Economy
ಭವಿಷ್ಯದ ಕಾರ್ಯಪಡೆಗಾಗಿ ಭಾರತದಲ್ಲಿ ಕೌಶಲ್ಯಾಭಿವೃದ್ಧಿ
Posted On:
29 APR 2026 11:18AM
|
ಪ್ರಮುಖಾಂಶಗಳು
- ಆರ್ಥಿಕ ಸಮೀಕ್ಷೆ 2025–26: ಕೌಶಲ್ಯದ ಕೊರತೆಯನ್ನು ನೀಗಿಸಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಉದ್ಯೋಗಾಧಾರಿತ ಕೌಶಲ್ಯಾಭಿವೃದ್ಧಿ ಉಪಕ್ರಮಗಳ ಮಹತ್ವವನ್ನು ಇದು ಉಲ್ಲೇಖಿಸುತ್ತದೆ.
- ಕೇಂದ್ರ ಬಜೆಟ್ 2026–27: ಕೌಶಲ್ಯಾಭಿವೃದ್ಧಿಯನ್ನು ಬಹು-ವಲಯದ ಆದ್ಯತೆಯಾಗಿ ಪರಿಗಣಿಸಿ, ಅದಕ್ಕಾಗಿ ಹಲವು ವಲಯ-ನಿರ್ದಿಷ್ಟ ಉಪಕ್ರಮಗಳನ್ನು ಘೋಷಿಸಿದೆ.
- ತಾಂತ್ರಿಕ ಜವಳಿಗಳಲ್ಲಿ ಮೌಲ್ಯವರ್ಧನೆಗಾಗಿ ಮೆಗಾ ಟೆಕ್ಸ್ಟೈಲ್ ಪಾರ್ಕ್‌ಗಳು, ಮತ್ತು 15,000 ಶಾಲೆಗಳು ಹಾಗೂ 500 ಕಾಲೇಜುಗಳಲ್ಲಿ ಎವಿಜಿಸಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್‌ಗಳ ಸ್ಥಾಪನೆ.
- ಖಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರವನ್ನು ಉತ್ತೇಜಿಸಲು ನಾಲ್ಕು ಟೆಲಿಸ್ಕೋಪ್ (ದೂರದರ್ಶಕ) ಮೂಲಸೌಕರ್ಯ ಸೌಲಭ್ಯಗಳ ಉನ್ನತೀಕರಣ ಅಥವಾ ಸ್ಥಾಪನೆ.
- ಶಿಕ್ಷಣ ಸಂಸ್ಥೆಗಳು, ಉದ್ಯಮ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು 'ರಾಷ್ಟ್ರೀಯ ಹೋಟೆಲ್ ನಿರ್ವಹಣೆ ಮತ್ತು ಅಡುಗೆ ತಂತ್ರಜ್ಞಾನ ಮಂಡಳಿ'ಯ ಪರಿಚಯ.
- ಪ್ರವಾಸೋದ್ಯಮ-ಸಂಬಂಧಿತ ಆತಿಥ್ಯ ಶಿಕ್ಷಣ ಮತ್ತು ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು 'ಖೇಲೋ ಇಂಡಿಯಾ ಮಿಷನ್'.
|
ಕೌಶಲ್ಯಾಭಿವೃದ್ಧಿ: ಭಾರತದ ಅಭಿವೃದ್ಧಿಯ ಎಂಜಿನ್ ಅನ್ನು ಬಲಪಡಿಸುವುದು
ಭಾರತವು ಒಂದು ಪ್ರಮುಖ ಜನಸಂಖ್ಯಾ ಘಟ್ಟದಲ್ಲಿದೆ. ವಿಶ್ವದ ಅತಿ ಕಿರಿಯ ಕಾರ್ಯಪಡೆಗಳಲ್ಲಿ ಒಂದನ್ನು ಹೊಂದಿರುವ ಭಾರತವು, ಹೆಚ್ಚಿನ ಉತ್ಪಾದಕತೆ ಮತ್ತು ಬೆಳೆಯುತ್ತಿರುವ ಗ್ರಾಹಕರ ಬೇಡಿಕೆಗಾಗಿ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ. ಆರ್ಥಿಕ ಸಮೀಕ್ಷೆ 2025–26 ರ ಪ್ರಕಾರ, ಉದ್ಯೋಗ-ಕೇಂದ್ರಿತ ಕೌಶಲ್ಯಾಭಿವೃದ್ಧಿ ಉಪಕ್ರಮಗಳು ಕೌಶಲ್ಯದ ಅಂತರವನ್ನು ಕಡಿಮೆ ಮಾಡಲು, ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಯೋಗ್ಯ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಸಹಾಯ ಮಾಡುತ್ತವೆ ಎಂದು ಒತ್ತಿಹೇಳುತ್ತದೆ. ಅಂತಹ ಉಪಕ್ರಮಗಳು ಆರ್ಥಿಕ ಪ್ರಗತಿಯನ್ನು ಸಕ್ರಿಯಗೊಳಿಸುವ ಮೂಲಕ ಸಾಮಾಜಿಕ ಚಲನಶೀಲತೆಯನ್ನು ಉತ್ತೇಜಿಸುತ್ತವೆ, ಹೀಗಾಗಿ ಅಂತರ್ಗತ ಕಾರ್ಮಿಕ ಮಾರುಕಟ್ಟೆಗಳಿಗೆ ಹೆಚ್ಚು ಸಮಾನ ಪ್ರವೇಶವನ್ನು ಬೆಂಬಲಿಸುತ್ತವೆ.
ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ ದತ್ತಾಂಶವು, ಸಾಮಾನ್ಯ ಕಾಲೋಚಿತ ವ್ಯತ್ಯಾಸಗಳೊಂದಿಗೆ ಕಾರ್ಮಿಕ ಮಾರುಕಟ್ಟೆಯು ಸ್ಥಿರವಾಗಿದೆ ಎಂದು ಸೂಚಿಸುತ್ತದೆ. ಫೆಬ್ರವರಿ 2026 ರಲ್ಲಿ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಒಟ್ಟಾರೆ ಕಾರ್ಮಿಕ ಬಲದ ಭಾಗವಹಿಸುವಿಕೆಯ ದರವು 55.9% ರಷ್ಟು ಸ್ಥಿರವಾಗಿತ್ತು. ಈ ಅವಧಿಯು ಕಾರ್ಮಿಕ ಮಾರುಕಟ್ಟೆಯಲ್ಲಿ ಬಲವಾದ ಚೇತರಿಕೆಯನ್ನು ಪ್ರತಿಬಿಂಬಿಸಿದೆ, ಇದು ಮಹಿಳೆಯರ ಹೆಚ್ಚಿದ ಭಾಗವಹಿಸುವಿಕೆ ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರದಲ್ಲಿನ ಗಮನಾರ್ಹ ಇಳಿಕೆಯಿಂದ ಗುರುತಿಸಲ್ಪಟ್ಟಿದೆ.
ಯುವ ಜನಸಂಖ್ಯೆಯ ಸಾಮರ್ಥ್ಯದ ಮೇಲೆ ಮತ್ತಷ್ಟು ಗಮನಹರಿಸಿ ಮತ್ತು ಕೌಶಲ್ಯಾಭಿವೃದ್ಧಿ ಪರಿಸರ ವ್ಯವಸ್ಥೆಯ ಮಹತ್ವವನ್ನು ಅರಿತು, ಕೇಂದ್ರ ಬಜೆಟ್ 2026–27 ಕೌಶಲ್ಯಾಭಿವೃದ್ಧಿಯನ್ನು ಬಹು-ವಲಯದ ಆದ್ಯತೆಯಾಗಿ ಇರಿಸಿದೆ. ಇತ್ತೀಚಿನ ಹಸ್ತಕ್ಷೇಪಗಳು ಮತ್ತು ಉಪಕ್ರಮಗಳು, ಭಾರತದ ಯುವ ಜನಸಂಖ್ಯೆಯು ಕೇವಲ ಸಂಖ್ಯೆಯಲ್ಲಿ ದೊಡ್ಡದಾಗಿರುವುದಲ್ಲದೆ, ದೇಶದ ಆರ್ಥಿಕ ಭವಿಷ್ಯಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಸಿದ್ಧರಾಗಿರುವ ಮತ್ತು ಸಬಲೀಕರಣಗೊಂಡಿರುವಂತೆ ಖಚಿತಪಡಿಸಿಕೊಳ್ಳಲು ಸುಸ್ಥಿರ ನೀತಿ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂಬುದು ಗಮನಾರ್ಹವಾಗಿದೆ.
ಕೌಶಲ್ಯಾಭಿವೃದ್ಧಿಯತ್ತ ಬಜೆಟ್‌ನ ಗಮನ: ಆರ್ಥಿಕತೆಗೆ ಉತ್ತೇಜನ
ಕೇಂದ್ರ ಬಜೆಟ್ 2026-27, ಸಾಂಸ್ಥಿಕ ಸಾಮರ್ಥ್ಯವನ್ನು ವಿಸ್ತರಿಸಲು, ತರಬೇತಿ ಮೂಲಸೌಕರ್ಯಗಳನ್ನು ಆಧುನೀಕರಿಸಲು ಮತ್ತು ಉದಯೋನ್ಮುಖ ಕೈಗಾರಿಕಾ ಬೇಡಿಕೆಗಳಿಗೆ ಅನುಗುಣವಾಗಿ ಕೌಶಲ್ಯಗಳನ್ನು ಹೊಂದಾಣಿಕೆ ಮಾಡಲು ಉದ್ದೇಶಿತ ಉಪಕ್ರಮಗಳನ್ನು ಪರಿಚಯಿಸಿದೆ. ಈ ಕ್ರಮಗಳು ಉದ್ಯೋಗಾರ್ಹತೆಯನ್ನು ಹೆಚ್ಚಿಸಲು, ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಭಾರತದಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.
