Technology
ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಯೋಜನೆ
ಕೇಂದ್ರ ಬಜೆಟ್ 2026-27: ಯೋಜನಾ ವೆಚ್ಚವನ್ನು ₹40,000 ಕೋಟಿಗೆ ಹೆಚ್ಚಿಸಿದ ಸರ್ಕಾರ
Posted On:
03 FEB 2026 2:36PM
|
ಪ್ರಮುಖ ಮುಖ್ಯಾಂಶಗಳು
- 2026-27ರ ಕೇಂದ್ರ ಬಜೆಟ್ನಲ್ಲಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಯೋಜನೆಯ (ಇಸಿಎಂಎಸ್) ವೆಚ್ಚವನ್ನು ₹40,000 ಕೋಟಿಗೆ ಹೆಚ್ಚಿಸಲಾಗಿದೆ.
- ಡಿಸೆಂಬರ್ 2025ರ ಮಾಹಿತಿಯಂತೆ, ಇಸಿಎಂಎಸ್ ಯೋಜನೆಯಡಿ ಅಂದಾಜಿಸಲಾದ ಹೂಡಿಕೆಯು ₹1.15 ಲಕ್ಷ ಕೋಟಿ ತಲುಪಿದ್ದು, ಇದು ಭಾರತದ ಎಲೆಕ್ಟ್ರಾನಿಕ್ಸ್ ವಲಯದಲ್ಲೇ ಅತಿ ಹೆಚ್ಚಿನ ಹೂಡಿಕೆಯಾಗಿದೆ.
- ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 2014-15ರಲ್ಲಿ ₹1.9 ಲಕ್ಷ ಕೋಟಿಯಷ್ಟಿತ್ತು, ಇದು 2024-25ರ ವೇಳೆಗೆ ಸುಮಾರು ಆರು ಪಟ್ಟು ಹೆಚ್ಚಾಗಿ ₹11.3 ಲಕ್ಷ ಕೋಟಿಗೆ ತಲುಪಿದೆ.
|
ಪೀಠಿಕೆ

ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವು ಬೆಳವಣಿಗೆಯ ನಿರ್ಣಾಯಕ ಹಂತವನ್ನು ತಲುಪಿದೆ. 2026-27ರ ಕೇಂದ್ರ ಬಜೆಟ್, ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ನೀತಿ ಚಾಲಿತ ಉತ್ತೇಜನ ನೀಡಲು ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಯೋಜನೆಗೆ (ಇಸಿಎಂಎಸ್) ₹40,000 ಕೋಟಿ ಅನುದಾನವನ್ನು ಘೋಷಿಸಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ, ಭಾರತವು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಪ್ರಮುಖ ಕೇಂದ್ರವಾಗಿ ವೇಗವಾಗಿ ರೂಪಾಂತರಗೊಂಡಿದ್ದು, ಉತ್ಪಾದನೆಯಲ್ಲಿ ಸುಮಾರು ಆರು ಪಟ್ಟು ಹೆಚ್ಚಳವನ್ನು ಸಾಧಿಸಿದೆ. ಈ ವಲಯವು ತನ್ನ ಕೈಗಾರಿಕಾ ನೆಲೆಯನ್ನು ವಿಸ್ತರಿಸಿದೆ, ಸುಮಾರು 25 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಉದ್ಯೋಗ ಹಾಗೂ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯಾಗಿ ಹೊರಹೊಮ್ಮಿದೆ.
ಈ ಪ್ರಗತಿಯು ಭಾರತದ ರಫ್ತು ಪ್ರದರ್ಶನ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಬೆಳೆಯುತ್ತಿರುವ ಅದರ ಏಕೀಕರಣದಲ್ಲಿ ಪ್ರತಿಫಲಿಸುತ್ತದೆ. ಸರ್ಕಾರದ ಆಯಕಟ್ಟಿನ ಉಪಕ್ರಮಗಳು ಮತ್ತು ನಿರಂತರ ನೀತಿ ಬೆಂಬಲವು ಸ್ಥಳೀಯ ಉತ್ಪಾದನೆಯನ್ನು ಬಲಪಡಿಸಿದೆ, ರಫ್ತು ವಿಸ್ತರಣೆಗೆ ಬೆಂಬಲ ನೀಡಿದೆ ಮತ್ತು ಗಮನಾರ್ಹ ಜಾಗತಿಕ ಹೂಡಿಕೆಯನ್ನು ಆಕರ್ಷಿಸಿದೆ. ಇಸಿಎಂಎಸ್ ಯೋಜನೆಯು ದೇಶೀಯ ಬಿಡಿಭಾಗಗಳ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಮತ್ತು ಸುಧಾರಿತ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ಮೂಲಕ ಈ ವೇಗವನ್ನು ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ.
