Technology
ಡಿಜಿಟಲ್ ಕಂದಕವನ್ನು ಸರಿಪಡಿಸುವುದು
ಡಿಜಿಟಲ್ ಯುಗದಲ್ಲಿ ಭಾರತದ ಸಬಲೀಕರಣ
Posted On:
08 MAR 2026 9:32AM
|
ಪ್ರಮುಖ ಅಂಶಗಳು
- ಭಾರತ್‌ನೆಟ್ ಮೂಲಕ 2.15 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳನ್ನು ಸಂಪರ್ಕಿಸಲಾಗಿದೆ ಮತ್ತು 5 ಲಕ್ಷ 5G ಬೇಸ್ ಟ್ರಾನ್ಸ್‌ಸೀವರ್ ಸ್ಟೇಷನ್‌ಗಳು ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ವ್ಯಾಪ್ತಿಯನ್ನು ಒದಗಿಸುತ್ತಿವೆ.
- 5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು ದೂರದ ಪ್ರದೇಶಗಳಿಗೆ ಡಿಜಿಟಲ್ ಸೇವೆಗಳ ಲಭ್ಯತೆಯನ್ನು ತಲುಪಿಸುತ್ತಿವೆ.
- ಪಿಎಂಜಿಡಿಐಎಸ್ಎಚ್‌ಎ ಯೋಜನೆಯು 6 ಕೋಟಿಗೂ ಹೆಚ್ಚು ಗ್ರಾಮೀಣ ನಾಗರಿಕರಿಗೆ ಡಿಜಿಟಲ್ ಸಾಕ್ಷರತೆಯ ತರಬೇತಿಯನ್ನು ನೀಡಿದೆ.
- 4.09 ಲಕ್ಷ ಪಿಎಂ-ವಾಣಿ ವೈ-ಫೈ ಹಾಟ್‌ಸ್ಪಾಟ್‌ಗಳು ಗ್ರಾಮಗಳಲ್ಲಿ ಕೈಗೆಟುಕುವ ದರದ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುತ್ತಿವೆ.
|
ಪೀಠಿಕೆ
ಭಾರತದ ಡಿಜಿಟಲ್ ರೂಪಾಂತರವು ಜಾಗತಿಕವಾಗಿ ಸಂಪರ್ಕ ಮತ್ತು ತಂತ್ರಜ್ಞಾನ ಆಧಾರಿತ ಸಾರ್ವಜನಿಕ ಸೇವಾ ವಿತರಣೆಯ ಅತಿದೊಡ್ಡ ವಿಸ್ತರಣೆಗಳಲ್ಲಿ ಒಂದಾಗಿದೆ. 2015 ರಲ್ಲಿ ಪ್ರಾರಂಭಿಸಲಾದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ, ಪ್ರತಿಯೊಬ್ಬ ನಾಗರಿಕನಿಗೂ ಡಿಜಿಟಲ್ ಮೂಲಸೌಕರ್ಯವನ್ನು ಮೂಲಭೂತ ಸೌಕರ್ಯವಾಗಿ ಒದಗಿಸುವುದು, ಡಿಜಿಟಲ್ ಕಂದಕವನ್ನು ಸರಿಪಡಿಸುವುದು, ಬೇಡಿಕೆಗೆ ಅನುಗುಣವಾಗಿ ಆಡಳಿತ ಮತ್ತು ಸೇವೆಗಳನ್ನು ಒದಗಿಸುವುದು ಮತ್ತು ಡಿಜಿಟಲ್ ಪ್ರವೇಶದ ಮೂಲಕ ಜನರನ್ನು ಸಬಲೀಕರಿಸುವತ್ತ ದೇಶದ ಕಾರ್ಯತಂತ್ರವು ಗಮನ ಹರಿಸಿದೆ.
ಒಂದು ದಶಕದ ಹಿಂದೆ, ಭಾರತದಲ್ಲಿ ಡಿಜಿಟಲ್ ಕಂದಕವು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ವೇಗದ ಇಂಟರ್ನೆಟ್ ಹೆಚ್ಚಾಗಿ ನಗರಗಳಿಗೆ ಸೀಮಿತವಾಗಿತ್ತು, ಗ್ರಾಮೀಣ ಸಂಪರ್ಕವು ಅಲ್ಪವಾಗಿತ್ತು ಮತ್ತು ಆನ್‌ಲೈನ್ ಸೇವೆಗಳ ಲಭ್ಯತೆಯು ಸ್ಥಳ, ಆದಾಯ ಮತ್ತು ಡಿಜಿಟಲ್ ಸಾಕ್ಷರತೆಯ ಮೇಲೆ ಅವಲಂಬಿತವಾಗಿತ್ತು. ವರ್ಷಗಳು ಕಳೆದಂತೆ, ಸುಸ್ಥಿರ ಸಾರ್ವಜನಿಕ ಹೂಡಿಕೆಯು ಬ್ರಾಡ್‌ಬ್ಯಾಂಡ್ ಜಾಲಗಳನ್ನು ವಿಸ್ತರಿಸಿದೆ ಮತ್ತು ವ್ಯಾಪಕವಾದ ಆಪ್ಟಿಕಲ್ ಫೈಬರ್ ಮೂಲಸೌಕರ್ಯದತ್ತ ಮುನ್ನಡೆದಿದೆ. ಇದು ಹಳ್ಳಿಗಳು ಮತ್ತು ದೂರದ ಪ್ರದೇಶಗಳಲ್ಲಿ ಸಂಪರ್ಕದ ವ್ಯಾಪ್ತಿ ಮತ್ತು ಗುಣಮಟ್ಟ ಎರಡನ್ನೂ ಸುಧಾರಿಸಿದೆ.
ಇಂದು, ಈ ಕಂದಕವು ವೇಗವಾಗಿ ಕಿರಿದಾಗುತ್ತಿದೆ. ಕೈಗೆಟುಕುವ ದರದ ಡೇಟಾ, ನೆರವು ನೀಡುವ ಡಿಜಿಟಲ್ ಪ್ರವೇಶ ಕೇಂದ್ರಗಳು ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ ಸಾರ್ವಜನಿಕ ವೇದಿಕೆಗಳು ನಾಗರಿಕರಿಗೆ ಕಲ್ಯಾಣ ಯೋಜನೆಗಳನ್ನು ಪಡೆಯಲು, ಡಿಜಿಟಲ್ ಪಾವತಿಗಳನ್ನು ಮಾಡಲು, ಆನ್‌ಲೈನ್ ಶಿಕ್ಷಣವನ್ನು ಪಡೆಯಲು ಮತ್ತು ಆಡಳಿತದಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತಿವೆ. ಕೇವಲ ಸಂಪರ್ಕದ ಮಿಷನ್ ಆಗಿ ಪ್ರಾರಂಭವಾದದ್ದು ಈಗ ವಿಶಾಲವಾದ ಸಬಲೀಕರಣದ ಪ್ರಯಾಣವಾಗಿ ವಿಕಸನಗೊಂಡಿದೆ—ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯ ಭಾರತೀಯರನ್ನು ಡಿಜಿಟಲ್ ಮುಖ್ಯವಾಹಿನಿಗೆ ತರುತ್ತಿದೆ.
ಭಾರತದ ಡಿಜಿಟಲ್ ಮೂಲಸೌಕರ್ಯ ನಿರ್ಮಾಣ
ಭಾರತದ ಡಿಜಿಟಲ್ ಬೆನ್ನೆಲುಬು ಜನಸಂಖ್ಯೆಯ ಪ್ರಮಾಣದಲ್ಲಿ ಡಿಜಿಟಲ್ ಕಂದಕವನ್ನು ಹೋಗಲಾಡಿಸುವ ಪ್ರಯತ್ನದ ಬುನಾದಿಯಾಗಿದೆ. ಇದು ಮೂರು ಪರಸ್ಪರ ಸಂಬಂಧ ಹೊಂದಿರುವ ಸ್ತಂಭಗಳ ಮೂಲಕ ಕಾರ್ಯನಿರ್ವಹಿಸುತ್ತದೆ: ಸಾರ್ವತ್ರಿಕ ಸಂಪರ್ಕ ಮೂಲಸೌಕರ್ಯ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಕಂಪ್ಯೂಟಿಂಗ್ ಸಾಮರ್ಥ್ಯ. ಈ ಸ್ತಂಭಗಳು ಪ್ರವೇಶ, ಸೇವೆಗಳು ಮತ್ತು ತಾಂತ್ರಿಕ ಸಾಮರ್ಥ್ಯಗಳು ಏಕಕಾಲದಲ್ಲಿ ವಿಕಸನಗೊಳ್ಳುವುದನ್ನು ಖಚಿತಪಡಿಸುತ್ತವೆ. ಈ ಸಮಗ್ರ ವಿಧಾನವು ಡಿಜಿಟಲ್ ಆರ್ಥಿಕತೆಯಲ್ಲಿ ಅರ್ಥಪೂರ್ಣ ಭಾಗವಹಿಸುವಿಕೆಗೆ ಸಹಕಾರಿಯಾಗಿದೆ.
ಸಾರ್ವತ್ರಿಕ ಡಿಜಿಟಲ್ ಸಂಪರ್ಕ ಮತ್ತು ಕೈಗೆಟುಕುವ ಲಭ್ಯತೆ
ಸಾರ್ವತ್ರಿಕ ಡಿಜಿಟಲ್ ಸಂಪರ್ಕ ಮತ್ತು ಕೈಗೆಟುಕುವ ದರವು ಭಾರತದ ಡಿಜಿಟಲ್ ಕ್ರಾಂತಿಯ ಮೂಲಾಧಾರವಾಗಿದೆ. ಇದು ಪ್ರತಿಯೊಬ್ಬ ನಾಗರಿಕನ ಅಂತರ್ಗತ ಬೆಳವಣಿಗೆ, ಉತ್ತಮ ಆಡಳಿತ, ಆರ್ಥಿಕ ಅವಕಾಶಗಳು ಮತ್ತು ಸಾಮಾಜಿಕ ಸಬಲೀಕರಣಕ್ಕೆ ಶಕ್ತಿ ನೀಡುತ್ತದೆ.
