Culture & Tourism
ಪ್ರವಾಸೋದ್ಯಮ ಮತ್ತು ಬೆಳವಣಿಗೆಯ ವಾಸ್ತುಶಿಲ್ಪ
ಬಜೆಟ್ 2026-27 ಸರಣಿ
Posted On:
24 FEB 2026 11:51AM
ಪ್ರಮುಖ ಅಂಶಗಳು
- ಈಶಾನ್ಯ ರಾಜ್ಯಗಳ ಅಭಿವೃದ್ಧಿ: ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ರಾಜ್ಯಗಳಲ್ಲಿ ದೇವಾಲಯಗಳು ಮತ್ತು ಮಠಗಳ ಸಂರಕ್ಷಣೆ, ಯಾತ್ರಾ ಕೇಂದ್ರಗಳ ಸ್ಥಾಪನೆ ಹಾಗೂ ಸಂಪರ್ಕ ಮತ್ತು ಸೌಕರ್ಯಗಳನ್ನು ಸುಧಾರಿಸಲು ಬಜೆಟ್ 2026–27 ಪ್ರಸ್ತಾಪಿಸಿದೆ.
- ಜಾಗತಿಕ ಬಿಗ್ ಕ್ಯಾಟ್ ಶೃಂಗಸಭೆ ಭಾರತವು ಮೊದಲ 'ಜಾಗತಿಕ ಬಿಗ್ ಕ್ಯಾಟ್ ಶೃಂಗಸಭೆ'ಯನ್ನು ಆಯೋಜಿಸಲಿದೆ. ಇದು 95 ದೇಶಗಳ ನಾಯಕರು ಮತ್ತು ಸಚಿವರನ್ನು ಒಟ್ಟುಗೂಡಿಸಲಿದ್ದು, ಪರಿಸರ ಪ್ರವಾಸೋದ್ಯಮ ರಾಜತಾಂತ್ರಿಕತೆಯಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸಲಿದೆ.
- ಪೂರ್ವೋದಯ ಪ್ರವಾಸೋದ್ಯಮ: ಪೂರ್ವೋದಯ ರಾಜ್ಯಗಳಾದ್ಯಂತ ಐದು ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಉತ್ತಮ ಸಂಪರ್ಕಕ್ಕಾಗಿ 4,000 ಇ-ಬಸ್‌ಗಳನ್ನು ಒದಗಿಸಲಾಗುವುದು.
- ವೈದ್ಯಕೀಯ ಪ್ರವಾಸೋದ್ಯಮ: ಭಾರತವನ್ನು ವೈದ್ಯಕೀಯ ಪ್ರವಾಸೋದ್ಯಮ ಸೇವೆಗಳ ಕೇಂದ್ರವನ್ನಾಗಿ ಉತ್ತೇಜಿಸಲು ಐದು ಪ್ರಾದೇಶಿಕ ವೈದ್ಯಕೀಯ ಹಬ್‌ಗಳನ್ನು ಸ್ಥಾಪಿಸಲಾಗುವುದು.
- ಪುರಾತತ್ವ ತಾಣಗಳ ಅಭಿವೃದ್ಧಿ: ಲೋಥಲ್, ಧೋಲಾವಿರಾ, ರಾಖಿಗರ್ಹಿ, ಆದಿಚನಲ್ಲೂರು, ಸಾರನಾಥ, ಹಸ್ತಿನಾಪುರ ಮತ್ತು ಲೇಹ್ ಅರಮನೆ ಸೇರಿದಂತೆ 15 ಪುರಾತತ್ವ ತಾಣಗಳನ್ನು ರೋಮಾಂಚಕ ಮತ್ತು ಸಾಂಸ್ಕೃತಿಕ ಅನುಭವ ನೀಡುವ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು.
|
ಪೀಠಿಕೆ
ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ ಗಳಿಕೆ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಅಪಾರ ಸಾಮರ್ಥ್ಯವನ್ನು ಹೊಂದಿರುವ ಪ್ರವಾಸೋದ್ಯಮವು ಭಾರತೀಯ ಆರ್ಥಿಕತೆಯ ಪ್ರಮುಖ ವಲಯವಾಗಿದೆ. ಅತಿಥ್ಯ, ಸಾರಿಗೆ, ಕರಕುಶಲ ವಸ್ತುಗಳು ಮತ್ತು ಪೂರಕ ಸೇವೆಗಳಾದ್ಯಂತ ಜೀವನೋಪಾಯವನ್ನು ಸೃಷ್ಟಿಸುವ ಸಾಮರ್ಥ್ಯ ಮತ್ತು ಬಲವಾದ ಮಲ್ಟಿಪ್ಲೈಯರ್ ಎಫೆಕ್ಟ್ ಹೊಂದಿರುವ ಕಾರಣದಿಂದಾಗಿ, ಕೇಂದ್ರ ಬಜೆಟ್ 2026-27ರಲ್ಲಿ ಪ್ರವಾಸೋದ್ಯಮವನ್ನು ಒಂದು ಆಯಕಟ್ಟಿನ ಬೆಳವಣಿಗೆಯ ಚಾಲಕ ಎಂದು ಗುರುತಿಸಲಾಗಿದೆ.
