• Sitemap
  • Advance Search
Infrastructure

ಉಗಿಯಿಂದ ವೇಗದವರೆಗೆ: ರೈಲ್ವೆಯ ಸದಾ ವಿಕಸನಗೊಳ್ಳುತ್ತಿರುವ ಪ್ರಯಾಣ

Posted On: 15 APR 2026 11:58AM

ಪ್ರಮುಖಾಂಶಗಳು

  • ಭಾರತದಲ್ಲಿ ರೈಲ್ವೆಯು ಏಪ್ರಿಲ್ 16, 1853 ರಂದು ಬೊಂಬಾಯಿ ಮತ್ತು ಥಾಣೆ ನಡುವೆ ಸಂಚರಿಸಿದ ಮೊದಲ ಪ್ರಯಾಣಿಕ ರೈಲಿನೊಂದಿಗೆ ಪ್ರಾರಂಭವಾಯಿತು.
  • ಆರಂಭಿಕ ಹಂತದ ಹಬೆ ಇಂಜಿನ್‌ಗಳಿಂದ ವಿಕಸನಗೊಂಡ ರೈಲ್ವೆಯು, ಮಾರ್ಚ್ 2026 ರ ವೇಳೆಗೆ ಬ್ರಾಡ್ ಗೇಜ್ ಜಾಲದ ಶೇ. 99.6 ರಷ್ಟು ವಿದ್ಯುದ್ದೀಕರಣವನ್ನು ಸಾಧಿಸಿದೆ.
  • ರೈಲ್ವೆ ಜಾಲವು ಈಗ ಪ್ರತಿದಿನ ಸುಮಾರು 25,000 ರೈಲುಗಳನ್ನು ಓಡಿಸುತ್ತಿದ್ದು, ದೇಶಾದ್ಯಂತ ವಿಶ್ವಾಸಾರ್ಹ ಸಂಪರ್ಕವನ್ನು ಖಚಿತಪಡಿಸುತ್ತಿದೆ.
  • ಆರಂಭಿಕ ವರ್ಷಗಳಲ್ಲಿ ಕೆಲವು ನೂರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ರೈಲ್ವೆಯು, 2025-26 ರಲ್ಲಿ ಸುಮಾರು 741 ಕೋಟಿ ಪ್ರಯಾಣಿಕರನ್ನು ಸಾಗಿಸಿದೆ.
  • ಕವಚ ಯೋಜನೆಯು 3,100 ಕ್ಕೂ ಹೆಚ್ಚು ಕಿಲೋಮೀಟರ್ ಮಾರ್ಗಗಳಲ್ಲಿ ಪೂರ್ಣಗೊಂಡಿದ್ದು, ಹೆಚ್ಚುವರಿ 24,400 ಕಿಲೋಮೀಟರ್‌ಗಳಲ್ಲಿ ಅನುಷ್ಠಾನದ ಹಂತದಲ್ಲಿದೆ.

ಪೀಠಿಕೆ

ಕಳೆದ 173 ವರ್ಷಗಳ ಹಿಂದೆ ಹಬೆ ಇಂಜಿನ್‌ನ ಶಬ್ದವು ಭಾರತದ ಇತಿಹಾಸದ ಹಾದಿಯನ್ನೇ ಬದಲಿಸಿತು. 1853ರಲ್ಲಿ ಬೊಂಬಾಯಿಯಿಂದ ಥಾಣೆಗೆ ಮೊದಲ ಪ್ರಯಾಣಿಕ ರೈಲು ಚಲಿಸಿದಾಗ, ಅದು ಕೇವಲ ಪ್ರಯಾಣಿಕರನ್ನು ಮಾತ್ರವಲ್ಲದೆ, ಸಂಚಾರ ಮತ್ತು ಸಂಪರ್ಕದ ಹೊಸ ಯುಗದ ಭರವಸೆಯನ್ನು ಹೊತ್ತು ತಂದಿತು. ನಂತರದ ವರ್ಷಗಳಲ್ಲಿ, ರೈಲ್ವೆಯು ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಿಗೆ ವೇಗವಾಗಿ ಹರಡಿತು; ಹಿಂದೆಂದೂ ಇಲ್ಲದ ರೀತಿಯಲ್ಲಿ ಜನರು, ಸರಕುಗಳು ಮತ್ತು ಆಲೋಚನೆಗಳನ್ನು ಒಂದುಗೂಡಿಸಿತು.

ಹಬೆ ಇಂಜಿನ್‌ಗಳು ಡೀಸೆಲ್ ಲೋಕೋಮೋಟಿವ್‌ಗಳಿಗೆ ದಾರಿಸೂಚಿಸಿದವು ಮತ್ತು ಅಂತಿಮವಾಗಿ ಹೆಚ್ಚು ವೇಗವಾದ, ಸ್ವಚ್ಛವಾದ ಹಾಗೂ ದಕ್ಷತೆಯಿಂದ ಕೂಡಿದ ವಿದ್ಯುತ್ ರೈಲುಗಳು ಬಂದವು. ಕಾಲಾನಂತರದಲ್ಲಿ, ರೈಲ್ವೆ ನಿಲ್ದಾಣಗಳು ಸಾಮಾನ್ಯ ಪ್ಲಾಟ್‌ಫಾರ್ಮ್‌ಗಳಿಂದ ಗಿಜಿಗುಟ್ಟುವ ಚಟುವಟಿಕೆಯ ಕೇಂದ್ರಗಳಾಗಿ ಮಾರ್ಪಟ್ಟವು. ಪ್ರತಿಯೊಂದು ಹೊಸ ತಾಂತ್ರಿಕ ಪ್ರಗತಿಯು ಹಿಂದಿನ ಸಾಧನೆಗಳ ಮೇಲೆ ನಿರ್ಮಾಣಗೊಂಡು, ಲಕ್ಷಾಂತರ ಪ್ರಯಾಣಿಕರಿಗೆ ವೇಗ, ಸುರಕ್ಷತೆ ಮತ್ತು ಸೌಕರ್ಯವನ್ನು ಸ್ಥಿರವಾಗಿ ಸುಧಾರಿಸುತ್ತಾ ಬಂದಿದೆ. ನಿಧಾನಗತಿಯ ಮತ್ತು ಪ್ರಾಯೋಗಿಕ ಹಾದಿಯಾಗಿ ಪ್ರಾರಂಭವಾದದ್ದು ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿ ಬೆಳೆಯಿತು.

ಇಂದು, ಭಾರತೀಯ ರೈಲ್ವೆಯು ಪ್ರಯಾಣಿಕ ಮತ್ತು ಸರಕು ಸಾಗಣೆ ಎರಡರಲ್ಲೂ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಾ ತನ್ನ ವೇಗವನ್ನು ಮುಂದುವರಿಸಿದೆ. 2025-26 ರಲ್ಲಿ, ರೈಲ್ವೆಯು 741 ಕೋಟಿ ಪ್ರಯಾಣಿಕರನ್ನು ಹೊತ್ತೊಯ್ದಿದೆ, ಇದು ಪ್ರತಿದಿನ ರಾಷ್ಟ್ರಕ್ಕೆ ಒದಗಿಸುತ್ತಿರುವ ಸೇವೆಯ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತದೆ. ಇದೇ ಅವಧಿಯಲ್ಲಿ, ಒಟ್ಟು ಆದಾಯವು ಸುಮಾರು ₹80,000 ಕೋಟಿಯನ್ನು ತಲುಪಿದ್ದರೆ, ಸರಕು ಸಾಗಣೆಯು ದಾಖಲೆಯ 1,670 ಮಿಲಿಯನ್ ಟನ್  ಅನ್ನು ಮುಟ್ಟಿದೆ. ಈ ಸಾಧನೆಗಳು ರೈಲ್ವೆಯು ಒಂದು ಪ್ರಾಯೋಗಿಕ ಸಾರಿಗೆ ವ್ಯವಸ್ಥೆಯಿಂದ ಆರ್ಥಿಕ ಬೆಳವಣಿಗೆಯ ಪ್ರಮುಖ ಇಂಜಿನ್ ಆಗಿ ಹೇಗೆ ವಿಕಸನಗೊಂಡಿದೆ ಎಂಬುದನ್ನು ಎತ್ತಿ ತೋರಿಸುತ್ತವೆ. ಇದು ದೇಶದ ಲಾಜಿಸ್ಟಿಕ್ಸ್ ಜಾಲದ ಬೆನ್ನೆಲುಬಾಗಿ ಸೇವೆ ಸಲ್ಲಿಸುವುದರ ಜೊತೆಗೆ, ಭಾರತದಾದ್ಯಂತ ಲಕ್ಷಾಂತರ ಜನರಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸುಲಭವಾಗಿ ಲಭ್ಯವಾಗುವಂತಹ ಸಂಚಾರ ವ್ಯವಸ್ಥೆಯನ್ನು ಒದಗಿಸುತ್ತಿದೆ.

