• Sitemap
  • Advance Search
Economy

"ಬೆಳವಣಿಗೆಯ ಮರು ವ್ಯಾಖ್ಯಾನ: ಭಾರತದ ಪರಿಷ್ಕೃತ ಜಿಡಿಪಿ ಅಂದಾಜುಗಳು ಮತ್ತು ಹೊಸ ಮಾಪನ ಚೌಕಟ್ಟು"

Posted On: 27 FEB 2026 10:00PM

 

ಪ್ರಮುಖ ಅಂಶಗಳು

  • 2025-26ರ ನೈಜ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7.6 ರಷ್ಟು ಎಂದು ಅಂದಾಜಿಸಲಾಗಿದೆ, ಇದು 2024-25ರಲ್ಲಿ ದಾಖಲಾದ ಶೇಕಡಾ 7.1 ಕ್ಕಿಂತ ಹೆಚ್ಚಾಗಿದೆ.
  • ಭಾರತದ ವಿಕಸನಗೊಳ್ಳುತ್ತಿರುವ ಆರ್ಥಿಕ ರಚನೆಯನ್ನು ಉತ್ತಮವಾಗಿ ಪ್ರತಿಬಿಂಬಿಸಲು ಜಿಡಿಪಿ ಅಂದಾಜುಗಳ ಮೂಲ ವರ್ಷವನ್ನು 2011–12 ರಿಂದ 2022–23 ಕ್ಕೆ ಪರಿಷ್ಕರಿಸಲಾಗಿದೆ.
  • ಪರಿಷ್ಕೃತ ಜಿಡಿಪಿ ಸರಣಿಯು ಎಎಸ್‌ಯುಎಸ್‌ಇ, ಪಿಎಲ್‌ಎಫ್‌ಎಸ್‌, ಜಿಎಸ್‌ಟಿ, ಪಿಎಫ್‌ಎಂಎಸ್‌ ಮುಂತಾದ ಹೊಸ ಮತ್ತು ಸುಧಾರಿತ ದತ್ತಾಂಶ ಮೂಲಗಳನ್ನು ಸಂಯೋಜಿಸುವ ಮೂಲಕ ಅಂದಾಜು ಪ್ರಕ್ರಿಯೆಯನ್ನು ಬಲಪಡಿಸುತ್ತದೆ.

ಪೀಠಿಕೆ

ಭಾರತದ ಬೆಳವಣಿಗೆಯ ಪಥವು ಕೇವಲ ಆರ್ಥಿಕ ಪ್ರದರ್ಶನದಿಂದ ಮಾತ್ರವಲ್ಲದೆ, ಅದರ ಸಾಂಖ್ಯಿಕ ವ್ಯವಸ್ಥೆಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದಲೂ ರೂಪಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ, 2022-23ರ ಮೂಲ ವರ್ಷವನ್ನು ಹೊಂದಿರುವ ಭಾರತದ ಇತ್ತೀಚಿನ ಒಟ್ಟು ಆಂತರಿಕ ಉತ್ಪನ್ನದ ಅಂದಾಜುಗಳ ಸಮಗ್ರ ಅವಲೋಕನವು, ಹಿಂದಿನ ಹಣಕಾಸು ವರ್ಷಗಳಿಗೆ ಹೋಲಿಸಿದರೆ ಆರ್ಥಿಕತೆಯ ವಿಕಸನಗೊಳ್ಳುತ್ತಿರುವ ವೇಗವನ್ನು ಪ್ರತಿಫಲಿಸುತ್ತದೆ.

2025-26ರ ಹಣಕಾಸು ವರ್ಷದ ನೈಜ ವಾರ್ಷಿಕ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7.6 ರಷ್ಟು ಎಂದು ಅಂದಾಜಿಸಲಾಗಿದೆ, ಇದು 2024-25ರ ಹಣಕಾಸು ವರ್ಷದಲ್ಲಿ ದಾಖಲಾದ ಶೇಕಡಾ 7.1 ಕ್ಕಿಂತ ಹೆಚ್ಚಾಗಿದೆ. ಇದೇ ವೇಳೆ, ಪ್ರಸ್ತುತ ಬೆಲೆಗಳಲ್ಲಿ ಅಳೆಯಲಾಗುವ ನಾಮಮಾತ್ರದ ಜಿಡಿಪಿಯು 2025-26ರ ಹಣಕಾಸು ವರ್ಷದಲ್ಲಿ ಶೇಕಡಾ 8.6 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಇದರೊಳಗೆ, ಉತ್ಪಾದನಾ ವಲಯವು 2023-24 ಮತ್ತು 2025-26 ಎರಡೂ ಹಣಕಾಸು ವರ್ಷಗಳಲ್ಲಿ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿದೆ, ಇದು ಆರ್ಥಿಕತೆಯ ಸ್ಥಿತಿಸ್ಥಾಪಕತ್ವದ ಪ್ರದರ್ಶನಕ್ಕೆ ಪ್ರಮುಖ ಕೊಡುಗೆ ನೀಡುವ ವಲಯವಾಗಿ ಹೊರಹೊಮ್ಮಿದೆ. ದ್ವಿತೀಯ ಮತ್ತು ತೃತೀಯ ವಲಯಗಳು ಒಟ್ಟಾರೆ ಆರ್ಥಿಕ ಪ್ರದರ್ಶನವನ್ನು ಬಲಪಡಿಸಿದ್ದು, 2025-26ರ ಹಣಕಾಸು ವರ್ಷದಲ್ಲಿ ಶೇಕಡಾ 9.0 ಕ್ಕಿಂತ ಹೆಚ್ಚಿನ ಬೆಳವಣಿಗೆ ದರವನ್ನು ದಾಖಲಿಸಿವೆ. ಅಲ್ಲದೆ, ‘ವ್ಯಾಪಾರ, ದುರಸ್ತಿ, ಹೋಟೆಲ್‌ಗಳು, ಸಾರಿಗೆ, ಸಂವಹನ ಮತ್ತು ಪ್ರಸಾರ ಹಾಗೂ ಸಂಗ್ರಹಣೆಗೆ ಸಂಬಂಧಿಸಿದ ಸೇವೆಗಳ’ ವಲಯವು 2025-26ರ ಹಣಕಾಸು ವರ್ಷದಲ್ಲಿ ಸ್ಥಿರ ಬೆಲೆಗಳಲ್ಲಿ ಶೇಕಡಾ 10.1 ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ.

ಭಾರತದ ಆರ್ಥಿಕ ಪ್ರಗತಿಯಲ್ಲಿನ ಸ್ಥಿರವಾದ ಮೇಲ್ಮುಖ ಪಥವು ತ್ರೈಮಾಸಿಕ ಫಲಿತಾಂಶಗಳಲ್ಲೂ ಪ್ರತಿಫಲಿಸುತ್ತದೆ. 2025-26ರ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ (Q3) ಅವಧಿಯ ಸ್ಥಿರ ಬೆಲೆಗಳಲ್ಲಿನ ನೈಜ ಜಿಡಿಪಿ ಅಂದಾಜು ₹84.54 ಲಕ್ಷ ಕೋಟಿಗಳಾಗಿದ್ದು, ಶೇಕಡಾ 7.8 ರಷ್ಟು ಬಲವಾದ ಬೆಳವಣಿಗೆಯನ್ನು ಗುರುತಿಸಿದೆ. ಈ ಬೆಳವಣಿಗೆಯು 2023-24ರ ಮೂರನೇ ತ್ರೈಮಾಸಿಕದ ಶೇಕಡಾ 7.1 ರಿಂದ ಮತ್ತು 2024-25ರ ಮೂರನೇ ತ್ರೈಮಾಸಿಕದ ಶೇಕಡಾ 7.4 ರಿಂದ ಹಂತಹಂತವಾಗಿ ವೇಗವನ್ನು ಪಡೆದುಕೊಂಡಿದೆ, ಇದು ಭಾರತೀಯ ಆರ್ಥಿಕತೆಯ ಸುಸ್ಥಿರ ಸ್ಥಿತಿಸ್ಥಾಪಕತ್ವ ಮತ್ತು ಬಲವರ್ಧನೆಯನ್ನು ಒತ್ತಿಹೇಳುತ್ತದೆ.

"ಒಂದು ನಿರ್ದಿಷ್ಟ ಲೆಕ್ಕಪರಿಶೋಧನಾ ಅವಧಿಯಲ್ಲಿ, ದೇಶದ ಗಡಿಯೊಳಗೆ ಉತ್ಪಾದಿಸಲಾದ ಅಂತಿಮ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವೇ ಜಿಡಿಪಿ.

ಜಿಡಿಪಿ ಅಂದಾಜುಗಳ ಹೊಸ ಸರಣಿಯು ವರ್ಷಗಳಲ್ಲಿ ಆರ್ಥಿಕತೆಯ ಪ್ರಗತಿಯನ್ನು ಉತ್ತಮವಾಗಿ ಸೆರೆಹಿಡಿಯಲು ಪ್ರಮುಖ ಬದಲಾವಣೆಗಳನ್ನು ಒಳಗೊಂಡಿದೆ. ಈ ಸಂಕಲನವು 'ಬೆಂಚ್‌ಮಾರ್ಕ್-ಇಂಡಿಕೇಟರ್' ವಿಧಾನವನ್ನು ಆಧರಿಸಿದೆ. ಇದರಲ್ಲಿ ಹಿಂದಿನ ಹಣಕಾಸು ವರ್ಷಕ್ಕೆ ಲೆಕ್ಕಹಾಕಿದ ಅಂದಾಜುಗಳನ್ನು, ವಿವಿಧ ಆರ್ಥಿಕ ಮತ್ತು ಸಾಂಸ್ಥಿಕ ವಲಯಗಳ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುವ ಸಂಬಂಧಿತ ಸೂಚಕಗಳನ್ನು ಬಳಸಿಕೊಂಡು ವಿಸ್ತರಿಸಲಾಗುತ್ತದ.