2030-31ರ ವೇಳೆಗೆ $500 ಬಿಲಿಯನ್ ಮೌಲ್ಯದ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ದೃಷ್ಟಿಕೋನದೊಂದಿಗೆ, ಭಾರತವು ಜಾಗತಿಕ ತಂತ್ರಜ್ಞಾನ ನಾಯಕನಾಗಿ ಹೊರಹೊಮ್ಮಲು ಸಜ್ಜಾಗಿದೆ. ಇದು ಜಗತ್ತಿಗಾಗಿ ಹೊಸ ಆವಿಷ್ಕಾರಗಳನ್ನು ಮಾಡುವ ಜೊತೆಗೆ ದೇಶದೊಳಗೆ ಅಪಾರ ಅವಕಾಶಗಳನ್ನು ಸೃಷ್ಟಿಸುತ್ತಿದೆ.

ವಲಯವಾರು ಮುನ್ನೋಟ: ಭಾರತದ ಪ್ರಮುಖ ರಫ್ತು ವಿಭಾಗವಾಗಿ ಎಲೆಕ್ಟ್ರಾನಿಕ್ಸ್
ಆರ್ಥಿಕ ಸಮೀಕ್ಷೆ 2025-26 ರಲ್ಲಿ ಉಲ್ಲೇಖಿಸಿರುವಂತೆ, ಎಲೆಕ್ಟ್ರಾನಿಕ್ಸ್ ವಲಯವು 2021-22 ರಲ್ಲಿ ಏಳನೇ ಸ್ಥಾನದಿಂದ 2024-25 ರ ವೇಳೆಗೆ ಭಾರತದ ಮೂರನೇ ಅತಿದೊಡ್ಡ ಮತ್ತು ಅತಿ ವೇಗವಾಗಿ ಬೆಳೆಯುತ್ತಿರುವ ರಫ್ತು ವಿಭಾಗವಾಗಿ ಹೊರಹೊಮ್ಮಿದೆ. 2025-26ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ, ಎಲೆಕ್ಟ್ರಾನಿಕ್ಸ್ ರಫ್ತು 22.2 ಬಿಲಿಯನ್ ಯುಎಸ್ ಡಾಲರ್ ತಲುಪಿದ್ದು, ಬಲವಾದ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳುವ ಮೂಲಕ ಈ ವಲಯವು ದೇಶದ ಎರಡನೇ ಅತಿದೊಡ್ಡ ರಫ್ತು ವಸ್ತುವಾಗುವ ಹಾದಿಯಲ್ಲಿದೆ.
ದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 2014-15 ರಲ್ಲಿ ₹1.9 ಲಕ್ಷ ಕೋಟಿಯಿಂದ 2024-25 ರಲ್ಲಿ ₹11.3 ಲಕ್ಷ ಕೋಟಿಗೆ ಬೆಳೆದಿದ್ದು, ಇದು ಆರು ಪಟ್ಟು ಹೆಚ್ಚಳವನ್ನು ದಾಖಲಿಸಿದೆ. ಇದೇ ಅವಧಿಯಲ್ಲಿ ರಫ್ತು ₹38,000 ಕೋಟಿಯಿಂದ ₹3.27 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಇದು ಎಂಟು ಪಟ್ಟು ಏರಿಕೆಯಾಗಿದ್ದನ್ನು ಪ್ರತಿಫಲಿಸುತ್ತದೆ. ಕಳೆದ ದಶಕದಲ್ಲಿ, ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ದೇಶಾದ್ಯಂತ ಸುಮಾರು 25 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ.

ಈ ರೂಪಾಂತರದಲ್ಲಿ ಮೊಬೈಲ್ ಉತ್ಪಾದನೆಯು ಪ್ರಮುಖ ಪಾತ್ರ ವಹಿಸಿದೆ. ಈ ವಿಭಾಗದಲ್ಲಿನ ಉತ್ಪಾದನೆಯು 2014-15ರಲ್ಲಿ ₹18,000 ಕೋಟಿಯಿಂದ 2024-25ರಲ್ಲಿ ₹5.45 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಇದು 28 ಪಟ್ಟು ಹೆಚ್ಚಳವಾಗಿದೆ. 2014ರಲ್ಲಿ ಕೇವಲ ಎರಡು ಘಟಕಗಳಿದ್ದ ಭಾರತವು, ಈಗ 300ಕ್ಕೂ ಹೆಚ್ಚು ಘಟಕಗಳನ್ನು ಹೊಂದುವ ಮೂಲಕ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಿಕಾ ರಾಷ್ಟ್ರವಾಗಿದೆ.