ಭಾರತದಲ್ಲಿ ರೈಲ್ವೆಯ ಆರಂಭ

ಭಾರತದಲ್ಲಿ ರೈಲ್ವೆಯ ಪರಿಚಯವು ಏಪ್ರಿಲ್ 16, 1853 ರಂದು ನಡೆದ ಐತಿಹಾಸಿಕ ಘಟನೆಯೊಂದಿಗೆ ಪ್ರಾರಂಭವಾಯಿತು. ಅಂದು ಮೊದಲ ಪ್ರಯಾಣಿಕ ರೈಲು ಬೊಂಬಾಯಿ (ಈಗಿನ ಮುಂಬೈ) ಮತ್ತು ಥಾಣೆ ನಡುವೆ ಸಂಚರಿಸಿತು. ಈ ಸಂದರ್ಭವು ಎಷ್ಟು ಮಹತ್ವದ್ದಾಗಿತ್ತು ಎಂದರೆ, ನಾಗರಿಕರು ಈ ಹೊಸ ಸಾರಿಗೆ ವ್ಯವಸ್ಥೆಯ ಉದ್ಘಾಟನೆಗೆ ಸಾಕ್ಷಿಯಾಗಲಿ ಎಂಬ ಉದ್ದೇಶದಿಂದ ಬೊಂಬಾಯಿಯಲ್ಲಿ ಆ ದಿನವನ್ನು ಸಾರ್ವಜನಿಕ ರಜೆ ಎಂದು ಘೋಷಿಸಲಾಗಿತ್ತು. ಬೋರಿ ಬಂದರ್ ನಿಲ್ದಾಣದಲ್ಲಿ ಅಪಾರ ಜನಸ್ತೋಮ ಜಮಾಯಿಸಿತ್ತು.

ಉದ್ಘಾಟನಾ ಓಟಕ್ಕಾಗಿ ಸುಮಾರು 400 ಪ್ರಯಾಣಿಕರು ರೈಲನ್ನು ಹತ್ತಿದ್ದರು. ಈ ರೈಲು ಗ್ರೇಟ್ ಇಂಡಿಯನ್ ಪೆನಿನ್ಸುಲಾ ರೈಲ್ವೆ ನಿರ್ವಹಿಸುತ್ತಿದ್ದ 14 ಪ್ರಯಾಣಿಕರ ಬೋಗಿಗಳನ್ನು ಒಳಗೊಂಡಿತ್ತು ಮತ್ತು ಇದನ್ನು 'ಫಾಕ್ಲ್ಯಾಂಡ್' ಹೆಸರಿನ ಹಬೆ ಇಂಜಿನ್ ಎಳೆಯುತ್ತಿತ್ತು. ಭಾರತದಲ್ಲಿ ರೈಲ್ವೆ ಸಾರಿಗೆಯ ಆರಂಭವನ್ನು ಸಂಕೇತಿಸಲು, ರೈಲು ಹೊರಡುವಾಗ ಸಾಂಪ್ರದಾಯಿಕವಾಗಿ 21 ಕುಶಾಲತೋಪುಗಳ ಗೌರವವನ್ನು (21-gun salute) ಸಲ್ಲಿಸಲಾಯಿತು.

ರೈಲು ಸುಮಾರು 34–35 ಕಿಲೋಮೀಟರ್ಗಳ ತನ್ನ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು, ಇದು ಪ್ರಯಾಣಿಕರ ಸಂಚಾರಕ್ಕಾಗಿ ರೈಲ್ವೆಯ ಪ್ರಾಯೋಗಿಕ ಸಾಮರ್ಥ್ಯವನ್ನು ಸಾಬೀತುಪಡಿಸಿತು. ಈ ಘಟನೆಯು ಭಾರತೀಯ ರೈಲ್ವೆ ವ್ಯವಸ್ಥೆಯ ಅಡಿಪಾಯವನ್ನು ಹಾಕಿತು ಮತ್ತು ದೇಶಾದ್ಯಂತ ರೈಲ್ವೆ ಜಾಲದ ಕ್ಷಿಪ್ರ ವಿಸ್ತರಣೆಯ ಕಾಲಕ್ಕೆ ನಾಂದಿ ಹಾಡಿತು.

ಹಬೆ ಯುಗದಲ್ಲಿ ರೈಲ್ವೆ ಜಾಲದ ಬೆಳವಣಿಗೆ

ಮೊದಲ ಪ್ರಯಾಣಿಕ ರೈಲಿನ ಪರಿಚಯದ ನಂತರ, ಭಾರತೀಯ ರೈಲ್ವೆಯು ಹಬೆ ಇಂಜಿನ್ ತಂತ್ರಜ್ಞಾನದ ನೆರವಿನಿಂದ ಕ್ಷಿಪ್ರ ವಿಸ್ತರಣೆಯ ಹಂತವನ್ನು ತಲುಪಿತು. ರೈಲ್ವೆ ವ್ಯವಸ್ಥೆಯು ವಿವಿಧ ಪ್ರದೇಶಗಳಲ್ಲಿ ವೇಗವಾಗಿ ಬೆಳೆಯಿತು; ಕೇವಲ ಒಂದು ಪ್ರಾಯೋಗಿಕ ಮಾರ್ಗದಿಂದ ಬೃಹತ್ ಸಾರಿಗೆ ಜಾಲವಾಗಿ ರೂಪಾಂತರಗೊಂಡಿತು. 1880ರ ವೇಳೆಗೆ, ರೈಲ್ವೆ ವ್ಯವಸ್ಥೆಯು ಸುಮಾರು 9,000 ಮೈಲಿಗಳಷ್ಟು (ಸರಿಸುಮಾರು 14,500 ಕಿಲೋಮೀಟರ್) ಮಾರ್ಗವನ್ನು ಅಭಿವೃದ್ಧಿಪಡಿಸಿತ್ತು, ಇದು ರೈಲ್ವೆ ಮೂಲಸೌಕರ್ಯದ ಅತಿ ವೇಗದ ಬೆಳವಣಿಗೆಯನ್ನು ಸಾಬೀತುಪಡಿಸಿತು.

ಗೇಜ್‌ಗಳ (ಹಳಿಗಳ ನಡುವಿನ ಅಂತರ) ಆಧಾರದ ಮೇಲೆ, ಭಾರತೀಯ ರೈಲ್ವೆಯು ಈ ಕೆಳಗಿನ ಹಳಿಗಳ ವಿಭಾಗಗಳನ್ನು ಹೊಂದಿದೆ:

  • ಬ್ರಾಡ್ ಗೇಜ್ – 1.6 ಮೀಟರ್
  • ಮೀಟರ್ ಗೇಜ್ – 1 ಮೀಟರ್
  • ನ್ಯಾರೋ ಗೇಜ್ – 0.76 ಮೀಟರ್ ಮತ್ತು 0.6 ಮೀಟರ್
  • ಸ್ಟ್ಯಾಂಡರ್ಡ್ ಗೇಜ್  – 1.43 ಮೀಟರ್