ಶಿಕ್ಷಣ
ಕೌಶಲ್ಯಯುತ ಮತ್ತು ಶಿಕ್ಷಣವಂತ ಜನಸಂಖ್ಯೆಯು ಭಾರತದ ಜನಸಂಖ್ಯಾ ಸಾಮರ್ಥ್ಯವನ್ನು ಸಾಕಾರಗೊಳಿಸಲು ಅತ್ಯಗತ್ಯ. ಕೇಂದ್ರ ಬಜೆಟ್ 2026-27, ಶಿಕ್ಷಣ ವಲಯಕ್ಕೆ ಒಟ್ಟು ₹1.39 ಲಕ್ಷ ಕೋಟಿಗಳ ಹಂಚಿಕೆಯೊಂದಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಇದು 2025-26ರ ಬಜೆಟ್ ಅಂದಾಜುಗಳಿಗಿಂತ 8.27% ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ಈ ಹಂಚಿಕೆಯು ಶಿಕ್ಷಣದ ಪ್ರವೇಶವನ್ನು ವಿಸ್ತರಿಸಲು, ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಶಿಕ್ಷಣವನ್ನು ಕೈಗಾರಿಕಾ ಅಗತ್ಯಗಳಿಗೆ ಹೆಚ್ಚು ಹೊಂದಾಣಿಕೆಯಾಗುವಂತೆ ಮಾಡುವತ್ತ ಗಮನಹರಿಸುತ್ತದೆ.

ಈ ದಿಕ್ಕಿನಲ್ಲಿ, ಬಜೆಟ್ ಈ ಕೆಳಗಿನವುಗಳನ್ನು ಘೋಷಿಸಿದೆ:
- ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು, ಕೌಶಲ್ಯ ಕೇಂದ್ರಗಳು ಮತ್ತು ವಸತಿ ಸಮುಚ್ಚಯಗಳನ್ನು ಒಳಗೊಂಡಿರಲು ಪ್ರಮುಖ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಕಾರಿಡಾರ್‌ಗಳ ಬಳಿ 5 ವಿಶ್ವವಿದ್ಯಾಲಯ ಟೌನ್‌ಶಿಪ್‌ಗಳ ಸೃಷ್ಟಿ.
- ವಯಬಿಲಿಟಿ ಗ್ಯಾಪ್ ಫಂಡಿಂಗ್ /ಬಂಡವಾಳ ಬೆಂಬಲದ ಮೂಲಕ ಪ್ರತಿ ಜಿಲ್ಲೆಯಲ್ಲಿ 1 ಬಾಲಕಿಯರ ಹಾಸ್ಟೆಲ್ ಸ್ಥಾಪನೆ. ಉನ್ನತ ಶಿಕ್ಷಣದ ಸ್ಟೆಮ್ ಸಂಸ್ಥೆಗಳಲ್ಲಿ ವಿಸ್ತೃತ ಶೈಕ್ಷಣಿಕ ಮತ್ತು ಪ್ರಯೋಗಾಲಯದ ಅವಧಿಗಳಿಂದ ಉಂಟಾಗುವ ಪ್ರವೇಶ ಮತ್ತು (ವಿದ್ಯಾರ್ಥಿನಿಯರು ಶಿಕ್ಷಣದಲ್ಲಿ) ಉಳಿಯುವಿಕೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸಲು ಇದನ್ನು ಘೋಷಿಸಲಾಗಿದೆ.
- ತಲ್ಲೀನಗೊಳಿಸುವ ಅನುಭವಗಳ ಮೂಲಕ ಖಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರವನ್ನು ಉತ್ತೇಜಿಸಲು 'ನ್ಯಾಷನಲ್ ಲಾರ್ಜ್ ಸೋಲಾರ್ ಟೆಲಿಸ್ಕೋಪ್', 'ನ್ಯಾಷನಲ್ ಲಾರ್ಜ್ ಆಪ್ಟಿಕಲ್ ಇನ್ಫ್ರಾರೆಡ್ ಟೆಲಿಸ್ಕೋಪ್', 'ಹಿಮಾಲಯನ್ ಚಂದ್ರ ಟೆಲಿಸ್ಕೋಪ್' ಮತ್ತು 'COSMOS-2 ಪ್ಲಾನೆಟೇರಿಯಂ' ಸೇರಿದಂತೆ 4 ಟೆಲಿಸ್ಕೋಪ್ ಮೂಲಸೌಕರ್ಯ ಸೌಲಭ್ಯಗಳ ಉನ್ನತೀಕರಣ ಅಥವಾ ಸ್ಥಾಪನೆ.
ಜವಳಿ ಮತ್ತು ಉಡುಪು
ಭಾರತೀಯ ಜವಳಿ ಮತ್ತು ಉಡುಪು ಉದ್ಯಮವು ಒಟ್ಟು ದೇಶೀಯ ಉತ್ಪನ್ನಕ್ಕೆ ಸುಮಾರು 2%, ಉತ್ಪಾದನಾ ವಲಯದ ಜಿವಿಎ ನ ಸುಮಾರು 11% ಮತ್ತು ರಫ್ತಿಗೆ 8.63% ಕೊಡುಗೆ ನೀಡುತ್ತದೆ. ಜಾಗತಿಕವಾಗಿ ಆರನೇ ಅತಿದೊಡ್ಡ ಜವಳಿ ಮತ್ತು ಉಡುಪು ರಫ್ತುದಾರನಾಗಿರುವ ಈ ವಲಯವು, ಎಂಎಸ್‌ಎಂಇ ಕ್ಲಸ್ಟರ್‌ಗಳಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದೆ ಮತ್ತು ಮಹಿಳೆಯರು ಹಾಗೂ ಗ್ರಾಮೀಣ ಕಾರ್ಮಿಕರ ಗಮನಾರ್ಹ ಭಾಗವಹಿಸುವಿಕೆಯೊಂದಿಗೆ 45 ದಶಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಬೆಂಬಲಿಸುತ್ತದೆ. ಉದ್ಯಮದ ನೇಕಾರರು ಮತ್ತು ಕುಶಲಕರ್ಮಿಗಳನ್ನು ಮತ್ತಷ್ಟು ಬೆಂಬಲಿಸಲು, ಬಜೆಟ್ ಈ ಕೆಳಗಿನವುಗಳನ್ನು ಪ್ರಸ್ತಾಪಿಸುತ್ತದೆ:
|
ಮಾನವ ನಿರ್ಮಿತ ನೂಲುಗಳು: ಇವು ಕಾರ್ಖಾನೆಗಳಲ್ಲಿ ತಯಾರಿಸಲ್ಪಡುವ ನೂಲುಗಳಾಗಿವೆ. ಇವುಗಳನ್ನು ಸೆಲ್ಯುಲೋಸ್‌ನಂತಹ ನೈಸರ್ಗಿಕ ಮೂಲಗಳಿಂದ (ಉದಾಹರಣೆಗೆ: ರೇಯಾನ್) ಅಥವಾ ರಾಸಾಯನಿಕಗಳಿಂದ (ಉದಾಹರಣೆಗೆ: ಪಾಲಿಯೆಸ್ಟರ್) ತಯಾರಿಸಲಾಗುತ್ತದೆ. ನೈಸರ್ಗಿಕ ನೂಲುಗಳಿಗೆ ಸಮನಾಗಿರಲು ಅಥವಾ ಅವುಗಳ ಗುಣಮಟ್ಟವನ್ನು ಸುಧಾರಿಸಲು ಇವುಗಳನ್ನು ಸೃಷ್ಟಿಸಲಾಗುತ್ತದೆ.
ಹೊಸ ತಲೆಮಾರಿನ ನೂಲುಗಳು: ಇವು ಆಧುನಿಕ ಮತ್ತು ನವೀನ ರೀತಿಯ ನೂಲುಗಳಾಗಿವೆ (ಉದಾಹರಣೆಗೆ: ಕಮಲದ ರೇಷ್ಮೆ, ಬಿದಿರಿನ ನೂಲು, ಅಥವಾ ಸ್ಮಾರ್ಟ್ ಟೆಕ್ಸ್ಟೈಲ್). ಇವು ಪರಿಸರ ಸ್ನೇಹಿಯಾಗಿರುತ್ತವೆ, ಸುಸ್ಥಿರವಾಗಿರುತ್ತವೆ ಅಥವಾ ವಿಶೇಷ ಕ್ರಿಯಾತ್ಮಕ ಲಕ್ಷಣಗಳನ್ನು ಹೊಂದಿರುತ್ತವೆ.
|
- ರಾಷ್ಟ್ರೀಯ ನಾರು ಯೋಜನೆ: ನೈಸರ್ಗಿಕ, ಮಾನವ ನಿರ್ಮಿತ ಮತ್ತು ಹೊಸ ತಲೆಮಾರಿನ ನಾರುಗಳಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು ಈ ಯೋಜನೆ.
- ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ: ಬಂಡವಾಳ ಬೆಂಬಲ, ಸುಧಾರಿತ ಯಂತ್ರೋಪಕರಣಗಳು, ತಂತ್ರಜ್ಞಾನ ಉನ್ನತೀಕರಣ ಮತ್ತು ಸಾಮಾನ್ಯ ಪರೀಕ್ಷಾ ಮೂಲಸೌಕರ್ಯಗಳ ಮೂಲಕ ಸಾಂಪ್ರದಾಯಿಕ ಕ್ಲಸ್ಟರ್‌ಗಳನ್ನು ಆಧುನೀಕರಿಸಲು ಈ ಯೋಜನೆ.
- ರಾಷ್ಟ್ರೀಯ ಕೈಮಗ್ಗ ಮತ್ತು ಕರಕುಶಲ ಕಾರ್ಯಕ್ರಮ: ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಸಂಯೋಜಿಸಲು ಮತ್ತು ನೇಕಾರರು ಹಾಗೂ ಕುಶಲಕರ್ಮಿಗಳಿಗೆ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರೀಕೃತ ಬೆಂಬಲ ನೀಡಲು ಈ ಕಾರ್ಯಕ್ರಮ.
