• Skip to Content
  • Sitemap
  • Advance Search
Economy

ಕೇಂದ್ರ ಬಜೆಟ್ ಹಣಕಾಸು ವರ್ಷ 2026-27: ಭಾರತದ ಮುಂದಿನ ಬೆಳವಣಿಗೆಯ ಹಂತಕ್ಕೆ ಉತ್ಪಾದನಾ ವಲಯವೇ ಚಾಲಕಶಕ್ತಿ

Posted On: 12 FEB 2026 11:26AM

ಪ್ರಮುಖ ಮಾರ್ಗಸೂಚಿಗಳು

  • ಹಣಕಾಸು ವರ್ಷ 2025-26ರ ಮೊದಲ ತ್ರೈಮಾಸಿಕದಲ್ಲಿ 7.72% ಮತ್ತು ಎರಡನೇ ತ್ರೈಮಾಸಿಕದಲ್ಲಿ 9.13% ಜಿವಿಎ ಬೆಳವಣಿಗೆಯೊಂದಿಗೆ ಭಾರತದ ಉತ್ಪಾದನಾ ವಲಯದ ಪ್ರದರ್ಶನವು ಬಲಗೊಂಡಿದೆ.
  • ಭಾರತದ ಉತ್ಪಾದನಾ ಮೌಲ್ಯವರ್ಧನೆಗೆ ಮಧ್ಯಮ ಮತ್ತು ಉನ್ನತ ತಂತ್ರಜ್ಞಾನದ ಕೈಗಾರಿಕೆಗಳು 46.3% ರಷ್ಟು ಕೊಡುಗೆ ನೀಡುತ್ತಿವೆ.
  • ಕೇಂದ್ರ ಬಜೆಟ್ 2026-27 ಏಳು ಆಯಕಟ್ಟಿನ ಮತ್ತು ಮುಂಚೂಣಿ ವಲಯಗಳಲ್ಲಿ ಉತ್ಪಾದನೆಯನ್ನು ವಿಸ್ತರಿಸುವತ್ತ ಗಮನಹರಿಸಿದೆ.
  • ಸಮುದ್ರ ಆಹಾರದಿಂದ ಮೈಕ್ರೋವೇವ್ ಓವನ್‌ಗಳವರೆಗೆ ಮತ್ತು ಪಾದರಕ್ಷೆಗಳಿಂದ ವಿಮಾನ ತಯಾರಿಕೆಯವರೆಗೆ ವಿವಿಧ ಉತ್ಪನ್ನಗಳ ಕಚ್ಚಾ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗಿದೆ.
  • ಕೇಂದ್ರ ಬಜೆಟ್ 2026-27 ಅಡಿಯಲ್ಲಿ, ₹10,000 ಕೋಟಿ ಮೊತ್ತದ ಎಸ್‌ಎಂಇ ಬೆಳವಣಿಗೆಯ ನಿಧಿ ಮತ್ತು 'ಸ್ವಾವಲಂಬಿ ಭಾರತ' ನಿಧಿಗೆ ಹೆಚ್ಚುವರಿಯಾಗಿ ₹2,000 ಕೋಟಿ ನೀಡುವ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಜಾಗತಿಕ ಮಟ್ಟದ ಚಾಂಪಿಯನ್‌ಗಳನ್ನಾಗಿ ರೂಪಿಸಲು ಉತ್ತೇಜನ ನೀಡಲಾಗಿದೆ.

ಪೀಠಿಕೆ

ಜಾಗತಿಕ ಮಟ್ಟದಲ್ಲಿ ಕೈಗಾರಿಕಾ ಪ್ರದರ್ಶನವು ಅಸ್ಥಿರವಾಗಿದ್ದರೂ ಸಹ, ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮುವ ಮೂಲಕ ತನ್ನ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ. 2025ರ ಕ್ಯಾಲೆಂಡರ್ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕ ಉತ್ಪಾದನಾ ಪ್ರಮಾಣವು ಕೇವಲ 0.7% ರಷ್ಟು ಸಾಧಾರಣ ಬೆಳವಣಿಗೆ ಕಂಡರೆ, ಅದೇ ಅವಧಿಯಲ್ಲಿ ಭಾರತವು 1.3% ರಷ್ಟು ಉತ್ಪಾದನಾ ಬೆಳವಣಿಗೆಯನ್ನು ದಾಖಲಿಸಿದೆ. ಈ ಸಾಧನೆಯು ದೇಶದ ಮೂಲಭೂತ ಅಂಶಗಳ ಬಲ ಮತ್ತು ಕೈಗಾರಿಕಾ ವಿಸ್ತರಣೆಗಾಗಿ ನೀಡಲಾಗುತ್ತಿರುವ ನಿರಂತರ ನೀತಿ ಬೆಂಬಲವನ್ನು ಪ್ರತಿಬಿಂಬಿಸುತ್ತದೆ.

ಸುಧಾರಣೆಗಳು, ವಲಯವಾರು ಉಪಕ್ರಮಗಳು ಮತ್ತು ಸದೃಢವಾದ ಪೂರೈಕೆ ಸರಪಳಿಗಳೊಂದಿಗೆ, 2047ರ ವೇಳೆಗೆ 35 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಭಾರತದ ಮಹತ್ವಾಕಾಂಕ್ಷೆಗೆ ಉತ್ಪಾದನಾ ವಲಯವು ಇಂದು ಬೆಳವಣಿಗೆಯ ಎಂಜಿನ್ ಆಗಿದೆ. ಈ ಪ್ರಾಮುಖ್ಯತೆಯನ್ನು ಗುರುತಿಸಿರುವ ಕೇಂದ್ರ ಬಜೆಟ್ 2026-27, ಹೂಡಿಕೆ ಉತ್ತೇಜಕಗಳು, ನಾವೀನ್ಯತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಪರಿಸರ ವ್ಯವಸ್ಥೆಯ ಬಲವರ್ಧನೆಯ ಮೇಲೆ ಗಮನಹರಿಸುವ ಮೂಲಕ ಉತ್ಪಾದನಾ ವಲಯಕ್ಕೆ ಉದ್ದೇಶಿತ ಕ್ರಮಗಳ ಮೂಲಕ ಬೆಂಬಲವನ್ನು ನೀಡಿದೆ.

ನಿರ್ಧರಿಸಲಾದ ಮೂರು 'ಕರ್ತವ್ಯ'ಗಳ ಆಧಾರದ ಮೇಲೆ, ಉತ್ಪಾದನಾ ವಲಯವು ಭಾರತದ ಬೆಳವಣಿಗೆ, ಉದ್ಯೋಗ ಸೃಷ್ಟಿ, ರಫ್ತು ಸ್ಪರ್ಧಾತ್ಮಕತೆ ಮತ್ತು ದೀರ್ಘಕಾಲೀನ ಆರ್ಥಿಕ ರೂಪಾಂತರವನ್ನು ಮುನ್ನಡೆಸಲು ಸನ್ನದ್ಧವಾಗಿದೆ.

ಭಾರತದ ಉತ್ಪಾದನಾ ವಲಯದ ಪ್ರದರ್ಶನ

ಭಾರತದ ಬೆಳೆಯುತ್ತಿರುವ ಕೈಗಾರಿಕಾ ವೇಗಕ್ಕೆ ಉತ್ಪಾದನಾ ವಲಯವು ಒಂದು ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮುತ್ತಿದೆ. ಬಂಡವಾಳದ ಬೆಂಬಲ ಮತ್ತು ನೀತಿ ಆಧಾರಿತ ಸುಧಾರಣೆಗಳೊಂದಿಗೆ, ಉತ್ಪಾದನೆ, ಹೂಡಿಕೆ ಮತ್ತು ವ್ಯವಹಾರದ ವಿಶ್ವಾಸಾರ್ಹತೆಯ ಸೂಚಕಗಳ ಇತ್ತೀಚಿನ ದತ್ತಾಂಶಗಳು ಕೈಗಾರಿಕಾ ಮತ್ತು ಉತ್ಪಾದನಾ ಚಟುವಟಿಕೆಗಳಲ್ಲಿ ಸುಸ್ಥಿರ ಬಲವರ್ಧನೆಯನ್ನು ಸೂಚಿಸುತ್ತಿವೆ.

ಭಾರತದ ಕೈಗಾರಿಕಾ ಮತ್ತು ಉತ್ಪಾದನಾ ವೇಗ ಬಲವರ್ಧನೆ

ಭಾರತದ ಕೈಗಾರಿಕಾ ಚಟುವಟಿಕೆಯು ನಿರಂತರವಾಗಿ ಬಲಗೊಳ್ಳುತ್ತಿದ್ದು, 2025-26ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ನೈಜ ಕೈಗಾರಿಕಾ ಜಿವಿಎ ವರ್ಷದಿಂದ ವರ್ಷಕ್ಕೆ 7% ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ನವೆಂಬರ್ 2025ರಲ್ಲಿ 7.2% ರಷ್ಟು ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದ ನಂತರ, ಡಿಸೆಂಬರ್ 2025 ರಲ್ಲಿ ಕೈಗಾರಿಕಾ ಉತ್ಪಾದನೆಯು 7.8% ರಷ್ಟು ಏರಿಕೆಯಾಗಿದೆ. ಇದು ಕಳೆದ ಎರಡು ವರ್ಷಗಳಲ್ಲೇ ಅತ್ಯಂತ ಬಲವಾದ ವಿಸ್ತರಣೆಯಾಗಿದ್ದು, ವರ್ಷವಿಡೀ ಈ ವೇಗವು ಮುಂದುವರೆದಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಪ್ರತಿಫಲಿಸುವ ಈ ವಿಸ್ತರಣೆಯು ಪ್ರಮುಖವಾಗಿ ಉತ್ಪಾದನಾ ವಲಯದಿಂದ ಚಾಲಿತವಾಗಿದೆ. ಉತ್ಪಾದನಾ ವಲಯವು ಡಿಸೆಂಬರ್ 2025ರಲ್ಲಿ 8.1% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದರ ಅಡಿಯಲ್ಲಿ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳು (34.9%), ಮೋಟಾರು ವಾಹನಗಳು ಮತ್ತು ಟ್ರೈಲರ್‌ಗಳು (33.5%) ಮತ್ತು ಇತರ ಸಾರಿಗೆ ಉಪಕರಣಗಳು (25.1%) ಪ್ರಬಲ ಬೆಳವಣಿಗೆಯನ್ನು ದಾಖಲಿಸಿವೆ.

