Social Welfare
ಗರ್ಭಕಂಠದ ಕ್ಯಾನ್ಸರ್ ಲಸಿಕಾ ಅಭಿಯಾನಕ್ಕೆ ಚಾಲನೆ
Posted On:
28 FEB 2026 7:26PM
ಪ್ರಮುಖ ಅಂಶಗಳು
- ಭಾರತವು 14 ವರ್ಷ ವಯಸ್ಸಿನ 1.15 ಕೋಟಿ ಹೆಣ್ಣುಮಕ್ಕಳಿಗೆ ರಾಷ್ಟ್ರವ್ಯಾಪಿ ಉಚಿತ ಎಚ್‌ಪಿವಿ ಲಸಿಕಾ ಅಭಿಯಾನವನ್ನು ಪ್ರಾರಂಭಿಸಿದೆ. ದೇಶದ ಮಹಿಳೆಯರಲ್ಲಿ ಕಂಡುಬರುವ ಎರಡನೇ ಅತಿ ಸಾಮಾನ್ಯ ಕ್ಯಾನ್ಸರ್ ಆದ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ.
- ಗಾರ್ಡಾಸಿಲ್-4 ಲಸಿಕೆಯ ಒಂದು ಡೋಸ್, ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಎಚ್‌ಪಿವಿ ವೈರಸ್‌ಗಳ ವಿರುದ್ಧ 93% ರಿಂದ 100% ರಷ್ಟು ಪರಿಣಾಮಕಾರಿಯಾಗಿದೆ.
- ಈ ಅಭಿಯಾನದ ಮೂಲಕ ಭಾರತವು ತನ್ನ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ಎಚ್‌ಪಿವಿ ಲಸಿಕೆಯನ್ನು ಸೇರಿಸಿದ ವಿಶ್ವದ 160ಕ್ಕೂ ಹೆಚ್ಚು ದೇಶಗಳ ಸಾಲಿಗೆ ಸೇರಿದೆ. ಇದು ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನೆಯ ಜಾಗತಿಕ ಗುರಿಯತ್ತ ಮಹತ್ವದ ಹೆಜ್ಜೆಯಾಗಿದೆ.
ಪೀಠಿಕೆ
ಮಹಿಳೆಯರಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2026ರ ಫೆಬ್ರವರಿ 28ರಂದು ರಾಜಸ್ಥಾನದ ಅಜ್ಮೀರ್‌ನಲ್ಲಿ ರಾಷ್ಟ್ರವ್ಯಾಪಿ ಎಚ್‌ಪಿವಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಮಟ್ಟದ ಈ ಚಾಲನೆಯ ಬೆನ್ನಲ್ಲೇ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಂದೇ ಏಕಕಾಲದಲ್ಲಿ ತಮ್ಮದೇ ಆದ ಎಚ್‌ಪಿವಿ ಲಸಿಕಾ ಅಭಿಯಾನದ ಕಾರ್ಯಕ್ರಮಗಳನ್ನು ಆಯೋಜಿಸಿದವು.
ದೇಶಾದ್ಯಂತ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 14 ವರ್ಷ ವಯಸ್ಸಿನ ಸುಮಾರು 1.15 ಕೋಟಿ ಹೆಣ್ಣುಮಕ್ಕಳಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆಯು ಉಚಿತವಾಗಿ ಲಭ್ಯವಿರುತ್ತದೆ.
ಅಭಿಯಾನದ ಆರಂಭದಿಂದ 90 ದಿನಗಳ ಒಳಗಾಗಿ 15 ವರ್ಷ ತುಂಬುವ ಹೆಣ್ಣುಮಕ್ಕಳು ಕೂಡ ಈ ಮೂರು ತಿಂಗಳ ತೀವ್ರಗತಿಯ ಅಭಿಯಾನದ ಅಡಿಯಲ್ಲಿ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಗರಿಷ್ಠ ಪ್ರಮಾಣದಲ್ಲಿ ಲಸಿಕೆ ತಲುಪುವಂತೆ ನೋಡಿಕೊಳ್ಳಲು ಈ 90 ದಿನಗಳ ಅಭಿಯಾನವು ಪ್ರತಿದಿನ ನಡೆಯಲಿದೆ. ತದನಂತರ, ಈ ಲಸಿಕೆಯು ನಿಯಮಿತ ಲಸಿಕಾ ದಿನಗಳಂದು ಲಭ್ಯವಿರುತ್ತದೆ.

