• Sitemap
  • Advance Search
Social Welfare

ವಿಶ್ವ ಹೋಮಿಯೋಪತಿ ದಿನ 2026

ಬದಲಾಗುತ್ತಿರುವ ಜಗತ್ತಿನಲ್ಲಿ ಸಮಗ್ರ ಆರೋಗ್ಯ ರಕ್ಷಣೆಯ ಮರುಕಲ್ಪನೆ

Posted On: 09 APR 2026 11:54AM

ಪ್ರಮುಖ ಅಂಶಗಳು

  • ವಿಶ್ವ ಹೋಮಿಯೋಪತಿ ದಿನ ಪ್ರತಿ ವರ್ಷ ಏಪ್ರಿಲ್ 10 ರಂದು ಆಚರಿಸಲಾಗುವ ಈ ದಿನವು ಹೋಮಿಯೋಪತಿಯ ಸ್ಥಾಪಕರಾದ ಡಾ. ಹಾನಿಮನ್ ಅವರ ಜನ್ಮದಿನದ ಸ್ಮರಣಾರ್ಥವಾಗಿದೆ.
  • ವಿಶ್ವ ಹೋಮಿಯೋಪತಿ ದಿನ 2026 ರ ಧ್ಯೇಯವಾಕ್ಯವು ಸುಸ್ಥಿರ ಆರೋಗ್ಯಕ್ಕಾಗಿ ಹೋಮಿಯೋಪತಿ ಎಂಬುದಾಗಿದೆ.
  • ವಿಶ್ವದ ಅತಿದೊಡ್ಡ ಹೋಮಿಯೋಪತಿ ಕಾರ್ಯಪಡೆಯನ್ನು (ಹೋಮಿಯೋಪತಿ ವೈದ್ಯರು ಮತ್ತು ಸಿಬ್ಬಂದಿ) ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು.
  • ಜರ್ಮನ್ ಮಿಷನರಿಗಳು ಹೋಮಿಯೋಪತಿ ಔಷಧಿಗಳನ್ನು ವಿತರಿಸಲು ಪ್ರಾರಂಭಿಸಿದಾಗ, ಅಂದರೆ 1810 ರಲ್ಲಿ ಹೋಮಿಯೋಪತಿ ಮೊದಲ ಬಾರಿಗೆ ಭಾರತವನ್ನು ಪ್ರವೇಶಿಸಿತು.
  • ಭಾರತವು 3.45 ಲಕ್ಷ ನೋಂದಾಯಿತ ಹೋಮಿಯೋಪತಿ ವೈದ್ಯರು, 8,593 ಹೋಮಿಯೋಪತಿ ಚಿಕಿತ್ಸಾಲಯಗಳು, 277 ಹೋಮಿಯೋಪತಿ ಶಿಕ್ಷಣ ಸಂಸ್ಥೆಗಳು ಮತ್ತು 34 ಸಂಶೋಧನಾ ಕೇಂದ್ರಗಳನ್ನು ಹೊಂದಿದೆ.

ನಿರಂತರವಾಗಿ ವಿಕಸನಗೊಳ್ಳುತ್ತಿರುವ ಪರಂಪರೆ

ಸ್ಯಾಮ್ಯುಯೆಲ್ ಹಾನಿಮನ್ (1755-1843) ಒಬ್ಬ ಜರ್ಮನ್ ವೈದ್ಯರಾಗಿದ್ದರು, ಅವರು 18 ನೇ ಶತಮಾನದ ಕೊನೆಯಲ್ಲಿ ಹೋಮಿಯೋಪತಿಯನ್ನು ಸ್ಥಾಪಿಸಿದರು. ಅವರ ಪ್ರಮುಖ ಕೃತಿಯಾದ 'ಆರ್ಗನನ್ ಆಫ್ ಮೆಡಿಸಿನ್' ಇಂದಿಗೂ ವಿಶ್ವಾದ್ಯಂತ ಹೋಮಿಯೋಪತಿ ಪದ್ಧತಿಗೆ ಮಾರ್ಗದರ್ಶಿಯಾಗಿದೆ. ಅವರ ಜನ್ಮದಿನವಾದ ಏಪ್ರಿಲ್ 10 ಅನ್ನು 'ವಿಶ್ವ ಹೋಮಿಯೋಪತಿ ದಿನ' ಎಂದು ಆಚರಿಸಲಾಗುತ್ತದೆ.

ಗ್ರೀಕ್ ಪದಗಳಾದ 'ಹೋಮಿಯೋಸ್' (ಸಮಾನ) ಮತ್ತು 'ಪ್ಯಾಥೋಸ್' (ಕಷ್ಟ ಅಥವಾ ರೋಗ) ಎಂಬ ಪದಗಳಿಂದ ಬಂದಿರುವ ಹೋಮಿಯೋಪತಿಯು ಒಂದು ವೈದ್ಯಕೀಯ ಪದ್ಧತಿಯಾಗಿದೆ. ಇದು ರೋಗಿಯು ಅನುಭವಿಸುವ ರೋಗಲಕ್ಷಣಗಳಂತೆಯೇ ಇರುವ ಪರಿಣಾಮಗಳನ್ನು ಬೀರಬಲ್ಲ ಔಷಧಿಗಳ ಮೂಲಕ ರೋಗಗಳನ್ನು ಗುಣಪಡಿಸುತ್ತದೆ. ಈ ವಿಧಾನವನ್ನು ಹೋಮಿಯೋಪತಿಯ ಸ್ಥಾಪಕ ಸ್ಯಾಮ್ಯುಯೆಲ್ ಹಾನಿಮನ್ ಅವರು 1796 ರಲ್ಲಿ ರೂಪಿಸಿದರು. ಅವರ ಜನ್ಮದಿನವನ್ನು ಪ್ರತಿ ವರ್ಷ ಏಪ್ರಿಲ್ 10 ರಂದು 'ವಿಶ್ವ ಹೋಮಿಯೋಪತಿ ದಿನ'ವಾಗಿ ಆಚರಿಸಲಾಗುತ್ತದೆ ಮತ್ತು ಈ ವರ್ಷದ ಧ್ಯೇಯವಾಕ್ಯವು "ಸುಸ್ಥಿರ ಆರೋಗ್ಯಕ್ಕಾಗಿ ಹೋಮಿಯೋಪತಿ" ಎಂಬುದಾಗಿದೆ.

ಅವರು ಇದರ ಮೂಲಭೂತ ಸಿದ್ಧಾಂತಗಳನ್ನು ಸ್ಥಾಪಿಸಿದರು, ಅದರಲ್ಲಿ ಮೊದಲನೆಯದು ಸಮಾನವಾದದ್ದು ಸಮಾನವಾದುದನ್ನು ಗುಣಪಡಿಸುತ್ತದೆ. ಅಂದರೆ, ಆರೋಗ್ಯವಂತ ವ್ಯಕ್ತಿಯಲ್ಲಿ ರೋಗಲಕ್ಷಣಗಳನ್ನು ಉಂಟುಮಾಡುವ ಸಾಮರ್ಥ್ಯವಿರುವ ಪದಾರ್ಥಗಳನ್ನು, ಸರಿಯಾಗಿ ಸಂಸ್ಕರಿಸಿದ ರೂಪದಲ್ಲಿ ನೀಡಿದಾಗ, ರೋಗಿಗಳಲ್ಲಿನ ಅಂತಹದೇ ರೋಗಲಕ್ಷಣಗಳನ್ನು ಗುಣಪಡಿಸಲು ಸಾಧ್ಯ ಎಂಬುದು ಇದರ ಅರ್ಥ. ಎರಡನೆಯ ಸಿದ್ಧಾಂತವನ್ನು "ಕನಿಷ್ಠ ಪ್ರಮಾಣದ ನಿಯಮ" ಎಂದು ಕರೆಯಲಾಗುತ್ತದೆ. ಇದು ಅಡ್ಡಪರಿಣಾಮಗಳನ್ನು ಕಡಿಮೆ ಮಾಡುವುದರ ಜೊತೆಗೆ ದೇಹದ ಸ್ವಯಂ-ಗುಣಪಡಿಸುವ ಪ್ರಕ್ರಿಯೆಯನ್ನು ಉತ್ತೇಜಿಸಲು ಅತಿ ಕಡಿಮೆ ಪ್ರಮಾಣದ (ದುರ್ಬಲಗೊಳಿಸಿದ) ಔಷಧದ ಬಳಕೆಯನ್ನು ಹೇಳುತ್ತದೆ.