- ಟೆಕ್ಸ್-ಇಕೋ ಉಪಕ್ರಮ: ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಸುಸ್ಥಿರ ಜವಳಿ ಮತ್ತು ಉಡುಪುಗಳನ್ನು ಉತ್ತೇಜಿಸಲು ಈ ಉಪಕ್ರಮ.
- ಸಮರ್ಥ್ 2.0 : ರಚನಾತ್ಮಕ ಉದ್ಯಮ-ಶಿಕ್ಷಣ ಪಾಲುದಾರಿಕೆಗಳ ಮೂಲಕ ಜವಳಿ ಕೌಶಲ್ಯಾಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ಆಧುನೀಕರಿಸಲು ಮತ್ತು ಉನ್ನತೀಕರಿಸಲು ಈ ಯೋಜನೆ.
- ಮೆಗಾ ಟೆಕ್ಸ್ಟೈಲ್ ಪಾರ್ಕ್‌ಗಳು: ವಿಶೇಷವಾಗಿ ತಾಂತ್ರಿಕ ಜವಳಿಗಳಲ್ಲಿ (Technical Textiles) ಪ್ರಮಾಣ, ದಕ್ಷತೆ ಮತ್ತು ಮೌಲ್ಯವರ್ಧನೆಯನ್ನು ನಿರ್ಮಿಸುವುದರ ಮೇಲೆ ಗಮನಹರಿಸುವ ಯೋಜನೆ.
- ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮ : ಉತ್ತಮ ಕೌಶಲ್ಯಾಭಿವೃದ್ಧಿ, ಗುಣಮಟ್ಟದ ಭರವಸೆ ಮತ್ತು ಜಾಗತಿಕ ಬ್ರ್ಯಾಂಡಿಂಗ್ ಸಂಪರ್ಕಗಳ ಮೂಲಕ ಖಾದಿ, ಕೈಮಗ್ಗ ಮತ್ತು ಕರಕುಶಲ ಕೈಗಾರಿಕೆಗಳನ್ನು ಬಲಪಡಿಸಲು ಈ ಉಪಕ್ರಮ.
ಆರೋಗ್ಯ
ಜನಸಂಖ್ಯಾ ಬದಲಾವಣೆಗಳು, ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚಳ ಮತ್ತು ಕೌಶಲ್ಯಪೂರ್ಣ ವೃತ್ತಿಪರರಿಗೆ ಜಾಗತಿಕವಾಗಿರುವ ಬೇಡಿಕೆಯಿಂದಾಗಿ ಭಾರತದ ಜನಸಂಖ್ಯೆಯ ಆರೋಗ್ಯ ಸೇವೆಗಳ ಅಗತ್ಯತೆಗಳು ಹೆಚ್ಚುತ್ತಿವೆ. ಇದು ಕೌಶಲ್ಯಪೂರ್ಣ ಮತ್ತು ವಿಸ್ತೃತ ಆರೋಗ್ಯ ಕಾರ್ಯಪಡೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಈ ನಿಟ್ಟಿನಲ್ಲಿ, ಸಹಾಯಕ (Allied) ಮತ್ತು ಆರೋಗ್ಯ ವೃತ್ತಿಪರರ ಶಿಕ್ಷಣವನ್ನು ವಿಸ್ತರಿಸುವ ಮತ್ತು ಬಲಪಡಿಸುವ ಉದ್ದೇಶದಿಂದ, ಬಜೆಟ್ ಮೂರು ವರ್ಷಗಳಲ್ಲಿ ₹980 ಕೋಟಿಗಳ ಹಂತ ಹಂತದ ವೆಚ್ಚವನ್ನು ನಿಗದಿಪಡಿಸಿದೆ.
- ಭಾರತವನ್ನು ಜಾಗತಿಕ ಬಯೋಫಾರ್ಮಾ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ, 'ಬಯೋಫಾರ್ಮಾ ಶಕ್ತಿ' ಮೂಲಕ ಸಂಸ್ಥೆಗಳ ಸೃಷ್ಟಿ ಮತ್ತು ಉನ್ನತೀಕರಣಕ್ಕೆ ಐದು ವರ್ಷಗಳಲ್ಲಿ ₹10,000 ಕೋಟಿ ಅನುದಾನವನ್ನು ಪ್ರಸ್ತಾಪಿಸಲಾಗಿದೆ. ಈ ತಂತ್ರವು 3 ಹೊಸ 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್' ಗಳ ಸ್ಥಾಪನೆ, ಅಸ್ತಿತ್ವದಲ್ಲಿರುವ 7 NIPERಗಳ ಉನ್ನತೀಕರಣ, 1,000ಕ್ಕೂ ಹೆಚ್ಚು ಕ್ಲಿನಿಕಲ್ ಟ್ರಯಲ್ ಸೈಟ್‌ಗಳ ಸೃಷ್ಟಿ ಮತ್ತು 'ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್' ಅನ್ನು ಬಲಪಡಿಸುವುದನ್ನು ಒಳಗೊಂಡಿದೆ.
- ಅಸ್ತಿತ್ವದಲ್ಲಿರುವ ಸಹಾಯಕ ಆರೋಗ್ಯ ವೃತ್ತಿಪರರ ಸಂಸ್ಥೆಗಳ ಉನ್ನತೀಕರಣ ಮತ್ತು ಖಾಸಗಿ ಹಾಗೂ ಸರ್ಕಾರಿ ವಲಯದಲ್ಲಿ ಹೊಸ ಎಎಚ್‌ಪಿ ಸಂಸ್ಥೆಗಳ ಸ್ಥಾಪನೆ: ಇದು ಆಪ್ಟೋಮೆಟ್ರಿ, ರೇಡಿಯಾಲಜಿ, ಅರಿವಳಿಕೆ, ಓಟಿ ತಂತ್ರಜ್ಞಾನ, ಅನ್ವಯಿಕ ಮನೋವಿಜ್ಞಾನ ಮತ್ತು ವರ್ತನೆಯ ಆರೋಗ್ಯ ಸೇರಿದಂತೆ 10 ಆಯ್ದ ವಿಭಾಗಗಳನ್ನು ಒಳಗೊಂಡಿದೆ. ಮುಂದಿನ 5 ವರ್ಷಗಳಲ್ಲಿ ಒಟ್ಟು 1,00,000 ಮಂದಿ AHPಗಳನ್ನು ಸೇರ್ಪಡೆಗೊಳಿಸಲಾಗುವುದು.
- ವೃದ್ಧಾಪ್ಯ ಮತ್ತು ಸಂಬಂಧಿತ ಆರೈಕೆ ಸೇವೆಗಳನ್ನು ಒಳಗೊಂಡ ಬಲವಾದ ಆರೈಕೆ ಪರಿಸರ ವ್ಯವಸ್ಥೆಯ ರಚನೆ: ಇದು 'ರಾಷ್ಟ್ರೀಯ ಕೌಶಲ್ಯ ಅರ್ಹತೆ ಚೌಕಟ್ಟು' ಗೆ ಅನುಗುಣವಾದ ವಿವಿಧ ಕಾರ್ಯಕ್ರಮಗಳ ಅಭಿವೃದ್ಧಿಯನ್ನು ಒಳಗೊಂಡಿದೆ. ಇವು ವೆಲ್‌ನೆಸ್ (ಕ್ಷೇಮ), ಯೋಗ ಮತ್ತು ವೈದ್ಯಕೀಯ ಹಾಗೂ ಸಹಾಯಕ ಸಾಧನಗಳ ನಿರ್ವಹಣೆಯಂತಹ ಮೂಲ ಆರೈಕೆ ಮತ್ತು ಪೂರಕ ಕೌಶಲ್ಯಗಳನ್ನು ಸಂಯೋಜಿಸುವ ಬಹು-ಕೌಶಲ್ಯದ ಆರೈಕೆದಾರರಿಗೆ ತರಬೇತಿ ನೀಡುತ್ತವೆ. ಮುಂದಿನ ವರ್ಷದಲ್ಲಿ 1.5 ಲಕ್ಷ ಮಂದಿ ಆರೈಕೆದಾರರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ.
- ವೈದ್ಯಕೀಯ ಪ್ರವಾಸೋದ್ಯಮ ಸೇವೆಗಳನ್ನು ಉತ್ತೇಜಿಸಲು ಹೊಸ ಯೋಜನೆಯ ಪ್ರಾರಂಭ: ಇದು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಐದು ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಬೆಂಬಲ ನೀಡುತ್ತದೆ. ಈ ಕೇಂದ್ರಗಳು ವೈದ್ಯಕೀಯ, ಶೈಕ್ಷಣಿಕ ಮತ್ತು ಸಂಶೋಧನಾ ಸೌಲಭ್ಯಗಳನ್ನು ಒಳಗೊಂಡ ಆರೋಗ್ಯ ಸಂಕೀರ್ಣಗಳಾಗಿರುತ್ತವೆ. ಇವುಗಳಲ್ಲಿ ಆಯುಷ್ ಕೇಂದ್ರಗಳು, ವೈದ್ಯಕೀಯ ಮೌಲ್ಯ ಪ್ರವಾಸೋದ್ಯಮ ಸೌಲಭ್ಯ ಕೇಂದ್ರಗಳು ಹಾಗೂ ರೋಗನಿರ್ಣಯ, ನಂತರದ ಆರೈಕೆ ಮತ್ತು ಪುನರ್ವಸತಿಗಾಗಿ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರುತ್ತವೆ. ಈ ಕೇಂದ್ರಗಳು ವೈದ್ಯರು ಮತ್ತು ಎಎಚ್‌ಪಿಗಳು ಸೇರಿದಂತೆ ಆರೋಗ್ಯ ವೃತ್ತಿಪರರಿಗೆ ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ.