ಭಾರತದ ಪರಿವರ್ತನೆಯಾಗುತ್ತಿರುವ ಕ್ರಿಯಾತ್ಮಕ ಆರ್ಥಿಕತೆಗಾಗಿ ಜಿಡಿಪಿ ಅಂದಾಜಿನ ಮರುಮಾಪನ

ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಎಂಬುದು ಆರ್ಥಿಕತೆಯ ಗಾತ್ರ ಮತ್ತು ಒಟ್ಟಾರೆ ಆರೋಗ್ಯವನ್ನು ಅಳೆಯಲು ವ್ಯಾಪಕವಾಗಿ ಬಳಸಲಾಗುವ ಸೂಚಕವಾಗಿದೆ. ಕಾಲಾನಂತರದಲ್ಲಿ ಜಿಡಿಪಿಯಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚುವ ಮೂಲಕ, ಆರ್ಥಿಕತೆಯು ವಿಸ್ತರಿಸುತ್ತಿದೆಯೇ ಅಥವಾ ಕುಸಿಯುತ್ತಿದೆಯೇ ಎಂಬುದನ್ನು ನಿರ್ಧರಿಸಬಹುದು ಮತ್ತು ಜೀವನಮಟ್ಟದಲ್ಲಿನ ಸುಧಾರಣೆಗಳ ಬಗ್ಗೆ ವಿಶಾಲವಾದ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಪರಿಣಾಮವಾಗಿ, ನೀತಿ ನಿರೂಪಕರು, ಉದ್ಯಮಗಳು ಮತ್ತು ಹಣಕಾಸು ಸಂಸ್ಥೆಗಳು ಆರ್ಥಿಕ ಯೋಜನೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಜಿಡಿಪಿ ಪ್ರವೃತ್ತಿಗಳನ್ನು ಅವಲಂಬಿಸಿವೆ.

ತ್ರೈಮಾಸಿಕ ಜಿಡಿಪಿ ಅಂದಾಜುಗಳ ಲೆಕ್ಕಾಚಾರ

ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಮತ್ತು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು, 'ಸಿಸ್ಟಮ್ ಆಫ್ ನ್ಯಾಷನಲ್ ಅಕೌಂಟ್ಸ್' 2008 ಮತ್ತು ಐಎಂಎಫ್ ನ 'ತ್ರೈಮಾಸಿಕ ರಾಷ್ಟ್ರೀಯ ಖಾತೆಗಳ ಕೈಪಿಡಿ 2017' ಅನ್ನು ಅನುಸರಿಸಿ, ಪ್ರಪಂಚದಾದ್ಯಂತ ಬಳಸಲಾಗುವ ಪ್ರಮಾಣಿತ ವಿಧಾನವಾದ 'ಬೆಂಚ್‌ಮಾರ್ಕ್-ಇಂಡಿಕೇಟರ್' ಬಳಸಿ ತ್ರೈಮಾಸಿಕ ಜಿಡಿಪಿ ಅಂದಾಜುಗಳನ್ನು ಲೆಕ್ಕಹಾಕುತ್ತವೆ. ಈ ವಿಧಾನವು ಈ ಕೆಳಗಿನಂತೆ ಕಾರ್ಯನಿರ್ವಹಿಸುತ್ತದೆ:

  • ವಾರ್ಷಿಕ ಜಿಡಿಪಿ ಅಂದಾಜುಗಳು ಉಲ್ಲೇಖದ ಬಿಂದು ಅಥವಾ ಬೆಂಚ್‌ಮಾರ್ಕ್ ಆಗಿ ಕಾರ್ಯನಿರ್ವಹಿಸುತ್ತವೆ.
  • ತ್ರೈಮಾಸಿಕ ಜಿಡಿಪಿಯನ್ನು ಅಂದಾಜಿಸಲು ಮಾಸಿಕ ಅಥವಾ ತ್ರೈಮಾಸಿಕ ಸೂಚಕಗಳಂತಹ ಉನ್ನತ-ಆವರ್ತನ ದತ್ತಾಂಶಗಳನ್ನು ಈ ಬೆಂಚ್‌ಮಾರ್ಕ್ ಅಂದಾಜುಗಳಿಗೆ ಅನ್ವಯಿಸಲಾಗುತ್ತದೆ.

ಸಮಯಕ್ಕೆ ಅನುಗುಣವಾಗಿ ಮಾಡುವ ಹೋಲಿಕೆಗಳು ಅರ್ಥಪೂರ್ಣವಾಗಿರಲು, ಜಿಡಿಪಿ ಅಂದಾಜುಗಳು ಸ್ಥಿರವಾದ ವಿಧಾನಗಳು, ದತ್ತಾಂಶ ಮೂಲಗಳು ಮತ್ತು ಮೂಲ ವರ್ಷಗಳನ್ನು ಆಧರಿಸಿರಬೇಕು. ಆದ್ದರಿಂದ, ಅಳತೆಯ ಚೌಕಟ್ಟಿನಲ್ಲಿ ಮಾಡುವ ಯಾವುದೇ ಪರಿಷ್ಕರಣೆಯು ನಿರಂತರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲ್ಪಟ್ಟಿರಬೇಕು.

ಇದನ್ನು ಗುರುತಿಸಿ, ವೇಗವಾಗಿ ವಿಕಸನಗೊಳ್ಳುತ್ತಿರುವ ಆರ್ಥಿಕತೆಯ ನೈಜತೆಯನ್ನು ಉತ್ತಮವಾಗಿ ಪ್ರತಿಬಿಂಬಿಸಲು ಭಾರತದ ಸಾಂಖ್ಯಿಕ ವ್ಯವಸ್ಥೆಯು ಸಮಗ್ರ ಆಧುನೀಕರಣಕ್ಕೆ ಒಳಗಾಗಿದೆ. ಜಿಡಿಪಿ ಮತ್ತು ಬೆಲೆ ಸೂಚ್ಯಂಕಗಳ ಮೂಲ ವರ್ಷಗಳನ್ನು ಪರಿಷ್ಕರಿಸುವುದು, ಅಸಂಘಟಿತ ಮತ್ತು ಸೇವಾ ವಲಯಗಳ ಮಾಪನವನ್ನು ಬಲಪಡಿಸುವುದು, ಕಾರ್ಮಿಕ ಮಾರುಕಟ್ಟೆಯ ಅಂಕಿಅಂಶಗಳನ್ನು ಸುಧಾರಿಸುವುದು, ಸುಧಾರಿತ ಸಮೀಕ್ಷಾ ವಿಧಾನಗಳು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ವ್ಯಾಪಕ ಪಾಲುದಾರರ ತೊಡಗಿಸಿಕೊಳ್ಳುವಿಕೆಯ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸುವುದು ಈ ಸುಧಾರಣೆಗಳಲ್ಲಿ ಸೇರಿವೆ.

ಒಟ್ಟಾರೆಯಾಗಿ, ಈ ಸುಧಾರಣೆಗಳು ಭಾರತದ ಅಧಿಕೃತ ಅಂಕಿಅಂಶಗಳ ಸಮಯೋಚಿತತೆ, ಆಳ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ, ಆ ಮೂಲಕ ಸಾಕ್ಷ್ಯ ಆಧಾರಿತ ನೀತಿ ನಿರೂಪಣೆಗೆ ಬಲವಾದ ಅಡಿಪಾಯವನ್ನು ಒದಗಿಸುತ್ತವೆ.

ಮೂಲ ವರ್ಷದ ವಿವರಣೆ

ಭಾರತದ ಆರ್ಥಿಕತೆಯ ರಾಷ್ಟ್ರೀಯ ಆದಾಯ, ಉತ್ಪಾದನೆ ಮತ್ತು ಒಟ್ಟು ವೆಚ್ಚದ ದತ್ತಾಂಶವನ್ನು ಒದಗಿಸುವ ರಾಷ್ಟ್ರೀಯ ಖಾತೆಗಳ ಅಂಕಿಅಂಶಗಳ  ಪ್ರಕಾರ, ಮೂಲ ವರ್ಷ ಎಂದರೆ ನೈಜ ಬೆಳವಣಿಗೆಯನ್ನು ಲೆಕ್ಕಹಾಕಲು ಬಳಸಲಾಗುವ ಬೆಲೆಗಳ 'ಉಲ್ಲೇಖ ವರ್ಷ' ಆಗಿದೆ.

ಮೂಲ ವರ್ಷದ ಮರುಹೊಂದಾಣಿಕೆ  ಮತ್ತು ಪರಿಷ್ಕರಣೆಯ ಆವರ್ತನ

'ರಿಬೇಸಿಂಗ್' ಎಂಬುದು ಆರ್ಥಿಕತೆಯ ಪ್ರಸ್ತುತ ರಚನೆಯನ್ನು ಪ್ರತಿಫಲಿಸಲು ಪರಿಷ್ಕೃತ ಮತ್ತು ಸುಧಾರಿತ ದತ್ತಾಂಶವನ್ನು ಬಳಸಿಕೊಂಡು 'ಮೂಲ ವರ್ಷ'ವನ್ನು  ನವೀಕರಿಸುವ ಪ್ರಕ್ರಿಯೆಯಾಗಿದೆ. ಈ ಹೊಸ ಮೂಲ ವರ್ಷವು ಮುಂದಿನ ದಿನಗಳಲ್ಲಿ ಜಿಡಿಪಿ (GDP) ಮತ್ತು ಅದರ ಘಟಕಗಳನ್ನು ಅಂದಾಜಿಸಲು, ಹಾಗೆಯೇ ಗ್ರಾಹಕ ಬೆಲೆ ಸೂಚ್ಯಂಕ ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕದಂತಹ  ಪ್ರಮುಖ ಸೂಚಕಗಳನ್ನು ಲೆಕ್ಕಹಾಕಲು ಉಲ್ಲೇಖದ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ.

