Infrastructure
ಸಾಗರಮಾಲಾ: ಭಾರತದ ಕಡಲ ತೀರದ ಚಿತ್ರಣವನ್ನೇ ಬದಲಿಸುತ್ತಿರುವ ಯೋಜನೆ
Posted On:
11 APR 2026 10:36AM
ಪ್ರಮುಖ ಅಂಶಗಳು
- ಸಾಗರಮಾಲಾ ಯೋಜನೆಯು ₹6.06 ಲಕ್ಷ ಕೋಟಿ ಮೌಲ್ಯದ 845 ಯೋಜನೆಗಳನ್ನು ಜಾರಿಗೆ ತರುತ್ತಿದೆ, ಇವುಗಳಲ್ಲಿ ₹1.57 ಲಕ್ಷ ಕೋಟಿ ಮೌಲ್ಯದ 315 ಯೋಜನೆಗಳು ಪೂರ್ಣಗೊಂಡಿವೆ.
- 7 ಕರಾವಳಿ ಬರ್ತ್ ಯೋಜನೆಗಳು ಪೂರ್ಣಗೊಂಡಿರುವುದರಿಂದ, ವಾರ್ಷಿಕ ಸರಕು ನಿರ್ವಹಣಾ ಸಾಮರ್ಥ್ಯಕ್ಕೆ 9.84 ಮಿಲಿಯನ್ ಟನ್ ಸೇರ್ಪಡೆಯಾಗಿದೆ.
- ಭಾರತದ ಪ್ರಮುಖ ಬಂದರುಗಳು 2025–26ರ ಹಣಕಾಸು ವರ್ಷದಲ್ಲಿ ದಾಖಲೆಯ 915 ಮಿಲಿಯನ್ ಟನ್ ಸರಕನ್ನು ನಿರ್ವಹಿಸಿವೆ.
- ₹85,482 ಕೋಟಿ ಬೆಂಬಲದೊಂದಿಗೆ 'ಸಾಗರಮಾಲಾ 2.0', ₹3.6 ಲಕ್ಷ ಕೋಟಿ ಹೂಡಿಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.
|
ಪೀಠಿಕೆ
ಭಾರತದ ಕಡಲ ವಲಯವು ದೇಶದ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶವು ಸುಮಾರು 11,099 ಕಿಲೋಮೀಟರ್‌ಗಳಷ್ಟು ಕರಾವಳಿ ತೀರವನ್ನು ಹೊಂದಿದ್ದು, ಇದರೊಂದಿಗೆ ಸುಮಾರು 14,500 ಕಿಲೋಮೀಟರ್‌ಗಳಷ್ಟು ನೌಕಾಯಾನಕ್ಕೆ ಯೋಗ್ಯವಾದ ಜಲಮಾರ್ಗಗಳನ್ನು ಹೊಂದಿದೆ. ಕರಾವಳಿ ಪ್ರದೇಶಗಳು ಭಾರತವನ್ನು ಜಾಗತಿಕ ಹಡಗು ಮಾರ್ಗಗಳೊಂದಿಗೆ ಸಂಪರ್ಕಿಸುವ ಮತ್ತು ಸರಕು ಹಾಗೂ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಮುಖ ಬಂದರುಗಳಿಗೆ ನೆಲೆಯಾಗಿದೆ. ದೇಶದ ಒಟ್ಟು ವ್ಯಾಪಾರ ವಹಿವಾಟಿನ ಪ್ರಮಾಣದಲ್ಲಿ ಸುಮಾರು 95% ರಷ್ಟು ಮತ್ತು ಮೌಲ್ಯದ ಆಧಾರದ ಮೇಲೆ ಸುಮಾರು 70% ರಷ್ಟು ಕಡಲ ಮಾರ್ಗಗಳ ಮೂಲಕವೇ ನಡೆಯುತ್ತದೆ.
ಭಾರತವು 12 ಪ್ರಮುಖ ಬಂದರುಗಳನ್ನು ಮತ್ತು 200 ಕ್ಕೂ ಹೆಚ್ಚು ಸಣ್ಣ (ಪ್ರಮುಖವಲ್ಲದ) ಬಂದರುಗಳನ್ನು ಹೊಂದಿದೆ. ಪ್ರಮುಖ ಬಂದರುಗಳು ಬಂದರುಗಳು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಟ್ಟಿದ್ದರೆ, ಸಣ್ಣ ಬಂದರುಗಳು ಆಯಾ ರಾಜ್ಯದ ಕಡಲ ಮಂಡಳಿಗಳು ಅಥವಾ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತವೆ. ಈ ಬಂದರುಗಳು ಕಚ್ಚಾ ತೈಲ, ಕಲ್ಲಿದ್ದಲು, ಕಂಟೈನರ್‌ಗಳು, ರಸಗೊಬ್ಬರಗಳು ಮತ್ತು ಕೃಷಿ ಉತ್ಪನ್ನಗಳು ಸೇರಿದಂತೆ ವಿವಿಧ ರೀತಿಯ ಸರಕುಗಳನ್ನು ನಿರ್ವಹಿಸುತ್ತವೆ. ಇದು ಬಂದರು ಮತ್ತು ಹಡಗು ವಲಯವನ್ನು ದೇಶದ ವ್ಯಾಪಾರ ವ್ಯವಸ್ಥೆಯ ಕೇಂದ್ರಬಿಂದುವನ್ನಾಗಿ ಮಾಡಿದೆ.