ಹೋಮಿಯೋಪತಿ ಔಷಧಿಗಳನ್ನು ಸಸ್ಯಗಳು, ಖನಿಜಗಳು ಮತ್ತು ಪ್ರಾಣಿಜನ್ಯ ಪದಾರ್ಥಗಳಂತಹ ನೈಸರ್ಗಿಕ ಮೂಲಗಳಿಂದ ಸಿದ್ಧಪಡಿಸಲಾಗುತ್ತದೆ. ಇವುಗಳನ್ನು ಮಾತ್ರೆಗಳು, ಸಣ್ಣ ಗುಳಿಗೆಗಳು ಮತ್ತು ದ್ರವ ರೂಪದಲ್ಲಿ ನೀಡಲಾಗುತ್ತದೆ. ಕೇವಲ ರೋಗಕ್ಕೆ ಚಿಕಿತ್ಸೆ ನೀಡುವ ಬದಲು, ರೋಗಿಯ ಒಟ್ಟಾರೆ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಆಧರಿಸಿ ಚಿಕಿತ್ಸೆ ನೀಡುವ ವೈಯಕ್ತಿಕ ಚಿಕಿತ್ಸಾ ಕ್ರಮವು ಈ ಪದ್ಧತಿಯ ಪ್ರಮುಖ ವೈಶಿಷ್ಟ್ಯವಾಗಿದೆ.

ಭಾರತದಲ್ಲಿ ಹೋಮಿಯೋಪತಿಯು ವ್ಯಾಪಕವಾಗಿ ಬಳಕೆಯಲ್ಲಿರುವ ವೈದ್ಯಕೀಯ ಪದ್ಧತಿಯಾಗಿ ಬೆಳೆದಿದೆ. ಇದು ರೋಗ ತಡೆಗಟ್ಟುವಿಕೆ, ದೀರ್ಘಕಾಲದ ಕಾಯಿಲೆಗಳ ನಿರ್ವಹಣೆ ಮತ್ತು ಒಟ್ಟಾರೆ ಸಮಗ್ರ ಆರೋಗ್ಯದ ಸುಧಾರಣೆಯಲ್ಲಿ ಪ್ರಮುಖ ಕೊಡುಗೆ ನೀಡುತ್ತಿದೆ.

ವಿಶ್ವ ಹೋಮಿಯೋಪತಿ ದಿನ 2026: ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ಆಚರಣೆ: ರಾಷ್ಟ್ರೀಯ ಹೋಮಿಯೋಪತಿ ಆಯೋಗವು ಏಪ್ರಿಲ್ 10 ರಂದು ದೇಶಾದ್ಯಂತ ವಿವಿಧ ಚಟುವಟಿಕೆಗಳನ್ನು ಆಯೋಜಿಸಲು ರಾಜ್ಯ ಮಂಡಳಿಗಳು, ಸಂಸ್ಥೆಗಳು ಮತ್ತು ವೈದ್ಯರಿಗೆ ಕರೆ ನೀಡಿದೆ.
  • ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆ: ವಿಚಾರಗೋಷ್ಠಿಗಳು, ಚಿಕಿತ್ಸಕ ಚರ್ಚೆಗಳು ಮತ್ತು ಸ್ಪರ್ಧೆಗಳು ವಿದ್ಯಾರ್ಥಿಗಳು ಮತ್ತು ವೈದ್ಯರ ನಡುವೆ ಜ್ಞಾನ ವಿನಿಮಯ ಹಾಗೂ ವೃತ್ತಿಪರ ಶ್ರೇಷ್ಠತೆಯನ್ನು ಉತ್ತೇಜಿಸಲಿವೆ.
  • ಸಾರ್ವಜನಿಕ ಸಂಪರ್ಕ: ಉಚಿತ ಆರೋಗ್ಯ ತಪಾಸಣೆಗಳು, ಜಾಗೃತಿ ಅಭಿಯಾನಗಳು ಮತ್ತು ಸಮುದಾಯ ಚಟುವಟಿಕೆಗಳು ರೋಗ ತಡೆಗಟ್ಟುವಿಕೆ ಮತ್ತು ಸಮಗ್ರ ಆರೋಗ್ಯ ರಕ್ಷಣೆಯಲ್ಲಿ ಹೋಮಿಯೋಪತಿಯ ಪಾತ್ರವನ್ನು ಉಲ್ಲೇಖಿಸಲಿವೆ.
  • ಸೃಜನಾತ್ಮಕ ಸಹಭಾಗಿತ್ವ: ಪ್ರಬಂಧ ಬರವಣಿಗೆ, ಪೋಸ್ಟರ್ ತಯಾರಿಕೆ ಮತ್ತು ಕಿರು ವಿಡಿಯೋಗಳಂತಹ ಸ್ಪರ್ಧೆಗಳು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸಲಿವೆ.

ಸಂಪ್ರದಾಯದಿಂದ ನೀತಿ ಆದ್ಯತೆಯವರೆಗೆ

ಸುಮಾರು ಕಾಲು ಮಿಲಿಯನ್ (2.5 ಲಕ್ಷ) ನೋಂದಾಯಿತ ಹೋಮಿಯೋಪತಿ ವೈದ್ಯರನ್ನು ಹೊಂದಿರುವ ಭಾರತವು, ವಿಶ್ವದ ಅತಿದೊಡ್ಡ ಹೋಮಿಯೋಪತಿ ಕಾರ್ಯಪಡೆಗಳಲ್ಲಿ ಒಂದನ್ನು ಹೊಂದಿದೆ. ಕಳೆದ ಶತಮಾನದಲ್ಲಿ, ಈ ಪದ್ಧತಿಯು ಕೇವಲ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಮಾತ್ರವಲ್ಲದೆ, ದೇಶದ ನೈಸರ್ಗಿಕ ಮತ್ತು ರೋಗ ತಡೆಗಟ್ಟುವ ಆರೋಗ್ಯ ರಕ್ಷಣೆಯ ಶ್ರೀಮಂತ ಸಂಪ್ರದಾಯಗಳೊಂದಿಗೆ ಸಾಮರಸ್ಯದಿಂದ ಬೆರೆತಿದೆ.

ಈ ಸುಸ್ಥಿರ ಸ್ವೀಕಾರಕ್ಕೆ ಇತ್ತೀಚಿನ ವರ್ಷಗಳಲ್ಲಿ ಬಲವಾದ ಸಾಂಸ್ಥಿಕ ಬೆಂಬಲವು ಪೂರಕವಾಗಿ ನಿಂತಿದೆ. 2014 ರಲ್ಲಿ 'ಆಯುಷ್' ಸಚಿವಾಲಯದ ಸ್ಥಾಪನೆಯು ಒಂದು ಮಹತ್ವದ ಬದಲಾವಣೆಯನ್ನು ತಂದಿತು. ಇದು ಸಂಶೋಧನೆ, ಗುಣಮಟ್ಟದ ಮಾನದಂಡಗಳ ನಿಗದಿ ಮತ್ತು ಜಾಗತಿಕ ಮಟ್ಟದ ಪ್ರಭಾವದಂತಹ ವ್ಯವಸ್ಥಿತ ಮಧ್ಯಸ್ಥಿಕೆಗಳ ಮೂಲಕ ಹೋಮಿಯೋಪತಿಗೆ ಹೊಸ ನೀತಿ ರೂಪಿಸುವ ಆದ್ಯತೆಯನ್ನು ನೀಡಿತು. ಈ ಪ್ರಯತ್ನಗಳು ಹೋಮಿಯೋಪತಿಯನ್ನು ಕೇವಲ ಸಂಪ್ರದಾಯವಾಗಿ ಆಚರಿಸುವ ಚಿಕಿತ್ಸಾ ಪದ್ಧತಿಯಿಂದ, ಭಾರತದ ಆರೋಗ್ಯ ವ್ಯವಸ್ಥೆಯ ಸುಸಂಘಟಿತ ಮತ್ತು ನೀತಿ ಚಾಲಿತ ಅಂಗವನ್ನಾಗಿ ರೂಪಾಂತರಿಸಲು ಸಹಾಯ ಮಾಡಿವೆ.

