• Skip to Content
  • Sitemap
  • Advance Search
Technology

ಎಐ ಯುಗದಲ್ಲಿ ಭಾರತದ ಯುವ ಜನಸಂಖ್ಯಾ ಲಾಭ

ಭವಿಷ್ಯದ ಸವಾಲುಗಳಿಗೆ ಸಜ್ಜಾದ ಪ್ರತಿಭಾ ಪರಿಸರ ವ್ಯವಸ್ಥೆಯ ನಿರ್ಮಾಣ

Posted On: 19 FEB 2026 9:17AM

ಪ್ರಮುಖ ಅಂಶಗಳು

  • ಭಾರತದ ಜನಸಂಖ್ಯಾ ಅನುಕೂಲ ಮತ್ತು ಎಐ ರೂಪಾಂತರ: ಭಾರತದ ಒಟ್ಟು ಜನಸಂಖ್ಯೆಯ 65% ಕ್ಕಿಂತ ಹೆಚ್ಚು ಜನರು 35 ವರ್ಷದೊಳಗಿನವರಾಗಿದ್ದಾರೆ. ಈ ಯುವಶಕ್ತಿಯು ದೇಶದ ಡಿಜಿಟಲ್ ಮತ್ತು ನಾವೀನ್ಯತೆ ಕಾರ್ಯತಂತ್ರದ ಕೇಂದ್ರಬಿಂದುವಾಗಿದ್ದು, ಭಾರತದ ಎಐ ರೂಪಾಂತರಕ್ಕೆ ದೊಡ್ಡ ಶಕ್ತಿಯನ್ನು ನೀಡುತ್ತಿದೆ.
  • ಬೃಹತ್ ಮಟ್ಟದಲ್ಲಿ ಎಐ ಕೌಶಲ್ಯ ಅಭಿವೃದ್ಧಿ: ಶಾಲೆಗಳು, ವೃತ್ತಿಪರ ತರಬೇತಿ ಕೇಂದ್ರಗಳು, ಸುಧಾರಿತ ಸಂಶೋಧನಾ ಫೆಲೋಶಿಪ್‌ಗಳು ಮತ್ತು ಉದ್ಯಮಗಳ ಸಹಭಾಗಿತ್ವದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಎಐ ಕೌಶಲ್ಯ ನೀಡುವ ಪ್ರಕ್ರಿಯೆಯು ವೇಗವಾಗಿ ಸಾಗುತ್ತಿದೆ.
  • ಅಗ್ಗದ ಎಐ ಮೂಲಸೌಕರ್ಯ ಮತ್ತು ನೀತಿ ಬೆಂಬಲ: 'ಇಂಡಿಯಾ ಎಐ ಮಿಷನ್' ಅಡಿಯಲ್ಲಿ ಕೈಗೆಟುಕುವ ದರದಲ್ಲಿ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಇದು ಮೆಟ್ರೋಪಾಲಿಟನ್ ನಗರಗಳ ಆಚೆಗೂ ಡೇಟಾ ಮತ್ತು ತಾಂತ್ರಿಕ ಅವಕಾಶಗಳನ್ನು ಎಲ್ಲರಿಗೂ ಸಮಾನವಾಗಿ ತಲುಪುವಂತೆ ಮಾಡುತ್ತಿದೆ.
  • ಯುವ ನೇತೃತ್ವದ ನಾವೀನ್ಯತೆ: ಭಾರತದ ಯುವಜನತೆಯ ಸಂಶೋಧನೆಗಳು ಕೇವಲ ಪ್ರಯೋಗಗಳಿಗೆ ಸೀಮಿತವಾಗದೆ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುತ್ತಿವೆ. ಇದು ಭಾರತವನ್ನು ಜವಾಬ್ದಾರಿಯುತ ಮತ್ತು ಸಮಗ್ರ ಎಐ ನಾಯಕತ್ವದ ಉದಯೋನ್ಮುಖ ಕೇಂದ್ರವನ್ನಾಗಿ ರೂಪಿಸುತ್ತಿದೆ.

ಪೀಠಿಕೆ

ಭಾರತ-ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಫೆಬ್ರವರಿ 16, 2026 ರಂದು ಒಂದು ಬಲಿಷ್ಠ ದೃಷ್ಟಿಕೋನದೊಂದಿಗೆ ಆರಂಭವಾಯಿತು. ಈ ಶೃಂಗಸಭೆಯು ಭಾರತದ ಕೃತಕ ಬುದ್ಧಿಮತ್ತೆ (ಎಐ) ಪಯಣದ ಕೇಂದ್ರಬಿಂದುವಾಗಿ ದೇಶದ ಯುವಶಕ್ತಿಯನ್ನು ಗುರುತಿಸಿದೆ. ಈ ಸಮ್ಮೇಳನವು ಎಐ ಅನ್ನು ಕೇವಲ ಭವಿಷ್ಯದ ಕನಸಾಗಿ ನೋಡದೆ, ಈಗಾಗಲೇ ಉದ್ಯೋಗಗಳು ಮತ್ತು ಜೀವನೋಪಾಯಗಳನ್ನು ಮರುರೂಪಿಸುತ್ತಿರುವ ಒಂದು ಪರಿವರ್ತನಾ ಶಕ್ತಿಯಾಗಿ ಬಿಂಬಿಸುತ್ತಿದೆ. ಭಾರತವು ವಿಶ್ವದಲ್ಲೇ ಅತಿ ದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿದ್ದು, ಇಲ್ಲಿನ ಶೇ. 65 ಕ್ಕಿಂತ ಹೆಚ್ಚು ಜನರು 35 ವರ್ಷದೊಳಗಿನವರಾಗಿದ್ದಾರೆ. ಈ ಜನಸಂಖ್ಯಾ ಬಲವು ದೇಶದ ಆರ್ಥಿಕ ವೇಗಕ್ಕೆ ದೊಡ್ಡ ಇಂಧನದಂತೆ ಕೆಲಸ ಮಾಡುತ್ತಿದೆ.

ಈ ಶೃಂಗಸಭೆಯು ಕೇವಲ ಕಲಿಯುವಿಕೆಯಿಂದ ಸಕ್ರಿಯವಾಗಿ ಪಾಲ್ಗೊಳ್ಳುವಿಕೆಯ ಕಡೆಗಿನ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಇದು ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಗಳನ್ನು ಮರು ವ್ಯಾಖ್ಯಾನಿಸುತ್ತಿದೆ, ಹೊಸ ಕೌಶಲ್ಯಗಳ ಮೇಲೆ ಬೆಳಕು ಚೆಲ್ಲುತ್ತಿದೆ ಮತ್ತು ಶಿಕ್ಷಣವನ್ನು ಉದ್ಯಮದ ಅಗತ್ಯಗಳಿಗೆ ತಕ್ಕಂತೆ ಸಂಯೋಜಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತಿದೆ. ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಉತ್ಪಾದಕತೆಯನ್ನು ಉತ್ತಮಪಡಿಸುವುದು ಮತ್ತು ತರಗತಿಗಳಿಂದ ಎಐ-ಚಾಲಿತ ವೃತ್ತಿಜೀವನದವರೆಗೆ ಸುಗಮ ಸೇತುವೆಗಳನ್ನು ನಿರ್ಮಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಭಾರತ-ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ, ಯುವ ಸಂಶೋಧಕರು ನಾವೀನ್ಯತೆ ಸವಾಲುಗಳು ಸ್ಟಾರ್ಟ್‌ಅಪ್ ಪಿಚ್‌ಗಳು ಮತ್ತು ನೇರ ಪರಿಹಾರ ಪ್ರದರ್ಶನಗಳಂತಹ ವೇದಿಕೆಗಳ ಮೂಲಕ ಈ ಕಾರ್ಯಸೂಚಿಯನ್ನು ಮುನ್ನಡೆಸುತ್ತಿದ್ದಾರೆ. ಇಂತಹ ರಚನಾತ್ಮಕ ತೊಡಗಿಸಿಕೊಳ್ಳುವಿಕೆಗಳು ಕೌಶಲ್ಯಗಳನ್ನು ಮಾರುಕಟ್ಟೆಯ ಅಗತ್ಯಗಳೊಂದಿಗೆ ಜೋಡಿಸುತ್ತವೆ ಮತ್ತು ಭಾರತದ ಯುವ ಸಾಮರ್ಥ್ಯವನ್ನು ಉತ್ಪಾದಕ ಶಕ್ತಿಯಾಗಿ ಪರಿವರ್ತಿಸುತ್ತವೆ. ಈ ಶೃಂಗಸಭೆಯು ಉದಯೋನ್ಮುಖ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸಲು ಒಂದು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್  ಕ್ಷೇತ್ರಗಳಲ್ಲಿ 2030ರ ವೇಳೆಗೆ ಸುಮಾರು 20 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಜಾಗತಿಕ ಒಳನೋಟಗಳನ್ನು ಯುವ ಕೌಶಲ್ಯ ಮತ್ತು ಉದ್ಯೋಗ ಸೃಷ್ಟಿಯೊಂದಿಗೆ ಬೆರೆಸುವ ಮೂಲಕ, ಭಾರತವು ತನ್ನ ಜನಸಂಖ್ಯಾ ಲಾಭವನ್ನು ತನ್ನ ಎಐ ಕಾರ್ಯತಂತ್ರದ ಭದ್ರ ಬುನಾದಿಯನ್ನಾಗಿ ಮತ್ತು ಭವಿಷ್ಯಕ್ಕೆ ಸಜ್ಜಾದ ಕಾರ್ಯಪಡೆಯನ್ನಾಗಿ ಬಲಪಡಿಸುತ್ತಿದೆ.

