• Sitemap
  • Advance Search
Infrastructure

ಭಾರತದ ಇಂಧನ ವಲಯ

ಪ್ರಗತಿ, ಸುಧಾರಣೆ ಮತ್ತು ಮುಂದಿನ ಹಾದಿ

Posted On: 18 MAR 2026 4:05PM

ಪ್ರಮುಖ ಮುಖ್ಯಾಂಶಗಳು

  • ಜನವರಿ 2026 ರ ವೇಳೆಗೆ ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯವು 520.51 GW ತಲುಪಿದೆ; ವಿದ್ಯುತ್ ಕೊರತೆಯು ಹಣಕಾಸು ವರ್ಷ 2014 ರಲ್ಲಿ ಶೇ. 4.2 ರಷ್ಟಿತ್ತು, ಇದು ಡಿಸೆಂಬರ್ 2025 ರ ವೇಳೆಗೆ ಶೇ. 0.03 ಕ್ಕೆ ಇಳಿಕೆಯಾಗಿದೆ.
  • ₹1.85 ಲಕ್ಷ ಕೋಟಿ ಹೂಡಿಕೆಯು 18,374 ಹಳ್ಳಿಗಳ ವಿದ್ಯುದೀಕರಣಕ್ಕೆ ಮತ್ತು 2.86 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಕಾರಿಯಾಗಿದೆ.
  • ಬಾಕಿ ಇರುವ ಒಟ್ಟು ಪಾವತಿಗಳು ₹1.4 ಲಕ್ಷ ಕೋಟಿ (ಜೂನ್ 2022) ನಿಂದ ₹4,109 ಕೋಟಿಗೆ (ಫೆಬ್ರವರಿ 2026) ಇಳಿಕೆಯಾಗಿದೆ; ಅಲ್ಲದೆ, ವಿದ್ಯುತ್ ವಿತರಣಾ ಕಂಪನಿಗಳು (DISCOMs) ಹಣಕಾಸು ವರ್ಷ 2025 ರಲ್ಲಿ ₹2,701 ಕೋಟಿ ಲಾಭ ದಾಖಲಿಸಿವೆ.
  • ಸ್ಮಾರ್ಟ್ ಮೀಟರಿಂಗ್‌ ವ್ಯವಸ್ಥೆಯ ಜಾರಿಯು ಇಂಧನ ವಲಯವನ್ನು ಹೆಚ್ಚು ಡಿಜಿಟಲ್, ಪಾರದರ್ಶಕ ಮತ್ತು ಸಹಭಾಗಿತ್ವದ ಭವಿಷ್ಯಕ್ಕಾಗಿ ಸಿದ್ಧಪಡಿಸುತ್ತಿದೆ.

ಪೀಠಿಕೆ

ವಿದ್ಯುತ್ ಆಧುನಿಕ ಜೀವನದ ಅತ್ಯಂತ ಅದೃಶ್ಯವಾದರೂ ಅತ್ಯಗತ್ಯವಾದ ಅಂಶಗಳಲ್ಲಿ ಒಂದಾಗಿದೆ. ದೀಪಗಳು ಬೆಳಗುತ್ತವೆ, ನೀರಾವರಿ ಪಂಪ್‌ಗಳು ಚಲಿಸುತ್ತವೆ, ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತವೆ, ಆಸ್ಪತ್ರೆಗಳು ಸೇವೆ ನೀಡುತ್ತವೆ ಮತ್ತು ಡಿಜಿಟಲ್ ಜಾಲಗಳು ಸಂಪರ್ಕದಲ್ಲಿರುತ್ತವೆ. ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯ ದೇಶಕ್ಕೆ ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಸಾರ್ವತ್ರಿಕ ವಿದ್ಯುತ್ ಲಭ್ಯತೆಯನ್ನು ಖಚಿತಪಡಿಸುವುದು ತಾಂತ್ರಿಕ ಸವಾಲು ಮತ್ತು ಆಡಳಿತಾತ್ಮಕ ಸಾಧನೆ ಎರಡೂ ಹೌದು. ಕಳೆದ ದಶಕದಲ್ಲಿ, ಭಾರತದ ಇಂಧನ ವಲಯವು ಪ್ರಮುಖ ರಚನಾತ್ಮಕ ಬದಲಾವಣೆಯ ಅವಧಿಗೆ ಸಾಕ್ಷಿಯಾಗಿದೆ; ಇದು ಸಾಕಷ್ಟು ಲಭ್ಯತೆ, ವಿಸ್ತರಿತ ಸಾಮರ್ಥ್ಯ ಮತ್ತು ಸುಧಾರಿತ ವಿಶ್ವಾಸಾರ್ಹತೆಯಿಂದ ಕೂಡಿದ ವ್ಯವಸ್ಥೆಯಾಗಿ ಪರಿವರ್ತನೆಯಾಗಿದೆ. ಇದು ವರ್ಷಗಳ ನಿರಂತರ ಹೂಡಿಕೆ, ಸಾಂಸ್ಥಿಕ ಬಲವರ್ಧನೆ, ನಿಯಂತ್ರಕ ಶಿಸ್ತು ಮತ್ತು ನೀತಿಗಳ ಸುಸ್ಥಿರತೆಯನ್ನು ಪ್ರತಿಫಲಿಸುತ್ತದೆ.

ಭಾರತ್ ಎಲೆಕ್ಟ್ರಿಸಿಟಿ ಸಮ್ಮಿಟ್ 2026 ವಿದ್ಯುತ್ ಮತ್ತು ಇಂಧನ ಕ್ಷೇತ್ರಕ್ಕೆ ಮೀಸಲಾದ ಜಾಗತಿಕ ಮಟ್ಟದ ಪ್ರಮುಖ ಪ್ರದರ್ಶನ ಮತ್ತು ಸಮ್ಮೇಳನವಾದ 'ಭಾರತ್ ಎಲೆಕ್ಟ್ರಿಸಿಟಿ ಸಮ್ಮಿಟ್ 2026', ನವದೆಹಲಿಯ ಯಶೋಭೂಮಿಯಲ್ಲಿ 2026ರ ಮಾರ್ಚ್ 19 ರಿಂದ 22 ರವರೆಗೆ ನಡೆಯಲಿದೆ.

ವಿದ್ಯುದೀಕರಣದ ಬೆಳವಣಿಗೆ. ಸುಸ್ಥಿರತೆಯ ಸಬಲೀಕರಣ. ಜಾಗತಿಕ ಸಂಪರ್ಕ” ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ನಡೆಯಲಿರುವ ಈ ನಾಲ್ಕು ದಿನಗಳ ಸಮ್ಮೇಳನವು, ಜಾಗತಿಕ ಇಂಧನ ಪರಿವರ್ತನೆಯಲ್ಲಿ ಭಾರತದ ನಾಯಕತ್ವವನ್ನು ಎತ್ತಿ ತೋರಿಸುತ್ತದೆ. ಜೊತೆಗೆ ವಿದ್ಯುತ್ ವಲಯದ ಪ್ರಮುಖ ಸವಾಲುಗಳು ಮತ್ತು ಉದಯೋನ್ಮುಖ ಅವಕಾಶಗಳನ್ನು ಇದು ಚರ್ಚಿಸಲಿದೆ. ಈ ಕಾರ್ಯಕ್ರಮವು ವಿವಿಧ ವಲಯಗಳ ನಡುವೆ ಸಂವಾದವನ್ನು ಉತ್ತೇಜಿಸಲು, ಅಂತರಾಷ್ಟ್ರೀಯ ಸಹಕಾರವನ್ನು ಬಲಪಡಿಸಲು ಮತ್ತು ವಿಶ್ವಾದ್ಯಂತ ಸುಸ್ಥಿರ ಇಂಧನ ವ್ಯವಸ್ಥೆಗಳನ್ನು ಮುನ್ನಡೆಸಲು ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಈ ಸಮ್ಮೇಳನವು ಭಾರತ ಮತ್ತು ಜಗತ್ತಿನಾದ್ಯಂತದ ನೀತಿ ನಿರೂಪಕರು, ಉದ್ಯಮದ ಮುಖಂಡರು, ನಿಯಂತ್ರಕರು, ಹೂಡಿಕೆದಾರರು, ಶಿಕ್ಷಣ ತಜ್ಞರು, ನಾವೀನ್ಯಕಾರರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಸೇರಿದಂತೆ ವೈವಿಧ್ಯಮಯ ಸ್ಟೇಕ್‌ಹೋಲ್ಡರ್‌ಗಳನ್ನು (Stakeholders) ಒಂದುಗೂಡಿಸಲಿದೆ. ಇದು 100ಕ್ಕೂ ಹೆಚ್ಚು ಉನ್ನತ ಮಟ್ಟದ ಗೋಷ್ಠಿಗಳು, ಪರಿಣಿತರ ನೇತೃತ್ವದ ಪ್ಯಾನಲ್ ಚರ್ಚೆಗಳು, ವಿಷಯಾಧಾರಿತ ಪೆವಿಲಿಯನ್‌ಗಳು ಮತ್ತು ಇಡೀ ವಿದ್ಯುತ್ ಹಾಗೂ ಶುದ್ಧ ಇಂಧನದ ಮೌಲ್ಯ ಸರಪಳಿಯನ್ನು ಒಳಗೊಂಡ ತಾಂತ್ರಿಕ ಪ್ರದರ್ಶನಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.

100ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಸೇರಿದಂತೆ 500ಕ್ಕೂ ಹೆಚ್ಚು ಪ್ರದರ್ಶಕರು, 25,000ಕ್ಕೂ ಹೆಚ್ಚು ಪಾಲ್ಗೊಳ್ಳುವವರು, 80ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 1,000ಕ್ಕೂ ಹೆಚ್ಚು ನಿಯೋಗಿಗಳು ಮತ್ತು 300ಕ್ಕೂ ಹೆಚ್ಚು ವಕ್ತಾರರ ಭಾಗವಹಿಸುವಿಕೆಯೊಂದಿಗೆ, ಈ ಸಮ್ಮೇಳನವು ಜ್ಞಾನ ವಿನಿಮಯ, ಸಹಯೋಗ ಮತ್ತು ವ್ಯವಹಾರದ ತೊಡಗಿಸಿಕೊಳ್ಳುವಿಕೆಗೆ ಒಂದು ಕ್ರಿಯಾತ್ಮಕ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

 2032ರ ವೇಳೆಗೆ ವಿದ್ಯುತ್ ಉತ್ಪಾದನೆ, ಪ್ರಸರಣ, ವಿತರಣೆ ಮತ್ತು ಇಂಧನ ಸಂಗ್ರಹಣೆಯಾದ್ಯಂತ ₹50 ಲಕ್ಷ ಕೋಟಿಗೂ ಮೀರಿದ ಹೂಡಿಕೆಯ ಅವಕಾಶಗಳೊಂದಿಗೆ, ಈ ಸಮ್ಮೇಳನವು ಭಾರತದ ವಿದ್ಯುತ್ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು, ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಶ್ರಮಿಸುತ್ತದೆ.

ವ್ಯಾಪ್ತಿ ಹೆಚ್ಚಳ: ಸಾಮರ್ಥ್ಯದ ವಿಸ್ತರಣೆ ಮತ್ತು ರಾಷ್ಟ್ರೀಯ ಗ್ರಿಡ್‌ನ ಬಲವರ್ಧನೆ

ಭಾರತದ ಆರ್ಥಿಕತೆಯು ಬೆಳೆಯುತ್ತಿರುವಂತೆ ಮತ್ತು ಜೀವನಮಟ್ಟವು ಸುಧಾರಿಸುತ್ತಿರುವಂತೆ, ಮನೆಗಳು, ಉದ್ಯಮಗಳು, ಕೃಷಿ ಮತ್ತು ಸೇವಾ ವಲಯಗಳಲ್ಲಿ ವಿದ್ಯುತ್ ಬೇಡಿಕೆಯು ನಿರಂತರವಾಗಿ ಹೆಚ್ಚಾಗುತ್ತಿದೆ. ಈ ಬೃಹತ್ ಬೇಡಿಕೆಯನ್ನು ಪೂರೈಸಲು ಕೇವಲ ಹೆಚ್ಚಿನ ವಿದ್ಯುತ್ ಉತ್ಪಾದನೆಯಷ್ಟೇ ಅಲ್ಲದೆ, ವಿಶಾಲವಾದ ಭೌಗೋಳಿಕ ಪ್ರದೇಶಗಳಿಗೆ ಅದನ್ನು ತಲುಪಿಸುವ ಸಾಮರ್ಥ್ಯವಿರುವ ವ್ಯವಸ್ಥೆಯ ಅಗತ್ಯವಿದೆ. ಈ ವ್ಯಾಪ್ತಿಯನ್ನು ನಿರ್ಮಿಸುವುದರ ಮೇಲೆ ಗಮನಹರಿಸಲಾಗುತ್ತಿದ್ದು, ಸಾಂಪ್ರದಾಯಿಕ ಮತ್ತು ನವೀಕರಿಸಬಹುದಾದ ಮೂಲಗಳಾದ್ಯಂತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಸ್ಥಿರವಾಗಿ ವಿಸ್ತರಿಸುತ್ತಿದೆ.

2025-26ರ ಹಣಕಾಸು ವರ್ಷದಲ್ಲಿ (ಜನವರಿ 31, 2026ರವರೆಗೆ), ಎಲ್ಲಾ ಮೂಲಗಳಿಂದ ದಾಖಲೆಯ 52,537 MW ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೇರಿಸಲಾಗಿದೆ. ಇದರಲ್ಲಿ 39,657 MW ನವೀಕರಿಸಬಹುದಾದ ಇಂಧನದಿಂದ ಬಂದಿದ್ದು, ಇದರಲ್ಲಿ 34,955 MW ಸೌರಶಕ್ತಿ ಮತ್ತು 4,613 MW ಪವನ ಶಕ್ತಿ ಸೇರಿದೆ. ಇದು ಒಂದೇ ವರ್ಷದಲ್ಲಿ ಸಾಧಿಸಲಾದ ಅತಿ ಹೆಚ್ಚಿನ ಸಾಮರ್ಥ್ಯದ ಸೇರ್ಪಡೆಯಾಗಿದ್ದು, 2024-25ರ ಹಣಕಾಸು ವರ್ಷದಲ್ಲಿ ಸಾಧಿಸಲಾಗಿದ್ದ 34,054 MW ನ ಹಿಂದಿನ ದಾಖಲೆಯನ್ನು ಮೀರಿಸಿದೆ.

ಈ ಸೇರ್ಪಡೆಯು ದೇಶದ ಒಟ್ಟು ಸ್ಥಾಪಿತ ಸಾಮರ್ಥ್ಯದಲ್ಲಿ ಶೇಕಡಾ 11 ಕ್ಕಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿದೆ. ಜನವರಿ 2026 ರ ಹೊತ್ತಿಗೆ, ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 520.51 GW ತಲುಪಿದೆ. ಈ ನಿರಂತರ ಬೆಳವಣಿಗೆಯು ದೇಶದ ಬೆಳೆಯುತ್ತಿರುವ ಬಳಕೆಯ ಅಗತ್ಯಗಳನ್ನು ಪೂರೈಸಲು ಮತ್ತು ಆರ್ಥಿಕ ವೇಗವನ್ನು ಬೆಂಬಲಿಸಲು ಭಾರತವು ಸದೃಢ ಸ್ಥಿತಿಯಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ.

ಕೇವಲ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರ ಸಾಕಾಗುವುದಿಲ್ಲ. ವಿದ್ಯುತ್ ವ್ಯವಸ್ಥೆಯ ಪ್ರಸರಣ ಮತ್ತು ಪರಿವರ್ತನೆಯ ಬೆನ್ನೆಲುಬನ್ನು ಬಲಪಡಿಸುವುದಕ್ಕೂ ಸಮಾನ ಗಮನ ನೀಡಲಾಗಿದೆ. ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ವಿವಿಧ ರಾಜ್ಯಗಳ ಲೋಡ್ ಕೇಂದ್ರಗಳಿಗೆ ಸಮರ್ಥವಾಗಿ ವಿದ್ಯುತ್ ವರ್ಗಾಯಿಸಲು ಹೊಸ ಉಪಕೇಂದ್ರಗಳು, ಮೇಲ್ದರ್ಜೆಗೇರಿಸಿದ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ವಿಸ್ತರಿತ ಉನ್ನತ-ಸಾಮರ್ಥ್ಯದ ಪ್ರಸರಣ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೂಡಿಕೆಗಳು ಅಡೆತಡೆಗಳನ್ನು ಕಡಿಮೆ ಮಾಡುತ್ತವೆ, ಗ್ರಿಡ್ ಸ್ಥಿರತೆಯನ್ನು ಸುಧಾರಿಸುತ್ತವೆ ಮತ್ತು ರಾಷ್ಟ್ರೀಯ ಗ್ರಿಡ್‌ಗೆ ವಿವಿಧ ಇಂಧನ ಮೂಲಗಳ ಸುಗಮ ಏಕೀಕರಣವನ್ನು ಸಾಧ್ಯವಾಗಿಸುತ್ತವೆ.