ಇತ್ತೀಚಿನ ತ್ರೈಮಾಸಿಕಗಳಲ್ಲಿ ಉತ್ಪಾದನಾ ಪ್ರದರ್ಶನವು ಮತ್ತಷ್ಟು ಬಲಗೊಂಡಿದ್ದು, ಹಣಕಾಸು ವರ್ಷ 2025-26ರ ಮೊದಲ ತ್ರೈಮಾಸಿಕದಲ್ಲಿ 7.72% ಮತ್ತು ಎರಡನೇ ತ್ರೈಮಾಸಿಕದಲ್ಲಿ 9.13% ಜಿವಿಎ ಬೆಳವಣಿಗೆಯನ್ನು ಸಾಧಿಸಿದೆ. ಉನ್ನತ ಮೌಲ್ಯದ ಉತ್ಪಾದನೆಯತ್ತ ಹಂತಹಂತವಾಗಿ ಬದಲಾಗುತ್ತಿರುವುದು, ಸುಧಾರಿತ ಕೈಗಾರಿಕಾ ಮೂಲಸೌಕರ್ಯ ಮತ್ತು ತಂತ್ರಜ್ಞಾನದ ವ್ಯಾಪಕ ಅಳವಡಿಕೆಯು ಈ ವಲಯದಾದ್ಯಂತ ಹೆಚ್ಚುತ್ತಿರುವ ಕೈಗಾರಿಕಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.

ಬೇಡಿಕೆ ಮತ್ತು ವ್ಯವಹಾರ ನಿರೀಕ್ಷೆಗಳ ಸುಧಾರಣೆಯೊಂದಿಗೆ ಹೆಚ್ಚಿದ ಆತ್ಮವಿಶ್ವಾಸ

ಮುನ್ನೋಟದ ಸೂಚಕಗಳು ಭಾರತದ ಕೈಗಾರಿಕಾ ವಲಯದಲ್ಲಿನ ಆಶಾವಾದವನ್ನು ಪ್ರತಿಬಿಂಬಿಸುತ್ತಿವೆ. ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕವು ಮಾರ್ಚ್ 2023 ರಿಂದ ಸತತವಾಗಿ ವಿಸ್ತರಣಾ ವಲಯದಲ್ಲೇ (50 ರ ಮಟ್ಟಕ್ಕಿಂತ ಹೆಚ್ಚಿರುವುದು) ಉಳಿದಿದೆ. ಜನವರಿ 2026 ರಲ್ಲಿ, ಪಿಎಂಐ 55.4 ರಷ್ಟಿತ್ತು, ಇದು ದೀರ್ಘಕಾಲೀನ ಸರಾಸರಿಗಿಂತ ಹೆಚ್ಚಾಗಿದ್ದು, ವಲಯದ ಆರೋಗ್ಯದಲ್ಲಿ ನಿರಂತರ ಸುಧಾರಣೆಯನ್ನು ಸೂಚಿಸುತ್ತದೆ.

ಉತ್ಪಾದನಾ ವಲಯದ ಕುರಿತಾದ ಆರ್‌ಬಿಐ ಕೈಗಾರಿಕಾ ಔಟ್‌ಲುಕ್ ಸಮೀಕ್ಷೆ

  • ಹಣಕಾಸು ವರ್ಷ 2025-26ರ ಮೊದಲನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ವ್ಯವಹಾರ ಮೌಲ್ಯಮಾಪನ ಸೂಚ್ಯಂಕವು ಸುಧಾರಿಸಿದೆ. ಕಚ್ಚಾ ವಸ್ತುಗಳ ವೆಚ್ಚ, ಹಣಕಾಸು ವೆಚ್ಚ ಮತ್ತು ಸಂಬಳದ ವೆಚ್ಚಗಳ ಮೇಲಿನ ಒತ್ತಡವು ಕಡಿಮೆಯಾಗುವ ನಿರೀಕ್ಷೆ ಇರುವುದು ಇದಕ್ಕೆ ಕಾರಣವಾಗಿದೆ.
  • ಹಣಕಾಸು ವರ್ಷ 2025-26ರ ಮೂರನೇ ತ್ರೈಮಾಸಿಕಕ್ಕಾಗಿ, ಉತ್ಪಾದಕರು ಬೇಡಿಕೆಯ ಬಗ್ಗೆ ಆಶಾವಾದ ಹೊಂದಿದ್ದಾರೆ. ಅಲ್ಲದೆ ವೆಚ್ಚದ ಒತ್ತಡದಲ್ಲಿ ಇಳಿಕೆ, ಉತ್ತಮ ಬೆಲೆ ಪ್ರಾಪ್ತಿ ಮತ್ತು ಸ್ಥಿರವಾದ ವ್ಯವಹಾರದ ಮನೋಭಾವವನ್ನು ನಿರೀಕ್ಷಿಸುತ್ತಿದ್ದಾರೆ.
  • ಹಣಕಾಸು ವರ್ಷ 2025-26ರ ನಾಲ್ಕನೇ ತ್ರೈಮಾಸಿಕ ಮತ್ತು 2026-27ರ ಮೊದಲನೇ ತ್ರೈಮಾಸಿಕದಲ್ಲಿ ಬೇಡಿಕೆಯ ಪರಿಸ್ಥಿತಿಗಳು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.

ಮೂಲಸೌಕರ್ಯ ವಲಯಗಳಿಂದ ಕೈಗಾರಿಕಾ ವಿಸ್ತರಣೆಗೆ ಬೆಂಬಲ

ಉತ್ಪಾದನೆಯ ದೃಷ್ಟಿಯಿಂದ ನೋಡುವುದಾದರೆ, ಭಾರೀ ಕೈಗಾರಿಕೆ ಮತ್ತು ಲಘು ಉತ್ಪಾದನಾ ವಲಯಗಳೆರಡೂ ಒಟ್ಟಾರೆ ಬೆಳವಣಿಗೆಗೆ ಬೆಂಬಲ ನೀಡುತ್ತಿವೆ ಎಂದು ವಲಯವಾರು ಪ್ರವೃತ್ತಿಗಳು ಸೂಚಿಸುತ್ತಿವೆ. ಎಂಟು ಪ್ರಮುಖ ಮೂಲಸೌಕರ್ಯ ಕೈಗಾರಿಕೆಗಳ ಸೂಚ್ಯಂಕವು ಡಿಸೆಂಬರ್ 2025 ರಲ್ಲಿ 175.7 ರಷ್ಟಿದ್ದು, ಡಿಸೆಂಬರ್ 2024 ಕ್ಕೆ ಹೋಲಿಸಿದರೆ 3.7% ರಷ್ಟು ತಾತ್ಕಾಲಿಕ ಬೆಳವಣಿಗೆಯನ್ನು ದಾಖಲಿಸಿದೆ. ಈ ತಿಂಗಳ ಅವಧಿಯಲ್ಲಿ ಸಿಮೆಂಟ್, ಉಕ್ಕು, ವಿದ್ಯುತ್, ರಸಗೊಬ್ಬರ ಮತ್ತು ಕಲ್ಲಿದ್ದಲು ವಲಯಗಳು ಧನಾತ್ಮಕ ಉತ್ಪಾದನಾ ಬೆಳವಣಿಗೆಯನ್ನು ದಾಖಲಿಸಿವೆ.

ಹಣಕಾಸು ವರ್ಷದಲ್ಲಿ ಉತ್ಪಾದನೆಯು ಸುಮಾರು 453 ಮಿಲಿಯನ್ ಟನ್ಗಳನ್ನು ತಲುಪಿದ್ದು, ಇದು ಮೂಲಸೌಕರ್ಯ ಮತ್ತು ನಿರ್ಮಾಣ ಕ್ಷೇತ್ರದ ವಿಸ್ತರಣೆಗೆ ಬೆಂಬಲ ನೀಡುತ್ತಿದೆ.

ಉಕ್ಕು: ಭಾರತವು ವಿಶ್ವದ ಎರಡನೇ ಅತಿದೊಡ್ಡ ಕಚ್ಚಾ ಉಕ್ಕು ಉತ್ಪಾದಕ ರಾಷ್ಟ್ರವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2025-26ರ ಹಣಕಾಸು ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಕಚ್ಚಾ ಉಕ್ಕು ಉತ್ಪಾದನೆಯು 11.7% ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸಿದ್ಧಪಡಿಸಿದ ಉಕ್ಕಿನ ಉತ್ಪಾದನೆಯು ಕೂಡ 10.8% ರಷ್ಟು ಹೆಚ್ಚಾಗಿದೆ.