ಪ್ರವಾಸೋದ್ಯಮ ಸಚಿವಾಲಯದ 'ಇಂಡಿಯಾ ಟೂರಿಸಂ ಡೇಟಾ ಕಾಂಪೆಂಡಿಯಂ 2025' ವರದಿಯ ಪ್ರಕಾರ, ಈ ಕ್ಷೇತ್ರವು ಭಾರತದ ಒಟ್ಟು ಜಿಡಿಪಿಗೆ ಶೇಕಡಾ 5.22% ರಷ್ಟು (ಒಟ್ಟು ಪ್ರಭಾವ) ಕೊಡುಗೆ ನೀಡುತ್ತಿದ್ದು, ಇದರಲ್ಲಿ ಶೇಕಡಾ 2.72% ರಷ್ಟು ನೇರ ಪಾಲಾಗಿದೆ. ಅಲ್ಲದೆ, ಇದು ಒಟ್ಟು ಉದ್ಯೋಗಾವಕಾಶಗಳಲ್ಲಿ ಶೇಕಡಾ 13.34% ರಷ್ಟು ಬೆಂಬಲ ನೀಡುತ್ತಿದ್ದು, ಶೇಕಡಾ 5.82% ರಷ್ಟು ನೇರ ಉದ್ಯೋಗದ ಪಾಲನ್ನು ಹೊಂದಿದೆ. ಇದು ಜೀವನೋಪಾಯದ ಸೃಷ್ಟಿ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮ ವಲಯದ ಪ್ರಬಲ ಪಾತ್ರವನ್ನು ಪ್ರತಿಬಿಂಬಿಸುತ್ತದೆ.

ಈ ಆರ್ಥಿಕ ಆದ್ಯತೆಯನ್ನು ಪ್ರತಿಬಿಂಬಿಸುವಂತೆ, ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸಲು, ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಪ್ರವಾಸಿ ತಾಣಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಬಜೆಟ್ ಸರಣಿ ಉದ್ದೇಶಿತ ಮಧ್ಯಸ್ಥಿಕೆಗಳನ್ನು ಪ್ರಸ್ತಾಪಿಸಿದೆ.
ಕೌಶಲ್ಯದ ಕೊರತೆಯನ್ನು ನೀಗಿಸಲು ಮತ್ತು ಶೈಕ್ಷಣಿಕ ತರಬೇತಿಯನ್ನು ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ರೂಪಿಸಲು 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ' ಸ್ಥಾಪನೆಯು ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ. ಇದರೊಂದಿಗೆ, ಪ್ರಮುಖ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐತಿಹಾಸಿಕ ಮತ್ತು ಪ್ರಸಿದ್ಧ ತಾಣಗಳಲ್ಲಿನ 10,000 ಪ್ರವಾಸಿ ಮಾರ್ಗದರ್ಶಿಗಳಿಗೆ ಮರು-ಕೌಶಲ್ಯ ನೀಡುವ ಪ್ರಾಯೋಗಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕ್ರಮಗಳು ಕಾರ್ಯಪಡೆಯ ಉತ್ಪಾದಕತೆಯನ್ನು ಸುಧಾರಿಸುವ ಮತ್ತು ಪ್ರಮುಖ ಪ್ರವಾಸೋದ್ಯಮ ವಲಯಗಳಲ್ಲಿ ಸಂದರ್ಶಕರ ಅನುಭವವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿವೆ.
ಬಜೆಟ್ ತಾಣಗಳ ಅಭಿವೃದ್ಧಿ ಮತ್ತು ವಲಯದ ಆಧುನೀಕರಣದ ಮೇಲೆಯೂ ಗಮನ ಹರಿಸಿದೆ. ಇದಕ್ಕಾಗಿ ಪರಂಪರೆ ಮತ್ತು ಅನುಭವದ ತಾಣಗಳ ಅಭಿವೃದ್ಧಿ, ಪ್ರವಾಸೋದ್ಯಮ ಸ್ವತ್ತುಗಳಿಗಾಗಿ ಡಿಜಿಟಲ್ ಜ್ಞಾನ ಗ್ರಿಡ್‌ಗಳ ರಚನೆ ಹಾಗೂ ಪ್ರಕೃತಿ ಆಧಾರಿತ ಮತ್ತು ವನ್ಯಜೀವಿ ಪ್ರವಾಸೋದ್ಯಮದ ಉತ್ತೇಜನಕ್ಕೆ ಪ್ರಸ್ತಾಪಗಳನ್ನು ಮಂಡಿಸಲಾಗಿದೆ. ಮೂಲಸೌಕರ್ಯ ಮತ್ತು ಸಂಪರ್ಕದ ಸುಧಾರಣೆಗಳು ದೂರದ ಮತ್ತು ಉದಯೋನ್ಮುಖ ತಾಣಗಳನ್ನು ಪ್ರವಾಸೋದ್ಯಮ ಮೌಲ್ಯ ಸರಪಳಿಯಲ್ಲಿ ಮತ್ತಷ್ಟು ಸಂಯೋಜಿಸುವ ನಿರೀಕ್ಷೆಯಿದೆ, ಆ ಮೂಲಕ ಸ್ಥಳೀಯ ಉದ್ಯಮಶೀಲತೆ ಮತ್ತು ಪ್ರಾದೇಶಿಕ ಆರ್ಥಿಕತೆಗೆ ಬೆಂಬಲ ನೀಡಲಿವೆ.
ಒಟ್ಟಾರೆಯಾಗಿ, ಕೇಂದ್ರ ಬಜೆಟ್ 2026-27 ಭಾರತದ ಆರ್ಥಿಕ ಚೌಕಟ್ಟಿನಲ್ಲಿ ಪ್ರವಾಸೋದ್ಯಮವನ್ನು ಚೇತರಿಸಿಕೊಳ್ಳುವ ಮತ್ತು ಹೆಚ್ಚಿನ ಪ್ರಭಾವ ಬೀರುವ ವಲಯವಾಗಿ ಗುರುತಿಸಿದೆ. ಇದು ಉದ್ಯೋಗ ಸೃಷ್ಟಿ, ಹೂಡಿಕೆ ಉತ್ತೇಜನ ಮತ್ತು ಎಲ್ಲಾ ಪ್ರದೇಶಗಳಲ್ಲಿ ಸುಸ್ಥಿರ ಬೆಳವಣಿಗೆಯ ಮೇಲೆ ಸ್ಪಷ್ಟವಾದ ಗಮನವನ್ನು ಕೇಂದ್ರೀಕರಿಸಿದೆ.