ಹಬೆ ಯುಗದ ಪ್ರಮುಖ ಕಾರ್ಯಾಚರಣೆಯ ಬೆಳವಣಿಗೆಗಳಲ್ಲಿ ಒಂದೆಂದರೆ, ವೈವಿಧ್ಯಮಯ ಭೌಗೋಳಿಕ ಪರಿಸ್ಥಿತಿಗಳಲ್ಲಿ ರೈಲ್ವೆಯನ್ನು ವಿಸ್ತರಿಸಲು ವಿವಿಧ ರೈಲ್ವೆ ಗೇಜ್ಗಳ (ಹಳಿಗಳ ನಡುವಿನ ಅಂತರ) ಅಳವಡಿಕೆ. ಎರಡು ಹಳಿಗಳ ಒಳಗಿನ ಮುಖಗಳ ನಡುವಿನ ಕನಿಷ್ಠ ಅಂತರವನ್ನು 'ಗೇಜ್' ಎಂದು ಕರೆಯಲಾಗುತ್ತದೆ. ಮೊದಲ ರೈಲ್ವೆ ಮಾರ್ಗಗಳಿಗಾಗಿ 5 ಅಡಿ 6 ಇಂಚು (1.6 ಮೀಟರ್) ಬ್ರಾಡ್ ಗೇಜ್ ಅನ್ನು ಬಳಸಿದ ನಂತರ, 1871 ರಲ್ಲಿ ಮೀಟರ್ ಗೇಜ್ ಅನ್ನು ಭಾರತದ ಎರಡನೇ ಪ್ರಮಾಣಿತ ಗೇಜ್ ಆಗಿ ಅಧಿಕೃತವಾಗಿ ಅಳವಡಿಸಿಕೊಳ್ಳಲಾಯಿತು. ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಮತ್ತು ಮುಖ್ಯ ರೈಲ್ವೆ ಮಾರ್ಗಗಳಿಗೆ ಸರಕುಗಳನ್ನು ತಲುಪಿಸಲು ಮೀಟರ್ ಗೇಜ್‌ಗಿಂತಲೂ ಕಿರಿದಾದ (ನ್ಯಾರೋ ಗೇಜ್) ಹಳಿಗಳನ್ನು ಬಳಸಲಾಯಿತು.

ಈ ವಿಸ್ತರಣೆಯ ಜೊತೆಗೆ, ರೈಲ್ವೆ ಎಂಜಿನಿಯರಿಂಗ್ ಕೂಡ ಗಮನಾರ್ಹವಾಗಿ ಮುಂದುವರಿಯಿತು, ವಿಶೇಷವಾಗಿ ಸವಾಲಿನ ಭೂಪ್ರದೇಶಗಳಲ್ಲಿ ವಿಶೇಷ ರೈಲು ವ್ಯವಸ್ಥೆಗಳ ನಿರ್ಮಾಣದ ಮೂಲಕ ಇದು ಸಾಧ್ಯವಾಯಿತು. ಈ ನಿಟ್ಟಿನಲ್ಲಿ 1881 ರಲ್ಲಿ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಯ ಉದ್ಘಾಟನೆಯು ಒಂದು ಪ್ರಮುಖ ಮೈಲಿಗಲ್ಲಾಗಿದೆ. ಇದು ಪಶ್ಚಿಮ ಬಂಗಾಳದ ಬಯಲು ಪ್ರದೇಶವಾದ ನ್ಯೂ ಜಲ್ಪೈಗುರಿಯನ್ನು ಡಾರ್ಜಿಲಿಂಗ್ ಜೊತೆಗೆ ಸಂಪರ್ಕಿಸಿತು. ಇದು ಪರ್ವತ ಸಾರಿಗೆಗಾಗಿ ನವೀನ ಎಂಜಿನಿಯರಿಂಗ್ ಪರಿಹಾರಗಳನ್ನು ಪ್ರದರ್ಶಿಸಿತು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಸಂಪರ್ಕವನ್ನು ಸುಧಾರಿಸಿತು.

ಮತ್ತೊಂದು ಮಹತ್ವದ ತಾಂತ್ರಿಕ ಮೈಲಿಗಲ್ಲೆಂದರೆ ಸ್ವದೇಶಿ ಉತ್ಪಾದನಾ ಸಾಮರ್ಥ್ಯದ ಅಭಿವೃದ್ಧಿ. 1895 ರಲ್ಲಿ, ಭಾರತದಲ್ಲಿ ನಿರ್ಮಿಸಲಾದ ಮೊದಲ ಹಬೆ ಇಂಜಿನ್ ರಾಜಪೂತಾನ ಮಾಲ್ವಾ ರೈಲ್ವೆಯ ಅಜ್ಮೀರ್ ಕಾರ್ಯಾಗಾರದಲ್ಲಿ ತಯಾರಾಯಿತು. ಇದು ದೇಶೀಯ ರೈಲ್ವೆ ಎಂಜಿನಿಯರಿಂಗ್ ಮತ್ತು ನಿರ್ವಹಣಾ ಸಾಮರ್ಥ್ಯದ ಕಡೆಗೆ ಇಟ್ಟ ಪ್ರಮುಖ ಹೆಜ್ಜೆಯಾಗಿದೆ.

ರಾಜಪೂತಾನ ಮಾಲ್ವಾ ರೈಲ್ವೆಯ ಮೊದಲ ಹಬೆ ಇಂಜಿನ್ ಸಂಖ್ಯೆ. F-734

ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ, ಹಬೆ ಇಂಜಿನ್‌ಗಳು ದೂರದ ಪ್ರಯಾಣ, ದೊಡ್ಡ ಪ್ರಮಾಣದ ಸರಕು ಸಾಗಣೆ ಮತ್ತು ರಾಷ್ಟ್ರವ್ಯಾಪಿ ಸಂಪರ್ಕವನ್ನು ಸಾಧ್ಯವಾಗಿಸಿದವು. ಈ ಬೆಳವಣಿಗೆಗಳು ಭಾರತೀಯ ರೈಲ್ವೆಯ ವಿಕಸನಕ್ಕೆ ಅಗತ್ಯವಾದ ಎಂಜಿನಿಯರಿಂಗ್, ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಅಡಿಪಾಯಗಳನ್ನು ಹಾಕಿಕೊಟ್ಟವು.

ಇಪ್ಪತ್ತನೇ ಶತಮಾನದ ಅವಧಿಯಲ್ಲಿ, ಪ್ರಪಂಚದಾದ್ಯಂತದ ರೈಲ್ವೆ ವ್ಯವಸ್ಥೆಗಳು ಹಬೆ ಇಂಜಿನ್‌ಗಳ ಬದಲಿಗೆ ಹೆಚ್ಚು ದಕ್ಷತೆಯ ಇತರ ಎಂಜಿನ್‌ಗಳನ್ನು ಬಳಸಲು ಪ್ರಾರಂಭಿಸಿದವು. ಭಾರತದಲ್ಲಿ, ವಿದ್ಯುತ್ ಚಾಲಿತ ವ್ಯವಸ್ಥೆಯತ್ತ ಸ್ಥಿತ್ಯಂತರವು 1925 ರಲ್ಲಿ ಪ್ರಾರಂಭವಾಯಿತು; ಆಗ ದೇಶದ ಮೊದಲ ವಿದ್ಯುತ್ ರೈಲು ಬೊಂಬಾಯಿ ವಿಕ್ಟೋರಿಯಾ ಟರ್ಮಿನಸ್ ಮತ್ತು ಕುರ್ಲಾ ಹಾರ್ಬರ್ ನಡುವೆ ಸಂಚರಿಸಿತು. ಇದು ಆಧುನೀಕರಣದತ್ತ ಇಟ್ಟ ಪ್ರಮುಖ ಹೆಜ್ಜೆಯಾಗಿದ್ದು, ವೇಗದ ಸಂಚಾರಕ್ಕೆ ಮತ್ತು ಹಬೆ ಇಂಜಿನ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಕಾರಿಯಾಯಿತು. ನಂತರದ ದಶಕಗಳಲ್ಲಿ ವಿದ್ಯುದ್ದೀಕರಣದ ಪ್ರಗತಿಯು ಹಂತಹಂತವಾಗಿ ಮುಂದುವರಿಯಿತು.