ಆಯುಷ್
ಭಾರತದ ಆಯುಷ್ ವಲಯವು ಜಾಗತಿಕ ಮನ್ನಣೆಯನ್ನು ಗಳಿಸುವುದನ್ನು ಮುಂದುವರೆಸಿದೆ; ಯೋಗ ಮತ್ತು ಆಯುರ್ವೇದವು ತಡೆಗಟ್ಟುವ ಮತ್ತು ಸಮಗ್ರ ಆರೋಗ್ಯ ರಕ್ಷಣೆಯ ಪ್ರಮುಖ ಆಧಾರಸ್ತಂಭಗಳಾಗಿ ಹೊರಹೊಮ್ಮುತ್ತಿವೆ. ಕೇಂದ್ರ ಬಜೆಟ್ 2026-27, ಆಯುಷ್ ಸಚಿವಾಲಯಕ್ಕೆ ₹4,408 ಕೋಟಿ ಹಂಚಿಕೆ ಮಾಡುವ ಮೂಲಕ ಈ ಬದ್ಧತೆಯನ್ನು ಮರುದೃಢೀಕರಿಸಿದೆ. ಆಯುಷ್ ವಲಯವನ್ನು ಮತ್ತಷ್ಟು ಬಲಪಡಿಸಲು ಮತ್ತು ಜಾಗತಿಕ ಬೇಡಿಕೆಯನ್ನು ಪೂರೈಸಲು, ಕೇಂದ್ರ ಬಜೆಟ್ ಈ ಕೆಳಗಿನ ಉಪಕ್ರಮಗಳನ್ನು ಮುಂದಿಟ್ಟಿದೆ:
- ಶಿಕ್ಷಣ, ಕ್ಲಿನಿಕಲ್ ಸೇವೆಗಳು ಮತ್ತು ಸಂಶೋಧನೆಯನ್ನು ಬಲಪಡಿಸಲು ಮೂರು ಹೊಸ 'ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ' ಸ್ಥಾಪನೆ.
- ಪ್ರಮಾಣೀಕರಣ ಪರಿಸರ ವ್ಯವಸ್ಥೆಯ ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಮತ್ತು ನುರಿತ ಮಾನವಶಕ್ತಿಯ ಲಭ್ಯತೆಯನ್ನು ಖಾತರಿಪಡಿಸಲು ಆಯುಷ್ ಫಾರ್ಮಸಿಗಳು ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯಗಳ ಉನ್ನತೀಕರಣ.
- ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಾಗಿ ಸಾಕ್ಷ್ಯಾಧಾರಿತ ಸಂಶೋಧನೆ, ತರಬೇತಿ ಮತ್ತು ಜಾಗೃತಿಯನ್ನು ಉತ್ತೇಜಿಸಲು ಜಾಮ್‌ನಗರದಲ್ಲಿರುವ 'ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರ'ದ ಉನ್ನತೀಕರಣ.
ಜಾನುವಾರು ಪಾಲನೆ
ಜಾನುವಾರು ಪಾಲನೆಯು ಗ್ರಾಮೀಣ ಚೇತರಿಕೆಯ ಪ್ರಮುಖ ಆಧಾರಸ್ತಂಭವಾಗಿದೆ. ಇದು ವಿಶೇಷವಾಗಿ ಬಡ ಮತ್ತು ಸಣ್ಣ ಹಿಡುವಳಿದಾರ ಕುಟುಂಬಗಳಿಗೆ ಕೃಷಿ ಆದಾಯದ ಸುಮಾರು 16% ರಷ್ಟು ಕೊಡುಗೆ ನೀಡುತ್ತದೆ. ₹6,153 ಕೋಟಿ ಬಜೆಟ್ ಹಂಚಿಕೆಯೊಂದಿಗೆ, ಕೇಂದ್ರ ಬಜೆಟ್ 2026-27 ಆದಾಯ ವೈವಿಧ್ಯೀಕರಣ, ಪೌಷ್ಟಿಕಾಂಶ ಭದ್ರತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಈ ವಲಯದ ಪಾತ್ರವನ್ನು ಬಲಪಡಿಸುತ್ತದೆ.
ಇದಲ್ಲದೆ, ಪಶುವೈದ್ಯಕೀಯ ವೃತ್ತಿಪರರ ಲಭ್ಯತೆಯನ್ನು 20,000 ಕ್ಕಿಂತ ಹೆಚ್ಚು ಹೆಚ್ಚಿಸಲು, ಕೇಂದ್ರ ಬಜೆಟ್ ಸಾಲ-ಸಂಪರ್ಕಿತ ಬಂಡವಾಳ ಸಬ್ಸಿಡಿ ಬೆಂಬಲ ಯೋಜನೆಯನ್ನು ಪರಿಚಯಿಸಿದೆ. ಇದು ಖಾಸಗಿ ವಲಯದಲ್ಲಿ ಪಶುವೈದ್ಯಕೀಯ ಮತ್ತು ಪ್ಯಾರಾ-ವೆಟ್ ಕಾಲೇಜುಗಳು, ಆಸ್ಪತ್ರೆಗಳು, ರೋಗನಿರ್ಣಯ ಪ್ರಯೋಗಾಲಯಗಳು ಮತ್ತು ತಳಿ ಕೇಂದ್ರಗಳನ್ನು ಸ್ಥಾಪಿಸಲು ಬೆಂಬಲ ನೀಡುತ್ತದೆ, ಜೊತೆಗೆ ಭಾರತೀಯ ಮತ್ತು ವಿದೇಶಿ ಸಂಸ್ಥೆಗಳ ನಡುವಿನ ಸಹಯೋಗವನ್ನು ಸುಗಮಗೊಳಿಸುತ್ತದೆ.
ಆರೆಂಜ್ ಎಕಾನಮಿ
ಸೃಜನಶೀಲತೆ, ಸಂಸ್ಕೃತಿ ಮತ್ತು ಬೌದ್ಧಿಕ ಆಸ್ತಿಯಿಂದ ಚಾಲಿತವಾದ 'ಆರೆಂಜ್ ಎಕಾನಮಿ' ಆಧುನಿಕ ಆರ್ಥಿಕ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡುವ ವಲಯವಾಗಿ ಹೊರಹೊಮ್ಮಿದೆ. ಜಾಗತಿಕವಾಗಿ, ಸೃಜನಶೀಲ ಕೈಗಾರಿಕೆಗಳು ಜಿಡಿಪಿಯ 0.5% ರಿಂದ 7% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ, ಇದು ಪ್ರವಾಸೋದ್ಯಮ ಮತ್ತು ನಗರ ಸೇವೆಗಳ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ. ಭಾರತದಲ್ಲಿ, 2024 ರಲ್ಲಿ ಸುಮಾರು ₹2.5 ಟ್ರಿಲಿಯನ್ ಮೌಲ್ಯದ ಮಾಧ್ಯಮ ಮತ್ತು ಮನರಂಜನಾ ವಲಯವು ವಾರ್ಷಿಕವಾಗಿ ಸುಮಾರು 7% ರಷ್ಟು ಬೆಳವಣಿಗೆಯನ್ನು ಕಂಡು, 2027 ರ ವೇಳೆಗೆ ಸುಮಾರು ₹3.06 ಟ್ರಿಲಿಯನ್‌ಗೆ ತಲುಪುವ ನಿರೀಕ್ಷೆಯಿದೆ.
ಹೆಚ್ಚಿನ ಬೆಳವಣಿಗೆಯ ಸೃಜನಶೀಲ ವಿಭಾಗಗಳಲ್ಲಿ ಪ್ರತಿಭಾನ್ವಿತರನ್ನು ಸಿದ್ಧಪಡಿಸಲು, ಬಜೆಟ್ 15,000 ಪ್ರೌಢಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಎವಿಜಿಸಿ (ಎವಿಜಿಸಿ - ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ಕಂಟೆಂಟ್ ಕ್ರಿಯೇಟರ್ ಲ್ಯಾಬ್‌ಗಳನ್ನು ಸ್ಥಾಪಿಸಲು ಒತ್ತು ನೀಡಿದೆ. 2030 ರ ವೇಳೆಗೆ ಎವಿಜಿಸಿ ವಲಯಕ್ಕೆ ಸುಮಾರು 2 ಮಿಲಿಯನ್ ವೃತ್ತಿಪರರ ಅಗತ್ಯವಿರುವ ಮುನ್ಸೂಚನೆಯೊಂದಿಗೆ, ಈ ಉಪಕ್ರಮವು ಆರಂಭಿಕ ಹಂತದ ಸೃಜನಶೀಲ ಸಾಮರ್ಥ್ಯವನ್ನು ನಿರ್ಮಿಸಲು, ಉದ್ಯಮಕ್ಕೆ ಅನುಗುಣವಾದ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಜಾಗತಿಕ ಡಿಜಿಟಲ್ ವಿಷಯ ಉತ್ಪಾದನೆಯಲ್ಲಿ ಭಾರತದ ಉಪಸ್ಥಿತಿಯನ್ನು ಬಲಪಡಿಸಲು ಗುರಿ ಹೊಂದಿದೆ.
ವಿನ್ಯಾಸ
ಭಾರತೀಯ ವಿನ್ಯಾಸ ಉದ್ಯಮವು ವೇಗವಾಗಿ ವಿಸ್ತರಿಸುತ್ತಿದೆ, ಎಲ್ಲಾ ವಲಯಗಳಲ್ಲಿ ನುರಿತ ವಿನ್ಯಾಸ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿದೆ. ವಿನ್ಯಾಸ ಶಿಕ್ಷಣವನ್ನು ಬಲಪಡಿಸಲು ಮತ್ತು ಈ ಬೆಳವಣಿಗೆಗೆ ಬೆಂಬಲ ನೀಡಲು, ಭಾರತದ ಪೂರ್ವ ಭಾಗದಲ್ಲಿ ಹೊಸ 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್' ಸ್ಥಾಪನೆಯಾಗಲಿದೆ.