ಭಾರತದ ಪ್ರತಿಭಾವಂತರಿಗೆ ಒಂದು ಅವಕಾಶವಾಗಿ ಎಐ

ಭಾರತದ ಬೃಹತ್ ಪ್ರತಿಭಾವಂತ ಸಮೂಹಕ್ಕೆ ಎಐ ಒಂದು ಪರಿವರ್ತನಾ ಶಕ್ತಿಯಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಉದ್ಯೋಗದ ಭೂದೃಶ್ಯವನ್ನು ಮರುರೂಪಿಸುವ ಮೂಲಕ, ಎಐ ಹೊಸ ಪಾತ್ರಗಳನ್ನು ಸೃಷ್ಟಿಸುತ್ತಿದೆ, ಉತ್ಪಾದಕತೆಯನ್ನು ಹೆಚ್ಚಿಸುತ್ತಿದೆ ಮತ್ತು ಒಳಗೊಳ್ಳುವಿಕೆಯ ಬೆಳವಣಿಗೆಗೆ ಪೂರಕವಾದ ಮಾರ್ಗಗಳನ್ನು ವಿಸ್ತರಿಸುತ್ತಿದೆ. ಭಾರತವು ಎಐ ಅನ್ನು ಯುವಜನರ ಉದ್ಯೋಗ ಮತ್ತು ಕೌಶಲ್ಯಗಳನ್ನು ವಿಸ್ತರಿಸುವ ಪ್ರಮುಖ ಸಾಧನವಾಗಿ ನೋಡುತ್ತಿದೆ, ಇದು ಉದಯೋನ್ಮುಖ ತಂತ್ರಜ್ಞಾನವನ್ನು ಪ್ರತಿಭಾ ಅಭಿವೃದ್ಧಿಯೊಂದಿಗೆ ಸಂಯೋಜಿಸುತ್ತದೆ.

ಎಐ ಕೌಶಲ್ಯಕ್ಕಾಗಿ ಹೆಚ್ಚುತ್ತಿರುವ ಬೇಡಿಕೆ

ಎಐ ಕೌಶಲ್ಯ ಮತ್ತು ಉದ್ಯೋಗಗಳಿಗೆ ಹೆಚ್ಚುತ್ತಿರುವ ಬೇಡಿಕೆ

ಎಐ ಕೌಶಲ್ಯ ಮತ್ತು ಉದ್ಯೋಗಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಭಾರತದ ಯುವಜನತೆಯ ಪಾಲಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಜನವರಿ 2023 ರಿಂದ ಮಾರ್ಚ್ 2025ರ ನಡುವೆ, ದಕ್ಷಿಣ ಏಷ್ಯಾದಲ್ಲಿ ಎಐ ಸಂಬಂಧಿತ ಉದ್ಯೋಗಾವಕಾಶಗಳ ಪ್ರಮಾಣವು ಒಟ್ಟು ಖಾಲಿ ಹುದ್ದೆಗಳಲ್ಲಿ ಶೇ. 2.9 ರಿಂದ ಶೇ. 6.5 ಕ್ಕೆ ಏರಿಕೆಯಾಗಿದೆ. ಎಐ ಅಲ್ಲದ ಉದ್ಯೋಗಗಳಿಗಿಂತ ಎಐ ಕೌಶಲ್ಯದ ಬೇಡಿಕೆಯು ಶೇ. 75 ರಷ್ಟು ವೇಗವಾಗಿ ಬೆಳೆಯುತ್ತಿದೆ. ಈ ಬದಲಾವಣೆಯು ಭಾರತದ ಕಾರ್ಮಿಕ ಮಾರುಕಟ್ಟೆಯಲ್ಲಿನ ರಚನಾತ್ಮಕ ರೂಪಾಂತರವನ್ನು ಸೂಚಿಸುತ್ತದೆ—ಇದು ಡಿಜಿಟಲ್ ನಿರರ್ಗಳತೆ, ಸುಧಾರಿತ ತಾಂತ್ರಿಕ ಸಾಮರ್ಥ್ಯ ಮತ್ತು ಬಹುಶಿಸ್ತೀಯ ಪರಿಣತಿಯನ್ನು ಹೊಂದಿರುವವರಿಗೆ ಹೆಚ್ಚಿನ ಮನ್ನಣೆ ನೀಡುತ್ತಿದೆ. ಭಾರತದ ಯುವಜನತೆಗೆ ಎಐ ಎನ್ನುವುದು ಕೇವಲ ಒಂದು ತಾಂತ್ರಿಕ ಪ್ರವೃತ್ತಿಯಲ್ಲ, ಬದಲಿಗೆ ತಂತ್ರಜ್ಞಾನ ಮತ್ತು ಇತರ ಪೂರಕ ಕ್ಷೇತ್ರಗಳಲ್ಲಿ ಕೌಶಲ್ಯ-ಆಧಾರಿತ ಹಾಗೂ ಭವಿಷ್ಯಕ್ಕೆ ಸಜ್ಜಾದ ಉದ್ಯೋಗದ ಸ್ಪಷ್ಟ ಮಾರ್ಗವಾಗಿದೆ.

ಎಐ-ಸಿದ್ಧ ಯುವ ಕೌಶಲ್ಯಕ್ಕಾಗಿ ಸರ್ಕಾರದ ಉತ್ತೇಜನ

ಎಐ ಅನ್ನು ಉದ್ಯೋಗದ ಪ್ರಮುಖ ಚಾಲಕಶಕ್ತಿಯಾಗಿ ಗುರುತಿಸಿರುವ ಕೇಂದ್ರ ಬಜೆಟ್ 2026–27, ಎಐ ಕೌಶಲ್ಯ ಮತ್ತು ಪ್ರತಿಭಾ ಅಭಿವೃದ್ಧಿಯ ಮೇಲೆ ಸರ್ಕಾರದ ಗಮನವನ್ನು ಪುನರುಚ್ಚರಿಸಿದೆ. ಬಜೆಟ್‌ನಲ್ಲಿ 'ಆರೆಂಜ್ ಎಕಾನಮಿ' ಗೆ ಆದ್ಯತೆ ನೀಡಲಾಗಿದೆ, ಇದು ಅನಿಮೇಷನ್, ಗೇಮಿಂಗ್, ಡಿಜಿಟಲ್ ವಿಷಯ ರಚನೆ ಮತ್ತು ಇಮ್ಮರ್ಸಿವ್ ಮೀಡಿಯಾದಂತಹ ಎಐ-ಚಾಲಿತ ಕ್ಷೇತ್ರಗಳನ್ನು ಒಳಗೊಂಡಿದೆ. ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಮೂಲಕ 15,000 ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ 'ಎಐ-ಸಂಯೋಜಿತ ಕಂಟೆಂಟ್ ಕ್ರಿಯೇಟರ್ ಲ್ಯಾಬ್‌ಗಳನ್ನು' ಸ್ಥಾಪಿಸಲು ಬೆಂಬಲ ನೀಡಲಾಗಿದೆ. ಈ ಉಪಕ್ರಮವು ಸುಮಾರು 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದ್ದು, ದೇಶಾದ್ಯಂತ ವಿದ್ಯಾರ್ಥಿಗಳು, ಸೃಜನಶೀಲರು ಮತ್ತು ಯುವ ವೃತ್ತಿಪರರ ಉದ್ಯೋಗದ ಅವಕಾಶಗಳನ್ನು ನೇರವಾಗಿ ಹೆಚ್ಚಿಸಲಿದೆ.