ಕಲ್ಲಿದ್ದಲು: ಭಾರತದ ಕಲ್ಲಿದ್ದಲು ಉದ್ಯಮವು 2025ರ ಹಣಕಾಸು ವರ್ಷದಲ್ಲಿ ಐತಿಹಾಸಿಕ ಎತ್ತರವನ್ನು ತಲುಪಿದೆ. ಈ ಅವಧಿಯಲ್ಲಿ 1,047.52 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಉತ್ಪಾದಿಸಲಾಗಿದ್ದು, ಇದು ಹಿಂದಿನ ವರ್ಷಕ್ಕಿಂತ 4.98% ರಷ್ಟು ಹೆಚ್ಚಳವಾಗಿದೆ. 

ರಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್: 2025ರ ಹಣಕಾಸು ವರ್ಷದಲ್ಲಿ ಪ್ರಮುಖ ರಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್‌ಗಳ ಉತ್ಪಾದನೆಯು 58,617 ಸಾವಿರ ಟನ್ಗಳನ್ನು ತಲುಪಿದೆ. ಈ ವಲಯವು ತನ್ನ ಬಲವಾದ ಕೊಂಡಿಗಳು ಮತ್ತು ಹಲವಾರು ಪೂರಕ ಕೈಗಾರಿಕೆಗಳ ಮೂಲಕ ಕೈಗಾರಿಕಾ ಅಭಿವೃದ್ಧಿಗೆ ಬೆಂಬಲ ನೀಡುವುದನ್ನು ಮುಂದುವರಿಸಿದೆ.

 

ಕೋಷ್ಟಕ 1: ಭಾರತದ ಪ್ರಮುಖ ಇನ್ಪುಟ್ ಕೈಗಾರಿಕೆಗಳ ದಶಕದ ಪ್ರಬಲ ಬೆಳವಣಿಗೆ (ಮೌಲ್ಯ: ಮಿಲಿಯನ್ ಟನ್ಗಳಲ್ಲಿ)

ಪ್ರಮುಖ ಇನ್‌ಪುಟ್ ಕೈಗಾರಿಕೆಗಳು

ಹಣಕಾಸು ವರ್ಷ15

ಹಣಕಾಸು ವರ್ಷ 25

ಸಿಮೆಂಟ್

270.00

453.00

ಸಿದ್ಧಪಡಿಸಿದ ಉಕ್ಕು

81.86

146.69

ಕಲ್ಲಿದ್ದಲು

609.18

1,047.52

ಮೂಲ: ಆರ್ಥಿಕ ಸಮೀಕ್ಷೆ 2025-26

ಭಾರತದ ಉತ್ಪಾದನಾ ವಲಯದ ಜಾಗತಿಕ ಉಪಸ್ಥಿತಿ ವಿಸ್ತರಣೆ

ಆರ್ಥಿಕ ಸಮೀಕ್ಷೆ 2025-26ರ ಪ್ರಕಾರ, ಭಾರತದ ಉತ್ಪಾದನಾ ಮೌಲ್ಯವರ್ಧನೆಗೆ ಮಧ್ಯಮ ಮತ್ತು ಉನ್ನತ ತಂತ್ರಜ್ಞಾನದ ಕೈಗಾರಿಕೆಗಳು ಈಗ 46.3% ರಷ್ಟು ಕೊಡುಗೆ ನೀಡುತ್ತಿವೆ. ಇದು ದೇಶವು ಹೆಚ್ಚು ಅತ್ಯಾಧುನಿಕ ಉತ್ಪಾದನಾ ರಚನೆಯತ್ತ ಹಂತಹಂತವಾಗಿ ಬದಲಾಗುತ್ತಿರುವುದನ್ನು ಸೂಚಿಸುತ್ತದೆ. ಈ ಸ್ಥಿತ್ಯಂತರವು ಭಾರತವನ್ನು ಉತ್ಪಾದನಾ ಮೌಲ್ಯದ ಸರಪಳಿಯಲ್ಲಿ ಸ್ಥಿರವಾಗಿ ಮುನ್ನಡೆಯುತ್ತಿರುವ ಮಧ್ಯಮ-ಆದಾಯದ ಆರ್ಥಿಕತೆಗಳ ಗುಂಪಿನಲ್ಲಿ ಗುರುತಿಸುವಂತೆ ಮಾಡಿದೆ. ಈ ಪ್ರಗತಿಯ ಪ್ರತಿಫಲವಾಗಿ, ಭಾರತದ ಜಾಗತಿಕ ಕೈಗಾರಿಕಾ ಸ್ಪರ್ಧಾತ್ಮಕತೆಯು ಸುಧಾರಿಸಿದೆ; ಸ್ಪರ್ಧಾತ್ಮಕ ಕೈಗಾರಿಕಾ ಪ್ರದರ್ಶನ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 2022 ರಲ್ಲಿ 40 ನೇ ಸ್ಥಾನದಲ್ಲಿದ್ದು, 2023 ರಲ್ಲಿ 37 ನೇ ಸ್ಥಾನಕ್ಕೆ ಏರಿದೆ.

ಉತ್ಪಾದನಾ ವಲಯವು ಭಾರತದ ರಫ್ತು ಪ್ರದರ್ಶನವನ್ನು ಬಲಪಡಿಸುವಲ್ಲಿಯೂ ಸಹ ಕೊಡುಗೆ ನೀಡಿದೆ. ಹಣಕಾಸು ವರ್ಷ 2026 ಮೊದಲ ಮೂರು ತ್ರೈಮಾಸಿಕಗಳಲ್ಲಿ ಪ್ರತಿ ಬಾರಿಯೂ ಸಾರ್ವಕಾಲಿಕ ದಾಖಲೆಯ ರಫ್ತು ಮಟ್ಟವನ್ನು ದಾಖಲಿಸಲಾಗಿದೆ. ಇದಲ್ಲದೆ, ಏಪ್ರಿಲ್-ಡಿಸೆಂಬರ್ 2025 ರ ಅವಧಿಯಲ್ಲಿ, ರಫ್ತು ಪ್ರಮಾಣವು 634.3 ಬಿಲಿಯನ್ ಯುಎಸ್ ಡಾಲರ್ ತಲುಪಿದ್ದು, ವರ್ಷದಿಂದ ವರ್ಷಕ್ಕೆ 4.3% ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇದು ವಿದೇಶಿ ವ್ಯಾಪಾರದಲ್ಲಿ ಭಾರತದ ಸುಸ್ಥಿರ ಅಭಿವೃದ್ಧಿಯನ್ನು ಉಲ್ಲೇಖಿಸುತ್ತದೆ.

ಉತ್ಪಾದನಾ ಕ್ಷೇತ್ರದಲ್ಲಿ ಎಂಎಸ್ಎಂಇಗಳ ಪಾತ್ರ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಭಾರತದ ಕೈಗಾರಿಕಾ ಆರ್ಥಿಕತೆಯ ಕೇಂದ್ರಬಿಂದುವಾಗಿ ಮುಂದುವರಿದಿವೆ. ಇವು ಉತ್ಪಾದನಾ ವಲಯದ ಒಟ್ಟು ಉತ್ಪಾದನೆಯಲ್ಲಿ ಸುಮಾರು 35.4%, ರಫ್ತಿನಲ್ಲಿ 48.58% ಮತ್ತು ಒಟ್ಟು ಜಿಡಿಪಿಯಲ್ಲಿ 31.1% ರಷ್ಟು ಕೊಡುಗೆ ನೀಡುತ್ತಿವೆ. ದೇಶಾದ್ಯಂತ ಇರುವ 7.47 ಕೋಟಿ ಉದ್ಯಮಗಳ ಮೂಲಕ ಇವು 32.82 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ, ಇದು ಕೃಷಿ ವಲಯದ ನಂತರದ ಅತಿದೊಡ್ಡ ಉದ್ಯೋಗದಾತ ವಲಯವಾಗಿದೆ.

ಭಾರತದ ಉತ್ಪಾದನಾ ವಲಯವು ಜಾಗತಿಕ ಮಾರುಕಟ್ಟೆಗಳೊಂದಿಗೆ ಹೆಚ್ಚು ಸಂಯೋಜನೆಗೊಳ್ಳುತ್ತಿರುವಂತೆ, ಪೂರೈಕೆ ಸರಪಳಿಗಳನ್ನು ಬಲಪಡಿಸುವಲ್ಲಿ, ಸ್ಥಳೀಯ ಮೌಲ್ಯವರ್ಧನೆಯನ್ನು ಉತ್ತೇಜಿಸುವಲ್ಲಿ ಮತ್ತು ಎಲ್ಲರನ್ನೂ ಒಳಗೊಂಡ ಪ್ರಾದೇಶಿಕ ಅಭಿವೃದ್ಧಿಯನ್ನು ಬೆಂಬಲಿಸುವಲ್ಲಿ ಎಂಎಸ್‌ಎಂಇಗಳು ಪ್ರಮುಖ ಪಾತ್ರವಹಿಸುತ್ತವೆ.