ಇದನ್ನು ಮುಂದುವರಿಸುತ್ತಾ, ಬಂದರು ಆಧಾರಿತ ಅಭಿವೃದ್ಧಿಯನ್ನು ಉತ್ತೇಜಿಸಲು ಮಾರ್ಚ್ 2015 ರಲ್ಲಿ ಸಾಗರಮಾಲಾ ಯೋಜನೆಯನ್ನು ಪ್ರಾರಂಭಿಸಲಾಯಿತು. ಅಸ್ತಿತ್ವದಲ್ಲಿರುವ ರಸ್ತೆ ಮತ್ತು ರೈಲು ಜಾಲಗಳ ಜೊತೆಗೆ ಕರಾವಳಿ ಹಡಗು ಸಂಚಾರ ಮತ್ತು ಒಳನಾಡು ಜಲಮಾರ್ಗಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುವುದು, ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ವ್ಯಾಪಾರಕ್ಕೆ ಬೆಂಬಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇದು ಬಂದರುಗಳ ಆಧುನೀಕರಣ ಮತ್ತು ನಿರ್ಮಾಣ, ಬಂದರು ಸಂಪರ್ಕದ ಸುಧಾರಣೆಯ ಮೇಲೆ ಕೇಂದ್ರೀಕರಿಸುವುದರ ಜೊತೆಗೆ ಸಾರ್ವಜನಿಕ ಮತ್ತು ಖಾಸಗಿ ವಲಯಗಳೆರಡರಿಂದಲೂ ಹೂಡಿಕೆಯನ್ನು ಉತ್ತೇಜಿಸುತ್ತದೆ.

ಸಾಗರಮಾಲಾ ಯೋಜನೆಯ ಘಟಕಗಳು
ಸಾಗರಮಾಲಾ ಯೋಜನೆಯು ಭಾರತದ ಕಡಲ ವಲಯವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಹಲವಾರು ಪ್ರಮುಖ ಘಟಕಗಳನ್ನು ಒಳಗೊಂಡಿದೆ. ಈ ಯೋಜನೆಯ ಅಡಿಯಲ್ಲಿನ ಒಟ್ಟು ಯೋಜನೆಗಳನ್ನು ಕೆಳಗೆ ನೀಡಲಾದಂತೆ 5 ಸ್ತಂಭಗಳು ಮತ್ತು 24 ವರ್ಗಗಳಾಗಿ ವಿಂಗಡಿಸಲಾಗಿದೆ.
1. ಬಂದರು ಆಧುನೀಕರಣ ಮತ್ತು ಹೊಸ ಬಂದರು ಅಭಿವೃದ್ಧಿ ಈ ಸ್ತಂಭವು ಅಸ್ತಿತ್ವದಲ್ಲಿರುವ ಬಂದರುಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಸಾಮರ್ಥ್ಯವನ್ನು ವಿಸ್ತರಿಸಲು ಹಾಗೂ ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಹೊಸ ಬಂದರುಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಮೂಲಸೌಕರ್ಯ ಕೊರತೆಗಳನ್ನು ನೀಗಿಸುವುದು ಮತ್ತು ಬಂದರು ಕಾರ್ಯಾಚರಣೆಗಳಲ್ಲಿ ಆಧುನೀಕರಣ, ಯಾಂತ್ರೀಕರಣ ಮತ್ತು ಡಿಜಿಟಲ್ ವ್ಯವಸ್ಥೆಗಳನ್ನು ಪರಿಚಯಿಸುವುದನ್ನು ಒಳಗೊಂಡಿದೆ.
2. ಬಂದರು ಸಂಪರ್ಕ ವರ್ಧನೆ ಸರಕುಗಳ ಸಂಚಾರವನ್ನು ವೇಗವಾಗಿ ಮತ್ತು ಹೆಚ್ಚು ವೆಚ್ಚ-ದಕ್ಷತೆಯಿಂದ ಕೂಡಿರುವಂತೆ ಮಾಡಲು ಬಂದರುಗಳು ಮತ್ತು ಒಳನಾಡು ಪ್ರದೇಶಗಳ ನಡುವಿನ ಸಂಪರ್ಕವನ್ನು ಬಲಪಡಿಸುವುದು ಈ ಘಟಕದ ಗುರಿಯಾಗಿದೆ. ಇದು ತಡೆರಹಿತ ಲಾಜಿಸ್ಟಿಕ್ಸ್‌ಗಾಗಿ ರಸ್ತೆ, ರೈಲು, ಕರಾವಳಿ ಹಡಗು ಸಂಚಾರ ಮತ್ತು ಒಳನಾಡು ಜಲಮಾರ್ಗಗಳನ್ನು ಸಂಯೋಜಿಸುವ 'ಮಲ್ಟಿಮೋಡಲ್' ಸಾರಿಗೆ ಜಾಲಗಳ ಅಭಿವೃದ್ಧಿಯನ್ನು ಒಳಗೊಂಡಿದೆ.
3. ಬಂದರು ಆಧಾರಿತ ಕೈಗಾರಿಕೀಕರಣ ಉತ್ಪಾದನೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸಲು ಬಂದರು ಸಮೀಪದ ಪ್ರದೇಶಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳ ಅಭಿವೃದ್ಧಿಯನ್ನು ಈ ಕಾರ್ಯಕ್ರಮವು ಉತ್ತೇಜಿಸುತ್ತದೆ. ಬಂದರುಗಳಿಗೆ ಹತ್ತಿರವಿರುವುದು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ದೇಶೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಸುಲಭ ಪ್ರವೇಶವನ್ನು ಪಡೆಯಲು ಸಹಾಯ ಮಾಡುತ್ತದೆ.
