Economy
ಕೇಂದ್ರ ಬಜೆಟ್ 2026-27: ಭಾರತದ ಜವಳಿ ಮೌಲ್ಯ ಸರಪಳಿಯ ಬಲವರ್ಧನೆ
Posted On:
04 FEB 2026 9:58AM
|
ಪ್ರಮುಖ ಮಾರ್ಗಸೂಚಿಗಳು
- 2026-27ರ ಕೇಂದ್ರ ಬಜೆಟ್ ಉದ್ಯೋಗಾವಕಾಶ, ರಫ್ತು, ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರ ಉತ್ಪಾದನೆಯ ಮೇಲೆ ಕೇಂದ್ರೀಕರಿಸುವ ಮೂಲಕ ಜವಳಿ ವಲಯವನ್ನು ಅಭಿವೃದ್ಧಿ ಕಾರ್ಯತಂತ್ರದ ಕೇಂದ್ರಬಿಂದುವಾಗಿರಿಸಿದೆ.
- ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳ ಮೂಲಕ ಉತ್ಪಾದನಾ ಪ್ರಮಾಣದ ವಿಸ್ತರಣೆ ಮತ್ತು ಆಧುನಿಕ ಉತ್ಪಾದನೆಗೆ ಮಹತ್ವ ನೀಡಲಾಗಿದೆ ಹಾಗೂ ಎಂಎಂಎಫ್ (ಎಂಎಂಎಫ್ - ಕೃತಕ ನೂಲು) ಮತ್ತು ತಾಂತ್ರಿಕ ಜವಳಿಗಳಿಗೆ ಬೆಂಬಲ ನೀಡಲಾಗಿದೆ.
- ನಗದು ಲಭ್ಯತೆಯ ಕ್ರಮಗಳು, ಕ್ಲಸ್ಟರ್‌ಗಳ ಆಧುನೀಕರಣ ಮತ್ತು ಕೌಶಲ್ಯಾಭಿವೃದ್ಧಿ ಉಪಕ್ರಮಗಳ ಮೂಲಕ ಎಂಎಸ್‌ಎಂಇಗಳು ಮತ್ತು ಕುಶಲಕರ್ಮಿಗಳಿಗೆ ಬೆಂಬಲ ನೀಡಲಾಗಿದೆ.
- ಜಾಗತಿಕ ಜವಳಿ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ಉತ್ಪಾದನಾ ಪ್ರಮಾಣ, ಸುಸ್ಥಿರತೆ ಮತ್ತು ಸ್ಪರ್ಧಾತ್ಮಕತೆಗೆ ನೀತಿ ನಿರೂಪಣೆಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ.
|
2026-27ರ ಕೇಂದ್ರ ಬಜೆಟ್ನಲ್ಲಿ ಜವಳಿ ವಲಯಕ್ಕೆ ಅಗ್ರಸ್ಥಾನ
2026-27ರ ಕೇಂದ್ರ ಬಜೆಟ್ ಜವಳಿ ಸೇರಿದಂತೆ ಆಯಕಟ್ಟಿನ ಮತ್ತು ಮುಂಚೂಣಿಯಲ್ಲಿರುವ ವಲಯಗಳಲ್ಲಿ ಉತ್ಪಾದನಾ ಪ್ರಮಾಣವನ್ನು ವಿಸ್ತರಿಸಲು ಹೆಚ್ಚಿನ ಒತ್ತು ನೀಡಿದೆ.
ಭಾರತದ ಜವಳಿ ವಲಯವು ದೇಶದ ಅತ್ಯಂತ ಹಳೆಯ ಮತ್ತು ವೈವಿಧ್ಯಮಯ ಕೈಗಾರಿಕೆಗಳಲ್ಲಿ ಒಂದಾಗಿದ್ದು, ಶತಮಾನಗಳಷ್ಟು ಹಳೆಯದಾದ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ. 2026-27ರ ಕೇಂದ್ರ ಬಜೆಟ್ ಜವಳಿ ವಲಯವನ್ನು ಭಾರತದ ಬೆಳವಣಿಗೆಯ ಕೇಂದ್ರಬಿಂದುವಾಗಿರಿಸಿದೆ, ಇದು ಆರ್ಥಿಕತೆಗೆ ಈ ವಲಯದ ಆಯಕಟ್ಟಿನ ಪ್ರಾಮುಖ್ಯತೆಯನ್ನುಉಲ್ಲೇಖಿಉತ್ತದೆ. ಹೆಚ್ಚು ಶ್ರಮದಾಯಕವಾದ ಈ ಉದ್ಯಮಕ್ಕೆ ಆದ್ಯತೆ ನೀಡುವ ಮೂಲಕ, ಜವಳಿ ವಲಯವು ಉದ್ಯೋಗ ಸೃಷ್ಟಿ, ರಫ್ತು ಬೆಳವಣಿಗೆ, ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಬಜೆಟ್ ಅಂಗೀಕರಿಸಿದೆ.
ಗಮನಾರ್ಹವಾಗಿ, ಭಾರತೀಯ ಜವಳಿ ವಲಯವು ಗಮನಾರ್ಹವಾದ ನೈಸರ್ಗಿಕ ಸಾಮರ್ಥ್ಯಗಳನ್ನು ಹೊಂದಿದೆ - ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ವಿಸ್ತೀರ್ಣದಲ್ಲಿ ಹತ್ತಿ ಬೆಳೆಯುವ ದೇಶವಾಗಿದೆ, ಜೂಟ್ (ಸೆಣಬು) ಉತ್ಪಾದನೆಯಲ್ಲಿ ಮೊದಲ ಸ್ಥಾನ, ರೇಷ್ಮೆ ಮತ್ತು ಹತ್ತಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲದೆ, ಕೃತಕ ನೂಲು ವಿಭಾಗದಲ್ಲಿ ಎರಡನೇ ಪ್ರಮುಖ ಜಾಗತಿಕ ಕೇಂದ್ರವಾಗಿದ್ದು, ಪಾಲಿಯೆಸ್ಟರ್ ಮತ್ತು ವಿಸ್ಕೋಸ್ ನಾರುಗಳ ಉತ್ಪಾದನೆಯಲ್ಲಿ ಎರಡನೇ ದೊಡ್ಡ ದೇಶವಾಗಿದೆ.