ವಿಶ್ವದ ಅತಿದೊಡ್ಡ ಸಿಂಕ್ರೊನಸ್ ರಾಷ್ಟ್ರೀಯ ಗ್ರಿಡ್ ಆಗಿರುವ ಭಾರತದ ರಾಷ್ಟ್ರೀಯ ಪ್ರಸರಣ ಜಾಲವು ಪ್ರಮುಖ ಮೈಲಿಗಲ್ಲನ್ನು ದಾಟಿದೆ. ಇದು ಈಗ 5 ಲಕ್ಷ ಸರ್ಕ್ಯೂಟ್ ಕಿಲೋಮೀಟರ್ (ckm) ಪ್ರಸರಣ ಮಾರ್ಗಗಳನ್ನು ಮೀರಿದ್ದು, ಒಟ್ಟು ಪರಿವರ್ತನಾ ಸಾಮರ್ಥ್ಯವು 1,407 ಗಿಗಾವೋಲ್ಟ್ ಆಂಪಿಯರ್ ತಲುಪಿದೆ. ಉತ್ಪಾದನೆ ಮತ್ತು ಜಾಲಗಳೆರಡನ್ನೂ ಏಕಕಾಲದಲ್ಲಿ ಬಲಪಡಿಸುವ ಮೂಲಕ, ಭಾರತವು ಇಂದಿನ ಬೆಳವಣಿಗೆಗೆ ಮಾತ್ರವಲ್ಲದೆ ಭವಿಷ್ಯದ ಅಗತ್ಯಗಳನ್ನೂ ಬೆಂಬಲಿಸಬಲ್ಲ ವಿದ್ಯುತ್ ವಲಯಕ್ಕೆ ಬಲವಾದ ಅಡಿಪಾಯವನ್ನು ಹಾಕಿದೆ.

ಕೊರತೆಯಿಂದ ಸಮತೋಲನದತ್ತ: ಭಾರತದಾದ್ಯಂತ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ

ಭಾರತದ ವಿದ್ಯುತ್ ವಲಯದ ರೂಪಾಂತರವು ಮುಖ್ಯವಾಗಿ ಎರಡು ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ: ವಿದ್ಯುತ್ ಕೊರತೆಯ ನಿರ್ಮೂಲನೆ ಮತ್ತು ಪ್ರತಿ ಮನೆಗೂ ವಿದ್ಯುತ್ ಸಂಪರ್ಕದ ವಿಸ್ತರಣೆ. ಒಟ್ಟಾರೆಯಾಗಿ, ಇವು ಕೇವಲ ಕೊರತೆಯನ್ನು ನಿಭಾಯಿಸುವುದರಿಂದ ಹಿಡಿದು ಎಲ್ಲರಿಗೂ ಭರವಸೆಯ ವಿದ್ಯುತ್ ಲಭ್ಯತೆಯನ್ನು ಖಚಿತಪಡಿಸುವವರೆಗಿನ ಬದಲಾವಣೆಯನ್ನು ಗುರುತಿಸುತ್ತವೆ.

ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು

ಒಂದು ದಶಕದ ಹಿಂದೆ, ವಿದ್ಯುತ್ ಕೊರತೆಯು ಆರ್ಥಿಕ ಚಟುವಟಿಕೆ ಮತ್ತು ದೈನಂದಿನ ಜೀವನ ಎರಡಕ್ಕೂ ಪದೇ ಪದೇ ಅಡ್ಡಿಯಾಗುತ್ತಿತ್ತು. ಲೋಡ್ ಶೆಡ್ಡಿಂಗ್‌ಗಳು (ವಿದ್ಯುತ್ ಕಡಿತ) ಉತ್ಪಾದನೆ, ನೀರಾವರಿ, ಆರೋಗ್ಯ ಸೇವೆಗಳು ಮತ್ತು ಮನೆಗಳ ದಿನಚರಿಗೆ ತೊಂದರೆ ಉಂಟುಮಾಡುತ್ತಿದ್ದವು. ಆದ್ದರಿಂದ, ಹೆಚ್ಚುತ್ತಿರುವ ಬೇಡಿಕೆ ಮತ್ತು ಲಭ್ಯವಿರುವ ಪೂರೈಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿತ್ತು.

ಉತ್ಪಾದನೆ ಮತ್ತು ಪ್ರಸರಣ ಸಾಮರ್ಥ್ಯಗಳಲ್ಲಿನ ನಿರಂತರ ಹೆಚ್ಚಳ, ಸುಧಾರಿತ ಯೋಜನೆ ಮತ್ತು ಬಲವಾದ ಗ್ರಿಡ್ ನಿರ್ವಹಣೆಯ ಮೂಲಕ, ಈ ಅಂತರವು ಸ್ಥಿರವಾಗಿ ಕಡಿಮೆಯಾಗಿದೆ. 2025–26ರ ಹಣಕಾಸು ವರ್ಷದಲ್ಲಿ, ಭಾರತವು 242.49 ಗಿಗಾವ್ಯಾಟ್ (GW) ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಿದೆ. ವಿದ್ಯುತ್ ಕೊರತೆಯು 2013-14ರಲ್ಲಿ ಶೇ. 4.2 ರಷ್ಟಿತ್ತು, ಅದು ಡಿಸೆಂಬರ್ 2025 ರ ವೇಳೆಗೆ ಗಮನಾರ್ಹವಾಗಿ ಶೇ. 0.03 ಕ್ಕೆ ಇಳಿದಿದೆ. ಇದು ವಿದ್ಯುತ್ ಪೂರೈಕೆಯ ಸಮರ್ಪಕತೆಯಲ್ಲಿನ ಮಹತ್ತರವಾದ ಸುಧಾರಣೆಯನ್ನು ಪ್ರತಿಫಲಿಸುತ್ತದೆ.

ಈ ಪ್ರಗತಿಯು ಪ್ರಮುಖ ನಗರ ಕೇಂದ್ರಗಳ ಹೊರಗಿನ ಪ್ರದೇಶಗಳಲ್ಲಿ ವಿಶೇಷವಾಗಿ ಮಹತ್ವದ್ದಾಗಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳು ಈಗ ದೀರ್ಘಕಾಲದ ಮತ್ತು ನಿಖರವಾದ ಅವಧಿಯ ವಿದ್ಯುತ್ ಪೂರೈಕೆಯನ್ನು ಪಡೆಯುತ್ತಿವೆ. ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯು ಡೀಸೆಲ್ ಜನರೇಟರ್‌ಗಳು ಮತ್ತು ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ, ಇದರಿಂದ ವೆಚ್ಚಗಳು ತಗ್ಗಿವೆ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳೂ ಕಡಿಮೆಯಾಗಿವೆ.

ವಾಸ್ತವವಾದ ಸಾರ್ವತ್ರಿಕ ಲಭ್ಯತೆ

ಕೇವಲ ಸಮರ್ಪಕ ವಿದ್ಯುತ್ ಉತ್ಪಾದನೆಯು ಎಲ್ಲರಿಗೂ ವಿದ್ಯುತ್ ಲಭ್ಯತೆಯನ್ನು ಖಾತರಿಪಡಿಸುವುದಿಲ್ಲ. ಬಲವಾದ ಮತ್ತು ದಕ್ಷ ವಿತರಣಾ ಜಾಲದ ಮೂಲಕ ವಿದ್ಯುತ್ ಮನೆಗಳು, ಹೊಲಗಳು ಮತ್ತು ಉದ್ಯಮಗಳನ್ನು ತಲುಪಬೇಕು. ಇದನ್ನು ಗುರುತಿಸಿ, ದೇಶಾದ್ಯಂತ ಕೊನೆಯ ಹಂತದ ಮೂಲಸೌಕರ್ಯವನ್ನು ಬಲಪಡಿಸಲು ಹೆಚ್ಚಿನ ಗಮನ ನೀಡಲಾಯಿತು. ಡಿಸೆಂಬರ್ 2014 ರಲ್ಲಿ ಪ್ರಾರಂಭಿಸಲಾದ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಮತ್ತು ಸಂಯೋಜಿತ ವಿದ್ಯುತ್ ಅಭಿವೃದ್ಧಿ ಯೋಜನೆ ಅಡಿಯಲ್ಲಿ, ವಿತರಣಾ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಆಧುನೀಕರಿಸಲು ಗಣನೀಯ ಹೂಡಿಕೆಗಳನ್ನು ಮಾಡಲಾಯಿತು.