4. ಕರಾವಳಿ ಸಮುದಾಯ ಅಭಿವೃದ್ಧಿ ಈ ಸ್ತಂಭವು ಕರಾವಳಿ ಪ್ರದೇಶಗಳಲ್ಲಿ ಜೀವನೋಪಾಯವನ್ನು ಸುಧಾರಿಸುವುದು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಮೀನುಗಾರಿಕೆ ಮತ್ತು ಕರಾವಳಿ ಪ್ರವಾಸೋದ್ಯಮಕ್ಕೆ ಬೆಂಬಲ, ಮತ್ತು ಕರಾವಳಿ ಸಮುದಾಯಗಳಿಗೆ ಆರ್ಥಿಕ ಅವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳನ್ನು ಒಳಗೊಂಡಿದೆ.
5. ಕರಾವಳಿ ಹಡಗು ಸಂಚಾರ ಮತ್ತು ಒಳನಾಡು ಜಲಮಾರ್ಗ ಸಾರಿಗೆ ಸರಕು ಸಾಗಣೆಗಾಗಿ ಕರಾವಳಿ ಹಡಗು ಸಂಚಾರ ಮತ್ತು ಒಳನಾಡು ಜಲಮಾರ್ಗಗಳ ಹೆಚ್ಚಿನ ಬಳಕೆಯನ್ನು ಈ ಘಟಕವು ಪ್ರೋತ್ಸಾಹಿಸುತ್ತದೆ. ಇವು ರಸ್ತೆ ಮತ್ತು ರೈಲು ಸಾರಿಗೆಗೆ ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಪರ್ಯಾಯಗಳನ್ನು ಒದಗಿಸುವುದಲ್ಲದೆ, ಅಸ್ತಿತ್ವದಲ್ಲಿರುವ ಸಾರಿಗೆ ಜಾಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಯಶಸ್ಸಿನ ಹಾದಿ: ಸಾಧನೆಗಳು ಮತ್ತು ಮೈಲಿಗಲ್ಲುಗಳು
ಕಳೆದ ಹನ್ನೊಂದು ವರ್ಷಗಳಲ್ಲಿ, ಸಾಗರಮಾಲಾ ಯೋಜನೆಯು ಅಳೆಯಬಹುದಾದ ಫಲಿತಾಂಶಗಳನ್ನು ನೀಡಿದೆ. ಒಟ್ಟಾರೆ ಪ್ರಗತಿಯು ಕಡಲ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಅದರ ಪ್ರಮಾಣ ಮತ್ತು ದೀರ್ಘಕಾಲೀನ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಈ ಕಾರ್ಯಕ್ರಮದ ಅಡಿಯಲ್ಲಿ ಅಂದಾಜು ₹6.06 ಲಕ್ಷ ಕೋಟಿ ಮೌಲ್ಯದ ಸುಮಾರು 845 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 24 ಮಾರ್ಚ್ 2026 ರ ಹೊತ್ತಿಗೆ, ₹1.57 ಲಕ್ಷ ಕೋಟಿ ಮೌಲ್ಯದ 315 ಯೋಜನೆಗಳು ಪೂರ್ಣಗೊಂಡಿವೆ, 210 ಯೋಜನೆಗಳು ಪ್ರಸ್ತುತ ಅನುಷ್ಠಾನದ ಹಂತದಲ್ಲಿದ್ದರೆ, 320 ಯೋಜನೆಗಳು ಯೋಜನಾ ಹಂತದಲ್ಲಿವೆ.
ಕೆಳಗಿನ ಉಪಕ್ರಮಗಳು ಬಂದರು ಮೂಲಸೌಕರ್ಯವನ್ನು ಬಲಪಡಿಸುವಲ್ಲಿ, ಸಂಪರ್ಕವನ್ನು ಸುಧಾರಿಸುವಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸುವಲ್ಲಿನ ಸುಸ್ಥಿರ ಪ್ರಗತಿಯನ್ನು ಪ್ರತಿಬಿಂಬಿಸುತ್ತವೆ.
ಮೂಲಸೌಕರ್ಯ ಮತ್ತು ಸಾಮರ್ಥ್ಯ ಸೃಷ್ಟಿ ಉದ್ದೇಶಿತ ಹೂಡಿಕೆಗಳ ಮೂಲಕ ಕರಾವಳಿ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಮತ್ತು ಸರಕು ನಿರ್ವಹಣಾ ಸಾಮರ್ಥ್ಯವನ್ನು ವಿಸ್ತರಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ.
