋವಿಡ್-19 ಪರಿಹಾರ ಬೆಂಬಲ

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಶ್ರೀ ಸೋಮನಾಥ ಟ್ರಸ್ಟ್ ಪೀಡಿತರಿಗೆ ಆರ್ಥಿಕ ನೆರವು, ಆಹಾರ ವಿತರಣೆ, ವೈದ್ಯಕೀಯ ಮೂಲಸೌಕರ್ಯ ಮತ್ತು ಅಗತ್ಯ ಸಾಮಗ್ರಿಗಳನ್ನು ಒಳಗೊಂಡಂತೆ ಬೃಹತ್ ಮಟ್ಟದ ಪರಿಹಾರ ಬೆಂಬಲವನ್ನು ಒದಗಿಸಿತು. ಸಾಂಕ್ರಾಮಿಕದ ಎರಡೂ ಅಲೆಗಳ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರು, ವಲಸೆ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ಹಸ್ತ ಚಾಚಲಾಯಿತು.
- ಮೊದಲ ಅಲೆಯ ಸಮಯದಲ್ಲಿ ₹8.73 ಕೋಟಿ ನೆರವು
- ಎರಡನೇ ಅಲೆಯ ಸಮಯದಲ್ಲಿ ₹2.21 ಕೋಟಿ ನೆರವು
- ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹1 ಕೋಟಿ ದೇಣಿಗೆ
|
ಪರಿಸರ ಮತ್ತು ಸಾರ್ವಜನಿಕ ಕಲ್ಯಾಣ ಉಪಕ್ರಮಗಳು
ಪರಿಸರ ಸಂರಕ್ಷಣೆಯು ಟ್ರಸ್ಟ್‌ನ ಪ್ರಮುಖ ಆದ್ಯತೆಯ ಕ್ಷೇತ್ರಗಳಲ್ಲಿ ಒಂದಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರು ವಲಯವನ್ನು ಹೆಚ್ಚಿಸಲು ಬೃಹತ್ ಪ್ರಮಾಣದ ಸಸಿ ನೆಡುವ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸೋಮನಾಥದ ಸಮೀಪವಿರುವ ಬಿಲ್ವ ವನಗಳ ನಿರ್ಮಾಣ ಉಪಕ್ರಮಗಳು ಪರಿಸರ ಜಾಗೃತಿಯನ್ನು ಉತ್ತೇಜಿಸುತ್ತಿವೆ.
ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣಾ ಪದ್ಧತಿಗಳ ಮೂಲಕ ದೇವಾಲಯದ ಸಾವಯವ ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ಮರುಬಳಕೆ ಮಾಡಲಾಗುತ್ತಿದೆ. ಸಾವಯವ ತ್ಯಾಜ್ಯವನ್ನು ಕಾಂಪೋಸ್ಟ್ ಮತ್ತು ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸಿ ಸುಸ್ಥಿರ ಬಳಕೆಗಾಗಿ ಬಳಸಲಾಗುತ್ತಿದೆ. ಸಾರ್ವಜನಿಕ ನೈರ್ಮಲ್ಯ ಉಪಕ್ರಮಗಳು ಸ್ವಚ್ಛ ಮತ್ತು ಪರಿಸರ ಜವಾಬ್ದಾರಿಯುತ ಯಾತ್ರಾಸ್ಥಳವನ್ನು ರೂಪಿಸಲು ಬೆಂಬಲ ನೀಡುತ್ತಿವೆ.
ಶ್ರೀ ಸೋಮನಾಥ ಟ್ರಸ್ಟ್‌ನ ಕಲ್ಯಾಣ ಚಟುವಟಿಕೆಗಳು ಕೇವಲ ನಿಯಮಿತ ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಸೇವೆಗಳಿಗೆ ಸೀಮಿತವಾಗಿಲ್ಲ; ಇವು ತುರ್ತು ಸಂದರ್ಭಗಳು ಮತ್ತು ವಿಪತ್ತು ಪರಿಹಾರ ಕಾರ್ಯಗಳಿಗೂ ವಿಸ್ತರಿಸಿವೆ. ಸಮುದಾಯದ ಯೋಗಕ್ಷೇಮಕ್ಕಾಗಿ ನಿರಂತರ ಅಭಿವೃದ್ಧಿ ಕಾರ್ಯಗಳ ಜೊತೆಗೆ, ನೈಸರ್ಗಿಕ ವಿಕೋಪಗಳು ಮತ್ತು ಮಾನವೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಟ್ರಸ್ಟ್ ಸಕ್ರಿಯವಾಗಿ ಮುನ್ನಡಿಯಿಡುತ್ತಿದೆ.