ಗರ್ಭಕಂಠದ ಕ್ಯಾನ್ಸರ್
ಗರ್ಭಕಂಠದ ಕ್ಯಾನ್ಸರ್ ಜಾಗತಿಕವಾಗಿ ಮಹಿಳೆಯರಲ್ಲಿ ಕಂಡುಬರುವ ನಾಲ್ಕನೇ ಅತಿ ಸಾಮಾನ್ಯ ಕ್ಯಾನ್ಸರ್ ಆಗಿದೆ. 2022ರಲ್ಲಿ ಸುಮಾರು 6,60,000 ಹೊಸ ಪ್ರಕರಣಗಳು ಮತ್ತು ಸುಮಾರು 3,50,000 ಸಾವುಗಳು ವರದಿಯಾಗಿವೆ. ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್‌ಪಿವಿ) ಸೋಂಕು ದೀರ್ಘಕಾಲದವರೆಗೆ ಇರುವುದರಿಂದ ಈ ಕ್ಯಾನ್ಸರ್ ಉಂಟಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ ಅತಿ ಹೆಚ್ಚು ಸಂಖ್ಯೆಯಲ್ಲಿ ಯುವತಿಯರ ಮೇಲೆ ಪರಿಣಾಮ ಬೀರುತ್ತಿದೆ — ಕ್ಯಾನ್ಸರ್‌ನಿಂದಾಗಿ ತಾಯಿಯನ್ನು ಕಳೆದುಕೊಳ್ಳುವ ಮಕ್ಕಳಲ್ಲಿ ಶೇ. 20 ರಷ್ಟು ಮಕ್ಕಳು ಗರ್ಭಕಂಠದ ಕ್ಯಾನ್ಸರ್‌ನಿಂದಲೇ ತಾಯಿಯನ್ನು ಕಳೆದುಕೊಳ್ಳುತ್ತಿದ್ದಾರೆ.
ಭಾರತದ ವಿಷಯಕ್ಕೆ ಬಂದರೆ, ಇದು ಮಹಿಳೆಯರಲ್ಲಿ ಕಂಡುಬರುವ ಎರಡನೇ ಅತಿ ಸಾಮಾನ್ಯ ಕ್ಯಾನ್ಸರ್ ಆಗಿದೆ. GLOBOCAN 2022 ರ ದತ್ತಾಂಶದ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 1,20,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸುಮಾರು 80,000 ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ.
ವಿಶ್ವದ ಒಟ್ಟು ಗರ್ಭಕಂಠದ ಕ್ಯಾನ್ಸರ್ ಸಾವುಗಳಲ್ಲಿ ಭಾರತವು ಶೇ. 25 ರಷ್ಟು ಪಾಲನ್ನು ಹೊಂದಿದೆ. ಜಾಗತಿಕವಾಗಿ ಈ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪ್ರತಿ ಐವರು ಮಹಿಳೆಯರಲ್ಲಿ ಒಬ್ಬರು ಭಾರತೀಯರಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ಸಂಬಂಧಿತ ಅನಾರೋಗ್ಯದ ಪ್ರಮಾಣದಲ್ಲಿ ಭಾರತವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ.
ಗರ್ಭಕಂಠದ ಕ್ಯಾನ್ಸರ್ ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್‌ಪಿವಿ) ನಿಂದ ಉಂಟಾಗುತ್ತದೆ — ಸಕಾಲದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ತಡೆಗಟ್ಟಬಹುದಾದ ಏಕೈಕ ಕ್ಯಾನ್ಸರ್ ಇದಾಗಿದೆ. ಬಹುತೇಕ ಎಲ್ಲಾ ಪ್ರಕರಣಗಳು ಹೆಚ್ಚಿನ ಅಪಾಯದ ಎಚ್‌ಪಿವಿ ವಿಧಗಳ (ವಿಶೇಷವಾಗಿ 16 ಮತ್ತು 18 ನೇ ವಿಧಗಳು) ದೀರ್ಘಕಾಲದ ಸೋಂಕಿನಿಂದ ಉಂಟಾಗುತ್ತವೆ ಎಂದು ವೈಜ್ಞಾನಿಕ ಪುರಾವೆಗಳು ದೃಢಪಡಿಸಿವೆ. ಭಾರತದಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಲ್ಲಿ ಇವುಗಳ ಪಾಲು ಶೇ. 80 ಕ್ಕಿಂತ ಹೆಚ್ಚಿದೆ.