ಕೇಂದ್ರ ಬಜೆಟ್ 2026-27 ಘೋಷಣೆಗಳು
ವಿಷಯಾಧಾರಿತ ಮತ್ತು ತಾಣ-ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿ
ಆಧ್ಯಾತ್ಮಿಕ ಪ್ರವಾಸೋದ್ಯಮದ ಬೆಳೆಯುತ್ತಿರುವ ಪ್ರಾಮುಖ್ಯತೆ ಮತ್ತು ಈಶಾನ್ಯ ವಲಯದ ಶ್ರೀಮಂತ ಬೌದ್ಧ ಪರಂಪರೆಯನ್ನು ಗುರುತಿಸಿರುವ ಸರ್ಕಾರವು, 'ಈಶಾನ್ಯ ವಲಯದಲ್ಲಿ ಬೌದ್ಧ ಸರ್ಕ್ಯೂಟ್‌ಗಳ ಅಭಿವೃದ್ಧಿಗಾಗಿ ಹೊಸ ಯೋಜನೆ'ಯನ್ನು ಘೋಷಿಸಿದೆ. ಈ ಉಪಕ್ರಮವು ಪ್ರಮುಖ ಬೌದ್ಧ ತಾಣಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಜಾಗತಿಕ ಬೌದ್ಧ ಪ್ರವಾಸೋದ್ಯಮ ಭೂಪಟದಲ್ಲಿ ಈ ವಲಯವನ್ನು ಒಂದು ಪ್ರಮುಖ ತಾಣವನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ.

ಈ ಯೋಜನೆಯು ಅರುಣಾಚಲ ಪ್ರದೇಶ, ಅಸ್ಸಾಂ, ಸಿಕ್ಕಿಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ರಾಜ್ಯಗಳನ್ನು ಒಳಗೊಂಡಿರಲಿದ್ದು, ಇಲ್ಲಿ ಐತಿಹಾಸಿಕ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ ಹಲವಾರು ಬೌದ್ಧ ತಾಣಗಳಿವೆ. ಈ ಯೋಜನೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ: ದೇವಸ್ಥಾನ ಮತ್ತು ಮಠಗಳ ಸಂರಕ್ಷಣೆ ಮತ್ತು ಅಭಿವೃದ್ಧಿ, ಯಾತ್ರಾ ವ್ಯಾಖ್ಯಾನ ಕೇಂದ್ರಗಳ ಸ್ಥಾಪನೆ, ಪ್ರಮುಖ ಬೌದ್ಧ ತಾಣಗಳಿಗೆ ಸಂಪರ್ಕ ವ್ಯವಸ್ಥೆಯ ಸುಧಾರಣೆ ಹಾಗೂ ಯಾತ್ರಿಕರಿಗೆ ಅಗತ್ಯವಿರುವ ಮೂಲಸೌಕರ್ಯ ಮತ್ತು ಪರಂಪರೆ ಸಂಬಂಧಿತ ಸೌಲಭ್ಯಗಳ ಸೃಷ್ಟಿ. ಈ ಉಪಕ್ರಮವು ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ, ದೇಶೀಯ ಮತ್ತು ಅಂತರಾಷ್ಟ್ರೀಯ ಯಾತ್ರಿಕರನ್ನು ಆಕರ್ಷಿಸುವ ಮತ್ತು ಈಶಾನ್ಯ ರಾಜ್ಯಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸುಸ್ಥಿರ ರೀತಿಯಲ್ಲಿ ಕೊಡುಗೆ ನೀಡುವ ನಿರೀಕ್ಷೆಯಿದೆ.
- ಇಂದಿನವರೆಗೆ, ಸ್ವದೇಶ್ ದರ್ಶನ್ ಯೋಜನೆಯಡಿ ಒಟ್ಟು ₹5,290.33 ಕೋಟಿ ಅನುಮೋದಿತ ವೆಚ್ಚದಲ್ಲಿ 76 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಇವುಗಳಲ್ಲಿ 75 ಯೋಜನೆಗಳು ಭೌತಿಕವಾಗಿ ಪೂರ್ಣಗೊಂಡಿದ್ದು, ಇದು ದೇಶಾದ್ಯಂತ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವಲ್ಲಿನ ಗಮನಾರ್ಹ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.
ಬಜೆಟ್ ಪ್ರಕೃತಿ ಆಧಾರಿತ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ದು, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಪೂರ್ವ ಘಟ್ಟದ ಅರಕು ಕಣಿವೆ ಮತ್ತು ಪಶ್ಚಿಮ ಘಟ್ಟದ ಪೋಧಿಗೈ ಮಲೈನಲ್ಲಿ ಪರಿಸರ ಸ್ನೇಹಿ ಪರ್ವತ ಮತ್ತು ಪ್ರಕೃತಿ ಪಥಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿದೆ. ಒಡಿಶಾ, ಕರ್ನಾಟಕ ಮತ್ತು ಕೇರಳದ ಕರಾವಳಿ ತೀರದ ಪ್ರಮುಖ ಆಮೆ ಗೂಡುಕಟ್ಟುವ ತಾಣಗಳಲ್ಲಿ 'ಟಾರ್ಟಲ್ ಟ್ರಯಲ್ಸ್' ಮತ್ತು ಆಂಧ್ರಪ್ರದೇಶದ ಪುಲಿಕಾಟ್ ಸರೋವರದ ಉದ್ದಕ್ಕೂ ಪಕ್ಷಿ ವೀಕ್ಷಣಾ ಪಥಗಳಂತಹ ಉಪಕ್ರಮಗಳು ಭಾರತದ ಜೀವವೈವಿಧ್ಯತೆಯನ್ನು ಬಳಸಿಕೊಳ್ಳುವ ಮತ್ತು ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.