ಇದರ ಕೇಂದ್ರಭಾಗದಲ್ಲಿ ಭಾರತ್ನೆಟ್ (2011 ರಲ್ಲಿ ಪ್ರಾರಂಭಿಸಲಾಗಿದೆ) ಅಡಿಯಲ್ಲಿ ಬೃಹತ್ ಆಪ್ಟಿಕಲ್ ಫೈಬರ್ ವಿಸ್ತರಣೆಯಿದೆ, ಇದು ಗ್ರಾಮೀಣ ಭಾರತಕ್ಕೆ ಹೈ-ಸ್ಪೀಡ್ ಇಂಟರ್ನೆಟ್ ಅನ್ನು ವಿಸ್ತರಿಸುತ್ತದೆ. 2026 ರ ಆರಂಭದ ವೇಳೆಗೆ, 2.15 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತ್ಗಳು ಸಂಪರ್ಕ ಹೊಂದಿವೆ. ದೇಶಾದ್ಯಂತ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆಯು 2019 ರಲ್ಲಿ 19.35 ಲಕ್ಷ ಕಿ.ಮೀ ಇಂದ 2025 ರ ವೇಳೆಗೆ 42.36 ಲಕ್ಷ ಕಿ.ಮೀ ಗೆ ಏರಿಕೆಯಾಗಿದೆ. ಇದು ನಗರ ಮತ್ತು ಗ್ರಾಮೀಣ ನಡುವಿನ ಅಂತರವನ್ನು ಕಡಿಮೆ ಮಾಡುವ ಮತ್ತು ದೂರದ ಪ್ರದೇಶಗಳಿಗೆ ವಿಶ್ವಾಸಾರ್ಹ ಸಂಪರ್ಕವನ್ನು ತರುವ ಪ್ರಬಲ ಬೆನ್ನೆಲುಬನ್ನು ನಿರ್ಮಿಸುತ್ತಿದೆ.

ಫೈಬರ್ ಸಂಪರ್ಕಕ್ಕೆ ಪೂರಕವಾಗಿ, ಭಾರತದ ಅತ್ಯಂತ ವೇಗದ 5G ನೆಟ್ವರ್ಕ್ ವಿಸ್ತರಣೆಯು ಈಗ 99.9% ಜಿಲ್ಲೆಗಳನ್ನು ಆವರಿಸಿದೆ. ಡಿಸೆಂಬರ್ 2025 ರ ಹೊತ್ತಿಗೆ, 5.18 ಲಕ್ಷಕ್ಕೂ ಹೆಚ್ಚು ಬೇಸ್ ಟ್ರಾನ್ಸ್ಸೀವರ್ ಸ್ಟೇಷನ್ಗಳನ್ನು ಸ್ಥಾಪಿಸಲಾಗಿದ್ದು, ಎಲ್ಲೆಡೆ ಅತಿ ವೇಗದ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸಲಾಗುತ್ತಿದೆ.
ಮೂಲಸೌಕರ್ಯಗಳಿಗೆ ವೇಗವಾಗಿ ಅನುಮೋದನೆ ನೀಡುವ ದೂರಸಂಪರ್ಕ ಕಾಯ್ದೆ 2023, ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ 4G/5G ಉಪಕರಣಗಳು ಮತ್ತು ರಾಷ್ಟ್ರೀಯ ಬ್ರಾಡ್ಬ್ಯಾಂಡ್ ಮಿಷನ್ ಈ ಎಲ್ಲ ಪ್ರಯತ್ನಗಳ ಬೆಂಬಲದೊಂದಿಗೆ, ಇಂಟರ್ನೆಟ್ ಸಂಪರ್ಕವು ಕೇವಲ ಒಂದು ಐಷಾರಾಮಿ ಸೌಲಭ್ಯವಾಗಿ ಉಳಿಯದೆ ಪ್ರತಿಯೊಬ್ಬರ ಅತ್ಯಗತ್ಯ ಹಕ್ಕಾಗಿ ಬದಲಾಗುತ್ತಿದೆ.

ಕೈಗೆಟುಕುವ ದರವು ಈ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ: ಡೇಟಾ ದರಗಳು 2014 ರಲ್ಲಿ ಪ್ರತಿ ಜಿಬಿ ಗೆ ₹269 ಇದ್ದದ್ದು, 2025-2026 ರ ವೇಳೆಗೆ ಸರಿಸುಮಾರು ₹8-10 ಕ್ಕೆ (ಸುಮಾರು $0.10) ಕುಸಿದಿದೆ. ಇದು ಭಾರತವನ್ನು ವಿಶ್ವದ ಅತ್ಯಂತ ಅಗ್ಗದ ಡೇಟಾ ಮಾರುಕಟ್ಟೆಗಳಲ್ಲಿ ಒಂದನ್ನಾಗಿ ಮಾಡಿದೆ. ಈ ಭಾರಿ ಇಳಿಕೆಯು ಸ್ಫೋಟಕ ಬೆಳವಣಿಗೆಗೆ ಕಾರಣವಾಗಿದ್ದು, ಬ್ರಾಡ್‌ಬ್ಯಾಂಡ್ ಚಂದಾದಾರರ ಸಂಖ್ಯೆಯು ನವೆಂಬರ್ 2025 ರಲ್ಲಿ 100 ಕೋಟಿಯನ್ನು (1 ಬಿಲಿಯನ್) ದಾಟಿದೆ. ಇದು ಒಂದು ದಶಕದ ಹಿಂದಿನ 13.15 ಕೋಟಿಗೆ ಹೋಲಿಸಿದರೆ ಆರು ಪಟ್ಟು ಅಧಿಕವಾಗಿದೆ.
ಒಟ್ಟಾರೆಯಾಗಿ, ಇಂತಹ ಸುಧಾರಣೆಗಳು ಗ್ರಾಮೀಣ ಸಮುದಾಯಗಳು, ರೈತರು, ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಅಂಚಿನಲ್ಲಿರುವ ವರ್ಗದವರು ಭಾರತದ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವಂತೆ ಸಬಲೀಕರಿಸುತ್ತಿವೆ. ಅಲ್ಲದೆ, ಇದು ವ್ಯವಸ್ಥಿತವಾಗಿ ಲಭ್ಯತೆಯ ಅಂತರವನ್ನು ಕಡಿಮೆ ಮಾಡುತ್ತಿದೆ ಮತ್ತು ಗ್ರಾಮೀಣ ಹಾಗೂ ಹಿಂದುಳಿದ ಸಮುದಾಯಗಳನ್ನು ಭಾರತದ ಡಿಜಿಟಲ್ ಆರ್ಥಿಕತೆಯೊಂದಿಗೆ ಸಂಯೋಜಿಸುತ್ತಿದೆ.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ: ಒಳಗೊಳ್ಳುವ ಸೇವೆಗಳ ಸಬಲೀಕರಣ

ಡಿಜಿಟಲ್ ಸಂಪರ್ಕವು ಜನಸಂಖ್ಯೆಯ ಮಟ್ಟಕ್ಕೆ ತಲುಪುತ್ತಿದ್ದಂತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಇಂಟರ್ನೆಟ್ ಸೌಲಭ್ಯವು ಕೇವಲ ಸಂಪರ್ಕವಾಗಿ ಉಳಿಯದೆ, ವಿಶ್ವಾಸಾರ್ಹ ಮತ್ತು ನಾಗರಿಕ-ಕೇಂದ್ರಿತ ಸೇವೆಗಳಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸುತ್ತದೆ. ಇದು ಸಾಮಾನ್ಯ ಸಂಪರ್ಕವನ್ನು ಆಡಳಿತ, ಹಣಕಾಸು ಮತ್ತು ದೈನಂದಿನ ಜೀವನದ ನೈಜ ಸಬಲೀಕರಣವಾಗಿ ಬದಲಾಯಿಸುತ್ತದೆ. ಭಾರತದ ಮೂಲಭೂತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಯು ಸಾರ್ವತ್ರಿಕ ಡಿಜಿಟಲ್ ಗುರುತು, ಸುಗಮ ಪಾವತಿಗಳು ಮತ್ತು ಸುರಕ್ಷಿತ ದಾಖಲೆಗಳ ಲಭ್ಯತೆಯಂತಹ ಬುನಾದಿ ಹಂತಗಳನ್ನು ಒದಗಿಸುತ್ತದೆ. ಇದು ಗ್ರಾಮೀಣ, ಕಡಿಮೆ ಆದಾಯದ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಸೇವೆಗಳನ್ನು ತಲುಪಿಸುವ ಮೂಲಕ ಡಿಜಿಟಲ್ ಕಂದಕವನ್ನು ನೇರವಾಗಿ ಸರಿಪಡಿಸುತ್ತಿದೆ.