ಬಜೆಟ್‌ನಲ್ಲಿ ಉದ್ಯೋಗ ಮತ್ತು ಕೌಶಲ್ಯಗಳನ್ನು ರೂಪಿಸುವಲ್ಲಿ ಎಐ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಪಾತ್ರವನ್ನು ಪ್ರಮುಖವಾಗಿ ಬಿಂಬಿಸಲಾಗಿದೆ. ಶಿಕ್ಷಣ, ಕೆಲಸ ಮತ್ತು ಉದ್ಯಮದ ಬೇಡಿಕೆಗಳ ನಡುವೆ ಸೇತುವೆಯಾಗಲು, ಎಐ ಉದ್ಯೋಗಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಲು 'ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮ ಸ್ಥಾಯಿ ಸಮಿತಿ'ಯನ್ನು ಪ್ರಸ್ತಾಪಿಸಲಾಗಿದೆ.

ಎಐ ಮೂಲಸೌಕರ್ಯದ ಸಮಾನ ಪ್ರವೇಶ

ಭಾರತದ ಪ್ರತಿಭಾವಂತರ ಸಮೂಹಕ್ಕೆ ಹೆಚ್ಚಿನ ಅವಕಾಶಗಳನ್ನು ನೀಡಲು ಡಿಜಿಟಲ್ ಮೂಲಸೌಕರ್ಯದ ಸಮಾನ ಲಭ್ಯತೆಯ ಅಗತ್ಯವಿದೆ. 'ಇಂಡಿಯಾ ಎಐ ಮಿಷನ್' ಅಡಿಯಲ್ಲಿ, ಸರ್ಕಾರವು ಎಐ ಸಾಮರ್ಥ್ಯಗಳನ್ನು ಬಲಪಡಿಸಲು ₹10,300 ಕೋಟಿಗೂ ಹೆಚ್ಚು ಹಣವನ್ನು ಮೀಸಲಿಟ್ಟಿದೆ. ಪ್ರಸ್ತುತ ಇರುವ 38,000 ಜಿಪಿಯುಗಳ ಜೊತೆಗೆ ಹೆಚ್ಚುವರಿಯಾಗಿ 20,000 ಉನ್ನತ ಮಟ್ಟದ ಜಿಪಿಯುಗಳನ್ನು ಸೇರಿಸಲು ಯೋಜಿಸಲಾಗಿದೆ. ಗಂಟೆಗೆ ಕೇವಲ ₹65 ರ ರಿಯಾಯಿತಿ ದರದಲ್ಲಿ ಈ ಕಂಪ್ಯೂಟಿಂಗ್ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದು ಸ್ಟಾರ್ಟ್‌ಅಪ್‌ಗಳು, ಯುವ ಸಂಶೋಧಕರು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ತಂತ್ರಜ್ಞಾನದ ಬಳಕೆಯನ್ನು ಸುಲಭಗೊಳಿಸುತ್ತದೆ. ಕಂಪ್ಯೂಟಿಂಗ್, ಡೇಟಾಸೆಟ್‌ಗಳು ಮತ್ತು ಮಾದರಿ ಪರಿಸರ ವ್ಯವಸ್ಥೆಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಮೂಲಕ, ಎಐ ಅವಕಾಶಗಳು ಕೇವಲ ಮೆಟ್ರೋಪಾಲಿಟನ್ ನಗರಗಳಿಗೆ ಸೀಮಿತವಾಗದೆ ದೇಶಾದ್ಯಂತ ಇರುವ ಪ್ರತಿಭೆಗಳಿಗೆ ತಲುಪುವಂತೆ ಭಾರತ ಖಚಿತಪಡಿಸಿಕೊಳ್ಳುತ್ತಿದೆ. ಒಟ್ಟು 58,000 ಕ್ಕೂ ಹೆಚ್ಚು ಜಿಪಿಯುಗಳ ವಿಸ್ತರಣಾ ಯೋಜನೆಯು ಒಳಗೊಳ್ಳುವಿಕೆ, ಜವಾಬ್ದಾರಿಯುತ ನಾವೀನ್ಯತೆ ಮತ್ತು ಎಐ ಆರ್ಥಿಕತೆಯಲ್ಲಿ ಎಲ್ಲರ ಭಾಗವಹಿಸುವಿಕೆಗೆ ರಾಷ್ಟ್ರೀಯ ಬದ್ಧತೆಯನ್ನು ಉಲ್ಲೇಖಿಸುತ್ತದೆ.

ಕೌಶಲ್ಯ, ನಾವೀನ್ಯತೆ ಮತ್ತು ಲಭ್ಯತೆಯನ್ನು ಒಂದೇ ವೇದಿಕೆಗೆ ತರುವ ಮೂಲಕ, ಎಐ ತಂತ್ರಜ್ಞಾನವು ಯುವಜನತೆಯ ನೇತೃತ್ವದ ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗೆ ಪ್ರಬಲ ಇಂಧನವಾಗಿ ಬದಲಾಗುತ್ತಿದೆ.

ಎಐ-ಸಿದ್ಧ ಪರಿಣಿತ ಪ್ರತಿಭಾವಂತರ ಸಮೂಹವನ್ನು ನಿರ್ಮಿಸಲು ರಾಷ್ಟ್ರೀಯ ಪ್ರಯತ್ನಗಳು

ಭಾರತ ಸರ್ಕಾರವು ಶಾಲಾ ಶಿಕ್ಷಣ, ವೃತ್ತಿಪರ ತರಬೇತಿ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯ ಅಭಿವೃದ್ಧಿಯಾದ್ಯಂತ ಸಮನ್ವಯದ ಕ್ರಮಗಳ ಮೂಲಕ ಸಮಗ್ರವಾದ 'ಎಐ ಪ್ರತಿಭಾ ಪೈಪ್‌ಲೈನ್' ಅನ್ನು ನಿರ್ಮಿಸುತ್ತಿದೆ. ಈ ಉಪಕ್ರಮಗಳ ಉದ್ದೇಶವು ಯುವಜನತೆಗೆ ಉದ್ಯಮದ ಬೇಡಿಕೆಗೆ ಅನುಗುಣವಾಗಿ ಅಡಿಪಾಯದ, ಮಧ್ಯಂತರ ಮತ್ತು ಸುಧಾರಿತ ಹಂತದ ಎಐ ಸಾಮರ್ಥ್ಯಗಳನ್ನು ಒದಗಿಸುವುದಾಗಿದೆ.