ಬೆಳವಣಿಗೆಯ ನೆಯ್ಗೆ: 2026-27ರ ಬಜೆಟ್ ಭಾರತದ ಜವಳಿ ವಲಯವನ್ನು ಹೇಗೆ ಉತ್ತೇಜಿಸುತ್ತದೆ
2026-27ರ ಕೇಂದ್ರ ಬಜೆಟ್‌ನಲ್ಲಿ, ನಾರಿನಿಂದ ಫ್ಯಾಶನ್‌ವರೆಗೆ ಮತ್ತು ಗ್ರಾಮೀಣ ಕೈಗಾರಿಕೆಗಳಿಂದ ಜಾಗತಿಕ ಮಾರುಕಟ್ಟೆಗಳವರೆಗೆ - ಇಡೀ ಜವಳಿ ಮೌಲ್ಯ ಸರಪಳಿಯನ್ನು ಬಲಪಡಿಸಲು ಸಮಗ್ರ ಮತ್ತು ಸಂಯೋಜಿತ ನೀತಿ ಚೌಕಟ್ಟನ್ನು ಘೋಷಿಸಲಾಗಿದೆ.
ಜವಳಿ ವಲಯಕ್ಕಾಗಿ ಸಂಯೋಜಿತ ಕಾರ್ಯಕ್ರಮ
ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ, ಸ್ವಾವಲಂಬನೆಯನ್ನು ಬೆಳೆಸುವ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದೊಂದಿಗೆ, ಸರ್ಕಾರವು ಜವಳಿ ವಲಯಕ್ಕಾಗಿ ಐದು ಉಪ-ಘಟಕಗಳನ್ನು ಒಳಗೊಂಡ ಸಂಯೋಜಿತ ಕಾರ್ಯಕ್ರಮವನ್ನು ಪ್ರಸ್ತಾಪಿಸಿದೆ:

1. ರಾಷ್ಟ್ರೀಯ ನಾರು ಯೋಜನೆ: ಈ ಯೋಜನೆಯು ರೇಷ್ಮೆ, ಉಣ್ಣೆ ಮತ್ತು ಸೆಣಬಿನಂತಹ ನೈಸರ್ಗಿಕ ನಾರುಗಳ ಜೊತೆಗೆ, ಕೃತಕ ನೂಲು ಮತ್ತು ಆಧುನಿಕ ಕಾಲದ ನಾರುಗಳಿಗೆ ಬೆಂಬಲ ನೀಡುವ ಮೂಲಕ ನಾರು ಉತ್ಪಾದನೆಯ ಎಲ್ಲಾ ವಿಭಾಗಗಳಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದೆ. ದೇಶೀಯವಾಗಿ ನಾರುಗಳ ಲಭ್ಯತೆಯನ್ನು ಬಲಪಡಿಸುವ ಮತ್ತು ಸುಧಾರಿತ ಜವಳಿ ವಸ್ತುಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಮೂಲಕ, ಈ ಯೋಜನೆಯು ಆಮದು ಅವಲಂಬನೆಯನ್ನು ಕಡಿಮೆ ಮಾಡಲು, ಹತ್ತಿಯ ಹೊರತಾಗಿ ಇತರ ವೈವಿಧ್ಯಮಯ ನಾರುಗಳನ್ನು ಉತ್ತೇಜಿಸಲು ಮತ್ತು ವಿಶೇಷ ಜವಳಿಗಳ ತಯಾರಿಕೆಯಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲು ಶ್ರಮಿಸುತ್ತದೆ.
2. ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ: ಸಾಂಪ್ರದಾಯಿಕ ಜವಳಿ ಕ್ಲಸ್ಟರ್‌ಗಳ ಆಧುನೀಕರಣದ ಮೇಲೆ ಇದು ಗಮನಹರಿಸುತ್ತದೆ. ಯಂತ್ರೋಪಕರಣಗಳು, ತಂತ್ರಜ್ಞಾನ ಮೇಲ್ದರ್ಜೆಗೇರಿಸುವಿಕೆ ಮತ್ತು ಸಾಮಾನ್ಯ ಪರೀಕ್ಷಾ ಹಾಗೂ ಪ್ರಮಾಣೀಕರಣ ಕೇಂದ್ರಗಳ ಸ್ಥಾಪನೆಗೆ ಇದು ಬಂಡವಾಳ ನೆರವು ನೀಡುತ್ತದೆ. ಈ ಯೋಜನೆಯು ಉತ್ಪಾದಕತೆಯನ್ನು ಹೆಚ್ಚಿಸುವ, ಗುಣಮಟ್ಟದ ಮಾನದಂಡಗಳನ್ನು ಸುಧಾರಿಸುವ ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ನಿರೀಕ್ಷೆಯಿದೆ.
3. ರಾಷ್ಟ್ರೀಯ ಕೈಮಗ್ಗ ಮತ್ತು ಕರಕುಶಲ ಕಾರ್ಯಕ್ರಮ: ಕೈಮಗ್ಗ ಮತ್ತು ಕರಕುಶಲ ವಸ್ತುಗಳಿಗಾಗಿ ಇರುವ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಒಂದು ಏಕೀಕೃತ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಸಂಯೋಜಿಸಿ ಬಲಪಡಿಸಲಾಗುತ್ತದೆ. ನೇಕಾರರು ಮತ್ತು ಕುಶಲಕರ್ಮಿಗಳಿಗೆ ಗುರಿ ಆಧಾರಿತ ಮತ್ತು ಪರಿಣಾಮಕಾರಿ ಬೆಂಬಲ ನೀಡುವುದು, ಅವರ ಆದಾಯವನ್ನು ಸುಧಾರಿಸುವುದು, ಮಾರುಕಟ್ಟೆ ಸಂಪರ್ಕವನ್ನು ಖಚಿತಪಡಿಸುವುದು ಮತ್ತು ಭಾರತದ ಶ್ರೀಮಂತ ಜವಳಿ ಪರಂಪರೆಯನ್ನು ಸಂರಕ್ಷಿಸುವುದು ಇದರ ಉದ್ದೇಶವಾಗಿದೆ. ಹೆಚ್ಚುವರಿಯಾಗಿ, 'ಮೆಗಾ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ' ಮತ್ತು 'ಅಗತ್ಯ ಆಧಾರಿತ ವಿಶೇಷ ಮೂಲಸೌಕರ್ಯ ಯೋಜನೆಗಳ' ಮೂಲಕ ನೈಸರ್ಗಿಕ ಮತ್ತು ಸಸ್ಯಜನ್ಯ ಬಣ್ಣಗಳ ಪ್ರಚಾರಕ್ಕಾಗಿ ಹಾಗೂ ಡೈ ಹೌಸ್‌ಗಳ ಸ್ಥಾಪನೆಗೆ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ.