- ಮೀನುಗಾರಿಕಾ ಬಂದರು ಅಭಿವೃದ್ಧಿ: ಒಟ್ಟು ₹1,057 ಕೋಟಿ ವೆಚ್ಚದ 11 ಮೀನುಗಾರಿಕಾ ಬಂದರು ಯೋಜನೆಗಳು ಪೂರ್ಣಗೊಂಡಿದ್ದು, ಇದರ ನೇರ ಪ್ರಯೋಜನವು 30,000 ಕ್ಕೂ ಹೆಚ್ಚು ಮೀನುಗಾರರಿಗೆ ಲಭಿಸಿದೆ. ಕರ್ನಾಟಕದಲ್ಲಿ, ಮಲ್ಪೆ ಮೀನುಗಾರಿಕಾ ಬಂದರಿನ ಮೂರನೇ ಹಂತದ ವಿಸ್ತರಣೆ ಮತ್ತು ಆಧುನೀಕರಣ ಪೂರ್ಣಗೊಂಡಿದೆ ಹಾಗೂ ಕುಲಾಯಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕಾರ್ಯವು ಜಾರಿಯಲ್ಲಿದೆ.
- ಕರಾವಳಿ ಬರ್ತ್ ಅಭಿವೃದ್ಧಿ: ₹494 ಕೋಟಿ ಮೌಲ್ಯದ 7 ಕರಾವಳಿ ಬರ್ತ್ ಯೋಜನೆಗಳು ಪೂರ್ಣಗೊಂಡಿದ್ದು, ವಾರ್ಷಿಕ 9.84 ಮಿಲಿಯನ್ ಟನ್ ಸರಕು ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಿವೆ.
- ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿರುವ ಐತಿಹಾಸಿಕ ಬಾಸ್ಕುಲ್ ಸೇತುವೆಯ ನವೀಕರಣವನ್ನು ಕೈಗೆತ್ತಿಕೊಳ್ಳಲಾಗಿದ್ದು, ಬಂದರಿನ ಪರಂಪರೆಯನ್ನು ಉಳಿಸುವ ಜೊತೆಗೆ ನಿರ್ಣಾಯಕ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇದು ಪೂರ್ಣಗೊಂಡ ನಂತರ, ಆಧುನೀಕರಿಸಿದ ಸೇತುವೆಯು ಬಂದರು ಆವರಣದೊಳಗೆ ಸರಕು ಮತ್ತು ವಾಹನಗಳ ಸುರಕ್ಷಿತ, ವೇಗದ ಮತ್ತು ಹೆಚ್ಚು ದಕ್ಷ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.
- ಮುಂಬೈ ಬಂದರಿನ ಪೀರ್ ಪಾವ್ ಟರ್ಮಿನಲ್‌ನಲ್ಲಿ ₹52.69 ಕೋಟಿ ವೆಚ್ಚದಲ್ಲಿ ಅಗ್ನಿಶಾಮಕ ಸೌಲಭ್ಯಗಳ ಹೆಚ್ಚಳದ ಯೋಜನೆಯು ಅನುಷ್ಠಾನದಲ್ಲಿದೆ, ಇದು ಬಂದರಿನಲ್ಲಿ ಸುರಕ್ಷತಾ ಮೂಲಸೌಕರ್ಯವನ್ನು ಬಲಪಡಿಸುವತ್ತ ಗಮನಹರಿಸಿದೆ.
ಸುಧಾರಿತ ಬಂದರು ಕಾರ್ಯಕ್ಷಮತೆ ಮತ್ತು ಜಾಗತಿಕ ಸ್ಥಾನಮಾನ ಈ ಕಾರ್ಯಕ್ರಮದ ಅಡಿಯಲ್ಲಿನ ರೂಪಾಂತರವು ಸುಧಾರಿತ ಕಾರ್ಯಾಚರಣೆಯ ಕಾರ್ಯಕ್ಷಮತೆ ಮತ್ತು ಭಾರತೀಯ ಬಂದರುಗಳ ಬಲವಾದ ಜಾಗತಿಕ ಸ್ಪರ್ಧಾತ್ಮಕತೆಯಿಂದ ಎದ್ದು ಕಾಣುತ್ತದೆ.
- ದಾಖಲೆಯ ಸರಕು ನಿರ್ವಹಣೆ: ಭಾರತದ ಪ್ರಮುಖ ಬಂದರುಗಳು 2025-26ರ ಹಣಕಾಸು ವರ್ಷದಲ್ಲಿ ಒಟ್ಟಾಗಿ ದಾಖಲೆಯ 915.17 ಮಿಲಿಯನ್ ಟನ್ ಸರಕನ್ನು ನಿರ್ವಹಿಸಿವೆ, ಇದು 904 ಮಿಲಿಯನ್ ಟನ್ ನ ವಾರ್ಷಿಕ ಗುರಿಯನ್ನು ಮೀರಿದೆ. ಇದು ವರ್ಷದಿಂದ ವರ್ಷಕ್ಕೆ 7.06% ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ.
- ಕಾರ್ಯಾಚರಣೆಯ ದಕ್ಷತೆ: ಹಡಗುಗಳ ಸರಾಸರಿ ಟರ್ನ್‌ಅರೌಂಡ್ ಸಮಯ 2014 ರಲ್ಲಿ 96 ಗಂಟೆಗಳಿದ್ದದ್ದು 2025 ರಲ್ಲಿ 49.5 ಗಂಟೆಗಳಿಗೆ ಗಣನೀಯವಾಗಿ ಇಳಿದಿದೆ. ಇದು ಸುಧಾರಿತ ಬಂದರು ದಕ್ಷತೆ ಮತ್ತು ವೇಗದ ಸರಕು ನಿರ್ವಹಣೆಯನ್ನು ಸೂಚಿಸುತ್ತದೆ.