ಮೊಬೈಲ್ ಫೋನ್‌ಗಳ ರಫ್ತು ಗಮನಾರ್ಹ ಪ್ರಗತಿಯನ್ನು ತೋರಿಸಿದ್ದು, 2014-15ರಲ್ಲಿ ₹1,500 ಕೋಟಿಯಿಂದ 2024-25ರಲ್ಲಿ ₹2 ಲಕ್ಷ ಕೋಟಿಗೆ ಏರಿಕೆಯಾಗಿದೆ, ಅಂದರೆ ಇದು 127 ಪಟ್ಟು ಹೆಚ್ಚಳವನ್ನು ಕಂಡಿದೆ. 2025-26ರ ಮೊದಲ ಐದು ತಿಂಗಳಲ್ಲಿ ಸ್ಮಾರ್ಟ್‌ಫೋನ್ ರಫ್ತು ₹1 ಲಕ್ಷ ಕೋಟಿಯನ್ನು ಮುಟ್ಟಿದೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 55 ರಷ್ಟು ಹೆಚ್ಚಳವಾಗಿದೆ.
ಒಂದು ದಶಕದ ಹಿಂದೆ ತನ್ನ ಹೆಚ್ಚಿನ ಅವಶ್ಯಕತೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತವು, ಇಂದು ಬಹುತೇಕ ಎಲ್ಲಾ ಸಾಧನಗಳನ್ನು ದೇಶೀಯವಾಗಿಯೇ ತಯಾರಿಸುವ ಮೂಲಕ ಮೊಬೈಲ್ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ. ಈ ರೂಪಾಂತರವು ಭಾರತದ ನೀತಿ ಪರಿಸರ ವ್ಯವಸ್ಥೆಯ ಸಾಮರ್ಥ್ಯವನ್ನು ಮತ್ತು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಹಾಗೂ ರಫ್ತಿನ ವಿಶ್ವಾಸಾರ್ಹ ಕೇಂದ್ರವಾಗಿ ಭಾರತವು ಹೊರಹೊಮ್ಮಿರುವುದನ್ನು ಎತ್ತಿ ತೋರಿಸುತ್ತದೆ.
ಇಸಿಎಂಎಸ್ ನ ಅವಲೋಕನ
ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಯೋಜನೆಯನ್ನು (ಇಸಿಎಂಎಸ್) 8 ಏಪ್ರಿಲ್ 2025 ರಂದು ₹22,919 ಕೋಟಿ (ಸುಮಾರು 2.7 ಬಿಲಿಯನ್ ಯುಎಸ್ ಡಾಲರ್) ಮೂಲ ಅನುದಾನದೊಂದಿಗೆ ಅಧಿಸೂಚಿಸಲಾಯಿತು. ಇದು ಆರು ವರ್ಷಗಳ ಅವಧಿಯನ್ನು ಹೊಂದಿದ್ದು, ಐಚ್ಛಿಕವಾಗಿ ಒಂದು ವರ್ಷದ ಪೂರ್ವಸಿದ್ಧತಾ ಅವಧಿಯನ್ನು ಹೊಂದಿದೆ. ಈ ಯೋಜನೆಯು ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆಗಾಗಿ ಬಲವಾದ ಮತ್ತು ಸ್ವಾವಲಂಬಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಮೌಲ್ಯ ಸರಪಳಿಯುದ್ದಕ್ಕೂ ದೇಶೀಯ ಮತ್ತು ಜಾಗತಿಕ ಹೂಡಿಕೆಯನ್ನು ಆಕರ್ಷಿಸುವುದು, ಹೆಚ್ಚಿನ ದೇಶೀಯ ಮೌಲ್ಯವರ್ಧನೆಯನ್ನು ಉತ್ತೇಜಿಸುವುದು ಮತ್ತು ಜಾಗತಿಕ ಎಲೆಕ್ಟ್ರಾನಿಕ್ಸ್ ವ್ಯಾಪಾರದಲ್ಲಿ ಭಾರತವನ್ನು ಪ್ರಮುಖ ಸ್ಥಾನದಲ್ಲಿರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯು ಭಾರತದ ಸೆಮಿಕಂಡಕ್ಟರ್ ಮಿಷನ್ ಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
ದೇಶದೊಳಗೆ ಅಗತ್ಯ ಬಿಡಿಭಾಗಗಳು, ಉಪ-ಜೋಡಣೆಗಳು ಮತ್ತು ಕಚ್ಚಾ ವಸ್ತುಗಳ ಉತ್ಪಾದನೆಯನ್ನು ಪ್ರೋತ್ಸಾಹಿಸುವ ಮೂಲಕ ಭಾರತದ ಎಲೆಕ್ಟ್ರಾನಿಕ್ ಉದ್ಯಮವನ್ನು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜಿಸಲು ಇಸಿಎಂಎಸ್ ಪ್ರಯತ್ನಿಸುತ್ತದೆ.