4. ಟೆಕ್ಸ್-ಎಕೋ ಉಪಕ್ರಮ: ಈ ಉಪಕ್ರಮವು ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಪರಿಸರ ಸ್ನೇಹಿ ಸುಸ್ಥಿರ ಜವಳಿ ಮತ್ತು ಉಡುಪುಗಳ ತಯಾರಿಕೆಯನ್ನು ಉತ್ತೇಜಿಸುತ್ತದೆ. ಇದು ದೇಶೀಯ ಉತ್ಪಾದನೆಯನ್ನು ಅಂತರಾಷ್ಟ್ರೀಯ ಸುಸ್ಥಿರತೆಯ ಮಾನದಂಡಗಳಿಗೆ ಅನುಗುಣವಾಗಿ ರೂಪಿಸುತ್ತದೆ ಮತ್ತು ಹೊಸದಾಗಿ ಹೊರಹೊಮ್ಮುತ್ತಿರುವ 'ಹಸಿರು ಮಾರುಕಟ್ಟೆ'ಗಳನ್ನು ಪ್ರವೇಶಿಸಲು ಬೆಂಬಲ ನೀಡುತ್ತದೆ.
5. ಸಮರ್ಥ್ 2.0: ಇದು ಮೇಲ್ದರ್ಜೆಗೇರಿಸಲಾದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವಾಗಿದೆ. ಉದ್ಯಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಆಳವಾದ ಸಹಯೋಗ ಹೊಂದುವ ಮೂಲಕ ಜವಳಿ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಆಧುನೀಕರಿಸುವುದು ಇದರ ಗುರಿ. ಜವಳಿ ಮೌಲ್ಯ ಸರಪಳಿಯಾದ್ಯಂತ ಉದ್ಯಮಕ್ಕೆ ಸಿದ್ಧವಿರುವ ನೈಪುಣ್ಯ ಹೊಂದಿದ ಮಾನವಶಕ್ತಿಯ ಲಭ್ಯತೆಯನ್ನು ಇದು ಖಚಿತಪಡಿಸುತ್ತದೆ.
ಮೆಗಾ ಟೆಕ್ಸ್ಟೈಲ್ ಪಾರ್ಕ್ಗಳು ಮತ್ತು ತಾಂತ್ರಿಕ ಜವಳಿಗಳು
ಸಂಯೋಜಿತ ಮೂಲಸೌಕರ್ಯ ಒದಗಿಸುವುದು, ಉತ್ಪಾದನಾ ಪ್ರಮಾಣದ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ಜವಳಿ ಮೌಲ್ಯ ಸರಪಳಿಯಾದ್ಯಂತ ಮೌಲ್ಯವರ್ಧನೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ 'ಚಾಲೆಂಜ್ ಮೋಡ್'ನಲ್ಲಿ ಮೆಗಾ ಟೆಕ್ಸ್ಟೈಲ್ ಪಾರ್ಕ್ಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿದೆ. ಈ ಪಾರ್ಕ್‌ಗಳು ಕೈಗಾರಿಕಾ, ವೈದ್ಯಕೀಯ, ರಕ್ಷಣೆ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಅನ್ವಯವಾಗುವ ಹೆಚ್ಚಿನ ಸಾಮರ್ಥ್ಯದ 'ತಾಂತ್ರಿಕ ಜವಳಿ' ವಿಭಾಗದ ಬೆಳವಣಿಗೆಗೆ ಬೆಂಬಲ ನೀಡುವ ನಿರೀಕ್ಷೆಯಿದೆ.
ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮ
ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮವು ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಬಲಪಡಿಸುವತ್ತ ಗಮನಹರಿಸುತ್ತದೆ. ಈ ಉಪಕ್ರಮವು ಜಾಗತಿಕ ಮಾರುಕಟ್ಟೆ ಸಂಪರ್ಕ, ಬ್ರ್ಯಾಂಡಿಂಗ್, ಸುವ್ಯವಸ್ಥಿತ ತರಬೇತಿ, ಕೌಶಲ್ಯಾಭಿವೃದ್ಧಿ, ಗುಣಮಟ್ಟ ಸುಧಾರಣೆ ಮತ್ತು ಪ್ರಕ್ರಿಯೆ ಆಧುನೀಕರಣಕ್ಕೆ ಒತ್ತು ನೀಡುತ್ತದೆ. ಇದು ನೇಕಾರರು, ಗ್ರಾಮೋದ್ಯೋಗಗಳು ಮತ್ತು ಗ್ರಾಮೀಣ ಯುವಕರಿಗೆ ಪ್ರಯೋಜನವನ್ನು ನೀಡುವ ಜೊತೆಗೆ, 'ಒಂದು ಜಿಲ್ಲೆ ಒಂದು ಉತ್ಪನ್ನ' ಉಪಕ್ರಮಕ್ಕೆ ಬೆಂಬಲ ನೀಡುವ ಗುರಿಯನ್ನು ಹೊಂದಿದೆ.
ಟ್ರೇಡ್ಸ್ ಎಂದರೇನು?
ಟ್ರೇಡ್ಸ್ ಎಂಬುದು ಒಂದು ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್ ಆಗಿದ್ದು, ಇದು ಎಂಎಸ್‌ಎಂಇಗ (ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) ಪಡೆಯಬೇಕಾದ ಬಾಕಿ ಹಣದ ಮೇಲೆ ಹಣಕಾಸು ಸೌಲಭ್ಯ ಅಥವಾ ರಿಯಾಯಿತಿಯನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಕಾರ್ಪೊರೇಟ್‌ಗಳು, ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳು (PSUs) ಸೇರಿದಂತೆ ಇತರ ಖರೀದಿದಾರರಿಂದ ಎಂಎಸ್‌ಎಂಇಗಳಿಗೆ ಬರಬೇಕಾದ ಬಾಕಿ ಮೊತ್ತವನ್ನು ಇಲ್ಲಿ ಹಣಕಾಸಾಗಿ ಪರಿವರ್ತಿಸಬಹುದು.
