• Skip to Content
  • Sitemap
  • Advance Search
Technology

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಸರ್ಕಾರ, ಸ್ಟಾರ್ಟ್‌ಅಪ್‌ಗಳು ಮತ್ತು  ಕ್ರೀಯೇಟರ್ಸ್‌ ಗಳ ಸಂಗಮ

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮಾಧ್ಯಮ, ಗೇಮಿಂಗ್ ಮತ್ತು ಸೃಜನಶೀಲ ತಂತ್ರಜ್ಞಾನಗಳಲ್ಲಿ ಸ್ಟಾರ್ಟ್‌ಅಪ್-ಚಾಲಿತ ಎಐ ನಾವೀನ್ಯತೆಗಳನ್ನು ಪ್ರದರ್ಶಿಸುತ್ತಿದೆ.

Posted On: 17 FEB 2026 6:29PM

ಪ್ರಮುಖ ಮಾರ್ಗಸೂಚಿಗಳು

  • ವೇವ್ಸ್‌ ಕ್ರಿಯೇಟರ್ಸ್ ಕಾರ್ನರ್: ಇದು ಸೃಜನಶೀಲ ವಲಯಗಳಲ್ಲಿ ಮಾರುಕಟ್ಟೆಗೆ ಸಿದ್ಧವಾಗಿರುವ ಎಐಪರಿಹಾರಗಳನ್ನು ಮತ್ತು ಸಂಸ್ಥಾಪಕ-ಚಾಲಿತ ನಾವೀನ್ಯತೆಗಳನ್ನು ಪ್ರದರ್ಶಿಸುವ ಪ್ರಾಥಮಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
  • ಸ್ಟಾರ್ಟ್‌ಅಪ್‌ಗಳ ಭಾಗವಹಿಸುವಿಕೆ: ಎವಿಜಿಸಿ-ಎಕ್ಸ್‌ಆರ್‌ (ಅನಿಮೇಷನ್, ವಿಡಿಯೋ ಗೇಮ್ಸ್, ಕಾಮಿಕ್ಸ್) ಮತ್ತು ಮೀಡಿಯಾ ಟೆಕ್ ವಲಯದ 51 ಸ್ಟಾರ್ಟ್‌ಅಪ್‌ಗಳ ಭಾಗವಹಿಸುವಿಕೆಯು ಭಾರತದ ಎಐ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯ ಆಳ ಮತ್ತು ಕಾರ್ಯಕ್ಷಮತೆಯ ಪ್ರೌಢಿಮೆಯನ್ನು ಪ್ರತಿಬಿಂಬಿಸುತ್ತದೆ.
  • ಎಂಐಬಿಅಡೋಬ್‌ ಸಹಯೋಗ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಎಂಐಬಿ) ಮತ್ತು ಅಡೋಬ್ ನಡುವಿನ ಸಹಯೋಗವು ಎಐ-ಚಾಲಿತ ಸೃಜನಶೀಲ ಕೆಲಸದ ಹರಿವು, ಚಲನಚಿತ್ರ ನಿರ್ಮಾಣದಲ್ಲಿನ ನಾವೀನ್ಯತೆ ಮತ್ತು ಮೂಲ ಬೌದ್ಧಿಕ ಆಸ್ತಿ ರಚನೆಯನ್ನು ಉಲ್ಲೇಖಿಸಿದ್ದಾರೆ.
  • ಎಐ-ಚಾಲಿತ ಗೇಮಿಂಗ್ ಮತ್ತು ಇಮ್ಮರ್ಸಿವ್ ಮೀಡಿಯಾ: ಇವುಗಳು ಸೃಜನಶೀಲ ಉತ್ಪಾದನೆ, ನೇರ ಕ್ರೀಡಾ ತೊಡಗಿಸಿಕೊಳ್ಳುವಿಕೆ, ಹೊಂದಾಣಿಕೆಯ ಗೇಮ್‌ಪ್ಲೇ ಮತ್ತು ಉದ್ಯಮ ಬಳಕೆಗಳಲ್ಲಿನ ಅನ್ವಯಿಕೆಗಳನ್ನು ಪ್ರದರ್ಶಿಸುತ್ತಿವೆ.

ಪೀಠಿಕೆ

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಫೆಬ್ರವರಿ 16, 2026 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಪ್ರಾರಂಭವಾಯಿತು. ಇದು ಜಾಗತಿಕ ದಕ್ಷಿಣದ ದೇಶಗಳಲ್ಲಿ ಆಯೋಜಿಸಲಾದ ಕೃತಕ ಬುದ್ಧಿಮತ್ತೆಯ ಮೊದಲ ಅಂತರರಾಷ್ಟ್ರೀಯ ಶೃಂಗಸಭೆಯಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು ಜಾಗತಿಕ ಎಐ ಸಂವಾದದಲ್ಲಿ ಭಾರತವನ್ನು ಒಂದು ಪ್ರಮುಖ ಕೇಂದ್ರವನ್ನಾಗಿ ರೂಪಿಸಿದೆ; ಇದು ಜನರು, ಪ್ರಗತಿ ಮತ್ತು ಭೂಮಿಗೆ ಆದ್ಯತೆ ನೀಡುವ ಎಐ-ಚಾಲಿತ ಬೆಳವಣಿಗೆಯನ್ನು ಒತ್ತಿಹೇಳುತ್ತದೆ. ನಾವೀನ್ಯತೆ ಮತ್ತು ಬೃಹತ್ ಪ್ರಮಾಣದ ನಿಯೋಜನೆಯಲ್ಲಿ ಸ್ಟಾರ್ಟ್‌ಅಪ್‌ಗಳು ಮುಂಚೂಣಿಯಲ್ಲಿರುವ ಈ ಶೃಂಗಸಭೆಯು, ಒಳಗೊಳ್ಳುವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಜೊತೆಗೆ ಜವಾಬ್ದಾರಿಯುತ ಹಾಗೂ ಸ್ವದೇಶಿ ಎಐ ಸಾಮರ್ಥ್ಯಗಳ ಬಗ್ಗೆ ಭಾರತದ ದೃಷ್ಟಿಕೋನವನ್ನು ಮುಂದುವರಿಸುತ್ತದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (ಎಂಐಬಿ) ಪ್ರತ್ಯೇಕ ಸಚಿವಾಲಯದ ಮಳಿಗೆ ಈ ಶೃಂಗಸಭೆಯ ಪ್ರಮುಖ ಆಕರ್ಷಣೆಯಾಗಿದೆ. ಇದು ಮಾಧ್ಯಮ, ಮನರಂಜನೆ, ಗೇಮಿಂಗ್ ಮತ್ತು ಸೃಜನಶೀಲ ತಂತ್ರಜ್ಞಾನಗಳ ಸಂಗಮದಲ್ಲಿ ಭಾರತದ ಅಭಿವೃದ್ಧಿ ಹೊಂದುತ್ತಿರುವ ಎಐ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸುತ್ತದೆ. ವೇವ್ಸ್‌ ಕ್ರಿಯೇಟರ್ಸ್ ಕಾರ್ನರ್ ಮೂಲಕ, ಈ ಮಳಿಗೆಯು ನೇರ ಪ್ರದರ್ಶನಗಳು, ಸಂವಾದಗಳು, ಮಾಸ್ಟರ್‌ಕ್ಲಾಸ್‌ಗಳು ಮತ್ತು ಸ್ಟಾರ್ಟ್‌ಅಪ್ ಪ್ರದರ್ಶನಗಳಿಗಾಗಿ ಒಂದು ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುತ್ತದೆ. ಇದು ಸಂಸ್ಥಾಪಕರು, ನೀತಿ ನಿರೂಪಕರು, ಹೂಡಿಕೆದಾರರು, ಸೃಷ್ಟಿಕರ್ತರು ಮತ್ತು ಅಂತರರಾಷ್ಟ್ರೀಯ ಪಾಲುದಾರರ ನಡುವೆ ನೇರ ಸಂವಹನಕ್ಕೆ ಅವಕಾಶ ಮಾಡಿಕೊಡುತ್ತದೆ.