ಡಿಸೆಂಬರ್ 2025ರ ಹೊತ್ತಿಗೆ, ಈ ಯೋಜನೆಯಡಿ ನಿರೀಕ್ಷಿತ ಹೂಡಿಕೆಯ ಬದ್ಧತೆಯು ₹1,15,351 ಕೋಟಿಗಳಷ್ಟಿದೆ, ಇದು ಆರಂಭಿಕ ಗುರಿಯಾದ ₹59,350 ಕೋಟಿಗಿಂತ ಸುಮಾರು ಎರಡರಷ್ಟಿದೆ. ಮುಂದಿನ ಆರು ವರ್ಷಗಳಲ್ಲಿ ₹10,34,751 ಕೋಟಿ ಮೌಲ್ಯದ ಉತ್ಪಾದನೆಯನ್ನು ನಿರೀಕ್ಷಿಸಲಾಗಿದ್ದು, ಇದು ಆರಂಭಿಕ ಅಂದಾಜಿಗಿಂತ 2.2 ಪಟ್ಟು ಹೆಚ್ಚಾಗಿದೆ. ಪ್ರೋತ್ಸಾಹಧನದ ವೆಚ್ಚವು ₹41,468 ಕೋಟಿ ಇರಲಿದೆಯೆಂದು ಅಂದಾಜಿಸಲಾಗಿದೆ, ಇದು ಮೂಲ ಅಂದಾಜಾದ ₹22,805 ಕೋಟಿಗಿಂತ ಸುಮಾರು 1.8 ಪಟ್ಟು ಹೆಚ್ಚಾಗಿದೆ. ಈ ಯೋಜನೆಯು 91,600 ಉದ್ಯೋಗಗಳ ಗುರಿಯನ್ನು ಮೀರಿ 1,41,801 ನೇರ ಉದ್ಯೋಗಗಳನ್ನು ಮತ್ತು ಹೆಚ್ಚಿನ ಸಂಖ್ಯೆಯ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಇಸಿಎಂಎಸ್ ಅಡಿಯಲ್ಲಿ ಅನುಮೋದಿತ ಅರ್ಜಿಗಳು
ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಯೋಜನೆಯು ಅಧಿಸೂಚನೆಯಾದಂದಿನಿಂದ ಭಾರತದಾದ್ಯಂತ ಉದ್ಯಮ ವಲಯದಿಂದ ಭಾರಿ ಆಸಕ್ತಿಯನ್ನು ಪಡೆದುಕೊಂಡಿದೆ. ಇದುವರೆಗೆ 11 ರಾಜ್ಯಗಳಲ್ಲಿ ಒಟ್ಟು 46 ಅರ್ಜಿಗಳನ್ನು ಈ ಯೋಜನೆಯಡಿ ಅನುಮೋದಿಸಲಾಗಿದೆ. ಈ ಅನುಮೋದನೆಗಳು ಒಟ್ಟು ₹54,567 ಕೋಟಿ ಹೂಡಿಕೆಯನ್ನು ಪ್ರತಿನಿಧಿಸುತ್ತವೆ ಮತ್ತು ಇವುಗಳಿಂದ ₹3,67,343 ಕೋಟಿ ಮೌಲ್ಯದ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ. ಇವು ಸುಮಾರು 51,000 ಜನರಿಗೆ ನೇರ ಉದ್ಯೋಗವನ್ನು ನೀಡುವ ಸಾಧ್ಯತೆಯಿದೆ.

ಈ ಅನುಮೋದಿತ ಅರ್ಜಿದಾರರು ಮೊಬೈಲ್ ಮತ್ತು ಐಟಿ ಹಾರ್ಡ್‌ವೇರ್ ಉತ್ಪನ್ನಗಳಿಗೆ ಹಾಗೂ ಸಂಬಂಧಿತ ಸಾಧನಗಳಿಗೆ ಅಗತ್ಯವಿರುವ ಮಲ್ಟಿ-ಲೇಯರ್ ಪಿಸಿಬಿಗಳು, ಕ್ಯಾಮೆರಾ ಮಾಡ್ಯೂಲ್‌ಗಳು, ಕನೆಕ್ಟರ್‌ಗಳು, ಆಸಿಲೇಟರ್‌ಗಳು, ಆಪ್ಟಿಕಲ್ ಟ್ರಾನ್ಸ್‌ಸೀವರ್‌ಗಳು ಮತ್ತು ಎನ್‌ಕ್ಲೋಸರ್‌ಗಳಂತಹ ವ್ಯಾಪಕ ಶ್ರೇಣಿಯ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ತಯಾರಿಸಲಿದ್ದಾರೆ.
ಈ ಅನುಮೋದನೆಗಳನ್ನು ಮೂರು ಕಂತುಗಳಲ್ಲಿ ವಿತರಿಸಲಾಗಿದ್ದು, ಪ್ರತಿಯೊಂದು ಕಂತು ಉತ್ಪಾದನಾ ಸಾಮರ್ಥ್ಯ ಮತ್ತು ಉದ್ಯೋಗ ಸೃಷ್ಟಿಗೆ ಗಮನಾರ್ಹ ಕೊಡುಗೆಯನ್ನು ನೀಡಿದೆ.
|
ಕಂತು
|
ಯೋಜನೆಗಳ ಸಂಖ್ಯೆ
|
ಅನುಮೋದನೆಯ ದಿನಾಂಕ
|
ಹೂಡಿಕೆ (₹ ಕೋಟಿಗಳಲ್ಲಿ)
|
ಅಂದಾಜು ಉತ್ಪಾದನೆ (₹ ಕೋಟಿಗಳಲ್ಲಿ)
|
ನೇರ ಉದ್ಯೋಗ
|
|
ಮೊದಲನೆಯದು
|
7
|
27 ಅಕ್ಟೋಬರ್ 2025
|
5,532
|
36,559
|
5,100
|
|
ಎರಡನೆಯದು
|
17
|
17 ನವೆಂಬರ್ 2025
|
7,172
|
65,111
|
11,808
|
|
ಮೂರನೆಯದು
|
22
|
2 ಜನವರಿ 2026
|
41,863
|
2,58,152
|
33,791
|
ಈ ಅನುಮೋದನೆಗಳು ದೇಶಾದ್ಯಂತ ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿ ಮತ್ತು ಎಲೆಕ್ಟ್ರಾನಿಕ್ ಬಿಡಿಭಾಗಗಳ ಉತ್ಪಾದನೆಯನ್ನು ಬೆಂಬಲಿಸುವ ಜೊತೆಗೆ, ಗಣನೀಯ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುವ ಯೋಜನೆಯ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ.
2026-27ರ ಹಣಕಾಸು ವರ್ಷದ ನಿರೀಕ್ಷಿತ ಫಲಿತಾಂಶಗಳು
ಅನುಮೋದಿತ ಯೋಜನೆಗಳ ವಿಸ್ತರಣೆ ಮತ್ತು ಉದ್ಯಮ ವಲಯದ ನಿರಂತರ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುವ ಮೂಲಕ, ಇಸಿಎಂಎಸ್ ಯೋಜನೆಯು 2026-27ರ ಹಣಕಾಸು ವರ್ಷದಲ್ಲಿ ಸ್ಪಷ್ಟವಾದ ಫಲಿತಾಂಶಗಳನ್ನು ನೀಡುವ ನಿರೀಕ್ಷೆಯಿದೆ. ಈ ಯೋಜನೆಯಡಿ ಮಾಡಲಾದ ಹೂಡಿಕೆಗಳು ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಉತ್ಪಾದನಾ ಸಾಮರ್ಥ್ಯ ಮತ್ತು ಸ್ಥಿರವಾದ ಉದ್ಯೋಗ ಸೃಷ್ಟಿಯಾಗಿ ಪರಿವರ್ತನೆಗೊಳ್ಳುವ ನಿರೀಕ್ಷೆಯಿದೆ.
|
ಫಲಿತಾಂಶದ ಸೂಚಕ
|
2026-27ರ ಹಣಕಾಸು ವರ್ಷದ ಅಂತ್ಯಕ್ಕೆ ನಿರೀಕ್ಷಿತ ಫಲಿತಾಂಶ
|
|
ಹೂಡಿಕೆ
|
₹11,156 ಕೋಟಿ
|
|
ಉತ್ಪಾದನೆ
|
₹29,024 ಕೋಟಿ
|
|
ಉದ್ಯೋಗ ಸೃಷ್ಟಿ
|
19,240 ಉದ್ಯೋಗಗಳು
|
ಈ ನಿರೀಕ್ಷಿತ ಫಲಿತಾಂಶಗಳು ಚೇತೋಹಾರಿ ಮತ್ತು ಹೆಚ್ಚಿನ ಮೌಲ್ಯದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ನೆಲೆಯತ್ತ ಸಾಗುತ್ತಿರುವ ಸ್ಥಿರ ಪ್ರಗತಿಯ ಸಂಕೇತಗಳಾಗಿವೆ.
ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರದ ಇತರ ಪ್ರಮುಖ ಉಪಕ್ರಮಗಳು
ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮವು ಬಲವಾದ ನೀತಿ ಬೆಂಬಲ ಮತ್ತು ಸರ್ಕಾರದ ಉದ್ದೇಶಿತ ಉಪಕ್ರಮಗಳ ಬಲದ ಮೇಲೆ ಬೆಳೆದಿದೆ. ಈ ಕಾರ್ಯಕ್ರಮಗಳು ಜಾಗತಿಕವಾಗಿ ಸ್ಪರ್ಧಾತ್ಮಕ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ, ಹೂಡಿಕೆಯನ್ನು ಆಕರ್ಷಿಸುವ ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಪಾತ್ರವನ್ನು ಬಲಪಡಿಸುವ ಜೊತೆಗೆ ಬೃಹತ್ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ. ಅನ್ವಯವಾಗುವ ಕಾನೂನುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು, ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಶೇಕಡಾ 100 ರಷ್ಟು ನೇರ ವಿದೇಶಿ ಹೂಡಿಕೆಗೆ ಅವಕಾಶ ನೀಡಿರುವುದು ಕೂಡ ಈ ವಲಯಕ್ಕೆ ಪ್ರಯೋಜನಕಾರಿಯಾಗಿದೆ.
ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆ
₹1.97 ಲಕ್ಷ ಕೋಟಿ ಅನುದಾನವನ್ನು ಹೊಂದಿರುವ 'ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆ'ಯು , ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಹಾರ್ಡ್‌ವೇರ್ ಸೇರಿದಂತೆ 14 ಪ್ರಮುಖ ವಲಯಗಳಲ್ಲಿ ವ್ಯಾಪಿಸಿದೆ. ಇದು ಕಂಪನಿಗಳು ಉತ್ಪಾದನೆಯನ್ನು ಹೆಚ್ಚಿಸಲು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ರಫ್ತುಗಳನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತದೆ.
|
ಬೃಹತ್ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಐಟಿ ಹಾರ್ಡ್‌ವೇರ್‌ಗಾಗಿನ ಪಿಎಲ್‌ಐ ಯೋಜನೆ
- ಆಕರ್ಷಿತವಾದ ಹೂಡಿಕೆ: ₹13,107 ಕೋಟಿ
- ಜರುಗಿದ ಉತ್ಪಾದನೆ: ₹8.56 ಲಕ್ಷ ಕೋಟಿ
- ಸಾಧಿಸಿದ ರಫ್ತು: ₹4.65 ಲಕ್ಷ ಕೋಟಿ
- ಸೃಷ್ಟಿಯಾದ ನೇರ ಉದ್ಯೋಗಗಳು: 1.35 ಲಕ್ಷಕ್ಕೂ ಹೆಚ್ಚು
"ಜೂನ್ 2025 ರವರೆಗಿನ ಮಾಹಿತಿ"
|
ಹಣಕಾಸು ವರ್ಷ 2020-21 ರಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತವು 4 ಬಿಲಿಯನ್ ಯುಎಸ್ ಡಾಲರ್‌ಗಿಂತಲೂ ಅಧಿಕ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಿದೆ. ಈ ಒಟ್ಟು ವಿದೇಶಿ ಹೂಡಿಕೆಯಲ್ಲಿ ಸುಮಾರು 70% ರಷ್ಟು ಕೊಡುಗೆಯು ಪಿಎಲ್‌ಐ ಯೋಜನೆಯ ಫಲಾನುಭವಿಗಳಿಂದ ಬಂದಿದೆ.