ಬಜೆಟ್ 2026-27: ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ಪ್ರಮುಖ ಉಪಕ್ರಮಗಳು

ಕೇಂದ್ರ ಬಜೆಟ್ 2026-27, ಆಯಕಟ್ಟಿನ ಮತ್ತು ಮುಂಚೂಣಿ ವಲಯಗಳಲ್ಲಿ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಸಮಗ್ರ ಕ್ರಮಗಳನ್ನು ಅನಾವರಣಗೊಳಿಸಿದೆ. ಈ ಘೋಷಣೆಗಳು ಸರ್ಕಾರದ ಕಾರ್ಯಸೂಚಿಯನ್ನು ಮತ್ತಷ್ಟು ಬಲಪಡಿಸುತ್ತವೆ. ಇವು ತೆರಿಗೆ ವಿನಾಯಿತಿ ಮತ್ತು ಕಸ್ಟಮ್ಸ್ ಸುಧಾರಣೆಗಳಂತಹ ತಕ್ಷಣದ ಅಗತ್ಯಗಳನ್ನು ಹಾಗೂ ಹೊಸ ಕೈಗಾರಿಕಾ ಮಿಷನ್‌ಗಳು ಮತ್ತು ಕ್ಲಸ್ಟರ್ ಯೋಜನೆಗಳಂತಹ ದೀರ್ಘಕಾಲೀನ ಸಾಮರ್ಥ್ಯ ಅಭಿವೃದ್ಧಿಯ ಅಂಶಗಳನ್ನು ಒಳಗೊಂಡಿವೆ.

ಆಯಕಟ್ಟಿನ ವಲಯದ ಉಪಕ್ರಮಗಳು ಮತ್ತು ಕೈಗಾರಿಕಾ ಪರಿಸರ ವ್ಯವಸ್ಥೆಯ ಅಭಿವೃದ್ಧಿ

ಕೈಗಾರಿಕಾ ಬೆಳವಣಿಗೆಯ ಮುಂದಿನ ಹಂತವನ್ನು ಮುನ್ನಡೆಸಲು, ಈ ಬಜೆಟ್ ಹೆಚ್ಚಿನ ಪ್ರಭಾವ ಬೀರುವ ಮತ್ತು ಉದಯೋನ್ಮುಖ ಉದ್ಯಮಗಳ ಮೇಲೆ ಕೇಂದ್ರೀಕರಿಸುವ ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಇದು ಏಳು ಆಯಕಟ್ಟಿನ ಮತ್ತು ಮುಂಚೂಣಿ ವಲಯಗಳಲ್ಲಿ ಉತ್ಪಾದನೆಯನ್ನು ವಿಸ್ತರಿಸುವ ಕಡೆಗೆ ವಿಶೇಷ ಗಮನಹರಿಸಿದೆ.

  • ಪಾರಂಪರಿಕ ಕೈಗಾರಿಕಾ ಕ್ಲಸ್ಟರ್ಗಳ ಪುನಶ್ಚೇತನ: ಮೂಲಸೌಕರ್ಯ ಮತ್ತು ತಂತ್ರಜ್ಞಾನದ ಮೇಲ್ದರ್ಜೆಗೇರಿಸುವಿಕೆಯ ಮೂಲಕ ಸ್ಪರ್ಧಾತ್ಮಕತೆ ಮತ್ತು ದಕ್ಷತೆಯನ್ನು ಸುಧಾರಿಸಲು 200 ಪಾರಂಪರಿಕ ಕೈಗಾರಿಕಾ ಕ್ಲಸ್ಟರ್ಗಳನ್ನು ಪುನಶ್ಚೇತನಗೊಳಿಸುವ ಯೋಜನೆಯಾಗಿದೆ.
  • ಬಯೋಫಾರ್ಮಾ ಶಕ್ತಿ: ಐದು ವರ್ಷಗಳ ಅವಧಿಯಲ್ಲಿ ₹10,000 ಕೋಟಿ ವೆಚ್ಚದೊಂದಿಗೆ, ಭಾರತವನ್ನು ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್‌ಗಳ ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವುದು ಈ ಯೋಜನೆಯ ಗುರಿಯಾಗಿದೆ. ಇದು ಸಂಶೋಧನಾ ಸಾಮರ್ಥ್ಯವನ್ನು ವಿಸ್ತರಿಸುವುದು, 3 ಹೊಸ ಮತ್ತು ಮೇಲ್ದರ್ಜೆಗೇರಿಸಿದ ರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸುವುದು, 1000ಕ್ಕೂ ಹೆಚ್ಚು ಕ್ಲಿನಿಕಲ್ ಟ್ರಯಲ್ ಸೈಟ್‌ಗಳ ಜಾಲವನ್ನು ನಿರ್ಮಿಸುವುದು ಮತ್ತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ಸೆಮಿಕಂಡಕ್ಟರ್ ಮಿಷನ್ 2.0: ಹಿಂದಿನ ಉಪಕ್ರಮಗಳ ಯಶಸ್ಸಿನ ಆಧಾರದ ಮೇಲೆ, ಈ ಕಾರ್ಯಕ್ರಮವು ಸೆಮಿಕಂಡಕ್ಟರ್ ಉಪಕರಣಗಳು ಮತ್ತು ಕಚ್ಚಾ ವಸ್ತುಗಳ ಉತ್ಪಾದನೆ, ಸಂಪೂರ್ಣ 'ಇಂಡಿಯನ್ ಐಪಿ' ವಿನ್ಯಾಸ, ಪೂರೈಕೆ ಸರಪಳಿಗಳ ಬಲವರ್ಧನೆ ಮತ್ತು ಉದ್ಯಮ-ಚಾಲಿತ ಸಂಶೋಧನೆ ಹಾಗೂ ತರಬೇತಿ ಕೇಂದ್ರಗಳ ಸ್ಥಾಪನೆಯ ಮೇಲೆ ಗಮನಹರಿಸುತ್ತದೆ.

  • ಮೀಸಲಾದ ಕೆಮಿಕಲ್ ಪಾರ್ಕ್‌ಗಳು: ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು 'ಪ್ಲಗ್-ಅಂಡ್-ಪ್ಲೇ' ಮಾದರಿಯಲ್ಲಿ ಮೂರು ಕೆಮಿಕಲ್ ಪಾರ್ಕ್‌ಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಬೆಂಬಲ ನೀಡಲಾಗುವುದು.
  • ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕೆ ಯೋಜನೆ: ಹೂಡಿಕೆಯ ವೇಗವನ್ನು ಹೆಚ್ಚಿಸಲು ಮತ್ತು ದೇಶೀಯ ಬಿಡಿಭಾಗಗಳ ತಯಾರಿಕೆಯನ್ನು ವೇಗಗೊಳಿಸಲು, ಈ ಯೋಜನೆಯ ವೆಚ್ಚವನ್ನು ₹22,919 ಕೋಟಿಯಿಂದ ₹40,000 ಕೋಟಿಗೆ ಏರಿಸಲಾಗಿದೆ.
  • ಅಪರೂಪದ ಭೂಮಿಯ ಖನಿಜ ಕಾರಿಡಾರ್‌ಗಳು: ನವೆಂಬರ್ 2025 ರಲ್ಲಿ ಪ್ರಾರಂಭಿಸಲಾದ ಯೋಜನೆಯನ್ನು ಮುಂದುವರಿಸುತ್ತಾ, ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಗಣಿಗಾರಿಕೆ, ಸಂಸ್ಕರಣೆ, ಸಂಶೋಧನೆ ಮತ್ತು ಉತ್ಪಾದನೆಯನ್ನು ಉತ್ತೇಜಿಸಲು ವಿಶೇಷ 'ರೇರ್ ಅರ್ಥ್' ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು.
  • ಕ್ರೀಡಾ ಸಾಮಗ್ರಿಗಳ ತಯಾರಿಕಾ ಉಪಕ್ರಮ: ಕ್ರೀಡಾ ಉಪಕರಣಗಳು ಮತ್ತು ವಸ್ತು ವಿಜ್ಞಾನದಲ್ಲಿ ತಯಾರಿಕೆ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ವಿಶೇಷ ಬೆಂಬಲ ನೀಡಲಾಗುವುದು.
  • ಸಿಪಿಎಸ್‌ಇಗಳಲ್ಲಿ ಹೈ-ಟೆಕ್ ಟೂಲ್ ರೂಮ್‌ಗಳು: ಉತ್ಪಾದನಾ ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಬೆಂಬಲ ನೀಡಲು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ನಿಖರ ಸಾಧನಗಳ ತಯಾರಿಕೆ, ತರಬೇತಿ ಮತ್ತು ವಿನ್ಯಾಸ ಸೌಲಭ್ಯಗಳ ಸ್ಥಾಪನೆ.
  • ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಯೋಜನೆ: ಹೆಚ್ಚಿನ ಮೌಲ್ಯದ ಮತ್ತು ತಾಂತ್ರಿಕವಾಗಿ ಸುಧಾರಿತ ನಿರ್ಮಾಣ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಬಲಪಡಿಸಲು ಹೊಸ ಯೋಜನೆ.
  • ಕಂಟೇನರ್ ತಯಾರಿಕಾ ಯೋಜನೆ: ಜಾಗತಿಕವಾಗಿ ಸ್ಪರ್ಧಾತ್ಮಕವಾದ ಕಂಟೇನರ್ ತಯಾರಿಕಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಐದು ವರ್ಷಗಳಲ್ಲಿ ₹10,000 ಕೋಟಿ ಹಂಚಿಕೆ ಮಾಡಲಾಗಿದೆ.
  • ಜವಳಿ ವಲಯಕ್ಕೆ ವಿಶೇಷ ಕ್ರಮಗಳು: ಫೈಬರ್ ಸ್ವಾವಲಂಬನೆ, ಕ್ಲಸ್ಟರ್‌ಗಳ ಆಧುನೀಕರಣ, ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಬಲವರ್ಧನೆ, ಸುಸ್ಥಿರ ಜವಳಿಗಳ ಪ್ರಚಾರ ಮತ್ತು 'ಸಮರ್ಥ್ 2.0 ಅಡಿಯಲ್ಲಿ ಕೌಶಲ್ಯ ಸುಧಾರಣೆಯನ್ನು ಒಳಗೊಂಡ ಸಮಗ್ರ ಜವಳಿ ಕಾರ್ಯಕ್ರಮದ ಚಾಲನೆ. 
  • ತಾಂತ್ರಿಕ ಜವಳಿ ಸೇರಿದಂತೆ ಮೌಲ್ಯವರ್ಧನೆಯ ಮೇಲೆ ಗಮನಹರಿಸುವ 'ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳನ್ನು' ಸ್ಪರ್ಧಾತ್ಮಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು.
  • ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮ: ತರಬೇತಿ, ಕೌಶಲ್ಯ, ಉತ್ಪಾದನಾ ಗುಣಮಟ್ಟ, ಬ್ರ್ಯಾಂಡಿಂಗ್ ಮತ್ತು ಜಾಗತಿಕ ಮಾರುಕಟ್ಟೆ ಸಂಪರ್ಕಗಳ ಮೂಲಕ ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಬಲಪಡಿಸುವ ಉಪಕ್ರಮ. ಇದು ಗ್ರಾಮೀಣ ಕೈಗಾರಿಕೆಗಳು ಮತ್ತು ಕುಶಲಕರ್ಮಿಗಳಿಗೆ ಪ್ರಯೋಜನ ನೀಡಲಿದೆ.
  • ಎಂಎಸ್‌ಎಂಇಗಳನ್ನು ಬೆಳವಣಿಗೆಯ ಎಂಜಿನ್ ಎಂದು ಗುರುತಿಸುವುದು: ಎಂಎಸ್‌ಎಂಇಗಳು ಭವಿಷ್ಯದ ಉದ್ಯಮ ಚಾಂಪಿಯನ್‌ಗಳಾಗಿ ಹೊರಹೊಮ್ಮಲು ಸಹಾಯ ಮಾಡಲು ಮೂರು ಆಯಾಮದ ವಿಧಾನವನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಹೆಚ್ಚಿನ ಸಾಮರ್ಥ್ಯವಿರುವ ಉದ್ಯಮಗಳನ್ನು ಬೆಂಬಲಿಸಲು ₹10,000 ಕೋಟಿಯ ಎಸ್‌ಎಂಇ ಬೆಳವಣಿಗೆಯ ನಿಧಿ ಒಳಗೊಂಡಿದೆ. ಹೆಚ್ಚುವರಿಯಾಗಿ, ಸೂಕ್ಷ್ಮ ಉದ್ಯಮಗಳಿಗೆ ರಿಸ್ಕ್ ಕ್ಯಾಪಿಟಲ್ ಬೆಂಬಲವನ್ನು ಮುಂದುವರಿಸಲು 'ಸ್ವಾವಲಂಬಿ ಭಾರತ ನಿಧಿ'ಗೆ ₹2,000 ಕೋಟಿ ಹೆಚ್ಚುವರಿ ಅನುದಾನ ನೀಡಲಾಗುವುದು.

ಉತ್ಪಾದನೆಯನ್ನು ಉತ್ತೇಜಿಸಲು ತೆರಿಗೆ ಮತ್ತು ಕಸ್ಟಮ್ಸ್ ಸುಧಾರಣೆಗಳು

ಮೇಲೆ ತಿಳಿಸಲಾದ ವಲಯವಾರು ಕ್ರಮಗಳಿಗೆ ಪೂರಕವಾಗಿ, ಕೇಂದ್ರ ಬಜೆಟ್ 2026-27 ತೆರಿಗೆ ವ್ಯವಸ್ಥೆಯನ್ನು ಉತ್ಪಾದನಾ-ಸ್ನೇಹಿ ಮತ್ತು ರಫ್ತು-ಪೂರಕವಾಗಿ ರೂಪಿಸಲು ಸರಣಿ ತೆರಿಗೆ ಉತ್ತೇಜಕಗಳು ಮತ್ತು ಕಸ್ಟಮ್ಸ್ ಸುಂಕದ ಸುಧಾರಣೆಗಳನ್ನು ಪರಿಚಯಿಸಿದೆ. ಇದರ ಪ್ರಮುಖ ಕ್ರಮಗಳು ಇಲ್ಲಿವೆ:

  • ಬಾಂಡೆಡ್ ವಲಯದಲ್ಲಿರುವ ಯಾವುದೇ ಉತ್ಪಾದಕರಿಗೆ ಬಂಡವಾಳ ಸರಕುಗಳು, ಉಪಕರಣಗಳು ಅಥವಾ ಟೂಲಿಂಗ್ ಒದಗಿಸುವ ಅನಿವಾಸಿಗಳಿಗೆ ಐದು ವರ್ಷಗಳ ಕಾಲ ಆದಾಯ ತೆರಿಗೆಯಿಂದ ವಿನಾಯಿತಿ.
  • ಬಾಂಡೆಡ್ ಗೋದಾಮಿನಲ್ಲಿ ಬಿಡಿಭಾಗಗಳ ಸಂಗ್ರಹಣೆಗಾಗಿ ಅನಿವಾಸಿಗಳಿಗೆ 'ಸೇಫ್ ಹಾರ್ಬರ್' ಸೌಲಭ್ಯ ಒದಗಿಸುವುದು.
  • ವಿಶ್ವಾಸಾರ್ಹ ಉತ್ಪಾದಕರಿಗೆ ಸುಂಕ ಪಾವತಿಯನ್ನು ಮುಂದೂಡುವ ಕಾಲಾವಕಾಶದ ಸೌಲಭ್ಯ.
  • ರಫ್ತು ಉದ್ದೇಶಿತ ಸಮುದ್ರ ಆಹಾರ ಉತ್ಪನ್ನಗಳ ಸಂಸ್ಕರಣೆಗಾಗಿ ಬಳಸುವ ನಿರ್ದಿಷ್ಟ ಕಚ್ಚಾ ವಸ್ತುಗಳ ಮೇಲಿನ ಸುಂಕ ಮುಕ್ತ ಆಮದು ಮಿತಿಯನ್ನು, ಹಿಂದಿನ ವರ್ಷದ ರಫ್ತು ವಹಿವಾಟಿನ (FOB value) ಶೇ. 1 ರಿಂದ ಶೇ. 3 ಕ್ಕೆ ಏರಿಕೆ.
  • ಚರ್ಮದ ಅಥವಾ ಸಂಶ್ಲೇಷಿತ ಪಾದರಕ್ಷೆಗಳ ಜೊತೆಗೆ, ಪಾದರಕ್ಷೆಗಳ ಮೇಲ್ಭಾಗದ ರಫ್ತಿಗೂ ನಿರ್ದಿಷ್ಟ ಕಚ್ಚಾ ವಸ್ತುಗಳ ಸುಂಕ ಮುಕ್ತ ಆಮದು ಸೌಲಭ್ಯ ವಿಸ್ತರಣೆ.
  • ಚರ್ಮ ಅಥವಾ ಜವಳಿ ಉಡುಪುಗಳು, ಚರ್ಮ ಮತ್ತು ಸಂಶ್ಲೇಷಿತ ಪಾದರಕ್ಷೆಗಳ ರಫ್ತುದಾರರಿಗೆ ಅಂತಿಮ ಉತ್ಪನ್ನದ ರಫ್ತು ಸಮಯವನ್ನು ಪ್ರಸ್ತುತ ಇರುವ 6 ತಿಂಗಳಿಂದ 1 ವರ್ಷಕ್ಕೆ ವಿಸ್ತರಣೆ.
  • ಮೈಕ್ರೋವೇವ್ ಓವನ್‌ಗಳ ತಯಾರಿಕೆಯಲ್ಲಿ ಬಳಸುವ ನಿರ್ದಿಷ್ಟ ಭಾಗಗಳು ಮತ್ತು ವಿಮಾನ ತಯಾರಿಕೆಯಲ್ಲಿ ಬಳಸುವ ಬಿಡಿಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ.
  • ರಕ್ಷಣಾ ಘಟಕಗಳ ನಿರ್ವಹಣೆ, ದುರಸ್ತಿ ಅಥವಾ ಕೂಲಂಕುಷ ಪರೀಕ್ಷೆಯ ಅಗತ್ಯಗಳಿಗಾಗಿ ಬಳಸುವ ವಿಮಾನದ ಬಿಡಿಭಾಗಗಳ ತಯಾರಿಕೆಗೆ ಆಮದು ಮಾಡಿಕೊಳ್ಳುವ ಕಚ್ಚಾ ವಸ್ತುಗಳ ಮೇಲೆ ಮೂಲ ಕಸ್ಟಮ್ಸ್ ಸುಂಕದ ವಿನಾಯಿತಿ.
  • ದೀರ್ಘಕಾಲದ ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ಹೊಂದಿರುವ ನಿಯಮಿತ ಆಮದುದಾರರನ್ನು ಅಪಾಯ ನಿರ್ವಹಣಾ ವ್ಯವಸ್ಥೆಯಲ್ಲಿ ವಿಶೇಷವಾಗಿ ಗುರುತಿಸುವುದು.
  • ಎಲೆಕ್ಟ್ರಾನಿಕ್ ಸೀಲಿಂಗ್ ಬಳಸುವ ರಫ್ತು ಸರಕುಗಳಿಗೆ ಕಾರ್ಖಾನೆಯ ಆವರಣದಿಂದ ನೇರವಾಗಿ ಹಡಗಿನವರೆಗೆ ತಪಾಸಣಾ ಮುಕ್ತ ವಿಲೇವಾರಿ ಸೌಲಭ್ಯ ಒದಗಿಸುವುದು.
  • ವಿಶೇಷ ಆರ್ಥಿಕ ವಲಯಗಳ ಅರ್ಹ ಉತ್ಪಾದನಾ ಘಟಕಗಳು ದೇಶೀಯ ಮಾರುಕಟ್ಟೆಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ವಿಶೇಷ ಏಕಕಾಲದ ಕ್ರಮ.

ಈ ಎಲ್ಲಾ ಕ್ರಮಗಳು ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಸರ್ಕಾರದ ನಿರಂತರ ಪ್ರಯತ್ನದಲ್ಲಿ ಬೇರೂರಿವೆ; ಅಂದರೆ ಉದ್ಯೋಗಗಳನ್ನು ಸೃಷ್ಟಿಸುವ, ಮುಂಚೂಣಿ ತಂತ್ರಜ್ಞಾನಗಳಲ್ಲಿ ನಾವೀನ್ಯತೆ ತರುವ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಯಶಸ್ವಿಯಾಗಿ ಸಂಯೋಜನೆಗೊಳ್ಳುವ ಕೇಂದ್ರವನ್ನಾಗಿ ರೂಪಿಸುವುದು ಇದರ ಉದ್ದೇಶವಾಗಿದೆ.

ಉತ್ಪಾದನಾ ಬೆಳವಣಿಗೆಯನ್ನು ಮುನ್ನಡೆಸುತ್ತಿರುವ ಸರ್ಕಾರದ ನಿರಂತರ ಉಪಕ್ರಮಗಳು

ಭಾರತದ ಉತ್ಪಾದನಾ ವಲಯದ ವಿಸ್ತರಣೆಯು ಉದ್ದೇಶಿತ ಉತ್ತೇಜಕ ಯೋಜನೆಗಳು, ಮಿಷನ್-ಆಧಾರಿತ ಸುಧಾರಣೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ನಾವೀನ್ಯತೆ-ಚಾಲಿತ ಉಪಕ್ರಮಗಳ ಸಂಯೋಜನೆಯಿಂದ ಬಲಗೊಳ್ಳುತ್ತಿದೆ. ಇವು ಉತ್ಪಾದನಾ ಬೆಳವಣಿಗೆಯ ಮುಂದಿನ ಹಂತಕ್ಕೆ ಬಲವಾದ ಬುನಾದಿಯನ್ನು ಸೃಷ್ಟಿಸುತ್ತಿವೆ.

ಉತ್ಪಾದನಾ ಆಧಾರಿತ ಉತ್ತೇಜಕ ಯೋಜನೆ

ಆತ್ಮನಿರ್ಭರ ಭಾರತ' ದೃಷ್ಟಿಕೋನಕ್ಕೆ ಅನುಗುಣವಾಗಿರುವ ಉತ್ಪಾದನಾ ಆಧಾರಿತ ಉತ್ತೇಜಕ ಯೋಜನೆಯು 14 ವಲಯಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಪ್ರಮುಖ ವೇಗವರ್ಧಕವಾಗಿ ಹೊರಹೊಮ್ಮಿದೆ. ಈ ಯೋಜನೆಯ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್, ಫಾರ್ಮಾಸ್ಯುಟಿಕಲ್ಸ್ ಮತ್ತು ಆಟೋಮೊಬೈಲ್ ತಯಾರಿಕೆಯಂತಹ ವಲಯಗಳಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದ್ದು, ಇದು ಭಾರತದ ಜಾಗತಿಕ ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಬಲಪಡಿಸಿದೆ:

  • ಪಿಎಲ್-ಚಾಲಿತ ಹೂಡಿಕೆಗಳು ಭಾರತದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನೆಯನ್ನು ಉತ್ತೇಜಿಸಿವೆ, ಇದು ದೇಶವನ್ನು ಜಾಗತಿಕ ಮಟ್ಟದ ಪ್ರಮುಖ ಮೊಬೈಲ್ ಫೋನ್ ತಯಾರಿಕಾ ಕೇಂದ್ರವನ್ನಾಗಿ ಮಾಡಿದೆ.
  • ಮೊದಲ ಮೂರು ವರ್ಷಗಳಲ್ಲಿ, ಪಿಎಲ್ ಫಾರ್ಮಾಸ್ಯುಟಿಕಲ್ (ಔಷಧೀಯ) ಮಾರಾಟವು2.63 ಲಕ್ಷ ಕೋಟಿ ದಾಟಿದೆ. ಇದರಲ್ಲಿ ₹1.69 ಲಕ್ಷ ಕೋಟಿ ರಫ್ತು ಒಳಗೊಂಡಿದೆ ಮತ್ತು ಮಾರ್ಚ್ 2025ರ ವೇಳೆಗೆ ದೇಶೀಯ ಮೌಲ್ಯವರ್ಧನೆಯು 83.74% ತಲುಪಿದೆ.

ಆಟೋಮೊಬೈಲ್ ಮತ್ತು ಆಟೋ ಬಿಡಿಭಾಗಗಳಿಗಾಗಿರುವ ಪಿಎಲ್‌ಯೋಜನೆಯು ಸೆಪ್ಟೆಂಬರ್ 2025 ರವರೆಗೆ ಒಟ್ಟು ₹35,657 ಕೋಟಿ ಹೂಡಿಕೆಯನ್ನು ಆಕರ್ಷಿಸಿದೆ, ಇದು 48,974 ಉದ್ಯೋಗಗಳ ಸೃಷ್ಟಿಗೆ ಕಾರಣವಾಗಿದೆ.

ರಾಷ್ಟ್ರೀಯ ಉತ್ಪಾದನಾ ಮಿಷನ್

ಬಜೆಟ್ 2025-26 ರಲ್ಲಿ ಘೋಷಿಸಲಾದ ರಾಷ್ಟ್ರೀಯ ಉತ್ಪಾದನಾ ಮಿಷನ್, ಕೈಗಾರಿಕಾ ಬೆಳವಣಿಗೆಗೆ ಪ್ರಮುಖ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ. ಇದು 2035ವೇಳೆಗೆ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲನ್ನು 25% ಕ್ಕೆ ಏರಿಸುವ, 143 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಆಳವಾದ ಸಂಯೋಜನೆಯ ಮೂಲಕ ಸರಕು ರಫ್ತನ್ನು 1.2 ಟ್ರಿಲಿಯನ್ ಯುಎಸ್ ಡಾಲರ್‌ಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಉತ್ಪಾದನಾ ಮಿಷನ್ ಅನುಷ್ಠಾನದ ಅಡಿಯಲ್ಲಿ ಈ ಕೆಳಗಿನ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:

  • ರಾಷ್ಟ್ರೀಯ ಉತ್ಪಾದನಾ ಮಿಷನ್ ಅಡಿಯಲ್ಲಿ ಕೆಲಸಗಳು ಪ್ರಗತಿಯಲ್ಲಿದ್ದು, ಇದು ವ್ಯಾಪಾರ ಮಾಡುವ ಸುಲಭತೆ ಮತ್ತು ವೆಚ್ಚ, ಉದ್ಯೋಗಿಗಳ ಸಿದ್ಧತೆ, ಎಂಎಸ್‌ಎಂಇ ಬೆಳವಣಿಗೆ, ಅನಗತ್ಯ ನಿಯಮಗಳ ಸರಳೀಕರಣ, ತಂತ್ರಜ್ಞಾನದ ಲಭ್ಯತೆ ಮತ್ತು ಗುಣಮಟ್ಟದ ಉತ್ಪಾದನೆಯ ಮೇಲೆ ಗಮನಹರಿಸುತ್ತಿದೆ.
  • ಒಂದು ಅಂತರ-ಸಚಿವಾಲಯ ಸಮಿತಿಯನ್ನು ರಚಿಸಲಾಗಿದೆ, ನೀತಿ ಆಯೋಗವು ಸಮಾಲೋಚನೆಗಳನ್ನು ಸಂಯೋಜಿಸುತ್ತಿದೆ ಮತ್ತು ಅನುಷ್ಠಾನದ ಪ್ರಸ್ತಾವನೆಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ.
  • ಎನ್‌ಎಸ್‌ಕ್ಯೂಎಫ್ ಆಧಾರಿತ ತರಬೇತಿ, ಉದ್ದೇಶಿತ ಕೌಶಲ್ಯದ ಮಧ್ಯಸ್ಥಿಕೆಗಳು ಮತ್ತು ಕೈಗಾರಿಕಾ ಕಾರಿಡಾರ್‌ಗಳು ಹಾಗೂ ಆಟಿಕೆಗಳು, ಚರ್ಮ ಮತ್ತು ಪಾದರಕ್ಷೆಗಳಂತಹ ನಿರ್ದಿಷ್ಟ ವಲಯದ ಕೈಗಾರಿಕೆಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳನ್ನು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾಗುತ್ತಿದೆ.
  • ರಾಷ್ಟ್ರೀಯ ಜವಳಿ ಉತ್ಪಾದನಾ ಮಿಷನ್ ಪ್ರಸ್ತುತ ರೂಪೀಕರಣದ ಹಂತದಲ್ಲಿದೆ. ಇದರ ಚೌಕಟ್ಟನ್ನು ಅಂತಿಮಗೊಳಿಸಲು ಪ್ರಮುಖ ಸಮಿತಿ ಮತ್ತು ನಿರಂತರ ಸಮಾಲೋಚನೆಗಳು ನಡೆಯುತ್ತಿವೆ.

ಕೈಗಾರಿಕಾ ವಿಸ್ತರಣೆಗೆ ಇಂಧನ ತುಂಬುತ್ತಿರುವ ಹೂಡಿಕೆಗಳು

2025-26ರ ಹಣಕಾಸು ವರ್ಷದಲ್ಲಿ ಹೂಡಿಕೆಯ ವೇಗವು ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವುದನ್ನು ಮುಂದುವರಿಸಿದೆ. ಒಟ್ಟು ಸ್ಥಿರ ಬಂಡವಾಳ ರಚನೆಯ ಪಾಲು 30% ರಷ್ಟಿದೆ ಎಂದು ಅಂದಾಜಿಸಲಾಗಿದೆ ಮತ್ತು ಇದು ವರ್ಷದ ಮೊದಲಾರ್ಧದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 7.6% ರಷ್ಟು ವಿಸ್ತರಿಸಿದೆ.

ಈ ಹೂಡಿಕೆಯ ಉತ್ತೇಜನವು ಸಾರ್ವಜನಿಕ ಮತ್ತು ಖಾಸಗಿ ವೆಚ್ಚಗಳೆರಡರಲ್ಲೂ ಪ್ರತಿಫಲಿಸುತ್ತಿದೆ. ಸರ್ಕಾರದ ಬಂಡವಾಳ ವೆಚ್ಚವು 2018-19 ಹಣಕಾಸು ವರ್ಷದಲ್ಲಿ3.07 ಲಕ್ಷ ಕೋಟಿ ಇತ್ತು, ಇದು 2025-26 ಹಣಕಾಸು ವರ್ಷದಲ್ಲಿ11.21 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಖಾಸಗಿ ಕಾರ್ಪೊರೇಟ್ ಹೂಡಿಕೆಯ ಘೋಷಣೆಗಳು 2025-26ರ ಮೊದಲಾರ್ಧದಲ್ಲಿ ₹14.6 ಲಕ್ಷ ಕೋಟಿಗೆ ಏರಿವೆ. ಇದು 2024-25ರ ಇದೇ ಅವಧಿಯಲ್ಲಿದ್ದ ₹7.9 ಲಕ್ಷ ಕೋಟಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಉಪಕ್ರಮಗಳು

ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಒಂದು ಪ್ರಮುಖ ಸಾಂಸ್ಥಿಕ ಸುಧಾರಣೆಯೆಂದರೆ 'ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ' ಸ್ಥಾಪನೆ. ಎಎನ್‌ಆರ್‌ಎಫ್‌ ಕಾಯ್ದೆ 2023 ರ ಅಡಿಯಲ್ಲಿ ಸ್ಥಾಪಿಸಲಾದ ಇದು, ಕೈಗಾರಿಕೆ, ಶೈಕ್ಷಣಿಕ ವಲಯ ಮತ್ತು ಸರ್ಕಾರದ ನಡುವೆ ಕಾರ್ಯತಂತ್ರದ ಮಾರ್ಗದರ್ಶನ, ಧನಸಹಾಯ ಮತ್ತು ಬಲವಾದ ಸಹಯೋಗವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ನಾವೀನ್ಯತೆಗಾಗಿ ಹಣಕಾಸಿನ ನೆರವು ನೀಡಲು, ಸರ್ಕಾರವು ಆರು ವರ್ಷಗಳ ಅವಧಿಗೆ ₹1 ಲಕ್ಷ ಕೋಟಿ ವೆಚ್ಚದ 'ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ' ನಿಧಿಯನ್ನು ಘೋಷಿಸಿದೆ. ಇದರಲ್ಲಿ 2025-26ರ ಹಣಕಾಸು ವರ್ಷಕ್ಕೆ ₹20,000 ಕೋಟಿ ಮೀಸಲಿಡಲಾಗಿದ್ದು, ಇದು ಹೈ-ಟೆಕ್ ಸಂಶೋಧನೆಯಲ್ಲಿ ಖಾಸಗಿ ಹೂಡಿಕೆಯನ್ನು ಹೆಚ್ಚಿಸುವ, ಸುಧಾರಿತ ತಂತ್ರಜ್ಞಾನ ಯೋಜನೆಗಳನ್ನು ಬೆಂಬಲಿಸುವ, ಆಯಕಟ್ಟಿನ ತಂತ್ರಜ್ಞಾನಗಳ ಸ್ವಾಧೀನಕ್ಕೆ ಅನುವು ಮಾಡಿಕೊಡುವ ಮತ್ತು 'ಡೀಪ್-ಟೆಕ್ ಫಂಡ್ ಆಫ್ ಫಂಡ್ಸ್' ಅನ್ನು ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿದೆ.

2016 ರಲ್ಲಿ 'ಸ್ಟಾರ್ಟ್ ಅಪ್ ಇಂಡಿಯಾ' ಪ್ರಾರಂಭವಾದಾಗಿನಿಂದ, ಬೆಳೆಯುತ್ತಿರುವ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯು ಇಂದು 2 ಲಕ್ಷಕ್ಕೂ ಹೆಚ್ಚು ಮಾನ್ಯತೆ ಪಡೆದ ಸ್ಟಾರ್ಟ್ ಅಪ್ಗಳನ್ನು ಹೊಂದಿದ್ದು, ಇದು ದೇಶದ ವಿಸ್ತರಿಸುತ್ತಿರುವ ಉದ್ಯಮಶೀಲತಾ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. 64 ನಿರ್ಣಾಯಕ ತಂತ್ರಜ್ಞಾನಗಳ ಪೈಕಿ 45 ರಲ್ಲಿ ಭಾರತವು ಈಗ ವಿಶ್ವದ ಅಗ್ರ ಐದು ದೇಶಗಳಲ್ಲಿ ಸ್ಥಾನ ಪಡೆದಿದೆ. ಇದು ಸುಧಾರಿತ ಉತ್ಪಾದನೆ ಮತ್ತು ಕೈಗಾರಿಕಾ ಸ್ಪರ್ಧಾತ್ಮಕತೆಗೆ ಅಗತ್ಯವಾದ ಕ್ಷೇತ್ರಗಳಲ್ಲಿ ಭಾರತದ ಸಾಮರ್ಥ್ಯವನ್ನು ಬಲಪಡಿಸಿದೆ.

ನಾವೀನ್ಯತೆ ಆಧಾರಿತ ಉತ್ಪಾದನಾ ಬೆಳವಣಿಗೆಯ ಪ್ರಭಾವ

ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯು ಗಮನಾರ್ಹವಾಗಿ ಬಲಗೊಂಡಿದೆ, ಇದು ಉನ್ನತ ಮೌಲ್ಯದ ಉತ್ಪಾದನೆಯತ್ತ ದೇಶವು ಸಾಗಲು ಬೆಂಬಲ ನೀಡುತ್ತಿದೆ. ಭಾರತದ ಜಾಗತಿಕ ನಾವೀನ್ಯತೆ ಸೂಚ್ಯಂಕ ಶ್ರೇಯಾಂಕವು 2019 ರಲ್ಲಿ 66 ನೇ ಸ್ಥಾನದಲ್ಲಿದ್ದು, 2025 ರಲ್ಲಿ 38 ನೇ ಸ್ಥಾನಕ್ಕೆ ಸುಧಾರಿಸಿದೆ. ಇದು ಕೆಳ-ಮಧ್ಯಮ ಆದಾಯದ ದೇಶಗಳ ಗುಂಪಿನಲ್ಲಿ ಅತ್ಯಂತ ಹೆಚ್ಚಿನ ಶ್ರೇಯಾಂಕವಾಗಿದೆ.

ಭಾರತವು 2024 ರಲ್ಲಿ ಟ್ರೇಡ್ಮಾರ್ಕ್ಗಳಲ್ಲಿ ಜಾಗತಿಕವಾಗಿ 4 ನೇ ಸ್ಥಾನ, ಪೇಟೆಂಟ್ಗಳಲ್ಲಿ 6 ನೇ ಸ್ಥಾನ ಮತ್ತು ಕೈಗಾರಿಕಾ ವಿನ್ಯಾಸಗಳಲ್ಲಿ 7 ನೇ ಸ್ಥಾನವನ್ನು ಹೊಂದಿದೆ. ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯು ಭಾರತದ ಉದ್ಯಮಶೀಲತಾ ನೀತಿಗಳು ಮತ್ತು ಉದ್ಯಮಶೀಲತಾ ಸಂಸ್ಕೃತಿಗಾಗಿ ಜಾಗತಿಕವಾಗಿ 12 ನೇ ಸ್ಥಾನವನ್ನು ನೀಡಿದೆ.

ರಕ್ಷಣೆ, ಬಾಹ್ಯಾಕಾಶ, ರೊಬೊಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಬಯೋಟೆಕ್, ಸುಧಾರಿತ ವಸ್ತುಗಳು, ಇಂಧನ ಮತ್ತು ಸಂವಹನ ಸೇರಿದಂತೆ ನಿರ್ಣಾಯಕ ತಂತ್ರಜ್ಞಾನ ಸಂಶೋಧನಾ ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ ಅಗ್ರ ನಾಲ್ಕು ದೇಶಗಳಲ್ಲಿ ಒಂದಾಗಿದೆ.

ಉತ್ಪಾದನಾ ವಿಸ್ತರಣೆಯನ್ನು ಮುನ್ನಡೆಸುತ್ತಿರುವ ಮೂಲಸೌಕರ್ಯ ಸುಧಾರಣೆಗಳು

ಸರ್ಕಾರದ ನೇತೃತ್ವದ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಸುಧಾರಣೆಗಳು ಸಂಪರ್ಕ, ಕೈಗಾರಿಕಾ ಮೂಲಸೌಕರ್ಯ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿನ ನಿರಂತರ ಹೂಡಿಕೆಗಳ ಮೂಲಕ ಉತ್ಪಾದನಾ ವಲಯದ ವಿಸ್ತರಣೆಗೆ ಅನುವು ಮಾಡಿಕೊಡುತ್ತಿವೆ.

ಪಿಎಂ ಗತಿಶಕ್ತಿ: ಇದು 57 ಸಚಿವಾಲಯಗಳು ಮತ್ತು ಇಲಾಖೆಗಳಾದ್ಯಂತ 1,700 ಕ್ಕೂ ಹೆಚ್ಚು ದತ್ತಾಂಶ ಪದರಗಳನ್ನು ಸಂಯೋಜಿಸುವ ಏಕೀಕೃತ ವೇದಿಕೆಯ ಮೂಲಕ ಮೂಲಸೌಕರ್ಯ ಯೋಜನೆಯ ಸ್ವರೂಪವನ್ನೇ ಬದಲಿಸಿದೆ. ಪಿಎಂ ಗತಿಶಕ್ತಿ ಪಬ್ಲಿಕ್ ಮತ್ತು ಏಕೀಕೃತ ಜಿಯೋಸ್ಪೇಷಿಯಲ್ ಇಂಟರ್ಫೇಸ್ ಈಗ ಹೂಡಿಕೆ ಮತ್ತು ಲಾಜಿಸ್ಟಿಕ್ಸ್ ಯೋಜನೆಗಾಗಿ 230 ದತ್ತಾಂಶ ಸೆಟ್ (Datasets) ಒದಗಿಸುತ್ತಿವೆ. ರಾಜ್ಯ ಮಟ್ಟದಲ್ಲಿ, 27 ರಾಜ್ಯಗಳು ತಮ್ಮದೇ ಆದ ಲಾಜಿಸ್ಟಿಕ್ಸ್ ನೀತಿಗಳನ್ನು ಘೋಷಿಸಿವೆ. ಅಲ್ಲದೆ, 28 ಆಶೋತ್ತರ ಜಿಲ್ಲೆಗಳು ಈಗಾಗಲೇ ವಲಯ ಯೋಜನೆಯಲ್ಲಿ 'ಗತಿಶಕ್ತಿ ಜಿಲ್ಲಾ ಮಾಸ್ಟರ್ ಪ್ಲಾನ್ ಮಾಡ್ಯೂಲ್' ಅನ್ನು ಬಳಸುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಎಲ್ಲಾ 112 ಆಶೋತ್ತರ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ.

ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ: ಇದಕ್ಕೆ ಪೂರಕವಾಗಿರುವ ಈ ನೀತಿಯ ಅಡಿಯಲ್ಲಿ, 'ಏಕೀಕೃತ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್' ಮೂಲಕ ಲಾಜಿಸ್ಟಿಕ್ಸ್ ಸಮನ್ವಯವನ್ನು ಬಲಪಡಿಸಲಾಗಿದೆ. ಇದು 11 ಸಚಿವಾಲಯಗಳ 44 ವ್ಯವಸ್ಥೆಗಳನ್ನು ಸಂಪರ್ಕಿಸುತ್ತದೆ. ಇದು 2,000 ದತ್ತಾಂಶ ಕ್ಷೇತ್ರಗಳನ್ನು ಒಳಗೊಂಡಿದ್ದು, 1,700 ಕ್ಕೂ ಹೆಚ್ಚು ಕಂಪನಿಗಳಿಗೆ ಬೆಂಬಲ ನೀಡುತ್ತಿದೆ ಮತ್ತು 200 ಕೋಟಿ ಎಪಿಐ (API) ವಹಿವಾಟುಗಳನ್ನು ಸುಗಮಗೊಳಿಸಿದೆ.

ಕೈಗಾರಿಕಾ ಕಾರಿಡಾರ್‌ಗಳು: ಇದೇ ವೇಳೆ, ಕೈಗಾರಿಕಾ ಕಾರಿಡಾರ್ ಯೋಜನೆಗಳು ಧೋಲೇರಾ ಮತ್ತು ಗ್ರೇಟರ್ ನೋಯ್ಡಾದಂತಹ ನಗರಗಳನ್ನು ಕ್ರಿಯಾತ್ಮಕಗೊಳಿಸಿವೆ. ಇಲ್ಲಿ ಇಲ್ಲಿಯವರೆಗೆ 350 ಕೈಗಾರಿಕಾ ಪ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದ್ದು, ₹2.02 ಲಕ್ಷ ಕೋಟಿ ಹೂಡಿಕೆಯಾಗಿದೆ. ಇದು ಮೆಟ್ರೋ ನಗರಗಳ ಹೊರತಾದ ಹೊಸ ಉತ್ಪಾದನಾ ಕೇಂದ್ರಗಳ ಬೆಳವಣಿಗೆಗೆ ಬೆಂಬಲ ನೀಡುತ್ತಿದೆ.

ಈ ಉಪಕ್ರಮಗಳು ದೇಶದ ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ಸಮನ್ವಯದ ಪ್ರಯತ್ನವನ್ನು ಪ್ರತಿಬಿಂಬಿಸುತ್ತವೆ. ಈ ಕ್ರಮಗಳ ಅನುಷ್ಠಾನವು ಪ್ರಗತಿಯಲ್ಲಿದ್ದು, ಇವು ಕೈಗಾರಿಕಾ ಸಾಮರ್ಥ್ಯವನ್ನು ವಿಸ್ತರಿಸುವ, ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮತ್ತು ಸುಸ್ಥಿರ ಉತ್ಪಾದನಾ-ಚಾಲಿತ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ನಿರೀಕ್ಷೆಯಿದೆ.

ಉಪಸಂಹಾರ

ಭಾರತದ ಉತ್ಪಾದನಾ ವಲಯವು ವಿಸ್ತರಣೆಯ ಹೊಸ ಹಂತಕ್ಕೆ ಪ್ರವೇಶಿಸುತ್ತಿದೆ. ಇದು ಸರ್ಕಾರದ ಆತ್ಮನಿರ್ಭರತೆ'ಯ ದೃಷ್ಟಿಕೋನ ಮತ್ತು 2026-27ರ ಕೇಂದ್ರ ಬಜೆಟ್‌ನಲ್ಲಿ ವಿವರಿಸಲಾದ ಮೂರು ಪ್ರಮುಖ ಕರ್ತವ್ಯ'ಗಳಲ್ಲಿ ಅಡಕವಾಗಿರುವ 'ಸಂಕಲ್ಪ'ದಿಂದ ಮಾರ್ಗದರ್ಶಿಸಲ್ಪಟ್ಟಿದೆ. ಸ್ಪರ್ಧಾತ್ಮಕತೆ, ತಂತ್ರಜ್ಞಾನ ಅಳವಡಿಕೆ, ಪೂರೈಕೆ ಸರಪಳಿ ಸಂಯೋಜನೆ ಮತ್ತು ಕೌಶಲ್ಯ ಅಭಿವೃದ್ಧಿಯ ಮೇಲಿನ ನಿರಂತರ ಗಮನವು ಉತ್ಪಾದನಾ ವಲಯವನ್ನು ಸುಸ್ಥಿರ ಬೆಳವಣಿಗೆಯ ಎಂಜಿನ್ ಆಗಿ ರೂಪಿಸಲು ಸಹಾಯ ಮಾಡುತ್ತಿದೆ.

ಒಟ್ಟಾರೆಯಾಗಿ, ಈ ಎಲ್ಲಾ ಪ್ರಯತ್ನಗಳು ಮುಂಬರುವ ವರ್ಷಗಳಲ್ಲಿ ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕ, ಸ್ಥಿತಿಸ್ಥಾಪಕ ಮತ್ತು ಸ್ವಾವಲಂಬಿ ಆರ್ಥಿಕ ಶಕ್ತಿಯನ್ನಾಗಿ ಮಾಡುವ ಪ್ರಯಾಣದಲ್ಲಿ ಉತ್ಪಾದನಾ ವಲಯವನ್ನು ಕೇಂದ್ರಬಿಂದುವನ್ನಾಗಿ ಮಾಡುತ್ತವೆ.

References

Ministry of Finance

https://www.indiabudget.gov.in/economicsurvey/doc/echapter.pdf

https://www.indiabudget.gov.in/doc/budget_speech.pdf

https://www.indiabudget.gov.in/doc/impbud2025-26.pdf

Ministry of Commerce & Industry

https://eaindustry.nic.in/eight_core_infra/eight_infra.pdf

https://www.pib.gov.in/PressNoteDetails.aspx?id=155242&NoteId=155242&ModuleId=3&reg=3&lang=2

Ministry of Statistics & Programme Implementation

https://www.pib.gov.in/PressReleasePage.aspx?PRID=2219602&reg=3&lang=2

Reserve Bank of India

https://rbidocs.rbi.org.in/rdocs/Publications/PDFs/IOSR111OCT0120257B0D827F5D6C4B9B9A625D35985D8649.PDF

Other Releases

https://www.pmi.spglobal.com/Public/Home/PressRelease/cf844f6598f24d3d97639f641b315fca

See in PDF

 

*****

 

(Explainer ID: 157343) आगंतुक पटल : 9
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Manipuri , Gujarati
Link mygov.in
National Portal Of India
STQC Certificate