ಭಾರತದ ವಿಕಸನಗೊಳ್ಳುತ್ತಿರುವ ಆರ್ಥಿಕ ರಚನೆಯನ್ನು ಉತ್ತಮವಾಗಿ ಪ್ರತಿಫಲಿಸಲು, ಜಿಡಿಪಿ ಮೂಲ ವರ್ಷವನ್ನು 2011–12 ರಿಂದ 2022–23 ಕ್ಕೆ ಪರಿಷ್ಕರಿಸಿರುವುದು ಒಂದು ಪ್ರಮುಖ ಸುಧಾರಣೆಯಾಗಿದೆ.

ಜಿಡಿಪಿ ಮೂಲ ವರ್ಷವನ್ನು 2022-23ಕ್ಕೆ ಏಕೆ ಪರಿಷ್ಕರಿಸಲಾಗಿದೆ?

ನಿಮಗೆ ಗೊತ್ತೇ?

2019–2021ರ ಅವಧಿಯ ಅಡೆತಡೆಗಳ ನಂತರದ ಅತ್ಯಂತ ಇತ್ತೀಚಿನ "ಸಾಮಾನ್ಯ" ಅವಧಿಯನ್ನು ಪ್ರತಿನಿಧಿಸುವುದರಿಂದ, 2022–23ನೇ ವರ್ಷವನ್ನು ಹೊಸ ಮೂಲ ವರ್ಷವಾಗಿ ಆಯ್ಕೆ ಮಾಡಲಾಗಿದೆ. 2019–20 ಮತ್ತು 2020–21ರ ವರ್ಷಗಳು ಕೋವಿಡ್-19 ಸಾಂಕ್ರಾಮಿಕದಿಂದಾಗಿ ತೀವ್ರವಾಗಿ ಬಾಧಿತವಾಗಿದ್ದವು, ಇದು ಬಳಕೆದಾರರ ಪ್ರವೃತ್ತಿಗಳು ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಏರುಪೇರು ಮಾಡಿತ್ತು.

ಆರ್ಥಿಕತೆಯ ರಚನಾತ್ಮಕ ಬದಲಾವಣೆಗಳನ್ನು ಪ್ರತಿಫಲಿಸಲು ಮತ್ತು ಆರ್ಥಿಕ ಅಂದಾಜುಗಳ ನಿಖರತೆಯನ್ನು ಸುಧಾರಿಸಲು ಮೂಲ ವರ್ಷವನ್ನು ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತದೆ. ಇಂತಹ ನವೀಕರಣಗಳು ಪದ್ಧತಿಗಳ ಸುಧಾರಣೆಗೆ ಮತ್ತು ಹೆಚ್ಚು ಸಮಗ್ರ ಹಾಗೂ ವಿಶ್ವಾಸಾರ್ಹ ದತ್ತಾಂಶ ಮೂಲಗಳ ಸಂಯೋಜನೆಗೆ ಅವಕಾಶ ಮಾಡಿಕೊಡುತ್ತವೆ.

ಕಳೆದ ದಶಕದಲ್ಲಿ, ಭಾರತದ ಆರ್ಥಿಕತೆಯು ಗಮನಾರ್ಹವಾಗಿ ವಿಕಸನಗೊಂಡಿದೆ. ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲ್ ಸೇವೆಗಳ ವಿಸ್ತರಣೆಯೊಂದಿಗೆ, ಬಳಕೆಯ ಮಾದರಿಗಳು ಮತ್ತು ಹೂಡಿಕೆಯ ನಡವಳಿಕೆಯಲ್ಲಿಯೂ ಬದಲಾವಣೆಗಳಾಗಿವೆ. 'ರಿಬೇಸಿಂಗ್' ಮಾಡುವುದರಿಂದ ಜಿಡಿಪಿ ಮತ್ತು ಸಂಬಂಧಿತ ಸೂಚ್ಯಂಕಗಳು ಉದಯೋನ್ಮುಖ ವಲಯಗಳ ಕೊಡುಗೆ, ಸಾಪೇಕ್ಷ ಬೆಲೆಗಳಲ್ಲಿನ ಬದಲಾವಣೆಗಳು ಮತ್ತು ತಂತ್ರಜ್ಞಾನ ಹಾಗೂ ಉತ್ಪಾದಕತೆಯಲ್ಲಿನ ಪ್ರಗತಿಯನ್ನು ಉತ್ತಮವಾಗಿ ಸೆರೆಹಿಡಿಯಲು ಸಾಧ್ಯವಾಗುತ್ತದೆ.

ಅದೇ ಸಮಯದಲ್ಲಿ, ಕ್ಷಿಪ್ರ ನಗದುರಹಿತ ವಹಿವಾಟು ಅಥವಾ ಡಿಜಿಟಲೀಕರಣವು 'ಹೈ-ಫ್ರೀಕ್ವೆನ್ಸಿ'  ದತ್ತಾಂಶದ ಲಭ್ಯತೆಯನ್ನು ಹೆಚ್ಚಿಸಿದೆ, ಇದು ರಾಷ್ಟ್ರೀಯ ಲೆಕ್ಕಪತ್ರಗಳ ನಿಖರತೆಯನ್ನು ಬಲಪಡಿಸುತ್ತದೆ. ಇ-ವಾಹನ್ (ವಾಹನ ನೋಂದಣಿ), ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ  ಮತ್ತು ಜಿಎಸ್‌ಟಿ  ನೆಟ್‌ವರ್ಕ್‌ನಂತಹ ನೈಜ-ಸಮಯದ ವ್ಯವಸ್ಥೆಗಳು ಈಗ ಜಿಡಿಪಿ ಅಂದಾಜುಗಳ ದೃಢತೆಯನ್ನು ಹೆಚ್ಚಿಸುವ ಸೂಕ್ಷ್ಮ ಆರ್ಥಿಕ ಒಳನೋಟಗಳನ್ನು ಒದಗಿಸುತ್ತಿವೆ.

ಇದಲ್ಲದೆ, ನಿಯತಕಾಲಿಕ ಪರಿಷ್ಕರಣೆಗಳು ವಿಶ್ವಸಂಸ್ಥೆಯ ಸಾಂಖ್ಯಿಕ ಆಯೋಗವು ಶಿಫಾರಸು ಮಾಡಿದ ಅಂತರಾಷ್ಟ್ರೀಯ ಉತ್ತಮ ಪದ್ಧತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಬೆಂಬಲ ನೀಡುತ್ತವೆ. ಇದು ಭಾರತದ ಸಾಂಖ್ಯಿಕ ಚೌಕಟ್ಟು ಪದ್ಧತಿಯ ಪ್ರಕಾರ ಸದೃಢವಾಗಿರುವುದನ್ನು ಮತ್ತು ಜಾಗತಿಕವಾಗಿ ಹೋಲಿಸಬಹುದಾದದ್ದನ್ನು ಖಚಿತಪಡಿಸುತ್ತದೆ, ವಿಶೇಷವಾಗಿ ಡಿಜಿಟಲ್ ಆರ್ಥಿಕತೆಯ ಮಾಪನ ಮತ್ತು 'ಸಪ್ಲೈ-ಯೂಸ್' ಕೋಷ್ಟಕಗಳಂತಹ ಕ್ಷೇತ್ರಗಳಲ್ಲಿ ಇದು ಸಹಕಾರಿಯಾಗಿದೆ.

ಭಾರತದ ಜಿಡಿಪಿ ಅಂದಾಜು ವಿಧಾನದ ಆಧುನೀಕರಣ

ಪರಿಷ್ಕೃತ ಜಿಡಿಪಿ ಸರಣಿಯು ಹಲವಾರು ಹೊಸ ಮತ್ತು ಸುಧಾರಿತ ದತ್ತಾಂಶ ಮೂಲಗಳನ್ನು ಸಂಯೋಜಿಸುವ ಮೂಲಕ ಅಂದಾಜು ಪ್ರಕ್ರಿಯೆಯನ್ನು ಬಲಪಡಿಸುತ್ತದೆ. ಈ ಸುಧಾರಣೆಗಳು 'ಪ್ರಾಕ್ಸಿ' ( ಅಂದಾಜು) ಸೂಚಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ ಮತ್ತು ರಾಷ್ಟ್ರೀಯ ಆದಾಯದ ಅಂದಾಜುಗಳು ಆರ್ಥಿಕತೆಯ ವಿಕಸನಗೊಳ್ಳುತ್ತಿರುವ ರಚನೆಯನ್ನು ಉತ್ತಮವಾಗಿ ಪ್ರತಿಬಿಂಬಿಸುವುದನ್ನು ಖಚಿತಪಡಿಸುತ್ತವೆ.

ಹೊಸ ಸರಣಿಯಲ್ಲಿ ಬಳಸಲಾಗುತ್ತಿರುವ ದತ್ತಾಂಶ ಮೂಲಗಳು

ಗೃಹ ವಲಯದ ಮಾಪನ: ಈ ಹಿಂದೆ, ಗೃಹ ವಲಯದ ಅಂದಾಜುಗಳು ಹೆಚ್ಚಾಗಿ 'ಬೆಂಚ್‌ಮಾರ್ಕ್' ಸಮೀಕ್ಷೆಗಳ ನಡುವಿನ ಬೆಳವಣಿಗೆ ದರಗಳು ಅಥವಾ ಪ್ರಾಕ್ಸಿ ಸೂಚಕಗಳನ್ನು ಅವಲಂಬಿಸಿದ್ದವು. ಪರಿಷ್ಕೃತ ಸರಣಿಯಲ್ಲಿ, ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ  ಮತ್ತು ನಿಯತಕಾಲಿಕ ಕಾರ್ಮಿಕ ಬಲ ಸಮೀಕ್ಷೆಯತಹ ನಿಯಮಿತ ವಾರ್ಷಿಕ ಸಮೀಕ್ಷೆಗಳಿಂದ ನೈಜ ಮಟ್ಟದ ಅಂದಾಜುಗಳನ್ನು ಪಡೆಯಲಾಗುತ್ತಿದೆ. ಈ ಬದಲಾವಣೆಯು ವಲಯದ ಚೈತನ್ಯವನ್ನು ಹೆಚ್ಚು ನಿಖರ ಮತ್ತು ಸಮಯೋಚಿತವಾಗಿ ಮೌಲ್ಯಮಾಪನ ಮಾಡಲು ಅನುವು ಮಾಡಿಕೊಡುತ್ತದೆ.