ಆಧಾರ್ 2026 ರ ಫೆಬ್ರವರಿ ವೇಳೆಗೆ 143 ಕೋಟಿಗೂ ಹೆಚ್ಚು ಅನನ್ಯ ಡಿಜಿಟಲ್ ಗುರುತಿನ ಚೀಟಿಗಳನ್ನು ವಿತರಿಸಿದೆ. ಇದು ಸೌಲಭ್ಯಗಳ ನೇರ ವಿತರಣೆ, ನೇರ ನಗದು ವರ್ಗಾವಣೆ ಮತ್ತು ಸರ್ಕಾರಿ ಹಾಗೂ ಹಣಕಾಸು ಸೇವೆಗಳ ಸುಲಭ ಲಭ್ಯತೆಯನ್ನು ಸಾಧ್ಯವಾಗಿಸಿದೆ. ಈ ಹಿಂದೆ ಅಧಿಕೃತ ಗುರುತಿನ ಚೀಟಿ ಇಲ್ಲದ ಕಾರಣ ಸೌಲಭ್ಯಗಳಿಂದ ವಂಚಿತರಾಗಿದ್ದವರಿಗೂ ಇದು ಈಗ ನೆರವಾಗುತ್ತಿದೆ.

ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ತಿಂಗಳಿಗೆ ಸುಮಾರು ₹28.33 ಲಕ್ಷ ಕೋಟಿ ಮೌಲ್ಯದ ವಹಿವಾಟುಗಳನ್ನು ನಿರ್ವಹಿಸುತ್ತಿದೆ (ಜನವರಿ 2026 ರ ಅಂಕಿಅಂಶಗಳ ಪ್ರಕಾರ, 21.7 ಬಿಲಿಯನ್ ವಹಿವಾಟುಗಳು). ಇದು ದೇಶಾದ್ಯಂತ ಕೈಗೆಟುಕುವ ದರದ, ನೈಜ-ಸಮಯದ ಡಿಜಿಟಲ್ ಪಾವತಿಗಳನ್ನು ಒದಗಿಸುತ್ತಿದೆ. ಮೊಬೈಲ್ ಫೋನ್‌ಗಳ ಮೂಲಕ ಶೂನ್ಯ-ವೆಚ್ಚದ ಹಣ ವರ್ಗಾವಣೆಯ ಸೌಲಭ್ಯ ನೀಡುವ ಮೂಲಕ, ಇದು ನಗರ-ಗ್ರಾಮೀಣ ಮತ್ತು ಆದಾಯದ ವ್ಯತ್ಯಾಸಗಳನ್ನು ಮೀರಿ ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತಿದೆ.

ಡಿಜಿಲಾಕರ್ ಫೆಬ್ರವರಿ 2026 ರ ವೇಳೆಗೆ 62 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಇದು ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಕಲ್ಯಾಣ ಕ್ಷೇತ್ರಗಳ ಅಧಿಕೃತ ದಾಖಲೆಗಳನ್ನು ಸುರಕ್ಷಿತವಾಗಿ, ಕಾಗದರಹಿತವಾಗಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಇದು ದಾಖಲೆಗಳಿಗಾಗಿ ಕಚೇರಿ ಅಲೆದಾಡುವ ಅಡೆತಡೆಗಳನ್ನು ನಿವಾರಿಸಿ, ನಾಗರಿಕರು ಎಲ್ಲಿ ಬೇಕಾದರೂ ತಕ್ಷಣವೇ ಮತ್ತು ವಿಶ್ವಾಸಾರ್ಹವಾಗಿ ತಮ್ಮ ದಾಖಲೆಗಳನ್ನು ಪಡೆಯುವಂತೆ ಸಬಲೀಕರಿಸುತ್ತಿದೆ.
ಒಟ್ಟಾರೆಯಾಗಿ, ಈ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಸ್ತಂಭಗಳು ಕೇವಲ ಇಂಟರ್ನೆಟ್ ಸೌಲಭ್ಯವನ್ನು ಸುಗಮ ಸೇವಾ ವಿತರಣೆ, ಆಳವಾದ ಆರ್ಥಿಕ ಒಳಗೊಳ್ಳುವಿಕೆ ಮತ್ತು ವಿಶ್ವಾಸಾರ್ಹ ಡಿಜಿಟಲ್ ಸಂವಹನಗಳಾಗಿ ಪರಿವರ್ತಿಸುತ್ತಿವೆ. ಇದು ವ್ಯವಸ್ಥಿತವಾಗಿ ಲಭ್ಯತೆಯ ಅಂತರವನ್ನು ಕಡಿಮೆ ಮಾಡುತ್ತಿದೆ ಮತ್ತು ಪ್ರತಿಯೊಬ್ಬ ಭಾರತೀಯನನ್ನು ಡಿಜಿಟಲ್ ಆರ್ಥಿಕತೆಯೊಂದಿಗೆ ಸಂಯೋಜಿಸುತ್ತಿದೆ.
ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಮತ್ತು ಕ್ಲೌಡ್ ಮೂಲಸೌಕರ್ಯ

ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಮತ್ತು ದತ್ತಾಂಶ ಕೇಂದ್ರಗಳು ಭಾರತದ ಡಿಜಿಟಲ್ ರೂಪಾಂತರದ ಪ್ರಮುಖ ಪ್ರೇರಕ ಶಕ್ತಿಗಳಾಗಿವೆ. ಇವು ದೇಶವನ್ನು ಕೇವಲ ಇಂಟರ್ನೆಟ್ ಸಂಪರ್ಕದ ಹಂತದಿಂದ ನಾವೀನ್ಯತೆ ಆಧಾರಿತ ಒಳಗೊಳ್ಳುವಿಕೆಯತ್ತ ಕೊಂಡೊಯ್ಯುತ್ತಿವೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಜಂಟಿ ನೇತೃತ್ವದ ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ ಅಡಿಯಲ್ಲಿ, ದೇಶಾದ್ಯಂತದ ವಿವಿಧ ಸಂಸ್ಥೆಗಳಲ್ಲಿ ಒಟ್ಟು 44 ಪೆಟಾಫ್ಲಾಪ್ಸ್ ಸಾಮರ್ಥ್ಯದ 38 ಸೂಪರ್ ಕಂಪ್ಯೂಟರ್ಗಳನ್ನು ಅಳವಡಿಸಲಾಗಿದೆ. ಇಂತಹ ಅತ್ಯಾಧುನಿಕ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಕೇವಲ ಮೆಟ್ರೋಪಾಲಿಟನ್ ನಗರಗಳಿಗೆ ಸೀಮಿತಗೊಳಿಸದೆ ಇತರ ಪ್ರದೇಶಗಳಿಗೂ ವಿಸ್ತರಿಸುವ ಮೂಲಕ, ವಿಶ್ವವಿದ್ಯಾಲಯಗಳು, ಸ್ಟಾರ್ಟ್‌ಅಪ್‌ಗಳು, ಸಂಶೋಧಕರು ಮತ್ತು ಕೈಗಾರಿಕೆಗಳಿಗೆ ವಿಶ್ವದರ್ಜೆಯ ಸಂಪನ್ಮೂಲಗಳ ಸಮಾನ ಲಭ್ಯತೆಯನ್ನು ಎಚ್‌ಪಿಸಿ ಖಚಿತಪಡಿಸುತ್ತದೆ. ಇದು ಕೃತಕ ಬುದ್ಧಿಮತ್ತೆ, ಹವಾಮಾನ ಮಾದರಿ, ಜೈವಿಕ ತಂತ್ರಜ್ಞಾನ ಮತ್ತು ಸುಧಾರಿತ ಉತ್ಪಾದನಾ ಕ್ಷೇತ್ರಗಳಿಗೆ ಹೆಚ್ಚಿನ ಬೆಂಬಲ ನೀಡುತ್ತದೆ.

ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಗೆ ಪೂರಕವಾಗಿ, ಡಿಜಿಟಲ್ ಆಡಳಿತ ಮತ್ತು ಕೃತಕ ಬುದ್ಧಿಮತ್ತೆ ಸನ್ನದ್ಧ ಮೂಲಸೌಕರ್ಯವನ್ನು ಬೆಂಬಲಿಸಲು ಭಾರತದ ಕ್ಲೌಡ್ ಮತ್ತು ದತ್ತಾಂಶ ಕೇಂದ್ರದ ಪರಿಸರ ವ್ಯವಸ್ಥೆಯು ಸಹ ವೇಗವಾಗಿ ವಿಸ್ತರಿಸುತ್ತಿದೆ. 'ಮೇಘರಾಜ್' ಮೂಲಕ, 2,170 ಕ್ಕೂ ಹೆಚ್ಚು ಸಚಿವಾಲಯಗಳು ಮತ್ತು ಇಲಾಖೆಗಳು ಸುರಕ್ಷಿತ ಹಾಗೂ ಸುಲಭವಾಗಿ ವಿಸ್ತರಿಸಬಹುದಾದ ಸರ್ಕಾರಿ ಕ್ಲೌಡ್ ವೇದಿಕೆಗಳಲ್ಲಿ ತಮ್ಮ ಅಪ್ಲಿಕೇಶನ್‌ಗಳನ್ನು ಅಳವಡಿಸಿವೆ. ಪ್ರಸ್ತುತ ಸುಮಾರು 1,280 ಮೆಗಾವ್ಯಾಟ್ ಇರುವ ಒಟ್ಟು ದತ್ತಾಂಶ ಕೇಂದ್ರದ ಸಾಮರ್ಥ್ಯವು 2030 ರ ವೇಳೆಗೆ 4 ರಿಂದ 5 ಪಟ್ಟು ಬೆಳೆಯುವ ನಿರೀಕ್ಷೆಯಿದೆ. ಭಾರತವು ತನ್ನ ಡಿಜಿಟಲ್ ಮೂಲಸೌಕರ್ಯವನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ರೂಪಿಸುತ್ತಿದ್ದು, ಉನ್ನತ ಮಟ್ಟದ ಕಂಪ್ಯೂಟಿಂಗ್ ಸಂಪನ್ಮೂಲಗಳು ನೇರವಾಗಿ ಡಿಜಿಟಲ್ ಕಂದಕವನ್ನು ಹೋಗಲಾಡಿಸಲು ಮತ್ತು ಸುಧಾರಿತ ತಂತ್ರಜ್ಞಾನಗಳ ಒಳಗೊಳ್ಳುವಿಕೆಯನ್ನು ಖಚಿತಪಡಿಸಲು ಸಹಕಾರಿಯಾಗುವಂತೆ ನೋಡಿಕೊಳ್ಳುತ್ತಿದೆ.
