• Skip to Content
  • Sitemap
  • Advance Search
Social Welfare

ಭಾರತದ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಅಭಿವೃದ್ಧಿ

ಬಜೆಟ್ 2026-2027 ಸರಣಿ

Posted On: 11 FEB 2026 2:27PM

ಪ್ರಮುಖ ಮಾರ್ಗಸೂಚಿಗಳು

  • ಕೇಂದ್ರ ಬಜೆಟ್ 2026-2027ರಲ್ಲಿ ಉತ್ತರ ಭಾರತದಲ್ಲಿ ಎರಡನೇ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್-2) ಸ್ಥಾಪನೆಯನ್ನು ಘೋಷಿಸಲಾಗಿದೆ.
  • ನಿಮ್ಹಾನ್ಸ್-2 ಸಂಸ್ಥೆಯನ್ನು ಬೆಂಗಳೂರಿನಲ್ಲಿರುವ ಹಾಲಿ ನಿಮ್ಹಾನ್ಸ್ ಮಾದರಿಯಲ್ಲೇ ರೂಪಿಸಲಾಗುವುದು. ಇದು ನರವಿಜ್ಞಾನ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ, ತರಬೇತಿ ಮತ್ತು ಸಂಶೋಧನೆಯ ಮೇಲೆ ತನ್ನ ಗಮನವನ್ನು ಮುಂದುವರಿಸಲಿದೆ.
  • ರಾಂಚಿ ಮತ್ತು ತೇಜ್‌ಪುರದಲ್ಲಿರುವ ಪ್ರಮುಖ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು 'ಪ್ರಾದೇಶಿಕ ಉನ್ನತ ಸಂಸ್ಥೆಗಳಾಗಿ' ಮೇಲ್ದರ್ಜೆಗೇರಿಸುವುದಾಗಿ ಕೇಂದ್ರ ಬಜೆಟ್ 2026-2027ರಲ್ಲಿ ಘೋಷಿಸಲಾಗಿದೆ.
  • ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಮತ್ತು ಟ್ರಾಮಾ ಕೇರ್ ಕೇಂದ್ರಗಳನ್ನು ಸ್ಥಾಪಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಪೀಠಿಕೆ

ಕೇಂದ್ರ ಬಜೆಟ್ 2026-27 ಸಾಂಸ್ಥಿಕ ವಿಸ್ತರಣೆ ಮತ್ತು ಪ್ರಾದೇಶಿಕ ಸಮಾನತೆಯನ್ನು ಸಾರ್ವಜನಿಕ ಆರೋಗ್ಯ ಯೋಜನೆಯ ಕೇಂದ್ರಬಿಂದುವನ್ನಾಗಿ ಮಾಡುವ ಮೂಲಕ, ಭಾರತದ ಮಾನಸಿಕ ಆರೋಗ್ಯ ನೀತಿಯಲ್ಲಿ ಒಂದು ನಿರ್ಣಾಯಕ ಬದಲಾವಣೆಯನ್ನು ಗುರುತಿಸಿದೆ. ಮಾನಸಿಕ ಆರೋಗ್ಯ ಮತ್ತು ಟ್ರಾಮಾ ಕೇರ್ (ಆಘಾತ ಚಿಕಿತ್ಸೆ) ಮೂಲಸೌಕರ್ಯಗಳನ್ನು ಬಲಪಡಿಸುವ ಮೂಲಕ, ಈ ಬಜೆಟ್ ಭಾರತ ಸರ್ಕಾರದ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಮತ್ತು "ವಿಕಸಿತ ಭಾರತ"ದ ದೃಷ್ಟಿಕೋನದ ಅಡಿಯಲ್ಲಿ ಅಂತರ್ಗತ ಅಭಿವೃದ್ಧಿಯ ಗುರಿಯನ್ನು ಮತ್ತಷ್ಟು ಮುನ್ನಡೆಸುತ್ತದೆ.

ಉತ್ತರ ಭಾರತದಲ್ಲಿ ರಾಷ್ಟ್ರಮಟ್ಟದ ಮಾನಸಿಕ ಆರೋಗ್ಯ ಸಂಸ್ಥೆಗಳ ದೀರ್ಘಕಾಲದ ಕೊರತೆ ಮತ್ತು ವಿಶೇಷ ಸೇವೆಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು, ಈ ಬಜೆಟ್ ಮಾನಸಿಕ ಆರೋಗ್ಯವನ್ನು ಸಾರ್ವಜನಿಕ ಆರೋಗ್ಯದ ಪ್ರಮುಖ ಆದ್ಯತೆಯಾಗಿ ಪರಿಗಣಿಸಿದೆ. ಉದ್ದೇಶಿತ ಮಧ್ಯಸ್ಥಿಕೆಗಳು, ಉದ್ಯೋಗಿಗಳ ಸಾಮರ್ಥ್ಯ ವೃದ್ಧಿ ಮತ್ತು ಟ್ರಾಮಾ ಕೇರ್ (ಆಘಾತ ಚಿಕಿತ್ಸೆ) ಬೆಂಬಲದ ಮೇಲೆ ಇದು ಗಮನಹರಿಸಿದ್ದು, ಸಂಕಷ್ಟದಲ್ಲಿರುವ ಕುಟುಂಬಗಳ ಮೇಲಿನ ಅತಿಯಾದ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದು ಮಾನಸಿಕ ಆರೋಗ್ಯ ಮತ್ತು ಮತ್ತು ಅಪಘಾತ ತುರ್ತು ಚಿಕಿತ್ಸಾಸಮಾನ ಲಭ್ಯತೆಯತ್ತ ಹೊಂದಿರುವ ಸ್ಪಷ್ಟ ಮತ್ತು ಸುಸ್ಥಿರ ಬದ್ಧತೆಯನ್ನು ಸೂಚಿಸುತ್ತದೆ.