ವಿಶೇಷವಾಗಿ ಎವಿಜಿಸಿ-ಎಕ್ಸ್‌ಆರ್‌ (ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ) ಮತ್ತು ಮೀಡಿಯಾ ಟೆಕ್ ವಲಯಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದ್ದು, ಇಲ್ಲಿ 51 ಸ್ಟಾರ್ಟ್‌ಅಪ್‌ಗಳು ಕಂಟೆಂಟ್ ಕ್ರಿಯೇಷನ್, ಇಮ್ಮರ್ಸಿವ್ ಅನುಭವಗಳು, ಬಹುಭಾಷಾ ಪರಿಕರಗಳು ಮತ್ತು ಡಿಜಿಟಲ್ ಕಥೆ ಹೇಳುವಿಕೆಯಲ್ಲಿ ಮಾರುಕಟ್ಟೆಗೆ ಸಿದ್ಧವಾಗಿರುವ ಎಐ-ಚಾಲಿತ ಪರಿಹಾರಗಳನ್ನು ಪ್ರದರ್ಶಿಸುತ್ತಿವೆ. ಈ ಒಕ್ಕೂಟವು ಸೃಜನಶೀಲ ಆರ್ಥಿಕತೆಯನ್ನು ದೇಶದ ಬೆಳವಣಿಗೆ, ಉದ್ಯೋಗ ಮತ್ತು ನಾವೀನ್ಯತೆಯ ಕಾರ್ಯತಂತ್ರದ ಚಾಲಕ ಶಕ್ತಿಯನ್ನಾಗಿ ಭಾರತ ಸರ್ಕಾರವು ಗುರುತಿಸಿರುವುದನ್ನು ಪ್ರತಿಬಿಂಬಿಸುತ್ತದೆ.

ಭಾರತದ ಸೃಜನಶೀಲ ಆರ್ಥಿಕತೆಯಲ್ಲಿ ಬೆಳವಣಿಗೆಯ ವೇಗವರ್ಧನೆ: ಕೇಂದ್ರ ಬಜೆಟ್ 2026–27

ಸೃಜನಶೀಲ ಆರ್ಥಿಕತೆಯು ಸೃಜನಶೀಲತೆ, ಸಂಸ್ಕೃತಿ, ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿಯಿಂದ ಮೌಲ್ಯವನ್ನು ಸೃಷ್ಟಿಸುವ ಉದ್ಯಮಗಳನ್ನು ಒಳಗೊಂಡಿದೆ. ಇದು ಮಾಧ್ಯಮ ಮತ್ತು ಮನರಂಜನೆ, ಅನಿಮೇಷನ್ ಮತ್ತು ವಿಎಫ್‌ಎಕ್ಸ್‌, ಗೇಮಿಂಗ್, ನೇರ ಕಾರ್ಯಕ್ರಮಗಳು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಡಿಜಿಟಲ್ ಕಂಟೆಂಟ್ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿದ್ದು, ಜಿಡಿಪಿ, ಉದ್ಯೋಗ ಮತ್ತು ರಫ್ತುಗಳಿಗೆ ಮಹತ್ತರ ಕೊಡುಗೆ ನೀಡುತ್ತದೆ. ಇದನ್ನು 'ಆರೆಂಜ್ ಎಕಾನಮಿ' ಎಂಬ ವಿಶಾಲ ದೃಷ್ಟಿಕೋನದ ಅಡಿಯಲ್ಲಿ ರೂಪಿಸಲಾಗಿದ್ದು, ಇಲ್ಲಿ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಕಾರ್ಯತಂತ್ರದ ಆರ್ಥಿಕ ಆಸ್ತಿಗಳೆಂದು ಪರಿಗಣಿಸಲಾಗಿದೆ. ಇದು ಪರಂಪರೆ ಮತ್ತು ಪ್ರತಿಭೆಯನ್ನು ನಾವೀನ್ಯತೆ, ಮಾರುಕಟ್ಟೆ ಪ್ರವೇಶ ಮತ್ತು ಜಾಗತಿಕ ಪಾಲುದಾರಿಕೆಗಳೊಂದಿಗೆ ಜೋಡಿಸುವ ಮೂಲಕ ಆದಾಯ ಮತ್ತು ಅಂತರರಾಷ್ಟ್ರೀಯ ಪ್ರಭಾವವನ್ನು ಸೃಷ್ಟಿಸುತ್ತದೆ.

ವರ್ಲ್ಡ್ ಆಡಿಯೋ ವಿಶ್ಯುವಲ್ ಅಂಡ್ ಎಂಟರ್‌ಟೈನ್‌ಮೆಂಟ್ ಸಮಿಟ್ (ವೇವ್ಸ್‌) ಮತ್ತು ಎಐ ಇಂಪ್ಯಾಕ್ಟ್ ಸಮಿಟ್ 2026 ರಂತಹ ವೇದಿಕೆಗಳು ಸೃಷ್ಟಿಕರ್ತರು, ಸ್ಟಾರ್ಟ್‌ಅಪ್‌ಗಳು, ಹೂಡಿಕೆದಾರರು ಮತ್ತು ನೀತಿ ನಿರೂಪಕರನ್ನು ಒಗ್ಗೂಡಿಸುವ ಮೂಲಕ ಈ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರುತ್ತವೆ. ಇದು ಜಂಟಿ ನಿರ್ಮಾಣಗಳು, ಬೌದ್ಧಿಕ ಆಸ್ತಿ ಮಾರುಕಟ್ಟೆ ಸಂಪರ್ಕಗಳು, ಇನ್‌ಕ್ಯುಬೇಶನ್ ಮತ್ತು ಗಡಿಯಾಚೆಗಿನ ಸಹಯೋಗಗಳಿಗೆ ಹಾದಿ ಮಾಡಿಕೊಡುತ್ತದೆ.

ಕೇಂದ್ರ ಬಜೆಟ್ 2026–27, ಸೃಜನಶೀಲ (ಆರೆಂಜ್) ಆರ್ಥಿಕತೆಯನ್ನು ಬೆಳವಣಿಗೆ, ಉದ್ಯೋಗ ಮತ್ತು ನಾವೀನ್ಯತೆಯ ಪ್ರೇರಕ ಶಕ್ತಿಯೆಂದು ಗುರುತಿಸುವ ಮೂಲಕ ಈ ಪಥವನ್ನು ಮತ್ತಷ್ಟು ಬಲಪಡಿಸಿದೆ. ಅದರಲ್ಲೂ ವಿಶೇಷವಾಗಿ ಡಿಜಿಟಲ್ ಮತ್ತು ಎಐ-ಚಾಲಿತ ಅಭಿವೃದ್ಧಿಗೆ ಅನುಗುಣವಾಗಿ ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ವಲಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕೌಶಲ್ಯಯುತ ಪ್ರತಿಭೆಗಳ ಸರಪಳಿಯನ್ನು ನಿರ್ಮಿಸಲು, ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಮೂಲಕ ದೇಶಾದ್ಯಂತ 15,000 ಪ್ರೌಢಶಾಲೆಗಳು ಮತ್ತು 500 ಕಾಲೇಜುಗಳಲ್ಲಿ 'ಎವಿಜಿಸಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್‌ಗಳನ್ನು' ಸ್ಥಾಪಿಸಲು ಈ ಬಜೆಟ್ ಬೆಂಬಲ ನೀಡುತ್ತದೆ. 2030ರ ವೇಳೆಗೆ ಎವಿಜಿಸಿ ವಲಯಕ್ಕೆ ಸುಮಾರು 20 ಲಕ್ಷ ವೃತ್ತಿಪರರ ಅಗತ್ಯವಿರುತ್ತದೆ ಎಂದು ಅಂದಾಜಿಸಲಾಗಿದ್ದು, ಈ ಮೂಲಕ ಸೃಜನಶೀಲ ಆರ್ಥಿಕತೆಯು ಡಿಜಿಟಲ್ ಪೀಳಿಗೆಯ ಪ್ರಮುಖ ಉದ್ಯೋಗದ ಎಂಜಿನ್ ಆಗಿ ಹೊರಹೊಮ್ಮಲಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (ಎಂಐಬಿ) ಮಳಿಗೆ: ಪ್ರಮುಖ ಕ್ಷೇತ್ರಗಳು ಮತ್ತು ಮುಖ್ಯಾಂಶಗಳು