ಶಾಲೆಗಳಲ್ಲಿ ಅಡಿಪಾಯದ ಹಂತದ ಎಐ ಸಾಕ್ಷರತೆ

ರಾಷ್ಟ್ರೀಯ ಶಿಕ್ಷಣ ನೀತಿ 2020: ಎನ್‌ಇಪಿP 2020 ಡಿಜಿಟಲ್ ಮತ್ತು ಎಐ ಸಾಕ್ಷರತೆಯನ್ನು ಅತ್ಯಗತ್ಯ ಸಾಮರ್ಥ್ಯಗಳೆಂದು ಪರಿಗಣಿಸಿದೆ. ತಾಂತ್ರಿಕ ವಿಕಾಸಕ್ಕೆ ಮುಂದಿನ ಪೀಠಿಕೆಯನ್ನು ಸಿದ್ಧಪಡಿಸಲು ಎಲ್ಲಾ ಶಿಕ್ಷಣ ಹಂತಗಳಲ್ಲಿ ಕಂಪ್ಯೂಟೇಶನಲ್ ಚಿಂತನೆ ಮತ್ತು ಎಐ ಪರಿಕಲ್ಪನೆಗಳನ್ನು ಅಳವಡಿಸಿದೆ. ಈ ಸಮಗ್ರ ವಿಧಾನವು ಡೇಟಾ ಆಧಾರಿತ ನಿರ್ಧಾರ ಕೈಗೊಳ್ಳುವಿಕೆ ಮತ್ತು ನೈತಿಕ ಎಐ ತತ್ವಗಳ ಬಗ್ಗೆ ಆರಂಭಿಕ ಹಂತದಲ್ಲೇ ಅರಿವು ಮೂಡಿಸುತ್ತದೆ. ಇದು ಪ್ರಾಥಮಿಕ ಶಿಕ್ಷಣದಿಂದಲೇ ನಾವೀನ್ಯತೆಯ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಭಾರತೀಯ ವಿದ್ಯಾರ್ಥಿಗಳನ್ನು ಜಾಗತಿಕ ಎಐ ಪರಿಸರ ವ್ಯವಸ್ಥೆಯಲ್ಲಿ ಭವಿಷ್ಯದ ಕೊಡುಗೆದಾರರನ್ನಾಗಿ ರೂಪಿಸುತ್ತದೆ.

ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟೇಶನಲ್ ಚಿಂತನೆ (ಎಐ & ಸಿಟಿ): ಎಐ & ಸಿಟಿ ಉಪಕ್ರಮವು ಕಲಿಕೆ, ಆಲೋಚನೆ ಮತ್ತು ಬೋಧನಾ ವಿಧಾನಗಳನ್ನು ಮರು ವ್ಯಾಖ್ಯಾನಿಸುತ್ತಿದೆ. 3ನೇ ತರಗತಿಯಿಂದಲೇ ಪ್ರಾರಂಭವಾಗಿ "ಸಾರ್ವಜನಿಕ ಒಳಿತಿಗಾಗಿ ಎಐ" ಕಡೆಗೆ ಇದು ಹಂತ ಹಂತವಾಗಿ ಸಾಗುತ್ತದೆ. ಈ ಮೂಲಭೂತ ಉಪಕ್ರಮವು ನೈತಿಕ ಎಐ ಅಭ್ಯಾಸಗಳನ್ನು ಪಠ್ಯಕ್ರಮದಲ್ಲಿ ಸಾವಯವವಾಗಿ ಸಂಯೋಜಿಸುತ್ತದೆ, ಇದರಿಂದ ಎಳೆಯ ಕಲಿಯುವವರು ಅಲ್ಗಾರಿದಮ್‌ಗಳು, ಸಮಸ್ಯೆ ಪರಿಹಾರ ಮತ್ತು ಸಾಮಾಜಿಕ ಅನ್ವಯಿಕೆಗಳನ್ನು ಮೊದಲೇ ಗ್ರಹಿಸಲು ಸಾಧ್ಯವಾಗುತ್ತದೆ. ಇದು ಎಐ ಪ್ರಾಬಲ್ಯದ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುತ್ತದೆ.

ಯುವ ಫಾರ್ ಉನ್ನತಿ ವಿತ್ ಎಐ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಈ ಯೋಜನೆಯನ್ನು ರಾಷ್ಟ್ರೀಯ ಇ-ಗವರ್ನೆನ್ಸ್ ವಿಭಾಗದ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ. ಇದು 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಎಂಟು ಪ್ರಮುಖ ವಲಯಗಳಲ್ಲಿ ಪ್ರಾಯೋಗಿಕ ಎಐ ಪರಿಹಾರಗಳನ್ನು ವಿನ್ಯಾಸಗೊಳಿಸಲು ಶಕ್ತಿ ನೀಡುತ್ತದೆ.

ಎಲ್ಲರಿಗೂ ಯುವ ಎಐ: ಇದು 11 ಭಾಷೆಗಳಲ್ಲಿ (ಕನ್ನಡ ಸೇರಿದಂತೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು) ಉಚಿತ ರಾಷ್ಟ್ರೀಯ ಎಐ ಸಾಕ್ಷರತಾ ಕೋರ್ಸ್ ಅನ್ನು ನೀಡುತ್ತದೆ. ದೀಕ್ಷಾ, iGOT ಕರ್ಮಯೋಗಿ ಮತ್ತು FutureSkills Prime ಮೂಲಕ ಲಭ್ಯವಿರುವ ಈ ಕೋರ್ಸ್ 1 ಕೋಟಿ ನಾಗರಿಕರಿಗೆ ಮೂಲಭೂತ ಎಐ ಪ್ರಾವೀಣ್ಯತೆಯನ್ನು ನೀಡುವ ಗುರಿ ಹೊಂದಿದೆ. ಈ ಬೃಹತ್ ಪ್ರಮಾಣದ ಉಪಕ್ರಮವು ಜ್ಞಾನವನ್ನು ಎಲ್ಲರಿಗೂ ಸಮಾನವಾಗಿ ಹಂಚುತ್ತದೆ, ನಗರ-ಗ್ರಾಮೀಣ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಎಐ ಅನ್ನು ಪ್ರಮುಖ ಜೀವನ ಕೌಶಲ್ಯವಾಗಿ ಸ್ಥಾಪಿಸುತ್ತದೆ.

ವೃತ್ತಿಪರ ಮತ್ತು ಉದ್ಯಮ-ಆಧಾರಿತ ತರಬೇತಿ

ಕೌಶಲ್ಯ ಭಾರತ ಮಿಷನ್ ಮತ್ತು SOAR ಉಪಕ್ರಮ: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ನೇತೃತ್ವದ 'ಕೌಶಲ್ಯ ಭಾರತ ಮಿಷನ್', ಎಐ ಅನ್ನು ವೃತ್ತಿಪರ ತರಬೇತಿಯಲ್ಲಿ ಸಂಯೋಜಿಸುತ್ತಿದೆ. ಇದರ ಭಾಗವಾಗಿರುವ SOAR ಉಪಕ್ರಮವು ಮೈಕ್ರೋಸಾಫ್ಟ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ನ್ಯಾಸ್‌ಕಾಮ್ ಸಹಭಾಗಿತ್ವದೊಂದಿಗೆ ಡಿಸೆಂಬರ್ 2025 ರ ವೇಳೆಗೆ 1.34 ಲಕ್ಷ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ನೋಂದಾಯಿಸಿಕೊಂಡಿದೆ. ರಾಷ್ಟ್ರಪತಿಯವರ #SkilltheNation ಸವಾಲಿನ ಬೆಂಬಲದೊಂದಿಗೆ, ಇದು ಮೂಲಭೂತ ಮತ್ತು ಅನ್ವಯಿಕ ಎಐ ಕೋರ್ಸ್‌ಗಳನ್ನು ಒದಗಿಸುತ್ತದೆ. ಇದು ಉದ್ಯೋಗಪಡೆಗೆ ವೇಗವಾದ ಪರಿವರ್ತನೆಯನ್ನು ನೀಡುವ ಮೂಲಕ ಹೆಚ್ಚಿನ ಬೇಡಿಕೆಯಿರುವ ತಾಂತ್ರಿಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದೆ.

ಫ್ಯೂಚರ್‌ಸ್ಕಿಲ್ಸ್ ಪ್ರೈಮ್ ಉಪಕ್ರಮ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ನ್ಯಾಸ್‌ಕಾಮ್ ಸಹಯೋಗದ ಈ ಉಪಕ್ರಮವು ವೃತ್ತಿಪರರಿಗೆ ಎಐ, ಬಿಗ್ ಡೇಟಾ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ್ಯವನ್ನು ಹೆಚ್ಚಿಸಲು ಗಮನಹರಿಸುತ್ತದೆ. ಈ ಉಪಕ್ರಮವು ರಾಷ್ಟ್ರೀಯ ಉದ್ಯೋಗ ಗುಣಮಟ್ಟ ಮತ್ತು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉದ್ಯೋಗದಾತರು ಹೆಚ್ಚು ಮೌಲ್ಯೀಕರಿಸುವ ಕೌಶಲ್ಯಗಳನ್ನು ಕಲಿಯುವವರಿಗೆ ನೀಡುತ್ತಿದೆ. 25.3 ಲಕ್ಷಕ್ಕೂ ಹೆಚ್ಚು ನೋಂದಾಯಿತ ಕಲಿಯುವವರು ಮತ್ತು 3,000 ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಹೊಂದಿರುವ ಈ ವೇದಿಕೆಯು ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ನೇರ ಕೊಡುಗೆ ನೀಡುತ್ತಿದೆ.