ಡಿಜಿಟಲ್ ಮೂಲಸೌಕರ್ಯ, ಪರಸ್ಪರ ಕಾರ್ಯನಿರ್ವಹಿಸಬಲ್ಲ ವೇದಿಕೆಗಳು ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್‌ನಲ್ಲಿ ಭಾರತವು ಮಾಡುತ್ತಿರುವ ಹೂಡಿಕೆಗಳು ಗಮನಾರ್ಹ ಬದಲಾವಣೆಯನ್ನು ತರುತ್ತಿವೆ. ಇವು ಸೇವಾ ವಿತರಣೆ, ಆರ್ಥಿಕ ಒಳಗೊಳ್ಳುವಿಕೆ, ಸಂಶೋಧನಾ ಸಾಮರ್ಥ್ಯಗಳು ಮತ್ತು ನಾವೀನ್ಯತೆಯ ಅವಕಾಶಗಳನ್ನು ಹೆಚ್ಚಿಸುತ್ತಿವೆ. ಅಳೆಯಬಹುದಾದ ಫಲಿತಾಂಶಗಳು ಮತ್ತು ಸಮಾನ ಲಭ್ಯತೆಯ ಮೇಲೆ ಗಮನ ಹರಿಸುವ ಮೂಲಕ, ದೇಶವು ಇಂಟರ್ನೆಟ್ ಸಂಪರ್ಕವನ್ನು ಸಾಮರ್ಥ್ಯವನ್ನಾಗಿ ಪರಿವರ್ತಿಸುತ್ತಿದೆ. ಇದು ಗ್ರಾಮೀಣ ಮತ್ತು ಅಂಚಿನಲ್ಲಿರುವ ಸಮುದಾಯಗಳೂ ಸೇರಿದಂತೆ ಎಲ್ಲಾ ನಾಗರಿಕರಿಗೂ ಡಿಜಿಟಲ್ ಬೆಳವಣಿಗೆಯ ಪ್ರಯೋಜನಗಳು ಸಿಗುವಂತೆ ಖಚಿತಪಡಿಸುತ್ತಿದೆ.
ಭಾರತಕ್ಕಾಗಿ ಎಲ್ಲರನ್ನೂ ಒಳಗೊಳ್ಳುವ ಡಿಜಿಟಲ್ ಪರಿಸರ ವ್ಯವಸ್ಥೆಯ ನಿರ್ಮಾಣ
ಭಾರತದ ಡಿಜಿಟಲ್ ರೂಪಾಂತರವು ಕೇವಲ ಇಂಟರ್ನೆಟ್ ಸಂಪರ್ಕವನ್ನು ವಿಸ್ತರಿಸುವುದಕ್ಕೆ ಸೀಮಿತವಾಗಿಲ್ಲ; ಬದಲಿಗೆ ಪ್ರತಿಯೊಬ್ಬ ನಾಗರಿಕನೂ ಡಿಜಿಟಲ್ ಆರ್ಥಿಕತೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಎಲ್ಲರನ್ನೂ ಒಳಗೊಳ್ಳುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಕೇವಲ ಮೂಲಸೌಕರ್ಯವಿದ್ದರೆ ಸಾಲದು. ಅದಕ್ಕೆ ಸ್ಥಳೀಯ ಸೇವಾ ಪ್ರವೇಶ ಕೇಂದ್ರಗಳು, ವ್ಯಾಪಕವಾದ ಡಿಜಿಟಲ್ ಸಾಕ್ಷರತೆ, ಕೈಗೆಟುಕುವ ದರದ ಇಂಟರ್ನೆಟ್, ಸುಧಾರಿತ ಕೌಶಲ್ಯ ತರಬೇತಿ ಹಾಗೂ ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಪೂರಕವಾದ ಅವಕಾಶಗಳ ಅಗತ್ಯವಿದೆ.
ಕೊನೆಯ ಹಂತದವರೆಗಿನ ಸೇವಾ ವಿತರಣೆಯನ್ನು ಸಾಮರ್ಥ್ಯ ವೃದ್ಧಿ ಮತ್ತು ಮಾರುಕಟ್ಟೆ ಸಂಪರ್ಕಗಳೊಂದಿಗೆ ಸಂಯೋಜಿಸುವ ಮೂಲಕ, ಈ ಉಪಕ್ರಮಗಳು ಗ್ರಾಮೀಣ ಮತ್ತು ನಗರ ಭಾರತದಾದ್ಯಂತ ಡಿಜಿಟಲ್ ಲಭ್ಯತೆಯನ್ನು ನೈಜ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣವನ್ನಾಗಿ ಪರಿವರ್ತಿಸುತ್ತಿವೆ.
ಡಿಜಿಟಲ್ ಸಾಕ್ಷರತೆ: ಕೌಶಲ್ಯ ಮತ್ತು ಅವಕಾಶಗಳ ನಿರ್ಮಾಣ

ಒಳಗೊಳ್ಳುವ ಆಡಳಿತ ಮತ್ತು ನಾಗರಿಕರ ಸಬಲೀಕರಣಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಭಾರತವು ಜಾಗತಿಕ ನಾಯಕನಾಗಿ ಗುರುತಿಸಿಕೊಂಡಿದೆ. ಸಮಾನ ಬೆಳವಣಿಗೆಗೆ ಡಿಜಿಟಲ್ ಸಾಕ್ಷರತೆಯು ಅತ್ಯಗತ್ಯ ಎಂಬುದನ್ನು ಗುರುತಿಸಿರುವ ಸರ್ಕಾರವು, ಗ್ರಾಮೀಣ ಜನಸಂಖ್ಯೆಯ ಮೇಲೆ ಹೆಚ್ಚಿನ ಗಮನ ಹರಿಸಿದೆ. ಆರಂಭಿಕ ಹಂತದಲ್ಲಿ ರಾಷ್ಟ್ರೀಯ ಡಿಜಿಟಲ್ ಸಾಕ್ಷರತಾ ಮಿಷನ್ ಅಥವಾ ಡಿಜಿಟಲ್ ಸಾಕ್ಷರತಾ ಅಭಿಯಾನ (2014-2016) ಮೂಲಕ 52.50 ಲಕ್ಷ ಗುರಿಯ ಎದುರು 53.67 ಲಕ್ಷ ಫಲಾನುಭವಿಗಳಿಗೆ ತರಬೇತಿ ನೀಡಲಾಗಿದ್ದು, ಇದರಲ್ಲಿ ಶೇ. 42 ರಷ್ಟು ಜನರು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಈ ಯಶಸ್ಸಿನ ಆಧಾರದ ಮೇಲೆ, 2017 ರಲ್ಲಿ ಅನುಮೋದಿಸಲಾದ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ 6 ಕೋಟಿ ಗ್ರಾಮೀಣ ಕುಟುಂಬಗಳನ್ನು (ಪ್ರತಿ ಕುಟುಂಬಕ್ಕೆ ಒಬ್ಬರು) ಡಿಜಿಟಲ್ ಆಗಿ ಸಬಲೀಕರಿಸುವ ಗುರಿಯನ್ನು ಹೊಂದಿತ್ತು. ಮಾರ್ಚ್ 2024 ರ ಹೊತ್ತಿಗೆ, ಇದು 6.39 ಕೋಟಿ ವ್ಯಕ್ತಿಗಳಿಗೆ ತರಬೇತಿ ನೀಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಇದು ವಿಶ್ವದ ಅತಿದೊಡ್ಡ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಆನ್‌ಲೈನ್ ಸೇವೆಗಳು ಮತ್ತು ಆರ್ಥಿಕ ಒಳಗೊಳ್ಳುವಿಕೆಯ ಲಭ್ಯತೆಯನ್ನು ವಿಸ್ತರಿಸಿದೆ.