ಮಾಧ್ಯಮ, ಮನರಂಜನೆ, ಗೇಮಿಂಗ್ ಮತ್ತು ಸೃಜನಶೀಲ ತಂತ್ರಜ್ಞಾನಗಳಲ್ಲಿ ಭಾರತದ ಎಐ ಸ್ಟಾರ್ಟ್‌ಅಪ್ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು (ಎಂಐಬಿ) 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026' ರಲ್ಲಿ ಪ್ರತ್ಯೇಕ ಮಳಿಗೆಯನ್ನು ಸ್ಥಾಪಿಸಿದೆ. ಈ ಮಳಿಗೆಯು ಕೇವಲ ಸಾಂಸ್ಕೃತಿಕ ಮಹತ್ವದಿಂದ ಆರ್ಥಿಕ ಕೇಂದ್ರಬಿಂದುವಾಗಿ ಬದಲಾಗಿರುವ ಒಂದು ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಭಾರತದ ಮಾಧ್ಯಮ ಮತ್ತು ಮನರಂಜನಾ ವಲಯದ ಮೌಲ್ಯವು 2024 ರಲ್ಲಿ ಸುಮಾರು ₹2.5 ಲಕ್ಷ ಕೋಟಿ ಆಗಿತ್ತು. ಇದು ವಾರ್ಷಿಕ ಸರಾಸರಿ ಶೇಕಡಾ 7 ರಷ್ಟು ಬೆಳವಣಿಗೆಯೊಂದಿಗೆ 2027 ರ ವೇಳೆಗೆ ₹3.067 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ. ಈ ವಲಯದ ಒಟ್ಟು ಆದಾಯದಲ್ಲಿ ಡಿಜಿಟಲ್ ಮಾಧ್ಯಮವೊಂದೇ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ, ಇದು ಪ್ಲಾಟ್‌ಫಾರ್ಮ್ ಆಧಾರಿತ ಉತ್ಪಾದನೆ ಮತ್ತು ವಿತರಣಾ ಮಾದರಿಗಳತ್ತ ವೇಗವಾಗಿ ಬದಲಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಈ ವಿಶಾಲವಾದ ಪರಿಸರ ವ್ಯವಸ್ಥೆಯು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 1 ಕೋಟಿಗೂ ಹೆಚ್ಚು ಜೀವನೋಪಾಯಗಳನ್ನು ಬೆಂಬಲಿಸುತ್ತದೆ ಮತ್ತು ವಾರ್ಷಿಕ ಸುಮಾರು ₹3 ಲಕ್ಷ ಕೋಟಿ ಉತ್ಪಾದನೆಯನ್ನು ಸೃಷ್ಟಿಸುತ್ತದೆ.

ಈ ವಿಸ್ತರಿಸುತ್ತಿರುವ ಹಂತದಲ್ಲಿ, ಈ ಮಳಿಗೆಯು ತಂತ್ರಜ್ಞಾನ ಅಭಿವೃದ್ಧಿಪಡಿಸುವವರು, ವಿಷಯ ಸೃಷ್ಟಿಕರ್ತರು, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ಜಾಗತಿಕ ಪಾಲುದಾರರನ್ನು ಈ ಕೆಳಗಿನ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಒಗ್ಗೂಡಿಸುತ್ತದೆ:

  • ಮಾಧ್ಯಮ ಮತ್ತು ಮನರಂಜನೆ: ಕಂಟೆಂಟ್ ಸೃಷ್ಟಿ, ಉತ್ಪಾದನೆ ಮತ್ತು ವಿತರಣೆಗಾಗಿ ಎಐ-ಚಾಲಿತ ಪರಿಹಾರಗಳು ಈ ಮಳಿಗೆಯ ಪ್ರದರ್ಶನದ ಕೇಂದ್ರಬಿಂದುವಾಗಿವೆ. ಈ ವಿಭಾಗವು ಈ ಕೆಳಗಿನ ಅಂಕಿಅಂಶಗಳನ್ನು ಹೊಂದಿರುವ ಮಾಧ್ಯಮ ಉದ್ಯಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ:
  • ಡಿಜಿಟಲ್ ಮಾಧ್ಯಮದ ಆದಾಯವು 2024 ರಲ್ಲಿ ₹802 ಬಿಲಿಯನ್ ಆಗಿದ್ದು, ಇದು 2027 ರ ವೇಳೆಗೆ ₹1,104 ಬಿಲಿಯನ್ ತಲುಪುವ ನಿರೀಕ್ಷೆಯಿದೆ.
  • ಚಲನಚಿತ್ರ ಮನರಂಜನಾ ಕ್ಷೇತ್ರವು 2024 ರಲ್ಲಿ ₹187 ಬಿಲಿಯನ್ ಆದಾಯವನ್ನು ಗಳಿಸಿದ್ದು, ಸ್ಥಿರವಾದ ಬೆಳವಣಿಗೆಯನ್ನು ಮುನ್ಸೂಚಿಸಲಾಗಿದೆ.
  • ಅನಿಮೇಷನ್ ಮತ್ತು ವಿಎಫ್‌ಎಕ್ಸ್ ವಲಯವು 2024 ರಲ್ಲಿ ಸುಮಾರು ₹103 ಬಿಲಿಯನ್ ಕೊಡುಗೆ ನೀಡಿದ್ದು, ಇದು 2027 ರ ವೇಳೆಗೆ ₹147 ಬಿಲಿಯನ್ ಮಟ್ಟಕ್ಕೆ ಏರುವ ನಿರೀಕ್ಷೆಯಿದೆ.

ಸ್ಟಾರ್ಟ್‌ಅಪ್‌ಗಳು ಎಐ-ಸಹಾಯದ ಚಲನಚಿತ್ರ ನಿರ್ಮಾಣ, ವರ್ಚುವಲ್ ಪ್ರೊಡಕ್ಷನ್, ಸ್ವಯಂಚಾಲಿತ ಎಡಿಟಿಂಗ್, ಬಹುಭಾಷಾ ಡಬ್ಬಿಂಗ್, ಧ್ವನಿ ಸಂಶ್ಲೇಷಣೆ, ಎಐ ಅವತಾರಗಳು ಮತ್ತು ಡಿಜಿಟಲ್ ಕಥೆ ಹೇಳುವ ಪರಿಕರಗಳನ್ನು ಪ್ರದರ್ಶಿಸುತ್ತಿವೆ. ಈ ಅನ್ವಯಿಕೆಗಳು ಉತ್ಪಾದನಾ ಪ್ರಕ್ರಿಯೆಯ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ವೈವಿಧ್ಯಮಯ ಭಾಷಾ ಮಾರುಕಟ್ಟೆಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಬಹುಭಾಷಾ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗುತ್ತವೆ. ಸಾಂಪ್ರದಾಯಿಕ ಸ್ವರೂಪಗಳಿಗಿಂತ ಡಿಜಿಟಲ್ ಆದಾಯವು ವೇಗವಾಗಿ ಬೆಳೆಯುತ್ತಿರುವ ಈ ಸಮಯದಲ್ಲಿ, ಎಐ ತಂತ್ರಜ್ಞಾನದ ಅಳವಡಿಕೆಯು ಕಂಟೆಂಟ್ ಕೆಲಸದ ಹರಿವಿನಲ್ಲಿ ವೆಚ್ಚದ ಉಳಿತಾಯ ಮತ್ತು ಸಾಮರ್ಥ್ಯದ ವಿಸ್ತರಣೆಯನ್ನು ಬಲಪಡಿಸುತ್ತದೆ.

ಗೇಮಿಂಗ್ ಮತ್ತು ಇಮ್ಮರ್ಸಿವ್ ತಂತ್ರಜ್ಞಾನಗಳು: ಭಾರತದ ಸೃಜನಶೀಲ ಆರ್ಥಿಕತೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಗೇಮಿಂಗ್ ಕೂಡ ಒಂದು.