ಜಿಎಸ್‌ಟಿ ದತ್ತಾಂಶದ ಬಳಕೆ: ಜಿಎಸ್‌ಟಿ ದತ್ತಾಂಶವು ಅಖಿಲ ಭಾರತ ಖಾಸಗಿ ಕಾರ್ಪೊರೇಟ್ ವಲಯದ ಅಂದಾಜುಗಳನ್ನು ರಾಜ್ಯಗಳಾದ್ಯಂತ ಹಂಚಿಕೆ ಮಾಡಲು ಬೆಂಬಲಿಸುತ್ತದೆ ಮತ್ತು ವಾರ್ಷಿಕ ಲೆಕ್ಕಪತ್ರಗಳಲ್ಲಿ ಅಡ್ಡ-ಪರಿಶೀಲನೆಗಾಗಿ  ಬಳಸಲಾಗುತ್ತದೆ. ಇದು ತ್ರೈಮಾಸಿಕ ಅಂದಾಜುಗಳಲ್ಲಿ ಮತ್ತು ತ್ರೈಮಾಸಿಕ ರಾಷ್ಟ್ರೀಯ ಖಾತೆಗಳ ಸಂಕಲನದಲ್ಲಿ ಸೂಚಕವಾಗಿ ಪ್ರಮುಖ ಪಾತ್ರ ವಹಿಸುತ್ತದೆ. ಹೊಸ ಸರಣಿಯು ಉತ್ಪಾದನಾ ಮತ್ತು ಹಣಕಾಸೇತರ ಸೇವಾ ವಲಯಗಳಲ್ಲಿ ಜಿಎಸ್‌ಟಿ ದತ್ತಾಂಶವನ್ನು ಹೆಚ್ಚು ವ್ಯಾಪಕವಾಗಿ ಮತ್ತು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತದೆ.

ಇ-ವಾಹನ್ ಡೇಟಾಬೇಸ್: ರಸ್ತೆ ಸಾರಿಗೆ ಸೇವೆಗಳಿಗೆ ಸಂಬಂಧಿಸಿದ ಖಾಸಗಿ ಅಂತಿಮ ಬಳಕೆ ವೆಚ್ಚವನ್ನು ಅಂದಾಜಿಸಲು ಇ-ವಾಹನ್ ಪೋರ್ಟಲ್‌ನ ದತ್ತಾಂಶವನ್ನು ಬಳಸಲಾಗುತ್ತಿದೆ. ಪಿಎಫ್‌ಸಿಇ' ಎಂದರೆ ದೇಶದ ನಿವಾಸಿ ಕುಟುಂಬಗಳು ಸರಕು ಮತ್ತು ಸೇವೆಗಳ ಅಂತಿಮ ಬಳಕೆಗಾಗಿ ಮಾಡುವ ವೆಚ್ಚವಾಗಿದೆ.

ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ: ಕೇಂದ್ರ ಸರ್ಕಾರದ ಲೆಕ್ಕಪತ್ರಗಳನ್ನು ಸಂಕಲಿಸಲು ಮತ್ತು ಅವುಗಳನ್ನು ರಾಜ್ಯಗಳಾದ್ಯಂತ ವಿತರಿಸಲು ಪಿಎಂಎಸ್‌ ದತ್ತಾಂಶವನ್ನು ಬಳಸಲಾಗುತ್ತಿದೆ. ಇದು ಪರಿಷ್ಕೃತ ಅಂದಾಜುಗಳನ್ನು ಅವಲಂಬಿಸುವ ಬದಲು, ಮೊದಲ ಪರಿಷ್ಕೃತ ಅಂದಾಜುಗಳ ಹಂತದಲ್ಲೇ ನೈಜ ವೆಚ್ಚದ ಅಂಕಿಅಂಶಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಪಿಇಎಂಎಸ್‌ ಎನ್ನುವುದು ವೆಬ್-ಆಧಾರಿತ ಆನ್‌ಲೈನ್ ವ್ಯವಸ್ಥೆಯಾಗಿದ್ದು, ಡಿಜಿಟಲ್ ಪಾವತಿಗಳು, ರಸೀದಿಗಳ ಸಂಗ್ರಹಣೆ, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ವರದಿಗಾಗಿ ಮಾಡ್ಯೂಲ್‌ಗಳನ್ನು ಒದಗಿಸುತ್ತದೆ.

ಇತ್ತೀಚಿನ ಅಧ್ಯಯನಗಳ ಸೇರ್ಪಡೆ: ಅಂದಾಜು ಗುಣಮಟ್ಟವನ್ನು ಸುಧಾರಿಸಲು ಇತ್ತೀಚಿನ ತಜ್ಞರ ಅಧ್ಯಯನಗಳನ್ನು ಆಧರಿಸಿದ ನವೀಕರಿಸಿದ ದರಗಳು ಮತ್ತು ಅನುಪಾತಗಳನ್ನು ಸೇರಿಸಿಕೊಳ್ಳಲಾಗಿದೆ. ಅವುಗಳೆಂದರೆ:

  • ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಯಿಂದ ಹುಲ್ಲು ಮತ್ತು ಮೇವಿನ ಅಧ್ಯಯನ (ಕೃಷಿ): ಇದು ಕೃಷಿ ವಲಯದಲ್ಲಿ ಮೇವಿನ ಉತ್ಪಾದನೆಯ ನಿಖರ ದತ್ತಾಂಶವನ್ನು ಒದಗಿಸುತ್ತದೆ.
  • ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ಮತ್ತು ಕೇಂದ್ರ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆಯಿಂದ ಮೀನುಗಾರಿಕೆ ಅಧ್ಯಯನಗಳು: ಇವು ಸಮುದ್ರ ಮತ್ತು ಒಳನಾಡು ಮೀನುಗಾರಿಕೆಯ ಕೊಡುಗೆಯನ್ನು ಅಳೆಯಲು ಸಹಾಯ ಮಾಡುತ್ತವೆ.
  • ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯಿಂದ  ಹಾಲು ಮತ್ತು ಹಾಲಿನ ಉತ್ಪನ್ನಗಳ ಕುರಿತಾದ ಅಧ್ಯಯನ: ಇದು ಖಾಸಗಿ ಅಂತಿಮ ಬಳಕೆ ವೆಚ್ಚವನ್ನು ಅಂದಾಜಿಸಲು ಹಾಲಿನ ಉತ್ಪನ್ನಗಳ ಬಳಕೆಯ ವಿವರ ನೀಡುತ್ತದೆ.
  • ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ  ಸಾರಿಗೆ ಸೇವೆಗಳ ಕುರಿತಾದ ಅಧ್ಯಯನ: ಇದು ಸಾರಿಗೆ ವಲಯದಲ್ಲಿನ ಜನರ ವೆಚ್ಚದ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

ಒಟ್ಟಾರೆಯಾಗಿ, ಈ ಸುಧಾರಣೆಗಳು ರಾಷ್ಟ್ರೀಯ ಆದಾಯದ ಅಂದಾಜುಗಳ ದೃಢತೆ, ಸೂಕ್ಷ್ಮತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತವೆ.

ಹೊಸ ಜಿಡಿಪಿ ಸರಣಿಯಲ್ಲಿನ ಪ್ರಮುಖ ಕಾರ್ಯವಿಧಾನದ ಸುಧಾರಣೆಗಳು

ಪರಿಷ್ಕೃತ ಜಿಡಿಪಿ ಸರಣಿಯು ನಿಖರತೆ, ಸ್ಥಿರತೆ ಮತ್ತು ವಲಯವಾರು ಪ್ರಾತಿನಿಧ್ಯವನ್ನು ಸುಧಾರಿಸಲು ಹಲವಾರು ಕಾರ್ಯವಿಧಾನದ ಸುಧಾರಣೆಗಳನ್ನು ಪರಿಚಯಿಸಿದೆ:

"ಡಿಫ್ಲೇಟರ್ ಎನ್ನುವುದು ಎರಡು ಕಾಲಾವಧಿಗಳ ನಡುವೆ, ಒಂದೇ ರೀತಿಯ ಉತ್ಪನ್ನದ ಬೆಲೆಯಲ್ಲಿನ ಬದಲಾವಣೆಯನ್ನು ಕೇವಲ 'ಬೆಲೆ ಏರಿಕೆ'ಯಾಗಿ  ವಿಭಜಿಸುವ ಗುರಿಯನ್ನು ಹೊಂದಿದೆ.