ಸಾಂಸ್ಥಿಕ ಮಟ್ಟದಲ್ಲಿ ಈ ಬುನಾದಿಯನ್ನು ಮತ್ತಷ್ಟು ಬಲಪಡಿಸಲಾಗಿದೆ. 2009 ರಲ್ಲಿ ಪ್ರಾರಂಭಿಸಲಾದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಮೂಲಕ ರಾಷ್ಟ್ರೀಯ ಶಿಕ್ಷಣ ಮಿಷನ್, ಬ್ರಾಡ್‌ಬ್ಯಾಂಡ್ ಸಂಪರ್ಕ, ವರ್ಚುವಲ್ ಲ್ಯಾಬ್‌ಗಳು ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ವಿಸ್ತರಿಸುವ ಮೂಲಕ ಉನ್ನತ ಶಿಕ್ಷಣದ ಅಂತರವನ್ನು ಕಡಿಮೆ ಮಾಡಿದೆ. ಇದು ದೂರದ ಪ್ರದೇಶದ ಶಿಕ್ಷಣ ಸಂಸ್ಥೆಗಳೂ ಸಹ ಗುಣಮಟ್ಟ ಮತ್ತು ಲಭ್ಯತೆಯಲ್ಲಿ ಪ್ರಮುಖ ಸಂಸ್ಥೆಗಳಿಗೆ ಸರಿಸಾಟಿಯಾಗಿರುವುದನ್ನು ಖಚಿತಪಡಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (2020 ಶಾಲಾ ಮತ್ತು ಉನ್ನತ ಶಿಕ್ಷಣದಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಮುಖ್ಯವಾಹಿನಿಗೆ ತರುವ ಮೂಲಕ ಈ ಪ್ರಗತಿಯನ್ನು ಮತ್ತಷ್ಟು ವೇಗಗೊಳಿಸುತ್ತಿದೆ. ಇದು ನಿಜವಾದ ಸಮಾನ ಮತ್ತು ಭವಿಷ್ಯಕ್ಕೆ ಸನ್ನದ್ಧವಾದ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಲು ಸಂಯೋಜಿತ ಕಲಿಕೆ, ಡಿಜಿಟಲ್ ಲೈಬ್ರರಿಗಳು, AI-ಚಾಲಿತ ಸಾಧನಗಳು ಮತ್ತು ಶಿಕ್ಷಕರ ತರಬೇತಿಯನ್ನು ಒಳಗೊಂಡಿದೆ.
ಎನ್‌ಇಪಿ ಅಡಿಯಲ್ಲಿ, ದೀಕ್ಷಾ ಮತ್ತು ಸ್ವಯಂ ನಂತಹ ರಾಷ್ಟ್ರೀಯ ವೇದಿಕೆಗಳು ಬೃಹತ್ ಮಟ್ಟದ ಡಿಜಿಟಲ್ ಕೋರ್ಸ್‌ಗಳು ಮತ್ತು ಪ್ರಮಾಣಪತ್ರಗಳ ಮೂಲಕ ಶಾಲಾ ಹಾಗೂ ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ಶಿಕ್ಷಣದ ಲಭ್ಯತೆಯನ್ನು ಎಲ್ಲರಿಗೂ ತಲುಪಿಸುತ್ತಿವೆ. ಕೇವಲ ಲಭ್ಯತೆಯಿಂದ ಅವಕಾಶದವರೆಗೆ ಈ ಒಳಗೊಳ್ಳುವಿಕೆಯನ್ನು ವಿಸ್ತರಿಸುತ್ತಾ, ಇನ್ಸ್ಪೈರ್ ಅವಾರ್ಡ್ಸ್ - ಮಾನಕ್ ಕಾರ್ಯಕ್ರಮವು 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ತಳಮಟ್ಟದ ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ನಾವೀನ್ಯತೆಯನ್ನು ಪೋಷಿಸುತ್ತಿದೆ. ಇದರಲ್ಲಿ ಬಾಲಕಿಯರು ಹಾಗೂ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟಾರೆಯಾಗಿ, ಈ ಉಪಕ್ರಮಗಳು ಕೇವಲ ಸಂಪರ್ಕವನ್ನು ಮೀರಿ ಸಾಮರ್ಥ್ಯದತ್ತ ಸಾಗುತ್ತಿವೆ—ಡಿಜಿಟಲ್ ಕಲಿಕೆಯು ಸಮಾನ ಪ್ರಾತಿನಿಧ್ಯ, ನಾವೀನ್ಯತೆ ಮತ್ತು ಭವಿಷ್ಯದ ಕೌಶಲ್ಯಗಳಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸುತ್ತಿವೆ.
|
ಎಲ್ಲರನ್ನೂ ಒಳಗೊಳ್ಳುವ ಡಿಜಿಟಲ್ ಕಲಿಕೆ: ಶಾಲೆಯಿಂದ ಉನ್ನತ ಶಿಕ್ಷಣದವರೆಗೆ
- ದೀಕ್ಷಾ: ಶಾಲಾ ಶಿಕ್ಷಣ ಮತ್ತು ಶಿಕ್ಷಕರ ತರಬೇತಿಗಾಗಿ ಇರುವ ಈ ವೇದಿಕೆಯು 19,698 ಕ್ಕೂ ಹೆಚ್ಚು ಕೋರ್ಸ್ಗಳನ್ನು ಹೊಂದಿದೆ. 2025-26 ರ ವೇಳೆಗೆ, ಇದು 18.23 ಕೋಟಿ (182.3 ಮಿಲಿಯನ್) ದಾಖಲಾತಿಗಳನ್ನು ಮತ್ತು 14.57 ಕೋಟಿ (145.7 ಮಿಲಿಯನ್) ಕೋರ್ಸ್ ಪೂರ್ಣಗೊಳಿಸುವಿಕೆಗಳನ್ನು ಕಂಡಿದೆ. ಇದು ಎನ್‌ಸಿಇಆರ್‌ಟಿNCERT ಪಠ್ಯಪುಸ್ತಕಗಳು ಮತ್ತು AI-ಚಾಲಿತ ಸಂಪನ್ಮೂಲಗಳು ಸೇರಿದಂತೆ ಬಹುಭಾಷಾ ಹಾಗೂ ಸಂವಾದಾತ್ಮಕ ವಿಷಯಗಳನ್ನು ಒದಗಿಸುತ್ತದೆ.
- ಸ್ವಯಂ: ಉನ್ನತ ಶಿಕ್ಷಣವನ್ನು ಬೆಂಬಲಿಸುವ ಈ ವೇದಿಕೆಯು ಪ್ರಮುಖ ಸಂಸ್ಥೆಗಳಿಂದ 18,500 ಕ್ಕೂ ಹೆಚ್ಚು ಕೋರ್ಸ್ಗಳನ್ನು ನೀಡುತ್ತಿದೆ. ಇದು ಇದುವರೆಗೆ 6.1 ಕೋಟಿಗೂ ಹೆಚ್ಚು ದಾಖಲಾತಿಗಳನ್ನು ದಾಖಲಿಸಿದೆ ಮತ್ತು 53.7 ಲಕ್ಷ ಪ್ರಮಾಣಪತ್ರಗಳನ್ನು ವಿತರಿಸಿದೆ. ಜನವರಿ 2026 ರಲ್ಲಿಯೇ ಸುಮಾರು 50 ಲಕ್ಷ ದಾಖಲಾತಿಗಳನ್ನು ಕಾಣುವ ಮೂಲಕ ಇದು ನಿರಂತರವಾಗಿ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
- ಇನ್ಸ್ಪೈರ್-ಮಾನಕ್: 2008 ರಲ್ಲಿ ಪ್ರಾರಂಭವಾದ ಈ ಯೋಜನೆಯು ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳ ಆಲೋಚನೆಗಳನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾದರಿ ತಯಾರಿಸಲು ₹10,000 ಅನುದಾನ ನೀಡುವ ಜೊತೆಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. 2025-26 ರಲ್ಲಿ, ಇದು 11.47 ಲಕ್ಷ ಆಲೋಚನೆಗಳನ್ನು ಕ್ರೋಢೀಕರಿಸಿದೆ, ಇದರಲ್ಲಿ ಶೇ. 52 ರಷ್ಟು ಬಾಲಕಿಯರು ಮತ್ತು ಶೇ. 84 ರಷ್ಟು ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆಯಾಗಿ, ಇದು ಇದುವರೆಗೆ 1,40,316 ವಿದ್ಯಾರ್ಥಿಗಳನ್ನು ಬೆಂಬಲಿಸಿದೆ, ಅದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಸಮುದಾಯಗಳ ಬಲವಾದ ಪ್ರಾತಿನಿಧ್ಯವಿದೆ.
|
ಹೆಚ್ಚುವರಿಯಾಗಿ, ಭಾರತದ ಡಿಜಿಟಲ್ ರೂಪಾಂತರವು ಹಕ್ಕು ಆಧಾರಿತವಾಗಿದೆ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತಹುದಾಗಿದೆ. ವಿಕಲಚೇತನರ ಹಕ್ಕುಗಳ ಕಾಯ್ದೆ, 2016 ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಲಭ್ಯತೆಯನ್ನು ಕಡ್ಡಾಯಗೊಳಿಸಿದೆ. ಇದರೊಂದಿಗೆ, ವಿಶಿಷ್ಟ ವಿಕಲಚೇತನ ಗುರುತಿನ ಚೀಟಿ ಯೋಜನೆಯಡಿ ದೇಶಾದ್ಯಂತ 1,34,73,833 ಡಿಜಿಟಲ್ ಕಾರ್ಡ್‌ಗಳನ್ನು (89,06,328 ಪುರುಷರು; 45,65,166 ಮಹಿಳೆಯರು; 2,338 ಇತರರು) ಸೃಜಿಸಲಾಗಿದ್ದು, ಇದು ಕಲ್ಯಾಣ ಸೌಲಭ್ಯಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಇದಕ್ಕೆ ಪೂರಕವಾಗಿ, ಭಾರತೀಯ ಸೈನ್ ಲ್ಯಾಂಗ್ವೇಜ್ ರಿಸರ್ಚ್ ಅಂಡ್ ಟ್ರೈನಿಂಗ್ ಸೆಂಟರ್ ವಿಶ್ವದ ಅತಿದೊಡ್ಡ ಭಾರತೀಯ ಸಂಕೇತ ಭಾಷೆಯ ಡಿಜಿಟಲ್ ಸಂಗ್ರಹವನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ 3,189 ಇ-ಕಂಟೆಂಟ್ ವಿಡಿಯೋಗಳಿದ್ದು, 100 ಸ್ಟೆಮ್ ಪದಗಳು ಮತ್ತು ನ್ಯಾಷನಲ್ ಬುಕ್ ಟ್ರಸ್ಟ್‌ನ 18 ಪುಸ್ತಕಗಳನ್ನು ಸಂಕೇತ ಭಾಷೆಯ ರೂಪದಲ್ಲಿ ಅಳವಡಿಸಲಾಗಿದೆ. ಇದು ಒಳಗೊಳ್ಳುವ ಶಿಕ್ಷಣವನ್ನು ವಿಸ್ತರಿಸುವುದಲ್ಲದೆ, ಡಿಜಿಟಲ್ ಸಾಕ್ಷರತೆಯು ಹಕ್ಕು ಆಧಾರಿತ ಮತ್ತು ದತ್ತಾಂಶ ಚಾಲಿತವಾಗಿರುವುದನ್ನು ಖಚಿತಪಡಿಸುತ್ತದೆ.