DDUGJY ಯೋಜನೆಯು ಅಸ್ತಿತ್ವದಲ್ಲಿರುವ ಜಾಲಗಳ ಬಲವರ್ಧನೆ ಮತ್ತು ವಿಸ್ತರಣೆಯೊಂದಿಗೆ ಹಳ್ಳಿಗಳಲ್ಲಿ ಮೂಲಭೂತ ವಿದ್ಯುತ್ ಮೂಲಸೌಕರ್ಯವನ್ನು ರಚಿಸುವುದು, ಹಾಗೆಯೇ ಫೀಡರ್‌ಗಳು ಮತ್ತು ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಮೀಟರಿಂಗ್ ಮಾಡುವುದರ ಮೇಲೆ ಗಮನ ಹರಿಸಿತು. IPDS ಯೋಜನೆಯು ನಗರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಪ-ಪ್ರಸರಣ ಮತ್ತು ವಿತರಣಾ ಜಾಲಗಳನ್ನು ಮೇಲ್ದರ್ಜೆಗೇರಿಸುವುದು, ಗ್ರಾಹಕರು ಮತ್ತು ಟ್ರಾನ್ಸ್‌ಫಾರ್ಮರ್‌ಗಳಿಗೆ ಮೀಟರಿಂಗ್ ಅಳವಡಿಸುವುದು ಮತ್ತು ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ , ಸ್ಮಾರ್ಟ್ ಮೀಟರಿಂಗ್ ಮತ್ತು ರಿಯಲ್-ಟೈಮ್ ಡೇಟಾ ಅಕ್ವಿಸಿಷನ್ ಸಿಸ್ಟಮ್‌ಗಳಂತಹ ಮಾಹಿತಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ಜಾರಿಗೆ ತಂದಿತು. ಈ ಪ್ರಯತ್ನಗಳಿಗೆ ಪೂರಕವಾಗಿ ವಿಶ್ವದ ಅತಿದೊಡ್ಡ ಸಾರ್ವತ್ರಿಕ ವಿದ್ಯುದೀಕರಣ ಉಪಕ್ರಮಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ಪ್ರಧಾನ ಮಂತ್ರಿ ಸಹಜ್ ಬಿಜಿಲಿ ಹರ್ ಘರ್ ಯೋಜನೆ (ಸೌಭಾಗ್ಯ) ಜಾರಿಗೆ ಬಂದಿತು. ಇದು ದೇಶದ ಎಲ್ಲಾ ವಿದ್ಯುತ್ ರಹಿತ ಮನೆಗಳಿಗೆ ಕೊನೆಯ ಹಂತದ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕಗಳನ್ನು ಒದಗಿಸುವತ್ತ ಗಮನ ಹರಿಸಿತು.

ಡಿಸ್ಕಾಮ್‌ಗಳು: ವಿದ್ಯುತ್ ವಲಯದ ಅಡಿಪಾಯವನ್ನು ಬಲಪಡಿಸುವುದು

ವಿತರಣಾ ಸಂಸ್ಥೆಗಳು ಏಕೆ ಮುಖ್ಯ? ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣವು ವಿದ್ಯುತ್ ವ್ಯವಸ್ಥೆಯ ಬೆನ್ನೆಲುಬಾದರೆ, ಸಾಮಾನ್ಯವಾಗಿ 'ಡಿಸ್ಕಾಮ್‌ಗಳು' ಎಂದು ಕರೆಯಲ್ಪಡುವ ವಿತರಣಾ ಕಂಪನಿಗಳು ಅದರ ಸಾರ್ವಜನಿಕ ಮುಖವಾಗಿವೆ. ಇವು ವಿದ್ಯುತ್ ಜಾಲ ಮತ್ತು ಗ್ರಾಹಕರ ನಡುವಿನ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಪ್ರತಿಯೊಂದು ಮನೆಯ ಸಂಪರ್ಕ, ಪ್ರತಿ ಬಿಲ್ಲಿಂಗ್ ಚಕ್ರ, ಪ್ರತಿ ಸೇವಾ ದೂರು ಮತ್ತು ಪ್ರತಿ ವಿದ್ಯುತ್ ಪೂರೈಕೆಯ ವ್ಯತ್ಯಯವು ಅಂತಿಮವಾಗಿ ವಿತರಣಾ ವ್ಯವಸ್ಥೆಯ ಮೂಲಕವೇ ಹಾದುಹೋಗುತ್ತದೆ.

ಡಿಸ್ಕಾಮ್‌ಗಳ ಆರೋಗ್ಯವು ಕೇವಲ ವಿದ್ಯುತ್ ಪೂರೈಕೆಯ ಗುಣಮಟ್ಟವನ್ನು ಮಾತ್ರವಲ್ಲದೆ, ಇಡೀ ವಿದ್ಯುತ್ ಮೌಲ್ಯ ಸರಪಳಿಯ ಆರ್ಥಿಕ ಸ್ಥಿರತೆಯನ್ನು ನಿರ್ಧರಿಸುತ್ತದೆ. ವಿತರಣಾ ಸಂಸ್ಥೆಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದಾಗ, ವಿದ್ಯುತ್ ಉತ್ಪಾದಕರಿಗೆ ಮತ್ತು ಪ್ರಸರಣ ಕಂಪನಿಗಳಿಗೆ ಪಾವತಿಗಳು ಸುಗಮವಾಗಿ ಹರಿಯುತ್ತವೆ, ಹೂಡಿಕೆಗಳು ಮುಂದುವರಿಯುತ್ತವೆ ಮತ್ತು ಸೇವೆಯ ಗುಣಮಟ್ಟ ಸುಧಾರಿಸುತ್ತದೆ. ಅವು ಒತ್ತಡಕ್ಕೆ ಒಳಗಾದಾಗ, ಅದರ ಪರಿಣಾಮವು ಇಡೀ ವ್ಯವಸ್ಥೆಯ ಮೇಲೆ ಹರಡುತ್ತದೆ.

ವಿತರಣಾ ವ್ಯವಸ್ಥೆಯನ್ನು ಸುಧಾರಿಸಲು ಏನು ಮಾಡಲಾಗುತ್ತಿದೆ? 2021 ರಲ್ಲಿ, ಸುಮಾರು ₹3.03 ಲಕ್ಷ ಕೋಟಿ ಒಟ್ಟು ವೆಚ್ಚದ ಪರಿಷ್ಕೃತ ವಿತರಣಾ ವಲಯ ಯೋಜನೆ ಅನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ ಈಗಾಗಲೇ ₹2.8 ಲಕ್ಷ ಕೋಟಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ವಿಶ್ವಾಸಾರ್ಹ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಒದಗಿಸುವ ಉದ್ದೇಶದಿಂದ, ವಿತರಣಾ ಸಂಸ್ಥೆಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬೆಂಬಲ ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯ ಒಂದು ಪ್ರಮುಖ ಅಂಶವೆಂದರೆ ಗ್ರಾಹಕರು, ವಿತರಣಾ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಫೀಡರ್‌ಗಳಿಗೆ ಸ್ಮಾರ್ಟ್ ಮೀಟರಿಂಗ್ವ್ಯವಸ್ಥೆಯನ್ನು ಜಾರಿಗೆ ತರುವುದು. ಸ್ಮಾರ್ಟ್ ಮೀಟರ್‌ಗಳು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಗ್ರಾಹಕರಿಗೆ ತಮ್ಮ ವಿದ್ಯುತ್ ಬಳಕೆಯ ನೈಜ-ಸಮಯದ ಮಾಹಿತಿಯನ್ನು ನೀಡುತ್ತವೆ.

ಈ ಆಪ್‌ಗಳು ಬಳಕೆದಾರರಿಗೆ ತಮ್ಮ ವಿದ್ಯುತ್ ಬಳಕೆಯನ್ನು ಮೇಲ್ವಿಚಾರಣೆ ಮಾಡಲು, ಬಜೆಟ್ ನಿರ್ವಹಿಸಲು, ಸುಲಭವಾಗಿ ರೀಚಾರ್ಜ್ ಮಾಡಲು, ಕಡಿಮೆ ಬ್ಯಾಲೆನ್ಸ್ ಎಚ್ಚರಿಕೆಗಳನ್ನು ಪಡೆಯಲು ಮತ್ತು ಬಳಕೆಯನ್ನು ಉತ್ತಮಗೊಳಿಸಲು ಹಳೆಯ ಬಳಕೆಯ ಅಂಕಿ-ಅಂಶಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತವೆ. 15 ಜನವರಿ 2026 ಹೊತ್ತಿಗೆ, RDSS ಅಡಿಯಲ್ಲಿ 4.05 ಕೋಟಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ, ರಾಜ್ಯಗಳು ತಮ್ಮದೇ ಆದ ಯೋಜನೆಗಳು ಮತ್ತು ಇತರ ಕಾರ್ಯಕ್ರಮಗಳ ಅಡಿಯಲ್ಲಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಿವೆ. ಒಟ್ಟಾರೆಯಾಗಿ, ವಿವಿಧ ಉಪಕ್ರಮಗಳ ಅಡಿಯಲ್ಲಿ ದೇಶಾದ್ಯಂತ 5.62 ಕೋಟಿ ಸ್ಮಾರ್ಟ್ ಮೀಟರ್‌ಗಳನ್ನು ಸ್ಥಾಪಿಸಲಾಗಿದೆ.