  • ಆನ್‌ಲೈನ್ ಗೇಮಿಂಗ್ ಕ್ಷೇತ್ರವು 2024 ರಲ್ಲಿ ₹232 ಬಿಲಿಯನ್ ಆದಾಯವನ್ನು ಗಳಿಸಿದ್ದು, ಇದು 2027 ರ ವೇಳೆಗೆ ₹316 ಬಿಲಿಯನ್ ತಲುಪುವ ನಿರೀಕ್ಷೆಯಿದೆ.
  • ಈ ವಿಭಾಗವು ಎವಿಜಿಸಿ-ಎಕ್ಸ್‌ಆರ್‌ ಪರಿಸರ ವ್ಯವಸ್ಥೆಯ ಅತ್ಯಂತ ಕ್ರಿಯಾತ್ಮಕ ಅಂಶಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ವ್ಯಾಪಕವಾದ ಮೊಬೈಲ್ ಬಳಕೆ ಮತ್ತು ಡಿಜಿಟಲ್ ಪೀಳಿಗೆಯ ಜನಸಂಖ್ಯೆಯ ಬೆಂಬಲದೊಂದಿಗೆ, ಬಳಕೆದಾರರ ಸಂಖ್ಯೆಯ ಆಧಾರದ ಮೇಲೆ ಭಾರತವು ವಿಶ್ವದ ಅತಿದೊಡ್ಡ ಗೇಮಿಂಗ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಹೆಚ್ಚುತ್ತಿರುವ ಹಣಗಳಿಕೆ, ವಿಸ್ತರಿಸುತ್ತಿರುವ ದೇಶೀಯ ಸ್ಟುಡಿಯೋಗಳು ಮತ್ತು ಜಾಗತಿಕ ವೇದಿಕೆಗಳೊಂದಿಗಿನ ಸಹಯೋಗವು ಗೇಮಿಂಗ್ ಕ್ಷೇತ್ರವನ್ನು ಕೇವಲ ಸಮೂಹ ಆಕರ್ಷಣೆಯಿಂದ ಸಂಘಟಿತ ಡಿಜಿಟಲ್ ಉದ್ಯಮವಾಗಿ ಪರಿವರ್ತಿಸುತ್ತಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (ಎಂಐಬಿ) ಮಳಿಗೆಯು ಗೇಮ್ ಅಸೆಟ್ ಅಭಿವೃದ್ಧಿಗಾಗಿ ಜನರೇಟಿವ್ ಎಐ, ನೈಜ-ಸಮಯದ ಕಾಮೆಂಟರಿ ವ್ಯವಸ್ಥೆಗಳು, ಅಡಾಪ್ಟಿವ್ ಗೇಮ್‌ಪ್ಲೇ ಇಂಜಿನ್‌ಗಳು, ಇಮ್ಮರ್ಸಿವ್ ಪರಿಸರಗಳು ಮತ್ತು ಸಂವಾದಾತ್ಮಕ ಕ್ರೀಡಾ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತಿದೆ. ಈ ನಾವೀನ್ಯತೆಗಳು ಭಾರತವು ಕೇವಲ ಗೇಮಿಂಗ್ ಸೇವನೆಯಿಂದ ಎಐ-ಆಧಾರಿತ ಗೇಮ್ ಅಭಿವೃದ್ಧಿ ಮತ್ತು ಇಮ್ಮರ್ಸಿವ್ ಪ್ಲಾಟ್‌ಫಾರ್ಮ್‌ಗಳ ರಚನೆಯತ್ತ ಸಾಗುತ್ತಿರುವುದನ್ನು ತೋರಿಸುತ್ತವೆ.

  • ಸೃಜನಶೀಲ ಮತ್ತು ಕಂಟೆಂಟ್ ತಂತ್ರಜ್ಞಾನಗಳು: ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿಗಳನ್ನು ಒಳಗೊಂಡಿರುವ ಈ ವಿಶಾಲವಾದ ಎವಿಜಿಸಿ-ಎಕ್ಸ್‌ಆರ್‌ ಪರಿಸರ ವ್ಯವಸ್ಥೆಯು, ಸೃಜನಶೀಲ ಆರ್ಥಿಕತೆಯ ಅತ್ಯಂತ ತಂತ್ರಜ್ಞಾನ-ತೀವ್ರವಾದ ಮುಂಚೂಣಿಯ ವಲಯವನ್ನು ಪ್ರತಿನಿಧಿಸುತ್ತದೆ.

ಭಾರತದ ಅನಿಮೇಷನ್ ಮತ್ತು ವಿಎಫ್‌ಎಕ್ಸ್ ವಲಯವು ಜಾಗತಿಕವಾಗಿ ಸಂಯೋಜಿತಗೊಂಡ ಉತ್ಪಾದನಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಂತರರಾಷ್ಟ್ರೀಯ ಚಲನಚಿತ್ರಗಳು, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು, ಜಾಹೀರಾತು ಅಭಿಯಾನಗಳು ಮತ್ತು ಇಮ್ಮರ್ಸಿವ್ ಅನುಭವಗಳಿಗೆ ತನ್ನ ಕೊಡುಗೆ ನೀಡುತ್ತಿದೆ. ಬೆಂಗಳೂರು, ಹೈದರಾಬಾದ್, ಮುಂಬೈ, ಪುಣೆ, ಚೆನ್ನೈ ಮತ್ತು ತಿರುವನಂತಪುರಂನಲ್ಲಿ ಸ್ಥಾಪಿತವಾಗಿರುವ ಸೃಜನಶೀಲ ಕೇಂದ್ರಗಳು ಈ ಪರಿಸರ ವ್ಯವಸ್ಥೆಗೆ ಆಧಾರಸ್ತಂಭಗಳಾಗಿವೆ; ಇವುಗಳಿಗೆ ವಿಸ್ತರಿಸುತ್ತಿರುವ ಮಧ್ಯಮ ಮತ್ತು ಹಿರಿಯ ಮಟ್ಟದ ಪ್ರತಿಭಾವಂತ ತಜ್ಞರ ಬೆಂಬಲವಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (ಎಂಐಬಿ) ಮಳಿಗೆಯು ಪಾಡ್‌ಕಾಸ್ಟ್‌ಗಳು, ವರ್ಚುವಲ್ ಸ್ಟುಡಿಯೋಗಳು, ಇಮ್ಮರ್ಸಿವ್ ಥಿಯೇಟರ್, ಎಕ್ಸ್‌ಪೀರಿಯನ್ಶಿಯಲ್ ಮೀಡಿಯಾ ಮತ್ತು ಈ ಉತ್ಪಾದನಾ ಹರಿವಿನಲ್ಲಿ ಸಂಯೋಜಿತಗೊಳ್ಳುವ ಕ್ರಿಯೇಟರ್ ಪರಿಕರಗಳಿಗಾಗಿ ಎಐ ಅನ್ವಯಿಕೆಗಳನ್ನು ಪ್ರದರ್ಶಿಸುತ್ತಿದೆ. ಮುಂದಿನ ದಶಕದಲ್ಲಿ ಎವಿಜಿಸಿ ವಲಯದಲ್ಲಿ ಸುಮಾರು 20 ಲಕ್ಷ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳ ಸೃಷ್ಟಿಯ ನಿರೀಕ್ಷೆಯಿದ್ದು, ಎಐ-ಚಾಲಿತ ಸೃಜನಶೀಲ ತಂತ್ರಜ್ಞಾನಗಳು ಆರ್ಥಿಕತೆ ಮತ್ತು ಉದ್ಯೋಗ ಎರಡರಲ್ಲೂ ಗುಣಕಗಳಾಗಿ ಗುರುತಿಸಿಕೊಂಡಿವೆ.

ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಎಂಐಬಿ ಮಳಿಗೆಯ ಪ್ರಮುಖ ಮುಖ್ಯಾಂಶಗಳು

  • ವೇವ್ಸ್‌ ಕ್ರಿಯೇಟರ್ಸ್ ಕಾರ್ನರ್: ಎಂಐಬಿ ಮಳಿಗೆಯ ಒಳಗೆ ಸ್ಥಾಪಿಸಲಾದ ಈ ತಾಣವು ಸಂವಾದಗಳು, ಮಾಸ್ಟರ್‌ಕ್ಲಾಸ್‌ಗಳು, ಫೈರ್‌ಸೈಡ್ ಚಾಟ್‌ಗಳು ಮತ್ತು ಸ್ಟಾರ್ಟ್‌ಅಪ್ ಪ್ರದರ್ಶನಗಳಿಗಾಗಿ ಒಂದು ವ್ಯವಸ್ಥಿತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.
  • 51 ಸ್ಟಾರ್ಟ್‌ಅಪ್‌ಗಳು: ಭಾರತದ ಎವಿಜಿಸಿ –ಎಕ್ಸ್‌ಆರ್‌ ಮತ್ತು ಮೀಡಿಯಾ ಟೆಕ್ ವಲಯದ 51 ಸ್ಟಾರ್ಟ್‌ಅಪ್‌ಗಳು 'ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026' ರಲ್ಲಿ ತಮ್ಮ ಎಐ-ಚಾಲಿತ ನಾವೀನ್ಯತೆಗಳನ್ನು ಪ್ರದರ್ಶಿಸುತ್ತಿವೆ.
  • ಎಐಬಿ ಮತ್ತು ಅಡೋಬ್ ಸಹಯೋಗ: ಭಾರತದ ಎಐ-ಸಕ್ರಿಯಗೊಳಿಸಿದ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಈ ಮಳಿಗೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಇದರ ಪ್ರಮುಖ ಆಕರ್ಷಣೆಯೆಂದರೆ 'ಕಥಾವತಾರ'. ಇದು ಭಾರತದಲ್ಲೇ ತಯಾರಾದ ಐದು ಎಐ ಕಿರುಚಿತ್ರಗಳ ಪ್ರದರ್ಶನವಾಗಿದೆ (Language of Birds, Migoi, Uttarayan, The Barber’s Secret, ಮತ್ತು Yappasauras). ಇವುಗಳನ್ನು ವೇವ್ಸ್‌ ಕ್ರಿಯೇಟರ್ಸ್ ಕಾರ್ನರ್‌ನಲ್ಲಿರುವ ಎಐ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗುತ್ತಿದೆ. ಅಡೋಬ್ ಸಂಸ್ಥೆಯು "ಚಲನಚಿತ್ರದ ಭವಿಷ್ಯ: ಎಐ, ಸೃಜನಶೀಲತೆ ಮತ್ತು ಕಲೆ" ಎಂಬ ವಿಷಯದ ಕುರಿತು ವಿಶೇಷ ಅಧಿವೇಶನವನ್ನು ಮತ್ತು ವೇಗವಾದ ಹಾಗೂ ನವೀನ ವೀಡಿಯೊ ಉತ್ಪಾದನಾ ಪ್ರಕ್ರಿಯೆಗಳನ್ನು ತೋರಿಸುವ 'ಕಂಟೆಂಟ್ ಕ್ರಿಯೇಷನ್ ಹಬ್' ಅನ್ನು ಆಯೋಜಿಸುತ್ತಿದೆ.
  • ಶೇಖರ್ ಕಪೂರ್ ಮಾಸ್ಟರ್‌ಕ್ಲಾಸ್: ಖ್ಯಾತ ಚಲನಚಿತ್ರ ನಿರ್ದೇಶಕ ಶೇಖರ್ ಕಪೂರ್ ಅವರು ಎಐ-ಚಾಲಿತ ಕಥೆ ಹೇಳುವಿಕೆ ಮತ್ತು ವಿಕಸನಗೊಳ್ಳುತ್ತಿರುವ ಸಿನಿಮಾ ಪದ್ಧತಿಗಳ ಬಗ್ಗೆ ಮಾಸ್ಟರ್‌ಕ್ಲಾಸ್ ನಡೆಸಿಕೊಡುತ್ತಿದ್ದಾರೆ.
  • ಪ್ರಮುಖ ತಾಂತ್ರಿಕ ಪ್ರದರ್ಶನಗಳು: ಜೀರೋ-ಟಚ್ ಸ್ವಾಯತ್ತ ನ್ಯೂಸ್‌ರೂಮ್, ಬಹುಭಾಷಾ ಡಬ್ಬಿಂಗ್ ಮತ್ತು ಎಐ ಸಂಕೇತ ಭಾಷೆಯ ಅವತಾರಗಳನ್ನು ಒಳಗೊಂಡ 'ಭಾಷಾ-ವಾಲ್', ಸಂವಾದ ಸೇತು, 'ದ ಡೈರೆಕ್ಟರ್ಸ್ ಚೇರ್', ಎಐ ಪಾಡ್‌ಕಾಸ್ಟ್ ಸ್ಟುಡಿಯೋ, ಸಂಭಾಷಣೆ ನಡೆಸುವ ಹ್ಯೂಮನಾಯ್ಡ್ ರೋಬೋಟ್‌ಗಳು ಮತ್ತು ವಾಯ್ಸ್ ಕ್ಲೋನಿಂಗ್ ಪರಿಹಾರಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
  • ಭಾಷಾಸೇತು ಮತ್ತು ಕಲಾಸೇತು: ಈ ಸ್ಪರ್ಧೆಗಳ ವಿಜೇತರು ಸಾಂಸ್ಕೃತಿಕ ಸಂರಕ್ಷಣೆ ಮತ್ತು ಭಾಷಾ ಸುಲಭ್ಯತೆಗಾಗಿ ಅಭಿವೃದ್ಧಿಪಡಿಸಿದ ಎಐ ಪರಿಕರಗಳನ್ನು ಪ್ರದರ್ಶಿಸುತ್ತಿದ್ದಾರೆ.
  • ಎಐ ಇಮ್ಮರ್ಸಿವ್ ಥಿಯೇಟರ್: ಇದು 270-ಡಿಗ್ರಿ ಪ್ರೊಜೆಕ್ಷನ್, ಸ್ಪೇಷಿಯಲ್ ಡಿಸೈನ್, ಆಯ್ದ ಎಐ ಚಲನಚಿತ್ರಗಳು ಮತ್ತು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 'ಸಿನೆಮಾ ಎಐ ಹ್ಯಾಕಥಾನ್' ಫೈನಲಿಸ್ಟ್‌ಗಳ ಪ್ರತಿಭೆಯನ್ನು ಒಳಗೊಂಡಿದೆ.
  • ವಿಶೇಷ ಅಧಿವೇಶನಗಳು: ಎಂಐಬಿ ಮಳಿಗೆಯಲ್ಲಿ ನಡೆಯುವ ಅಧಿವೇಶನಗಳಲ್ಲಿ LTM BlueVerse, ಎಡಬ್ಲುಎಸ್‌, ಗೂಗಲ್‌ (Evergent ನೊಂದಿಗೆ), ಸೋನಿ ರೀಸರ್ಚ್‌ ಇಂಡಿಯಾ, ಪರ್ಪಲ್‌ ಟಾಕ್‌, Dashverse, ಪಾಕೇಟ್‌ ಎಫ್‌ಎಂ ಮತ್ತು Lumikai ನಂತಹ ಸಂಸ್ಥೆಗಳು ತಮ್ಮ ನಾವೀನ್ಯತೆಗಳನ್ನು ಪ್ರದರ್ಶಿಸಲಿವೆ. ಇದು ಜ್ಞಾನ ವಿನಿಮಯ, ನೀತಿ ಸಂವಾದ ಮತ್ತು ಜವಾಬ್ದಾರಿಯುತ ಎಐ ಸೃಜನಶೀಲ ಸೇವೆಗಳಲ್ಲಿ ಭಾರತದ ನಾಯಕತ್ವವನ್ನು ಉತ್ತೇಜಿಸುತ್ತದೆ.