ಮಾರ್ಪಡಿಸಿದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ಗಳು (EMC 2.0)
ಭಾರತ ಸರ್ಕಾರವು ಏಪ್ರಿಲ್ 2020 ರಲ್ಲಿ 'ಮಾರ್ಪಡಿಸಿದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ಗಳು' ಅಥವಾ ಇಎಂಸಿ 2.0 ಯೋಜನೆಯನ್ನು ಅಧಿಸೂಚಿಸಿತು. ಸಾಮಾನ್ಯ ಸೌಲಭ್ಯಗಳನ್ನು ಹೊಂದಿರುವ ಮೀಸಲಾದ ಕ್ಲಸ್ಟರ್‌ಗಳಿಗೆ ಧನಸಹಾಯ ನೀಡುವ ಮೂಲಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ವಿಶ್ವದರ್ಜೆಯ ಮೂಲಸೌಕರ್ಯವನ್ನು ನಿರ್ಮಿಸುವುದು ಈ ಯೋಜನೆಯ ಗುರಿಯಾಗಿದೆ. ಈ ಕ್ಲಸ್ಟರ್‌ಗಳು ಉತ್ಪಾದನಾ ಕಾರ್ಯಾಚರಣೆಗಳನ್ನು ವೇಗಗೊಳಿಸಲು ಸಿದ್ಧ ಕೈಗಾರಿಕಾ ನಿವೇಶನಗಳು, ಸಿದ್ಧ ಕಾರ್ಖಾನೆ ಕಟ್ಟಡಗಳು ಮತ್ತು 'ಪ್ಲಗ್ ಅಂಡ್ ಪ್ಲೇ' ಸೌಲಭ್ಯಗಳಂತಹ ಹಂಚಿಕೆಯ ಸೌಕರ್ಯಗಳನ್ನು ಒದಗಿಸುತ್ತವೆ.
ಡಿಸೆಂಬರ್ 2025 ರ ಹೊತ್ತಿಗೆ, 11 ಇಎಂಸಿ ಯೋಜನೆಗಳು ಮತ್ತು 2 ಸಾಮಾನ್ಯ ಸೌಲಭ್ಯ ಕೇಂದ್ರ ಯೋಜನೆಗಳನ್ನು ಅನುಮೋದಿಸಲಾಗಿದೆ. ಇವು ಒಟ್ಟು 4,399.68 ಎಕರೆ ಪ್ರದೇಶವನ್ನು ಒಳಗೊಂಡಿದ್ದು, ₹2,492.74 ಕೋಟಿ ಕೇಂದ್ರ ಆರ್ಥಿಕ ನೆರವು ಸೇರಿದಂತೆ ಒಟ್ಟು ₹5,226.49 ಕೋಟಿ ಯೋಜನಾ ವೆಚ್ಚವನ್ನು ಹೊಂದಿವೆ. ಈ ಯೋಜನೆಗಳು 10 ರಾಜ್ಯಗಳಲ್ಲಿ ಹರಡಿಕೊಂಡಿದ್ದು, ಸುಮಾರು ₹1,46,846 ಕೋಟಿ ಹೂಡಿಕೆ ಮತ್ತು ಅಂದಾಜು 1.80 ಲಕ್ಷ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಕಸ್ಟಮ್ಸ್ ಮತ್ತು ಸರ್ಚಾರ್ಜ್ ವಿನಾಯಿತಿಗಳು
2026-27ರ ಕೇಂದ್ರ ಬಜೆಟ್‌ನಲ್ಲಿ ಮೈಕ್ರೋವೇವ್ ಓವನ್‌ಗಳ ತಯಾರಿಕೆಯಲ್ಲಿ ಬಳಸುವ ಕೆಲವು ಬಿಡಿಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿಯನ್ನು ಘೋಷಿಸಲಾಗಿದ್ದು, ಇದು 2 ಫೆಬ್ರವರಿ 2026 ರಿಂದ ಜಾರಿಗೆ ಬಂದಿದೆ.
ಅದೇ ಸಮಯದಲ್ಲಿ, ಎಲೆಕ್ಟ್ರಾನಿಕ್ ಆಟಿಕೆಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳಿಗೆ ಈಗ 'ಸಾಮಾಜಿಕ ಕಲ್ಯಾಣ ಸರ್‌ಚಾರ್ಜ್'ನಿಂದ ವಿನಾಯಿತಿ ನೀಡಲಾಗಿದ್ದು, ಇದು ಕೂಡ ಅದೇ ದಿನಾಂಕದಿಂದ ಜಾರಿಗೆ ಬಂದಿದೆ.
|
ಮೂಲ ಕಸ್ಟಮ್ಸ್ ಸುಂಕ : ಇದು ಕಸ್ಟಮ್ಸ್ ಕಾಯ್ದೆ, 1962ರ ಅಡಿಯಲ್ಲಿ ವಿಧಿಸಲಾಗುವ ಕಸ್ಟಮ್ಸ್ ಸುಂಕವಾಗಿದೆ.