ಲಸಿಕೆ: ಗಾರ್ಡಾಸಿಲ್-4
ಭಾರತದ ರಾಷ್ಟ್ರೀಯ ಕಾರ್ಯಕ್ರಮವು 'ಗಾರ್ಡಾಸಿಲ್' ಎಂಬ ಕ್ವಾಡ್ರಿವೇಲೆಂಟ್ ಎಚ್‌ಪಿವಿ ಲಸಿಕೆಯನ್ನು ಬಳಸುತ್ತಿದೆ. ಇದು ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಎಚ್‌ಪಿವಿ ವಿಧಗಳಾದ 16 ಮತ್ತು 18 ರ ವಿರುದ್ಧ, ಹಾಗೂ 6 ಮತ್ತು 11 ನೇ ವಿಧಗಳ ವಿರುದ್ಧ ರಕ್ಷಣೆ ನೀಡುತ್ತದೆ. ಈ ಲಸಿಕೆಯು ಭಾರತದ ಔಷಧ ನಿಯಂತ್ರಕರಿಂದ ಅನುಮೋದಿಸಲ್ಪಟ್ಟಿದೆ ಮತ್ತು ಕಟ್ಟುನಿಟ್ಟಾದ ಗುಣಮಟ್ಟ ಹಾಗೂ ಕೋಲ್ಡ್-ಚೈನ್ (ಶೀತಲೀಕರಣ ಸರಪಳಿ) ಮಾನದಂಡಗಳನ್ನು ಪೂರೈಸುತ್ತದೆ. ಲಸಿಕೆಯ ನಿರಂತರ ಪೂರೈಕೆ ಮತ್ತು ರಾಜಿ ಇಲ್ಲದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು, 'ಗವಿ' (ಗವಿ - ಲಸಿಕಾ ಒಕ್ಕೂಟ) ಸಹಭಾಗಿತ್ವದಲ್ಲಿ ಪಾರದರ್ಶಕ ವ್ಯವಸ್ಥೆಯ ಮೂಲಕ ಇದನ್ನು ಸಂಗ್ರಹಿಸಲಾಗುತ್ತಿದೆ. ಹೆಣ್ಣುಮಕ್ಕಳು ಲೈಂಗಿಕವಾಗಿ ಸಕ್ರಿಯರಾಗುವ ಮೊದಲೇ, ಅಂದರೆ 14 ನೇ ವಯಸ್ಸಿನಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ.
ಫೆಬ್ರವರಿ 2023 ರಲ್ಲಿ, 'ಗವಿ' ಲಸಿಕಾ ಒಕ್ಕೂಟ ಮತ್ತು ಭಾರತ ಸರ್ಕಾರವು ದೇಶದ ಲಕ್ಷಾಂತರ ಮಕ್ಕಳಿಗೆ ಜೀವ ಉಳಿಸುವ ಲಸಿಕೆಗಳನ್ನು ತಲುಪಿಸುವ ಉದ್ದೇಶದಿಂದ ಮೂರು ವರ್ಷಗಳ ಸಹಭಾಗಿತ್ವವನ್ನು ಸ್ಥಾಪಿಸಿದವು. ಈ ಕಾರ್ಯತಂತ್ರದ ಸಹಭಾಗಿತ್ವದ ಮೂಲಕ, ಈವರೆಗೆ ಒಂದೂ ಲಸಿಕೆ ಪಡೆಯದ ಮಕ್ಕಳನ್ನು ಗುರುತಿಸಿ ಅವರಿಗೆ ಲಸಿಕೆ ನೀಡಲು, ಅಸ್ತಿತ್ವದಲ್ಲಿರುವ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ಭಾರತದ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ 'ಹ್ಯೂಮನ್ ಪ್ಯಾಪಿಲೋಮವೈರಸ್' (ಎಚ್‌ಪಿವಿ) ಲಸಿಕೆ ಹಾಗೂ 'ಟೈಫಾಯಿಡ್ ಕಂಜುಗೇಟ್' ಲಸಿಕೆಯನ್ನು ಪರಿಚಯಿಸಲು 'ಗವಿ' 250 ಮಿಲಿಯನ್ ಅಮೆರಿಕನ್ ಡಾಲರ್ ಅನುದಾನವನ್ನು ನೀಡಿದೆ.