- ಜಾಗತಿಕ ಮನ್ನಣೆ: ಭಾರತೀಯ ಬಂದರುಗಳು ತಮ್ಮ ಜಾಗತಿಕ ಅಸ್ತಿತ್ವವನ್ನು ಬಲಪಡಿಸಿಕೊಂಡಿವೆ, ವಿಶ್ವದ ಅಗ್ರ 100 ಬಂದರುಗಳಲ್ಲಿ 9 ಬಂದರುಗಳು ಸ್ಥಾನ ಪಡೆದಿವೆ. ಇದರಲ್ಲಿ ವಿಶಾಖಪಟ್ಟಣಂ ಬಂದರು ಕಂಟೈನರ್ ಸಂಚಾರಕ್ಕಾಗಿ ವಿಶ್ವದ ಅಗ್ರ 20 ಬಂದರುಗಳಲ್ಲಿ ಒಂದಾಗಿದೆ.
- ಒಳನಾಡು ಜಲಮಾರ್ಗಗಳ ಬೆಳವಣಿಗೆ: ಒಳನಾಡು ಜಲಮಾರ್ಗಗಳ ಮೂಲಕ ಸರಕು ಸಾಗಣೆಯು 2013-14ರಲ್ಲಿ 18.10 ಎಂಟಿಪಿಎ ಇದ್ದದ್ದು 2024-25ರಲ್ಲಿ 145.50 ಎಂಟಿಪಿಎ ಗೆ ಏರಿದೆ. ಇದು ಸುಮಾರು 700% ರಷ್ಟು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ.

ಪ್ರಯಾಣಿಕರ ಸಂಪರ್ಕ ಮತ್ತು ನಗರ ಜಲಮಾರ್ಗ ಸಾರಿಗೆ ಈ ಕಾರ್ಯಕ್ರಮವು ಕರಾವಳಿ ಮತ್ತು ಒಳನಾಡು ಜಲಮಾರ್ಗಗಳ ಮೂಲಕ ಪ್ರಯಾಣಿಕರ ಮತ್ತು ವಾಹನಗಳ ಸಂಚಾರದ ವಿಸ್ತರಣೆಗೆ ಬೆಂಬಲ ನೀಡಿದೆ, ಸಂಪರ್ಕವನ್ನು ಸುಧಾರಿಸಿದೆ ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡಿದೆ.
- ರೋ-ಪ್ಯಾಕ್ಸ್ ಮತ್ತು ಫೆರಿ ಸೇವೆಗಳು: ನಗರ ಜಲಮಾರ್ಗ ಸಾರಿಗೆ ವ್ಯವಸ್ಥೆಗಳನ್ನು ಬಲಪಡಿಸಲು ₹1,233 ಕೋಟಿ ಹೂಡಿಕೆಯೊಂದಿಗೆ ಒಟ್ಟು 29 ರೋ-ಪ್ಯಾಕ್ಸ್ (ವಾಹನಗಳು ಮತ್ತು ಪ್ರಯಾಣಿಕರು ಎರಡನ್ನೂ ಹೊತ್ತೊಯ್ಯುವ ಹಡಗು) ಮತ್ತು ಪ್ರಯಾಣಿಕರ ಫೆರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇವುಗಳಲ್ಲಿ, ₹706 ಕೋಟಿ ಮೌಲ್ಯದ 17 ಯೋಜನೆಗಳು ಪೂರ್ಣಗೊಂಡಿದ್ದು, ವೇಗವಾದ ಮತ್ತು ಹೆಚ್ಚು ದಕ್ಷ ಸಾರಿಗೆ ಆಯ್ಕೆಗಳನ್ನು ಒದಗಿಸುವ ಮೂಲಕ 35 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡಿವೆ.
ಸುಧಾರಿತ ಪ್ರಯಾಣ ದಕ್ಷತೆ: ಘೋಘಾ-ಹಜಿರಾ ರೋ-ಪ್ಯಾಕ್ಸ್ ಸೇವೆಯು ರಸ್ತೆ ಮೂಲಕ ಸುಮಾರು 10 ಗಂಟೆಗಳ ಪ್ರಯಾಣದ ಸಮಯವನ್ನು ಸಮುದ್ರದ ಮೂಲಕ ಸುಮಾರು 4 ಗಂಟೆಗಳಿಗೆ ಇಳಿಸಿದೆ, ಇದು 36,000 ಕ್ಕೂ ಹೆಚ್ಚು ಟ್ರಕ್‌ಗಳು, 61,000 ಕಾರುಗಳು ಮತ್ತು ಸುಮಾರು 4 ಲಕ್ಷ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಮುಂಬೈ-ಮಾಂಡ್ವಾ ಫೆರಿ ಸೇವೆಯು 109 ಕಿಲೋಮೀಟರ್ ರಸ್ತೆ ಪ್ರಯಾಣದ ಬದಲಿಗೆ 18.5 ಕಿಲೋಮೀಟರ್ ಸಮುದ್ರ ಮಾರ್ಗವನ್ನು ನೀಡುವ ಮೂಲಕ ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಿದೆ ಮತ್ತು ಪ್ರಯಾಣದ ಸಮಯವನ್ನು ಗಣನೀಯವಾಗಿ ಉಳಿಸಿದೆ.