ಕೌಶಲ್ಯ ಭಾರತ ಡಿಜಿಟಲ್ ಹಬ್: ಎಂಎಸ್‌ಡಿಇ ಯ ಕೌಶಲ್ಯ ಭಾರತ ಡಿಜಿಟಲ್ ಹಬ್ ಎಲ್ಲಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿ ತರುತ್ತದೆ. ಇದು ಕಲಿಯುವವರ ಸಾಮರ್ಥ್ಯಕ್ಕೆ ಅನುಗುಣವಾಗಿ ಆರಂಭಿಕ ಹಂತದಿಂದ ಸುಧಾರಿತ ಹಂತದವರೆಗಿನ ಎಐ ಮತ್ತು ಮೆಷಿನ್ ಲರ್ನಿಂಗ್ ಕೋರ್ಸ್‌ಗಳನ್ನು ಒದಗಿಸುತ್ತದೆ. ಗುಣಮಟ್ಟದ ತರಬೇತಿಯನ್ನು ಸುಲಭವಾಗಿ ಪಡೆಯುವಂತೆ ಮಾಡುವ ಮೂಲಕ, ಇದು ಜೀವನಪರ್ಯಂತ ಕಲಿಕೆ ಮತ್ತು ಪ್ರಾದೇಶಿಕ ಒಳಗೊಳ್ಳುವಿಕೆಯನ್ನು ಬೆಂಬಲಿಸುತ್ತದೆ. ಇದರ ಫಲವಾಗಿ, ಯಾವುದೇ ಹಿನ್ನೆಲೆಯ ಅಥವಾ ಯಾವುದೇ ಸ್ಥಳದ ಉದ್ಯೋಗಾಕಾಂಕ್ಷಿಗಳು ಎಐ-ಕೇಂದ್ರಿತ ವೃತ್ತಿಜೀವನದ ಕಡೆಗೆ ಮುನ್ನಡೆಯಲು ಸಾಧ್ಯವಾಗುತ್ತಿದೆ.

ಸುಧಾರಿತ ಎಐ ಪ್ರತಿಭೆ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆ

ಇಂಡಿಯಾ-ಎಐ ಫ್ಯೂಚರ್‌ಸ್ಕಿಲ್ಸ್: 'ಇಂಡಿಯಾ ಎಐ ಮಿಷನ್' ಅಡಿಯಲ್ಲಿ, ಇಂಡಿಯಾ-ಎಐ ಫ್ಯೂಚರ್‌ಸ್ಕಿಲ್ಸ್ ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ಗಳನ್ನು ಹಾಗೂ ವಿಶೇಷ ಕೌಶಲ್ಯ ವರ್ಧನೆ ಕೋರ್ಸ್‌ಗಳನ್ನು ನೀಡುವ ಮೂಲಕ ಒಂದು ಗಣ್ಯ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಡಿಸೆಂಬರ್ 2025 ರ ವೇಳೆಗೆ ಈ ಯೋಜನೆಯು 500 ಪಿಎಚ್‌ಡಿ ಸಂಶೋಧಕರು, 5,000 ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು 8,000 ಪದವಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದೆ. ಈ ಉದ್ದೇಶಿತ ಕ್ರಮವು ಸಂಶೋಧನಾ ಪ್ರತಿಭೆಗಳನ್ನು ಪೋಷಿಸುತ್ತದೆ, ನಾವೀನ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಭಾರತದ ನಾಯಕತ್ವವನ್ನು ಗಟ್ಟಿಗೊಳಿಸಲು ಸುಧಾರಿತ ಎಐ ತಜ್ಞರ ನಿರಂತರ ಪೂರೈಕೆಯನ್ನು ಖಚಿತಪಡಿಸುತ್ತದೆ.

ಇಂಡಿಯಾ-ಎಐ ಡೇಟಾ ಮತ್ತು ಎಐ ಲ್ಯಾಬ್‌ಗಳು: ಎನ್‌ಐಇಎಲ್‌ಐಟಿ ಮೂಲಕ ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಈಗಾಗಲೇ 27 ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ, 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಇರುವ ಐಟಿಐ ಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಹೆಚ್ಚುವರಿ 174 ಲ್ಯಾಬ್‌ಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಈ ಲ್ಯಾಬ್‌ಗಳು ಎಐ ಕೋರ್ಸ್‌ವರ್ಕ್, ಡೇಟಾ ಕ್ಯುರೇಶನ್, ಅನೋಟೇಶನ್, ಡೇಟಾ ಕ್ಲೀನಿಂಗ್ ಮತ್ತು ಅನ್ವಯಿಕ ಡೇಟಾ ಸೈನ್ಸ್ ವಿಷಯಗಳಿಗೆ ಒತ್ತು ನೀಡುತ್ತವೆ. ಈ ಕೇಂದ್ರಗಳು ಉನ್ನತ ಮಟ್ಟದ ಸಂಪನ್ಮೂಲಗಳನ್ನು ವಿಕೇಂದ್ರೀಕರಿಸುತ್ತವೆ, ತಳಮಟ್ಟದ ಸಂಶೋಧನೆಯನ್ನು ಪ್ರೋತ್ಸಾಹಿಸುತ್ತವೆ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡುತ್ತವೆ. ಇದು ಎಐ ಸಾಮರ್ಥ್ಯಗಳು ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗದೆ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುವುದನ್ನು ಖಚಿತಪಡಿಸುತ್ತದೆ.

"ತರಗತಿಗಳಿಂದ ಹಿಡಿದು ಸುಧಾರಿತ ಪ್ರಯೋಗಾಲಯಗಳವರೆಗೆ, ಈ ಬಹು-ಹಂತದ ಶ್ರೇಣೀಕೃತ ವ್ಯವಸ್ಥೆಯು ಎಲ್ಲರಿಗೂ ವಿಶಾಲವಾದ ಲಭ್ಯತೆ, ಪ್ರಾದೇಶಿಕ ಸಮಾನತೆ ಮತ್ತು ಉದ್ಯಮದ ಅಗತ್ಯಗಳಿಗೆ ತಕ್ಕಂತೆ ಸಜ್ಜಾಗುವುದನ್ನು ಖಾತರಿಪಡಿಸುತ್ತದೆ. ಇದು ಭಾರತದ ಯುವಜನತೆಯನ್ನು ನೈತಿಕ ಎಐ ನಾವೀನ್ಯತೆಗಾಗಿ ಸಬಲೀಕರಿಸುವುದಲ್ಲದೆ, ಎಐ-ಚಾಲಿತ ಆರ್ಥಿಕತೆಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುತ್ತದೆ."

ಭಾರತ-ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಯುವ ಸಬಲೀಕರಣ

ಭಾರತ-ಎಐ ಇಂಪ್ಯಾಕ್ಟ್ ಶೃಂಗಸಭೆ 2026, ದೇಶದ ಎಐ ರೂಪಾಂತರದ ಪಯಣದಲ್ಲಿ ಯುವಜನತೆ ಮತ್ತು ಒಳಗೊಳ್ಳುವಿಕೆಯ ಪ್ರತಿಭಾ ಅಭಿವೃದ್ಧಿಯನ್ನು ಕೇಂದ್ರಬಿಂದುವಾಗಿರಿಸಿದೆ. ಜಾಗತಿಕ ಸವಾಲುಗಳು, ನಾವೀನ್ಯತೆ ಪ್ರದರ್ಶನಗಳು ಮತ್ತು ನೀತಿ ಸಂವಾದಗಳ ಮೂಲಕ, ಯುವ ಸಂಶೋಧಕರು ಮತ್ತು ಮಹಿಳಾ ಉದ್ಯಮಿಗಳು ಸಾರ್ವಜನಿಕ ಒಳಿತಿಗಾಗಿ ಜವಾಬ್ದಾರಿಯುತ ಮತ್ತು ವಿಸ್ತರಿಸಬಹುದಾದ ಎಐ ಪರಿಹಾರಗಳನ್ನು ಹೇಗೆ ರೂಪಿಸುತ್ತಿದ್ದಾರೆ ಎಂಬುದನ್ನು ಈ ಶೃಂಗಸಭೆಯು ಎತ್ತಿ ತೋರಿಸುತ್ತಿದೆ.