ಭಾರತದಲ್ಲಿ ಹೋಮಿಯೋಪತಿಯ ಇತಿಹಾಸ

19ನೇ ಶತಮಾನದ ಆರಂಭದಲ್ಲಿ ಭಾರತಕ್ಕೆ ಹೋಮಿಯೋಪತಿಯನ್ನು ಪರಿಚಯಿಸಲಾಯಿತು, ಇದು ಅದರ ಕ್ರಮೇಣ ವಿಸ್ತರಣೆಯ ಆರಂಭವನ್ನು ಗುರುತಿಸಿತು. ಸುಮಾರು 1810ರಲ್ಲಿ, ಸ್ಯಾಮ್ಯುಯೆಲ್ ಹಾನಿಮನ್ ಅವರ ಶಿಷ್ಯರಾದ ಜಾನ್ ಮಾರ್ಟಿನ್ ಹೊನಿಗ್‌ಬರ್ಗರ್ ಅವರು ಭಾರತದಲ್ಲಿ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. 1839ರಲ್ಲಿ ಅವರು ಮಹಾರಾಜ ರಂಜಿತ್ ಸಿಂಗ್ ಅವರಿಗೆ ನೀಡಿದ ಯಶಸ್ವಿ ಚಿಕಿತ್ಸೆಯು ಗಣ್ಯರು ಮತ್ತು ಸಾಮಾನ್ಯ ಜನರಲ್ಲಿ ಈ ಪದ್ಧತಿಯ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡಿಸಿತು.

ಪ್ರಮುಖ ಮೈಲಿಗಲ್ಲುಗಳು

  • 1847: ತಮಿಳುನಾಡಿನ ತಂಜಾವೂರಿನಲ್ಲಿ ಆರಂಭಿಕ ಹೋಮಿಯೋಪತಿ ಆಸ್ಪತ್ರೆಗಳಲ್ಲಿ ಒಂದನ್ನು ಸ್ಥಾಪಿಸಲಾಯಿತು.
  • ಬಂಗಾಳದ ವೈದ್ಯ ಮತ್ತು ಪರೋಪಕಾರಿ ರಾಜೇಂದ್ರ ಲಾಲ್ ದತ್ತ ಅವರಿಂದ ಈ ಪದ್ಧತಿಗೆ ಬಲವಾದ ಪ್ರೋತ್ಸಾಹ ಲಭಿಸಿತು.
  • ಪ್ರಮುಖ ವೈದ್ಯ ಮಹೇಂದ್ರ ಲಾಲ್ ಸರ್ಕಾರ್ ಅವರ ಬೆಂಬಲವು ಈ ಪದ್ಧತಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿತು.
  • ಕಲ್ಕತ್ತಾ, ಬನಾರಸ್ ಮತ್ತು ಅಲಹಾಬಾದ್‌ಗಳಲ್ಲಿ ಚಿಕಿತ್ಸಾಲಯಗಳ ವಿಸ್ತರಣೆಯಾಯಿತು.

ಸ್ವಾತಂತ್ರ್ಯೋತ್ತರ ಬೆಳವಣಿಗೆಗಳು

ಸ್ವಾತಂತ್ರ್ಯದ ನಂತರದ ಅವಧಿಯಲ್ಲಿ, ಭಾರತ ಸರ್ಕಾರವು ಹೋಮಿಯೋಪತಿಯನ್ನು ಸಾಂಸ್ಥಿಕಗೊಳಿಸಲು ಕ್ರಮಗಳನ್ನು ಕೈಗೊಂಡಿತು:

  • 1973: ಕೇಂದ್ರ ಹೋಮಿಯೋಪತಿ ಮಂಡಳಿಯ ಸ್ಥಾಪನೆ.
  • 1978: ಕೇಂದ್ರ ಹೋಮಿಯೋಪತಿ ಸಂಶೋಧನಾ ಮಂಡಳಿಯ ಸ್ಥಾಪನೆ.

ಈ ಉಪಕ್ರಮಗಳು ಈ ಕ್ಷೇತ್ರದಲ್ಲಿ ನಿಯಂತ್ರಣ, ಶಿಕ್ಷಣ ಮತ್ತು ಸಂಶೋಧನೆಯನ್ನು ಬಲಪಡಿಸಿದವು.

ಭಾರತದಲ್ಲಿ ಹೋಮಿಯೋಪತಿ ಮೂಲಸೌಕರ್ಯ

ಇತ್ತೀಚಿನ ವರ್ಷಗಳಲ್ಲಿ, ಹೋಮಿಯೋಪತಿಯನ್ನು ಸಾಕ್ಷ್ಯಾಧಾರಿತವಾಗಿ ದೃಢೀಕರಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಭಾರತವು ಸುಮಾರು 34 ಮೀಸಲಾದ ಹೋಮಿಯೋಪತಿ ಸಂಶೋಧನಾ ಕೇಂದ್ರಗಳನ್ನು ಹೊಂದಿದ್ದು, ಇದು ವ್ಯವಸ್ಥಿತ ಸಂಶೋಧನೆಗೆ ಬಲವಾದ ಅಡಿಪಾಯವನ್ನು ಒದಗಿಸಿದೆ. ಈ ಪ್ರಯತ್ನಗಳ ನೇತೃತ್ವವನ್ನು ವಹಿಸಿರುವ ರಾಷ್ಟ್ರೀಯ ಹೋಮಿಯೋಪತಿ ಆಯೋಗ ಮತ್ತು ಕೇಂದ್ರ ಹೋಮಿಯೋಪತಿ ಸಂಶೋಧನಾ ಮಂಡಳಿ ಅಂತಹ ಸಂಸ್ಥೆಗಳು ಕ್ಲಿನಿಕಲ್ ಸಂಶೋಧನೆ, ಔಷಧಿಗಳ ಗುಣಮಟ್ಟದ ಮಾನದಂಡಗಳನ್ನು ನಿರ್ಧರಿಸುವುದು ಮತ್ತು ಅಂತರಶಿಸ್ತೀಯ ಅಧ್ಯಯನಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಸರ್ಕಾರದ ಬೆಂಬಲಿತ ವೇದಿಕೆಗಳು, ವಿಶೇಷವಾಗಿ ವಿಶ್ವ ಹೋಮಿಯೋಪತಿ ದಿನದ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳು, ದತ್ತಾಂಶ ಆಧಾರಿತ ಫಲಿತಾಂಶಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿವೆ. ಇದು ಈ ಕ್ಷೇತ್ರದಲ್ಲಿ ಬಲವಾದ ವೈಜ್ಞಾನಿಕ ತೊಡಗಿಸಿಕೊಳ್ಳುವಿಕೆಯ ಕಡೆಗೆ ಬದಲಾವಣೆಯ ಸಂಕೇತವಾಗಿದೆ.