ಕರಾವಳಿ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಮೂಲಸೌಕರ್ಯದ ಆಚೆಗೆ, ಈ ಕಾರ್ಯಕ್ರಮವು ಉದ್ದೇಶಿತ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ ಕರಾವಳಿ ಸಮುದಾಯಗಳ ಜೀವನೋಪಾಯವನ್ನು ಸುಧಾರಿಸಲು ಕೊಡುಗೆ ನೀಡಿದೆ.
- ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಭಿಸರಣ ಉಪಕ್ರಮದ ಅಡಿಯಲ್ಲಿ, 7,600 ಕ್ಕೂ ಹೆಚ್ಚು ಅಭ್ಯರ್ಥಿಗಳು ಕೌಶಲ್ಯ ತರಬೇತಿಯನ್ನು ಪಡೆದಿದ್ದಾರೆ ಮತ್ತು 3,100 ಕ್ಕೂ ಹೆಚ್ಚು ವ್ಯಕ್ತಿಗಳು ಕಡಲ ಮತ್ತು ಸಂಬಂಧಿತ ವಲಯಗಳಲ್ಲಿ ಯಶಸ್ವಿಯಾಗಿ ಉದ್ಯೋಗ ಪಡೆದಿದ್ದಾರೆ.
- ಬಂದರು ಆಧಾರಿತ ಕೈಗಾರಿಕೀಕರಣ ಮತ್ತು ಕಡಲ ಹಾಗೂ ಸಂಬಂಧಿತ ಮೂಲಸೌಕರ್ಯಗಳ ವಿಸ್ತರಣೆಯಿಂದಾಗಿ ಸಾಗರಮಾಲಾ ಯೋಜನೆಯು ಸುಮಾರು 1 ಕೋಟಿ ಉದ್ಯೋಗಗಳ (40 ಲಕ್ಷ ನೇರ ಮತ್ತು 60 ಲಕ್ಷ ಪರೋಕ್ಷ ಉದ್ಯೋಗಾವಕಾಶಗಳು ಸೇರಿದಂತೆ) ಒಟ್ಟು ಉದ್ಯೋಗ ಸಾಮರ್ಥ್ಯವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.
ಸಾಗರಮಾಲಾದ ಸಾಂಸ್ಥಿಕ ಬೆನ್ನೆಲುಬು ಸಾಗರಮಾಲಾ ಕಾರ್ಯಕ್ರಮವು ಕೇಂದ್ರ ಮತ್ತು ರಾಜ್ಯಗಳಾದ್ಯಂತ ಸಂಯೋಜಿತ ಯೋಜನೆ, ದಕ್ಷ ಅನುಷ್ಠಾನ ಮತ್ತು ನಿರಂತರ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಲು ವಿನ್ಯಾಸಗೊಳಿಸಲಾದ ಬಹು-ಹಂತದ ಚೌಕಟ್ಟಿನ ಬೆಂಬಲವನ್ನು ಹೊಂದಿದೆ. ಈ ಚೌಕಟ್ಟಿನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
- ರಾಷ್ಟ್ರೀಯ ಸಾಗರಮಾಲಾ ಅಪೆಕ್ಸ್ ಸಮಿತಿ: ಮೇ 2015 ರಲ್ಲಿ ರಚನೆಯಾದ ಎನ್‌ಎಸ್‌ಎಸಿ, ಕಾರ್ಯಕ್ರಮಕ್ಕೆ ಒಟ್ಟಾರೆ ನೀತಿ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯನ್ನು ಒದಗಿಸುವ ಅತ್ಯುನ್ನತ ಸಂಸ್ಥೆಯಾಗಿದೆ. ಇದು ಯೋಜನೆ ಮತ್ತು ಅನುಷ್ಠಾನದ ಪ್ರಮುಖ ಅಂಶಗಳನ್ನು ಪರಿಶೀಲಿಸುತ್ತದೆ ಮತ್ತು ಯೋಜನೆಗಳು ವಿಶಾಲ ಉದ್ದೇಶಗಳೊಂದಿಗೆ ಹೊಂದಿಕೆಯಾಗುವುದನ್ನು ಖಚಿತಪಡಿಸುತ್ತದೆ.
- ಮ್ಯಾರಿಟೈಮ್ ಸ್ಟೇಟ್ಸ್ ಡೆವಲಪ್‌ಮೆಂಟ್ ಕೌನ್ಸಿಲ್: ಕೇಂದ್ರ-ರಾಜ್ಯ ಸಮನ್ವಯವನ್ನು ಸುಲಭಗೊಳಿಸಲು MSDC ಅನ್ನು ನಿಯತಕಾಲಿಕವಾಗಿ ಕರೆಯಲಾಗುತ್ತದೆ. ಇದು ಪ್ರಗತಿಯನ್ನು ಪರಿಶೀಲಿಸಲು, ಅಂತರ್-ಸಚಿವಾಲಯದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಬಂದರುಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳ ಸಂಯೋಜಿತ ಅಭಿವೃದ್ಧಿಯನ್ನು ಉತ್ತೇಜಿಸಲು ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಕಡಲ ಪಾಲುದಾರರನ್ನು ಒಂದೆಡೆ ಸೇರಿಸುತ್ತದೆ.
- ರಾಜ್ಯ ಸಾಗರಮಾಲಾ ಸಮಿತಿಗಳು: ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಚನೆಯಾಗಿರುವ ಎಸ್‌ಎಸ್‌ಸಿ ಗಳು ಯೋಜನೆಗಳನ್ನು ಗುರುತಿಸಲು, ಅನುಷ್ಠಾನವನ್ನು ಸಂಯೋಜಿಸಲು ಮತ್ತು ರಾಜ್ಯ ಮಟ್ಟದಲ್ಲಿ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಜವಾಬ್ದಾರವಾಗಿವೆ.