ಮಾನಸಿಕ ಆರೋಗ್ಯ ಎಂದರೇನು?

ಮಾನಸಿಕ ಆರೋಗ್ಯ ಎನ್ನುವುದು ಒಬ್ಬ ವ್ಯಕ್ತಿಯು ಜೀವನದ ಸಾಮಾನ್ಯ ಒತ್ತಡಗಳನ್ನು ಸಮರ್ಥವಾಗಿ ಎದುರಿಸಬಲ್ಲ ಕ್ಷೇಮದ ಸ್ಥಿತಿಯಾಗಿದೆ. ಇದು ಒಬ್ಬ ವ್ಯಕ್ತಿಯು ಕಲಿಯಲು, ಉತ್ತಮವಾಗಿ ಕೆಲಸ ಮಾಡಲು ಮತ್ತು ಸಮುದಾಯಕ್ಕೆ ತನ್ನದೇ ಆದ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ. ಉತ್ತಮ ಮಾನಸಿಕ ಆರೋಗ್ಯವು ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಒಳಗೊಂಡಿರುತ್ತದೆ.

ಕಳಪೆ ಮಾನಸಿಕ ಆರೋಗ್ಯವು ಆತಂಕ, ಖಿನ್ನತೆ ಮತ್ತು ಇತರ ತೀವ್ರತರವಾದ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ದೈಹಿಕ ಆರೋಗ್ಯ, ಸಂಬಂಧಗಳು ಮತ್ತು ಒಟ್ಟಾರೆ ಜೀವನದ ಕಾರ್ಯಚಟುವಟಿಕೆಗಳ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ಒತ್ತಡದ ಮಟ್ಟಗಳು, ಕ್ಷಿಪ್ರ ನಗರೀಕರಣ ಮತ್ತು ಸಾಂಕ್ರಾಮಿಕೋತ್ತರ ಸವಾಲುಗಳು ಮಾನಸಿಕ ಆರೋಗ್ಯ ಸೇವೆಯ ಬೇಡಿಕೆಯನ್ನು ಹೆಚ್ಚಿಸಿವೆ. ಸಮಯೋಚಿತವಾಗಿ ಸಿಗುವ ಬೆಂಬಲ ಮತ್ತು ಚಿಕಿತ್ಸೆಯು ಬಿಕ್ಕಟ್ಟುಗಳನ್ನು ತಡೆಯಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ಗುರುತಿಸಿರುವ ಸರ್ಕಾರವು, ಮಾನಸಿಕ ಆರೋಗ್ಯವನ್ನು ಅಂತರ್ಗತ ಅಭಿವೃದ್ಧಿ, ಸಾಮಾಜಿಕ ಸ್ಥಿರತೆ ಮತ್ತು ಉತ್ಪಾದಕತೆಯ ಕೇಂದ್ರಬಿಂದುವಾಗಿ ನೋಡುತ್ತಿದೆ.

ಕೇಂದ್ರ ಬಜೆಟ್ 2026-2027: ಮಾನಸಿಕ ಆರೋಗ್ಯ ರಕ್ಷಣೆಗೆ ಬದ್ಧತೆಯ ಬಲವರ್ಧನೆ

ಕೇಂದ್ರ ಬಜೆಟ್ 2026-27ರಲ್ಲಿ, ಸರ್ಕಾರವು ಮಾನಸಿಕ ಆರೋಗ್ಯ ಮತ್ತು ಅಪಘಾತ ತುರ್ತು ಚಿಕಿತ್ಸಾ ಕುರಿತಾದ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದೆ. ಇದು 'ಮೂರನೇ ಕರ್ತವ್ಯ'ದ ಅಡಿಯಲ್ಲಿ ಬರುವ ಶೋಷಿತ ವರ್ಗದವರಿಗೆ ಸಮಾನ ಲಭ್ಯತೆಯನ್ನು ಖಚಿತಪಡಿಸುವ ಭಾಗವಾಗಿದೆ – ಅಂದರೆ ಪ್ರತಿಯೊಂದು ಕುಟುಂಬ, ಸಮುದಾಯ, ಪ್ರದೇಶ ಮತ್ತು ಕ್ಷೇತ್ರಗಳು ಅಗತ್ಯ ಸಂಪನ್ಮೂಲಗಳನ್ನು ಹೊಂದುವಂತೆ ಮಾಡುವುದು.

