Economy
ಕೇಂದ್ರ ಬಜೆಟ್ ಹಣಕಾಸು ವರ್ಷ 2026-27: ಭಾರತದ ಸೇವಾ ರಫ್ತುಗಳಿಗೆ ಭಾರಿ ಉತ್ತೇಜನ
ಭಾರತದ ಪ್ರಬಲ ಸೇವಾ ರಫ್ತು ಪ್ರದರ್ಶನವನ್ನು ಮತ್ತಷ್ಟು ವಿಸ್ತರಿಸುವುದು/ಬಲಪಡಿಸುವುದು
Posted On:
14 MAR 2026 9:27AM
|
ಮುಖ್ಯಾಂಶಗಳು
- ಸೇವಾ ರಫ್ತುಗಳು: ಹಣಕಾಸು ವರ್ಷ 2025-26ರ ಏಪ್ರಿಲ್‌ನಿಂದ ಜನವರಿ ಅವಧಿಯಲ್ಲಿ ಸೇವಾ ರಫ್ತುಗಳು 348.4 ಬಿಲಿಯನ್ ಯುಎಸ್ ಡಾಲರ್ ದಾಖಲಾಗಿವೆ.
- ಜಿಡಿಪಿ ಪಾಲು: ಹಣಕಾಸು ವರ್ಷ 2025-26ರ ಮೊದಲಾರ್ಧದಲ್ಲಿ (ಏಪ್ರಿಲ್-ಸೆಪ್ಟೆಂಬರ್) ಸೇವಾ ರಫ್ತುಗಳು ಭಾರತದ ಒಟ್ಟು ಜಿಡಿಪಿಯ 10% ತಲುಪಿವೆ.
- ಪ್ರಮುಖ ಕ್ಷೇತ್ರಗಳು: ಭಾರತದ ಸೇವಾ ರಫ್ತುಗಳಲ್ಲಿ ಸಾಫ್ಟ್ವೇರ್ ಸೇವೆಗಳು ಮುಂಚೂಣಿಯಲ್ಲಿವೆ. ಇದರೊಂದಿಗೆ ವ್ಯವಹಾರ ಮತ್ತು ಸಲಹಾ ಸೇವೆಗಳು ಪ್ರಮುಖ ಬೆಳವಣಿಗೆಯ ಚಾಲಕಗಳಾಗಿ ಹೊರಹೊಮ್ಮಿವೆ.
- ಕೇಂದ್ರ ಬಜೆಟ್ 2026-27 ಘೋಷಣೆಗಳು: ಭಾರತದಲ್ಲಿನ ಮೂಲಸೌಕರ್ಯಗಳನ್ನು ಬಳಸಿಕೊಂಡು ಜಾಗತಿಕ ಗ್ರಾಹಕರಿಗೆ ಕ್ಲೌಡ್ ಸೇವೆಗಳನ್ನು ಒದಗಿಸುವ ವಿದೇಶಿ ಕಂಪನಿಗಳಿಗೆ 2047ರವರೆಗೆ ತೆರಿಗೆ ರಜೆ ಘೋಷಿಸಲಾಗಿದೆ. ಇದರೊಂದಿಗೆ ಐಟಿ ಸೇವೆಗಳಿಗಾಗಿ ಸೇಫ್ ಹಾರ್ಬರ್ ಸುಧಾರಣೆಗಳು ಮತ್ತು ಅಡ್ವಾನ್ಸ್ ಪ್ರೈಸಿಂಗ್ ಅಗ್ರಿಮೆಂಟ್ಸ್ ನಲ್ಲಿ ಸುಧಾರಣೆಗಳನ್ನು ತರಲಾಗಿದೆ.
- ಬೆಳವಣಿಗೆಯ ಅಂಶಗಳು: ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCCs) ವಿಸ್ತರಣೆ, ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳು ಮತ್ತು ಸುಧಾರಿತ ಜಾಗತಿಕ ಮಾರುಕಟ್ಟೆ ಪ್ರವೇಶವು ಭಾರತದ ಸೇವಾ ರಫ್ತು ಬೆಳವಣಿಗೆಯನ್ನು ಉತ್ತೇಜಿಸುತ್ತಿವೆ.
|
ಪರಿಚಯ
ಭಾರತದ ಸೇವಾ ವಲಯವು ಆರ್ಥಿಕತೆಯ ಅತ್ಯಂತ ಪ್ರಬಲವಾದ ಕ್ಷೇತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದು ದೇಶದ ಬೆಳವಣಿಗೆ, ಉತ್ಪಾದಕತೆ ಮತ್ತು ಜಾಗತಿಕ ಏಕೀಕರಣವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಿಶ್ವಬ್ಯಾಂಕ್ ಪ್ರಕಾರ, 2024ರಲ್ಲಿ ಭಾರತದ ಒಟ್ಟು ಜಿಡಿಪಿಯಲ್ಲಿ (GDP) ಸೇವಾ ವಲಯದ ಪಾಲು ಶೇಕಡಾ 49.9 ಕ್ಕೆ ಏರಿದೆ. ಇದು ಸಾಂಕ್ರಾಮಿಕ ಪೂರ್ವದ ಸರಾಸರಿಗಿಂತ ಸುಮಾರು 1.5 ಪರ್ಸೆಂಟ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದ್ದು, ಜಾಗತಿಕ ಸರಾಸರಿ ಮತ್ತು ಬಹುಪಾಲು ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಹೆಚ್ಚಿನ ಏರಿಕೆಯಾಗಿದೆ. ಡಿಜಿಟಲ್ ತಂತ್ರಜ್ಞಾನದ ಕ್ಷಿಪ್ರ ಅಳವಡಿಕೆ ಮತ್ತು ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತೀಯ ಕಂಪನಿಗಳ ಆಳವಾದ ಒಳಗೊಳ್ಳುವಿಕೆಯಿಂದಾಗಿ ಈ ವಿಸ್ತರಣೆ ಸಾಧ್ಯವಾಗಿದೆ.
ಕೇಂದ್ರ ಬಜೆಟ್ 2026-27 ಐಟಿ ಸೇವೆಗಳಿಗೆ ಉದ್ದೇಶಿತ ತೆರಿಗೆ ಸುಧಾರಣೆಗಳು, ಕ್ಲೌಡ್ ಮತ್ತು ಡೇಟಾ ಸೆಂಟರ್‌ಗಳಿಗೆ ಪ್ರೋತ್ಸಾಹಕಗಳು, ಸರಳೀಕೃತ ನಿಯಮಗಳು ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಕ್ರಮಗಳ ಮೂಲಕ ಈ ಹಾದಿಯನ್ನು ಇನ್ನಷ್ಟು ಬಲಪಡಿಸುತ್ತದೆ. 2047ರ ವೇಳೆಗೆ ಸೇವಾ ವಲಯದಲ್ಲಿ ಶೇ. 10 ರಷ್ಟು ಜಾಗತಿಕ ಪಾಲನ್ನು ಹೊಂದುವ ಮೂಲಕ ಭಾರತವನ್ನು ಜಾಗತಿಕ ನಾಯಕರನ್ನಾಗಿ ಮಾಡುವ ಗುರಿಯನ್ನು ಬಜೆಟ್ ಹೊಂದಿದೆ. ಈ ಗುರಿಯನ್ನು ಸಾಧಿಸಲು, 'ವಿಕಸಿತ್ ಭಾರತ'ಕ್ಕಾಗಿ ಉನ್ನತ ಮಟ್ಟದ 'ಶಿಕ್ಷಣದಿಂದ ಸಬಲೀಕರಣ ಮತ್ತು ಉದ್ಯಮ' ಸ್ಥಾಯಿ ಸಮಿತಿಯನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
ಈ ಸಮಿತಿಯು ಬೆಳವಣಿಗೆ ಮತ್ತು ಉದ್ಯೋಗವನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಉಪ-ವಲಯಗಳನ್ನು ಗುರುತಿಸುವತ್ತ ಗಮನ ಹರಿಸುತ್ತದೆ. ಇದು ವಿವಿಧ ವಲಯಗಳ ನೀತಿ ಮತ್ತು ನಿಯಂತ್ರಕ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಭಾರತದ ಸೇವಾ ರಫ್ತುಗಳನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳನ್ನು ಅನ್ವೇಷಿಸುತ್ತದೆ. ಅಲ್ಲದೆ, ಉದ್ಯೋಗಗಳು ಮತ್ತು ಕೌಶಲಗಳ ಮೇಲೆ ಕೃತಕ ಬುದ್ಧಿಮತ್ತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಪರಿಣಾಮವನ್ನು ಸಮಿತಿಯು ಮೌಲ್ಯಮಾಪನ ಮಾಡುತ್ತದೆ. ಶಿಕ್ಷಣದಲ್ಲಿ AI ಸಂಯೋಜನೆ, ಉದ್ಯೋಗಿಗಳಿಗೆ ಮರು-ಕೌಶಲ ತರಬೇತಿ, ಅನೌಪಚಾರಿಕ ಕೆಲಸಗಳ ಔಪಚಾರಿಕೀಕರಣ ಮತ್ತು ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸಲು ಅಗತ್ಯ ಕ್ರಮಗಳನ್ನು ಇದು ಪ್ರಸ್ತಾಪಿಸುತ್ತದೆ.
ಸೇವಾ ವಲಯವು ವಿಕಸನಗೊಳ್ಳುತ್ತಿರುವಂತೆ, ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗಳ ನಡುವೆಯೂ ಭಾರತದ ಬಾಹ್ಯ ವಲಯದ ಸಾಧನೆಗೆ ಸೇವಾ ವ್ಯಾಪಾರವು ಪ್ರಮುಖ ಕೊಡುಗೆ ನೀಡುತ್ತಿದೆ.