ಪರಿಷ್ಕೃತ ಡಿಫ್ಲೇಷನ್ ತಂತ್ರಗಳು: ಈಗ ಉತ್ಪಾದನಾ ಮತ್ತು ಕೃಷಿ ವಲಯಗಳಲ್ಲಿ 'ಡಬಲ್ ಡಿಫ್ಲೇಷನ್' ವಿಧಾನವನ್ನು ಅನ್ವಯಿಸಲಾಗುತ್ತಿದೆ, ಆದರೆ ಇತರ ವಲಯಗಳಲ್ಲಿ 'ಸಿಂಗಲ್ ಎಕ್ಸ್‌ಟ್ರಾಪೋಲೇಶನ್' ಅನ್ನು ಬಳಸಲಾಗುತ್ತದೆ. 'ಸಿಂಗಲ್ ಡಿಫ್ಲೇಷನ್' ಪದ್ಧತಿಯನ್ನು ಕೈಬಿಡಲಾಗಿದೆ. ಡಿಫ್ಲೇಟರ್‌ಗಳನ್ನು ಈಗ ಹೆಚ್ಚು ಸೂಕ್ಷ್ಮ ಮಟ್ಟದಲ್ಲಿ ಅನ್ವಯಿಸಲಾಗುತ್ತಿದ್ದು, 260ಕ್ಕೂ ಹೆಚ್ಚು ವಸ್ತು-ಆಧಾರಿತ ಗ್ರಾಹಕ ಬೆಲೆ ಸೂಚ್ಯಂಕಗಳನ್ನು ಇದರಲ್ಲಿ ಸೇರಿಸಲಾಗಿದೆ.

ಸಪ್ಲೈ ಮತ್ತು ಯೂಸ್ ಟೇಬಲ್‌ಗಳ ಸಂಯೋಜನೆ: ಉತ್ಪಾದನಾ-ಆಧಾರಿತ ಮತ್ತು ವೆಚ್ಚ-ಆಧಾರಿತ ಜಿಡಿಪಿ ಅಂದಾಜುಗಳ ನಡುವಿನ ವ್ಯತ್ಯಾಸಗಳನ್ನು ಕಡಿಮೆ ಮಾಡಲು ಎಸ್‌ಯುಟಿ ಚೌಕಟ್ಟನ್ನು ರಾಷ್ಟ್ರೀಯ ಲೆಕ್ಕಪತ್ರಗಳೊಂದಿಗೆ ಸಮೀಕರಿಸಲಾಗಿದೆ. ಒಟ್ಟು ಪೂರೈಕೆಯನ್ನು ಒಟ್ಟು ಬೇಡಿಕೆಯೊಂದಿಗೆ ತಾಳೆ ಮಾಡುವ ಮೂಲಕ, ಈ ವಿಧಾನವು ಆಂತರಿಕ ಸ್ಥಿರತೆಯನ್ನು ಸುಧಾರಿಸುತ್ತದೆ.

ನವೀಕರಿಸಿದ ದರಗಳು ಮತ್ತು ಅನುಪಾತಗಳು: ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ತಜ್ಞ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಿದ ಇತ್ತೀಚಿನ ಸಮೀಕ್ಷೆಗಳು ಮತ್ತು ಅಧ್ಯಯನಗಳ ಆಧಾರದ ಮೇಲೆ ಸಂಕಲನದ ನಿಯತಾಂಕಗಳನ್ನು ಪರಿಷ್ಕರಿಸಲಾಗಿದೆ.

ಬಹು-ಚಟುವಟಿಕೆಯ ಕಾರ್ಪೊರೇಷನ್‌ಗಳ ಪ್ರತ್ಯೇಕೀಕರಣ: ಈ ಹಿಂದೆ, ವೈವಿಧ್ಯಮಯ ಉದ್ಯಮಗಳಿಂದ ಬರುವ ಹೆಚ್ಚುವರಿ ಮೌಲ್ಯವನ್ನು ಅವುಗಳ ಮುಖ್ಯ ಚಟುವಟಿಕೆಗೆ ಮಾತ್ರ ನಿಗದಿಪಡಿಸಲಾಗುತ್ತಿತ್ತು. ಈಗ MGT-7/7A ಫೈಲಿಂಗ್‌ಗಳು (ಇವು ಚಟುವಟಿಕೆವಾರು ವಹಿವಾಟಿನ ಪಾಲನ್ನು ವರದಿ ಮಾಡುತ್ತವೆ) ಲಭ್ಯವಿರುವುದರಿಂದ, ಮೌಲ್ಯವರ್ಧನೆಯನ್ನು ವಿವಿಧ ಚಟುವಟಿಕೆಗಳಾದ್ಯಂತ ಹೆಚ್ಚು ನಿಖರವಾಗಿ ಹಂಚಿಕೆ ಮಾಡಲಾಗುತ್ತಿದೆ.

ಖಾಸಗಿ ಅಂತಿಮ ಬಳಕೆ ವೆಚ್ಚದ ಸುಧಾರಿತ ಅಂದಾಜು: ಇದಕ್ಕಾಗಿ ಮಿಶ್ರ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಇದು ಗೃಹ ಬಳಕೆದಾರರ ವೆಚ್ಚ ಸಮೀಕ್ಷೆಯ ಹೆಚ್ಚಿನ ಬಳಕೆ, ಉತ್ಪಾದನೆ ಮತ್ತು ಆಡಳಿತಾತ್ಮಕ ದತ್ತಾಂಶದಿಂದ ನೇರ ಅಂದಾಜು ಮತ್ತು 'ಕಮೊಡಿಟಿ ಫ್ಲೋ' ವಿಧಾನಗಳನ್ನು ಒಳಗೊಂಡಿದೆ. ನವೀಕರಿಸಿದ ಸಿಒಐಸಿಒಪಿ 2018 ವರ್ಗೀಕರಣವನ್ನೂ ಸಹ ಜಾರಿಗೆ ತರಲಾಗಿದೆ. ಸಿಒಐಸಿಒಪಿ ಎಂಬುದು ಗೃಹ ಬಳಕೆ ವೆಚ್ಚದ ಅಂತರಾಷ್ಟ್ರೀಯ ಉಲ್ಲೇಖಿತ ವರ್ಗೀಕರಣವಾಗಿದೆ.

ಪರಿಷ್ಕೃತ ಚೌಕಟ್ಟಿನ ವಲಯವಾರು ವ್ಯಾಪ್ತಿ

ಹಲವಾರು ವಲಯ-ನಿರ್ದಿಷ್ಟ ಸುಧಾರಣೆಗಳೊಂದಿಗೆ, ಪರಿಷ್ಕೃತ ತ್ರೈಮಾಸಿಕ ಸಂಕಲನ ಚೌಕಟ್ಟನ್ನು ವಲಯವಾರು ವರ್ಗೀಕರಣ, 'ಡಿಫ್ಲೇಷನ್' ತಂತ್ರಗಳು ಮತ್ತು ಅಂದಾಜು ಪದ್ಧತಿಗಳ ವಿಷಯದಲ್ಲಿ ವಾರ್ಷಿಕ ರಾಷ್ಟ್ರೀಯ ಲೆಕ್ಕಪತ್ರಗಳ ವಿಧಾನಕ್ಕೆ ಹೆಚ್ಚು ನಿಕಟವಾಗಿ ಹೊಂದಿಸಲಾಗಿದೆ. ಈ ಸಮನ್ವಯವು ತ್ರೈಮಾಸಿಕ ಮತ್ತು ವಾರ್ಷಿಕ ಜಿಡಿಪಿ ಹಾಗೂ ಒಟ್ಟು ಮೌಲ್ಯವರ್ಧನೆ  ಅಂದಾಜುಗಳ ನಡುವೆ ಹೆಚ್ಚಿನ ಸ್ಥಿರತೆಯನ್ನು ಖಚಿತಪಡಿಸುತ್ತದೆ.

ವಿಶೇಷವಾಗಿ, ಗ್ರಾಹಕ ಬೆಲೆ ಸೂಚ್ಯಂಕ, ಸಗಟು ಬೆಲೆ ಸೂಚ್ಯಂಕ , ಯುನಿಟ್ ವ್ಯಾಲ್ಯೂ ಇಂಡೆಕ್ಸ್ ಮುಂತಾದ ಡಿಫ್ಲೇಟರ್‌ಗಳನ್ನು ಹಳೆಯ ಸರಣಿಯಲ್ಲಿದ್ದಂತೆ ಒಟ್ಟಾರೆ ಮಟ್ಟದಲ್ಲಿ ಬಳಸುವ ಬದಲು, ಹೊಸ ಸರಣಿಯಲ್ಲಿ 'ವಸ್ತು-ಗುಂಪು' ಮಟ್ಟದಲ್ಲಿ ಹೆಚ್ಚು ಸೂಕ್ಷ್ಮವಾಗಿ ಬಳಸಲಾಗುತ್ತಿದೆ.

ಜಿಡಿಪಿ ಅಂದಾಜಿನಲ್ಲಿ ಮನೆಗೆಲಸದವರ  ಸೇರ್ಪಡೆ

ಮನೆಗೆಲಸಕ್ಕಾಗಿ ನೇಮಕಗೊಂಡ ಕಾರ್ಮಿಕರ ಸೇವೆಗಳನ್ನು "ಮನೆಗೆಲಸದ ಸಿಬ್ಬಂದಿಯ ಉದ್ಯೋಗದಾತರಾಗಿ ಕುಟುಂಬಗಳ ಚಟುವಟಿಕೆಗಳು" ಎಂದು ವರ್ಗೀಕರಿಸಲಾಗಿದೆ ಮತ್ತು ಇವುಗಳನ್ನು ಜಿಡಿಪಿ ಅಂದಾಜಿನಲ್ಲಿ ಸೇರಿಸಲಾಗಿದೆ. ಅಂತಹ ಕಾರ್ಮಿಕರ ಸಂಖ್ಯೆ ಮತ್ತು ಅವರ ವೇತನದ ಕುರಿತು ವಾರ್ಷಿಕವಾಗಿ ಸಂಗ್ರಹಿಸಲಾದ ದತ್ತಾಂಶವನ್ನು ಬಳಸಿಕೊಂಡು ಅವರ ಕೊಡುಗೆಯನ್ನು ಲೆಕ್ಕಹಾಕಲಾಗುತ್ತದೆ.