ಭಾರತದ ಸಾರ್ವಭೌಮ ಎಐ ದೃಷ್ಟಿಕೋನದ ಕೇಂದ್ರದಲ್ಲಿ ಯುವಜನತೆ:

ಶೃಂಗಸಭೆಯಲ್ಲಿ ಯುವ ಸಬಲೀಕರಣವನ್ನು ಭಾರತದ ಸಾರ್ವಭೌಮ ಎಐ ಸಾಮರ್ಥ್ಯಗಳನ್ನು ಹೆಚ್ಚಿಸುವ ವಿಶಾಲ ದೃಷ್ಟಿಕೋನದೊಂದಿಗೆ ಸಂಯೋಜಿಸಲಾಗಿದೆ. "ಭಾರತದ ಸಾರ್ವಭೌಮ ಎಐ ಮತ್ತು ಡೇಟಾದಿಂದ ಪ್ರಭಾವವನ್ನು ಹೆಚ್ಚಿಸುವುದು" ಎಂಬ ಅಧಿವೇಶನವು ಆಳವಾದ ಸಂಶೋಧನಾ ಪ್ರತಿಭೆಗಳು, ಸುಸ್ಥಿರ ನಾವೀನ್ಯತೆ ಪರಿಸರ ವ್ಯವಸ್ಥೆಗಳು ಮತ್ತು ಭಾರತದ ಭಾಷಾ ಮತ್ತು ಅಭಿವೃದ್ಧಿ ಸನ್ನಿವೇಶಗಳಿಗೆ ತಕ್ಕಂತೆ ಸ್ಥಳೀಯ ಎಐ ಮಾದರಿಗಳನ್ನು ಬೆಳೆಸುವ ಅಗತ್ಯವನ್ನು ಒತ್ತಿಹೇಳಿತು. ಯುವ ಸಂಶೋಧಕರು ಪಾರದರ್ಶಕ, ವಿವರಿಸಬಹುದಾದ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾದ ಎಐ ವ್ಯವಸ್ಥೆಗಳನ್ನು ನಿರ್ಮಿಸಲು ಸಜ್ಜಾಗಬೇಕು ಎಂದು ನಾಯಕರು ತಿಳಿಸಿದರು. ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಹಣಕಾಸು ಒಳಗೊಳ್ಳುವಿಕೆಯಂತಹ ಆದ್ಯತೆಯ ವಲಯಗಳೊಂದಿಗೆ ಸುಧಾರಿತ ಎಐ ಸಂಶೋಧನೆಯನ್ನು ಜೋಡಿಸುವ ಮೂಲಕ, ಭಾರತದ ಯುವಜನತೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಸಾಮಾಜಿಕ ಪ್ರಭಾವ ಬೀರುವ ಎಐ ಪರಿಹಾರಗಳ ಪ್ರಮುಖ ಚಾಲಕರನ್ನಾಗಿ ಈ ಶೃಂಗಸಭೆ ರೂಪಿಸುತ್ತಿದೆ.

ಅಲ್ಗಾರಿದಮ್‌ಗಳಿಂದ ಫಲಿತಾಂಶಗಳವರೆಗೆ:

ಶೃಂಗಸಭೆಯಲ್ಲಿ, ಅಳೆಯಬಹುದಾದ ಸಾರ್ವಜನಿಕ ಪ್ರಭಾವವನ್ನು ನೀಡುವ ಎಐ ಅನ್ನು ನಿರ್ಮಿಸುವ ಮೂಲಕ ಯುವಜನರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಲಾಗುತ್ತಿದೆ. ವಿದ್ಯನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್ ಅವರು, ಇಂಡಿಯಾ ಎಐ ಮಿಷನ್ ಅನ್ನು ಕಂಪ್ಯೂಟ್, ಮಾದರಿಗಳು ಮತ್ತು ಡೇಟಾವನ್ನು ಪ್ರಾಯೋಗಿಕ ಅನ್ವಯಿಕೆಗಳಾಗಿ ಪರಿವರ್ತಿಸುವ ಮೂಲಕ ನೈಜ ಪ್ರಪಂಚದ ಸವಾಲುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು. ಆರೋಗ್ಯ, ಕೃಷಿ, ಶಿಕ್ಷಣ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ 600 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ತಮ್ಮ ಎಐ ಪರಿಹಾರಗಳನ್ನು ಪ್ರದರ್ಶಿಸುತ್ತಿವೆ. ಯುವಜನರು ಕೇವಲ ತಂತ್ರಜ್ಞರಾಗಿರದೆ, ನಾಗರಿಕ ಕೇಂದ್ರಿತ ಎಐ ವ್ಯವಸ್ಥೆಗಳ ಕೊಡುಗೆದಾರರಾಗುವಂತೆ ಮಾಡಲು ಇದು ವೇದಿಕೆ ಒದಗಿಸಿದೆ.

ಯುವ ಗ್ಲೋಬಲ್ ಯೂತ್ ಚಾಲೆಂಜ್:

ಇಂಡಿಯಾ ಎಐ ಮಿಷನ್ ಅಡಿಯಲ್ಲಿನ ಈ ಪ್ರಮುಖ ಉಪಕ್ರಮವು 13-21 ವರ್ಷ ವಯಸ್ಸಿನ ಯುವ ಸಂಶೋಧಕರಿಗೆ 'ಜನರು, ಭೂಮಿ ಮತ್ತು ಪ್ರಗತಿ' ಎಂಬ ಉದ್ದೇಶಗಳೊಂದಿಗೆ ಎಐ ಪರಿಹಾರಗಳನ್ನು ನಿರ್ಮಿಸಲು ಅಧಿಕಾರ ನೀಡುತ್ತಿದೆ. 38 ದೇಶಗಳಿಂದ 2,500 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಆರೋಗ್ಯ, ಕೃಷಿ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸ್ಮಾರ್ಟ್ ಮೊಬಿಲಿಟಿಯಂತಹ ಕ್ಷೇತ್ರಗಳಲ್ಲಿ 70 ಅತ್ಯುತ್ತಮ ತಂಡಗಳನ್ನು ಗುರುತಿಸಲಾಗಿದೆ. ವಿಜೇತ ತಂಡಗಳಿಗೆ ರಾಷ್ಟ್ರೀಯ ಮನ್ನಣೆಯೊಂದಿಗೆ ಹಣಕಾಸಿನ ನೆರವು, ಮಾರ್ಗದರ್ಶನ ಮತ್ತು ಇನ್ಕ್ಯುಬೇಶನ್ ಬೆಂಬಲವನ್ನು ನೀಡಲಾಯಿತು.

ಎಐ ಬೈ ಹರ್‌ ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್:

ಈ ಸವಾಲು ಮಹಿಳೆಯರನ್ನು ಮತ್ತು ಯುವ ಸಂಶೋಧಕರನ್ನು ಭಾರತದ ಜವಾಬ್ದಾರಿಯುತ ಎಐ ಆಂದೋಲನದ ಮುಂಚೂಣಿಯಲ್ಲಿರಿಸಿದೆ. ಹವಾಮಾನ ಸ್ಥಿತಿಸ್ಥಾಪಕತ್ವ, ಫಿನ್‌ಟೆಕ್ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ಸಹಾನುಭೂತಿ-ಚಾಲಿತ ನಾವೀನ್ಯತೆಗಳು ಹೇಗೆ ಬದಲಾವಣೆ ತರಬಲ್ಲವು ಎಂಬುದನ್ನು ಇದು ಪ್ರದರ್ಶಿಸಿತು. 150 ಮಹಿಳಾ ನೇತೃತ್ವದ ಎಐ ಸ್ಟಾರ್ಟ್‌ಅಪ್‌ಗಳಿಗೆ ಮೀಸಲಾದ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವನ್ನು ಘೋಷಿಸುವ ಮೂಲಕ, ಕಲ್ಪನೆಯಿಂದ ಹಿಡಿದು ಉದ್ಯಮವನ್ನು ಬೆಳೆಸುವವರೆಗೆ ಬೆಂಬಲ ನೀಡುವ ಬದ್ಧತೆಯನ್ನು ಶೃಂಗಸಭೆಯು ಪುನರುಚ್ಚರಿಸಿತು.