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿರುವ ಎಂಐಬಿ ಮಳಿಗೆಯು ಭಾರತದ ವಿಸ್ತರಿಸುತ್ತಿರುವ ಸೃಜನಶೀಲ ಆರ್ಥಿಕತೆಯ ಪ್ರಮುಖ ಆಕರ್ಷಣೆಯಾಗಿ ಎದ್ದು ಕಾಣುತ್ತಿದೆ. ಇದು ವೇವ್ಸ್‌ ಕ್ರಿಯೇಟರ್ಸ್ ಕಾರ್ನರ್ ಅಡಿಯಲ್ಲಿ 51 ಎಐ-ಚಾಲಿತ ಸ್ಟಾರ್ಟ್‌ಅಪ್‌ಗಳು, ಉದ್ಯಮದ ಮುಖಂಡರು ಮತ್ತು ಜಾಗತಿಕ ಪಾಲುದಾರರನ್ನು ಒಂದೇ ವೇದಿಕೆಗೆ ತಂದಿದೆ. ಇಮ್ಮರ್ಸಿವ್ ಥಿಯೇಟರ್ ಅನುಭವಗಳು, ಸುಧಾರಿತ ನ್ಯೂಸ್‌ರೂಮ್ ತಂತ್ರಜ್ಞಾನ ಮತ್ತು ಗೇಮಿಂಗ್ ಅನ್ವಯಿಕೆಗಳಂತಹ ಪ್ರದರ್ಶನಗಳ ಮೂಲಕ, ಎಐ ತಂತ್ರಜ್ಞಾನವು ಕಂಟೆಂಟ್ ಸೃಷ್ಟಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೇಗೆ ಪ್ರಾಯೋಗಿಕವಾಗಿ ಸಂಯೋಜನೆಗೊಳ್ಳುತ್ತಿದೆ ಎಂಬುದನ್ನು ಈ ಮಳಿಗೆಯು ತೋರಿಸಿಕೊಡುತ್ತಿದೆ. ಒಟ್ಟಾರೆಯಾಗಿ, ಈ ಮುಖ್ಯಾಂಶಗಳು ಮೌಲ್ಯ, ಸಾಮರ್ಥ್ಯ ಮತ್ತು ಜಾಗತಿಕ ಪ್ರಸ್ತುತತೆಯಲ್ಲಿ ಬೆಳೆಯುತ್ತಿರುವ ಒಂದು ವಲಯವನ್ನು ಪ್ರತಿಬಿಂಬಿಸುತ್ತವೆ.

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಭಾರತೀಯ ಎಐ ಮತ್ತು ಗೇಮಿಂಗ್ ಸ್ಟಾರ್ಟ್‌ಅಪ್‌ಗಳ ಮಿಂಚು

ಭಾರತದ ವಿಸ್ತರಿಸುತ್ತಿರುವ ಎವಿಜಿಸಿ ಪರಿಸರ ವ್ಯವಸ್ಥೆಯಲ್ಲಿ ಎಐ-ಚಾಲಿತ ಗೇಮಿಂಗ್ ಮತ್ತು ಇಮ್ಮರ್ಸಿವ್ ಮೀಡಿಯಾ ಒಂದು ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮುತ್ತಿದೆ. ಎಐ ತಂತ್ರಜ್ಞಾನವು ಹೇಗೆ ಉತ್ಪಾದನಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಸಂವಾದಾತ್ಮಕ ಕಥೆ ಹೇಳುವಿಕೆಯನ್ನು ಸುಧಾರಿಸುತ್ತದೆ ಮತ್ತು ಮೂಲ ಬೌದ್ಧಿಕ ಆಸ್ತಿ ರಚನೆಯನ್ನು ಬೆಂಬಲಿಸುತ್ತದೆ ಎಂಬುದನ್ನು ಈ ಶೃಂಗಸಭೆಯು ಎತ್ತಿ ತೋರಿಸುತ್ತದೆ.

ಗೇಮಿಂಗ್ ಮತ್ತು ಇಂಟರಾಕ್ಟಿವ್ ಟೆಕ್ನಾಲಜಿ ವಿಭಾಗದ ಅಡಿಯಲ್ಲಿ, ಭಾರತದ ಐದು ಪ್ರವರ್ತಕ ಸ್ಟಾರ್ಟ್‌ಅಪ್‌ಗಳು ಅತ್ಯಾಧುನಿಕ ಎಐ-ಚಾಲಿತ ಪರಿಹಾರಗಳನ್ನು ಪ್ರದರ್ಶಿಸಲಿವೆ. ಇದು ಎಐ, ಗೇಮಿಂಗ್, ಇಮ್ಮರ್ಸಿವ್ ಮೀಡಿಯಾ ಮತ್ತು ಉದ್ಯಮ ರೂಪಾಂತರದ ಸಂಗಮದಲ್ಲಿ ಭಾರತವು ಸಾಧಿಸುತ್ತಿರುವ ಬೆಳೆಯುತ್ತಿರುವ ನಾಯಕತ್ವವನ್ನು ಉಲ್ಲೇಖಿಸುತ್ತದೆ.