ಪರಿಷ್ಕೃತ ಜಿಡಿಪಿ ಸರಣಿಯಲ್ಲಿ ಡಿಜಿಟಲ್, ಪ್ಲಾಟ್‌ಫಾರ್ಮ್ ಮತ್ತು ಗಿಗ್ ಎಕಾನಮಿ ಚಟುವಟಿಕೆಗಳ ಸೇರ್ಪಡೆ

ಕಾರ್ಪೊರೇಟ್ ವಲಯದಲ್ಲಿನ ಡಿಜಿಟಲ್ ಸೇವೆಗಳು, ಮಧ್ಯವರ್ತಿ ಪ್ಲಾಟ್‌ಫಾರ್ಮ್‌ಗಳು ಮತ್ತು ಸಂಬಂಧಿತ ಚಟುವಟಿಕೆಗಳನ್ನು ಈಗಾಗಲೇ ಎಂಸಿಎ-21 ಫೈಲಿಂಗ್‌ಗಳ ಮೂಲಕ ಒಳಪಡಿಸಲಾಗಿದೆ. ಇದು ಇ-ಗವರ್ನೆನ್ಸ್ ಉಪಕ್ರಮವಾಗಿದ್ದು, ದಾಖಲೆಗಳ ಸಲ್ಲಿಕೆ, ಕಂಪನಿಗಳ ನೋಂದಣಿ ಮತ್ತು ಸುರಕ್ಷಿತ ಪೋರ್ಟಲ್ ಮೂಲಕ ಕಾರ್ಪೊರೇಟ್ ಮಾಹಿತಿಗೆ ಸಾರ್ವಜನಿಕ ಪ್ರವೇಶ ಸೇರಿದಂತೆ ಎಲ್ಲಾ ನೋಂದಣಿ ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ. ಹೊಸ ಸರಣಿಯು ಅಸಂಘಟಿತ ಉದ್ಯಮಗಳು, ಸ್ವಯಂ ಉದ್ಯೋಗಿಗಳು ಮತ್ತು ಅನೌಪಚಾರಿಕ ಕಾರ್ಮಿಕರನ್ನು ಒಳಗೊಂಡಿದ್ದು, ಅವರ ಕೊಡುಗೆಯನ್ನು ವಾರ್ಷಿಕ ಆಧಾರದ ಮೇಲೆ ಹೆಚ್ಚು ನಿಖರವಾಗಿ ಜಿಡಿಪಿಯಲ್ಲಿ ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.

ಸಾಮಾನ್ಯ ಸರ್ಕಾರಿ ವಲಯವನ್ನು  ಅಂದಾಜಿಸಲು ಪ್ರಮುಖ ದತ್ತಾಂಶ ಮೂಲಗಳು

ಸಾಮಾನ್ಯ ಸರ್ಕಾರಿ ವಲಯದ ಅಂದಾಜುಗಳನ್ನು ಪ್ರಮುಖವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ದಾಖಲೆಗಳನ್ನು ಬಳಸಿ ಸಂಕಲಿಸಲಾಗುತ್ತದೆ. ಇವುಗಳಲ್ಲಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ 'ರಸೀದಿ ಬಜೆಟ್' ಮತ್ತು 'ಅನುದಾನಗಳ ವಿವರವಾದ ಬೇಡಿಕೆಗಳು', ಹಾಗೆಯೇ ಸ್ಥಳೀಯ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ವಾರ್ಷಿಕ ಲೆಕ್ಕಪತ್ರಗಳು ಸೇರಿವೆ.

ಒಟ್ಟಾರೆಯಾಗಿ, ಈ ಸುಧಾರಣೆಗಳು ಸಾಮಾನ್ಯ ಸರ್ಕಾರಿ ವಲಯದ ಅಂದಾಜುಗಳ ನಿಖರತೆ ಮತ್ತು ಸಮಗ್ರತೆಯನ್ನು ಹೆಚ್ಚಿಸುತ್ತವೆ.

ಪೂರೈಕೆ ಮತ್ತು ಬಳಕೆ ಕೋಷ್ಟಕದ ಚೌಕಟ್ಟಿನಲ್ಲಿನ ಪ್ರಮುಖ ವ್ಯತ್ಯಾಸಗಳನ್ನು ಬಗೆಹರಿಸುವುದು

ಎಸ್‌ಯುಟಿಗಳು ಸರಕು ಮತ್ತು ಸೇವೆಗಳು ಆರ್ಥಿಕತೆಯಲ್ಲಿ ಹೇಗೆ ಚಲಿಸುತ್ತವೆ ಎಂಬುದನ್ನು ವಿವರಿಸುತ್ತವೆ. ಪೂರೈಕೆಯ ದೃಷ್ಟಿಕೋನದಲ್ಲಿ, ಉತ್ಪನ್ನಗಳು ಆರ್ಥಿಕತೆಯನ್ನು ಹೇಗೆ ಪ್ರವೇಶಿಸುತ್ತವೆ ಎಂಬುದನ್ನು ಅವು ತೋರಿಸುತ್ತವೆ—ಅದು ದೇಶೀಯ ಉತ್ಪಾದನೆಯ ಮೂಲಕವಾಗಿರಬಹುದು ಅಥವಾ ಆಮದುಗಳ ಮೂಲಕವಾಗಿರಬಹುದು. ಬಳಕೆಯ ದೃಷ್ಟಿಕೋನದಲ್ಲಿ (Use side), ಈ ಉತ್ಪನ್ನಗಳು ಹೇಗೆ ಬಳಕೆಯಾಗುತ್ತವೆ ಎಂಬುದನ್ನು ಅವು ತೋರಿಸುತ್ತವೆ—ಅಂದರೆ ಉದ್ಯಮಗಳಿಂದ ಮಧ್ಯಂತರ ಇನ್‌ಪುಟ್‌ಗಳಾಗಿ, ಕುಟುಂಬಗಳಿಂದ ಅಂತಿಮ ಬಳಕೆಯಾಗಿ, ಕುಟುಂಬಗಳಿಗೆ ಸೇವೆ ಸಲ್ಲಿಸುವ ಲಾಭರಹಿತ ಸಂಸ್ಥೆಗಳಿಂದ ಮತ್ತು ಸರ್ಕಾರದಿಂದ, ಒಟ್ಟು ಬಂಡವಾಳ ರಚನೆಯಾಗಿ ಅಥವಾ ರಫ್ತುಗಳಾಗಿ ಹೇಗೆ ಬಳಕೆಯಾಗುತ್ತವೆ ಎಂಬುದನ್ನು ಇವು ವಿವರಿಸುತ್ತವೆ.

ಪ್ರತಿಯೊಂದು ಉತ್ಪನ್ನದ ಪೂರೈಕೆಯನ್ನು ಅದರ ಬಳಕೆಯೊಂದಿಗೆ ಲಿಂಕ್ ಮಾಡುವ ಮೂಲಕ, ಎಸ್‌ಯುಟಿ ಚೌಕಟ್ಟು ಜಿಡಿಪಿ ಅಂದಾಜಿನ ಉತ್ಪಾದನೆ, ಆದಾಯ ಮತ್ತು ವೆಚ್ಚದ ವಿಧಾನಗಳನ್ನು ಸಂಯೋಜಿಸಲು ಮತ್ತು ಸಮತೋಲನಗೊಳಿಸಲು ಒಂದು ಸಮಗ್ರ ವ್ಯವಸ್ಥೆಯನ್ನು ಒದಗಿಸುತ್ತದೆ.

ಆದಾಗ್ಯೂ, ದತ್ತಾಂಶದ ವ್ಯಾಪ್ತಿಯಲ್ಲಿನ ವ್ಯತ್ಯಾಸಗಳು, ದತ್ತಾಂಶ ಲಭ್ಯತೆಯಲ್ಲಿನ ಸಮಯದ ವಿಳಂಬ, ಮುಂಗಡ ಅಂದಾಜುಗಳಿಗಾಗಿ ಪ್ರಾಕ್ಸಿ ಸೂಚಕಗಳ ಮೇಲಿನ ಅವಲಂಬನೆ ಮತ್ತು ಅಂದಾಜು ವಿಧಾನಗಳಲ್ಲಿನ ವ್ಯತ್ಯಾಸಗಳಿಂದಾಗಿ ಈ ವಿಧಾನಗಳ ನಡುವೆ ವ್ಯತ್ಯಾಸಗಳು ಉಂಟಾಗಬಹುದು.

ರಾಷ್ಟ್ರೀಯ ಲೆಕ್ಕಪತ್ರಗಳ ವ್ಯವಸ್ಥೆ 2008 (ಎಸ್‌ಎನ್‌ಎ 2008), ಇದನ್ನು ಎಸ್‌ಎನ್‌ಎ 2025 ರಲ್ಲೂ ಮುಂದುವರಿಸಲಾಗಿದ್ದು, ಇಂತಹ ವ್ಯತ್ಯಾಸಗಳನ್ನು ಹೋಗಲಾಡಿಸಲು ಎರಡು ಪ್ರಮುಖ ವಿಧಾನಗಳನ್ನು ಶಿಫಾರಸು ಮಾಡುತ್ತದೆ:

  • ಪಾರದರ್ಶಕತೆಯನ್ನು ಹೆಚ್ಚಿಸಲು ಅಧಿಕೃತ ಜಿಡಿಪಿ  ಅಂದಾಜುಗಳ ಜೊತೆಗೆ ಅಂಕಿಅಂಶಗಳ ವ್ಯತ್ಯಾಸವನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸುವುದು.
  • ಪೂರೈಕೆ ಮತ್ತು ಬಳಕೆ ಕೋಷ್ಟಕದ ಚೌಕಟ್ಟನ್ನು ಬಳಸಿಕೊಂಡು ಉತ್ಪಾದನೆ/ಆದಾಯ ಮತ್ತು ಉತ್ಪಾದನಾ ಅಂದಾಜುಗಳನ್ನು ಸಮನ್ವಯಗೊಳಿಸುವುದು, ಇದು ವಿವಿಧ ದತ್ತಾಂಶಗಳ ನಡುವಿನ ಸ್ಥಿರತೆಯನ್ನು ಬಲಪಡಿಸುತ್ತದೆ.

