Social Welfare
ಲಸಿಕೆಗಳ ಶಕ್ತಿಯ ಸಂಭ್ರಮಾಚರಣೆ
Posted On:
17 MAR 2026 12:24PM
|
ಪ್ರಮುಖ ಮುಖ್ಯಾಂಶಗಳು
- ಸಾಧನೆಗಳು: ಭಾರತವು ಲಸಿಕೆಗಳ ಮೂಲಕ ಸಿಡುಬು, ಪೋಲಿಯೋ ಮತ್ತು ತಾಯಿ ಹಾಗೂ ನವಜಾತ ಶಿಶುಗಳ ಧನುರ್ವಾಯು ರೋಗಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದೆ. ತನ್ನ ಲಸಿಕಾ ಕಾರ್ಯಕ್ರಮವನ್ನು ನಿರಂತರವಾಗಿ ವಿಸ್ತರಿಸುತ್ತಿದ್ದು, ಇತ್ತೀಚೆಗೆ 2026 ರಲ್ಲಿ HPV ಮತ್ತು ಸ್ವದೇಶಿ ನಿರ್ಮಿತ Td ಲಸಿಕೆಗಳನ್ನು ಬಿಡುಗಡೆ ಮಾಡಿದೆ.
- ಬೃಹತ್ ವ್ಯಾಪ್ತಿ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವು ವಿಶ್ವದ ಅತಿದೊಡ್ಡ ಲಸಿಕಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇದು ಪ್ರತಿ ವರ್ಷ 2.9 ಕೋಟಿ ಗರ್ಭಿಣಿಯರಿಗೆ ಮತ್ತು 2.54 ಕೋಟಿ ನವಜಾತ ಶಿಶುಗಳಿಗೆ ಉಚಿತವಾಗಿ ಲಸಿಕೆ ತಲುಪಿಸುತ್ತಿದೆ.
- ಹೆಚ್ಚಿದ ಲಸಿಕಾ ಪ್ರಮಾಣ: ಪೂರ್ಣ ಪ್ರಮಾಣದ ಲಸಿಕಾ ವ್ಯಾಪ್ತಿಯು 2015 ರಲ್ಲಿ ಶೇ. 62 ರಷ್ಟಿತ್ತು, ಇದು ಜನವರಿ 2026 ರ ವೇಳೆಗೆ ಶೇ. 98.4 ಕ್ಕೆ ಏರಿಕೆಯಾಗಿದೆ.
- ಶೂನ್ಯ-ಡೋಸ್ ಮಕ್ಕಳ ಸಂಖ್ಯೆ ಇಳಿಕೆ: ಒಟ್ಟು ಜನಸಂಖ್ಯೆಯಲ್ಲಿ ಒಂದು ಲಸಿಕೆಯನ್ನೂ ಪಡೆಯದ ಮಕ್ಕಳ ಪ್ರಮಾಣವು 2023 ರಲ್ಲಿ ಶೇ. 0.11 ರಷ್ಟಿತ್ತು, ಇದು 2024 ರಲ್ಲಿ ಶೇ. 0.06 ಕ್ಕೆ ಇಳಿದಿದೆ.
|
ರಾಷ್ಟ್ರೀಯ ಲಸಿಕಾ ದಿನ
ರೋಗಗಳು ಹರಡುವ ಅಪಾಯವನ್ನು ಕಡಿಮೆ ಮಾಡುವ ಮೂಲಕ ಲಸಿಕೆಗಳು ಪ್ರತಿ ವರ್ಷ ಕೋಟ್ಯಂತರ ಜೀವಗಳನ್ನು ಉಳಿಸುತ್ತವೆ. ಇವು ಮನುಷ್ಯನ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಕಾಯಿಲೆಗಳ ವಿರುದ್ಧ ರಕ್ಷಾಕವಚವನ್ನು ನಿರ್ಮಿಸುತ್ತವೆ.
ಭಾರತದಲ್ಲಿ, ಸಾರ್ವಜನಿಕ ಆರೋಗ್ಯದ ಸುಧಾರಣೆಯ ಮೇಲೆ ಲಸಿಕೆಗಳು ಅದ್ಭುತವಾದ ಪ್ರಭಾವ ಬೀರಲಿವೆ. ಪೋಲಿಯೋ ಮಾತ್ರವಲ್ಲದೆ, ಲಸಿಕೆಗಳ ಮೂಲಕ ಭಾರತವು ಸಿಡುಬು ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದೆ ಮತ್ತು 'ಯಾಸ್' , ಪೋಲಿಯೋ ಹಾಗೂ ತಾಯಿ ಮತ್ತು ನವಜಾತ ಶಿಶುಗಳ ಧನುರ್ವಾಯುವನ್ನು ತೊಡೆದುಹಾಕಿದೆ. ಇವು ಮಕ್ಕಳ ಮರಣ ಪ್ರಮಾಣ, ದಡಾರ-ರುಬೆಲ್ಲಾ ಮತ್ತು ಕ್ಷಯರೋಗದ ಹರಡುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಕೋವಿಡ್-19 ಸಮಯದಲ್ಲಿ, 'ವಿಶ್ವದ ಔಷಧಾಲಯ' ಎಂದೇ ಖ್ಯಾತಿಯಾದ ಭಾರತವು, ದೇಶೀಯವಾಗಿ ಅಭಿವೃದ್ಧಿಪಡಿಸಿದ ಮತ್ತು ಪರವಾನಗಿ ಪಡೆದ 200 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕಾ ಡೋಸ್‌ಗಳನ್ನು ಪೂರೈಸಿದೆ. 2026ರಲ್ಲಿ, ಭಾರತ ಸರ್ಕಾರವು 14 ವರ್ಷದ ಬಾಲಕಿಯರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ (Cervical Cancer) ರಕ್ಷಿಸಲು ರಾಷ್ಟ್ರವ್ಯಾಪಿ HPV ಲಸಿಕಾ ಅಭಿಯಾನವನ್ನು ಮತ್ತು ದೇಶೀಯವಾಗಿ ತಯಾರಿಸಿದ ಟೆಟಾನಸ್-ಡಿಫ್ತೀರಿಯಾ (Td) ಲಸಿಕೆಯನ್ನು ಬಿಡುಗಡೆ ಮಾಡಿದೆ.

ಭಾರತದ ಬಲಿಷ್ಠ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಸಾರ್ವಜನಿಕ ಅನುದಾನಿತ ಆರೋಗ್ಯ ಕೇಂದ್ರಗಳ ವ್ಯಾಪಕ ಜಾಲ, ಆರೋಗ್ಯ ಕಾರ್ಯಕರ್ತರು, ಶೈತ್ಯೀಕರಣ ಸರಪಳಿ ಮೂಲಸೌಕರ್ಯ ಮತ್ತು ಬಲಿಷ್ಠ ಡಿಜಿಟಲ್ ನೆಟ್‌ವರ್ಕ್ ಅತ್ಯುತ್ತಮ ಫಲಿತಾಂಶಗಳನ್ನು ನೀಡಿವೆ.
ಪೂರ್ಣ ಪ್ರಮಾಣದ ಲಸಿಕಾ ವ್ಯಾಪ್ತಿಯು 2015ರಲ್ಲಿ ಶೇ. 62 ರಷ್ಟಿತ್ತು, ಇದು ಜನವರಿ 2026 ರ ವೇಳೆಗೆ ಶೇ. 98.4 ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಒಂದು ಲಸಿಕೆಯನ್ನೂ ಪಡೆಯದ ಮಕ್ಕಳ ಪ್ರಮಾಣವು ಒಟ್ಟು ಜನಸಂಖ್ಯೆಯಲ್ಲಿ 2023 ರಲ್ಲಿ ಶೇ. 0.11 ರಷ್ಟಿತ್ತು, ಇದು 2024 ರಲ್ಲಿ ಶೇ. 0.06ಕ್ಕೆ ಇಳಿದಿದೆ. ಲಸಿಕಾಕರಣಕ್ಕೆ ಆದ್ಯತೆ ನೀಡುವ ಸುದೀರ್ಘ ಇತಿಹಾಸವನ್ನು ಭಾರತ ಹೊಂದಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಮೂಲಕ ಸಾರ್ವಜನಿಕ ಆರೋಗ್ಯವನ್ನು ಇನ್ನಷ್ಟು ಸುಧಾರಿಸಲು ಹೆಚ್ಚಿನ ಲಸಿಕಾ ದರವನ್ನು ಸಾಧಿಸಲು ತನ್ನ ಪ್ರಯತ್ನವನ್ನು ಮುಂದುವರಿಸಿದೆ.

1995ರಲ್ಲಿ ಆರಂಭಿಸಲಾದ 'ಪಲ್ಸ್ ಪೋಲಿಯೋ ಅಭಿಯಾನ'ದ ಅಡಿಯಲ್ಲಿ ನಾಗರಿಕರಿಗೆ ನೀಡಲಾದ ಮೊದಲ ಹನಿ ಪೋಲಿಯೋ ಲಸಿಕೆಯ ಸವಿನೆನಪಿಗಾಗಿ ಭಾರತವು ಪ್ರತಿ ವರ್ಷ ಮಾರ್ಚ್ 16 ರಂದು ರಾಷ್ಟ್ರೀಯ ಲಸಿಕಾ ದಿನವನ್ನು ಆಚರಿಸುತ್ತದೆ.
1995ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು ಭಾರತದಲ್ಲಿ ಪೋಲಿಯೋವನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ. ಭಾರತದಲ್ಲಿ ಪೋಲಿಯೋದ ಕೊನೆಯ ಪ್ರಕರಣವು ಜನವರಿ 13, 2011 ರಂದು ಪಶ್ಚಿಮ ಬಂಗಾಳದ ಹೌರಾದಲ್ಲಿ ವರದಿಯಾಗಿತ್ತು.

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ
ಮಕ್ಕಳು ಹುಟ್ಟಿದಾಗ ತಾಯಂದಿರು ತಮ್ಮ ಆಂಟಿಬಾಡಿಗಳನ್ನು (antibodies) ಮಗುವಿಗೆ ವರ್ಗಾಯಿಸುತ್ತಾರೆ. ಆದಾಗ್ಯೂ, ಗರ್ಭಾವಸ್ಥೆ ಮತ್ತು ಎದೆಹಾಲಿನ ಮೂಲಕ ತಾಯಿಯಿಂದ ಮಗುವಿಗೆ ವರ್ಗಾವಣೆಯಾಗುವ ಈ ಆಂಟಿಬಾಡಿಗಳು ನವಜಾತ ಶಿಶುವಿನ ಜೀವನದ ಮೊದಲ ಕೆಲವು ತಿಂಗಳುಗಳವರೆಗೆ ಮಾತ್ರ ರೋಗನಿರೋಧಕ ರಕ್ಷಣೆಯನ್ನು ನೀಡುತ್ತವೆ.
ಕ್ರಿಮಿಗಳು ಮತ್ತು ಪ್ರಾಣಾಪಾಯಕಾರಿಯಾದ ಕಾಯಿಲೆಗಳಿಂದ ಶಿಶುಗಳನ್ನು ರಕ್ಷಿಸಲು ಲಸಿಕೆಗಳು ಬಹಳ ಮುಖ್ಯ. ಮಕ್ಕಳು ಕಾಯಿಲೆಗಳಿಗೆ ತುತ್ತಾಗುವ ಮೊದಲೇ ಅವರಿಗೆ ಲಸಿಕೆಗಳನ್ನು ನೀಡುವುದು ಉತ್ತಮ — ಅಂದರೆ ಅವರ ಜೀವನದ ಮೊದಲ 12 ರಿಂದ 18 ತಿಂಗಳುಗಳ ಒಳಗೆ ನೀಡುವುದು ಸೂಕ್ತವಾಗಿದೆ.
1985ರಲ್ಲಿ ಪ್ರಾರಂಭವಾದ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಜಾರಿಗೆ ತರಲಾದ 'ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವು', ವಿವಿಧ ಕಾಯಿಲೆಗಳ ವಿರುದ್ಧ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಉಚಿತವಾಗಿ ಲಸಿಕೆಗಳನ್ನು ನೀಡುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಪ್ರತಿ ವರ್ಷ ಸುಮಾರು 2.9 ಕೋಟಿ ಗರ್ಭಿಣಿಯರನ್ನು ಮತ್ತು 2.54 ಕೋಟಿ ನವಜಾತ ಶಿಶುಗಳನ್ನು ತಲುಪುತ್ತಿದೆ.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಉದ್ದೇಶಗಳು:
- ಲಸಿಕಾ ವ್ಯಾಪ್ತಿಯನ್ನು ಹೆಚ್ಚಿಸುವುದು.
- ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು.
- ಆರೋಗ್ಯ ಸೌಲಭ್ಯದ ಹಂತದವರೆಗೆ ವಿಶ್ವಾಸಾರ್ಹವಾದ ಶೈತ್ಯೀಕರಣ ಸರಪಳಿ ವ್ಯವಸ್ಥೆಯನ್ನು ಸ್ಥಾಪಿಸುವುದು.
- ಕಾರ್ಯಕ್ಷಮತೆಯ ಮೇಲ್ವಿಚಾರಣೆ ಮಾಡುವುದು.
- ಲಸಿಕೆ ಉತ್ಪಾದನೆಯಲ್ಲಿ ಸ್ವಯಂ ಅವಲಂಬನೆಯನ್ನು ಸಾಧಿಸುವುದು.
ಯುಐಪಿ ಕಾರ್ಯಕ್ರಮವು ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು ಮತ್ತು ಗರ್ಭಿಣಿಯರನ್ನು 12 ಕಾಯಿಲೆಗಳಿಂದ ರಕ್ಷಿಸಲು ಲಸಿಕೆಗಳನ್ನು ನೀಡುತ್ತದೆ. ಜಪಾನೀಸ್ ಎನ್ಸೆಫಾಲಿಟಿಸ್ ಲಸಿಕೆಯನ್ನು ಕೇವಲ ಆಯ್ದ ಜಿಲ್ಲೆಗಳಲ್ಲಿ ಮಾತ್ರ ನೀಡಲಾಗುತ್ತದೆ ಮತ್ತು ಉಳಿದ ಲಸಿಕೆಗಳನ್ನು ರಾಷ್ಟ್ರವ್ಯಾಪಿ ನೀಡಲಾಗುತ್ತದೆ.
ಕಳೆದ ದಶಕದಲ್ಲಿ, ಈ ಕಾರ್ಯಕ್ರಮಕ್ಕೆ ವಿವಿಧ ಹೊಸ ಲಸಿಕೆಗಳನ್ನು ಸೇರಿಸಲಾಗಿದೆ — ಇನ್ ಆಕ್ಟಿವೇಟೆಡ್ ಪೋಲಿಯೋ ವ್ಯಾಕ್ಸಿನ್ (IPV) (2015), ರೋಟಾವೈರಸ್ ವ್ಯಾಕ್ಸಿನ್ (2016), ದಡಾರ-ರುಬೆಲ್ಲಾ (MR) ಲಸಿಕೆ (2017) ಮತ್ತು ನ್ಯುಮೋಕೊಕಲ್ ಕಾಂಜುಗೇಟ್ ವ್ಯಾಕ್ಸಿನ್ (2017).
ಯುಐಪಿ ಅಡಿಯಲ್ಲಿ ನೀಡಲಾಗುವ ಲಸಿಕೆಗಳು:
- BCG (ಬ್ಯಾಸಿಲಸ್ ಕ್ಯಾಲ್ಮೆಟ್-ಗುರಿನ್)
- DPT (ಡಿಫ್ತೀರಿಯಾ, ಪೆರ್ಟುಸಿಸ್ ಮತ್ತು ಟೆಟಾನಸ್)
- Td (ಟೆಟಾನಸ್ ಮತ್ತು ವಯಸ್ಕ ಡಿಫ್ತೀರಿಯಾ)
- bOPV (ಬೈ ವ್ಯಾಲೆಂಟ್ ಓರಲ್ ಪೋಲಿಯೋ ವ್ಯಾಕ್ಸಿನ್)
- MR (ದಡಾರ-ರುಬೆಲ್ಲಾ) ಲಸಿಕೆ
- Hepatitis B (ಹೆಪಟೈಟಿಸ್ ಬಿ)
- Pentavalent (ಡಿಪಿಟಿ + ಹೆಪಟೈಟಿಸ್ ಬಿ + ಹಿಬ್)
- RVV (ರೋಟಾವೈರಸ್ ವ್ಯಾಕ್ಸಿನ್)
- PCV (ನ್ಯುಮೋಕೊಕಲ್ ಕಾಂಜುಗೇಟ್ ವ್ಯಾಕ್ಸಿನ್)
- JE (ಜಪಾನೀಸ್ ಎನ್ಸೆಫಾಲಿಟಿಸ್) ಲಸಿಕೆ
ಈ ಲಸಿಕೆಗಳು ಪ್ರಾಣಾಪಾಯಕಾರಿಯಾದ ಕಾಯಿಲೆಗಳಿಂದ ರಕ್ಷಿಸುತ್ತವೆ.
|
#.
|
ಕಾಯಿಲೆ
|
ಕಾಯಿಲೆಯ ವಿವರಣೆ
|
|
1
|
ಕ್ಷಯರೋಗ
|
ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಬ್ಯಾಕ್ಟೀರಿಯಾ ಸೋಂಕು; ಇದು ಮೆದುಳು ಮತ್ತು ದೇಹದ ಇತರ ಅಂಗಗಳಿಗೂ ಹರಡಬಹುದು.
|
|
2
|
ಡಿಫ್ತೀರಿಯಾ
|
ಗಂಟಲಿನ ಮೇಲೆ ಪರಿಣಾಮ ಬೀರುವ ಬ್ಯಾಕ್ಟೀರಿಯಾ ಸೋಂಕು; ಇದು ಹೃದಯ ಮತ್ತು ನರಗಳನ್ನು ಹಾನಿಗೊಳಿಸಬಹುದು.
|
|
3
|
ಪರ್ಟುಸಿಸ್
|
ಇದನ್ನು 'ನೆಗಡಿ ಕೆಮ್ಮು' ಅಥವಾ 'ನಾಯಿ ಕೆಮ್ಮು' ಎನ್ನಲಾಗುತ್ತದೆ. ಇದು ಹೆಚ್ಚು ಸಾಂಕ್ರಾಮಿಕವಾಗಿದ್ದು, ಶಿಶುಗಳಿಗೆ ತುಂಬಾ ಅಪಾಯಕಾರಿ.
|
|
4
|
ಧನುರ್ವಾಯು
|
ಕಲುಷಿತ ಗಾಯಗಳಿಂದ ಹರಡುವ ಬ್ಯಾಕ್ಟೀರಿಯಾ ಸೋಂಕು; ಇದು ಸ್ನಾಯುಗಳ ಬಿಗಿತಕ್ಕೆ ಕಾರಣವಾಗುತ್ತದೆ.
|
|
5
|
ಪೋಲಿಯೋ
|
ನರಮಂಡಲದ ಮೇಲೆ ದಾಳಿ ಮಾಡುವ ವೈರಾಣು ಸೋಂಕು; ಇದು ಶಾಶ್ವತ ಪಾರ್ಶ್ವವಾಯು ಅಥವಾ ಸಾವಿಗೆ ಕಾರಣವಾಗಬಹುದು.
|
|
6
|
ದಡಾರ
|
ಜ್ವರ ಮತ್ತು ಮೈಮೇಲೆ ದದ್ದುಗಳನ್ನು ಉಂಟುಮಾಡುವ ಹೆಚ್ಚು ಸಾಂಕ್ರಾಮಿಕವಾದ ವೈರಾಣು ಕಾಯಿಲೆ.
|
|
7
|
ರುಬೆಲ್ಲಾ
|
ಜ್ವರ ಮತ್ತು ದದ್ದುಗಳನ್ನು ಉಂಟುಮಾಡುವ ಸೌಮ್ಯವಾದ ವೈರಾಣು ಕಾಯಿಲೆ; ಇದು ಕೆಮ್ಮು ಮತ್ತು ಸೀನಿನ ಮೂಲಕ ಹರಡುತ್ತದೆ.
|
|
8
|
ಹೆಪಟೈಟಿಸ್ ಬಿ
|
ಯಕೃತ್ತಿನ (Liver) ವೈರಾಣು ಸೋಂಕು; ಇದು ದೀರ್ಘಕಾಲದ ಕಾಯಿಲೆಯಾಗಿ ಬದಲಾಗಿ ಯಕೃತ್ತನ್ನು ಹಾನಿಗೊಳಿಸಬಹುದು.
|
|
9
|
ಮೆನಿಂಜೈಟಿಸ್ ಮತ್ತು ನ್ಯುಮೋನಿಯಾ
|
ಮೆನಿಂಜೈಟಿಸ್: ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪದರಗಳ ಸೋಂಕು ಮತ್ತು ಉರಿಯೂತ.
ನ್ಯುಮೋನಿಯಾ: ಶ್ವಾಸಕೋಶದ ಸೋಂಕು ಮತ್ತು ಉರಿಯೂತ.
|
|
10
|
ರೋಟಾವೈರಸ್ ಅತಿಸಾರ
|
ಶಿಶುಗಳಲ್ಲಿ ತೀವ್ರವಾದ ಅತಿಸಾರವನ್ನು (ಭೇದಿ) ಉಂಟುಮಾಡುವ ವೈರಾಣು ಸೋಂಕು.
|
|
11
|
ನ್ಯುಮೋಕೊಕಲ್ ನ್ಯುಮೋನಿಯಾ
|
ಜ್ವರ ಮತ್ತು ಉಸಿರಾಟದ ತೊಂದರೆಯನ್ನು ಉಂಟುಮಾಡುವ ಶ್ವಾಸಕೋಶದ ಬ್ಯಾಕ್ಟೀರಿಯಾ ಸೋಂಕು.
|
|
12
|
ಜಪಾನೀಸ್ ಎನ್ಸೆಫಾಲಿಟಿಸ್
|
ಸೊಳ್ಳೆಗಳಿಂದ ಹರಡುವ ಮತ್ತು ಮೆದುಳಿನ ಉರಿಯೂತಕ್ಕೆ ಕಾರಣವಾಗುವ ವೈರಾಣು ಕಾಯಿಲೆ.
|
ರಾಷ್ಟ್ರೀಯ ಲಸಿಕಾ ವೇಳಾಪಟ್ಟಿ ಇಲ್ಲಿದೆ:
ಪ್ರಾಣಾಪಾಯಕಾರಿಯಾದ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಲಸಿಕೆಗಳನ್ನು ಸಕಾಲದಲ್ಲಿ ಪಡೆಯುವುದು ಬಹಳ ಮುಖ್ಯ. ಯುಐಪಿ ಅಡಿಯಲ್ಲಿ ಗರ್ಭಿಣಿಯರು ಮತ್ತು ಮಕ್ಕಳಿಗಾಗಿ ಸೂಚಿಸಲಾದ ಅಧಿಕೃತ ವೇಳಾಪಟ್ಟಿ ಈ ಕೆಳಗಿನಂತಿದೆ:
|
ಗರ್ಭಿಣಿಯರಿಗಾಗಿ ಲಸಿಕಾ ಮಾರ್ಗಸೂಚಿ
- Td-1: ಮೊದಲ ಪ್ರಸವಪೂರ್ವ ತಪಾಸಣೆಯ ಸಮಯದಲ್ಲಿ (ಗರ್ಭಧಾರಣೆಯಾದಷ್ಟು ಬೇಗ).
- Td-2: ಮೊದಲ Td ಚುಚ್ಚುಮದ್ದು ನೀಡಿದ ೪ ವಾರಗಳ ನಂತರ.
- Td-Booster (ಬೂಸ್ಟರ್ ಡೋಸ್): ಕಳೆದ ೩ ವರ್ಷಗಳೊಳಗಿನ ಹಿಂದಿನ ಗರ್ಭಾವಸ್ಥೆಯಲ್ಲಿ ಈಗಾಗಲೇ ಎರಡು Td ಡೋಸ್‌ಗಳನ್ನು ಪಡೆದಿದ್ದರೆ ಮಾತ್ರ ಇದನ್ನು ನೀಡಲಾಗುತ್ತದೆ.
|
|
ಜನನದ ಸಮಯದಲ್ಲಿ –
- Hep B: ಹೆಪಟೈಟಿಸ್ ಬಿ (ಯಕೃತ್ತಿನ ಸೋಂಕು ತಡೆಗೆ)
- bOPV: ಬೈವ್ಯಾಲೆಂಟ್ ಓರಲ್ ಪೋಲಿಯೋ ವ್ಯಾಕ್ಸಿನ್ (ಪೋಲಿಯೋ ಹನಿಗಳು - ಶೂನ್ಯ ಡೋಸ್)
- BCG: ಬಿಸಿಜಿ (ಕ್ಷಯರೋಗ ಅಥವಾ ಟಿಬಿ ತಡೆಗಟ್ಟಲು ನೀಡುವ ಲಸಿಕೆ)
|
|
ಮಗುವಿನ 1ನೇ ವರ್ಷದೊಳಗೆ ನೀಡಬೇಕಾದ ಲಸಿಕೆಗಳು:
- bOPV: 3 ಡೋಸ್‌ಗಳು (ಪೋಲಿಯೋ ಹನಿಗಳು)
- Rotavirus vaccine: 3 ಡೋಸ್‌ಗಳು (ರೋಟಾವೈರಸ್ ಅತಿಸಾರ ತಡೆಗೆ)
- Pentavalent: 3 ಡೋಸ್‌ಗಳು (5 ಪ್ರಮುಖ ಕಾಯಿಲೆಗಳ ವಿರುದ್ಧದ ಲಸಿಕೆ)
- Fractional IPV: 3 ಡೋಸ್‌ಗಳು (ಇಂಜೆಕ್ಷನ್ ಮೂಲಕ ನೀಡುವ ಪೋಲಿಯೋ ಲಸಿಕೆ)
- PCV: 3 ಡೋಸ್‌ಗಳು (ನ್ಯುಮೋನಿಯಾ ತಡೆಗಟ್ಟುವ ಲಸಿಕೆ)
- MR vaccine: 1ನೇ ಡೋಸ್ (ದಡಾರ ಮತ್ತು ರುಬೆಲ್ಲಾ ತಡೆಗೆ)
- JE vaccine: 1ನೇ ಡೋಸ್ (ಜಪಾನೀಸ್ ಎನ್ಸೆಫಾಲಿಟಿಸ್ ಅಥವಾ ಮೆದುಳು ಜ್ವರ - ಅನ್ವಯವಾಗುವ ಜಿಲ್ಲೆಗಳಲ್ಲಿ ಮಾತ್ರ)
|
|
ಮಗುವಿನ 2ನೇ ಹುಟ್ಟುಹಬ್ಬದ ಒಳಗಾಗಿ ನೀಡಬೇಕಾದ ಲಸಿಕೆಗಳ ವಿವರ ಇಲ್ಲಿದೆ:
- MR vaccine: 2ನೇ ಡೋಸ್ (ದಡಾರ ಮತ್ತು ರುಬೆಲ್ಲಾ ತಡೆಗೆ)
- DPT booster: 1ನೇ ಬೂಸ್ಟರ್ ಡೋಸ್ (ಡಿಫ್ತೀರಿಯಾ, ಪೆರ್ಟುಸಿಸ್ ಮತ್ತು ಟೆಟಾನಸ್ ತಡೆಗೆ)
- bOPV booster: 1 ಬೂಸ್ಟರ್ ಡೋಸ್ (ಪೋಲಿಯೋ ಹನಿಗಳು)
- JE vaccine: 2ನೇ ಡೋಸ್ (ಜಪಾನೀಸ್ ಎನ್ಸೆಫಾಲಿಟಿಸ್ ಅಥವಾ ಮೆದುಳು ಜ್ವರ - ಅನ್ವಯವಾಗುವ ಜಿಲ್ಲೆಗಳಲ್ಲಿ ಮಾತ್ರ)
|
|
ಮಗುವಿನ ೫ನೇ ಹುಟ್ಟುಹಬ್ಬದ ನಂತರ ನೀಡಬೇಕಾದ ಲಸಿಕೆಗಳ ವಿವರ ಇಲ್ಲಿದೆ:
- ೫ನೇ ವಯಸ್ಸಿನಲ್ಲಿ: DPT ಬೂಸ್ಟರ್‌ನ (DPT Booster) ೨ನೇ ಡೋಸ್.
- ೧೦ನೇ ವಯಸ್ಸಿನಲ್ಲಿ: Td ಲಸಿಕೆಯ (ಟೆಟಾನಸ್ ಮತ್ತು ವಯಸ್ಕ ಡಿಫ್ತೀರಿಯಾ) ೧ ಡೋಸ್.
- ೧೬ನೇ ವಯಸ್ಸಿನಲ್ಲಿ: Td ಲಸಿಕೆಯ ೧ ಡೋಸ್.
|

|
ಇತ್ತೀಚಿನ ಲಸಿಕೆಗಳ ಬಿಡುಗಡೆ ಮತ್ತು ಕಾರ್ಯಕ್ರಮಗಳು
ಭಾರತದ ಲಸಿಕಾ ಕಾರ್ಯಕ್ರಮದ ವಿಸ್ತರಣೆಯ ಈ ಇತ್ತೀಚಿನ ಅಧ್ಯಾಯವು ಅತ್ಯಂತ ಮಹತ್ವಾಕಾಂಕ್ಷೆಯದ್ದಾಗಿದೆ. 2026ರ ಆರಂಭದಲ್ಲಿ ಎರಡು ಐತಿಹಾಸಿಕ ಲಸಿಕೆಗಳ ಬಿಡುಗಡೆಯೊಂದಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಸ್ವದೇಶಿ ಟೆಟಾನಸ್–ಡಿಫ್ತೀರಿಯಾ ಲಸಿಕೆ ಬಿಡುಗಡೆ (2026)
ಸ್ವದೇಶಿಯಾಗಿ ತಯಾರಿಸಿದ ಟೆಟಾನಸ್ ಮತ್ತು ವಯಸ್ಕ ಡಿಫ್ತೀರಿಯಾ ಲಸಿಕೆಯನ್ನು 21 ಫೆಬ್ರವರಿ 2026 ರಂದು ಬಿಡುಗಡೆ ಮಾಡಲಾಯಿತು. ಈ ಲಸಿಕೆಯನ್ನು ಕಸೌಲಿಯ ಕೇಂದ್ರ ಸಂಶೋಧನಾ ಸಂಸ್ಥೆ ಯಲ್ಲಿ ಉತ್ಪಾದಿಸಲಾಗುತ್ತಿದೆ. ಏಪ್ರಿಲ್ 2026 ರ ವೇಳೆಗೆ ಸುಮಾರು 55 ಲಕ್ಷ ಡೋಸ್‌ಗಳನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಕ್ಕೆ ಪೂರೈಸಲಾಗುವುದು.
ಭಾರತದ ದೇಶೀಯ ಲಸಿಕೆ ತಯಾರಿಕಾ ಸಾಮರ್ಥ್ಯವು ಈ ಇಡೀ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದೆ. ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರವಾಗಿರುವ ಭಾರತವು ಜಾಗತಿಕ ಲಸಿಕೆಗಳ ಶೇ. 60 ರಷ್ಟನ್ನು ಪೂರೈಸುತ್ತದೆ. ಸ್ವದೇಶಿ ನಿರ್ಮಿತ Td ಲಸಿಕೆಯ ಬಿಡುಗಡೆಯು ದೇಶದ ಸ್ವಾವಲಂಬನೆಗೆ ಸಾಕ್ಷಿಯಾಗಿದೆ.
ರಾಷ್ಟ್ರವ್ಯಾಪಿ HPV ಲಸಿಕಾ ಅಭಿಯಾನ (2026)
ರಾಷ್ಟ್ರವ್ಯಾಪಿ ಹ್ಯೂಮನ್ ಪ್ಯಾಪಿಲೋಮಾವೈರಸ್ ಲಸಿಕಾ ಅಭಿಯಾನವನ್ನು 28 ಫೆಬ್ರವರಿ 2026 ರಂದು ಪ್ರಾರಂಭಿಸಲಾಯಿತು. ಈ ಅಭಿಯಾನವನ್ನು ರಾಜಸ್ಥಾನದ ಅಜ್ಮೀರ್‌ನಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ಇದು 14 ವರ್ಷದ ಬಾಲಕಿಯರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸುವ ಗುರಿಯನ್ನು ಹೊಂದಿದೆ. ಭಾರತದಾದ್ಯಂತ ಸುಮಾರು 1.15 ಕೋಟಿ ಬಾಲಕಿಯರು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆಯನ್ನು ಉಚಿತವಾಗಿ ಪಡೆಯುವ ನಿರೀಕ್ಷೆಯಿದೆ.
|
ಮಿಷನ್ ಇಂದ್ರಧನುಷ್
ಲಸಿಕೆ ಪಡೆಯದ ಅಥವಾ ಭಾಗಶಃ ಲಸಿಕೆ ಪಡೆದ ಮಕ್ಕಳು ಮತ್ತು ಗರ್ಭಿಣಿಯರನ್ನು ತಲುಪಲು ಸರ್ಕಾರವು 2015 ರಲ್ಲಿ 'ಮಿಷನ್ ಇಂದ್ರಧನುಷ್' ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದರ ಬೆನ್ನಲ್ಲೇ ವಿವಿಧ ಸಚಿವಾಲಯಗಳ ಸಮನ್ವಯದೊಂದಿಗೆ 'ತೀವ್ರಗತಿಯ ಮಿಷನ್ ಇಂದ್ರಧನುಷ್' ಅಭಿಯಾನಗಳನ್ನು (ನಗರ ಪ್ರದೇಶಗಳ ಮೇಲೆ ಹೆಚ್ಚಿನ ಗಮನದೊಂದಿಗೆ) ಹಮ್ಮಿಕೊಳ್ಳಲಾಯಿತು. ಈ ಅಭಿಯಾನಗಳು ಸಾಮಾನ್ಯ ಲಸಿಕಾ ಸೇವೆಗಳನ್ನು ಬಲಪಡಿಸುವ ಮೂಲಕ ಮತ್ತು ತಲುಪಲು ಕಷ್ಟಸಾಧ್ಯವಾದ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಶೇ. 90 ಕ್ಕಿಂತ ಹೆಚ್ಚು ಪೂರ್ಣ ಲಸಿಕಾ ವ್ಯಾಪ್ತಿಯನ್ನು ಸಾಧಿಸುವ ಗುರಿಯನ್ನು ಹೊಂದಿವೆ.
2023 ರವರೆಗೆ ಮಿಷನ್ ಇಂದ್ರಧನುಷ್‌ನ 12 ಹಂತಗಳನ್ನು ನಡೆಸಲಾಗಿದ್ದು, 765 ಜಿಲ್ಲೆಗಳಾದ್ಯಂತ 5.46 ಕೋಟಿ ಶಿಶುಗಳಿಗೆ ಮತ್ತು 1.32 ಕೋಟಿ ಗರ್ಭಿಣಿಯರಿಗೆ ಲಸಿಕೆ ಹಾಕಲಾಗಿದೆ.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಅನುಷ್ಠಾನಕ್ಕೆ ಪೂರಕವಾದ ಮೂಲಸೌಕರ್ಯ
ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಕಾರ್ಯಕರ್ತರು
ಲಸಿಕೆಗಳನ್ನು ಎಲ್ಲಿ ನೀಡಲಾಗುತ್ತದೆ? ಯುಐಪಿ ಲಸಿಕೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳು, ಉಪಕೇಂದ್ರಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಅಥವಾ ಗ್ರಾಮಗಳ ಒಳಗಿನ ಇತರ ಗುರುತಿಸಲಾದ ಸ್ಥಳಗಳಲ್ಲಿ ಆಯೋಜಿಸಲಾದ ಹೊರಸಂಪರ್ಕ ಶಿಬಿರಗಳ ಮೂಲಕ ಎಲ್ಲಾ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. 2005 ರಿಂದ, ಯುಐಪಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಅಭಿಯಾನದ ಅಡಿಯಲ್ಲಿ, ಯುಐಪಿ ಅನ್ನು ನಗರದ ಕೊಳೆಗೇರಿ ಪ್ರದೇಶಗಳಲ್ಲಿಯೂ ಜಾರಿಗೊಳಿಸಲಾಗುತ್ತಿದೆ.
ಫ್ರಂಟ್‌ಲೈನ್ ಆರೋಗ್ಯ ಕಾರ್ಯಕರ್ತರಾದ ಆಶಾ ( ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು), ಅಂಗನವಾಡಿ ಕಾರ್ಯಕರ್ತೆಯರು ಮತ್ತು ಲಿಂಕ್ ವರ್ಕರ್ಸ್‌ಗಳು ಫಲಾನುಭವಿಗಳನ್ನು ಲಸಿಕಾ ಕೇಂದ್ರಗಳಿಗೆ ಕರೆತರುವಲ್ಲಿ ಮತ್ತು ಯಾವುದೇ ಮಗು ಅಥವಾ ಗರ್ಭಿಣಿ ಮಹಿಳೆ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಮಾದರಿ ಲಸಿಕಾ ಕೇಂದ್ರಗಳು ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 'ಮಾದರಿ ಲಸಿಕಾ ಕೇಂದ್ರ'ಗಳನ್ನು ಹೊಂದಲು ಉತ್ತೇಜಿಸುತ್ತದೆ. ಇವು ಈಗಾಗಲೇ ಉತ್ತರ ಪ್ರದೇಶ, ಬಿಹಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ ಹಾಗೂ ಲಡಾಖ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.
ಶೈತ್ಯೀಕರಣ ಜಾಲ
ಲಸಿಕೆಗಳನ್ನು ತಯಾರಿಸಿದ ಕ್ಷಣದಿಂದ ಅವುಗಳನ್ನು ಜನರಿಗೆ ನೀಡುವವರೆಗೆ ನಿರಂತರವಾಗಿ ಒಂದು ನಿರ್ದಿಷ್ಟ ತಾಪಮಾನದ ಮಿತಿಯಲ್ಲಿ ಸಂಗ್ರಹಿಸಿಡಬೇಕು. ತಾಪಮಾನವು ಅತಿಯಾಗಿ ಹೆಚ್ಚಾದರೆ ಅಥವಾ ಕಡಿಮೆಯಾದರೆ ಲಸಿಕೆಯು ತನ್ನ ಸಾಮರ್ಥ್ಯವನ್ನು (ರೋಗದ ವಿರುದ್ಧ ಹೋರಾಡುವ ಶಕ್ತಿ) ಕಳೆದುಕೊಳ್ಳಬಹುದು. ಒಮ್ಮೆ ಸಾಮರ್ಥ್ಯ ಕಳೆದುಕೊಂಡರೆ, ಅದನ್ನು ಮತ್ತೆ ಮರಳಿ ಪಡೆಯಲು ಅಥವಾ ಸರಿಪಡಿಸಲು ಸಾಧ್ಯವಿಲ್ಲ. ಲಸಿಕೆಗಳನ್ನು ಇಂತಹ ನಿಗದಿತ ಪರಿಸ್ಥಿತಿಗಳಲ್ಲಿ ಸಂಗ್ರಹಿಸುವ ಮತ್ತು ಸಾಗಿಸುವ ವ್ಯವಸ್ಥೆಯನ್ನು 'ಶೈತ್ಯೀಕರಣ ಸರಪಳಿ' ಎಂದು ಕರೆಯಲಾಗುತ್ತದೆ. ಇದು ಲಸಿಕೆ ಪೂರೈಕೆ ಜಾಲದ ಒಂದು ಪ್ರಮುಖ ಭಾಗವಾಗಿದ್ದು, ಲಸಿಕಾ ವ್ಯಾಪ್ತಿಯನ್ನು ಯಶಸ್ವಿಯಾಗಿ ವಿಸ್ತರಿಸಲು ಈ ಜಾಲವು ಅಡೆತಡೆಯಿಲ್ಲದೆ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು.
ಭಾರತದ ಲಸಿಕಾ ಶೈತ್ಯೀಕರಣ ಜಾಲವು ವಿಶ್ವದ ಅತಿದೊಡ್ಡ ಜಾಲಗಳಲ್ಲಿ ಒಂದಾಗಿದೆ. ಇದು ರಾಷ್ಟ್ರೀಯ ಮಟ್ಟದ ಸರ್ಕಾರಿ ವೈದ್ಯಕೀಯ ಸರಬರಾಜು ಡಿಪೋಗಳಿಂದ ಹಿಡಿದು ತಾಲ್ಲೂಕು ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೆ ಸುಮಾರು 30,000 ಶೈತ್ಯೀಕರಣ ಕೇಂದ್ರಗಳನ್ನು ಹೊಂದಿದೆ. ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಈ ಸಂಗ್ರಹಣಾ ಕೇಂದ್ರಗಳು 1.06 ಲಕ್ಷಕ್ಕೂ ಹೆಚ್ಚು ಐಸ್-ಲೈನ್ಡ್ ರೆಫ್ರಿಜರೇಟರ್ಗಳು ಮತ್ತು ಡೀಪ್ ಫ್ರೀಜರ್ಗಳನ್ನು ಹೊಂದಿವೆ. ಅಲ್ಲದೆ, ಬೃಹತ್ ಪ್ರಮಾಣದ ಲಸಿಕೆ ಸಂಗ್ರಹಣೆಗಾಗಿ 432 ವಾಕ್-ಇನ್ ಕೂಲರ್ ಮತ್ತು ವಾಕ್-ಇನ್ ಫ್ರೀಜರ್ಗಳನ್ನು ಅಳವಡಿಸಲಾಗಿದೆ. ಈ ಜಾಲದ ಮೂಲಕ ವಾರ್ಷಿಕವಾಗಿ 1.3 ಕೋಟಿಗೂ ಹೆಚ್ಚು ಲಸಿಕಾ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಲಸಿಕೆಯು ಕಟ್ಟಕಡೆಯ ಫಲಾನುಭವಿಯನ್ನು ತಲುಪುವವರೆಗೆ ಅದರ ಗುಣಮಟ್ಟ ಮತ್ತು ತಾಪಮಾನವನ್ನು ಕಾಪಾಡಿಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ.
ಈ ಬೃಹತ್ ಮೂಲಸೌಕರ್ಯವನ್ನು ಡಿಜಿಟಲೀಕರಣಗೊಳಿಸಲು ಮತ್ತು ಬಲಪಡಿಸಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 'ಎಲೆಕ್ಟ್ರಾನಿಕ್ ವ್ಯಾಕ್ಸಿನ್ ಇಂಟೆಲಿಜೆನ್ಸ್ ನೆಟ್ವರ್ಕ್' ಅನ್ನು ಬಳಸುತ್ತಿದೆ. ಇದು ಅತ್ಯಾಧುನಿಕ ಸಾಫ್ಟ್‌ವೇರ್ ವೇದಿಕೆಯಾಗಿದ್ದು, ದೇಶದ ವಿವಿಧ ಸ್ಥಳಗಳಲ್ಲಿರುವ ಲಸಿಕೆ ದಾಸ್ತಾನು ಮತ್ತು ಸಂಗ್ರಹಣಾ ತಾಪಮಾನವನ್ನು ನೈಜ ಸಮಯದಲ್ಲಿ ಪತ್ತೆಹಚ್ಚುತ್ತದೆ. ಈ ವ್ಯವಸ್ಥೆಯು ಬಲಿಷ್ಠ ಐಟಿ ಮೂಲಸೌಕರ್ಯ ಮತ್ತು ತರಬೇತಿ ಪಡೆದ ವೃತ್ತಿಪರರ ಬೆಂಬಲವನ್ನು ಹೊಂದಿದೆ. eVIN ಈಗ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಸ್ತರಿಸಲ್ಪಟ್ಟಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಈ ವೇದಿಕೆಯು ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದು, ಅಲ್ಪ ಅವಧಿಯಲ್ಲಿ ದಾಖಲೆ ಸಂಖ್ಯೆಯ ಜನರಿಗೆ ಲಸಿಕೆ ಹಾಕಲು ಸಹಕಾರಿಯಾಯಿತು.
ಡಿಜಿಟಲ್ ಉಪಕ್ರಮಗಳು
ನೋಂದಣಿ, ಅಪಾಯಿಂಟ್‌ಮೆಂಟ್ ನಿಗದಿಪಡಿಸುವುದು, ಲಸಿಕೆ ಟ್ರ್ಯಾಕಿಂಗ್ ಮತ್ತು ನೈಜ-ಸಮಯದ ಮೇಲ್ವಿಚಾರಣೆಗಾಗಿ ಬಲಿಷ್ಠ ಡಿಜಿಟಲ್ ಪರಿಸರ ವ್ಯವಸ್ಥೆಯ ಮೂಲಕ ಭಾರತದ ಲಸಿಕಾ ನಿರ್ವಹಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗಿದೆ.
ಯು-ವಿನ್ ಯು-ವಿನ್ ಒಂದು ಡಿಜಿಟಲ್ ಪ್ಲಾಟ್‌ಫಾರ್ಮ್ ಮತ್ತು ಆ್ಯಪ್ ಆಗಿದ್ದು, ಇದು ಜನರು ತಮ್ಮ ನಿವಾಸದ ಹತ್ತಿರವಿರುವ ಲಸಿಕಾ ಕೇಂದ್ರಗಳನ್ನು ಪತ್ತೆಹಚ್ಚಲು, ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಅಪಾಯಿಂಟ್‌ಮೆಂಟ್‌ಗಳನ್ನು ನಿರ್ವಹಿಸಲು ಮತ್ತು ಲಸಿಕಾ ದಾಖಲೆಗಳನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಒಬ್ಬ ಬಳಕೆದಾರರು ಒಂದು ಮೊಬೈಲ್ ಸಂಖ್ಯೆಯಲ್ಲಿ ಗರ್ಭಿಣಿಯರು, ಶಿಶುಗಳು (0-1 ವರ್ಷ), ಮಕ್ಕಳು (1-7 ವರ್ಷ) ಮತ್ತು ಹದಿಹರೆಯದವರು (7-19 ವರ್ಷ) ಸೇರಿದಂತೆ ಗರಿಷ್ಠ 10 ಜನರನ್ನು ನೋಂದಾಯಿಸಬಹುದು. ಯು-ವಿನ್ ಅನ್ನು ಅಕ್ಟೋಬರ್ 2024 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದು ಇಂಗ್ಲಿಷ್ ಸೇರಿದಂತೆ 12 ಭಾಷೆಗಳಲ್ಲಿ ಲಭ್ಯವಿದೆ.
ಕೋವಿನ್
ಯು-ವಿನ್ ಮಾದರಿಯಲ್ಲೇ, ಕೋವಿನ್ ಕೋವಿಡ್-19 ಲಸಿಕಾ ನೋಂದಣಿ, ಅಪಾಯಿಂಟ್‌ಮೆಂಟ್ ಮತ್ತು ದಾಖಲೆಗಳ ನಿರ್ವಹಣೆಗಾಗಿ ರೂಪಿಸಲಾದ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ. ಇದನ್ನು ಜನವರಿ 16, 2021 ರಂದು ಪ್ರಾರಂಭಿಸಲಾಯಿತು. ಅಂದಿನಿಂದ ಇದರ ಮೂಲಕ 220 ಕೋಟಿಗೂ ಅಧಿಕ ಡೋಸ್‌ಗಳನ್ನು ನೀಡಲಾಗಿದೆ, ಅದರಲ್ಲಿ ಕೇವಲ 56.28 ಲಕ್ಷ ಡೋಸ್‌ಗಳು ಮಾತ್ರ ಕೋವಿನ್ ಹೊರತಾಗಿ ನೀಡಲ್ಪಟ್ಟಿವೆ.
ಪರಿಣಾಮ
ಭಾರತದಲ್ಲಿ ಮಕ್ಕಳು ಮತ್ತು ಗರ್ಭಿಣಿಯರ ಬದುಕುಳಿಯುವಿಕೆಯ ಪ್ರಮಾಣವು ಸುಧಾರಿಸಲು ಲಸಿಕಾಕರಣವು ಒಂದು ಪ್ರಮುಖ ಅಂಶವಾಗಿದೆ. ಇದರೊಂದಿಗೆ ಪೌಷ್ಟಿಕಾಂಶದ ಸುಧಾರಣೆ, ನೈರ್ಮಲ್ಯ, ಮಾತೃತ್ವ ಆರೈಕೆ ಮತ್ತು ಆರೋಗ್ಯ ಸೇವೆಗಳ ಲಭ್ಯತೆಯೂ ಸಹ ಮಹತ್ವದ ಪಾತ್ರ ವಹಿಸಿವೆ. ಉತ್ತಮ ಪೌಷ್ಟಿಕಾಂಶ ಹೊಂದಿರುವ ಮತ್ತು ಲಸಿಕೆಗಳನ್ನು ಪಡೆದಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಕಡಿಮೆ ಅಪಾಯಗಳನ್ನು ಎದುರಿಸುತ್ತಾರೆ. ಹಾಗೆಯೇ, ಲಸಿಕೆಗಳನ್ನು ತಲುಪಿಸುವ ಬಲಿಷ್ಠ ಆರೋಗ್ಯ ವ್ಯವಸ್ಥೆಗಳು ನುರಿತ ಹೆರಿಗೆ ಸಹಾಯಕರು ಮತ್ತು ತುರ್ತು ಪ್ರಸೂತಿ ಆರೈಕೆಯ ಲಭ್ಯತೆಯನ್ನು ಹೆಚ್ಚಿಸುತ್ತವೆ, ಇದು ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಹೊಸ ಲಸಿಕೆಗಳಾದ ರೋಟಾವೈರಸ್, ಪಿಸಿವಿ ಮತ್ತು ದಡಾರ-ರುಬೆಲ್ಲಾ ಲಸಿಕೆಗಳು ಮಕ್ಕಳ ಸಾವಿಗೆ ಕಾರಣವಾಗುವ ಪ್ರಮುಖ ಸಾಂಕ್ರಾಮಿಕ ರೋಗಗಳನ್ನು ನೇರವಾಗಿ ಗುರಿಯಾಗಿಸಿಕೊಂಡಿವೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಒಂದು ಲಸಿಕೆಯನ್ನೂ ಪಡೆಯದ ಮಕ್ಕಳ ಪ್ರಮಾಣವು ಅರ್ಧದಷ್ಟು ಕಡಿಮೆಯಾಗಿದೆ; ಅಂದರೆ 2023 ರಲ್ಲಿ ಶೇ. 0.11 ರಷ್ಟಿದ್ದ ಈ ಪ್ರಮಾಣವು 2024 ರಲ್ಲಿ ಶೇ. 0.06 ಕ್ಕೆ ಇಳಿಕೆಯಾಗಿದೆ. ಭಾರತದ ಈ ಸಾಧನೆಯನ್ನು ವಿಶ್ವಸಂಸ್ಥೆಯ ಮಕ್ಕಳ ಮರಣ ಅಂದಾಜು ಸಂಸ್ಥೆಯು (UNIGME 2024) ಶ್ಲಾಘಿಸಿದೆ ಮತ್ತು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಮಟ್ಟದ ಆದರ್ಶಪ್ರಾಯ ರಾಷ್ಟ್ರ ಎಂದು ಗುರುತಿಸಿದೆ.

ಲಸಿಕಾ ಅಭಿಯಾನಗಳು ಕೇವಲ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದಷ್ಟೇ ಅಲ್ಲದೆ, ಅನಾರೋಗ್ಯದಿಂದ ಕುಟುಂಬಗಳ ಮೇಲಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತವೆ. ಇದು ಮಕ್ಕಳು ಆರೋಗ್ಯವಾಗಿರಲು ಮತ್ತು ಅವರು ಹೆಚ್ಚು ಪರಿಪೂರ್ಣ ಹಾಗೂ ಅರ್ಥಪೂರ್ಣ ಜೀವನವನ್ನು ನಡೆಸಲು ಸಹಕಾರಿಯಾಗಿದೆ. ಇದರ ಪ್ರಯೋಜನಗಳು ತಲೆಮಾರುಗಳವರೆಗೆ ಹರಡುತ್ತವೆ: ಒಬ್ಬ ಆರೋಗ್ಯವಂತ ಮಗು ಆರೋಗ್ಯವಂತ ವಯಸ್ಕನಾಗಿ ಬೆಳೆಯುತ್ತದೆ ಮತ್ತು ಆರೋಗ್ಯವಂತ ಜನಸಂಖ್ಯೆಯು ದೇಶದ ಕಾರ್ಯಪಡೆಯಲ್ಲಿ ಹೆಚ್ಚು ಉತ್ಪಾದಕವಾಗಿ ಪಾಲ್ಗೊಳ್ಳುವ ಮೂಲಕ ಸಮಗ್ರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ವೇಗ ನೀಡುತ್ತದೆ.
ಉಪಸಂಹಾರ 1977ರಲ್ಲಿ ಸಿಡುಬು ರೋಗದ ನಿರ್ಮೂಲನೆಯಿಂದ ಹಿಡಿದು, ಪೋಲಿಯೋ ಮತ್ತು ನವಜಾತ ಶಿಶುಗಳ ಧನುರ್ವಾಯುವಿನ ನಿರ್ಮೂಲನೆಯವರೆಗೆ, ೨೦೦ ಕೋಟಿ ಕೋವಿಡ್-೧೯ ಲಸಿಕೆಗಳನ್ನು ನೀಡಿದ ಸಾಧನೆಯಿಂದ ಈಗ ದಡಾರ-ರುಬೆಲ್ಲಾ ನಿರ್ಮೂಲನೆಯ ಗುರಿಯವರೆಗೆ — ಭಾರತದ ಲಸಿಕಾ ಪ್ರಯಾಣವು ದೃಢೀಕೃತವಾದ ಮತ್ತು ಮೈಲಿಗಲ್ಲುಗಳನ್ನೊಳಗೊಂಡ ಐತಿಹಾಸಿಕ ಸಾಧನೆಯಾಗಿದೆ.
References
See in PDF
(Explainer ID: 157847)
आगंतुक पटल : 14
Provide suggestions / comments