  • 1947: ಸ್ವಾತಂತ್ರ್ಯದ ನಂತರ, ಭಾರತವು ಪ್ರಮುಖ ಸುಧಾರಣೆಗಳ ಅಗತ್ಯವಿದ್ದ ರೈಲ್ವೆ ಜಾಲವನ್ನು ಪರಂಪರೆಯಾಗಿ ಪಡೆಯಿತು; ಪ್ರಮುಖ ನಗರಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಮಾರ್ಗಗಳನ್ನು ಮರುಸಂಘಟಿಸಲಾಯಿತು ಮತ್ತು ಹೊಸ ಮಾರ್ಗಗಳನ್ನು ನಿರ್ಮಿಸಲಾಯಿತು. ಮಾಜಿ ಸಂಸ್ಥಾನಗಳ ರೈಲ್ವೆ ಸೇರಿದಂತೆ 42 ರೈಲ್ವೆ ವ್ಯವಸ್ಥೆಗಳನ್ನು ವಿಲೀನಗೊಳಿಸಿ ಭಾರತೀಯ ರೈಲ್ವೆಯನ್ನು ರಚಿಸಲಾಯಿತು.
  • 1952: ದಕ್ಷತೆ ಮತ್ತು ನಿರ್ವಹಣೆಯನ್ನು ಸುಧಾರಿಸಲು ರೈಲ್ವೆ ಜಾಲವನ್ನು ಆರು ಆಡಳಿತಾತ್ಮಕ ವಲಯಗಳಾಗಿ ಮರುಸಂಘಟಿಸಲಾಯಿತು. ಈ ಅವಧಿಯಲ್ಲಿ ಕಲ್ಲಿದ್ದಲು ಮತ್ತು ಡೀಸೆಲ್ ಇಂಜಿನ್‌ಗಳೇ ರೈಲ್ವೆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
  • 1985: ಹಬೆ ಇಂಜಿನ್‌ಗಳನ್ನು ಹಂತಹಂತವಾಗಿ ನಿಲ್ಲಿಸಲಾಯಿತು ಮತ್ತು ರೈಲ್ವೆ ಕಾರ್ಯಾಚರಣೆಗಳು ಹೆಚ್ಚು ದಕ್ಷತೆಯ ಡೀಸೆಲ್ ಮತ್ತು ವಿದ್ಯುತ್ ಇಂಜಿನ್‌ಗಳತ್ತ ವಾಲಿದವು. ಇದು ರೈಲ್ವೆ ವ್ಯವಸ್ಥೆಯ ಆಧುನೀಕರಣದಲ್ಲಿ ಒಂದು ಪ್ರಮುಖ ಘಟ್ಟವಾಯಿತು.

ಇಪ್ಪತ್ತನೇ ಶತಮಾನದ ಕೊನೆಯ ದಶಕಗಳ ವೇಳೆಗೆ, ರೈಲ್ವೆ ವ್ಯವಸ್ಥೆಯು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮತ್ತು ಸರಕು ಸಾಗಣೆಯನ್ನು ನಿಭಾಯಿಸಬಲ್ಲ ಬಲವಾದ ಕಾರ್ಯಾಚರಣಾ ನೆಲೆಯನ್ನು ಸ್ಥಾಪಿಸಿತ್ತು. ಈ ಅವಧಿಯು ಕೇವಲ ಜಾಲದ ವಿಸ್ತರಣೆಯ ಮೇಲೆ ಮಾತ್ರವಲ್ಲದೆ ವೇಗ, ಸುರಕ್ಷತೆ, ದಕ್ಷತೆ ಮತ್ತು ಪ್ರಯಾಣಿಕರ ಸೇವೆಗಳನ್ನು ಸುಧಾರಿಸುವತ್ತ ಗಮನಹರಿಸುವ ಅಭಿವೃದ್ಧಿಯ ಹೊಸ ಹಂತಕ್ಕೆ ಮುನ್ನುಡಿ ಬರೆಯಿತು.

ಭಾರತೀಯ ರೈಲ್ವೆಯ ಆಧುನಿಕ ಯುಗ

ಇಪ್ಪತ್ತೊಂದನೇ ಶತಮಾನಕ್ಕೆ ಕಾಲಿಡುತ್ತಿದ್ದಂತೆ, ಭಾರತೀಯ ರೈಲ್ವೆಯು ಸುಧಾರಿತ ತಂತ್ರಜ್ಞಾನಗಳು ಮತ್ತು ಮೂಲಸೌಕರ್ಯದ ಮೇಲ್ದರ್ಜೀಕರಣವನ್ನು ವೇಗವಾಗಿ ಅಳವಡಿಸಿಕೊಳ್ಳಲು ಪ್ರಾರಂಭಿಸಿತು. ವಿದ್ಯುದ್ದೀಕರಣ, ಆಧುನಿಕ ರೈಲು ವಿನ್ಯಾಸ, ಸುರಕ್ಷತಾ ವ್ಯವಸ್ಥೆಗಳು, ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಡಿಜಿಟಲ್ ಸೇವೆಗಳಂತಹ ಕ್ಷೇತ್ರಗಳಲ್ಲಿ ಇದು ಗಮನಾರ್ಹ ಪ್ರಗತಿಯನ್ನು ಕಂಡಿದೆ. ಈ ಬೆಳವಣಿಗೆಗಳು ಕೇವಲ ವ್ಯಾಪ್ತಿಯ ವಿಸ್ತರಣೆಯಲ್ಲದೆ, ಸುಸ್ಥಿರತೆ, ಪ್ರಯಾಣಿಕರ ಸೌಕರ್ಯ, ಕಾರ್ಯಾಚರಣೆಯ ದಕ್ಷತೆ ಮತ್ತು ತಡೆರಹಿತ ಸಂಪರ್ಕದ ಮೇಲೆ ಹೆಚ್ಚಿನ ಗಮನಹರಿಸುವ 'ಆಧುನೀಕರಣ'ದತ್ತ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ.

ರೈಲ್ವೆ ವಿದ್ಯುದ್ದೀಕರಣ

ಕಳೆದ ಒಂದು ದಶಕದಲ್ಲಿ, ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣವು ಹಿಂದೆಂದೂ ಕಾಣದ ವೇಗದಲ್ಲಿ ನಡೆದಿದೆ. 2014 ಕ್ಕಿಂತ ಮೊದಲು, ಭಾರತದ ರೈಲ್ವೆ ಜಾಲದ ಸುಮಾರು ಶೇ. 20 ರಷ್ಟು ಮಾತ್ರ ವಿದ್ಯುದ್ದೀಕರಣಗೊಂಡಿತ್ತು. ಇದು ಕಾರ್ಯಾಚರಣೆಯ ದಕ್ಷತೆಯನ್ನು ಸೀಮಿತಗೊಳಿಸಿತ್ತು ಮತ್ತು ಡೀಸೆಲ್ ಇಂಧನದ ಮೇಲಿನ ಅವಲಂಬನೆಯನ್ನು ಹೆಚ್ಚಿಸಿತ್ತು. ಇಂದು, ಈ ರೂಪಾಂತರವು ಬಹುತೇಕ ಪೂರ್ಣಗೊಂಡಿದೆ; ಒಟ್ಟು 70,142 ಬ್ರಾಡ್ ಗೇಜ್ ಮಾರ್ಗದ ಕಿಲೋಮೀಟರ್‌ಗಳಲ್ಲಿ ಶೇ. 99.6 ರಷ್ಟು ರೈಲ್ವೆ ಜಾಲವು ವಿದ್ಯುದ್ದೀಕರಣಗೊಂಡಿದೆ. ಈ ವಿಸ್ತರಣೆಯು ಪ್ರಮಾಣದಲ್ಲಿ ಅತ್ಯಂತ ಗಮನಾರ್ಹವಾಗಿದೆ. ಮಾರ್ಚ್ 2026 ರ ಹೊತ್ತಿಗೆ 69,873 ಮಾರ್ಗ ಕಿಲೋಮೀಟರ್ಗಳನ್ನು ವಿದ್ಯುದ್ದೀಕರಿಸಲಾಗಿದ್ದು, ಇದು 2014 ರಲ್ಲಿದ್ದ 21,801 rkm ನಿಂದ ಗಣನೀಯವಾಗಿ ಹೆಚ್ಚಳವಾಗಿದೆ.