- ಇದರ ಜೊತೆಗೆ, ಹೈಸ್ಪೀಡ್ ರೈಲು ಮತ್ತು ದೂರದ ಪ್ರದೇಶಗಳಿಗೆ ಸುಧಾರಿತ ಪ್ರವೇಶ ಸೇರಿದಂತೆ ರೈಲ್ವೆ ಮತ್ತು ಪ್ರಾದೇಶಿಕ ಸಂಪರ್ಕದ ವಿಸ್ತರಣೆಯು ಪ್ರವಾಸೋದ್ಯಮದ ಚಲನಶೀಲತೆಯನ್ನು ಸುಲಭಗೊಳಿಸುವ ಮತ್ತು ಉದಯೋನ್ಮುಖ ಹಾಗೂ ಸ್ಥಾಪಿತ ಪ್ರವಾಸಿ ತಾಣಗಳಿಗೆ ತಲುಪುವಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಈ ಕ್ರಮಗಳನ್ನು ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯಮ ಯೋಜನೆಯನ್ನು ಸಂಯೋಜಿಸಲು ವಿನ್ಯಾಸಗೊಳಿಸಲಾಗಿದೆ, ಇದು ಪ್ರವಾಸಿಗರಿಗೆ ಸುಗಮ ಪ್ರಯಾಣದ ಅನುಭವ ನೀಡುವ ಜೊತೆಗೆ ಸ್ಥಳೀಯ ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುತ್ತದೆ.
ಜಾಗತಿಕ ಸ್ಥಾನೀಕರಣ: ಬಿಗ್ ಕ್ಯಾಟ್ ಶೃಂಗಸಭೆ 2026

ಕೇಂದ್ರ ಬಜೆಟ್ 2026-27ರಲ್ಲಿ ಭಾರತವು 2026 ರಲ್ಲಿ ಪ್ರಪ್ರಥಮ ಬಾರಿಗೆ 'ಜಾಗತಿಕ ಬಿಗ್ ಕ್ಯಾಟ್ ಶೃಂಗಸಭೆ'ಯನ್ನು ಆಯೋಜಿಸಲಿದೆ ಎಂದು ಘೋಷಿಸಲಾಗಿದೆ. ಈ ಶೃಂಗಸಭೆಗೆ 95 'ಬಿಗ್ ಕ್ಯಾಟ್' (ದೊಡ್ಡ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳು) ಸಂತತಿ ಇರುವ ದೇಶಗಳ ಸರ್ಕಾರಿ ಮುಖ್ಯಸ್ಥರು ಮತ್ತು ಸಚಿವರನ್ನು ಆಹ್ವಾನಿಸಲಾಗುವುದು. ವನ್ಯಜೀವಿ ಸಂರಕ್ಷಣೆ, ಆವಾಸಸ್ಥಾನ ರಕ್ಷಣೆ, ವೈಜ್ಞಾನಿಕ ಸಹಯೋಗ ಮತ್ತು ಸುಸ್ಥಿರ ವನ್ಯಜೀವಿ ಪ್ರವಾಸೋದ್ಯಮದ ಬಗ್ಗೆ ಸಾಮೂಹಿಕ ಕಾರ್ಯತಂತ್ರಗಳನ್ನು ರೂಪಿಸಲು ಈ ಸಭೆ ಚರ್ಚಿಸಲಿದೆ. ಇದು ಪರಿಸರ ಪ್ರವಾಸೋದ್ಯಮ ಮತ್ತು ಅಂತರಾಷ್ಟ್ರೀಯ ವನ್ಯಜೀವಿ ಸಹಕಾರದಲ್ಲಿ ಭಾರತದ ಪಾತ್ರವನ್ನು ಉನ್ನತೀಕರಿಸುವ ಸರ್ಕಾರದ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ.
ಈ ಕ್ಷೇತ್ರದಲ್ಲಿ ಭಾರತದ ನಾಯಕತ್ವಕ್ಕೆ 'ಅಂತರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್' ಸ್ಥಾಪನೆ ಮತ್ತು ಕಾರ್ಯಚಟುವಟಿಕೆಯಲ್ಲಿನ ಅದರ ಪಾತ್ರವು ಒಂದು ಉತ್ತಮ ಉದಾಹರಣೆಯಾಗಿದೆ. ಇದು ಬಿಗ್ ಕ್ಯಾಟ್ ಸಂರಕ್ಷಣೆಗಾಗಿ ಜಾಗತಿಕ ಸಹಕಾರವನ್ನು ಸುಲಭಗೊಳಿಸಲು ಮೀಸಲಾದ, ಒಪ್ಪಂದ ಆಧಾರಿತ ಅಂತರ್-ಸರ್ಕಾರಿ ಸಂಸ್ಥೆಯಾಗಿದೆ. ಕೇಂದ್ರ ಸಚಿವ ಸಂಪುಟದಿಂದ ಅನುಮೋದಿಸಲ್ಪಟ್ಟ ಮತ್ತು ಹಲವಾರು ದೇಶಗಳಿಂದ ಅಂಗೀಕರಿಸಲ್ಪಟ್ಟ ಐಬಿಸಿಎ ಚೌಕಟ್ಟಿನ ಒಪ್ಪಂದವು ಈ ಸಂಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಭಾರತವು ಇದರ ಪ್ರಧಾನ ಕಚೇರಿ ಮತ್ತು ಸಚಿವಾಲಯವನ್ನು ಹೊಂದಿದೆ ಹಾಗೂ ಇದರ ಧ್ಯೇಯೋದ್ದೇಶಗಳನ್ನು ಮುನ್ನಡೆಸಲು ಬಜೆಟ್ ಬೆಂಬಲವನ್ನು ನೀಡುತ್ತಿದೆ.