ಟ್ರೇಡ್ಸ್ ಮೂಲಕ ಜವಳಿ ಎಂಎಸ್ಎಂಇಗಳಿಗೆ ನಗದು ಲಭ್ಯತೆಯ ಬೆಂಬಲ
ಜವಳಿ ವಲಯದ ಸಣ್ಣ ಉದ್ದಿಮೆದಾರರಿಗೆ ತಮ್ಮ ಬಾಕಿ ಇರುವ ಮೊತ್ತವನ್ನು ತಕ್ಷಣವೇ ನಗದಾಗಿ ಪರಿವರ್ತಿಸಿಕೊಳ್ಳಲು ಈ ವೇದಿಕೆ ಸಹಾಯ ಮಾಡುತ್ತದೆ, ಇದರಿಂದ ಅವರ ದೈನಂದಿನ ವ್ಯಾಪಾರ ವ್ಯವಹಾರಗಳಿಗೆ ಹಣದ ಕೊರತೆಯಾಗುವುದಿಲ್ಲ.
ಜವಳಿ ಎಂಎಸ್ಎಂಇಗಳಿಗೆ ನಗದು ಲಭ್ಯತೆಯನ್ನು ಬಲಪಡಿಸಲು, ಟ್ರೇಡ್ಸ್ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಸರ್ಕಾರವು ಕ್ರಮಗಳನ್ನು ಘೋಷಿಸಿದೆ. ಈವರೆಗೆ ಈ ವ್ಯವಸ್ಥೆಯ ಮೂಲಕ ₹7 ಲಕ್ಷ ಕೋಟಿಗೂ ಅಧಿಕ ಮೊತ್ತದ ವಹಿವಾಟಿಗೆ ಅನುವು ಮಾಡಿಕೊಡಲಾಗಿದೆ.
ಪ್ರಮುಖ ಕ್ರಮಗಳು:
- ಎಂಎಸ್‌ಎಂಇಗಳಿಂದ ವಸ್ತುಗಳನ್ನು ಖರೀದಿಸುವಾಗ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು ಕಡ್ಡಾಯವಾಗಿ ಟ್ರೇಡ್ಸ್ ಬಳಸಬೇಕು.
- ಟ್ರೇಡ್ಸ್ ನಲ್ಲಿನ ಇನ್‌ವಾಯ್ಸ್ ಡಿಸ್ಕೌಂಟಿಂಗ್‌ಗಾಗಿ ಸಿಜಿಟಿಎಂಎಸ್‌ಇ ಮೂಲಕ ಸಾಲ ಖಾತರಿ ಬೆಂಬಲ ನೀಡಲಾಗುವುದು.
- ಸರ್ಕಾರಿ ಇಲಾಖೆಗಳಿಂದ ಬರಬೇಕಾದ ಬಾಕಿ ಹಣಕ್ಕೆ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಹಣಕಾಸು ಒದಗಿಸಲು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM) ಅನ್ನು ಟ್ರೇಡ್ಸ್ ನೊಂದಿಗೆ ಜೋಡಿಸುವುದು.
- ದ್ವಿತೀಯ ಮಾರುಕಟ್ಟೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ನಗದು ಹರಿವನ್ನು ಸುಧಾರಿಸಲು ಟ್ರೇಡ್ಸ್ ಬಾಕಿಗಳನ್ನು 'ಅಸೆಟ್-ಬ್ಯಾಕ್ಡ್ ಸೆಕ್ಯುರಿಟೀಸ್' ಆಗಿ ಪರಿಚಯಿಸುವುದು.
ಎಸ್‌ಎಂಇ ಗ್ರೋತ್ ಫಂಡ್ ಮತ್ತು 'ಚಾಂಪಿಯನ್ ಎಂಎಸ್‌ಎಂಇಗಳು'
ಭವಿಷ್ಯದ "ಚಾಂಪಿಯನ್ ಎಂಎಸ್‌ಎಂಇ"ಗಳನ್ನು ಸೃಷ್ಟಿಸಲು ಮೀಸಲಾದ ₹10,000 ಕೋಟಿ ಮೊತ್ತದ ಎಸ್‌ಎಂಇ ಗ್ರೋತ್ ಫಂಡ್ ಅನ್ನು ಪರಿಚಯಿಸಲಾಗಿದೆ. ಆಯ್ದ ಮಾನದಂಡಗಳ ಆಧಾರದ ಮೇಲೆ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಲು ಈ ನಿಧಿಯನ್ನು ಸಿದ್ಧಪಡಿಸಲಾಗಿದೆ.
ಭಾರತದಲ್ಲಿ ಬೆಳವಣಿಗೆ, ರಫ್ತು ಮತ್ತು ಉದ್ಯೋಗದ ಪ್ರೇರಕಶಕ್ತಿಯಾಗಿ ಜವಳಿ ವಲಯ
ಭಾರತೀಯ ಜವಳಿ ಮತ್ತು ಉಡುಪು ಉದ್ಯಮವು ಅಂದಾಜು 179 ಬಿಲಿಯನ್ ಯುಎಸ್ ಡಾಲರ್ ಗಾತ್ರವನ್ನು ಹೊಂದಿದ್ದು, ದೇಶದ ಆರ್ಥಿಕ ರಚನೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ವಲಯವು ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಸುಮಾರು 2% ರಷ್ಟು ಕೊಡುಗೆ ನೀಡುತ್ತದೆ ಮತ್ತು ಉತ್ಪಾದನಾ ವಲಯದ ಒಟ್ಟು ಮೌಲ್ಯವರ್ಧನೆಯಲ್ಲಿ ಸುಮಾರು 11% ರಷ್ಟು ಪಾಲನ್ನು ಹೊಂದಿದೆ. ಅಷ್ಟೇ ಅಲ್ಲದೆ, ದೇಶದ ಒಟ್ಟು ರಫ್ತಿನಲ್ಲಿ 8.63% ರಷ್ಟು ಕೊಡುಗೆ ನೀಡುವ ಮೂಲಕ ವಿದೇಶಿ ವಿನಿಮಯ ಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಅಂಕಿಅಂಶಗಳು ಭಾರತದ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದೇಶದ ಬಲವಾದ ಉಪಸ್ಥಿತಿಯನ್ನು ಎತ್ತಿ ತೋರಿಸುತ್ತವೆ.

ರಫ್ತು ವಲಯದಲ್ಲಿ ಮುಂದುವರಿದ ಬೆಳವಣಿಗೆಯ ವೇಗ
ರಫ್ತು ವಿಭಾಗದಲ್ಲಿ ಭಾರತವು ಜಾಗತಿಕವಾಗಿ ಜವಳಿ ಮತ್ತು ಉಡುಪು ರಫ್ತು ಮಾಡುವ 6ನೇ ದೊಡ್ಡ ದೇಶವಾಗಿದ್ದು, ಈ ಕ್ಷೇತ್ರದಲ್ಲಿ ವಿಶ್ವದ ಒಟ್ಟು ರಫ್ತಿನಲ್ಲಿ ಸುಮಾರು 4% ಪಾಲನ್ನು ಹೊಂದಿದೆ.