ವಿದ್ಯುತ್ ಚಾಲಿತ ವ್ಯವಸ್ಥೆಗೆ ಬದಲಾಗಿರುವುದು ದೇಶದ ಇಂಧನ ಆರ್ಥಿಕತೆಗೆ ಅಳೆಯಬಹುದಾದಂತಹ ಪ್ರಯೋಜನಗಳನ್ನು ನೀಡಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:

  • ರೈಲ್ವೆ ವಿದ್ಯುದ್ದೀಕರಣವು 2024-25ರಲ್ಲಿ ಸುಮಾರು 180 ಕೋಟಿ ಲೀಟರ್ ಡೀಸೆಲ್ ಅನ್ನು ಉಳಿಸಿದೆ, ಇದು ಕಚ್ಚಾ ತೈಲ ಆಮದಿನ ಅಗತ್ಯವನ್ನು ಕಡಿಮೆ ಮಾಡಿದೆ.
  • ವಿದ್ಯುತ್ ಚಾಲಿತ ವ್ಯವಸ್ಥೆಯು ಪರಿಸರ ಸ್ನೇಹಿಯಾಗಿದೆ ಮತ್ತು ಡೀಸೆಲ್ ಚಾಲಿತ ವ್ಯವಸ್ಥೆಗಿಂತ ಸುಮಾರು ಶೇ. 70 ರಷ್ಟು ಹೆಚ್ಚು ಮಿತವ್ಯಯಕಾರಿಯಾಗಿದೆ.
  • ಡೀಸೆಲ್ ಬಳಕೆ ಸ್ಥಿರವಾಗಿ ಇಳಿಮುಖವಾಗುತ್ತಿರುವುದರಿಂದ, ವಿದ್ಯುದ್ದೀಕರಣವು ಸುಮಾರು ₹6,000 ಕೋಟಿ ಉಳಿತಾಯಕ್ಕೆ ಕಾರಣವಾಗಿದೆ.

ಇದು ಭಾರತವನ್ನು ವಿಶ್ವದ ಹಲವಾರು ಪ್ರಮುಖ ರೈಲ್ವೆ ಜಾಲಗಳಿಗಿಂತ ಮುಂದಕ್ಕೆ ಕೊಂಡೊಯ್ದಿದೆ. ದೇಶದ ವಿದ್ಯುದೀಕರಣದ ಮಟ್ಟವು ಯುನೈಟೆಡ್ ಕಿಂಗ್‌ಡಮ್ (39%), ರಷ್ಯಾ (52%) ಮತ್ತು ಚೀನಾ (82%) ಗಳಿಗಿಂತ ಹೆಚ್ಚಾಗಿದೆ.

ಹಳಿಗಳ ನವೀಕರಣ ಮತ್ತು ವೇಗ ವರ್ಧನೆ

ಕಳೆದ ದಶಕದಲ್ಲಿ ಹಳಿಗಳ ಮೂಲಸೌಕರ್ಯವು ಆಯಕಟ್ಟಿನ ಬಲವರ್ಧನೆಗೆ ಸಾಕ್ಷಿಯಾಗಿದೆ.

2014–26ರ ಅವಧಿಯಲ್ಲಿ ಒಟ್ಟು 54,600 ಕಿಲೋಮೀಟರ್ ರೈಲ್ವೆ ಹಳಿಗಳನ್ನು ನವೀಕರಿಸಲಾಗಿದ್ದು, ಇದು ವಿಶ್ವಾಸಾರ್ಹತೆ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಸುಧಾರಿಸಿದೆ. ಗಂಟೆಗೆ 110 ಕಿಮೀ ಮತ್ತು ಅದಕ್ಕಿಂತ ಹೆಚ್ಚಿನ ವೇಗವನ್ನು ಬೆಂಬಲಿಸುವ ಸಾಮರ್ಥ್ಯವಿರುವ ಹಳಿಗಳ ಉದ್ದವು 2014 ರಲ್ಲಿದ್ದ 31,445 ಕಿಲೋಮೀಟರ್ಗಳಿಂದ (ಜಾಲದ ಶೇ. 40), ಫೆಬ್ರವರಿ 2026 ರ ವೇಳೆಗೆ 85,000 ಕಿಲೋಮೀಟರ್ಗಿಂತಲೂ ಹೆಚ್ಚು (ಜಾಲದ ಶೇ. 80 ಕ್ಕಿಂತ ಹೆಚ್ಚು) ಹೆಚ್ಚಾಗಿದೆ. ಇದು ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ರೈಲು ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸಿದೆ.


ಆಧುನಿಕ ರೈಲು ಸೇವೆಗಳ ಮೂಲಕ ಪ್ರಯಾಣಿಕರ ವ್ಯಾಪ್ತಿಯ ವಿಸ್ತರಣೆ

ವಂದೇ ಭಾರತ್ ನೆಟ್ವರ್ಕ್ ಭಾರತೀಯ ರೈಲ್ವೆಯು ವಂದೇ ಭಾರತ್ ಎಕ್ಸ್ಪ್ರೆಸ್ ಪರಿಚಯ ಮತ್ತು ವಿಸ್ತರಣೆಯ ಮೂಲಕ ಪ್ರಯಾಣಿಕರ ಪ್ರಯಾಣದ ಅನುಭವವನ್ನು ಸುಧಾರಿಸಿದೆ. ಇದು ಭಾರತದ ಮೊದಲ ಸ್ವದೇಶಿ ವಿನ್ಯಾಸದ ಮತ್ತು ನಿರ್ಮಿತ ಅರೆ-ಅತಿವೇಗದ ರೈಲಾಗಿದೆ. ಫೆಬ್ರವರಿ 2019 ರಲ್ಲಿ ಪ್ರಾರಂಭವಾದ ಈ ಸೇವೆಯು, 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಆಧುನಿಕ, ಆರಾಮದಾಯಕ ಮತ್ತು ತಂತ್ರಜ್ಞಾನ ಆಧಾರಿತ ರೈಲು ಪ್ರಯಾಣದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.

ಅಮೃತ್ ಭಾರತ್ ಎಕ್ಸ್ಪ್ರೆಸ್

ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಕೈಗೆಟುಕುವ ದರದ ಸಾರಿಗೆ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಭಾರತೀಯ ರೈಲ್ವೆಯು 'ಅಮೃತ್ ಭಾರತ್ ಎಕ್ಸ್‌ಪ್ರೆಸ್' ಅನ್ನು ಪರಿಚಯಿಸಿದೆ. ಇವು ಆರ್ಥಿಕ ಪ್ರಯಾಣದ ಆಯ್ಕೆಗಳನ್ನು ಉಳಿಸಿಕೊಳ್ಳುತ್ತಲೇ, ಪ್ರಯಾಣಿಕರ ಆರಾಮ ಮತ್ತು ಸುರಕ್ಷತೆಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಹೊಸ ಪೀಳಿಗೆಯ ಸಂಪೂರ್ಣ ಎಸಿ-ರಹಿತ ಆಧುನಿಕ ರೈಲುಗಳಾಗಿವೆ. ಈ ರೈಲುಗಳು 11 ಸಾಮಾನ್ಯ ದರ್ಜೆಯ ಬೋಗಿಗಳು, 8 ಸ್ಲೀಪರ್ ದರ್ಜೆಯ ಬೋಗಿಗಳು, 1 ಪ್ಯಾಂಟ್ರಿ ಕಾರ್ ಮತ್ತು 2 ಲಗೇಜ್ ಹಾಗೂ ದಿವ್ಯಾಂಗರ ಬೋಗಿಗಳನ್ನು ಒಳಗೊಂಡಿರುತ್ತವೆ. ಇದು ವಿವಿಧ ಪ್ರಯಾಣದ ಅಗತ್ಯತೆಗಳನ್ನು ಹೊಂದಿರುವ ಪ್ರಯಾಣಿಕರಿಗೆ ಸೂಕ್ತ ಸೌಲಭ್ಯಗಳನ್ನು ಖಚಿತಪಡಿಸುತ್ತದೆ. 18 ಮಾರ್ಚ್ 2026 ರ ಹೊತ್ತಿಗೆ, ಭಾರತೀಯ ರೈಲ್ವೆ ಜಾಲದಾದ್ಯಂತ ಒಟ್ಟು 60 ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸೇವೆಗಳು ಕಾರ್ಯನಿರ್ವಹಿಸುತ್ತಿವೆ.