'ಗವಿ' ಲಸಿಕಾ ಒಕ್ಕೂಟವು ಒಂದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಸಂಸ್ಥೆಯಾಗಿದ್ದು, ಇದು ವಿಶ್ವದ ಅತ್ಯಂತ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಮಕ್ಕಳಿಗೆ ಲಸಿಕೆ ಹಾಕಲು ಸರ್ಕಾರಗಳು, ವಿಶ್ವ ಆರೋಗ್ಯ ಸಂಸ್ಥೆ, ಯೂನಿಸೆಫ್, ವಿಶ್ವ ಬ್ಯಾಂಕ್, ಲಸಿಕೆ ತಯಾರಿಕಾ ಉದ್ದಿಮೆಗಳು, ನಾಗರಿಕ ಸಮಾಜ ಮತ್ತು ಗೇಟ್ಸ್ ಫೌಂಡೇಶನ್ ಅನ್ನು ಒಂದೆಡೆ ಸೇರಿಸುತ್ತದೆ.
ಲಸಿಕಾ ಕೇಂದ್ರಗಳು ಮತ್ತು ಸುರಕ್ಷತೆ
ಲಸಿಕೆಯು ಕೇವಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಈ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕೋಲ್ಡ್ ಚೈನ್ ಪಾಯಿಂಟ್ (ಸಿಸಿಪಿ - ಶೀತಲೀಕರಣ ವ್ಯವಸ್ಥೆ), ಲಸಿಕೆ ನಂತರದ ಅಡ್ಡಪರಿಣಾಮಗಳ ನಿರ್ವಹಣೆಗಾಗಿ ಮೀಸಲಾದ ವೈದ್ಯಾಧಿಕಾರಿ ಮತ್ತು ಇಂಟರ್ನೆಟ್ ಸೌಲಭ್ಯವಿರುವುದು ಕಡ್ಡಾಯವಾಗಿದೆ.
ಲಸಿಕೆ ನೀಡುವ ಸಮಯವು ಸಾಮಾನ್ಯವಾಗಿ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ರವರೆಗೆ ಇರುತ್ತದೆ ಮತ್ತು ಸಾರ್ವಜನಿಕ ರಜಾದಿನಗಳು ಹಾಗೂ ವಾರಾಂತ್ಯದ ದಿನಗಳಲ್ಲೂ ಲಸಿಕಾ ಶಿಬಿರಗಳನ್ನು ಆಯೋಜಿಸಬಹುದು. ತುರ್ತು ವೈದ್ಯಕೀಯ ಬೆಂಬಲದ ಅಗತ್ಯವಿದ್ದಲ್ಲಿ, ತಕ್ಷಣದ ನೆರವಿಗಾಗಿ ಎಲ್ಲಾ ಲಸಿಕಾ ಕೇಂದ್ರಗಳನ್ನು ಹತ್ತಿರದ 24×7 ಕಾರ್ಯನಿರ್ವಹಿಸುವ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಜೋಡಿಸಲಾಗಿದೆ. ಲಸಿಕೆ ಪಡೆಯುವ ಮೊದಲು ಹೆಣ್ಣುಮಕ್ಕಳು ಖಾಲಿ ಹೊಟ್ಟೆಯಲ್ಲಿ ಇರಬಾರದು ಎಂಬುದು ಕಡ್ಡಾಯವಾಗಿದೆ. ಅಲ್ಲದೆ, ಲಸಿಕೆ ಹಾಕಿಸಿಕೊಂಡ ನಂತರ ಅವರನ್ನು ಕನಿಷ್ಠ 30 ನಿಮಿಷಗಳ ಕಾಲ ಲಸಿಕಾ ಕೇಂದ್ರದಲ್ಲಿಯೇ ವೈದ್ಯಕೀಯ ವೀಕ್ಷಣೆಯಲ್ಲಿ ಇರಿಸಲಾಗುವುದು.