ನಿಮ್ಹಾನ್ಸ್ ವಿಸ್ತರಣೆ

  • ಉತ್ತರ ಭಾರತದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗಾಗಿ ಯಾವುದೇ ರಾಷ್ಟ್ರೀಯ ಸಂಸ್ಥೆಗಳಿಲ್ಲ. ಈ ಹಿನ್ನೆಲೆಯಲ್ಲಿ, ಉತ್ತರ ಭಾರತದಲ್ಲಿ ನಿಮ್ಹಾನ್ಸ್-2 (ಎರಡನೇ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ) ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

  • ಇದು ಬೆಂಗಳೂರಿನಲ್ಲಿರುವ ಹಾಲಿ ನಿಮ್ಹಾನ್ಸ್ ಮಾದರಿಯಲ್ಲೇ ಇರಲಿದ್ದು, ಸುಧಾರಿತ ಚಿಕಿತ್ಸೆ, ತರಬೇತಿ, ಸಂಶೋಧನೆ ಮತ್ತು ನರವಿಜ್ಞಾನದ ಮೇಲೆ ಗಮನ ಕೇಂದ್ರೀಕರಿಸಲಿದೆ.

ಅಸ್ತಿತ್ವದಲ್ಲಿರುವ ಸಂಸ್ಥೆಗಳ ಮೇಲ್ದರ್ಜೆಗೇರಿಸುವಿಕೆ

  • ರಾಂಚಿ ಮತ್ತು ತೇಜ್‌ಪುರದಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು 'ಪ್ರಾದೇಶಿಕ ಉನ್ನತ ಸಂಸ್ಥೆಗಳಾಗಿ' ಮೇಲ್ದರ್ಜೆಗೇರಿಸಲಾಗುವುದು.

  • ಇದು ಆಯಾ ಪ್ರದೇಶಗಳಲ್ಲಿ ವಿಶೇಷ ಮಾನಸಿಕ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಅಪಘಾತ ತುರ್ತು ಚಿಕಿತ್ಸಾ ಸೇವೆಗಳನ್ನು ಬಲಪಡಿಸುತ್ತದೆ.

ತುರ್ತು ಮತ್ತು ಆಘಾತ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ

  • ದೇಶಾದ್ಯಂತದ ಪ್ರತಿಯೊಂದು ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಮತ್ತು ಆಘಾತ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ.

  • ಈ ಕೇಂದ್ರಗಳು ಎಲ್ಲಾ ನಾಗರಿಕರಿಗೆ ಕೈಗೆಟುಕುವ ದರದಲ್ಲಿ, 24x7 ತುರ್ತು ವೈದ್ಯಕೀಯ ಸೇವೆಗಳು ಮತ್ತು ಮಾನಸಿಕ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತವೆ.

  • ಈ ಕ್ರಮಗಳು ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡಲು, ಬಡವರು ಮತ್ತು ದುರ್ಬಲ ವರ್ಗದವರಿಗೆ ಆರೋಗ್ಯ ಸೇವೆಯ ಲಭ್ಯತೆಯನ್ನು ಸುಧಾರಿಸಲು ಮತ್ತು ಎಲ್ಲಾ ವಯೋಮಾನದವರಲ್ಲಿ, ಲಿಂಗಗಳಲ್ಲಿ ಮತ್ತು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಲಿವೆ.

ಮಾನಸಿಕ ಸ್ವಾಸ್ಥ್ಯದತ್ತ ಹೆಜ್ಜೆ: ಭಾರತದ ಇದುವರೆಗಿನ ಪಯಣ

ಭಾರತವು ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಬಲವಾದ ತಳಹದಿಯನ್ನು ನಿರ್ಮಿಸಿದೆ. ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯು ಸಂಶೋಧನೆ, ತರಬೇತಿ ಮತ್ತು ಆರೈಕೆಯಲ್ಲಿ ದೇಶದ ಸರ್ವೋಚ್ಚ ಸಂಸ್ಥೆಯಾಗಿದೆ. ಇದು 2024 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ 'ಆರೋಗ್ಯ ಉತ್ತೇಜನಕ್ಕಾಗಿ ನೆಲ್ಸನ್ ಮಂಡೇಲಾ ಪ್ರಶಸ್ತಿ'ಯನ್ನು ಪಡೆದಿದೆ. ಈ ನಾಯಕತ್ವದ ಆಧಾರದ ಮೇಲೆ, ಭಾರತದ ಮಾನಸಿಕ ಆರೋಗ್ಯ ಕ್ಷೇತ್ರವು ಸಾಮಾಜಿಕ ಕಳಂಕವನ್ನು ಕಡಿಮೆ ಮಾಡಲು, ಸೇವೆಗಳ ಲಭ್ಯತೆಯನ್ನು ವಿಸ್ತರಿಸಲು ಮತ್ತು ಡಿಜಿಟಲ್ ಸಾಧನಗಳನ್ನು ಸಂಯೋಜಿಸಲು ಒತ್ತು ನೀಡುತ್ತಿದೆ. ಪ್ರಮುಖ ಪ್ರಗತಿಗಳಲ್ಲಿ ಪುನರ್ವಸತಿ ಕೇಂದ್ರಗಳ ಸ್ಥಾಪನೆ, ಬಲವಾದ ಸಮುದಾಯ ಸಂಪರ್ಕಗಳು ಮತ್ತು ದೇಶಾದ್ಯಂತ ಸಮಾನವಾದ, ಕೈಗೆಟುಕುವ ಮತ್ತು ಉತ್ತಮ ಗುಣಮಟ್ಟದ ಮಾನಸಿಕ ಆರೋಗ್ಯ ರಕ್ಷಣೆಯನ್ನು ನೀಡುವ ಪ್ರಯತ್ನಗಳು ಸೇರಿವೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ, 2017