ಪ್ರವಾಸೋದ್ಯಮ
ಪ್ರವಾಸೋದ್ಯಮವು ರಫ್ತು, ಉದ್ಯೋಗ ಮತ್ತು ಭಾರತದ ಜಾಗತಿಕ ಸಾಂಸ್ಕೃತಿಕ ಅಸ್ತಿತ್ವಕ್ಕೆ ಪ್ರಮುಖ ಚಾಲಕಶಕ್ತಿಯಾಗಿದೆ. ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯವು 2024ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಗೆ 5.22% ಕೊಡುಗೆ ನೀಡಿದೆ, ಇದು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಹತ್ತಿರದಲ್ಲಿದೆ. ಈ ವಲಯವು ದೇಶದ ಒಟ್ಟು ಉದ್ಯೋಗದ ಸುಮಾರು 13.3% ರಷ್ಟನ್ನು ಒಳಗೊಂಡಿರುವ, ಅಂದಾಜು 8.46 ಕೋಟಿ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಬೆಂಬಲಿಸಿದೆ. ಕೇಂದ್ರ ಬಜೆಟ್ 2026-27 ಈ ವೇಗವನ್ನು ಗುರಿ ಆಧಾರಿತ ಸಾಂಸ್ಥಿಕ ಮತ್ತು ಕೌಶಲ್ಯ-ಆಧಾರಿತ ಉಪಕ್ರಮಗಳ ಮೂಲಕ ಮುಂದುವರಿಸಿದೆ:
- ರಾಷ್ಟ್ರೀಯ ಆತಿಥ್ಯ ಸಂಸ್ಥೆಯ ಸ್ಥಾಪನೆ: ಅಸ್ತಿತ್ವದಲ್ಲಿರುವ 'ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್ಮೆಂಟ್ ಅಂಡ್ ಕ್ಯಾಟರಿಂಗ್ ಟೆಕ್ನಾಲಜಿ'ಯನ್ನು ಉನ್ನತೀಕರಿಸುವ ಮೂಲಕ ಈ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಇದು ಶಿಕ್ಷಣ ಸಂಸ್ಥೆಗಳು, ಉದ್ಯಮ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿ, ಆತಿಥ್ಯ ಶಿಕ್ಷಣದ ಗುಣಮಟ್ಟವನ್ನು ಬಲಪಡಿಸುತ್ತದೆ.
- ಪ್ರವಾಸಿ ಮಾರ್ಗದರ್ಶಿಗಳಿಗೆ ಕೌಶಲ್ಯ ತರಬೇತಿ: 20 ಪ್ರಮುಖ ಪ್ರವಾಸಿ ತಾಣಗಳಲ್ಲಿ 10,000 ಪ್ರವಾಸಿ ಮಾರ್ಗದರ್ಶಿಗಳಿಗೆ ಕೌಶಲ್ಯ ತರಬೇತಿ ನೀಡಲು ಒಂದು ಪ್ರಾಯೋಗಿಕ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ 12 ವಾರಗಳ ಪ್ರಮಾಣಿತ ಹೈಬ್ರಿಡ್ ಕೋರ್ಸ್ ಮೂಲಕ ನಡೆಸಲಾಗುತ್ತದೆ.
- ರಾಷ್ಟ್ರೀಯ ಗಮ್ಯಸ್ಥಾನ ಡಿಜಿಟಲ್ ಜ್ಞಾನ: ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಪರಂಪರೆಯ ತಾಣಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ಈ ಗ್ರಿಡ್ ಅನ್ನು ಸ್ಥಾಪಿಸಲಾಗುವುದು. ಇದು ಸಂಶೋಧಕರು, ಇತಿಹಾಸಕಾರರು, ವಿಷಯ ರಚನೆಕಾರರು ಮತ್ತು ತಂತ್ರಜ್ಞಾನ ಪಾಲುದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.
ಕ್ರೀಡೆ
ಕೇಂದ್ರ ಬಜೆಟ್ 2026–27, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಕ್ಕೆ ನೀಡುವ ಆರ್ಥಿಕ ಬೆಂಬಲವನ್ನು ಹೆಚ್ಚಿಸಿದ್ದು, ಒಟ್ಟಾರೆ ಅನುದಾನ ಹಂಚಿಕೆಯನ್ನು ₹1,133 ಕೋಟಿಗಳಷ್ಟು ಏರಿಸಿದೆ. ಈ ನಿರ್ಧಾರವು 2036ರ ವೇಳೆಗೆ ಭಾರತವನ್ನು ವಿಶ್ವದ ಅಗ್ರ 10 ಕ್ರೀಡಾ ರಾಷ್ಟ್ರಗಳ ಪಟ್ಟಿಯಲ್ಲಿ ಮತ್ತು 2047ರ ವೇಳೆಗೆ ಅಗ್ರ 5 ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸುವ ಸರ್ಕಾರದ ದೂರದೃಷ್ಟಿಗೆ ಪೂರಕವಾಗಿದೆ. ಸಚಿವಾಲಯದ ಒಟ್ಟು ಅನುದಾನವು 2025–26ನೇ ಸಾಲಿನ ಪರಿಷ್ಕೃತ ಅಂದಾಜಿನ ₹3,346 ಕೋಟಿಗಳಿಂದ, 2026–27ನೇ ಸಾಲಿನ ಬಜೆಟ್ ಅಂದಾಜಿನಲ್ಲಿ ₹4,479.88 ಕೋಟಿಗಳಿಗೆ ಹೆಚ್ಚಳವಾಗಿದೆ.
ಈ ಹೆಚ್ಚಿನ ಅನುದಾನವು ಕೇಂದ್ರ ಪ್ರಾಯೋಜಿತ ಕ್ರೀಡಾ ಮತ್ತು ಯುವ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನವನ್ನು ಬಲಪಡಿಸುವ ನಿರೀಕ್ಷೆಯಿದೆ. ಇದರಲ್ಲಿ ಕ್ರೀಡಾಪಟುಗಳ ಅಭಿವೃದ್ಧಿ ಉಪಕ್ರಮಗಳು, ಯುವಜನ ಭಾಗವಹಿಸುವಿಕೆಯ ಕಾರ್ಯಕ್ರಮಗಳು, ತರಬೇತಿ ಮತ್ತು ಬೆಂಬಲ ವ್ಯವಸ್ಥೆಗಳು, ಕ್ರೀಡಾ ವಿಜ್ಞಾನದ ಏಕೀಕರಣ ಮತ್ತು ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಯಂತಹ ಪ್ರಮುಖ ಕ್ಷೇತ್ರಗಳು ಸೇರಿವೆ.

ಇದರ ಮುಂದುವರಿದ ಭಾಗವಾಗಿ, ಕ್ರೀಡಾ ವಲಯವನ್ನು ಸಮಗ್ರವಾಗಿ ಬಲಪಡಿಸಲು ಬಜೆಟ್ 'ಖೇಲೋ ಇಂಡಿಯಾ ಮಿಷನ್'ನ ಆರಂಭವನ್ನು ಘೋಷಿಸಿದೆ. ಈ ಮಿಷನ್ ಈ ಕೆಳಗಿನವುಗಳಿಗೆ ಅನುಕೂಲ ಕಲ್ಪಿಸುತ್ತದೆ:
- ಸಂಯೋಜಿತ ಪ್ರತಿಭೆ ಅಭಿವೃದ್ಧಿ ಮಾರ್ಗ: ಅಡಿಪಾಯ, ಮಧ್ಯಂತರ ಮತ್ತು ಗಣ್ಯ ಹಂತಗಳಲ್ಲಿ ತರಬೇತಿ ಕೇಂದ್ರಗಳಿಂದ ಬೆಂಬಲಿತವಾದ ಪ್ರತಿಭೆ ಅಭಿವೃದ್ಧಿ ಮಾರ್ಗ.
- ತರಬೇತುದಾರರು ಮತ್ತು ಬೆಂಬಲ ಸಿಬ್ಬಂದಿಯ ವ್ಯವಸ್ಥಿತ ಅಭಿವೃದ್ಧಿ.
- ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನದ ಏಕೀಕರಣ.
- ಸ್ಪರ್ಧೆಗಳು ಮತ್ತು ಲೀಗ್‌ಗಳು: ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಕ್ರೀಡಾಪಟುಗಳಿಗೆ ವೇದಿಕೆಗಳನ್ನು ಒದಗಿಸಲು ಸ್ಪರ್ಧೆಗಳು ಮತ್ತು ಲೀಗ್‌ಗಳ ಆಯೋಜನೆ.
- ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ: ತರಬೇತಿ ಮತ್ತು ಸ್ಪರ್ಧೆಗಾಗಿ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ.
ಕೌಶಲ್ಯಾಭಿವೃದ್ಧಿಯನ್ನು ಬಲಪಡಿಸುವ ನೀತಿ ಬೆಂಬಲ
ಕೌಶಲ್ಯಯುತ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸಲು, ಸರ್ಕಾರವು ಯಾವಾಗಲೂ ವಿವಿಧ ಪ್ರಮುಖ ಕೌಶಲ್ಯಾಭಿವೃದ್ಧಿ ಉಪಕ್ರಮಗಳನ್ನು ಬಲಪಡಿಸಲು ಆದ್ಯತೆ ನೀಡಿದೆ. ಈ ಕಾರ್ಯಕ್ರಮಗಳು ದೊಡ್ಡ ಪ್ರಮಾಣದ ತರಬೇತಿ, ಅಪ್ರೆಂಟಿಸ್‌ಶಿಪ್ ಉತ್ತೇಜನ ಮತ್ತು ವಿವಿಧ ವಲಯಗಳಲ್ಲಿನ ವೃತ್ತಿಪರ ಶಿಕ್ಷಣದ ಮೇಲೆ ಗಮನಹರಿಸುತ್ತವೆ. ಇವೆಲ್ಲವೂ ಒಟ್ಟಾಗಿ, ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಮತ್ತು ಉದ್ಯಮದ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯಾಭಿವೃದ್ಧಿಯನ್ನು ಹೊಂದಿಸುವ ಗುರಿಯನ್ನು ಹೊಂದಿವೆ.