ಭಾರತದಲ್ಲಿ ಅತಿವೇಗದ ರೈಲು ಮಾರ್ಗಗಳ ಅಭಿವೃದ್ಧಿ

ಕೇಂದ್ರ ಬಜೆಟ್ 2026-27 ರಲ್ಲಿ ಭಾರತೀಯ ರೈಲ್ವೆಗಾಗಿ ದಾಖಲೆಯ ₹2,78,000 ಕೋಟಿ ಬಂಡವಾಳ ಹೂಡಿಕೆಯನ್ನು ಘೋಷಿಸಲಾಗಿದೆ, ಇದು ಈ ಕ್ಷೇತ್ರದ ಇತಿಹಾಸದಲ್ಲೇ ಅತ್ಯಧಿಕವಾಗಿದೆ. ರೈಲ್ವೆ ಅಭಿವೃದ್ಧಿಗೆ ನೀಡಲಾಗಿರುವ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಇದು ಉಲ್ಲೇಖಿಸುತ್ತದೆ. ಈ ದೂರದೃಷ್ಟಿಯ ಭಾಗವಾಗಿ, ಆರ್ಥಿಕ ಬೆಳವಣಿಗೆಯ ಕೊಂಡಿಗಳಾಗಿ ಏಳು ಅತಿವೇಗದ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಲಾಗಿದೆ. ಈ ಕಾರಿಡಾರ್‌ಗಳು ಪ್ರಮುಖ ನಗರಗಳು ಮತ್ತು ಪ್ರದೇಶಗಳನ್ನು ಸಂಯೋಜಿಸಲು, ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಮತ್ತು ರಾಜ್ಯಗಳ ನಡುವಿನ ಆರ್ಥಿಕ ಸಂವಹನಕ್ಕೆ ಬೆಂಬಲ ನೀಡುವ ಉದ್ದೇಶವನ್ನು ಹೊಂದಿವೆ. ಉದ್ದೇಶಿತ ಮಾರ್ಗಗಳಲ್ಲಿ ಮುಂಬೈ-ಪುಣೆ, ದೆಹಲಿ-ವಾರಣಾಸಿ ಮತ್ತು ಹೈದರಾಬಾದ್-ಬೆಂಗಳೂರು ಸೇರಿದಂತೆ ಇತರ ಮಾರ್ಗಗಳು ಸೇರಿವೆ. ಒಟ್ಟಾರೆಯಾಗಿ, ಈ ಯೋಜಿತ ಕಾರಿಡಾರ್‌ಗಳು ಸುಮಾರು 4,000 ಕಿಲೋಮೀಟರ್‌ಗಳಷ್ಟು ವ್ಯಾಪಿಸಿವೆ.

ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ ಭಾರತದಲ್ಲಿ ಅತಿವೇಗದ ರೈಲು ವ್ಯವಸ್ಥೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ದೇಶದ ಮೊದಲ ನಿರ್ದಿಷ್ಟ ಹೆಜ್ಜೆಯಾಗಿದೆ. ಇದನ್ನು ಮೀಸಲಾದ ಅತಿವೇಗದ ಪ್ರಯಾಣಿಕರ ಕಾರಿಡಾರ್ ಆಗಿ ರೂಪಿಸಲಾಗಿದ್ದು, ಸರಿಸುಮಾರು 508 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಈ ಕಾರಿಡಾರ್ ಅನ್ನು ಗಂಟೆಗೆ ಗರಿಷ್ಠ 320 ಕಿಲೋಮೀಟರ್ ವೇಗದಲ್ಲಿ ಕಾರ್ಯಾಚರಣೆ ನಡೆಸಲು ವಿನ್ಯಾಸಗೊಳಿಸಲಾಗಿದೆ. ಈ ಬೆಳವಣಿಗೆಗಳು ಭಾರತವು ಅತಿವೇಗದ ರೈಲು ಯುಗಕ್ಕೆ ಪ್ರವೇಶಿಸುತ್ತಿರುವುದನ್ನು ಸೂಚಿಸುತ್ತವೆ ಮತ್ತು ನಗರಗಳ ನಡುವೆ ವೇಗವಾದ ಹಾಗೂ ಹೆಚ್ಚು ಪರಿಣಾಮಕಾರಿ ಪ್ರಯಾಣಕ್ಕೆ ಅಡಿಪಾಯ ಹಾಕಿಕೊಟ್ಟಿವೆ.

ಡಿಜಿಟಲ್ ಮೂಲಸೌಕರ್ಯ ಮತ್ತು ಪ್ರಯಾಣಿಕರ ಸುರಕ್ಷತೆಯ ಬಲವರ್ಧನೆ

ಭಾರತೀಯ ರೈಲ್ವೆಯು ಸುರಕ್ಷತೆ, ಕಾರ್ಯಾಚರಣೆಯ ದಕ್ಷತೆ ಮತ್ತು ಪ್ರಯಾಣಿಕರ ಸೇವೆಗಳನ್ನು ಹೆಚ್ಚಿಸಲು ತನ್ನ ಟೆಲಿಕಾಂ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸಿದೆ. 2025-2026ರ ಅವಧಿಯಲ್ಲಿ ಸುಧಾರಿತ ತಂತ್ರಜ್ಞಾನಗಳು ಮತ್ತು ಸಂಯೋಜಿತ ಸಂವಹನ ವ್ಯವಸ್ಥೆಗಳ ಅಳವಡಿಕೆಯು, ಡಿಜಿಟಲ್ ಸಂಪರ್ಕ ಹೊಂದಿದ ರೈಲ್ವೆ ಜಾಲವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

  • ಏಕೀಕೃತ ಟೆಲಿಕಾಂ ಬೆನ್ನೆಲುಬು ಮೂಲಸೌಕರ್ಯ: ಹೆಚ್ಚಿನ ಸಾಮರ್ಥ್ಯದ ಮತ್ತು ನಿರ್ಣಾಯಕ ರೈಲ್ವೆ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲು ರೈಲ್ವೆಯು ತನ್ನ ಟೆಲಿಕಾಂ ಜಾಲವನ್ನು 'ಇಂಟರ್ನೆಟ್ ಪ್ರೋಟೋಕಾಲ್ ಮಲ್ಟಿ-ಪ್ರೋಟೋಕಾಲ್ ಲೇಬಲ್ ಸ್ವಿಚಿಂಗ್' ತಂತ್ರಜ್ಞಾನದ ಮೂಲಕ ಮೇಲ್ದರ್ಜೆಗೇರಿಸಿದೆ. ಈ ವ್ಯವಸ್ಥೆಯು ಕೇಂದ್ರೀಕೃತ ವಿಡಿಯೋ ಕಣ್ಗಾವಲು ಮತ್ತು ಮೊಬೈಲ್ ಟ್ರೈನ್ ರೇಡಿಯೋ ಕಮ್ಯುನಿಕೇಶನ್, ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ, ಸ್ಕಾಡಾ ಮುಂತಾದ ಪ್ರಮುಖ ಕಾರ್ಯಾಚರಣಾ ವ್ಯವಸ್ಥೆಗಳನ್ನು ಬೆಂಬಲಿಸುತ್ತದೆ. ಡಿಜಿಟಲ್ ಸಂಯೋಜಿತ ರೈಲ್ವೆ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಲು ಈಗಾಗಲೇ 1,396 ರೈಲ್ವೆ ನಿಲ್ದಾಣಗಳಲ್ಲಿ ಐಪಿ ಎಂಪಿಎಲ್‌ಎಸ್‌ ಜಾಲವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
  • ಕವಚ್: ಸ್ವದೇಶಿ ನಿರ್ಮಿತ 'ಕವಚ್' ಸ್ವಯಂಚಾಲಿತ ರೈಲು ರಕ್ಷಣೆ ವ್ಯವಸ್ಥೆಯ ವಿಸ್ತರಣೆಯೊಂದಿಗೆ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. ಇದು ಈಗಾಗಲೇ 3,100 ಮಾರ್ಗ ಕಿಲೋಮೀಟರ್ಗಳಲ್ಲಿ ಕಾರ್ಯಾರಂಭ ಮಾಡಿದ್ದು, ಹೆಚ್ಚುವರಿ 24,400 ಕಿಲೋಮೀಟರ್ಗಳಲ್ಲಿ ಅಳವಡಿಕೆಯ ಕೆಲಸ ನಡೆಯುತ್ತಿದೆ. ರೈಲುಗಳ ನಡುವಿನ ಡಿಕ್ಕಿಯನ್ನು ತಡೆಯುವುದು ಮತ್ತು ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಗುರಿಯಾಗಿದೆ.
  • ಎಐ-ಆಧಾರಿತ ವಿಡಿಯೋ ಕಣ್ಗಾವಲು: ಪ್ರಯಾಣಿಕರ ಸುರಕ್ಷತೆ ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಲು 1,874 ರೈಲ್ವೆ ನಿಲ್ದಾಣಗಳಲ್ಲಿ ವಿಡಿಯೋ ಕಣ್ಗಾವಲು ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ. ಇದು ಕೃತಕ ಬುದ್ಧಿಮತ್ತೆ ಆಧಾರಿತ ವಿಶ್ಲೇಷಣೆ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಒಳಗೊಂಡಿದೆ.
  • ನೈಜ-ಸಮಯದ ಪ್ರಯಾಣಿಕರ ಮಾಹಿತಿ: ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆಯೊಂದಿಗೆ ಸಂಯೋಜಿತವಾಗಿರುವ 'ಇಂಟಿಗ್ರೇಟೆಡ್ ಪ್ಯಾಸೆಂಜರ್ ಇನ್ಫರ್ಮೇಷನ್ ಸಿಸ್ಟಮ್' ಅನ್ನು 1,405 ನಿಲ್ದಾಣಗಳಲ್ಲಿ ಜಾರಿಗೆ ತರಲಾಗಿದೆ. ಇದು ಸಮಯಕ್ಕೆ ಸರಿಯಾದ ಪ್ರಕಟಣೆಗಳು ಮತ್ತು ಉತ್ತಮ ಪ್ರಯಾಣಿಕ ಸಂವಹನವನ್ನು ಖಚಿತಪಡಿಸುತ್ತದೆ.
  • ಸುರಂಗ ಸಂವಹನ ವ್ಯವಸ್ಥೆಗಳು: ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದಂತಹ ಪ್ರಮುಖ ಯೋಜನೆಗಳಲ್ಲಿ ಸಂವಹನ ವ್ಯವಸ್ಥೆಗಳನ್ನು ಪರಿಚಯಿಸಲಾಗಿದೆ. ಇದು ಸುರಂಗ ಮಾರ್ಗಗಳಲ್ಲಿ ಅಡೆತಡೆಯಿಲ್ಲದ ಸಂಪರ್ಕ ಮತ್ತು ಸುರಕ್ಷಿತ ಕಾರ್ಯಾಚರಣೆಯನ್ನು ಖಾತರಿಪಡಿಸುತ್ತದೆ.