ಕಾರ್ಮಿಕ ಮಾರುಕಟ್ಟೆಯ ಮೇಲೆ ಎಐ ಪ್ರಭಾವ:

"ಕಾರ್ಮಿಕ ಮಾರುಕಟ್ಟೆಯ ಸ್ಥಿತಿಸ್ಥಾಪಕತ್ವಕ್ಕಾಗಿ ಡೇಟಾ" ಎಂಬ ಅಧಿವೇಶನವು ಎಐ ಅಳವಡಿಕೆಯಿಂದಾಗಿ ಉದ್ಯೋಗಗಳ ಸ್ವರೂಪ ಹೇಗೆ ಬದಲಾಗುತ್ತಿದೆ ಎಂಬ ಬಗ್ಗೆ ಚರ್ಚಿಸಿತು. ಹೆಚ್ಚಿನ ಎಐ ಪ್ರಭಾವವಿರುವ ಪಾತ್ರಗಳಲ್ಲಿ ಕೆಲಸ ಮಾಡುವ ಯುವ ಕಾರ್ಮಿಕರ ಮೇಲೆ ಉದ್ಯೋಗದ ಒತ್ತಡವಿರುವ ಆರಂಭಿಕ ಪ್ರವೃತ್ತಿಗಳನ್ನು ಇದು ಗುರುತಿಸಿದ್ದು, ಈ ಬದಲಾವಣೆಯನ್ನು ನಿರ್ವಹಿಸಲು ಅಗತ್ಯವಾದ ನೀತಿ ಆಯ್ಕೆಗಳ ಬಗ್ಗೆ ಚರ್ಚಿಸಿತು.

ಎಐ ಇಂಪ್ಯಾಕ್ಟ್ ಸ್ಟಾರ್ಟ್‌ಅಪ್ ಬುಕ್:

ಭಾರತದಾದ್ಯಂತ ಅಭಿವೃದ್ಧಿಪಡಿಸಲಾದ 100 ಕ್ಕೂ ಹೆಚ್ಚು ಎಐ ಪರಿಹಾರಗಳ ಸಂಕಲನವಾದ 'ಎಐ ಇಂಪ್ಯಾಕ್ಟ್ ಸ್ಟಾರ್ಟ್‌ಅಪ್ ಬುಕ್' ಅನ್ನು ಬಿಡುಗಡೆ ಮಾಡಲಾಯಿತು. ಮುಂದಿನ 12-18 ತಿಂಗಳಲ್ಲಿ ಭಾರತವನ್ನು ಎಐ "ಯೂಸ್-ಕೇಸ್ ಕ್ಯಾಪಿಟಲ್" (ಬಳಕೆಯ ಮಾದರಿಗಳ ರಾಜಧಾನಿ) ಮಾಡುವ ಗುರಿಯನ್ನು ಈ ಮೂಲಕ ವ್ಯಕ್ತಪಡಿಸಲಾಯಿತು.

ಒಟ್ಟಾರೆಯಾಗಿ, ಈ ಎಲ್ಲಾ ಉಪಕ್ರಮಗಳು ಯುವ ನಾಯಕತ್ವ ಮತ್ತು ಲಿಂಗ ವೈವಿಧ್ಯತೆಯಿಂದ ನಡೆಸಲ್ಪಡುವ ಭವಿಷ್ಯದ ಸಜ್ಜಾದ, ಅಂತರ್ಗತ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತವೆ.

ಎಐ ಕ್ಷೇತ್ರದಲ್ಲಿ ಭಾರತದ ಪ್ರತಿಭಾ ಸಾಮರ್ಥ್ಯದ ನಾಯಕತ್ವದ ಜಾಗತಿಕ ಸೂಚಕಗಳು

2047ರ ವೇಳೆಗೆ 'ವಿಕಸಿತ ಭಾರತ' ಎಂಬ ದೃಷ್ಟಿಕೋನದ ಹಾದಿಯಲ್ಲಿರುವ ಭಾರತದಲ್ಲಿ, ಈಗ ಶೇ. 50% ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮೆಟ್ರೋಪಾಲಿಟನ್ ನಗರಗಳ ಆಚೆಗಿನ ಪ್ರದೇಶಗಳಿಂದ (ಸಣ್ಣ ನಗರಗಳು ಮತ್ತು ಗ್ರಾಮೀಣ ಭಾಗ) ಹೊರಹೊಮ್ಮುತ್ತಿವೆ. ಇದು ಭಾರತದಲ್ಲಿ ನಾವೀನ್ಯತೆ ಎಂಬುದು ಕೇವಲ ಮೆಟ್ರೋಪಾಲಿಟನ್ ನಗರಗಳಿಗೆ ಮಾತ್ರ ಸೀಮಿತ ಎಂಬ ಭ್ರಮೆಯನ್ನು ದೂರ ಮಾಡಿದೆ.

ಯುವ ನೇತೃತ್ವದ ಎಐ ನಾಯಕತ್ವವನ್ನು ಪ್ರತಿಬಿಂಬಿಸುವ ಜಾಗತಿಕ ಸೂಚಕಗಳು:

ಎಐ ಕೌಶಲ್ಯಗಳ ಹೆಚ್ಚಿನ ವ್ಯಾಪ್ತಿ: ಸ್ಟ್ಯಾನ್‌ಫೋರ್ಡ್ ಗ್ಲೋಬಲ್ ಎಐ ಇಂಡೆಕ್ಸ್ ರಿಪೋರ್ಟ್ 2025ರ ಪ್ರಕಾರ, ಭಾರತದ ಎಐ ಕೌಶಲ್ಯಗಳ ಸಾಪೇಕ್ಷ ವ್ಯಾಪ್ತಿಯು ಜಾಗತಿಕ ಸರಾಸರಿಗಿಂತ 2.5 ಪಟ್ಟು ಹೆಚ್ಚಿದೆ. ಇದು ದೇಶದಲ್ಲಿ ಹಮ್ಮಿಕೊಂಡ ಆರಂಭಿಕ ಮತ್ತು ವ್ಯಾಪಕ ಶ್ರೇಣಿಯ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.

ಉದ್ಯಮಗಳಲ್ಲಿ ವ್ಯಾಪಕ ಅಳವಡಿಕೆ: ನ್ಯಾಸ್‌ಕಾಮ್ ಎಐ ಅಳವಡಿಕೆ ಸೂಚ್ಯಂಕದ ಪ್ರಕಾರ, ಭಾರತದ ಶೇ. 87 ರಷ್ಟು ಉದ್ಯಮಗಳು ಸಕ್ರಿಯವಾಗಿ ಎಐ ಪರಿಹಾರಗಳನ್ನು ಬಳಸುತ್ತಿವೆ. ಇದು ಎಐ-ಸಿದ್ಧ ಯುವಜನತೆಗೆ ನಿರಂತರ ಬೇಡಿಕೆಯನ್ನು ಸೃಷ್ಟಿಸುತ್ತಿದೆ ಮತ್ತು ಶಾಲಾ ಶಿಕ್ಷಣದಿಂದ ವೃತ್ತಿಜೀವನದವರೆಗಿನ ಸಂಪರ್ಕವನ್ನು  ಬಲಪಡಿಸುತ್ತಿದೆ.

ಜನಸಂಖ್ಯಾ ಅನುಕೂಲ: ಡಿಜಿಟಲ್ ಬದಲಾವಣೆಗಳಿಗೆ ತ್ವರಿತವಾಗಿ ಹೊಂದಿಕೊಳ್ಳುವ ವಿಶ್ವದ ಅತಿದೊಡ್ಡ ಯುವ ಸಮೂಹವನ್ನು ಭಾರತ ಹೊಂದಿದೆ. ಇದು ಯುವಾನಂತಹ ಎಐ ಕಲಿಕೆ ಮತ್ತು ನಾವೀನ್ಯತೆ ಕಾರ್ಯಕ್ರಮಗಳಲ್ಲಿ ಬೃಹತ್ ಪ್ರಮಾಣದ ಪಾಲ್ಗೊಳ್ಳುವಿಕೆಗೆ ದಾರಿ ಮಾಡಿಕೊಡುತ್ತಿದೆ.