ವಲಯದಾದ್ಯಂತ ಆರ್ಥಿಕ ಶಿಸ್ತನ್ನು ಮರುಸ್ಥಾಪಿಸುವುದು

RDSS ಜೊತೆಗೆ, ಆರ್ಥಿಕ ಶಿಸ್ತನ್ನು ಸುಧಾರಿಸಲು ಹೆಚ್ಚುವರಿ ಕ್ರಮಗಳನ್ನು ಪರಿಚಯಿಸಲಾಗಿದೆ:

ರಾಷ್ಟ್ರೀಯ ವಿದ್ಯುತ್ ಯೋಜನೆ ( 2023–2032)

ಟ್ರಾನ್ಸ್‌ಫಾರ್ಮರ್ ಎಂಬುದು ಒಂದು ಸ್ಥಿರ ಸಾಧನವಾಗಿದ್ದು (Static device), ಇದನ್ನು ವಿದ್ಯುತ್ ಪ್ರಸರಣ ಮತ್ತು ವಿತರಣೆಯ ಸಮಯದಲ್ಲಿ ವೋಲ್ಟೇಜ್ ಅನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಬಳಸಲಾಗುತ್ತದೆ. ಪ್ರಾಥಮಿಕ ಸಬ್-ಸ್ಟೇಷನ್‌ಗಳಿಂದ ಹೆಚ್ಚಿನ ವೋಲ್ಟೇಜ್‌ನಲ್ಲಿ ಪಡೆಯಲಾದ ವಿದ್ಯುತ್ ಅನ್ನು ವಿತರಣಾ ಕಂಪನಿಗಳ ಸಬ್-ಸ್ಟೇಷನ್‌ಗಳಲ್ಲಿ ಕಡಿಮೆ ವೋಲ್ಟೇಜ್‌ಗೆ ಪರಿವರ್ತಿಸಲಾಗುತ್ತದೆ. ಪರಿವರ್ತನಾ ಸಾಮರ್ಥ್ಯ: ಇದು ವಿದ್ಯುತ್ ಅನ್ನು ವಿವಿಧ ವೋಲ್ಟೇಜ್ ಮಟ್ಟಗಳ ನಡುವೆ ಪರಿವರ್ತಿಸಲು ಸಬ್-ಸ್ಟೇಷನ್‌ಗಳಲ್ಲಿ ಅಳವಡಿಸಲಾದ ಟ್ರಾನ್ಸ್‌ಫಾರ್ಮರ್‌ಗಳ ಒಟ್ಟು ಸಾಮರ್ಥ್ಯವನ್ನು ಸೂಚಿಸುತ್ತದೆ. ಈ ಮೂಲಕ ವಿದ್ಯುತ್ ಅನ್ನು ಗ್ರಾಹಕರಿಗೆ ಸಮರ್ಥವಾಗಿ ರವಾನಿಸಲು ಮತ್ತು ವಿತರಿಸಲು ಸಾಧ್ಯವಾಗುತ್ತದೆ. ಇದನ್ನು ವೋಲ್ಟ್-ಆಂಪಿಯರ್ (VA), ಮೆಗಾವೋಲ್ಟ್-ಆಂಪಿಯರ್, ಅಥವಾ ಗಿಗಾವೋಲ್ಟ್-ಆಂಪಿಯರ್ ಘಟಕಗಳಲ್ಲಿ ಅಳೆಯಲಾಗುತ್ತದೆ.

ರಾಷ್ಟ್ರೀಯ ವಿದ್ಯುತ್ ಯೋಜನೆ (2023–2032)

2032ರ ವೇಳೆಗೆ ಅಂದಾಜಿಸಲಾದ 458 ಗಿಗಾವ್ಯಾಟ್ (GW) ಗರಿಷ್ಠ ಬೇಡಿಕೆಯನ್ನು ಪೂರೈಸಲು ಕೇಂದ್ರ ಮತ್ತು ರಾಜ್ಯ ಪ್ರಸರಣ ವ್ಯವಸ್ಥೆಗಳಿಗಾಗಿ 'ರಾಷ್ಟ್ರೀಯ ವಿದ್ಯುತ್ ಯೋಜನೆ (2023–2032)' ಅನ್ನು ಅಂತಿಮಗೊಳಿಸಲಾಗಿದೆ. ಈ ಯೋಜನೆಯು ಸುಮಾರು ₹9.15 ಲಕ್ಷ ಕೋಟಿ ಅಂದಾಜು ಹೂಡಿಕೆಯನ್ನು ಒಳಗೊಂಡಿದೆ. ಹಿಂದಿನ ಯೋಜನಾ ಅವಧಿಯಲ್ಲಿ (2017–2022), ಪ್ರತಿ ವರ್ಷ ಸುಮಾರು 17,700 ckm ಪ್ರಸರಣ ಮಾರ್ಗಗಳು ಮತ್ತು 73 GVA ಪರಿವರ್ತನಾ ಸಾಮರ್ಥ್ಯವನ್ನು ಸೇರಿಸಲಾಗಿತ್ತು. ಹೊಸ ಯೋಜನೆಯಡಿಯಲ್ಲಿ, ಪ್ರಸರಣ ಜಾಲವು ಜನವರಿ 2026 ರಲ್ಲಿದ್ದ 5 ಲಕ್ಷ ckm ನಿಂದ 2032 ರ ವೇಳೆಗೆ 6.48 ಲಕ್ಷ ckm ಗೆ ವಿಸ್ತರಿಸಲಿದೆ. ಇದೇ ಅವಧಿಯಲ್ಲಿ, ಪರಿವರ್ತನಾ ಸಾಮರ್ಥ್ಯವು 1,407 GVA ನಿಂದ 2,345 GVA ಗೆ ಹೆಚ್ಚಾಗಲಿದೆ ಮತ್ತು ಅಂತರ-ಪ್ರಾದೇಶಿಕ ವರ್ಗಾವಣೆ ಸಾಮರ್ಥ್ಯವು 120 GW ನಿಂದ 168 GW ಗೆ ಏರಲಿದೆ. 220 ಕಿಲೋವೋಲ್ಟ್ ಮತ್ತು ಅದಕ್ಕಿಂತ ಹೆಚ್ಚಿನ ಪ್ರಸರಣ ವ್ಯವಸ್ಥೆಗಳನ್ನು ಒಳಗೊಂಡಿರುವ ಈ ಯೋಜನೆಯನ್ನು, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು, ನವೀಕರಿಸಬಹುದಾದ ಇಂಧನದ ಬೃಹತ್ ಪ್ರಮಾಣದ ಏಕೀಕರಣವನ್ನು ಬೆಂಬಲಿಸಲು ಮತ್ತು ರಾಷ್ಟ್ರೀಯ ಗ್ರಿಡ್‌ನಲ್ಲಿ 'ಗ್ರೀನ್ ಹೈಡ್ರೋಜನ್'ನಂತಹ ಉದಯೋನ್ಮುಖ ಅವಶ್ಯಕತೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

  • ವಿದ್ಯುತ್ (ತಿದ್ದುಪಡಿ) ವಿಧೇಯಕ, 2026

ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಬೇಡಿಕೆಗಳನ್ನು ಪೂರೈಸಲು ಭಾರತದ ವಿದ್ಯುತ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿದ್ಯುತ್ (ತಿದ್ದುಪಡಿ) ವಿಧೇಯಕ, 2026 ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಕ್ರಾಸ್-ಸಬ್ಸಿಡಿಗಳನ್ನು ವೈಜ್ಞಾನಿಕಗೊಳಿಸುವ ಮೂಲಕ, ವೆಚ್ಚ-ಆಧಾರಿತ ದರಪಟ್ಟಿಗಳನ್ನು ಉತ್ತೇಜಿಸುವ ಮೂಲಕ ಮತ್ತು ಕೈಗಾರಿಕಾ ಗ್ರಾಹಕರು ನೇರವಾಗಿ ವಿದ್ಯುತ್ ಖರೀದಿಸಲು ಅವಕಾಶ ನೀಡುವ ಮೂಲಕ ಅಸ್ತಿತ್ವದಲ್ಲಿರುವ ಮಾರುಕಟ್ಟೆ ರಚನೆಯನ್ನು ಸುಧಾರಿಸಲು ಪ್ರಯತ್ನಿಸುತ್ತದೆ. ರೈತರು ಮತ್ತು ಇತರ ಅರ್ಹ ಗ್ರಾಹಕರಿಗೆ ನೀಡಲಾಗುವ ರಿಯಾಯಿತಿ ದರದ ಸೌಲಭ್ಯಗಳನ್ನು ಮುಂದುವರಿಸುತ್ತಲೇ, ವಿದ್ಯುತ್ ಅನ್ನು ಹೆಚ್ಚು ಕೈಗೆಟುಕುವಂತೆ, ವಿಶ್ವಾಸಾರ್ಹವಾಗಿ ಮತ್ತು ಮಾರುಕಟ್ಟೆಯ ಅಗತ್ಯಗಳಿಗೆ ಸ್ಪಂದಿಸುವಂತೆ ಮಾಡುವ ಮೂಲಕ ಭಾರತೀಯ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆಯನ್ನು ಸುಧಾರಿಸುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ.