- ಸಾಗರಮಾಲಾ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್: ಆಗಸ್ಟ್ 2016 ರಲ್ಲಿ ಸ್ಥಾಪನೆಯಾದ ಸಾಗರಮಾಲಾ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್, ಭಾರತದ ಕಡಲ ಮೂಲಸೌಕರ್ಯವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೂನ್ 2025 ರಲ್ಲಿ, ಎಸ್‌ಡಿಸಿಎಲ್ ಗಮನಾರ್ಹ ರೂಪಾಂತರಕ್ಕೆ ಒಳಗಾಯಿತು ಮತ್ತು ಅದನ್ನು ಸಾಗರಮಾಲಾ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ ಆಗಿ ಮರುಸಂಘಟಿಸಲಾಯಿತು. ಈ ಬದಲಾವಣೆಯು ವಿಸ್ತೃತ ಆದೇಶವನ್ನು ಪ್ರತಿಬಿಂಬಿಸುತ್ತದೆ, ಎಸ್‌ಎಂಎಫ್‌ಸಿಎಲ್ ಕಡಲ ವಲಯದ ಮೇಲೆ ಕೇಂದ್ರೀಕರಿಸಿದ ಭಾರತದ ಮೊದಲ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿ ಸ್ಥಾನ ಪಡೆದಿದೆ.ಎಸ್‌ಎಂಎಫ್‌ಸಿಎಲ್ ಕಡಲ ವಲಯದ ಅಗತ್ಯಗಳಿಗೆ ಅನುಗುಣವಾಗಿ ಹಣಕಾಸಿನ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕಂಪನಿಯು ಡಿಸೆಂಬರ್ 2025 ರಲ್ಲಿ ಸುಮಾರು ₹4,300 ಕೋಟಿ ಸಾಲದ ಮಂಜೂರಾತಿಗಳನ್ನು ಅನುಮೋದಿಸುವ ಮೂಲಕ ಔಪಚಾರಿಕವಾಗಿ ಕಡಲ ಸಾಲ ನೀಡುವ ಕ್ಷೇತ್ರಕ್ಕೆ ಪ್ರವೇಶಿಸಿದೆ.
ನಾವೀನ್ಯತೆಯ ಮುಂದಿನ ಅಲೆ
ಸಾಗರಮಾಲಾ 2.0 ಅನ್ನು ಮಾರ್ಚ್ 2015 ರಲ್ಲಿ ಪ್ರಾರಂಭಿಸಲಾದ ಸಾಗರಮಾಲಾ ಕಾರ್ಯಕ್ರಮದ ಮುಂದಿನ ಹಂತವಾಗಿ ಪ್ರಸ್ತಾವಿಸಲಾಗಿದೆ. ಇದು ಅದರ ಸಾಧನೆಗಳನ್ನು ಆಧರಿಸಿ ಬೆಳೆಯುವುದರ ಜೊತೆಗೆ, ಎಂಐವಿ (ಮ್ಯಾರಿಟೈಮ್ ಇಂಡಿಯಾ ವಿಷನ್) 2030 ಮತ್ತುಎಂಎಕೆವಿ (ಮ್ಯಾರಿಟೈಮ್ ಅಮೃತ್ ಕಾಲ್ ವಿಷನ್) 2047 ರಲ್ಲಿ ವಿವರಿಸಲಾದ ಕಡಲ ವಲಯದ ವಿಶಾಲ ಮತ್ತು ಹೆಚ್ಚು ಸಮಗ್ರ ರಾಷ್ಟ್ರೀಯ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ. ಈ ಯೋಜನೆಯು ಬಂದರುಗಳ ಸಮಗ್ರ ಆಧುನೀಕರಣ, ಬಂದರು ಆಧಾರಿತ ಕೈಗಾರಿಕೀಕರಣದ ಉತ್ತೇಜನ, ಬಂದರುಗಳಿಗೆ ಕರಾವಳಿ ಮತ್ತು ಒಳನಾಡು ಸಂಪರ್ಕದ ಸುಧಾರಣೆ, ಒಳನಾಡು ಜಲಮಾರ್ಗ ಮತ್ತು ಕರಾವಳಿ ಹಡಗು ಸೇವೆಗಳ ವರ್ಧನೆ, ದ್ವೀಪ ಮತ್ತು ಕರಾವಳಿ ಸಮುದಾಯಗಳ ಅಭಿವೃದ್ಧಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿ ನಾವೀನ್ಯತೆಯನ್ನು ಬೆಳೆಸುವ ಮೂಲಕ ಭಾರತವನ್ನು ಜಾಗತಿಕ ಕಡಲ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಸಾಗರಮಾಲಾ 2.0 ಅನ್ನು 'ವಿಕಸಿತ ಭಾರತ 2047' ರ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಒಳಗೊಳ್ಳುವ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಲಾಜಿಸ್ಟಿಕ್ಸ್ ವೆಚ್ಚ ಕಡಿತದ ಪ್ರಮುಖ ಸಕ್ರಿಯಕಾರಿಯಾಗಿ ರೂಪಿಸಲಾಗಿದೆ. ಪ್ರಸ್ತಾವಿತ ಯೋಜನೆಯು ಒಟ್ಟು ₹85,482 ಕೋಟಿ ಬಜೆಟ್ ಬೆಂಬಲದೊಂದಿಗೆ ₹3.6 ಲಕ್ಷ ಕೋಟಿ ಒಟ್ಟು ಹೂಡಿಕೆಯನ್ನು ಯೋಜಿಸಿದೆ. ಇದನ್ನು ಯೋಜನೆ ಅವಧಿಯಲ್ಲಿ ಬಂದರುಗಳು, ಒಳನಾಡು ಜಲಮಾರ್ಗಗಳು ಮತ್ತು ಕರಾವಳಿ ಮೂಲಸೌಕರ್ಯ, ಕಡಲ ಸೇವೆಗಳು, ಕರಾವಳಿ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸಾಂಸ್ಥಿಕ ಬಲವರ್ಧನೆಗೆ ಬಳಸಿಕೊಳ್ಳಲಾಗುವುದು.
