• Sitemap
  • Advance Search
Farmer's Welfare

ಕಿಸಾನ್ ಕ್ರೆಡಿಟ್ ಕಾರ್ಡ್: ಕೃಷಿ ವಲಯದ ಬೆಳವಣಿಗೆಗೆ ಇಂಧನ

ರೈತರಿಗೆ ಬಂಡವಾಳದ ಲಭ್ಯತೆಯನ್ನು ಬಲಪಡಿಸುವುದು

Posted On: 11 MAR 2026 11:35AM

ಪ್ರಮುಖ ಅಂಶಗಳು

  • ಕಿಸಾನ್ ಕ್ರೆಡಿಟ್ ಕಾರ್ಡ್: ಸಣ್ಣ ಮತ್ತು ಅತಿಸಣ್ಣ ರೈತರು, ಗೇಣಿ ರೈತರು ಹಾಗೂ ಸ್ವಸಹಾಯ ಗುಂಪುಗಳು ಸೇರಿದಂತೆ ಎಲ್ಲಾ ರೈತರಿಗೆ ಸಮಯೋಚಿತವಾಗಿ, ಕೈಗೆಟುಕುವ ದರದಲ್ಲಿ ಮತ್ತು ಭದ್ರತೆ ರಹಿತ ಸಾಲವನ್ನು ಒದಗಿಸುತ್ತದೆ.
  • ಪರಿಷ್ಕೃತ ಬಡ್ಡಿ ರಿಯಾಯಿತಿ ಯೋಜನೆ: ಈ ಯೋಜನೆಯಡಿ ಸಾಲದ ಮಿತಿಯನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ, ಪ್ರತಿ ಫಲಾನುಭವಿಗೆ ನೀಡುವ ಭದ್ರತೆ ರಹಿತ ಸಾಲದ ಮಿತಿಯನ್ನು ₹2 ಲಕ್ಷಕ್ಕೆ ಏರಿಸಲಾಗಿದೆ.
  • ವ್ಯಾಪ್ತಿ: ಪ್ರಸ್ತುತ ದೇಶಾದ್ಯಂತ 7.72 ಕೋಟಿಗೂ ಹೆಚ್ಚು ಕೆಸಿಸಿ ಕಾರ್ಡ್‌ಗಳು ಚಾಲ್ತಿಯಲ್ಲಿದ್ದು, ಸುಮಾರು ₹10.2 ಲಕ್ಷ ಕೋಟಿ ಮೊತ್ತದ ಸಾಲ ಬಾಕಿ ಇದೆ.
  • ಬ್ಯಾಂಕಿಂಗ್ ಜಾಲ: ಕೆಸಿಸಿ ವೇದಿಕೆಯು ಒಟ್ಟು 457 ಬ್ಯಾಂಕ್‌ಗಳನ್ನು ತನ್ನ ವ್ಯಾಪ್ತಿಗೆ ತಂದಿದೆ. ವಾಣಿಜ್ಯ, ಪ್ರಾದೇಶಿಕ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್‌ಗಳ ಮೂಲಕ ಒಟ್ಟು 1,998.7 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಪೀಠಿಕೆ

ಕೃಷಿ ಮತ್ತು ಅದರ ಪೂರಕ ಚಟುವಟಿಕೆಗಳ ವಲಯವು ಐತಿಹಾಸಿಕವಾಗಿ ಭಾರತೀಯ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿದೆ. ಇದು ರಾಷ್ಟ್ರೀಯ ಆದಾಯ, ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ. ದೇಶದ ಸುಮಾರು ಶೇಕಡಾ 46.1 ರಷ್ಟು ಜನಸಂಖ್ಯೆಯು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಅವಲಂಬಿಸಿರುವುದರಿಂದ, ರೈತರಿಗೆ ಆರ್ಥಿಕ ಭದ್ರತೆ ಮತ್ತು ಸಾಂಸ್ಥಿಕ ಸಾಲದ ಲಭ್ಯತೆಯನ್ನು ಸುಧಾರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ, ಕೃಷಿ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವಿಶೇಷವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ವಿಸ್ತರಿಸಲು ಹಾಗೂ ಆಧುನೀಕರಿಸಲು ಹಲವಾರು ಉದ್ದೇಶಿತ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪರಿಷ್ಕೃತ ಕಿಸಾನ್ ಕ್ರೆಡಿಟ್ ಕಾರ್ಡ್ (2020) ಯೋಜನೆಯು ರೈತರಿಗೆ ಅವರ ವಿವಿಧ ಕೃಷಿ ಅಗತ್ಯಗಳಿಗಾಗಿ ಅಂದರೆ ಅಲ್ಪಾವಧಿಯ ಬೆಳೆ ಸಾಗುವಳಿ, ಕೊಯ್ಲಿನ ನಂತರದ ಚಟುವಟಿಕೆಗಳು, ಮಾರುಕಟ್ಟೆ ವೆಚ್ಚಗಳು, ಮನೆ ಬಳಕೆಯ ಅಗತ್ಯಗಳು, ಕೃಷಿ ನಿರ್ವಹಣೆಯ ದುಡಿಯುವ ಬಂಡವಾಳ ಮತ್ತು ಕೃಷಿ ಪೂರಕ ಚಟುವಟಿಕೆಗಳ ಹೂಡಿಕೆಗಾಗಿ ಸಕಾಲದಲ್ಲಿ ಮತ್ತು ಪರ್ಯಾಪ್ತ ಸಾಲ ಸಿಗುವಂತೆ ಖಚಿತಪಡಿಸುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್‌ನ ವಿಕಾಸ ಮತ್ತು ಅದರ ವೈಶಿಷ್ಟ್ಯಗಳು

ಬೆಳೆ ಉತ್ಪಾದನೆಗೆ ರೈತರು ಪಡೆಯುವ ಅಲ್ಪಾವಧಿಯ ಸಾಂಸ್ಥಿಕ ಸಾಲದ ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ತ್ವರಿತಗೊಳಿಸಲು 1998 ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪರಿಚಯಿಸಲಾಯಿತು. ಇದು ಕೃಷಿ ಪೂರಕ ಚಟುವಟಿಕೆಗಳಿಗೆ ದುಡಿಯುವ ಬಂಡವಾಳ ಮತ್ತು ಹೂಡಿಕೆ ಸಾಲವನ್ನು ಒದಗಿಸುವುದಲ್ಲದೆ, ಕೊಯ್ಲಿನ ನಂತರದ ಮತ್ತು ಮಾರುಕಟ್ಟೆ ವೆಚ್ಚಗಳನ್ನು ಭರಿಸುತ್ತದೆ. ಈ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಸಮಗ್ರ ಆರ್ಥಿಕ ಬೆಂಬಲವನ್ನು ನೀಡುತ್ತದೆ.

ಕೆಸಿಸಿ ಅಡಿಯಲ್ಲಿ ಸಾಲದ ಲಭ್ಯತೆಯನ್ನು ಇನ್ನಷ್ಟು ಸುಲಭಗೊಳಿಸಲು, ಸರ್ಕಾರವು 2006-07 ರಲ್ಲಿ 'ಪರಿಷ್ಕೃತ ಬಡ್ಡಿ ರಿಯಾಯಿತಿ ಯೋಜನೆ'ಯನ್ನು ಕೇಂದ್ರ ವಲಯದ ಯೋಜನೆಯಾಗಿ ಪ್ರಾರಂಭಿಸಿತು. ಈ ಯೋಜನೆಯು ರೈತರು ಕೆಸಿಸಿ ಮೂಲಕ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವುದನ್ನು ಖಚಿತಪಡಿಸುತ್ತದೆ. ಅಲ್ಲದೆ, ನೈಸರ್ಗಿಕ ವಿಕೋಪಗಳಿಂದ ರೈತರು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಾಲವನ್ನು ಸಕಾಲದಲ್ಲಿ ಮರುಪಾವತಿಸಲು ಉತ್ತೇಜಿಸುವ ಮೂಲಕ ಒಟ್ಟಾರೆ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಕಾಲಾನಂತರದಲ್ಲಿ, ಇದನ್ನು ಕೃಷಿ ಪೂರಕ ಮತ್ತು ಕೃಷಿಯೇತರ ಚಟುವಟಿಕೆಗಳಿಗೂ ವಿಸ್ತರಿಸಲಾಗಿದ್ದು, ಪರಿಷ್ಕೃತ ಕೆಸಿಸಿ ಯೋಜನೆ (2020) ಏಕಗವಾಕ್ಷಿ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ.

ಪರಿಷ್ಕೃತ ಕೆಸಿಸಿಯು ರುಪೇ ಸೌಲಭ್ಯವುಳ್ಳ ಕಾರ್ಡ್ ಆಗಿದ್ದು, ಇದು ಹೊಂದಿಕೊಳ್ಳುವ ಹಣ ಹಿಂತೆಗೆತ, ಡಿಜಿಟಲ್ ಪಾವತಿ ಮತ್ತು ಕೇವಲ ಒಂದು ಬಾರಿ ದಾಖಲಾತಿ ಸಲ್ಲಿಸುವ ವ್ಯವಸ್ಥೆಯನ್ನು ಹೊಂದಿದೆ. ಇದು ಸಾಲ ಪಡೆಯುವ ಪ್ರಕ್ರಿಯೆಯನ್ನು ಸರಳ ಮತ್ತು ದಕ್ಷವಾಗಿಸಿದೆ. ಈ ಯೋಜನೆಯು ಸಾಗುವಳಿ, ಕೊಯ್ಲಿನ ನಂತರದ ಅಗತ್ಯಗಳು, ಪೂರಕ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಒಳಗೊಂಡಿದ್ದು, ವಾಣಿಜ್ಯ, ಪ್ರಾದೇಶಿಕ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್‌ಗಳ ಮೂಲಕ ದೇಶದ ಉದ್ದಗಲಕ್ಕೂ ಅನುಷ್ಠಾನಗೊಳ್ಳುತ್ತಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್‌ನ ಅರ್ಹ ಫಲಾನುಭವಿಗಳು

ಸಾಂಸ್ಥಿಕ ಸಾಲದ ಸೌಲಭ್ಯವು ಎಲ್ಲರಿಗೂ ಸಮಾನವಾಗಿ ಮತ್ತು ಒಳಗೊಳ್ಳುವಿಕೆಯಿಂದ ಸಿಗುವಂತಾಗಲು, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯು ವ್ಯಾಪಕ ಶ್ರೇಣಿಯ ರೈತ ವರ್ಗಗಳನ್ನು ಒಳಗೊಂಡಿದೆ. ಈ ಯೋಜನೆಯು ಈ ಕೆಳಗಿನವರಿಗೆ ಅನ್ವಯಿಸುತ್ತದೆ:

  • ವೈಯಕ್ತಿಕ ರೈತರು ಮತ್ತು ಜಂಟಿ ಸಾಲಗಾರರು: ಸ್ವಂತ ಜಮೀನು ಹೊಂದಿದ್ದು ಸಾಗುವಳಿ ಮಾಡುವ ರೈತರು.
  • ಗೇಣಿ ರೈತರು ಮತ್ತು ಪಾಲುದಾರರು: ಗೇಣಿ ಆಧಾರದ ಮೇಲೆ ಕೃಷಿ ಮಾಡುವವರು, ಮೌಖಿಕ ಗುತ್ತಿಗೆದಾರರು ಮತ್ತು ಬೆಳೆ ಹಂಚಿಕೆದಾರರು.
  • ಗುಂಪುಗಳು: ಸ್ವಸಹಾಯ ಗುಂಪುಗಳು ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳು. ಇದರಲ್ಲಿ ಗೇಣಿ ರೈತರು ಮತ್ತು ಪಾಲುದಾರರು ಸೇರಿ ರಚಿಸಿಕೊಂಡ ಗುಂಪುಗಳೂ ಸೇರಿವೆ.

ಈ ಮೂಲಕ ವಿವಿಧ ಕೃಷಿ ಸಮುದಾಯಗಳಲ್ಲಿ ವ್ಯಾಪಕವಾದ ಆರ್ಥಿಕ ಒಳಗೊಳ್ಳುವಿಕೆಯನ್ನು ಈ ಯೋಜನೆಯು ಖಚಿತಪಡಿಸುತ್ತದೆ.

ಕೆಸಿಸಿ ಅರ್ಜಿಯ ಮೂಲಕ ರೈತರನ್ನು ಸೇರ್ಪಡೆಗೊಳಿಸುವುದು

ರೈತರನ್ನು ಈ ಯೋಜನೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಸಾಂಸ್ಥಿಕ ಸಾಲದ ಲಭ್ಯತೆಯನ್ನು ಸುಧಾರಿಸಲು, ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಹಲವಾರು ಸುಗಮ ಕ್ರಮಗಳನ್ನು ಜಾರಿಗೆ ತರಲಾಗಿದೆ.

  • ಸರಳೀಕೃತ ಅರ್ಜಿ: ಕೇವಲ ಒಂದು ಪುಟದ ಸರಳ ಕೆಸಿಸಿ ಅರ್ಜಿ ನಮೂನೆಯನ್ನು ಪರಿಚಯಿಸಲಾಗಿದೆ. ಅರ್ಜಿದಾರರ ಮೂಲ ವಿವರಗಳನ್ನು ಬ್ಯಾಂಕುಗಳಲ್ಲಿರುವ ಪಿಎಂ-ಕಿಸಾನ್ ದಾಖಲೆಗಳಿಂದ ಮೊದಲೇ ಭರ್ತಿ ಮಾಡಲಾಗಿರುತ್ತದೆ. ರೈತರು ಕೇವಲ ಭೂದಾಖಲೆಗಳ ಪ್ರತಿಗಳು ಮತ್ತು ಬೆಳೆಸುವ ಬೆಳೆಗಳ ಮಾಹಿತಿಯನ್ನು ಮಾತ್ರ ಸಲ್ಲಿಸಬೇಕಾಗುತ್ತದೆ.
  • ಅರ್ಜಿಯ ಲಭ್ಯತೆ: ಈ ಅರ್ಜಿಯನ್ನು ರಾಷ್ಟ್ರೀಯ ದಿನಪತ್ರಿಕೆಗಳ ಜಾಹೀರಾತುಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ. ಅಲ್ಲದೆ, ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳ ವೆಬ್‌ಸೈಟ್‌ಗಳು, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಜಾಲತಾಣ (agricoop.gov.in) ಮತ್ತು ಪಿಎಂ-ಕಿಸಾನ್ ಪೋರ್ಟಲ್ (pmkisan.gov.in) ಮೂಲಕ ಡೌನ್‌ಲೋಡ್ ಮಾಡಲು ಲಭ್ಯವಿವೆ.
  • ಸಾಮಾನ್ಯ ಸೇವಾ ಕೇಂದ್ರಗಳು : ಅರ್ಜಿಗಳನ್ನು ಭರ್ತಿ ಮಾಡಲು ಮತ್ತು ಸಂಬಂಧಪಟ್ಟ ಬ್ಯಾಂಕ್ ಶಾಖೆಗಳಿಗೆ ಅವುಗಳನ್ನು ಡಿಜಿಟಲ್ ರೂಪದಲ್ಲಿ ರವಾನಿಸಲು ಸಾಮಾನ್ಯ ಸೇವಾ ಕೇಂದ್ರಗಳಿಗೆ (CSCs) ಅಧಿಕಾರ ನೀಡಲಾಗಿದೆ. ಇದು ಯೋಜನೆಯ ವ್ಯಾಪ್ತಿಯನ್ನು ಹಳ್ಳಿ ಹಳ್ಳಿಗೂ ವಿಸ್ತರಿಸಲು ಸಹಕಾರಿಯಾಗಿದೆ.

ಕಿಸಾನ್ ರಿನ್ ಪೋರ್ಟಲ್: ಕೆಸಿಸಿ ಅನುಷ್ಠಾನದ ಡಿಜಿಟಲ್ ರೂಪಾಂತರ

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅನುಷ್ಠಾನ ಮತ್ತು ಉಸ್ತುವಾರಿಯನ್ನು ಬಲಪಡಿಸಲು, ಸರ್ಕಾರವು ಸೆಪ್ಟೆಂಬರ್ 2023 ರಲ್ಲಿ ಕಿಸಾನ್ ರಿನ್ ಪೋರ್ಟಲ್ ಅನ್ನು ಪ್ರಾರಂಭಿಸಿತು. ಇದು ಈ ಕೆಳಗಿನ ಅಂಶಗಳನ್ನು ಸಂಯೋಜಿಸುವ ಒಂದು ಏಕೀಕೃತ ಡಿಜಿಟಲ್ ವೇದಿಕೆಯಾಗಿದೆ:

  • ರೈತರ ಪ್ರೊಫೈಲ್ (ವಿವರಗಳು),
  • ಸಾಲ ವಿತರಣೆಯ ದತ್ತಾಂಶ,
  • ಬಡ್ಡಿ ರಿಯಾಯಿತಿ ಹಕ್ಕುಗಳು, ಮತ್ತು
  • ಯೋಜನೆಯ ಕಾರ್ಯಕ್ಷಮತೆಯ ಅಂಕಿಅಂಶಗಳು.

ರೈತರಿಗೆ: ಈ ಪೋರ್ಟಲ್ ಕಡಿಮೆ ವೆಚ್ಚದ ಸಾಂಸ್ಥಿಕ ಸಾಲದ ಲಭ್ಯತೆಯನ್ನು ಸರಳಗೊಳಿಸುತ್ತದೆ. ಇದು ಡೈರಿ (ಹೈನುಗಾರಿಕೆ), ಕೋಳಿ ಸಾಕಾಣಿಕೆ, ಮೀನುಗಾರಿಕೆ ಮತ್ತು ಜೇನು ಸಾಕಾಣಿಕೆಯಂತಹ ಪೂರಕ ಚಟುವಟಿಕೆಗಳಿಗೂ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಸ್ಥೆಗಳೊಂದಿಗೆ ತಡೆರಹಿತ ಡಿಜಿಟಲ್ ಏಕೀಕರಣದ ಮೂಲಕ ಸಾಲದ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಬ್ಯಾಂಕ್ ಮತ್ತು ಸಾಲ ನೀಡುವ ಏಜೆನ್ಸಿಗಳಿಗೆ: ಕಿಸಾನ್ ರಿನ್ ಪೋರ್ಟಲ್ ಬಡ್ಡಿ ರಿಯಾಯಿತಿ ಮತ್ತು ಸಕಾಲಿಕ ಮರುಪಾವತಿ ಪ್ರೋತ್ಸಾಹಕ ಹಕ್ಕುಗಳ ಸ್ವಯಂಚಾಲಿತ ಸಲ್ಲಿಕೆ ಮತ್ತು ಪ್ರಕ್ರಿಯೆಗೆ ಅನುವು ಮಾಡಿಕೊಡುತ್ತದೆ. ಸಂಪೂರ್ಣ ಡಿಜಿಟಲೀಕರಣದ ಮೂಲಕ ವಿಳಂಬವನ್ನು ಕಡಿಮೆ ಮಾಡುತ್ತದೆ ಮತ್ತು ಹಕ್ಕುಗಳ ಪರಿಶೀಲನೆ ಹಾಗೂ ಇತ್ಯರ್ಥದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ, ಈ ಪೋರ್ಟಲ್ ಕೃಷಿ ಸಾಲದ ಆಡಳಿತದಲ್ಲಿ ಕಾರ್ಯಾಚರಣೆಯ ದಕ್ಷತೆ, ಉಸ್ತುವಾರಿ ಮತ್ತು ಪಾರದರ್ಶಕತೆಯನ್ನು ಗಮನಾರ್ಹವಾಗಿ ಸುಧಾರಿಸಿದೆ.

ಎಂಐಎಸ್‌ಎಸ್‌ ಮತ್ತು ಕೆಸಿಸಿ ಅಡಿಯಲ್ಲಿ ರೈತರಿಗೆ ಕೈಗೆಟುಕುವ ದರದ ಸಾಲದ ಸೌಲಭ್ಯವನ್ನು ಹೆಚ್ಚಿಸುವುದು

ಭಾರತ ಸರ್ಕಾರವು 2025-26ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು ಹೆಚ್ಚಿಸಿದೆ, ಇದು ಈ ಕೆಳಗಿನ ಬದಲಾವಣೆಗಳನ್ನು ಒಳಗೊಂಡಿದೆ:

  • ಬಡ್ಡಿ ರಿಯಾಯಿತಿ ಯೋಜನೆ ಅಡಿಯಲ್ಲಿ ಬೆಳೆ ಸಾಲದ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಲಾಗಿದೆ.

ಮೀನುಗಾರಿಕೆ ಮತ್ತು ಪೂರಕ ಚಟುವಟಿಕೆಗಳ ಸಾಲದ ಮಿತಿಯನ್ನು ₹2 ಲಕ್ಷದಿಂದ5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

  • ಪ್ರತಿ ಸಾಲಗಾರನಿಗೆ ನೀಡುವ ಭದ್ರತೆ ರಹಿತ ಸಾಲದ ಮಿತಿಯನ್ನು ₹1.6 ಲಕ್ಷದಿಂದ2 ಲಕ್ಷಕ್ಕೆ ಏರಿಸಲಾಗಿದೆ (ಇದು 1 ಜನವರಿ 2025 ರಿಂದ ಜಾರಿಗೆ ಬಂದಿದೆ).
  • ₹3 ಲಕ್ಷದವರೆಗಿನ ಅಲ್ಪಾವಧಿ ಕೃಷಿ ಸಾಲಗಳು ಶೇ. 7 ಬಡ್ಡಿದರದಲ್ಲಿ ಲಭ್ಯವಿದ್ದು, ಸಕಾಲದಲ್ಲಿ ಮರುಪಾವತಿ ಮಾಡುವವರಿಗೆ ಹೆಚ್ಚುವರಿ ಶೇ. 3 ರಷ್ಟು ಬಡ್ಡಿ ರಿಯಾಯಿತಿ ಸಿಗಲಿದೆ. ಇದರಿಂದಾಗಿ ಪರಿಣಾಮಕಾರಿ ಬಡ್ಡಿದರವು ಕೇವಲ ಶೇ. 4 ಕ್ಕೆ ಇಳಿಕೆಯಾಗುತ್ತದೆ.

ಕೆಸಿಸಿ ಅಡಿಯಲ್ಲಿ ಸಾಲದ ಮಿತಿ ಮತ್ತು ನಿಬಂಧನೆಗಳು

ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ, ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಗಳನ್ನು ರೈತರ ಭೂ ಹಿಡುವಳಿ ಗಾತ್ರ, ಹೂಡಿಕೆ ಸಾಮರ್ಥ್ಯ ಮತ್ತು ಜೀವನೋಪಾಯದ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು ಸಣ್ಣ ರೈತರು ಮತ್ತು ಇತರ ರೈತರಿಗೆ ವಿಭಿನ್ನವಾಗಿ ರೂಪಿಸಲಾಗಿದೆ.

  • ಸಣ್ಣ ಮತ್ತು ಅತಿಸಣ್ಣ ರೈತರಲ್ಲದವರಿಗೆ: ದೀರ್ಘಕಾಲದ ಕೃಷಿ ಮತ್ತು ಪೂರಕ ಹೂಡಿಕೆಗಳಿಗಾಗಿ ಆಸ್ತಿ-ಆಧಾರಿತ ಅವಧಿ ಸಾಲಗಳನ್ನು ನೀಡಲಾಗುತ್ತದೆ.
  • ಸಣ್ಣ ಮತ್ತು ಅತಿಸಣ್ಣ ರೈತರಿಗೆ: ಅಲ್ಪಾವಧಿಯ ಬೆಳೆ ಉತ್ಪಾದನೆ, ಮನೆ ಬಳಕೆ ಅಗತ್ಯಗಳು ಮತ್ತು ಸಣ್ಣ ಹೂಡಿಕೆ ಅಗತ್ಯಗಳನ್ನು ಒಳಗೊಂಡ ಏಕೀಕೃತ ಕೆಸಿಸಿ ಮಿತಿಯಡಿ ನಮ್ಯ ಸಾಲದ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಸಣ್ಣ ಮತ್ತು ಅತಿಸಣ್ಣ ರೈತರನ್ನು ಹೊರತುಪಡಿಸಿ ಇತರ ರೈತರಿಗಾಗಿ ಇರುವ ನಿಬಂಧನೆಗಳು:

ಸಣ್ಣ ಮತ್ತು ಅತಿಸಣ್ಣ ರೈತರಿಗೆ ಇರುವ ನಿಬಂಧನೆಗಳು

ಭೂ ಹಿಡುವಳಿ ಗಾತ್ರ ಮತ್ತು ಬೆಳೆ ಪದ್ಧತಿಯಂತಹ ಅಂಶಗಳ ಆಧಾರದ ಮೇಲೆ ₹10,000 ರಿಂದ ₹50,000 ರವರೆಗಿನ ನಮ್ಯ ಮಿತಿಯನ್ನು ಮಂಜೂರು ಮಾಡಬಹುದು."ಈ ಸಂಯೋಜಿತ ಕೆಸಿಸಿ ಮಿತಿಯನ್ನು ಐದು ವರ್ಷಗಳ ಅವಧಿಗೆ ನಿಗದಿಪಡಿಸಲಾಗುತ್ತದೆ. ಬೆಳೆ ಪದ್ಧತಿಯಲ್ಲಿನ ಬದಲಾವಣೆ ಅಥವಾ ಹಣಕಾಸಿನ ಪ್ರಮಾಣದಲ್ಲಿ ಹೆಚ್ಚಳದ ಅಗತ್ಯವಿದ್ದಲ್ಲಿ, ನಿಗದಿತ ಮಾನದಂಡಗಳ ಪ್ರಕಾರ ಈ ಮಿತಿಯನ್ನು ಪರಿಷ್ಕರಿಸಬಹುದು. ಈ ಮಿತಿಯು ಈ ಕೆಳಗಿನ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ:

  • ಕೊಯ್ಲಿನ ನಂತರದ ಮತ್ತು ಉಗ್ರಾಣ ಸಂಬಂಧಿತ ಸಾಲದ ಅಗತ್ಯಗಳು.
  • ದೈನಂದಿನ ಕೃಷಿ ನಿರ್ವಹಣೆ ಮತ್ತು ಮನೆ ಬಳಕೆಯ ವೆಚ್ಚಗಳು.
  • ಭೂಮಿಯ ಮೌಲ್ಯಮಾಪನಕ್ಕೆ ಸಂಬಂಧಪಡದಂತೆ, ಬ್ಯಾಂಕ್ ಶಾಖಾ ವ್ಯವಸ್ಥಾಪಕರ ನಿರ್ಧಾರದ ಮೇರೆಗೆ ಕೃಷಿ ಉಪಕರಣಗಳ ಖರೀದಿ ಅಥವಾ ಪೂರಕ ಉದ್ಯಮದ ಸ್ಥಾಪನೆಯಂತಹ ಅಲ್ಪಾವಧಿಯ ಹೂಡಿಕೆಗಳು.

ಕೆಸಿಸಿ ಯೋಜನೆಯ ವ್ಯಾಪ್ತಿ ಮತ್ತು ಆರ್ಥಿಕ ತಲುಪುವಿಕೆ

ಪ್ರಸ್ತುತ ದೇಶಾದ್ಯಂತ 7.72 ಕೋಟಿಗೂ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು ಚಾಲ್ತಿಯಲ್ಲಿದ್ದು, ಒಟ್ಟು ₹10.2 lakh ಕೋಟಿ ಬಾಕಿ ಸಾಲದ ಮೊತ್ತವನ್ನು ಹೊಂದಿವೆ. ಇದು ರೈತರಿಗೆ ಸಾಂಸ್ಥಿಕ ಸಾಲವನ್ನು ಒದಗಿಸುವಲ್ಲಿ ಕೆಸಿಸಿ ಯೋಜನೆಯು ಎಷ್ಟು ವ್ಯಾಪಕವಾಗಿ ಹರಡಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ, ಕೈಗೆಟುಕುವ ಮತ್ತು ಸಕಾಲಿಕ ಹಣಕಾಸಿನ ನೆರವು ನೀಡುವ ಮೂಲಕ ಕೃಷಿ ಹಾಗೂ ಪೂರಕ ಚಟುವಟಿಕೆಗಳನ್ನು ಬೆಂಬಲಿಸುವಲ್ಲಿ ಈ ಯೋಜನೆಯ ನಿರ್ಣಾಯಕ ಪಾತ್ರವನ್ನು ಇದು ಉಲ್ಲೇಖಿಸುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ವೇದಿಕೆಯ ಅಡಿಯಲ್ಲಿ ಒಟ್ಟು 457 ಬ್ಯಾಂಕ್ಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ 37 ವಾಣಿಜ್ಯ ಬ್ಯಾಂಕ್ಗಳು, 46 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಮತ್ತು 374 ಸಹಕಾರಿ ಬ್ಯಾಂಕ್ಗಳು ಸೇರಿವೆ. ಇದು ದೇಶಾದ್ಯಂತ ರೈತರಿಗೆ ಸಾಂಸ್ಥಿಕ ಸಾಲದ ಲಭ್ಯತೆಯನ್ನು ಖಚಿತಪಡಿಸಲು ಮತ್ತು ವಿಶಾಲವಾದ ಭೌಗೋಳಿಕ ವ್ಯಾಪ್ತಿಯನ್ನು ತಲುಪಲು ರೂಪಿಸಲಾದ ವೈವಿಧ್ಯಮಯ ವಿತರಣಾ ವ್ಯವಸ್ಥೆಯನ್ನು ಸೂಚಿಸುತ್ತದೆ. ಈ ಎಲ್ಲಾ ಸಂಸ್ಥೆಗಳ ಮೂಲಕ ಒಟ್ಟು 1,998.7 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿಗಳನ್ನು ಸಂಸ್ಕರಿಸಲಾಗಿದ್ದು, ಅವುಗಳಲ್ಲಿ 631.5 ಲಕ್ಷ ಅರ್ಜಿಗಳು ವಾಣಿಜ್ಯ ಬ್ಯಾಂಕ್‌ಗಳ ಮೂಲಕ, 337.2 ಲಕ್ಷ ಅರ್ಜಿಗಳು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಮೂಲಕ ಮತ್ತು 1030.0 ಲಕ್ಷ ಅರ್ಜಿಗಳು ಸಹಕಾರಿ ಬ್ಯಾಂಕ್‌ಗಳ ಮೂಲಕ ಸಲ್ಲಿಕೆಯಾಗಿವೆ. ಇದು ಕೆಸಿಸಿ ಅನುಷ್ಠಾನದಲ್ಲಿ ಸಂಸ್ಥೆಗಳ ವ್ಯಾಪಕ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುವುದಲ್ಲದೆ, ವಿಶೇಷವಾಗಿ ತಳಮಟ್ಟದಲ್ಲಿ ಕೃಷಿ ಸಾಲವನ್ನು ವಿಸ್ತರಿಸುವಲ್ಲಿ ಸಹಕಾರಿ ಬ್ಯಾಂಕ್‌ಗಳ ಪ್ರಮುಖ ಪಾತ್ರವನ್ನು ಉಲ್ಲೇಖಿಸುತ್ತದೆ.

2018-19 ರಲ್ಲಿ, ಭಾರತ ಸರ್ಕಾರವು ಮೀನುಗಾರರು ಮತ್ತು ಮೀನು ಸಾಕಾಣಿಕೆದಾರರ ದುಡಿಯುವ ಬಂಡವಾಳದ ಅಗತ್ಯಗಳನ್ನು ಪೂರೈಸಲು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಅವರಿಗೆ ವಿಸ್ತರಿಸಿತು. ಇದು ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಚಟುವಟಿಕೆಗಳಿಗೆ ಸಾಂಸ್ಥಿಕ ಸಾಲವನ್ನು ಸಕಾಲದಲ್ಲಿ ಪಡೆಯಲು ಅನುವು ಮಾಡಿಕೊಟ್ಟಿತು. ಈ ಅವಧಿಯಲ್ಲಿ ಕೆಸಿಸಿ (KCC) ವಿತರಣೆಯು ಗರಿಷ್ಠ ಮಟ್ಟವನ್ನು ತಲುಪಿದ್ದು, ವಿವಿಧ ಕೃಷಿ ಚಟುವಟಿಕೆಗಳನ್ನು ಬೆಂಬಲಿಸಲು ಈ ಯೋಜನೆಯು ವ್ಯಾಪಕವಾಗಿ ವಿಸ್ತರಿಸುತ್ತಿರುವುದನ್ನು ಇದು ಪ್ರತಿಫಲಿಸುತ್ತದೆ.

ಅಂಕಿಅಂಶಗಳು ಕೃಷಿ ಪೂರಕ ಚಟುವಟಿಕೆಗಳಲ್ಲಿನ ಸಾಲದ ಬೇಡಿಕೆಗೆ ಬಲವಾದ ಸಾಂಸ್ಥಿಕ ಪ್ರತಿಕ್ರಿಯೆಯನ್ನು ಸೂಚಿಸುತ್ತವೆ. ಪಶುಸಂಗೋಪನಾ ವಲಯದಲ್ಲಿ, 55.9 ಲಕ್ಷ ಅರ್ಜಿಗಳಲ್ಲಿ 55.08 ಲಕ್ಷ ಅರ್ಜಿಗಳು ಅಂಗೀಕಾರವಾಗಿರುವುದು (ಸ್ವೀಕರಿಸಲ್ಪಟ್ಟಿರುವುದು) ವ್ಯಾಪಕ ಅರ್ಹತೆ, ಪರಿಣಾಮಕಾರಿ ತಪಾಸಣಾ ವ್ಯವಸ್ಥೆ ಮತ್ತು ವಲಯಕ್ಕೆ ಸಿಗುತ್ತಿರುವ ನಿರಂತರ ನೀತಿ ಬೆಂಬಲವನ್ನು ಪ್ರತಿಬಿಂಬಿಸುತ್ತದೆ. ಇವುಗಳಲ್ಲಿ 39.22 ಲಕ್ಷ ಅರ್ಜಿಗಳಿಗೆ ಸಾಲ ಮಂಜೂರಾಗಿರುವುದು, ನಿಜವಾದ ಆರ್ಥಿಕ ಬೆಂಬಲವು ರೈತರಿಗೆ ತಲುಪುತ್ತಿರುವುದನ್ನು ತೋರಿಸುತ್ತದೆ.

ಅದೇ ರೀತಿ, ಮೀನುಗಾರಿಕೆಯಲ್ಲಿ 6.83 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 6.77 ಲಕ್ಷ ಅರ್ಜಿಗಳು ಅಂಗೀಕರಿಸಲ್ಪಟ್ಟಿವೆ. ಇವುಗಳಲ್ಲಿ 4.82 ಲಕ್ಷ ಅರ್ಜಿಗಳಿಗೆ ಸಾಲ ಮಂಜೂರಾತಿ ಸಿಕ್ಕಿರುವುದು ಬೇಡಿಕೆಯು ಸಾಲದ ಲಭ್ಯತೆಯಾಗಿ ಪರಿವರ್ತನೆಯಾಗುತ್ತಿರುವುದನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ, ಈ ಫಲಿತಾಂಶಗಳು ಪೂರಕ ವಲಯಗಳು ಅಧಿಕೃತ ಸಾಲ ವ್ಯವಸ್ಥೆಯೊಂದಿಗೆ ಹೆಚ್ಚು ಸಂಯೋಜನೆಗೊಳ್ಳುತ್ತಿರುವುದನ್ನು ತಿಳಿಸುತ್ತದೆ.

ಕೈಗೆಟುಕುವ ಸಾಲ ಮತ್ತು ಕೃಷಿ ಉತ್ಪಾದಕತೆಯ ಹೆಚ್ಚಳ

ದುಡಿಯುವ ಬಂಡವಾಳದ ಲಭ್ಯತೆಯನ್ನು ಸುಲಭಗೊಳಿಸುವ ಮೂಲಕ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯು ಗುಣಮಟ್ಟದ ಕೃಷಿ ಪರಿಕರಗಳಲ್ಲಿ ಸಕಾಲಿಕ ಹೂಡಿಕೆಗೆ ನೆರವಾಗುತ್ತಿದೆ. ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಆದಾಯವನ್ನು ಗಳಿಸಲು ಕೊಡುಗೆ ನೀಡುತ್ತಿದೆ.

  • ಕೈಗೆಟುಕುವ ಸಾಂಸ್ಥಿಕ ಸಾಲ: ಈ ಯೋಜನೆಯು ಅತ್ಯಂತ ರಿಯಾಯಿತಿ ದರವಾದ ಶೇ. 4 ಬಡ್ಡಿಯಲ್ಲಿ ಸಾಂಸ್ಥಿಕ ಸಾಲವನ್ನು ನೀಡುವುದನ್ನು ಮುಂದುವರಿಸಿದೆ. ಇದು ಜಾಗತಿಕವಾಗಿ ಅತ್ಯಂತ ಅಗ್ಗದ ಕೃಷಿ ಸಾಲದ ಸಾಧನಗಳಲ್ಲಿ ಒಂದಾಗಿದ್ದು, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸುಲಭ ಲಭ್ಯತೆಯನ್ನು ಖಚಿತಪಡಿಸುತ್ತದೆ.
  • ಲವಲಿತ ಸಾಲ ಸೌಲಭ್ಯಗಳು: ಕೆಸಿಸಿಯು 5 ವರ್ಷಗಳವರೆಗೆ ಮಾನ್ಯತೆ ಇರುವ ಆವರ್ತಕ ಸಾಲ ಸೌಲಭ್ಯವನ್ನು ಒದಗಿಸುತ್ತದೆ, ಇದರಿಂದ ರೈತರು ತಮ್ಮ ಅಗತ್ಯಕ್ಕೆ ತಕ್ಕಂತೆ ಹಣವನ್ನು ಹಿಂಪಡೆಯಬಹುದು.
  • ಅಪಾಯ ತಗ್ಗಿಸುವ ಬೆಂಬಲ: ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಅಪಾಯಗಳನ್ನು ಎದುರಿಸಲು, 1 ವರ್ಷದವರೆಗೆ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ತೀವ್ರತರವಾದ ವಿಪತ್ತುಗಳ ಸಂದರ್ಭದಲ್ಲಿ ಇದನ್ನು 5 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.
  • ಭದ್ರತೆ ರಹಿತ ಸಾಲ: ರೈತರು ಯಾವುದೇ ಆಸ್ತಿ ಅಡಮಾನ ಅಥವಾ ಭದ್ರತೆ ಇಲ್ಲದೆ ₹2 ಲಕ್ಷದವರೆಗೆ ಸಾಲ ಪಡೆಯಲು ಅವಕಾಶ ನೀಡಲಾಗಿದ್ದು, ಇದು ಅಧಿಕೃತ ಸಾಲ ಪಡೆಯುವಲ್ಲಿನ ಅಡೆತಡೆಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ.
  • ಸಣ್ಣ ಮತ್ತು ಅತಿಸಣ್ಣ ರೈತರ ಸಬಲೀಕರಣ: ಒಟ್ಟು ಕೃಷಿ ಸಾಲದ ಖಾತೆಗಳಲ್ಲಿ ಸುಮಾರು ಶೇಕಡಾ 76 ರಷ್ಟು ಖಾತೆಗಳನ್ನು ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿದ್ದಾರೆ. ಇದು ಕೃಷಿ ಸಮುದಾಯದ ಅತ್ಯಂತ ದುರ್ಬಲ ವರ್ಗಗಳನ್ನು ಸಬಲೀಕರಿಸುವಲ್ಲಿ ಈ ಯೋಜನೆಯು ನಿರ್ಣಾಯಕ ಪಾತ್ರ ವಹಿಸುತ್ತಿರುವುದನ್ನು ತೋರಿಸುತ್ತದೆ.
  • ಕೃಷಿ ಉತ್ಪಾದಕತೆಯ ಹೆಚ್ಚಳ: ಸುಧಾರಿತ ಬಿತ್ತನೆ ಬೀಜಗಳು, ರಸಗೊಬ್ಬರಗಳು ಮತ್ತು ಕೃಷಿ ಉಪಕರಣಗಳಲ್ಲಿ ಹೂಡಿಕೆ ಮಾಡಲು ರೈತರಿಗೆ ಅನುವು ಮಾಡಿಕೊಡುವುದರಿಂದ ಉತ್ತಮ ಇಳುವರಿ, ಹೆಚ್ಚಿನ ಆದಾಯ ಮತ್ತು ಕೃಷಿಯಲ್ಲಿ ಸ್ಥಿರತೆ ಉಂಟಾಗುತ್ತದೆ.

ಕೆಸಿಸಿ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರದ ಉಪಕ್ರಮಗಳು

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಲಭ್ಯತೆ, ವ್ಯಾಪ್ತಿ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಸರ್ಕಾರವು ಸರಣಿ ಕ್ರಮಗಳನ್ನು ಕೈಗೊಂಡಿದೆ.

  • ಜಾಗೃತಿ ಮೂಡಿಸುವಿಕೆ: ಭಾರತೀಯ ರಿಸರ್ವ್ ಬ್ಯಾಂಕ್, ನಬಾರ್ಡ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳ ಸಹಯೋಗದೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯಾಪಕವಾದ ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಭಿಯಾನಗಳನ್ನು ಹಾಗೂ ರೈತ ಸಂಪರ್ಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ.
  • ಆತ್ಮನಿರ್ಭರ ಭಾರತ ಅಭಿಯಾನ: ಎಲ್ಲಾ ಅರ್ಹ ರೈತರು, ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವವರನ್ನು ಒಳಗೊಳ್ಳಲು ರಾಷ್ಟ್ರವ್ಯಾಪಿ 'ಕೆಸಿಸಿ ಸ್ಯಾಚುರೇಶನ್ ಡ್ರೈವ್' ಅನ್ನು ಜಿಲ್ಲಾ ಮಟ್ಟದಲ್ಲಿ ವಾರಕ್ಕೊಮ್ಮೆ ಕ್ಯಾಂಪ್‌ಗಳನ್ನು ನಡೆಸುವ ಮೂಲಕ ಮಾಡಲಾಗುತ್ತಿದೆ.
  • ರುಪೇ ಕೆಸಿಸಿ: ಇದು ಅಲ್ಪಾವಧಿಯ ಕೃಷಿ ಸಾಲದ ಸುಲಭ ಲಭ್ಯತೆಯನ್ನು ಖಚಿತಪಡಿಸಿದೆ ಮತ್ತು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಿದೆ. ಇದು ನಗದು ಮತ್ತು ಲೇವಾದೇವಿಗಾರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ, ಇದರಿಂದ ರೈತರು ಬಡ್ಡಿ ರಿಯಾಯಿತಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿದೆ.

ಒಟ್ಟಾರೆಯಾಗಿ, ಈ ಸರ್ಕಾರಿ ಉಪಕ್ರಮಗಳು ಸುರಕ್ಷಿತ ಮತ್ತು ಸುಲಭವಾದ ಪಾವತಿ ಚೌಕಟ್ಟನ್ನು ಸಕ್ರಿಯಗೊಳಿಸುವ ಮೂಲಕ ಆರ್ಥಿಕ ಒಳಗೊಳ್ಳುವಿಕೆಯನ್ನು ಬಲಪಡಿಸಿವೆ ಮತ್ತು ಸಾಂಸ್ಥಿಕ ಸಾಲ ವಿತರಣೆಯನ್ನು ಸುಧಾರಿಸಿವೆ.

ಉಪಸಂಹಾರ

ಕೃಷಿ ಜೀವನೋಪಾಯವನ್ನು ಸುಸ್ಥಿರವಾಗಿರಿಸಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಕೈಗೆಟುಕುವ ದರದ ಹಾಗೂ ಸಕಾಲಿಕ ಸಾಂಸ್ಥಿಕ ಸಾಲದ ಲಭ್ಯತೆಯು ಅತ್ಯಂತ ಅವಶ್ಯಕವಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯು ಸಾಗುವಳಿ, ಪೂರಕ ಚಟುವಟಿಕೆಗಳು ಮತ್ತು ಕೊಯ್ಲಿನ ನಂತರದ ಅಗತ್ಯಗಳನ್ನು ಒಂದೇ ಲವಲಿತ ಚೌಕಟ್ಟಿನಡಿಯಲ್ಲಿ ಬೆಂಬಲಿಸುವ ಮೂಲಕ ಈ ಅಗತ್ಯವನ್ನು ಪೂರೈಸಿದೆ. ಯೋಜನೆಯ ಈ ಪ್ರಗತಿಪರ ವಿಕಾಸವು ಕೇವಲ ವ್ಯವಹಾರ-ಆಧಾರಿತ ಸಾಲದ ಪದ್ಧತಿಯಿಂದ, ರೈತರ ಉತ್ಪಾದನಾ ಚಕ್ರ ಮತ್ತು ಆದಾಯದ ಹರಿವಿಗೆ ಅನುಗುಣವಾಗಿ ಸಾಲವನ್ನು ಒದಗಿಸುವ ಸಮಗ್ರ ಅಪ್ರೋಚ್‌ನತ್ತ ಸಾಗಿರುವುದನ್ನು ಪ್ರತಿಫಲಿಸುತ್ತದೆ.

ಇತ್ತೀಚಿನ ಸುಧಾರಣೆಗಳಾದ ಸಾಲದ ಮಿತಿಯ ಹೆಚ್ಚಳ, ಪೂರಕ ವಲಯಗಳಿಗೆ ವ್ಯಾಪ್ತಿಯ ವಿಸ್ತರಣೆ ಮತ್ತು ಕಿಸಾನ್ ರಿನ್ ಪೋರ್ಟಲ್ ಮೂಲಕ ಡಿಜಿಟಲ್ ಏಕೀಕರಣವು ಯೋಜನೆಯ ತಲುಪುವಿಕೆ, ಪಾರದರ್ಶಕತೆ ಮತ್ತು ಆಡಳಿತವನ್ನು ಗಮನಾರ್ಹವಾಗಿ ಸುಧಾರಿಸಿದೆ. ದತ್ತಾಂಶ-ಆಧಾರಿತ ಮೇಲ್ವಿಚಾರಣೆ, ತ್ವರಿತ ಸಾಲ ಪ್ರಕ್ರಿಯೆ ಮತ್ತು ಪಾರದರ್ಶಕ ಹಕ್ಕುಗಳ ಇತ್ಯರ್ಥವನ್ನು ಸಕ್ರಿಯಗೊಳಿಸುವ ಮೂಲಕ, ಈ ಕ್ರಮಗಳು ಕೃಷಿ ಸಾಲ ವಿತರಣೆಯ ಕಾರ್ಯಾಚರಣೆಯ ದಕ್ಷತೆಯನ್ನು ಬಲಪಡಿಸಿವೆ. ಹೆಚ್ಚುತ್ತಿರುವ ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆ ಅಪಾಯಗಳ ಹಿನ್ನೆಲೆಯಲ್ಲಿ, ಕೆಸಿಸಿ ಯೋಜನೆಯು ಆರ್ಥಿಕ ಅಭ್ಯುದಯವನ್ನು ಹೆಚ್ಚಿಸಲು, ಸಾಲದ ವ್ಯವಸ್ಥೆಯ ಅಧಿಕೃತೀಕರಣವನ್ನು ಉತ್ತೇಜಿಸಲು ಮತ್ತು ಸುಸ್ಥಿರ ಕೃಷಿ ಬೆಳವಣಿಗೆಯನ್ನು ಬೆಂಬಲಿಸಲು ಒಂದು ಪ್ರಮುಖ ನೀತಿ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಒಳಗೊಳ್ಳುವ ಗ್ರಾಮೀಣ ಅಭಿವೃದ್ಧಿ ಮತ್ತು ದೀರ್ಘಕಾಲೀನ ಕೃಷಿ ಸ್ಥಿರತೆಗೆ ಕೊಡುಗೆ ನೀಡುತ್ತಿದೆ. ಒಳಗೊಳ್ಳುವ ಗ್ರಾಮೀಣ ಅಭಿವೃದ್ಧಿ ಮತ್ತು ದೀರ್ಘಕಾಲೀನ ಕೃಷಿ ಸ್ಥಿರತೆಯನ್ನು ಮುನ್ನಡೆಸಲು ಈ ಯೋಜನೆಯ ನಿರಂತರ ಬಲವರ್ಧನೆಯು ಅತ್ಯಗತ್ಯವಾಗಿದೆ.

References

 

Department of Agriculture and Farmers Welfare

https://www.pib.gov.in/PressReleasePage.aspx?PRID=2099696

https://fasalrin.gov.in/

https://www.pib.gov.in/PressReleasePage.aspx?PRID=2132139

https://www.pib.gov.in/PressReleseDetailm.aspx?PRID=1958531&utm

https://www.pib.gov.in/FactsheetDetails.aspx?Id=148600

https://financialservices.gov.in/beta/sites/default/files/DFS-Data-Snapshot.pdf

Lok Sabha and Rajya Sabha Questions

https://sansad.in/getFile/loksabhaquestions/annex/185/AU4180_nfJzOf.pdf?source=pqals

https://sansad.in/getFile/loksabhaquestions/annex/185/AU1365_spXbvr.pdf?source=pqals

https://sansad.in/getFile/loksabhaquestions/annex/185/AU2500_MY7k37.pdf?source=pqals

https://sansad.in/getFile/loksabhaquestions/annex/185/AU1588_urrFbf.pdf?source=pqals

https://sansad.in/getFile/annex/267/AS338_apRnsi.pdf?source=pqars

RBI

https://www.rbi.org.in/commonman/english/scripts/Notification.aspx?Id=2311&utm

https://rbidocs.rbi.org.in/rdocs/content/pdfs/10MCKCC040718_AN.pdf

Economic Survey

https://www.indiabudget.gov.in/economicsurvey/doc/eschapter/echap09.pdf
https://www.indiabudget.gov.in/doc/budget_speech.pdf

See in PDF

 

*****

(Explainer ID: 157777) आगंतुक पटल : 15
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Gujarati
Prime Minister mygov.in Content Link
National Portal Of India
STQC Certificate