ಈ ಉಪಕ್ರಮಗಳು ಸುರಕ್ಷಿತ ಮತ್ತು ತಂತ್ರಜ್ಞಾನ ಆಧಾರಿತ ರೈಲ್ವೆ ಜಾಲವನ್ನು ನಿರ್ಮಿಸುವ ನಿರಂತರ ಬದ್ಧತೆಯನ್ನು ಉಲ್ಲೇಖಿಸುತ್ತದೆ. ಇದು ಡಿಜಿಟಲ್ ರೂಪಾಂತರ ಮತ್ತು ಸುಧಾರಿತ ಪ್ರಯಾಣಿಕ ಸೇವೆಗಳ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿದೆ.

2025–2026 ಕಾರ್ಯಾಚರಣೆ ಮತ್ತು ಮೂಲಸೌಕರ್ಯ ಸಾಧನೆಗಳು

ದಶಕಗಳ ಆಧುನೀಕರಣದ ಆಧಾರದ ಮೇಲೆ, 2025–2026ರ ಹಣಕಾಸು ವರ್ಷದಲ್ಲಿ ದಾಖಲಾದ ಸಾಧನೆಗಳು ಈ ನಿರಂತರ ಪ್ರಗತಿಯ ಅತ್ಯಂತ ಇತ್ತೀಚಿನ ಹಂತವನ್ನು ಪ್ರತಿನಿಧಿಸುತ್ತವೆ.

  • 2025-2026ರ ಉದ್ದಕ್ಕೂ ರೈಲ್ವೆ ಕಾರ್ಯಾಚರಣೆಗಳು ಸದೃಢವಾಗಿದ್ದವು. ಪ್ರತಿದಿನ ಸರಿಸುಮಾರು 25,000 ರೈಲುಗಳು ಸಂಚರಿಸುವ ಮೂಲಕ ದೇಶಾದ್ಯಂತ ವಿಶ್ವಾಸಾರ್ಹ ಮತ್ತು ವ್ಯಾಪಕ ಸಂಪರ್ಕವನ್ನು ಖಚಿತಪಡಿಸಿವೆ.
  • ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ಹಬ್ಬದ ಸಂದರ್ಭಗಳಲ್ಲಿ ಮತ್ತು ಗರಿಷ್ಠ ಪ್ರಯಾಣದ ಅವಧಿಯಲ್ಲಿ ಹೆಚ್ಚುವರಿ ವಿಶೇಷ ರೈಲು ಸೇವೆಗಳನ್ನು ಪರಿಚಯಿಸಲಾಯಿತು. ದೀಪಾವಳಿ, ಛತ್ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಇವುಗಳು ಕಾರ್ಯನಿರ್ವಹಿಸುತ್ತವೆ. 2025-26ರ ಸಾಲಿನಲ್ಲಿ (ಡಿಸೆಂಬರ್ 2025 ರವರೆಗೆ), ಸುಮಾರು 65,000 ವಿಶೇಷ ರೈಲುಗಳನ್ನು ಓಡಿಸಲಾಗಿದೆ.
  • 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಭಾರತೀಯ ರೈಲ್ವೆಯು ತನ್ನ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸಿದೆ. 2025-2026ರ ಅವಧಿಯಲ್ಲಿ 1,674 ರೈಲು ಎಂಜಿನ್ಗಳನ್ನು ತಯಾರಿಸಲಾಗಿದ್ದು, ಇದು ರೈಲ್ವೆ ಉತ್ಪಾದನೆಯಲ್ಲಿ ಬೆಳೆಯುತ್ತಿರುವ ಸ್ವಾವಲಂಬನೆಯನ್ನು ಪ್ರತಿಬಿಂಬಿಸುತ್ತದೆ.
  • ಜುಲೈ 2025 ರಲ್ಲಿ 'ರೈಲ್ ಒನ್' ಆ್ಯಪ್ ಬಿಡುಗಡೆಯೊಂದಿಗೆ ಪ್ರಯಾಣಿಕರ ಸೇವೆಗಳು ಹೊಸ ಡಿಜಿಟಲ್ ಹಂತವನ್ನು ತಲುಪಿವೆ. ಇದು ಟಿಕೆಟ್ ಬುಕಿಂಗ್, ರೈಲು ವಿಚಾರಣೆ ಮತ್ತು ಕುಂದುಕೊರತೆಗಳ ಪರಿಹಾರಕ್ಕಾಗಿ ಏಕೀಕೃತ ವೇದಿಕೆಯನ್ನು ಒದಗಿಸುತ್ತದೆ.
  • ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ 35 ಗತಿ ಶಕ್ತಿ ಕಾರ್ಗೋ ಟರ್ಮಿನಲ್ಗಳನ್ನು ನಿಯೋಜಿಸಲಾಗಿದೆ. ಇದು ಸುಧಾರಿತ ಲಾಜಿಸ್ಟಿಕ್ಸ್ ದಕ್ಷತೆ ಮತ್ತು ಮಲ್ಟಿಮೋಡಲ್ ಸಂಪರ್ಕಕ್ಕೆ ಬೆಂಬಲ ನೀಡುತ್ತದೆ.
  • ಪ್ರಯಾಣಿಕರ ಮೂಲಸೌಕರ್ಯವು ಪ್ರಗತಿ ಸಾಧಿಸುತ್ತಿದ್ದು, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 119 ರೈಲ್ವೆ ನಿಲ್ದಾಣಗಳನ್ನು ಮರುಅಭಿವೃದ್ಧಿಪಡಿಸಲಾಗಿದೆ. ಈ ನಿಲ್ದಾಣಗಳು ಆಧುನಿಕ ಸೌಲಭ್ಯಗಳನ್ನು ಮತ್ತು ಸುಧಾರಿತ ಪ್ರಯಾಣದ ಅನುಭವವನ್ನು ಒದಗಿಸುತ್ತವೆ.