ಭಾರತದ ಸೇವಾ ರಫ್ತು ಸಾಧನೆ ಮತ್ತು ಚಾಲಕಗಳು
ಬೆಳವಣಿಗೆ ಮತ್ತು ಇತ್ತೀಚಿನ ಸಾಧನೆ:
ಭಾರತದ ಸೇವಾ ರಫ್ತುಗಳು ಹಣಕಾಸು ವರ್ಷ 2025-26 ರಲ್ಲಿ ಬಲವಾದ ವೇಗವನ್ನು ಕಾಯ್ದುಕೊಂಡಿವೆ. ಭಾರತೀಯ ಸೇವೆಗಳಿಗೆ ಜಾಗತಿಕ ಮಟ್ಟದಲ್ಲಿ ನಿರಂತರ ಬೇಡಿಕೆ ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಏಪ್ರಿಲ್-ಜನವರಿ 2025-26 ರ ಅವಧಿಯಲ್ಲಿ, ಸೇವಾ ರಫ್ತುಗಳು ಅಂದಾಜು 348.4 ಬಿಲಿಯನ್ ಯುಎಸ್ ಡಾಲರ್ ತಲುಪಿವೆ ಎಂದು ಅಂದಾಜಿಸಲಾಗಿದೆ.

|
ಆರ್ಥಿಕ ಬೆಳವಣಿಗೆಯಲ್ಲಿ ಸೇವಾ ವಲಯದ ಹೆಚ್ಚುತ್ತಿರುವ ಕೊಡುಗೆ
ಜಾಗತಿಕ ರಾಜಕೀಯ ಅಸ್ಥಿರತೆಯ ನಡುವೆಯೂ, ಭಾರತದ ಬಾಹ್ಯ ವಲಯಕ್ಕೆ ಸೇವಾ ರಫ್ತುಗಳು ಒಂದು ನಿರ್ಣಾಯಕ ರಕ್ಷಣಾ ಕವಚವಾಗಿ ಹೊರಹೊಮ್ಮಿವೆ. ಇವು ಹೊರಗಿನ ಆರ್ಥಿಕ ಅಪಾಯಗಳನ್ನು ತಗ್ಗಿಸಲು ಮತ್ತು ವ್ಯಾಪಾರ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತಿವೆ. ಒಟ್ಟಾರೆ ಆರ್ಥಿಕ ಚಟುವಟಿಕೆಯಲ್ಲಿ ಸೇವಾ ರಫ್ತುಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯು ಅವುಗಳ ಕೊಡುಗೆಯಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಜಿಡಿಪಿಯಲ್ಲಿ ಹೆಚ್ಚುತ್ತಿರುವ ಪಾಲು: ಭಾರತದ ಜಿಡಿಪಿಯಲ್ಲಿ ಸೇವಾ ರಫ್ತುಗಳ ಪಾಲು ಹಣಕಾಸು ವರ್ಷ 2023-25ರ ಅವಧಿಯಲ್ಲಿ ಸರಾಸರಿ ಶೇ. 9.7 ರಷ್ಟಿತ್ತು. ಇದು ಸಾಂಕ್ರಾಮಿಕ ಪೂರ್ವದ ಅವಧಿಯಲ್ಲಿದ್ದ ಶೇ. 7.4 ಕ್ಕಿಂತ ಗಮನಾರ್ಹ ಏರಿಕೆಯಾಗಿದ್ದು, ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ಸೇವಾ ವಲಯದ ಬೆಳೆಯುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತದೆ. ಈ ಸ್ಥಿರವಾದ ಕೊಡುಗೆಯು ಹಣಕಾಸು ವರ್ಷ 2026ರ ಮೊದಲಾರ್ಧದಲ್ಲಿ (H1) ಮತ್ತಷ್ಟು ಬಲಗೊಂಡಿದ್ದು, ಜಿಡಿಪಿಯಲ್ಲಿ ಸೇವಾ ರಫ್ತುಗಳ ಪಾಲು ಶೇ. 10 ಕ್ಕೆ ಏರಿಕೆಯಾಗಿದೆ. ಇದು ಭಾರತದ ಸೇವಾ ಆಧಾರಿತ ಬೆಳವಣಿಗೆಯ ಪಥದ ನಿರಂತರ ವಿಸ್ತರಣೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಪ್ರತಿಬಿಂಬಿಸುತ್ತದೆ.
ಕಾರ್ಮಿಕ ಮಾರುಕಟ್ಟೆಯ ಸ್ಥಿರತೆಗೆ ಬೆಂಬಲ: ಸೇವಾ ವಲಯವು ಉದ್ಯೋಗ ಸೃಷ್ಟಿಯ ಪ್ರಮುಖ ಮೂಲವಾಗಿಯೂ ಹೊರಹೊಮ್ಮಿದೆ. ಇದು ದೇಶದ ಒಟ್ಟು ಉದ್ಯೋಗದ ಸುಮಾರು ಶೇ. 30 ರಷ್ಟನ್ನು ಹೊಂದಿದೆ. ಕಳೆದ ಆರು ವರ್ಷಗಳಲ್ಲಿ, ಈ ವಲಯವು ಸುಮಾರು 4 ಕೋಟಿ (40 ಮಿಲಿಯನ್) ಉದ್ಯೋಗಗಳನ್ನು ಸೇರಿಸಿದೆ, ವಿಶೇಷವಾಗಿ ಕೋವಿಡ್ ನಂತರದ ಚೇತರಿಕೆಯ ಅವಧಿಯಲ್ಲಿ ಇದು ಕಾರ್ಮಿಕ ಮಾರುಕಟ್ಟೆಯ ಆಘಾತಗಳನ್ನು ತಡೆದುಕೊಳ್ಳುವ ಪ್ರಮುಖ ಶಕ್ತಿಯಾಗಿ ಕಾರ್ಯನಿರ್ವಹಿಸಿದೆ.
|
ಸೇವಾ ರಫ್ತುಗಳ ವಲಯವಾರು ಪ್ರೇರಕ ಶಕ್ತಿಗಳು
ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ಕುರಿತಾದ ಆರ್‌ಬಿಐ ಸಮೀಕ್ಷೆಯ ಪ್ರಕಾರ, ಸಾಫ್ಟ್‌ವೇರ್ ಸೇವೆಗಳ ರಫ್ತು 2024-25ರ ಹಣಕಾಸು ವರ್ಷದಲ್ಲಿ ವಾರ್ಷಿಕವಾಗಿ ಶೇ. 7.3 ರಷ್ಟು ಹೆಚ್ಚಳವಾಗಿದೆ, ಇದು ಭಾರತದ ಡಿಜಿಟಲ್ ಸೇವಾ ರಫ್ತುಗಳಲ್ಲಿನ ನಿರಂತರ ವೇಗವನ್ನು ಪ್ರತಿಬಿಂಬಿಸುತ್ತದೆ. ಈ ಅವಧಿಯಲ್ಲಿ, ಭಾರತದ ಒಟ್ಟು ಸಾಫ್ಟ್‌ವೇರ್ ಸೇವಾ ರಫ್ತುಗಳಲ್ಲಿ ಕಂಪ್ಯೂಟರ್ ಸೇವೆಗಳು ಮೂರನೇ ಎರಡಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದರೆ, ITES ರಫ್ತುಗಳಲ್ಲಿ ಬಿಪಿಒ ಸೇವೆಗಳು ಅತ್ಯಂತ ಪ್ರಮುಖ ಅಂಶವಾಗಿ ಮುಂದುವರಿದಿವೆ.
ಈ ಬಲವಾದ ಸಾಧನೆಯು ಭಾರತದ ಸೇವಾ ವಲಯದ ವಿಶಾಲವಾದ ಸ್ಥಿತಿಸ್ಥಾಪಕತ್ವವನ್ನು ಪ್ರತಿಬಿಂಬಿಸುತ್ತದೆ. ಸಾಫ್ಟ್‌ವೇರ್, ಬಿಪಿಎಂ, ಸಲಹಾ ಮತ್ತು ಫಿನ್‌ಟೆಕ್ ವಿಭಾಗಗಳ ನಿರಂತರ ವಿಸ್ತರಣೆಯು ಇದಕ್ಕೆ ಬೆಂಬಲವಾಗಿದ್ದು, ಇವು ಒಟ್ಟಾರೆ ಸೇವಾ ರಫ್ತುಗಳನ್ನು ಮುನ್ನಡೆಸುತ್ತಿವೆ. ಡಿಜಿಟಲ್ ಸೇವೆಗಳಿಗೆ ಜಾಗತಿಕವಾಗಿ ಇರುವ ಭಾರಿ ಬೇಡಿಕೆಯಿಂದಾಗಿ, ಸಾಫ್ಟ್‌ವೇರ್ ಸೇವೆಗಳು ಅತಿದೊಡ್ಡ ಘಟಕವಾಗಿ ಮುಂದುವರಿದಿವೆ. ಇದು ಒಟ್ಟು ಸೇವಾ ರಫ್ತುಗಳಲ್ಲಿ ಶೇ. 40 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದು, ಹಣಕಾಸು ವರ್ಷ 2016-20ರ ಅವಧಿಯಲ್ಲಿನ ಶೇ. 4.7 ಕ್ಕೆ ಹೋಲಿಸಿದರೆ, 2023-25ರ ಹಣಕಾಸು ವರ್ಷದ ಅವಧಿಯಲ್ಲಿ ಶೇ. 13.5 ರ ಸರಾಸರಿ ದರದಲ್ಲಿ ವಿಸ್ತರಣೆಯಾಗಿದೆ. ಇದರೊಂದಿಗೆ, ಇತ್ತೀಚಿನ ವರ್ಷಗಳಲ್ಲಿ ವ್ಯವಹಾರ ಸೇವೆಗಳ ರಫ್ತು ಕೂಡ ವೇಗವನ್ನು ಪಡೆದುಕೊಂಡಿದ್ದು, ಭಾರತದ ಬಾಹ್ಯ ವಲಯದ ಬಲಕ್ಕೆ ಈ ಕ್ಷೇತ್ರದ ಬೆಳೆಯುತ್ತಿರುವ ಕೊಡುಗೆಯನ್ನು ಪುಷ್ಟೀಕರಿಸಿವೆ. 2023-25ರ ಹಣಕಾಸು ವರ್ಷದಲ್ಲಿ, ವೃತ್ತಿಪರ ಮತ್ತು ನಿರ್ವಹಣಾ ಸಲಹಾ ಸೇವೆಗಳು ಎರಡನೇ ಅತಿದೊಡ್ಡ ಕೊಡುಗೆದಾರನಾಗಿ ಹೊರಹೊಮ್ಮಿವೆ. ಇವು ಶೇ. 25.9 ರ ದರದಲ್ಲಿ ಬೆಳವಣಿಗೆ ಹೊಂದಿದ್ದು, ಆ ಮೂಲಕ ಇವುಗಳ ಪಾಲು ಹಣಕಾಸು ವರ್ಷ 2016-20ರಲ್ಲಿದ್ದ ಶೇ. 10.5 ರಿಂದ 2023-25ರ ಅವಧಿಯಲ್ಲಿ ಶೇ. 18.3 ಕ್ಕೆ ಏರಿಕೆಯಾಗಿದೆ.