ಲೇಟ್ ಪೇಮೆಂಟ್ ಸರ್‌ಚಾರ್ಜ್ ನಿಯಮಗಳು, 2022

ಲೇಟ್ ಪೇಮೆಂಟ್ ಸರ್‌ಚಾರ್ಜ್ ನಿಯಮಗಳ ಜಾರಿಯು ವಿತರಣಾ ಕಂಪನಿಗಳು ಮತ್ತು ವಿದ್ಯುತ್ ಉತ್ಪಾದನಾ ಕಂಪನಿಗಳ ನಡುವಿನ ಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಕ್ರಮಬದ್ಧವಾದ ಮರುಪಾವತಿ ವೇಳಾಪಟ್ಟಿಗಳನ್ನು ರೂಪಿಸುವ ಮೂಲಕ ಮತ್ತು ಪಾವತಿ ವಿಳಂಬವನ್ನು ನಿರುತ್ಸಾಹಗೊಳಿಸುವ ಮೂಲಕ, ಈ ನಿಯಮಗಳು ಬಾಕಿ ಇರುವ ಮೊತ್ತವನ್ನು ಜೂನ್ 2022 ರಲ್ಲಿದ್ದ ₹1.4 ಲಕ್ಷ ಕೋಟಿಯಿಂದ ಫೆಬ್ರವರಿ 2026 ರ ವೇಳೆಗೆ ₹4,109 ಕೋಟಿಗೆ ಗಣನೀಯವಾಗಿ ಇಳಿಸಿವೆ. ಈ ಗಮನಾರ್ಹ ಇಳಿಕೆಯು ಇಡೀ ವಿದ್ಯುತ್ ಮೌಲ್ಯ ಸರಪಳಿಯಲ್ಲಿ ಹಣಕಾಸಿನ ಹರಿವನ್ನು (Liquidity) ಸುಧಾರಿಸಿದೆ ಮತ್ತು ಉತ್ಪಾದಕರು, ಸಾಲದಾತರು ಹಾಗೂ ಹೂಡಿಕೆದಾರರಲ್ಲಿ ವಿಶ್ವಾಸವನ್ನು ಮರುಸ್ಥಾಪಿಸಿದೆ.

  • ಸ್ವಯಂಚಾಲಿತ ಮಾಸಿಕ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚದ ಹೊಂದಾಣಿಕೆಗಳು

ಆವರ್ತಕ ಆರ್ಥಿಕ ಅಸಮತೋಲನವನ್ನು ತಡೆಗಟ್ಟಲು, ಸ್ವಯಂಚಾಲಿತ ಮಾಸಿಕ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚದ ಹೊಂದಾಣಿಕೆಯ ವ್ಯವಸ್ಥೆಗಳನ್ನು ಪರಿಚಯಿಸಲಾಗಿದೆ. ಈ ನಿಬಂಧನೆಗಳು ನಿಯಂತ್ರಕ ಮೇಲ್ವಿಚಾರಣೆಗೆ ಒಳಪಟ್ಟು, ಕಾನೂನುಬದ್ಧ ಖರೀದಿ ಮತ್ತು ಜಾಲದ ವೆಚ್ಚಗಳನ್ನು ಕಾಲಕಾಲಕ್ಕೆ ದರಪಟ್ಟಿಯಲ್ಲಿ ಪ್ರತಿಫಲಿಸಲು ಅನುವು ಮಾಡಿಕೊಡುತ್ತವೆ. ವೆಚ್ಚಗಳನ್ನು ಆದಾಯಕ್ಕೆ ಅನುಗುಣವಾಗಿ ಹೊಂದಿಸುವ ಮೂಲಕ, ಈ ವ್ಯವಸ್ಥೆಯು ಹೊಸ ನಷ್ಟಗಳ ಸಂಗ್ರಹವನ್ನು ಕಡಿಮೆ ಮಾಡುತ್ತದೆ ಮತ್ತು ವಿತರಣಾ ಸಂಸ್ಥೆಗಳ ಆರ್ಥಿಕ ಸ್ಥಿರತೆಯನ್ನು ಸುಧಾರಿಸುತ್ತದೆ.

ರಚನಾತ್ಮಕ ಸುಧಾರಣೆಗಳ ಜೊತೆಗೆ, ವಿದ್ಯುತ್ ವಲಯವನ್ನು ಹೆಚ್ಚು ಪಾರದರ್ಶಕ, ದಕ್ಷ ಮತ್ತು ಸ್ವಚ್ಛ ಇಂಧನ ಪರಿವರ್ತನೆಗೆ ಪೂರಕವಾಗಿಸಲು ಹಲವಾರು ನೀತಿ ಕ್ರಮಗಳನ್ನು ಪರಿಚಯಿಸಲಾಗಿದೆ. ವಿದ್ಯುತ್ (ಹಸಿರು ಇಂಧನ ಮುಕ್ತ ಪ್ರವೇಶದ ಮೂಲಕ ನವೀಕರಿಸಬಹುದಾದ ಇಂಧನ ಪ್ರೋತ್ಸಾಹಿಸುವ) ನಿಯಮಗಳು, 100 kW ಗಿಂತ ಹೆಚ್ಚಿನ ಲೋಡ್ ಹೊಂದಿರುವ ಗ್ರಾಹಕರಿಗೆ ಕಾಲಮಿತಿಯ ಅನುಮೋದನೆಗಳು, ಏಕರೂಪದ ಮತ್ತು ಸಮಂಜಸವಾದ ಶುಲ್ಕಗಳೊಂದಿಗೆ 'ಗ್ರೀನ್ ಓಪನ್ ಆಕ್ಸೆಸ್' ಸೌಲಭ್ಯವನ್ನು ಒದಗಿಸುತ್ತವೆ. ಹೆಚ್ಚುವರಿಯಾಗಿ, ನವೀಕರಿಸಬಹುದಾದ ಇಂಧನ ಬಳಕೆ ಕಡ್ಡಾಯ, ಅಂತರ-ರಾಜ್ಯ ಪ್ರಸರಣ ಶುಲ್ಕಗಳ ಮನ್ನಾ ಮತ್ತು ಇಂಧನ ಸಂಗ್ರಹಣಾ ವ್ಯವಸ್ಥೆಗಳ ನಿಯೋಜನೆಯನ್ನು ಉತ್ತೇಜಿಸುವ ನೀತಿಗಳನ್ನು ಕೂಡ ನವೀಕರಿಸಬಹುದಾದ ಇಂಧನವನ್ನು ಗ್ರಿಡ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಸಂಯೋಜಿಸಲು ಅಧಿಸೂಚಿಸಲಾಗಿದೆ. ಇದಲ್ಲದೆ, ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ಸರ್‌ಚಾರ್ಜ್‌ನ ಮಾಸಿಕ ಸ್ವಯಂಚಾಲಿತ ವರ್ಗಾವಣೆಯು ವಿದ್ಯುತ್ ಖರೀದಿ ವೆಚ್ಚವನ್ನು ಸಕಾಲದಲ್ಲಿ ಮರುಪಡೆಯುವುದನ್ನು ಖಚಿತಪಡಿಸುತ್ತದೆ.

ಬದಲಾವಣೆಯ ಸೂಚನೆಗಳು: ಅಳೆಯಬಹುದಾದ ಸುಧಾರಣೆಗಳು

ಈ ಸುಧಾರಣೆಗಳ ಪ್ರಭಾವವು ಈಗ ಅಳೆಯಬಹುದಾದ ಆರ್ಥಿಕ ಮತ್ತು ಕಾರ್ಯಾಚರಣೆಯ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

  • ಒಂದು ಐತಿಹಾಸಿಕ ಬೆಳವಣಿಗೆಯಾಗಿ, ಭಾರತದ ವಿದ್ಯುತ್ ವಿತರಣಾ ಸಂಸ್ಥೆಗಳು 2024-25ರ ಹಣಕಾಸು ವರ್ಷದಲ್ಲಿ ₹2,701 ಕೋಟಿ ನಿವ್ವಳ ಲಾಭವನ್ನು ದಾಖಲಿಸಿವೆ. ಇದು 2013-14ರ ಹಣಕಾಸು ವರ್ಷದಲ್ಲಿದ್ದ ₹67,962 ಕೋಟಿ ನಷ್ಟದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ.
  • ತಾಂತ್ರಿಕ ಅಸಮರ್ಥತೆ ಮತ್ತು ವಾಣಿಜ್ಯ ಸೋರಿಕೆಗಳಿಂದ ಉಂಟಾಗುವ ಇಂಧನ ನಷ್ಟವನ್ನು ಸೂಚಿಸುವ ಒಟ್ಟು ತಾಂತ್ರಿಕ ಮತ್ತು ವಾಣಿಜ್ಯ (AT&C) ನಷ್ಟಗಳು, 2013-14ರಲ್ಲಿದ್ದ ಶೇಕಡಾ 22.62 ರಿಂದ 2024-25ರಲ್ಲಿ ಶೇಕಡಾ 15.04 ಕ್ಕೆ ಇಳಿದಿವೆ.
  • ವಿದ್ಯುತ್ ಸಂಸ್ಥೆಗಳು ತಮ್ಮ ವೆಚ್ಚವನ್ನು ಮರುಪಡೆಯುತ್ತಿದ್ದಾರೆಯೇ ಎಂಬುದನ್ನು ಸೂಚಿಸುವ ಸರಾಸರಿ ಪೂರೈಕೆ ವೆಚ್ಚ (ACS) ಮತ್ತು ಸರಾಸರಿ ವಸೂಲಾದ ಆದಾಯದ ನಡುವಿನ ಅಂತರವು, 2024-25ರಲ್ಲಿ ಪ್ರತಿ ಯೂನಿಟ್‌ಗೆ ₹0.78 ರಿಂದ ₹0.06 ಕ್ಕೆ ತೀವ್ರವಾಗಿ ಕುಸಿದಿದೆ.