ವಿಶ್ವದ ಏಳು ಪ್ರಮುಖ ಬಿಗ್ ಕ್ಯಾಟ್ ಪ್ರಭೇದಗಳಲ್ಲಿ ಐದು ಪ್ರಭೇದಗಳಿಗೆ — ಹುಲಿ, ಸಿಂಹ, ಚಿರತೆ, ಹಿಮ ಚಿರತೆ ಮತ್ತು ಚೀತಾ — ಭಾರತವು ನೆಲೆಯಾಗಿದೆ.
ಮೊದಲ ಜಾಗತಿಕ ಬಿಗ್ ಕ್ಯಾಟ್ ಶೃಂಗಸಭೆಯನ್ನು ಆಯೋಜಿಸುವುದು ಅಂತರಾಷ್ಟ್ರೀಯ ಸಂರಕ್ಷಣಾ ನಾಯಕತ್ವದಲ್ಲಿ ಭಾರತದ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಅಲ್ಲದೆ, ಇದು ಅತ್ಯುತ್ತಮ ಸಂರಕ್ಷಣಾ ಪದ್ಧತಿಗಳ ವಿನಿಮಯವನ್ನು ಉತ್ತೇಜಿಸುತ್ತದೆ ಮತ್ತು ಬಿಗ್ ಕ್ಯಾಟ್ ಸಂತತಿ ಇರುವ ದೇಶಗಳ ನಡುವಿನ ಸಹಯೋಗವನ್ನು ಗಟ್ಟಿಗೊಳಿಸುತ್ತದೆ.
ಸಾಂಸ್ಥಿಕ ಮತ್ತು ಮಾನವ ಬಂಡವಾಳ ಸುಧಾರಣೆಗಳು

ಇದರ ಪ್ರಮುಖ ಉಪಕ್ರಮವೆಂದರೆ, ಪ್ರಸ್ತುತ ಇರುವ 'ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್‌ಮೆಂಟ್ ಅಂಡ್ ಕ್ಯಾಟರಿಂಗ್ ಟೆಕ್ನಾಲಜಿ'ಯನ್ನು 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ' ಆಗಿ ಮೇಲ್ದರ್ಜೆಗೇರಿಸುವುದು. ಇದು ಉತ್ತಮ ಗುಣಮಟ್ಟದ ವೃತ್ತಿಪರ ಶಿಕ್ಷಣ, ಉದ್ಯಮಕ್ಕೆ ಪೂರಕವಾದ ಪಠ್ಯಕ್ರಮ, ಸಂಶೋಧನಾ ಅವಕಾಶಗಳು ಮತ್ತು ಅಂತರಾಷ್ಟ್ರೀಯ ಸಹಯೋಗವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಸಂಸ್ಥೆಯು ಶೈಕ್ಷಣಿಕ ವಲಯ, ಉದ್ಯಮ ಮತ್ತು ಸರ್ಕಾರದ ನಡುವೆ ಒಂದು ಕೊಂಡಿಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದರ ಜೊತೆಗೆ, 20 ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿನ 10,000 ಪ್ರವಾಸಿ ಮಾರ್ಗದರ್ಶಿಗಳಿಗೆ ಮರು-ಕೌಶಲ್ಯ ನೀಡುವ ಪ್ರಾಯೋಗಿಕ ಯೋಜನೆಯನ್ನು ಘೋಷಿಸಲಾಗಿದೆ. ಭಾರತೀಯ ಮ್ಯಾನೇಜ್‌ಮೆಂಟ್ ಸಂಸ್ಥೆಯ (IIM) ಸಹಯೋಗದೊಂದಿಗೆ ಜಾರಿಗೆ ತರಲಾಗುವ ಈ ಕಾರ್ಯಕ್ರಮವು ತರಗತಿ ಬೋಧನೆ, ಕ್ಷೇತ್ರ ತರಬೇತಿ ಮತ್ತು ಡಿಜಿಟಲ್ ಮಾಡ್ಯೂಲ್‌ಗಳನ್ನು ಒಳಗೊಂಡ 12 ವಾರಗಳ ಹೈಬ್ರಿಡ್ ಮಾದರಿಯನ್ನು ಅನುಸರಿಸಲಿದೆ. ಈ ಉಪಕ್ರಮವು ಮಾರ್ಗದರ್ಶಿ ಸೇವೆಗಳನ್ನು ವೃತ್ತಿಪರಗೊಳಿಸಲು, ಸಂದರ್ಶಕರ ಅನುಭವವನ್ನು ಸುಧಾರಿಸಲು ಮತ್ತು ಉದ್ಯೋಗ ಸೃಷ್ಟಿಗೆ ಬೆಂಬಲ ನೀಡುವ ನಿರೀಕ್ಷೆಯಿದೆ.