ಕೇಂದ್ರ ಹೋಮಿಯೋಪತಿ ಸಂಶೋಧನಾ ಮಂಡಳಿ ನವದೆಹಲಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಿಸಿಆರ್‌ಎಚ್‌, ಚಿಕಿತ್ಸಾ ಪದ್ಧತಿಯನ್ನು ಬಲಪಡಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಹೋಮಿಯೋಪತಿಗೆ ಮಾನ್ಯತೆ ದೊರಕಿಸಿಕೊಡಲು ವೈಜ್ಞಾನಿಕ ಮತ್ತು ನೈತಿಕ ಸಂಶೋಧನೆಗಳನ್ನು ಉತ್ತೇಜಿಸುತ್ತದೆ. ಹೋಮಿಯೋಪತಿಯಲ್ಲಿನ ವೈಜ್ಞಾನಿಕ ಸಂಶೋಧನೆಗಳನ್ನು ಭಾರತದಾದ್ಯಂತ ಇರುವ ೩೩ ಸಂಸ್ಥೆಗಳು ಅಥವಾ ಘಟಕಗಳ ಜಾಲದ ಮೂಲಕ ನಡೆಸಲಾಗುತ್ತದೆ.

ಸಿಸಿಆರ್‌ಎಚ್‌ ನ ಪ್ರಮುಖ ಚಟುವಟಿಕೆಗಳು:

  • ಔಷಧಿಗಳ ಪರೀಕ್ಷೆ, ದೃಢೀಕರಣ ಮತ್ತು ಗುಣಮಟ್ಟದ ಮಾನದಂಡಗಳ ನಿರ್ಧಾರ.
  • ಕ್ಲಿನಿಕಲ್ ಸಂಶೋಧನೆ, ಪರಿಶೀಲನೆ, ದಾಖಲಾತಿ ಮತ್ತು ಪ್ರಕಟಣೆ.
  • ಸಂಶೋಧನಾ ಸಹಯೋಗಗಳು ಮತ್ತು ಅನುದಾನಿತ ಸಹಾಯದ ಬೆಂಬಲ.

ಸಾರ್ವಜನಿಕ ಆರೋಗ್ಯ ಉಪಕ್ರಮಗಳು:

  • ಆರೋಗ್ಯವಂತ ಮಗುವಿಗಾಗಿ ಹೋಮಿಯೋಪತಿ.
  • ಹೃದ್ರೋಗ ಮತ್ತು ಪಾರ್ಶ್ವವಾಯು ತಡೆಗಟ್ಟುವಿಕೆ ಯೋಜನೆಯೊಂದಿಗೆ ಸಮನ್ವಯ (NPCDCS ನೊಂದಿಗೆ ಏಕೀಕರಣ).
  • ಸ್ವಾಸ್ಥ್ಯ ರಕ್ಷಣಾ ಕಾರ್ಯಕ್ರಮ.
  • ತಾಯಿ ಮತ್ತು ಮಗುವಿನ ಆರೈಕೆಗಾಗಿ ಹೋಮಿಯೋಪತಿ ಕುರಿತ ರಾಷ್ಟ್ರೀಯ ಅಭಿಯಾನ.

ರಾಷ್ಟ್ರೀಯ ಹೋಮಿಯೋಪತಿ ಆಯೋಗ: ರಾಷ್ಟ್ರೀಯ ಹೋಮಿಯೋಪತಿ ಆಯೋಗ ಕಾಯ್ದೆ, 2020 ರ ಅಡಿಯಲ್ಲಿ ಎನ್‌ಸಿಎಚ್‌ ಅನ್ನು ಸ್ಥಾಪಿಸಲಾಯಿತು ಮತ್ತು ಇದು ಜುಲೈ 5, 2021 ರಿಂದ ಜಾರಿಗೆ ಬಂದಿತು. ಇದರೊಂದಿಗೆ, 1973 ರ ಹೋಮಿಯೋಪತಿ ಕೇಂದ್ರ ಮಂಡಳಿ ಕಾಯ್ದೆಯಡಿ ರಚಿಸಲಾಗಿದ್ದ ಗವರ್ನರ್‌ಗಳ ಮಂಡಳಿ ಮತ್ತು ಕೇಂದ್ರ ಹೋಮಿಯೋಪತಿ ಮಂಡಳಿಯನ್ನು ರದ್ದುಗೊಳಿಸಲಾಯಿತು.

ಎನ್‌ಸಿಎಚ್‌ ನ ಪ್ರಮುಖ ಚಟುವಟಿಕೆಗಳು / ಕಾರ್ಯಗಳು:

  • ಹೋಮಿಯೋಪತಿ ಶಿಕ್ಷಣ ಮತ್ತು ಸಂಸ್ಥೆಗಳನ್ನು ನಿಯಂತ್ರಿಸುವುದು.
  • ಪಠ್ಯಕ್ರಮ ಮತ್ತು ಶೈಕ್ಷಣಿಕ ಮಾನದಂಡಗಳನ್ನು ನಿಗದಿಪಡಿಸುವುದು.
  • ವೈದ್ಯರ ರಾಷ್ಟ್ರೀಯ ನೋಂದಣಿ ಪುಸ್ತಕವನ್ನು ನಿರ್ವಹಿಸುವುದು.
  • ವೃತ್ತಿಪರ ನೈತಿಕತೆ ಮತ್ತು ಚಿಕಿತ್ಸೆಯ ಗುಣಮಟ್ಟವನ್ನು ಖಚಿತಪಡಿಸುವುದು.
  • ಆರೋಗ್ಯ ರಕ್ಷಣೆಯ ಅಗತ್ಯಗಳ ಮೌಲ್ಯಮಾಪನ ಮತ್ತು ಯೋಜನೆ.
  • ರಾಜ್ಯ ಮಂಡಳಿಗಳು ಮತ್ತು ಸಮಿತಿಗಳೊಂದಿಗೆ ಸಮನ್ವಯ ಸಾಧಿಸುವುದು.
  • ಅನುಸರಣೆಯ ಮೇಲೆ ನಿಗಾ ಇಡುವುದು ಮತ್ತು ಮೇಲ್ಮನವಿಗಳನ್ನು ನಿರ್ವಹಿಸುವುದು.

ಭಾರತೀಯ ವೈದ್ಯಕೀಯ ಪದ್ಧತಿಗಳ ಈ ಸಾಂಸ್ಥಿಕ ಬಲವರ್ಧನೆ ಮತ್ತು ಗುಣಮಟ್ಟದ ಮಾನದಂಡಗಳ ನಿರ್ಧಾರವು ಒಂದು ಬಲವಾದ ನಿಯಂತ್ರಕ ಚೌಕಟ್ಟನ್ನು ಸೃಷ್ಟಿಸಿದೆ. ಇದು ಈ ವಲಯದಲ್ಲಿನ ಶೈಕ್ಷಣಿಕ ಮೂಲಸೌಕರ್ಯಗಳ ವಿಸ್ತರಣೆಗೆ ಪೂರಕವಾಗಿದೆ.

ಭಾರತೀಯ ವೈದ್ಯಕೀಯ ಪದ್ಧತಿ ಮತ್ತು ಹೋಮಿಯೋಪತಿ ಔಷಧಕೋಶ ಆಯೋಗ

ಆಯುಷ್ ಸಚಿವಾಲಯದ ಅಧೀನದ ಕಚೇರಿಯಾಗಿರುವ ಪಿಸಿಐಎಂ&ಎಚ್‌ ಭಾರತೀಯ ವೈದ್ಯಕೀಯ ಪದ್ಧತಿಗಳು ಮತ್ತು ಹೋಮಿಯೋಪತಿಗಾಗಿ 'ಫಾರ್ಮಕೋಪಿಯಾ' (ಔಷಧಕೋಶ) ಮತ್ತು 'ಫಾರ್ಮ್ಯುಲರಿ'ಗಳನ್ನು (ಔಷಧ ಸೂತ್ರಗಳು) ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಈ ಔಷಧಿಗಳ ಗುಣಮಟ್ಟ, ಸುರಕ್ಷತೆ ಮತ್ತು ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಔಷಧ ಪರೀಕ್ಷೆ ಮತ್ತು ಮೇಲ್ಮನವಿ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನು ಪ್ರಾರಂಭದಲ್ಲಿ 18ನೇ ಆಗಸ್ಟ್ 2010 ರಂದು ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್, 1860 ರ ಅಡಿಯಲ್ಲಿ 'ಭಾರತೀಯ ವೈದ್ಯಕೀಯ ಪದ್ಧತಿಗಳ ಔಷಧಕೋಶ ಆಯೋಗ' ಆಗಿ ಸ್ಥಾಪಿಸಲಾಯಿತು. ನಂತರ ಇದರ ಕಾರ್ಯವ್ಯಾಪ್ತಿಗೆ ಹೋಮಿಯೋಪತಿಯನ್ನು ಸೇರಿಸಿದ ಹಿನ್ನೆಲೆಯಲ್ಲಿ, 20ನೇ ಮಾರ್ಚ್ 2014 ರಂದು ಇದನ್ನು 'ಭಾರತೀಯ ವೈದ್ಯಕೀಯ ಪದ್ಧತಿ ಮತ್ತು ಹೋಮಿಯೋಪತಿ ಔಷಧಕೋಶ ಆಯೋಗ' ಎಂದು ಮರುನಾಮಕರಣ ಮಾಡಲಾಯಿತು.