ಉಪಸಂಹಾರ

ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲದಿಂದ, ಭಾರತೀಯ ರೈಲ್ವೆಯು ಬದಲಾಗುತ್ತಿರುವ ಅಗತ್ಯಗಳು, ತಂತ್ರಜ್ಞಾನಗಳು ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಸ್ಥಿರವಾಗಿ ತನ್ನನ್ನು ತಾನು ರೂಪಿಸಿಕೊಳ್ಳುತ್ತಾ ಬಂದಿದೆ. ಒಂದು ಸಣ್ಣ ದೂರವನ್ನು ಕ್ರಮಿಸುವ ಸಾಧಾರಣ ಉಗಿಬಂಡಿ ಸೇವೆಯಾಗಿ ಪ್ರಾರಂಭವಾದದ್ದು, ಇಂದು ಬೃಹತ್ ಮತ್ತು ಸಂಕೀರ್ಣ ಸಾರಿಗೆ ವ್ಯವಸ್ಥೆಯಾಗಿ ಬೆಳೆದಿದೆ. ಇಂದು, ಇದು ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಮತ್ತು ಅಪಾರ ಪ್ರಮಾಣದ ಸರಕುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಉಗಿ ಎಂಜಿನ್‌ಗಳು ಮತ್ತು ಆರಂಭಿಕ ಎಂಜಿನಿಯರಿಂಗ್ ಆವಿಷ್ಕಾರಗಳಿಂದ ಹಿಡಿದು ವಿದ್ಯುದೀಕೃತ ಜಾಲಗಳು, ಸುಧಾರಿತ ಸುರಕ್ಷತಾ ವ್ಯವಸ್ಥೆಗಳು ಮತ್ತು ಡಿಜಿಟಲ್ ವೇದಿಕೆಗಳವರೆಗೆ—ಪ್ರತಿಯೊಂದು ಹಂತವೂ ಹೊಸ ಸಾಮರ್ಥ್ಯಗಳನ್ನು ಸೇರಿಸುತ್ತಾ ಬಂದಿವೆ. ಅದೇ ಸಮಯದಲ್ಲಿ, ಪ್ರತಿ ಪ್ರಗತಿಯು ಹಿಂದಿನ ದಶಕಗಳಲ್ಲಿ ಹಾಕಲಾದ ಅಡಿಪಾಯದ ಮೇಲೆ ನಿರ್ಮಾಣವಾಗಿದೆ. ಇಂದು, ರೈಲ್ವೆ ಜಾಲವು ನಿರಂತರ ಎಂಜಿನಿಯರಿಂಗ್ ಪ್ರಯತ್ನ, ಕಾರ್ಯಾಚರಣೆಯ ಶಿಸ್ತು ಮತ್ತು ನಿರಂತರ ಸುಧಾರಣೆಯ ಪ್ರತಿಬಿಂಬವಾಗಿ ನಿಂತಿದೆ.

ಬೃಹತ್ ಗಾತ್ರದೊಂದಿಗೆ ದಕ್ಷತೆಯನ್ನು, ಕೈಗೆಟುಕುವ ದರದೊಂದಿಗೆ ಆವಿಷ್ಕಾರವನ್ನು ಮತ್ತು ಸಂಪ್ರದಾಯದೊಂದಿಗೆ ಹೊಸ ತಂತ್ರಜ್ಞಾನವನ್ನು ಸಂಯೋಜಿಸುವ ಅದರ ಸಾಮರ್ಥ್ಯವು, ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಒಂದು ಐತಿಹಾಸಿಕ ಸಂಸ್ಥೆಯು ಹೇಗೆ ಪ್ರಸ್ತುತವಾಗಿರಬಹುದು ಎಂಬುದನ್ನು ತೋರಿಸಿಕೊಡುತ್ತದೆ. ದೇಶವು ಮುನ್ನಡೆಯುತ್ತಿರುವಂತೆ, ರೈಲ್ವೆಯು ಕೇವಲ ಒಂದು ಸಾರಿಗೆ ಮಾಧ್ಯಮವಾಗಿ ಮಾತ್ರವಲ್ಲದೆ, ದೈನಂದಿನ ಜೀವನಕ್ಕೆ ಆಧಾರವಾಗಿರುವ, ಉದ್ಯಮಗಳನ್ನು ಬಲಪಡಿಸುವ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡುವ ಒಂದು ವಿಶ್ವಾಸಾರ್ಹ ವ್ಯವಸ್ಥೆಯಾಗಿ ಮುಂದುವರಿಯಲಿದೆ.

References

Ministry of Railways

https://indianrailways.gov.in/railwayboard/view_section.jsp?lang=0&id=0,1

https://nr.indianrailways.gov.in/view_section.jsp?lang=0&id=0,1,283

https://indianrailways.gov.in/railwayboard/uploads/codesmanual/ADMIN_FINANCE/AdminFinanceCh1_Data.htm

https://indianrailways.gov.in/railwayboard/view_section.jsp?id=0%2C1&lang=0

https://indianrailways.gov.in/Indian%20Railways%20Whistling%20Ahead-%20%20Story%20of%20Growth%20and%20Modernisation-Booklet.pdf

https://dhr.indianrailways.gov.in/view_section.jsp?id=0%2C6%2C337&lang=0

https://indianrailways.gov.in/Indian%20Railways%20Whistling%20Ahead-%20%20Story%20of%20Growth%20and%20Modernisation-Booklet.pdf

https://indianrailways.gov.in/railwayboard/uploads/directorate/ele_engg/RE/2026/Status%20of%20Railway%20Electrification%20(as%20on%2031_03_2026).pdf

https://nfr.indianrailways.gov.in/railwayboard/uploads/directorate/eff_res/camtech/Civil%20Engineering/SubjactWise/Induction%20Course%20of%20Track%20Maintainer%20-%20Part%20I%20Introduction%20-%20Aug%202024.pdf

https://nair.indianrailways.gov.in/uploads/files/1388381997736-AFP1-v1-301213.pdf

https://www.facebook.com/SouthernRly/posts/the-dawn-of-the-steam-era-in-india-on-april-16-1853-the-first-passenger-train-ch/1083382407303819/

https://www.facebook.com/RailMinIndia/videos/on-april-16-1853-a-significant-chapter-in-indias-transportation-history-began-wi/1178086770182854/

https://www.pib.gov.in/PressReleasePage.aspx?PRID=2247768&reg=3&lang=1

https://www.pib.gov.in/newsite/erelcontent.aspx?relid=46428&reg=3&lang=2

https://www.pib.gov.in/PressNoteDetails.aspx?ModuleId=3&NoteId=156834

https://www.pib.gov.in/PressReleasePage.aspx?PRID=2239313&reg=3&lang=2

https://www.pib.gov.in/PressNoteDetails.aspx?NoteId=156834&ModuleId=3&reg=3&lang=1

https://www.pib.gov.in/PressReleasePage.aspx?PRID=2241516&reg=3&lang=1

https://www.pib.gov.in/PressNoteDetails.aspx?NoteId=156834&ModuleId=3&reg=3&lang=1

https://www.pib.gov.in/PressReleseDetailm.aspx?PRID=2238376&reg=3&lang=2

https://www.pib.gov.in/PressReleasePage.aspx?PRID=2215807&reg=6&lang=1

https://www.pib.gov.in/PressReleasePage.aspx?PRID=2239313&reg=3&lang=2

https://www.pib.gov.in/PressReleasePage.aspx?PRID=2250963&reg=3&lang=1

https://www.pib.gov.in/PressReleasePage.aspx?PRID=2245694&reg=3&lang=1

https://www.pib.gov.in/PressNoteDetails.aspx?NoteId=157295&ModuleId=3&reg=3&lang=1

https://www.pib.gov.in/PressReleasePage.aspx?PRID=2249823&reg=3&lang=1

https://www.pib.gov.in/PressReleasePage.aspx?PRID=2248962&reg=3&lang=1

https://www.pib.gov.in/PressReleasePage.aspx?PRID=2209199&reg=3&lang=2

https://www.pib.gov.in/PressReleasePage.aspx?PRID=2226596&reg=3&lang=2

 

Ministry of Finance

https://www.indiabudget.gov.in/doc/bh1.pdf

Others

https://www.nhsrcl.in/index.php/en/project/project-overview

 

See in PDF

 

*****

(Explainer ID: 158209) आगंतुक पटल : 9
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati