Social Welfare
ವಿಶ್ವ ರೇಡಿಯೋ ದಿನ 2026
ರೇಡಿಯೋವನ್ನು ಒಂದು ಸಾರ್ವಜನಿಕ ಸೇವಾ ಮಾಧ್ಯಮವಾಗಿ ಸಂಭ್ರಮಿಸುವುದು
Posted On:
12 FEB 2026 2:24PM
|
ಪ್ರಮುಖ ಮಾರ್ಗಸೂಚಿಗಳು
- ಪ್ರತಿ ವರ್ಷ ಫೆಬ್ರವರಿ 13 ರಂದು ಆಚರಿಸಲಾಗುವ ವಿಶ್ವ ರೇಡಿಯೋ ದಿನವು, 1946ರಲ್ಲಿ ವಿಶ್ವಸಂಸ್ಥೆಯ ರೇಡಿಯೋ ಸ್ಥಾಪನೆಯಾದ ನೆನಪಿಗಾಗಿ ಆಚರಿಸಲಾಗುತ್ತದೆ.
- 2026ರ ವಿಶ್ವ ರೇಡಿಯೋ ದಿನದ ಘೋಷವಾಕ್ಯ:"ರೇಡಿಯೋ ಮತ್ತು ಕೃತಕ ಬುದ್ಧಿಮತ್ತೆ: ಎಐ ಒಂದು ಸಾಧನವೇ ಹೊರತು ಧ್ವನಿಯಲ್ಲ."
- ಭಾರತದ ಮೊದಲ ಸಮುದಾಯ ರೇಡಿಯೋ ಕೇಂದ್ರವನ್ನು ಫೆಬ್ರವರಿ 1, 2004 ರಂದು ಭಾರತ ರತ್ನ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರು ಉದ್ಘಾಟಿಸಿದರು.
- ಉತ್ತರ ಪ್ರದೇಶದ ಅಮ್ರೋಹಾದ ರಾಮ್ ಸಿಂಗ್ ಬೌದ್ಧ್ ಅವರನ್ನು ಭಾರತದ "ರೇಡಿಯೋ ಮ್ಯಾನ್" ಎಂದು ಕರೆಯಲಾಗುತ್ತದೆ. ಇವರು 1,257 ರೇಡಿಯೋಗಳ ವಿಶ್ವದ ಅತಿದೊಡ್ಡ ಸಂಗ್ರಹವನ್ನು ಹೊಂದಿರುವುದಕ್ಕಾಗಿ 2025 ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾನ್ಯತೆ ಪಡೆದಿದ್ದಾರೆ.
|
ಪೀಠಿಕೆ

ರೇಡಿಯೋ ಯಾವಾಗಲೂ ಒಂದು ವಿಶೇಷವಾದ ಮೋಡಿಯನ್ನು ಹೊಂದಿದೆ — ಇದು ಆಪ್ತವೂ ಹೌದು, ವಿಸ್ತಾರವೂ ಹೌದು; ಸರಳವೂ ಹೌದು ಮತ್ತು ಅಷ್ಟೇ ಶಕ್ತಿಯುತವೂ ಹೌದು. ಇದು ನಮ್ಮ ದೈನಂದಿನ ಜೀವನದಲ್ಲಿ ಮೌನವಾಗಿ ಬೆರೆತುಹೋಗುತ್ತದೆ, ಏನನ್ನೂ ನಿರೀಕ್ಷಿಸದೆ ನಮಗೆ ಒಡನಾಟ, ಮಾಹಿತಿ ಮತ್ತು ಒಂದು ಆತ್ಮೀಯತೆಯ ಭಾವವನ್ನು ನೀಡುತ್ತದೆ. ಪರದೆಗಳು ನಮ್ಮ ಗಮನವನ್ನು ಆಕ್ರಮಿಸಿಕೊಳ್ಳುವ ಬಹಳ ಕಾಲ ಮೊದಲೇ, ರೇಡಿಯೋ ಮನೆಯೊಳಗಿನ ಒಂದು ವಿಶ್ವಾಸಾರ್ಹ ಧ್ವನಿಯಾಗಿತ್ತು — ಹಂಚಿಕೆಯ ಆಲಿಸುವಿಕೆಯ ಮೂಲಕ ದೂರದ ಭೌಗೋಳಿಕ ಪ್ರದೇಶಗಳನ್ನು, ವಿವಿಧ ಭಾಷೆಗಳನ್ನು ಮತ್ತು ಅಸಂಖ್ಯಾತ ಜೀವನಗಳನ್ನು ಪರಸ್ಪರ ಜೋಡಿಸುತ್ತಿತ್ತು.
ಅನೇಕ ಐತಿಹಾಸಿಕ ಕ್ಷಣಗಳು ರೇಡಿಯೋ ಘೋಷಣೆಗಳ ಮೂಲಕವೇ ಸಮೂಹ ಸ್ಮೃತಿಯಲ್ಲಿ ಅಚ್ಚೊತ್ತಿವೆ. 1947ರ ಆಗಸ್ಟ್ 14-15ರ ಮಧ್ಯರಾತ್ರಿಯನ್ನು ಯಾರಾದರೂ ಮರೆಯಲು ಸಾಧ್ಯವೇ? ಅಂದು ರೇಡಿಯೋ ಸೆಟ್‌ಗಳು ಭಾರತದ ಸ್ವಾತಂತ್ರ್ಯವನ್ನು ಘೋಷಿಸಿದಾಗ ಉಂಟಾದ ಆ ಸಂಚಲನ ಮರೆಯಲಾಗದ್ದು. ಆ ಏಕೈಕ ಪ್ರಸಾರದಲ್ಲಿ, ರೇಡಿಯೋ ಕೇವಲ ಸುದ್ದಿಯನ್ನು ತಲುಪಿಸಲಿಲ್ಲ — ಬದಲಾಗಿ ಒಂದು ಬೃಹತ್ ಮತ್ತು ವೈವಿಧ್ಯಮಯ ದೇಶವನ್ನು ಸ್ವಾತಂತ್ರ್ಯದ ಒಂದೇ ಧ್ವನಿಯಡಿ ಒಂದುಗೂಡಿಸಿತು.
ಐತಿಹಾಸಿಕ ಹಿನ್ನೆಲೆ

ವಿಶ್ವ ರೇಡಿಯೋ ದಿನವನ್ನು 2011 ರಲ್ಲಿ ಯುನೆಸ್ಕೋ ತನ್ನ 36ನೇ ಸಾಮಾನ್ಯ ಸಮ್ಮೇಳನದಲ್ಲಿ ಘೋಷಿಸಿತು. ನಂತರ 2012 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇದನ್ನು ಅಧಿಕೃತವಾಗಿ ಅಂಗೀಕರಿಸುವ ಮೂಲಕ ಅಂತರಾಷ್ಟ್ರೀಯ ದಿನಾಚರಣೆಯಾಗಿ ಮಾನ್ಯತೆ ನೀಡಿತು. ಎರಡನೇ ಮಹಾಯುದ್ಧದ ನಂತರ ಜಾಗತಿಕ ಸಂವಹನ ಮತ್ತು ಮಾಹಿತಿ ಹಂಚಿಕೆಯ ಬದ್ಧತೆಯ ಸಂಕೇತವಾಗಿ 1946 ರಲ್ಲಿ ಸ್ಥಾಪನೆಯಾದ 'ವಿಶ್ವಸಂಸ್ಥೆಯ ರೇಡಿಯೋ'ದ ನೆನಪಿಗಾಗಿ ಪ್ರತಿ ವರ್ಷ ಫೆಬ್ರವರಿ 13 ರಂದು ಇದನ್ನು ಆಚರಿಸಲಾಗುತ್ತದೆ.
ವಿಶ್ವ ರೇಡಿಯೋ ದಿನ 2026 ರ ಘೋಷವಾಕ್ಯ
2026 ರ ವಿಶ್ವ ರೇಡಿಯೋ ದಿನದ ಘೋಷವಾಕ್ಯವಾದ — "ರೇಡಿಯೋ ಮತ್ತು ಕೃತಕ ಬುದ್ಧಿಮತ್ತೆ: AI ಒಂದು ಸಾಧನವೇ ಹೊರತು ಧ್ವನಿಯಲ್ಲ" — ಎಂಬುದು ಪ್ರಸಾರ ಮಾಧ್ಯಮದ ಪರಿಸರ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ಬೆಳೆಯುತ್ತಿರುವ ಪಾತ್ರವನ್ನು ಒತ್ತಿಹೇಳುತ್ತದೆ. ವಿಷಯ ಉತ್ಪಾದನೆ, ಆರ್ಕೈವಿಂಗ್ (ದಾಖಲೀಕರಣ), ಅನುವಾದ, ಕೇಳುಗರೊಂದಿಗಿನ ಸಂವಹನ ಮತ್ತು ಸುಲಭ ಲಭ್ಯತೆಯನ್ನು ಸುಧಾರಿಸುವ ಮೂಲಕ AI ಹೇಗೆ ರೇಡಿಯೋವನ್ನು ಹೆಚ್ಚು ಪರಿಣಾಮಕಾರಿ ಹಾಗೂ ಒಳಗೊಳ್ಳುವಂತೆ ಮಾಡಬಲ್ಲದು ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಅದೇ ಸಮಯದಲ್ಲಿ, ತಂತ್ರಜ್ಞಾನವು ಕೇವಲ ಒಂದು ಬೆಂಬಲ ವ್ಯವಸ್ಥೆಯಾಗಿ ಉಳಿಯಬೇಕೇ ಹೊರತು, ರೇಡಿಯೋದ ಮೂಲ ಸ್ವರೂಪವಾದ ಮನುಷ್ಯನ ಧ್ವನಿ, ಸಂಪಾದಕೀಯ ವಿವೇಚನೆ ಮತ್ತು ವಿಶ್ವಾಸಾರ್ಹತೆಗೆ ಅದು ಪರ್ಯಾಯವಾಗಬಾರದು ಎಂದು ಈ ಧ್ಯೇಯವಾಕ್ಯವು ಪ್ರತಿಪಾದಿಸುತ್ತದೆ. ಕೃತಕ ಬುದ್ಧಿಮತ್ತೆಯ ನೈತಿಕ ಮತ್ತು ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸುವ ಮೂಲಕ, ಡಿಜಿಟಲ್ ಯುಗದಲ್ಲಿ ನಾವೀನ್ಯತೆಯು ರೇಡಿಯೋದ ಮೂಲ ಮೌಲ್ಯಗಳಾದ ನಂಬಿಕೆ, ನೈಜತೆ ಮತ್ತು ಸಮುದಾಯದೊಂದಿಗಿನ ಒಡನಾಟವನ್ನು ಮತ್ತಷ್ಟು ಬಲಪಡಿಸಬೇಕು ಎಂಬ ಅಂಶವನ್ನು ಈ ಘೋಷವಾಕ್ಯವು ಪುನರುಚ್ಚರಿಸುತ್ತದೆ.
|
ರಾಯ್ಪುರದಲ್ಲಿ ವಿಶ್ವ ರೇಡಿಯೋ ದಿನದ ಸಮ್ಮೇಳನ 2026
ವಿಶ್ವ ರೇಡಿಯೋ ದಿನ 2026 ರ ಅಂಗವಾಗಿ, ಛತ್ತೀಸ್‌ಗಢದ ಆಕಾಶವಾಣಿ ರಾಯ್‌ಪುರ ಕೇಂದ್ರವು ಯುನೆಸ್ಕೋ ಸಹಯೋಗದೊಂದಿಗೆ, 2026 ರ ಫೆಬ್ರವರಿ 13 ರಂದು ಬೆಳಿಗ್ಗೆ 10:00 ಗಂಟೆಯಿಂದ ರಾಯ್‌ಪುರದ ಹೋಟೆಲ್ ಬ್ಯಾಬಿಲೋನ್ ಕ್ಯಾಪಿಟಲ್‌ನಲ್ಲಿ 'ವಿಶ್ವ ರೇಡಿಯೋ ದಿನದ ಸಮ್ಮೇಳನ'ವನ್ನು ಆಯೋಜಿಸುತ್ತಿದೆ. ಈ ಸಮ್ಮೇಳನವು ಈ ವರ್ಷದ ಅಧಿಕೃತ ಘೋಷವಾಕ್ಯವಾದ "ರೇಡಿಯೋ ಮತ್ತು ಕೃತಕ ಬುದ್ಧಿಮತ್ತೆ" ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ರೇಡಿಯೋ ಪ್ರಸಾರದ ಜೀವಾಳವಾಗಿರುವ ಮನುಷ್ಯನ ಧ್ವನಿಯನ್ನು ಸಂರಕ್ಷಿಸುವುದರ ಜೊತೆಗೆ, ವಿಷಯದ ಸೃಷ್ಟಿ, ಕೇಳುಗರೊಂದಿಗಿನ ಸಂವಹನ ಮತ್ತು ಸುಲಭ ಲಭ್ಯತೆಯನ್ನು ಬಲಪಡಿಸಲು AI ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಈ ಸಮ್ಮೇಳನದಲ್ಲಿ ಸುದೀರ್ಘ ಚರ್ಚೆಗಳು ನಡೆಯಲಿವೆ.
|
ಆಕಾಶವಾಣಿ: ಭಾರತದ ಸಾರ್ವಜನಿಕ ಸೇವಾ ಪ್ರಸಾರ ಸಂಸ್ಥೆ

ಆಕಾಶವಾಣಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಆಲ್ ಇಂಡಿಯಾ ರೇಡಿಯೋ (AIR), ಭಾರತದ ರಾಷ್ಟ್ರೀಯ ಪ್ರಸಾರ ಸಂಸ್ಥೆಯಾದ ಪ್ರಸಾರ ಭಾರತಿಯ ರೇಡಿಯೋ ವಿಭಾಗವಾಗಿದೆ. ಇದು ತನ್ನ ಆರಂಭದಿಂದಲೂ “ಬಹುಜನ ಹಿತಾಯ, ಬಹುಜನ ಸುಖಾಯ” (ಜನಸಮುದಾಯದ ಕಲ್ಯಾಣಕ್ಕಾಗಿ ಮತ್ತು ಸುಖಕ್ಕಾಗಿ) ಎಂಬ ಧ್ಯೇಯವಾಕ್ಯದೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದೆ. 1936 ರಲ್ಲಿ ಸ್ಥಾಪನೆಯಾದ ಮತ್ತು ಸ್ವಾತಂತ್ರ್ಯದ ನಂತರ ಸಾರ್ವಜನಿಕ ಮಾಲೀಕತ್ವಕ್ಕೆ ಒಳಪಟ್ಟ ಆಕಾಶವಾಣಿಯು, ಪ್ರಸಾರವಾಗುವ ಭಾಷೆಗಳ ಸಂಖ್ಯೆ ಮತ್ತು ಕೇಳುಗರ ವೈವಿಧ್ಯತೆಯ ದೃಷ್ಟಿಯಿಂದ ಇಂದು ವಿಶ್ವದ ಅತಿದೊಡ್ಡ ಪ್ರಸಾರ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ.

ಆಕಾಶವಾಣಿಯ ಸ್ವದೇಶಿ ಸೇವೆಯು ದೇಶಾದ್ಯಂತ 591 ಪ್ರಸಾರ ಕೇಂದ್ರಗಳನ್ನು ಹೊಂದಿದ್ದು, ಭಾರತದ ಸುಮಾರು 92% ಭೌಗೋಳಿಕ ಪ್ರದೇಶ ಮತ್ತು 99.19% ಜನಸಂಖ್ಯೆಯನ್ನು ತಲುಪುತ್ತಿದೆ. ಭಾರತದ ವಿಶಾಲವಾದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವಂತೆ, ಇದು 23 ಭಾಷೆಗಳಲ್ಲಿ ಮತ್ತು 182 ಉಪಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಮೀಡಿಯಂ ವೇವ್ (MW), ಶಾರ್ಟ್ ವೇವ್ (SW), ಎಫ್‌ಎಂ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ, ಆಕಾಶವಾಣಿಯು ಮೆಟ್ರೋ ನಗರಗಳಷ್ಟೇ ಅಲ್ಲದೆ ದೂರದ ಗ್ರಾಮೀಣ ಮತ್ತು ಗಡಿ ಪ್ರದೇಶಗಳ ಕೇಳುಗರನ್ನೂ ತಲುಪುತ್ತಿದೆ.
ಇದರ ಕಾರ್ಯಕ್ರಮಗಳು ಸುದ್ದಿ, ಪ್ರಚಲಿತ ವಿದ್ಯಮಾನಗಳು, ಕೃಷಿ, ಶಿಕ್ಷಣ, ಆರೋಗ್ಯ ಜಾಗೃತಿ, ಯುವಜನತೆಗಾಗಿ ವಿಶೇಷ ವಿಷಯಗಳು, ಶಾಸ್ತ್ರೀಯ ಮತ್ತು ಜಾನಪದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿವೆ. ತುರ್ತು ಸಂದರ್ಭಗಳಲ್ಲಿ ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ, ಆಕಾಶವಾಣಿಯು ನಿರಂತರವಾಗಿ ಸಮಯೋಚಿತ ಎಚ್ಚರಿಕೆಗಳನ್ನು ಮತ್ತು ದೃಢೀಕೃತ ಮಾಹಿತಿಯನ್ನು ಒದಗಿಸುತ್ತಾ ಬಂದಿದೆ.
- ಮಾಧ್ಯಮ ಲೋಕವು ವಿಕಸನಗೊಳ್ಳುತ್ತಿರುವಂತೆ, ಆಕಾಶವಾಣಿಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಮತ್ತು ರೂಪಾಂತರಗೊಳ್ಳುತ್ತಾ ಸಾಗಿದೆ. ಅಂತರ್ಗತತೆ, ವಿಶ್ವಾಸಾರ್ಹತೆ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಬದ್ಧವಾಗಿರುವ ಮೂಲಕ ಇದು 'ವಿಶ್ವ ರೇಡಿಯೋ ದಿನ'ದ ಶಾಶ್ವತ ಸ್ಫೂರ್ತಿಯನ್ನು ಸಾಕಾರಗೊಳಿಸುತ್ತಿದೆ. ಇದು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸ್ಪಷ್ಟವಾಗಿ ಕಂಡುಬಂದಿತು; ಬಿಹಾರ, ಜಾರ್ಖಂಡ್ ಮತ್ತು ಮಧ್ಯಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಶಾಲೆಗಳು ಮುಚ್ಚಲ್ಪಟ್ಟಾಗ ಮತ್ತು ಡಿಜಿಟಲ್ ಸಂಪರ್ಕವು ಸೀಮಿತವಾಗಿದ್ದಾಗ, ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಮುಂದುವರಿಸಲು ಆಕಾಶವಾಣಿಯ ಶೈಕ್ಷಣಿಕ ಪ್ರಸಾರವನ್ನೇ ಅವಲಂಬಿಸಿದ್ದರು. ಸ್ಮಾರ್ಟ್‌ಫೋನ್ ಮತ್ತು ಸ್ಥಿರ ಇಂಟರ್ನೆಟ್ ಕೊರತೆಯಿರುವ ಪ್ರದೇಶಗಳಲ್ಲಿ, ರೇಡಿಯೋ ಶಿಕ್ಷಣದ ನಿರಂತರತೆಯನ್ನು ಮೌನವಾಗಿ ಖಚಿತಪಡಿಸಿತು. ಅಂತೆಯೇ, ಒಡಿಶಾ ಮತ್ತು ತಮಿಳುನಾಡಿನ ವಿಪತ್ತು ಪೀಡಿತ ಕರಾವಳಿ ಪ್ರದೇಶಗಳಲ್ಲಿ, ಮೀನುಗಾರರು ಸಮುದ್ರಕ್ಕೆ ಇಳಿಯುವ ಮೊದಲು ಆಕಾಶವಾಣಿಯ ಹವಾಮಾನ ವರದಿಯನ್ನು ವಾಡಿಕೆಯಂತೆ ಅವಲಂಬಿಸುತ್ತಾರೆ. 2019 ರ 'ಫಾನಿ' ಅಂತಹ ತೀವ್ರ ಚಂಡಮಾರುತಗಳ ಸಮಯದಲ್ಲಿ, ಸಮಯೋಚಿತ ರೇಡಿಯೋ ಎಚ್ಚರಿಕೆಗಳು ಅನೇಕರು ಸುರಕ್ಷಿತವಾಗಿ ದಡಕ್ಕೆ ಮರಳಲು ಸಹಾಯ ಮಾಡಿದವು. ಮೊಬೈಲ್ ನೆಟ್‌ವರ್ಕ್‌ಗಳು ವಿಫಲವಾದಾಗ ರೇಡಿಯೋ ಹೇಗೆ ವಿಶ್ವಾಸಾರ್ಹ ತುರ್ತು ಸಂವಹನ ಸಾಧನವಾಗಿದೆ ಎಂಬುದನ್ನು ಇದು ಪುನರುಚ್ಚರಿಸುತ್ತದೆ.
|
ಖಾಸಗಿ ಎಫ್ಎಂ ರೇಡಿಯೋ — ವ್ಯಾಪ್ತಿಯ ವಿಸ್ತರಣೆ ಮತ್ತು ಸ್ಥಳೀಯ ವಿಷಯಗಳು
ಖಾಸಗಿ ಎಫ್ಎಂ ರೇಡಿಯೋ ಕೇಂದ್ರಗಳು ನಗರ ಮತ್ತು ಪ್ರಾದೇಶಿಕ ಭಾರತದಾದ್ಯಂತ ಸ್ಥಳೀಯ ಮನರಂಜನೆ ಮತ್ತು ಮಾಹಿತಿಯನ್ನು ನೀಡುವ ಮೂಲಕ ಸಾರ್ವಜನಿಕ ಪ್ರಸಾರ ಸೇವೆಗೆ (ಆಕಾಶವಾಣಿ) ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಆಗಸ್ಟ್ 2024 ರಲ್ಲಿ, ಕೇಂದ್ರ ಸಚಿವ ಸಂಪುಟವು ಈವರೆಗೆ ಎಫ್‌ಎಂ ವ್ಯಾಪ್ತಿಗೆ ಒಳಪಡದ 234 ನಗರ ಮತ್ತು ಪಟ್ಟಣಗಳಲ್ಲಿ 730 ಹೊಸ ಎಫ್ಎಂ ಚಾನಲ್ಗಳ ಸ್ಥಾಪನೆಗೆ ಅನುಮೋದನೆ ನೀಡಿತು. ₹784.87 ಕೋಟಿ ಮೂಲ ಬೆಲೆಯೊಂದಿಗೆ (Reserve price) ಕೈಗೊಳ್ಳಲಾದ ಈ ನಿರ್ಧಾರವು, ಪ್ರಾದೇಶಿಕ ವಿಷಯಗಳನ್ನು ವಿಸ್ತರಿಸಲು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ.
ಈ ವಿಸ್ತರಣೆಯು ಸ್ಥಳೀಯ ಮನರಂಜನೆ, ಸುದ್ದಿ ಮತ್ತು ಮಾಹಿತಿಯನ್ನು ಒದಗಿಸುವ ಮೂಲಕ ಸಾರ್ವಜನಿಕ ಪ್ರಸಾರಕ್ಕೆ ಬೆಂಬಲ ನೀಡುವಲ್ಲಿ ಖಾಸಗಿ ಎಫ್‌ಎಂ ರೇಡಿಯೋದ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಎಫ್‌ಎಂ ಹಂತ-III ನೀತಿಯ ಅಡಿಯಲ್ಲಿ ಪ್ರಸ್ತುತ 119 ನಗರಗಳಲ್ಲಿ 391 ಖಾಸಗಿ ಎಫ್‌ಎಂ ಚಾನಲ್‌ಗಳು ಕಾರ್ಯಾಚರಿಸುತ್ತಿವೆ.
|
ಭಾರತದಲ್ಲಿ ಸಮುದಾಯ ರೇಡಿಯೋ: ಸ್ಥಳೀಯ ಧ್ವನಿಗಳ ಜೀವನಾಡಿ

ಸಮುದಾಯ ರೇಡಿಯೋ ಕೇಂದ್ರಗಳು ಸ್ಥಳೀಯ ಸಮುದಾಯಗಳ ನಿರ್ದಿಷ್ಟ ಸಂವಹನ ಅಗತ್ಯಗಳನ್ನು ಪೂರೈಸಲು ಅವರೇ ಸ್ಥಾಪಿಸಿ ನಿರ್ವಹಿಸುವ ಅಲ್ಪ-ದೂರದ, ವಾಣಿಜ್ಯೇತರ ಕೇಂದ್ರಗಳಾಗಿವೆ. ಭಾರತದಲ್ಲಿ ಸಮುದಾಯ ರೇಡಿಯೋವು ಸಾರ್ವಜನಿಕ ಸೇವೆ (ಆಕಾಶವಾಣಿ) ಮತ್ತು ವಾಣಿಜ್ಯ ರೇಡಿಯೋಗಳಿಗಿಂತ ಭಿನ್ನವಾದ, ಪ್ರಸಾರ ಕ್ಷೇತ್ರದ ಮೂರನೇ ಹಂತವಾಗಿದೆ.
ಭಾರತದಲ್ಲಿ ಸಮುದಾಯ ರೇಡಿಯೋದ ಪಯಣವು 2002 ರಲ್ಲಿ ಪ್ರಾರಂಭವಾಯಿತು. ಐಐಟಿ ಮತ್ತು ಐಐಎಂ ಸೇರಿದಂತೆ ಸುಸ್ಥಾಪಿತ ಶಿಕ್ಷಣ ಸಂಸ್ಥೆಗಳಿಗೆ ಸಮುದಾಯ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಲು ಪರವಾನಗಿ ನೀಡುವ ನೀತಿಯನ್ನು ಭಾರತ ಸರ್ಕಾರವು ಆಗ ಅನುಮೋದಿಸಿತು. ಭಾರತದ ಮೊದಲ ಸಮುದಾಯ ರೇಡಿಯೋ ಕೇಂದ್ರವನ್ನು ಫೆಬ್ರವರಿ 1, 2004 ರಂದು ಭಾರತ ರತ್ನ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರು ಉದ್ಘಾಟಿಸಿದರು. ಇದರ ಬೆನ್ನಲ್ಲೇ, 2005 ರಲ್ಲಿ ಅಣ್ಣಾ ವಿಶ್ವವಿದ್ಯಾಲಯವು 'ಅಣ್ಣಾ ಕಮ್ಯುನಿಟಿ ರೇಡಿಯೋ' ಅನ್ನು ಪ್ರಾರಂಭಿಸುವ ಮೂಲಕ ಮತ್ತೊಂದು ಪ್ರಮುಖ ಮೈಲಿಗಲ್ಲು ಸ್ಥಾಪಿಸಿತು.
ಸಮುದಾಯ ರೇಡಿಯೋವು ಸ್ಥಳೀಯ ಧ್ವನಿಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ; ಇದು ಆರೋಗ್ಯ, ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ಸಾಮಾಜಿಕ ಅಭಿವೃದ್ಧಿಯಂತಹ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಸ್ಥಳೀಯ ಭಾಷೆ ಮತ್ತು ಉಪಭಾಷೆಗಳಲ್ಲಿ ಪ್ರಸಾರ ಮಾಡುವುದರಿಂದ, ಇದು ಹೆಚ್ಚಿನ ಜನರನ್ನು ತಲುಪುವುದಲ್ಲದೆ ಸಮುದಾಯದೊಂದಿಗೆ ತಕ್ಷಣದ ಸಂಪರ್ಕವನ್ನು ಏರ್ಪಡಿಸುತ್ತದೆ. ಭಾರತದಂತಹ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯ ದೇಶದಲ್ಲಿ, ಈ ಕೇಂದ್ರಗಳು ಜಾನಪದ ಸಂಪ್ರದಾಯಗಳು, ಸ್ಥಳೀಯ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಹಾಗೂ ಸ್ಥಳೀಯ ಕಲಾವಿದರಿಗೆ ಅವಕಾಶಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ವರ್ಷಗಳ ಕಾಲ ಈ ಕ್ಷೇತ್ರವು ಸ್ಥಿರವಾಗಿ ಬೆಳೆದಿದ್ದು, ಪ್ರಸ್ತುತ ಭಾರತದಲ್ಲಿ 528 ಸಮುದಾಯ ರೇಡಿಯೋ ಕೇಂದ್ರಗಳಿವೆ. ಇದು ತಳಮಟ್ಟದ ಸಂವಹನ ಮತ್ತು ಸಮುದಾಯ ಸಬಲೀಕರಣದ ಪರಿಣಾಮಕಾರಿ ಸಾಧನವಾಗಿ ಸಮುದಾಯ ರೇಡಿಯೋದ ಪಾತ್ರವನ್ನು ಉಲ್ಲೇಖಿಸುತ್ತದೆ.
|
ಭಾರತೀಯ ಸೇನೆಯ ಸಮುದಾಯ ರೇಡಿಯೋ ಉಪಕ್ರಮಗಳು

ದೂರದ ಮತ್ತು ಗಡಿ ಪ್ರದೇಶಗಳಲ್ಲಿ ರೇಡಿಯೋದ ಆಯಕಟ್ಟಿನ ಪ್ರಾಮುಖ್ಯತೆಯನ್ನು ಪ್ರದರ್ಶಿಸುವ ಸಲುವಾಗಿ, ಭಾರತೀಯ ಸೇನೆಯು ಉತ್ತರಾಖಂಡದ ಜ್ಯೋತಿರ್ಮಠದಲ್ಲಿ (ಜೂನ್ 2025) "ಐಬೆಕ್ಸ್ ತರಾನಾ 88.4 ಎಫ್ಎಂ" ಅನ್ನು ಪ್ರಾರಂಭಿಸಿತು. ಸ್ಥಳೀಯ ಧ್ವನಿಗಳಿಗೆ ವೇದಿಕೆ ಕಲ್ಪಿಸುವುದು ಮತ್ತು ಶಿಕ್ಷಣ, ಆರೋಗ್ಯ ಹಾಗೂ ವಿಪತ್ತು ಸಿದ್ಧತೆಯ ಕುರಿತು ಮಾಹಿತಿ ಪ್ರಸಾರ ಮಾಡುವುದು ಇದರ ಉದ್ದೇಶವಾಗಿದೆ.
ಜನವರಿ 2026 ರಲ್ಲಿ, ಸೇನೆಯು ನಾಗರಿಕ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸೇರಿ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ "ರೇಡಿಯೋ ಸಂಗಮ್ 88.8 ಎಫ್ಎಂ" ಅನ್ನು ಪ್ರಾರಂಭಿಸಿತು. ಇದು ನಿಯಂತ್ರಣ ರೇಖೆಯ ಉದ್ದಕ್ಕೂ ಸ್ಥಾಪಿಸಲಾದ ಮೊದಲ ಸಮುದಾಯ ರೇಡಿಯೋ ಕೇಂದ್ರವಾಗಿದ್ದು, ದೃಢೀಕೃತ ಮಾಹಿತಿಯನ್ನು ಪ್ರೋತ್ಸಾಹಿಸಲು ಮತ್ತು ಗಡಿಯಾಚೆಗಿನ ಅಪಪ್ರಚಾರವನ್ನು ಎದುರಿಸುವ ಗುರಿಯನ್ನು ಹೊಂದಿದೆ.
|
ತುರ್ತು ಸಂದರ್ಭಗಳಲ್ಲಿ ರೇಡಿಯೋ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನೈಸರ್ಗಿಕ ವಿಕೋಪಗಳು ಅಥವಾ ಬಿಕ್ಕಟ್ಟಿನ ಸಂದರ್ಭಗಳು ವಿದ್ಯುತ್ ಶಕ್ತಿ, ಇಂಟರ್ನೆಟ್ ಸೇವೆಗಳು ಅಥವಾ ಇತರ ಸಂವಹನ ಜಾಲಗಳಿಗೆ ಅಡ್ಡಿಪಡಿಸಿದಾಗ, ರೇಡಿಯೋ ಹೆಚ್ಚಾಗಿ ವಿಶ್ವಾಸಾರ್ಹ ಮತ್ತು ಸಮಯೋಚಿತ ಮಾಹಿತಿಯ ಅತ್ಯಂತ ಭರವಸೆಯ ಮೂಲವಾಗಿ ಉಳಿಯುತ್ತದೆ. ಇಂದಿಗೂ ಸಹ, ಇದು ಸಾರ್ವಜನಿಕ ಸುರಕ್ಷತೆ ಮತ್ತು ಜಾಗೃತಿಯ ಜೀವನಾಡಿಯಾಗಿ ಮುಂದುವರಿದಿದೆ. ರೇಡಿಯೋದ ಸಾಮರ್ಥ್ಯವು ಕೇವಲ ಅದರ ವ್ಯಾಪ್ತಿಯಲ್ಲಿ ಮಾತ್ರವಲ್ಲ, ಅದರ ಪ್ರಸ್ತುತತೆಯಲ್ಲೂ ಅಡಗಿದೆ.
ಕೆಳಗಿನ ಉದಾಹರಣೆಗಳು ಭಾರತದ ಸಾಮಾಜಿಕ, ಅಭಿವೃದ್ಧಿ ಮತ್ತು ತುರ್ತು ಸಂವಹನ ವ್ಯವಸ್ಥೆಯಲ್ಲಿ ರೇಡಿಯೋ ಹೇಗೆ ಆಳವಾಗಿ ಬೆಸೆದುಕೊಂಡಿದೆ ಎಂಬುದನ್ನು ತೋರಿಸುತ್ತವೆ:
- ಸಮುದಾಯದ ಭಾಗವಹಿಸುವಿಕೆಯು ತಳಮಟ್ಟದಲ್ಲಿ ರೇಡಿಯೋದ ಪ್ರಭಾವವನ್ನು ಮತ್ತಷ್ಟು ಬಲಪಡಿಸುತ್ತದೆ. ಬುಂದೇಲ್ಖಂಡದಲ್ಲಿ, ಮಹಿಳೆಯರ ನೇತೃತ್ವದ ಸಮುದಾಯ ರೇಡಿಯೋ ಉಪಕ್ರಮಗಳು ಹೆಣ್ಣು ಮಕ್ಕಳ ಶಿಕ್ಷಣ, ಕೃಷಿ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಚರ್ಚಿಸಲು ವೇದಿಕೆಗಳನ್ನು ಕಲ್ಪಿಸಿಕೊಟ್ಟಿವೆ. ಇದು ಮೊದಲ ಬಾರಿಗೆ ಪ್ರಸಾರಕಿಯರಾದ ಮಹಿಳೆಯರನ್ನು ಸ್ಥಳೀಯ ಬದಲಾವಣೆಯ ಹರಿಕಾರರನ್ನಾಗಿ ಸಬಲೀಕರಿಸಿದೆ. ಕಚ್ನಲ್ಲಿ, ಸಮುದಾಯ ರೇಡಿಯೋವು ಉಪಭಾಷೆಗಳನ್ನು ಮತ್ತು ಮೌಖಿಕ ಸಂಪ್ರದಾಯಗಳನ್ನು ಸಂರಕ್ಷಿಸುವ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುತ್ತಿದೆ.
- ಗುಜರಾತ್‌ನ ಕಚ್ನಲ್ಲಿ, ಸಮುದಾಯ ರೇಡಿಯೋ ಕೇಂದ್ರಗಳು ಕಚ್ಛಿ ಉಪಭಾಷೆಯಲ್ಲಿ ಜಾನಪದ ಹಾಡುಗಳು, ಮೌಖಿಕ ಇತಿಹಾಸಗಳು ಮತ್ತು ಕಥೆ ಹೇಳುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ. ಸ್ಥಳೀಯ ಉಪಭಾಷೆಗಳು ಕ್ರಮೇಣ ಕ್ಷೀಣಿಸುತ್ತಿರುವ ಈ ಸಮಯದಲ್ಲಿ, ರೇಡಿಯೋ ಒಂದು ಸಾಂಸ್ಕೃತಿಕ ದಾಖಲೆಗೃಹವಾಗಿ ಮತ್ತು ಮನೆಯಿಂದ ದೂರವಿರುವ ವಲಸಿಗರಿಗೆ ಒಂದು ಭಾವನಾತ್ಮಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ.
- ದೆಹಲಿಯ ತಿಹಾರ್ ಜೈಲಿನಲ್ಲಿ, ಕೈದಿಗಳೇ ನಡೆಸುವ ರೇಡಿಯೋ ಉಪಕ್ರಮಗಳು ಕಾನೂನು ಜಾಗೃತಿ, ಮಾನಸಿಕ ಆರೋಗ್ಯ, ಸಂಗೀತ ಮತ್ತು ಕವಿತೆಗಳ ಕುರಿತು ಕಾರ್ಯಕ್ರಮಗಳನ್ನು ಸಿದ್ಧಪಡಿಸುತ್ತವೆ. ಇದು ರಚನಾತ್ಮಕ ತೊಡಗಿಸಿಕೊಳ್ಳುವಿಕೆಯ ಮೂಲಕ ಅವರಲ್ಲಿ ಆತ್ಮವಿಶ್ವಾಸ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪುನರ್ವಸತಿ ಮನೋಭಾವವನ್ನು ಬೆಳೆಸುತ್ತಿದೆ.
- ಇಂಟರ್ನೆಟ್ ಸಂಪರ್ಕವು ಅಸ್ಥಿರವಾಗಿರುವ ಉತ್ತರಾಖಂಡದ ಬೆಟ್ಟದ ಪ್ರದೇಶಗಳಲ್ಲಿ, ಸಮುದಾಯ ರೇಡಿಯೋವು ಭೂಕುಸಿತದ ಎಚ್ಚರಿಕೆಗಳು, ಕೃಷಿ ಸಲಹೆಗಳು, ಉದ್ಯೋಗ ಮಾಹಿತಿ ಮತ್ತು ಜಾನಪದ ಸಂಗೀತವನ್ನು ಒದಗಿಸುತ್ತದೆ. ಇದು ದೂರದ ಪ್ರದೇಶದ ಜನರಿಗೆ ಮತ್ತು ವಯೋವೃದ್ಧರಿಗೆ ಇಂದಿಗೂ ಸುಲಭವಾಗಿ ಲಭ್ಯವಿರುವ ಹಾಗೂ ವಿಶ್ವಾಸಾರ್ಹವಾದ ಮಾಧ್ಯಮವಾಗಿದೆ.
- ದೆಹಲಿ ಮತ್ತು ಮುಂಬೈನಂತಹ ಮಹಾನಗರಗಳಲ್ಲಿ, ಎಫ್‌ಎಂ ರೇಡಿಯೋ ದೈನಂದಿನ ನಗರ ಜೀವನದ ಭಾಗವಾಗಿ ಮುಂದುವರಿದಿದೆ. ಟ್ಯಾಕ್ಸಿ ಮತ್ತು ಆಟೋ ಚಾಲಕರು ಸಂಚಾರ ದಟ್ಟಣೆಯ ಮಾಹಿತಿ, ಕ್ರಿಕೆಟ್ ಕಾಮೆಂಟರಿ, ಸಂಗೀತ ಮತ್ತು ಸಂವಾದಾತ್ಮಕ ಕಾರ್ಯಕ್ರಮಗಳಿಗಾಗಿ ರೇಡಿಯೋವನ್ನೇ ಅವಲಂಬಿಸಿದ್ದಾರೆ. ಇದು ಅತ್ಯಂತ ಡಿಜಿಟಲೀಕರಣಗೊಂಡ ನಗರಗಳಲ್ಲೂ ರೇಡಿಯೋದ ಶಾಶ್ವತ ಪ್ರಸ್ತುತತೆಯನ್ನು ಉಲ್ಲೇಖಿಸುತ್ತದೆ.
|
ಮನ್ ಕಿ ಬಾತ್ — ಡಿಜಿಟಲ್ ಯುಗದಲ್ಲಿ ರೇಡಿಯೋ ಶಕ್ತಿಯನ್ನು ಪುನರುಜ್ಜೀವನಗೊಳಿಸುವುದು
ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳೇ ಪ್ರಾಬಲ್ಯ ಹೊಂದಿರುವ ಈ ಕಾಲದಲ್ಲಿ, ನಾಗರಿಕರೊಂದಿಗೆ ನೇರ ಸಂವಹನ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೇಡಿಯೋವನ್ನೇ ಪ್ರಾಥಮಿಕ ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಂಡಿರುವುದು, ರೇಡಿಯೋ ಮೇಲಿರುವ ವಿಶ್ವಾಸಾರ್ಹತೆ ಮತ್ತು ಅದರ ಶಾಶ್ವತ ಪ್ರಸ್ತುತತೆಯನ್ನು ಒತ್ತಿಹೇಳುತ್ತದೆ. ಅಕ್ಟೋಬರ್ 3, 2014 ರಂದು ಪ್ರಾರಂಭವಾದ 'ಮನ್ ಕಿ ಬಾತ್', ಆಕಾಶವಾಣಿಯ ಮೂಲಕ ವಿವಿಧ ಭಾಷೆ ಮತ್ತು ಪ್ರದೇಶಗಳಲ್ಲಿ ಪ್ರಸಾರವಾಗುವ ಮಾಸಿಕ ರೇಡಿಯೋ ಕಾರ್ಯಕ್ರಮವಾಗಿದೆ. ಇದು ದೇಶದ ಅತ್ಯಂತ ಕುಗ್ರಾಮಗಳನ್ನೂ ತಲುಪುವುದನ್ನು ಖಚಿತಪಡಿಸುತ್ತದೆ.
ಸಾಮಾನ್ಯವಾಗಿ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುವ 'ಮನ್ ಕಿ ಬಾತ್' ಈಗಾಗಲೇ 130 ಆವೃತ್ತಿಗಳನ್ನು ಪೂರೈಸಿದೆ. ಇದು ಸರ್ಕಾರದ ಮುಖ್ಯಸ್ಥರೊಬ್ಬರು ನಡೆಸುತ್ತಿರುವ ವಿಶ್ವದ ಅತಿ ದೀರ್ಘಕಾಲದ ರೇಡಿಯೋ ಸಂಪರ್ಕ ಅಭಿಯಾನಗಳಲ್ಲಿ ಒಂದಾಗಿದೆ. ಸಾಕ್ಷರತೆ, ಇಂಟರ್ನೆಟ್ ಲಭ್ಯತೆ ಮತ್ತು ಭೌಗೋಳಿಕ ಅಡೆತಡೆಗಳನ್ನು ಮೀರಿ, ಡಿಜಿಟಲ್ ಯುಗದಲ್ಲೂ ರೇಡಿಯೋ ಹೇಗೆ ಸಮೂಹ ಸಂವಹನದ ಪರಿಣಾಮಕಾರಿ ಸಾಧನವಾಗಿ ಮುಂದುವರಿಯಬಹುದು ಎಂಬುದಕ್ಕೆ ಈ ಕಾರ್ಯಕ್ರಮವು ಒಂದು ಅತ್ಯುತ್ತಮ ಉದಾಹರಣೆಯಾಗಿದೆ.
'ಮನ್ ಕಿ ಬಾತ್' ಮೂಲಕ ಪ್ರಧಾನಮಂತ್ರಿಯವರು ತಳಮಟ್ಟದ ಆವಿಷ್ಕಾರಗಳು, ಸಾಮಾಜಿಕ ಚಳುವಳಿಗಳು, ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ನಾಗರಿಕರ ನೇತೃತ್ವದ ಉಪಕ್ರಮಗಳನ್ನು ಎತ್ತಿ ತೋರಿಸುತ್ತಾರೆ. ಇದು ಸಹಭಾಗಿತ್ವದ ಆಡಳಿತ ಮತ್ತು ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುತ್ತದೆ. ಡಿಜಿಟಲ್ ವೇದಿಕೆಗಳಲ್ಲೂ ಈ ಕಾರ್ಯಕ್ರಮವು ಏಕಕಾಲಕ್ಕೆ ಲಭ್ಯವಿರುವುದು, ರೇಡಿಯೋ ತನ್ನ ಮೂಲ ಗುಣಗಳಾದ ವಿಶ್ವಾಸಾರ್ಹತೆ, ಸರಳತೆ ಮತ್ತು ಅಂತರ್ಗತತೆಯನ್ನು ಉಳಿಸಿಕೊಂಡೇ ಹೊಸ ತಂತ್ರಜ್ಞಾನದೊಂದಿಗೆ ಹೇಗೆ ಸಲೀಸಾಗಿ ಬೆರೆಯಬಲ್ಲದು ಎಂಬುದನ್ನು ಸಾಬೀತುಪಡಿಸುತ್ತದೆ.
'ಮನ್ ಕಿ ಬಾತ್' ಕಾರ್ಯಕ್ರಮದ ನಿರಂತರ ಯಶಸ್ಸು ದೊಡ್ಡ ಮಟ್ಟದಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸುವ ರೇಡಿಯೋದ ವಿಶಿಷ್ಟ ಸಾಮರ್ಥ್ಯವನ್ನು ಪುನರುಚ್ಚರಿಸುತ್ತದೆ. ಇದು 'ವಿಶ್ವ ರೇಡಿಯೋ ದಿನ'ದ ಆಶಯಕ್ಕೆ ಅನುಗುಣವಾಗಿ, ಸಮಕಾಲೀನ ಸಾರ್ವಜನಿಕ ಸಂವಹನದಲ್ಲಿ ರೇಡಿಯೋವನ್ನು ಒಂದು ಶಕ್ತಿಯುತ ಮತ್ತು ಪ್ರಸ್ತುತ ಮಾಧ್ಯಮವನ್ನಾಗಿ ಮಾಡಿದೆ.
|
ಭಾರತೀಯ ರೇಡಿಯೋ ಸಂಗ್ರಹಕಾರನಿಗೆ ಗಿನ್ನೆಸ್ ವಿಶ್ವ ದಾಖಲೆ
ರಾಮ್ ಸಿಂಗ್ ಬೌದ್ಧ: ಭಾರತದ ರೇಡಿಯೋ ಮ್ಯಾನ್
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಗಜ್ರೌಲಾದ ರಾಮ್ ಸಿಂಗ್ ಬೌದ್ಧ ಅವರನ್ನು ಅಕ್ಕರೆಯಿಂದ "ಭಾರತದ ರೇಡಿಯೋ ಮ್ಯಾನ್" ಎಂದು ಕರೆಯಲಾಗುತ್ತದೆ. ಅವರು ತಮ್ಮ ವೈಯಕ್ತಿಕ ಹವ್ಯಾಸವನ್ನು ರಾಷ್ಟ್ರೀಯ ಸಾಂಸ್ಕೃತಿಕ ಕೊಡುಗೆಯಾಗಿ ಪರಿವರ್ತಿಸಿದ್ದಾರೆ. 2025 ರಲ್ಲಿ ಗಿನ್ನೆಸ್ ವಿಶ್ವ ದಾಖಲೆಯಿಂದ ಮಾನ್ಯತೆ ಪಡೆದಿರುವ ಬೌದ್ಧ ಅವರು, ವಿಶ್ವದಲ್ಲೇ ಅತಿ ದೊಡ್ಡ ರೇಡಿಯೋ ಸಂಗ್ರಹವನ್ನು ಹೊಂದಿರುವ ದಾಖಲೆಯನ್ನು ನಿರ್ಮಿಸಿದ್ದಾರೆ. ದಶಕಗಳ ಕಾಲದ ತಾಂತ್ರಿಕ ವಿಕಸನವನ್ನು ಬಿಂಬಿಸುವ 1,257 ವಿಭಿನ್ನ ರೇಡಿಯೋ ಸೆಟ್ಗಳು ಇವರ ಸಂಗ್ರಹದಲ್ಲಿವೆ. ಇಪ್ಪತ್ತನೇ ಶತಮಾನದ ಆರಂಭದ ಬೃಹತ್ ಗಾತ್ರದ ಮರದ ರೇಡಿಯೋ ರಿಸೀವರ್‌ಗಳಿಂದ ಹಿಡಿದು, ಲಕ್ಷಾಂತರ ಭಾರತೀಯ ಮನೆಗಳಿಗೆ ಸುದ್ದಿ ಮತ್ತು ಮನರಂಜನೆಯನ್ನು ತಲುಪಿಸಿದ ಸಣ್ಣ ಗಾತ್ರದ ಟ್ರಾನ್ಸಿಸ್ಟರ್ ಸೆಟ್‌ಗಳವರೆಗೆ, ಇವರ ಸಂಗ್ರಹವು ರೇಡಿಯೋ ಇತಿಹಾಸದ ಕಥೆಯನ್ನು ಸಾರುತ್ತದೆ.

ರಾಮ್ ಸಿಂಗ್ ಬೌದ್ಧ: ಭಾರತದ ರೇಡಿಯೋ ಮ್ಯಾನ್
ಇತಿಹಾಸ ಮತ್ತು ಸಾರ್ವಜನಿಕ ಸಂವಹನದ ಮೇಲಿರುವ ತೀವ್ರ ಆಕರ್ಷಣೆಯೇ ಬೌದ್ಧ ಅವರ ಈ ಪಯಣಕ್ಕೆ ಅಡಿಪಾಯವಾಗಿದೆ. ರೇಡಿಯೋದ ಶಾಶ್ವತ ಪ್ರಸ್ತುತತೆ, ಅದರಲ್ಲೂ ವಿಶೇಷವಾಗಿ 'ಮನ್ ಕಿ ಬಾತ್' ನಂತಹ ಕಾರ್ಯಕ್ರಮಗಳಿಂದ ಪ್ರೇರಿತರಾದ ಅವರು, ಭಾರತದಾದ್ಯಂತ ರೇಡಿಯೋಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಲು ಪ್ರಾರಂಭಿಸಿದರು. ಕೇವಲ ಒಂದು ಹವ್ಯಾಸವಾಗಿ ಆರಂಭವಾದ ಈ ಕಾರ್ಯವು, ಕ್ರಮೇಣ ಕಣ್ಮರೆಯಾಗುತ್ತಿರುವ ಪರಂಪರೆಯನ್ನು ಸಂರಕ್ಷಿಸುವ ದೊಡ್ಡ ಗುರಿಯಾಗಿ ಬದಲಾಯಿತು. ಆರ್ಥಿಕ ಮುಗ್ಗಟ್ಟುಗಳು ಮತ್ತು ಸಾಮಾಜಿಕ ಸಂಶಯಗಳ ಹೊರತಾಗಿಯೂ, ಅವರು ಅಪ್ರತಿಮ ದೃಢತೆಯೊಂದಿಗೆ ತಮ್ಮ ಈ ಪ್ರಯತ್ನವನ್ನು ಮುಂದುವರಿಸಿದರು.
ಭಾರತದ ರೇಡಿಯೋ ಮ್ಯಾನ್ ಅವರ ರೇಡಿಯೋ ಸಂಗ್ರಹ

ಇಂದು, ಅವರ ಈ ರೇಡಿಯೋ ಸಂಗ್ರಹವನ್ನು ಅವರ ಕುಟುಂಬದವರೇ ನಿರ್ವಹಿಸುತ್ತಿರುವ ಸಿದ್ಧಾರ್ಥ ಇಂಟರ್ ಕಾಲೇಜಿನಲ್ಲಿರುವ ಒಂದು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಈ ಸ್ಥಳವು ಒಂದು 'ಜೀವಂತ ದಾಖಲೆಗೃಹ'ವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಂದರ್ಶಕರು ಸಾರ್ವಜನಿಕ ಅಭಿಪ್ರಾಯ ಹಾಗೂ ರಾಷ್ಟ್ರೀಯ ಪ್ರಜ್ಞೆಯನ್ನು ರೂಪಿಸುವಲ್ಲಿ ರೇಡಿಯೋ ವಹಿಸಿದ ಪಾತ್ರವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಿದೆ. ಬೌದ್ಧ ಅವರ ಈ ಸಾಧನೆಯು ರೇಡಿಯೋದ ಸಾರ್ವಕಾಲಿಕ ಪ್ರಸ್ತುತತೆಗೆ ಮತ್ತು ಭಾರತದ ಸಂವಹನ ಪರಂಪರೆಯನ್ನು ರಕ್ಷಿಸುವಲ್ಲಿ ವೈಯಕ್ತಿಕ ಪ್ರಯತ್ನಗಳು ಎಷ್ಟು ಮುಖ್ಯ ಎಂಬದಕ್ಕೆ ಒಂದು ಗೌರವದಂತಿದೆ.
71 ವರ್ಷದ ನಿವೃತ್ತ ಸರ್ಕಾರಿ ಉದ್ಯೋಗಿಯಾದ ಬೌದ್ಧ ಅವರು, ತಮ್ಮ ಹವ್ಯಾಸವು ತಮ್ಮನ್ನು ಇಲ್ಲಿಯವರೆಗೆ ಕರೆತಂದ ಪಯಣದ ಬಗ್ಗೆ ಇಂದಿಗೂ ಆಶ್ಚರ್ಯಚಕಿತರಾಗುತ್ತಾರೆ. ರಾಮ್ ಸಿಂಗ್ ಬೌದ್ಧ ಅವರ ಕಥೆಯು ಕೇವಲ ರೇಡಿಯೋಗಳ ಬಗ್ಗೆ ಮಾತ್ರವಲ್ಲ, ಅದು ಇತಿಹಾಸದ ಮೇಲಿರುವ ಪ್ರೀತಿ ಮತ್ತು ಇಡೀ ರಾಷ್ಟ್ರದ ಧ್ವನಿಯನ್ನು ಸಂರಕ್ಷಿಸುವಲ್ಲಿ ಒಬ್ಬ ವ್ಯಕ್ತಿಯು ಹೊಂದಿರಬಹುದಾದ ಶಕ್ತಿಗೆ ಒಂದು ಸಾಕ್ಷಿಯಾಗಿದೆ.
ಉಪಸಂಹಾರ
ವಿಶ್ವ ರೇಡಿಯೋ ದಿನವು ಅತ್ಯಂತ ವಿಶ್ವಾಸಾರ್ಹ, ಸುಲಭವಾಗಿ ಲಭ್ಯವಾಗುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಮಾಧ್ಯಮವಾಗಿ ರೇಡಿಯೋದ ನಿರಂತರ ಪ್ರಸ್ತುತತೆಯನ್ನು ಉಲ್ಲೇಖಿಸುತ್ತದೆ. ವೇಗವಾಗಿ ನಡೆಯುತ್ತಿರುವ ಡಿಜಿಟಲೀಕರಣದ ನಡುವೆಯೂ, ಸಾಕ್ಷರತೆ, ಭಾಷೆ ಮತ್ತು ಸಂಪರ್ಕದ ಅಡೆತಡೆಗಳನ್ನು ಮೀರಿ ವಿವಿಧ ವರ್ಗದ ಜನರನ್ನು ತಲುಪುವಲ್ಲಿ ರೇಡಿಯೋ ಇಂದಿಗೂ ಪ್ರಮುಖ ಪಾತ್ರ ವಹಿಸುತ್ತಿದೆ. ಸಾರ್ವಜನಿಕ ಮಾಹಿತಿ, ಶಿಕ್ಷಣ ಮತ್ತು ವಿಪತ್ತು ಸಂವಹನಕ್ಕೆ ಇದು ಬೆನ್ನೆಲುಬಾಗಿ ನಿಂತಿದೆ.
ಭಾರತದಲ್ಲಿ, ಸಾರ್ವಜನಿಕ ಸೇವೆ (ಆಕಾಶವಾಣಿ) ಮತ್ತು ಸಮುದಾಯ ರೇಡಿಯೋಗಳು ಸ್ಥಳೀಯ ಧ್ವನಿಗಳನ್ನು ಪ್ರತಿಧ್ವನಿಸುವ ಮೂಲಕ ಸಹಭಾಗಿತ್ವದ ಸಂವಹನವನ್ನು ಬಲಪಡಿಸುತ್ತಿವೆ ಮತ್ತು ಅಭಿವೃದ್ಧಿ ಹಾಗೂ ಸಾಮಾಜಿಕ ಒಗ್ಗಟ್ಟಿಗೆ ಕೊಡುಗೆ ನೀಡುತ್ತಿವೆ. ಯುನೆಸ್ಕೋ ಉಲ್ಲೇಖಿಸಿರುವಂತೆ, ಮುಕ್ತ ಅಭಿವ್ಯಕ್ತಿ, ವಿಶ್ವಾಸಾರ್ಹ ಮಾಹಿತಿ ಮತ್ತು ಸಮಗ್ರ ಸಂವಾದದ ವೇದಿಕೆಯಾಗಿ ರೇಡಿಯೋವನ್ನು ಉಳಿಸಿಕೊಳ್ಳಲು ನಿರಂತರ ನೀತಿ ಬೆಂಬಲ ಮತ್ತು ನಾವೀನ್ಯತೆ ಅಗತ್ಯವಾಗಿದೆ. ಈ ಮೂಲಕ ವೇಗವಾಗಿ ವಿಕಸನಗೊಳ್ಳುತ್ತಿರುವ ಮಾಧ್ಯಮ ಲೋಕದಲ್ಲಿ ರೇಡಿಯೋದ ಶಾಶ್ವತ ಪಾತ್ರವನ್ನು ಖಚಿತಪಡಿಸಬಹುದಾಗಿದೆ.
References:
UNESCO
https://www.unesco.org/en/days/world-radio/past-editions
https://www.unesco.org/en/days/world-radio
https://unesdoc.unesco.org/ark:/48223/pf0000215084
United Nations
World Radio Day | United Nations
Guinness World Record
Indian man with passion for history gathers world's largest collection of radios | Guinness World Records
https://www.guinnessworldrecords.com/news/2025/2/indian-man-with-passion-for-history-gathers-worlds-largest-collection-of-radios
Ministry of Information and Broadcasting
https://mib.gov.in/ministry/our-wings/broadcating-wing
https://www.google.com/url?sa=t&source=web&rct=j&opi=89978449&url=https://mib.gov.in/sites/default/files/2026-01/annual-report-2024-25.pdf&ved=2ahUKEwiP8Jy6nc6SAxXXd2wGHc2EMZoQFnoECCAQAQ&usg=AOvVaw3eoZLx-WlqmoyU9G16UDcX
https://www.myscheme.gov.in/schemes/crss
https://www.facebook.com/inbministry/videos/-world-radio-day-13th-februaryon-this-worldradioday-lets-acknowledge-the-role-of/504225397937663/
All India Radio
https://www.newsonair.gov.in/govt-establishes-212-new-community-radio-stations-in-five-years-minister-of-state-dr-l-murugan/
Ministry of Culture
https://www.instagram.com/p/DPndf0SDzWL/?img_index=1
https://www.instagram.com/reel/DGA5cnxPXtJ/
https://www.facebook.com/AzadiKaAmritMahotsav/posts/thisdaythatyear-when-indian-broadcasting-company-ltd-became-bankrupt-the-govt-to/382445287279944/
Press Information Bureau
https://www.google.com/url?sa=t&source=web&rct=j&opi=89978449&url=https://static.pib.gov.in/WriteReadData/specificdocs/documents/2024/feb/doc2024213311201.pdf&ved=2ahUKEwjN5P3em86SAxUcTWwGHVRpM2YQFnoECAQQAQ&usg=AOvVaw2ALfNXudBcpOee0KhwtZV0
https://www.pib.gov.in/PressReleasePage.aspx?PRID=2102566®=3&lang=2
https://www.pib.gov.in/PressReleaseIframePage.aspx?PRID=2049325®=3&lang=2
Click here to see PDF
*****
(Explainer ID: 157336)
आगंतुक पटल : 10
Provide suggestions / comments