ಹೋಮಿಯೋಪತಿಯನ್ನು ಬೆಂಬಲಿಸುವ ಆಯುಷ್ ನೀತಿಗಳು ಮತ್ತು ಯೋಜನೆಗಳು

ಭಾರತ ಸರ್ಕಾರವು ಆಯುಷ್ ಸಚಿವಾಲಯದ ಮೂಲಕ ಶಿಕ್ಷಣ, ಸಂಶೋಧನೆ, ವೈದ್ಯಕೀಯ ಸೇವೆಗಳು ಮತ್ತು ಸಾರ್ವಜನಿಕ ಆರೋಗ್ಯ ಸಮನ್ವಯತೆಯಲ್ಲಿ ಹೋಮಿಯೋಪತಿಯನ್ನು ಬಲಪಡಿಸಲು ಹಲವಾರು ಗುರಿ ಆಧಾರಿತ ಯೋಜನೆಗಳನ್ನು ಜಾರಿಗೆ ತಂದಿದೆ. ಹೋಮಿಯೋಪತಿಯು ಭಾರತದ ಆರೋಗ್ಯ ವ್ಯವಸ್ಥೆಯ ಸುರಕ್ಷಿತ, ಪರಿಣಾಮಕಾರಿ ಮತ್ತು ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟ ಅಂಗವಾಗಿ ಉಳಿಯುವಂತೆ ಮಾಡಲು, ಈ ಉಪಕ್ರಮಗಳು ಚಿಕಿತ್ಸೆಯ ಲಭ್ಯತೆಯನ್ನು ಹೆಚ್ಚಿಸುವ, ಸಾಕ್ಷ್ಯಾಧಾರಿತ ಅಭ್ಯಾಸವನ್ನು ಉತ್ತೇಜಿಸುವ ಮತ್ತು ವೃತ್ತಿಪರ ಹಾಗೂ ಸಾಂಸ್ಥಿಕ ಸಾಮರ್ಥ್ಯವನ್ನು ವೃದ್ಧಿಸುವ ಗುರಿಯನ್ನು ಹೊಂದಿವೆ.

2013-14 ರಿಂದ 2024-25 ರವರೆಗೆ ಹೋಮಿಯೋಪತಿ ಕಾಲೇಜುಗಳು ಮತ್ತು ಸೀಟುಗಳ ಸಂಖ್ಯೆಯಲ್ಲಿ ಕಂಡುಬಂದ ಸ್ಥಿರವಾದ ಬೆಳವಣಿಗೆಯು, ಈ ನಿಯಂತ್ರಕ ಸುಧಾರಣೆಗಳ ಪ್ರಭಾವ ಮತ್ತು ಭಾರತದಲ್ಲಿ ಹೋಮಿಯೋಪತಿ ಶಿಕ್ಷಣದ ಸಾಮರ್ಥ್ಯದ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ.

ಪ್ರಮುಖ ಯೋಜನೆಗಳು ಮತ್ತು ಉಪಕ್ರಮಗಳು:

ರಾಷ್ಟ್ರೀಯ ಆಯುಷ್ ಮಿಷನ್ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಸೇವಾ ವಿತರಣೆ ಮತ್ತು ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ ಹೋಮಿಯೋಪತಿ ಮತ್ತು ಇತರ ಸಾಂಪ್ರದಾಯಿಕ ಪದ್ಧತಿಗಳನ್ನು ಮುಖ್ಯವಾಹಿನಿಯ ಆರೋಗ್ಯ ರಕ್ಷಣೆಗೆ ಸೇರಿಸುವ ಗುರಿಯನ್ನು ಹೊಂದಿರುವ ಒಂದು ಪ್ರಮುಖ ಕಾರ್ಯಕ್ರಮ.

  • ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೋಮಿಯೋಪತಿ ಸೇವೆಗಳ ಸಹ-ಸ್ಥಾಪನೆ.
  • ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹಣಕಾಸಿನ ನೆರವು.
  • ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳೊಂದಿಗೆ ಸಮನ್ವಯತೆ.
  • ದೇಶಾದ್ಯಂತ 1,84,235 ಕ್ಕೂ ಹೆಚ್ಚು 'ಆಯುಷ್ಮಾನ್ ಆರೋಗ್ಯ ಮಂದಿರ'ಗಳನ್ನು ಕಾರ್ಯಾಚರಣೆಗೆ ತರಲಾಗಿದೆ.

ಆಯುಷ್ವಾಸ್ಥ್ಯ ಹೋಮಿಯೋಪತಿ ಸಂಸ್ಥೆಗಳ ಗುಣಮಟ್ಟವನ್ನು ಸುಧಾರಿಸಲು ಮತ್ತು ಸುಧಾರಿತ ಸಂಶೋಧನೆ ಹಾಗೂ ವೈದ್ಯಕೀಯ ಶ್ರೇಷ್ಠತೆಯನ್ನು ಉತ್ತೇಜಿಸಲು ಗಮನಹರಿಸುತ್ತದೆ.

  • ಸಂಶೋಧನೆ ಮತ್ತು ವೈದ್ಯಕೀಯ ತರಬೇತಿಗಾಗಿ 'ಉತ್ಕೃಷ್ಟ ಕೇಂದ್ರ'ಗಳ ಸ್ಥಾಪನೆ.
  • ಸಾಂಸ್ಥಿಕ ಬಲವರ್ಧನೆ ಮತ್ತು ಸಾಮರ್ಥ್ಯ ವೃದ್ಧಿ.
  • ಸಾಕ್ಷ್ಯಾಧಾರಿತ ಸಾರ್ವಜನಿಕ ಆರೋಗ್ಯ ಹಸ್ತಕ್ಷೇಪಗಳು ಮತ್ತು ಸಮುದಾಯ ಸಂಪರ್ಕ ಚಟುವಟಿಕೆಗಳು.

ಆಯುರ್ಜ್ಞಾನ ಹೋಮಿಯೋಪತಿ ವೈದ್ಯರಲ್ಲಿ ವೃತ್ತಿಪರ ಅಭಿವೃದ್ಧಿ ಮತ್ತು ಸಂಶೋಧನಾ ಆಧಾರಿತ ಅಭ್ಯಾಸವನ್ನು ಬೆಂಬಲಿಸುವ ಸಾಮರ್ಥ್ಯ ವೃದ್ಧಿ ಉಪಕ್ರಮ. ಇದು ವೃತ್ತಿಪರ ದೃಷ್ಟಿಕೋನವನ್ನು ಬೆಳೆಸಲು, ಶಿಕ್ಷಕರು ಮತ್ತು ವೈದ್ಯರ ಜ್ಞಾನವನ್ನು ನವೀಕರಿಸಲು ಮತ್ತು ಹೋಮಿಯೋಪತಿ ಬೆಳವಣಿಗೆಗಳನ್ನು ಪ್ರಸಾರ ಮಾಡಲು ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುತ್ತದೆ.

  • ನಿರಂತರ ಶಿಕ್ಷಣ, ಕಾರ್ಯಾಗಾರಗಳು ಮತ್ತು ವಿಚಾರಗೋಷ್ಠಿಗಳು.
  • ಬೋಧನಾ ಸಿಬ್ಬಂದಿ ಅಭಿವೃದ್ಧಿ ಮತ್ತು ಕೌಶಲ್ಯ ವರ್ಧನೆ.
  • ಸಂಶೋಧನಾ ಫಲಿತಾಂಶಗಳ ದಾಖಲಾತಿ ಮತ್ತು ಪ್ರಸಾರ.

ಎಕ್ಸ್‌ಟ್ರಾ ಮ್ಯೂರಲ್ ರಿಸರ್ಚ್ ಯೋಜನೆ ರಾಷ್ಟ್ರೀಯ ಆರೋಗ್ಯ ಆದ್ಯತೆಗಳಿಗೆ ಅನುಗುಣವಾಗಿ, ಧನಸಹಾಯದ ಮೂಲಕ ಹೋಮಿಯೋಪತಿಯ ವೈಜ್ಞಾನಿಕ ದೃಢೀಕರಣವನ್ನು ಉತ್ತೇಜಿಸುವ ಒಂದು ಪ್ರಮುಖ ಉಪಕ್ರಮ.

  • 2–3 ವರ್ಷಗಳ ಅವಧಿಗೆ ₹70 ಲಕ್ಷದವರೆಗೆ ಹಣಕಾಸಿನ ನೆರವು.
  • ವೈದ್ಯಕೀಯ, ಔಷಧೀಯ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಗಳನ್ನು ಒಳಗೊಂಡಿದೆ.
  • ಸಾಂಕ್ರಾಮಿಕ ರೋಗಗಳು, ದೀರ್ಘಕಾಲದ ಕಾಯಿಲೆಗಳು ಮತ್ತು ಸಮಗ್ರ ವಿಧಾನಗಳ ಮೇಲೆ ಗಮನ.
  • ಸಂಶೋಧನಾ ಲೇಖನಗಳ ಪ್ರಕಟಣೆ, ಪೇಟೆಂಟ್‌ಗಳು ಮತ್ತು ಜ್ಞಾನ ಪ್ರಸಾರಕ್ಕೆ ಬೆಂಬಲ ನೀಡುತ್ತದೆ.

ಆಯುಷ್ ಔಷಧಿ ಗುಣವತ್ತಾ ಏವಂ ಉತ್ಪಾದನ್ ಸಂವರ್ಧನ್ ಯೋಜನಾ

ಎಒಜಿಯುಎಸ್‌ವೈ ಯೋಜನೆಯು 'ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್, 1940' ರ ಅಡಿಯಲ್ಲಿ ಭಾರತದಲ್ಲಿ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ  ಔಷಧಿಗಳ ಗುಣಮಟ್ಟವನ್ನು ನಿಯಂತ್ರಿಸುವ ಮತ್ತು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು ಪ್ರಮಾಣೀಕರಣ, ಗುಣಮಟ್ಟದ ಉತ್ಪಾದನೆ ಮತ್ತು ನಿಯಂತ್ರಕ ಅನುಸರಣೆಯನ್ನು ಉತ್ತೇಜಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.

ಪ್ರಮುಖ ಗುರಿಗಳು:

  • ಸಾಂಪ್ರದಾಯಿಕ ಔಷಧಿಗಳ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತನ್ನು ಹೆಚ್ಚಿಸುವುದು.
  • ಗುಣಮಟ್ಟದ ಉತ್ಪಾದನೆ ಮತ್ತು ಪರೀಕ್ಷೆಗಾಗಿ ಮೂಲಸೌಕರ್ಯ ಹಾಗೂ ತಂತ್ರಜ್ಞಾನದ ಮೇಲ್ದರ್ಜೆಗೆ ಬೆಂಬಲ ನೀಡುವುದು.
  • ಸುರಕ್ಷತೆ ಮತ್ತು ಗುಣಮಟ್ಟದ ನಿಯಂತ್ರಣಕ್ಕಾಗಿ ನಿಯಂತ್ರಕ ಚೌಕಟ್ಟುಗಳನ್ನು ಬಲಪಡಿಸುವುದು.
  • ಆಯುಷ್ ಔಷಧಿಗಳ ಮಾನದಂಡಗಳನ್ನು ಸುಧಾರಿಸಲು ಸಹಯೋಗವನ್ನು ಉತ್ತೇಜಿಸುವುದು.

ಫಲಾನುಭವಿಗಳು ಮತ್ತು ಬೆಂಬಲ:

  • ಉತ್ಪಾದಕರು: ಉಪಕರಣಗಳು, ಡಬ್ಲುಎಚ್‌೦-ಹಿಎಂಪಿ ಅನುಸರಣೆ ಮತ್ತು ಸಾಮರ್ಥ್ಯ ವಿಸ್ತರಣೆಗಾಗಿ ಅನುದಾನಗಳು.
  • ಪರೀಕ್ಷಾ ಪ್ರಯೋಗಾಲಯಗಳು: ವಿಶ್ಲೇಷಣಾತ್ಮಕ ಉಪಕರಣಗಳು ಮತ್ತು ಗುಣಮಟ್ಟದ ನಿಯಂತ್ರಣಕ್ಕಾಗಿ ಧನಸಹಾಯ.
  • ಫಾರ್ಮಸಿಗಳು: ಮೂಲಸೌಕರ್ಯ ಬೆಂಬಲ, ಪ್ರಮಾಣೀಕರಣ ಮತ್ತು ನಿಯಂತ್ರಕ ಅನುಸರಣೆ.

ಔಷಧೀಯ ಸಸ್ಯಗಳು ಆಯುಷ್ ಆರೋಗ್ಯ ರಕ್ಷಣಾ ವ್ಯವಸ್ಥೆಯ ಅತ್ಯಗತ್ಯ ಕಚ್ಚಾ ವಸ್ತುಗಳ ಮೂಲವಾಗಿದ್ದು, ಸುಮಾರು 7,000–7,500 ಪ್ರಭೇದಗಳನ್ನು ಒಳಗೊಂಡಿವೆ. ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ವ್ಯಾಪಕವಾಗಿ ಬಳಕೆಯಲ್ಲಿರುವ ಭಾರತದಲ್ಲಿ, ಈ ಪದ್ಧತಿಗಳ ವಿಸ್ತರಣೆಯನ್ನು ಬೆಂಬಲಿಸಲು ಅಧಿಕೃತ ಮತ್ತು ಉತ್ತಮ ಗುಣಮಟ್ಟದ ಔಷಧೀಯ ಸಸ್ಯ ಸಂಪನ್ಮೂಲಗಳ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ, ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿಯ  ಉಪಕ್ರಮಗಳು ಹೋಮಿಯೋಪತಿ ಔಷಧಿಗಳಿಗಾಗಿ ಔಷಧೀಯ ಸಸ್ಯಗಳ ಸುಸ್ಥಿರ ಸಂರಕ್ಷಣೆ, ಕೃಷಿ ಮತ್ತು ಪೂರೈಕೆಯನ್ನು ಖಚಿತಪಡಿಸುತ್ತವೆ. ಗುಣಮಟ್ಟದ ಕಚ್ಚಾ ವಸ್ತುಗಳ ಲಭ್ಯತೆಯನ್ನು ಬಲಪಡಿಸುವ ಮೂಲಕ, ಇದು ಆರೋಗ್ಯ ವಿತರಣೆ ಮತ್ತು ರೈತರು ಹಾಗೂ ಸಂಬಂಧಿತ ಪಾಲುದಾರರ ಜೀವನೋಪಾಯ ಎರಡನ್ನೂ ಬೆಂಬಲಿಸುತ್ತದೆ. ಗುಣಮಟ್ಟದ ಔಷಧೀಯ ಕಚ್ಚಾ ವಸ್ತುಗಳ ಪೂರೈಕೆಯು ಆಯುಷ್ ಪದ್ಧತಿಗಳ ಬೆನ್ನೆಲುಬಾಗಿದ್ದರೂ, ಅವುಗಳ ಪರಿಣಾಮಕಾರಿ ಬಳಕೆಗಾಗಿ ನಿರಂತರ ಜಾಗೃತಿ ಮತ್ತು ಪ್ರಚಾರದ ಪ್ರಯತ್ನಗಳು ಅತ್ಯಗತ್ಯ.

ಮಾಹಿತಿ, ಶಿಕ್ಷಣ ಮತ್ತು ಸಂವಹನ ಉಪಕ್ರಮವು ವ್ಯವಸ್ಥಿತ ಸಂವಹನ ತಂತ್ರಗಳ ಮೂಲಕ ಹೋಮಿಯೋಪತಿಯ ಜಾಗೃತಿ ಮತ್ತು ಪ್ರಚಾರವನ್ನು ಹೆಚ್ಚಿಸುತ್ತದೆ. ಇದು ಹೋಮಿಯೋಪತಿಯ ವೆಚ್ಚ-ಪರಿಣಾಮಕಾರಿತ್ವ ಮತ್ತು ಪ್ರಯೋಜನಗಳನ್ನು ಉತ್ತೇಜಿಸುತ್ತದೆ. ಸಂಶೋಧನಾ ಫಲಿತಾಂಶಗಳನ್ನು ಪ್ರಸಾರ ಮಾಡುವುದು, ಆರೋಗ್ಯ ಅಭಿಯಾನಗಳು ಮತ್ತು ವಿಚಾರಗೋಷ್ಠಿಗಳನ್ನು ಆಯೋಜಿಸುವುದು, ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ರೋಗ ತಡೆಗಟ್ಟುವ ಹಾಗೂ ಆರೋಗ್ಯ ವರ್ಧಕ ಪದ್ಧತಿಗಳನ್ನು ಪ್ರೋತ್ಸಾಹಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ.

ತಜ್ಞರ ವಿನಿಮಯ, ಶೈಕ್ಷಣಿಕ ಸಹಯೋಗ ಮತ್ತು ವಿದ್ಯಾರ್ಥಿವೇತನಗಳ ಮೂಲಕ ಜಾಗತಿಕ ಮನ್ನಣೆಯನ್ನು ಉತ್ತೇಜಿಸುವ 'ಆಯುಷ್‌ನಲ್ಲಿ ಅಂತರಾಷ್ಟ್ರೀಯ ಸಹಕಾರದ ಪ್ರಚಾರ' ಉಪಕ್ರಮದೊಂದಿಗೆ ಸೇರಿ, ಈ ಎಲ್ಲಾ ಪ್ರಯತ್ನಗಳು ಒಟ್ಟಾರೆಯಾಗಿ ಆಯುಷ್ ಪದ್ಧತಿಗಳ ದೇಶೀಯ ಅಡಿಪಾಯ ಮತ್ತು ಅಂತರಾಷ್ಟ್ರೀಯ ಉಪಸ್ಥಿತಿ ಎರಡನ್ನೂ ಬಲಪಡಿಸುತ್ತವೆ.

ಸಾಂಕ್ರಾಮಿಕ ರೋಗಗಳ ಸಿದ್ಧತೆ ಮತ್ತು ಪ್ರತಿಕ್ರಿಯೆಯಲ್ಲಿ ಹೋಮಿಯೋಪತಿ: ಸಾಂಕ್ರಾಮಿಕ ರೋಗಗಳ ಸಿದ್ಧತೆಯಲ್ಲಿ ಹೋಮಿಯೋಪತಿಯು ತಡೆಗಟ್ಟುವಿಕೆ, ಪ್ರಚಾರ ಮತ್ತು ಪೂರಕ ಚಿಕಿತ್ಸಾ ತಂತ್ರಗಳನ್ನು ಬಳಸುವ ಮೂಲಕ ಒಂದು ಪೂರಕ ಸಾಧನವಾಗಿ ಹೊರಹೊಮ್ಮಿದೆ. ಕೇಂದ್ರ ಹೋಮಿಯೋಪತಿ ಸಂಶೋಧನಾ ಮಂಡಳಿಯು ಭಾರತದಾದ್ಯಂತ ಇರುವ ತನ್ನ 33 ಸಂಸ್ಥೆಗಳು/ಘಟಕಗಳ ಮೂಲಕ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಸಂಶೋಧನೆ ಮತ್ತು ವೈದ್ಯಕೀಯ ಪರಿಹಾರ ಕಾರ್ಯಗಳನ್ನು ನಡೆಸುತ್ತಿದೆ.

ಜಾಗತಿಕ ಮಟ್ಟದಲ್ಲಿ ಹೋಮಿಯೋಪತಿಯ ಯಶಸ್ಸಿನ ಕಥೆಗಳು

ಭಾರತ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಂಕ್ರಾಮಿಕ ರೋಗಗಳ ನಿರ್ವಹಣೆಯಲ್ಲಿ ಹೋಮಿಯೋಪತಿ ಚಿಕಿತ್ಸಾ ವಿಧಾನಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಹೋಮಿಯೋಪತಿ ಸಂಶೋಧನಾ ಮಂಡಳಿಯು ಪ್ರಮುಖ ಪಾತ್ರ ವಹಿಸಿದೆ.

ಅದರ ಪ್ರಮುಖ ಉದಾಹರಣೆಗಳು ಇಲ್ಲಿವೆ:

  • ಭಾರತ – ಜಪಾನೀಸ್ ಎನ್ಸೆಫಾಲಿಟಿಸ್/AES (ಉತ್ತರ ಪ್ರದೇಶ): 96 ಹಳ್ಳಿಗಳ 3 ಲಕ್ಷಕ್ಕೂ ಹೆಚ್ಚು ಜನರಿಗೆ ಬೆಲ್ಲಡೋನ್ನಾ 200 ಔಷಧಿಯನ್ನು ವಿತರಿಸಲಾಯಿತು. ಇದು ಎನ್ಸೆಫಾಲಿಟಿಸ್ (ಮಿದುಳು ಜ್ವರ) ಪ್ರಕರಣಗಳನ್ನು ತಡೆಗಟ್ಟಲು ಮತ್ತು ಸಾಮಾನ್ಯ ಚಿಕಿತ್ಸೆಯೊಂದಿಗೆ ಸಂಯೋಜಿಸಿದಾಗ ಉತ್ತಮ ಫಲಿತಾಂಶಗಳನ್ನು ನೀಡಲು ಸಹಾಯ ಮಾಡಿತು.
  • ಭಾರತ – ಚಿಕೂನ್‌ಗುನ್ಯಾ ತಡೆಗಟ್ಟುವಿಕೆ (ಕೇರಳ, 2007): 19,750 ಜನರು ಬ್ರಯೋನಿಯಾ ಆಲ್ಬಾ 30C ಔಷಧಿಯನ್ನು ಪಡೆದರು. ಇದರ ಪರಿಣಾಮವಾಗಿ ರೋಗದ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿತು. ಜ್ವರದ ಪ್ರಕರಣಗಳಲ್ಲಿ ಸುಮಾರು 84.5% ಮತ್ತು ದೀರ್ಘಕಾಲದ ಕೀಲು ನೋವಿನ ಪ್ರಕರಣಗಳಲ್ಲಿ ಸುಮಾರು 90% ರಷ್ಟು ವೇಗವಾಗಿ ಗುಣಮುಖರಾದರು.
  • ಕ್ಯೂಬಾ – ಡೆಂಗ್ಯೂ ನಿರ್ವಹಣೆ: ಹೋಮಿಯೋಪತಿ ಸಂಯೋಜಿತ ಔಷಧದೊಂದಿಗೆ (ಬ್ರಯೋನಿಯಾ ಆಲ್ಬಾ, ಯುಪಟೋರಿಯಂ ಪರ್ಫೋಲಿಯಟಂ, ಗೆಲ್ಸೆಮಿಯಮ್ ಮತ್ತು ಡೆಂಗ್ಯೂ ನೋಸೋಡ್) ಚಿಕಿತ್ಸೆ ಪಡೆದ 25,000 ರೋಗಿಗಳಲ್ಲಿ ಗಮನಾರ್ಹ ವೈದ್ಯಕೀಯ ಸುಧಾರಣೆ ಕಂಡುಬಂದಿತು ಮತ್ತು ಅವರ ಆಸ್ಪತ್ರೆಯ ವಾಸ್ತವ್ಯದ ಅವಧಿಯು ಕಡಿಮೆಯಾಯಿತು.
  • ಬಹು-ರೋಗ ಸಾಂಕ್ರಾಮಿಕ ಶಿಬಿರಗಳು (ಭಾರತ): ಡೆಂಗ್ಯೂ, ಮಲೇರಿಯಾ, ಟೈಫಾಯಿಡ್, ದಡಾರ, ಮೆನಿಂಜೈಟಿಸ್ ಮತ್ತು ಕಣ್ಣಿನ ಉರಿಯೂತ ರೋಗಗಳಿಗೆ ರೋಗಲಕ್ಷಣ-ಆಧಾರಿತ ಮತ್ತು 'ಜೀನಸ್ ಎಪಿಡೆಮಿಕಸ್'  ಔಷಧಿಗಳನ್ನು ಬಳಸುವ ಮೂಲಕ ಸಿಸಿಆರ್‌ಎಚ್‌ ಚಿಕಿತ್ಸಾ ಕಾರ್ಯಕ್ರಮಗಳನ್ನು ನಡೆಸಿತು.
  • ಕೋವಿಡ್-19 ಪ್ರತಿಕ್ರಿಯೆ (ಭಾರತ): ಆಯುಷ್ ಸಚಿವಾಲಯದ ಬೆಂಬಲದೊಂದಿಗೆ, 136 ಕೇಂದ್ರಗಳ ಮೂಲಕ ಸುಮಾರು 5 ಲಕ್ಷ ಜನರಿಗೆ ಆರ್ಸೆನಿಕಮ್ ಆಲ್ಬಮ್ 30C ಔಷಧಿಯನ್ನು ರೋಗನಿರೋಧಕವಾಗಿ ನೀಡಲಾಯಿತು.

ಮುಕ್ತಾಯ: ಸಂಪ್ರದಾಯ ಮತ್ತು ರೂಪಾಂತರದ ಸಂಗಮ

ಭಾರತದಲ್ಲಿ ಹೋಮಿಯೋಪತಿಯು ಒಂದು ವಿಶಿಷ್ಟ ಪಯಣವನ್ನು ಪ್ರತಿಬಿಂಬಿಸುತ್ತದೆ, ಇಲ್ಲಿ ಕಾಲದ ಪರೀಕ್ಷೆಗೆ ಒಳಪಟ್ಟ ತತ್ವಗಳು ಸಮಕಾಲೀನ ಪ್ರಗತಿಯೊಂದಿಗೆ ಸುಸೂತ್ರವಾಗಿ ಬೆರೆತಿವೆ. ಸಮಗ್ರ ಗುಣಪಡಿಸುವಿಕೆಯ ಶ್ರೀಮಂತ ಸಂಪ್ರದಾಯದಲ್ಲಿ ಬೇರೂರಿರುವ ಈ ಪದ್ಧತಿಯು, ವೈಜ್ಞಾನಿಕ ಸಂಶೋಧನೆ, ಬಲವರ್ಧಿತ ನಿಯಂತ್ರಣ ಮತ್ತು ವಿಸ್ತರಿಸುತ್ತಿರುವ ಶೈಕ್ಷಣಿಕ ಸಾಮರ್ಥ್ಯದಿಂದಾಗಿ ಇಂದು ಅರ್ಥಪೂರ್ಣ ರೂಪಾಂತರವನ್ನು ಹೊಂದುತ್ತಿದೆ. ಸಂಪ್ರದಾಯ ಮತ್ತು ಆಧುನೀಕರಣದ ಈ ಸಂಗಮವು ಇಂದಿನ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಹೋಮಿಯೋಪತಿಯ ವಿಶ್ವಾಸಾರ್ಹತೆ ಮತ್ತು ಪ್ರಸ್ತುತತೆಯನ್ನು ಹೆಚ್ಚಿಸಿದೆ.

ಕೇಂದ್ರ ಹೋಮಿಯೋಪತಿ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಹೋಮಿಯೋಪತಿ ಆಯೋಗದಂತಹ ಸಂಸ್ಥೆಗಳು ಸಾಕ್ಷ್ಯಾಧಾರಿತ ಅಭ್ಯಾಸ, ಗುಣಮಟ್ಟದ ಮಾನದಂಡಗಳು ಮತ್ತು ವೃತ್ತಿಪರ ಶ್ರೇಷ್ಠತೆಯನ್ನು ಉತ್ತೇಜಿಸುವ ಮೂಲಕ ಈ ಬದಲಾವಣೆಗೆ ನಿದರ್ಶನವಾಗಿವೆ. ಅದೇ ಸಮಯದಲ್ಲಿ, ಸಾರ್ವಜನಿಕ ಆರೋಗ್ಯ ಉಪಕ್ರಮಗಳು ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಕ್ರಿಯೆಯಲ್ಲಿ ಹೋಮಿಯೋಪತಿಯನ್ನು ಸೇರಿಸಿರುವುದು, ಸಮಕಾಲೀನ ಆರೋಗ್ಯ ಸವಾಲುಗಳನ್ನು ಎದುರಿಸುವಲ್ಲಿ ಅದರ ವಿಕಸನಗೊಳ್ಳುತ್ತಿರುವ ಪಾತ್ರವನ್ನು ಉಲ್ಲೇಖಿಸುತ್ತದೆ.

ಮುಂದಿನ ದಿನಗಳಲ್ಲಿ, ಭಾರತದಲ್ಲಿ ಹೋಮಿಯೋಪತಿಯು ಹೆಚ್ಚು ಒಳಗೊಳ್ಳುವ, ಸುಲಭವಾಗಿ ಲಭ್ಯವಾಗುವ ಮತ್ತು ಸಮಗ್ರವಾದ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಕೊಡುಗೆ ನೀಡಲು ಸನ್ನದ್ಧವಾಗಿದೆ.

References

Ministry of Ayush

https://ayush.gov.in

https://elms.ayush.gov.in/homoeopathy

About PCIM&H - PHARMACOPOEIA COMMISSION FOR INDIAN MEDICINE & HOMOEOPATHY (Government of India)  

https://ccrhindia.ayush.gov.in/emr?language_content_entity=en

Central Council for Research in Homoeopathy

https://ccrhindia.ayush.gov.in/

 https://ccrhindia.ayush.gov.in/publications/annual-reports

https://ccrhindia.ayush.gov.in/publications/annual-reports

https://whdccrh.org/about.html

https://homeopathy.delhi.gov.in/homeopathy/origin-and-growth-homeopathy-india

https://www.google.com/url?sa=t&source=web&rct=j&opi=89978449&url=https://ayush.telangana.gov.in/open_record_view.php%3FID%3D150&ved=2ahUKEwjF7Oyc6caTAxVWTmwGHZ_FGjUQFnoECBoQAQ&usg=AOvVaw2IYzqHzr6hHSsiz_CI_WDq

https://www.instagram.com/p/DIQLCJ9ptKd/?img_index=4

 Press Information Bureau

https://www.pib.gov.in/newsite/PrintRelease.aspx?relid=133271&utm_source=chatgpt.com&reg=3&lang=2

Click here to see pdf 

******

(Explainer ID: 158092) आगंतुक पटल : 14
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Manipuri , Gujarati , Telugu