ಈ ಸುಧಾರಣೆಗಳು ಬಲವಾದ ವೆಚ್ಚದ ಮರುಪಾವತಿ, ಸುಧಾರಿತ ಬಿಲ್ಲಿಂಗ್ ದಕ್ಷತೆ ಮತ್ತು ಉತ್ತಮ ಕಾರ್ಯಾಚರಣೆಯ ನಿರ್ವಹಣೆಯನ್ನು ಪ್ರತಿಫಲಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಇವು ನಿರಂತರ ಆರ್ಥಿಕ ಒತ್ತಡದಿಂದ ಸುಸ್ಥಿರತೆಯ ಹಾದಿಯತ್ತ ಸಾಗುತ್ತಿರುವ ರಚನಾತ್ಮಕ ಬದಲಾವಣೆಯನ್ನು ಸೂಚಿಸುತ್ತವೆ.

ನವೀಕರಿಸಬಹುದಾದ ಇಂಧನ ಪರಿವರ್ತನೆಯ ವೇಗವರ್ಧನೆ

ದೇಶದ ನವೀಕರಿಸಬಹುದಾದ ಇಂಧನ ವಿಸ್ತರಣೆಯು ಈಗ ಬೃಹತ್ ಪ್ರಮಾಣ, ವೇಗ, ಉತ್ಪಾದನಾ ಬೆಳವಣಿಗೆ ಮತ್ತು ಜಾಗತಿಕ ತೊಡಗಿಸಿಕೊಳ್ಳುವಿಕೆಯಿಂದ ಕೂಡಿದ ನೀತಿ ಚಾಲಿತ ರೂಪಾಂತರವಾಗಿ ವಿಕಸನಗೊಂಡಿದೆ. ಅಂತರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆಯ ನವೀಕರಿಸಬಹುದಾದ ಇಂಧನ ಅಂಕಿ-ಅಂಶಗಳು 2025 ರ ಪ್ರಕಾರ, ಒಟ್ಟು ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಭಾರತವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ.

ಈ ವಿಸ್ತರಣೆಯಲ್ಲಿ ಸೌರಶಕ್ತಿಯು ಮುಂಚೂಣಿಯಲ್ಲಿದೆ. ಸ್ಥಾಪಿತ ಸೌರ ಇಂಧನ ಸಾಮರ್ಥ್ಯವು 2014 ರಲ್ಲಿ 3 ಗಿಗಾವ್ಯಾಟ್ ಇದ್ದದ್ದು, ಜನವರಿ 2026 ರ ವೇಳೆಗೆ 140 ಗಿಗಾವ್ಯಾಟ್‌ಗೆ ತೀವ್ರವಾಗಿ ಏರಿಕೆಯಾಗಿದೆ. ಪವನ ಶಕ್ತಿಯು ಕೂಡ ಗಮನಾರ್ಹ ಕೊಡುಗೆ ನೀಡಿದ್ದು, ಒಟ್ಟು ಸ್ಥಾಪಿತ ಪವನ ಶಕ್ತಿ ಸಾಮರ್ಥ್ಯವು 54.65 ಗಿಗಾವ್ಯಾಟ್‌ಗಳನ್ನು ತಲುಪಿದೆ.

ಒಂದು ನಿರ್ಣಾಯಕ ಮೈಲಿಗಲ್ಲನ್ನು 29 ಜುಲೈ 2025 ರಂದು ಸಾಧಿಸಲಾಯಿತು. ಅಂದು ಭಾರತವು ವಿದ್ಯುತ್ ಉತ್ಪಾದನೆಯಲ್ಲಿ ತನ್ನ ಸಾರ್ವಕಾಲಿಕ ಹೆಚ್ಚಿನ ನವೀಕರಿಸಬಹುದಾದ ಇಂಧನ ಪಾಲನ್ನು ದಾಖಲಿಸಿತು. ಆ ದಿನ, ದೇಶದ ಒಟ್ಟು 203 ಗಿಗಾವ್ಯಾಟ್ ವಿದ್ಯುತ್ ಬೇಡಿಕೆಯಲ್ಲಿ ಶೇಕಡಾ 51.5 ರಷ್ಟನ್ನು ನವೀಕರಿಸಬಹುದಾದ ಮೂಲಗಳೇ ಪೂರೈಸಿದ್ದವು. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ, ದೈನಂದಿನ ವಿದ್ಯುತ್ ಬೇಡಿಕೆಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ನವೀಕರಿಸಬಹುದಾದ ಮೂಲಗಳ ಮೂಲಕ ಪೂರೈಸಲಾಯಿತು, ಇದು ದೇಶದ ಸ್ವಚ್ಛ ಇಂಧನ ಪರಿವರ್ತನೆಯ ಪ್ರಮುಖ ಸಂಕೇತವಾಗಿದೆ. ಅಂದಿನ ವಿದ್ಯುತ್ ಉತ್ಪಾದನೆಯ ಮಿಶ್ರಣವು ಈ ಕೆಳಗಿನಂತಿತ್ತು:

  • ಸೌರಶಕ್ತಿ: 44.50 ಗಿಗಾವ್ಯಾಟ್
  • ಪವನ ಶಕ್ತಿ: 29.89 ಗಿಗಾವ್ಯಾಟ್
  • ಜಲವಿದ್ಯುತ್ : 30.29 ಗಿಗಾವ್ಯಾಟ್

ಈ ಮೈಲಿಗಲ್ಲು ಕೇವಲ ಸಾಮರ್ಥ್ಯದ ವಿಸ್ತರಣೆಯನ್ನು ಮಾತ್ರವಲ್ಲದೆ, ರಾಷ್ಟ್ರೀಯ ಗ್ರಿಡ್‌ಗೆ ನವೀಕರಿಸಬಹುದಾದ ಇಂಧನದ ಹೆಚ್ಚುತ್ತಿರುವ ಏಕೀಕರಣವನ್ನು ಪ್ರತಿಫಲಿಸುತ್ತದೆ. ಇದು ಭಾರತವನ್ನು ಹೆಚ್ಚು ಸುಸ್ಥಿರ ಮತ್ತು ವೈವಿಧ್ಯಮಯ ಇಂಧನ ಭವಿಷ್ಯದತ್ತ ದೃಢವಾಗಿ ಕೊಂಡೊಯ್ಯುತ್ತಿದೆ. ಫೆಬ್ರವರಿ 2024 ರಲ್ಲಿ ಪ್ರಾರಂಭಿಸಲಾದ ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯು, ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಅಳವಡಿಕೆಯನ್ನು ಉತ್ತೇಜಿಸಲು ₹75,021 ಕೋಟಿಗಳ ಒಟ್ಟು ವೆಚ್ಚದೊಂದಿಗೆ 2026-27ರ ಹಣಕಾಸು ವರ್ಷದ ವೇಳೆಗೆ 1 ಕೋಟಿ ವಸತಿ ಮನೆಗಳಲ್ಲಿ ರೂಫ್‌ಟಾಪ್ ಸೋಲಾರ್ (ಛಾವಣಿಯ ಸೌರ ವಿದ್ಯುತ್) ವ್ಯವಸ್ಥೆಯನ್ನು ಅಳವಡಿಸುವ ಗುರಿಯನ್ನು ಹೊಂದಿದೆ. ಫೆಬ್ರವರಿ 2026 ರ ಹೊತ್ತಿಗೆ, ಈ ಯೋಜನೆಯಡಿ ಈಗಾಗಲೇ 31.04 ಲಕ್ಷ ಮನೆಗಳು ರೂಫ್‌ಟಾಪ್ ಸೋಲಾರ್ ಅಳವಡಿಕೆಯಿಂದ ಪ್ರಯೋಜನ ಪಡೆದಿವೆ.