ಹೊಸ ಜಿಡಿಪಿ (GDP) ಸರಣಿಯಲ್ಲಿ, SUT ಚೌಕಟ್ಟನ್ನು ವ್ಯವಸ್ಥಿತವಾಗಿ ಸಂಕಲನ ಪ್ರಕ್ರಿಯೆಯಲ್ಲಿ ಸಂಯೋಜಿಸಲಾಗುತ್ತಿದೆ. "ಉತ್ಪನ್ನ-ಸಮತೋಲನ"  ತತ್ವವನ್ನು ಅನ್ವಯಿಸುವ ಮೂಲಕ (ಅಂದರೆ ಒಟ್ಟು ಪೂರೈಕೆಯು ಒಟ್ಟು ಬಳಕೆಗೆ ಸಮನಾಗಿರುವುದನ್ನು ಖಚಿತಪಡಿಸಿಕೊಳ್ಳುವುದು), ಈ ಚೌಕಟ್ಟು ಉತ್ಪಾದನೆ ಮತ್ತು ವೆಚ್ಚದ ಅಂದಾಜುಗಳ ನಡುವಿನ ವ್ಯತ್ಯಾಸಗಳನ್ನು ಸಮನ್ವಯಗೊಳಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ, ಅಂತಿಮ ಅಂದಾಜುಗಳಲ್ಲಿನ ಸಾಂಖ್ಯಿಕ ವ್ಯತ್ಯಾಸಗಳು ಬಗೆಹರಿಯುತ್ತವೆ, ಇದು ಆಂತರಿಕವಾಗಿ ಸ್ಥಿರವಾದ ಮತ್ತು ಹೆಚ್ಚು ವಿಶ್ವಾಸಾರ್ಹವಾದ ಜಿಡಿಪಿ ಅಂಕಿಅಂಶಗಳಿಗೆ ದಾರಿ ಮಾಡಿಕೊಡುತ್ತದೆ.

ಜಿಎಸ್‌ಡಿಪಿ ಅಂದಾಜಿನಲ್ಲಿ ಸ್ಥಿರತೆ ಮತ್ತು ಕಾರ್ಯವಿಧಾನದ ಬಲವನ್ನು ಖಚಿತಪಡಿಸುವುದು

ಒಂದು ವರ್ಷದ ಅವಧಿಯಲ್ಲಿ ರಾಜ್ಯದ ಭೌಗೋಳಿಕ ಗಡಿಯೊಳಗೆ ಉತ್ಪಾದಿಸಲಾದ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವೇ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ.

ಎಂಒಎಸ್‌ಪಿಐ ಅಡಿಯಲ್ಲಿರುವ ಎನ್‌ಎಸ್‌ಒ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅಂದಾಜಿಗಾಗಿ ಮಾರ್ಗಸೂಚಿಗಳನ್ನು ನೀಡುತ್ತದೆ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ. ಇದು ರಾಷ್ಟ್ರೀಯ ಲೆಕ್ಕಪತ್ರಗಳಿಗೆ ಅನುಗುಣವಾಗಿ ಏಕರೂಪದ ವ್ಯಾಖ್ಯಾನಗಳು, ಪರಿಕಲ್ಪನೆಗಳು ಮತ್ತು ಕಾರ್ಯವಿಧಾನಗಳನ್ನು ಬಳಸಿ ಜಿಎಸ್‌ಡಿಪಿ ಸಂಕಲನಗೊಳ್ಳುವುದನ್ನು ಖಚಿತಪಡಿಸುತ್ತದೆ. ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯಗಳು ಹೆಚ್ಚಾಗಿ ಸಾಮಾನ್ಯ ದತ್ತಾಂಶ ಮೂಲಗಳಿಂದ ಪಡೆದ ರಾಜ್ಯ-ನಿರ್ದಿಷ್ಟ ದತ್ತಾಂಶವನ್ನು ಬಳಸಿ ತಮ್ಮ ಜಿಎಸ್‌ಡಿಪಿ ಅಂದಾಜುಗಳನ್ನು ಸಿದ್ಧಪಡಿಸುತ್ತವೆ.

ಪ್ರಮುಖ ಕಾರ್ಯವಿಧಾನದ ಸುಧಾರಣೆಗಳೊಂದಿಗೆ ಹೊಸ ಮೂಲ ವರ್ಷದ ಜಿಎಸ್‌ಡಿಪಿ ಸರಣಿಯ ಬಿಡುಗಡೆ: ಹೊಸ ಮೂಲ ವರ್ಷ 2022–23 ರ ಜಿಡಿಪಿ  ಬಿಡುಗಡೆಯಾದ ನಂತರ, ಎನ್‌ಎಸ್‌ಒ ಮತ್ತು ಎಂಒಎಸ್‌ಪಿಐ  ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯವಾದ ಕಾರ್ಯವಿಧಾನದ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ತಿಳಿಸುತ್ತವೆ, ಇದರಿಂದ ಅವು ತಮ್ಮ ಜಿಎಸ್‌ಡಿಪಿ ಅಂದಾಜುಗಳನ್ನು ಅದರಂತೆ ಪರಿಷ್ಕರಿಸಲು ಸಾಧ್ಯವಾಗುತ್ತದೆ.

  • ಕೆಲವು ವಲಯಗಳು ಅಥವಾ ಉಪ-ವಲಯಗಳಿಗೆ 'ಹಂಚಿಕೆ-ಆಧಾರಿತ' ವಿಧಾನಗಳ ಬದಲು 'ನೇರ ಅಂದಾಜು' ವಿಧಾನಕ್ಕೆ ಆದ್ಯತೆ ನೀಡುವುದು.
  • ಸ್ಥಿರ ಅನುಪಾತಗಳು ಮತ್ತು ಪ್ರಾಕ್ಸಿ (ಅಂದಾಜು) ಸೂಚಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು.
  • ರಾಜ್ಯ ಮಟ್ಟದ ಆರ್ಥಿಕ ದತ್ತಾಂಶದ ಉತ್ತಮ ಬಳಕೆ ಮತ್ತು ರಾಜ್ಯಗಳಾದ್ಯಂತ ಕಾರ್ಯವಿಧಾನದ ಸ್ಥಿರತೆಯನ್ನು ಹೆಚ್ಚಿಸುವುದು. ಒಟ್ಟಾರೆಯಾಗಿ, ಈ ಕ್ರಮಗಳು ಜಿಎಸ್‌ಡಿಪಿ ಅಂದಾಜುಗಳ ನಿಖರತೆ ಮತ್ತು ಹೋಲಿಕೆಯನ್ನು ಬಲಪಡಿಸುತ್ತವೆ.

ಮುಂದಿನ ಹಾದಿ ಜಿಡಿಪಿ ಅಂದಾಜುಗಳ ಮೂಲ ವರ್ಷವನ್ನು 2022-23ಕ್ಕೆ, ಗ್ರಾಹಕ ಬೆಲೆ ಸೂಚ್ಯಂಕದ  ಮೂಲ ವರ್ಷವನ್ನು 2024ಕ್ಕೆ ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಮೂಲ ವರ್ಷವನ್ನು 2022-23ಕ್ಕೆ ಪರಿಷ್ಕರಿಸುವುದರೊಂದಿಗೆ, ಭಾರತದ ಸಾಂಖ್ಯಿಕ ವ್ಯವಸ್ಥೆಯು ಸಮಗ್ರ ಆಧುನೀಕರಣಕ್ಕೆ ಒಳಗಾಗುತ್ತಿದೆ.

ಈ ವೇಗವನ್ನು ಮುಂದುವರಿಸುತ್ತಾ, ಸಗಟು ಬೆಲೆ ಸೂಚ್ಯಂಕದ  ಮೂಲ ವರ್ಷದ ಪರಿಷ್ಕರಣೆಯೂ ಪ್ರಗತಿಯಲ್ಲಿದೆ. ನವೀಕರಿಸಿದ ಡಬ್ಲುಪಿಐ ಲಭ್ಯವಾಗುವವರೆಗೆ, ಈಗಿರುವ ಡಬ್ಲುಪಿಐ ಅನ್ನೇ 'ಡಿಫ್ಲೇಟರ್' ಆಗಿ ಬಳಸುವುದನ್ನು ಮುಂದುವರಿಸಲಾಗುವುದು. ಹೆಚ್ಚುವರಿಯಾಗಿ, ಎಂಒಎಸ್‌ಪಿಐ ಮುಂದಿನ ದಿನಗಳಲ್ಲಿ ಉತ್ಪಾದಕರ ಬೆಲೆ ಸೂಚ್ಯಂಕವನ್ನು  ಅಳವಡಿಸಲು ಯೋಜಿಸಿದೆ. ಪಿಪಿಐ ಉತ್ಪಾದಕರಿಂದ ಖರೀದಿಸಲ್ಪಟ್ಟ ಮತ್ತು ಮಾರಾಟವಾಗುವ ಸರಕು ಮತ್ತು ಸೇವೆಗಳ ಬೆಲೆಗಳಲ್ಲಿನ ಬದಲಾವಣೆಯ ದರವನ್ನು ಅಳೆಯುತ್ತದೆ.

ಮುಂದಿನ ಕೆಲವು ತಿಂಗಳಲ್ಲಿ ಬಿಡುಗಡೆಯಾಗಲಿರುವ ಇತರ ದತ್ತಾಂಶಗಳು

  • ಅಂದಾಜುಗಳ ಸಂಕಲನದಲ್ಲಿ ಬಳಸಲಾದ ಕಾರ್ಯವಿಧಾನ ಮತ್ತು ದತ್ತಾಂಶ ಮೂಲಗಳನ್ನು ಎಂಒಎಸ್‌ಪಿಐನ ಪ್ರಕಟಣೆಯಾದ 'ಸೋರ್ಸಸ್ ಅಂಡ್ ಮೆಥಡ್ಸ್' ನಲ್ಲಿ ಪ್ರಸ್ತುತಪಡಿಸಲಾಗುವುದು ಮತ್ತು ಇದು ಮುಂದಿನ ಕೆಲವು ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ನಿಮಗೆ ಗೊತ್ತೇ?

ಅಂತರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ಸಾಂಖ್ಯಿಕ ಚೌಕಟ್ಟಾದ 2008ರ ರಾಷ್ಟ್ರೀಯ ಲೆಕ್ಕಪತ್ರಗಳ ವ್ಯವಸ್ಥೆ  (ಎಸ್‌ಎನ್‌ಎ 2008) ಗೆ ಅನುಗುಣವಾಗಿ ಭಾರತವು ತನ್ನ ಜಿಡಿಪಿ ಅಂದಾಜುಗಳನ್ನು ಸಿದ್ಧಪಡಿಸುತ್ತದೆ. ವಿಶ್ವಸಂಸ್ಥೆಯ ಸಾಂಖ್ಯಿಕ ವಿಭಾಗವು ಈಗ ಎಸ್‌ಎನ್‌ಎ 2025 ಕ್ಕೆ ಬದಲಾಗುತ್ತಿದ್ದು (ಇದು 2029-30 ರ ಸುಮಾರಿಗೆ ಜಾಗತಿಕವಾಗಿ ಅಳವಡಿಕೆಯಾಗುವ ನಿರೀಕ್ಷೆಯಿದೆ), ಭಾರತವು ತನ್ನ ಮುಂದಿನ ಮೂಲ ವರ್ಷದ ಪರಿಷ್ಕರಣೆಯ ಸಮಯದಲ್ಲಿ ಈ ನವೀಕರಿಸಿದ ಮಾನದಂಡಕ್ಕೆ ಅನುಗುಣವಾಗಿ ಬದಲಾಗಲು ಉದ್ದೇಶಿಸಿದೆ.

ಹೆಚ್ಚುವರಿಯಾಗಿ, ಅಂತರಾಷ್ಟ್ರೀಯ ಹಣಕಾಸು ನಿಧಿಯ ವಿಶೇಷ ದತ್ತಾಂಶ ಪ್ರಸರಣ ಮಾನದಂಡಕ್ಕೆ  ಚಂದಾದಾರರಾಗಿರುವ ಭಾರತವು, ಸಾಂಖ್ಯಿಕ ಗುಣಮಟ್ಟ ಮತ್ತು ಪಾರದರ್ಶಕತೆಯ ಜಾಗತಿಕ ಮಾನದಂಡಗಳನ್ನು ಪಾಲಿಸುತ್ತದೆ. ಪರಿಷ್ಕೃತ ಜಿಡಿಪಿ ಸರಣಿಯು ಅಂತರಾಷ್ಟ್ರೀಯ ಸಾಂಖ್ಯಿಕ ಮಾನದಂಡಗಳೊಂದಿಗೆ ಸಂಪೂರ್ಣವಾಗಿ ಸ್ಥಿರವಾಗಿದೆ.

ಡಿಸೆಂಬರ್ 2026ರ ವೇಳೆಗೆ ಹಳೆಯ ಸರಣಿಯ ದತ್ತಾಂಶಗಳನ್ನು  ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಸ್ಥಾಪಿತ ಪದ್ಧತಿಯ ಪ್ರಕಾರ, ಪರಿಷ್ಕೃತ ಕಾರ್ಯವಿಧಾನವನ್ನು ಬಳಸಿ ಹಿಂದಿನ ಮೂಲ ವರ್ಷದವರೆಗೆ ಅಂದಾಜುಗಳನ್ನು ಮರುಲೆಕ್ಕಾಚಾರ ಮಾಡಲಾಗುತ್ತದೆ ಮತ್ತು ನಂತರ 1950-51ರವರೆಗಿನ ಸರಣಿಯನ್ನು ವಿಸ್ತರಿಸಲು ಅವುಗಳನ್ನು ಸೂಕ್ಷ್ಮ ಮಟ್ಟದಲ್ಲಿ ಲಿಂಕ್ ಮಾಡಲಾಗುತ್ತದೆ.

ತೀರ್ಮಾನ

ಹಣಕಾಸು ವರ್ಷ 2025-26ರಲ್ಲಿ ಭಾರತದ ನೈಜ ಜಿಡಿಪಿ 7.6% ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಭಾರತೀಯ ಆರ್ಥಿಕತೆಯು ಬಲವಾದ ಮತ್ತು ಸುಸ್ಥಿರ ವಿಸ್ತರಣೆಯನ್ನು ದಾಖಲಿಸಲು ಸಜ್ಜಾಗಿದೆ. ಈ ಸದೃಢ ಸಾಧನೆಯು ಭಾರತದ ಬೆಳವಣಿಗೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಉತ್ಪಾದಕತೆ, ಚೇತರಿಸಿಕೊಳ್ಳುವ ಸಾಮರ್ಥ್ಯ ಹಾಗೂ ಅಂತರ್ಗತ ಅಭಿವೃದ್ಧಿಯ ಗುರಿಯನ್ನು ಹೊಂದಿರುವ 'ವಿಕಸಿತ ಭಾರತ'ದ  ದಾರಿಯನ್ನು ಬಲಪಡಿಸುತ್ತದೆ.

ಈ ನಿಟ್ಟಿನಲ್ಲಿ, ಜಿಡಿಪಿ ಮೂಲ ವರ್ಷವನ್ನು 2022-23ಕ್ಕೆ ಪರಿಷ್ಕರಿಸಿರುವುದು ವೇಗವಾಗಿ ಬದಲಾಗುತ್ತಿರುವ ಆರ್ಥಿಕತೆಯ ವಾಸ್ತವಗಳೊಂದಿಗೆ ಭಾರತದ ರಾಷ್ಟ್ರೀಯ ಲೆಕ್ಕಪತ್ರಗಳನ್ನು ಹೊಂದಾಣಿಕೆ ಮಾಡುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಸುಧಾರಿತ ದತ್ತಾಂಶ ಮೂಲಗಳನ್ನು ಸಂಯೋಜಿಸುವ ಮೂಲಕ, ಕಾರ್ಯವಿಧಾನದ ಚೌಕಟ್ಟುಗಳನ್ನು ಬಲಪಡಿಸುವ ಮೂಲಕ, ಉದಯೋನ್ಮುಖ ವಲಯಗಳ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಮತ್ತು SUT ಚೌಕಟ್ಟಿನ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸುವ ಮೂಲಕ, ಹೊಸ ಸರಣಿಯು ಆರ್ಥಿಕ ಚಟುವಟಿಕೆಯ ಹೆಚ್ಚು ನಿಖರವಾದ, ಸ್ಥಿರವಾದ ಮತ್ತು ಸಮಗ್ರವಾದ ಮಾಪನವನ್ನು ಒದಗಿಸುತ್ತದೆ.

ಭಾರತದ ಸಾಂಖ್ಯಿಕ ವ್ಯವಸ್ಥೆಯು ಹೆಚ್ಚಿನ ನಿಖರತೆ, ಹೋಲಿಕೆ ಮತ್ತು ಜಾಗತಿಕ ಗುಣಮಟ್ಟದತ್ತ ಸಾಗುತ್ತಿದೆ. ಒಟ್ಟಾರೆಯಾಗಿ, ಈ ಪ್ರಯತ್ನಗಳು ಅಧಿಕೃತ ಅಂಕಿಅಂಶಗಳ ವಿಶ್ವಾಸಾರ್ಹತೆಯನ್ನು ಬಲಪಡಿಸುತ್ತವೆ ಮತ್ತು ಮಾಹಿತಿ ಆಧಾರಿತ ನೀತಿ ನಿರೂಪಣೆ ಹಾಗೂ ಸುಸ್ಥಿರ ಆರ್ಥಿಕ ಯೋಜನೆಗೆ ದೃಢವಾದ ಅಡಿಪಾಯವಾಗಿ ತಮ್ಮ ಪಾತ್ರವನ್ನು ಪುನರುಚ್ಚರಿಸುತ್ತವೆ.

References

Ministry of Statistics & Programme Implementation

https://www.pib.gov.in/PressReleasePage.aspx?PRID=2129126&reg=3&lang=2

https://www.mospi.gov.in/uploads/latestReleases/latest_release_1771587946242_979ab984-ab1d-4f5f-b412-66cff02f8e9d_Press_note_for_Release_of_Report_of_Committee_on_Constant_Price_Estimates.pdf

Ministry of Finance

https://pfms.nic.in/Home.aspx

Ministry of Corporate Affairs

https://www.pib.gov.in/newsite/erelcontent.aspx?relid=52614&reg=3&lang=2

European Union

https://ec.europa.eu/eurostat/statistics-explained/index.php?title=Beginners:GDP_-_What_is_gross_domestic_product_(GDP)

Open Government Data Platform India

https://www.data.gov.in/catalog/final-consumption-expenditure-constant-prices

PIB Archives

https://www.pib.gov.in/PressReleasePage.aspx?PRID=2219549&reg=3&lang=1

https://www.pib.gov.in/PressNoteDetails.aspx?NoteId=155121&ModuleId=3&reg=3&lang=2

Office for National Statistics

https://www.ons.gov.uk/economy/inflationandpriceindices/methodologies/deflatorsandhowweusethemineconomicestimates

United Nations

https://unstats.un.org/unsd/classifications/unsdclassifications/COICOP_2018_-_pre-edited_white_cover_version_-_2018-12-26.pdf

Click here to see pdf 

 

*****

(Explainer ID: 157612) आगंतुक पटल : 54
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Gujarati , Malayalam