ಒಟ್ಟಾರೆಯಾಗಿ, ಈ ವಿಭಾಗಗಳು ಸೇವಾ ರಫ್ತಿನ ಶೇಕಡಾ 65 ಕ್ಕಿಂತ ಹೆಚ್ಚು ಪಾಲನ್ನು ಹೊಂದಿವೆ, ಇದು ಗಡಿಯಾಚೆಗಿನ ಮತ್ತು ಜ್ಞಾನಾಧಾರಿತ ಚಟುವಟಿಕೆಗಳಲ್ಲಿ ಭಾರತದ ಬೆಳೆಯುತ್ತಿರುವ ವಿಶೇಷತೆಯನ್ನು ತಿಳಿಸುತ್ತದೆ.
ಸೇವಾ ವಲಯದ ಮೇಲೆ ಬಜೆಟ್ ಗಮನ: ಆರ್ಥಿಕತೆಗೆ ಒಂದು ಉತ್ತೇಜನ
ಸಾಫ್ಟ್‌ವೇರ್ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು (ITES), ಜ್ಞಾನ ಪ್ರಕ್ರಿಯೆ ಹೊರಗುತ್ತಿಗೆ (KPO) ಮತ್ತು ಸಾಫ್ಟ್‌ವೇರ್ ಸಂಬಂಧಿತ ಗುತ್ತಿಗೆ ಸಂಶೋಧನೆ ಮತ್ತು ಅಭಿವೃದ್ಧಿ (R&D) ಸೇವೆಗಳಲ್ಲಿ ಭಾರತವು ಜಾಗತಿಕ ನಾಯಕನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಈ ಬಲವಾದ ಜಾಗತಿಕ ಸ್ಥಾನಮಾನವನ್ನು ಗುರುತಿಸಿ, ಕೇಂದ್ರ ಬಜೆಟ್ 2026-27 ಐಟಿ ಮತ್ತು ಐಟಿ ಆಧಾರಿತ ಸೇವಾ ವಲಯದ ಬೆಳವಣಿಗೆಯನ್ನು ಬೆಂಬಲಿಸಲು ಮತ್ತು ಸುಗಮಗೊಳಿಸಲು ಹಲವಾರು ಸುಧಾರಣೆಗಳನ್ನು ಪ್ರಸ್ತಾಪಿಸಿದೆ.
ಡೇಟಾ ಸೆಂಟರ್ ಪ್ರೋತ್ಸಾಹಕಗಳ ಮೂಲಕ ಕ್ಲೌಡ್ ಸೇವೆಗಳ ರಫ್ತಿಗೆ ಉತ್ತೇಜನ
ಕೇಂದ್ರ ಬಜೆಟ್‌ನ ಅತ್ಯಂತ ವಿಶಿಷ್ಟವಾದ ಉಪಕ್ರಮಗಳಲ್ಲಿ ಒಂದೆಂದರೆ, ಭಾರತ ಮೂಲದ ಡೇಟಾ ಸೆಂಟರ್ ಮೂಲಸೌಕರ್ಯಗಳ ಮೂಲಕ ಕಾರ್ಯನಿರ್ವಹಿಸುವ ಜಾಗತಿಕ ಕ್ಲೌಡ್ ಸೇವಾ ಪೂರೈಕೆದಾರರನ್ನು ಆಕರ್ಷಿಸಲು ಪ್ರೋತ್ಸಾಹಕಗಳನ್ನು ಪರಿಚಯಿಸಿರುವುದು. ನಿರ್ಣಾಯಕ ಮೂಲಸೌಕರ್ಯಗಳನ್ನು ಸಕ್ರಿಯಗೊಳಿಸುವ ಮತ್ತು ಡೇಟಾ ಸೆಂಟರ್‌ಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಅಗತ್ಯವನ್ನು ಗುರುತಿಸಿ, ಭಾರತದಲ್ಲಿರುವ ಮೂಲಸೌಕರ್ಯಗಳನ್ನು ಬಳಸಿಕೊಂಡು ಜಾಗತಿಕ ಗ್ರಾಹಕರಿಗೆ ಕ್ಲೌಡ್ ಸೇವೆಗಳನ್ನು ಒದಗಿಸುವ ವಿದೇಶಿ ಕಂಪನಿಗಳಿಗೆ 2047 ರವರೆಗೆ ತೆರಿಗೆ ರಜೆ ನೀಡಲು ಬಜೆಟ್ ಪ್ರಸ್ತಾಪಿಸಿದೆ. ಇದರ ಜೊತೆಗೆ, ಭಾರತದಿಂದ ಡೇಟಾ ಸೆಂಟರ್ ಸೇವೆಗಳನ್ನು ಒದಗಿಸುವ ಸಂಬಂಧಿತ ಘಟಕಗಳು ವೆಚ್ಚದ ಮೇಲೆ ಶೇಕಡಾ 15 ರಷ್ಟು ಸೇಫ್ ಹಾರ್ಬರ್ ಮಾರ್ಜಿನ್ ಲಾಭವನ್ನು ಪಡೆಯಲು ಪ್ರಸ್ತಾಪಿಸಲಾಗಿದೆ.
ಐಟಿ ಸೇವೆಗಳಿಗಾಗಿ ಸೇಫ್ ಹಾರ್ಬರ್ ಸುಧಾರಣೆಗಳು
ಅನುಸರಣೆಯನ್ನು ಸರಳಗೊಳಿಸಲು, ಸಾಫ್ಟ್‌ವೇರ್ ಅಭಿವೃದ್ಧಿ ಸೇವೆಗಳು, ಐಟಿ ಆಧಾರಿತ ಸೇವೆಗಳು, ಜ್ಞಾನ ಪ್ರಕ್ರಿಯೆ ಹೊರಗುತ್ತಿಗೆ ಸೇವೆಗಳು ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಗೆ ಸಂಬಂಧಿಸಿದ ಗುತ್ತಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಸೇವೆಗಳನ್ನು ಒಂದೇ 'ಮಾಹಿತಿ ತಂತ್ರಜ್ಞಾನ ಸೇವೆಗಳ' ವರ್ಗದಡಿ ತರಲು ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ. ಇವುಗಳಿಗೆ ಶೇಕಡಾ 15.5 ರಷ್ಟು ಸಾಮಾನ್ಯ ಸೇಫ್ ಹಾರ್ಬರ್ ಮಾರ್ಜಿನ್ ಅನ್ನು ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೆ, ಐಟಿ ಸೇವೆಗಳಿಗಾಗಿ ಸೇಫ್ ಹಾರ್ಬರ್ ಮಿತಿಯನ್ನು ₹300 ಕೋಟಿಯಿಂದ ₹2,000 ಕೋಟಿಗೆ ಹೆಚ್ಚಿಸಲಾಗಿದೆ.
ಸೇಫ್ ಹಾರ್ಬರ್ ವ್ಯವಸ್ಥೆಯನ್ನು ಯಾವುದೇ ತೆರಿಗೆ ಅಧಿಕಾರಿಯ ಅಗತ್ಯವಿಲ್ಲದೆ ಸ್ವಯಂಚಾಲಿತ ನಿಯಮ-ಚಾಲಿತ ಪ್ರಕ್ರಿಯೆಯ ಮೂಲಕ ಅನುಮೋದಿಸಲಾಗುತ್ತದೆ. ಒಮ್ಮೆ ಇದನ್ನು ಆರಿಸಿಕೊಂಡರೆ, ಐಟಿ ಸೇವಾ ಕಂಪನಿಗಳು ತಮ್ಮ ವಿವೇಚನೆಯಂತೆ ಸತತ ಐದು ವರ್ಷಗಳ ಅವಧಿಯವರೆಗೆ ಅದೇ ಸೇಫ್ ಹಾರ್ಬರ್ ನಿಬಂಧನೆಗಳ ಅಡಿಯಲ್ಲಿ ಮುಂದುವರಿಯಲು ಅನುಮತಿಸಲಾಗುವುದು.
ಅಡ್ವಾನ್ಸ್ ಪ್ರೈಸಿಂಗ್ ಅಗ್ರಿಮೆಂಟ್ ಸುಧಾರಣೆಗಳು
ಅಡ್ವಾನ್ಸ್ ಪ್ರೈಸಿಂಗ್ ಅಗ್ರಿಮೆಂಟ್ ಮಾಡಿಕೊಳ್ಳಲು ಬಯಸುವ ಐಟಿ ಸೇವಾ ಕಂಪನಿಗಳಿಗಾಗಿ, 2 ವರ್ಷಗಳ ಒಳಗೆ ಒಪ್ಪಂದಗಳನ್ನು ಮುಕ್ತಾಯಗೊಳಿಸುವ ಉದ್ದೇಶದೊಂದಿಗೆ ಏಕಪಕ್ಷೀಯ APA ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಬಜೆಟ್ ಪ್ರಸ್ತಾಪಿಸಿದೆ. ತೆರಿಗೆದಾರರ ಕೋರಿಕೆಯ ಮೇರೆಗೆ ಈ 2 ವರ್ಷಗಳ ಅವಧಿಯನ್ನು ಇನ್ನೂ 6 ತಿಂಗಳವರೆಗೆ ವಿಸ್ತರಿಸಬಹುದು. APA ಒಪ್ಪಂದಕ್ಕೆ ಒಳಗಾಗುವ ಘಟಕಗಳಿಗೆ ಲಭ್ಯವಿರುವ 'ಮಾರ್ಪಡಿಸಿದ ರಿಟರ್ನ್ಸ್' ಸಲ್ಲಿಸುವ ಸೌಲಭ್ಯವನ್ನು ಅವರ ಸಂಬಂಧಿತ ಘಟಕಗಳಿಗೂ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.