ಈ ಮಧ್ಯಸ್ಥಿಕೆಗಳು ಪ್ರವಾಸೋದ್ಯಮ ಸಚಿವಾಲಯದ ಈಗಿನ ಉಪಕ್ರಮಗಳಾದ 'ಸೇವಾ ಪೂರೈಕೆದಾರರ ಸಾಮರ್ಥ್ಯ ವರ್ಧನೆ' ಮತ್ತು 'ಇನ್ಕ್ರೆಡಿಬಲ್ ಇಂಡಿಯಾ ಟೂರಿಸ್ಟ್ ಫೆಸಿಲಿಟೇಟರ್' ಕಾರ್ಯಕ್ರಮಗಳಿಗೆ ಪೂರಕವಾಗಿವೆ. ಇವು ಪ್ರವಾಸೋದ್ಯಮ ಸೇವೆಗಳಲ್ಲಿ ಕೌಶಲ್ಯಗಳು, ಪ್ರಮಾಣೀಕರಣ ಮಾನದಂಡಗಳು ಮತ್ತು ವೃತ್ತಿಪರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಒಟ್ಟಾರೆಯಾಗಿ, ಈ ಕ್ರಮಗಳು ಪ್ರತಿಭಾವಂತರ ಬಲಿಷ್ಠ ಪಡೆಯನ್ನು ಸೃಷ್ಟಿಸಲು ಮತ್ತು ದೇಶೀಯ ಪ್ರವಾಸಿ ತಾಣಗಳಲ್ಲಿ ಸೇವೆಗಳ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗಲಿವೆ.
ಡಿಜಿಟಲ್ ಮತ್ತು ಪರಂಪರೆ ಮೂಲಸೌಕರ್ಯ

ಡಿಜಿಟಲ್ ಮತ್ತು ಪುರಾತತ್ವ ಮೂಲಸೌಕರ್ಯ
ಯೋಜನೆ, ಸಂಶೋಧನೆ, ಪ್ರಚಾರ ಮತ್ತು ಪ್ರವಾಸಿಗರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು, ಬಜೆಟ್ 'ರಾಷ್ಟ್ರೀಯ ತಾಣ ಡಿಜಿಟಲ್ ಜ್ಞಾನ ಗ್ರಿಡ್' ಸ್ಥಾಪನೆಯನ್ನು ಘೋಷಿಸಿದೆ. ಈ ಡಿಜಿಟಲ್ ವೇದಿಕೆಯು ಭಾರತದಾದ್ಯಂತ ಇರುವ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಪರಂಪರೆಯ ತಾಣಗಳನ್ನು ದಾಖಲಿಸಲಿದ್ದು, ಸಂಶೋಧಕರು, ವಿಷಯ ರಚನೆಕಾರರು, ಇತಿಹಾಸಕಾರರು ಮತ್ತು ಪ್ರವಾಸೋದ್ಯಮ ವಲಯಕ್ಕೆ ಸಂಪನ್ಮೂಲಗಳನ್ನು ಒದಗಿಸುತ್ತದೆ. ಈ ಗ್ರಿಡ್ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆಗೆ ಬೆಂಬಲ ನೀಡುತ್ತದೆ, ಪ್ರವಾಸಿ ತಾಣಗಳ ದೃಶ್ಯತೆಯನ್ನು ಸುಧಾರಿಸುತ್ತದೆ ಮತ್ತು ಪರಂಪರೆ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಬಜೆಟ್‌ನಲ್ಲಿ ಲೋಥಲ್, ಧೋಲಾವಿರಾ, ರಾಖಿಗರ್ಹಿ, ಸಾರನಾಥ, ಹಸ್ತಿನಾಪುರ ಮತ್ತು ಲೇಹ್ ಅರಮನೆ ಸೇರಿದಂತೆ 15 ಪುರಾತತ್ವ ತಾಣಗಳನ್ನು ರೋಮಾಂಚಕ ಮತ್ತು ಅನುಭವದ ಸಾಂಸ್ಕೃತಿಕ ತಾಣಗಳಾಗಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ. ಇದು ಪ್ರವಾಸಿಗರಿಗೆ ತಲ್ಲೀನಗೊಳಿಸುವ ಅನುಭವವನ್ನು ನೀಡಲು ಕ್ಯುರೇಟೆಡ್ ವಾಕ್‌ವೇಗಳು, ವ್ಯಾಖ್ಯಾನ ಕೇಂದ್ರಗಳು, ಪ್ರವಾಸಿ ಸೌಲಭ್ಯಗಳು ಮತ್ತು ಪರಂಪರೆ ಸಂರಕ್ಷಣಾ ಮೂಲಸೌಕರ್ಯಗಳ ಸೃಷ್ಟಿಯನ್ನು ಒಳಗೊಂಡಿರುತ್ತದೆ. ಈ ಉಪಕ್ರಮಗಳು ಸ್ವದೇಶ್ ದರ್ಶನ್ 2.0 ಮತ್ತು ಎಸ್‌ಎಎಸ್‌ಸಿಐ ನಂತಹ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಬಲಪಡಿಸುತ್ತವೆ. ಅಲ್ಲದೆ, ಪ್ರಶಾದ್ ಯೋಜನೆಗೆ ಪೂರಕವಾಗಿ, ಇವು ಸುಸ್ಥಿರ ಪ್ರವಾಸೋದ್ಯಮ ಮತ್ತು ಸ್ಥಳೀಯ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಜೊತೆಗೆ ಭಾರತದ ಸಾಂಸ್ಕೃತಿಕ ಆಸ್ತಿಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿವೆ.