- ಜಾಗತಿಕ ವ್ಯಾಪಾರ ಪರಿಸರವು ಮಂದಗತಿಯಲ್ಲಿದ್ದರೂ, ಭಾರತದ ಜವಳಿ ಮತ್ತು ಉಡುಪು ರಫ್ತು (ಕರಕುಶಲ ವಸ್ತುಗಳೂ ಸೇರಿದಂತೆ) 2024ರ ಹಣಕಾಸು ವರ್ಷದಲ್ಲಿದ್ದ 35.87 ಬಿಲಿಯನ್ ಯುಎಸ್ ಡಾಲರ್‌ನಿಂದ, 2025ರ ಹಣಕಾಸು ವರ್ಷದಲ್ಲಿ 37.75 ಬಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಯಾಗಿದೆ. ಇದು ಈ ವಲಯದ ಹೊಂದಾಣಿಕೆಯ ಸಾಮರ್ಥ್ಯ ಮತ್ತು ವೈವಿಧ್ಯಮಯ ಮಾರುಕಟ್ಟೆ ಉಪಸ್ಥಿತಿಯನ್ನು ಪ್ರತಿಫಲಿಸುತ್ತದೆ.
- ಡಿಸೆಂಬರ್ 2025 ರಲ್ಲಿ, ರಫ್ತು ಬೆಳವಣಿಗೆಯು ಎಲ್ಲಾ ಪ್ರಮುಖ ವಿಭಾಗಗಳಲ್ಲಿ ಕಂಡುಬಂದಿದೆ. ಇದರಲ್ಲಿ ಕರಕುಶಲ ವಸ್ತುಗಳು (7.2%), ಸಿದ್ಧ ಉಡುಪುಗಳು (2.89%) ಮತ್ತು ಕೃತಕ ನೂಲು, ಬಟ್ಟೆಗಳು (3.99%) ಮುಂಚೂಣಿಯಲ್ಲಿವೆ.
- ಜಾಗತಿಕ ಬೇಡಿಕೆಯಲ್ಲಿ ಏರಿಳಿತಗಳಿದ್ದರೂ, ಈ ಪ್ರವೃತ್ತಿಗಳು ಮೌಲ್ಯವರ್ಧಿತ ಉತ್ಪಾದನೆ ಮತ್ತು ಉದ್ಯೋಗದಾಯಕ ವಿಭಾಗಗಳಲ್ಲಿ ಭಾರತಕ್ಕಿರುವ ಸ್ಪರ್ಧಾತ್ಮಕ ಶಕ್ತಿಯನ್ನು ಪುನರುಚ್ಚರಿಸುತ್ತವೆ.
|
ನಿಮಗೆ ತಿಳಿದಿದೆಯೇ?
2025ರ ಜನವರಿಯಿಂದ ನವೆಂಬರ್ ಅವಧಿಯಲ್ಲಿ, ಭಾರತದ ಜವಳಿ ವಲಯವು 118 ದೇಶಗಳಿಗೆ ರಫ್ತು ಮಾಡುವ ಮೂಲಕ ಅಭೂತಪೂರ್ವ ಬೆಳವಣಿಗೆ ದಾಖಲಿಸಿದೆ!
|
2025ನೇ ವರ್ಷವು ಸಾಂಪ್ರದಾಯಿಕ ಮತ್ತು ಹೊಸ ಮಾರುಕಟ್ಟೆಗಳಲ್ಲಿ ವೈವಿಧ್ಯತೆಯನ್ನು ಸಾಧಿಸಿದ ವರ್ಷವಾಗಿದೆ. ಯುಎಇ, ಈಜಿಪ್ಟ್, ಪೋಲೆಂಡ್, ಸುಡಾನ್, ಜಪಾನ್, ನೈಜೀರಿಯಾ, ಅರ್ಜೆಂಟೀನಾ, ಕ್ಯಾಮರೂನ್ ಮತ್ತು ಉಗಾಂಡಾದಂತಹ ದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆಯಾಗಿದೆ. ಇದರೊಂದಿಗೆ ಸ್ಪೇನ್, ಫ್ರಾನ್ಸ್, ನೆದರ್ಲ್ಯಾಂಡ್ಸ್, ಜರ್ಮನಿ ಮತ್ತು ಯುಕೆನಂತಹ ಪ್ರಮುಖ ಯುರೋಪಿಯನ್ ಮಾರುಕಟ್ಟೆಗಳಲ್ಲೂ ರಫ್ತು ಸ್ಥಿರವಾಗಿ ಮುಂದುವರಿದಿದೆ.
ಉದ್ಯೋಗ ಸೃಷ್ಟಿ ಭಾರತದಲ್ಲಿ ಕೃಷಿಯ ನಂತರ ಜವಳಿ ವಲಯವು ಎರಡನೇ ಅತಿದೊಡ್ಡ ಉದ್ಯೋಗದಾತ ವಲಯವಾಗಿದೆ. 2026-27ರ ಆರ್ಥಿಕ ಸಮೀಕ್ಷೆಯ ಪ್ರಕಾರ, 8 ಪ್ರಮುಖ ಕೈಗಾರಿಕಾ ಗುಂಪುಗಳ ಒಟ್ಟು ಉದ್ಯೋಗದಲ್ಲಿ ಜವಳಿ ಉದ್ದಿಮೆಯು 9% ಪಾಲನ್ನು ಹೊಂದಿದೆ. 2025ರ ಅಂದಾಜಿನ ಪ್ರಕಾರ, ಈ ವಲಯವು ಮಹಿಳೆಯರು ಮತ್ತು ಗ್ರಾಮೀಣ ಸಮುದಾಯಗಳು ಸೇರಿದಂತೆ 4.5 ಕೋಟಿಗೂ ಹೆಚ್ಚು (45 million+) ಜನರಿಗೆ ನೇರ ಉದ್ಯೋಗ ನೀಡುತ್ತಿದೆ.
ಭಾರತದ ಜವಳಿ ವಲಯದ ಬೆಳವಣಿಗೆಯ ಪ್ರೇರಕಶಕ್ತಿಗಳು ಕಳೆದ ಹಲವು ವರ್ಷಗಳಲ್ಲಿ, ಭಾರತವು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳ ವೈವಿಧ್ಯಮಯ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದೆ. ಕಡಿಮೆ ಬೆಲೆಯ ಸಾಮೂಹಿಕ ಮಾರುಕಟ್ಟೆಯ ಉಡುಪುಗಳಿಂದ ಹಿಡಿದು, ಅತ್ಯಾಧುನಿಕ ಮತ್ತು ಹೆಚ್ಚಿನ ಮೌಲ್ಯದ ವಿಭಾಗಗಳವರೆಗೆ ಎಲ್ಲಾ ರೀತಿಯ ಬೇಡಿಕೆಗಳನ್ನು ಇದು ಪೂರೈಸುತ್ತಿದೆ. ಈ ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು, ಸರ್ಕಾರವು ಹಲವಾರು ಉದ್ದೇಶಿತ ಉಪಕ್ರಮಗಳ ಮೂಲಕ ಈ ವಲಯಕ್ಕೆ ಸಕ್ರಿಯವಾಗಿ ಬೆಂಬಲ ನೀಡುತ್ತಿದೆ:
2025ರಲ್ಲಿ ಪಿಎಂ ಮಿತ್ರ ಯೋಜನೆಯ ಗಮನಾರ್ಹ ಪ್ರಗತಿ
- 2027-28ರ ಅವಧಿಯವರೆಗೆ ₹4445 ಕೋಟಿ ವೆಚ್ಚದಲ್ಲಿ 7 ಪಿಎಂ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಅಂಡ್ ಅಪ್ಪಾರೆಲ್ ಪಾರ್ಕ್‌ಗಳನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ.
- ₹27,434 ಕೋಟಿಗೂ ಹೆಚ್ಚು ಹೂಡಿಕೆಯ ಸಾಮರ್ಥ್ಯವಿರುವ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
- ಎಲ್ಲಾ 7 ರಾಜ್ಯ ಸರ್ಕಾರಗಳಿಂದ ₹2590.99 ಕೋಟಿ ಮೌಲ್ಯದ ಮೂಲಸೌಕರ್ಯ ಕಾಮಗಾರಿಗಳು ಪ್ರಾರಂಭವಾಗಿವೆ.
- ಈ ಯೋಜನೆಯು ಪ್ರತಿ ಪಾರ್ಕ್‌ಗೆ ₹10,000 ಕೋಟಿ ಹೂಡಿಕೆಯೊಂದಿಗೆ ಸುಮಾರು 3 ಲಕ್ಷ ಉದ್ಯೋಗಗಳನ್ನು (1 ಲಕ್ಷ ನೇರ ಮತ್ತು 2 ಲಕ್ಷ ಪರೋಕ್ಷ) ಸೃಷ್ಟಿಸುವ ನಿರೀಕ್ಷೆಯಿದೆ.
ಜವಳಿ ವಲಯಕ್ಕೆ PLI ಯೋಜನೆ
- 2029-30ರ ಹಣಕಾಸು ವರ್ಷದವರೆಗೆ ಕಾರ್ಯನಿರ್ವಹಿಸುವ ಈ ಯೋಜನೆಯು ಕೃತಕ ನೂಲು ಉಡುಪುಗಳು, ಬಟ್ಟೆಗಳು ಮತ್ತು ತಾಂತ್ರಿಕ ಜವಳಿಗಳ ಉತ್ಪಾದನೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.
- ಇದು ಉದ್ಯಮವು ದೊಡ್ಡ ಪ್ರಮಾಣದ ಬೆಳವಣಿಗೆ ಸಾಧಿಸಲು, ಸ್ಪರ್ಧಾತ್ಮಕವಾಗಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ಹತ್ತಿ ವಲಯದ ಸುಧಾರಣೆಗಳು
- ಹತ್ತಿ ವಲಯವು ಸುಮಾರು 60 ಲಕ್ಷ ರೈತರು ಮತ್ತು ಮೌಲ್ಯ ಸರಪಳಿಯಾದ್ಯಂತ 4-5 ಕೋಟಿ ಜನರಿಗೆ ಬೆಂಬಲ ನೀಡುತ್ತದೆ.
- ಪಾರದರ್ಶಕತೆ ಹೆಚ್ಚಿಸಲು 'ಕಪಾಸ್ ಕಿಸಾನ್' ಮೊಬೈಲ್ ಆಪ್ ಬಿಡುಗಡೆ ಮಾಡಲಾಗಿದ್ದು, ಇದು ರೈತರ ಸ್ವಯಂ-ನೋಂದಣಿ ಮತ್ತು ಸ್ಲಾಟ್ ಬುಕಿಂಗ್‌ಗೆ ಅವಕಾಶ ನೀಡುತ್ತದೆ.
- ಭಾರತೀಯ ಹತ್ತಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಮನ್ನಣೆ ನೀಡಲು 'ಕಸ್ತೂರಿ ಕಾಟನ್ ಭಾರತ್' ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.
- ಹತ್ತಿ ಬೇಲ್‌ಗಳಿಗಾಗಿ ಇರುವ 'ಗುಣಮಟ್ಟ ನಿಯಂತ್ರಣ ಆದೇಶ'ವನ್ನು ಆಗಸ್ಟ್ 2026 ರವರೆಗೆ ಮುಂದೂಡಲಾಗಿದೆ.
ಸುಸ್ಥಿರತೆ ಮತ್ತು ಸುಪರಿಚಿತ ಪ್ರಚಾರದ ಉಪಕ್ರಮಗಳು
- ಅಪ್‌ಸೈಕಲ್ ಮಾಡಿದ ಉತ್ಪನ್ನಗಳ ಸರ್ಕಾರಿ ಖರೀದಿಯನ್ನು ಉತ್ತೇಜಿಸಲು ಜವಳಿ ಸಮಿತಿ, ಜೆಮ್ ಮತ್ತು ಎಸ್‌ಸಿಒಪಿಇ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರೊಂದಿಗೆ 'ಸರ್ಕಲ್ ಬ್ಯಾಕ್' ಅಭಿಯಾನ ಮತ್ತು ರಾಷ್ಟ್ರೀಯ ಜವಳಿ ಸುಸ್ಥಿರತೆ ಮಂಡಳಿಯನ್ನು ಸ್ಥಾಪಿಸಲಾಗಿದೆ.