ಭಾರತ-ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗಿನ್ನೆಸ್ ವಿಶ್ವ ದಾಖಲೆ

ಯುವಜನರ ಪಾಲ್ಗೊಳ್ಳುವಿಕೆಯು ಕೇವಲ ನಾವೀನ್ಯತೆಗೆ ಸೀಮಿತವಾಗದೆ, ಜವಾಬ್ದಾರಿಯುತ ಎಐ ಅಳವಡಿಕೆಯತ್ತಲೂ ವಿಸ್ತರಿಸಿದೆ. ಭಾರತವು ಕೇವಲ 24 ಗಂಟೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು 'ಎಐ ಜವಾಬ್ದಾರಿಯ ಪ್ರತಿಜ್ಞೆ'ಗಳನ್ನು  ಪಡೆಯುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ. 'ಇಂಡಿಯಾ ಎಐ ಮಿಷನ್' ಅಡಿಯಲ್ಲಿ ಇಂಟೆಲ್ ಇಂಡಿಯಾ ಸಹಯೋಗದೊಂದಿಗೆ ನಡೆಸಲಾದ ಈ ರಾಷ್ಟ್ರವ್ಯಾಪಿ ಅಭಿಯಾನವು, ನೈತಿಕ, ಪಾರದರ್ಶಕ ಮತ್ತು ಉತ್ತರದಾಯಿತ ಎಐ ಬಳಕೆಗೆ ಬದ್ಧರಾಗುವಂತೆ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಹುರಿದುಂಬಿಸಿತು. ಸಂವಾದಾತ್ಮಕ ಸನ್ನಿವೇಶಗಳ ಮೂಲಕ ಡೇಟಾ ಗೌಪ್ಯತೆ, ತಪ್ಪು ಮಾಹಿತಿ ಮತ್ತು ಹೊಣೆಗಾರಿಕೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಈ ಉಪಕ್ರಮವು ಯುವಜನತೆಯನ್ನು ವಿಶ್ವಾಸಾರ್ಹ ಎಐ ನ ರಕ್ಷಕರನ್ನಾಗಿ ರೂಪಿಸಿದೆ. ಈ ಬೃಹತ್ ಪ್ರಮಾಣದ ಭಾಗವಹಿಸುವಿಕೆಯು ಬೆಳೆಯುತ್ತಿರುವ ಜವಾಬ್ದಾರಿಯುತ ಡಿಜಿಟಲ್ ಪೌರತ್ವದ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಹಾಗೂ ಮಾನವ-ಕೇಂದ್ರಿತ ಮತ್ತು ನೈತಿಕ ಅಡಿಪಾಯ ಹೊಂದಿರುವ ಎಐ ಪರಿಸರ ವ್ಯವಸ್ಥೆಯ ಭಾರತದ ದೃಷ್ಟಿಕೋನವನ್ನು ಬಲಪಡಿಸುತ್ತದೆ.

ಒಟ್ಟಾರೆಯಾಗಿ, ಈ ಸೂಚಕಗಳು ಯುವ್‌ಎಐ ಕಾರ್ಯಕ್ರಮವು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಹೊಂದಿರುವ ಬೃಹತ್ ರಾಷ್ಟ್ರೀಯ ಪರಿಸರ ವ್ಯವಸ್ಥೆಯೊಳಗೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಎತ್ತಿ ತೋರಿಸುತ್ತವೆ. ಆರಂಭಿಕ ಹಂತದ ಎಐ ಪರಿಚಯವನ್ನು ಬಲವಾದ ಜಾಗತಿಕ ಶ್ರೇಯಾಂಕಗಳು, ಉದ್ಯಮಗಳ ಅಳವಡಿಕೆ ಮತ್ತು ಜನಸಂಖ್ಯಾ ಪ್ರಮಾಣದೊಂದಿಗೆ ಜೋಡಿಸುವ ಮೂಲಕ, ಭಾರತವು ತನ್ನ ಯುವಜನತೆಯನ್ನು ಜಾಗತಿಕ ಎಐ ಭೂದೃಶ್ಯದಲ್ಲಿ ಸಕ್ರಿಯ ಪಾಲ್ಗೊಳ್ಳುವವರನ್ನಾಗಿ ಮತ್ತು ಭವಿಷ್ಯದ ನಾಯಕರನ್ನಾಗಿ ರೂಪಿಸುತ್ತಿದೆ. ಇದು ಜವಾಬ್ದಾರಿಯುತ ಮತ್ತು ಒಳಗೊಳ್ಳುವಿಕೆಯ ಕೃತಕ ಬುದ್ಧಿಮತ್ತೆಯ ವಿಶ್ವಾಸಾರ್ಹ ಕೇಂದ್ರವಾಗಿ ದೇಶದ ಪಾತ್ರವನ್ನು ಬಲಪಡಿಸುತ್ತಿದೆ.

ಉಪಸಂಹಾರ

ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಭಾರತದ ಯುವ ಜನಸಂಖ್ಯಾ ಲಾಭವು ಒಂದು ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ನಿರಂತರ ನೀತಿ ಬೆಂಬಲ, ಬೃಹತ್ ಪ್ರಮಾಣದ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು ಮತ್ತು ಎಲ್ಲರಿಗೂ ಲಭ್ಯವಿರುವ ಡಿಜಿಟಲ್ ಮೂಲಸೌಕರ್ಯದ ಮೂಲಕ, ದೇಶವು ತನ್ನ ಜನಸಂಖ್ಯಾ ಅನುಕೂಲವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಪ್ರತಿಭಾ ಪರಿಸರ ವ್ಯವಸ್ಥೆಯನ್ನಾಗಿ ಪರಿವರ್ತಿಸುತ್ತಿದೆ.

ಭಾರತ-ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ ಮೂಲಕ ಯುವ ನೇತೃತ್ವದ ನಾವೀನ್ಯತೆ, ಜವಾಬ್ದಾರಿಯುತ ಎಐ ಅಳವಡಿಕೆ ಮತ್ತು ಉದ್ಯಮದ ಅಗತ್ಯತೆಗಳು ಹೇಗೆ ಒಂದಾಗಿ ಸಮಗ್ರ ಮತ್ತು ಫಲಿತಾಂಶ-ಆಧಾರಿತ ಬೆಳವಣಿಗೆಯನ್ನು ಉತ್ತೇಜಿಸುತ್ತಿವೆ ಎಂಬುದು ಸ್ಪಷ್ಟವಾಗಿದೆ. ಭಾರತವು 'ವಿಕಸಿತ ಭಾರತ'ದತ್ತ ಮುನ್ನಡೆಯುತ್ತಿರುವಾಗ, ತನ್ನ ಯುವ ಜನಸಂಖ್ಯೆಯನ್ನು ಎಐ ಸಾಮರ್ಥ್ಯಗಳೊಂದಿಗೆ ಸಬಲೀಕರಿಸುವುದು ದೀರ್ಘಕಾಲದ ಉತ್ಪಾದಕತೆ, ಸ್ಥಿತಿಸ್ಥಾಪಕತ್ವ ಮತ್ತು ಜಾಗತಿಕ ನಾಯಕತ್ವಕ್ಕೆ ಕೇಂದ್ರಬಿಂದುವಾಗಿ ಮುಂದುವರಿಯಲಿದೆ.

 

References

Ministry of Electronics and IT

 

Ministry of Information and Broadcasting

Ministry of Science and Technology

https://www.pib.gov.in/PressReleasePage.aspx?PRID=2217689&reg=3&lang=1

PIB Headquarters

Click here to see PDF

******

(Explainer ID: 157493) आगंतुक पटल : 7
Provide suggestions / comments
इस विज्ञप्ति को इन भाषाओं में पढ़ें: Gujarati , Malayalam , English , Urdu , हिन्दी , Bengali
Link mygov.in
National Portal Of India
STQC Certificate