PMGDISHA, ದೀಕ್ಷಾ ಮತ್ತು ಸ್ವಯಂ ನಿಂದ ಹಿಡಿದು ಇನ್ಸ್ಪೈರ್-ಮಾನಕ್‌ನ ತಳಮಟ್ಟದ ಸ್ಟೆಮ್ ಸಬಲೀಕರಣ ಮತ್ತು ವಿಕಲಚೇತನರಿಗಾಗಿ ಹಕ್ಕು ಆಧಾರಿತ ಸೌಲಭ್ಯಗಳವರೆಗೆ ಹರಡಿರುವ ಭಾರತದ ಸಮಗ್ರ ಡಿಜಿಟಲ್ ಸಾಕ್ಷರತಾ ಪರಿಸರ ವ್ಯವಸ್ಥೆಯು, ಕೇವಲ ಇಂಟರ್ನೆಟ್ ಸಂಪರ್ಕವನ್ನು ನೈಜ ಸಾಮರ್ಥ್ಯ, ಅವಕಾಶ ಮತ್ತು ಒಳಗೊಳ್ಳುವಿಕೆಯನ್ನಾಗಿ ಪರಿವರ್ತಿಸಿದೆ. ಗ್ರಾಮೀಣ ಪ್ರದೇಶಗಳು, ಬಾಲಕಿಯರು, ಅಂಚಿನಲ್ಲಿರುವ ಸಮುದಾಯಗಳು ಮತ್ತು ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡುವ ಮೂಲಕ, ಈ ಉಪಕ್ರಮಗಳು ಡಿಜಿಟಲ್ ಕಂದಕವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತಿವೆ. ಇದು ಪ್ರತಿಯೊಬ್ಬ ಭಾರತೀಯನಿಗೆ ಡಿಜಿಟಲ್-ಆದ್ಯತೆಯ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಕೌಶಲ್ಯ, ಲಭ್ಯತೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತಿದೆ. ಈ ಜನಕೇಂದ್ರಿತ ವಿಧಾನವು ಭಾರತವನ್ನು ಜಾಗತಿಕ ಮಟ್ಟದಲ್ಲಿ ಸಮಾನ ಮತ್ತು ಒಳಗೊಳ್ಳುವ ಡಿಜಿಟಲ್ ರೂಪಾಂತರದ ಮಾದರಿಯನ್ನಾಗಿ ರೂಪಿಸಿದೆ, ಇಲ್ಲಿ ಯಾರೂ ಹಿಂದುಳಿಯದಂತೆ ನೋಡಿಕೊಳ್ಳಲಾಗುತ್ತಿದೆ.
ಸಾಮಾನ್ಯ ಸೇವಾ ಕೇಂದ್ರಗಳು: ಕೊನೆಯ ಹಂತದ ಡಿಜಿಟಲ್ ಲಭ್ಯತೆ

ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ, ಸಾಮಾನ್ಯ ಸೇವಾ ಕೇಂದ್ರಗಳು ನೆರವಿನ ಡಿಜಿಟಲ್ ಪ್ರವೇಶ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇವು ಕೊನೆಯ ಹಂತದವರೆಗೆ ಸಾರ್ವಜನಿಕ ಸೇವೆಗಳನ್ನು ತಲುಪಿಸುವ ಮೂಲಕ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ಡಿಜಿಟಲ್ ಕಂದಕವನ್ನು ಹೋಗಲಾಡಿಸುತ್ತಿವೆ. 6.5 ಲಕ್ಷಕ್ಕೂ ಹೆಚ್ಚು ಗ್ರಾಮ ಮಟ್ಟದ ಉದ್ಯಮಿಗಳ ಮೂಲಕ ಕಾರ್ಯನಿರ್ವಹಿಸುವ ಈ ಕೇಂದ್ರಗಳು, ಸ್ವಂತ ಡಿಜಿಟಲ್ ಸಾಧನಗಳು, ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕ ಅಥವಾ ಸಾಕಷ್ಟು ಡಿಜಿಟಲ್ ಸಾಕ್ಷರತೆ ಇಲ್ಲದ ನಾಗರಿಕರಿಗೆ ಒಂದು ಪ್ರಮುಖವಾದ ಭೌತಿಕ-ಡಿಜಿಟಲ್ ಸಂಪರ್ಕ ಸೇತುವೆಯಾಗಿ ಸೇವೆ ಸಲ್ಲಿಸುತ್ತಿವೆ.
ಸಹಕಾರಿ ಸಂಘಗಳು ಸೇರಿದಂತೆ ಗ್ರಾಮ ಮಟ್ಟದ ಸಂಸ್ಥೆಗಳೊಳಗೆ ಡಿಜಿಟಲ್ ವೇದಿಕೆಗಳನ್ನು ಅಳವಡಿಸುವ ಮೂಲಕ, ಈ ಕೇಂದ್ರಗಳು ಸೇವೆಗಳನ್ನು ಪಡೆಯುವಲ್ಲಿನ ಅಡೆತಡೆಗಳನ್ನು ವ್ಯವಸ್ಥಿತವಾಗಿ ಕಡಿಮೆ ಮಾಡುತ್ತಿವೆ. ಇದು ಆರ್ಥಿಕ ಒಳಗೊಳ್ಳುವಿಕೆಯನ್ನು ಬಲಪಡಿಸುವುದಲ್ಲದೆ, ಡಿಜಿಟಲ್ ಆಧಾರಿತ ಜೀವನೋಪಾಯಗಳನ್ನು ಸೃಷ್ಟಿಸುತ್ತಿದೆ. ಈ ಮೂಲಕ ಇಂಟರ್ನೆಟ್ ಸಂಪರ್ಕವನ್ನು ತಳಮಟ್ಟದಲ್ಲಿ ನೈಜ ಸಾಮಾಜಿಕ-ಆರ್ಥಿಕ ಸಬಲೀಕರಣವನ್ನಾಗಿ ಪರಿವರ್ತಿಸುತ್ತಿದೆ.
|
ಡಿಜಿಟಲ್ ಒಳಗೊಳ್ಳುವಿಕೆಯ ಮೂಲಕ ಗ್ರಾಮೀಣ ಆರ್ಥಿಕ ಸಂಯೋಜನೆ
- ಜನವರಿ 2026 ರ ಹೊತ್ತಿಗೆ, ರಾಷ್ಟ್ರೀಯ ಕೃಷಿ ಮಾರುಕಟ್ಟೆ ಅಡಿಯಲ್ಲಿ 23 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 1.79 ಕೋಟಿ ರೈತರು ಮತ್ತು 1,522 ಮಂಡಿಗಳನ್ನು ಡಿಜಿಟಲ್ ರೂಪದಲ್ಲಿ ಸಂಪರ್ಕಿಸಲಾಗಿದೆ. ಇದು 2024-25ರಲ್ಲಿ 2.04 ಕೋಟಿ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚಿನ ವ್ಯಾಪಾರ ವಹಿವಾಟನ್ನು ದಾಖಲಿಸಿದ್ದು, ರೈತರಿಗೆ ಪಾರದರ್ಶಕ ಬೆಲೆ ನಿರ್ಧಾರ ಮತ್ತು ಮಾರುಕಟ್ಟೆ ಲಭ್ಯತೆಯನ್ನು ಹೆಚ್ಚಿಸಿದೆ.
- ದೀನ್ ದಯಾಳ್ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿಯಲ್ಲಿ 1.49 ಲಕ್ಷ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ಗಳು (ಬಿಸಿ ಸಖಿಯರು) ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಅಡಿಯಲ್ಲಿ ಶೇ. 99 ರಷ್ಟು ಎಲೆಕ್ಟ್ರಾನಿಕ್ ಕೂಲಿ ಪಾವತಿಗಳನ್ನು ಮಾಡಲಾಗುತ್ತಿದ್ದು, ಇದು ನೇರ ಆದಾಯ ಹರಿವನ್ನು ಖಚಿತಪಡಿಸಿದೆ.
- ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣ ಮತ್ತು ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NSAP) ದಂತಹ ಯೋಜನೆಗಳು ಪಾರದರ್ಶಕ ಮತ್ತು ಸಕಾಲಿಕ ಸೌಲಭ್ಯ ವಿತರಣೆಗಾಗಿ ಡಿಜಿಟಲ್ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ.
|
ಪಿಎಂ-ವಾಣಿ: ಭಾರತಕ್ಕಾಗಿ ಅಗ್ಗದ ದರದ ವೈ-ಫೈ

ಪಿಎಂ-ವಾಣಿ: ಭಾರತಕ್ಕಾಗಿ ಕೈಗೆಟುಕುವ ದರದ ವೈ-ಫೈ
ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಅಗ್ಗದ ದರದ, ಹೆಚ್ಚಿನ ವೇಗದ ಸಾರ್ವಜನಿಕ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಡಿಸೆಂಬರ್ 2020 ರಲ್ಲಿ ಪಿಎಂ-ವಾಣಿ (ಪ್ರಧಾನ ಮಂತ್ರಿ ವೈ-ಫೈ ಆಕ್ಸೆಸ್ ನೆಟ್ವರ್ಕ್ ಇಂಟರ್ಫೇಸ್) ಅನ್ನು ಪ್ರಾರಂಭಿಸಲಾಯಿತು. ಈ ಯೋಜನೆಯು ಸಾರ್ವಜನಿಕ ದತ್ತಾಂಶ ಕಚೇರಿಗಳ ಮೂಲಕ ವಿಕೇಂದ್ರೀಕೃತ ಮತ್ತು ಪರವಾನಗಿ ಮುಕ್ತ ಸಾರ್ವಜನಿಕ ವೈ-ಫೈ ಮಾದರಿಯನ್ನು ಉತ್ತೇಜಿಸುತ್ತದೆ. ಇದು ಬ್ರಾಡ್‌ಬ್ಯಾಂಡ್ ವ್ಯಾಪ್ತಿಯನ್ನು ವಿಸ್ತರಿಸುವ ಜೊತೆಗೆ ಸ್ಥಳೀಯ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುತ್ತದೆ. ಫೆಬ್ರವರಿ 2026 ರ ಹೊತ್ತಿಗೆ, ದೇಶಾದ್ಯಂತ 4,09,111 ವೈ-ಫೈ ಹಾಟ್ಸ್ಪಾಟ್ಗಳನ್ನು ಅಳವಡಿಸಲಾಗಿದ್ದು, ಇವುಗಳಿಗೆ 207 ಪಿಡಿಒ ಅಗ್ರಿಗೇಟರ್ಗಳು ಮತ್ತು 113 ಆ್ಯಪ್ ಪೂರೈಕೆದಾರರು ಬೆಂಬಲ ನೀಡುತ್ತಿದ್ದಾರೆ. ಸ್ಥಳೀಯವಾಗಿ ನಿರ್ವಹಿಸಲ್ಪಡುವ ವೈ-ಫೈ ಆಕ್ಸೆಸ್ ಪಾಯಿಂಟ್‌ಗಳ ಮೂಲಕ ಕಡಿಮೆ ವೆಚ್ಚದ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಮೂಲಕ, ಪಿಎಂ-ವಾಣಿಯು ಡಿಜಿಟಲ್ ಕಂದಕವನ್ನು ಹೋಗಲಾಡಿಸುವಲ್ಲಿ ಮತ್ತು ಭಾರತದ ಡಿಜಿಟಲ್ ಆರ್ಥಿಕತೆಯಲ್ಲಿ ಎಲ್ಲರ ಒಳಗೊಳ್ಳುವಿಕೆಯನ್ನು ಖಚಿತಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕೊನೆಯ ಹಂತದ ಪ್ರವೇಶ, ಸಾಕ್ಷರತಾ ಕಾರ್ಯಕ್ರಮಗಳು ಮತ್ತು ಮಾರುಕಟ್ಟೆ ಹಾಗೂ ಸಾಮಾಜಿಕ ಯೋಜನೆಗಳನ್ನು ಸಂಪರ್ಕಿಸುವ ವೇದಿಕೆಗಳೊಂದಿಗೆ ಕೈಗೆಟುಕುವ ಇಂಟರ್ನೆಟ್ ಅನ್ನು ಸಂಯೋಜಿಸುವುದು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುತ್ತದೆ, ಸಕಾಲಿಕ ಸೌಲಭ್ಯಗಳ ವಿತರಣೆಯನ್ನು ಖಚಿತಪಡಿಸುತ್ತದೆ ಮತ್ತು ಭಾರತದ ಡಿಜಿಟಲ್ ಆರ್ಥಿಕತೆಯಲ್ಲಿ ಎಲ್ಲರ ಸಮಾನ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.
ಭವಿಷ್ಯಕ್ಕೆ ಸನ್ನದ್ಧವಾದ ಭಾರತಕ್ಕಾಗಿ ಡಿಜಿಟಲ್ ಕೌಶಲ್ಯ

ಭಾರತ ಸರ್ಕಾರವು ಡಿಜಿಟಲ್ ಒಳಗೊಳ್ಳುವಿಕೆಯನ್ನು ಕೇವಲ ಇಂಟರ್ನೆಟ್ ಲಭ್ಯತೆಯಿಂದ ಸುಧಾರಿತ ಸಾಮರ್ಥ್ಯ ವೃದ್ಧಿಯ ಹಂತಕ್ಕೆ ಕೊಂಡೊಯ್ಯುತ್ತಿದೆ, ಇದರಿಂದ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳು ದೊರೆಯುವುದನ್ನು ಖಚಿತಪಡಿಸುತ್ತಿದೆ. ಸಮಗ್ರ ಕೌಶಲ್ಯ ತರಬೇತಿ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಉಪಕ್ರಮಗಳ ಮೂಲಕ, ಭಾರತವು ತನ್ನ ಯುವಜನತೆಯನ್ನು ನಾವೀನ್ಯತೆಗಾಗಿ, ಉದ್ಯೋಗ ಸೃಷ್ಟಿಗಾಗಿ ಮತ್ತು ನಗರ ಹಾಗೂ ಗ್ರಾಮೀಣ ಭಾರತದಾದ್ಯಂತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಬಲೀಕರಿಸುತ್ತಿದೆ.
ಅಟಲ್ ಇನ್ನೋವೇಶನ್ ಮಿಷನ್ (AIM) ಅಡಿಯಲ್ಲಿ 722 ಜಿಲ್ಲೆಗಳಲ್ಲಿ 10,000 ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 1.1 ಕೋಟಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದು, ಡಿಸೆಂಬರ್ 2025 ರ ವೇಳೆಗೆ ಇನ್ನೂ 50,000 ಎಟಿಎಲ್‌ಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ವಿದ್ಯಾರ್ಥಿಗಳು ರೋಬೋಟಿಕ್ಸ್, AI (ಕೃತಕ ಬುದ್ಧಿಮತ್ತೆ) ಮತ್ತು IoT (ಇಂಟರ್ನೆಟ್ ಆಫ್ ಥಿಂಗ್ಸ್) ಕ್ಷೇತ್ರಗಳಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯುತ್ತಾ, 16 ಲಕ್ಷಕ್ಕೂ ಹೆಚ್ಚು ನಾವೀನ್ಯತೆಯ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ತಂತ್ರಜ್ಞಾನದ ಜ್ಞಾನ ಹೊಂದಿರುವ ಭವಿಷ್ಯದ ಪೀಳಿಗೆಗೆ ಬುನಾದಿ ಹಾಕಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ನ್ಯಾಸ್ಕಾಮ್ ನೇತೃತ್ವದ ಫ್ಯೂಚರ್ಸ್ಕಿಲ್ಸ್ ಪ್ರೈಮ್ ಯೋಜನೆಯಲ್ಲಿ 29 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 17.9 ಲಕ್ಷ ದಾಖಲಾತಿಗಳಾಗಿದ್ದು, ಶೇ. 41 ರಷ್ಟು ಮಹಿಳೆಯರು ಸೇರಿದಂತೆ 7 ಲಕ್ಷಕ್ಕೂ ಹೆಚ್ಚು ಮಂದಿ ವಿಶಿಷ್ಟ ಬ್ಯಾಡ್ಜ್ ಹೊಂದಿದ್ದಾರೆ. ಯುರೋಪಿಯನ್ ಕಮಿಷನ್‌ನ 'ಪ್ಯಾಕ್ಟ್ ಫಾರ್ ಸ್ಕಿಲ್ಸ್ ರಿಪೋರ್ಟ್ 2024' ರಲ್ಲಿ ಜಾಗತಿಕವಾಗಿ 3 ನೇ ಸ್ಥಾನ ಪಡೆದಿರುವ ಈ ಕಾರ್ಯಕ್ರಮವು, ಕಲಿಯುವವರಿಗೆ AI, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿ ಮತ್ತು ಡೇಟಾ ಅನಾಲಿಟಿಕ್ಸ್‌ನಲ್ಲಿ ಉದ್ಯಮಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುತ್ತದೆ.

ಇಂಡಿಯಾ-ಎಐ ಮಿಷನ್, ₹10,300 ಕೋಟಿಗಳ ಹೂಡಿಕೆಯೊಂದಿಗೆ 38,000 ಜಿಪಿಯು ಗಳನ್ನು ಕಾರ್ಯಗತಗೊಳಿಸಿದೆ (ಇನ್ನೂ 20,000 ಜಿಪಿಯುಗಳನ್ನು ಯೋಜಿಸಲಾಗಿದೆ). ಇದು ಸಂಶೋಧಕರಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಅಂದರೆ ಗಂಟೆಗೆ ₹65 ರಂತೆ ಕಂಪ್ಯೂಟಿಂಗ್ ಸೌಲಭ್ಯವನ್ನು ಒದಗಿಸುತ್ತದೆ. 'ಇಂಡಿಯಾ-ಎಐ ಕೋಶ' 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ 9,500 ಕ್ಕೂ ಹೆಚ್ಚು ದತ್ತಾಂಶ ಸಂಗ್ರಹಗಳನ್ನು ಮತ್ತು 273 ಎಐ ಮಾದರಿಗಳನ್ನು ಒಳಗೊಂಡಿದ್ದು, ದೇಶಾದ್ಯಂತದ ಸ್ಟಾರ್ಟ್‌ಅಪ್‌ಗಳು, ಸಂಶೋಧಕರು ಮತ್ತು ನಾವೀನ್ಯಕಾರರಿಗೆ ಬೆಂಬಲ ನೀಡುತ್ತಿದೆ.