ನವೀಕರಿಸಬಹುದಾದ ಇಂಧನದ ಕ್ಷಿಪ್ರ ವಿಸ್ತರಣೆ ಮತ್ತು ಬೆಳೆಯುತ್ತಿರುವ ವಿದ್ಯುತ್ ಬೇಡಿಕೆಯನ್ನು ಬೆಂಬಲಿಸಲು, ಸರ್ಕಾರವು ದೇಶದ ಅತಿದೊಡ್ಡ ಪ್ರಸರಣ ಸಂಸ್ಥೆಯಾದ ಪವರ್‌ಗ್ರಿಡ್ಗೆ ಹೂಡಿಕೆಯ ಅಧಿಕಾರವನ್ನು ಹೆಚ್ಚಿಸಿದೆ. ಪರಿಷ್ಕೃತ ಅನುಮೋದನೆಯು ಪ್ರತಿ ಅಂಗಸಂಸ್ಥೆಗೆ ಅನುಮತಿಸಲಾದ ಇಕ್ವಿಟಿ ಹೂಡಿಕೆಯ ಮಿತಿಯನ್ನು ₹5,000 ಕೋಟಿಯಿಂದ ₹7,500 ಕೋಟಿಗೆ ಹೆಚ್ಚಿಸಿದೆ.

ಈ ಹೆಚ್ಚುವರಿ ಆರ್ಥಿಕ ನಮ್ಯತೆಯು ಪವರ್‌ಗ್ರಿಡ್‌ಗೆ ಅಲ್ಟ್ರಾ ಹೈ ವೋಲ್ಟೇಜ್ ಆಲ್ಟರ್ನೇಟಿಂಗ್ ಕರೆಂಟ್ ಮತ್ತು ಹೈ ವೋಲ್ಟೇಜ್ ಡೈರೆಕ್ಟ್ ಕರೆಂಟ್ ವ್ಯವಸ್ಥೆಗಳಂತಹ ದೊಡ್ಡ ಮತ್ತು ಬಂಡವಾಳ-ತೀವ್ರ ಪ್ರಸರಣ ಯೋಜನೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ.

ಪ್ರಸರಣದ ಬೆನ್ನೆಲುಬನ್ನು ಬಲಪಡಿಸುವ ಮೂಲಕ ಮತ್ತು ಪ್ರಮುಖ ಯೋಜನೆಗಳ ಸ್ಪರ್ಧಾತ್ಮಕ ಬಿಡ್ಡಿಂಗ್‌ನಲ್ಲಿ ಭಾಗವಹಿಸುವಿಕೆಯನ್ನು ಸುಧಾರಿಸುವ ಮೂಲಕ, ಈ ಕ್ರಮವು ನವೀಕರಿಸಬಹುದಾದ ಇಂಧನವನ್ನು ಸಮರ್ಥವಾಗಿ ಸಾಗಿಸಲು ಬೆಂಬಲ ನೀಡುತ್ತದೆ ಮತ್ತು ರಾಷ್ಟ್ರೀಯ ಗ್ರಿಡ್‌ನಲ್ಲಿ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ವಿಸ್ತರಿಸುವ ವಿಶಾಲ ಗುರಿಗೆ ಕೊಡುಗೆ ನೀಡುತ್ತದೆ.

ತೀರ್ಮಾನ: ಪ್ರಗತಿಗೆ ಶಕ್ತಿ - ನಿರಂತರ ಮತ್ತು ಸ್ಥಿರ ಹಾದಿ

ಭಾರತದ ವಿದ್ಯುತ್ ವಲಯವು ಇಂದು ಯಾವುದೇ ಒಂದು ಉಪಕ್ರಮದ ಪ್ರಭಾವಕ್ಕಿಂತ ಹೆಚ್ಚಾಗಿ, ವರ್ಷಗಳ ಕಾಲ ನಡೆದ ಸುಧಾರಣೆಗಳ ಒಟ್ಟು ಫಲಿತಾಂಶವನ್ನು ಪ್ರತಿಫಲಿಸುತ್ತಿದೆ. ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ವಿಸ್ತರಣೆಯು ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಸಾಗುತ್ತಿದೆ, ವಿದ್ಯುತ್ ಸಂಪರ್ಕವು ಈಗ ಬಹುತೇಕ ಪ್ರತಿ ಮನೆಗೂ ತಲುಪಿದೆ ಮತ್ತು ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯ ವಿಶ್ವಾಸಾರ್ಹತೆ ಸುಧಾರಿಸಿದೆ. ಅದೇ ಸಮಯದಲ್ಲಿ, ವಿದ್ಯುತ್ ವಿತರಣಾ ವಲಯದಲ್ಲಿ ದೀರ್ಘಕಾಲದವರೆಗೆ ಇದ್ದ ಆರ್ಥಿಕ ಮತ್ತು ಕಾರ್ಯಾಚರಣೆಯ ಸವಾಲುಗಳನ್ನು ಮೂಲಸೌಕರ್ಯ ಹೂಡಿಕೆ, ನಿಯಂತ್ರಕ ಶಿಸ್ತು ಮತ್ತು ಸಾಧನೆ ಆಧಾರಿತ ಸುಧಾರಣೆಗಳ ಸಂಯೋಜನೆಯ ಮೂಲಕ ಪರಿಹರಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಗ್ರಾಹಕರು ಹೆಚ್ಚು ಸಕ್ರಿಯ ಪಾತ್ರ ವಹಿಸುವ ಭವಿಷ್ಯಕ್ಕಾಗಿ ಈ ವಲಯವು ಸಜ್ಜಾಗುತ್ತಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸ್ಮಾರ್ಟರ್ ನೆಟ್‌ವರ್ಕ್‌ಗಳು ಮತ್ತು ಹೊಸ ಮಾರುಕಟ್ಟೆ ವ್ಯವಸ್ಥೆಗಳು ವಿದ್ಯುತ್ ಉತ್ಪಾದನೆ, ಬಳಕೆ ಮತ್ತು ಅದರ ಮೌಲ್ಯೀಕರಣದ ವಿಧಾನವನ್ನೇ ಮರುರೂಪಿಸುತ್ತಿವೆ. ಈ ಬದಲಾವಣೆಗಳು ಬೇರೂರುತ್ತಿದ್ದಂತೆ, ವಿದ್ಯುತ್ ಶಕ್ತಿಯು ಅಭಿವೃದ್ಧಿ, ಒಳಗೊಳ್ಳುವಿಕೆ ಮತ್ತು ಅವಕಾಶಗಳ ನಿಶ್ಯಬ್ದ ಆದರೆ ಅತ್ಯಗತ್ಯವಾದ ಪ್ರೇರಕಶಕ್ತಿಯಾಗಿ ಮುಂದುವರಿಯಲಿದೆ.

References

Ministry of Power

https://powermin.gov.in/en/content/overview-5

https://www.nsgm.gov.in/en

https://www.pib.gov.in/PressReleasePage.aspx?PRID=2228348&reg=3&lang=2

 

https://www.pib.gov.in/PressReleseDetailm.aspx?PRID=2217216&reg=20&lang=1

https://www.pib.gov.in/PressReleasePage.aspx?PRID=2215187&reg=3&lang=1

https://www.pib.gov.in/PressReleasePage.aspx?PRID=2222217&reg=3&lang=2

https://www.pib.gov.in/PressReleasePage.aspx?PRID=2183866&reg=3&lang=1

https://www.pib.gov.in/PressReleasePage.aspx?PRID=2215078&reg=3&lang=1

https://static.pib.gov.in/WriteReadData/specificdocs/documents/2025/jun/doc2025610568001.pdf

https://static.pib.gov.in/WriteReadData/specificdocs/documents/2022/may/doc202253060201.pdf

https://www.pib.gov.in/PressReleaseIframePage.aspx?PRID=1811898&reg=3&lang=2

https://powermin.gov.in/en/content/saubhagya

https://www.pib.gov.in/PressReleasePage.aspx?PRID=2157549&reg=3&lang=2#:~:text=Posted%20On:%2018%20AUG%202025,upon%20survey%20conducted%20by%20Utilities

https://www.pib.gov.in/PressReleasePage.aspx?PRID=2204122&reg=3&lang=1

https://www.pib.gov.in/PressReleasePage.aspx?PRID=2236994&reg=3&lang=1

https://www.pib.gov.in/PressReleasePage.aspx?PRID=2241656&reg=3&lang=1

 

Ministry of New and Renewable Energy

https://www.pib.gov.in/PressReleasePage.aspx?PRID=2209478&reg=3&lang=1

Ministry of Finance

https://www.indiabudget.gov.in/economicsurvey/doc/eschapter/echap09.pdf

Cabinet Committee on Economic Affairs

https://www.pib.gov.in/PressReleasePage.aspx?PRID=2232104&reg=3&lang=2

Press Information Bureau

https://www.pib.gov.in/PressReleasePage.aspx?PRID=2233832&reg=3&lang=2

https://www.pib.gov.in/PressReleasePage.aspx?PRID=2192895&reg=3&lang=2

Click here to see pdf

 

*****

(Explainer ID: 157896) आगंतुक पटल : 18
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Punjabi , Gujarati , Telugu
National Portal Of India
STQC Certificate