ಕಾರ್ಮಿಕ ಸುಧಾರಣೆಗಳು
- ಹೊಸ ಕಾರ್ಮಿಕ ಸಂಹಿತೆಗಳ ಜಾರಿಯು ಜವಳಿ ಉದ್ಯಮದ ಮೇಲೆ ಗಮನಾರ್ಹ ಪ್ರಭಾವ ಬೀರಲಿದೆ. ವೇತನ, ಕೆಲಸದ ಪರಿಸ್ಥಿತಿಗಳು, ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯನ್ನು ಒಳಗೊಂಡ ಏಕೀಕೃತ ಚೌಕಟ್ಟು ನಿಯಮಗಳ ಪಾಲನೆಯನ್ನು ಸುಲಭಗೊಳಿಸುತ್ತದೆ ಮತ್ತು ಕಾರ್ಮಿಕರ ಕಲ್ಯಾಣವನ್ನು ಬಲಪಡಿಸುತ್ತದೆ.
- ಸರಕು ಮತ್ತು ಸೇವಾ ತೆರಿಗೆ 2.0 2025ರ ಮುಂದಿನ ಪೀಳಿಗೆಯ ಜಿಎಸ್‌ಟಿ ತರ್ಕಬದ್ಧಗೊಳಿಸುವಿಕೆಯಿಂದ ಜವಳಿ ಉತ್ಪನ್ನಗಳ ಬೆಲೆ ಇಳಿಕೆಯಾಗಿ ಗ್ರಾಹಕರಿಗೆ ಅನುಕೂಲವಾಗಿದೆ, ಉತ್ಪಾದಕರಿಗೆ ನೆಮ್ಮದಿ ಸಿಕ್ಕಿದೆ ಮತ್ತು ರಫ್ತು ಹಾಗೂ ಉದ್ಯೋಗ ಸೃಷ್ಟಿಗೆ ವೇಗ ದೊರೆತಿದೆ.
ನಿರಂತರ ರಫ್ತು ವೇಗ, ಮಾರುಕಟ್ಟೆಯ ವಿಸ್ತರಣೆ ಮತ್ತು ಮೌಲ್ಯವರ್ಧಿತ ವಿಭಾಗಗಳ ಬಲವಾದ ಪ್ರದರ್ಶನವು ಜವಳಿ ಮತ್ತು ಉಡುಪು (T&A) ವಲಯದಲ್ಲಿ ಭಾರತವು ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಜಾಗತಿಕ ಸೋರ್ಸಿಂಗ್ ಹಬ್ ಎಂಬುದನ್ನು ಪುನರುಚ್ಚರಿಸುತ್ತದೆ. ವೈವಿಧ್ಯೀಕರಣ, ಸ್ಪರ್ಧಾತ್ಮಕತೆ ಮತ್ತು ಎಂಎಸ್‌ಎಂಇಗಳ ಭಾಗವಹಿಸುವಿಕೆಗೆ ನೀಡುತ್ತಿರುವ ನಿರಂತರ ಒತ್ತು ಈ ವಲಯವು ಮುಂದಿನ ದಿನಗಳಲ್ಲಿ ರಫ್ತನ್ನು ಹೆಚ್ಚಿಸಲು ಮತ್ತು ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಆಳವಾಗಿ ಬೆರೆಯಲು ಸಹಕಾರಿಯಾಗಿದೆ.
ಜವಳಿ ವಲಯದ ಭವಿಷ್ಯದ ದೃಷ್ಟಿಕೋನ
ಇತ್ತೀಚಿನ ನೀತಿಗಳು ಉತ್ಪಾದನಾ ಪ್ರಮಾಣದ ವಿಸ್ತರಣೆ ಮತ್ತು ಆಧುನೀಕರಣದತ್ತ ಗಮನಹರಿಸಿವೆ - ಸಂಯೋಜಿತ ಜವಳಿ ಪಾರ್ಕ್‌ಗಳು, ಕೃತಕ ನೂಲು ಮತ್ತು ತಾಂತ್ರಿಕ ಜವಳಿಗಳಿಗೆ ಬೆಂಬಲ, ಹೂಡಿಕೆ ಪ್ರೋತ್ಸಾಹಕಗಳು ಮತ್ತು ಕಚ್ಚಾ ವಸ್ತುಗಳ ಲಭ್ಯತೆಯ ಸುಲಭಗೊಳಿಸುವಿಕೆ ಇವೆಲ್ಲವೂ ಸ್ಪರ್ಧಾತ್ಮಕತೆ ಮತ್ತು ಮೌಲ್ಯವರ್ಧನೆಯನ್ನು ಹೆಚ್ಚಿಸುವ ಗುರಿ ಹೊಂದಿವೆ.
ಅದೇ ಸಮಯದಲ್ಲಿ, ಜವಳಿ ಸಚಿವಾಲಯವು ರಫ್ತು ವಲಯಕ್ಕೆ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಿದೆ. ಪ್ರಸ್ತುತ ಸುಮಾರು ₹3 ಲಕ್ಷ ಕೋಟಿ ಇರುವ ಜವಳಿ ರಫ್ತನ್ನು, ಬಲವಾದ ದೇಶೀಯ ಉತ್ಪಾದನೆ ಮತ್ತು ವ್ಯಾಪಕ ಜಾಗತಿಕ ತಲುಪಿನ ಮೂಲಕ 2030ರ ವೇಳೆಗೆ ₹9 ಲಕ್ಷ ಕೋಟಿಗೆ ವಿಸ್ತರಿಸುವ ಗುರಿ ಹೊಂದಿದೆ.