ಸಾಮಾಜಿಕ ಕಲ್ಯಾಣ ಸರ್ಚಾರ್ಜ್: ಇದು ಹಣಕಾಸು ಕಾಯ್ದೆ, 2018ರ ಸೆಕ್ಷನ್ 110ರ ಅಡಿಯಲ್ಲಿ ವಿಧಿಸಲಾಗುವ ಒಂದು ಕಸ್ಟಮ್ಸ್ ಸುಂಕವಾಗಿದೆ.
|
ಎಲೆಕ್ಟ್ರಾನಿಕ್ ಬಿಡಿಭಾಗಗಳು ಮತ್ತು ಸೆಮಿಕಂಡಕ್ಟರ್ಗಳ ತಯಾರಿಕಾ ಉತ್ತೇಜನಾ ಯೋಜನೆ
ಎಸ್‌ಪಿಇಸಿಎಸ್ ಯೋಜನೆಯು ಪ್ರಮುಖ ಎಲೆಕ್ಟ್ರಾನಿಕ್ ಸರಕುಗಳ ಉತ್ಪಾದನೆಗಾಗಿ ಮಾಡುವ ಬಂಡವಾಳ ವೆಚ್ಚದ ಮೇಲೆ ಶೇಕಡಾ 25 ರಷ್ಟು ಆರ್ಥಿಕ ಪ್ರೋತ್ಸಾಹಧನವನ್ನು ನೀಡುತ್ತದೆ. ಇದು ಪೂರೈಕೆ ಸರಪಳಿಯಲ್ಲಿನ ಪ್ರಮುಖ ಕೊರತೆಗಳನ್ನು ನೀಗಿಸಲು ಸಹಾಯ ಮಾಡುತ್ತದೆ, ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಕೇವಲ ಬಿಡಿಭಾಗಗಳನ್ನು ಜೋಡಿಸುವ ಹಂತದಿಂದ ಹೆಚ್ಚಿನ ಮೌಲ್ಯದ ಬಿಡಿಭಾಗಗಳ ತಯಾರಿಕಾ ಹಂತಕ್ಕೆ ಭಾರತವು ಪರಿವರ್ತನೆಗೊಳ್ಳಲು ಬೆಂಬಲ ನೀಡುತ್ತದೆ.
ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿ 2019 ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿಯು ಭಾರತವನ್ನು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಈ ನೀತಿಯು ನಾವೀನ್ಯತೆಯನ್ನು ಉತ್ತೇಜಿಸುತ್ತದೆ, ವಿನ್ಯಾಸ ಆಧಾರಿತ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಸುದೀರ್ಘ ಉದ್ಯಮದ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುತ್ತದೆ. ಒಟ್ಟಾರೆಯಾಗಿ, ಈ ಕ್ರಮಗಳು ಬಲವಾದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು, ಹೂಡಿಕೆಯನ್ನು ಆಕರ್ಷಿಸಲು ಮತ್ತು ಉದ್ಯೋಗವನ್ನು ಸೃಷ್ಟಿಸಲು ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುತ್ತವೆ, ಜೊತೆಗೆ ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಸ್ಥಾನವನ್ನು ಹೆಚ್ಚಿಸುತ್ತವೆ.
ಉಪಸಂಹಾರ
ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಯೋಜನೆಯು ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಾರ್ಯತಂತ್ರದ ಪ್ರಮುಖ ಅಡಿಪಾಯವಾಗಿ ಹೊರಹೊಮ್ಮಿದೆ. 2026-27ರ ಕೇಂದ್ರ ಬಜೆಟ್‌ನಲ್ಲಿ ಇದರ ಅನುದಾನವನ್ನು ₹40,000 ಕೋಟಿಗೆ ಹೆಚ್ಚಿಸಲಾಗಿದ್ದು, ಇದು ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವ ಬಲವಾದ ನೀತಿ ಬದ್ಧತೆಯನ್ನು ಪ್ರತಿಫಲಿಸುತ್ತದೆ.ಇಸಿಎಂಎಸ್ ಗಣನೀಯ ಹೂಡಿಕೆಯನ್ನು ಕ್ರೋಡೀಕರಿಸಿದೆ, ಉತ್ಪಾದನೆಯನ್ನು ಹೆಚ್ಚಿಸಿದೆ ಮತ್ತು ಗಮನಾರ್ಹ ಉದ್ಯೋಗವನ್ನು ಸೃಷ್ಟಿಸಿದೆ. ಸ್ಥಳೀಯ ಬಿಡಿಭಾಗಗಳ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಭಾರತವನ್ನು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜಿಸುವ ಮೂಲಕ, ಈ ಯೋಜನೆಯು ಸುಧಾರಿತ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ವಿಶ್ವಾಸಾರ್ಹ ಕೇಂದ್ರವಾಗಿ ದೇಶದ ಸ್ಥಾನವನ್ನು ಬಲಪಡಿಸುತ್ತದೆ.
References:
PIB Backgrounders:
Ministry of Electronics & IT:
Union Budget:
Click here to see PDF
*****
(Explainer ID: 157202)
आगंतुक पटल : 5
Provide suggestions / comments