ಸೋಮನಾಥದಲ್ಲಿ ಮಹಿಳಾ ಸಬಲೀಕರಣ ಮತ್ತು ಸುಸ್ಥಿರತೆ
2018 ರಲ್ಲಿ “ಸ್ವಚ್ಛ ಐಕಾನಿಕ್ ಪ್ಲೇಸ್” ಎಂದು ಘೋಷಿಸಲ್ಪಟ್ಟ ಸೋಮನಾಥವು ನವೀನ ಸುಸ್ಥಿರ ಪದ್ಧತಿಗಳನ್ನು ಅಳವಡಿಸಿಕೊಂಡಿದೆ. ದೇವಾಲಯದ ಹೂವುಗಳನ್ನು ವರ್ಮಿಕಾಂಪೋಸ್ಟ್ (ಎರೆಗೊಬ್ಬರ) ಆಗಿ ಪರಿವರ್ತಿಸಲಾಗುತ್ತಿದ್ದು, ಇದು 1,700 ಬಿಲ್ವ ಮರಗಳಿಗೆ ಪೋಷಣೆ ನೀಡುತ್ತಿದೆ. 'ಮಿಷನ್ ಲೈಫ್' ಅಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪೇವರ್ ಬ್ಲಾಕ್‌ಗಳಾಗಿ ಮಾರ್ಪಡಿಸಲಾಗುತ್ತಿದೆ; ಪ್ರತಿ ತಿಂಗಳು ಸುಮಾರು 4,700 ಬ್ಲಾಕ್‌ಗಳನ್ನು ಉತ್ಪಾದಿಸಲಾಗುತ್ತಿದೆ. ಮಳೆನೀರು ಕೊಯ್ಲು ವ್ಯವಸ್ಥೆಯು ತಿಂಗಳಿಗೆ ಸುಮಾರು 30 ಲಕ್ಷ ಲೀಟರ್ ತ್ಯಾಜ್ಯ ನೀರನ್ನು ಸಂಸ್ಕರಿಸುತ್ತಿದೆ.
72,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ 7,200 ಮರಗಳ 'ಮಿಯಾವಾಕಿ ಅರಣ್ಯ' ವಾರ್ಷಿಕವಾಗಿ ಸುಮಾರು 93,000 ಕಿಲೋಗ್ರಾಂಗಳಷ್ಟು ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ. ಶುದ್ಧೀಕರಿಸಿದ ಅಭಿಷೇಕದ ನೀರನ್ನು 'ಸೋಮಗಂಗಾ ಜಲ' ಎಂದು ಬಾಟಲಿಗಳಲ್ಲಿ ತುಂಬಿಸಲಾಗುತ್ತಿದ್ದು, ಡಿಸೆಂಬರ್ 2024 ರ ವೇಳೆಗೆ 1.13 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಇದರ ಪ್ರಯೋಜನ ಪಡೆದಿವೆ.
ಸೋಮನಾಥವು ಮಹಿಳಾ ಸಬಲೀಕರಣದ ಪ್ರಬಲ ಕೇಂದ್ರವಾಗಿಯೂ ಹೊರಹೊಮ್ಮಿದೆ. ಸೋಮನಾಥ ದೇವಾಲಯದ ಟ್ರಸ್ಟ್‌ನ 906 ಉದ್ಯೋಗಿಗಳಲ್ಲಿ 262 ಮಂದಿ ಮಹಿಳೆಯರಿದ್ದಾರೆ. ವಿಶೇಷವೆಂದರೆ, ಬಿಲ್ವ ವನವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಪ್ರಸಾದ ವಿತರಣೆಯಲ್ಲಿ 65 ಮಹಿಳೆಯರು ಮತ್ತು ದೇವಾಲಯದ ಭೋಜನ ಸೇವೆಯಲ್ಲಿ 30 ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ, 363 ಮಹಿಳೆಯರು ನೇರ ಉದ್ಯೋಗ ಪಡೆಯುತ್ತಿದ್ದು, ವಾರ್ಷಿಕವಾಗಿ ಸುಮಾರು ₹9 ಕೋಟಿ ಆದಾಯ ಗಳಿಸುತ್ತಿದ್ದಾರೆ. ಇದು ಅವರ ಆರ್ಥಿಕ ಸ್ವಾವಲಂಬನೆ ಮತ್ತು ಘನತೆಯನ್ನು ಪ್ರತಿಬಿಂಬಿಸುತ್ತದೆ.