ನೋಂದಣಿ, ದಾಖಲಾತಿ ಮತ್ತು ವರದಿ ಮಾಡುವಿಕೆ
- ಫಲಾನುಭವಿಗಳು ಯು-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ವತಃ ನೋಂದಾಯಿಸಿಕೊಳ್ಳಬಹುದು, ಆರೋಗ್ಯ ಕಾರ್ಯಕರ್ತರ ಸಹಾಯದಿಂದ ಮುಂಗಡವಾಗಿ ನೋಂದಾಯಿಸಿಕೊಳ್ಳಬಹುದು ಅಥವಾ ಸ್ಥಳದಲ್ಲೇ ನೋಂದಣಿಗಾಗಿ ನೇರವಾಗಿ ಭೇಟಿ ನೀಡಬಹುದು.
- ಎಲ್ಲಾ ಲಸಿಕೆ ದಾಸ್ತಾನು ಮತ್ತು ಲಾಜಿಸ್ಟಿಕ್ಸ್ ಅನ್ನು ಎ ವಿನ್ ಮೂಲಕ ನಿರ್ವಹಿಸಲಾಗುತ್ತದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ.
- ಲಸಿಕಾ ಪ್ರಮಾಣಪತ್ರಗಳನ್ನು ಯು-ವಿನ್ ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಹತ್ತಿರದ 24×7 ಎಇಎಫ್‌ಐ ಸೌಲಭ್ಯದ ವಿಳಾಸ ಮತ್ತು ಸಹಾಯವಾಣಿ ಸಂಖ್ಯೆಯ ವಿವರಗಳಿರುತ್ತವೆ. ವಿನಂತಿಯ ಮೇರೆಗೆ ಇದರ ಮುದ್ರಿತ ಪ್ರತಿಗಳು ಲಭ್ಯವಿರುತ್ತವೆ.
- ಈ ಮೂರು ತಿಂಗಳ ಅಭಿಯಾನದ ಅವಧಿಯಲ್ಲಿ, ಲಸಿಕೆ ಪಡೆದ ಪ್ರತಿಯೊಬ್ಬ ಫಲಾನುಭವಿಯ ಎಡಗೈ ತೋರುಬೆರಳಿಗೆ ಗುರುತು ಹಾಕಲಾಗುತ್ತದೆ.
ಲಸಿಕೆಯಿಂದ ಹೊರಗಿಡಲಾದ ಹೆಣ್ಣುಮಕ್ಕಳು
- ಮಧ್ಯಮ ಅಥವಾ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರು (ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಕಾಯಬೇಕು)
- ಯೀಸ್ಟ್ ಅಲರ್ಜಿ ಇರುವವರು ಅಥವಾ ಈ ಹಿಂದೆ ಯಾವುದೇ ಲಸಿಕೆಯಿಂದ ಅಲರ್ಜಿಯ ಪ್ರತಿಕ್ರಿಯೆ ಉಂಟಾದ ಇತಿಹಾಸ ಹೊಂದಿರುವವರು
- ಗರ್ಭಿಣಿಯರು

ಲಸಿಕೆಯಿಂದ ಹೊರಗಿಡಲಾದ ಇತರರು
- 14 ವರ್ಷದ ನಿಗದಿತ ವಯೋಮಿತಿಯ ಹೊರಗಿರುವ ಹೆಣ್ಣುಮಕ್ಕಳು.