ಕೌಶಲ್ಯ ಭಾರತ ಮಿಷನ್
2015 ರಲ್ಲಿ ಪ್ರಾರಂಭವಾದ ಕೌಶಲ್ಯ ಭಾರತ ಮಿಷನ್ ಪ್ರಮುಖ ಯೋಜನೆಗಳ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ವ್ಯಾಪಕ ಜಾಲದ ಮೂಲಕ ಕೌಶಲ್ಯ, ಮರು-ಕೌಶಲ್ಯ ಮತ್ತು ಉನ್ನತ-ಕೌಶಲ್ಯ ತರಬೇತಿಯನ್ನು ಒದಗಿಸುತ್ತದೆ. ಈ ಮಿಷನ್ ದೇಶದಾದ್ಯಂತ ಸಮಾಜದ ಎಲ್ಲಾ ವರ್ಗಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಕೆಲಸ ಮಾಡುವ ವಯಸ್ಸಿನ ಜನಸಂಖ್ಯೆಯ ಕೌಶಲ್ಯ ಮತ್ತು ಉದ್ಯೋಗಾರ್ಹತೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತದೆ. ಈ ಮಿಷನ್ ಅಡಿಯಲ್ಲಿ, ಕೆಳಗಿನ ಯೋಜನೆಗಳನ್ನು ಒಳಗೊಂಡಿದೆ:
- ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ)
- ಜನ್ ಶಿಕ್ಷಣ ಸಂಸ್ಥಾನ
- ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಉತ್ತೇಜನ ಯೋಜನೆ
- ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕರಕುಶಲಕರ್ಮಿ ತರಬೇತಿ ಯೋಜನೆ

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) / ಪಿಎಂಕೆವಿವೈ 4.0: ಇದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಒಂದು ಪ್ರಮುಖ ಅಲ್ಪಾವಧಿಯ ಕೌಶಲ್ಯಾಭಿವೃದ್ಧಿ ಉಪಕ್ರಮವಾಗಿದೆ. ಇದರ ನಾಲ್ಕು ಹಂತಗಳಲ್ಲಿ, ಇದು ಪ್ರಾಯೋಗಿಕ ಪ್ರೋತ್ಸಾಹಕ-ಆಧಾರಿತ ಪ್ರಮಾಣೀಕರಣ ಉಪಕ್ರಮದಿಂದ ಬೃಹತ್-ಪ್ರಮಾಣದ, ಬೇಡಿಕೆ-ಚಾಲಿತ ಮತ್ತು ಫಲಿತಾಂಶ-ಆಧಾರಿತ ಕೌಶಲ್ಯಾಭಿವೃದ್ಧಿ ಪರಿಸರ ವ್ಯವಸ್ಥೆಯಾಗಿ ಪ್ರಗತಿ ಸಾಧಿಸಿದೆ.
ಇದರ 4ನೇ ಹಂತವಾದ ಪಿಎಂಕೆವಿವೈ 4.0 ಅಡಿಯಲ್ಲಿ, ಉದ್ಯಮ-ನೇತೃತ್ವದ ಸೆಕ್ಟರ್ ಸ್ಕಿಲ್ ಕೌನ್ಸಿಲ್‌ಗಳು ಅಭಿವೃದ್ಧಿಪಡಿಸಿದ ರಾಷ್ಟ್ರೀಯ ಕೌಶಲ್ಯ ಅರ್ಹತೆ ಚೌಕಟ್ಟಿನ ಆಧಾರಿತ ಉದ್ಯೋಗ ಪಾತ್ರಗಳಲ್ಲಿ ತರಬೇತಿ ನೀಡಲಾಗುತ್ತದೆ ಮತ್ತು ಅನೇಕ ಕೋರ್ಸ್‌ಗಳನ್ನು ನೇರವಾಗಿ ಕೈಗಾರಿಕಾ ಆವರಣಗಳಲ್ಲಿಯೇ ಉದ್ಯೋಗದಾತರ ಪರಿಸರ ವ್ಯವಸ್ಥೆಯಿಂದ ಪಡೆಯಲಾದ ತರಬೇತುದಾರರ ಮೂಲಕ ವಿತರಿಸಲಾಗುತ್ತದೆ. ಪ್ರಮುಖ ಸಾಧನೆಗಳನ್ನು ಕೆಳಗೆ ನೀಡಲಾಗಿದೆ:
- 31 ಮಾರ್ಚ್ 2026 ರವರೆಗೆ, ಪಿಎಂಕೆವಿವೈ 4.0 38 ವಲಯಗಳಲ್ಲಿ, 36 ರಾಜ್ಯಗಳು ಮತ್ತು 737 ಜಿಲ್ಲೆಗಳನ್ನು ಒಳಗೊಂಡಂತೆ 27.24 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಿದೆ.
- ಏಪ್ರಿಲ್ 1, 2024 ರಿಂದ ಮಾರ್ಚ್ 31, 2026 ರವರೆಗೆ, 34 ರಾಜ್ಯಗಳು ಮತ್ತು 737 ಜಿಲ್ಲೆಗಳಾದ್ಯಂತ ಐಟಿ-ಐಟೀಸ್, ಏರೋಸ್ಪೇಸ್ ಮತ್ತು ಏವಿಯೇಷನ್, ಕೃಷಿ, ರಬ್ಬರ್, ಚರ್ಮ, ಉಡುಪು, ಎಲೆಕ್ಟ್ರಾನಿಕ್ಸ್, ನಿರ್ಮಾಣ ಮತ್ತು ಪ್ರವಾಸೋದ್ಯಮ ಮತ್ತು ಆತಿಥ್ಯದಂತಹ ವಲಯಗಳಲ್ಲಿ 10.91 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.
- ಎಐ, ಇಂಡಸ್ಟ್ರಿ 4.0, ಗ್ರೀನ್ ಜಾಬ್ಸ್ ಮತ್ತು ಡಿಜಿಟಲ್ ಸೇವೆಗಳು ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಉದ್ಯೋಗಾರ್ಹತೆಯನ್ನು ಸುಧಾರಿಸಲು 69 ಕಸ್ಟಮೈಸ್ ಮಾಡಿದ ಕೋರ್ಸ್‌ಗಳು ಮತ್ತು 154 ಭವಿಷ್ಯದ-ಕೌಶಲ್ಯದ ಉದ್ಯೋಗ ಪಾತ್ರಗಳನ್ನು ಪರಿಚಯಿಸಲಾಗಿದೆ.
- 31 ಮಾರ್ಚ್ 2026 ರ ಹೊತ್ತಿಗೆ, ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಐಟಿಐಗಳಲ್ಲಿನ 6,800 ಕ್ಕೂ ಹೆಚ್ಚು ಸ್ಕಿಲ್ ಹಬ್‌ಗಳನ್ನು ಒಳಗೊಂಡಂತೆ, 16,900 ಕ್ಕೂ ಹೆಚ್ಚು ಸಂಸ್ಥೆಗಳು ಪಿಎಂಕೆವಿವೈ 4.0 ಅನ್ನು ಅನುಷ್ಠಾನಗೊಳಿಸುತ್ತಿವೆ.
- ಜನ್ ಶಿಕ್ಷಣ ಸಂಸ್ಥಾನ: ಆರಂಭದಲ್ಲಿ 1967 ರಲ್ಲಿ ಶ್ರಮಿಕ ವಿದ್ಯಾಪೀಠ (SVP) ಎಂದು ಪ್ರಾರಂಭಿಸಲಾದ JSS ಯೋಜನೆಯು, ಸರ್ಕಾರದಿಂದ 100% ಅನುದಾನದೊಂದಿಗೆ ನೋಂದಾಯಿತ ಸೊಸೈಟಿಗಳ (NGOಗಳು) ಮೂಲಕ ಫಲಾನುಭವಿಗಳ ಮನೆ ಬಾಗಿಲಿಗೆ ಅನೌಪಚಾರಿಕ ರೀತಿಯಲ್ಲಿ ಕೌಶಲ್ಯ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ಇದು ಸಾಕ್ಷರರಲ್ಲದವರು, ನವ ಸಾಕ್ಷರರು ಮತ್ತು ಶಾಲೆ ಬಿಟ್ಟವರಿಗಾಗಿ ಅಂತರ್ಗತ, ಸಮುದಾಯ-ಆಧಾರಿತ ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಸಾಧಿಸಲಾದ ಪ್ರಗತಿಯು ಈ ಕೆಳಗಿನಂತಿದೆ:
- 2018 ರಿಂದ 31 ಮಾರ್ಚ್ 2026 ರವರೆಗೆ ಒಟ್ಟು 36,48,692 ಲಕ್ಷ ಫಲಾನುಭವಿಗಳಿಗೆ ತರಬೇತಿ ನೀಡಲಾಗಿದೆ.
- ಟೈಲರಿಂಗ್, ಎಂಬ್ರಾಯ್ಡರಿ, ಕರಕುಶಲ ವಸ್ತುಗಳು, ಆಹಾರ ಸಂಸ್ಕರಣೆ ಮತ್ತು ಆರೋಗ್ಯ-ಸಂಬಂಧಿತ ಸೇವೆಗಳು ಸೇರಿದಂತೆ ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಕೋರ್ಸ್‌ಗಳನ್ನು ಸಿದ್ಧಪಡಿಸಲಾಗಿದೆ.
- 31 ಮಾರ್ಚ್ 2026 ರ ಹೊತ್ತಿಗೆ 26,720 ಬುಡಕಟ್ಟು ಫಲಾನುಭವಿಗಳನ್ನು ದಾಖಲಿಸಲಾಗಿದೆ ಮತ್ತು 26,519 ಮಂದಿಗೆ ತರಬೇತಿ ನೀಡಲಾಗಿದೆ.
- ಕೌಶಲ್ಯ ಆಯ್ಕೆಗಳನ್ನು ವೈವಿಧ್ಯಗೊಳಿಸಲು, ಜೆಸ್‌ಎಸ್ ಅಡಿಯಲ್ಲಿ ಎನ್‌ಎಸ್‌ಕ್ಯೂಎಫ್ ಮಟ್ಟ 3, 3.5 ಮತ್ತು 4 ರಲ್ಲಿ 32 ಹೊಸ ಎನ್‌ಸಿವಿಇಟಿ-ಅನುಮೋದಿತ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ.