ಸೋಮನಾಥ: ಕಾಲವನ್ನೂ ಮೀರಿದ ಅಚಲ ನಂಬಿಕೆ
ಭಾರತದ ಅಚಲ ನಂಬಿಕೆ, ಚೇತರಿಸಿಕೊಳ್ಳುವ ಶಕ್ತಿ ಮತ್ತು ನಾಗರಿಕತೆಯ ನಿರಂತರತೆಯ ಕಾಲಾತೀತ ಸಂಕೇತವಾಗಿ ಸೋಮನಾಥವು ಎದ್ದು ನಿಂತಿದೆ. ಪುನರಾವರ್ತಿತ ವಿನಾಶ ಮತ್ತು ಪುನರುತ್ಥಾನಗಳನ್ನು ಮೆಟ್ಟಿ ನಿಂತಿರುವ ಈ ಕ್ಷೇತ್ರವು, ಶತಮಾನಗಳ ಕಾಲದ ಭಕ್ತಿಯ ಅಳಿಯದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಪೌರಾಣಿಕ ಮಹತ್ವದಿಂದ ಹಿಡಿದು 1951 ರ ಐತಿಹಾಸಿಕ ಪುನರ್ನಿರ್ಮಾಣದವರೆಗೆ, ಸೋಮನಾಥವು ಕೇವಲ ಒಂದು ಪವಿತ್ರ ದೇವಾಲಯವಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ ಹೆಮ್ಮೆ ಮತ್ತು ರಾಷ್ಟ್ರೀಯ ಪುನರುತ್ಥಾನದ ಸಾಮೂಹಿಕ ಅಭಿವ್ಯಕ್ತಿಯಾಗಿ ಪ್ರತಿನಿಧಿಸುತ್ತದೆ. ಈ ವರ್ಷ ಅದರ ಪುನರಾರಂಭದ 75 ನೇ ವಾರ್ಷಿಕೋತ್ಸವವು ಅದರ ಆಧುನಿಕ ಪರಂಪರೆಯ ಒಂದು ಪ್ರಮುಖ ಮೈಲಿಗಲ್ಲನ್ನು ಸೂಚಿಸುತ್ತದೆ ಮತ್ತು ಭಾರತದ ಹಂಚಿಕೆಯ ಪರಂಪರೆಯಲ್ಲಿ ಅದರ ಸ್ಥಾನವನ್ನು ಪುನರುಚ್ಚರಿಸುತ್ತದೆ.
ಸೋಮನಾಥವು ಆರಾಧನೆ, ಸಾಂಸ್ಕೃತಿಕ ಪುನರುಜ್ಜೀವನ, ಸುಸ್ಥಿರತೆ ಮತ್ತು ಒಳಗೊಳ್ಳುವ ಅಭಿವೃದ್ಧಿಯ ಜೀವಂತ ಕೇಂದ್ರವಾಗಿ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ನಿಜವಾದ ಪರಂಪರೆಯು ಕೇವಲ ಸಂರಕ್ಷಣೆಯಿಂದ ಮಾತ್ರವಲ್ಲದೆ, ನಿರಂತರ ನವೀಕರಣ ಮತ್ತು ಸಾಮೂಹಿಕ ನಂಬಿಕೆಯ ಮೂಲಕ ಉಳಿದುಕೊಳ್ಳುತ್ತದೆ ಎಂಬುದಕ್ಕೆ ಇದು ಒಂದು ಶಕ್ತಿಯುತ ನೆನಪಾಗಿದೆ.
References
PM India
https://www.pmindia.gov.in/en/news_updates/pm-writes-an-oped-on-forthcoming-visit-to-somnath/?comment=disable
https://www.pmindia.gov.in/en/image-gallery/#gallery16769128-15
https://www.pmindia.gov.in/en/image-gallery/#gallery16769128-21
Ministry of Culture
Somnath Swabhiman Parv Yatra from Delhi Flagged Off by Union Minister of Culture Shri Gajendra Singh Shekhawat and Delhi CM Smt. Rekha Gupta | Ministry of Culture
https://amritkaal.nic.in/somnath-swabhiman-parv
https://amritkaal.nic.in/flip-book/somnath-history-english-booklet.html
https://culture.gov.in/events/somnath-swabhiman-parv-yatra-delhi-flagged-union-minister-culture-shri-gajendra-singh
https://culture.gov.in/events/honble-prime-minister-shri-narendra-modi-attends-somnath-swabhiman-parv-and-leads-shaurya
https://amritkaal.nic.in/event-campaign-detail?2831
Ministry of Information and Broadcasting
https://indiacinehub.gov.in/location/somnath
All India Radio
https://www.newsonair.gov.in/pm-modi-leads-shaurya-yatra-at-somnath-pays-tribute-to-temples-defenders/
https://www.newsonair.gov.in/somnath-temples-survival-reflects-countrys-indomitable-civilisational-spirit-pm-modi/
https://www.facebook.com/reel/1212231374334173
Others
https://www.facebook.com/photo?fbid=1301080755386653&set=pcb.1301081125386616
https://www.facebook.com/photo?fbid=1301080755386653&set=pcb.1301081125386616
https://somnath.org/social-activities/
https://www.narendramodi.in/somnath-and-bharat-s-unconquerable-spirit-605118
Somnath: The Eternal Flame of Bharat
******
(Explainer ID: 158508)
आगंतुक पटल : 138
Provide suggestions / comments