  • ಸೃಜನಶೀಲ ಉತ್ಪಾದನೆಗಾಗಿ ಜನರೇಟಿವ್ ಎಐ: Yesgnome ಸಂಸ್ಥೆಯು ಗೇಮ್ ಸ್ಟುಡಿಯೋಗಳು ಮತ್ತು ಸೃಜನಶೀಲ ತಂಡಗಳಿಗಾಗಿ ವಿನ್ಯಾಸಗೊಳಿಸಲಾದ ಸುಧಾರಿತ ಕಲಾ-ರಚನಾ ವೇದಿಕೆಯಾದ Sketly AI ಅನ್ನು ಪ್ರಸ್ತುತಪಡಿಸಲಿದೆ. ಉತ್ಪಾದನೆಗೆ ಸಿದ್ಧವಾಗಿರುವ ಅಸೆಟ್‌ಗಳ ರಚನೆ, ಶೈಲಿಯ ತರಬೇತಿ ಮತ್ತು ವೇಗದ ಪುನರಾವರ್ತಿತ ಕೆಲಸದ ಹರಿವನ್ನು ಸಕ್ರಿಯಗೊಳಿಸುವ ಮೂಲಕ, ಈ ವೇದಿಕೆಯು ಕಲಾತ್ಮಕ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತಲೇ ಉತ್ಪಾದನಾ ಪ್ರಕ್ರಿಯೆಯಲ್ಲಿನ ಅಡೆತಡೆಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಪ್ರದರ್ಶಿಸುತ್ತದೆ.
  • ಸ್ಪೋರ್ಟ್ಸ್ ಗೇಮಿಂಗ್‌ನಲ್ಲಿ ನೈಜ-ಸಮಯದ ಜನರೇಟಿವ್ ಎಐ: ಮೆಟಾ ಸ್ಪೋರ್ಟ್ಸ್‌ ತನ್ನ ಮಲ್ಟಿಪ್ಲೇಯರ್ ಕ್ರಿಕೆಟ್ ಪ್ಲಾಟ್‌ಫಾರ್ಮ್‌ನಲ್ಲಿ ಅಳವಡಿಸಲಾಗಿರುವ ಜನರೇಟಿವ್ ಎಐ-ಚಾಲಿತ ಲೈವ್ ಕಾಮೆಂಟರಿ ಎಂಜಿನ್ ಅನ್ನು ಪ್ರದರ್ಶಿಸಲಿದೆ. ಆಟದ ಹಂತಗಳನ್ನು ನೈಜ ಸಮಯದಲ್ಲಿ ವಿಶ್ಲೇಷಿಸಿ, ಸಂದರ್ಭಕ್ಕೆ ತಕ್ಕಂತೆ ಧ್ವನಿ ಆಧಾರಿತ ವಿವರಣೆಯನ್ನು ನೀಡುವ ಮೂಲಕ, ಈ ವ್ಯವಸ್ಥೆಯು ಕ್ರೀಡಾ ಮನರಂಜನೆಯಲ್ಲಿ ವೈಯಕ್ತಿಕ ಅನುಭವ ಮತ್ತು ತಲ್ಲೀನತೆಯನ್ನು ಹೆಚ್ಚಿಸುತ್ತದೆ.
  • ಕನ್ಸೋಲ್-ದರ್ಜೆಯ ಮೊಬೈಲ್ ಗೇಮಿಂಗ್ ಪರಿಸರ ವ್ಯವಸ್ಥೆ: ಕೊಯೊಜೊ ಸಂಸ್ಥೆಯು ಸ್ಮಾರ್ಟ್‌ಫೋನ್‌ಗಳನ್ನು ಕನ್ಸೋಲ್-ದರ್ಜೆಯ ಗೇಮಿಂಗ್ ಸಾಧನಗಳಾಗಿ ಪರಿವರ್ತಿಸುವ ತನ್ನ ಸಂಯೋಜಿತ ಹಾರ್ಡ್‌ವೇರ್-ಸಾಫ್ಟ್‌ವೇರ್ ವ್ಯವಸ್ಥೆಯನ್ನು ಪ್ರದರ್ಶಿಸಲಿದೆ. ಇಂಟೆಲಿಜೆಂಟ್ ಬಟನ್ ಮ್ಯಾಪಿಂಗ್, ರಿಮೋಟ್ ಪ್ಲೇ ಮತ್ತು ಪರ್ಫಾರ್ಮೆನ್ಸ್ ಅನಾಲಿಟಿಕ್ಸ್ ಮೂಲಕ, ಈ ಪ್ಲಾಟ್‌ಫಾರ್ಮ್ ಭಾರತದ ಮೊಬೈಲ್ ಗೇಮಿಂಗ್ ಮಾರುಕಟ್ಟೆಯಲ್ಲಿ ಉನ್ನತ ಮಟ್ಟದ ಸ್ಪರ್ಧಾತ್ಮಕ ಗೇಮ್‌ಪ್ಲೇ ಅನ್ನು ಸಾಧ್ಯವಾಗಿಸುತ್ತದೆ.
  • ಮಾನವ ಮತ್ತು ಎಐ ನಡುವಿನ ಸಂವಾದಾತ್ಮಕ ಅನುಭವ ಯುತ್‌ ಬಜ್‌ ಸಂಸ್ಥೆಯು ಮ್ಯಾನ್‌ vs. ಜಿಪಿಟಿ ಎಂಬ ನೇರ ಗೇಮ್‌ಪ್ಲೇ ಮಾದರಿಯನ್ನು ಪ್ರಸ್ತುತಪಡಿಸಲಿದೆ. ಇಲ್ಲಿ ಮಾನವ ಸ್ಪರ್ಧಿಗಳು ನೈಜ ಸಮಯದಲ್ಲಿ ಕಲಿಯುವ ಮತ್ತು ವಿಕಸನಗೊಳ್ಳುವ ಎಐ ಏಜೆಂಟ್‌ಗಳ ವಿರುದ್ಧ ಸ್ಪರ್ಧಿಸುತ್ತಾರೆ. ಇದು ಸಂಕೀರ್ಣವಾದ ಎಐ ಕಾರ್ಯವಿಧಾನಗಳನ್ನು ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುವಂತೆ ಇಮ್ಮರ್ಸಿವ್ ಅನುಭವವಾಗಿ ನೀಡುತ್ತದೆ.
  • ಉದ್ಯಮದ ಕಾಗ್ನಿಟಿವ್ ಎಐ ಸನ್ನದ್ಧತೆ: ಇವೈವೆ ಸಂಸ್ಥೆಯು ತನ್ನ ನ್ಯೂರೋಸೈನ್ಸ್-ಚಾಲಿತ AFERR ಮಾದರಿಯ ಆಧಾರದ ಮೇಲೆ 'Enterprise Cognitive AI Readiness Tool' ಅನ್ನು ಪರಿಚಯಿಸಲಿದೆ. ಶೃಂಗಸಭೆಯಲ್ಲಿ ಲೈವ್ ಡಯಾಗ್ನೋಸ್ಟಿಕ್ ಲ್ಯಾಬ್ ಆಗಿ ಕಾರ್ಯನಿರ್ವಹಿಸುವ ಈ ಉಪಕರಣವು, ಎಐ ಅಳವಡಿಕೆಗೆ ಸಂಸ್ಥೆಗಳು ಮತ್ತು ನಾಯಕರ ಮಾನಸಿಕ ಸನ್ನದ್ಧತೆಯನ್ನು ಮೌಲ್ಯಮಾಪನ ಮಾಡುತ್ತದೆ.
  • ಭಾರತದ ಎಐ ಗೇಮಿಂಗ್ ಭವಿಷ್ಯದಲ್ಲಿ ಹೂಡಿಕೆ

'ಗೇಮ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ' ಸಹಯೋಗದೊಂದಿಗೆ ಆಯೋಜಿಸಲಾದ "ದಿ ನ್ಯೂ ಗೋಲ್ಡ್ ರಶ್: ಇನ್ವೆಸ್ಟಿಂಗ್ ಇನ್ ಇಂಡಿಯಾಸ್ ಎಐ-ಪವರ್ಡ್ ಗೇಮಿಂಗ್ ಫ್ಯೂಚರ್" (ಹೊಸ ಚಿನ್ನದ ಬೇಟೆ: ಭಾರತದ ಎಐ-ಚಾಲಿತ ಗೇಮಿಂಗ್ ಭವಿಷ್ಯದಲ್ಲಿ ಹೂಡಿಕೆ) ಎಂಬ ವಿಶೇಷ ಸಂವಾದವು ಜಾಗತಿಕ ಹೂಡಿಕೆದಾರರನ್ನು ಮತ್ತು ಉದ್ಯಮದ ಮುಖಂಡರನ್ನು ಒಟ್ಟುಗೂಡಿಸಲಿದೆ. ಈ ಅಧಿವೇಶನವು ಎಐ-ಚಾಲಿತ ಗೇಮ್ ಅಭಿವೃದ್ಧಿ ಮತ್ತು ಸಂವಾದಾತ್ಮಕ ಮಾಧ್ಯಮದಲ್ಲಿ ಭಾರತದ ಬೆಳೆಯುತ್ತಿರುವ ಪ್ರಭಾವದ ಬಗ್ಗೆ ಚರ್ಚಿಸಲಿದೆ.

ಈ ಅಧಿವೇಶನವು ವಿಕಸನಗೊಳ್ಳುತ್ತಿರುವ ಹೂಡಿಕೆಯ ಪ್ರವೃತ್ತಿಗಳು, ಎಐ-ಸಕ್ರಿಯಗೊಳಿಸಿದ ಉತ್ಪಾದನಾ ಮಾದರಿಗಳು, ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು ಮತ್ತು ಎಐ-ಚಾಲಿತ ಗೇಮಿಂಗ್ ನಾವೀನ್ಯತೆಯಲ್ಲಿ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ರೂಪಿಸಲು ಅಗತ್ಯವಿರುವ ನೀತಿ ಚೌಕಟ್ಟುಗಳನ್ನು ಪರಿಶೀಲಿಸಲಿದೆ.

ಒಟ್ಟಾರೆಯಾಗಿ, ಈ ಸ್ಟಾರ್ಟ್‌ಅಪ್‌ಗಳು ಎಐ ಕೇವಲ ಪ್ರಯೋಗದ ಹಂತವನ್ನು ಮೀರಿ ಗೇಮಿಂಗ್ ಉತ್ಪಾದನೆ, ಇಮ್ಮರ್ಸಿವ್ ಅನುಭವಗಳು ಮತ್ತು ಉದ್ಯಮದ ರೂಪಾಂತರದ ಚೌಕಟ್ಟುಗಳಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎಂಬುದನ್ನು ತೋರಿಸಿಕೊಡುತ್ತವೆ. ಇವರ ಪರಿಹಾರಗಳು ಸೃಜನಶೀಲ ನಾವೀನ್ಯತೆಯನ್ನು ಮತ್ತು ಬೃಹತ್ ಪ್ರಮಾಣದ ತಂತ್ರಜ್ಞಾನ ನಿಯೋಜನೆಯನ್ನು ಸಂಯೋಜಿಸುವ ಪ್ರೌಢ ಪರಿಸರ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತವೆ. ಇವೆಲ್ಲವೂ ಭಾರತವು ಕೇವಲ ಗೇಮಿಂಗ್ ಸೇವನೆಯ ಮಾರುಕಟ್ಟೆಯಾಗಿ ಉಳಿಯದೆ, ಎಐ-ಆಧಾರಿತ ಗೇಮಿಂಗ್ ವೇದಿಕೆಗಳ ಅಭಿವೃದ್ಧಿ ಕೇಂದ್ರವಾಗಿ ಹೊರಹೊಮ್ಮುತ್ತಿರುವುದರ ಸಂಕೇತವಾಗಿದೆ.