ವೈದ್ಯಕೀಯ ಪ್ರವಾಸೋದ್ಯಮ ಮತ್ತು ಸ್ವಾಸ್ಥ್ಯ ಏಕೀಕರಣ
ಕೇಂದ್ರ ಬಜೆಟ್ 2026-27 ರಲ್ಲಿ ಭಾರತವನ್ನು ವೈದ್ಯಕೀಯ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮದ ಜಾಗತಿಕ ತಾಣವನ್ನಾಗಿ ಉತ್ತೇಜಿಸಲು ಐದು ಪ್ರಾದೇಶಿಕ ವೈದ್ಯಕೀಯ ಹಬ್‌ಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಬೆಂಬಲ ನೀಡುವ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಹಬ್‌ಗಳು ಸುಧಾರಿತ ಆರೋಗ್ಯ ಸೇವೆಗಳು, ಆಯುಷ್ ಕೇಂದ್ರಗಳು, ವೈದ್ಯಕೀಯ ಮೌಲ್ಯದ ಪ್ರವಾಸೋದ್ಯಮ ಸೌಲಭ್ಯ ಕೇಂದ್ರಗಳು ಮತ್ತು ರೋಗನಿರ್ಣಯ, ನಂತರದ ಆರೈಕೆ ಮತ್ತು ಪುನರ್ವಸತಿಗಾಗಿ ಮೂಲಸೌಕರ್ಯಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಸಂಯೋಜಿಸಲಿವೆ. ಇದು ಜಾಗತಿಕ ಆರೋಗ್ಯ ಪ್ರಯಾಣದಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.
ಜಾಮ್‌ನಗರದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಜೊತೆಗೆ, ಪ್ರವಾಸೋದ್ಯಮದಲ್ಲಿ ಸ್ವಾಸ್ಥ್ಯ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಸಂಯೋಜಿಸುವ ಸರ್ಕಾರದ ಪ್ರಯತ್ನಗಳನ್ನು ಈ ಉಪಕ್ರಮಗಳು ಮತ್ತಷ್ಟು ಬಲಪಡಿಸುತ್ತವೆ.
ಪ್ರಾದೇಶಿಕ ಅಭಿವೃದ್ಧಿ ಪುಶ್: ಪೂರ್ವೋದಯ ರಾಜ್ಯಗಳು
ಕೇಂದ್ರ ಬಜೆಟ್ 2026-27 ಪ್ರಾದೇಶಿಕ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯ ವಿಸ್ತರಣೆಯ ಭಾಗವಾಗಿ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಂತಹ ಪೂರ್ವೋದಯ ರಾಜ್ಯಗಳ ಮೇಲೆ ವಿಶೇಷ ಗಮನ ಹರಿಸಿದೆ. ಏಕೀಕೃತ ಅಭಿವೃದ್ಧಿ ಚೌಕಟ್ಟಿನಡಿಯಲ್ಲಿ ಪ್ರತಿ ಪೂರ್ವೋದಯ ರಾಜ್ಯಗಳಲ್ಲಿ ತಲಾ ಒಂದು ಪ್ರವಾಸೋದ್ಯಮ ತಾಣವನ್ನು ರಚಿಸಲು ಬಜೆಟ್ ಪ್ರಸ್ತಾಪಿಸಿದೆ. ಇದು ದುರ್ಗಾಪುರದಲ್ಲಿ ಉತ್ತಮ ಸಂಪರ್ಕ ಹೊಂದಿರುವ 'ಈಸ್ಟ್ ಕೋಸ್ಟ್ ಇಂಡಸ್ಟ್ರಿಯಲ್ ಕಾರಿಡಾರ್' ಅನ್ನು ಸಹ ಒಳಗೊಂಡಿದೆ. ಇದರ ಜೊತೆಗೆ, ಈ ಪ್ರದೇಶಗಳಾದ್ಯಂತ ಪ್ರಯಾಣಿಕರಿಗೆ ಸುಧಾರಿತ ಸಂಪರ್ಕ, ಪರಿಸರ ಸ್ನೇಹಿ ಸಾರಿಗೆ ಮತ್ತು ಹೆಚ್ಚಿನ ಲಭ್ಯತೆಯನ್ನು ಬೆಂಬಲಿಸಲು 4,000 ಎಲೆಕ್ಟ್ರಿಕ್ ಬಸ್‌ಗಳ ಸೌಲಭ್ಯವನ್ನು ಘೋಷಿಸಲಾಗಿದೆ.


ಪೂರ್ವೋದಯದ ಮೇಲಿನ ಈ ಒತ್ತು, ಮೂಲಸೌಕರ್ಯ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗಿ, ಪ್ರವಾಸೋದ್ಯಮ ಪ್ರೇರಿತ ಬೆಳವಣಿಗೆಯ ಭಾಗವಾಗಿ ಸ್ಥಳೀಯ ಸಾಂಸ್ಕೃತಿಕ, ನೈಸರ್ಗಿಕ ಮತ್ತು ಪರಂಪರೆಯ ಸ್ವತ್ತುಗಳನ್ನು ಬಳಸಿಕೊಳ್ಳುವ ವಿಶಾಲವಾದ ಕಾರ್ಯತಂತ್ರವನ್ನು ಪ್ರತಿಬಿಂಬಿಸುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಯನ್ನು ಸುಧಾರಿತ ಸಾರಿಗೆ ಸಂಪರ್ಕ ಮತ್ತು ಸಾರ್ವಜನಿಕ ಸೇವೆಗಳೊಂದಿಗೆ ಜೋಡಿಸುವ ಮೂಲಕ, ಈ ಉಪಕ್ರಮವು ಪೂರ್ವ ವಲಯವನ್ನು ದೇಶೀಯ ಮತ್ತು ಅಂತರಾಷ್ಟ್ರೀಯ ಸಂದರ್ಶಕರಿಗೆ ಸ್ಪರ್ಧಾತ್ಮಕ ಮತ್ತು ಆಕರ್ಷಕ ತಾಣವನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ.