- ಈಗಾಗಲೇ ಯಾವುದೇ ಎಚ್‌ಪಿವಿ ಲಸಿಕೆಯನ್ನು (ಗಾರ್ಡಾಸಿಲ್, ಗಾರ್ಡಾಸಿಲ್-9, ಸರ್ವಾರಿಕ್ಸ್ ಅಥವಾ ಸರ್ವಾವಾಕ್) ಪಡೆದಿರುವ ಹೆಣ್ಣುಮಕ್ಕಳು.
ಉಪಸಂಹಾರ
ಎಚ್‌ಪಿವಿ ಲಸಿಕೆಗಳು ಜಾಗತಿಕವಾಗಿ ಅತ್ಯಂತ ವ್ಯಾಪಕವಾಗಿ ಅಧ್ಯಯನಕ್ಕೊಳಪಟ್ಟ ಲಸಿಕೆಗಳಲ್ಲಿ ಒಂದಾಗಿದ್ದು, 2006 ರಿಂದ ವಿಶ್ವಾದ್ಯಂತ 50 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಈ ಲಸಿಕೆಯು ತನ್ನ ವ್ಯಾಪ್ತಿಗೆ ಒಳಪಡುವ ಎಚ್‌ಪಿವಿ ವಿಧಗಳಿಂದ ಉಂಟಾಗುವ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಶೇ. 93 ರಿಂದ 100 ರಷ್ಟು ಪರಿಣಾಮಕಾರಿಯಾಗಿದೆ.
ಈ ಚಾಲನೆಯೊಂದಿಗೆ, ಭಾರತವು ತನ್ನ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ಎಚ್‌ಪಿವಿ ಲಸಿಕೆಯನ್ನು ಅಳವಡಿಸಿಕೊಂಡ 160 ಕ್ಕೂ ಹೆಚ್ಚು ದೇಶಗಳ ಸಾಲಿಗೆ ಸೇರಿದೆ. 90 ಕ್ಕೂ ಹೆಚ್ಚು ದೇಶಗಳು ʻಡೋಸ್ ಎಚ್‌ಪಿವಿ ಲಸಿಕಾ ವೇಳಾಪಟ್ಟಿಯನ್ನು ಜಾರಿಗೆ ತರುತ್ತಿವೆ, ಇದು ಲಸಿಕೆಯ ವ್ಯಾಪ್ತಿ, ಕೈಗೆಟುಕುವ ದರ ಮತ್ತು ಕಾರ್ಯಕ್ರಮದ ದಕ್ಷತೆಯನ್ನು ಸುಧಾರಿಸುತ್ತದೆ. ಈ ಕ್ಯಾನ್ಸರ್ ನಿರ್ಮೂಲನೆಯ ಗುರಿಯನ್ನು ತಲುಪುವುದರಿಂದ, 2120 ರ ವೇಳೆಗೆ ವಿಶ್ವಾದ್ಯಂತ 7.4 ಕೋಟಿ ಹೊಸ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳನ್ನು ಮತ್ತು 6.2 ಕೋಟಿ ಸಾವುಗಳನ್ನು ತಡೆಯಬಹುದು ಎಂದು ಅಂದಾಜಿಸಲಾಗಿದೆ.
ಈ ಕಾರ್ಯಕ್ರಮವು ಸರ್ಕಾರದ "ಸ್ವಸ್ಥ ನಾರಿ ಸಶಕ್ತ ಪರಿವಾರ" ಎಂಬ ದೃಷ್ಟಿಕೋನವನ್ನು ಮುಂದುವರಿಸುವ ಬದ್ಧತೆಯನ್ನು ಪೂರೈಸುತ್ತದೆ — ಇದು ಆರೋಗ್ಯವಂತ ಕುಟುಂಬಗಳ ನಿರ್ಮಾಣಕ್ಕೆ ಪೂರಕವಾಗಿ ಮಹಿಳೆಯರ ಆರೋಗ್ಯ ರಕ್ಷಣೆಯಲ್ಲಿ ತಡೆಗಟ್ಟುವಿಕೆ, ರಕ್ಷಣೆ ಮತ್ತು ಸಮಾನತೆಯನ್ನು ಖಚಿತಪಡಿಸುತ್ತದೆ.
References
Cervical Cancer Vaccination Campaign Launched
*****
(Explainer ID: 157615)
आगंतुक पटल : 13
Provide suggestions / comments