ಭಾರತೀಯ ಸೃಜನಶೀಲ ಉದ್ಯಮಕ್ಕೆ ಜಾಗತಿಕ ಅವಕಾಶಗಳ ವಿಸ್ತರಣೆ

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026, ಭಾರತೀಯ ಎಐ ಸ್ಟಾರ್ಟ್‌ಅಪ್‌ಗಳು ಮತ್ತು ಸೃಜನಶೀಲ ವೃತ್ತಿಪರರಿಗೆ ಜಾಗತಿಕ ನಾವೀನ್ಯತೆ, ಬಂಡವಾಳ ಮತ್ತು ನೀತಿ ನಿರೂಪಣಾ ಜಾಲಗಳೊಂದಿಗೆ ಸಂಪರ್ಕ ಸಾಧಿಸಲು ಹೊಸ ಹಾದಿಗಳನ್ನು ಸೃಷ್ಟಿಸಿದೆ. 300ಕ್ಕೂ ಹೆಚ್ಚು ವ್ಯವಸ್ಥಿತ ಮಳಿಗೆಗಳು ಮತ್ತು ನೇರ ಪ್ರದರ್ಶನಗಳೊಂದಿಗೆ, 'ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026' ರಲ್ಲಿ 600ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು 13 ದೇಶಗಳ ಪ್ರತಿನಿಧಿ ತಂಡಗಳು ಭಾಗವಹಿಸುತ್ತಿವೆ. ಇದು ಮಾಧ್ಯಮ, ಮನರಂಜನೆ, ಎವಿಜಿಸಿ-ಎಕ್ಸ್‌ಆರ್‌, ಗೇಮಿಂಗ್ ಮತ್ತು ಡಿಜಿಟಲ್ ವೇದಿಕೆಗಳ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಾನ್ಯತೆಯನ್ನು ಹೆಚ್ಚಿಸುತ್ತಿದೆ.

100ಕ್ಕೂ ಹೆಚ್ಚು ದೇಶಗಳನ್ನು ಪ್ರತಿನಿಧಿಸುವ ಪ್ರಮುಖ ತಂತ್ರಜ್ಞಾನ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳ ಭಾಗವಹಿಸುವಿಕೆಯು ಅಂತರರಾಷ್ಟ್ರೀಯ ಉತ್ಪಾದನಾ ವ್ಯವಸ್ಥೆಗಳು ಮತ್ತು ನಿಯಂತ್ರಕ ಚೌಕಟ್ಟುಗಳ ಬಗ್ಗೆ ಒಳನೋಟವನ್ನು ನೀಡುತ್ತದೆ. ಇಂತಹ ವಿನಿಮಯಗಳು ಸೃಜನಶೀಲ ಎಐ, ಅನಿಮೇಷನ್, ಗೇಮಿಂಗ್ ಮತ್ತು ಬೌದ್ಧಿಕ ಆಸ್ತಿ ಆಧಾರಿತ ಕಂಟೆಂಟ್‌ನಲ್ಲಿ ಉತ್ತಮ ಗುಣಮಟ್ಟವನ್ನು ಸಾಧಿಸಲು ಸಹಾಯ ಮಾಡುವುದಲ್ಲದೆ, ಸಹ-ನಿರ್ಮಾಣ, ಹೂಡಿಕೆ ಮತ್ತು ಹೊಸ ಮಾರುಕಟ್ಟೆ ಅವಕಾಶಗಳಿಗೆ ಬಾಗಿಲು ತೆರೆಯುತ್ತವೆ.

ಉಪಸಂಹಾರ

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿರುವ ಎಂಐಬಿ ಮಳಿಗೆಯು, ಭಾರತವು ತನ್ನ ಎಐ ದೃಷ್ಟಿಕೋನವನ್ನು ಸ್ಟಾರ್ಟ್‌ಅಪ್‌ಗಳು, ಸೃಷ್ಟಿಕರ್ತರು ಮತ್ತು ನಾವೀನ್ಯಕಾರರ ಮೂಲಕ ಮಾರುಕಟ್ಟೆಗೆ ಸಿದ್ಧವಾಗಿರುವ ಫಲಿತಾಂಶಗಳನ್ನಾಗಿ ಹೇಗೆ ಪರಿವರ್ತಿಸುತ್ತಿದೆ ಎಂಬುದನ್ನು ಪ್ರದರ್ಶಿಸುತ್ತದೆ. ಮಾಧ್ಯಮ, ಗೇಮಿಂಗ್ ಮತ್ತು ಸೃಜನಶೀಲ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಈ ಮಳಿಗೆಯು ಭಾರತದ ಎಐ ಸಾಮರ್ಥ್ಯದ ಆಳ ಮತ್ತು ತಂತ್ರಜ್ಞಾನ, ಸಂಸ್ಕೃತಿ ಹಾಗೂ ಉದ್ಯಮಗಳ ಬೆಳೆಯುತ್ತಿರುವ ಸಂಗಮವನ್ನು ಉಲ್ಲೇಖಿಸುತ್ತದೆ.

ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವು ಸ್ಟಾರ್ಟ್‌ಅಪ್‌ಗಳು, ನೀತಿ ನಿರೂಪಕರು, ಹೂಡಿಕೆದಾರರು ಮತ್ತು ಅಂತರರಾಷ್ಟ್ರೀಯ ಪಾಲುದಾರರ ನಡುವೆ ನಿರಂತರ ಸಂವಾದಕ್ಕೆ ಅವಕಾಶ ಮಾಡಿಕೊಡುತ್ತದೆ. ಸಂಸ್ಥಾಪಕ-ಚಾಲಿತ ನಿರೂಪಣೆಗಳು ಮತ್ತು ಉದ್ಯಮದ ಸಹಯೋಗಗಳು ಭಾರತೀಯ ಎಐ ನಾವೀನ್ಯತೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಮತ್ತು ಸ್ಥಳೀಯವಾಗಿ ದೃಢವಾಗಿ ರೂಪಿಸಿವೆ.

ಈ ಮಳಿಗೆಯು ಜವಾಬ್ದಾರಿಯುತ, ಒಳಗೊಳ್ಳುವ ಮತ್ತು ಸುಸ್ಥಿರ ಎಐ ಬೆಳವಣಿಗೆಯ ಭಾರತದ ದೃಷ್ಟಿಕೋನವನ್ನು ಬಲಪಡಿಸುತ್ತದೆ. ಇದು ಎಐ-ಆಧಾರಿತ ವೇದಿಕೆಗಳನ್ನು ನಿರ್ಮಿಸುವ, ಸೃಜನಶೀಲ ಆರ್ಥಿಕತೆಯನ್ನು ಬಲಪಡಿಸುವ ಮತ್ತು 'ಜಾಗತಿಕ ದಕ್ಷಿಣದ' ದೇಶಗಳಿಂದ ಜಾಗತಿಕ ಎಐ ಪರಿಸರ ವ್ಯವಸ್ಥೆಗೆ ಪ್ರಮುಖ ಕೊಡುಗೆದಾರನಾಗಿ ಭಾರತವನ್ನು ಗುರುತಿಸುವ ರಾಷ್ಟ್ರೀಯ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ.

References

Ministry of Information & Broadcasting

Prime Minister’s Office

Press Information Bureau

Click here to see pdf 

******

 

(Explainer ID: 157469) आगंतुक पटल : 7
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Gujarati , Malayalam
Link mygov.in
National Portal Of India
STQC Certificate