- ಡಿಸೆಂಬರ್ 2024 ರಿಂದ, JSS ಉತ್ಪನ್ನಗಳನ್ನು 'ಉದ್ಯಮ್‌ಕಾರ್ಟ್' ಪೋರ್ಟಲ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ, ಇದು ಕುಶಲಕರ್ಮಿಗಳು ಮತ್ತು ಸೂಕ್ಷ್ಮ-ಉದ್ಯಮಿಗಳನ್ನು ನೇರವಾಗಿ ಖರೀದಿದಾರರೊಂದಿಗೆ ಸಂಪರ್ಕಿಸುತ್ತದೆ.
- ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಉತ್ತೇಜನ ಯೋಜನೆ: ಆಗಸ್ಟ್ 2016 ರಲ್ಲಿ ಪ್ರಾರಂಭವಾದ ಈ ಯೋಜನೆಯು ಪ್ರಸ್ತುತ ತನ್ನ ಎರಡನೇ ಹಂತವಾದ NAPS 2.0 ರಲ್ಲಿ ಜಾರಿಯಲ್ಲಿದೆ. ಈ ಕಾರ್ಯಕ್ರಮವು ಅಪ್ರೆಂಟಿಸ್‌ಗಳಿಗೆ ಭಾಗಶಃ ಸ್ಟೈಫಂಡ್ ಬೆಂಬಲವನ್ನು ನೀಡುವ ಮೂಲಕ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಉತ್ತೇಜಿಸುತ್ತದೆ, ಆ ಮೂಲಕ ಅಪ್ರೆಂಟಿಸ್‌ಶಿಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಮಧ್ಯಸ್ಥಗಾರರಿಗೆ ವಕಾಲತ್ತು ಬೆಂಬಲವನ್ನು ನೀಡುತ್ತದೆ. ಅಪ್ರೆಂಟಿಸ್‌ಶಿಪ್ "ಕಲಿಯುತ್ತಲೇ ಗಳಿಸಿ" ಮತ್ತು ಉದ್ಯಮ-ಕೇಂದ್ರಿತ ಕೌಶಲ್ಯಾಭಿವೃದ್ಧಿಗೆ ಪ್ರಮುಖ ಆಧಾರಸ್ತಂಭವಾಗಿ ಉಳಿದಿದೆ. ಸರ್ಕಾರವು ಎನ್‌ಎಪಿಎಸ್ ಪೋರ್ಟಲ್ ಮೂಲಕ ಅಪ್ರೆಂಟಿಸ್‌ಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸ್ಟೈಫಂಡ್‌ನ 25% (ತಿಂಗಳಿಗೆ ₹1,500 ವರೆಗೆ) ನೀಡುತ್ತದೆ.
- 2016 ರಿಂದ, ಮಾರ್ಚ್ 31, 2026 ರವರೆಗೆ ಆಟೋಮೋಟಿವ್, ಐಟಿ-ಐಟೀಸ್, ಎಲೆಕ್ಟ್ರಾನಿಕ್ಸ್, ರಿಟೇಲ್ ಮತ್ತು ಉತ್ಪಾದನೆಯಂತಹ ವಲಯಗಳಲ್ಲಿ 54.41 ಲಕ್ಷಕ್ಕೂ ಹೆಚ್ಚು ಅಪ್ರೆಂಟಿಸ್‌ಗಳನ್ನು ತೊಡಗಿಸಿಕೊಳ್ಳಲಾಗಿದೆ.
- 2025–26 ರ ಆರ್ಥಿಕ ವರ್ಷದಲ್ಲಿ, ಸುಮಾರು 12.35 ಲಕ್ಷ ಅಪ್ರೆಂಟಿಸ್‌ಗಳನ್ನು ತೊಡಗಿಸಿಕೊಳ್ಳಲಾಯಿತು. ಹೆಚ್ಚುವರಿಯಾಗಿ, 2025–26 ರ ಆರ್ಥಿಕ ವರ್ಷದಲ್ಲಿ ಸುಮಾರು 6.42 ಲಕ್ಷ ಅಪ್ರೆಂಟಿಸ್‌ಗಳು ತಮ್ಮ ಉದ್ಯೋಗದಲ್ಲಿರುವಾಗ ತರಬೇತಿಯನ್ನು ಪೂರ್ಣಗೊಳಿಸಿದರು.
- ಸೆಪ್ಟೆಂಬರ್ 2025 ರಲ್ಲಿ ಪ್ರಾರಂಭಿಸಲಾದ ಸಿಒಪಿ (ಪ್ರಮಾಣಪತ್ರದ ಪ್ರಾವೀಣ್ಯತೆ), ಪೂರ್ಣ ಅವಧಿಯನ್ನು ಮತ್ತು ಪ್ರಾಯೋಗಿಕ ಮೌಲ್ಯಮಾಪನವನ್ನು ಪೂರ್ಣಗೊಳಿಸುವ ಅಪ್ರೆಂಟಿಸ್‌ಗಳಿಗೆ ಹೆಚ್ಚುವರಿ ಮನ್ನಣೆಯಾಗಿದೆ. 31 ಮಾರ್ಚ್ 2026 ರ ಹೊತ್ತಿಗೆ, 67,711 CoPಗಳನ್ನು ರಚಿಸಲಾಗಿದೆ.
- 1ನೇ ಏಪ್ರಿಲ್ 2025 ರಿಂದ 31ನೇ ಮಾರ್ಚ್ 2026 ರವರೆಗೆ, 40.10 ಲಕ್ಷ ನೇರ ನಗದು ವರ್ಗಾವಣೆ ವಹಿವಾಟುಗಳ ಮೂಲಕ ₹562.75 ಕೋಟಿಗೂ ಹೆಚ್ಚು ಹಣವನ್ನು ವಿತರಿಸಲಾಗಿದೆ.
- ಕರಕುಶಲಕರ್ಮಿ ತರಬೇತಿ ಯೋಜನೆ: ದೇಶೀಯ ಉದ್ಯಮಕ್ಕೆ ವಿವಿಧ ವಹಿವಾಟುಗಳಲ್ಲಿ ನುರಿತ ಕಾರ್ಮಿಕರ ಸ್ಥಿರ ಹರಿವನ್ನು ಖಚಿತಪಡಿಸಿಕೊಳ್ಳಲು 1950 ರಲ್ಲಿ ಸಿಟಿಎಸ್ ಅನ್ನು ಪರಿಚಯಿಸಲಾಯಿತು. ಇದು ವ್ಯವಸ್ಥಿತ ತರಬೇತಿಯ ಮೂಲಕ ಕೈಗಾರಿಕಾ ಉತ್ಪಾದನೆಯನ್ನು ಪ್ರಮಾಣಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಹೆಚ್ಚಿಸಲು ಮತ್ತು ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡುವ ತರಬೇತಿಯನ್ನು ನೀಡುವ ಮೂಲಕ ನಿರುದ್ಯೋಗವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
- ಸಿಟಿಎಸ್ ಅಡಿಯಲ್ಲಿ, ದೇಶಾದ್ಯಂತ 14,688 ITIಗಳ (ಸರ್ಕಾರಿ - 3,345 ಮತ್ತು ಖಾಸಗಿ - 11,343) ಮೂಲಕ 169 ಕೋರ್ಸ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ.
- ಮಾರ್ಚ್ 2026 ರ ಹೊತ್ತಿಗೆ, ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 14 CTS ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು 22 ಅಸ್ತಿತ್ವದಲ್ಲಿರುವ ಕೋರ್ಸ್‌ಗಳನ್ನು ಪರಿಷ್ಕರಿಸಲಾಗಿದೆ. ಈ ಕೋರ್ಸ್‌ಗಳು ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿವೆ.
- ಐಟಿಐಗಳಲ್ಲಿನ ದಾಖಲಾತಿಯು 2022-23ರ ಆರ್ಥಿಕ ವರ್ಷದ 12.51 ಲಕ್ಷದಿಂದ 2025-26ರ ಆರ್ಥಿಕ ವರ್ಷದಲ್ಲಿ 14.70 ಲಕ್ಷಕ್ಕೆ ಹೆಚ್ಚಾಗಿದೆ.
ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು)
ಐಟಿಐಗಳು ಭಾರತದಲ್ಲಿ ದೀರ್ಘಕಾಲೀನ ವೃತ್ತಿಪರ ಶಿಕ್ಷಣದ ಬೆನ್ನೆಲುಬಾಗಿವೆ. ಉದ್ಯಮಕ್ಕೆ ನುರಿತ ಸಿಬ್ಬಂದಿಯ ಸ್ಥಿರ ಹರಿವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಇವುಗಳನ್ನು ಸ್ಥಾಪಿಸಲಾಗಿದೆ.

ಈ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ಅಕ್ಟೋಬರ್ 2025 ರಲ್ಲಿ 'ಪಿಎಂ ಸೇತು' (ಪ್ರಧಾನ ಮಂತ್ರಿ ಸ್ಕಿಲ್ಲಿಂಗ್ ಅಂಡ್ ಎಂಪ್ಲಾಯಬಿಲಿಟಿ ಟ್ರಾನ್ಸ್‌ಫಾರ್ಮೇಷನ್ ತ್ರೂ ಅಪ್‌ಗ್ರೇಡೆಡ್ ಐಟಿಐಗಳು) ಎಂಬ ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಅಂದಾಜು ₹60,000 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಯಿತು. ಇದರ ಪ್ರಮುಖ ಲಕ್ಷಣಗಳು ಇಲ್ಲಿವೆ:
- ಹಬ್-ಅಂಡ್-ಸ್ಪೋಕ್ ಮಾದರಿಯಲ್ಲಿ 1,000 ಸರ್ಕಾರಿ ಐಟಿಐಗಳ ಉನ್ನತೀಕರಣ: 200 ಹಬ್ ಐಟಿಐಗಳು ಮತ್ತು 800 ಸ್ಪೋಕ್ ಐಟಿಐಗಳನ್ನು ಒಳಗೊಂಡಂತೆ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಆಧುನಿಕ ಉಪಕರಣಗಳೊಂದಿಗೆ ಇವುಗಳನ್ನು ಅಭಿವೃದ್ಧಿಪಡಿಸಲಾಗುವುದು.