ಉಪಸಂಹಾರ
ಕೇಂದ್ರ ಬಜೆಟ್ 2026-27ರ ಪ್ರವಾಸೋದ್ಯಮ ಉಪಕ್ರಮಗಳು ಆರ್ಥಿಕ ಬೆಳವಣಿಗೆ, ಉದ್ಯೋಗ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಒಂದು ಆಯಕಟ್ಟಿನ ಯೋಜನೆಯನ್ನು ಪ್ರಸ್ತುತಪಡಿಸುತ್ತವೆ. ಇದು ಮೂಲಸೌಕರ್ಯ, ಪರಂಪರೆ ಸಂರಕ್ಷಣೆ, ಕೌಶಲ್ಯಗಳು, ಡಿಜಿಟಲ್ ವ್ಯವಸ್ಥೆಗಳು ಮತ್ತು ಆಧ್ಯಾತ್ಮಿಕ, ಪರಿಸರ, ಸಾಹಸ ಹಾಗೂ ವೈದ್ಯಕೀಯ ಪ್ರವಾಸೋದ್ಯಮದಂತಹ ವಿಶಿಷ್ಟ ಕ್ಷೇತ್ರಗಳನ್ನು ಸುಧಾರಿಸಲು ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳೊಂದಿಗೆ ಹೊಸ ಯೋಜನೆಗಳನ್ನು ಸಂಯೋಜಿಸುತ್ತದೆ.
ಈಶಾನ್ಯದಲ್ಲಿ ಬೌದ್ಧ ಸರ್ಕ್ಯೂಟ್‌ಗಳನ್ನು ಅಭಿವೃದ್ಧಿಪಡಿಸುವುದು, ಆತಿಥ್ಯ ವಲಯವನ್ನು ಮೇಲ್ದರ್ಜೆಗೇರಿಸುವುದು, ಡಿಜಿಟಲ್ ಜ್ಞಾನ ಮತ್ತು ಪರಂಪರೆಯ ತಾಣಗಳ ಅಭಿವೃದ್ಧಿಯತ್ತ ಗಮನ ಹರಿಸಿರುವುದು, ಸುಸ್ಥಿರ ಮತ್ತು ತಾಣ-ಕೇಂದ್ರಿತ ಪ್ರವಾಸೋದ್ಯಮಕ್ಕೆ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಈ ಕ್ರಮಗಳು ಸ್ವದೇಶ್ ದರ್ಶನ್ 2.0, ಪ್ರಶಾದ್ ಮತ್ತು ಸಾಮರ್ಥ್ಯ ವರ್ಧನೆಯಂತಹ ಯೋಜನೆಗಳೊಂದಿಗೆ ಸಂಯೋಜನೆಗೊಳ್ಳುತ್ತಿದ್ದು, ನೀತಿ ಸಂಯೋಜನೆ ಮತ್ತು ಸಂಪನ್ಮೂಲಗಳ ದಕ್ಷ ಬಳಕೆಯನ್ನು ಖಚಿತಪಡಿಸುತ್ತವೆ.
ಮೂಲಸೌಕರ್ಯ, ಸಮುದಾಯ ಮತ್ತು ಸಂಸ್ಕೃತಿಯನ್ನು ಬೆಸೆಯುವುದು ಭಾರತವನ್ನು ಸ್ಪರ್ಧಾತ್ಮಕ ಮತ್ತು ಅಂತರ್ಗತ ಪ್ರವಾಸಿ ತಾಣವನ್ನಾಗಿ ಮಾಡಲು ಭದ್ರವಾದ ಅಡಿಪಾಯವನ್ನು ಹಾಕುತ್ತದೆ. ಇದರ ಯಶಸ್ವಿ ಅನುಷ್ಠಾನವು ಸಂದರ್ಶಕರ ಅನುಭವವನ್ನು ಹೆಚ್ಚಿಸುವ, ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಭಾರತದ ಸಾಂಸ್ಕೃತಿಕ ಹಾಗೂ ನೈಸರ್ಗಿಕ ಪರಂಪರೆಯನ್ನು ಜಾಗತಿಕವಾಗಿ ಪ್ರಚಾರ ಮಾಡುವ ನಿರೀಕ್ಷೆಯಿದೆ, ಇದು ಪ್ರವಾಸೋದ್ಯಮವನ್ನು ಸಾಮಾಜಿಕ-ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕವನ್ನಾಗಿ ಮಾಡುತ್ತದೆ.
References
https://www.pib.gov.in/PressReleasePage.aspx?PRID=2221781®=3&lang=1
https://www.pib.gov.in/PressReleasePage.aspx?PRID=2221455®=3&lang=1
https://www.pib.gov.in/PressReleasePage.aspx?PRID=2221458®=3&lang=1
https://www.pib.gov.in/PressReleasePage.aspx?PRID=2221403&lang=1®=3&utm_source
https://www.pib.gov.in/PressReleasePage.aspx?PRID=2221403&lang=1®=3&utm_source
https://www.pib.gov.in/PressReleasePage.aspx?PRID=2221403&utm_source=chatgpt.com®=3& lang=2
https://www.pib.gov.in/PressReleasePage.aspx?PRID=2221403&lang=1®=3&utm_source
https://www.pib.gov.in/PressNoteDetails.aspx?NoteId=153202&ModuleId=3®=3&lang=2
https://www.pib.gov.in/PressReleasePage.aspx?PRID=2221403®=3&lang=2
Click here to see pdf
******
(Explainer ID: 157567)
आगंतुक पटल : 13
Provide suggestions / comments