ವ್ಯಾಪಾರ ಬೆಳವಣಿಗೆಗಳು ಈ ದೃಷ್ಟಿಕೋನಕ್ಕೆ ಮತ್ತೊಂದು ಮಜಲನ್ನು ಸೇರಿಸುತ್ತವೆ. ಭಾರತದ ಜವಳಿ ವಲಯಕ್ಕೆ ಮಹತ್ವದ ಬದಲಾವಣೆ ತರಬಲ್ಲ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ, ಎಲ್ಲಾ ಸುಂಕದ ಶ್ರೇಣಿಗಳನ್ನು ಒಳಗೊಂಡಂತೆ ಜವಳಿ ಮತ್ತು ಉಡುಪುಗಳಿಗೆ ಶೂನ್ಯ ಸುಂಕದ ಪ್ರವೇಶವನ್ನು ನೀಡುತ್ತದೆ ಮತ್ತು ಶೇ. 12 ರವರೆಗೆ ಸುಂಕವನ್ನು ಕಡಿಮೆ ಮಾಡುತ್ತದೆ. ಇದು ಭಾರತೀಯ ಮರದ, ಬಿದಿರಿನ ಮತ್ತು ಕರಕುಶಲ ಪೀಠೋಪಕರಣಗಳ ಮೇಲಿನ ಶೇ. 10.5 ರವರೆಗಿನ ಸುಂಕವನ್ನು ಕಡಿಮೆ ಮಾಡುತ್ತದೆ. ಇತ್ತೀಚೆಗೆ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು, ಈ ಒಪ್ಪಂದವು ಸುಂಕದ ಪರಿಸ್ಥಿತಿಗಳನ್ನು ಸುಧಾರಿಸುವ ಮೂಲಕ ಯುರೋಪಿಯನ್ ಮಾರುಕಟ್ಟೆಗೆ ಭಾರತದ ಜವಳಿ ಮತ್ತು ಸಿದ್ಧ ಉಡುಪುಗಳ ರಫ್ತನ್ನು ಗಣನೀಯವಾಗಿ ವಿಸ್ತರಿಸುತ್ತದೆ, ವಿಶೇಷವಾಗಿ ಶ್ರಮದಾಯಕ ವಿಭಾಗಗಳಿಗೆ ಇದು ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
2026-27ರ ಕೇಂದ್ರ ಬಜೆಟ್ ಉದ್ಯೋಗ ಸೃಷ್ಟಿ, ಅಂತರ್ಗತ ಬೆಳವಣಿಗೆ, ಸುಸ್ಥಿರತೆ ಮತ್ತು ಜವಳಿ ಸಚಿವಾಲಯದ ನೇತೃತ್ವದಲ್ಲಿ ರಾಜ್ಯಗಳು, ಉದ್ದಿಮೆಗಳು, ಎಂಎಸ್‌ಎಂಇಗಳು, ಕುಶಲಕರ್ಮಿಗಳು ಮತ್ತು ಕೌಶಲ್ಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಮನ್ವಯದ ಅನುಷ್ಠಾನಕ್ಕೆ ಒತ್ತು ನೀಡುತ್ತದೆ. ಇದು ಭಾರತವನ್ನು ಸ್ಪರ್ಧಾತ್ಮಕ, ವಿಶ್ವಾಸಾರ್ಹ ಮತ್ತು ಮುನ್ನೋಟ ಹೊಂದಿರುವ ಜಾಗತಿಕ ಜವಳಿ ಮತ್ತು ಉಡುಪು ಕೇಂದ್ರವಾಗಿ ಬಲಪಡಿಸುತ್ತದೆ.
ಉಪಸಂಹಾರ
ಭಾರತದ ಜವಳಿ ವಲಯವು ಬಲವಾದ ಉತ್ಪಾದನಾ ಅಡಿಪಾಯ, ಏರುತ್ತಿರುವ ರಫ್ತು ಮತ್ತು ನಿರಂತರ ನೀತಿ ಬೆಂಬಲದೊಂದಿಗೆ ಒಂದು ಪ್ರಮುಖ ಘಟ್ಟದಲ್ಲಿದೆ.

2026-27ರ ಕೇಂದ್ರ ಬಜೆಟ್ ನಾರಿನಿಂದ ಹಿಡಿದು ಉತ್ಪಾದನೆ, ಕೌಶಲ್ಯ, ಸುಸ್ಥಿರತೆ ಮತ್ತು ಮಾರುಕಟ್ಟೆ ಪ್ರವೇಶದವರೆಗೆ ಇಡೀ ಮೌಲ್ಯ ಸರಪಳಿಯನ್ನು ಬಲಪಡಿಸುವ ಮೂಲಕ ಈ ಅಭಿವೃದ್ಧಿಯ ಪಥಕ್ಕೆ ಹೆಚ್ಚಿನ ಶಕ್ತಿ ತುಂಬಿದೆ.
ವಿಸ್ತರಿಸುತ್ತಿರುವ ವ್ಯಾಪಾರ ಪಾಲುದಾರಿಕೆಗಳು ಮತ್ತು ಉತ್ಪಾದನಾ ಪ್ರಮಾಣ, ತಂತ್ರಜ್ಞಾನ ಹಾಗೂ ಮೌಲ್ಯವರ್ಧನೆಗೆ ನೀಡುತ್ತಿರುವ ಸ್ಪಷ್ಟ ಉತ್ತೇಜನದೊಂದಿಗೆ, ಈ ಕ್ರಮಗಳು ಜವಳಿ ವಲಯವು ಜಾಗತಿಕ ಮಾರುಕಟ್ಟೆಯೊಂದಿಗೆ ತನ್ನ ಒಡನಾಟವನ್ನು ಮತ್ತಷ್ಟು ಆಳಗೊಳಿಸಲು ಸಜ್ಜುಗೊಳಿಸಿವೆ. ಇದರ ಜೊತೆಗೆ, ಈ ವಲಯವು ದೇಶಾದ್ಯಂತ ಉದ್ಯೋಗ ಸೃಷ್ಟಿಯನ್ನು ಮುಂದುವರಿಸಲು ಮತ್ತು ಜನರ ಜೀವನೋಪಾಯಕ್ಕೆ ಬೆಂಬಲ ನೀಡಲು ಸುಸಜ್ಜಿತವಾಗಿದೆ.
References
Ministry of Finance
https://www.indiabudget.gov.in/economicsurvey/doc/echapter.pdf
https://www.indiabudget.gov.in/doc/budget_speech.pdf
Ministry of Textiles
https://www.pib.gov.in/PressReleasePage.aspx?PRID=2221486®=3&lang=2
https://www.pib.gov.in/PressReleasePage.aspx?PRID=2208051®=6&lang=1
https://www.pib.gov.in/PressReleaseIframePage.aspx?PRID=2215380®=3&lang=2
https://www.pib.gov.in/PressReleasePage.aspx?PRID=2219250®=3&lang=1
https://www.pib.gov.in/PressReleasePage.aspx?PRID=2204546®=3&lang=2
https://www.pib.gov.in/PressReleasePage.aspx?PRID=2222481®=3&lang=2
Ministry of Commerce & Industry
https://www.pib.gov.in/PressReleasePage.aspx?PRID=2117470®=3&lang=2
Reserve Bank of India
https://www.rbi.org.in/commonman/English/scripts/FAQs.aspx?Id=3138
India Brand Equity Foundation
https://www.ibef.org/industry/textiles
Click here to see in PDF
*****
(Explainer ID: 157208)
आगंतुक पटल : 5
Provide suggestions / comments