  • ಈ ಐತಿಹಾಸಿಕ ಕಾನೂನು 1987 ರ ಹಳೆಯ ಮಾನಸಿಕ ಆರೋಗ್ಯ ಕಾಯ್ದೆಯನ್ನು ಬದಲಿಸಿತು. ಇದು ಪ್ರತಿಯೊಬ್ಬ ವ್ಯಕ್ತಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಮಾನಸಿಕ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕನ್ನು ನೀಡಿದೆ.

  • ಈ ಕಾಯ್ದೆಯು ಮಾನಸಿಕ ಅಸ್ವಸ್ಥತೆಯುಳ್ಳ ವ್ಯಕ್ತಿಗಳ ಗೌರವ ಮತ್ತು ಹಕ್ಕುಗಳನ್ನು ರಕ್ಷಿಸುವುದನ್ನು ಖಚಿತಪಡಿಸುತ್ತದೆ. ಅಲ್ಲದೆ, ಭಾರತದ ಕಾರ್ಯವಿಧಾನವನ್ನು ಅಂತರಾಷ್ಟ್ರೀಯ ಮಾನದಂಡಗಳಿಗೆ, ವಿಶೇಷವಾಗಿ ವಿಕಲಚೇತನರ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ಸಮಾವೇಶಕ್ಕೆ ಅನುಗುಣವಾಗಿ ರೂಪಿಸುತ್ತದೆ.

  • ಈ ಕಾಯ್ದೆಯು ಶಿಕ್ಷೆಗಿಂತ ಪುನರ್ವಸತಿಗೆ ಆದ್ಯತೆ ನೀಡುವ ಸಲುವಾಗಿ, ಆತ್ಮಹತ್ಯೆ ಯತ್ನವನ್ನು ಅಪರಾಧ ಮುಕ್ತಗೊಳಿಸಿರುವುದು ಗಮನಾರ್ಹವಾಗಿದೆ.

ರಾಷ್ಟ್ರೀಯ ಆರೋಗ್ಯ ನೀತಿ, 2017

  • ಇದು ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಸಮಗ್ರ ಮತ್ತು ಬಹುಮುಖಿ ಕಾರ್ಯತಂತ್ರವನ್ನು ಅಳವಡಿಸಿಕೊಂಡು, ಮಾನಸಿಕ ಆರೋಗ್ಯವನ್ನು ರಾಷ್ಟ್ರೀಯ ಆದ್ಯತೆಯಾಗಿ ಗುರುತಿಸಿದ ಮಹತ್ವದ ನೀತಿಯಾಗಿದೆ.

  • ತರಬೇತಿ ಕಾರ್ಯಕ್ರಮಗಳಿಗೆ ಸಾರ್ವಜನಿಕ ಧನಸಹಾಯವನ್ನು ಹೆಚ್ಚಿಸುವ ಮೂಲಕ ಮಾನಸಿಕ ಆರೋಗ್ಯ ತಜ್ಞರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಈ ನೀತಿ ಹೊಂದಿದೆ. ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವ ವೃತ್ತಿಪರರನ್ನು ಉಳಿಸಿಕೊಳ್ಳಲು ಮತ್ತು ಅವರ ಕೊರತೆಯನ್ನು ನೀಗಿಸಿ ಸಮಾನ ಹಂಚಿಕೆಯನ್ನು ಸುಧಾರಿಸಲು ಗಮನಹರಿಸುತ್ತದೆ.

  • ಈ ನೀತಿಯು ಸಮುದಾಯ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಾಥಮಿಕ ಹಂತದ ಮಾನಸಿಕ ಆರೋಗ್ಯ ಬೆಂಬಲವನ್ನು ಬಲಪಡಿಸಲು ಗಣನೀಯವಾಗಿ ಶ್ರಮಿಸುತ್ತದೆ.

ಆಯುಷ್ಮಾನ್ ಭಾರತ್ ಮತ್ತು ಪ್ರಾಥಮಿಕ ಆರೈಕೆಯ ಮೂಲಕ ಏಕೀಕರಣ

  • 1.75 ಲಕ್ಷಕ್ಕೂ ಹೆಚ್ಚು ಉಪ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 'ಆಯುಷ್ಮಾನ್ ಆರೋಗ್ಯ ಮಂದಿರ'ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿ ಮಾನಸಿಕ ಆರೋಗ್ಯ ಸೇವೆಗಳು ಈಗ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆಯ ಭಾಗವಾಗಿವೆ.

  • ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಅಡಿಯಲ್ಲಿ, ಮಾನಸಿಕ ಅಸ್ವಸ್ಥತೆಗಳು (ಬೌದ್ಧಿಕ ಅಸಾಮರ್ಥ್ಯ, ಸ್ಕಿಜೋಫ್ರೇನಿಯಾ, ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಸೇರಿದಂತೆ) ಒಳಗೊಂಡಿವೆ. ನಿರ್ದಿಷ್ಟಪಡಿಸಿದ 22 ಮಾನಸಿಕ ಆರೋಗ್ಯ ಪ್ರಕ್ರಿಯೆಗಳಿಗೆ ನಗದು ರಹಿತ ಚಿಕಿತ್ಸೆ ಲಭ್ಯವಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, 1982

  • ಹೆಚ್ಚುತ್ತಿರುವ ಮಾನಸಿಕ ಅಸ್ವಸ್ಥತೆಗಳ ಹೊರೆ ಮತ್ತು ಭಾರತದಾದ್ಯಂತ ಸಮರ್ಪಕ ಮಾನಸಿಕ ಆರೋಗ್ಯ ಸೇವೆಗಳ ಕೊರತೆಯನ್ನು ನೀಗಿಸಲು 1982 ರಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

  • ಸಾಮಾನ್ಯ ಆರೋಗ್ಯ ವ್ಯವಸ್ಥೆಯೊಳಗೆ ಮಾನಸಿಕ ಆರೋಗ್ಯ ರಕ್ಷಣೆಯನ್ನು ಸಂಯೋಜಿಸುವುದು ಇದರ ಮುಖ್ಯ ಗುರಿಯಾಗಿದೆ. ಇದು ದುರ್ಬಲ ಮತ್ತು ಹಿಂದುಳಿದ ವರ್ಗಗಳ ಮೇಲೆ ವಿಶೇಷ ಗಮನಹರಿಸುವ ಮೂಲಕ ಸೇವೆಗಳನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ

  • ಡಿಎಂಎಚ್‌ಪಿ ಉಪಕ್ರಮವನ್ನು 1996 ರಲ್ಲಿ ಪ್ರಾರಂಭಿಸಲಾಯಿತು ಮತ್ತು ನಂತರ ಇದನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದೊಂದಿಗೆ ಸಂಯೋಜಿಸಲಾಯಿತು.

  • ಇದು ಕರ್ನಾಟಕದ ಯಶಸ್ವಿ 'ಬಳ್ಳಾರಿ ಮಾದರಿ'ಯನ್ನು ಆಧರಿಸಿದೆ ಮತ್ತು ಸಮುದಾಯ ಆಧಾರಿತ ಮಾನಸಿಕ ಆರೋಗ್ಯ ವಿತರಣೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ.

  • 1996 ರಲ್ಲಿ ಕೇವಲ 4 ಜಿಲ್ಲೆಗಳಿಂದ ಪ್ರಾರಂಭವಾದ ಈ ಕಾರ್ಯಕ್ರಮವು, ಈಗ ಭಾರತದಾದ್ಯಂತ 767 ಜಿಲ್ಲೆಗಳನ್ನು ಒಳಗೊಂಡಿದೆ.

  • ಸೇವೆಗಳಲ್ಲಿ ಆಪ್ತಸಮಾಲೋಚನೆ ಮತ್ತು ಹೊರರೋಗಿ ಚಿಕಿತ್ಸೆ, ಜಿಲ್ಲಾ ಮಟ್ಟದಲ್ಲಿ 10 ಹಾಸಿಗೆಗಳ ಒಳರೋಗಿ ಸೌಲಭ್ಯ, ಆತ್ಮಹತ್ಯೆ ತಡೆಗಟ್ಟುವ ಉಪಕ್ರಮಗಳು ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಸೇರಿವೆ.

  • ಪ್ರತಿ ಜಿಲ್ಲೆಯು ಮೀಸಲಾದ ತಂಡವನ್ನು ಹೊಂದಿದೆ: ಮನೋವೈದ್ಯರು, ಕ್ಲಿನಿಕಲ್ ಸೈಕಾಲಜಿಸ್ಟ್, ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್, ಸಮುದಾಯ ನರ್ಸ್ ಮತ್ತು ಇತರ ಸಹಾಯಕ ಸಿಬ್ಬಂದಿ.

ರಾಷ್ಟ್ರೀಯ ಆತ್ಮಹತ್ಯೆ ತಡೆ ಕಾರ್ಯತಂತ್ರ

  • ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2022 ರಲ್ಲಿ ಇದನ್ನು ಪ್ರಾರಂಭಿಸಿತು. 2030 ರ ವೇಳೆಗೆ ಭಾರತದಲ್ಲಿ ಆತ್ಮಹತ್ಯೆ ಪ್ರಮಾಣವನ್ನು 10% ರಷ್ಟು ಕಡಿಮೆ ಮಾಡುವುದು ಇದರ ಮುಖ್ಯ ಗುರಿಯಾಗಿದೆ.

  • ಶಾಲೆ ಮತ್ತು ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ತಪಾಸಣೆ, ಬಿಕ್ಕಟ್ಟಿನ ಸಮಯದಲ್ಲಿ ನೆರವಾಗುವ ಹೆಲ್ಪ್‌ಲೈನ್‌ಗಳು ಮತ್ತು ಮಾನಸಿಕ ಬೆಂಬಲ ಕೇಂದ್ರಗಳನ್ನು ಸ್ಥಾಪಿಸುವುದು ಇದರ ಪ್ರಮುಖ ಅಂಶಗಳಾಗಿವೆ.

  • ಈ ಕಾರ್ಯತಂತ್ರವು ವಿದ್ಯಾರ್ಥಿಗಳು, ರೈತರು, ಯುವಜನರು ಮತ್ತು ಇತರ ಹೆಚ್ಚಿನ ಅಪಾಯದಲ್ಲಿರುವ ಜನರನ್ನು ಗುರಿಯಾಗಿರಿಸಿಕೊಂಡಿದೆ.

ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ

  • ಅಕ್ಟೋಬರ್ 10, 2022 ರಂದು ಪ್ರಾರಂಭವಾದ ಇದು 24x7 ಉಚಿತ ಸಹಾಯವಾಣಿಯಾಗಿದೆ (14416 ಅಥವಾ 1-800-891-4416).

  • ಇದು ಉಚಿತ ಟೆಲಿ-ಕೌನ್ಸೆಲಿಂಗ್ ಒದಗಿಸುತ್ತದೆ. ಅಗತ್ಯವಿದ್ದರೆ ತಜ್ಞ ಮನೋವೈದ್ಯರು ಮತ್ತು ಮನಶ್ಶಾಸ್ತ್ರಜ್ಞರಿಂದ ಹೆಚ್ಚಿನ ಚಿಕಿತ್ಸೆಯನ್ನು ಕೊಡಿಸುತ್ತದೆ. ವ್ಯಕ್ತಿಗಳನ್ನು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮೂಲಕ ನೇರ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ.

  • ಈ ಸೇವೆಯು ಭಾರತದ 20 ಭಾಷೆಗಳಲ್ಲಿ ಲಭ್ಯವಿದೆ.

  • ಇಲ್ಲಿಯವರೆಗೆ ಒಟ್ಟು 33,02,000 ಕರೆಗಳನ್ನು ಈ ಸಹಾಯವಾಣಿಯು ನಿರ್ವಹಿಸಿದೆ.

  • ಭಾರತವು 3 ಕೇಂದ್ರ ಸಂಸ್ಥೆಗಳು (ನಿಮ್ಹಾನ್ಸ್ ಬೆಂಗಳೂರು, ಎಲ್‌ಜಿಬಿಆರ್‌ಐಎಂಎಚ್ ತೇಜ್‌ಪುರ ಮತ್ತು ಸಿಐಪಿ ರಾಂಚಿ) ಹಾಗೂ 44 ರಾಜ್ಯ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 47 ಸರ್ಕಾರಿ ಮಾನಸಿಕ ಆಸ್ಪತ್ರೆಗಳನ್ನು ಹೊಂದಿದೆ.

  • ಸುಧಾರಿತ ಮತ್ತು ವಿಶೇಷ ಆರೈಕೆಯನ್ನು ಒದಗಿಸಲು ಎಲ್ಲಾ ಏಮ್ಸ್ ಸೌಲಭ್ಯಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳು ಲಭ್ಯವಿವೆ.

ಮಾನವಶಕ್ತಿ ಅಭಿವೃದ್ಧಿ ಯೋಜನೆ ಎ – ಉತ್ಕೃಷ್ಟತಾ ಕೇಂದ್ರಗಳು

  • ಮನೋವೈದ್ಯಶಾಸ್ತ್ರ, ಕ್ಲಿನಿಕಲ್ ಸೈಕಾಲಜಿ, ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್ ಮತ್ತು ಸೈಕಿಯಾಟ್ರಿಕ್ ನರ್ಸಿಂಗ್‌ನಲ್ಲಿ ತರಬೇತಿಯನ್ನು ಬಲಪಡಿಸಲು ಒಟ್ಟು 25 ಉತ್ಕೃಷ್ಟತಾ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ.

  • ಇವುಗಳಲ್ಲಿ 11ನೇ ಯೋಜನೆಯಲ್ಲಿ (2007–2012) 11 ಕೇಂದ್ರಗಳು, 12ನೇ ಯೋಜನೆಯಲ್ಲಿ (2012–2017) 10 ಕೇಂದ್ರಗಳು ಮತ್ತು 12ನೇ ಯೋಜನೆಯ ನಂತರ (2017–2018) 4 ಕೇಂದ್ರಗಳು ಸೇರಿವೆ.

  • ಈ ಅನುದಾನಗಳು ಸಿವಿಲ್ ಕೆಲಸಗಳು, ಉಪಕರಣಗಳ ಖರೀದಿ, ಗ್ರಂಥಾಲಯಕ್ಕೆ ಪುಸ್ತಕ ಮತ್ತು ಜರ್ನಲ್‌ಗಳ ಖರೀದಿ, ಬಂಡವಾಳ ಕಾಮಗಾರಿಗಳು, ಬೋಧಕ ವರ್ಗದ ಉಳಿಸಿಕೊಳ್ಳುವಿಕೆ, ತೃತೀಯ ಹಂತದ ಆರೈಕೆ, ಪಿಜಿ (PG) ಸೀಟುಗಳ ಸೃಷ್ಟಿ, ಸಂಶೋಧನೆ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಷ್ಠಾನಕ್ಕೆ ಬೆಂಬಲ ನೀಡುತ್ತವೆ.

ಮಾನವಶಕ್ತಿ ಅಭಿವೃದ್ಧಿ ಯೋಜನೆ ಬಿ – ಪಿಜಿ (PG) ಇಲಾಖೆಯ ಮೇಲ್ದರ್ಜೆಗೇರಿಸುವಿಕೆ

  • 19 ಸರ್ಕಾರಿ ಸಂಸ್ಥೆಗಳಲ್ಲಿನ ಒಟ್ಟು 47 ಸ್ನಾತಕೋತ್ತರ ಇಲಾಖೆಗಳನ್ನು ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಗಿದೆ.

  • ಇದರಲ್ಲಿ 11ನೇ ಯೋಜನೆಯಲ್ಲಿ (2009–2011) 11 ಸಂಸ್ಥೆಗಳ 27 ಇಲಾಖೆಗಳು, 12ನೇ ಯೋಜನೆಯಲ್ಲಿ (2015–2016) 5 ಸಂಸ್ಥೆಗಳ 13 ಇಲಾಖೆಗಳು ಮತ್ತು 12ನೇ ಯೋಜನೆಯ ನಂತರ 3 ಸಂಸ್ಥೆಗಳ 7 ಇಲಾಖೆಗಳು (2017–2018) ಸೇರಿವೆ.

  • ಈ ಮೇಲ್ದರ್ಜೆಗೇರಿಸುವಿಕೆಯು ಮಾನಸಿಕ ಆರೋಗ್ಯ ತಜ್ಞರ ತರಬೇತಿ ಸಾಮರ್ಥ್ಯವನ್ನು ಸುಧಾರಿಸುವತ್ತ ಗಮನಹರಿಸುತ್ತದೆ.

ಸಾಮರ್ಥ್ಯ ವೃದ್ಧಿಗಾಗಿ ಡಿಜಿಟಲ್ ತರಬೇತಿ ಉಪಕ್ರಮಗಳು

  • 2018 ರಿಂದ ನಿಮ್ಹಾನ್ಸ್, ಎಲ್‌ಜಿಬಿಆರ್‌ಐಎಂಎಚ್ ಮತ್ತು ಸಿಐಪಿ ರಾಂಚಿಯಲ್ಲಿ ಸ್ಥಾಪಿಸಲಾದ ಡಿಜಿಟಲ್ ಅಕಾಡೆಮಿಗಳು 1,76,454 ಆರೋಗ್ಯ ವೃತ್ತಿಪರರಿಗೆ ತರಬೇತಿ ನೀಡಿವೆ.

  • ಐಗೋಟ್-ದೀಕ್ಷಾ ವೇದಿಕೆಯು (2020 ರಲ್ಲಿ ಪ್ರಾರಂಭಿಸಲಾಗಿದೆ) ತಳಮಟ್ಟದಲ್ಲಿ ಮಾನಸಿಕ ಆರೋಗ್ಯ ಸಾಮರ್ಥ್ಯವನ್ನು ಬೆಳೆಸಲು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ ಮತ್ತು ಸಮುದಾಯ ಸ್ವಯಂಸೇವಕರಿಗೆ ತರಬೇತಿಯನ್ನು ನೀಡಿದೆ.

ಉಪಸಂಹಾರ

ಕೇಂದ್ರ ಬಜೆಟ್ 2026-27 ಭಾರತದ ಮಾನಸಿಕ ಆರೋಗ್ಯದ ಭೂಪಟದಲ್ಲಿ ಒಂದು ಅರ್ಥಪೂರ್ಣ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಇದು ಎಲ್ಲರನ್ನೂ ಒಳಗೊಳ್ಳುವ, ಸುಲಭವಾಗಿ ಲಭ್ಯವಾಗುವ ಮತ್ತು ಸಮಾನವಾದ ಆರೈಕೆ ವ್ಯವಸ್ಥೆಯನ್ನು ನಿರ್ಮಿಸುವ ಸರ್ಕಾರದ ದೀರ್ಘಕಾಲದ ಪ್ರಯತ್ನಗಳನ್ನು ಬಲಪಡಿಸುತ್ತದೆ. ಉತ್ತರ ಭಾರತದಲ್ಲಿ ನಿಮ್ಹಾನ್ಸ್-2 ಸ್ಥಾಪನೆಯನ್ನು ಘೋಷಿಸುವ ಮೂಲಕ ಮತ್ತು ರಾಂಚಿ ಹಾಗೂ ತೇಜ್‌ಪುರದ ಪ್ರಮುಖ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ, ಈ ಬಜೆಟ್ ಪ್ರಾದೇಶಿಕ ಅಸಮಾನತೆಗಳನ್ನು ನೇರವಾಗಿ ಪರಿಹರಿಸುತ್ತದೆ ಮತ್ತು ವಿಶೇಷ ಮೂಲಸೌಕರ್ಯ, ಕಾರ್ಯಪಡೆಯ ತರಬೇತಿ ಹಾಗೂ ಮತ್ತು ಅಪಘಾತ ತುರ್ತು ಚಿಕಿತ್ಸಾಬೆಂಬಲವನ್ನು ಬಲಪಡಿಸುತ್ತದೆ.

ಈ ಉದ್ದೇಶಿತ ಕ್ರಮಗಳು ದಶಕಗಳಿಂದ ಹಾಕಲಾದ ಭದ್ರ ಬುನಾದಿಯ ಮೇಲೆ ನಿರ್ಮಿತವಾಗಿವೆ. ಒಟ್ಟಾರೆಯಾಗಿ, ಈ ಉಪಕ್ರಮಗಳು ಸಾಮಾಜಿಕ ಕಳಂಕವನ್ನು ಕಡಿಮೆ ಮಾಡಲು, ಚಿಕಿತ್ಸೆಯ ಅಂತರವನ್ನು ಹೋಗಲಾಡಿಸಲು ಮತ್ತು ರಾಷ್ಟ್ರೀಯ ಉತ್ಪಾದಕತೆ, ಯುವ ಸಬಲೀಕರಣ ಹಾಗೂ ಅಂತರ್ಗತ ಬೆಳವಣಿಗೆಗೆ ಅತ್ಯಗತ್ಯವಾದ ಮಾನಸಿಕ ಸ್ವಾಸ್ಥ್ಯಕ್ಕೆ ಆದ್ಯತೆ ನೀಡಲು ಸುಸ್ಥಿರ ಬದ್ಧತೆಯನ್ನು ಸೂಚಿಸುತ್ತವೆ. ಈ ವೇಗವನ್ನು ದೇಶದಾದ್ಯಂತ ಲಕ್ಷಾಂತರ ಜನರ ಜೀವನದಲ್ಲಿ ಸ್ಪಷ್ಟ ಸುಧಾರಣೆಗಳಾಗಿ ಪರಿವರ್ತಿಸಲು ನಿರಂತರ ಅನುಷ್ಠಾನ ಮತ್ತು ಮೇಲ್ವಿಚಾರಣೆಯು ಪ್ರಮುಖವಾಗಿದೆ. 

References

Press Information Bureau:

https://www.pib.gov.in/PressReleasePage.aspx?PRID=2221455

https://www.pib.gov.in/PressReleasePage.aspx?PRID=2221458

https://www.pib.gov.in/PressReleasePage.aspx?PRID=2221410

https://static.pib.gov.in/WriteReadData/specificdocs/documents/2026/feb/doc202621775901.pdf

https://www.pib.gov.in/PressReleaseIframePage.aspx?PRID=2022303&reg=3&lang=2

https://www.pib.gov.in/PressReleaseIframePage.aspx?PRID=2100706&reg=3&lang=2

https://www.pib.gov.in/PressReleaseIframePage.aspx?PRID=2100706&reg=3&lang=2

https://www.pib.gov.in/PressNoteDetails.aspx?ModuleId=3&NoteId=153277&lang=1&reg=3

https://www.pib.gov.in/PressReleasePage.aspx?PRID=2188003&reg=3&lang=2

https://www.pib.gov.in/PressReleseDetail.aspx?PRID=2221458&reg=3&lang=1

 

Ministry of Health and Family Welfare:

https://www.mohfw.gov.in/?q=en/pressrelease-206

https://sansad.in/getFile/loksabhaquestions/annex/186/AU1019_QSxLwa.pdf?source=pqals#:~:text=(a):%20Under%20Ayushman%20Bharat,through%20the%20National%20Health%20Mission.

https://indianmhs.nimhans.ac.in/phase1/Docs/Summary.pdf

https://dghs.mohfw.gov.in/national-mental-health-programme.php

https://mohfw.gov.in/sites/default/files/9147562941489753121.pdf

Ministry of Finance:

https://www.indiabudget.gov.in/doc/bh1.pdf

Advancing India’s Mental Healthcare and Well-Being

 

*****

 

(Explainer ID: 157313) आगंतुक पटल : 13
Provide suggestions / comments
इस विज्ञप्ति को इन भाषाओं में पढ़ें: English , हिन्दी , Manipuri , Gujarati , Malayalam
Link mygov.in
National Portal Of India
STQC Certificate