ಸ್ಟಾರ್ಟ್ಅಪ್ ಇಂಡಿಯಾ ಅಡಿಯಲ್ಲಿ, ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯು 2016 ರಲ್ಲಿ ಕೇವಲ 400 ಇದ್ದದ್ದು 2025 ರ ವೇಳೆಗೆ 2 ಲಕ್ಷಕ್ಕೂ ಅಧಿಕಕ್ಕೆ ಏರಿಕೆಯಾಗಿದೆ ಮತ್ತು ಇವು 21 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ವಿಶೇಷವೆಂದರೆ, ಇಂದು ಶೇ. 50 ರಷ್ಟು ಸ್ಟಾರ್ಟ್‌ಅಪ್‌ಗಳು ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದು ನಾವೀನ್ಯತೆಯನ್ನು ವಿಕೇಂದ್ರೀಕರಿಸುವುದಲ್ಲದೆ ಸ್ಥಳೀಯ ಆರ್ಥಿಕ ಬೆಳವಣಿಗೆಗೆ ಶಕ್ತಿ ನೀಡುತ್ತಿದೆ. ನಿಧಿ ಕಾರ್ಯಕ್ರಮ ಮತ್ತು ಅಟಲ್ ಇನ್ಕ್ಯುಬೇಷನ್ ಸೆಂಟರ್ಗಳು ಆರಂಭಿಕ ಹಂತದ ಉದ್ಯಮಗಳಿಗೆ ಮತ್ತು ಒಳಗೊಳ್ಳುವ ಉದ್ಯಮಶೀಲತೆಗೆ ಹೆಚ್ಚಿನ ಬೆಂಬಲ ನೀಡುತ್ತಿವೆ. ಇತ್ತೀಚಿನ ವಿಸ್ತರಣೆಗಳಲ್ಲಿ 8 ಹೊಸ ಒಳಗೊಳ್ಳುವ ಟಿಬಿಐಗಳು ಮತ್ತು 10 ಎಂಟರ್ಪ್ರೆನರ್-ಇನ್-ರೆಸಿಡೆನ್ಸ್ ಕೇಂದ್ರಗಳು ಸೇರಿವೆ. ಹಾಗೆಯೇ, 72 ಅಟಲ್ ಇನ್ಕ್ಯುಬೇಷನ್ ಸೆಂಟರ್ಗಳು ಇದುವರೆಗೆ 3,500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಪೋಷಿಸಿವೆ, 32,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿವೆ ಮತ್ತು 6,200ಕ್ಕೂ ಹೆಚ್ಚು ಮಾರ್ಗದರ್ಶಕರ ಬೆಂಬಲದೊಂದಿಗೆ 1,000ಕ್ಕೂ ಹೆಚ್ಚು ಮಹಿಳಾ ನೇತೃತ್ವದ ಉದ್ಯಮಗಳಿಗೆ ಸಹಾಯ ಮಾಡಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಎಲ್ಲಾ ಬಲಿಷ್ಠ ಉಪಕ್ರಮಗಳು ಭಾರತದ ಡಿಜಿಟಲ್ ಒಳಗೊಳ್ಳುವಿಕೆಯು ಕೇವಲ ಡಿಜಿಟಲ್ ಸಾಧನಗಳು ಮತ್ತು ಡೇಟಾಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿವೆ—ಇದು ಸಾಮರ್ಥ್ಯಗಳನ್ನು ರೂಪಿಸುವುದು, ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಪ್ರತಿಯೊಂದು ಹಳ್ಳಿ ಹಾಗೂ ಪಟ್ಟಣಕ್ಕೂ ಪ್ರಗತಿಯನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಇಂಟರ್ನೆಟ್ ಸಂಪರ್ಕವನ್ನು ಕೌಶಲ್ಯ ತರಬೇತಿ, ಡಿಜಿಟಲ್ ವೇದಿಕೆಗಳು ಮತ್ತು ಸ್ಟಾರ್ಟ್‌ಅಪ್ ಬೆಂಬಲದೊಂದಿಗೆ ಸಂಯೋಜಿಸುವ ಮೂಲಕ, ಭಾರತವು ಒಂದು ಅಚಲವಾದ ಹಾಗೂ ಒಳಗೊಳ್ಳುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಇದು ವ್ಯಾಪಕ ಪ್ರಗತಿಯನ್ನು ಉತ್ತೇಜಿಸುವುದಲ್ಲದೆ, ಸಮಾನ ನಾವೀನ್ಯತೆಯಲ್ಲಿ ದೇಶವನ್ನು ಜಾಗತಿಕ ಮಾದರಿಯನ್ನಾಗಿ ರೂಪಿಸುತ್ತಿದೆ.
ಉಪಸಂಹಾರ
ಭಾರತದ ದಶಕದ ಸುದೀರ್ಘ ಡಿಜಿಟಲ್ ರೂಪಾಂತರವು ತಂತ್ರಜ್ಞಾನ, ಆಡಳಿತ, ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳ ಲಭ್ಯತೆಯನ್ನು ಮೂಲಭೂತವಾಗಿ ಮರುರೂಪಿಸಿದೆ. ಸಾರ್ವತ್ರಿಕ ಸಂಪರ್ಕ, ಬಲಿಷ್ಠ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಸುಧಾರಿತ ಕಂಪ್ಯೂಟಿಂಗ್ ಸಾಮರ್ಥ್ಯದ ಸಂಯೋಜನೆಯ ಮೂಲಕ, ನಗರ, ಗ್ರಾಮೀಣ ಮತ್ತು ದೂರದ ಪ್ರದೇಶಗಳ ನಾಗರಿಕರು ಈಗ ದೇಶದ ಡಿಜಿಟಲ್ ಆರ್ಥಿಕತೆಯಲ್ಲಿ ಭಾಗವಹಿಸಲು ಉತ್ತಮ ಸ್ಥಾನದಲ್ಲಿದ್ದಾರೆ. ಸಾಮಾನ್ಯ ಸೇವಾ ಕೇಂದ್ರಗಳು, PMGDISHA, PM-WANI ನಂತಹ ಕಾರ್ಯಕ್ರಮಗಳು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳು ಹಾಗೂ STEM ಕ್ಷೇತ್ರದಲ್ಲಿನ ಮಹಿಳೆಯರಿಗಾಗಿ ಕೈಗೊಂಡ ವಿಶೇಷ ಕ್ರಮಗಳು ಇಂಟರ್ನೆಟ್ ಸಂಪರ್ಕವನ್ನು ನೈಜ ಸಾಮಾಜಿಕ-ಆರ್ಥಿಕ ಫಲಿತಾಂಶಗಳಾಗಿ ಪರಿವರ್ತಿಸಿವೆ. ಇದು ವ್ಯಕ್ತಿಗಳನ್ನು ಸಬಲೀಕರಿಸುವುದಲ್ಲದೆ ಸ್ಥಳೀಯ ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಬಲಪಡಿಸಿದೆ.
ಅಷ್ಟೇ ಪ್ರಾಮುಖ್ಯವಾದುದೆಂದರೆ, ಯುವಜನತೆ, ಸ್ಟಾರ್ಟ್‌ಅಪ್‌ಗಳು ಮತ್ತು ಡೀಪ್-ಟೆಕ್ ವಲಯಗಳ ಮೇಲೆ ಹರಿಸಿರುವ ಗಮನವು, ಡಿಜಿಟಲ್ ಒಳಗೊಳ್ಳುವಿಕೆಯು ಕೇವಲ ಲಭ್ಯತೆಗೆ ಸೀಮಿತವಾಗದೆ ಕೌಶಲ್ಯ, ಉದ್ಯಮಶೀಲತೆ ಮತ್ತು ಉನ್ನತ ಮೌಲ್ಯದ ಉದ್ಯೋಗಕ್ಕಾಗಿ ದಾರಿಗಳನ್ನು ಸೃಷ್ಟಿಸುವುದನ್ನು ಖಚಿತಪಡಿಸಿದೆ. ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಶಿಕ್ಷಣ, ಕೌಶಲ್ಯ, ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಸಂಯೋಜಿಸುವ ಮೂಲಕ, ಭಾರತವು ಕೇವಲ ಡಿಜಿಟಲ್ ಕಂದಕವನ್ನು ಹೋಗಲಾಡಿಸುತ್ತಿಲ್ಲ, ಬದಲಿಗೆ ಒಳಗೊಳ್ಳುವ ಬೆಳವಣಿಗೆ, ಸಮಾನ ಅವಕಾಶಗಳು ಮತ್ತು ಸ್ಥಿತಿಸ್ಥಾಪಕ ಜ್ಞಾನ ಆರ್ಥಿಕತೆಯನ್ನು ಪೋಷಿಸುತ್ತಿದೆ. ಈ ಬಹುಸ್ತರದ ವಿಧಾನವು ಡಿಜಿಟಲ್ ಯುಗದಲ್ಲಿ ಸುಸ್ಥಿರ ಸಬಲೀಕರಣಕ್ಕೆ ಬುನಾದಿ ಹಾಕಿದ್ದು, ಯಾವುದೇ ನಾಗರಿಕನು ಹಿಂದೆ ಉಳಿಯದಂತೆ ನೋಡಿಕೊಳ್ಳುತ್ತಿದೆ.
References
Press Information Bureau
Others
Bridging Digital Divide
*****
(Explainer ID: 157764)
आगंतुक पटल : 56
Provide suggestions / comments