|
ಏಕಪಕ್ಷೀಯ ಮುಂಗಡ ಬೆಲೆ ನಿರ್ಧಾರ ಒಪ್ಪಂದ
ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ 'ಏಕಪಕ್ಷೀಯ ಮುಂಗಡ ಬೆಲೆ ನಿರ್ಧಾರ ಒಪ್ಪಂದ' ಎನ್ನುವುದು ತೆರಿಗೆದಾರ ಮತ್ತು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ನಡುವೆ ಮಾಡಿಕೊಳ್ಳಲಾಗುವ ಒಂದು ಒಪ್ಪಂದವಾಗಿದೆ. ನಿರ್ದಿಷ್ಟಪಡಿಸಿದ ಅಂತರರಾಷ್ಟ್ರೀಯ ವಹಿವಾಟುಗಳು ಅಥವಾ ನಿರ್ದಿಷ್ಟಪಡಿಸಿದ ದೇಶೀಯ ವಹಿವಾಟುಗಳಿಗೆ ಸಂಬಂಧಿಸಿದಂತೆ ವಿಧಿಸಲಾಗುವ ಬೆಲೆ ಅಥವಾ ಅದರ ನಿರ್ಧಾರವನ್ನು, ಒಂದು ನಿರ್ದಿಷ್ಟ ಅವಧಿಗೆ ಮುಂಚಿತವಾಗಿಯೇ ನಿರ್ಧರಿಸಲು ಈ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ.
|
ಸೇವಾ ವಲಯವನ್ನು ಬೆಂಬಲಿಸಲು ಹೆಚ್ಚುವರಿ ಬಜೆಟ್ ಉಪಕ್ರಮಗಳು
ಕೇಂದ್ರ ಬಜೆಟ್ 2026-27 ಹಣಕಾಸು ವರ್ಷವು ಕೌಶಲ ಅಭಿವೃದ್ಧಿಯ ಮೂಲಕ ಭಾರತದ ಸೇವಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದ ಉಪಕ್ರಮಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಕೆಲವು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ, ವೈದ್ಯಕೀಯ ಮೌಲ್ಯದ ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳಿಗೆ ಸಂಬಂಧಿಸಿವೆ.
- ಕುಶಲ ಆರೈಕೆದಾರರ ಅಭಿವೃದ್ಧಿ: ವಯೋವೃದ್ಧರ ಆರೈಕೆ ಮತ್ತು ಪೂರಕ ಆರೈಕೆ ಸೇವೆಗಳನ್ನು ಒಳಗೊಂಡ ಬಲಿಷ್ಠ 'ಆರೈಕೆ ವ್ಯವಸ್ಥೆಯನ್ನು' ನಿರ್ಮಿಸಲಾಗುವುದು. ಯೋಗ, ಕ್ಷೇಮ ಮತ್ತು ವೈದ್ಯಕೀಯ ಹಾಗೂ ಸಹಾಯಕ ಸಾಧನಗಳ ಕಾರ್ಯಾಚರಣೆಯಂತಹ ಮೂಲಭೂತ ಮತ್ತು ಪೂರಕ ಕೌಶಲಗಳನ್ನು ಸಂಯೋಜಿಸಿ, ಬಹು-ಕೌಶಲದ ಆರೈಕೆದಾರರಿಗೆ ತರಬೇತಿ ನೀಡಲು ವಿವಿಧ NSQF-ಸಂಯೋಜಿತ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲಾಗುವುದು. ಬರುವ ವರ್ಷದಲ್ಲಿ, 1.5 ಲಕ್ಷ ಆರೈಕೆದಾರರಿಗೆ ತರಬೇತಿ ನೀಡಲಾಗುವುದು.
|
ಭಾರತದ ಆರೈಕೆ ಆರ್ಥಿಕತೆಯ ಬಲವರ್ಧನೆ
ವೇಗವಾಗಿ ಹೆಚ್ಚುತ್ತಿರುವ ವಯೋವೃದ್ಧರ ಸಂಖ್ಯೆ, ಸುಧಾರಿತ ಜೀವಿತಾವಧಿ ಮತ್ತು ದೀರ್ಘಕಾಲದ ಕಾಯಿಲೆಗಳ ಹೆಚ್ಚಳದಿಂದಾಗಿ, ಜಾಗತಿಕವಾಗಿ ಆರೈಕೆದಾರರ ಬೇಡಿಕೆಯು ಹೆಚ್ಚುತ್ತಿದೆ. ಐಎಲ್ಒ (ILO - ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ) ಪ್ರಕಾರ, ಆರೈಕೆ ಸೇವೆಗಳಲ್ಲಿರುವ ಪ್ರಸ್ತುತ ಗಣನೀಯ ಕೊರತೆಗಳನ್ನು ನೀಗಿಸುವುದರಿಂದ ಸುಮಾರು 30 ಕೋಟಿ (300 ಮಿಲಿಯನ್) ಉದ್ಯೋಗಗಳನ್ನು ಸೃಷ್ಟಿಸಬಹುದು. ಈ ಹಿನ್ನೆಲೆಯಲ್ಲಿ, ವಯೋವೃದ್ಧರ ಮತ್ತು ಪೂರಕ ಆರೈಕೆ ಸೇವೆಗಳನ್ನು ಒಳಗೊಂಡ ಬಲಿಷ್ಠ 'ಆರೈಕೆ ವ್ಯವಸ್ಥೆಯನ್ನು' ಅಭಿವೃದ್ಧಿಪಡಿಸುವ ಕುರಿತಾದ ಬಜೆಟ್ 2026-27ರ ಘೋಷಣೆಗಳು ಭಾರತದ ಆರೈಕೆ ವೃತ್ತಿಪರರ ಸಂಖ್ಯೆಯನ್ನು ವಿಸ್ತರಿಸುವ ನಿರೀಕ್ಷೆಯಿದೆ. ಇದು ಜಾಗತಿಕ ಬೇಡಿಕೆಗೆ ಗಮನಾರ್ಹ ಕೊರತೆಯನ್ನು ನೀಗಿಸಲು ಸಹಕಾರಿಯಾಗಲಿದೆ.
|
- ಆಯುಷ್: ಭಾರತವು ಆಯುಷ್‌ನ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸಲು ಗಮನಹರಿಸುತ್ತಿರುವ ಹಿನ್ನೆಲೆಯಲ್ಲಿ, 2026-27ರ ಬಜೆಟ್ ಘೋಷಣೆಗಳು ಈ ಸಾಂಪ್ರದಾಯಿಕ ವೈದ್ಯಕೀಯ ಶಾಖೆಗಳಿಗೆ ಇಂದು ಯೋಗವು ಪಡೆದಿರುವ ಬೃಹತ್ ಜಾಗತಿಕ ಮನ್ನಣೆಯ ಮಾದರಿಯಲ್ಲೇ ಜಾಗತಿಕ ಸ್ವೀಕಾರಾರ್ಹತೆ ಮತ್ತು ಮಾನ್ಯತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಈ ಕೆಳಗಿನ ಕ್ರಮಗಳನ್ನು ಘೋಷಿಸಲಾಗಿದೆ:
- 3 ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆ.
- ಜಾಮ್ನಗರದಲ್ಲಿರುವ WHO ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರದ ಮೇಲ್ದರ್ಜೆಗೇರಿಸುವಿಕೆ: ಇದು ಸಾಂಪ್ರದಾಯಿಕ ಔಷಧಗಳ ಬಗ್ಗೆ ಪುರಾವೆ ಆಧಾರಿತ ಸಂಶೋಧನೆ, ತರಬೇತಿ ಮತ್ತು ಜಾಗೃತಿಯನ್ನು ಬಲಪಡಿಸುತ್ತದೆ.
- ಆಯುಷ್ ಫಾರ್ಮಸಿಗಳು ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯಗಳ ಮೇಲ್ದರ್ಜೆಗೇರಿಸುವಿಕೆ: ಉನ್ನತ ಮಟ್ಟದ ಪ್ರಮಾಣೀಕರಣ ವ್ಯವಸ್ಥೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
- ಪ್ರವಾಸೋದ್ಯಮಕ್ಕೆ ಉತ್ತೇಜನ: ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಕೆಳಗಿನ ಕ್ರಮಗಳನ್ನು ಒಳಗೊಂಡಂತೆ ಹಲವಾರು ಕ್ರಮಗಳನ್ನು ಘೋಷಿಸಲಾಗಿದೆ:
- ವೈದ್ಯಕೀಯ ಮೌಲ್ಯದ ಪ್ರಯಾಣ: ಭಾರತವನ್ನು ವೈದ್ಯಕೀಯ ಮೌಲ್ಯದ ಪ್ರವಾಸೋದ್ಯಮದ ಜಾಗತಿಕ ಹಬ್ ಆಗಿ ರೂಪಿಸುವ ಉದ್ದೇಶದಿಂದ, ಖಾಸಗಿ ವಲಯದ ಸಹಭಾಗಿತ್ವದಲ್ಲಿ ಐದು ಪ್ರಾದೇಶಿಕ ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಬೆಂಬಲ ನೀಡಲಿದೆ.
- ಮಾರ್ಗದರ್ಶಿಗಳ ಕೌಶಲ್ಯ ಅಭಿವೃದ್ಧಿ: 20 ಪ್ರಮುಖ ತಾಣಗಳಲ್ಲಿ 10,000 ಮಾರ್ಗದರ್ಶಿಗಳಿಗೆ ಕೌಶಲ್ಯ ತರಬೇತಿ ನೀಡಲು ಪೈಲಟ್ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಈ ಉಪಕ್ರಮವು ಭಾರತೀಯ ಮ್ಯಾನೇಜ್‌ಮೆಂಟ್ ಸಂಸ್ಥೆ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ 12 ವಾರಗಳ ಹೈಬ್ರಿಡ್ ತರಬೇತಿ ಕಾರ್ಯಕ್ರಮವನ್ನು ಒಳಗೊಂಡಿದೆ.
- ಪುರಾತತ್ವ ತಾಣಗಳ ಅಭಿವೃದ್ಧಿ: ಲೋಥಲ್, ಸಾರನಾಥ ಮತ್ತು ಹಸ್ತಿನಾಪುರ ಸೇರಿದಂತೆ 15 ಪ್ರಮುಖ ಪುರಾತತ್ವ ತಾಣಗಳನ್ನು ವಿಶ್ವದರ್ಜೆಯ ಅನುಭವ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಮೂಲಕ ಪರಂಪರೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುವುದು. ಈ ಉಪಕ್ರಮವು ಪ್ರವಾಸಿಗರ ಮೂಲಸೌಕರ್ಯವನ್ನು ಹೆಚ್ಚಿಸುವುದು, ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಹೆಚ್ಚಿಸಲು ಈಶಾನ್ಯದಲ್ಲಿ ಹೊಸ 'ಬೌದ್ಧ ಸರ್ಕ್ಯೂಟ್' ಅನ್ನು ಪ್ರಾರಂಭಿಸುವುದರ ಮೇಲೆ ಗಮನ ಹರಿಸುತ್ತದೆ.
- ವಿಶ್ವದರ್ಜೆಯ ಟ್ರೆಕ್ಕಿಂಗ್ ಮತ್ತು ಹೈಕಿಂಗ್ ಅನುಭವಗಳನ್ನು ನೀಡುವ ಭಾರತದ ಸಾಮರ್ಥ್ಯ ಮತ್ತು ಅವಕಾಶಗಳನ್ನು ನಿರ್ಮಿಸುವ ಬಗ್ಗೆಯೂ ಗಮನ ಹರಿಸಲಾಗಿದೆ.
- ಪ್ರವಾಸೋದ್ಯಮ ಸಂಪರ್ಕಕ್ಕಾಗಿ ಹೈ-ಸ್ಪೀಡ್ ರೈಲು: ಪ್ರಸ್ತಾವಿತ ಹೈ-ಸ್ಪೀಡ್ ರೈಲು ಮಾರ್ಗಗಳು (ಮುಂಬೈ-ಪುಣೆ; ಪುಣೆ-ಹೈದರಾಬಾದ್; ಹೈದರಾಬಾದ್-ಬೆಂಗಳೂರು; ಹೈದರಾಬಾದ್-ಚೆನ್ನೈ; ಚೆನ್ನೈ-ಬೆಂಗಳೂರು; ಬೆಂಗಳೂರು-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ) ಪ್ರಮುಖ ವ್ಯಾಪಾರ ಕೇಂದ್ರಗಳು ಮತ್ತು ಸಾಂಸ್ಕೃತಿಕ ಮಹತ್ವದ ತಾಣಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ.
ಸೇವಾ ರಫ್ತು ಸ್ಪರ್ಧಾತ್ಮಕತೆಯ ಹೊಸ ಪ್ರೇರಕ ಶಕ್ತಿಗಳು
ಹೆಚ್ಚುತ್ತಿರುವ ಜಿಸಿಸಿ ಹೆಜ್ಜೆಗುರುತು

ಭಾರತದ ವಿಸ್ತರಿಸುತ್ತಿರುವ ಸೇವಾ ರಫ್ತುಗಳು, ದೇಶವು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಜಾಗತಿಕ ಹಬ್ ಆಗಿ ಹೊರಹೊಮ್ಮುತ್ತಿರುವುದರಿಂದ ಹೆಚ್ಚು ಬೆಂಬಲ ಪಡೆಯುತ್ತಿವೆ. ಈ ಕೇಂದ್ರಗಳು ಹಣಕಾಸು ವರ್ಷ 2020 ಮತ್ತು 2025 ರ ನಡುವೆ ಸುಮಾರು 7% ರಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆ ದರವನ್ನು ಕಂಡಿವೆ. ಭಾರತದಿಂದ ಗಡಿಯಾಚೆಗಿನ ಸೇವೆಗಳನ್ನು ಒದಗಿಸುವಲ್ಲಿ GCC ಗಳು ಪ್ರಮುಖ ಮಾರ್ಗಗಳಾಗಿವೆ. ಹಣಕಾಸು ವರ್ಷ 2024 ರ ಹೊತ್ತಿಗೆ, ಭಾರತವು 1,700 ಕ್ಕೂ ಹೆಚ್ಚು GCC ಗಳನ್ನು ಹೊಂದಿದ್ದು, ಅವುಗಳಲ್ಲಿ 1.9 ದಶಲಕ್ಷಕ್ಕೂ ಹೆಚ್ಚು (19 ಲಕ್ಷ) ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ. ಇದು ಜಾಗತಿಕ ಕಾರ್ಯಾಚರಣೆಗಳಿಗಾಗಿ ಭಾರತವನ್ನು ವಿಶ್ವದ ಅತಿದೊಡ್ಡ ಹಬ್ ಅನ್ನಾಗಿ ಮಾಡಿದೆ.
ಕಾಲಾನಂತರದಲ್ಲಿ, GCC ಗಳು ಕೇವಲ ಬೆಂಬಲ ನೀಡುವ ಕಾರ್ಯಗಳಿಂದ ಬದಲಾಗಿ, ಬಹುರಾಷ್ಟ್ರೀಯ ಕಂಪನಿಗಳ ಜಾಗತಿಕ ಕಾರ್ಯಾಚರಣೆಗಳ ಅವಿಭಾಜ್ಯ ಅಂಗಗಳಾಗಿ ವಿಕಸನಗೊಂಡಿವೆ. ಇವು ಈಗ ಉತ್ಪನ್ನ ಅಭಿವೃದ್ಧಿ, AI-ಆಧಾರಿತ ಡಿಜಿಟಲ್ ಸೇವೆಗಳು, ಸೈಬರ್ ಸೆಕ್ಯೂರಿಟಿ, ಅನಾಲಿಟಿಕ್ಸ್ ಮತ್ತು ಇಂಜಿನಿಯರಿಂಗ್‌ನಂತಹ ಉನ್ನತ ಮೌಲ್ಯದ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ. ಇದು ಭಾರತದ ಜ್ಞಾನ-ಆಧಾರಿತ ಮತ್ತು ಡಿಜಿಟಲ್ ಮೂಲಕ ವಿತರಿಸಲಾಗುವ ಸೇವೆಗಳ ರಫ್ತಿಗೆ ನೇರವಾಗಿ ಕೊಡುಗೆ ನೀಡುತ್ತಿದೆ. ಭಾರತದ ಕೈಗೆಟುಕುವ ಕಾರ್ಮಿಕ ವೆಚ್ಚ, ಬಲವಾದ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯ, ವೆಚ್ಚದ ಸ್ಪರ್ಧಾತ್ಮಕತೆ, SEZ-ಸಂಬಂಧಿತ ಪ್ರೋತ್ಸಾಹಕಗಳು ಮತ್ತು ಕ್ರಿಯಾಶೀಲ ಸ್ಟಾರ್ಟ್‌ಅಪ್ ವ್ಯವಸ್ಥೆಯು ಇವುಗಳ ಬೆಳವಣಿಗೆಗೆ ಪೂರಕವಾಗಿವೆ.
ಭಾರತದ AI ಮತ್ತು ಡಿಜಿಟಲ್ ಪರಿಸರ ವ್ಯವಸ್ಥೆ

ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನಗಳಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳು ಈ ರಫ್ತು ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸುತ್ತಿವೆ. ಸ್ಟ್ಯಾನ್ಫೋರ್ಡ್ ಎಐ ಇಂಡೆಕ್ಸ್ ವರದಿ 2025 ರ ಪ್ರಕಾರ, ಎಐ ಕೌಶಲ್ಯದ ಪ್ರವೇಶದಲ್ಲಿ ಭಾರತವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ, ಇದು ಜಾಗತಿಕ ಸೇವೆಗಳನ್ನು ಒದಗಿಸಲು ಪೂರಕವಾದ ಸುಧಾರಿತ ಡಿಜಿಟಲ್ ಪ್ರತಿಭೆಯ ಲಭ್ಯತೆಯನ್ನು ಪ್ರತಿಫಲಿಸುತ್ತದೆ. ಅಂತರಾಷ್ಟ್ರೀಯ ಸಂಸ್ಥೆಗಳು ಸಹ ಭಾರತದ ಸುಧಾರಿಸುತ್ತಿರುವ ತಾಂತ್ರಿಕ ಸಿದ್ಧತೆಯನ್ನು ಎತ್ತಿ ತೋರಿಸಿವೆ; UNCTAD ನ ಫ್ರಾಂಟಿಯರ್ ಟೆಕ್ನಾಲಜೀಸ್ ರೆಡಿನೆಸ್ ಇಂಡೆಕ್ಸ್ ಅಡಿಯಲ್ಲಿ ಭಾರತವು 2022 ರಲ್ಲಿ 48 ನೇ ಸ್ಥಾನದಲ್ಲಿದ್ದರೆ, 2024 ರಲ್ಲಿ 36 ನೇ ಸ್ಥಾನಕ್ಕೆ ಏರಿದೆ. ಇದರ ಜೊತೆಗೆ, ಬೃಹತ್ ಸಂಖ್ಯೆಯ AI ಡೆವಲಪರ್‌ಗಳನ್ನು ಹೊಂದಿರುವ ಕಾರಣದಿಂದಾಗಿ ಭಾರತವು ಕ್ಲೌಡ್ ಮೂಲಸೌಕರ್ಯ ಸೇವೆಗಳಲ್ಲಿಯೂ ಮುಂಚೂಣಿಯಲ್ಲಿರುವ ದೇಶಗಳಲ್ಲಿ ಒಂದಾಗಿದೆ.
ದತ್ತಾಂಶ ಬಳಕೆ, ಕ್ಲೌಡ್ ಅಳವಡಿಕೆ ಮತ್ತು AI ನಿಯೋಜನೆಯಲ್ಲಿನ ಕ್ಷಿಪ್ರ ಬೆಳವಣಿಗೆಯು ಡಿಜಿಟಲ್ ಮೂಲಸೌಕರ್ಯದಲ್ಲಿನ ಹೂಡಿಕೆಯನ್ನು ವೇಗಗೊಳಿಸುತ್ತಿದೆ. ಭಾರತದ ಡೇಟಾ ಸೆಂಟರ್ ಸಾಮರ್ಥ್ಯವು 2025 ರ ಸುಮಾರಿಗೆ 1.4 GW ಇದ್ದದ್ದು 2030 ರ ವೇಳೆಗೆ ಸುಮಾರು 8 GW ಗೆ ಏರುವ ನಿರೀಕ್ಷೆಯಿದೆ. ಈ ವಿಸ್ತರಣೆಯು ಜಾಗತಿಕವಾಗಿ ಡಿಜಿಟಲ್ ಆಧಾರಿತ ಸೇವೆಗಳನ್ನು ಒದಗಿಸುವ ಭಾರತದ ಸಾಮರ್ಥ್ಯವನ್ನು ಬಲಪಡಿಸುತ್ತದೆ. ದೇಶದ ಬೆಳೆಯುತ್ತಿರುವ ನಾವೀನ್ಯತೆ ವ್ಯವಸ್ಥೆಯು ಹೆಚ್ಚುತ್ತಿರುವ AI ಸ್ಟಾರ್ಟ್‌ಅಪ್‌ಗಳು, ಸಾಹಸೋದ್ಯಮ ಹೂಡಿಕೆ ಮತ್ತು ಜಾಗತಿಕವಾಗಿ ಜನರೇಟಿವ್ AI ಪೇಟೆಂಟ್ ಫೈಲಿಂಗ್‌ನಲ್ಲಿನ ಅತ್ಯಂತ ವೇಗದ ಬೆಳವಣಿಗೆಯ ದರಗಳಲ್ಲಿ ಒಂದಾಗಿ ಪ್ರತಿಫಲಿಸುತ್ತಿದೆ.
ಸೇವಾ ರಫ್ತನ್ನು ಉತ್ತೇಜಿಸುವ ಜಾಗತಿಕ ವ್ಯಾಪಾರ ಒಪ್ಪಂದಗಳು: ಭಾರತದ ವಿಸ್ತರಿಸುತ್ತಿರುವ ವ್ಯಾಪಾರ ಒಪ್ಪಂದಗಳ ಜಾಲವು ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಸೇವಾ ವಲಯದ ಮಾರುಕಟ್ಟೆ ಪ್ರವೇಶವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಒಪ್ಪಂದಗಳು ವೃತ್ತಿಪರರಿಗೆ ಹೆಚ್ಚಿನ ಸಂಚಲನವನ್ನು ಒದಗಿಸುತ್ತವೆ ಮತ್ತು ಭಾರತೀಯ ಸೇವಾ ಪೂರೈಕೆದಾರರಿಗೆ ವ್ಯಾಪಕ ಶ್ರೇಣಿಯ ಸೇವೆಗಳಲ್ಲಿ ಹೊಸ ಅವಕಾಶಗಳನ್ನು ನೀಡುತ್ತವೆ.
ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ
- ವಿಸ್ತೃತ ಮಾರುಕಟ್ಟೆ ಪ್ರವೇಶ: ಐಟಿ/ಐಟಿಇಎಸ್, ವ್ಯಾಪಾರ ಸೇವೆಗಳು, ವೃತ್ತಿಪರ ಸೇವೆಗಳು, ಹಣಕಾಸು, ಟೆಲಿಕಾಂ ಮತ್ತು ಶಿಕ್ಷಣ ಸೇವೆಗಳಂತಹ ಭಾರತದ ಆಸಕ್ತಿಯ ಕ್ಷೇತ್ರಗಳಲ್ಲಿನ 137 ಉಪ-ವಲಯಗಳಲ್ಲಿ ಯುಕೆ ಸಮಗ್ರ ಮತ್ತು ಆಳವಾದ ಮಾರುಕಟ್ಟೆ ಪ್ರವೇಶವನ್ನು ಒದಗಿಸಿದೆ.
- ಭಾರತೀಯ ವೃತ್ತಿಪರರಿಗೆ ಸುಲಭ ಪ್ರವೇಶ: ಸರಳೀಕೃತ ವೀಸಾ ಪ್ರಕ್ರಿಯೆಗಳು ಮತ್ತು ಉದಾರೀಕೃತ ಪ್ರವೇಶ ವಿಭಾಗಗಳಿಂದ ಭಾರತೀಯ ವೃತ್ತಿಪರರು ಪ್ರಯೋಜನ ಪಡೆಯಲಿದ್ದಾರೆ, ಇದು ಯುಕೆಯಲ್ಲಿ ಕೆಲಸ ಮಾಡುವುದನ್ನು ಸುಲಭಗೊಳಿಸುತ್ತದೆ. ಎಲ್ಲಾ ಸೇವಾ ವಲಯಗಳಲ್ಲಿ ಕೆಲಸ ಮಾಡಲು ಕಂಪನಿಗಳಿಂದ ನಿಯೋಜಿಸಲ್ಪಟ್ಟ ವೃತ್ತಿಪರರು ಮತ್ತು ವಾಸ್ತುಶಿಲ್ಪಿಗಳು, ಇಂಜಿನಿಯರ್‌ಗಳು, ಬಾಣಸಿಗರು, ಯೋಗ ಶಿಕ್ಷಕರು ಮತ್ತು ಸಂಗೀತಗಾರರಂತಹ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡುವವರಿಗೆ ಇದು ಸಹಕಾರಿಯಾಗಲಿದೆ.
- ಸಾಮಾಜಿಕ ಭದ್ರತೆಯ ಮೇಲಿನ ಒಪ್ಪಂದ: CETA ಸಹಿ ಮಾಡುವ ಸಂದರ್ಭದಲ್ಲಿ ಎರಡೂ ಕಡೆಯವರು ಸಾಮಾಜಿಕ ಭದ್ರತೆಯ ಒಪ್ಪಂದವನ್ನು ತೀರ್ಮಾನಿಸಲು ತಿಳುವಳಿಕೆಗೆ ಬಂದಿವೆ, ಇದು CETA ನೊಂದಿಗೆ ಏಕಕಾಲದಲ್ಲಿ ಜಾರಿಗೆ ಬರಲಿದೆ. ಅದರಂತೆ, ಸಾಮಾಜಿಕ ಭದ್ರತೆ ಕೊಡುಗೆಗಳಿಗೆ ಸಂಬಂಧಿಸಿದ ಒಪ್ಪಂದಕ್ಕೆ ಎರಡೂ ದೇಶಗಳು 10 ಫೆಬ್ರವರಿ 2026 ರಂದು ಸಹಿ ಹಾಕಿವೆ. ಇದು 36 ತಿಂಗಳವರೆಗಿನ ಅವಧಿಗೆ ಪರಸ್ಪರರ ಪ್ರದೇಶಗಳಲ್ಲಿ ತಾತ್ಕಾಲಿಕ ನಿಯೋಜನೆಯಲ್ಲಿರುವ ಎರಡೂ ದೇಶಗಳ ಉದ್ಯೋಗಿಗಳಿಗೆ ದ್ವಿಗುಣ ಸಾಮಾಜಿಕ ಭದ್ರತೆ ಕೊಡುಗೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತದೆ.
CETA ಅಡಿಯಲ್ಲಿನ ಸಾಮಾಜಿಕ ಭದ್ರತಾ ಕೊಡುಗೆಗಳ ಒಪ್ಪಂದವು, ಸಂಚಲನ ಮತ್ತು ಮಾರುಕಟ್ಟೆ ಪ್ರವೇಶದ ಬದ್ಧತೆಗಳೊಂದಿಗೆ ಸೇರಿ, ಎರಡೂ ದೇಶಗಳ ಉನ್ನತ ಕೌಶಲ್ಯ ಮತ್ತು ನವೀನ ಸೇವಾ ವಲಯಗಳನ್ನು ಬಳಸಿಕೊಳ್ಳುವ ಮೂಲಕ ಭಾರತ-ಯುಕೆ ಸಹಭಾಗಿತ್ವವನ್ನು ಸೇವಾ ವಲಯದಲ್ಲಿ ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಭಾರತ-ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ
- ವಿಸ್ತೃತ ಮಾರುಕಟ್ಟೆ ಪ್ರವೇಶ: ಯುರೋಪಿಯನ್ ಒಕ್ಕೂಟವು ಐಟಿ/ಐಟಿಇಎಸ್ ಮತ್ತು ವೃತ್ತಿಪರ ಸೇವೆಗಳು ಸೇರಿದಂತೆ 144 ಸೇವಾ ಉಪ-ವಲಯಗಳಲ್ಲಿ ತನ್ನ ಬದ್ಧತೆಗಳನ್ನು ವಿಸ್ತರಿಸಿದೆ. ಇದು ಭಾರತೀಯ ಸೇವಾ ಪೂರೈಕೆದಾರರಿಗೆ ರಫ್ತನ್ನು ಹೆಚ್ಚಿಸಲು ಮತ್ತು ಎರಡೂ ಆರ್ಥಿಕತೆಗಳಲ್ಲಿ ನಾವೀನ್ಯತೆ, ಉತ್ಪಾದಕತೆ ಹಾಗೂ ವ್ಯವಹಾರದ ಬೆಳವಣಿಗೆಗೆ ಬೆಂಬಲ ನೀಡಲು ಅನುವು ಮಾಡಿಕೊಡುತ್ತದೆ.
- ಸಂಚಲನ ಮತ್ತು ಸಾಮಾಜಿಕ ಭದ್ರತೆ ಬೆಂಬಲ : ಭಾರತೀಯ ಆಯುಷ್ ವೈದ್ಯರು ಮತ್ತು ಭಾರತೀಯ ವಿದ್ಯಾರ್ಥಿಗಳು ಯುರೋಪಿಯನ್ ಒಕ್ಕೂಟಕ್ಕೆ ತೆರಳಲು ಅನುಕೂಲವಾಗುವಂತೆ ಸುಗಮ ನಿಬಂಧನೆಗಳನ್ನು ರೂಪಿಸಲಾಗಿದೆ. ಅದರೊಂದಿಗೆ, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳ ನಡುವೆ ಸಾಮಾಜಿಕ ಭದ್ರತಾ ವ್ಯವಸ್ಥೆಗಳನ್ನು ನಿರ್ವಹಿಸಲು, ತೀರ್ಮಾನಿಸಲು ಅಥವಾ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಭಾರತ-ಒಮಾನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ
- ವಿಸ್ತೃತ ಮಾರುಕಟ್ಟೆ ಪ್ರವೇಶ: ವೃತ್ತಿಪರ ಸೇವೆಗಳು, ಕಂಪ್ಯೂಟರ್ ಮತ್ತು ಸಂಬಂಧಿತ ಸೇವೆಗಳು ಹಾಗೂ ದೃಶ್ಯ-ಶ್ರವಣ ಸೇವೆಗಳು ಸೇರಿದಂತೆ 127 ಸೇವಾ ಉಪ-ವಲಯಗಳಲ್ಲಿ ಒಮಾನ್ ತನ್ನ ಬದ್ಧತೆಗಳನ್ನು ನೀಡಿದೆ. ಯಾವುದೇ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಇದೇ ಮೊದಲ ಬಾರಿಗೆ, ಒಮಾನ್ ನಿರ್ದಿಷ್ಟ ವರ್ಗದ ವೃತ್ತಿಪರರಿಗಾಗಿ ಅಂದರೆ ಅಕೌಂಟಿಂಗ್, ಇಂಜಿನಿಯರಿಂಗ್, ವೈದ್ಯಕೀಯ, ಐಟಿ, ಶಿಕ್ಷಣ, ನಿರ್ಮಾಣ ಮತ್ತು ಸಲಹಾ ಸೇವೆಗಳಿಗಾಗಿ ಬದ್ಧತೆಯನ್ನು ಘೋಷಿಸಿದೆ. ಆರೋಗ್ಯ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ಸಹ ರೂಪಿಸಲಾಗಿದೆ.

ಐಸಿಟಿ ಮಿತಿಯ ವಿಸ್ತರಣೆ: ಅಂತರ-ಕಾರ್ಪೊರೇಟ್ ವರ್ಗಾವಣೆದಾರರ ಗರಿಷ್ಠ ಮಿತಿಯನ್ನು ಶೇ. 20 ರಿಂದ ಶೇ. 50 ಕ್ಕೆ ಹೆಚ್ಚಿಸಲಾಗಿದೆ. ಇದು ಭಾರತೀಯ ಕಂಪನಿಗಳು ಹೆಚ್ಚಿನ ಸಂಖ್ಯೆಯ ವ್ಯವಸ್ಥಾಪಕ ಮತ್ತು ಪರಿಣಿತ ಸಿಬ್ಬಂದಿಯನ್ನು ವಿದೇಶಗಳಲ್ಲಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ.
ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ
- ವಿಸ್ತೃತ ಮಾರುಕಟ್ಟೆ ಪ್ರವೇಶ: ನ್ಯೂಜಿಲೆಂಡ್ 118 ಸೇವಾ ವಲಯಗಳಲ್ಲಿ ತನ್ನ ಬದ್ಧತೆಗಳನ್ನು ನೀಡಿದೆ. ಭಾರತದೊಂದಿಗೆ ಆಯುರ್ವೇದ, ಯೋಗ ಮತ್ತು ಇತರ ಸಾಂಪ್ರದಾಯಿಕ ವೈದ್ಯಕೀಯ ಸೇವೆಗಳ ವ್ಯಾಪಾರವನ್ನು ಉತ್ತೇಜಿಸಲು ಹಾಗೂ ಭಾರತೀಯ ವಿದ್ಯಾರ್ಥಿಗಳಿಗೆ ಸಂಚಲನ ಮತ್ತು ವಿದ್ಯಾಭ್ಯಾಸದ ನಂತರದ ಉದ್ಯೋಗದ ಅವಕಾಶಗಳನ್ನು ಕಲ್ಪಿಸಲು ಪೂರಕವಾದ ನಿಬಂಧನೆಗಳನ್ನು ರೂಪಿಸಲಾಗಿದೆ.
- ಕುಶಲ ಭಾರತೀಯರಿಗೆ ವೀಸಾ ಪ್ರವೇಶ:ಭಾರತಕ್ಕೆ ಆಸಕ್ತಿಯಿರುವ ಕ್ಷೇತ್ರಗಳಲ್ಲಿ ಕೆಲಸ ಮಾಡಲು, 3 ವರ್ಷಗಳ ಅವಧಿಯವರೆಗೆ ಉಳಿಯಲು 5,000 ಕುಶಲ ಭಾರತೀಯರಿಗೆ ವೀಸಾಗಳ ಕೋಟಾವನ್ನು ನೀಡಲು ನ್ಯೂಜಿಲೆಂಡ್ ಒಪ್ಪಿಕೊಂಡಿದೆ.
ಈ ನಿಬಂಧನೆಗಳು ಭಾರತೀಯ ಯುವಕರು ಮತ್ತು ವೃತ್ತಿಪರರಿಗೆ ಜಾಗತಿಕ ಮಟ್ಟದ ಅನುಭವವನ್ನು ಪಡೆಯಲು ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುತ್ತವೆ.
ಭಾರತ-ಯುರೋಪಿಯನ್ ಮುಕ್ತ ವ್ಯಾಪಾರ ಸಂಘ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ
- ವಿಸ್ತೃತ ಮಾರುಕಟ್ಟೆ ಪ್ರವೇಶ: TEPA ಅಡಿಯಲ್ಲಿ, ಸ್ವಿಟ್ಜರ್ಲೆಂಡ್ 128 ಉಪ-ವಲಯಗಳಲ್ಲಿ, ನಾರ್ವೆ 114, ಲಿಚ್ಟೆನ್‌ಸ್ಟೈನ್ 107 ಮತ್ತು ಐಸ್ಲೆಂಡ್ 110 ಉಪ-ವಲಯಗಳಲ್ಲಿ ಬದ್ಧತೆಗಳನ್ನು ನೀಡಿವೆ. ಮುಂದಿನ 15 ವರ್ಷಗಳಲ್ಲಿ 100 ಬಿಲಿಯನ್ ಡಾಲರ್ ಹೂಡಿಕೆ ಮತ್ತು 1 ಮಿಲಿಯನ್ (10 ಲಕ್ಷ) ನೇರ ಉದ್ಯೋಗಗಳ ಸೃಷ್ಟಿಗೆ ಇದು ಬದ್ಧತೆಯನ್ನು ನೀಡುತ್ತದೆ.
- ವರ್ಧಿತ ಸಂಚಲನ ನಿಬಂಧನೆಗಳು: ಒಪ್ಪಂದದ ಆಧಾರದ ಮೇಲೆ ಸೇವೆ ಒದಗಿಸುವವರು ಮತ್ತು ಸ್ವತಂತ್ರ ವೃತ್ತಿಪರರಿಗಾಗಿ (Independent Professionals) ವಿವಿಧ ಸೇವಾ ವಲಯಗಳಲ್ಲಿ EFTA ಸಂಚಲನಕ್ಕೆ ಸಂಬಂಧಿಸಿದಂತೆ 'FTA ಪ್ಲಸ್' ಬದ್ಧತೆಗಳನ್ನು ನೀಡಿದೆ.
- ಪರಸ್ಪರ ಮಾನ್ಯತೆ ಒಪ್ಪಂದಗಳು: ನರ್ಸಿಂಗ್, ಚಾರ್ಟರ್ಡ್ ಅಕೌಂಟೆನ್ಸಿ ಮತ್ತು ವಾಸ್ತುಶಿಲ್ಪದಂತಹ ವೃತ್ತಿಪರ ಸೇವೆಗಳಲ್ಲಿ ಪರಸ್ಪರ ಮಾನ್ಯತೆ ಒಪ್ಪಂದಗಳನ್ನು ಸಕ್ರಿಯಗೊಳಿಸಲಾಗಿದೆ.
ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ
- ವಿಸ್ತೃತ ಮಾರುಕಟ್ಟೆ ಪ್ರವೇಶ: ECTA ಅಡಿಯಲ್ಲಿ, ಆಸ್ಟ್ರೇಲಿಯಾವು ಸುಮಾರು 135 ಉಪ-ವಲಯಗಳಲ್ಲಿ ತನ್ನ ಬದ್ಧತೆಗಳನ್ನು ಒದಗಿಸಿದೆ.
- ವರ್ಧಿತ ಸಂಚಲನ ನಿಬಂಧನೆಗಳು: ಆಸ್ಟ್ರೇಲಿಯಾವು ಅಂತರ-ಕಾರ್ಪೊರೇಟ್ ವರ್ಗಾವಣೆದಾರರು, ಒಪ್ಪಂದದ ಆಧಾರದ ಮೇಲೆ ಸೇವೆ ಒದಗಿಸುವವರು ಮತ್ತು ಸ್ವತಂತ್ರ ಕಾರ್ಯನಿರ್ವಾಹಕರಿಗೆ ಉನ್ನತ ಗುಣಮಟ್ಟದ ತಾತ್ಕಾಲಿಕ ಪ್ರವೇಶ ಮತ್ತು ವಾಸ್ತವ್ಯದ ಬದ್ಧತೆಗಳನ್ನು (4 ವರ್ಷಗಳವರೆಗೆ) ವಿಸ್ತರಿಸಿದೆ. ಇದರ ಜೊತೆಗೆ, ವ್ಯಾಪಾರ ಸಂದರ್ಶಕರು ಹಾಗೂ ಯಂತ್ರೋಪಕರಣ ಅಳವಡಿಕೆದಾರರು ಮತ್ತು ಸೇವೆ ನೀಡುವವರಿಗೆ ಸಂಬಂಧಿಸಿದಂತೆ ಬದ್ಧತೆಗಳನ್ನು ಕೈಗೊಳ್ಳಲಾಗಿದೆ. ಭಾರತೀಯ ವಿದ್ಯಾರ್ಥಿಗಳಿಗೆ 4 ವರ್ಷಗಳವರೆಗೆ ವಿದ್ಯಾಭ್ಯಾಸದ ನಂತರದ ಕೆಲಸದ ವೀಸಾವನ್ನು ಸಹ ಒದಗಿಸಲಾಗುವುದು.
- ಆಫ್ಶೋರ್ ತೆರಿಗೆ ವಿನಾಯಿತಿ: IAECTA ಅಡಿಯಲ್ಲಿನ ಒಪ್ಪಂದದ ಪ್ರಕಾರ, ಆಸ್ಟ್ರೇಲಿಯಾಕ್ಕೆ ತಾಂತ್ರಿಕ ಸೇವೆಗಳನ್ನು ಒದಗಿಸುವ ಭಾರತೀಯ ಸಂಸ್ಥೆಗಳ ಆಫ್‌ಶೋರ್ ಆದಾಯದ (Offshore income) ಮೇಲಿನ ತೆರಿಗೆಯನ್ನು ನಿಲ್ಲಿಸಲು ಆಸ್ಟ್ರೇಲಿಯಾ ತನ್ನ ದೇಶೀಯ ತೆರಿಗೆ ಕಾನೂನನ್ನು ತಿದ್ದುಪಡಿ ಮಾಡಿದೆ. ಇದು ಭಾರತೀಯ ತಂತ್ರಜ್ಞಾನ ಕಂಪನಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಮ್ಮ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ.
ಮಾರಿಷಸ್ನೊಂದಿಗೆ ಸಮಗ್ರ ಆರ್ಥಿಕ ಸಹಕಾರ ಮತ್ತು ಪಾಲುದಾರಿಕೆ ಒಪ್ಪಂದ
ಈ ಒಪ್ಪಂದವು ಭಾರತೀಯ ಸೇವಾ ಪೂರೈಕೆದಾರರಿಗೆ ಪ್ರಮುಖ ಸೇವಾ ಉದ್ಯಮಗಳಾದ್ಯಂತ ಸುಮಾರು 115 ಉಪ-ವಲಯಗಳಿಗೆ ಪ್ರವೇಶವನ್ನು ನೀಡುತ್ತದೆ, ಇದು ಅವಕಾಶಗಳನ್ನು ವಿಸ್ತರಿಸುತ್ತದೆ ಮತ್ತು ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಬಲಪಡಿಸುತ್ತದೆ.
|
ಸೇವಾ ರಫ್ತನ್ನು ಬಲಪಡಿಸುವ ಜಾಗತಿಕ ಹೂಡಿಕೆ: ಭಾರತದ ಸೇವಾ ವಲಯದಲ್ಲಿ ಹೆಚ್ಚುತ್ತಿರುವ ವಿದೇಶಿ ಹೂಡಿಕೆಯು, ಜಾಗತಿಕ ಸಾಮರ್ಥ್ಯ ಕೇಂದ್ರಗಳ ಕ್ಷಿಪ್ರ ವಿಸ್ತರಣೆ ಮತ್ತು ಅಂತರಾಷ್ಟ್ರೀಯ ವ್ಯಾಪಾರ ಪಾಲುದಾರಿಕೆಗಳನ್ನು ಆಳಗೊಳಿಸಲು ಬೆಂಬಲ ನೀಡುತ್ತಿದೆ. ಇದು ಜಾಗತಿಕವಾಗಿ ಒದಗಿಸಲಾಗುವ ಸೇವೆಗಳಿಗೆ ಭಾರತವನ್ನು ಒಂದು ಆದ್ಯತೆಯ ತಾಣವನ್ನಾಗಿ ರೂಪಿಸಲು ಸಹಾಯ ಮಾಡಿದೆ.
ಹಣಕಾಸು ವರ್ಷ 2023-2025 ರ ಅವಧಿಯಲ್ಲಿ ಒಟ್ಟು ಎಫ್‌ಡಿಐ ಹರಿವಿನಲ್ಲಿ ಸೇವಾ ವಲಯದ ಪಾಲು ಸರಾಸರಿ 80.2% ರಷ್ಟಿದೆ. ಇದು ಕೋವಿಡ್ ಸಾಂಕ್ರಾಮಿಕ ಪೂರ್ವದ ಅವಧಿಯಲ್ಲಿದ್ದ 77.7% ಕ್ಕಿಂತ ಹೆಚ್ಚಾಗಿದ್ದು, ಭಾರತದ ಸೇವಾ ರಫ್ತು ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆದಾರರಿಗಿರುವ ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರತಿಫಲಿಸುತ್ತದೆ. ಹೂಡಿಕೆಯು ಪ್ರಮುಖವಾಗಿ ಮಾಹಿತಿ ಮತ್ತು ಸಂವಹನ ಸೇವೆಗಳಲ್ಲಿ (25.8%) ಮತ್ತು ವೃತ್ತಿಪರ ಸೇವೆಗಳಲ್ಲಿ (23.8%) ಕೇಂದ್ರೀಕೃತವಾಗಿದ್ದು, ಇದು ಡಿಜಿಟಲ್ ಮತ್ತು ಜ್ಞಾನ-ಆಧಾರಿತ ಚಟುವಟಿಕೆಗಳಲ್ಲಿ ಭಾರತಕ್ಕಿರುವ ಬಲವನ್ನು ತೋರಿಸುತ್ತದೆ.
ಜಾಗತಿಕ ಪಾಲುದಾರಿಕೆಗಳ ಬೆಂಬಲದೊಂದಿಗೆ ಡಿಜಿಟಲ್ ಸಶಕ್ತ ಮತ್ತು ಜ್ಞಾನ-ಆಧಾರಿತ ಸೇವೆಗಳು, ಭಾರತದ ವಿಸ್ತರಿಸುತ್ತಿರುವ ಸೇವಾ ರಫ್ತಿಗೆ ಅನುಗುಣವಾಗಿ ವಿದೇಶಿ ಹೂಡಿಕೆಯನ್ನು ಹೇಗೆ ಆಕರ್ಷಿಸುತ್ತಿವೆ ಎಂಬುದನ್ನು ಈ ವಲಯಗಳು ಉಲ್ಲೇಖಿಸುತ್ತವೆ.
|
ಉಪಸಂಹಾರ
ಇತ್ತೀಚಿನ ವರ್ಷಗಳಲ್ಲಿ ಭಾರತದ ಸೇವಾ ರಫ್ತುಗಳು ಬಲವಾದ ಮತ್ತು ಸ್ಥಿರವಾದ ಬೆಳವಣಿಗೆಯನ್ನು ದಾಖಲಿಸಿವೆ, ಇದು ದೇಶದ ಬಾಹ್ಯ ವಲಯದ ಕಾರ್ಯಕ್ಷಮತೆಯ ಅತ್ಯಂತ ಚೇತರಿಸಿಕೊಳ್ಳುವ ಪ್ರೇರಕ ಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ತನ್ನ 'ಕರ್ತವ್ಯ' ಹಾದಿಯಲ್ಲಿ ಸಾಗುತ್ತಿರುವ ಕೇಂದ್ರ ಬಜೆಟ್ 2026-27, ಉದ್ದೇಶಿತ ತೆರಿಗೆ ಸುಧಾರಣೆಗಳು, ಡಿಜಿಟಲ್ ಮೂಲಸೌಕರ್ಯ ಪ್ರೋತ್ಸಾಹಕಗಳು, ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು ಮತ್ತು ಭಾರತದ ಸೇವಾ ವಲಯದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಕ್ರಮಗಳ ಮೂಲಕ ಸೇವಾ ರಫ್ತು ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಪ್ರತಿಭೆ, ತಂತ್ರಜ್ಞಾನ ಮತ್ತು ಜಾಗತಿಕ ಪಾಲುದಾರಿಕೆಗಳು ಒಂದಾಗುತ್ತಿರುವುದರಿಂದ, ಭಾರತದ ಸೇವಾ ವಲಯವು ರಾಷ್ಟ್ರದ ಬೆಳವಣಿಗೆಯ ಕಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸನ್ನದ್ಧವಾಗಿದೆ.
References
Ministry of Finance
https://www.indiabudget.gov.in/economicsurvey/doc/echapter.pdf
https://www.indiabudget.gov.in/doc/budget_speech.pdf
https://www.pib.gov.in/PressReleasePage.aspx?PRID=2219981®=3&lang=2
https://incometaxindia.gov.in/Rules/Income-Tax%20Rules/103120000000007832.htm
https://www.indianembassyusa.gov.in/pdf/advance_pricing_agreement_guidance_with_faqs_(tpi-43).pdf
https://incometaxindia.gov.in/Rules/Income-Tax%20Rules/103120000000007189.htm
Ministry of Commerce & Industry
https://www.pib.gov.in/PressReleasePage.aspx?PRID=2228785®=3&lang=1
https://www.pib.gov.in/PressReleasePage.aspx?PRID=2219146®=3&lang=1
https://static.pib.gov.in/WriteReadData/specificdocs/documents/2025/dec/doc20251218737701.pdf
https://www.pib.gov.in/PressReleasePage.aspx?PRID=2207583®=3&lang=2
https://www.pib.gov.in/PressReleasePage.aspx?PRID=2173138®=3&lang=2
https://www.pib.gov.in/PressReleasePage.aspx?PRID=1812730®=3&lang=1
https://www.pib.gov.in/PressReleaseIframePage.aspx?PRID=1708794®=3&lang=2
https://www.pib.gov.in/PressReleasePage.aspx?PRID=2220413®=3&lang=2
https://www.commerce.gov.in/wp-content/uploads/2026/03/FTAs-achievement.pdf
https://www.pib.gov.in/PressNoteDetails.aspx?NoteId=156654&ModuleId=3®=3&lang=2
Reserve Bank of India
https://rbidocs.rbi.org.in/rdocs/PressRelease/PDFs/PR1208964F52A6DCBA464A91D091157FBCEC65.PDF
https://rbidocs.rbi.org.in/rdocs/PressRelease/PDFs/PR14286754E6C89EA04E6FBCE6626CE3CDF389.PDF
https://rbidocs.rbi.org.in/rdocs/PressRelease/PDFs/PR21919AC9681140584EFDB0D359321C6149A5.PDF
International Institutions
https://www.imf.org/en/news/articles/2026/01/28/cf-business-growth-and-innovation-can-boost-indias-productivity
https://unctad.org/system/files/official-document/tir2025ch3_en.pdf
https://documents1.worldbank.org/curated/en/099112525160536089/pdf/P505350-59c98ca8-0803-4f23-b470-17f3dab010ab.pdf
https://financing.desa.un.org/sites/default/files/2024-10/CRP%2024%20APA%20FAQs%20Appendix%20A%20.pdf
https://www.ilo.org/publications/major-publications/care-work-investing-care-leave-and-services-more-gender-equal-world-work
See in PDF
(Explainer ID: 157893)
आगंतुक पटल : 13
Provide suggestions / comments