- ವಿಶೇಷ ಉದ್ದೇಶದ ವಾಹನಗಳ ಸ್ಥಾಪನೆ: ಕ್ಲಸ್ಟರ್‌ಗಳನ್ನು ಸಹ-ಮಾಲೀಕತ್ವ ಮತ್ತು ಸಹ-ನಿರ್ವಹಣೆ ಮಾಡಲು ಆಂಕರ್ ಇಂಡಸ್ಟ್ರಿ ಪಾರ್ಟ್‌ನರ್ಸ್ ಗಳೊಂದಿಗೆ ಈ SPVಗಳನ್ನು ಸ್ಥಾಪಿಸಲಾಗುವುದು.
- ಕೋರ್ಸ್‌ಗಳ ಪರಿಚಯ ಮತ್ತು ಮರುವಿನ್ಯಾಸ: ಕಾರ್ಮಿಕ ಮಾರುಕಟ್ಟೆಯ ಬೇಡಿಕೆಯನ್ನು ಆಧರಿಸಿ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು ಮತ್ತು ಮರುವಿನ್ಯಾಸಗೊಳಿಸಲಾಗುವುದು. ಇದರಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೆ ಏರಿಸಲಾದ, ಹೆಚ್ಚಿನ ಬೇಡಿಕೆಯಿರುವ ಸಾಂಪ್ರದಾಯಿಕ ವಹಿವಾಟುಗಳು ಸೇರಿವೆ.
- ರಾಜ್ಯಗಳ ಸಹಭಾಗಿತ್ವ: ಹರಿಯಾಣ, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ತಮ್ಮ ಪ್ರಮುಖ ಸಾಮರ್ಥ್ಯದ ಆಧಾರದ ಮೇಲೆ 1,000 ಐಟಿಐಗಳ ಉನ್ನತೀಕರಣ ಪ್ರಕ್ರಿಯೆಯನ್ನು ಜಂಟಿಯಾಗಿ ರೂಪಿಸುತ್ತಿವೆ.
- ರಾಷ್ಟ್ರೀಯ ಕೌಶಲ್ಯ ಉತ್ಕೃಷ್ಟತಾ ಕೇಂದ್ರಗಳ ನಿರ್ಮಾಣ: ಜಾಗತಿಕ ಪಾಲುದಾರಿಕೆಯೊಂದಿಗೆ ಐದು 'ನ್ಯಾಷನಲ್ ಸ್ಕಿಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ಗಳ' (ಭುವನೇಶ್ವರ, ಚೆನ್ನೈ, ಹೈದರಾಬಾದ್, ಕಾನ್ಪುರ ಮತ್ತು ಲೂಧಿಯಾನ) ಸಾಮರ್ಥ್ಯವನ್ನು ಹೆಚ್ಚಿಸಿ, ಅವುಗಳನ್ನು ರಾಷ್ಟ್ರೀಯ ಕೌಶಲ್ಯ ಉತ್ಕೃಷ್ಟತಾ ಕೇಂದ್ರಗಳಾಗಿ ರೂಪಿಸಲಾಗುವುದು.
ಉಪಸಂಹಾರ
ಭಾರತದ ಕೌಶಲ್ಯ ಪರಿಸರ ವ್ಯವಸ್ಥೆಯು ಸಂಘಟಿತ, ತಂತ್ರಜ್ಞಾನ-ಸಕ್ರಿಯ ಮತ್ತು ಉದ್ಯಮ-ಅನುಗುಣವಾದ ಚೌಕಟ್ಟುಗಳೊಂದಿಗೆ ರಚನಾತ್ಮಕ ಪರಿವರ್ತನೆಯನ್ನು ಹೊಂದುತ್ತಿದೆ. ಕೇಂದ್ರ ಬಜೆಟ್ 2026-27 ಈ ಬದಲಾವಣೆಯನ್ನು, ವಲಯ-ನಿರ್ದಿಷ್ಟ ಕೌಶಲ್ಯ ಕಾರ್ಯಕ್ರಮಗಳನ್ನು ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಸಂಯೋಜಿಸುವ ಮೂಲಕ ಮತ್ತಷ್ಟು ಬಲಪಡಿಸುತ್ತದೆ. ಐಟಿಐ ಉನ್ನತೀಕರಣ, ಪಿಎಂಕೆವಿವೈ 4.0, ಪಿಎಂ-ಸೇತು, ಎನ್‌ಎಪಿಎಸ್ ಮತ್ತು ಇತರ ಸುಧಾರಣೆಗಳನ್ನು ಒಳಗೊಂಡಿರುವ ಉಪಕ್ರಮಗಳು ಒಟ್ಟಾರೆಯಾಗಿ ಕೌಶಲ್ಯ ಮೌಲ್ಯ ಸರಪಳಿಯಾದ್ಯಂತ ಪ್ರಮಾಣ, ಗುಣಮಟ್ಟ, ಪಾರದರ್ಶಕತೆ ಮತ್ತು ಉದ್ಯಮದ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.
ಭಾರತವು 'ವಿಕಸಿತ ಭಾರತ @2047' ಕಡೆಗೆ ಪ್ರಗತಿ ಹೊಂದುತ್ತಿರುವಾಗ, ಸರ್ಕಾರವು ಬೇಡಿಕೆ-ಚಾಲಿತ ತರಬೇತಿ, ಅಳೆಯಬಹುದಾದ ಫಲಿತಾಂಶಗಳು ಮತ್ತು ಅಂತರ್ಗತ ಪ್ರವೇಶದ ಮೇಲೆ ಒತ್ತು ನೀಡುತ್ತಿದೆ. ಆರೋಗ್ಯ ರಕ್ಷಣೆ, ಆರೈಕೆ ಆರ್ಥಿಕತೆ, ಎವಿಜಿಸಿ, ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಹೊಂದಿಸುವ ಮೂಲಕ, ನೀತಿ ಚೌಕಟ್ಟು ಮಾನವ ಬಂಡವಾಳವನ್ನು ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯನ್ನಾಗಿ ಪ್ರತಿಷ್ಠಾಪಿಸುತ್ತದೆ. ಒಟ್ಟಾರೆಯಾಗಿ, ಭಾರತದ ಸ್ಥಿತಿಸ್ಥಾಪಕ ಮತ್ತು ಭವಿಷ್ಯ-ಸಿದ್ಧ ಕೌಶಲ್ಯ ಪರಿಸರ ವ್ಯವಸ್ಥೆಯು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಮತ್ತು ಔಪಚಾರಿಕತೆಯನ್ನು ವೇಗಗೊಳಿಸುತ್ತದೆ. ಇದು ದೇಶದ ಜನಸಂಖ್ಯಾ ಲಾಭಾಂಶವನ್ನು ವ್ಯಾಪಕ ಆಧಾರಿತ, ಸುಸ್ಥಿರ ಬೆಳವಣಿಗೆಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.
References
Ministry of Finance
https://www.indiabudget.gov.in/economicsurvey/doc/echapter.pdf
https://www.indiabudget.gov.in/doc/budget_speech.pdf
Ministry of Labour and Employment
https://eshram.gov.in/indexmain
Ministry of Textiles
https://www.pib.gov.in/PressReleasePage.aspx?PRID=2208051®=6&lang=1
Ministry of Health and Family Welfare
https://www.pib.gov.in/PressReleasePage.aspx?PRID=2221616®=3&lang=2
AYUSH
https://www.pib.gov.in/PressReleasePage.aspx?PRID=2221910®=3&lang=2
Ministry of Fisheries, Animal Husbandry & Dairying
https://www.pib.gov.in/PressReleasePage.aspx?PRID=2221788®=3&lang=2
Ministry of Information & Broadcasting
https://www.pib.gov.in/PressReleasePage.aspx?PRID=2221825®=6&lang=1
Ministry of Education
https://www.pib.gov.in/PressReleasePage.aspx?PRID=2221734®=3&lang=1
Ministry of Youth Affairs and Sports
https://www.pib.gov.in/PressReleasePage.aspx?PRID=2221706®=3&lang=2
Ministry of Skill Development and Entrepreneurship
https://www.pib.gov.in/PressReleasePage.aspx?PRID=2200373®=3&lang=1
https://www.pib.gov.in/PressReleasePage.aspx?PRID=2223182®=3&lang=2
https://www.pib.gov.in/PressReleasePage.aspx?PRID=2217881®=3&lang=2
https://www.pib.gov.in/PressReleasePage.aspx?PRID=2197057®=3&lang=1
https://dsde.uk.gov.in/apprenticeship-training-scheme/
https://www.pib.gov.in/PressReleasePage.aspx?PRID=2236969®=3&lang=2
https://www.pib.gov.in/PressReleasePage.aspx?PRID=2149336®=3&lang=2
ITI, Lala Hans Raj Gupta Industrial Training Institute
https://itilhrg.delhi.gov.in/itilhrg/craftsmen-training-scheme-cts
Niti Aayog
https://niti.gov.in/sites/default/files/2023-02/ITI_Report_02022023_0.pdf
IBEF
https://www.ibef.org/government-schemes/skill-india#:~:text=On%20July%2015%2C%202025%2C%20the,Hyderabad%20and%20Chennai%20were%20launched
Ministry of Statistics & Programme Implementation
https://www.pib.gov.in/PressReleasePage.aspx?PRID=2240676®=3&lang=2
PIB headquarters
https://www.pib.gov.in/PressReleseDetail.aspx?PRID=2228572®=3&lang=1
Click here to see pdf
*****
(Explainer ID: 158394)
आगंतुक पटल : 11
Provide suggestions / comments