ಉಪಸಂಹಾರ
ಭಾರತದ ಕಡಲ ವಲಯವು ಕಳೆದ ದಶಕದಲ್ಲಿ ಸಾಮರ್ಥ್ಯ, ಸಂಪರ್ಕ ಮತ್ತು ಕಾರ್ಯಾಚರಣೆಯ ದಕ್ಷತೆಯಲ್ಲಿ ಗಮನಾರ್ಹ ವಿಸ್ತರಣೆಯನ್ನು ಕಂಡಿದೆ. ಸಾಗರಮಾಲಾ ಕಾರ್ಯಕ್ರಮವು ಬಂದರುಗಳ ಆಧುನೀಕರಣ, ಕರಾವಳಿ ಮತ್ತು ಒಳನಾಡು ಜಲಮಾರ್ಗ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಸರಕು ನಿರ್ವಹಣಾ ಸಾಮರ್ಥ್ಯಗಳ ವರ್ಧನೆಗೆ ಕೊಡುಗೆ ನೀಡಿದೆ. ಪೂರ್ಣಗೊಂಡ ಯೋಜನೆಗಳು ಅಳೆಯಬಹುದಾದ ಸಾಮರ್ಥ್ಯವನ್ನು ಸೇರಿಸಿವೆ, ಹಡಗುಗಳ ಟರ್ನ್‌ಅರೌಂಡ್ ಸಮಯವನ್ನು ಕಡಿಮೆ ಮಾಡಿದೆ ಮತ್ತು ಬಂದರು ಆಧಾರಿತ ಕೈಗಾರಿಕಾ ಹಾಗೂ ಕರಾವಳಿ ಸಮುದಾಯದ ಅಭಿವೃದ್ಧಿಗೆ ಬೆಂಬಲ ನೀಡಿವೆ. ಒಟ್ಟಾರೆಯಾಗಿ, ಈ ಉಪಕ್ರಮಗಳು ಬೆಳವಣಿಗೆಯನ್ನು ಉಳಿಸಿಕೊಳ್ಳಲು ಮತ್ತು ವ್ಯಾಪಾರ ಹಾಗೂ ಕೈಗಾರಿಕಾ ಚಟುವಟಿಕೆಗಳಿಗಾಗಿ ಭಾರತದ ಕಡಲ ಮೂಲಸೌಕರ್ಯವನ್ನು ಬಲಪಡಿಸಲು ಒಂದು ಸುಸಂಘಟಿತ ವಿಧಾನವನ್ನು ಒದಗಿಸುತ್ತವೆ.
References
Ministry of Ports, Shipping and Waterways
https://shipmin.gov.in/division/sagarmala
https://sagarmala.gov.in/about-sagarmala/introduction
https://www.pib.gov.in/PressReleasePage.aspx?PRID=2115878®=3&lang=2
https://www.pib.gov.in/PressReleasePage.aspx?PRID=2213361®=3&lang=1
https://www.pib.gov.in/PressReleasePage.aspx?PRID=2182563®=3&lang=2
https://www.pib.gov.in/PressReleasePage.aspx?PRID=2179597®=3&lang=2
https://www.pib.gov.in/PressReleasePage.aspx?PRID=2227175®=3&lang=1
https://www.pib.gov.in/PressReleasePage.aspx?PRID=2227671®=3&lang=1
https://www.pib.gov.in/PressReleseDetailm.aspx?PRID=2227670
https://www.pib.gov.in/PressReleasePage.aspx?PRID=2152677
https://www.pib.gov.in/PressReleasePage.aspx?PRID=2227671®=6&lang=1
https://www.pib.gov.in/PressReleasePage.aspx?PRID=2113023®=3&lang=2
https://www.pib.gov.in/PressReleaseIframePage.aspx?PRID=2054522®=3&lang=2
https://www.pib.gov.in/PressReleasePage.aspx?PRID=2210308®=3&lang=1
https://www.pib.gov.in/PressReleasePage.aspx?PRID=2244787®=3&lang=1
https://www.pib.gov.in/PressReleasePage.aspx?PRID=2249113®=3&lang=1
Press Information Bureau
https://www.pib.gov.in/PressReleasePage.aspx?PRID=2182563®=3&lang=2
https://www.pib.gov.in/PressReleasePage.aspx?PRID=2172354®=3&lang=2
Click here to see pdf
*****
(Explainer ID: 158159)
आगंतुक पटल : 26
Provide suggestions / comments